ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ನೆನಪುಗಳು

ಹಲಸಿನ ಹಪ್ಪಳ ಸಂಧ್ಯಾಶೆಣೈ ಇವತ್ತು ನಮ್ಮ ಕೆಳಗಿನ ಮನೆಯವರು ಒಂದು ಸಣ್ಣ ತುಂಡು ಹಲಸಿನ ಗುಜ್ಜೆ ಕೊಟ್ಟಿದ್ದರು ..ಅದನ್ನು ಅಕ್ಕಿಯ ಆಳಾವಣದಲ್ಲಿ ಹಾಕಿ ಫ್ರೈ ಮಾಡಿದೆ ..ಆಗ ನನಗೆ ಸೋಮೇಶ್ವರದ ದಿನಗಳು ನೆನಪಾದವು.. ಹೀಗೆ ಬೇಸಿಗೆ ದಿನಗಳಲ್ಲಿ ಮನೆಗೆ ಆಗಾಗ ಹಲಸಿನ ಕಾಯಿ ಬರುತ್ತಿತ್ತು..ಉಪಿಗೆ ಸೋಳೆ ಹಾಕಲು.. ಹಪ್ಪಳ ಮಾಡಲು ಎಂದು.. ಆಗೆಲ್ಲ ಅಮ್ಮ ಹಲಸಿನ ಕಾಯಿಯ ವೈವಿಧ್ಯಮಯ ಪಲ್ಯಗಳನ್ನು ಮಾಡುತ್ತಿದ್ದರು.. ಸೋಳೆ ಹಾಕಲು ತಂದ ಹಲಸಿನ ಕಾಯಿಯ ಉಪಕ್ಕರಿ .ಅದರ ಒಟ್ಟಿಗೆ ಸೌತೆ ಕಾಯಿ ಹಾಕಿ ಮಾಡಿದ ಗುಜ್ಜ.. ಹಲಸಿನ ಕಾಯಿ ಮತ್ತೆ ಧಾನ್ಯ ಹಾಕಿ ಕೊದ್ದೆಲು.. ಎಳೇಕಡಗಿ ಸಣ್ಣ ಸಣ್ಣ ಬೀಜ ಆಗುತ್ತಾ ಇರುವಂತಹ ಹಲಸಿನ ಕಾಯಿಯಿಂದ ಪೋಡಿ.. ಒಂದೇ ಎರಡೇ .. ಹಣ್ಣು ಸಿಕ್ಕಿದರೆ ದೋಸೆ ..ಇಡ್ಲಿ.. ಪಾತ್ತೋಳಿ. ಪಾಯಸ.. ಮೂಳಿಕ ಎಂದು ಎಷ್ಟೆಲ್ಲ ಬಗೆ ಮಾಡುತ್ತಿದ್ದರು.. ಈಗ ನೋಡಿದ್ರೆ ಅನ್ನಿಸ್ತಾ ಇದೆ ಪಾಪ! ನಮ್ಮ ಬಾಯಿ ರುಚಿಗಾಗಿ ಎಷ್ಟೆಲ್ಲ ಕಷ್ಟಕರ ಕೆಲಸವನ್ನು ಮಾಡುತ್ತಿದ್ದರು ..ನಾವಂತೂ ಬಕಾಸುರರು ಏನು ಮಾಡಿಟ್ಟರು ಸ್ವಾಹ ಎನ್ನುತ್ತಿದ್ದೆವು. ನಾವು ಬೆಳಿಗ್ಗೆ ಎದ್ದು ಬರುವಾಗಲೇ ಅಜ್ಜಿ ಹಲಸಿನ ಹಣ್ಣನ್ನು ಕೊಯ್ದು ಗೋಣಿಯ ಮೇಲೆ ಶೇಡು ಶೇಡು ಮಾಡಿ ಇಟ್ಟಿರುತ್ತಿದ್ದರು .ನಾವು ಎದ್ದವರೇ ಬೇಕಾದಷ್ಟು ತಿಂದು ಸ್ವಲ್ಪ ಹಣ್ಣನ್ನು ಬಿಡಿಸಿ ಸೊಳೆ ಬೇರೆ ಬೀಜ ಬೇರೆ ಮಾಡಿ ಬಿಡುತ್ತಿದ್ದೆವು . ಅಮ್ಮ ಹೇಳುತ್ತಿದ್ದರು ಹಸಿದ ಹಲಸು ಉ೦ಡ ಮಾವು ಎಂದು.. ಅಂದ್ರೆ ಹಸಿದಿರುವಾಗ ಹಲಸಿನ ಹಣ್ಣು ತಿನ್ನಬೇಕು ಊಟ ಆದ ಮೇಲೆ ಮಾವಿನ ಹಣ್ಣು ತಿನ್ನಬೇಕು ಎಂದು. ಇಷ್ಟು ಮಾತ್ರವೇ ಆ ದಿನಗಳಲ್ಲಿ ನಮ್ಮ ಬೇಸಿಗೆ ರಜೆಯಲ್ಲಿ ಹಲಸಿನ ಹಪ್ಪಳದ ಫ್ಯಾಕ್ಟರಿಯೇ ನಮ್ಮಲ್ಲಿ ನಡೆಯುತ್ತಿತ್ತು. ರಾತ್ರಿ ದೊಡ್ಡ ದೊಡ್ಡ ಹಲಸಿನ ಕಾಯಿಗಳನ್ನು ಕರ್ಕು ಎಂಬ ಹೆಸರಿನ ಹೆಂಗಸು ತಲೆಯ ಮೇಲೆ ಹೊತ್ತು ತಂದು ನಮ್ಮ ಮನೆಯಲ್ಲಿ ಹಾಕಿ ಅದನ್ನು ಕೊಡಲಿಯಿಂದ ನಾಲ್ಕು ನಾಲ್ಕು ಭಾಗ ಮಾಡಿ ಹಾಕಿ ಹೋಗುತ್ತಿದ್ದಳು.. ಈಗ ಎಣಿಸಿದರೆ ಅವಳ ಆ ಶಕ್ತಿ ವಿಸ್ಮಯಕಾರಿ ಅನ್ನಿಸುತ್ತಾ ಇದೆ. ಒಂದಲ್ಲ ಎರಡಲ್ಲ ಕೆಲವೊಮ್ಮೆ ಮೂರು ನಾಲ್ಕು ಹಲಸಿನ ಕಾಯಿಯನ್ನು ತಲೆಯ ಮೇಲೆ ಹೊತ್ತುಕೊಂಡು ಎರಡು ಮೂರು ಮೈಲು ನಡೆದುಕೊಂಡು ಬರುತ್ತಿದ್ದಳು.. ಪಾಪ ಅದನ್ನು ನಮ್ಮಲ್ಲಿ ಹಾಕಿ ಒಡೆದು ಕೊಟ್ಟು ಅಮ್ಮ ಕೊಟ್ಟ ಕಾಫಿಯನ್ನು ಕುಡಿದು ಹೋಗುತ್ತಿದ್ದಳು. ಆಮೇಲೆ ಅಜ್ಜಿಯಾಗಿ ಕೆಲಸದವರಾಗಲಿ ಅದನ್ನು ಶಾಡ್ ಶಾಡ್ ಮಾಡಿ ತುಂಡು ಮಾಡಿ ಹಾಕುತ್ತಿದ್ದರು. ನಾವೆಲ್ಲರೂ. ತುಳಸಿ ಕಟ್ಟೆಯ ಎದುರಿನ ದಂಡೆ ಮೇಲೆ ಕುಳಿತುಕೊಂಡು ಆ ಹಲಸಿನಕಾಯಿಯನ್ನು ಬಿಡಿಸುತ್ತಿದ್ದೆವು. ಆಗ ಅಮ್ಮನಾಗಲೀ ಅಕ್ಕನಾಗಲೀ ಏನಾದರೂ ಕಥೆಯನ್ನು ನಮಗೆ ಹೇಳುತ್ತಿದ್ದರು.. ಅದನ್ನು ಕೇಳುತ್ತಾ ಕೇಳುತ್ತಾ ಹಲಸಿನ ಕಾಯಿ ಬಿಡಿಸಿದ್ದೇ ನಮಗೆ ತಿಳಿಯುತ್ತಿರಲಿಲ್ಲ.. ಬೆಳಿಗ್ಗೆ ನಾವು ಏಳುವಾಗ ಕಾಫಿ ತಿ೦ಡಿಯಾದ ಮೇಲೆ ಇಡ್ಲಿ ಬೇಯಿಸುವ ಪಾತ್ರೆಯಲ್ಲಿ ಹಲಸಿನ ಕಾಯಿ ಹದವಾಗಿ ಬೆಂದು ತಯಾರಾಗುತ್ತಿತ್ತು.. ಅದನ್ನು ಒರಳು ಕಲ್ಲಿನಲ್ಲಿ ಹಾಕಿ ಮರದ ಗುದ್ದಲಿಯಿಂದ ಗುದ್ಧಿ ಗುದ್ಧಿ ನಮ್ಮ ಕೆಲಸದ ಹೆಂಗಸು ಹಿಟ್ಟು ಮಾಡಿ ಕೊಡುತ್ತಿದ್ದರು.. ಕೆಲವೊಮ್ಮೆ ಅಜ್ಜಿಯೇ ಹಿಟ್ಟು ಮಾಡುತ್ತಿದ್ದರು ..ಅದರೊಂದಿಗೆ ಹದವಾಗಿ ಗುದ್ದಿಟ್ಟ ಮೆಣಸು.. ಕೊತ್ತಂಬರಿ ..ಉಪ್ಪು ..ಹಾಕಿ ಹದವಾಗಿ ಹಿಟ್ಟು ತಯಾರಾಗುತ್ತಿತ್ತು.. ತಯಾರಾದ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ಸುಮಾರು ಹತ್ತು ಹನ್ನೊಂದು ಗಂಟೆ ಹೊತ್ತಿಗೆ ನಾವೆಲ್ಲರೂ ಕೂತು ಹಲಸಿನ ಹಪ್ಪಳ ಮಾಡುವ ಕಾರ್ಯಾಗಾರವನ್ನು ಶುರು ಮಾಡುತ್ತಿದ್ದೆವು ..ಹೆಚ್ಚಾಗಿ ಅಜ್ಜಿ ಅಥವಾ ಅಮ್ಮ ಉರುಟುರುಟು ಉಂಡೆ ಕಟ್ಟಿ ಇಡುತ್ತಿದ್ದರು.. ಅದನ್ನು ನಾವು ಮಕ್ಕಳು ಎರಡು ಪ್ಲಾಸ್ಟಿಕ್ಕಿನ ನಡುವೆ ಇಟ್ಟು ಒತ್ತುತ್ತಿದ್ದೆವು ಅದನ್ನು ಅಮ್ಮನಾಗಲೀ ಅಜ್ಜಿಯಾಗಲೀ ತಟ್ಟಿ ತಟ್ಟಿ ದೊಡ್ಡ ಹಪ್ಪಳವನ್ನಾಗಿ ಮಾಡುತ್ತಿದ್ದರೆ ಅದನ್ನು ನಾವು ಯಾರಾದರೊಬ್ಬರು ಚಾಪೆಗೆ ಹಚ್ಚುತ್ತಿದ್ದೆವು.. ಚಾಪೆ ತುಂಬಿದ ಮೇಲೆ ಹೊರಗೆ ಅಂಗಳದಲ್ಲಿ ಚಾಪೆಯನ್ನು ತೆಗೆದುಕೊಂಡು ಹೋಗಿ ಹಾಕುತ್ತಿದ್ದೆವು ..ಆ ಕೆಲಸ ಭಹುಷ್ಯ ಮಧ್ಯಾಹ್ನದೊಳಗೆ ಮುಗಿಯುತ್ತಿತ್ತು.. ಹಪ್ಪಳ ತಟ್ಟುತ್ತಾ ತಟ್ಟುತ್ತಾ ನಾವು ಅದೆಷ್ಟು ಹಿಟ್ಟನ್ನು ಎಣ್ಣೆಯಲ್ಲಿ ಮುಳುಗಿಸಿ ಮುಳುಗಿಸಿ ತಿನ್ನುತ್ತಿದ್ದೆವು ಲೆಕ್ಕವೇ ಇಲ್ಲ .ಆ ಹಿಟ್ಟು ಎಷ್ಟು ರುಚಿಯಾಗಿರುತ್ತದೆ ಎಂದರೆ ನಾವೆಲ್ಲರೂ ದೊಡ್ಡವರಾದ ಮೇಲೆ ಕೇವಲ ಹಿಟ್ಟು ತಿನ್ನುವುದು ಗೋಸ್ಕರ ಹಲಸಿನ ಹಪ್ಪಳದ ಹಿಟ್ಟನ್ನು ಅಮ್ಮ ಮಾಡುತ್ತಿದ್ದರು.ನಮ್ಮ ಭಾಗ್ಯಕ್ಕೆ ಅಮ್ಮನಿಗೂ ಇಂಥದ್ದೆಲ್ಲ ತಿನ್ನುವುದೆಂದರೆ ತುಂಬಾ ಇಷ್ಟ ..ಹಾಗಾಗಿ ಅಮ್ಮ ಇದನ್ನೆಲ್ಲ ಬಹಳ ಉತ್ಸಾಹದಿಂದಲೇ ಮಾಡುತ್ತಿದ್ದರು .ಅಜ್ಜಿಗೆ ಅದನ್ನೆಲ್ಲ ತಿನ್ನುವ ಆಸಕ್ತಿ ಇಲ್ಲದಿದ್ದರೂ ನಮ್ಮೆಲ್ಲರ ಸಂತೋಷಕ್ಕಾಗಿ ನಿಷ್ಠೆಯಿಂದ ತಮ್ಮ ಕೆಲಸವನ್ನು ಮಾಡುತ್ತಿದ್ದರು . ಹಪ್ಪಳ ಹೊರಗೆ ಹಾಕಿದ ಮೇಲೆ ಇರುವುದು ಇನ್ನೂ ದೊಡ್ಡ ಕೆಲಸ .ಅದೇನೆಂದರೆ ಹಪ್ಪಳವನ್ನು ಕಾಗೆ ..ನಾಯಿ ತೆಗೆದುಕೊಂಡು ಹೋಗದಂತೆ ಕಾಯುವುದು. ಅದಕ್ಕಂತೂ ನಾವ್ಯಾರೂ ಸುತಾರಾಂ ಒಪ್ಪುತ್ತಿರಲಿಲ್ಲ .ಭಯಂಕರ ಬೋರಿಂಗ್ ಕೆಲಸ ಅದು.ಇದಕ್ಕಿಂತ ಈಗ ಲಾಕ್ ಡಾನ್ ಅವಧಿಯಲ್ಲಿ ಮನೆಯಲ್ಲಿ ಇರುವುದೇ ಎಷ್ಟೋ ಉತ್ತಮ.. ನಾವಂತೂ ಮಕ್ಕಳು.. ಆಡುವುದರಲ್ಲೇ ತಲೆ ನಮಗೆ ..ಎಷ್ಟು ಹಪ್ಪಳ ಕಾಯುತ್ತೇವೆ ..ಕೆಲವೊಮ್ಮೆ ಅಲ್ಲಿ ಜಗಲಿಯ ಮೇಲೆ ಆಡಿಕೊಂಡು ಹಪ್ಪಳದ ಕಡೆ ನೋಡುತ್ತಾ ಇರುತ್ತಿದ್ದೆವು.. ಆದರೂ ನಮ್ಮ ಕಣ್ತಪ್ಪಿಸಿ ಕಾಗೆ ಬಂದೇ ಬಿಡುತ್ತಿತ್ತು.. ಹಾಗಾಗಿ ಮಧ್ಯಾಹ್ನ ನಂತರ ಹೆಚ್ಚಾಗಿ ಅಜ್ಜಿ ಒಂದು ಚಂದಮಾಮವನ್ನೋ ಮಯುರವನ್ನೋ ಹಿಡಿದುಕೊಂಡು ಓದುತ್ತ ಒಂದು ಉದ್ದಕೋಲನ್ನು ಹಿಡಿದುಕೊಂಡು ಕಾಗೆಯನ್ನು ಓಡಿಸುತ್ತಿದ್ದದ್ದು ಇವತ್ತಿಗೂ ಕಣ್ಣೆದುರು ಕಾಣಿಸುತ್ತಿದೆ .. ಇಷ್ಟೇ ಮಾತ್ರವಲ್ಲ ಅರ್ಧ ಒಣಗಿದ ಹಲಸಿನ ಹಪ್ಪಳವನ್ನು ತೆಂಗಿನೆಣ್ಣೆಯಲ್ಲಿ ಮುಳುಗಿಸಿ ತಿನ್ನುವ ಇನ್ನೊಂದು ರುಚಿಯೂ ವರ್ಣಿಸಲಸಾಧ್ಯ. ಹಾಗಾಗಿ ಕೆಲವೊಮ್ಮೆ ನಾವೆಲ್ಲರೂ ಸೇರಿ ಅರ್ಧ ಚಾಪೆಯನ್ನೇ ಖಾಲಿ ಮಾಡಿ ಬಿಡುತ್ತಿದ್ದೆವು. ಅಮ್ಮ ಸುಳ್ಳು ಸುಳ್ಳೇ ಬೈಯುತ್ತಿದ್ದರು. ಯಾಕೆಂದರೆ ಅವರಿಗೂ ಅಂಥದ್ದೆಲ್ಲ ತಿನ್ನುವುದೆಂದರೆ ಬಹಳ ಇಷ್ಟ. ಹಾಗಾಗಿ ಅವರ ಬೈಗಳನು ನಾವೇನು ಬಹಳ ಸೀರಿಯಸ್ಸಾಗಿ ತೆಗೆದುಕೊಳ್ಳುತ್ತಿರಲಿಲ್ಲ ..ನಮ್ಮ ಕೆಲಸ ನಾವು ಮಾಡುತ್ತಾನೆ ಹೋಗ್ತಿದ್ದೆವು. ಎರಡು ಮೂರು ದಿನ ಒಣಗಿ ಬಂದ ಹಪ್ಪಳ ಇಪ್ಪತ್ತೈದು ಇಪ್ಪತ್ತೈದು ಲೆಕ್ಕ ಮಾಡಿ ಕೊಡುವುದೇ ನಮ್ಮ ಸಂಭ್ರಮದ ಕೆಲಸ.. ಆಗ ಪ್ಲಾಸ್ಟಿಕ್ ಯುಗ ಅಲ್ಲದ ಕಾರಣ ಹಪ್ಪಳವನ್ನು ಬಾಳೆನಾರಿನ ಹಗ್ಗದಲ್ಲಿ ಚೆಂದವಾಗಿ ಕಟ್ಟಿ ಪುನಃ ಮತ್ತೊಂದು ದಿನ ಬಿಸಿಲಿನಲ್ಲಿಟ್ಟು ಆಮೇಲೆ ಡಬ್ಬಿಯಲ್ಲಿ ಹಾಕಿಟ್ಟರೆ ಹಪ್ಪಳದ ಮಹಾಕಾರ್ಯ ಮುಗಿದಂತೆ . ಮತ್ತೆ ಮಳೆಗಾಲದಲ್ಲಿ ನಮ್ಮೂರ ಎಡೆಬಿಡದ ಮಳೆಯಲ್ಲಿ ನಮಗೆ ಶಾಲೆಗೆ ರಜೆ ಇದ್ದೇ ಇರುತ್ತಿತ್ತು.. ಆ ಸಮಯದಲ್ಲಿ ಕೆಂಡದ ಮೇಲೆ ಸುಟ್ಟು ಅಥವಾ ತೆಂಗಿನ ಎಣ್ಣೆಯಲ್ಲಿ ಕರಿದು ತಿನ್ನುವ ಈ ಹಪ್ಪಳದ ರುಚಿ ಇದೆಯಲ್ಲ ಅದು ಭಹುಷ್ಯ ಅಮೃತ ಸಮಾನ ನಿಮ್ಮೆಲ್ಲರಿಗೂ ಇದನ್ನು ಓದುವಾಗ ಎಣ್ಣೆಯಲ್ಲಿ ಕರಿದ ಹಲಸಿನ ಹಪ್ಪಳ ಮತ್ತೆ ತೆಂಗಿನಕಾಯಿ ಚೂರು ತಿಂದ ಅನುಭವ ಆಗುತ್ತಾ ಇದೆಯಲ್ಲವೇ ********

ನೆನಪುಗಳು Read Post »

