ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕಟ್ಟುವ ಮುಕ್ತತೆ

ಲೇಖನ ನೂತನ ದೋಶೆಟ್ಟಿ ೧೯೮೫ ಮಿಖೈಲ್ ಗೋರ್ಬಚೇವ್ ಸೋವಿಯತ್ ರಷ್ಯಾ ಒಕ್ಕೂಟದ ಕೊನೆಯ ಅಧ್ಯಕ್ಷರಾಗಿ ಗ್ಲಾಸ್‌ನೊಸ್ಟ್ (ಮುಕ್ತತೆ) ಹಾಗೂ ಪೆರೆಸ್ಟ್ರೋಯಿಕ ಅಂದರೆ ಅದುವರೆಗೂ ಇದ್ದ ರಾಜಕೀಯ ಹಾಗೂ ಆರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಎರಡು ನೀತಿಗಳನ್ನು ಹುಟ್ಟು ಹಾಕಿದರು. ಇದರ ಫಲವಾಗಿ ೧೯೨೨ರ ಡಿಸೆಂಬರಿ ನಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದ್ದ ಸೋವಿಯತ್ ರಷ್ಯಾ ಒಕ್ಕೂಟ ಶಿಥಿಲವಾಗಿ ಛಿದ್ರ ಛಿದ್ರವಾಯಿತು.೬೩ ವರ್ಷಗಳವರೆಗೆ ಅಮೇರಿಕಾಕ್ಕೆ ಸೆಡ್ಡು ಹೊಡೆದು ನಿಂತಿದ್ದ ‘ಸೂಪರ್ ಪವರ್’ ರಾಷ್ಟ್ರ ಹೇಳ ಹೆಸರಿಲ್ಲದಂತಾಯಿತು. ರಷ್ಯಾ ಕ್ರಾಂತಿಯ ಹರಿಕಾರನಾಗಿದ್ದ ಲೆನಿನ್ನನ ಪ್ರತಿಮೆಯ ನ್ನು ಉತ್ಸಾಹದಿಂದ ಅಡ್ಡ ಮಲಗಿಸಿದ ಅಲ್ಲಿಯ ಜನ ಸಂಭ್ರಮಿಸಿದ್ದನ್ನು ಕಂಡು ವೈರಿ ರಾಷ್ಟ್ರವೆಂದೇ ಬಿಂಬಿತ ವಾಗಿದ್ದ ಅಮೇರಿಕ ತನ್ನ ಯೋಜನೆ ಫಲಿತವಾಗಿದ್ದಕ್ಕೆ ಹಾಗೂ ವಿಶ್ವದಲ್ಲಿ ತನ್ನ ಏಕಮೇವಾಧಿಪತ್ಯದ ಪ್ರತಿಷ್ಠಾಪ ನೆಗೆ ಇನ್ನಿಲ್ಲದಂತೆ ಬೀಗಿತು. ಆದರೆ ಭಾರತದಂತಹ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೂ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರ ಗಳು ಮರುಗಿದವು. ಇದಕ್ಕೆ ಕಾರಣ ಪ್ರಜಾಪ್ರಭುತ್ವ ವಿರೋಧಿ ರಾಷ್ಟ್ರದ ಅಧಃಪತನ, ಒಟ್ಟಾರೆ ಸ್ವಾತಂತ್ರ್ಯದ ಸೋಲು ಎಂಬ ಸತ್ಯದ ಅರಿವು. ಈ ಘಟನೆ ಸ್ವಾತಂತ್ರ್ಯದ ವ್ಯಾಖ್ಯಾನವನ್ನು ಹಿಗ್ಗಿಸಿದಷ್ಟೇ ಅಲ್ಲ ಅದರ ಮಹತ್ವವನ್ನು ಮತ್ತೊಮ್ಮೆ ಎತ್ತಿ ಹಿಡಿಯಿತು. ಈ ಹಿನ್ನೆಲೆಯಲ್ಲಿ ಮೂರು ದಶಕಗಳ ನಂತರ ಇಂದು ಸ್ವಾತಂತ್ರ್ಯದ ಮರು ವ್ಯಾಖ್ಯಾನ ಹಾಗೂ ಅದರ ಮಹತ್ವದ ಮರು ಚಿಂತನೆ ಅಗತ್ಯವೆನ್ನಿಸುತ್ತದೆ. ರಾಜ್ಯಶಾಸ್ತ್ರದಲ್ಲಿ ಸ್ವಾತಂತ್ರ್ಯದ ಬಗ್ಗೆ ಬಹಳ ಆಸಕ್ತಿಕರ ವ್ಯಾಖ್ಯೆಯೊಂದಿದೆ. ಅದೆಂದರೆ, ‘ ಯೂ ಹ್ಯಾವ್ ದ ಲಿಬರ್ಟಿ ಟು ಸ್ಟ್ರೆ ಚ್ ಯುವರ್ ಹ್ಯಾಂಡ್ ಅಂಟಿಲ್ ಯೂ ರೀಚ್ ಅನದರ್ ಮ್ಯಾನ್ಸ್ ನೋಸ್ ‘ ಎಂದು. ಎದುರಿನವನ/ಳ ಮೂಗಿನವರೆಗೆ ನೀನು ನಿನ್ನ ಕೈಯನ್ನು ಬೀಸುವಷ್ಟು ಸ್ವಾತಂತ್ರ್ಯ ನಿನಗಿದೆ. ಒಂದೊಮ್ಮೆ ನಿನ್ನ ಕೈ ಮೂಗಿಗೆ ಸೋಕಿತೋ ಆಗ ಅದು ಎದುರಿನವನ/ಳ ಸ್ವಾತಂತ್ರ್ಯ ಹರಣ ಹಾಗೂ ನಿನ್ನ ಸ್ವೇಚ್ಛಾಚಾರ ಎಂದು ಬಹಳ ಮಾರ್ಮಿಕವಾಗಿ ಈ ಮಾತು ಹೇಳುತ್ತದೆ. ಇಂದಿನ ಡಿಜಿಟಲ್ ಮಾಧ್ಯಮಗಳ, ಸಾಮಾಜಿಕ ಮಾಧ್ಯಮಗಳ ಯುಗದಲ್ಲಿ ಇಂತಹ ಮಾರ್ಮಿಕ ಅರ್ಥ ಸ್ವಾತಂತ್ರ್ಯಕ್ಕೆ ಇದೆಯೇ ಎಂಬುದು ಗೊಂದಲವಾಗಿಯೂ, ಪ್ರಶ್ನೆಯಾಗಿಯೂ, ಅಪ್ರಸ್ತುತವಾಗಿಯೂ ನಿಲ್ಲುತ್ತದೆ. ಇದು ಇನ್ನೊಬ್ಬರ ಮೂಗಿಗೆ ಗುದ್ದಿ ಅವರ ಸ್ವಾತಂತ್ರ್ಯವನ್ನು, ಸ್ವಾಭಿಮಾನವನ್ನು ಕೆಣಕುವ, ಅಣಕಿಸುವ ಕಾಲ.ಇದಕ್ಕೆ ಹುಟ್ಟು-ಸಾವು, ನೋವು-ನಲಿವು, ಜಾತಿ-ಮತ, ಆರ್ಥಿಕ ಮೇಲು-ಕೀಳಾಟವಾಗಲೀ,ಲಿಂಗಭೇದಗಳೇ ಆಗಲೀ ಇಲ್ಲ ! ಸಾವು-ನೋವನ್ನು ಸಂಭ್ರಮಿಸುವ ಮನೋಭಾವ ವಂತೂ ಅಮಾನವೀಯವಷ್ಟೇ ಅಲ್ಲ. ಅತ್ಯಂತ ಹೀನ ಮನಸ್ಥಿತಿ. ೨೧ನೇ ಶತಮಾನದ ಆದಿಯಲ್ಲಿ ವಿಶ್ವವೇ ಹೊಸತನಕ್ಕೆ  ಅಣಿಯಾಯಿತು. ಆಧುನಿಕತೆಯ ನಿಚ್ಚಳತೆಗೆ ಸಾಮಾಜಿಕ ಮಾಧ್ಯಮಗಳು ಹಾಗೂ ತಾಂತ್ರಿಕತೆ ಬಹಳ ಇಂಬು ಕೊಟ್ಟು ಪೋಷಿಸಿದ ಕಾಲಘಟ್ಟವಿದು. ಆದರೆ ಕೆಲವೇ ವರ್ಷಗಳಲ್ಲಿ ಈ ಆಧುನಿಕ ಮಾಧ್ಯಮಗಳು ಅಶಾಂತಿ, ದ್ವೇಷ, ಅಸೂಯೆ, ಗುಂಪುಗಾರಿಕೆ, ಸ್ವಜನ ಪಕ್ಷಪಾತದಂತಹ ದೂರ್ತತೆಗಳನ್ನು ಪೊರೆವ ತಾಣಗಳೂ, ವಾಹಕಗಳೂ ಆಗಿ ಬದಲಾದದ್ದು ಈ ಶತಮಾನದ ದುರಂತ. ಭಯೋತ್ಪಾದಕರ ಕೈಯಲ್ಲಿ ಆಧುನಿಕ ಶಸ್ತ್ರಾಸ್ತ್ರ ಗಳು ಎಷ್ಟು ಮಾರಕವಾಗಿ ಈ ಕಾಲಘಟ್ಟದಲ್ಲಿ ಪರಿಣ ಮಿಸಿದವೋ ಅದಕ್ಕಿಂತ ಘೋರ ಪರಿಣಾಮವನ್ನು ಈ ಮಾಧ್ಯಮಗಳು ಉಂಟು ಮಾಡಿವೆ. ಲೆನಿನ್ ಪ್ರತಿಮೆಯನ್ನು ಅಡ್ಡ ಮಲಗಿಸಿ ಸಂಭ್ರಮಿಸಿದಂಥ ವರ ಸಂಖ್ಯೆ ಇಂದು ಹೆಚ್ಚಿದೆ. ಸಾವಂಥ ಸಾವನ್ನು ಬಾಯಿ ಚಪ್ಪರಿಸಿ ಸವಿಯಬಲ್ಲ ಹೀನರು ಅಗಣಿತರಾಗಿದ್ದಾರೆ. ಲಂಕೇಶರ ಸಾವಿಗೆ ಕರ್ನಾಟಕದಾದ್ಯಂತ ಶೋಕ ವ್ಯಕ್ತವಾ ದಂತೆಯೇ ಅವರ ನಿರ್ಗಮನಕ್ಕೆ ಆಂತರಿಕವಾಗಿ ಸಂತಸ ಪಟ್ಟ ಮನಸ್ಸುಗಳು ಇದ್ದವು. ಅದನ್ನು ಬಹಿರಂಗವಾಗಿ ವ್ಯಕ್ತಪಡಿಸುವ, ಸಂಭ್ರಮಿಸುವ ದೂರ್ತತೆ ಆಗ ಇರಲಿಲ್ಲ. ಆದರೆ ಯೂ ಆರ್ ಅನಂತಮೂರ್ತಿಯವರ ಸಾವಿನ ಹೊತ್ತಿಗೆ ಅದಕ್ಕೆ ರೂಪ ಬಂದಿತ್ತು. ಆ ನಂತರದಲ್ಲಿ ದೇಶ ದಾದ್ಯಂತ ನಡೆದ ಅನೇಕ ಹತ್ಯೆಗಳಿಗೆ ಬಹಿರಂಗವಾಗಿ, ಘಂಟಾಘೋಷವಾಗಿ ಸಂತಸ ವ್ಯಕ್ತಪಡಿಸಿದ, ಚಪ್ಪಾಳೆ ತಟ್ಟಿ ನಕ್ಕ ಜನತೆ ಲಕ್ಷಾಂತರ. ಇದು ಮೂಲತಃ ಆದದ್ದು ಸಾಮಾಜಿಕ ಮಾಧ್ಯಮಗಳಾದ ಫೇಸ್ ಬುಕ್,ಟ್ಚಿಟರ್, ವಾಟ್ಸಾಪ್‌ಗಳ ಮೂಲಕ. ಈಗಂತೂ ಸಾವು ಮನಸ್ಸನ್ನು ಕದಡುವ, ಕಂಗೆಡಿಸುವ ವಸ್ತುವೇ ಅಲ್ಲ. ಬದಲಾಗಿ ಸಂಭ್ರಮವನ್ನು ಒಳಗೊಳ್ಳುವ ವಿಕೃತಿ.ಇದಕ್ಕೆ ಆಧುನಿಕತೆಗೆ ತೆರೆದುಕೊಂಡ, ಆಧುನಿಕ ಶಿಕ್ಷಣ ಪಡೆದ, ಆಧುನಿಕ ಚಿಂತ ನೆಯ ಪ್ರತಿಪಾದಕರೆಂದು ಬಿಂಬಿಸಿಕೊಳ್ಳುವವರೂ ಒಲಿಯುತ್ತಿರುವುದನ್ನು ಏನೆಂದು ಅರ್ಥೈಸಬೇಕು ? ಒಂದು ದಶಕದ ಹಿಂದೆ ಸಾಮಾಜಿಕ ಜೀವನದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬ ಕಳವಳ, ಆತಂಕವಿದ್ದರೆ ಈಗ ಸಂವೇದನಾರಹಿತ ಸಮಾಜದತ್ತ ಧಾಪುಗಾಲಿಕ್ಕುತ್ತಿ ರುವ ಕಾಲಕ್ಕೆ ಎಲ್ಲರೂ ಸಾಕ್ಷಿಯಾಗಬೇಕಾಗಿದೆ. ಇತರರ ನೋವಿಗೆ ನಲಿಯುವ, ನಲಿವಿಗೆ ಬೇಯುವ ಈ ಆಧುನಿಕ ಸಂಸ್ಕೃತಿಯ ಹುಟ್ಟು ಹಾಗೂ ಬೆಳವಣಿಗೆಗಳನ್ನು ೨೧ನೇ ಶತಮಾನದ ಆರಂಭದಲ್ಲಿ ಆದ ಆರ್ಥಿಕ, ರಾಜಕೀಯ ಹಾಗೂ ಧಾರ್ಮಿಕ ಬೆಳವಣಿಗೆಗೆಳ ಹಿನ್ನೆಲೆಯಲ್ಲಿ ನೋಡ ಬೇಕಾಗುತ್ತದೆ. ಹಣದ ಹಪಹಪಿ ಹಾಗೂ ವರ್ಗ-ವರ್ಣ ತಿಕ್ಕಾಟಗಳು ಸಮಾಜವನ್ನು ವಿಕೃತಿಯತ್ತ ನೂಕುತ್ತಿವೆ. ಇದನ್ನು ವಿರೋಧಿಸಿ ಏಕರೂಪಿ ಸ್ವಾಸ್ಥ್ಯ ಸಮಾಜದ ಕಲ್ಪನೆಯನ್ನು ಬಿತ್ತಿದ ಶಂಕರಾಚಾರ್ಯ, ಏಸು,ಪೈಗಂಬರ್ ಬುದ್ಧ,ಬಸವರಾದಿಯಾಗಿ ಗಾಂಧಿ, ಅಂಬೇಡ್ಕರ್ ಅವರ ವರೆಗೂ ಹರಿದು ಬಂದ ಈ ಪರಂಪರೆಯ ಇಂದಿನ ತಿರುವು ಅನಿರೀಕ್ಷಿತ ಹಾಗೂ ಆಘಾತಕರ. ಏಕರೂಪತೆಯನ್ನು ಸಾರುತ್ತ, ಬಹುರೂಪತೆಯನ್ನು ಅಪ್ಪಿಕೊಂಡು,ಒಪ್ಪಿಕೊಂ ಡು ಇಂದು ಮತ್ತೆ ಛಿದ್ರ ವಿಚ್ಛಿದ್ರ ಹಾದಿಯತ್ತ ಸಾಗಿರುವ ನಮ್ಮ ಈ ಪರಂಪರೆಯ ಬಗ್ಗೆ ಅತ್ಯಂತ ಜಾಗರೂಕರಾಗ ಬೇಕಾದ ಅವಶ್ಯಕತೆ ಹಿಂದೆಂದಿಗಿಂತ ಹೆಚ್ಚಿದೆ. ವರ್ಗ-ವರ್ಣಗಳನ್ನು ರಾಜಕೀಯವಾಗಿ ದುಡಿಸಿಕೊಳ್ಳುವ, ಊರು-ಕೇರಿ, ಕಛೇರಿಗಳಲ್ಲಿ, ಕೆಲಸದ ಜಾಗಗಳಲ್ಲಿ ಬಳಸಿಕೊಳ್ಳುವ ಜಾಯಮಾನ ಇಂದು ಸಾಮಾನ್ಯವಾಗಿದೆ. ಇದರಿಂದ ಗುಂಪುಗಾರಿಕೆ ಅತಿಯಾಗುತ್ತಿದೆ. ಈ ಪಿಡುಗು ಸಾಹಿತ್ಯ,ಸಾಂಸ್ಕೃತಿಕ ಕ್ಷೇತ್ರಗಳನ್ನೂ ಬಿಟ್ಟಿಲ್ಲ.ಆದ್ದರಿಂದಲೇ ತಮ್ಮ ತಮ್ಮ ಗುಂಪುಗಳನ್ನು ಪೊರೆಯಲು, ಪ್ರಶಸ್ತಿ ಪುರ ಸ್ಕಾರಗಳನ್ನು ನೀಡಲು ಹತ್ತಾರು ಸಂಘ ಸಂಸ್ಥೆಗಳು ಹುಟ್ಟುತ್ತಿವೆ. ಇಂಥ ಪ್ರವೃತ್ತಿಯನ್ನು ಪ್ರತಿಭಟಿಸಿದವರ ಪ್ರಾಣಾರ್ಪಣೆಯೂ ನಿರಂತರವಾಗಿದೆ.ಬಸವಣ್ಣನನ್ನು ನಿಂದಸಿದರೆ ವಚನ ಚಳುವಳಿಯ ಹಿರಿಮೆಯೇನು ಕಡಿಮೆಯಾಗುವುದೇ? ಗಾಂಧೀಜಿಗೆ ಗುಂಡಿಕ್ಕಿದರೆ ಅವರ ಸ್ವಾತಂತ್ರ್ಯ ಹೋರಾಟದ ಹಾದಿಯನ್ನು ಜಗತ್ತು ಮರೆಯುವುದೇ? ಲೇಖಕರ ಸಾವನ್ನು ಸಂಭ್ರಮಿಸಿದರೆ ಅವರ ಕೃತಿಗಳ ಮಹತ್ವವೇನು ಕಡಿಮೆಯಾಗುವುದೆ? ಈ ಪ್ರಶ್ನೆಗಳು ಹಾಗೂ ಇವಕ್ಕೆ ಉತ್ತರಗಳು ಎಲ್ಲರಿಗೂ ತಿಳಿದಿರುವಂಥದ್ದೇ. ಆದರೂ ಇವು ಇನ್ನು ಮುಂದೆ ಮತ್ತೆ ಮತ್ತೆ ಮುಖಾಮುಖಿಯಾಗುವ ಸಂದರ್ಭಗಳೇ ಹೆಚ್ಚು ಎಂಬುದನ್ನು ಪ್ರತಿ ಸಾವೂ ನಿಚ್ಚಳವಾಗಿಸುತ್ತಿದೆ. ಆರಂಭದಲ್ಲಿ ಹೇಳಿದ ಗ್ಲಾಸ್‌ನಾಸ್ಟ್  ಹಾಗೂ ಪೆರೆಸ್ತೊಯಿಕಾ ವನ್ನು ಮತ್ತೊಮ್ಮೆ ನೆನಪಿಸಿಕೊಳ್ಳೋಣ. ಕಟ್ಟುವ ಮುಕ್ತತೆ ಬೇಕೇ ಹೊರತು ಕೆಡವುವ ಮುಕ್ತತೆ ಅಲ್ಲ. ಕೆಡವುವ ಮುಕ್ತತೆಗೆ ಇಂಬು ಕೊಟ್ಟರೆ ದೇಶವೇ ನಾಶವಾಗುವ ಉದಾಹರಣೆಗಳು ನಮ್ಮ ಮುಂದಿವೆ. ಅವುಗಳನ್ನು ಗಮನಿಸಿ ನಮ್ಮ ಮುಂದಿನ ನಡೆಯನ್ನು ನಾವೇ ನಿರ್ಧರಿಸಿಕೊಳ್ಳೋಣ.                           *******************************

ಕಟ್ಟುವ ಮುಕ್ತತೆ Read Post »

ಇತರೆ, ಲಹರಿ

ಮಾಯಾ ಜಗತ್ತಿನ ಚಕ್ರವ್ಯೂಹದಲ್ಲಿ ಸಿಲುಕಿ

ಲಹರಿ ಡಾ. ಅಜಿತ್ ಹರೀಶಿ ವಾತಾವರಣ ಥಂಡಿಯಿಂದ ಕೂಡಿದೆ. ಮನಸ್ಸು ದುಪ್ಪಡಿ ಹೊದ್ದು ಮಲಗಿದೆ. ನಿನ್ನೆ ಒಂದೇ ದಿನಕ್ಕೆ ವಾಟ್ಸಾಪ್ ಗುಂಪೊಂದರಿಂದ ನಾಲ್ಕು ಜನ ಲೆಫ್ಟ್ ಆದರು. ಹೋದ ವರ್ಷ ಜುಲೈ ತಿಂಗಳಲ್ಲೇ ನಾನು ಎಲ್ಲ ಗ್ರೂಪ್ ಗಳಿಂದ ಹೊರಹೋಗಿದ್ದೆ. ಮತ್ತೆ ಕೆಲವು ಗ್ರೂಪ್ ಗಳಿಗೆ ಸೆಪ್ಟೆಂಬರ್ ತಿಂಗಳಲ್ಲಿ ಮರಳಿದ್ದೆ. ಅವರೂ ಮರಳಬಹುದು. ವಾತಾವರಣ, ವಾಟ್ಸಾಪು ಮತ್ತು ಮಾನಸಿಕತೆಯ ಜೊತೆಗೆ ಈ ಬಾರಿ ಕೊರೋನ ಯಾಡೆಡ್ ಫ್ಲೇವರ್ರು. ಫೇಸ್ಬುಕ್ ನಮ್ಮನೆ ದೇವರು! ಬೆಳಿಗ್ಗೆ ಫೇಸ್ಬುಕ್ ಮುಂದೆ ಕುಳಿತು ಭಜನೆ ಮಾಡುವಾಗ ಕಹಳೆಯ ವಿನಯ ಸಜ್ಜನರ ( 29 ) ಸಾವಿಗೆ ಸ್ಯಾಡ್ ಇಮೋಜಿ ಕೊಡುತ್ತೇನೆ. ಫೇಸ್ಬುಕ್ ತೋರಿಸುವ ಹುಟ್ಟುಹಬ್ಬದ ನೋಟಿಫಿಕೇಶನ್ ಗೆಳೆಯರಿಗೆ ಶುಭಾಶಯಗಳನ್ನು ಕೋರುತ್ತೇನೆ. ಹಾಗೆ ಕೋರುವಾಗ ಅವರು ಅಲ್ಲಿ ಆಕ್ಟೀವ್ ಇದ್ದಾರೋ ಇಲ್ಲವೋ ನೋಡಿ, ಇಲ್ಲದಿದ್ದರೆ ಅನ್ ಫ್ರೆಂಡ್ ಮಾಡಿ ಮತ್ಯಾರದೋ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡುತ್ತೇನೆ. ಅಲ್ಲೊಂದು ಆಯಾ ದಿನದ ಮೆಮೊರಿ ತೋರಿಸುವ ವಿಭಾಗವೊಂದಿರುವುದು ನಿಮಗೆ ಗೊತ್ತಿಲ್ಲದ್ದೇನಲ್ಲ. ಅಲ್ಲಿ ನಾನು 2009 ರಿಂದ, ಇದೇ ದಿನ ಹಾಕಿದ ಪೋಸ್ಟ್ ಗಳನ್ನು ತೋರಿಸುತ್ತದೆ. ನೋಡಯ್ಯ ನಿನ್ನ ಅವತ್ತಿನ ಟೇಸ್ಟು, ಪಾಪ, ಪುಣ್ಯ ಎಂದು ಚಿತ್ರಗುಪ್ತನ ಪೋಸ್ ನೀಡುತ್ತದೆ. ನಾಲ್ಕೈದು ಪೋಸ್ಟ್ ಗಳಲ್ಲಿ ಮೂರನ್ನು ಅಳಿಸಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತೇನೆ. ಆಗ ಕಡಿಮೆ ಜನ ಓದುತ್ತಿದ್ದರೆಂಬ ಸಮಾಧಾನ ಒಳಗೊಳಗೇ! ಮತ್ತೆ ಹೋಂ ಗೆ ಬರುವಷ್ಟರಲ್ಲಿ ಒಂದಿಷ್ಟು ಪೋಸ್ಟ್ ಗಳಿರುತ್ತವೆ. ಅಭಿನಂದನೆಗಳನ್ನು ಕೋರುವುದು. ಆಹ್, ಓಹ್, ಚೆನ್ನಾಗಿದೆ, ಸೂಪರ್ ಇತ್ಯಾದಿ ಕಾಮೆಂಟಿಸಿ – ನಾನು ಒಂದು ಜಬರ್ದಸ್ತ್ ಸ್ಟೇಟಸ್ ಹಾಕುತ್ತೇನೆ. ಆಮೇಲೆ ಬಿಡುವಾದಾಗಲೆಲ್ಲ ಲೈಕ್, ಕಾಮೆಂಟ್ ನೋಡಿ ಒಳಗೊಳಗೇ ಖುಷಿ ಪಡುತ್ತೇನೆ. ಮುಂದಿನ ವರ್ಷ ಇದೇ ದಿನ ಅದೊಂದು ಲಟಾರಿ ಪೋಸ್ಟ್ ಅನಿಸಿ ಅಳಿಸಬಹುದು. ಒಂದಿಷ್ಟು ಪರ ನಿಂದೆ, ಆತ್ಮಸ್ತುತಿ ಮತ್ತು ಪರ ಸ್ತುತಿ, ಆತ್ಮನಿಂದನೆಯ ಪೋಸ್ಟ್ ಗಳನ್ನು ಸ್ರ್ಕೋಲ್ ಮಾಡುತ್ತ ಮುಂದುವರೆಯುತ್ತೇನೆ. ಓಹ್! ಕಳೆದೆರಡು ದಿನಗಳಿಂದ ಇನ್ಸ್ಟಾಗ್ರಾಂ, ಟ್ವಿಟ್ಟರ್ ಮತ್ತು ಟೆಲಿಗ್ರಾಂ ಓಪನ್ ಮಾಡಿಲ್ಲ. ಸಮಯವಾಯಿತು, ವೆರಿ ಹೆಕ್ಟಿಕ್ ಡೇ ಡಿಯರ್ ಫ್ರೆಂಡ್ಸ್. ನಾಳೆ ಮತ್ತೆ ಸಿಗೋಣ ಬೈ ನೌ.*****************************

ಮಾಯಾ ಜಗತ್ತಿನ ಚಕ್ರವ್ಯೂಹದಲ್ಲಿ ಸಿಲುಕಿ Read Post »

ಇತರೆ

ಕವಿತೆಯೆಂಬ ಪುಳಕದ ಧ್ಯಾನ

ಮೊದಲ ಕವಿತೆಯ ರೋಮಾಂಚನ ಸ್ಮಿತಾ ಅಮೃತರಾಜ್ ನಿಜ  ಹೇಳಬೇಕೆಂದರೆ  ನಾನೊಬ್ಬಳು ಕವಯತ್ರಿ ಆಗುತ್ತೇನೆ ಅಂತ ಕನಸು ಮನಸಿನಲ್ಲೂ ಅಂದು ಕೊಂಡವಳಲ್ಲ. ಈಗಲೂ ಹಾಗನ್ನಿಸುತ್ತಿಲ್ಲ.  ಆದರೆ ಕೆಲವೊಮ್ಮೆ ಹುಕಿ ಹುಟ್ಟಿ ಗೀಚಿದ ಎರಡು ಸಾಲು ಅಲ್ಲಿಲ್ಲಿ ಕಾಣಿಸಿಕೊಂಡು, ಕೇಳಿಸಿಕೊಂಡು, ಅದನ್ನೇ ಕವಿತೆ ಅಂತ ಭ್ರಮಿಸಿ ನನಗೆ ಕವಯತ್ರಿ ಅನ್ನುವ ಬಿರುದಾಂಕಿತವನ್ನ ಅವರಿವರು ಯಾವುದೇ ಕವಡೆ ಕಾಸಿಲ್ಲದೆ ಪುಕ್ಕಟೆ ಕೊಟ್ಟು ಗೌರವಾದರದಿಂದ ನೋಡುವಾಗ, ನಾನು ಅದನ್ನು ಸುಖಾ ಸುಮ್ಮಗೆ ಅಲ್ಲಗಳೆದರೆ ಅದು ಸಾಹಿತ್ಯ ಲೋಕಕ್ಕೇ ಮಾಡುವ ಅಪಚಾರವಲ್ಲವೇ? ಅಂತ ನನ್ನೊಳಗೆ ನಾನೇ ತರ್ಕಿಸಿಕೊಂಡು ಒಪ್ಪಿಕೊಳ್ಳುತ್ತೇನೆ. ಅಷ್ಟಕ್ಕೂ ಎಷ್ಟು ಬೇಡವೆಂದರೂ ಒಳಗೊಳಗೆ ಒಂದು ತುಡಿತ, ಗುರುತಿಸಿಕೊಳ್ಳಬೇಕೆಂಬ ಚಪಲ ನರ ಮನುಷ್ಯರಿಗೆ ಇದ್ದದ್ದೇ ತಾನೇ?. ಅದಕ್ಕೆ ನಾನೂ ಅಪವಾದವಲ್ಲ. ಹಾಗಾಗಿ ಕವಿತೆಯಂತ ನಿರಾಪಯಕಾರಿ ಅಥವಾ ನಿರುಪ್ರದವಿಯ ಪಟ್ಟ ಗಿಟ್ಟಿಸಿಕೊಂಡರೆ ಅದರಲ್ಲಿ ತಪ್ಪಿಲ್ಲ ಅನ್ನುವುದು ನನ್ನ ಧೋರಣೆ. ಅದರಲ್ಲೂ ಕವಿತೆಯ ಸಖ್ಯವನ್ನು ಬೆಳೆಸಿಕೊಂಡರೆ ಸುತ್ತಮುತ್ತಲಿನ ಜಗತ್ತೆಲ್ಲಾ ಸುಖಮಯ ಮತ್ತು ಸುಂದರ ಅಂತ ಬಲ್ಲವರೇ ಹೇಳಿದ ಮೇಲೆ ನನಗೂ ಕವಿತೆಯ ಒಡನಾಟ ಒಳ್ಳೆಯದೇ ಅನ್ನಿಸಿತು. ಅದಿರಲಿ, ನಾನೀಗ ಹೇಳ ಹೊರಟಿರುವ ವಿಷಯ ಅದಲ್ಲ. ಅದರ ಮೊದಲನೆಯ ಪೀಠಿಕಾ ಭಾಗ. ನನಗೂ ಕವಿತೆಗೂ ಅಂಟಿದ ನಂಟಿನ ಕುರಿತು. ಅದಕ್ಕೆ ಕಾರಣವಾದ ನನ್ನ ಚೊಚ್ಚಲ ಕವಿತೆಯ ಪ್ರಸವದ ಕುರಿತು, ಅದು ಕಟ್ಟಿಕೊಟ್ಟ ಪುಳಕ ಮತ್ತು ರೋಮಾಂಚನದ ಜಗತ್ತಿನ ಕುರಿತು.   ಸರಿ ಸುಮಾರು ಇಪ್ಪತ್ತು ವರುಷಗಳ ಹಿಂದಿನ ಮಾತು. ಪದವಿ ತರಗತಿಗೆ ಕಾಲಿಟ್ಟ ಹೊತ್ತದು. ಎಲ್ಲಾ ಮಕ್ಕಳು ರಂಗು ರಂಗಿನ ಉತ್ಸಾಹದ ಬುಗ್ಗೆಗಳೇ. ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಹವ್ಯಾಸ, ಆಸಕ್ತಿ ಇತ್ತು. ಕಾಲೇಜಿನ ಕಾರ್ಯಕ್ರಮ ಬಂತೆಂದರೆ ಎಲ್ಲರೂ ಪಾದರಸಗಳೇ. ಅಪವಾದಕ್ಕೆಂಬಂತೆ ನಾನೊಬ್ಬಳು ಯಾವುದಕ್ಕೂ ಸೇರದೇ ಮೂಲೆಯಲ್ಲಿ ಮುದುಡಿಕೊಳ್ಳುತ್ತಿದ್ದೆ. ನನಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದೆಂದರೆ ಬಲು ಪ್ರಿಯವೇ. ಆದರೆ ಈ ಹಾಳೂ ಹಿಂಜರಿಕೆ ಎಲ್ಲಿಂದ ಬಂದು ತಗುಲಿಹಾಕಿಕೊಂಡಿತೋ?, ಹರವಿ ಬಿಡಿಸ ಹೊರಟರೆ ಅದೋ ಇದೋ..?ಗೊಂದಲವಾಗುವಷ್ಟು.  ಮತ್ತೆಂತ  ಮಾಡಲು ಸಾಧ್ಯ?. ಆದರೂ ಒಳಗೊಂದು ಅಭೀಪ್ಸೆ. ನಾನು ಸೈ ಎನ್ನಿಸಿಕೊಳ್ಳಬೇಕು ಅನ್ನುವುದು. ಹೀಗಿರುವಾಗ ಕಾಲೇಜಿನ ವಾರ್ಷಿಕೋತ್ಸವದ ಪ್ರಯುಕ್ತ ಕವನ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಕವಿತೆಯ ಎಬಿಸಿಡಿ ಗೊತ್ತಿರದ ನಾನು, ಅಲ್ಲೊಂದು ಇಲ್ಲೊಂದು ಬಾಲಮಂಗಳದ ಕವಿತೆಯನ್ನು ಓದಿದ್ದು ಬಿಟ್ಟರೆ, ಶಾಲೆಯ ಪಠ್ಯ ಪುಸ್ತಕದ ಕವಿತೆಗಳನ್ನು ಪರೀಕ್ಷೆಯ ದೃಷ್ಟಿಯಿಂದ ಕಣ್ಣಾಡಿಸಿದ್ದು  ಬಿಟ್ಟರೆ,  ಕವಿತೆ ಅಂದರೆ ಬುದ್ದಿವಂತರ ಬಂಡವಾಳ ಅನ್ನುವುದಷ್ಟೇ ಗೊತ್ತಿದ್ದರೂ ಸಣ್ಣ ತರಗತಿಯಲ್ಲಿ ದಡ್ಡಿ ಹುಡುಗಿಯೊಬ್ಬಳು ನೋಟ್ ಪುಸ್ತಕದ ಹಾಳೆಯ ನಡುವೆ ಕವಿತೆ ಗೀಚುತ್ತಿದ್ದದ್ದು ನಿಜಕ್ಕೂ ನನಗೆ ವಿಸ್ಮಯದಂತೆ ತೋರಿತ್ತು. ಅಲ್ಲಿಂದನೇ ಕವಿತೆಯ ಕುರಿತು ಒಂದು ರೀತಿಯ ಹೇಳಲಾಗದ ಅನೂಹ್ಯ ಆಕರ್ಷಣೆ ಇತ್ತೆಂಬುದು ಈಗ ಅನ್ನಿಸುತ್ತಿದೆ. ಆದರೆ ರಮ್ಯ ಕತೆಗಳನ್ನು, ಸಾಮಾಜಿಕ ಕಾದಂಬರಿಗಳನ್ನು ಸಿಕ್ಕಾಪಟ್ಟೆ ಓದುವ ಅಭ್ಯಾಸ ಇತ್ತು. ನಮ್ಮ ಕಾಲೇಜಿನಲ್ಲಿ ನಮಗೆ ಸಾಹಿತ್ಯ ಓದಲು ಬರೆಯಲು ಪ್ರೇರೇಪಿಸುವ ಅರ್ಥಶಾಸ್ತ್ರದ ಉಪನ್ಯಾಸಕರಿದ್ದರು. ಅವರು  ಆ ದಿನ ಪಾಠ ಮುಗಿಸಿ ಹೋಗುವ ಮುನ್ನ ಈ ಸಲ ನೀವು  ಈ ಸ್ಪರ್ಧೆಯಲ್ಲಿ ಭಾಗವಹಿಸಿ , ಈ ಕಾಲೇಜಿನಿಂದ  ಹೊರ ಹೋಗುವ ಮುನ್ನ  ಕವಿ ಪಟ್ಟ ಕಟ್ಟಿಕೊಂಡು ಹೋಗಿ ನೋಡುವಾ ಅಂತ ಸವಾಲೆಸೆಯುವಂತೆ, ತಮಾಷೆಗೋ, ಗಂಭೀರಕ್ಕೋ ಒಂದೂ ಗೊತ್ತಾಗದಂತೆ ಹೇಳಿ ಹೋದರೂ ನನ್ನ ತಲೆಯೊಳಗೆ ಹೌದಲ್ವಾ! ನಾನೂ ಯಾಕೆ ಪ್ರಯತ್ನಿಸಬಾರದು ?, ನಾನೂ ಯಾವುದಕ್ಕೂ ಬಾರದವಳು ಅಂತ ಅನ್ನಿಸಿಕೊಳ್ಳಬಾರದು ಅನ್ನುವ ಬಹುಕಾಲದ ಹಪಾಹಪಿಗೆ ತೀವ್ರವಾಗಿ ಕವಿತೆ ಬರೆಯಬೇಕು ಅಂತ ಅನ್ನಿಸತೊಡಗಿತು. ನನ್ನ ಹಾಸ್ಟೆಲ್ ಮೇಟ್  ಗೆಳತಿಯನ್ನು ಪುಸಲಾಯಿಸಿ, ಅವಳು ನನ್ನ ಜೊತೆ ಧೈರ್ಯಕ್ಕಿದ್ದಾಳೆಂಬುದನ್ನು ಖಾತ್ರಿ ಪಡಿಸಿಕೊಂಡ ಮೇಲೆ ನಾನೂ ಕವಿತೆ ಬರೆಯುವ ಸಾಹಸಕ್ಕೆ ಮುಂದಾಗಿದ್ದೆ. ನಾಳೆ ಕವಿತೆ ಸ್ಪರ್ಧೆ, ಎಂತ ಬರಿಯೋದು ಅಂತ ಮಂಡೆಗೆ ಹೊಳಿತಾನೇ ಇಲ್ಲ. ಕವಿತೆ ಎದೆಯೊಳಗಿನಿಂದ ಮೊಳೆಯಬೇಕೆಂಬುದು ಗೊತ್ತೇ ಇರಲಿಲ್ಲ. ಆದರೆ ಎದೆಯೊಳಗೆ ಅವಲಕ್ಕಿ ಕುಟ್ಟಲು ಶುರು ಮಾಡಿತ್ತು.  ಸ್ಥಳದಲ್ಲಿ ಕುಳಿತೇ ಬರೆಯಬೇಕು ಅಂತ ಮೊದಲೇ ಹೇಳಿದ್ದರು. ಯಾಕೆ ಬೇಕಿತ್ತು ಈ ಬೇಡದ ಉಸಾಬರಿ ಅಂತ ಸಾವಿರದ ಒಂದು ಬಾರಿ ನನಗೆ ನಾನೇ ಹೇಳಿಕೊಂಡಿರ ಬಹುದು. ಹಾಗೇ ಹೀಗೇ ಹೇಗೋ ಪಾಠ ಓದಿಕೊಂಡು, ನಡು ನಡುವೆ, ಸಾಯಿಸುತೆ,ತ್ರಿವೇಣಿ ಓದಿಕೊಂಡು ತೆಪ್ಪಗಿರಬಹುದ್ದಿತ್ತಲ್ಲ?. ಇನ್ನು ನಾನು ಕವಿತೆ ಬರೆದು ,ಅದನ್ನು ಓದಿ ಲೆಕ್ಚರ್ ನಗುವುದು.. ಇದೆಲ್ಲಾ ಬೇಕಾ?.ಇವನ್ನೆಲ್ಲಾ ತಲೆಯೊಳಗೆ ಹುಳದಂತೆ ಬಿಟ್ಟುಕೊಂಡು ಲೈಬ್ರರಿಗೆ ಹೋಗಿ ಅಲ್ಲಿ ಪುಸ್ತಕದೊಳಗಿದ್ದ ಕವಿತೆಯನ್ನೆಲ್ಲಾ ಜಾಲಾಡಿದ್ದೇ ಜಾಲಾಡಿದ್ದು. .ಇದನ್ನೆಲ್ಲಾ ನೆನಪಿಸಿಕೊಳ್ಳುವ ಈ ಹೊತ್ತಿನಲ್ಲಿ ನಗು ತಡೆಯಲಾರದಷ್ಟು ಬರುತ್ತಿದೆ. ಕವಿತೆ ಯಾಕೆ ಬರಿಯಬೇಕು? ಕವಿತೆ ಅಂದರೆ ಏನು ಅಂತನೂ ತಲೆ ಬುಡ ಗೊತ್ತಿಲ್ಲದ ಸಂಧಿಗ್ಧತೆಯಲ್ಲಿ ಕವಿತೆ ಬರೆಯಲು ಹೊರಟಿದ್ದೆ. ಆದರೆ ನನ್ನ ಜೊತೆಗ ಹೆಸರು ನೋಂದಾಯಿಸಿದ ಗೆಳತಿ ಈ ಕವಿತೆಗೂ ನನಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಓಡಾಡಿಕೊಂಡಿರುವುದನ್ನು ನೋಡಿದಾಗ ನಿಜಕ್ಕೂ ಗಾಬರಿಯೂ ನಗುವೂ ಒಟ್ಟೊಟ್ಟಿಗೆ ಬರುತ್ತಿತ್ತು. ನನಗೊಬ್ಬಳಿಗೆ ಯಾಕೆ ಹೀಗೆ ಆಗುತ್ತಿದೆಯೆಂದು ತಲೆ ಕೆರೆದುಕೊಂಡರೂ ಉತ್ತರ ಸಿಗುತ್ತಿರಲಿಲ್ಲ. ಇನ್ನು ಅಲ್ಲಿ ಕೂತು ಎಂತ ಕವಿತೆ ಬರೆಯೋದಪ್ಪಾ ಅಂತ ಒಂದು ವಾರದಿಂದ ಕೂತು ಯೋಚಿಸಿದರೂ  ಜಪ್ಪಯ್ಯ ಅಂದರೂ ಒಂದು ಸಾಲೂ ಹೊಳೆದಿರಲಿಲ್ಲ. ನನ್ನ ಸಂಕಟವನ್ನು ಕಡಿಮೆ ಮಾಡಲೋ ಎಂಬಂತೆ ಆ ದಿನ ಎಲ್ಲರಿಗೂ   ’ ಕಾಲ ಕಾಯುವುದಿಲ್ಲ ’ ಅನ್ನೋ  ಒಂದೇ ಶೀರ್ಷಿಕೆಯನ್ನು ಕೊಟ್ಟು ಈ ಕುರಿತು ಕವಿತೆ ಮನೆಯಲ್ಲಿ ಯೋಚಿಸಿ ಬರೆದುಕೊಂಡು ಬನ್ನಿ . ಮತ್ತೆ ಅದು ನಿಮ್ಮ ಸ್ವಂತದ್ದೇ ಆಗಿರಲಿ ಅಂತ ಎಚ್ವರಿಕೆ ಬೇರೆ ಕೊಟ್ಟಿದ್ದರು. ಬಹುಷ; ಅವರಿಗೆ ನಮ್ಮ ಮೇಲೆ ಸಣ್ಣ ಗುಮಾನಿ ಇದ್ದಂತೆ ತೋರುತ್ತದೆ.     ನಮ್ಮ ಕಾಲೇಜಿನಲ್ಲಿ ಅದಾಗಲೇ ಕವಿಗಳು ಅಂತ ಪೇಟ ಧಾರಣೆ ಮಾಡಿಕೊಂಡವರ ಒಂದು ಬಳಗ ಇತ್ತು. ಅವರನ್ನೆಲ್ಲ ನೋಡುವಾಗ ಇವರ ಮಂಡೆಲಿ ಭಯಂಕರ ಬೊಂಡು ಇದೆ ಅಂತ ನಮಗೆ ನಾವೇ ಗ್ರಹಿಸಿಕೊಂಡಿದ್ದೆವು. ಅವರನ್ನು ಕಾಲೇಜಿನಲ್ಲಿ ನೋಡುವಾಗ ಇವರೇ  ಕುವೆಂಪು, ಬೇಂದ್ರೆಯವರ ನಂತರದ ವಾರಸುದಾರರು ಅಂತ  ಭಾಸವಾಗಿ ಭಯ ಭಕ್ತಿ ಹುಟ್ಟುತ್ತಿತ್ತು. ಇವರೆಲ್ಲರ ನಡುವೆ ನಾನು ಕವಿತೆ ಬರೆಯೋದುಂಟೇ?.ಇರಲಿ ಬಿಡು ಆದದ್ದು ಆಗಲಿ, ಒಂದು ಕವಿತೆ ಬರೆದು ಲಕೋಟೆಯೊಳಗೆ ಹಾಕಿ ಗೋಂದು ಅಂಟಿಸಿ ಕೊಟ್ಟರೆ ಯಾರಪ್ಪನ ಗಂಟು ಹೋಗುವುದಿಲ್ಲ ಅಂತ ನನ್ನನ್ನು ನಾನು ಸಮಾಧಾನಿಸಿಕೊಂಡು ’ಕಾಲ ಕಾಯುವುದಿಲ್ಲ’ ಕವಿತೆಯ ಕುರಿತ ಯೋಚನೆಯಲ್ಲೇ ರಾತ್ರೆಯಿಡೀ ಕಾಲ ಕಳೆಯುತ್ತಾ  ಯೋಚಿಸಿ ಯೋಚಿಸಿ ಇನ್ನೇನು ತಲೆ ಹನ್ನೆರಡಾಣೆ ಆಗುತ್ತೆ ಅನ್ನುವಾಗ ಪಕ್ಕನೆ ಹೊಳೆದೇ ಬಿಟ್ಟಿತು ನೋಡಿ ಎರಡು ಸಾಲು. ಆರ್ಕಿಮಿಡಿಸಿಗೆ ಆದ ಸಂತೋಷ ಏನು ಎಂಬುದನ್ನು ಈಗ ನಾನು ಅನುಭವಿಸಲು ಶಕ್ಯಳಾಗಿದ್ದೆ. ದಡಕ್ಕನೆ ಎದ್ದು ಎಲ್ಲಿ ಆ ಸಾಲು ಕೈ ತಪ್ಪಿ ಹೋಗುತ್ತೋ ಅಂತ ದಿಗಿಲಿನಿಂದ ಪೆನ್ನು ಪೇಪರು ಹಿಡಿದು ಕುಳಿತೇ ಬಿಟ್ಟೆ.    ’ ಕಾಲ ಕಾಯುವುದಿಲ್ಲ ಗೆಳತೀ.. ಆಗಲೇ ಬೇಕಾದುದಕೆ  ಮರುಕವನೇಕೆ ಪಡುತೀ..’ ಪ್ರೇಮ ಪ್ರಣಯದ ನವಿರು ಸಾಲುಗಳು ಹುಟ್ಟ ಬೇಕಾದ  ಆ ಪ್ರಾಯದಲ್ಲಿ ವೇದಾಂತಿಯಂತೆ ಯಾಕೆ  ಈ ಸಾಲು ಹುಟ್ಟಿಕೊಂಡಿತೋ ಅಂತ ಹಲವು ಭಾರಿ ಯೋಚಿಸಿದ್ದಿದೆ. ಈ ವರೆಗೂ ಉತ್ತರ ದಕ್ಕಲಿಲ್ಲ. ಕವಿತೆಯೆಂದರೆ ಅದೇ ತಾನೇ ಉತ್ತರಕ್ಕೆ ನಿಲುಕದ್ದು. ಸಿಕ್ಕ ಎರಡೇ ಎರಡು ಸಾಲು ಹಿಡಿದುಕೊಂಡು , ಪ್ರಾಸ ಜೋಡಿಸಲು ತ್ರಾಸ ಪಡುತ್ತಾ ಒಂದೊಂದೇ ಸಾಲು ಜೋಡಿಸುತ್ತಾ ಅದೆಂಗೆ ಇಪ್ಪತ್ತು ಸಾಲು ಕವಿತೆ ಬರೆದೆನೋ ಆ  ಪರಮಾತ್ಮನಿಗೇ ಗೊತ್ತು.  ಮೊದಲ ಪದ್ಯ ಅದು. ಬರೆದಾದ ಮೇಲೆ ಅದೆಂಥಾ ನಿರಾಳ ಅಂತೀರಾ?. ನಿಜಕ್ಕೂ ಅಂತಹ ಒಂದು ಭಾವ ನನಗೆ ಈವರೆಗೂ ದಕ್ಕಲಿಲ್ಲ.  ಬರೆದ ಒಂದು ಪುಟವನ್ನು ಅದೆಷ್ಟು ಬಾರಿ ಶ್ಲೋಕ ಪಠಿಸುವಂತೆ ಪಠಿಸಿದೆನೋ..?. ಭಗವಂತನ ನಾಮ ಸ್ಮರಣೆ ಮಾಡಿದ್ದರೆ ಬಹುಷ; ದೇವರು ಪ್ರತ್ಯಕ್ಷ ಆಗಿ ಬಿಡುತ್ತಿದ್ದನೆನೋ. ಬಹುಮಾನ ಸಿಗುತ್ತದೆ ಅಂತ ನನಗೆ ಖಾತ್ರಿಯಿರಲಿಲ್ಲ. ಆದರೆ ತುಂಡರಿಸಿದ ಗದ್ಯದ ಸಾಲುಗಳನ್ನೇ ಕವಿತೆ ಅಂತ  ಭ್ರಮಿಸಿ ಖುಷಿ ಪಟ್ಟದ್ದಕ್ಕೆ ಎಣೆಯಿಲ್ಲ. ಮಾರನೇ ದಿನ ಏನೋ ಲವ ಲವಿಕೆ. ಕವಿತೆಗೆ ಇಷ್ಟೊಂದು ದೈವಿಕವಾದ ಶಕ್ತಿ ಇದೆಯಾ?. ಅದಕ್ಕೆ ಎಲ್ಲರಿಗೂ ಕವಿತೆ ಅಂದರೆ ಅದೇನೋ ಆಕರ್ಷಣೆ , ಅದಕ್ಕೆ ಅದರ ಹಿಂದೆ ದುಂಬಾಲು ಬಿದ್ದುಕೊಂಡು ಹೋಗುವುದು ಅಂತ ಹೊಸ ಸತ್ಯವೊಂದು ಗೋಚರವಾಯಿತು.  ನಾನು ಕಾಲೇಜಿಗೆ ಹೋಗಿ ಡೆಸ್ಕಿನ ಮೇಲೆ ಬಿಳಿ ಹಾಳೆ ಇಟ್ಟು, ರಾತ್ರೆ ಬರೆದು ಉರು ಹೊಡೆದ ಪದ್ಯವನ್ನು ಮತ್ತೊಮ್ಮೆ ಬರೆದೆ. ಪಕ್ಕದಲ್ಲಿದ್ದ  ಗೆಳತಿಗೆ ದಿಗ್ಭ್ರಮೆ ಆಗಿರಬೇಕು. ನೀನು ಅದು ಹೇಗೆ ತಟ್ಟನೆ ಕೂತಲ್ಲೇ ಕವಿತೆ ಬರಿತೀಯಾ? ಅಂತ ಪ್ರಶ್ನೆ ಹಾಕಿಬಿಟ್ಟಳು. ನಾನು ರಾತ್ರೆಯಿಡೀ ಪಾರಾಯಣ ಮಾಡಿ, ಪಠಿಸಿ, ಕಂಠ ಪಾಠ ಮಾಡಿದ್ದು ಅವಳಿಗೆ ಹೇಗೆ ತಾನೇ ಗೊತ್ತಾಗಬೇಕು?.  ನಾನೋ ನಿರ್ಲಿಪ್ತತೆಯಿಂದ ಹ್ಮೂಂ, ಹೌದು! ಏನೋ ಮನಸಿಗೆ ಬರುತ್ತಿರುವುದನ್ನು ಗೀಚುತ್ತಿದ್ದೇನೆ ಅಂತ ಅವಳಲ್ಲಿ ಕುತೂಹಲ ಮೂಡಿಸಿ ಒಳಗೊಳಗೆ ನಗುತ್ತಾ ಕವಿತೆ ಬರೆದು ಮುಗಿಸಿ,ಲಕೋಟೆಯೊಳಗಿಟ್ಟು ತಲುಪಿಸ ಬೇಕಾದವರಿಗೆ ಹರ್ರಿಬಿರ್ರಿಯಲ್ಲಿ ತಲುಪಿಸಿ ಬಂದಿದ್ದೆ. ಎರಡು ದಿನ ಬಿಟ್ಟು ಕವಿತೆ ಸ್ಪರ್ಧೆಯ ಫಲಿತಾಂಶ, ಕನ್ನಡ ಉಪನ್ಯಾಸಕರೇ ತೀರ್ಪುಗಾರರು. ನಾನು ಹಿಂದಿ ತರಗತಿಯ ವಿದ್ಯಾರ್ಥಿಯಾದರೂ ಕಾರಿಡಾರಿನಲ್ಲಿ ಕನ್ನಡ ಮೇಷ್ಟ್ರ ಕಣ್ಣು ತಪ್ಪಿಸಿ ಓಡುವುದೇ ಆಯಿತು. ಅದೆನೋ ಅಳುಕು. ಒಂದು ಕವಿತೆ ಬರೆದು ಕಣ್ಣು ತಪ್ಪಿಸಿ ಓಡಾಡುವಂತಾಯಿತಲ್ಲ!,  ದೇವರೇ, ನನ್ನೊಳಗಿನ ತಳಮಳ ಹೇಗೆ ಪದಗಳಲ್ಲಿ ಹಿಡಿದಿಡುವುದು?. ಆದರೆ ಪರಮಾಶ್ಚರ್ಯವೆಂಬಂತೆ ನಮ್ಮ ಕಾಲೇಜಿನ ಕವಿವರ್ಯರನ್ನೆಲ್ಲಾ ಮೀರಿಸಿ ನನ್ನ ಗೆಳತಿ ಮೊದಲ ಬಹುಮಾನ ಪಡೆದುಕೊಂಡರೆ, ನನಗೆ ದ್ವಿತೀಯ ಬಹುಮಾನ.  ಅಬ್ಭಾ! ಆ ದಿನ ನನ್ನ ಕಾಲು ನೆಲದ ಮೇಲೆ ನಿಲ್ಲುತ್ತಲೇ ಇರಲಿಲ್ಲ. ಬಹುಷ: ನಾನು ಗಾಳಿಯಲ್ಲಿ ತೇಲಿದಂತೆ ನಡೆಯುತ್ತಿದ್ದೆನೇನೋ. ಎಲ್ಲರಿಗೂ ಹೇಳಿದ್ದೇ ಹೇಳಿದ್ದು. ನನ್ನ ಬಾಯಿ ನೋಯಿತೋ ಇಲ್ಲವೋ ಗೊತ್ತಿಲ್ಲ, ಆದರೆ ಅವರ ಕಿವಿ ನೋವಾಗಿರ ಬಹುದು.  ನನಗೆ ನಾನೇ ದೊಡ್ಡ ಜನ ಆದಂತೆ ಭ್ರಮಿಸಿಕೊಂಡೆ. ಕವಿತೆ ಬರೆಯುವುದು ಎಷ್ಟು ಸುಲಭ ಅಲ್ಲವಾ ಅಂತ ಅನ್ನಿಸಲಿಕ್ಕೆ ಶುರುವಾಗ ತೊಡಗಿತು. ಅಭ್ಭಾ ಕವಿತೆಯೇ.. ! ಮತ್ತೆ ಪ್ರಾಸ ಪ್ರಾಸ ಸೇರಿಸಿ ಕವಿತೆ ಕಟ್ಟುವುದೇ ಆಯಿತು. ಅದೇ ಹೊತ್ತಿನಲ್ಲಿ ಪ್ರತಿಷ್ಟಿತ ಪತ್ರಿಕೆಯೊಂದು ಯುವ ಬರಹಗಾರರಿಗೆ ಪ್ರೋತ್ಸಾಹ ಕೊಡುತ್ತಾ ಅವರಿಗೆ ಸ್ಪರ್ಧೆಗಳನ್ನು ಏರ್ಪಡಿಸುತ್ತಾ , ಬಹುಮಾನ ಕೊಡುತ್ತಿದ್ದರು. ವಿಜೇತರ ಫೊಟೋ ವನ್ನು ಪತ್ರಿಕೆಯಲ್ಲಿ ಹಾಕುತ್ತಿದ್ದರು. ಅಲ್ಲೂ ಅವರು ’ಗಾಂಧೀಜಿ” ಬಗ್ಗೆ ಕವಿತೆ ಬರೆಯಿರಿ ಅಂತ ಪ್ರಕಟಣೆ ಕೊಟ್ಟಿದ್ದರು. ಮೊದಲ ಬಹುಮಾನದ ಉತ್ಸಾಹ ಇನ್ನೂ ಕಡಿಮೆ ಆಗಿರಲಿಲ್ಲ. ನಾನೂ ಬರೆದು ಹಾಕಿದೆ. ಕೆಲವೇ ದಿನಗಳಲ್ಲಿ ಅಲ್ಲಿಂದ ಪ್ರತಿಕ್ರಿಯೇ. ನಿಮ್ಮ ಕವಿತೆ ಆಯ್ಕೆ ಆಗಿದೆ ಅಂತ. ನನ್ನ ಖುಷಿ ಯಾರಿಗೆ ಹೇಳಲಿ?. ಈ ಸಾರಿ ನಾನೂ ದೊಡ್ದ ಕವಿಯಾದೆನೇನೋ ಅಂತ ಬೀಗಿ ಬಿಟ್ಟೆ. ಮರುವಾರ ಆಯ್ಕೆಯಾದ ಕವಿಗಳ ಪೊಟೋ ಹಾಕಿದ್ದರು. ರಾಶಿ ರಾಶಿ ಪೊಟೊಗಳ ಮದ್ಯೆ ನನ್ನದು ಕೊನೇಗೂ ಸಿಕ್ಕಿ ಬಿಡ್ತು. ಬಹುಷ; ಬರೆದ ಎಲ್ಲಾ ಕವಿಗಳ ಪೊಟೋ ಹಾಕಿದ್ದಿರಬಹುದೆಂದು ಆಗ ಹೊಳೆದೇ ಇರಲಿಲ್ಲ. ಅಂತೂ ಇಂತೂ ಆ ಸಾರಿ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದ ವಿದ್ಯಾರ್ಥಿ ವಿಭಾಗದ ಕವಿಗೋಷ್ಟಿಗೆ ನಾನು

