ವರ್ತಮಾನ
ಕವಡೆ ಲೋಬಾನದ ಪರಿಮಳಕ್ಕೆ ಬಿತ್ತು ಕರಾಳ ಕೊರೊನಾ ಪೆಟ್ಟು ಪ್ರತೀ ವರುಷವೂ ಸಂಕ್ರಮಣದಿಂದ ನಾಗರಪಂಚಮಿವರೆಗೆ ಹಳ್ಳಿ ಹಳ್ಳಿಗಳು ಸೇರಿದಂತೆ ನಗರ ಪಟ್ಟಣಗಳ ತುಂಬೆಲ್ಲಾ ವೃತ್ತಿರಂಗಭೂಮಿ ನಾಟಕಗಳ ಸುಗ್ಗಿ. ಬಹುಪಾಲು ಜಾತ್ರೆಗಳು ಜರುಗುವುದು ಇದೇ ಅವಧಿಯಲ್ಲೇ. ಒಕ್ಕಲುಮಕ್ಕಳು ಬೆಳೆವ ಬೆಳೆಗಳ ಫಸಲಿನಸುಗ್ಗಿ ಮುಗಿದು ಹಬ್ಬ, ಹುಣ್ಣಿಮೆ, ಜಾತ್ರೆಗಳ ಸಡಗರ ಸಂಭ್ರಮ. ವರ್ಷವೆಲ್ಲ ದುಡಿದ ಜೀವಗಳಿಗೆ ಆಡಿ ನಲಿದು, ಹಾಡಿ, ಕುಣಿವ ಹಂಗಾಮ. ಸಹಜವಾಗಿ ವೃತ್ತಿರಂಗ ನಾಟಕಗಳೆಂದರೆ ಜನ ಸಾಮಾನ್ಯರ ಮನರಂಜನೆಯ ಘಮಲು. ಕವಡೆ ಲೋಬಾನದ ಪರಿಮಳ. ಝಗಮಗಿಸುವ ಬಣ್ಣಬಣ್ಣದ ಬೆಳಕು. ವೃತ್ತ, ಕಂದ ಪದ್ಯಗಳ ಕಲರವ. ಕೆಲವುಕಡೆ ನಾಟಕಗಳದ್ದೇ ಜಾತ್ರೆ. ಪುಣ್ಯಕ್ಕೆ ಈಸಲ ಬನಶಂಕರಿಯಲ್ಲಿ ಹನ್ನೊಂದು ನಾಟಕ ಕಂಪನಿಗಳು ಮಹಾಜಾತ್ರೆಯ ಫಲಕಂಡಿದ್ದವು. ಅದೆನೇ ಇರಲಿ ಜನಸಂಸ್ಕೃತಿಯ ಇಂತಹ ಸಮೃದ್ಧ ರಂಗಸುಗ್ಗಿಯನ್ನು ಈಬಾರಿ ಕೊರೊನಾ ಎಂಬ ಕರಾಳ ರಕ್ಕಸ ಸಾರಾಸಗಟಾಗಿ ನುಂಗಿ ನೊಣೆಯಿತು. ಶಿರಸಿಯಂತಹ ಜಾತ್ರೆಗಳ ಕ್ಯಾಂಪ್ ಕಮರಿ ಹೋಗಿ ಹತ್ತಾರು ನಾಟಕ ಕಂಪನಿಗಳು ಮುಚ್ಚಿದವು. ಸ್ಥಳಾಂತರಿಸಲೂ ಹಣದ ಕೊರತೆ. ನೂರಾರು ಕಲಾವಿದರ ಹಸಿವಿನ ಅನ್ನವನ್ನು ಕೊರೊನಾ ಕಸಿದು ಬಿಟ್ಟಿತು. ಹೆಸರು ಮಾಡಿದ, ಪ್ರಸಿದ್ದಿ ಪಡೆದ ಕೆಲವು ಕಲಾವಿದರು ಹೇಗೋ ತಿಂಗಳೊಪ್ಪತ್ತು ಬದುಕುಳಿದಾರು. ಆದರೆ ಸಣ್ಣ ಪುಟ್ಟ ಪೋಷಕ ಪಾತ್ರಮಾಡುವ ನಾಟಕ ಕಂಪನಿಯ ಕಲಾವಿದರು, ಪ್ರೇಕ್ಷಾಂಗಣದ ಗೇಟ್ ಕಾಯುವವ, ಪರದೆ ಎಳೆಯುವ ಸ್ಟೇಜ್ ಮೇಸ್ತ್ರಿ, ಬೆಳಕಿನ ಸಂಯೋಜನೆಯ ವೈರ್ಮ್ಯಾನ್, ರಂಗಪಾರ್ಟಿಯ ಸಹಾಯಕ, ನೆಲ ಅಗೆದು ಸ್ಟೇಜ್ ಕಟ್ಟುವ ರಂಗಕಾರ್ಮಿಕರು… ಹೀಗೆ ನೂರಾರುಮಂದಿ ನೇಪಥ್ಯ ಕಲಾವಿದರು ಕಂಪನಿ ನಾಟಕಗಳಿಲ್ಲದೇ ಅಸಹಾಯಕತೆಯ ಬಿಸಿಯುಸಿರು ಬಿಡುತ್ತಿದ್ದಾರೆ. ಹಾಗೆಯೇ ಕಂಪನಿ ಶೈಲಿಯ ವೃತ್ತಿ ನಾಟಕಗಳನ್ನೇ ಬದುಕುವ ಸಹಸ್ರಾರು ಸಂಖ್ಯೆಯ ಹವ್ಯಾಸಿ ಕಲಾವಿದರು, ಕ್ಯಾಸಿಯೋ, ರಿದಂಪ್ಯಾಡ್ ನುಡಿಸುವ, ಮೇಲ್ ಮತ್ತು ಫೀಮೇಲ್ ಕಂಠದಲ್ಲಿ ಹಾಡುವ ರಂಗಗೀತೆಗಳ ಗಾಯಕರು ನೋವಿನ ನಿಟ್ಟುಸಿರು ಬಿಡುವಂತಾಗಿದೆ. ನಗರ, ಪಟ್ಟಣ, ಹಳ್ಳಿ, ಹಟ್ಟಿ, ಮೊಹಲ್ಲಾಗಳ ತುಂಬೆಲ್ಲಾ ಲಾಕ್ ಡೌನ್, ಸೀಲ್ ಡೌನ್ ಗಳ ದಿಗ್ಭಂಧನ. ಪ್ರತೀವರ್ಷ ಒಂದೊಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹತ್ತಾರು ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ಸರಕಾರದ ನೆರವಿಲ್ಲದೇ ನಮ್ಮ ಗ್ರಾಮೀಣರು ತಾವೇ ನಾಟಕ ರಚಿಸಿ, ತಾವೇ ನಿರ್ದೇಶಿಸಿ, ತಾವೇ ಲಕ್ಷಗಟ್ಟಲೇ ಹಣಹಾಕಿ ಇಂತಹ ಹವ್ಯಾಸಿ ಕಲಾವಿದೆಯರನ್ನು ಆಮಂತ್ರಿಸಿ ತಾವೂ ಪಾತ್ರ ಮಾಡುತ್ತಾ ಕಂಪನಿ ಶೈಲಿಯ ವೃತ್ತಿ ನಾಟಕಗಳನ್ನು ಪ್ರದರ್ಶಿಸುವ ಮೂಲಕ ವೃತ್ತಿ ರಂಗಭೂಮಿಯ ಲೋಕ ಮೀಮಾಂಸೆ ಮೆರೆಯುತ್ತಿದ್ದರು. ಏನಿಲ್ಲವೆಂದರೂ ವರ್ಷಕ್ಕೆ ಏಳೆಂಟು ಸಾವಿರಕ್ಕೂ ಹೆಚ್ಚು ನಾಟಕಗಳು ಕನ್ನಡ ನಾಡಿನಾದ್ಯಂತ ಪ್ರದರ್ಶನಗೊಳ್ಳುತ್ತಿದ್ದವು. ಇವೆಲ್ಲವೂ ವೃತ್ತಿರಂಗಭೂಮಿ ಶೈಲಿಯ ನಾಟಕಗಳೇ. ಇವರು ಯಾರೂ ಅಪ್ಪೀ ತಪ್ಪಿಯೂ ಪ್ರಯೋಗಾತ್ಮಕವಾದ ಕಾರ್ನಾಡ, ಕಾರಂತ, ಕಂಬಾರ, ಲಂಕೇಶರ ಆಧುನಿಕ ಶೈಲಿಯ ನಾಟಕಗಳನ್ನು ಪ್ರದರ್ಶಿಸಿದವರಲ್ಲ. ಹವ್ಯಾಸಿಗಳಾಗಿದ್ದುಕೊಂಡೇ ಕಂಪನಿ ನಾಟಕಗಳ ಕವಡೆ ಲೋಬಾನ ಪೂಜೆಯ ಕಂಪು ಸೂಸುತ್ತಾ ಹಳ್ಳಿಯ ನಾಟಕಗಳಲ್ಲಿ ದುಡಿದು ವರ್ಷದ ಹಸಿವಿನೊಡಲು ತುಂಬಿಕೊಳ್ಳುತ್ತಿದ್ದರು. ಆ ಎಲ್ಲ ಕಲಾವಿದೆಯರ ಅನ್ನದ ಮೇಲೆ ಈವರ್ಷ ಕೊರೊನಾ ಕಾರ್ಗಲ್ಲು ಬಿದ್ದಿದೆ. ******** ಮಲ್ಲಿಕಾರ್ಜುನ ಕಡಕೋಳ