ಇತರೆ

ಸಿನಿಮಾ

ಥಪ್ಪಡ್ ಮಡದೀಯ ಬಡಿದಾನ…   ಮಡದೀಯ ಬಡಿದಾನ…  ಈಚೆಗೆ ‘ಥಪ್ಪಡ್’ ಎಂಬ ಹಿಂದಿ ಸಿನೆಮಾ ನೋಡಿದೆ. ಕೇವಲ ‘ಒಂದು ಏಟು’ ಎಂದು ನಿರ್ಲಕ್ಷ್ಯ ತೋರಿ ಮರೆತುಬಿಡುವ ಪ್ರಸಂಗವನ್ನು ‘ಹೆಣ್ಣಿನ ಆತ್ಮಗೌರವ’ದ ಹೆಸರಿನಲ್ಲಿ ತೆರೆಯ ಮೇಲೆ ತೋರಿಸಿರುವ ರೀತಿ ಸ್ತ್ರೀಕುಲದ ಆತ್ಮಸಾಕ್ಷಿಯಂತಿದೆ. ಸಂಕುಚಿತ ಸಮಾಜಕ್ಕೆ ಮಾಡಿದ ಕಪಾಳಮೋಕ್ಷವಾಗಿದೆ. ನಿಜಕ್ಕೂ ಈ ಸಿನೆಮಾ ಸೂಕ್ಷ್ಮವಾಗಿ ಸಮುದಾಯಕ್ಕೆ ದಾಟಿಸುವ ಸಂದೇಶ ಇದೆಯಲ್ಲಾ ಅದು ಅದ್ಭುತ..!   ಜನಪದ ಗೀತೆಯೊಂದಿದೆ,    “ಮಡದೀಯ ಬಡಿದಾನ ಮನದೊಳಗೆ   ಮರುಗ್ಯಾನ, ಒಳಹೋಗಿ ಸೆರಗ ಹಿಡಿದು   ತಾ ಕೇಳಾನ ನಾ ಹೆಚ್ಚೋ ನಿನ್ನ ತವರು ಹೆಚ್ಚೋ…”       ಜನಪದ ಗೀತೆಯ ಮಾತಿಗೇ ಬರೋಣ. ಹೆಂಡತಿಗೆ ಯಾವುದೋ ಮಾತಿಗೋ, ಕಾರಣಕ್ಕೋ ಹೊಡೆದು ಬಿಡುವ ಗಂಡನು ಅನಂತರ ಸಮಜಾಯಿಷಿ ಕೊಡಲಿಕ್ಕೋ ಅಥವಾ ಅವಳನ್ನು ರಮಿಸಲಿಕ್ಕೋ ಆಕೆ ಬಳಿಹೋದಾಗಿನ ಪ್ರಸಂಗದ ವಿವರಣೆ ಇಲ್ಲಿದೆ.    ‘ಕೊಟ್ಟ ಹೆಣ್ಣು ಕುಲಕ್ಕೆ ಹೊರಗು’ ಎನ್ನುವ ಜಾಯಮಾನ ಉಳ್ಳ ಸಮಾಜದವರಾದ ನಾವು, ಹೆಣ್ಣಿನ ಮನದಾಳದ ಭಾವನೆಗಳಿಗೂ ನಮ್ಮದೇ ಬಣ್ಣ ಕಟ್ಟುವವರು. ಈ ಹಾಡೂ ಅಂತೆಯೇ.. ಹೆಂಡತಿಗೆ ಬಡಿದ ಗಂಡನಿಗೆ ತನ್ನ ಬಡಿತದಿಂದ ಆಕೆ ಮುನಿದುಕೊಂಡಿದ್ದರೆ, ಸಿಟ್ಟಿಗೆದ್ದಿದ್ದರೆ ಆಕೆ ತವರನ್ನು ನೆನೆದಿರಬಹುದು ಎಂದು ಯೋಚಿಸುವಂತೆ ಮಾಡಿಸುತ್ತದೆ. ಇದಕ್ಕೇನು ಹೇಳುವುದು? ಇದು ಸಮಾಜವು ಹೆಣ್ಣನ್ನು ಅರ್ಥೈಸಿಕೊಂಡಿರುವ ಬಗೆ ಎಂದು ಹೇಳಬಹುದಷ್ಟೇ. ಆದರೆ  ತವರಿನಲ್ಲಿ ಇದಕ್ಕೂ ನಿಕೃಷ್ಟವಾದ ಬದುಕು ಆಕೆಯದಿದ್ದರೆ  ಖಂಡಿತ ತವರನ್ನು ಆಕೆ ನೆನೆದಿರುತ್ತಾಳೆಯೇ..? ಹಾಗೆಯೇ ಮೊದಲ ಸಾಲಿನಲ್ಲಿರುವ ‘ಮಡದೀಯ ಬಡಿದಾನ’ ಎಂಬಲ್ಲಿ ಬಳಕೆಯಾಗಿರುವ ‘ಬಡಿದಾನ’ ಪದವು ಕೇಳಲು ಎಷ್ಟು ಕಠೋರವಾಗಿದೆ. ದನಕ್ಕೆ ಬಡಿದ ಹಾಗೆ.., ಸುತ್ತಿಗೆ ಬಡಿದ ಹಾಗೆ.., ಬಡಿದು ಬಿಸ್ಹಾಕು..,ಇಲ್ಲೆಲ್ಲಾ ಬಡಿದು ಎನ್ನುವುದು ಬಹಳ ಘೋರವಾದ ಅತೀ ಕಠಿಣತಮ ಶಬ್ಧಾರ್ಥವಾಗಿ ಪ್ರಯೋಗವಾಗಿದೆ. ಬಡಿಯುವುದು ಗಂಡಿನ ಜನ್ಮಸಿದ್ಧ ಹಕ್ಕು ಹಾಗೂ ಬಡಿಸಿಕೊಳ್ಳುವುದು ಹೆಣ್ಣಿನ ಹಣೆಬರಹ ಎಂಬುದು ಸಮಾಜದ ಸೃಜನೆಯಾಗಿರುವಾಗ ಗಂಡನಾದವನು ಬಡಿಯದೇ ಮತ್ತೇನು ಮಾಡಿಯಾನು?! ಮಡದಿಯೂ ಸಹ ಒಂದು ಪ್ರಾಣಿಯೋ ವಸ್ತುವೋ ಎಂದು ಭಾವಿಸಿ ಬಡಿದಿರುವ ಆತ ತನ್ನ ಮನದಲ್ಲಿ ತನ್ನ ಕೃತ್ಯಕ್ಕಾಗಿ ಖಂಡಿತ ಮರುಗಿರುತ್ತಾನೆಯೇ..?      ಜನಪದದ ಕಾಲ ನಿರ್ಣಾಯಕವಾಗಿಲ್ಲ. ನೂರಾರು ವರ್ಷಗಳಿಂದಲೂ ಹುಟ್ಟಿ ಹರಿದು ಬಂದಿರುವ ಜನಪದ ತೊರೆಯ ಮೂಲ ಯಾವುದೆಂದು ಕಾಣುವುದು ಅಷ್ಟು ಸುಲಭವಲ್ಲ. ಹಾಗಾದ ಮೇಲೆ ಇಂತಹ ಜನಪದ ಹಾಡುಗಳಿಗೂ ಇಪ್ಪತ್ತೊಂದನೆಯ ಶತಮಾನದ ‘ಥಪ್ಪಡ್’ ನಂತಹ ಸಿನೆಮಾದಲ್ಲಿ ತೋರಿರುವ ಹೆಣ್ಣಿನ ಕುರಿತ ಅಸಡ್ಡೆಯ ಭಾವನೆಗೂ ಅವಿನಾಭಾವ ಸಂಬಂಧವಿದೆ. ಹಾಗಾದರೆ, ಅನಾದಿಯಿಂದ ಇಂದಿನವರೆಗೂ ಹೆಣ್ಣಿನ ಸ್ಥಿತಿಗತಿಯಲ್ಲಿ, ಆಕೆಯ ಕುರಿತ ಸಮಾಜದ ಮನೋಭಾವದಲ್ಲಿ ಬಹಳ ಸುಧಾರಣೆಯೇನೂ ಕಂಡಿಲ್ಲ ಎಂದಾಯಿತಲ್ಲವೇ..?     ಹೀಗೆ ಕೇಳುವ ಪ್ರಶ್ನೆಗಳನ್ನೂ ಅಪಹಾಸ್ಯಕ್ಕೆ ಗುರಿಮಾಡುವ  ಸಮುದಾಯದ ನಡುವೆ ಮಹಿಳೆಯರಿದ್ದಾರೆ. ಅಭಿಮಾನ, ಆತ್ಮಗೌರವ, ಸ್ವಾಭಿಮಾನ, ಸ್ವಾಭಿಪ್ರಾಯ ಮೊದಲಾದ ಪದಗಳಿಗೆ ಮಹಿಳೆಯರ ಪದಕೋಶದಲ್ಲಿ ಸ್ಥಾನ ನೀಡದವರ ನಡುವಲ್ಲಿ ಮಹಿಳೆಯರು ಛಲದಿಂದ ಬದುಕಬೇಕಿದೆ. ಅಂಥ ನಿರ್ಭಾವುಕ ಜನರ ನಿರ್ಲಕ್ಷ್ಯಕ್ಕಿಂತಲೂ ಭಾವುಕ ಮನಸ್ಸಿನ ಮಹಿಳೆಯರ ನಿರೀಕ್ಷೆಗಳು ಮಹತ್ವವಾದವು ಎಂಬುದನ್ನು ಅರಿಯಲು ‘ಥಪ್ಪಡ್’ ನಂತಹ ಸೂಕ್ಷ್ಮ ನಿರ್ದೇಶನದ ಚಿತ್ರವನ್ನು ಎಲ್ಲರೂ ನೋಡಬೇಕು.       ಇನ್ನು ‘ತಾಪ್ಸಿ ಪನ್ನು’ ಎನ್ನುವ ನಟನಾಲೋಕದ ಧ್ರುವತಾರೆ ತನ್ನಕಾಲದ ಇತರೆ ಹೀರೋಯಿನ್ ಗಿಂತ ಹೇಗೆ ಭಿನ್ನ, ಆಕೆ ನಟನೆಗೆ ಆರಿಸಿಕೊಳ್ಳುವ ಸಿನೆಮಾಗಳ ವಸ್ತು ವಿಷಯ ಎಷ್ಟು ಅರ್ಥಪೂರ್ಣ, ವೈವಿಧ್ಯವಾಗಿರುತ್ತವೆ ಮತ್ತು ಆಕೆಯ ನಟನೆ ಎಷ್ಟು ಸಹಜವಾಗಿರುತ್ತದೆ ಎಂಬುದನ್ನು ಆಕೆ ಅಭಿನಯಿಸಿರುವ ಸಿನೆಮಾ, ಕಿರುಚಿತ್ರ ( short films) ಗಳನ್ನು ನೋಡಿಯೇ ತಿಳಿಯಬೇಕು.    ‘ಥಪ್ಪಡ್’ ಕೇವಲ ಒಂದು ಸಿನೆಮಾ ಅಲ್ಲ ಅಥವಾ ‘ಮಡದೀಯ ಬಡಿದಾನ..’ ಎನ್ನುವುದು ಕೇವಲ ಒಂದು ದೈನಂದಿನ ಸಂಗತಿಯಲ್ಲ. ಈ ಲೇಖನದ ಮೂಲಕ ಆ ಕುರಿತ ವಿಚಾರವೊಂದನ್ನು ಆತ್ಮಶೋಧನೆಗೆ ಹಚ್ಚುವ ಪ್ರಯತ್ನ ಮಾಡಲಾಗಿದೆ. ಏಕೆಂದರೆ, ‘ಹೆಣ್ಣಿನ ಘನತೆ ಬಿಟ್ಟಿಬಿದ್ದಿಲ್ಲ…’ 

ಸಿನಿಮಾ Read Post »

ಇತರೆ

ಕಾದಂಬರಿಕಾರರು

ಉತ್ತಮ ಕಾದಂಬರಿಕಾರರು ಚಂದ್ರು ಪಿ.ಹಾಸನ  ಕುಂಬಾರ ಮಾಡಿದ ಕುಡಿಕೆಯಲ್ಲಿ ನಿಷ್ಕಲ್ಮಶ ಮನಸ್ಸಿನ ಎಣ್ಣೆ ತುಂಬಿ ಒಗ್ಗಟ್ಟಿನ ಬತ್ತಿಯನ್ನು ಹಚ್ಚಿದಾಗ ಆ ಕುಂಬಿಕೆಯು ದೀಪವೆಂಬ ಹೆಸರನ್ನು ಪಡೆಯುತ್ತದೆ.ಅದು ಹೊರಹೊಮ್ಮುವ ಪ್ರಶಾಂತ ಕಿರಣಗಳು ಅಡಗಿಸಿ ಕೊಳ್ಳುತ್ತಿರುವ ನಕಾರಾತ್ಮಕತೆಯನ್ನು ಹೊಡೆದೋಡಿಸಿ ಧನಾತ್ಮಕತೆಯನ್ನು ತುಂಬುತ್ತದೆ. ಎಲ್ಲೆಡೆ ಪ್ರಶಾಂತತೆಯನ್ನು ಹೊಮ್ಮುತ್ತದೆ.ಇದರಿಂದ ಜೀವಿಗಳ ಚೈತನ್ಯ ಪ್ರಾಪ್ತಿಯಾಗುವುದಿಲ್ಲದೆ ಬೆಳವಣಿಗೆ ಹೊಸ ಜೀವಿಗಳ ಉದಯ ಹೀಗೆ ಪ್ರತಿಯೊಂದರಲ್ಲೂ ತನ್ನ ಸ್ಥಾನವನ್ನು ಬೆಳೆಸಿ ತನ್ನ ಸುತ್ತಲೂ ಉತ್ತಮ ಪರಿಸರವನ್ನು ಸೃಷ್ಟಿಸುತ್ತದೆ. ಇಂತಹ ದೀಪದಂತೆ ಅಲ್ಲಲ್ಲಿ ಕಾದಂಬರಿಕಾರರು ಜನಿಸಿದ್ದು, ಆಧುನಿಕ ಕನ್ನಡ ಸಾಹಿತ್ಯದ ಸೊಗಡನ್ನು ಶ್ರೀಮಂತಗೊಳಿಸಿದಲ್ಲದೆ ಅವರ ಬರವಣಿಗೆಯಿಂದ ಸಮಾಜಕ್ಕೆ ಕನ್ನಡಿ ಹಿಡಿದು ಅದರ ಪ್ರತಿಬಿಂಬವನ್ನು ಎಲ್ಲಡೆ ತೋರಿಸುವಂತ್ತಾ,  ಉತ್ತಮ ಸಮಾಜದ ಬಗ್ಗೆ ಬೆಳಕು ಚೆಲ್ಲುವಂತಹ ಕಾರ್ಯಗಳನ್ನು ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ.          ಒಂದು ಉತ್ತಮ ಸಮಾಜ ರೂಪುಗೊಳ್ಳಬೇಕಾದರೆ ಈ ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ವಿಕಸನ ವಾಗಬೇಕು. ಅವನಲ್ಲಿ ಮಾನಸಿಕ ಸ್ಪೂರ್ತಿಯನ್ನು ಚಿಮ್ಮುವಂತೆ ಮಾಡಿದಾಗ ನಾಗರಿಕ ಮಾನವನ ವಾತಾವರಣ ಸೃಷ್ಟಿಯಾಗುತ್ತದೆ. ಸಮಾಜದಲ್ಲಿ ನಡೆಯುವ ಆಗುಹೋಗುಗಳ ಮುಂದೆ ಕನ್ನಡಿ ಹಿಡಿದಾಗ ಎಲ್ಲಾ ನೈಜ ಚಿತ್ರಣವನ್ನು ಸಮಾಜಕ್ಕೆ ಪ್ರತಿಬಿಂಬಿಸುತ್ತದೆ. ಇಂತಹ ನಿಟ್ಟಿನಲ್ಲಿ ನಮ್ಮ ಕಾದಂಬರಿಕಾರರು ತಮ್ಮ ಬರವಣಿಗೆಯ ಮೂಲಕ ಸಮಾಜದ ಚಿತ್ರಣವನ್ನು ಕಾದಂಬರಿಯಲ್ಲಿ ಚಿತ್ರಸಿದ್ದಾರೆ. ಅಲ್ಲದೆ ಪರೋಕ್ಷವಾಗಿ ಉತ್ತಮ ಸಮಾಜದ ನಿರ್ಮಿತಿಗೆ ಇವರು ಕಾರಣಕರ್ತರಾಗಿದ್ದಾರೆ. ಅವುಗಳು ಹಳ್ಳಿಯ ಜನರ ಮೂಡ ಆಚಾರ-ವಿಚಾರಗಳನ್ನು ಹೇಳುವುದರ ಜೊತೆಗೆ ಅದರಿಂದಾಗುವ ಕೆಡುಕುಗಳ ಮೇಲೆ ವೈಚಾರಿಕ ಮನೋಭಾವ ಬರುವಂತೆ ತನ್ನ ಕಾದಂಬರಿಗಳಲ್ಲಿ ಚಿತ್ರಸಿದ್ದಾರೆ.            “ರವಿ ಕಾಣದ್ದನ್ನು ಕವಿ ಕಂಡ” ಎನ್ನುವಂತೆ ಕಾದಂಬರಿಕಾರನ ವೈಶಿಷ್ಟ್ಯವೇ ಅಂಥಹದ್ದು ಏಕೆಂದರೆ ಪದರಚನೆಯ ಸಾರಸ್ವತ ಲೋಕವು ವೈಭವೋಪೇತವಾಗಿದೆಯೆಂದರೆ ಅದರಲ್ಲಿ ಕಾದಂಬರಿಗಳ ಪಾತ್ರ ಬಹಳ ಹಿರಿದಾದದ್ದು. ಸಾಹಿತ್ಯದ ಪ್ರಕಾರಗಳು ಆಯಾ ಕಾಲಘಟ್ಟಕ್ಕೆ ತಕ್ಕಂತೆ ಹೊಸ ಆಯಾಮಗಳನ್ನು ಪಡೆದು ಕೊಂಡು ವರ್ತಮಾನದಲ್ಲಿ ಅಪ್ರಾಮಾಣಿಕತೆ ವಿರೋಧಿಸಿ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ಪ್ರಯತ್ನ ಮಾಡುತ್ತವೆ.               ಕಾದಂಬರಿಯು ಉದ್ದವಾದ ನೀಲ ಕಥೆಯ ವಿಸ್ತೃತ ರೂಪ ವಲ್ಲ. ಸಂದೇಶವನ್ನು ನೀಡುವಂತಹ ಮತ್ತು ಮಾನವನ ಅಧ್ಯಯನಕ್ಕೆ ಒಂದು ಕೈಗನ್ನಡಿ. ಕೆಲವು ಪತ್ತೆದಾರಿ ಕಾದಂಬರಿಗಳಲ್ಲಿ ಸಮಾಜಕ್ಕೆ ಸಂದೇಶ ವನ್ನು ನೀಡುವಂತಹ ವಸ್ತುಗಳಿರುತ್ತವೆ.ಇಂದಿನ ಸಮಾಜದ ಸ್ಥಿತಿಯ ಬಗ್ಗೆ ಕೆಲವು ಮಾತುಗಳನ್ನು ತುಂಬಿ ಪ್ರತಿಯೊಬ್ಬ ನಾಗರಿಕರಿಗೂ ಬರವಣಿಗೆ ಮೂಲಕ ಉತ್ತಮ ಮೌಲ್ಯವನ್ನು ತುಂಬಿಸುವಲ್ಲಿ ಕಾದಂಬರಿಕಾರ ನೆರವಾಗುತ್ತಾನೆ *ಪೂರ್ಣಚಂದ್ರ ತೇಜಸ್ವಿಯವರ* ‘ಮಹಾಪಲಾಯನ’ ಕಾದಂಬರಿಯು ಕೈದಿಯೊಬ್ಬ ಮಾನಸಿಕವಾಗಿ ಬದಲಾಗಿ ಉತ್ತಮ ಸಮಾಜದಲ್ಲಿ ಬರೆದುಕೊಳ್ಳುವ ಬಗ್ಗೆ, ಮತ್ತು ‘ಕಿರಿಗೂರಿನ ಗಯ್ಯಾಳಿಗಳು’ ಕಾದಂಬರಿಯಮೂಲಕ ರಾಜಕೀಯ ಪಿತೂರಿ ಅನಕ್ಷರಸ್ಥರ ಮೇಲೆ ನಡೆಯುವ ದೌರ್ಜನ್ಯ ಜಾತಿವ್ಯವಸ್ಥೆ ಗಳೆಂಬ ಸಮಾಜದ ಅನಿಷ್ಠ ಪದ್ಧತಿಗಳ ಮೇಲೆ ನಡೆಯುವ ಸ್ಥಿತಿಗಳ ಮೇಲೆ ಬೆಳಕು ಚೆಲ್ಲುವ ಮೂಲಕಉತ್ತಮ ಸಮಾಜಕ್ಕೆ ಬದಲಾವಣೆಯ ಚೌಕಟ್ಟನ್ನು ತಮ್ಮ ಕಾದಂಬರಿಗಳಿಂದ ಓದುಗರಿಗೆ ಸಮಾಜಕ್ಕೆ ಅರಿವಿನ ಮಾರ್ಗವನ್ನು ತಿಳಿಸಿದ್ದಾರೆ.       *ಕುವೆಂಪು* ಅವರ ‘ಕಾನೂರು ಹೆಗ್ಗಡತಿ’ ಕಾದಂಬರಿಯ ಸ್ವತಂತ್ರಪೂರ್ವದಲ್ಲಿ ಮಲೆನಾಡು ವೈಚಾರಿಕತೆ ಮತ್ತು ಅರಿವಿನ ಜನಜೀವನ ಮತ್ತು ಆಲೋಚನೆಗಳ ಬಗ್ಗೆ ಇನ್ನು ‘ಮಲೆಗಳಲ್ಲಿ ಮದುಮಗಳು’ ಎಂಬ ಮಿನಿ ಕಾದಂಬರಿ ಅಂತರ್ಜಾತಿ ವಿವಾಹ ಮತ್ತು ಮಲೆನಾಡಿನ ಧಾರ್ಮಿಕ ಪರಂಪರೆಯ ಮೇಲೆ ಸಾಮಾಜಿಕವಾಗಿ ಬೆಳಕು ಚೆಲ್ಲುತ್ತದೆ.      ಕಾದಂಬರಿಕಾರರಲ್ಲಿ ಸಮಾಜದಲ್ಲಿ ಅತಿ ಹೆಚ್ಚು ಬದಲಾವಣೆಗಳನ್ನು ತಂದು ಅಪಾರ ಯಶಸ್ಸು ತಂದವರಲ್ಲಿ *ಅ ನ ಕೃ* ಅವರು ಕೂಡ ಒಬ್ಬರು ‘ಕಾದಂಬರಿಗಳ ಸಾರ್ವಭೌಮ’ ಎಂದು ಖ್ಯಾತಿ ಪಡೆದಿದ್ದವರು. ಅವರ ತೊಂಬತ್ತಕ್ಕೂ ಹೆಚ್ಚು ಸಾಮಾಜಿಕ ಕಾದಂಬರಿಗಳಾಗಿದ್ದು, ಇವುಗಳಲ್ಲಿ ಸಮಕಾಲೀನ ಜೀವನದ ಬೇರೆ ಬೇರೆ ಮುಖಗಳನ್ನು ತೋರಿಸಿದ್ದಾರೆ. ಕಲಾವಿದರ ಸಮಸ್ಯೆಗಳು, ಆಧುನಿಕ ವಿದ್ಯಾಭ್ಯಾಸದ ಪರಿಣಾಮ, ಭಾರತೀಯ ಸಂಸ್ಕೃತಿಯ ಮೌಲ್ಯಗಳ ಮಹತ್ವ, ಅವಿಭಕ್ತ ಕುಟುಂಬ ಜೀವನ, ಒಡೆಯುತ್ತಿರುವ ಬದುಕು, ವೇಶ್ಯಾ ಸಮಸ್ಯೆ , ಲಂಚಗುಳಿತನ, ಸ್ತ್ರೀ-ಸ್ವಾತಂತ್ರ್ಯ , ಜೈಲುಗಳ ಸುಧಾರಣೆ, ದಾಂಪತ್ಯ ವಿಚ್ಛೇದನ , ಜಾತೀಯತೆಯ ಭೂತ,  ರಾಜಕೀಯ ದೊಂಬರಾಟ, ಪವಿತ್ರ ಪ್ರೇಮ, ಕೊಳಚೆಯ ಕಾಮ, ಪಾನಿರೋಧದ ಸಮಸ್ಯೆ, ಶ್ರೀಮಂತಿಕೆಯ ಡೌಲು, ಬಡತನದ ದಾರುಣತೆ, ಪೂರ್ವ-ಪಶ್ಚಿಮಗಳ ಸಂಗಮ, ಧಾರ್ಮಿಕತೆಯ ಸೋಗು, ಆಡಳಿತದ ಆರ್ಭಟಗಳು, ಸ್ವಾತಂತ್ರ್ಯದ ಕಿಚ್ಚು , ಬದುಕಿನ ಮೇಲೆ ವಿಜ್ಞಾನದ ಪ್ರಭಾವ , ಹೀಗೆ ನಾನಾ ಸಂಗತಿಗಳ ಕುರಿತು ತಮ್ಮ ಕಥನ ಕೌಶಲ, ನಿರರ್ಗಳವಾದಶೈಲಿ ಮತ್ತು ಸಂಭಾಷಣೆಯ ಚಾತುರ್ಯ ಇವುಗಳಿಂದ ಜನಮನಸೆಳೆದ ಅರ್ಥೈಸುವ ಪ್ರಯತ್ನ ಮಾಡಿದ್ದಾರೆ. ಅವರ ಮೇಲೆ ಅಶ್ಲೀಲತೆಯ ಆರೋಪ ಬಂದಾಗ ದೂರಮಾಡಲು ‘ಸಾಹಿತ್ಯ ಮತ್ತು ಕಾಮಪ್ರಚೋದನೆ’ ಕಾದಂಬರಿಯಲ್ಲಿ ಸೂಳೆಯ ಸುಖದುಃಖಗಳನ್ನು ಮತ್ತು ನಾರಿಯ ಸಂಸ್ಕೃತಿ ಎತ್ತಿಹಿಡಿಯಲು ಇರುವ ನಾರಿ ಪಾತ್ರಗಳನ್ನು ಹಲವಾರು ಕಾದಂಬರಿಗಳಲ್ಲಿ ಅರ್ಥೈಸಿದ್ದಾರೆ.      ತ್ರಿವೇಣಿಯವರ ‘ಶರಪಂಜರ’ ಕಾದಂಬರಿಯಲ್ಲಿ ಇನ್ನೊಬ್ಬಳ ಮಾನಸಿಕ ಗೊಂದಲ ಹಾಗೂ ನೋವುಗಳನ್ನು ಮತ್ತು ಗುಣ ಹೊಂದಿದರು ಸಮಾಜದ ದೃಷ್ಟಿಕೋನವು ಹೇಗಿರುವುದು ತಿಳಿಸಿದ್ದಾರೆ              ಗಿರೀಶ್ ಕಾರ್ನಾಡರ ‘ನಾಗಮಂಡಲ’ ಸಾಮಾಜಿಕ ಜೀವನ ಜನರ ಸ್ಥಿತಿಗತಿ ಮತ್ತು ಕಳಕಳಿಯನ್ನು ಜೀವನವೆಲ್ಲ ಸಮಾಜಕ್ಕೆ ಬೆಳಕು ಚೆಲ್ಲುವಲ್ಲಿ ಮುಖ್ಯ ಪಾತ್ರವಹಿಸುತ್ತವೆ.         ಅನಂತ    ಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯಲ್ಲಿ ಸಾಮಾಜಿಕ ಜಾತಿ ಸಂಪ್ರದಾಯಗಳ ಬಗ್ಗೆ ಬೆಳಕು ಚೆಲ್ಲುವಂತಹ ಕೆಲಸ ನಡೆದಿದೆ.        ಕಾರಂತರ ಸಾಮಾಜಿಕ ಕಾದಂಬರಿಗಳಾದ ‘ಯಕ್ಷಗಾನ ಬಯಲಾಟದಲ್ಲಿ’ ಸಾಮಾಜಿಕ ಬೆಳಕು ಚೆಲ್ಲುವಲ್ಲಿ ಮುಖ್ಯ ಪಾತ್ರವಾಗುತ್ತದೆ ‘ಬೆಟ್ಟದಜೀವ’ ಇದರಲ್ಲಿ ಮಲೆನಾಡಿನ ವೃದ್ಧ ದಂಪತಿಗಳ ಜೀವನ ಪರಿಸರದ ಮೇಲೆ ಇರುವ ಕಾಳಜಿ ಬಿಂಬಿಸುತ್ತದೆ. ‘ಚೋಮನದುಡಿ’ ಕಾದಂಬರಿಯಲ್ಲಿ ಬರುವ ಪಾತ್ರಗಳು ಜಾತಿ-ಮತ ಮೇಲು-ಕೀಳು ತೊಲಗಲಿ ಎನ್ನುತ್ತಾ ಸಮಾಜದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದೆ.  ಹೀಗೆ ಕಾದಂಬರಿಯಲ್ಲಿ ಸೃಷ್ಟಿಸುವ ಪ್ರತಿಯೊಂದು ಪಾತ್ರಗಳು ಆಗಿರಬಹುದು ಸಂದೇಶಗಳ ಆಗಿರಬಹುದು ಪ್ರತಿಯೊಂದು ಅರ್ಥಪೂರ್ಣ. ಇಲ್ಲಿ ಚಿತ್ರಿಸುವ ಘಟನೆ ಸನ್ನಿವೇಶ ಸಂಬಂಧಗಳ ಮೂಲಕ ವಾಸ್ತವ ಸಂಗತಿಗಳನ್ನು ಮರೆಮಾಚದೆ ಸತ್ಯ ನಿಷ್ಠೆಗೆ ಬೆಲೆ ಕೊಟ್ಟಂತಹ ಕಾದಂಬರಿಕಾರರು ಬರಹದ ಮೂಲಕ ಆದರ್ಶ ಕನಸುಗಳನ್ನು ಎತ್ತಿಹಿಡಿದಿದ್ದಾರೆ. ಅದನ್ನು ಸ್ವೀಕರಿಸುವ ಜನರು ಆಧುನಿಕ ಪ್ರಜ್ಞೆಯೂ ಬದುಕಿನಲ್ಲಿ ಸವಾಲಾಗಿ ಮನಸ್ಸಿನ ಆಳಕ್ಕೆ ಧೈರ್ಯ ತುಂಬಬಹುದು. ಮಾನವನ ಸಮಾಜ ಕುಟುಂಬ ವ್ಯಕ್ತಿ ಪರಿಸರ ಶಾಲೆ ಮೈದಾನ ಸಾಹಿತ್ಯ ಕೃಷಿ ಸಂಸ್ಕೃತಿ ಬದುಕು ಸಮಾಜಸೇವೆ ಪ್ರಕೃತಿಯೊಂದಿಗೆ ಹೇಗೆ ಬದುಕಬೇಕು ಎಂಬುದನ್ನು ಕಾದಂಬರಿಕಾರರು ಮನದಲ್ಲಿ ನೆಲೆಸುವಂತೆ ಬರೆದು ಸಮಾಜದಲ್ಲಿ ನಡೆಯುವ ಅನ್ಯಾಯ, ಅತ್ಯಾಚಾರ, ಮೋಸ ವಂಚನೆ, ದಬ್ಬಾಳಿಕೆ, ಜಾತೀಯತೆ, ಮೂಡನಂಬಿಕೆಗಳು ಹೀಗೆ ಹಲವಾರು ಅಹಿತಕರ ಘಟನೆಗಳನ್ನು ಎದುರಿಸುವ ಬಗೆಯನ್ನು ದಾರದಷ್ಟೇ ಎಳೆಎಳೆಯಾಗಿ ಬರೆದಿರುತ್ತಾರೆ. ಪ್ರೇಮದ ಹಾದಿ, ಮೋಸದ ಹಾದಿ, ಸೋತೋನು ಮುಂದೆ ಗೆದ್ದು ಬಂದ ಹಾದಿ, ಹೆತ್ತು ಹೊತ್ತು ತುತ್ತು ನೀಡಿದವರು ಮತ್ತು ಮುತ್ತುನೀಡಿದವರು ಇವರಿಬ್ಬರಿಗೂ ನ್ಯಾಯ ಒದಗಿಸಿ ಅನುಸರಣೆಯಿಂದ ಕುಟುಂಬದ ಯಶಸ್ಸಿನ ಹಾದಿ ಎಂಬುದನ್ನು ತೋರುವಂತೆ ಇರುತ್ತವೆ. ಇದು ಕೇವಲ ಸಾಹಿತ್ಯ ವಾಗಿರದೆ ಒಂದು ಸಾಮಾಜಿಕ ನೆಲೆಗಟ್ಟಿನಲ್ಲಿ ವಾಸಿಸುವ ಜನರ ಜೀವನ ಭಾಷಾ ಸೊಗಡು ಆಚಾರ-ವಿಚಾರಗಳು ಸಂಸ್ಕೃತಿಗಳ ಇತಿಹಾಸ ಭಾವಗಳು ಹೀಗೆ ಪ್ರತಿಯೊಂದರಲ್ಲೂ ಮನೋಜ್ಞವಾಗಿ ಚಿತ್ರಿಸುವುದರ ಜೊತೆಗೆ, ಆ ಮೌಲ್ಯಗಳನ್ನು ರೂಢಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ. ಆದ್ದರಿಂದ ಮೊದಲೇ ತಿಳಿಸಿದಂತೆ ಕಾದಂಬರಿಕಾರರು ಉತ್ತಮ ಸಮಾಜದ ಯುವ ಪೀಳಿಗೆಗೆ ಕನ್ನಡಿ ಎಂದು ಹೇಳಿದರೆ ತಪ್ಪಾಗಲಾರದು.