ಕವಿತೆಯೆಂಬ ಪುಳಕದ ಧ್ಯಾನ Read Post »

ಇತರೆ

ನಾ ಬರೆದ ಮೊದಲ ಕವನ

ಮೊದಲ ಕವಿತೆಯ ರೋಮಾಂಚನ ಸಾಹಿತ್ಯದ ಕಡೆಗೆ ನನ್ನ ಒಲವು ಚಿಕ್ಕವಳಿರುವಾಗಿಂದಲೇ ಇದೆ. ಅಂದರೆ ಕಥೆ, ಕಾದಂಬರಿ ಓದುವುದು. ಕವನ ಬರೆಯುವುದಿರಲಿ ಓದುವದೂ ನನ್ನ ಅಳವಲ್ಲವೆಂದುಕೊಂಡವಳು ನಾನು. ಅಂತಹ ದರಲ್ಲಿ ಈಗ ನಾನು ಪ್ರಕಟಿಸಿದ ಎಂಟು ಕೃತಿಗಳಲ್ಲಿ, ಐದು ಕವನ ಸಂಕಲನಗಳು. ನನಗೇ ಆಶ್ಚರ್ಯವಾಗುತ್ತದೆ! ಗದ್ಯ ಓದುತ್ತಿರುವಾಗ ಸಾಮಾಜಿಕ, ಐತಿಹಾಸಿಕ,ಪತ್ತೇದಾರಿ ಕಾದಂಬರಿ, ವಿಜ್ಞಾನಕ್ಕೆ ಸಂಬಂಧಪಟ್ಟ ಪ್ರಭಂದ ಇತ್ಯಾದಿ ನನ್ನ ಓದಿನ ಪರಿಮಿತಿಯಲ್ಲಿ ಇರುತ್ತಿತ್ತು. ಸ್ನೇಹಿತರು ಕವನ ಓದಲು ಪುಸಲಾಯಿಸಿದರು. ಉಹುಂ, ಕಣ್ಣೆತ್ತಿ ನೋಡಿರಲಿಲ್ಲ. ಆದರೆ ನಿವೃತ್ತಿ ಹೊಂದಿದ ಮೇಲೆ ಬರೆಯಲು ಪ್ರಾರಂಭಿಸಿದಾಗ ಮೊದಲು ಬರೆದದ್ದು ಕವನವೇ. ಅದಕ್ಕೊಂದು ಸ್ವಾರಸ್ಯಕರ ಘಟನೆಯಿದೆ. ನಾನೊಂದು ಮಹಿಳಾಮಂಡಳದ ಸದಸ್ಯೆ. ಮಂಡಳದ ವಾರ್ಷಿಕೋತ್ಸವದ ಅಂಗವಾಗಿ ಸದಸ್ಯೆಯರು ಒಂದು ನಾಟಕ ಆಡಬೇಕೆಂದು ನಿರ್ಧರಿಸಲಾಗಿತ್ತು. ಒಬ್ಬ ಸದಸ್ಯೆ ನಾಟಕ ಬರೆದಿದ್ದರೆ, ಉಳಿದವರು ಪಾತ್ರಧಾರಿಗಳು. ನನಗೂ ಒಂದು ಪಾತ್ರವಿತ್ತು ಅದರಲ್ಲಿ. ಸಾಮಾಜಿಕ ನಾಟಕದ ಹೆಸರು ‘ಆಯುಷ್ಯಕ್ಕೆ ಒಂದಿಷ್ಟು ರೇಶನ್’. ನಾಟಕದ ರಿಹರ್ಸಲ್ ಸುರುವಾದಮೇಲೆ ಡೈರೆಕ್ಟರ್ ಹೇಳಿದರು – ಇದಕ್ಕೆ ಒಂದು ಟೈಟಲ್ ಸಾಂಗ್ ಇದ್ದರೆ ಚೆನ್ನಾಗಿತ್ತು ಅಂತ. ಒಂದೆರಡು ದಿವಸ ಅದಕ್ಕೆ ವ್ಯವಸ್ಥೆ ಆಗಲಿಲ್ಲ. ನಾನೇ ಯಾಕೆ ಬರೆಯಬಾರದು? ಅನ್ನಿಸಿತು. ಸರಿ ಮುಂದೆ ಎರಡು ದಿನದಲ್ಲಿ ಒಂದು ಕವನ ತಯಾರಾಯಿತು, ಆಯುಷ್ಯ ಬೇಕೇ ಆಯುಷ್ಯ ಶೀರ್ಷಿಕೆ ಇಟ್ಟುಕೊಂಡು. ಪ್ರಾಸಬದ್ಧವಾಗಿಯೇ ಬರೆದಿದ್ದೆ.  ಗೆಳತಿ (ಡೈರೆಕ್ಟರ್) ಗೆ ಒಯ್ದು ತೋರಿಸಿದೆ. ಆದರೆ ನಾನು ಬರೆದದ್ದು ಅಂತ ಮಾತ್ರ ಹೇಳಲಿಲ್ಲ. ನನ್ನ ಬಗ್ಗೆ ನನಗೇ ವಿಶ್ವಾಸವಿರಲಿಲ್ಲ. ನನ್ನ ಪತಿ ಮಹಾಶಯರಿಗೆ ನಾಟಕದ ಹುಚ್ಚಿತ್ತು. ಅಲ್ಲದೆ ಅಲ್ಪ ಸ್ವಲ್ಪ ಬರೆಯುವ ಅಭ್ಯಾಸವಿತ್ತು. ಹೀಗಾಗಿ, ನಾನು ಬರೆದ ಕವನವನ್ನು ಅವರು ಬರೆದು ಕೊಟ್ಟಿರುವರು ಎಂದು ಹೇಳಿಬಿಟ್ಟೆ. ಗೆಳತಿಗೆ ಒಪ್ಪಿಗೆಯಾಯಿತು. ಧಾಟಿ ಹಚ್ಚಿ ಹಾಡಿ, ನೋಡಿ, ಪಾಸ ಮಾಡಿಬಿಟ್ಟರು. ವಾರ್ಷಿಕೋತ್ಸವ ಆಚರಣೆಯಲ್ಲಿ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಇದಾದಮೇಲೆ ಯಾರಿಗಾದರೂ ಇದನ್ನು ತಿಳಿಸಿ ನನ್ನ ಸಂತೋಷ ಹಂಚಿಕೊಳ್ಳಬೇಕೆಂದು ತುಡಿಯುತ್ತಿದ್ದೆ. ನನ್ನ ಗಂಡನಿಗೆ ಬಿಟ್ಟರೆ ಯಾರಿಗೂ ವಿಷಯ ತಿಳಿದಿರಲಿಲ್ಲ. ನನಗೆ ಬರೆಯುವ ಹುಮ್ಮಸ್ಸು, ವಿಶ್ವಾಸ ಉಕ್ಕೇರತೊಡಗಿತು. ತಲೆಯಲ್ಲಿರುವ ಕೆಲವು ವಿಚಾರಗಳಿಗೆ ಮನಸ್ಸಿನ ಭಾವನೆಗಳ ಪ್ರನಾಳಿಯಲ್ಲಿ ಹಾಕಿ ಮತ್ತೆರಡು ಕವನ ಬರೆದೆ. ನನ್ನಮ್ಮನಿಗೆ ನುಡಿನಮನ ಮತ್ತು ಮಹಿಳೆಯ ಶೋಷಣೆಯ ಬಗೆಗೆ. ನಾನೂ ಬರೆಯಬಹುದೆನ್ನಿಸಿತು. ಅಲ್ಲಿಂದ ಪ್ರಾರಂಭವಾದ ಕವನ ಯಾನ, ಐದು ವರ್ಷಗಳಲ್ಲಿ ೩೫೦ ಕವನ ಗಳನ್ನೊಳಗೊಂಡ ಐದು ಕೃತಿಗಳು ಹೊರಬಂದವು. ಮೊದಲ ಸಂಕಲನಕ್ಕೆ ಪ್ರಶಸ್ತಿ ಲಭಿಸಿತು. ಮತ್ತೆ ಹಲವಾರು ಕವನಗಳು ಬಹುಮಾನಕ್ಕೆ ಪಾತ್ರವಾದವು. ಮೊದಲು ಬರೆದ ಕವನ ಬಹಳ ಕಚ್ಚಾ ಇದೆ. ಈಗ ನನಗೆ ಗೊತ್ತಾಗುತ್ತದೆ. ಆದರೆ ಅದು ನನ್ನ ಮೊದಲ ಮಗು ಇದ್ದಂತೆ. ಅಪಾರ ಪ್ರೀತಿಗೆ ಪಾತ್ರವಾಗಿದೆ. **********************

ನಾ ಬರೆದ ಮೊದಲ ಕವನ Read Post »

ಇತರೆ

ಮೊದಲ ಕವಿತೆ

ಮೊದಲ ಕವಿತೆಯ ರೋಮಾಂಚನ ಶೀಲಾ ಭಂಡಾರ್ಕರ್ ನಾನು ಮೊದಲ ಕವಿತೆ ಬರೆದಾಗ ಅದು ಪದ್ಯವೋ ಗದ್ಯವೋ ನನಗೇ ತಿಳಿಯಲಿಲ್ಲ. ನಾನದನ್ನು ಕವಿತೆ ಅಂದುಕೊಂಡೆ ಅಷ್ಟೇ. ಬರೆಯಬೇಕೆಂದು ಬರೆದುದಲ್ಲ ಅದು ಕಾಳಿದಾಸನ ಬಾಯಿಯಿಂದ ಆಕಸ್ಮಿಕವಾಗಿ ನಿರರ್ಗಳವಾಗಿ ಶ್ಯಾಮಲಾ ದಂಡಕದ ಮಾಣಿಕ್ಯ ವೀಣಾ ಶ್ಲೋಕ ಹೊರಹೊಮ್ಮಿದಂತೆ ನನ್ನ ಮನಸ್ಸಿನೊಳಗೆ ಕೆಲವು ಸಾಲುಗಳು ಹಾಗೆ ಹಾಗೆಯೇ ಬರಲು ಶುರುವಾದವು. ಅಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೊಂದು ರಾತ್ರಿ. ಎಂದಿನಂತೆ ಅದೂ ಒಂದು ರಾತ್ರಿ. ಮಲಗಿದರೆ ನಿದ್ದೆ ಹತ್ತುತ್ತಿಲ್ಲ. ಏನೇನು ಮಾಡಿದರೂ ಪ್ರಯತ್ನ ಫಲಕಾರಿ ಆಗುತ್ತಿಲ್ಲ. ಅಂದರೆ ಕಣ್ಣು ಮುಚ್ಚಲೂ ಆಗದು, ಕಿವಿ ಬಿಚ್ಚಲೂ ಆಗದು ಅಂತಹ ಸನ್ನಿವೇಶ. ಎಷ್ಟು ಹೊರಳಾಡಿದರೂ ನಿದ್ದೆ ಬರದೆ ಹುಚ್ಚು ಹಿಡಿಯುವುದೊಂದು ಬಾಕಿ. ಈಗಿನಷ್ಟು ಧೈರ್ಯವಿದ್ದಿದ್ದರೆ ಏನೋ ಭಯಂಕರವಾದ್ದು ಘಟಿಸುತಿತ್ತು. ನಾನೇನಾದರೂ ವಿದೇಶದಲ್ಲಿ ಜನಿಸಿದ್ದಿದ್ದರೆ ಅದೇ ವಿಷಯಕ್ಕೆ ವಿಚ್ಛೇದನವೂ ಆಗುತಿತ್ತು. ಆದರೆ ಭಾರತ ದೇಶದಲ್ಲಿ ಜನಿಸಿದ್ದರಿಂದ, ಭಾರತೀಯ ನಾರಿಯಾಗಿ ಇನ್ನೇನೂ ಮಾಡಲು ತೋಚದೆ ಪುಂಖಾನುಪುಂಖವಾಗಿ ತಲೆಯೊಳಗೆ ಬಂದ ಸಾಲುಗಳನ್ನು ಸೇರಿಸಿ ಏನೋ ಬರೆದೆ. ಅದೇ ನಾನು ಬರೆದ ಮೊದಲ ಕವಿತೆ. ಕವಿತೆಯ ಶೀರ್ಷಿಕೆ “ನನ್ನವರ ಗೊರಕೆ”. ಮದುವೆಯಾದಾಗಿನಿಂದಲೂ ಇವರ ಗೊರಕೆ ಅಭ್ಯಾಸವಾಗಿದ್ದರೂ.. ಒಮ್ಮೊಮ್ಮೆ ಚಿತ್ರ ವಿಚಿತ್ರ ಸ್ವರಗಳು ಹೊರಹೊಮ್ಮುವಾಗ ಬದುಕೇ ಅಸಹನೀಯವೆನಿಸುವುದುಂಟು. ಆ ದಿನ ಅಂತಹದ್ದೇ ಸಂದರ್ಭ. ಮಂದ್ರದಿಂದ ಶುರುವಾಗಿ ತಾರಕಕ್ಕೇರಿ ಪಂಚಮ ಸ್ವರದಲ್ಲಿ ಕರ್ಣಕಠೋರ.. ಹಳೆಯ ಪಿಟೀಲಿನ ತುಕ್ಕು ಹಿಡಿದ ತಂತಿಯನ್ನು ಉಜ್ಜುವ ಸಂಗೀತ. ನೀವೇ ಯೋಚಿಸಿ ನನ್ನ ಸ್ಥಿತಿ ಹೇಗಿರಬಹುದು? ನನಗೆ ಇನ್ನೊಂದು ಆಶ್ಚರ್ಯವೆಂದರೆ ಪಕ್ಕದಲ್ಲಿ ಮಲಗಿದ ನನಗೆ ಸಹಿಸಲು ಅಸಾಧ್ಯವಾದರೆ ತಾನೇ ಹೊಡೆಯುತ್ತಿರುವ ಗೊರಕೆಯಿಂದ ಅವರಿಗೆ ಎಚ್ಚರವಾಗದು ಹೇಗೆ? ಒಮ್ಮೊಮ್ಮೆ ಲಾರಿ ಘಟ್ಟ ಹತ್ತುವುದೂ ಇದೆ, ಒಮ್ಮೊಮ್ಮೆ ಎಣ್ಣೆ ಹಾಕದ, ತುಕ್ಕು ಹಿಡಿದ ರಾಟೆಯಿಂದ ನೀರು ಸೇದುವಂತೆ ಕೇಳಿಸುವುದೂ ಇದೆ. ರಾತ್ರಿಯ ನೀರವತೆಯಲ್ಲಿ ಮೂಡಿ ಬಂದ ನನ್ನ ಮೊದಲ ಕವನ ಬರೆದ ಮೇಲೆ ನನ್ನೊಳಗೆ ಏನೋ ಪುಳಕ. ಜೊತೆಗೆ ಸಣ್ಣದೊಂದು ನಡುಕ. ನನ್ನವರಿಗೇನಾದರೂ ನನ್ನ ಕವನದ ಬಗ್ಗೆ ತಿಳಿದರೆ ಆಮೇಲಿನ ಪರಿಣಾಮಗಳನ್ನು ಊಹಿಸಿ ಹೊಟ್ಟೆಯೊಳಗೇನೋ ವಿಚಿತ್ರ ಭಯ ಶುರುವಾದರೂ ಮೊದಲ ಕವನವನ್ನು ಅಳಿಸಲು ಮನಸ್ಸು ಬರಲಿಲ್ಲ. ನೋಡಿದರೆ ನೋಡಲಿ.. ಅವರಿಗೂ ತಿಳಿಯಲಿ ಪರೋಕ್ಷವಾಗಿ ತಾನು ಒಂದು ಪಾಪದ ಪ್ರಾಣಿಗೆ ಎಂಥಾ ದೊಡ್ಡ ಹಿಂಸೆ ಕೊಡುತ್ತಿರುವೆನೆಂಬ ಅರಿವು ಮೂಡಲಿ. ಇನ್ನೂ ಏನೇನೋ ದೊಡ್ಡ ದೊಡ್ಡ ಶಬ್ದಗಳೊಂದಿಗೆ ಮನಸ್ಸಿನಲ್ಲೇ ಧೈರ್ಯ ತಂದುಕೊಳ್ಳಲು ನೋಡಿದೆ. ಯಾಕೆಂದರೆ, ಯಾವಾಗಲಾದರೂ ಗೊರಕೆಯ ಬಗ್ಗೆ ಮಾತು ಬಂದಾಗ ನಾನು ಗೊರಕೆ ಹೊಡೆಯುವುದೇ ಇಲ್ಲ ಎಂದು ವಾದಿಸುತಿದ್ದರು. ಯಾರು ಹೇಳಿದರೂ ಒಪ್ಪಿಕೊಳ್ಳುತ್ತಿರಲಿಲ್ಲ. ಈ ನನ್ನ ಮೊದಲ ಕವನ ಅವರ ಕಣ್ಣಿಗೆ ಯಾವತ್ತೂ ಬೀಳದಿರಲಿ, ಬಿದ್ದರೂ ನಕ್ಕು ಸುಮ್ಮನಾಗಲಿ ಎಂದು ಹರಕೆಯನ್ನೂ ಹೊತ್ತುಕೊಂಡೆ. ಹರಕೆ ಫಲಿಸಿದೆ. ಇಂದಿನವರೆಗೆ ಅವರ ಕಣ್ಣಿಗೆ ಗೊರಕೆ ಕವನ ಬಿದ್ದಿಲ್ಲ. ಆದರೆ ಇನ್ನೂ ಗೊರಕೆ ಹೊಡೆಯುವುದು ನಿಂತಿಲ್ಲ. ಕವಿತೆಯನ್ನು ಸ್ನೇಹಿತರ ಜೊತೆ ಹಂಚಿಕೊಂಡಾಗ ಮಾತ್ರ ಒಳ್ಳೆಯ ಪ್ರತಿಕ್ರಿಯೆ ಬಂತು. ಹೆಚ್ಚಿನವರು ತಮ್ಮ ತಮ್ಮ ಗಂಡಂದಿರ ಗೊರಕೆಯ ಬಗ್ಗೆಯೂ ಹೇಳಿಕೊಂಡರು. ನನ್ನ ಸೋದರಮಾವ ನನ್ನ ಕವಿತೆಯಿಂದ ಪ್ರಭಾವಿತನಾಗಿ ಅವರ ಹೆಂಡತಿಯ ಗೊರಕೆಯ “ನನ್ನವಳ ಗೊರಕೆ” ಎಂಬ ಕವಿತೆಯನ್ನು ಬರೆದರು. ಮೊದಲ ಕವಿತೆಯ ಪುಳಕವನ್ನು ಕದ್ದು ಮುಚ್ಚಿಯೇ ಅನುಭವಿಸುವಂತಾಯ್ತು. ಮನೆಗೆ ಬಂದವರ್ಯಾರಾದರೂ ನಿನ್ನ ಕವಿತೆ ಚೆನ್ನಾಗಿತ್ತು ಅನ್ನುವುದರೊಳಗೆ ಅವರಿಗೆ ಕೈ ಬಾಯಿ ಸನ್ನೆ ಮಾಡಿ ಮುಂದೆ ಮಾತನಾಡದಂತೆ ತಡೆಯುತಿದ್ದೆ. ಮುಂದೆ ಒಮ್ಮೆ ಕೊಂಕಣಿ ಸಾಹಿತ್ಯ ಸಮ್ಮೇಳನದ ಕವಿಗೋಷ್ಟಿಯಲ್ಲಿ ಅದೇ ಕವಿತೆಯನ್ನು ಕೊಂಕಣಿಗೆ ಭಾಷಾಂತರಿಸಿ ಓದುವಾಗ ಎರಡೆರಡು ಸಲ ನನ್ನವರು ಅಲ್ಲಿ ಇಲ್ಲದುದನ್ನು ಖಾತ್ರಿ ಮಾಡಿಕೊಂಡ ಮೇಲೆಯೇ ಓದಿದ್ದೆ. ಏನೇ ಹೇಳಿ .. ಹೇಗೇ ಇದ್ದರೂ ಮೊದಲ ಕವಿತೆಯ ಸಂಭ್ರಮವೇ ಬೇರೆ. *****************