ಕಾದಂಬರಿಕಾರರು Read Post »

ಇತರೆ

ಪ್ರಸ್ತುತ

ಮತ್ತೆ ಸಿಕ್ಕಿದ್ದಳು ವಸಂತ ಪ್ರಮೀಳಾ .ಎಸ್.ಪಿ. ನಿತ್ಯವೂ ಶಾಲೆಗೆ ಹೋಗುವ ದಾರಿಯುದ್ದಕ್ಕೂ ನನ್ನ ಗಂಡನನ್ನು ಬೈದುಕೊಂಡೇ ಹೋಗುತ್ತೇನೆ.ಇವರಿಂದ ನನಗೆ ಸಮಯ ಮೀರಿತು,ಮನೆಗೆ ಬಂದ ಅತಿಥಿಗಳು ಹೊರಡಲು ಸಿದ್ಧರಾದರೂ ಅವರಿಗೆ ತಿಂಡಿ ಕಾಫಿ ಕೊಡಲು ಅದೇಶಿಸುತ್ತಾರೆ.ಇಲ್ಲವೋ ಹೊರಟ ಹೊತ್ತಿಗೆ ಚಹಾ ಕೇಳುತ್ತಾರೆ ಎಂದೆಲ್ಲಾ ಅಂದುಕೊಂಡು ಆತುರದಲ್ಲಿ ಹೋಗುವ ದಾರಿಯಲ್ಲಿ ಸಿಗುವ ಮನೆ ‘ವಸಂತಳದ್ದು’. ಸಂಜೆ ಬರುವ ವೇಳೆಗೆ ಬಾಗಿಲಲ್ಲಿ ನಿಂತು ಮುಗುಳ್ನಗೆ ಬೀರಿ ಮಾತು ಪ್ರಾರಂಭಿಸುತ್ತಾಳೆ.ಒಂದೊಂದು ದಿನಕ್ಕೆ ಒಂದೊಂದು ಘಟನೆ ಹೇಳಿಬಿಡುತ್ತಾಳೆ.ಹಾಗೆಂದು ಎಂದೂ ಸಂಪೂರ್ಣವಾಗಿ ಹೇಳಿದಳು ಎಂದಿಲ್ಲ.ಇಡೀ ಬೀದಿಯಲ್ಲಿ ಯಾರೊಂದಿಗೂ ಅವಳ ಮಾತಿಲ್ಲ.’ಬಜಾರಿ’ ಎಂಬ ಪಟ್ಟ ಅದ್ಯಾವಾಗ ಲೋ ಧಕ್ಕಿ ಬಿಟ್ಟಿದೆ ಅವಳಿಗೆ.ನನ್ನೊಂದಿಗೆ ಮಾತಿಗೆ ನಿಂತಾಗಲು ನಾನು ಕೇವಲ ಶ್ರೋತೃದಾರಳು.ಅವಳು ಹೇಳಿದ್ದನ್ನೆಲ್ಲಾ ಅವಲೋಕಿಸಿದಾಗ … ವಸಂತ ಬಡ ಕುಟುಂಬದ ಹೆಣ್ಣು ಮಗಳು.ಬದುಕು ಕಟ್ಟಿಕೊಳ್ಳಲು ಬೆಂಗಳೂರಿನ ಗಾರ್ಮೆಂಟ್ಸ್ ಸೇರಿದ್ದಳು.ಅಲ್ಲಿಯೇ ಅನ್ಯಜಾತಿಯ ಯುವಕನೊಂದಿಗೆ ವಿವಾಹ ವಾದ ಕಾರಣ ಎರೆಡೂ ಮನೆಯವರಿಗೂ ಬೇಡವಾಗಿದ್ದರು.ಈ ನಡುವೆ ಹುಟ್ಟಿದ ಮೊದಲನೇ ಮಗ ವಿಕಲಚೇತನ ನಾಗಿದ್ದ.ಇದರಿಂದಾಗಿ ಅವಳು ಕೆಲಸಕ್ಕೆ ಹೋಗಲು ಸಾಧ್ಯವಾಗದೇ ಕುಟುಂಬ ನಿರ್ವಹಣೆ ಕಷ್ಟವಾಗಿ ಜಿಲ್ಲಾ ಕೇಂದ್ರವೊಂದಕ್ಕೆ ಬಂದು ಬಾಡಿಗೆ ಮನೆಯೊಂದರಲ್ಲಿ ಜೀವನ ಪ್ರಾರಂಭಿಸಿದ್ದರು.ಮತ್ತೊಬ್ಬ ಮಗಳು ಹುಟ್ಟಿದಳು.ಬಡತನಕ್ಕೆ ಮಕ್ಕಳು ಜಾಸ್ತಿ ಎಂಬಂತೆ ಈಗ ನಾಲ್ಕು ಜನರ ಕುಟುಂಬವಾಯ್ತು.ಗಂಡನೊಬ್ಬನೇ ದುಡಿಯಬೇಕಾಯ್ತು.ಹಾಗೂ ಹೀಗೂ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ‘ಗೋಬಿ ಮಂಚೂರಿ’ ಮಾರುವ ವ್ಯಾಪಾರ ಆರಂಭಿಸಿದರು. ನಾನು ಅವಳಿಗೆ ಸಿಕ್ಕ ದಿನವೆಲ್ಲಾ ಅದರದ್ದೇ ವಿಷಯ ಅವಳ ಬಾಯಲ್ಲಿ… ನನ್ನ ಗಂಡ ರಾಜನಂಗೆ ಬೆಳೆದವರು, ಅವರಿಗೆ ಕಷ್ಟ ಸುಖ ಏನು ಗೊತ್ತಿಲ್ಲ.ಬೆಳಿಗ್ಗೆ ನಾನೇ ಮನೆಯಲ್ಲಿ ಗೋಬಿ ತಯಾರಿಸಿ,ಬೇಕಾದ ಎಲ್ಲಾ ಸಿದ್ಧತೆ ಮಾಡಿ ಅವರನ್ನು ನೀಟಾಗಿ ಬಟ್ಟೆ ಹಾಕೊಂಡು ಹೋಗಿ ಮಾರಲು ಕಳಿಸ್ತಾ ಇದ್ದೇನೆ.ಅದಕ್ಕೆ ಹೆಚ್ಚು ಜನ ನಮ್ಮ ಅಂಗಡಿಯಲ್ಲಿ ಬಂದು ತಿನ್ನುತ್ತಾರೆ.ಒಂದೊಂದು ದಿನ ಒಂದು ಸಾವಿರ ರೂಪಾಯಿಗಳ ವ್ಯಾಪಾರ ಆಗುತ್ತೆ.ಹೆಂಡತಿ ಮಕ್ಕಳು ಎಂದರೆ ನನ್ನ ಗಂಡನಿಗೆ ಪ್ರಾಣ.ಎರೆಡು ಲೀಟರ್ ಹಾಲು ತಗೊ ಅಂತಾರೆ,ಹಣ್ಣು,ಬ್ರೆಡ್ಡು,ಬಿಸ್ಕತ್ ಇಲ್ಲದೆ ಮನೆಗೆ ಬರಲ್ಲ.ಬೇಕಾದಷ್ಟು ತಂದು ಹಾಕ್ತಾರೆ. ನನ್ನ ಅಪ್ಪ ಅಮ್ಮ ಕೈ ಬಿಟ್ಟರೂ ನನ್ ಗಂಡ ಕೈ ಬಿಡಲಿಲ್ಲ, ನನ್ನ ಎರೆಡೂ ಮಕ್ಕಳು ಹುಟ್ಟಿದಾಗ ಇವರೇ ಬಾಣಂತನ ಮಾಡಿದ್ರು.ಇಷ್ಟೊಂದು ಬಾಡಿಗೆ ಕಟ್ಟಿಕೊಂಡು ಇಂತಹ ಮನೆಯಲ್ಲಿ ಸಾಕಿಕೊಂಡು ಹೋಗ್ತಾ ಅವ್ರೇ….. ಹೀಗೆ ಸಾಲು ಸಾಲುಗಳಲ್ಲಿ ತನ್ನ ಸಂಸಾರದ ಬಗ್ಗೆ ಹೇಳ್ತಾ ಗಂಡನನ್ನು ಹೊಗಳು ತಿದ್ದಳು ವಸಂತ. ಬೆಳಿಗ್ಗೆ ನನ್ನ ಪತಿಯನ್ನು ಬೈಕೊಂಡು ಹೋಗೋ ನಾನು ಸಂಜೆ ಬರುವಾಗ ಅವಳ ಮಾತು ಕೇಳಿ ಸಂತೋಷ ಪಡುತ್ತಾ ಮನೆಗೆ ಬರುತ್ತಿದ್ದೆ. ಅವಳ ಮಕ್ಕಳ ಮುಖ ನೋಡಿ ನಕ್ಕು ಮಾತಾಡಿಸಿ ಮನೆಗೆ ಬಂದರೆ ನನಗೂ ಒಂದು ರೀತಿ ಸಮಾಧಾನ ಆಗುತಿತ್ತು. ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ತಂದು ಕೊಡುತ್ತೇನೆ ಎಂದು ಹೇಳಿ ಬಂದಿದ್ದೆ.ಆದರೆ ಅವಧಿಗೆ ಮುಂಚೆಯೇ ಶಾಲೆಯ ಬಾಗಿಲು ಹಾಕಿತ್ತು.ಕರೊನಾ ಕಾರಣದ ಲಾಕ್ ಡೌನ್ ನಿಂದಾಗಿ ನಲವತ್ತು ದಿನಗಳಿಂದ ವಸಂತಳ ಮನೆ ಕಡೆ ಹೋಗಲೇ ಇಲ್ಲ. ನಿನ್ನೆ ಒಮ್ಮೆ ಹೋಗಿ ಮಕ್ಕಳ ನೋಡಿ ಬರೋಣ ಎಂದು ಹೋಗಿದ್ದೆ. ನನ್ನ ಕಂಡ ತಕ್ಷಣವೇ ಮಕ್ಕಳು ನಕ್ಕರು.ವಸಂತ ಮಾತು ಆರಂಭಿಸಿದಳು… . ಎರೆಡು ತಿಂಗಳಾಯ್ತು,ಬೀದಿ ಬದಿ ಅಂಗಡಿ,ಹೋಟೆಲ್ ಬಾಗಿಲು ಹಾಕಿ, ಕೈಲಿ ಒಂದು ರೂಪಾಯಿ ಇಲ್ಲ,ಬಾಡಿಗೆ ಕಟ್ಟಿಲ್ಲ,ಮಕ್ಕಳಿಗೆ ಹಾಲು,ಬ್ರೆಡ್,ಬಿಸ್ಕಿಟ್ ತರಲು ಆಗಿಲ್ಲ.ವಿಕಲಚೇತನ ಮಗನಿಗೆ ಮಾತ್ರೆ ತಂದಿಲ್ಲ.ಅತ್ತ ಅತ್ತೆ ಮನೆಯೂ ಇಲ್ಲ,ಇತ್ತ ತಾಯಿ ಮನೆಯೂ ಇಲ್ಲ. ಗಂಡನಿಗೆ ಕೆಲಸ ಇಲ್ಲ.ಅಕ್ಕಿ ಬೇಳೆ ಬಿಟ್ಟರೆ ಬೇರೇನೂ ಇಲ್ಲ. ನನ್ನ ಗಂಡ ಎಲ್ಲಾ ಕಡೆ ಹೋಗಿ ಕೆಲಸ ಹೋಗಿ ಕೇಳಿದ್ರೂ… ಎಲ್ಲೂ ಕೆಲಸ ಸಿಗಲಿಲ್ಲ. ಮೊನ್ನೆಯಷ್ಟೇ ಹಾಲಿನ ಡೈರಿ ಯ ಲಾರಿಯಲ್ಲಿ ಹಳ್ಳಿ ಹಳ್ಳಿಗೆ ದನಗಳ ಮೇವು ಇಳಿಸಲು ಹೋಗುತ್ತಿದ್ದಾರೆ.ದಿನಕ್ಕೆ ಇನ್ನೂರು ಐವತ್ತು ರೂಪಾಯಿ ಕೊಡ್ತಾ ಇದ್ದಾರೆ. ಬೆನ್ನ ಮೇಲೆ ಮೂಟೆ ಹೊತ್ತು ಬೆನ್ನೆಲ್ಲಾ ಬರೆ ಬಂದಿದೆ ನೋಡಿ ಎಂದು ಕಣ್ಣಲ್ಲಿ ನೀರು ಸುರಿಸುತ್ತಾ ತನ್ನ ಗಂಡನ ಶರ್ಟ್ ಎತ್ತಿ ಬೆನ್ನು ತೋರಿಸಿದಳು.ಮಕ್ಕಳು ಬಡ ವಾಗಿ ಹೋಗಿವೆ ಎಂದು ದುಃಖಿಸಿದಳು. ಇಷ್ಟು ದಿನ ಉಳಿಸಿದ ಹಣ ಎಲ್ಲಿ? ಎಂದೆ. ಚೀಟಿ ಹಾಕಿದ್ದೆವು.ಅವನು ಈಗ ದುಡ್ಡಿಲ್ಲ ಎಂದುಬಿಟ್ಟ ಎಂದಳು.ಬಾಡಿದ ಅವಳ ಮುಖ,ಕತ್ತು ಬಗ್ಗಿಸಿ ಕುಳಿತ ಅವಳ ಗಂಡನ ನೋಡಿ ಮನಸ್ಸು ಭಾರವಾಯಿತು. ಆರಕ್ಕೇರದ,ಮೂರಕ್ಕಿಳಿಯದ ನನ್ನ ಸಂಬಳದಲ್ಲಿ ನಾನಾದರೂ ಏನು ಸಹಾಯ ಮಾಡಲಿ?? ಅವರಿಬ್ಬರ ಮೊಬೈಲ್ ಗೆ ಕರೆನ್ಸಿ ಹಾಕಿಸಿದೆ.ಮಕ್ಕಳಿಗೆ ಬಿಸ್ಕಿಟ್ ತಂದು ಕೊಟ್ಟು ಮನೆ ಕಡೆ ಹೆಜ್ಜೆ ಹಾಕಿದೆ. ರಾತ್ರಿ ನಿದ್ದೆ ಸುಳಿಯಲಿಲ್ಲ. ಕಾಣದ ಜೀವಿಯೊಂದು ಅದೆಷ್ಟು ಜನರ ಜೀವನವನ್ನು ಬಲಿ ತೆಗೆದುಕೊಳ್ಳುವುದರ ಜೊತೆಗೆ ಬದುಕಿದವರನ್ನು ಬರಿದಾಗಿಸಿದೆ… ಅಲ್ಲವೇ… ******

ಪ್ರಸ್ತುತ Read Post »

ಇತರೆ

ಸಿನಿಮಾ ಸಾಹಿತ್ಯ

ಯೋಗರಾಜ್ ಭಟ್ಟರ ಗೀತೆಗಳ ಗಮ್ಮತ್ತು ರಾಘವೇಂದ್ರ ಈ ಹೊರಬೈಲು “ಯಾವ ಹನಿಗಳಿಂದ ಯಾವ ನೆಲವು ಹಸಿರಾಗುವುದೋ ಯಾರ ಸ್ಪರ್ಷದಿಂದ ಯಾರ ಮನವು ಹಸಿಯಾಗುವುದೋ ಯಾರ ಉಸಿರಲ್ಯಾರ ಹೆಸರೋ ಯಾರು ಬರೆದರೋ” ಹತ್ತು ವರ್ಷಗಳ ಹಿಂದೆ, ಹಿರಿಯರು ಕಿರಿಯರೆನ್ನದೆ ಕರುನಾಡಿನ, ಅಷ್ಟೇ ಏಕೆ ಅದರಾಚೆಯ ಎಲ್ಲರೆದೆಯೊಳಗೂ ತಣ್ಣನೆ ಹನಿಹನಿಯಾಗಿ ಸುರಿದು, ಆರ್ದ್ರಗೊಳಿಸಿ, ಮನಸಿನೊಳಗೆ ಚಿರಂತನವಾಗಿ ನಿಂತ “ಮುಂಗಾರು ಮಳೆ” ಎಂಬ ಚಿತ್ರದ ಅಮರ ಗೀತೆಯ ಸಾಲುಗಳಿವು. ‘ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ’ ಎಂದು ಪ್ರಾರಂಭವಾಗುವ ಈ ಹಾಡಿನ ಮೇಲಿನ ಸಾಲುಗಳನ್ನು ಈ ಹತ್ತು ವರ್ಷಗಳಲ್ಲಿ ಅದೆಷ್ಟು ಸಾವಿರ ಬಾರಿ ಕೇಳಿದ್ದೇನೋ, ಅದೆಷ್ಟು ಸಾವಿರ ಬಾರಿ ಗುನುಗಿದ್ದೇನೋ ನನಗೇ ಗೊತ್ತಿಲ್ಲ. ಮುಂಗಾರು ಮಳೆಗಿಂತ ಹಿಂದೆ ಹಾಗೂ ಅದು ಬಂದ ನಂತರ ಕೂಡಾ ಅಮೋಘ ಎನ್ನಬಹುದಾದ ಅದೆಷ್ಟೋ ಹಾಡುಗಳನ್ನು ಕೇಳಿದ್ದರೂ, ಈ ಹಾಡಿನ ಪ್ರತೀ ಸಾಲೂ ಮಾಡಿದ ಮೋಡಿ ಪದಗಳಲ್ಲಿ ವರ್ಣಿಸಲಸಾಧ್ಯ. ಇಂತಹ ಅನನ್ಯ ಗೀತೆಯನ್ನು ನೀಡಿದ ಮಹಾನ್ ಬರಹಗಾರ ಯೋಗರಾಜ್ ಭಟ್ಟರ ಬಗ್ಗೆ ಅದಕ್ಕೂ ಮೊದಲು ಕೆಲವೊಮ್ಮೆ ಮಾತ್ರ ಕೇಳಿದ್ದೆ. ಆದರೆ ಈ ಹಾಡಿನ ನಂತರ ನಾನಷ್ಟೇ ಅಲ್ಲ ಕರ್ನಾಟಕದ ಎಲ್ಲ ಸಂಗೀತ ಪ್ರಿಯರು, ಪ್ರಿಯರಲ್ಲದವರೂ ಪಕ್ಕಾ ಅವರ ಅಭಿಮಾನಿಗಳಾದದ್ದು ಸುಳ್ಳಾಗುವುದಕ್ಕೆ ಸಾಧ್ಯವೇ ಇಲ್ಲ. ಇಂತಹ ಅನೇಕ ಮಾಧುರ್ಯದ ಗೀತೆಗಳಾಚೆ ತಮ್ಮದೇ ವಿಶೇಷ ಶೈಲಿಯ, ಮಾತನ್ನೇ ಹಾಡಾಗಿಸುವ ಅವರ ರೀತಿ ನಿಜವಾಗಿಯೂ ನಿಬ್ಬೆರಗಾಗಿಸುತ್ತದೆ. ಉಡಾಳತನದಲ್ಲಿ ಪ್ರಾರಂಭವಾಗುವ ಹಾಡಿಗೆ ಗಾಂಭೀರ್ಯತೆಯ, ತಾತ್ವಿಕತೆಯ ಅಂತ್ಯ ಹೇಳುವ ಮಹಾನ್ ಮೇಧಾವಿ ಅವರು. ಮೇಲ್ನೋಟಕ್ಕೆ ಹಾಡಿನಲ್ಲಿ ಉಡಾಫೆತನವಿದ್ದರೂ ತಕ್ಷಣವೇ ತನ್ನತ್ತ ಕಿವಿಗೊಡಿಸುವ ಸೆಳೆತವಿರುವುದು ಅವರ ಈ ಹಾಡುಗಳ ಶಕ್ತಿ. “ಅಲ್ಲಾಡ್ಸು ಅಲ್ಲಾಡ್ಸು” ಎಂದು ಪ್ರಾರಂಭಿಸುತ್ತಲೇ ಜೀವನವನ್ನು ಟಾನಿಕ್ಕು ಬಾಟಲನ್ನಾಗಿಸಿ, ಅಂತ್ಯದಲ್ಲಿ “ನಿನ್ನ ಜೀವನಾನ ನೀನೇ ಅಲ್ಲಡಿಸಬೇಕೋ” ಎಂಬಲ್ಲಿಗೆ ತಂದು ನಿಲ್ಲಿಸೋ ಶಕ್ತಿ ಕೇವಲ ಭಟ್ಟರಿಗೆ ಮಾತ್ರ ಸಾಧ್ಯವೇನೋ. “ಗಿಜಿ ಗಿಜಿ ಕಯ ಕಯ ಪಂ ಪಂ ಪಂ” ಎಂದು ವಕ್ರ ವಕ್ರವಾಗಿ ಪ್ರಾರಂಭಿಸುವ ಭಟ್ಟರು, “ಕುಬೇರ ಮೂಲೆ ಮಾತ್ರ ಕಟ್ಸಿ ಟಾಯ್ಲೆಟ್ನಲ್ಲಿ ಹೋಗಿ ಮಲ್ಕೊ” ಎಂದು ನಮ್ಮ ಸಮಾಜದ ಒಂದು ಕುರುಡು ನಂಬಿಕೆ ಮತ್ತು ವ್ಯವಸ್ಥೆಯ ಮೇಲೆ ತಣ್ಣನೆ ಚಾಟಿ ಬೀಸ್ತಾರೆ. “ಯಕ್ಕ ರಾಜ ರಾಣಿ ನಿನ್ನ ಕೈಯೊಳಗೆ. … ಕಾಕಾ ಕಾಕಾ ಕಾಕಾ ಕಾಕಾ ಅಂದರ್ ಬಾಹರ್” ಎನ್ನುತ್ತಲೇ ” ದೇವ್ರವ್ನೇ ಮನೆ ಮಾರಿಬಿಡಿ” ಎಂದು ಕುಟುಕಿ ಅಂದರ್ ಬಾಹರ್ನಿಂದ ಮನೆ ಮಾನ ಕಳ್ಕೊಂಡವರಿಗೆ ಮರ್ಯಾದೆಯಿಂದ ಬುದ್ಧಿ ಹೇಳ್ತಾರೆ. “ಕತ್ಲಲ್ಲಿ ಕರಡೀಗೆ ಜಾಮೂನು ತನಿಸೋಕೆ ಯಾವತ್ತೂ ಹೋಗ್ಬಾರ್ದು ರೀ” ಎಂದು ಕತ್ತಲು ಕರಡಿ ಹೀಗೆ ಏನೇನೋ ಹೇಳುತ್ತಲೇ “ಮಾಡರ್ನು ಪ್ರೇಮಕ್ಕೆ ಮೈಲೇಜು ಕಮ್ಮಿ” ಎಂದು ಇಂದಿನ ‘ಪಾಕೆಟ್ ಖಾಲಿಯಾಗೋವರೆಗಿನ, ತೆವಲು ತೀರಿಸಿಕೊಳ್ಳುವಂತ ಪ್ರೀತಿಗೆ’ ಪಾಠ ಹೇಳ್ತಾರೆ. “ಹತ್ರುಪಾಯ್ಗೊಂದ್ ಹತ್ರುಪಾಯ್ಗೊಂದ್” ಎನ್ನುತ್ತಲೇ ಇಂದಿನ ಸಂಬಂಧಗಳೇ ಮಾರಾಟಕ್ಕಿಟ್ಟಿರುವ ಸರಕಾಗಿರುವುದರ ಬಗ್ಗೆ‌ ನಾಜೂಕಾಗಿಯೇ ಚುರುಕು ಮುಟ್ಟಿಸುತ್ತಾರೆ. ಇವು ಕೆಲವೇ ಉದಾಹರಣೆಗಳಷ್ಟೇ. ಪ್ರಾರಂಭದಲ್ಲಿ ವಕ್ರ ವಕ್ರವೆನ್ನುವಂತೆ ಭಾಸವಾಗುವ ಹಾಡುಗಳಿಗೆ ಗಂಭೀರ ಸಂದೇಶ ತುಂಬಿ ತಾತ್ವಿಕ ನೆಲೆಗಟ್ಟಿನಲ್ಲಿ ನಿಲ್ಲಿಸಿ, ಎಲ್ಲರೂ ಒಮ್ಮೆ ಯೋಚಿಸುವಂತೆ, ಮತ್ತೆ ಮತ್ತೆ ಕೇಳುವಂತೆ ಮಾಡುವ, ಹರಿತವಾದ ಭಾಷೆಯನ್ನು ತನ್ನದೇ ಧಾಟಿಯಲ್ಲಿ ದಾಟಿಸುವ ತಾಕತ್ತು, ಸಮಾಜದ ಗಾಯವನ್ನು ಬೇರೆಯದೇ ರೀತಿಯಲ್ಲಿ ತೋರಿಸುತ್ತಾ, ಅದಕ್ಕೆ ಮುಲಾಮನ್ನೂ ತಮ್ಮ ಸಾಹಿತ್ಯದ ಮೂಲಕವೇ ನೀಡುವ ಕಲೆ ಭಟ್ಟರಿಗಿರುವುದು ಅವರ ದೊಡ್ಡ ಶಕ್ತಿ. “ಅದೇನು ಸಾಹಿತ್ಯನಪ್ಪ, ‘ಕಾಲಿ ಕ್ವಾಟ್ರು, ಅಲ್ಲಾಡ್ಸು, ಕಾ ಕಾ ಕಾ’ ಅಂತ ಅಸಭ್ಯ” ಅಂತ ಭಟ್ಟರ ಸಾಹಿತ್ಯವನ್ನು ಛೇಡಿಸುವವರೂ ಇರಬಹುದು. ಛೇಡಿಸುವವರ ಬಾಯ್ಮುಚ್ಚಿಸುವ ಸಾಹಿತ್ಯ ಭಟ್ಟರ ಬಾಂಡಲಿಯಿಂದ ಗರಿಗರಿಯಾಗಿ ಹೊರಬರುತ್ತಿವೆ. ಭಟ್ಟರನ್ನು ಮೀರಿಸುವ ಇನ್ನೂ ಅತ್ಯದ್ಭುತ ಸಾಹಿತಿಗಳಿರಬಹುದು. ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಅಜರಾಮರವಾಗುವಂತ ತುಂಬಾ ದೊಡ್ಡ ಹೆಸರುಗಳಿವೆ. ಆದರೆ ಭಟ್ಟರು ಅವರಿಗಿಂತ ಕಡಿಮೆಯೇನೂ ಇಲ್ಲ ಎಂಬುದೂ ಇಲ್ಲಿಯ ಕಳಕಳಿ. ಅವರ ಮುಗುಳುನಗೆ ಹಾಡಿನ ಕುರಿತು ಒಮ್ಮೆ ಸ್ನೇಹಿತ, ಸಾಹಿತಿ ಸದಾಶಿವ ಸೊರಟೂರು ಬರೆದ ಮುದ್ದಾದ ಲೇಖನಕ್ಕೆ ಅಷ್ಟೇ ಮುದ್ದಾಗಿ, ಪ್ರಾಮಾಣಿಕವಾಗಿ “ನಾನಿನ್ನು ಕೂತ್ಕೊಂಡು ನೆಟ್ಟಗೆ ಬರೀತೀನಿ” ಎಂದುತ್ತರಿಸಿದ ಭಟ್ಟರ ರೀತಿ ಇಂದಿನ ಅದೆಷ್ಟೋ ‘ಸ್ವಯಂ ಹೊಗಳು ಕವಿಗಳಿಗೆ’ ಬೆತ್ತವಿಲ್ಲದ ಪಾಠ. ನಾನೊಬ್ಬ ದೊಡ್ಡ ಬರಹಗಾರನೆಂಬ ಹಮ್ಮಿಲ್ಲದ ಭಟ್ಟರ ಸ್ವಭಾವವೋ ಅಥವಾ ಸದಾಶಿವರವರ ಬರಹದ ಮೋಡಿಯೋ ಅಥವಾ ಎರಡೂನೋ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ. ಅವರೇ ಹೇಳುವಂತೆ ನೆಟ್ಟಗೆ ಕೂತ್ಕೊಂಡು ಬರೆಯದೆಯೇ ಅದ್ಭುತ ಸಾಹಿತ್ಯ ನೀಡುತ್ತಿರುವ ಭಟ್ಟರು, ಸರಿಯಾಗಿ ಬರೆಯಲು ಪ್ರಾರಂಭಿಸಿದರಾದರೆ ಅದೆಂತಹ ಅತ್ಯದ್ಭುತ ಬರಹ ಹೊರಬರಬಹುದು, ಅದೆಂತಹ ದೊಡ್ಡ ಸಾಹಿತಿಯ ಉಗಮವಾಗಬಹುದು ಅಲ್ವಾ? ಅಂತಹ ಅತ್ಯದ್ಭುತ ಬರಹ ಭಟ್ಟರಿಂದ ಸಾವಿರಾರು ಬರಲಿ, ಅದರಿಂದ ನನ್ನಂತಹ ಕೋಟ್ಯಂತರ ಸಾಹಿತ್ಯಾಭಿಮಾನಿಗಳಿಗೆ ಸ್ಪೂರ್ತಿಯ ಚಿಲುಮೆಯಾಗಲಿ ಎಂಬ ಚಿಕ್ಕ ಬಯಕೆ. ************

ಸಿನಿಮಾ ಸಾಹಿತ್ಯ Read Post »

ಇತರೆ

ಲಹರಿ

ಹೆತ್ತಮ್ಮನಲ್ಲದ ಅಮ್ಮ ಸಂಧ್ಯಾ ಶೆಣೈ [5:25 pm, 10/05/2020] SANDHYA. SHENOY: ನಮ್ಮ ಮಟ್ಟಿಗೆ ಪ್ರತಿಯೊಂದು ದಿನವೂ ತಾಯಂದಿರ ದಿನವೇ. ಆದರೂ ಕೆಲವೊಂದು ದಿನಗಳ ಹೆಸರನ್ನು ಕೇಳುವಾಗ ಮೈ ಪುಳಕಗೊಂಡು ನಮಗೆ ತಾಯಿಯಂತಹ ಪ್ರೀತಿಯನ್ನು ಕೊಟ್ಟವರ ನೆನಪೆಲ್ಲವೂ ಆಗುತ್ತದೆ .ಹಾಗಾಗಿ ಈ ದಿನವನ್ನು ನಾನು ಹೆತ್ತಮ್ಮ ನಲ್ಲದಿದ್ದರೂ ಅಮ್ಮನಂತೆ ಪ್ರೀತಿಸುವ ನಮ್ಮೆಲ್ಲ ಅಮ್ಮಂದಿರ ದಿನ ಎಂದೇ ಕರೆಯಲು ಬಯಸುತ್ತೇನೆ. ಹಾಗೂ ಇವತ್ತಿನ ಈ ನನ್ನ ಲೇಖನವನ್ನು ನಮ್ಮ ಪ್ರೀತಿಯ ಸೋದರತ್ತೆಯ ತಾರಮಕ್ಕಳಿಗೆ ಅರ್ಪಿಸುತ್ತೇನೆ. ಈಗ ಅವಳು ಹೇಳಬಹುದು “ಆ ಹುಚ್ಚಿ ನನ್ನ ಬಗ್ಗೆ ಏನು ಬರೀತಾಳಾ..” ಎಂದು . ನಾವು ಚಿಕ್ಕವರಿರುವಾಗ ನಮಗೆ ರಜೆ ಬಂದ ಕೂಡಲೇ ನಾವು ಪೆಠಾರಿ ಕಟ್ಟುವುದು ಒಂದೇ ತೀರ್ಥಹಳ್ಳಿಯ ಚಿಕ್ಕಪ್ಪನ ಮನೆಗೆ ..ಇಲ್ಲವೇ ಉಡುಪಿಯ ನಮ್ಮ ಸೋದರತ್ತೆ ತಾರಮಕ್ಕನ ಮನೆಗೆ .ಎರಡೂ ಕಡೆ ನಮ್ಮ ಸಮವಯಸ್ಕರು ಇದ್ದರು ಮಾತ್ರವಲ್ಲ ನಮ್ಮನ್ನು ತಮ್ಮ ಮಕ್ಕಳಂತೆ ಪ್ರೀತಿಸುವ ಅಮ್ಮಂದಿರು ಇದ್ದರು .ಚಿಕ್ಕಮ್ಮನ ವಿಷಯ ಇನ್ನೊಮ್ಮೆ ಬರೆಯುತ್ತೇನೆ . ನಾನು ಬಹಳ ಚಿಕ್ಕವಳಿರುವಾಗ ಅಮ್ಮನೊಡನೆ ಉಡುಪಿಗೆ ಹೋಗುತ್ತಿದ್ದೆ. ಆಗ ಬ್ರೆಡ್ ಗೆ ಮನೆಯಲ್ಲಿ ಕಡೆದ ಬೆಣ್ಣೆಯನ್ನು ದಪ್ಪಗೆ ಹಚ್ಚಿ ಅದರ ಮೇಲೆ ಸಕ್ಕರೆ ಹಾಕಿ ತಿಂದಿದ್ದು ಅದೇ ಅಲ್ಲಿಯೇ ಮೊದಲು .ನನಗಂತೂ ಆ ದಿನದ ಆ ಬ್ರೆಡ್ ಮತ್ತು ಬೆಣ್ಣೆ ಸಕ್ಕರೆಯ ರುಚಿ ಇಂದಿಗೂ ನಾಲಿಗೆ ತುದಿಯಲ್ಲಿಯೇ ಇದೆ. ಅಷ್ಟೊಂದು ರುಚಿಕರವಾಗಿ ಇದ್ದಂತಹ ಆ ಬ್ರೆಡ್ ಮತ್ತು ಬೆಣ್ಣೆಯ ಖುಷಿಯನ್ನು ತೋರಿಸಿದವರು ನಮಗೆ ತಾರಮಕ್ಕ. ಆ ಮನೆಯ ಕಾಂಪೌಂಡಿನಲ್ಲಿರುವ ಮಂದಾರ.. ಕರವೀರ.. ಕರಿಬೇವಿನ ಮರ ಇವುಗಳ ನಡುವೆ ಆಡಿದ್ದು ನನಗಿನ್ನೂ ನೆನಪಿದೆ .ಅಕ್ಕಪಕ್ಕದ ಮನೆಯವರೂ ನೆನಪಿದ್ದಾರೆ. ಹಾಗೆ ಸ್ವಲ್ಪ ಸಮಯದಲ್ಲಿ ಅವರು ವಳಕಾಡಿನ ಮನೆಗೆ ಶಿಫ್ಟ್ ಮಾಡಿದರು. ಮನೆ ತುಂಬಾ ದೊಡ್ಡದಿತ್ತು. ಆದರೆ ಬೇಸಿಗೆಯಲ್ಲಿ ನೀರಿಗೆ ಬಹಳ ಅಭಾವವಿತ್ತು. ನಮಗೆ ಮಕ್ಕಳಿಗೆ ಎಲ್ಲಿ ತಿಳಿಯುತ್ತದೆ ಅವರ ಕಷ್ಟ .ರಜೆ ಅಂದ ಕೂಡಲೇ ಅವರ ಮನೆಗೆ ಹೊರಡುತ್ತಿದ್ದೆ. ಉಡುಪಿಗೆ ಬಸ್ಸಿನಲ್ಲಿ ಬರುವಾಗ ಮಣಿಪಾಲದಲ್ಲಿ ಬಸ್ಸು ನಿಂತಿದ್ದಾಗ ಅಲ್ಲೇ ಇರುವ ಸಿನಿಮಾ ಬೋರ್ಡನ್ನು ನೋಡುತ್ತಿದ್ದೆ .ಯಾಕೆಂದರೆ ನನಗೆ ನೂರಕ್ಕೆ ನೂರು ಪರ್ಸೆಂಟ್ ಗೊತ್ತಿತ್ತು ತಾರಮಕ್ಕ ನನಗೆ ಒಂದಾದರೂ ಸಿನಿಮಾ ನೋಡಲು ಕಳಿಸಿಯೇ ಕಳಿಸುತ್ತಾರೆ ಎಂದು. ಹಾಗಾಗಿ ಈಗ ಯಾವ ಸಿನಿಮಾ ನಡೀತಾ ಇದೆ .ನಾನು ಯಾವುದು ನೋಡಬಹುದು ಎಂದು ಮಣಿಪಾಲದಿಂದ ಉಡುಪಿಯ ತನಕ ಲೆಕ್ಕಾಚಾರ ಹಾಕುತ್ತಲೇ ಬರುತ್ತಿದ್ದೆ. ಬಂದವಳು ಸಣ್ಣ ಹುಡುಗಿಯಾದರೂ ಯಾರೋ ವಿಐಪಿ ಬಂದಂತೆ ಪ್ರೀತಿಯಿಂದಲೇ ಸ್ವಾಗತಿಸುತ್ತಿದ್ದಳು. ಸರಿ ಮರುದಿನದಿಂದಲೇ ನಾನು ಮನೋಹರ ನಿತಿನ ಸೇರಿ ಅಜರ್ಕಾಡಿಗೆ ಹೋಗುವುದೇನು.. ದೇವಸ್ಥಾನದ ಕೆರೆಯಲ್ಲಿ ಮಕ್ಕಳು ಈಜುವುದನ್ನು ನೋಡಲು ಹೋಗುವುದೇನು.. ದೊಡ್ಡಮ್ಮನ ಮನೆಗೆ ಹೋಗುವುದೇನು ..ಆ ಬೇಸಿಗೆರಜೆ ಸಮಯದಲ್ಲಿ ಹೆಚ್ಚಾಗಿ ಸರ್ಕಸ್ ಕೂಡ ಇರುತ್ತಿತ್ತು. ಆ ಸರ್ಕಸ್ ನೋಡಲು ನಮ್ಮ ಕೇಶವಮಾಮ ನೊಟ್ಟಿಗೆ ಹೋಗುವುದೇನು ..ಒಟ್ಟಾರೆ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ .ನಾನು ಮೊದಲೇ ಹೇಳಿದಂತೆ ಯಾವುದಾದರೂ ಒಂದು ಕೆಲವೊಮ್ಮೆ ಎರಡೂ ಸಿನಿಮಾ ನಮಗೆ ನೋಡಲು ಖಂಡಿತವಾಗಿಯೂ ಸಾಧ್ಯವಾಗುತ್ತಿತ್ತು. ಸಿನಿಮಾ ನೋಡಿದ ಮೇಲೆ ಅಲ್ಲೇ ಪಕ್ಕದಲ್ಲಿರುವ ಡಯಾನ ಹೊಟೇಲಿನಲ್ಲಿ ನಮಗೆ ಐಸ್ಕ್ರೀಂ ತಿನ್ನಿಸುವ ಪರಿಪಾಠವಿತ್ತು. ಮನೋಹರ ಮತ್ತೆ ನಿತಿನ ಅದ್ಯಾಕೋ ಫ್ರೂಟ್ ಸಲಾಡ್ ತಿನ್ನುತ್ತಿದ್ದರು. ನನಗೆ ಫ್ರೂಟ್ ಸಲಾಡ್ ತಗೊಂಡರೆ ಐಸ್ ಕ್ರೀಂ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಬರಬಹುದು ಎಂದು ಐಸ್ಕ್ರೀಮೇ ಬೇಕೆಂದು ಹೇಳುತ್ತಿದ್ದೆ .ಆ ಗಾಜಿನ ಬೌಲ್ನಲ್ಲಿ ಇದ್ದಂತಹ ಐಸ್ಕ್ರೀಂ ಮತ್ತು ಅದಕ್ಕಾಗಿಯೇ ಇರುವ ಚಮಚದಿಂದ ಚೂರು ಚೂರೇ ತೆಗೆದು ಬಾಯಿಯಲ್ಲಿ ಹಾಕಿ ತಿನ್ನುತ್ತಾ ಅನುಭವಿಸುವ ಸ್ವರ್ಗ ಸುಖ ಬಹುಶಃ ಈಗ ಯಾವ ಐಸ್ಕ್ರೀಂ ತಿಂದರೂ ಸಿಗಲಿಕ್ಕಿಲ್ಲ . ನಾನಾಗಲೇ ಹೇಳಿದಂತೆ ಮನೆಯ ಪಕ್ಕದ ಬಾವಿಯಲ್ಲಿ ನೀರು ಖಾಲಿಯಾಗಿ ಸ್ವಲ್ಪ ದೂರದ ಬಾವಿಯಿಂದಲೇ ನೀರು ತರಬೇಕಿತ್ತು ಆದರೆ ಈ ನಮ್ಮ ತಾರಮಕ್ಕ ಒಂದೇ ಒಂದು ದಿನವೂ ನಮ್ಮ ಬಳಿ ತಮ್ಮ ನೀರಿನ ಕಷ್ಟವಾಗಲಿ ಅಥವಾ ನಾವು ಬಂದು ಅವರಿಗೆ ಕಷ್ಟವಾಗಿದೆ ಎಂದಾಗಲಿ ಹೇಳಿದ್ದು ಇಲ್ಲವೇ ಇಲ್ಲ..ಈಗಲೂ ಉಡುಪಿಯಲ್ಲಿ ಮೇ ತಿಂಗಳಲ್ಲಿ ಬಹಳ ನೀರಿನ ಅಭಾವವಿರುತ್ತದೆ ಹಾಗಾಗಿ ನನ್ನ ಪರಿಚಿತರು ಯಾರಾದರೂ ಉಡುಪಿಗೆ ಬರುವುದಿದ್ದರೆ ನಾನು ಮೊದಲೇ ಹೇಳುತ್ತೇನೆ “ನೀವು ಉಡುಪಿಗೆ ಬರುವ ಪ್ಲಾನನ್ನು ಏಪ್ರಿಲ್ ಮೇ ತಿಂಗಳಲ್ಲಿ ಹಾಕಲೇಬೇಡಿ. ಯಾಕೆಂದರೆ ಇಲ್ಲಿ ಒಂದು ತುಂಬಾ ಸೆಕೆ ..ಎರಡನೆಯದು ನೀರಿನ ಅಭಾವ.. ಹಾಗಾಗಿ ಏನು ಬರುವುದಿದ್ದರೂ ಆಗಸ್ಟ್ ನಂತರ ಫೆಬ್ರವರಿ ತಿಂಗಳೊಳಗೆ ಬಂದುಬಿಡಿ” ಎಂದೇ ಹೇಳುತ್ತೇನೆ. ಯಾರಿಗೋ ಯಾಕೆ ನನ್ನ ಸ್ವಂತ ಮಗಳಿಗೆ ಕೂಡ “ನೀನು ಬರುವುದಾದರೆ ಏಪ್ರಿಲ್ ನಲ್ಲೇ ಬಾ ಮಾರಾಯತಿ.. ಮೇ ತಿಂಗಳಲ್ಲಿ ಬೇಡ ..ಮೇ ತಿಂಗಳಲ್ಲಿ ನೀನು ನಿನ್ನ ಗಂಡನ ಮನೆಯಲ್ಲೇ ಇರು” ಎನ್ನುತ್ತೇನೆ. ಆಗೆಲ್ಲ ಒಂದೆ ಫ್ಯಾನ್ ಇದ್ದುದರಿಂದ ಎಲ್ಲರೂ ಒತ್ತೊತ್ತಾಗಿ ಅದೇ ಫ್ಯಾನ್ ನಡಿಯಲ್ಲಿ ಮಲಗುತ್ತಿದ್ದದ್ದು ನೆನಪಾದರೆ ಬಹಳ ಖುಷಿ ಅನ್ನಿಸ್ತಾ ಇದೆ .ಹಾಗೆ ಮನೆಯಲ್ಲಿ ಗ್ಯಾಸ್ ಇಲ್ಲದಿದ್ದರೂ ಈಗಿನಂತೆ ಮಿಕ್ಸಿ ಗ್ರ್ಯಾಂಡರ್ ಏನೂ ಇಲ್ಲದಿದ್ದರೂ ಕಟ್ಟಿಗೆ ಒಲೆ ..ಹಾಗೆ ಮರದ ಹುಡಿಯನ್ನು ಪ್ರತಿದಿನವೂ ತುಂಬಿಸಿ ತುಂಬಿಸಿ ಅವರೇ ಮಾಡುತ್ತಿದ್ದಂತಹ ಒಂದು ಡಬ್ಬಿ ಅಂತಹ ಒಲೆ ಯಲ್ಲಿಯೇ ಬಹಳ ರುಚಿಯಾದ ಅಡುಗೆಯನ್ನು ಮಾಡಿ ಬಹಳ ಪ್ರೀತಿಯಿಂದ ಬಡಿಸುತ್ತಿದ್ದರು . ಅಡುಗೆ ಮನೆಯನ್ನು ಕನ್ನಡಿಯಂತೆ ಶುಭ್ರಗೊಳಿಸಿ ತಾವು ಕೂಡ ಅತ್ಯಂತ ಶುಭ್ರವಾಗಿ ಯಾವಾಗಲೂ ಸ್ವಚ್ಛವಾದ ಕಾಟನ್ ಸೀರೆಯನ್ನು ಉಟ್ಟು ಶಿಸ್ತಿನಿಂದ ಇರುತ್ತಿದ್ದ ತಾರಮಕ್ಕಳನ್ನು ನೆನೆಸಿದರೆ.. ಈಗ ಮನೆಯಲ್ಲಿ ಎಲ್ಲಾ ಸೌಕರ್ಯವಿದ್ದರೂ ಕೊಳಕು ಕೊಳಕಾಗಿ ಇರುವ ಹೆಂಗಸರನ್ನು ನೋಡಿದರೆ ತಲೆ ಬಿಸಿಯಾಗುತ್ತದೆ .. ನಾನು ಮುಂಬೈ ಶಹರವನ್ನು ಬಿಟ್ಟು ಉಡುಪಿಯಲ್ಲಿ ನನ್ನ ಗಂಡನ ಮನೆಗೆ ಬಂದು ಇದ್ದಾಗ ನನ್ನ ಯಜಮಾನರು ಸೌದಿ ಅರೇಬಿಯಾದಲ್ಲಿದ್ದು ಆಗ ಚಿಕ್ಕ ಮಗುವನ್ನು ಕರೆದುಕೊಂಡು ನಾನು ಆಗಾಗ ತಾರಮಕ್ಕಳ ಮನೆಗೆ ಒಳಕಾಡಿಗೆ ಹೋಗುತ್ತಿದ್ದೆ.. ಒಂದು ದಿನ ನಾನು ಹೋಗುವಾಗ ಗುರುವಾರ .ನಾನು ಹೋದವಳು ಹೇಳಿದೆ “ತಾರಮಕ್ಕ ..ಗುರುವಾರ ನಾನು ರಾತ್ರಿ ಊಟ ಮಾಡುವುದಿಲ್ಲ ಹಾಗಾಗಿ ಒಂದಿಷ್ಟು ಅವಲಕ್ಕಿ ಮಾಡಿ ಕೊಡ್ತೀರಾ” ಎಂದೆ.. “ಆಯ್ತಾಯ್ತು “ಎಂದು ಹೇಳಿದರು ಆಮೇಲೆ ರಾತ್ರಿ ಊಟಕ್ಕೆ ಕೂತಾಗ ನನಗೆ ಬಿಸ್ಕೂಟ್೦ಬಡೇ ಕೊಡ್ತಾ ಇದ್ದಾರೆ .ನಾನು ಹೇಳಿದೆ . “ತಾರಮಕ್ಕ ನಿನ್ನದೊಂದು ಯಾಕೆ ಬಿಸ್ಕಿಟ್೦ಬಡೇ ಮಾಡಿದ್ದು” ಎಂದಾಗ “ಇರಲಿಯಾ ..ನಾವೂ ತಿನ್ನದೇ ಬಹಳ ದಿನವಾಯಿತು “ಎಂದು ಹೇಳಿ ನಾಳೆಗೆಂದು ಮಾಡಿ ಇಟ್ಟ ಉದ್ದಿನ ಹಿಟ್ಟಿನಲ್ಲಿಯೇ ಸ್ವಲ್ಪ ಹಿಟ್ಟು ತೆಗೆದು ಬಿಸ್ಕೂಟ್೦ಬಡೆ ಮಾಡಿಕೊಟ್ಟಿದ್ದನ್ನು ನಾನು ಯಾವತ್ತೂ ಮರೆಯುವುದಿಲ್ಲ. ಅಷ್ಟು ಪ್ರೀತಿ ಅವರಿಗೆ . ನನ್ನನ್ನು ಐದಾರು ತಿಂಗಳ ಮಗುವಿನೊಂದಿಗೆ ಒತ್ತಾಯಪೂರ್ವಕ ಅವರ ಮನೆಯಲ್ಲಿ ಆ ರಾತ್ರಿ ಉಳಿಸಿಕೊಂಡು ಮರುದಿನ ಹೊಸ ಸಾಬೂನು ತೆಗೆದು ಆ ಮಗುವಿಗೆ ಸ್ನಾನ ಮಾಡಿಸಿ ಅದಕ್ಕೆ ಕಿಟಿಕಿಯ ಹತ್ತಿರವೇ ಹಾಸಿಗೆಯನ್ನು ಹಾಕಿ ..ತಮ್ಮ ಮೆದು ಮೆದುವಾದ ಸೀರೆಯನ್ನು ಹಾಸಿಗೆ ಮೇಲೆ ಹರಡಿ ..ಮಲಗಿಸಿದ್ದು ನನಗಿನ್ನೂ ಕಣ್ಣೆದುರು ಕಾಣಿಸ್ತಾ ಇದೆ .ತಮ್ಮ ಹಳೆಯ ವಾಯಿಲ್ ಸೀರೆಗಳನ್ನೇ ಅವರು ಹಾಸಿಗೆಗೆ ಬೆಡ್ಶೀಟ್ಟನಂತೆ ಹಾಕುತ್ತಿದ್ದರಿಂದ ಆ ಮೃದುವಾದ ಸೀರೆಯ ಮೇಲೆ ಮಲಗುವ ಸುಖ ಇವತ್ತು ಯಾವುದೇ ಬಾಂಬೆ ಡೈಯಿಂಗ್ ಬೆಡ್ಶೀಟಿನಲ್ಲಿ ಸಿಗಲಿಕ್ಕಿಲ್ಲ .ಇವತ್ತು ನಾನು ಹೊದ್ದುಕೊಳ್ಳುವುದೂ ಅವರದೇ ಎರಡು ಮೂರು ಸೀರೆಗಳನ್ನು ಸೇರಿಸಿ ಮಾಡಿದ ಒಂದು ಗೊದ್ದೋಡಿಯನ್ನು. ದೊಡ್ಡಮ್ಮನ ಮನೆಯಲ್ಲಿ ಯಾವುದೇ ಶ್ರಾದ್ಧ ..ಏನಾದರೂ ವಿಶೇಷ ಆದರೆ ಮುಂಚಿನ ದಿನ ಹೋಗಿ ಕಡೆಯುವ ಕಲ್ಲಿನಲ್ಲಿ ಏನೆಲ್ಲಾ ರುಬ್ಬಬೇಕು ಅದನ್ನೆಲ್ಲ ರುಬ್ಬಿಟ್ಟು. ನಾನು ಕೆಲವೊಮ್ಮೆ ಸಂಜೆ ದೊಡ್ಡಮ್ಮನ ಮನೆಗೆ ಹೋದಾಗ ಈ ತಾರಮಕ್ಕ ಎಂದಿನಂತೆ ತಮ್ಮ ಕಾಟನ್ ಸೀರೆಯನ್ನು ನೀಟಾಗಿ ಉಟ್ಟು ನಗುತ್ತಾ ಕುಳಿತಿರುವುದು ನನ್ನ ಕಣ್ಣಿಗೆ ಕಟ್ಟಿದಂತಿದೆ. ಎಷ್ಟೇ ಕೆಲಸವಿರಲಿ ತಮ್ಮ ಆ ಕಾಟನ್ ಸೀರೆಗಳಿಗೆ ಹದವಾಗಿ ಗಂಜಿ ಹಾಕಿ …ಕೈಯಿಂದ ತಿಕ್ಕಿ ತಿಕ್ಕಿ ನೀಟಾಗಿ ಮಡಚಿ ಅದನ್ನು ಹಾಸಿಗೆಯ ಅಡಿಯಲ್ಲಿಟ್ಟು ಇಸ್ತ್ರಿಪೆಟಿಗೆ ಇಲ್ಲದಿದ್ದರೂ ಈ ಇಸ್ತ್ರೀಯನ್ನು ಮಾಡಿ ಅದನ್ನು ಉಟ್ಟುಕೊಂಡು ಬರುತ್ತಿದ್ದರೆ ಎಂಥವರಿಗಾದರೂ ಗೌರವ ಉಕ್ಕಿ ಬರಬೇಕು. ಹಾಗಾಗಿ ನನ್ನ ಅಣ್ಣ ಅವರನ್ನು ಕಾಟನ್ ಕುಂತಿ ಎಂದೇ ಕರೆಯುತ್ತಾರೆ. ಯಾಕೆಂದರೆ ಯಾವಾಗಲೂ ಕಾಟನ್ ಸೀರೆಯನ್ನು ಉಡುವ ಇವರಿಗೂ ಕುಂತಿಯಂತೆ ಐವರು ಗಂಡು ಮಕ್ಕಳು. ನನ್ನ ದೊಡ್ಡ ಅಕ್ಕನ ಹೆರಿಗೆ ಸಮಯದಲ್ಲಿ ಅಜ್ಜಿ ಏನನ್ನೋ ತರಲು ಮಾಳಿಗೆಗೆ ಹತ್ತಿದವರು ಇಳಿಯುವಾಗ ಬಿದ್ದು ಕಾಲು ಮುರಿದು ಮಣಿಪಾಲ ಆಸ್ಪತ್ರೆಯಲ್ಲಿ ತಿಂಗಳಾನುಗಟ್ಟಲೆ ಇದ್ದರು .ಆ ಸಮಯದಲ್ಲಿ ಮಧ್ಯಾಹ್ನದ ಊಟ ..ಹಾಗೂ ರಾತ್ರಿ ಊಟ ಸೋಮೇಶ್ವರದಿಂದ ಬಸ್ಸಿನಲ್ಲಿ ಬರುತ್ತಿತ್ತು .ಆದರೆ ಬೆಳಗ್ಗಿನ ಉಪಾಹಾರ ಕೇಶವ್ ಮಾಮ ಮಣಿಪಾಲಕ್ಕೆ ಆಫೀಸಿಗೆ ಬರುವಾಗ ತಂದು ಆಸ್ಪತ್ರೆಗೆ ಕೊಟ್ಟು ಹೋಗುತ್ತಿದ್ದರು .ಹಾಗೇ ಸಂಜೆ ತಿಂಡಿಯನ್ನು ತಾರಮಕ್ಕ ತಮ್ಮ ಮನೆಯಿಂದಲೇ ತರುತ್ತಿದ್ದರು. ತಮ್ಮ ಮನೆ ಕೆಲಸಗಳನ್ನೆಲ್ಲ ಬೇಗನೆ ಮುಗಿಸಿ ನಾಳೆ ಬೆಳಗ್ಗಿನ ತಿಂಡಿಯ ತಯಾರಿಯನ್ನು ಮಾಡಿಟ್ಟು ರಾತ್ರಿಯ ತಯಾರಿಯನ್ನೂ ಮುಗಿಸಿ.. ಮಧ್ಯಾಹ್ನ ಊಟವಾದ ಮೇಲೆ ಬಿಸಿಲಿನಲ್ಲಿ ಸಾಧಾರಣ ತಮ್ಮ ಮನೆಯಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಸಿಟಿ ಬಸ್ ಸ್ಟ್ಯಾಂಡಿನ ವರೆಗೆ ನಡೆದುಕೊಂಡು ಬಂದು .ಅಲ್ಲಿ ಈಗಿನಂತೆ ಗಳಿಗೆಗೊಂದು ಬಸ್ಸಿನಂತೆ ಇರದೆ ವಿರಳವಾಗಿರುತ್ತಿದ್ದ ಬಸ್ಸಿಗೆ ಕಾದು ..ಮಣಿಪಾಲಕ್ಕೆ ಬಂದು.. ಅಲ್ಲಿಂದ ಬಾಳಿಗಾ ವಾರ್ಡಿನ ತನಕ ನಡೆದುಕೊಂಡು ಬಂದು ನಮಗೆ ತಿಂಡಿಯನ್ನು ಕೊಟ್ಟು.. ವಾಪಸು ಪುನಃ ಬಸ್ಸಿನಲ್ಲಿ ಸಿಟಿ ಬಸ್ ಸ್ಟ್ಯಾಂಡಿಗೆ ಹೋಗಿ ಮನೆ ತನಕ ನಡೆದುಕೊಂಡು ಹೋಗಿ ಪುನಃ ತಮ್ಮ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ಇದು ಒಂದು ದಿನವಲ್ಲ ಪೂರ್ತಿ ಅಜ್ಜಿ ಇರುವಷ್ಟು ದಿನ.ಆಗೆಲ್ಲಾ ಯಾಕೋ ಹೊರಗಿನಿಂದ ತಿಂಡಿ ತಂದು ತಿನ್ನುವ ಕ್ರಮವೇ ಇರಲಿಲ್ಲ ಹಾಗಾಗಿ ಈ ಒಂದು ಕೆಲಸವನ್ನು ಅವರು ಚಾಚೂ ತಪ್ಪದೆ ಮಾಡುತ್ತಿದ್ದರು. ಇಷ್ಟು ಮಾತ್ರವೇ ಮಿಷನ್ ಹಾಸ್ಪಿಟಲ್ ನಲ್ಲಿ ಯಾರಾದರೂ ಎಡ್ಮಿಟ್ ಆದರು ಅವರ ಮನೆಯಿಂದಲೇ ಊಟ ತಿಂಡಿ ಸರಬರಾಜು .. ಹಾಗೆ ಅವರ ಮಕ್ಕಳೆಲ್ಲರೂ ಮುಂಬಯಿಗೆ ಹೋದ ಮೇಲೆ ಕೇಶವಮಾಮನಿಗೆ ಆರೋಗ್ಯ ತಪ್ಪಿದಾಗ ಅನಿವಾರ್ಯವಾಗಿ ಅವರಿಗೆ ಉಡುಪಿಯ ಮನೆಯನ್ನು ಬಿಟ್ಟು ಮಕ್ಕಳಿರುವ ಕಡೆ ಮುಂಬಯಿಗೆ ಹೋಗಲೇಬೇಕಾಯಿತು. ತಮ್ಮಉಡುಪಿಯ ಮನೆಯ ಅಕ್ಕಪಕ್ಕದಲ್ಲಿರುವ ಮನೆಯವರನ್ನು ಪ್ರೀತಿಸುತ್ತಾ.. ಅವರ ಪ್ರೀತಿಯನ್ನು ಪಡೆಯುತ್ತಾ .. ತನ್ನಿಚ್ಛೆಯಂತೆ ಬದುಕುತ್ತಾ ಒಂದೇ ಜಾಗದಲ್ಲಿ ಬಹಳ ವರ್ಷದಿಂದ ಇದ್ದು ಅಭ್ಯಾಸವಿದ್ದವರು.. ಬೊಂಬಾಯಿ ಜೀವನಕೆ ಅಷ್ಟೇನೂ ಖುಷಿಯಿಂದ ಹೋದದ್ದಲ್ಲ .. ಆದರೂ ಮನೋಹರ ಅವರಿಗಾಗಿಯೇ ಒಂದು ಸಣ್ಣ ಮನೆಯನ್ನು ಅಂಬಾಡಿ ರೋಡಿನಲ್ಲಿ ಮಾಡಿದ್ದರಿಂದ ಅಲ್ಲಿ ಒಂದು ರೀತಿಯ ಸಂತೋಷದಲ್ಲೇ ಇದ್ದರು .ಆದರೂ ಇಷ್ಟು ವರ್ಷಗಳಿಂದ ಇದ್ದ ಒಂದು ಜಾಗವನ್ನು ಬಿಟ್ಟು ಇನ್ನೊಂದು ಜಾಗಕ್ಕೆ ಹೋಗಿ ಹೊಸತಾಗಿ ಜೀವನ ಮಾಡುವುದು ಅಷ್ಟೊಂದು ಸುಲಭದ ವಿಚಾರವೇನೂ ಅಲ್ಲವಲ್ಲ. ನಾನ೦ತೂ ಮುಂಬಯಿಗೆ ಹೋದಾಗ ಅವರ ಮನೆಗೂ ಒಂದು ಭೇಟಿ ಇದ್ದೇ ಇತ್ತು. ಅದಾಗಿ ಸ್ವಲ್ಪ ಸಮಯದ ನಂತರ ಮನೋಹರ ಅವನ ಮದುವೆಯಾಗುವ ಸಮಯದಲ್ಲಿ ಅವರ ಹಿರಿಮಗ ಅಂದರೆ ನನ್ನ ದೊಡ್ಡ ಭಾವನ ಮನೆಯ ಹತ್ತಿರದಲ್ಲೇ ಒಂದು ಸ್ವಲ್ಪ ದೊಡ್ಡ ಮನೆಯನ್ನೇ ಖರೀದಿಸಿದ್ದ.