ಮೊದಲ ಕವಿತೆ Read Post »

ಇತರೆ

ಜ್ವಾಲೆಗಳ ನಡುವೆ…ಹುಟ್ಟಿದ ಕಾವ್ಯ

ಮೊದಲ ಕವಿತೆಯ ರೋಮಾಂಚನ ನಾಗರಾಜ ಹರಪನಹಳ್ಳಿ ನಾನು ಸಾಹಿತ್ಯದ ವಿದ್ಯಾರ್ಥಿ. ಉಪನ್ಯಾಸಕ ಆಗಬೇಕೆಂದು ಕೊಂಡಿದ್ದೆ. ಆಗಿದ್ದು ಪತ್ರಕರ್ತ. ಬಿಡುವಿನ ಮಧ್ಯೆ ಸಾಹಿತ್ಯದ ಓದು, ಬರಹ ಇದ್ದೇ ಇದೆ. ನನ್ನ ಮೊದಲ ಕವಿತೆ ಪ್ರಕಟವಾದದ್ದು ದಾವಣಗೆರೆಯ ಹೊಯ್ಸಳ ಪತ್ರಿಕೆಯಲ್ಲಿ. ೧೯೯೨ ರ ಸಮಯ. ಕವಿತೆಯ ಶೀರ್ಷಿಕೆ “ಕಲೆಗಳು” ಅಂತ ನೆನಪು.‌ ಸಾಹಿತ್ಯ ಸಂಗಾತಿ ಆ ಕವಿತೆಯ ನೆನಪಿಸಿತು.‌ಹೊಯ್ಸಳದ ಪ್ರತಿ ಸಿಕ್ಕೀತೆಂದು ಹುಡುಕಾಡಿದೆ.‌ ಸಿಗಲಿಲ್ಲ.‌ ಕವಿತೆ ಬಂಧ ಗಟ್ಟಿಯಾಗಿರಲಿಲ್ಲ.‌ ಬಂಡಾಯ  ಶೈಲಿಯ ಕವಿತೆಯಾಗಿತ್ತು. ೧೯೯೧-೯೨ ಸಮಯದಲ್ಲಿ ಫ್ರೆಂಚ್ ಲೇಖಕರಾದ ಅಲ್ಬರ್ಟ  ಕಾಮ್ಯು  ಹಾಗೂ ಕಾಫ್ಕ ನನ್ನ ಕಾಡಿದ್ದರು.ಪ್ರಭಾವಿಸಿದ್ದರು. ಅವರ ಕೃತಿಗಳನ್ನು ಕನ್ನಡದಲ್ಲಿ ಡಿ.ಎ.ಶಂಕರ್ ಅವರ ಅನುವಾದದ ಮೂಲಕ ಓದಿಕೊಂಡಿದ್ದೆ. ಎಂ.ಎ.ಮುಗಿಸಿ ನೌಕರಿ ಸಿಗದ ದಿನಗಳವು. ಹಾಗಾಗಿ ಬದುಕು ಸಂಕೀರ್ಣ ಸ್ಥಿತಿಯಲ್ಲಿತ್ತು, ನನ್ನದು ಸದಾ ಪ್ರೇಮಿಯ ಮನಸು, ಜೊತೆಗೆ ಆದರ್ಶಗಳು, ವ್ಯವಸ್ಥೆಯ ಬಗ್ಗೆ ಬೆಂಕಿಯಂತಹ ಕೋಪ. ಅದು ಈಗಲೂ ಇದೆ . ಹೀಗೆ ಇರುತ್ತಾ ಕಲೆಗಳು ಅಂತ ಕವಿತೆ ಬರೆದು ಕಲಾವಿದರೂ,  ಹೊಯ್ಸಳ ಪತ್ರಿಕೆಯ ಸಂಪಾದಕರು ಆದ ಶಂಕರ್ ಪಾಟೀಲರಿಗೆ ತೋರಿಸಿದೆ.  (ಅವರು ಕಾಣಲು ನಟ  ಅಮೂಲ್ ಪಾಲೇಕರ್ ತರಹ ಇದ್ದರು).‌  ಕವಿತೆ ಗಮನಿಸಿದ ಶಂಕರ ಪಾಟೀಲ ಸರ್, ” ಇನ್ನು ಪಕ್ವತೆ ಬೇಕು ಅಂದರು” .  ಅದಕ್ಕ ನಾನು “ಸರ್ ಇದೇ ಕವಿತೆಯನ್ನು ನಿಮಗೆ ಚಂಪಾ ಕಳಿಸಿದ್ದರೆ ನೀವು ಹಿಂದ ಮುಂದ ನೋಡ್ದ ಹಾಕೋತ್ತಿದ್ದಿರಿ”  ಅಂದು ಬಿಟ್ಟೆ. ತಕ್ಷಣ ಕವಿತೆ ತಗೊಂಡು , ಮತ್ತೊಮ್ಮೆ ಕಣ್ಣಾಡಿಸಿ , ಮುದ್ರಣಕ್ಕ ಒ.ಕೆ.ಮಾಡಿದ್ರು.‌ಮರುದಿನ ಹೊಯ್ಸಳ ಪತ್ರಿಕೆಯೊಳಗ ಕಲೆಗಳು ಕವಿತೆ ಪ್ರಕಟವಾಯಿತು. ಸಂತೋಷಕ್ಕ ಪಾರವೇ ಇರಲಿಲ್ಲ. ಆ ಕವಿತೆಯ ಪ್ರಾರಂಭ ಹೀಗಿತ್ತು…. ನನ್ನ ಅಂಗೈ,ಕಾಲು ಮುಂತಾದ ಕಡೆಗಳಲ್ಲಿ ತಟ್ಟನೆ ಕಣ್ಣಿಗೆ ತಬ್ಬುವ ಕಲೆಗಳು ಎಷ್ಟೊಂದು ಕತೆಗಳಿವೆ ರೂಪ ನೀಡುತ್ತವೆ ಕಲೆಗಳು ಕಲೆಗಳ ಹಿಂದಿನ ನೋವುಗಳು ನೋವುಗಳ ಹಿಂದಿನ ಕ್ಷಣಗಳು ನೋವುಗಳು ಮಾಸಿವೆ ಕಾಲ ಪ್ರವಾಹದ ತೊರೆ ಬತ್ತಿಹೋಗಿದೆ; ಈಗ ಬರೀ ನೆನಪು ಮಾತ್ರ ಈಗ ಒಮ್ಮೊಮ್ಮೆ ಆಕ್ರೋಶ ಹುಟ್ಟಿಸುತ್ತವೆ ಹುಟ್ಟಿದಷ್ಟೆ ವೇಗವಾಗಿ ಸತ್ತು ಹೋಗುತ್ತವೆ ಎಲ್ಲಾ ಕ್ರೂರ ಭ್ರಷ್ಟತೆಗಳ ವಿರುದ್ಧ ,ನೀಚತನದ ವಿರುದ್ಧ ಸಮರ ಸಾರುತ್ತವೆ… ಕಲೆಗಳು(9.10.1992) ….ಹೀಗೆ ಬರೆಯುತ್ತಿದ್ದ ನಾನು  ಅರೆಬೆಂದ ಕವಿತೆಗಳನ್ನು ಮುಂದೆ  ಪ್ರಕಟಿಸಲಿಲ್ಲ. ಓದಲು ಪ್ರಾರಂಭಿಸಿದೆ.  ಅಲ್ಲಿಂದ ಉದ್ಯೋಗಕ್ಕಾಗಿ ಕಾರವಾರ ಬಳಿಯ ಸದಾಶಿವಗಡಕ್ಕೆ ಬಂದೆ.  ಕವಿತೆ ಬರೆಯುವ ಹಂಬಲವಿತ್ತೇ ವಿನಃ ಬರೆದಿರಲಿಲ್ಲ.‌ ಆದಾಗಲೇ ಸಂಕ್ರಮಣ, ಲಂಕೇಶ್ ಪತ್ರಿಕೆ ನನ್ನ ವಿಚಾರಧಾರೆಯ ರೂಪಿಸಿದ್ದವು. ೧೯೯೭ರ ಹೊತ್ತಿಗೆ ಉಪನ್ಯಾಸಕ ಹುದ್ದೆಯಿಂದ ಪತ್ರಕರ್ತ ವೃತ್ತಿಗೆ ಬಂದಿದ್ದೆ.   “ಜಾಲ್ವೆಗಳ ನಡುವೆ” ಎಂಬ ಕವಿತೆಯನ್ನು ಸಂಕ್ರಮಣ ಪತ್ರಿಕೆಗೆ  ಕಳುಹಿಸಿದ್ದೆ. ಅದು ಜನೇವರಿ 1997ರ ಸಂಚಿಕೆಯಲ್ಲಿ ಪ್ರಕಟವಾಯಿತು. ಆಗ ನನಗೆ ಕವಿತೆ ಬರೆಯುವ ಹುಮ್ಮನಸು ಇಮ್ಮಡಿಸಿತು. ಅದೇ ವರ್ಷ ಆಗಸ್ಟಿನಲ್ಲಿ ಸ್ವಾತಂತ್ರೋತ್ಸವ ಕವಿತೆ ಪ್ರಕಟವಾಯಿತು.   1997   ಅಥವಾ 1998ರಲ್ಲಿ ಕಾರವಾರದ ದೇವಭಾಗದಲ್ಲಿ ಸಾಹಿತ್ಯ ಕಮ್ಮಟ ನಡೆದಿತ್ತು. ಆಗ ಶಾಂತರಸರು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು. ಕಮ್ಮಟದ ಬಿಡುವಿನ ಮಧ್ಯೆ ನನ್ನ ಜೊತೆ  ಮಾತಾಡುತ್ತಾ   ಏನ್ ಬರಿದಿರಿ ಅಂತ ವಿಚಾರಿಸಿದ್ರು. ನಾನು ಸಂಕ್ರಮಣದ ಕವಿತೆ ಬಗ್ಗೆ ಪ್ರಸ್ತಾಪಿಸಿದೆ. ”  ಹೌದಾ,  ಸಂಕ್ರಮಣದಲ್ಲಿ ಕವಿತೆ ಪ್ರಕಟ ಅಗ್ಯಾವ. ಹಾಗಾದರೆ ನೀವು ಕವಿ ಅಂದರು” . ಅವರ  ಆ ಮಾತು ” ನನ್ನ ಸಾಹಿತ್ಯ ಬದುಕಿಗೆ ಉಸಿರು ತುಂಬಿದ ಮಾತು” .  ಅಲ್ಲೇ ಇದ್ದ  ಕವಿ, ನಾಟಕಕಾರ, ಸಂಕ್ರಮಣದ ಸಂಪಾದಕರೂ  ಆದ  ಚಂದ್ರಶೇಖರ  ಪಾಟೀಲರು ಬೆನ್ನು ತಟ್ಟಿದರು. ಕತೆಗಾರ ರಾಮಚಂದ್ರ ಶರ್ಮ ಕಣ್ಣು ಮಿಟುಕಿಸಿದರು. ಈ ಸಂದರ್ಭ ನನ್ನಲ್ಲಿ ಸಾಹಿತ್ಯದ ಜೀವಸೆಲೆ ಹೆಚ್ಚಿಸಿತು. ವಚನ ಸಾಹಿತ್ಯದ ಓದು ನನ್ನ ಮೇಲೆ ಗಾಢ ಪ್ರಭಾವ ಬೀರಿತು.  ಹೈಸ್ಕೂಲ್ ಕಲಿಯುವ ವೇಳೆಗೆ ಸಮುದಾಯ ತಂಡ ನಮ್ಮ ಚಿಗಟೇರಿ ಹೈಸ್ಕೂಲ್ ಗೆ ಬಂದು ಪಿ.ಲಂಕೇಶರ  ಸಂಕ್ರಾಂತಿ ನಾಟಕ ಪ್ರದರ್ಶನ ಮಾಡಿತ್ತು. ಬಸವಣ್ಣ, ಬಿಜ್ಜಳ, ಹರಳಯ್ಯ, ಮಾದರಸ, ಅವರ ಮಕ್ಕಳು ನನ್ನ ಎದೆಯೊಳಗ ಉಳಿದು ಬಿಟ್ಟಿದ್ದರು. ಅಲ್ಲಮ ,ಅಕ್ಕಮಹಾದೇವಿ ದಿನವೂ ದಂಡೆಯೊಳಗ ನೆನಪಾಗುತ್ತಿದ್ದರು, ಬಯಲು, ಆಕಾಶ, ಮುಗಿಲು ,ಕಡಲು ನನ್ನ ಮನದೊಳಗ ತುಂಬಿ ತುಳುಕತೊಡಗಿದವು. ಹೀಂಗ ನನ್ನ ಕವಿತಾ ಪಯಣ ಆರಂಭವಾಯಿತು. ಆಕಾಶಕ್ಕ ನಕ್ಷತ್ರ ತೋರಿದೆ. ಅಕ್ಷರ ಎದಿಗ ಹಾಕಿಕೊಂಡು ದಾರಿಯಲ್ಲಿ ನಡೆದೆ…ಕವಿತೆ ನನ್ನ ಕೈಹಿಡಿದವು… ಇಷ್ಟೆಲ್ಲಾ ನೆನಪಿನ ಸವಾರಿ ಮಾಡ್ಲಿಕ್ಕ ಸಾಹಿತ್ಯ ಸಂಗಾತಿಯ ಗೆಳೆಯರು, ಸಂಪಾದಕರು ಆದ ಕು.ಸ. ಮಧುಸೂಧನ್  ಕಾರಣರಾದರು… ಕೊನೆಯ ಮಾತು: ಸಂಕ್ರಮಣದಾಗ ಪ್ರಕಟವಾದ ಕವಿತೆ ಹೀಗಿತ್ತು… ಜ್ವಾಲೆಗಳ ನಡುವೆ ….. ನಿಜದ ನೆಲದಲ್ಲಿ ಕಾಯದ ಕತ್ತಲ ಸೀಳಿ ಪಥಕನಾಗ ಹೊರಟಾಗ ನೂರು ಜ್ವಾಲೆಗಳೆರಗಿದವು ಸಾವಿರ ನುಡಿ ನಂಜಾಗಲು ಸಹಿಸಿದೆ ನಿನ್ನೆದೆಯ ಪುನ್ನಾಗ ಪ್ರಥಿತವಾಗಿಸಿ ನಿಜವೆರುವಾಗ; ನುಡಿಗಲಿಸುವಾಗ ಹಂಗಿಲ್ಲದ ಬದುಕ ರೂಢಿಸುವಾಗ ಕಣ್ಣು ತೆರೆಸುವ ಸಮಯ ಪೊಂಬಿಲ್ ಮೂಡುವಾಗ ಕಾಲಕಲ್ಲಾಗಿ ಹೊನ್ನಶೂಲವಾಗಿ ಕಾಯದ ಬಲಿಯಾಗಿತ್ತು ಶೂಲದ ಹಸಿವು ಹಿಂಗಿತ್ತು… ******************************

ಜ್ವಾಲೆಗಳ ನಡುವೆ…ಹುಟ್ಟಿದ ಕಾವ್ಯ Read Post »