ಲಹರಿ Read Post »

ಇತರೆ

ಮಮತೆಯ ಮಡಿಲು

ಬಣ್ಣಿಸಲು ಪದಗಳು ಬೇಕೇ? ಚಂದ್ರು ಪಿ.ಹಾಸನ ಮಮತೆಯ ಮಡಿಲಲ್ಲಿ ಮಿಡಿದ ಭಾವಗಳು ನೂರಾರು ಅಲ್ಲಿ ಕಳೆದ ಪ್ರತಿಕ್ಷಣಗಳು ಮಧುರ ಚಿರನೂತನ.ಮಾಂಸ ಮುದ್ದೆಯನ್ನು ನವಮಾಸ ತನ್ನ ಗರ್ಭದಲ್ಲಿ ಪೋಷಿಸಿ , ಈ ಜಗತ್ತನ್ನು ಪರಿಚಯಿಸಿ ಮಗುವಿನ ಬಾಳಿಗೆ ಆಸರೆಯಾಗುವವಳೇ ಅಮ್ಮ. ದೇವರಿಗೆ ದೇವರು ಅಮ್ಮ ಆಗಿರುವಾಗ ಮೂಲಕಥೆಗೆ ಪದವಿಲ್ಲ ಕೇವಲ ವಾತ್ಸಲ್ಯದ ಗುರುತುಗಳನ್ನು ಅಕ್ಷರವಾಗಿ ಸಿ ಮಮತೆಯ ಕ್ಷಣಗಳನ್ನು ಅವಳ ನೆನಪನ್ನು ಅವಳ ಮಡಿಲಲ್ಲಿ ಕಳೆದ ಕ್ಷಣಗಳನ್ನು ಪದವಾಗಿಸಿ ಒಂದೊಂದೇ ಈ ಲೇಖನದಲ್ಲಿ ತುಂಬಬಹುದಷ್ಟೇ. ಇತಿಹಾಸ ಅನ್ನಾ ಜಾರ್ವಿಸ್ ಅಮೆರಿಕದ ಶಾಲಾ ಶಿಕ್ಷಕಿ. ಅಪ್ಪನ ಸಾವಿನ ನಂತರ ಅವರು ಅಮ್ಮನ ನೆರಳಲ್ಲೇ ಬೆಳೆದರು. 1905 ಮೇ 9ರಂದು ಅಮ್ಮ ಕೂಡ ತೀರಿಕೊಂಡಾಗ ಅನ್ನಾ ಖಿನ್ನರಾದರು. ಬದುಕಿದ್ದಾಗ ಅಮ್ಮನನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳಬೇಕಿತ್ತು ಎಂದು ಅವರ ಮನಸ್ಸು ಚುಚ್ಚತೊಡಗಿತು. ಹಾಗೆ ನೋಡಿದರೆ ಅವರು ಅಮ್ಮನನ್ನು ಚೆನ್ನಾಗಿಯೇ ನೋಡಿಕೊಂಡಿದ್ದರು. ತಾಯಿಯ ಸಾವಿನ ನಂತರ ಅನ್ನಾ ಯಾರಿಗೇ ಮಾತೃವಿಯೋಗವಾದರೂ ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.        ಭೋಗದ ಬದುಕಿನಲ್ಲಿ ಪ್ರೀತಿಯನ್ನೇ ಮರೆಯುವ ಎಷ್ಟೋ ಮಕ್ಕಳು ಅವರ ಕಣ್ಣಿಗೆ ಬಿದ್ದರು. ಎಲ್ಲರೂ ಅಮ್ಮನನ್ನು ಕನಿಷ್ಠ ವರ್ಷಕ್ಕೊಂದು ದಿನವಾದರೂ ಪ್ರೀತಿಯಿಂದ ಕಾಣಲಿ ಎಂಬ ಬಯಕೆ ಅನ್ನಾ ಮನಸ್ಸಿನಲ್ಲಿ ಚಿಗುರೊಡೆಯಿತು.ತಮ್ಮ ಯೋಚನೆಯನ್ನು ಪ್ರಚಾರಗೊಳಿಸಲು ಅವರು ಪತ್ರ ಬರೆಯುವ ಆಂದೋಲನ ಪ್ರಾರಂಭಿಸಿದರು. ಪತ್ರಿಕೆಗಳ ಸಂಪಾದಕರು, ಬರಹಗಾರರು, ಸೆನೆಟರ್‌ಗಳು, ಮೇಯರ್‌ಗಳು, ಗವರ್ನರ್‌ಗಳು ಹಾಗೂ ಅಸಂಖ್ಯಾತ ಚಿಂತಕರಿಗೆ ಅವರು ತಮ್ಮ ಯೋಚನೆಯನ್ನು ತಿಳಿಸಿ ಪತ್ರಗಳನ್ನು ಬರೆದರು. ಅದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿತು. ನಗರಗಳಿಂದ, ಹಳ್ಳಿಗಳಿಂದ ಅಸಂಖ್ಯ ಪತ್ರಗಳು ಬಂದವು. ಪ್ರತಿಕ್ರಿಯಿಸಿದವರಲ್ಲಿ ಸಿಂಹಪಾಲು ಜನ ಅಮ್ಮನ ನೆನೆಯಲು ಒಂದು ದಿನ ಬೇಕು ಎಂಬ ಅನ್ನಾ ಯೋಚನೆಯನ್ನು ಬೆಂಬಲಿಸಿದ್ದರು. 1914, ಮೇ 8ರಂದು ಅಮೆರಿಕದ ಅಧ್ಯಕ್ಷ ವುಡ್ರೋ ವಿಲ್ಸನ್ ಅನ್ನಾ ಯೋಚನೆಗೆ ಅಧಿಕೃತತೆಯ ಮುದ್ರೆ ಒತ್ತಿದರು. ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ಅಮ್ಮನ ದಿನಾಚರಣೆ ಆಚರಿಸುವುದೆಂದು ತೀರ್ಮಾನವಾಯಿತು. ತಮ್ಮದೇ ಲೋಕದಲ್ಲಿ ವಿಹರಿಸುತ್ತಿದ್ದ ಅಮೆರಿಕನ್ನರು ಅಮ್ಮನ ದಿನಾಚರಣೆಯ ದಿನ ತಮ್ಮ ತಾಯಂದಿರಿಗೆ ಹೂಗುಚ್ಛ ಕಳುಹಿಸಿ ಶುಭಾಶಯ ಕೋರತೊಡಗಿದರು. ಕೆಲವರು ಅಮ್ಮನ ಜೊತೆ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಊಟ ಮಾಡಿ ಸಂಭ್ರಮ ಆಚರಿಸಲಾರಂಭಿಸಿದರು. ಪ್ರತಿವರ್ಷ ಅಮೆರಿಕದಲ್ಲಿ ಈಗ 15 ಕೋಟಿ ಗ್ರೀಟಿಂಗ್ ಕಾರ್ಡ್‌ಗಳು ಅಮ್ಮನ ದಿನಾಚರಣೆಯ ದಿನ ವಿನಿಮಯವಾಗುತ್ತವೆ.  ಅಮ್ಮನ ದಿನಾಚರಣೆ ಶುರುವಾದ ಎರಡು ವರ್ಷದ ನಂತರ ಸೊನೋರಾ ಡಾಡ್ ಎಂಬ ಇನ್ನೊಬ್ಬ ಮಹಿಳೆ ಅಪ್ಪಂದಿನ ದಿನವೂ ಬೇಕೆಂದು ಪ್ರಚಾರ ಆಂದೋಲನ ಪ್ರಾರಂಭಿಸಿದರು. ಈ ಯೋಚನೆಯನ್ನು ವಿರೋಧಿಸಿದವರೇ ಹೆಚ್ಚು. ಹಾಗಾಗಿ 1972ರಲ್ಲಿ ಅಪ್ಪನ ದಿನಾಚರಣೆಗೆ ಅಧಿಕೃತತೆ ಪ್ರಾಪ್ತಿಯಾಯಿತು.  ಯಾವ ಶ್ರೇಷ್ಠತೆಯು ತಾಯಿಯ ಶ್ರೇಷ್ಠತೆಗೆ ಸಮನಾಗಿಲ್ಲ. ಕಾರಣ ಮೊದಲೇ ತಿಳಿಸಿದಂತೆ ನವಮಾಸಗಳು ಗರ್ಭದಲ್ಲಿ ಇರಿಸಿ ಪೋಷಿಸಿ ಜಗಕ್ಕೆ ಪರಿಚಯಿಸಿದ ಆಕೆ ತನ್ನೆಲ್ಲಾ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಮಗುವಿನ ಆಸೆ-ಆಕಾಂಕ್ಷೆಗಳತ್ತ ಗಮನಹರಿಸಿ ಅದನ್ನು ಪೂರೈಸಲು ಮಾಡುವ ತ್ಯಾಗಗಳು ಅಜರಾಮರ. ಅಮ್ಮ ಎಂದರೆ ಅದು ಬರಿ ಪದವಲ್ಲ ಅದೊಂದು ಶಕ್ತಿ ಮಂತ್ರ ಕೇವಲ ಪ್ರೀತಿಯಿಂದ ಜಪಿಸಿದರೆ ಸಾಕು ಪ್ರತ್ಯಕ್ಷಳಾಗಿ ಪೂರೈಸಲು ಸಿದ್ಧರಿರುವಳು ಒಪ್ಪತ್ತು ಊಟ ತಿಂದು ಹೊಟ್ಟೆ ಕಟ್ಟಿ ಮಗುವನ್ನು ಒಪ್ಪಾಗಿ ಬೆಳೆಸುವಳು. ಮಗುವಿಗಾಗಿ ಎಂತಹ ತ್ಯಾಗ ಮಾಡಲು ಸಿದ್ಧರಿರುವಳು. ಅವಳು ಮಗುವಿಗಾಗಿ ಧರಿಸಿದ ವೇಷಗಳು ಎಷ್ಟೊ? ಕುಣಿದ ಕ್ಷಣ ಗಳು ಎಷ್ಟೊ. ಇಡೀ ಬದುಕನ್ನೇ ಮೀಸಲಿಡಲು ಬೇಕಾದರೂ ಚಿಂತಿಸುವುದಿಲ್ಲ. ಕಣ್ಣೀರಿಟ್ಟಾಗ ಮಗುವಿಗಾಗಿ ಕಣ್ಣಿರರಿಸಿ ಸಮಾಧಾನ ಪಡಿಸಿವಳು. ತಾನೊಂದರೂ ಅದರ ಅರಿವು ಮಗುವಿಗೆ ತಾಗದಂತೆ ನೋಡಿಕೊಳ್ಳುವಳು. ಹೆಜ್ಜೆ ಹೆಜ್ಜೆಗೂ ಬೆಂಗಾವಲಾಗಿ ನಿಂತು ದೈವದಂತೆ ಕಾಯುವಳು. ತಪ್ಪು ಮಾಡಿದರೆ ಕ್ಷಮೆ ನೀಡುವ ಏಕೈಕ ಜೀವ ಮಗುವಿನ ಪ್ರತಿ ಮಾತನ್ನು ಆಲಿಸುವ ಜೀವ ಇದು ಮಾತ್ರ ನೋವನ್ನು ನೋಯುತ್ತ ಕೇಳುವಳು ಕಣ್ಣೀರು ಇಡುವಳು ಗೆದ್ದಾಗ ಸಂತಸದಿ ಕುಪ್ಪಳಿಸಿ ಸಂತೋಷದ ಧಾರೆಯ ಹರಿಸುವಳು. ಇಂತಹ ಒಂದು ದಿವ್ಯ ಶಕ್ತಿಗೆ ಕೊನೆಯವರೆಗೂ ನೋವು ಬಾರದಂತೆ ನೋಡಿಕೊಂಡು ಅವಳ ಸಂತೋಷವನ್ನು ಕಾಯ್ದು ಪ್ರತಿದಿನ ನೋಡಿಕೊಂಡರೆ ಪ್ರತಿದಿನವೂ ಅಮ್ಮನ ದಿನಾಚರಣೆಯಾಗಿ ಕಾಣುವುದು.*********