ಇತರೆ

ಲೋಕಶಾಹಿರ ಅಣ್ಣಾಭಾವು ಸಾಠೆ

“ನೀನು ಗುಲಾಮನಲ್ಲ, ಈ ವಾಸ್ತವ್ಯ ಜಗತ್ತಿನ ನಿರ್ಮಾಪಕ“ “ನೀನು ಗುಲಾಮನಲ್ಲ, ಈ ವಾಸ್ತವ್ಯ ಜಗತ್ತಿನ ನಿರ್ಮಾಪಕ” ಹೀಗೆ ಹೇಳಿದ್ದು, ಯಾವ ವಿದೇಶಿ ವಿಚಾರವಂತನಲ್ಲ; ಮರಾಠಿ ಮೂಲ ಮಹಾನ್ ಸಾಹಿತಿ ಲೋಕಶಾಹಿರ ಅಣ್ಣಾಭಾವು ಸಾಠೆ. ದಮನಿತ, ಶೋಷಿತ, ಕಾರ್ಮಿಕ, ರೈತ ಈ ಎಲ್ಲ ವರ್ಗಗಳ ಧ್ವನಿಯಾಗಿ ಸಾಹಿತ್ಯ ರಚಿಸಿದ ಕ್ರಾಂತಿಪುತ್ರ. ಎರಡು ದಿನವೂ ಪೂರ್ಣ ಶಾಲೆಗೆ ಹೋಗದ ಇವರು ವಿಶ್ವಮಾನ್ಯ ಸಾಹಿತ್ಯವನ್ನು ಸ್ವ-ಅನುಭವದಿಂದಲೆ ರಚಿಸಿದರು. ಇವರ ಮಹಾನ್ ಸಾಹಿತ್ಯ ಇಂದು ಜಾಗತಿಕವಾಗಿ 27 ಭಾಷೆಗಳಲ್ಲಿ ಅನುವಾದಗೊಂಡಿದೆ. ಅಗಸ್ಟ 1 ಇವರ ಜಯಂತಿ. ಈ ವರ್ಷ ಜನ್ಮ ಶತಮಾನೋತ್ಸವ. ಈ ಸಂದರ್ಭದಲ್ಲಿ ಒಂದೆರಡು ಮಾತುಗಳು. ಕರ್ನಾಟಕ ಸೀಮೆಗೆ ಅಂಟಿಕೊಂಡ ಸಾಂಗಲಿ ಜಿಲ್ಲೆಯ ವಾಳವಾ ತಾಲೂಕಿನ ವಾಟೆಗಾಂವ ಎಂಬ ಗ್ರಾಮದಲ್ಲಿ 1 ಅಗಸ್ಟ 1920 ರಂದು ಮಾಂಗ ಎಂಬ ಶೋಷಿತ ಜಾತಿಯಲ್ಲಿ ಜನಿಸಿದರು. ಬಾಲ್ಯದ ಹೆಸರು ತುಕಾರಾಮ. ತಂದೆ ಬಾವುರಾವ ಸಾಠೆ, ಕುಟುಂಬದ ಪರಿಸ್ಥಿತಿ ಅತ್ಯಂತ ನಾಜೂಕು. ಶಾಲೆ ಕಲಿತು ದೊಡ್ಡವನಾಗುವ ಆಸೆಯಲ್ಲಿ ಶಾಲೆಗೆ ಹೋದರೆ ಜಾತಿ ಎಂಬ ಕ್ರೂರ ರಾಕ್ಷಸ. ಒಂದು ದಿನ ಪೂರ್ಣ ಹೋದ ಬಳಿಕ ಮರುದಿನ ಮಧ್ಯಾಹ್ನ ಶಾಲೆಯಿಂದ ದೂರಾದರು. ಮುಂದೆ 1932 ರಲ್ಲಿ ಉದರ ನಿರ್ವಹಣೆಗಾಗಿ ತಂದೆ ಜೊತೆ ಮುಂಬಯಿ ಸೇರಿದರು. ಇದ್ದಲಿ ಆರಿಸುವುದು, ಕಸಗೂಡಿಸುವದು ಹಿಡಿದು ಸಿಕ್ಕ ಸಣ್ಣ-ಪುಟ್ಟ ಎಲ್ಲ ಕೆಲಸವನ್ನು ಮಾಡುತಿದ್ದರು. ಬಿಡುವಿನ ಸಮಯದಲ್ಲಿ ಸ್ವಪ್ರಯತ್ನದಿಂದ ಅಕ್ಷರ ಜ್ಞಾನವನ್ನು ಕಲಿತರು. ಆಗಲೇ ಅವರಿಗೆ ಕಾರ್ಮಿಕರ ಕಷ್ಟದ, ದುಃಖದ ಬದುಕು ಅರಿವಾಯಿತು. ಮನದಲ್ಲಿ ಹೊತ್ತ ಕಿಡಿಯು ಕಾರ್ಮಿಕರ ಆಂದೋಲನದಲ್ಲಿ ಧುಮುಕುವಂತೆ ಮಾಡಿತು. 1936 ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷದ ನಾಯಕರಾದ ಕಾ. ಶ್ರೀಪಾದ ಡಾಂಗೆಯವರ ಪ್ರಭಾವದಿಂದಾಗಿ ಕಮ್ಯುನಿಸ್ಟ್ ಪಕ್ಷದ ಕ್ರಿಯಾಶೀಲ ಕಾರ್ಯಕರ್ತರಾಗಿ ಕೆಲಸ ಮಾಡಿದರು. ತಂದೆಯ ಅವಸಾನದ ನಂತರ ಮನೆಯ ಜವಾಬ್ದಾರಿ ಇವರ ಹೆಗಲಿಗೆ ಬಂತು. ಆಗ ಮತ್ತೆ ತಮ್ಮೂರಿಗೆ ಬರಬೇಕಾಯಿತು. ಅಲ್ಲಿ ಬಂದು ಸಹೋದರನ ತಮಾಷಾ ಕಂಪನಿಯಲ್ಲಿ ಸೇರಿಕೊಂಡರು. ಇಲ್ಲಿ ಅವಗತವಾದ ತಮಾಷಾ ಕಲೆಯು ಮುಂದೆ ಅದನ್ನು ಪ್ರಸಿದ್ಧ ಲೋಕ ನಾಟ್ಯವನ್ನಾಗಿ ಮಾಡುವಲ್ಲಿ ಬಹಳಷ್ಟು ಸಹಾಯಕಾರಿ ಆಯಿತೆಂದು ಹೇಳಬಹುದು. ನಂತರ ಮತ್ತೆ ಮುಂಬಯಿಯನ್ನು ಸೇರಿದರು. ಈ ಸಲದ ಮುಂಬಯಿ ವಲಸೆ ಅವರಲ್ಲಿ ಬಹಳಷ್ಟು ಬದಲಾವಣೆ ತಂದಿತು. ಕಾರಣ ಮ್ಯಾಕ್ಸಿಮ್ ಗಾರ್ಕಿಯ ಸಾಹಿತ್ಯ ಓದಲು ದೊರೆಯಿತು. ಅವರ ವಿಶ್ವಮಾನ್ಯ ಬರಹಕ್ಕೆ ಸ್ಪೂರ್ತಿ ಸಿಕ್ಕಿದ್ದು ಇಲ್ಲಿಂದಲೆ. ಮುಂದೆ ಅವರ ಭೇಟಿ ಖ್ಯಾತ ಲೋಕಶಾಹೀರ ‘ಅಮರ ಶೇಖ’ರ ಜೊತೆ ಆಯಿತು. ಇವರಲ್ಲಿದ್ದ ಅಗಾಧ ಪ್ರತಿಭೆ ಕಂಡು ಇವರಿಗೂ ಸಹ ಲೋಕಶಾಹಿರ ಎಂದು ಕರೆಯತೊಡಗಿದರು. ಸಾಹಿತಿಗಿಂತ ಶಾಹಿರ ಎಂದು ಹೆಚ್ಚು ಪ್ರಸಿದ್ಧಿ ಪಡೆದಿದ್ದರು. ಸ್ಫೂರ್ತಿದಾಯಕ ಮಾತು, ನಟನೆ, ಗಾಯನ ಒಟ್ಟಿನಲ್ಲಿ ಇವರ ಬಹುಮುಖಿ ಪ್ರತಿಭೆಗೆ ಜನರ ಬಹಳಷ್ಟು ಮೆಚ್ಚುಗೆ ಇತ್ತು. ಮರಾಠಿಯ ಪೋವಾಡಾ ಕಲೆಯನ್ನು ಜಗತ್ತಿನಾದ್ಯಂತ ಪರಿಚಯಿಸಿದ ಮೊದಲಿಗರು. ಇದರಿಂದ ಕಮ್ಯುನಿಸ್ಟ್ ವಿಚಾರಗಳನ್ನು ಸಹ ಪ್ರಚಾರ ಮಾಡಿದವರಿವರು. ಈ ಕಾರಣದಿಂದಲೆ ಇವರನ್ನು ಕಮ್ಯುನಿಸ್ಟ್ ಶಾಹಿರ ಎಂದು ಕರೆಯುತ್ತಾರೆ. ಇವರು ರಚಿಸಿದ ಸ್ಟಾಲಿನ್‌ಗ್ರಾಡ್ ಪೋವಾಡಾ ಬಹಳ ಪ್ರಸಿದ್ಧವಾದದ್ದು. ರಶಿಯಾದಲ್ಲಿ ಸಹ ಪೋವಾಡಾ ಸಾದರ ಪಡಿಸಿ ರಶಿಯಾದ ಅಧ್ಯಕ್ಷರಿಂದ ಮೆಚ್ಚುಗೆ ಪಡೆದಿದ್ದರು. ವಿಶೇಷವೆಂದರೆ ಭಾರತದಲ್ಲಿ ಮಾರ್ಕ್ಸ್‌ವಾದಿ ವಿಚಾರಗಳ ಅವಿಸ್ಕಾರವನ್ನು ಈ ಪೋವಾಡಾ ಮತ್ತು ಲೋಕನಾಟ್ಯಗಳಿಂದ ಮಾಡಿದರು. ಜನಪದ ಶೈಲಿಯಲ್ಲಿ ತತ್ವಜ್ಞಾನ ಮತ್ತು ಸೌಮ್ಯವಾದ ವಿಚಾರಗಳನ್ನು ಜನರ ಮುಂದೆ ಇಟ್ಟರು. 1942 ರ ಸ್ವಾತಂತ್ರ ಚಳುವಳಿಯಲ್ಲಿ ಸಕ್ರಿಯ ಸಹಭಾಗದ ಕಾರಣ ಬ್ರಿಟಿಶ್ ಸರಕಾರವು ಇವರ ವಿರುದ್ಧ ಬಂಧನದ ವಾರೆಂಟ್ ಹೊರಡಿಸಿತು. ಹೇಗೋ ಮುಂಬಯಿ ಬಂದು ತಪ್ಪಿಸಿಕೊಂಡರು. ಆದರೂ ಚಳುವಳಿಯಲ್ಲಿ ಸಕ್ರಿಯತೆ ಇತ್ತು. ಮಹಾತ್ಮಾ ಫುಲೆ, ಶಾಹು ಮಹಾರಾಜ ಹಾಗು ಡಾ. ಬಾಬಾಸಾಹೇಬ ಅಂಬೇಡ್ಕರರ ದಮನಿತ ಮತ್ತು ಶೋಷಿತ ವರ್ಗದ ಏಳಿಗೆಯ ಚಳುವಳಿಯನ್ನು ಅತ್ಯಂತ ಸಮರ್ಥರಾಗಿ ಮುನ್ನಡೆಸಿಕೊಂಡು ಬಂದರು. ಇವರು ಪ್ರಖರ ಅಂಬೇಡ್ಕರವಾದಿ; ಅಷ್ಟೆ ಮಾರ್ಕ್ಸವಾದಿ ಕೂಡ. ಅಂಬೇಡ್ಕರವಾದ ಮತ್ತು ಮಾರ್ಕ್ಸವಾದವನ್ನು ಸಮನ್ವಯ ಸಾಧಿಸಿದ ಏಕೈಕರು. ದೇಶಕ್ಕೆ ಸ್ವತಂತ್ರ ದೊರೆತ ತಕ್ಷಣ 1947 ಅಗಸ್ಟ 16 ರಂದು “ಈ ಸ್ವಾತಂತ್ರ ಸುಳ್ಳು, ಜನರು ಹಸಿವೆಯಿಂದ ಕಂಗಾಲಾಗಿದ್ದಾರೆ..” “ಮೊದಲು ಜನರ ಹೊಟ್ಟೆ ತುಂಬಿಸಿ” ಎಂಬ ಘೋಷಣೆ ಕೊಡುತ್ತಾ ಶಿವಾಜಿ ಪಾರ್ಕ್ ನಲ್ಲಿ ಧರಣಿ ಕುಳಿತರು. ಮಹಾಭಯಂಕರ ಮಳೆ ಸುರಿಯುತ್ತಿದ್ದರೂ ಹಿಂದೆ ಸರಿಯಲಿಲ್ಲ. ಅದಲ್ಲದೆ ಗೋವಾ ಮುಕ್ತಿ ಸಂಗ್ರಾಮ ಮತ್ತು ಸಂಯುಕ್ತ ಮಹಾರಾಷ್ಟ್ರ ಚಳುವಳಿಗಳಲ್ಲಿ ಮುಂಚೂಣಿಯರಾಗಿ ಕಾರ್ಯ ನಿರ್ವಹಿಸಿದರು. ಅಲ್ಪ ಶಿಕ್ಷಿತರಾದ ಇವರು ಸತತ ಚಿಂತನೆ ಮತ್ತು ವೈಶ್ವಿಕ ಕಾರ್ಯಗಳಿಂದ ಸಾಹಿತ್ಯಕ್ಕೆ ಬಹು ದೊಡ್ಡ ಕಾಣಿಕೆ ನೀಡಿದರು. ಇವರು ಬರೆದ ಸಾಹಿತ್ಯ ಲೋಕನಾಟ್ಯ-13, ನಾಟಕ –3, ಕಥಾ ಸಂಗ್ರಹ –13, ಕಾದಂಬರಿ- 35, ಪೋವಾಡ-15, ಪ್ರವಾಸ ವರ್ಣನೆ-1, ಚಿತ್ರಪಟ ಕಥೆ-7 ಇದಲ್ಲದೆ 100 ಕ್ಕಿಂತ ಹೆಚ್ಚು ಹಾಡುಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕೆಲವೊಂದು ಲಾವಣಿಗಳೆಂದು ಪ್ರಸಿದ್ಧವಾಗಿವೆ. ಇವರ ಸಾಹಿತ್ಯ ಜಾತಿ, ಧರ್ಮ ಬಿಟ್ಟು ಜಾಗತಿಕ ಮಾನವೀಯ ಮೌಲ್ಯಗಳನ್ನು ಬಿಂಬಿಸುವಂತದ್ದು. ಹಾಗಂತಲೆ ಅದು ಜಗತ್ತಿನ ಪ್ರಮುಖ ಭಾಷೆಗಳಲ್ಲಿ ಅನುವಾದಗೊಂಡಿದೆ. ಮೌಢ್ಯದ ಸಾಮಾಜಿಕ ಚಿಂತನೆಯಲ್ಲಿ ಸಾಠೆಯವರ ಸಾಹಿತ್ಯ ಹರಿತವಾದ ಖಡ್ಗದಂತೆ ಪ್ರಹಾರ ಮಾಡುತ್ತದೆ. 1959 ರಲ್ಲಿ ಪ್ರಕಟಣೆಯಾದ ಫಕೀರಾ ಕಾದಂಬರಿಯು ಬಹಳ ಪ್ರಸಿದ್ಧವಾಯಿತು. ಅವರ ಫಕೀರಾ ಕಾದಂಬರಿ ಜೊತೆ ಇನ್ನು ಹಲವು ಸಾಹಿತ್ಯ ಕನ್ನಡಕ್ಕೂ ಸಹ ಅನುವಾದಗೊಂಡಿದೆ. ಸಾಠೆಯವರು ತಮ್ಮ ಸಾಹಿತ್ಯದಲ್ಲಿ ಸಮತೆ, ವ್ಯಾಸ್ತವ್ಯತೆ ಮತ್ತು ಮಾನವೀಯತೆಗೆ ಹೆಚ್ಚು ಒತ್ತು ಕೊಟ್ಟವರು. ತಮ್ಮ ಸಾಹಿತ್ಯದ ಬಗ್ಗೆ ಹೇಳುತ್ತಾರೆ, “ನಾನು ಹೇಗೆ ಬದುಕುತ್ತೇನೆ, ಏನು ನೋಡುತ್ತೇನೆ, ಯಾವುದನ್ನು ಅನುಭವಿಸುತ್ತೇನೆ, ಅದನ್ನೆ ಬರೆಯುತ್ತೇನೆ. ನಾನು ಆಳ ನೀರಿನ ಕಪ್ಪೆ. ನನಗೆ ಕಲ್ಪನೆಯ ರೆಕ್ಕೆ ಹಚ್ಚಿ ಹಾರಲು ಬರುವದಿಲ್ಲ.” ಇದು ಅವರ ಲೇಖನದ ಹಿಂದಿನ ಸ್ಪಷ್ಟವಾದ ನಿಲುವು. “ನನಗೆ ಬದುಕಿನ ಮೇಲೆ ಬಹಳ ನಿಷ್ಠೆ. ನನಗೆ ಶ್ರಮಜೀವಿಗಳೆಂದರೆ ಬಹಳ ಇಷ್ಟ. ಅವರ ಶ್ರಮಶಕ್ತಿ ಅತ್ಯಂತ ಶ್ರೇಷ್ಠವಾದದ್ದು, ಅವರಿಂದಲೆ ಈ ಜಗತ್ತು ಮುನ್ನಡೆಯುತ್ತದೆ. ಅವರ ಪ್ರಯಾಸ ಮತ್ತು ಯಶಸ್ಸಿನ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ.” ಇದು ಅವರ ಶ್ರಮಿಕರ ಬಗೆಗಿನ ಗೌರವ ಕಂಡುಬರುತ್ತದೆ. ಅದಲ್ಲದೆ ಇವರ ಸಂಪೂರ್ಣ ಸಾಹಿತ್ಯದ ಕೇಂದ್ರ ಸ್ಥಾನ ಶ್ರಮಿಕರನ್ನೆ ಒಳಗೊಂಡಿದೆ. ಸಾಠೆಯವರ ಸಮರ ಅಜ್ಞಾನದ ಅಂಧಕಾರದಲ್ಲಿ ಮಲಗಿದ ಸಮಾಜದ ವಿರುದ್ಧದಲ್ಲಿತ್ತು. ಮೇಲ್ವರ್ಗದ ದಬ್ಬಾಳಿಕೆಯ ರೂಢಿ-ಪರಂಪರೆಗಳ ವಿರುದ್ಧದಲ್ಲಿತ್ತು. ಧರ್ಮದಲ್ಲಿದ್ದ ಅನಿಷ್ಠತೆಯೇ ದಮನಿತ ಮತ್ತು ಶೋಷಿತರನ್ನು ಗುಲಾಮರನ್ನಾಗಿಸಿತು ಎಂಬುದು ಅವರ ಭಾವನೆಯಾಗಿತ್ತು. ಅದಕ್ಕಾಗಿ ಅವರು ಹೇಳುತಿದ್ದರು, “ಅನಿಷ್ಠ ಧರ್ಮದ ಆಚರಣೆಯಿಂದ ಜನರನ್ನು ಹೀನರನ್ನಾಗಿ ಕಾಣುವದು ಧರ್ಮವಲ್ಲ, ಅದೊಂದು ರೋಗವಾಗಿದೆ.” ಅದಕ್ಕೆ ಅವರು, “ಓ.. ಮನುಜನೆ ನೀನು ಗುಲಾಮನಲ್ಲ; ಈ ವಾಸ್ತವ್ಯ ಜಗತ್ತಿನ ನಿರ್ಮಾಪಕ” ಎಂದು ಹೇಳುತಿದ್ದರು. ದೇಶದಲ್ಲಿಯ ಜಾತಿ ಉಚ್ಛಾಟನೆ ಮಾಡದ ಹೊರತು ದೇಶದ ಪ್ರಗತಿ ಅಸಾಧ್ಯ ಎಂಬುದು ಅವರಿಗೆ ಗೊತ್ತಿತ್ತು. ಅದಕ್ಕೆ “ಜಾತಿ ವಾಸ್ತವ್ಯವಿದ್ದರೆ ಬಡತನ ಕೃತ್ರಿಮ. ಬಡತನ ನಿರ್ಮೂಲನೆ ಮಾಡುವದು ಸಹಜ. ಆದರೆ ಜಾತಿ ನಷ್ಟ ಮಾಡುವದು ನಮ್ಮೆಲ್ಲರ ಕೆಲಸವಾಗಿದೆ…” ಎಂದು ಹೇಳಿ ಜಾತಿ ನಿರ್ಮೂಲನೆ ಮಾಡಲು ಕರೆ ಕೊಟ್ಟರು. ಆದರೆ ದುಃಖವೆಂದರೆ ಜಾತಿಭೇದವು ಇವರನ್ನು ಕೊನೆಯವರೆಗೆ ಕಾಡಿತು. ಅವರು ಸ್ವತಃ ಸಾಲ ಮಾಡಿ “ಫಕೀರಾ” ಚಲನಚಿತ್ರವನ್ನು ಅದ್ಭುತವಾಗಿ ನಿರ್ಮಿಸಿದರು. ಯಶವಂತರಾವ ಚವ್ಹಾಣರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಜಾತಿ ಅಡ್ಡಬಂದು ಚಲನಚಿತ್ರ ನಡೆಯಲಿಲ್ಲ. ಸಾಲ ತೀರಲಿಲ್ಲ. ಇದರಿಂದ ಕೌಟುಂಬಿಕ ಕಲಹಗಳು ಹೆಚ್ಚಾದವು. ಇದರ ನೈರಾಶ್ಯದಲ್ಲಿ ಆರೋಗ್ಯವು ಹದಗೆಟ್ಟಿತು. ಹೀಗಾಗಿ ಕೇವಲ 49ನೇ ವಯಸ್ಸಿನಲ್ಲಿ ಅಂದರೆ 1969 ರಲ್ಲಿ ತೀರಿಕೊಂಡರು. ವಿಪರ್ಯಾಸ ನೋಡಿ, ಜಾತಿ ನಿರ್ಮೂಲನೆಗೆ ಹೋರಾಟ ಮಾಡಿದ ಇವರನ್ನು ಮತ್ತೆ ನಾವು ಒಂದು ಜಾತಿಗೆ ಮಾತ್ರ ಮೀಸಲಿಟ್ಟಿದ್ದೇವೆ. ಇವರು ಅಲ್ಪ ಶಿಕ್ಷಿತರಾಗಿ ಮಾಡಿದ ಕ್ರಾಂತಿ ನಮ್ಮೆಲ್ಲರಿಗೆ ಪ್ರೇರಣೆ ಎಂದು ತಿಳಿದು ನಮ್ಮೆಲ್ಲರಿಗೆ ದೇಶದಲ್ಲಿ ಸೌಹಾರ್ದತೆ ತರಬೇಕಿದೆ. ಇಂದು ನಾವೆಲ್ಲಾ ಹೆಸರಾಂತ ವಿಶ್ವವಿದ್ಯಾಲಯದಲ್ಲಿ ಉನ್ನತದ ಮಟ್ಟದ ಹಾಯಟೆಕ್ ಶಿಕ್ಷಣ ಪಡೆಯುತ್ತಿದ್ದೇವೆ. ಆದರೆ ನಮ್ಮ ವಿಚಾರಗಳು ಮಾತ್ರ ಹಾಯಟೆಕ್ ಆಗುತ್ತಿಲ್ಲ. ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾದ ಇಂದು ನಾವು ಇಂತಹ ಮಹಾನ್ ವಿಚಾರವಂತರ ಆದರ್ಶಗಳನ್ನು ಅರಿತು ನಡೆಯೋಣ. ಶ್ರಮ ಜೀವಿಗಳ ಬೆನ್ನಿಗೆ ದೃಢವಾಗಿ ನಿಲ್ಲೋಣ. ವಿಶ್ವ ಮನುಕುಲದ ಏಳಿಗೆಗಾಗಿ ಐಕ್ಯರಾಗೋಣ. ಎಲ್ಲಕ್ಕಿಂತ ಮಹತ್ವದ್ದು ಭೇದಭಾವವನ್ನು ಮರೆಮಾಚದ ಹೊರತು ವಿಶ್ವದಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂಬುದನ್ನು ಅರಿತು ಬಾಳೋಣ. ಸಾಠೆಯವರ ವಿಚಾರ ಮತ್ತು ಕಾರ್ಯಕ್ಕೆ ಸಾಟಿಯಿಲ್ಲ. ನಮನಗಳು… ********** ಮಲಿಕಜಾನ ಶೇಖ