ಮಮತೆಯ ಮಡಿಲು Read Post »

ಇತರೆ

ಲಹರಿ

ಪ್ರೀತಿ ಗಂಧವನರಸುತ ಸಂಧ್ಯಾ ಶೆಣೈ ಫೋನ್ ರಿಂಗಾಯಿತು.. ಯಾರೆಂದು ನೋಡಿದರೆ ನಾನು ಆಗಾಗ ಊರಕಡೆಯ ತರಕಾರಿ ತೆಗೆದುಕೊಳ್ಳುತ್ತಿದ್ದ ತರಕಾರಿ ವ್ಯಾಪಾರದ ಹೆಂಗಸು. ” ಅಕ್ಕ ಒಳ್ಳೆ ಕಾಟು ಮಾವಿನ ಹಣ್ಣು ಬಂದಿದೆ ಸ್ವಲ್ಪ ತಗೊಂಡ್ ಹೋಗಿ “ಎಂದು ಹೇಳಿದಳು. ನಾನು ಹೇಳಿದೆ “ಬ್ಯಾಡ ಬ್ಯಾಡ ಮಾರಾಯ್ತಿ.. ಈ ಕೊರೋನಾ ಬಂದ ಮೇಲೆ ನಾನು ಮನೆಯಿಂದ ಹೊರಗೆ ಹೋಗಲೇ ಇಲ್ಲ. ಹೋಗುವುದೂ ಇಲ್ಲ. ಹಾಗಾಗಿ ಬೇಡ ನಂಗೆ ಬರಲಿಕ್ಕಿಲ್ಲ” ಎಂದೆ ಅದಕ್ಕವಳು” ಅಯ್ಯೋ ಅಷ್ಟೇಯಾ.. ಹೌದು ನೀವು ಹೇಳಿದಾಗೆ ಹೊರಗೆ ಬರೋದೇ ಬೇಡ. ನಾನು ರಾತ್ರಿ ಅಂಗಡಿ ಮುಚ್ಚಿ ವಾಪಸ್ ಹೋಗುತ್ತೇನಲಾ ಆಗ ತಂದುಕೊಡುತ್ತೇನೆ” ಎಂದು ಹೇಳಿದಳು .ಆದ್ರೂ ನಾನು ಹೇಳಿದೆ “ತುಂಬ ಹುಳಿಯಿದ್ದರೆ ಬ್ಯಾಡ ಮಾರಾಯಿತಿ. ಆಮೇಲೆ ಅದಕ್ಕೆ ಸಿಕ್ಕಾಪಟ್ಟೆ ಬೆಲ್ಲ ಹಾಕಬೇಕಾಗುತ್ತದೆ. ನಮಗೆ ಡಯಾಬಿಟಿಸ್ನವರಿಗೆ ಒಳ್ಳೆಯದೂ ಅಲ್ಲ ಅಲ್ಲವಾ” ಎಂದೆ . “ಅಯ್ಯೋ!! ಎಷ್ಟು ಒಳ್ಳೆಯದುಂಟು ಅಂದ್ರೆ ನೀವು ತಿಂದು ನೋಡಿ ಆಮೇಲೆ ಹೇಳಿ ನಾನು ನಿನ್ನೆ ನನ್ನ ಮನೆಯಲ್ಲಿ ಮಾಡಿದ್ದೆ ಹಾಗಾಗಿ ನಿಮ್ಮ ನೆನಪಾಯಿತು ಅದಕ್ಕೆ ಫೋನ್ ಮಾಡಿದೆ “ಎಂದಳು . ನಾನು “ಸರಿ ಹಾಗಾದ್ರೆ ಒಂದಿಷ್ಟು ತೆಕ್ಕೊಂಡು ಬಾ.. ನಿನ್ನತ್ರ ಪತ್ರೊಡೆ ಎಲೆ ಇದ್ದರೆ ಅದನ್ನೂ ತಗೊಂಡ್ಬಾ ಸ್ವಲ್ಪ” ..ಎಂದೆ.. ರಾತ್ರಿ ಅಂಗಡಿ ಮುಚ್ಚಿದ ಮೇಲೆ ಮನೆಗೆ ಹೋಗುವ ಮೊದಲು ಬಂದು ಕೊಟ್ಟು ಹೋದಳು. ಈ ವಿಚಾರವನ್ನು ನಾನು ನನ್ನ ಗೆಳೆಯರೊಬ್ಬರಿಗೆ ಹೇಳಿದೆ. ಅದಕ್ಕೆ ಅವರು “ದುಡ್ಡು ತಗೊಂಡಳಾ ಇಲ್ವಾ” ಎಂದು ಕೇಳಿದರು.ಅದಕ್ಕೆ ನಾನು ಹೇಳಿದೆ “ಮಾವಿನಹಣ್ಣು ಪತ್ರಡೆ ಎಲೆ ಅವಳ ಮನೆಯಲ್ಲಿ ಆಗತದಾ ಅವಳೂ ದುಡ್ಡು ಕೊಟ್ಟೇ ತಂದಿದ್ದಲ್ಲಾ . ದುಡ್ಡು ಕೊಟ್ಟೆ ಅಪ್ಪ” ಎಂದು ಹೇಳಿದೆ. ಅದಕ್ಕೆ ಅವರು “ದುಡ್ಡು ಕೊಟ್ಟಿದ್ದೀಯಾ ಇನ್ನೇನು ಅದರಲ್ಲಿ ವಿಶೇಷ” ಎಂದು ತಮ್ಮ ವ್ಯಾಪಾರಿ ಬುದ್ಧಿಯನ್ನು ತೋರಿಸಿಯೇ ಬಿಟ್ಟರು. ನನಗೆ ಬಹಳ ದುಃಖವಾಯಿತು ಯಾಕೆಂದರೆ ಅವಳ ವಸ್ತುವಿಗೆ ಹಣ ಕೊಟ್ಟು ಅವಳ ಪ್ರೀತಿಯನ್ನು ಅಳೆಯಲು ಸಾಧ್ಯವೇ ..ಅವಳು ಕೂತಲ್ಲೇ ಬಂದು ತೆಗೆದುಕೊಂಡು ಹೋಗುವಂತಹ ಗಿರಾಕಿಗಳು ಅವಳಿಗಿರುವಾಗ ಆ ಕೆಲಸದ ನಡುವೆ ನನ್ನ ನೆನಪಾಗಿ ಫೋನ್ ಮಾಡಿ ಮನೆತನಕ ತಂದುಕೊಟ್ಟಿದ್ದಾಳಲ್ಲ ಈ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಾದರೂ ಎಲ್ಲಿದೆ. ಪ್ರೀತಿಗೆ ಬೆಲೆ ಕಟ್ಟುವಷ್ಟು ಶ್ರೀಮಂತರೇ ನಾವು .ಅದರಲ್ಲೂ ನಾನು ಬದುಕುತ್ತಿರುವುದೇ ಇಂತಹ ಒಂದು ಮುಷ್ಟಿ ಪ್ರೀತಿಗಾಗಿ. ಬಿಡಿ ಇಂತಹ ಭಾವನಾತ್ಮಕ ವಿಚಾರಗಳು ಕೆಲವರಿಗೆ ಎಲ್ಲಿ ಅರ್ಥ ಆಗ್ತದೆ.. ಎಂದು ಅಂದುಕೊಂಡೆ. ಮಾವಿನ ಹಣ್ಣನ್ನು ಚೆನ್ನಾಗಿ ತೊಳೆದು ಅಡುಗೆ ಮನೆಯಲ್ಲಿ ಒಂದು ಪಾತ್ರೆಯಲ್ಲಿ ಹಾಕಿ ನಾಳೆ ಮಾವಿನ ಹಣ್ಣಿನ ಉಪ್ಪಕರಿ ಮಾಡುವ ಎಂದು ವಿಚಾರ ಮಾಡಿಕೊಂಡೆ. ಅದನ್ನು ಅಡಿಗೆ ಮನೆಯಲ್ಲಿ ಇಟ್ಟು ರಾತ್ರಿ ನನ್ನ ರೂಮಿನ ಬಾಗಿಲು ಮುಚ್ಚಿಕೊಂಡು ಮಲಗಿದ್ದವಳು ಬೆಳಿಗ್ಗೆ ಏಳುವಾಗ ಅದು ಸರಿಯಾಗಿ ಹಣ್ಣಾಗಿದ್ದು ಅಡುಗೆ ಮನೆಯಲ್ಲಿ ಒಂದು ರೀತಿಯ ಮುದ ಕೊಡುವಂತಹ ಪರಿಮಳ ತುಂಬಿತ್ತು .ನಾನಿದ್ದೇನೆ ಇಲ್ಲಿ ಎಂದು ಮಾವಿನ ಹಣ್ಣು ಬಾಯಿಬಿಟ್ಟು ಹೇಳುತ್ತಿರುವಂತೆ ಅನ್ನಿಸುತ್ತಿತ್ತು .ಬಾಗಿಲು ಮುಚ್ಚಿದ್ದರಿಂದಲೋ ಏನೋ ನನ್ನ ಕೋಣೆಗೆ ಆ ಪರಿಮಳ ಬಂದೇ ಇರಲಿಲ್ಲ. ನಾನು ಪುನಃ ಬಂದು ನನ್ನ ಕೋಣೆಯಲ್ಲಿ ಮಲಗಿದೆ .ಸ್ವಲ್ಪ ಹೊತ್ತು ಬಾಗಿಲು ತೆರೆದಿದ್ದರಿಂದಲೋ ಏನೋ ಹೊರಗಿನ ಈ ಮಾವಿನ ಹಣ್ಣಿನ ಮಧುರ ಸುವಾಸನೆ ನಿಧಾನವಾಗಿ ನನ್ನ ಕೋಣೆಯೊಳಗೆ ತುಂಬಲಾರಂಭಿಸಿತು. ಮೊದಮೊದಲು ಮಂದವಾಗಿ ಬರುತ್ತಿದ್ದಂತಹ ಈ ಸುವಾಸನೆ ನಿಧಾನವಾಗಿ ಒಂದು ಹತ್ತು ನಿಮಿಷದೊಳಗೆ ನನ್ನ ಕೋಣೆಯಲ್ಲೆಲ್ಲಾ ತನ್ನದೇ ವಿಶೇಷ ಪರಿಮಳವನ್ನು ತುಂಬಿ ಬಿಟ್ಟಿತು ..ನಾನಂತೂ ಪರಿಮಳವನ್ನು ಆಸ್ವಾದಿಸುತ್ತಾ ಮಲಗಿದಲ್ಲಿಯೇ ಇವತ್ತು ಉಪಕರಿ ಮಾಡಲೇಬೇಕು ಎನ್ನುವ ಲೆಕ್ಕಾಚಾರ ಹಾಕುತ್ತಲೇ ಇದ್ದೆ. ಈ ತನ್ನ ವಿಶಿಷ್ಟ ಪರಿಮಳದಿಂದಲೇ ಈ ಮಾವಿನ ಹಣ್ಣು ತನ್ನ ಅಸ್ತಿತ್ವವನ್ನು ಮನೆಯಲ್ಲೆಲ್ಲ ತೋರಿಸುತ್ತಿತ್ತು. ಆಗ ಆಕಸ್ಮಿಕವಾಗಿ ನನ್ನ ತಲೆಗೆ ಒಂದು ವಿಚಾರ ಬಂತು . ಯಾವ ರೀತಿ ಅಡುಗೆ ಮನೆಯ ಒಂದು ಬದಿಯಲ್ಲಿದ್ದ ಮಾವಿನ ಹಣ್ಣು ನಾನು ನನ್ನ ಕೋಣೆಯ ಬಾಗಿಲನ್ನು ತೆರೆದೊಡನೆ ನಿಧಾನವಾಗಿ ತನ್ನ ಪರಿಮಳವನ್ನು ನನ್ನ ಇಡೀ ಕೋಣೆಯ ತುಂಬ ಪರಿಮಳದೊಂದಿಗೆ ಆಕ್ರಮಿಸಿ ಬಿಟ್ಟಿತ್ತೋ …ಅದೇ ರೀತಿ ಎಲ್ಲೋ ಚೈನಾದಲ್ಲಿ ಹುಟ್ಟಿದ ಆ ಕೋರೋಣ ಕಾಯಿಲೆ ಇಲ್ಲಿ ಈ ಮೂಲೆಯ ಉಡುಪಿಯ ತನಕ ಬರಬೇಕಾದರೆ ಎಷ್ಟು ವಿಚಿತ್ರ . ಆದರೆ ನಿನ್ನೆ ಉಡುಪಿಯಲ್ಲಿ ಲಾಕ್ ಡಾನ್ ಅವಧಿಯನ್ನು ಮೊಟಕುಗೊಳಿಸಿ ಸಮಯ ನಿಗದಿ ಪಡಿಸಿದ ನಂತರ ಜನರ ಓಡಾಟವನ್ನು ನೋಡುವಾಗ ಹೊಟ್ಟೆಯಲ್ಲೆಲ್ಲಾ ಒಂದು ರೀತಿಯ ನಡುಕ ಶುರುವಾಗುತ್ತಾ ಇದೆ. ಯಾರ ಯಾರಲ್ಲಿ ಇದರ ಸೋಂಕಿದೆಯೋ.. ಯಾರನ್ನು ನೋಡಿದರೂ ಒಂದು ರೀತಿ ಅನುಮಾನದಿಂದಲೇ ನೋಡುವಂತಾಗಿದೆ ..ಇದರ ಬದಲು ಈ ಕೋರೋಣ ಎನ್ನುವ ರೋಗದೊಂದಿಗೆ ಅದರದ್ದೇ ಆದ ಒಂದು ವಿಶೇಷ ದುರ್ವಾಸನೆಯೋ ಸುವಾಸನೆಯೋ ಇದ್ದಿದ್ದರೆ ಎಷ್ಟು ದೂರದಿಂದಲೂ ಓಹ್ ಇವರು ಸೋಂಕಿತರು ಎಂದು ಗುರುತಿಸುವಂತಾಗಿದ್ದರೆ ಎಷ್ಟು ಒಳ್ಳೆಯದಿತ್ತು. ಓಡಾಡುವಾಗ ಆ ವಿಶೇಷ ಘಾಟು ಬಂದ ಕೂಡಲೇ ತಕ್ಷಣವೇ ನಾವು ಜಾಗೃತರಾಗ ಬಹುದಿತ್ತು. ದೇವರೇ!! ಇಷ್ಟೆಲ್ಲಾ ಪ್ರಪಂಚದಲ್ಲೆಲ್ಲ ಹರಡುತ್ತಿರುವ ಈ ಕೊರೋನಾಗೆ ತಕ್ಷಣ ಗುರುತಿಸಬಹುದಾದದಂತಹ ಒಂದು ಕಟು ವಾಸನೆಯನ್ನಾಗಲೀ ಸುಮಧುರ ಪರಿಮಳವನ್ನಾಗಲೀ ಕೊಡಬಹುದಿತ್ತಲ್ಲ.. ಎಂದು ನನ್ನ ಮನಸ್ಸು ಪದೇಪದೇ ಹೇಳುತ್ತಾ ಇದೆ ************

ಲಹರಿ Read Post »