ಲೋಕಶಾಹಿರ ಅಣ್ಣಾಭಾವು ಸಾಠೆ Read Post »

ಇತರೆ

ಚಂದ್ರ ಮತ್ತು ನಾನು…

ಮೊದಲ ಕವಿತೆಯ ರೋಮಾಂಚನ ಫಾಲ್ಗುಣ ಗೌಡ ಅಚವೆ. ಮನೆಯ ಅಂಗಳದಲ್ಲಿ ಅಪ್ಪನ ಆರಾಮ ಕುರ್ಚಿಯಲ್ಲಿ ನಕ್ಷತ್ರ ರಾಶಿಯನ್ನು ನೋಡುತ್ತ ಕೂತಿದ್ದೆ.ಹುಣ್ಣುಮೆಯ ಎರಡು ದಿನ ನಂತರದ ಚಂದ್ರ ನನಗೆ ವಿಶೇಷವಾಗಿ ಕಂಡ.ಅವ‌ನ ಕಾಂತಿಯಲ್ಲಿ ಬೆಳದಿಂಗಳು ಮೀಯುತ್ತಿತ್ತು.ನಕ್ಷತ್ರದಾಚೆಗಿನ ನೀಲಿ ಪರದೆಯ ಗುಂಟ ಹರಿವ ಅವಳ ಮುಗ್ಧ ಪ್ರೀತಿ ಮನಸೊಳಗೆ ಒಲವಿನ ಭಾಷ್ಯ ಬರೆಯುತ್ತಿತ್ತು.ತೆಂಗು ಗರಿಗಳ ನಡುವೆ ಆ ತುಂಬು ಚಂದಿರ ಬಂದು ನನ್ನೊಳಗೆ ಎಂಥದೋ ಮಿಂಚಿಸಿ ಹೋಗಿದ್ದ.ಆ ಮಿಂಚು ನನ್ನ ಮನಃಪಟಲದ ನರ ನಾಡಿಗಳಲ್ಲಿ ಸಂಚರಿಸಿ ಇಂಪಿನ ನಾದಗೈದು ನನ್ನನ್ನು ಚಂದಿರನ ಇರುವಿಕೆ ನನ್ನ ಸುತ್ತಲೇ ಇದೆಯೇನೋ ಎನ್ನುವಂತೆ ಅವನ ಪ್ರಭಾವಲಯ ನನ್ನೊಳಗೂ ಹೊರಗೂ ಹರಡಿಕೊಂಡಿತು.ಜೇನವರ್ಣದ ಬೆಳದಿಂಗಳು ಸುಧೆಯಂತೆ ಇಳಿಯುವಾಗ ನನ್ನ ಹೃದಯದ ಬಾಗಿಲಿನಿಂದ ಒಳಸೇರಿ ಸ್ವಾತಿ ಹನಿ ಚಿಪ್ಪು ಸೇರಿದಂತೆ ಭಾಸವಾಯಿತು.ಆ ಬಿಳ್ಳಿ ಮಿಂಚು ಬಂದದ್ದೇ ತಡ ಅಂಗಳದ ಹಾಲು ಬೆಳಕು, ಅರಳಿಯೇ ಇರುವ ಅಬ್ಬಲಿ ಹೂಗಳು, ನಾಳೆ ಅರಳುವ ಖುಷಿಯಿಂದ ನಿದ್ದೆಗೆ ಜಾರದ ದಾಸಾಳದ ಹೂಗಳು,ಚಂದಿರನ ಮರೆಮಾಡಿದ ತೆಂಗು ಗರಿಗಳು, ಅಸಂಖ್ಯ ನಕ್ಷತ್ರಗಳು ಮಾಯ.. ನನಗೆ ಚಂದ್ರ ಮಾತ್ರ ಕಾಣುತ್ತಿದ್ದುದು ಅಚ್ಚರಿಯೆನಿಸಿತು.ನನ್ನ ಎದೆ ಬಯಲಿಗೆ ಬಂದ ಚಂದ್ರ ನನ್ನೊಳಗನ್ನು ಸೇರಿಯಾಗಿತ್ತು.ದೂರದ ಬಯಲಲ್ಲಿ ಇಡೀ ಬೆಟ್ಟ ಕಾಡು ಪ್ರದೇಶಗಳ ಒಂದು ಮಾಡುವಂತೆ ಟಿಟ್ಟಿಭ ಟಿsssಟೀsssಟಿರ್ಯಾsssss ಕೂಗಿದರೂ ನನ್ನ ಕಿವಿಗೆ ಪೂರ್ತಿಯಾಗಿ ತಲುಪಲಿಲ್ಲ..                   ಇದು ಆಗಷ್ಟೇ ಪಿಯುಸಿ ಮುಗಿಸಿ ಡಿಗ್ರಿಗೆ ಕಾಲಿಟ್ಟ ಹೊತ್ತು.ಹರೆಯ ಗರಿಗೆದರಿ ಮುಗಿಲಿಗೆ ಹಾರುವ ಕಾಲ.. ಏನನ್ನು, ಯಾರನ್ನು ನೋಡಿದರೂ ಚಂದವಾಗಿ ಕಾಣುವ ವಯಸ್ಸು. ನನ್ನೂರಿನಿಂದ ನಮ್ಮದೇ ಕ್ಲಾಸಿಗೆ ಬರುವ ಹುಡುಗಿಯಲ್ಲಿ ಕ್ರಷ್ ಆಗಿತ್ತು. ಚಂದಿರನಂತೆ ನಗುವ ಅವಳ ಕಣ್ಣುಗಳು ನನ್ನಲ್ಲಿ ಕಾವ್ಯ ಭಾವನೆಯನ್ನು ಸ್ಪುರಿಸುತ್ತಿದ್ದವು.ಅವಳನ್ನು ಚಂದಿರನಿಗೆ ಹೋಲಿಸಿ ತಕ್ಷಣ ಪಟ್ಟಿ ತಗೆದುಕೊಂಡು ಬಂದು ‘ ಚಂದ್ರ ಮತ್ತು ನಾನು’ ಪದ್ಯ ಬರೆದೆ.    “ನನ್ನ ಭಾವನೆಯ ಚಂದ್ರನಿಗೆ ಮೋಡ ಮುಸುಕಿದರೆ ನನಗೆ ಖಗ್ರಾಸ! ಯಾಕೆಂದರೆ, ಆತ ಬೆಳಗುವವ ನಾನು ಬೆಳಗಲ್ಪಡುವವ ತಾರೆಗಳನ್ನು ನಾನು ಲಕ್ಷಿಸುವುದಿಲ್ಲ ಅವುಗಳಲ್ಲಿ ಹೊಳಪಿದ್ದರೂ ಬೆಳಗುವ ಶಕ್ತಿಯಿಲ್ಲ. ನನ್ನ ಚಂದಿರ ನಕ್ಕರೆ ನನಗೆ ಬೆಳದಿಂಗಳು ಇಲ್ಲದಿರೆ ಬರೀ ತಂಗಳು! ಅವನಿದ್ದರೆ ಅವ‌ನಿಂದಲೇ ಪ್ರೀತಿ ಕಡಲ ಮೊರೆತ ಕೆದಕುತ್ತದೆ ಕಾವ್ಯ ಭಾವನೆಯ ಅವನ ಹಾಲು ಬಣ್ಣವ ಬೆಳಗುಗೆನ್ನೆಯ ನೋಡಿ ಹಾರುತ್ತದೆ ಮನಸ್ಸು ಅವನೆತ್ತರಕ್ಕೆ! ಆತ ಅಮವಾಸ್ಯೆಯತ್ತ ಸಾಗಿದರೆ ಆ ಮಂದ ಬೆಳಕಲಿ ಮೆಲು ಗಾಳಿಗೆ ಅಲುಗುವ ಆಶಾಲತೆಗಳ ಹಸಿರು ಮಾಯ ಬೀಸುವ ತಂಗಾಳಿಯಲಿ ನಾ ತೂರುತ್ತೇನೆ ನೋವ. ಒಮ್ಮೊಮ್ಮೆ ಯೋಚಿಸುತ್ತೇನೆ, ಅವನಿದ್ದರೆ ನನ್ನ ಕಾವ್ಯ ಹಾಡೆಷ್ಟು ರಮ್ಯ ಅವನಿಲ್ಲದಿರೆ ಬರೀ ಶೂನ್ಯ! ಈ ಮೊದಲ ಕವಿತೆ ‘ಕರ್ಮವೀರ’ ಪತ್ರಿಕೆಯಲ್ಲಿ ‘ಖಗ್ರಾಸ’ ಅನ್ನುವ ಹೆಸರಿನಲ್ಲಿ ಪ್ರಕಟವಾಯಿತು. ನಂತರ ತಾಲ್ಲೂಕಿನ, ಜಿಲ್ಲೆಯ ಬಹುತೇಕ ಕವಿಗೋಷ್ಟಿಗಳಲ್ಲಿ ಭಾಗವಹಿಸುವಂತಾಯಿತು.ಆಗ ನಾನು ‘ಕರ್ಮವೀರ’ದ ಓದುಗನಾಗಿದ್ದೆ.ನಂತರದ ದಿನಗಳಲ್ಲಿ ಕೆ.ಎಸ್.ನ, ಜಿ.ಎಸ್.ಎಸ್,ಲಂಕೇಶ್, ಅಡಿಗ,ಜಯಂತ ಕಾಯ್ಕಿಣಿ, ಕೆ.ವಿ.ತಿರುಮಲೇಶ,ಎಸ್.ಮಂಜುನಾಥ ಅಂತವರ ಪದ್ಯಗಳು ನನ್ನನ್ನು ಪ್ರಭಾವಿಸಿದವು.ಸದ್ಯ ಜಯಂತ ಕಾಯ್ಕಿಣಿ ನನ್ನ ಕಾವ್ಯ ಗುರು.. ಕ್ರೈಸ್ಟ್ ಕಾಲೇಜು, ಸಂಚಯ ಬಹುಮಾನಗಳ ಜೊತೆ ಇತ್ತೀಚೆಗೆ ಒಂದು ಸಿನಿಮಾಕ್ಕೆ ಹಾಡು ಬರೆದಿರುವುದು ಮೊದಲು ಬರೆದ ‘ಚಂದ್ರ ಮತ್ತು ನಾನು’ ಪದ್ಯ ನಡೆಸಿಕೊಂಡು ಬಂದ ರೀತಿಯೇ ಅಗಿದೆ.ನನ್ನ ಕಾವ್ಯದ ಪಯಣವನ್ನು ನೆನಪಿಸಿದ ‘ಸಂಗಾತಿ’ಗೆ ಧನ್ಯವಾದಗಳು. ********************************************

ಚಂದ್ರ ಮತ್ತು ನಾನು… Read Post »