ಇತರೆ

ಅಮ್ಮಂದಿರ ದಿನದ ವಿಶೇಷ- ಬರಹ

ಅಮ್ಮನದಿನ          ಎನ್.ಶೈಲಜಾ ಹಾಸನ   ಕಳೆದ ವರ್ಷವಷ್ಟೆ ಅಮ್ಮನ ದಿನ ಆಚರಿಸಿದೆವು.ಈ ವರ್ಷವೂ ಅಮ್ಮಂದಿರ ದಿನ ಬಂದಿದೆ. ಅಮ್ಮನಿಗಾಗಿ ಒಂದು ದಿನವೇ ಎಂದು ಹುಬ್ಬೇರಿಸುವವರ ನಡುವೆಯೂ ಅಮ್ಮನನ್ನು ನೆನೆಸಿಕೊಂಡು ಅಮ್ಮನಿಗಾಗಿ ಉಡುಗರೆ ನೀಡಿ ಅಮ್ಮನ ಮೊಗದಲ್ಲಿ ಸಂತಸ ತುಂಬಿzವರು, ಅಮ್ಮನ ದಿನ ಮಾತ್ರವೇ ನೆನಸಿಕೊಂಡು ಅಮ್ಮನ ದಿನ ಆಚರಿಸಿದವರೂ, ತಮ್ಮ ಜಂಜಾಟದ ನಡುವೆ ಅಮ್ಮನನ್ನೆ ಮರೆತವರೂ, ಈ ಅಮ್ಮಂದಿರ ದಿನದ ಆಚರಣೆಗಳೆÉಲ್ಲ ನಮ್ಮ ಸಂಸ್ಕ್ರತಿ ಅಲ್ಲ, ನಾವೂ ದಿನವೂ ಅಮ್ಮನನ್ನು ಜೊತೆಯಲ್ಲಿಯೇ ಇಟ್ಟುಕೊಂಡು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದೆವೆ, ಈ ಒಂದು ದಿನ ಮಾತ್ರ ನೆನೆಸಿಕೊಂಡು ಉಡುಗೊರೆ ಕೊಟ್ಟು ಕೈ ತೊಳೆದುಕೊಂಡು ಮತ್ತೆ ಮುಂದಿನ ವರ್ಷವೇ ಅಮ್ಮನ ನೆನೆಸಿಕೊಂಡು ಬರುವ ವಿದೇಶಿ ಸಂಸ್ಕ್ರತಿ ನಮ್ಮದಲ್ಲ ಅಂತ ಮೂಗು ಮುರಿಯುವವರೂ ಇದ್ದಾರೆ. ಅದರೆ ಅಮ್ಮನ ದಿನ ಆಚರಿಸಿ ಉಡುಗೊರೆ ಕೊಟ್ಟಾಗ ಸಂಭ್ರಮಿಸುವ ಅಮ್ಮಂದಿರೇ ಹೆಚ್ಚಾಗಿದ್ದಾರೆ  ನನ್ನ ಮಗಳು ಕೂಡಾ ಬುದ್ದಿ ತಿಳಿದಾಗಿನಿಂದಲೂ ನನಗೆ ಪ್ರತಿ ವರ್ಷ ಉಡುಗರೆ ನೀಡುತ್ತಲೇ ಬಂದಿದ್ದಾಳೆ. ಅವಳು ನೀಡುವ ಪುಟ್ಟ ಪುಟ್ಟ ಉಡುಗರೆ ಕೂಡಾ ನನಗೆ ಅಮೂಲ್ಯವಾದದ್ದು ಹಾಗೂ ಆಪ್ಯಾಯಮಾನವಾದದ್ದು. ಇಂತಹ ಚಿಕ್ಕ ಚಿಕ್ಕ ವಿಚಾರಗಳು ಕೂಡಾ ಅಮ್ಮಂದಿರಿಗೆ  ಅದೆಷ್ಟು ಸಂತೋಷ ನೀಡುತ್ತದೆ ಅಂತ ಅಮ್ಮಂದಿರಿಗೆ ಗೊತ್ತು. ಆದರೆ ಅಂತಹ  ಸಣ್ಣ ಸಣ್ಣ ಸಂತೋಷವನ್ನೂ ಕೊಡಲಾರದ ಮಕ್ಕಳು ನಮ್ಮ ನಿಮ್ಮ ನಡುವೆಯೇ ಇದ್ದಾರೆ.     ಅಮ್ಮ ಅಂದರೆ ದೇವತೆ, ದೇವರು ಎಲ್ಲಾ ಕಡೆ ಇರಲು ಸಾದ್ಯವಿಲ್ಲ ಎಂದೇ  ದೇವರು ಅಮ್ಮನನ್ನು ಸೃಷ್ಟಿಸಿದ್ದಾನೆ. ಅಮ್ಮ ಎನ್ನುವ ಮಾತಿನಲ್ಲೇ ಅಮೃತವಿದೆ. ಪ್ರೀತಿ. ಕರುಣೆ, ವಾತ್ಸಲ್ಯ , ಮಮತೆ, ಕ್ಷಮಾಗುಣ, ಆರ್ದತೆ,ತ್ಯಾಗ, ಸಹಿಷ್ಣುತೆ  ಮುಂತಾದ ಪ್ರಪಂಚದ ಎಲ್ಲಾ ಒಳ್ಳೆಯ ಗುಣಗಳನ್ನು ಅಮ್ಮನಲ್ಲಿ ಇಟ್ಟು  ದೇವರು ತನ್ನ ಪ್ರತಿನಿಧಿಯಾಗಿ ಈ ಲೋಕದಲ್ಲಿ ಸೃಷ್ಟಿಸಿದ್ದಾನೆ.  ಕರುಳ ಕುಡಿಯನ್ನು ನವ ಮಾಸಗಳು ತನ್ನ ಉದರದಲ್ಲಿ ಪೋಷಿಸಿ , ಪ್ರಾಣವನ್ನೇ ಒತ್ತೇ ಇಟ್ಟು ಮಗುವಿಗೆ ಜನ್ಮ ನೀಡಿ, ಹಸುಗೂಸನ್ನು  ಲಾಲಿಸಿ, ಪಾಲಿಸಿ, ಪೋಷಿಸಿ ಒಂದು ವ್ಯಕ್ತಿಯನ್ನಾಗಿ ಮಾಡುವಲ್ಲಿ ಅಮ್ಮನ ಪಾತ್ರದಿಂದಾಗಿಯೇ ಈ ಜಗದಲ್ಲಿ ಸರ್ವ ಶ್ರೇಷ್ಠ ಸ್ಥಾನ ಅಮ್ಮನಿಗೆ. ಸಿರಿ ಸಂಪತ್ತು. ವೈಭೋಗ. ಜೀವ ಸೃಷ್ಟಿಯಲ್ಲಿ ತಾಯಿ ಹಾಗೂ ಆಕೆಯ ಪ್ರೀತಿ, ವಾತ್ಸಲ್ಯಕೆ  ಸರಿಸಾಟಿಯಿಲ್ಲ, ಜಗಕೆ ಒಡೆಯನಾದರೂ ಅಮ್ಮನಿಗೆ ಮಗನೇ. ತಾಯಿ ದೇವರು ಸಕಲ ಸರ್ವಸ್ವ, ಪೂಜ್ಯ ಮಾತೆ. ಕರುಣ ಮಯಿ, ಬಂಧು ಬಳಗ ಮುಂತಾದುವುಗಳೆಲ್ಲಾ ಒಂದು ತೂಕ ಅಥವಾ ಒಂದು ಭಾಗವಾದರೆ, ತಾಯಿಯೇ ಒಂದು ಪ್ರತ್ಯೇಕ ಭಾಗ. ತಾಯಿ ಸ್ಥಾನವನ್ನು ಯಾರೂ ತುಂಬಲಾರರು. ಹಾಗಾಗಿಯೇ ಅಮ್ಮನೆಂದರೆ ಪೂಜನೀಯ. ಅಮ್ಮ ಎನ್ನುವ ಮಾತಿನಲ್ಲಿ ಅಮೃತವಿದೆ. ಕಷ್ಟ ಸುಖ ಆನಂದದಲ್ಲಿ ಮೊದಲು ಹೊರಡುವ ಪದವೇ ಅಮ್ಮ .” ಅಮ್ಮ ಎಂದರೆ ಮೈ ಮನವೆಲ್ಲಾ ಹೂವಾಗುವುದಮ್ಮಾ ನೋವೋ ನಲಿವೋ ಹೊರಡುವ ದನಿಯೇ ಅಮ್ಮಾ ಅಮ್ಮಾ “ಅಂತ ಹಾಡಿದ್ದಾರೆ. ಕೆಟ್ಟ ಮಕ್ಕಳು ಇರಬಹುದು ಆದರೆ ಕೆಟ್ಟ ತಾಯಿ ಇರಲಾರಳು ಅಂತ ಶಂಕರಚಾರ್ಯರು ಹೇಳಿದ್ದಾರೆ. ಈ ಕುರಿತು  ಪ್ರಚಲಿತವಿರುವ ಒಂದು ಕಥೆ ನೆನಪಾಗುತ್ತದೆ. ಒಂದು ಸಂಸಾರದಲ್ಲಿ ತಾಯಿ, ಮಗ , ಸೊಸೆ ಇರುತ್ತಾರೆ. ಸಂಸಾರವೆಂದ ಮೇಲೆ ಜಗಳ ಕದನ ಇದ್ದದ್ದೆ. ಅವರ ಮನೆಯಲ್ಲೂ ಅತ್ತೆ ಸೊಸೆಗೆ ಮುಗಿಯದ ಜಗಳ. ಯಾರ ಪರ ವಹಿಸಿದರೂ ಕಷ್ಟವೇ. ಇತ್ತ ಅಮ್ಮಾ, ಅತ್ತ ಹೆಂಡತಿ. ಯಾರಿಗೂ ಏನನ್ನು ಹೇಳದೆ ಸುಮ್ಮನಿದ್ದು ಬಿಡುತ್ತಿದ್ದ. ಅಮ್ಮಾ ಮಗನ ಮನೆಯಲ್ಲಿ ಇರಲಾರದೆ ಬೇರೆ ವಾಸಿಸ ತೊಡಗುತ್ತಾಳೆ. ಹಾಗೊಂದು ದಿನ ಹೆಂಡತಿ, ಅತ್ತೆಯನ್ನು ಹೇಗಾದರೂ ಮಾಡಿ ಅತ್ತೆಯನ್ನು ನೀವಾರಿಸಿಕೊಳ್ಳಬೇಕು ಅಂತ ಉಪಾಯಮಾಡಿ ತನಗೆ ತುಂಬಾ ಕಾಯಲೆ ಎಂಬಂತೆ ನಟಿಸುತ್ತಾಳೆ, ಯಾವ ವೈದ್ಯರಿಗೆ ತೋರಿಸಿದರೂ ವಾಸಿಯಾಗದಿದ್ದಾಗ ಗಂಡನಿಗೆ ಚಿಂತೆಯಾಗುತ್ತದೆ. ಆಗ ಹೆಂಡತಿ ಗಂಡನಿಗೆ ಹೇಳುತ್ತಾಳೆ ತನ್ನ ಕಾಯಲೆ ವಾಸಿಯಾಗ ಬೇಕಾದರೆ ನಿನ್ನ ತಾಯಿಯ ಹೃದಯ ಬೇಕು ಅದನ್ನು ತಂದು ಕೊಡು ಎಂದು ಹೇಳುತ್ತಾಳೆ. ಹೆಂಡತಿಯ ಕಾಯಲೆ ವಾಸಿಯಾದರೆ ಸಾಕು ಅಂತ ಮಗ ಅಮ್ಮನ ಬಳಿ ಬಂದು ಅಮ್ಮನನ್ನು ಕೊಂದು ಅವಳ ಹೃದಯ ತೆಗೆದು ಕೊಂಡು  ಆತುರ ಆತುರವಾಗಿ ಹೋಗುತ್ತಿರುವಾಗ ಎಡವುತ್ತಾನೆ. ಆಗ ಅವನ ಕೈಯಲ್ಲಿದ್ದ ಅವನ ಅಮ್ಮಾನ ಹೃದಯ ಮೆಲ್ಲಗೆ ಹೋಗಪ್ಪ ಎಡವಿ ಬಿದ್ದಿಯಾ ಜೋಕೆ ಅಂತ ಎಚ್ಚರಿಸುತ್ತದೆ. ಮಗ ತನ್ನನ್ನು ಕೊಂದರೂ ಮಗನನ್ನು ದ್ವೇಷಿಸದೆ, ಅವನಿಗಾಗಿ ಅವನ ಕ್ಷೇಮಕ್ಕಾಗಿ ಅಮ್ಮನ ಹೃದಯ ತುಡಿಯುತ್ತದೆ ಎಂಬುದಕ್ಕೆ ಈ ಕಥೆ ನಿದರ್ಶನವಾಗಿದೆ.      ಹತ್ತು ಜನ ಬೋಧಕರಿಗಿಂತ ಒಬ್ಬ ಜ್ಞಾನಿ ಹೆಚ್ಚು. ಹತ್ತು ಮಂದಿ ಜ್ಞಾನಿಗಳಿಗಿಂತ ಒಬ್ಬ ತಾಯಿಯೇ ಹೆಚ್ಚು. ತಾಯಿಗಿಂತ ಉತ್ತಮ ಗುರುವಿಲ್ಲ. ಹಾಗೆಂದೇ ಮನೆಯನ್ನು ಮೊದಲ ಪಾಠಶಾಲೆ, ಜನನಿಯೇ ಮೊದಲ ಗುರು ಅಂತ ಕೈಲಾಸಂ ಹೇಳಿದ್ದಾರೆ. ಮಗುವನ್ನು ತಿದ್ದಿ ತೀಡಿ ಒಬ್ಬ ಯೋಗ್ಯ ವ್ಯಕ್ತಿಯನ್ನಾಗಿ ಮಾಡುವ ಗುರುತರವಾದ ಹೊಣೆಗಾರಿಕೆ ತಾಯಿಯದ್ದೇ ಆಗಿದೆ. ಆ ಹೊಣೆಯನ್ನು ಸಮರ್ಥವಾಗಿ ನಿರ್ವಹಿಸುವ ತಾಯಿ ತನ್ನ  ಮಗುವನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸಿ ಸಮಾಜಕ್ಕೆ ನೀಡುವಳು. ತಾನು ಹೆತ್ತ ಮಗುವಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ದವಾಗಿರುವ ತಾಯಿಯ ಪ್ರೀತಿಗೆ, ವಾತ್ಸಲ್ಯಕ್ಕೆ ಎಣೆ ಇದೆಯೇ. ಅಮ್ಮಾ ಎನ್ನುವುದು ಮಧುರವಾದ ಮಾತು. ಜೀವನಕ್ಕೆ ಬೆಳಕು ನೀಡುವ ಜ್ಯೋತಿ. ಮಗುವಿಗೆ ಅಮ್ಮನ ರಕ್ಷಾಕವಚದಿಂದಾಗಿ ಸುರಕ್ಷತೆ. ದೇವರು ಇಲ್ಲಾ ಎಂದು   ಯಾರು ಬೇಕಾದರೂ ಹೇಳ ಬಹುದು, ಆದರೆ ಅಮ್ಮಾ ಇಲ್ಲ ಎಂದು ಹೇಳಲು ಸಾದ್ಯವೇ ಇಲ್ಲ ಈ ಜಗತ್ತಿನಲ್ಲಿ. ತ್ಯಾಗಕೆ, ಮಮತೆಗೆ, ವಾತ್ಸಲ್ಯಕೆ, ಅನುರಾಗಗಳಿಗೆ ಮತ್ತೊಂದು ಹೆಸರೆ ಅಮ್ಮಾ. ಮಕ್ಕಲ ಸುಖದಲ್ಲಿ ತನ್ನ ಸುಖ ಕಾಣುವ ಏಕೈಕ ಜೀವಿ ಎಂದರೆ ತಾಯಿ ಮಾತ್ರಾ. ಇಂತಹ ಅಮ್ಮನ ಋಣ ತೀರಿಸಲು ಸಾದ್ಯವೇ ಇಲ್ಲ, ಹಾಗಾಗಿಯೇ ಈ ದೇಶದಲ್ಲಿ ಅಮ್ಮನಿಗೆ ಪೂಜನೀಯ ಸ್ಥಾನ. ಇಂತಹ ಪೂಜನೀಯ ಅಮ್ಮನಿಗಾಗಿ ವಿದೇಶಗಳಲ್ಲಿ ವರ್ಷದಲ್ಲಿ ಒಂದು ದಿನವನ್ನು ತಾಯಿಗಾಗಿ ಮಿಸಲಿಟ್ಟು” ಮದರ್ಸ ಡೇ” ಎಂದು ಆಚರಿಸಿ ಅಂದು ಅಮ್ಮನನ್ನು ಕೊಂಡಾಡಿ ಅವಳಿಗೆ ಪ್ರೀತಿಯ ಉಡುಗರೆ ನೀಡಿ ಆ ದಿನದಲ್ಲಿ ಆಕೆ ಹೆಚ್ಚು ಸಂತೋಷವಾಗಿರುವಂತೆ ನೋಡಿಕೊಳ್ಳುತ್ತಾರೆ.     ಜಾಗತೀಕರಣದಿಂದಾಗಿ ಆ ಹಬ್ಬ ನಮ್ಮ ದೇಶಕ್ಕೂ ಕಾಲಿಟ್ಟಿತು. ಮದರ್ಸ ಡೇಯನ್ನು  ಹುಟ್ಟಿದ ದೇಶವನ್ನು ಮಾತೃಭೂಮಿ ಎಂದು ಗೌರವಿಸುವ ಈ ದೇಶದಲ್ಲಿ ಕೂಡಾ   ಸಂತೋಷವಾಗಿ ಸ್ವಾಗತಿಸಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇಂಟರ್‍ನೆಟ್ ಮತ್ತು ಮೊಬೈಲ್ ಕ್ರಾಂತಿಯಿಂದಾಗಿ ಭಾರತ ದೇಶದಲ್ಲಿಯೂ ಅಮ್ಮನಿಗಾಗಿ ಒಂದು ದಿನವನ್ನು ಮೀಸಲಿಟ್ಟು ಅಮ್ಮನ ದಿನದ ಗೆಲುವಿಗೆ ಕಾರಣರಾಗಿದ್ದಾರೆ. ಮಗುವಿಗೆ ಜನ್ಮ ನೀಡುವುದರಿಮದ ಮೊದಲುಗೊಂಡು ಉಸಿರು ಇರುವವರೆಗೂ ಮಕ್ಕಳ ಏಳ್ಗೆಗಾಗಿ ತಪಸ್ಸಿನಂತೆ ಸೇವೆ ಸಲ್ಲಿಸುವ ನಿಸ್ವಾರ್ಥ ಜೀವಿ ಅಮ್ಮನಿಗಾಗಿ ಮೇ ತಿಂಗಳ ಎರಡನೇ ಭಾನುವಾರ ಅಂತರಾಷ್ಟ್ರೀಯ ಮಾತೃ ದಿನೋತ್ಸವವನ್ನಾಗಿ ಆಚರಿಸಲಾಗುತ್ತಿದೆ,      ಬದಲಾಗುತ್ತಿರುವ ಈ ದಿನಗಳಲ್ಲಿ ಮಾನವ ಸಂಬಂಧಗಳು ತನ್ನ ಮೌಲ್ಯಗಳನ್ನು ಕಳೆದು ಕೊಂಡು ಮಾನವೀಯತೆ ಕ್ಷೀಣಸುತ್ತಿರುವ ಈ ಸಂದರ್ಭದಲ್ಲಿ ಅಮ್ಮಾ ಕೂಡಾ ಹೊರೆಯಾಗುತ್ತಿದ್ದು ಮಕ್ಕಳ ತಿರಸ್ಕಾರಕ್ಕೆ ಗುರಿಯಾಗುತ್ತಿರುವುದು ವಿಪರ್ಯಾಸವಾಗುತ್ತಿದೆ. ಹೆತ್ತ ಮಕ್ಕಳು ಸ್ವಾರ್ಥಿಗಳಾಗಿ ತಮ್ಮ ಭೋಗ ಲಾಲಸೆಯಲಿ ಮುಳುಗಿ ಹೆತ್ತ ತಾಯಿಯನ್ನೇ ಮರೆತು ಬಿಟ್ಟಿರುವ ನಿದರ್ಶನಗಳನ್ನು ನಾವು ಪ್ರತಿ ನಿತ್ಯನಾವು ಕಾಣುತ್ತಲೆ ಇರುತ್ತೆವೆ, ಹೈಟೆಕ್ ಯುಗದಲ್ಲಿ ವೃದ್ದಾಶ್ರಮಗಳು ತಲೆಯೆತ್ತಿ ಅಮ್ಮಂದಿರ ಆಶ್ರಯ ತಾಣಗಳಾಗುತ್ತಿರುವುದು ನೋವಿನ ಸಂಗತಿಯಾಗಿದೆ, ಅಲ್ಲಿ ಸೂಕ್ತ ಆರೈಕೆ, ಪೋಷಣೆ ಸಿಗದೆ ಹಿಡಿ ಪ್ರೀತಿಗಾಗಿ ಹಂಬಲಿಸುತ್ತ ಕಾಲನ ಕರೆಗೆ ಕಾಯುತ್ತಿರುವುದು ಕರುಳಿರಿವ ಸಂಗತಿ. ಈ ದುರಂತದ ಅಂತಿಮ ದಿನಗಳು ಯಾರ ಬಾಳಿನಲ್ಲೂ ಬರಬಾರದು. ಹೆತ್ತ ಅಮ್ಮ ತಮ್ಮ ಕಣ್ಮುಂದೆ ಸದಾ ನಗುತ್ತಿರಲಿ ಎಂದು ಬಯಸುವ ಮಕ್ಕಳೆ ಈ ಭೂಮಿ ಮೇಲೆ ತುಂಬಿರಲಿ . ಅಮ್ಮನ ಆರೋಗ್ಯಕ್ಕಾಗಿ,  ಆರೈಕೆಗಾಗಿ,ಆನಂದಕ್ಕಾಗಿ ಮಕ್ಕಳು ತಮ್ಮ ಬದುಕಿನ ದಿನಗಳ ಕೆಲ ಗಂಟೆಗಳನ್ನಾದರೂ ಮೀಸಲಿಟ್ಟು ಆ ತಾಯ ಕಣ್ಣಲಿ ಮಿಂಚರಿಸಲಿ ಎಂಬುದೇ ಈ ಲೇಖನದ ಆಶಯ. *****************                                                  

ಅಮ್ಮಂದಿರ ದಿನದ ವಿಶೇಷ- ಬರಹ Read Post »