ಇತರೆ

ಪುಟ್ಟಿ ಅನ್ನೊ ಮೊದಲ ಪದ್ಯ

ಮೊದಲ ಕವಿತೆಯ ರೋಮಾಂಚನ ಚೈತ್ರಾ ಶಿವಯೋಗಿಮಠ ಮೊದಲ ಸಾರಿ ಚೆಂದದ ಪದ್ಯ ಇದು ಅಂತ ಬರೆದದ್ದು ನನಗೆ ಅಷ್ಟು ನೆನಪಿಲ್ಲ. ಆದರೆ ಮೊದಲ ಸಲ ನಾನು ಪದ್ಯ ಬರೆದದ್ದು ಏಳನೇ ಕ್ಲಾಸಿನಲ್ಲಿ. ಆಗ ಪದ್ಯ ಅಂದರೆ ಏನು ಅಂತ ಸಹ ತಿಳಿದಿರಲಿಲ್ಲ. ಮನೆಗೆ ಪ್ರತಿ ವಾರ ತರಂಗ ವಾರಪತ್ರಿಕೆ ಖಾಯಂ ಬರುತ್ತಿತ್ತು. ಮತ್ತು ಮನೆಯ ಬಳಿಯ ನಗರ ಕೇಂದ್ರ ಗ್ರಂಥಾಲಯದ ಸದಸ್ಯತ್ವವೂ ಇತ್ತು. ಪ್ರತಿ ವಾರ ಪುಸ್ತಕಗಳನ್ನ ತಂದು ಓದೋದು ನನ್ನಿಷ್ಟದ ಕೆಲಸಗಳಲ್ಲೊಂದು. ತರಂಗದಲ್ಲಿ ಬರುವ ಮಕ್ಕಳ ಸಣ್ಣ ಪದ್ಯಗಳು ಹಾಗೂ ಪುಸ್ತಕಗಳಲ್ಲಿ ಓದುತ್ತಿದ್ದ ಮಕ್ಕಳ ಪದ್ಯಗಳನ್ನ ನೋಡಿ ನಾನೂ ಯಾಕೆ ನನ್ನ ಭಾವನೆಗಳಿಗೆ ಅಕ್ಷರ ರೂಪ ಕೊಡಬಾರದು ಅನ್ನಿಸಿತು. ಒಂದಷ್ಟು ಸಣ್ಣ ಸಣ್ಣ ಪದ್ಯಗಳನ್ನ ಒಂದು ನೋಟ್ಬುಕ್ ನಲ್ಲಿ ಬರೆದೆ. ಅಜ್ಜಿ, ಪುಟ್ಟಿ, ನಾಯಿ ಬೆಕ್ಕು ಅಂತೆಲ್ಲ ಕಣ್ಣಿಗೆ ಕಂಡದ್ದು, ಮನಸ್ಸಿಗೆ ಅನ್ನಿಸಿದ್ದನ್ನ ಅಕ್ಷರ ರೂಪಕ್ಕಿಳಿಸಿದೆ. ಬರೆದದ್ದನ್ನ ನನ್ನ ಹಿರಿಯ ಅಣ್ಣನಿಗೆ ತೋರಿಸಿ ಹೇಗಿದೆ ಓದಿ ಹೇಳು ಅಂದೆ. ಸಣ್ಣವಳು ಬರೆದಿದ್ದಾಳೆ ಅಂತ ಹುರಿದುಂಬಿಸಲು, ಅಣ್ಣ ನನ್ನ ಒಂದೆರಡು ಪದ್ಯಗಳನ್ನ ಆಯ್ದು ಇವು ಚೆನ್ನಾಗಿವೆ ಹೀಗೆ ಬರಿತಿರು ಅಂತ ಪ್ರೋತ್ಸಾಹಿಸಿದ. ಜೊತೆಗೆ ಇವನ್ನ ತರಂಗಕ್ಕೆ ಯಾಕೆ ಕಳುಹಿಸಬಾರದು ಅನ್ನೋ ಯೋಚನೆಯನ್ನೂ ಹುಟ್ಟು ಹಾಕಿದ. ತಡ ಮಾಡದೆ ಪದ್ಯಗಳನ್ನ ಒಂದು ಬಿಳಿಹಾಳೆಯಲ್ಲಿ ದುಂಡಗಿನ ಅಕ್ಷರಗಳಲ್ಲಿ ಬರೆದು ಲಕೋಟೆ ಒಳಗೆ ಹಾಕಿ, ವಿಳಾಸ ಬರೆದು ಅಂಚೆ ಕಳುಹಿಸಿಯೇ ಬಿಟ್ಟೆ. ನಂತರ ಅದರ ಬಗ್ಗೆ ಮರೆತೂ ಹೋಯಿತು. ಒಂದಿನ ತರಂಗದಿಂದ ಒಂದು ಮನಿ ಆರ್ಡರ್ ಬಂತು ೧೨೫ ರೂಪಾಯಿಯದು, ನಿಮ್ಮ ಪದ್ಯ ಪ್ರಕಟವಾಗಿದೆ ಇಂತಹ ವಾರದ ತರಂಗವನ್ನ ಗಮನಿಸಿ ಅಂತ ಮೆಸೇಜ್ ಇತ್ತು. ನನಗೆ ಆದ ಸಂಭ್ರಮ ಅಷ್ಟಿಷ್ಟಲ್ಲ. “ಪುಟ್ಟಿ” ಅನ್ನೋ ಪದ್ಯ ಪ್ರಕಟವಾಗಿತ್ತು, ಜೊತೆಗೆ ಸಂಭಾವನೆ ಬೇರೆ. ಕೊನೆಯ ಸಾಲನ್ನ ಕೊಂಚ ಬದಲಾಯಿಸಿ ಪ್ರಕಟಿಸಿದ್ದರೂ ಬೇಸರವೆನಿಸಲಿಲ್ಲ. ಮುಂದೆ ಬರೆಯೋದನ್ನ ಬಹುತೇಕ ಕಡಿಮೆ ಮಾಡಿದೆ‌. ವಿದ್ಯಾಭ್ಯಾಸದ ಒತ್ತಡದಲ್ಲಿ ಹೆಚ್ಚು ಬರೆಯಲಾಗಲಿಲ್ಲ. ಮುಂದೆ ಪಿ.ಯುಸಿ ಓದೋವಾಗ ಮತ್ತೊಮ್ಮೆ ಹೊಸದಾಗಿ ಪದ್ಯವನ್ನ ಬರೆದೆ. ಯಾರಿಗಾದರೂ ತೋರಿಸಿ ಹೇಗಿದೆ ಅಂತ ಕೇಳಲೇ ಬೇಕೆನಿಸಿತು‌. ನಾನು ಓದುತ್ತಿದ್ದದು ಶೇಷಾದ್ರಿಪುರಂ ಕಾಲೇಜಿನಲ್ಲಿ. ಆಗ ಸ್ನಾತಕೋತ್ತರ/ಪಿ.ಎಚ್.ಡಿ ವಿಭಾಗದಲ್ಲಿ ಡಾ. ದೊಡ್ಡರಂಗೇಗೌಡರು ವಿಭಾಗದ ಮುಖ್ಯಸ್ಥರಾಗಿದ್ದರು. ಒಂದಿನ ಗೆಳತಿಯನ್ನ ಕರೆದುಕೊಂಡು ಅವರ ಚೇಂಬರ್ ಗೆ ಹೋದೆ. ಅಲ್ಲಲ್ಲಿ ಬಿಳಿಯ ಕೂದಲು, ಕನ್ನಡಕ, ಜುಬ್ಬಾ ಪೈಜಾಮಾ ಮೇಲೊಂದು ಖಾದಿ ವೇಸ್ಟ್ ಕೋಟ್ ಧರಿಸಿ ಬಗಲಿಗೆ ಬಟ್ಟೆಯ ಕೈಚೀಲವನ್ನ ಹಾಕಿಕೊಂಡ ಅವರನ್ನ ನೋಡಿದ ಕೂಡಲೆ ಆಗೆಲ್ಲಾ ಕವಿಗಳ ಬಗ್ಗೆ ಕೇಳಿದ ವಿವರಣೆ ಸಾಕ್ಷಾತ್ಕರಿಸಿದಂತಾಯ್ತು. ಇನ್ನೇನು ಹೊರಡೋಕೆ ಅಣಿಯಾಗಿದ್ದರು. ನಮ್ಮನ್ನ ನೋಡಿ, ಅವರನ್ನೇ ಭೇಟಿಯಾಗೋಕೆ ಬಂದಿದ್ದು ಅಂತ ತಿಳಿದು ಬಹಳ ಸೌಜನ್ಯದಿಂದಲೇ ಬರಮಾಡಿಕೊಂಡು ಕುಳಿತುಕೊಳ್ಳೋಕೆ ಹೇಳಿದರು. ಅವರನ್ನ ನೋಡಿ ನನಗೆ ಪದ್ಯಗಳನ್ನ ಹೇಗೆ ತೋರಿಸಲಿ ಅನ್ನೋ ಕಸಿವಿಸಿಯ ಜೊತೆ ಭಯವೂ ಆಗಿ ನಾಲಿಗೆ ಒಣಗಿತು. ಏನೇನೋ ಮಾತಾಡಿ ಕೊನೆಗೆ ವಿಷಯಕ್ಕೆ ಬಂದೆ. “ಸರ್ ನಾನು ನಿಮ್ಮ ಬಳಿ ನನ್ನ ಪದ್ಯಗಳನ್ನ…..‌” ಅಂತ ರಾಗ ಎಳೆದೆ. ಅವರು ನಸುನಕ್ಕು “ಅದಕ್ಯಾಕೆ ಹೆದರ್ತೀರಿ. ತೋರಿಸಿ ನೋಡೋಣ” ಅಂದ್ರು. ನಾನು ಬಹಳಷ್ಟು ಅಳುಕಿನಿಂದಲೇ ಪುಸ್ತಕವನ್ನ ಅವರ ಕೈಗಿಟ್ಟೆ. ಸ್ವಲ್ಪ ಹೊತ್ತು ಅವರು ಓದಿ. “ಒಳ್ಳೆಯ ಪ್ರಯತ್ನ ರೀ. ಆದರೆ ನೀವು ಬಹಳಷ್ಟು ಇವನ್ನ ಟಚ್ ಅಪ್ ಮಾಡಬೇಕು. ಕೊಂಚ ಅರೆ ಬರೆ ಬೆಂದ ಹಾಗೆ ಅನ್ನಿಸ್ತವೆ.” ಅಂತ ಹೇಳಿ ಪದ್ಯವನ್ನ ಹೇಗೆ ಬರಿಬೇಕು, ಪ್ರಾಸಗಳನ್ನ ಹೇಗೆ ಸರಾಗವಾಗಿ ಬಳಸಬೇಕು ಅನ್ನೋದನ್ನ ಬಹಳಷ್ಟು ಹೊತ್ತು ಹೇಳಿದರು. ಮುಖ್ಯವಾಗಿ ಕವಿ ಒಳಗಣ್ಣ ತೆರೆದಿರಬೇಕು, ಸುತ್ತಲೂ ನಡೆಯುವುದನ್ನ ಸೂಕ್ಷ್ಮವಾಗಿ ಅವಲೋಕಿಸಬೇಕು, ಎಂದು ಹೇಳಿ ಒಂದು ಸಣ್ಣ ಪ್ರಾಸವನ್ನ ಬರೆದು ತೋರಿಸಿದರು: ಬಂದೆ ನೀನು ಕಂಡೆ ನಾನು ನಮ್ಮ ಬಾಳು ಹಾಲು ಜೇನು ಇಷ್ಟೇ! ಸರಾಗವಾಗಿ ಸುರಿಯಬೇಕು ಪದಗಳನ್ನ ಅಂತ ಹೇಳಿ ನನಗೆ ಏನೂ ತಿಳಿಯದ ವಿಷಯಗಳನ್ನ ಮಗುವಿಗೆ ಕಲಿಸುವ ಹಾಗೆ ತಿಳಿಸಿಕೊಟ್ಟರು. ಒಂದು ರೀತಿಯ ಹೊಸ ಪ್ರಪಂಚ ಕಂಡಂತಹ ಅನುಭವದ ಜೊತೆಗೆ ನನ್ನಷ್ಟಕ್ಕೆ ನಾನು, “ಚೇ ನಾನು ಬರೆದರೆ ಚೆನ್ನಾಗಿ ಬರಿಯಬೇಕು‌. ಭಾವನೆಗಳನ್ನ ಪದಗಳ ರೂಪದಲ್ಲಿ ಸರಿಯಾಗಿ ವ್ಯಕ್ತ ಪಡಿಸೋಕೆ ಪ್ರಯತ್ನ ಮಾಡಬೇಕು” ಎಂದು ಮನಸಲ್ಲೇ ಅಂದ್ಕೊಂಡೆ. ಈ ಘಟನೆ ನನ್ನ ಮನದಲ್ಲಿ ಅಚ್ಚಳಿಯದಂತೆ ಉಳಿದು ಬಿಟ್ಟಿದೆ. ***************************

ಪುಟ್ಟಿ ಅನ್ನೊ ಮೊದಲ ಪದ್ಯ Read Post »

ಇತರೆ

ಮೊದಲ ಕವಿತೆಯ ಹುಟ್ಟು

ಮೊದಲ ಕವಿತೆಯ ರೋಮಾಂಚನ ಅರ್ಪಣಾ ಮೂರ್ತಿ ಸುಮಾರು ಮೂರು ವರ್ಷಗಳ ಹಿಂದಿರಬಹುದು, ಸ್ಮಾರ್ಟ್ ಫೋನ್ ಬಳಸಲು ಬಾರದ ದಿನಗಳಲ್ಲಿ ಅಚಾನಕ್ಕಾಗಿ ಉಡುಗೊರೆಯಾಗಿ ಸಿಕ್ಕಿದ ಸ್ಮಾರ್ಟ್ ಫೋನ್ ಮಂತ್ರದಂಡ ಕೈಗೆ ಸಿಕ್ಕಷ್ಟೇ ಖುಷಿ ತಂದಿತ್ತು. ಸಾಮಾಜಿಕ ಜಾಲತಾಣಗಳ ಬಳಕೆ ಅಭ್ಯಾಸವಿಲ್ಲದ ನನಗೆ ಎಫ್ಬಿಯ ಕುರಿತು ಒಂದು ಸಣ್ಣ ಕುತೂಹಲವನ್ನು ನನ್ನೊಳಗೆ ಮೂಡಿಸಿತ್ತು. ಪರಿಚಯದ ಗೆಳೆಯರ ಮಾತಿನಂತೆ ಕೆಲವೇ ಕೆಲವು ಬರಹಗಾರರ ಕವಿಗಳ ಸ್ನೇಹಪಟ್ಟಿಯಲ್ಲಿ ನಾನೂ ಸಹ ಸ್ಥಾನ ಗಿಟ್ಟಿಸಿದ್ದೆ. ಎಫ್ಬಿ ಲೋಕದಲ್ಲಿ ಗುರುತಿಸಿಕೊಂಡಿದ್ದ ಕವಿಗಳ ಸಾಲಿನಲ್ಲಿ ನಾ ಕಾಣದ ಬಿಂದುವಿನಂತಿದ್ದರೂ, ಅವರುಗಳು ಕವಿತೆ ಕಟ್ಟುವ ಪರಿ ನನಗಂತೂ ಅತೀ ಸೋಜಿಗ, ಕವಿತೆಯೆಡೆಗಿನ ಕುತೂಹಲ ತಣಿಸಿಕೊಳ್ಳಲಾದರೂ ಅವರುಗಳನ್ನ ಮಾತನಾಡಿಸಿಬಿಡಲೇ ಎಂದು ಅದೆಷ್ಟೋ ಬಾರಿ ಅನಿಸಿದ್ದರೂ ಅವರ ಹಮ್ಮು ಬಿಮ್ಮುಗಳ ನಡುವೆ ನನ್ನ ಸಂಕೋಚ ದುಪ್ಪಟ್ಟಾಗಿತ್ತು. ಈ ನಡುವೆ ಅತೀ ಹೆಚ್ಚು ಪ್ರೇಮಕವಿತೆಗಳ ನವಿರಾಗಿ ಹೆಣೆಯುತ್ತಿದ್ದ ಕವಿಮಿತ್ರರೊಬ್ಬರನ್ನು ಕೇಳಿಯೇ ಬಿಟ್ಟಿದ್ದೆ, ಇಷ್ಟು ಚೆಂದದ ಪದಗಳ ಹೆಣಿಕೆ ಹೇಗೆ ಸಾಧ್ಯ ಸರ್ ಅಂತ, ಆ ಕವಿಮಿತ್ರರಂತೂ ಅವರ ಕವಿತೆಯಷ್ಟೇ ಸರಳ ವ್ಯಕ್ತಿ, ಎಷ್ಟು ಮುಕ್ತವಾಗಿ ಮಾತಿಗಿಳಿದರೆಂದರೆ ಒಂದು ಆತ್ಮೀಯತೆಯ ಪರಿಧಿಯೊಳಗೆ ಸೇರಿದ ಅನುಭವವಾಯ್ತು. ಅವರು ಹೇಳಿದ್ದಿಷ್ಟು, ನೋಡು ಹುಡುಗಿ ಕವಿತೆ ಕಟ್ಟುವುದು ಕಷ್ಟವಲ್ಲ, ನೀ ಕೂಡ ಚೆಂದವಾಗಿ ಪದ ಕಟ್ಟಬಹುದು, ಸುತ್ತಲಿನ ಲೋಕ ಅವಲೋಕಿಸು, ನಂತರ ಅದನ್ನೆಲ್ಲ ಕಣ್ಮುಚ್ಚಿ ಧ್ಯಾನಿಸು, ಮನದೊಳಗೆ ಮೂಡಿದ ಪದಗಳ ಒಂದಕ್ಕೊಂದು ನಾಜೂಕಾಗಿ ಸೇರಿಸು ಇದಿಷ್ಟೇ ಕವಿಯ ಗುಟ್ಟು ಅಂದಿದ್ರು. ನಾ ನಕ್ಕು ಸುಮ್ಮನಾಗಿದ್ದೆ. ನಾನೋ ಕಾಲೇಜು ದಿನಗಳಲ್ಲಿ ಓದಿದ ಪದ್ಯಗಳ ಹೊರತಾಗಿ ಕವಿತೆಯ ಗಂಧಗಾಳಿಯೇ ಅರಿಯದವಳು ಇನ್ನು ಕವಿತೆ ಕಟ್ಟುವುದಂತೂ ಅಸಾಧ್ಯ ಎನ್ನುತ್ತಲೇ ಸುಮ್ಮನಾಗಿದ್ದೆ. ಅಪರೂಪಕ್ಕೊಮ್ಮೆ ಮಾತಿಗಿಳಿಯುತ್ತಿದ್ದ ಕವಿಮಿತ್ರರ ಮೊದಲ ಪ್ರಶ್ನೆ, ಏನಾದರೂ ಬರೆಯಲು ಪ್ರಯತ್ನಿಸಿದಿರಾ ಎನ್ನುವುದೇ ಆಗಿತ್ತು. ಇಲ್ಲ ಗುರುಗಳೇ ನನ್ನಿಂದ ಆಗದ ಕೆಲಸ ಎಂದು ನಾ ಕೂಡ ಸುಮ್ಮನಾಗುತ್ತಿದ್ದೆ. ಈ ನಡುವೆ ಪದವಿ ಕಾಲೇಜಿನ ಪರೀಕ್ಷೆಗಳು ಶುರುವಾಗಿತ್ತು, ಇನ್ನೂ ನೆನಪು ಹಸಿಯಿದೆ, ಡಿಸೆಂಬರ್ ಎರಡನೇ ತಾರೀಖು ಮಧ್ಯಾಹ್ನದ ಪರೀಕ್ಷಾ ಕರ್ತವ್ಯ ನನ್ನದಿತ್ತು. ಪರೀಕ್ಷೆ ಶುರುವಾಗಿ ವಿದ್ಯಾರ್ಥಿಗಳು ಬರೆಯಲು ತೊಡಗಿದ ಅರ್ಧ ಗಂಟೆಗೆಲ್ಲಾ ಧೋ ಎಂದು ಮಳೆ ಶುರುವಾಗಿತ್ತು. ಮಳೆಯೆಂದರೆ ಯಾವಾಗಲೂ ಹೀಗೆ ಮನದೊಳಗೆ ಸಣ್ಣ ಪುಳಕ ಹುಟ್ಟಿಸದೇ ಇರಲಾರದೇನೋ, ಕೊಠಡಿಯಲ್ಲಿ ಅಡ್ಡಾಡುತ್ತಾ ಕಿಟಕಿ ಎದುರು ಬಂದು ನಿಂತಿದ್ದೆ. ಗುಬ್ಬಿ ಗಾತ್ರಕ್ಕಿಂದ ಸ್ವಲ್ಪವೇ ದೊಡ್ಡದಿದ್ದ ಒಂದು ಚೆಂದದ ಹಕ್ಕಿ, ವಿದ್ಯುತ್ ತಂತಿಯ ಮೇಲೆ ವೈರಾಗ್ಯ ತಳೆದಂತೆ ಮಳೆಯಲ್ಲಿ ತೊಯ್ದು ಮುದ್ದೆಯಂತೆ ಕೂತಿತ್ತು. ಅರೇ ಇದೇನಾಯ್ತು ಈ ಹಕ್ಕಿಗೆ ಎಂದು ಕೌತುಕದಲ್ಲೇ ಅದರತ್ತ ದೃಷ್ಟಿ ನೆಟ್ಟು ನಿಂತಿದ್ದೆ, ಸುಮಾರು ಎರಡು ಗಂಟೆಗಳ ಕಾಲ ಕುಂಭದ್ರೋಣ ಮಳೆಯಂತೆ ಸುರಿದ ಮಳೆಯಲ್ಲಿ ಅಲುಗದೇ ಕುಳಿತ ಆ ಹಕ್ಕಿ ನನ್ನ ಮನಸ್ಸನ್ನು ಅಲುಗಿಸಿದ್ದು ಸುಳ್ಳಲ್ಲ. ಮಳೆ ನಿಂತಂತೇ ಆ ಹಕ್ಕಿ ಅದೆತ್ತಲೋ ಹಾರಿತ್ತು. ಆಗಲೇ ಕವಿಮಿತ್ರರ ಮಾತು ನೆನಪಾಗಿತ್ತು, ಸುತ್ತ ಕಂಡದ್ದು ಅವಲೋಕಿಸು, ಧ್ಯಾನಿಸು, ಪದ ಪೋಣಿಸು… ಹೌದು, ಆಗ ಹುಟ್ಟಿದ ನನ್ನ ಮೊದಲ ಕವಿತೆಯ ಮೊದಲ ಸಾಲು “ಅದಾವ ಮುನಿಸೋ ಇಲ್ಲ ಕಲ್ಲಾದ ಮನಸೋ, ಗೌತಮನ ಹಾದಿ ಕಾದ ಅಹಲ್ಯೆಯ ಕಂಗಳ ಕಾಯುವಿಕೆಯೋ, ಇಲ್ಲ ಕಲ್ಲೊಳಗಿನ ಮನದ ವೇದನೆಯೋ” ಬಾಲಿಶವೋ, ಅಪಕ್ವವೋ ಒಟ್ಟಿನಲ್ಲಿ ಮೊದಮೊದಲು ಮನದೊಳಗೆ ನಾ ಕಟ್ಟಿದ ಪದಗಳ ಸಾಲು ಈಗಲೂ ನವಿರು ನೆನಪುಗಳ ಸಾಲಿನಲ್ಲಿ ಸೇರಿ ಹೋಗಿದೆ. ಕೊನೆಗೂ ಪೂರ್ಣಗೊಳಿಸಿದ ಈ ಕವಿತೆಯನ್ನು ಅತಿ ಹಿಂಜರಿಕೆಯಿಂದಲೇ ಮುಖಪುಸ್ತಕದ ಗೋಟೆಗಂಟಿಸಿದ್ದೆ. ಎಲ್ಲರ ಪ್ರತಿಕ್ರಿಯೆ ಹೇಗಿರಬಹುದೆಂದು ನೆನೆದು, ನೆನೆದು ಮುದ್ದೆಯಾದ ಹಕ್ಕಿಗಿಂತಲೂ ಹೆಚ್ಚಿಗೆ ಸಂಕೋಚದಿಂದಲೇ ಮುದ್ದೆಯಾಗಿದ್ದೆ. ನನ್ನ ನಿರೀಕ್ಷೆ ಹುಸಿಗೊಳಿಸುವಂತೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ಬಂತು. ಮೊದಲ ಕವಿತೆ ನನ್ನ ಉಳಿದ ಕವಿತೆಗಳಿಗೆ ಅಡಿಪಾಯವಾಯ್ತು, ಬರೆಯುವ ಉತ್ಸಾಹ ಹೆಚ್ಚಿದಂತೆಲ್ಲಾ ಈಗೀಗ ಮತ್ತಷ್ಟು ಪಕ್ವವಾಗಿ ಪದಗಳನ್ನು ಜೋಡಿಸಲು ಕಲಿಯುತ್ತಿದ್ದೇನೆ. ಅದೆಷ್ಟೇ ಕವಿತೆಗಳನ್ನು ಬರೆದರೂ, ಧೋ ಎಂದು ಸುರಿವ ಮಳೆ ನನ್ನ ಮೊದಲ ಕವಿತೆಯ ರೋಮಾಂಚನ ಇಮ್ಮಡಿಗೊಳಿಸುತ್ತದೆ ಈಗಲೂ. ************************************************************

ಮೊದಲ ಕವಿತೆಯ ಹುಟ್ಟು Read Post »

You cannot copy content of this page

Scroll to Top