ಇತರೆ

ಅಮ್ಮಾ ಎಂಬ ಬೆಳದಿಂಗಳು

ಅಮ್ಮಾ ಎಂಬ ಬೆಳದಿಂಗಳು ನಾಗರೇಖಾ ಗಾಂವಕರ ಅಮ್ಮಾ! ಅಂದ ಕೂಡಲೇ ಅದೇನೋ ಮಧುರವಾದ ಭಾವ ಎದಗೂಡಲ್ಲಿ ಚಕ್ಕನೇ ಸುಳಿದಂತಾಗುತ್ತದೆ. ಆಪ್ತವಾದ ಹೃದಯವೊಂದರ ಬಡಿತ ದೂರದಲ್ಲಿದ್ದರೂ ನಮ್ಮ ಹತ್ತಿರವೇ ಸುಳಿದಾಡುತ್ತಿದೆ ಎಂಬಂತೆ ಭಾಸವಾಗುತ್ತದೆ. ಮಗಳಿಗೆ ಇಷ್ಟವೇನು? ಕಷ್ಟವೇನು ಎಂಬುದನ್ನು ನನ್ನಮ್ಮ ಅರಿತುಕೊಂಡಿದ್ದಳೇ? ಕೆಲವೊಮ್ಮೆ ಅನ್ನಿಸುತ್ತಿತ್ತು. ಅಮ್ಮನಾಗುವುದೆಂದರೆ ಆ ಪರಿಯ ಜವಾಬ್ದಾರಿಯೇ!  ನನ್ನಮ್ಮನೇಕೆ ಸಣ್ಣದಕ್ಕೂ ರೇಗುತ್ತಾರೆ? ಯಾಕೆ ನನ್ನ ಹುಟ್ಟಿಸಿಕೊಳ್ಳಬೇಕಿತ್ತು. ಬೈಯುವುದಾದರೂ ಏಕೆ? ಅಮ್ಮ ಬೈದಾಗ ತಂದೆ ಬೆಂಬಲಿಸುತ್ತಿದ್ದರೂ ಅಮ್ಮ ಅದಕ್ಕೂ ಹುಸಿಮುನಿಸು ತೋರುತ್ತಿದ್ದಾಗ  ಅಮ್ಮ ! ನಿನಗೆ ಹೊಟ್ಟೆ ಕಿಚ್ಚು ಅಂತೆಲ್ಲಾ ನಗುತ್ತಿದ್ದ  ನನಗೆ ಈಗ ಅದರರ್ಥವಾಗುತ್ತಿದೆ. ಒಳಗೊಳಗೆ ಖುಷಿ ಪಡುತ್ತಿದ್ದ ತಾಯಿ ಹೃದಯ, ಗಂಡನಾದವ ತನ್ನ ಮಕ್ಕಳನ್ನು ಮುದ್ದಿಸುತ್ತಿದ್ದರೆ ತಾಯಿ ತೋರುವ ಹುಸುಮುನಿಸು ವಿಚಿತ್ರ ಖುಷಿಯ ಸಂಭ್ರಮವೆಂದು. . ಬದುಕಿನ ಹಲವು ಪಾಠಗಳನ್ನು ಕಲಿಸಿದ್ದು ಹೆತ್ತವರಲ್ಲವೆ? ಆ ಪಾಠಗಳ ಇಂದಿಗೂ ನನ್ನ ಮಕ್ಕಳಿಗೆ ಮುದ್ದಾಂ ಆಗಿ ಹೇಳುವಾಗ ನನಗೆ ನನ್ನಮ್ಮ ನೆನಪಾಗುತ್ತಾರೆ. ಅಮ್ಮನ ಮಾತಿಗೆ ಅಂದು ಸಿಡಿಮಿಡಿಗುಡುತ್ತಿದ್ದ ನಾನು ಇಂದು ಅಮ್ಮನಾದ ಮೇಲೆ ಆ ಮಾತುಗಳನ್ನು, ನಡೆಯನ್ನು ಅನುಕರಿಸುವುದೇಕೆಂದು ಹಲವು ಬಾರಿ ನನ್ನಷ್ಟಕ್ಕೆ ಕೇಳಿಕೊಂಡಿದ್ದೇನೆ. ಕಾರಣ ಆ ಮಾತುಗಳು ಹೊರ ಮನಸ್ಸಿಗೆ ಕಹಿಯಾಗಿದ್ದರೂ, ಒಳಮನಕ್ಕೆ ಹಿತವಾಗಿರಬೇಕು. ಹಾಗಾಗೇ ಅವುಗಳನ್ನು ನನ್ನ ಸುಪ್ತ ಮನ ನೆನಪಿನಲ್ಲಿಟ್ಟುಕೊಂಡಿರಬೇಕು. ಅಲ್ಲವೇ?                                                   ಆಕೆಯ ಒಳಗುದಿ, ಹೆಣ್ಣು ಹೆತ್ತ ಕರುಳಿನ ಜವಾಬ್ದಾರಿ ಎಷ್ಟೆಂಬುದು ಆ ನಂತರವಷ್ಟೇ ನನಗರ್ಥವಾಗಿದ್ದು. ಹುಡುಗಿಯಾದ ತಪ್ಪಿಗೆ ನನಗಿಂತ ಶಿಕ್ಷೆ ಎಂದು ಆಗ ಅನ್ನಿಸುತ್ತಿತ್ತಾದರೂ, ಅಮ್ಮನ ಉಪದೇಶಗಳು ಕಿರಿಕಿರಿಗಳು, ಕೊರೆತದ ಗರಗಸವೆನ್ನಿಸುತ್ತಿತ್ತಾದರೂ ಅದು ನನ್ನನ್ನು ಕೊರೆಯಲಿಕ್ಕಲ್ಲ. ಬದಲಿಗೆ ನನ್ನ ಸುತ್ತ ಇದ್ದ ಮುಳ್ಳು ಹಿಂಡುಗಳನ್ನು ಕತ್ತರಿಸಿ ನನಗೊಂದು ಸುಂದರ ಉಪವನ ನಿಮರ್ಿಸಿಕೊಡುವ ಆಸೆಯಿಂದಾಗಿತ್ತು ಎಂಬುದು ನನಗರ್ಥವಾಗಿದ್ದು ನಾನು ತಾಯಿಯಾಗಿ ಆ ಹೊರೆ ಹೊತ್ತಾಗಲೇ. ಅಮ್ಮ ನನ್ನ ಎತ್ತಿ ಎತ್ತಿ ಮುದ್ದಿಸಿರಲಿಲ್ಲ. ಹೊಗಳಿ ಹಾಡುತ್ತಿರಲಿಲ್ಲ.  ಆದರೆ  ತೆಗಳಲು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಹೀಯಾಳಿಸುವುದು, ನೋಯಿಸುವುದು ಮಾಡಿದಾಗಲೆಲ್ಲ ಅಮ್ಮ ಕ್ರೂರಿಯಂತೆ ಕಾಣುತ್ತಿದ್ದರು. ಮೂದಲಿಕೆ ಮಾಡಿಗೊತ್ತೆ ಹೊರತು ಮುದ್ದಿಸಿ ಗೊತ್ತಿಲ್ಲ ನಿನಗೆ ಎಂದು ದೊಡ್ಡವಳಾದಾಗ ಹೇಳುತ್ತಿದ್ದೆ ಅಮ್ಮನಿಗೆ. ಆಗ ಆಕೆ . ನಾ ಮುದ್ದಿಸ್ತಾ ಕೂತ್ರೆ, ನೀ ಮುದ್ದೆ ತಿನ್ನುಕಾತತೇ ಮಗನೇ?  ಎನ್ನುತ್ತಿದ್ದರು. ಅದೂ ನಮಗೂ ಅರಿವಿತ್ತು.                 ಆದರೆ ಅಮ್ಮ ಮಕ್ಕಳ ಬಗ್ಗೆ ಅದೆಷ್ಟು ಕಾಳಜಿ ಮಾಡುತ್ತಿದ್ದರು. ಮನೆಯಿಂದ  ಹೊರಹೋದ ಮಕ್ಕಳು  ಸರಿಯಾದ ಸಮಯಕ್ಕೆ ಬರದಿದ್ದಲ್ಲಿ ಅಮ್ಮ ಕಳವಳ ಪಡುತ್ತಿದ್ದಳು.  ಶಾಲೆಗೋ,ಇನ್ನಿತರ ಕೆಲಸಕ್ಕೋ  ಹೊರಹೋದ ಮಕ್ಕಳು  ಬರುವುದು  ಒಂದಿಷ್ಟು ವಿಳಂಬವಾದರೂ ಆಕೆಯ ಮನಸ್ಸು ಪರಿತಪಿಸುತ್ತಿತ್ತು.  ಮನೆಯಂಗಳದಲ್ಲಿ ನಿಂತು ಕಣ್ಣು ಹಾಯುವಷ್ಟು ದೂರ ನೋಡುತ್ತಾ ಕಾಯುತ್ತ ಉಳಿದು ಬಿಡುತ್ತಿದ್ದಳು. ದೂರದಲ್ಲಿ ಬರುವ ಮಕ್ಕಳನ್ನು ಕಂಡೊಡನೆ ಆಕೆಗೆ ಸಮಾಧಾನವಾಗುತ್ತಿತ್ತು. ಅಮ್ಮ ಆಗಾಗ ನನ್ನ ಎಣ್ಣೆಗಪ್ಪು ಮೈಬಣ್ಣವನ್ನು ಲೇವಡಿ ಮಾಡುತ್ತಿದ್ದರು. ಅಕ್ಕಂದಿರ ಬಿಳಿ ಚರ್ಮದೊಂದಿಗೆ ಹೋಲಿಸುತ್ತಿದ್ದರು. ಬಿಸಿಲಿಗೆ ಮುಖ ಕೊಟ್ಟು  ನಡೆವ ನನಗೆ ಬೈಯುತ್ತಿದ್ದರು. ಆಗೆಲ್ಲ ನನಗೆ ಅತಿಯಾದ ನೋವು, ಜಿಗುಪ್ಸೆ ಬರುತ್ತಿತ್ತು. ನನಗೂ ಬಂಗಾರದ ಬಣ್ಣವನ್ನು ದೇವರು ಕೊಡಲಿಲ್ಲವೇಕೆಂದು ದೇವರನ್ನು ದೂರುತ್ತಿದ್ದೆ. ಸದಾ ನನ್ನ ಕಾಡುವ ನನ್ನ ಬಣ್ಣವನ್ನು ಹಂಗಿಸುವ ಅಣ್ಣಂದಿರ ಜೊತೆ ಸೇರಿ ತಾನೂ ನನ್ನ ತಮಾಷೆ ಮಾಡುವುದರಲ್ಲಿ ಅದ್ಯಾಕೋ ಅಮ್ಮ ಖುಷಿ ಪಡುತ್ತಿದ್ದಳು. ಎಳೆಯ ಮನಸ್ಸಿಗೆ ನೋವಾಗುವುದೆಂಬ ಕನಿಷ್ಟ ತಿಳುವಳಿಕೆ ಅಮ್ಮನಾದವಳಿಗೆ ಇರಲಿಲ್ಲವೇ? ಎಂಬ ವಿಸ್ಮಯ ನನಗೀಗ ಆಗುತ್ತಿದೆ.  ಆಗೆಲ್ಲ ಮಾನಸಿಕವಾಗಿ ನಾನು ಎಷ್ಟು ಕುಗ್ಗಿ ಹೋಗುತ್ತಿದ್ದೆ ಎಂದರೆ ಯಾರೂ ಇಲ್ಲದಾಗ ಮನೆ ಹಿಂದಿನ ಹಳ್ಳದ ಕಡೆ ನಡೆದುಬಿಡುತ್ತಿದ್ದೆ. ನೀರಿನ ಝಳು ಝಳು ನಾದದೊಂದಿಗೆ ನನ್ನ ಆಕ್ರಂದನ ಬೆರೆದು ಹೋಗುತ್ತಿತ್ತು. ಈಗೆಲ್ಲ ನಾವು ಮಕ್ಕಳು ಅತ್ತರೆ ಅದೆಷ್ಟು ಮುದ್ದಿಸುತ್ತೇವೆ. ಆಗ ನಮಗೆ  ನೋವನ್ನು  ಉಂಟುಮಾಡಿಯೂ ಸಂತೈಸಲು ಇಷ್ಟಪಡದ, ಆ ಪರಿಯ ಪ್ರೀತಿಯನ್ನು ಎಂದೂ ತೋರದ ಹೆತ್ತವರು ಕೆಲವೊಮ್ಮೆ ಕ್ರೂರಿಗಳಂತೆ ಕಂಡಿದ್ದರು. ಪ್ರೀತಿ ಹೃದಯದಲ್ಲಿತ್ತೆಂದು ಈಗ ಅರಿವಾಗುತ್ತದೆ ಅಷ್ಟೇ! ಅದನ್ನು ಪ್ರಕಟಿಸಬಾರದಿತ್ತೇ ಆಗಲೇ ಎಂದೂ ಅನ್ನಿಸುತ್ತದೆ. ಇದೆಲ್ಲ ನಾನು ಪ್ರೌಢೆಯಾಗುತ್ತಾ ಅರಿವಾಗುತ್ತಿದೆ. ಕಾಲೇಜು ಮುಗಿಯುವವರೆಗೂ ಅಮ್ಮ ನನ್ನನ್ನೆಂದೂ ಪ್ರೀತಿಯಿಂದ ಮುದ್ದಿಸಿರಲಿಲ್ಲ. ಕಾಲೇಜು ಮುಗಿಸಿ ಮನೆಗೆ ಬರುತ್ತಲೇ ನನ್ನ ಅಣ್ಣಂದಿರು  ಹಾಗೂ ಎರಡನೇಯ ಅಕ್ಕನಿಗೆ ಅಮ್ಮನ ಕೈ ಅಡುಗೆಯೇ ಆಗಬೇಕಿತ್ತು. ಅಮ್ಮ ಬಡಿಸದಿದ್ದರೆ ಉಣ್ಣದೇ ಉಳಿಯುವ ಜಾಯಮಾನ ಅವರದು. ಆದರೆ ನನಗೆ? ಅಮ್ಮ ಗಟ್ಟಿಗಾತಿ. ಸ್ವಲ್ಪ ಕೋಪಿಷ್ಟೆ. ಇಪ್ಪತ್ತಾರು ವರ್ಷಕ್ಕೆ ಆರು ಮಕ್ಕಳ ತಾಯಿಯಾಗಿ ಸಂಸಾರದ ನೊಗ ಹೊತ್ತಿದ್ದರು. ಸರಕಾರಿ ನೌಕರನಾದ ತಂದೆ ವಗರ್ಾವಣೆಗೊಂಡಲ್ಲೆಲ್ಲಾ ಊರೂರು ಅಲೆಯುತ್ತಾ ಸುಮಾರು ಹತ್ತು ವರ್ಷ ಹೇಗೋ ಕಾಲ ತಳ್ಳಿದ ಮೇಲೆ ಮಕ್ಕಳ ವಿಧ್ಯಾಭ್ಯಾಸದ ಜೊತೆಗೆ  ತನ್ನದೇ ಸ್ವಂತ ಸೂರು, ಬಂಧುಬಾಂಧವರ ಜೊತೆ ಹತ್ತಿರದ ನೆಲೆಯನ್ನು, ಭದ್ರತೆಯನ್ನು ಆಪೇಕ್ಷಿಸಿ ಅಮ್ಮ  ಮಕ್ಕಳ ಕಟ್ಟಿಕೊಂಡು ಊರಿಗೆ  ಬಂದೇಬಿಟ್ಟರು. ತಂದೆಯನ್ನು ನಾವು ‘ದಾದ’ ಎಂದೇ ಕರೆಯುತ್ತಿದ್ದೆವು. ದಾದ  ಊರಲ್ಲಿ ಹತ್ತು ಹದಿನೈದು ಎಕರೆ ಜಮೀನು ಖರೀದಿಸುವಂತೆ ಮಾಡಿ, ಆ ಭೂಮಿಯಲ್ಲಿ ಕೃಷಿಗೆ ನಿಂತರು ಅಮ್ಮ. ಅವರ ಮಹತ್ವಾಕಾಂಕ್ಷೆಯನ್ನು ಮನಗಂಡ ದಾದ ಅದಕ್ಕೆ ಪೂರಕವಾಗಿ ಜಮೀನಿನಲ್ಲಿ ಭತ್ತದ ಜೊತೆ ತೆಂಗು ಕಂಗುಗಳ ಕೃಷಿಯನ್ನು ಮಾಡಿದರು. ಫಸಲು ಬರುವುದಕ್ಕೆ ಇನ್ನೂ ಕಾಲವಿತ್ತು ಎರಡೆರಡು ಬಾವಿಗಳು ತಲೆ ಎತ್ತಿದ್ದವು. ತಂದೆ ಸರಕಾರಿ ನೌಕರಿಯಲ್ಲಿ ತಮ್ಮ ತೊಡಗಿಸಿಕೊಂಡಿದ್ದರು.                     ಸದಾ ಸಮಾಜಮುಖಿ ಕೆಲಸದಲ್ಲಿ ಇತರರಿಗೆ ಸಹಾಯ, ಸಹಕಾರ, ಮಾರ್ಗದರ್ಶನ ಅಂತೆಲ್ಲ ತನ್ನನ್ನು ತೊಡಗಿಸಿಕೊಂಡಿದ್ದ ತಂದೆ, ಒಬ್ಬರೇ ಕೆಲಸದ ಸ್ಥಳದಲ್ಲಿ ಉಳಿಯಬೇಕಾಯ್ತು. ಯಾವತ್ತೂ ಕ್ರಿಯಾಶೀಲನಾಗಿರುತ್ತಾ, ಹಣವನ್ನೂ ನೀರಿನಂತೆ ಖರ್ಚು ಮಾಡುತ್ತಿದ್ದ ತಂದೆ ನನ್ನಮ್ಮನ ಮದುವೆಯಾದ ನಂತರವೇ ಒಂದು ಹದಕ್ಕೆ ಬಂದಿದ್ದು ಎಂದು ಅಮ್ಮ ಅವರೆದುರು ಹೇಳುತ್ತಿದ್ದರೆ ತಂದೆ ಸಣ್ಣಗೆ ನಗುತ್ತಿದ್ದರು. ಮತ್ತು ತಮಾಷೆಯಾಗೇ  ನನ್ನ ದುಡ್ಡು ತಕ್ಕಂಡೇ ನಂಗೆ ಆರತಿ ಮಾಡ್ತಾಳೇ ನಿಮ್ಮಮ್ಮ ಎನ್ನುತ್ತಿದ್ದರು. ಅಮ್ಮನದು ಒಂದಿಷ್ಟು ಜಾಸ್ತಿಯೇ ಎನ್ನುವ ಹಿಡಿತದ ಕೈ. ಮಕ್ಕಳ ಕುರಿತು ಮುದ್ದಿಗಿಂತ ಅವರ ಮುಂದಿನ ಭವಿಷ್ಯದ ಕುರಿತು ಚಿಂತೆ.                            ತಂದೆ ಹೊರ ಊರಲ್ಲಿ ಹೋಟೆಲ್ಲು ಊಟ ಎನ್ನುತ್ತ ಆರೋಗ್ಯವನ್ನು ಕೆಡಿಸಿಕೊಂಡಿದ್ದರು. ನಲವತ್ತೇಳು ವರ್ಷಕ್ಕೆ ಮೊದಲ ಭಾರಿಗೆ ಹೃದಯಬೇನೆಗೆ ಗುರಿಯಾಗಿದ್ದರು. ಗಟ್ಟಿಗಾತಿ ಅಮ್ಮ ಮೊದಲ ಬಾರಿಗೆ ಅತ್ತಿದ್ದನ್ನು ನೋಡಿದ್ದೆ. ಆಕೆ ಕಳವಳಗೊಂಡಿದ್ದಷ್ಟೇ ಅಲ್ಲ ಆರು ಮಕ್ಕಳ ಹೊತ್ತ ಒಡಲು ಅವರನ್ನು ಪೊರೆಯಬೇಕಾಗಿತ್ತಲ್ಲ. ಹಾಗಾಗಿ ತಂದೆಗೆ ಕಡ್ಡಾಯ ಪೆನಷನ್ ಪಡೆಯಲು ಹೇಳಿ ಮನೆಯಲ್ಲಿ ಆರಾಂ ಆಗಿ ಇರುವಂತೆ ಮಾಡಿದ್ದರು. ಅಂದಿನಿಂದ ತಾವೇ ಹೊಲ ತೋಟ ನೋಡಿಕೊಳ್ಳುತ್ತ ಇರತೊಡಗಿದರು.  ಹೊಲದಲ್ಲಿ ಕೆಲಸದವರೊಂದಿಗೆ ತಾವೂ ದುಡಿಯುತ್ತಿದ್ದರು. ಮನೆಯ ಅಡುಗೆ ಕೆಲಸ, ತೋಟದ ಕೆಲಸ ಗದ್ದೆಯ ಕೆಲಸ, ತೋಟಕ್ಕೆ, ಗದ್ದೆಗೆ  ಔಷಧಿ ಹೊಡೆಯುವುದು, ಗಂಡು ಆಳುಗಳು ಮಾಡುವ ಕೆಲಸಕ್ಕಿಂತ ಹೆಚ್ಚೆ ಮಾಡುತ್ತಿದ್ದರು. ತನ್ನ ದೈಹಿಕ ಆರೋಗ್ಯದ ಕಡೆ ಕಾಳಜಿ ಮಾಡದೇ ಇರುವ ಕಾರಣವೇ ಇರಬೇಕು. ಅಮ್ಮ ಮೂವತ್ತೊಂಬತ್ತು ವರ್ಷಕ್ಕೆ ಮೊದಲ ಬಾರಿ ವಿಪರೀತ ರಕ್ತಸ್ರಾವಕ್ಕೆ ಗುರಿಯಾಗಿ  ಹಾಸಿಗೆ ಹಿಡಿದರು. ಬಂಗಾರದ ಮೈಬಣ್ಣದ ಅಮ್ಮ ಬಿಳಿಚಿಕೊಂಡಿದ್ದರು. ಅಶಕ್ತರಾಗಿದ್ದರು.                                      ನಾನಾಗ ಎಂಟನೇ ತರಗತಿ ಪಾಸಾಗಿದ್ದೆ. ಅಮ್ಮನಿಗೆ ವಿಪರೀತ ರಕ್ತಸ್ರಾವ ಆಗಿ ಊರಲ್ಲಿಯ ಆಸ್ಪತ್ರೆಗಳಿಗೆ ಎಡತಾಕಿದರೆ, ಅಲ್ಲಿ ಗುಣಕಾಣದೇ ಹುಬ್ಬಳ್ಳಿಗೆ ಪೂರ್ತಿ ತಪಾಷಣೆಗೆ ಕೊಂಡೊಯ್ದರು. ಅಲ್ಲಿ ಅವರನ್ನು ಕಾನ್ಸರ್ ತನ್ನ ಮುಷ್ಟಿಯಲ್ಲಿ ಬಂಧಿಸಿರುವುದು ಗೊತ್ತಾಗುತ್ತಲೇ ನಾವೆಲ್ಲ ಮಾತು ಕಳೆದುಕೊಂಡಂತೆ ಅಸಹಾಯಕರಾಗಿದ್ದೆವು. ತಂದೆ ಕಣ್ಣಿರಿಟ್ಟಿದ್ದರು. ಎಲ್ಲ ಮಕ್ಕಳು ಕಲಿಯುತ್ತಿರುವ ಹಂತದಲ್ಲಿ, ಯಾರೂ ತಮ್ಮ ಜೀವನದ ಹಾದಿಯನ್ನು ಕಂಡುಕೊಳ್ಳದ ಹೊತ್ತಲ್ಲಿ, ಅಮ್ಮಾ1 ನೀವು ಎಷ್ಟು ನೋವುಂಡಿರಿ? ಅದೆಲ್ಲ ನಮಗೆ ತಾಕಬಾರದೆಂದು ನೀವಿಬ್ಬರೂ ಇರುವಾಗ ನೀವು ತಣೆಯ ಮೇಲೂ ದಾದ ತಣೆಯ ಮೇಲ್ಚಿಟ್ಟೆಯ ಮೇಲೂ ಕೂತು ಮನಸ್ಸನ್ನು ಹಗುರಮಾಡಿಕೊಳ್ಳುತ್ತಿದ್ದದ್ದನ್ನು ಕೊನೆಯವಳಾದ ನಾನು ಗ್ರಹಿಸುತ್ತಿದ್ದೆ. ಆಗ ಬುದ್ದಿ ಇರಲಿಲ್ಲ. ಸುಮ್ಮನೇ ಇಷ್ಟೊಂದು ನೋಯುತ್ತಾರೆ ಎಂದೆಲ್ಲಾ ಅವರಿಗೆ ಉಪದೇಶ ಮಾಡುತ್ತಿದ್ದೆ. ನೀವಾಗ ನಗುತ್ತಿದ್ದಿರಿ.                            ಅಮ್ಮ ತಿಂಗಳುಗಟ್ಟಲೇ ಆಸ್ಪತ್ರೆಯಲ್ಲಿ ಉಳಿದರು.  ಅರ್ಬುದ ರೋಗಕ್ಕೆ ನೀಡುತ್ತಿದ್ದ ಕರೆಂಟುಗಳು ಅವರ ನರಗಳನ್ನು ನಿರ್ಜೀವ ಮಾಡುತ್ತಿದ್ದವು. ಅಮ್ಮ ಸಾವನ್ನು ಗೆದ್ದು ಬಂದಿದ್ದಳು. ಆದರೆ ಈ ಸಂತೋಷ ಕೂಡಾ ಬಹಳ ದಿನ ಉಳಿಯಲಿಲ್ಲ. ತಂದೆ ಹೃದಯಬೇನೆ ದಿನವೂ ಔಷಧಿ ತಿಂದರೆ ಅಮ್ಮ ಅರ್ಬುದ ರೋಗಕ್ಕೆ. ಮನೆ ಎನ್ನುವದು ಸಣ್ಣ ಔಷಧಾಲಯವಾಗಿತ್ತಲ್ಲ. ಎರಡೇ ವರ್ಷಕ್ಕೆ ಪುನಃ ಅಮ್ಮನ ಮೈ ಮತ್ತೆ ಕ್ಯಾನ್ಸರ್ಗೆ ಬಲಿಯಾಗಿತ್ತು. ಆಗ ಮನೆ ಜನರೆಲ್ಲ ಆಶಾವಾದವನ್ನೆ ಕಳೆದುಕೊಂಡಿದ್ದರು. ಅಲ್ಲವೇ ಅಮ್ಮ?                 ತಂದೆ ಕೂಡಾ ಆಗ ಅತ್ತಿದ್ದರು. ಹಿರಿಯಣ್ಣ ಮನದಲ್ಲೆ ಸಂಕಟ ಪಟ್ಟಿದ್ದ. ಅಮ್ಮನ ಹಿಂದೆ ಯಾವಾಗಲೂ  ಇರುತ್ತಿದ್ದ ಎರಡನೇಯ ಅಣ್ಣ ಕಳವಳಪಟ್ಟಿದ್ದ. ಹಿರಿಯಕ್ಕ  ಕಿರಿಯರಾದ ನಮಗೆ ಅಮ್ಮನಂತೆ ಸಾಂತ್ವನ ಹೇಳುವುದು, ಮೊದಲಿಗಿಂತ ಹೆಚ್ಚು ಪ್ರೀತಿ ತೋರುವುದು ಮಾಡಲಾರಂಭಿಸಿದಳು. ಕಿರಿಯಣ್ಣ ಮೌನಿಯಾಗಿದ್ದ. ಒಟ್ಟು ದಿನಕ್ಕೆರಡು ಕರೆಂಟುಗಳನ್ನು ಕೊಡಿಸಿಕೊಳ್ಳುತ್ತಾ ತಿಂಗಳಾನುಗಟ್ಟಲೆ ಅಮ್ಮ ಹುಬ್ಬಳ್ಳಿ ಕಾನ್ಸರ್ ಆಸ್ಪತ್ರೆಯಲ್ಲಿ ಜನರಲ್ ವಾಡರ್ಿನ ಹಾಸಿಗೆಯಲ್ಲಿ ಮಲಗಿರುತ್ತಿದ್ದರು. ಸ್ವಚ್ಛತೆಯನ್ನು ಇಷ್ಟ ಪಡುತ್ತಿದ್ದ ಅಮ್ಮ ಹುಬ್ಬಳ್ಳಿ ಜನರ ಹಚ್ಚಿಕೊಳ್ಳುವ ಗುಣವನ್ನು ಇಷ್ಟ ಪಡುತ್ತಿದ್ದರೂ, ಅವರ ಸ್ವಚ್ಛವಲ್ಲದ ಜೀವನ ಶೈಲಿಗೆ ಕಷ್ಟ ಪಡುತ್ತಿದ್ದರು. ಬಾತರೂಮುಗಳು, ಟಾಯ್ಲೆಟ್ಗಳು ಎಲ್ಲರೂ ಬಳಸುತ್ತಿದ್ದರಿಂದ ಅಲ್ಲಿಯ ವ್ಯವಸ್ಥೆಯನ್ನು ಕಣ್ಣುಮುಚ್ಚಿ ಬಾಯಿ ಮುಚ್ಚಿ ಸಹಿಸಿಕೊಂಡಿದ್ದರು. ಕಾರಣವಿಷ್ಟೇ, ಖಚರ್ುಮಾಡಲು ಹಣವಿರಲಿಲ್ಲ. ಒಂದಿಷ್ಟು ಇದ್ದರೂ ಮುಂದೆ ಮೂರು ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳ ಭವಿಷ್ಯ ನೆಲೆಯಾಗಬೇಕಿತ್ತಲೇ? ಅಮ್ಮನೊಂದಿಗೆ ಆಸ್ಪತ್ರೆ ವಾಸಕ್ಕೆ ನಾನೂ ಜೊತೆಯಾಗಿದ್ದೆ.  ಒಂದೊಂದು ಅನುಭವವೂ ನನ್ನ ಮಿತಿಯನ್ನು ವಿಸ್ತರಿಸುತ್ತಲೇ ಇದ್ದವು.  ಸಹನೆಯನ್ನು, ಸಂಕಟಗಳನ್ನು ಎದುರಿಸುತ್ತಾ ಬೆಳೆದೆ. ಆಸ್ಪತ್ರೆಯಲ್ಲಿ ಅಕ್ಕಪಕ್ಕದ ಜನರ ಜೊತೆ ಮಾತನಾಡುತ್ತಾ, ಅಮ್ಮ ಒಮ್ಮೊಮ್ಮೆ ಕಣ್ಣಲ್ಲಿ ನೀರು ತಂದುಕೊಳ್ಳುತ್ತಿದ್ದರು. ನನಗೂ ಅಳು ಬರುತ್ತಿತ್ತು.  ಅಂತೂ ಎರಡನೇ ಬಾರಿಯೂ ಸಾವಿನೊಡನೆ ಹೋರಾಡಿ ಗೆದ್ದು ಮನೆಗೆ ಬಂದಳು ಅಮ್ಮ. ಅಕ್ಕನ ಮದುವೆ ಮಾಡುವ ನಿಧರ್ಾರಕ್ಕೆ ಬಂದರು. ಮದುವೆಯೂ ಆಯಿತು. ಅಣ್ಣನಿಗೆ ಆಗಷ್ಟೇ ನೌಕರಿ ಸಿಕ್ಕಿತು. ಎರಡು ಮೂರು ವರ್ಷಗಳಲ್ಲಿ ಎರಡನೇ ಅಕ್ಕನ ಮದುವೆಯೂ ಆಗಿ ಸಮಾಧಾನ ಎಂದುಕೊಳ್ಳುತ್ತಿರುವಾಗ ಅಮ್ಮನಿಗೆ ಸಕ್ಕರೆ ಕಾಯಿಲೆ ಗಂಟುಬಿದ್ದಿತ್ತು. ಸಿಹಿ ಎಂದರೆ ಪ್ರಾಣವಾಗಿದ್ದ ಅಮ್ಮ ಸಿಹಿಯನ್ನು ಬಿಟ್ಟೆ ಬಿಟ್ಟರು. ಕಟ್ಟು ನಿಟ್ಟಾಗಿ ಪಥ್ಯ ಮಾಡತೊಡಗಿದರು. ಡಯಾಬೀಟಿಸ್ ಮಹಾಶಯ ಕ್ಯಾನ್ಸರ್ಗೆ ಕೊಟ್ಟ ಕರೆಂಟ್ನ ಬಳುವಳಿಯಾಗಿ ಬಂದಿದ್ದ. ಮತ್ತೇ ಶೋಕ! ತಂದೆ ಮೂರನೇ ಬಾರಿ ಹೃದಯಾಘಾತಕ್ಕೆ ಒಳಗಾದಾಗ ಮತ್ತೆ ಬದುಕಲಿಲ್ಲ. ಆ ಒಂದು ಕೆಟ್ಟ ಮುಂಜಾನೆ ಬೆಳಿಗ್ಗೆಯ ನಾನೇ ಕೊಟ್ಟ ಚಹಾ ಲೋಟ ಕೈಯಲ್ಲಿ ಹಿಡಿದಿದ್ದರಷ್ಟೇ! ಮರುಕ್ಷಣ ಮಂಚದ ಮೇಲಿನ  ಹಾಸಿಗೆಯಿಂದ ಕೆಳಗೆ ಬಿದ್ದವರು ಹೊರಟೇ ಹೋಗಿದ್ದರು. ಅಮ್ಮ ಈಗ ಒಂಟಿಯಾಗಿದ್ದರು. ಮಕ್ಕಳನ್ನು ಇನ್ನೂ ಜಾಸ್ತಿ ಜಾಸ್ತಿ ಪ್ರೀತಿಸತೊಡಗಿದರು. ಎಲ್ಲರ ಮದುವೆಯೂ ಆಯಿತು. ಅಮ್ಮ ಅದೆಷ್ಟು ನಿರಾಶೆ, ನೋವು, ಮೂದಲಿಕೆಗಳನ್ನು ಮಾಡಿ ನನ್ನ ತಿದ್ದುವ ಪ್ರಯತ್ನ ಮಾಡುತ್ತಿದ್ದರೋ, ಅಷ್ಟೇ ಪ್ರೀತಿ,ವಿಶ್ವಾಸ, ಕರುಣೆಯನ್ನೂ ಬಡಿಸಿದ್ದರು.  ಒಂದಿಷ್ಟು ಹೇಳಿದ್ದನ್ನು ಕೇಳದ ಅಧಿಕಪ್ರಸಂಗಿ ಎಂದು ಬೈಯುತ್ತಿದ್ದರೋ ಅವರೇ ನನ್ನ ಹಚ್ಚಿಕೊಳ್ಳತೊಡಗಿದರು. ಅದೂ ಅತಿಯಾಗಿ ಪ್ರೀತಿಸಿದ್ದ ಅಕ್ಕ ಮದುವೆಯಾಗಿ ಹೋದ ಮೇಲೆ.  ಎರಡನೇಯ ಅಣ್ಣನ ಮದುವೆಯಾದ ಮೇಲೆ. ಅಮ್ಮ ನನ್ನ ಪ್ರೀತಿಸತೊಡಗಿದ್ದರು. ನಾನು ಅಮ್ಮನ ಮಗಳಾಗಿದ್ದೆ.

ಅಮ್ಮಾ ಎಂಬ ಬೆಳದಿಂಗಳು Read Post »

You cannot copy content of this page

Scroll to Top