ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ವೃತ್ತಿಯಷ್ಟೇ ಹವ್ಯಾಸ ಮುಖ್ಯ

ಲೇಖನ ಚಂದಕಚರ್ಲ ರಮೇಶ ಬಾಬು ವೃತ್ತಿ ಅಂದರೆ ನಾವು ಜೀವನಕ್ಕಾಗಿ ಆರಿಸಿಕೊಂಡ ಕೆಲಸ. ಆ ಕೆಲಸದಲ್ಲಿ ನಮಗಿಷ್ಟವಿಲ್ಲದಿದ್ದರೂ ಹೊಟ್ಟೆ ಹೊರೆಯುವುದಕ್ಕಾಗಿ ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ. ಮೇಲಧಿಕಾರಿಯ ದಬ್ಬಾಳಿಕೆ, ಅಲ್ಲಲ್ಲಿ ವರ್ಗಾವಣೆ, ಗ್ರಾಹಕರ ಜೊತೆ ಘರ್ಷಣೆ, ಸಹೋದ್ಯೋಗಿಗಳ ಕಿರುಕುಳ ಇವೆಲ್ಲ ವೃತ್ತಿಯ ಜೊತೆಯಿದ್ದು, ನಾವು ಗಳಿಸುವ ಸಂಬಳದ ಜೊತೆ ಬಂದು ಬೀಳುವ ಅಡ್ಡ ಒತ್ತಡಗಳು. ಇವನ್ನೆಲ್ಲ ತೂಗಿಸಿಕೊಂಡು ಹೋಗಲೇಬೇಕಾದ ಅನಿವಾರ್ಯತೆ. ಆಗ ನಮಗೆ ಗೊತ್ತಿಲ್ಲದೆಯೇ ನಮ್ಮಲ್ಲಿ ಒತ್ತಡ ಜಾಸ್ತಿಯಾಗುತ್ತದೆ. ಮನೆ, ಮಡದಿ, ಮಕ್ಕಳು ಮನೆಯಲ್ಲಿಯ ನೆಮ್ಮದಿ ಸ್ವಲ್ಪ ಮಟ್ಟಿಗೆ ಈ ಒತ್ತಡವನ್ನು ಕಮ್ಮಿ ಮಾಡುವಲ್ಲಿ ಸಹಾಯಕವಾದರೂ, ವೈಯಕ್ತಿಕ ಸ್ತರದಲ್ಲಿ ಯಾವುದಾದರು ಹವ್ಯಾಸ ಇದ್ದಲ್ಲಿ ಅಥವಾ ಬೆಳೆಸಿಕೊಂಡಲ್ಲಿ ಅದು ಒತ್ತಡವನ್ನು ಇನ್ನೂ ಕಮ್ಮಿ ಮಾಡುವ ಸಾಧನವಾಗಬಹುದು. ಈ ನಿಟ್ಟನಲ್ಲಿ ಹವ್ಯಾಸದ ಪಾತ್ರ ಮಹತ್ವವಿರುವುದಾಗುತ್ತದೆ. ಹವ್ಯಾಸ ಎನ್ನುವುದು ಏನು ಎಂದು ಒಮ್ಮೆ ನೋಡೋಣ.” ಕೇವಲ ಹಣಕ್ಕಾಗಿ ಮಾಡದೆ ಆತ್ಮ ಸಂತೋಷಕ್ಕಾಗಿ ಮಾಡುವ, ದೈನಂದಿನ ಬದುಕಿನ ಆಗುಹೋಗುಗಳ ನಡುವೆ ಮಾನಸಿಕ ಹತಾಶೆಯನ್ನು ಕಳೆದುಕೊಳ್ಳಲು ಮಾಡುವ ಕೆಲಸ’ ಎಂದು ಒಂದು ನಿರ್ವಚನವಿದೆ. ಹವ್ಯಾಸ ತಂತಾನೇ ಬೆಳೆದು ಬಂದಿರಬಹುದು ಅಥವಾ ಬೆಳೆಸಿಕೊಂಡಿರಲೂ ಬಹುದು. ಉದಾ: ಒಬ್ಬರಿಗೆ ಚಿತ್ರಕಲೆ ಸ್ವತಃ ಸಿದ್ಧಿಸಿರಬಹುದು. ಕೆಲವರು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬಹುದು. ಯಾವುದೇ ಇಂಥ ಚಟುವಟಿಕೆಯನ್ನು ನಾವು ಹವ್ಯಾಸವೆನ್ನ ಬಹುದಾಗಿದೆ. ಈ ಅಭ್ಯಾಸಗಳ ಬಗ್ಗೆ ಆಂಗ್ಲ ಭಾಷೆಯ ಒಂದು ಚಿಕ್ಕ ಪ್ರಯೋಗ ನೋಡೋಣ. ಹವ್ಯಾಸ ವೃತ್ತಿಯಾಗಲೂ ಬಹುದು. ಚೆನ್ನಾಗಿ ಬರೆಯುವ ಕಲೆ ಇರುವವನು ಪತ್ರಿಕಾ ಕಛೇರಿಗೆ ಸೇರಿ ಅದರಿಂದ ಹಣ ಗಳಿಸಿದರೆ ಅದು ವೃತ್ತಿಯಾಗಿಬಿಡುತ್ತದೆ. ಆದಕಾರಣ ಯಾವುದು ಹವ್ಯಾಸ ಅಥವಾ ಯಾವುದು ವೃತ್ತಿ ಎಂದು ವಿಂಗಡನೆ ಮಾಡುವುದು ಪರಿಸ್ಥಿತಿಗಳ ಮೇಲೆ ಅವಲಂಬಿಸಿರುತ್ತದೆ. ಕೆಲ ಹವ್ಯಾಸಗಳು ಮನುಷ್ಯನ ಅವನತಿಗೀಡು ಮಾಡುವುವೂ ಆಗಿವೆ. ಇವುಗಳನ್ನು ಹವ್ಯಾಸವೆನ್ನಲಾಗುವುದಿಲ್ಲ. ಆದರೆ ಇವುಗಳನ್ನು ಬೆಳೆಸಿಕೊಳ್ಳುವರು ಹವ್ಯಾಸವೆಂದಲೇ ಬೆಳೆಸಿಕೊಂಡು ಅವುಗಳು ಅಭ್ಯಾಸವಾಗಿ ಬಿಡಲಾರದಾಗುತ್ತವೆ. ಉದಾ: ಜೂಜು, ಕುಡಿತ ಮೊದಲಾದವು. ಇವುಗಳಿಂದ ಹಣ ಪೋಲಾಗುವುದಲ್ಲದೆ ಆರೋಗ್ಯ ಕೆಡುತ್ತದೆ. ಈ ದುರಭ್ಯಾಸಗಳ ಬಗ್ಗೆ ಆಂಗ್ಲ ಭಾಷೆಯಲ್ಲಿ ತಮಾಷೆಗೆ ಹೀಗೆ ಹೇಳುತ್ತಾರೆ. ಆಂಗ್ಲದಲ್ಲಿ ಅಭ್ಯಾಸ ಅಥವಾ ಚಟಕ್ಕೆ habit ಎನ್ನುತ್ತಾರೆ. ನಿದಾನವಾಗಿ  ಬಿಡುವ ಪ್ರಯತ್ನದಲ್ಲಿ ಅದರಲ್ಲಿಯ ಐದು ಅಕ್ಷರಗಳಲ್ಲಿ ಮೊದಲನೆಯ ಅಕ್ಷರ ತೆಗೆದರೆ ಉಳಿಯುವದು a bit . ಅಂದರ ಅದರ ಶೇಷ ಉಳಿಯುತ್ತದೆ. ಮತ್ತೊಂದು ಅಕ್ಷರ ಅಂದರೆ a ತೆಗೆದರೂ ಒಂಚೂರು bit ಉಳಿಯುತ್ತದೆ. ಮುಂದುವರೆದು ಮತ್ತೊಂದು ತೆಗೆದರೂ  ಅದು it ಉಳಿಯುತ್ತದೆ. ಅಷ್ಟು ಜಿಡ್ಡಾಗಿ ಹತ್ತಿಕೊಂಡಿರುತ್ತದೆ ಎಂದು ಉದಾಹರಿಸುತ್ತಾರೆ. ದುರಭ್ಯಾಸ ವ್ಯಸನವಾಗುವ ಮುಂಚೆಯೇ ಅದನ್ನು ಗುರ್ತಿಸಿ ಬಿಟ್ಟುಬಿಡಬೇಕು. ಹವ್ಯಾಸದ ನಿರ್ವಚನದಲ್ಲೇ “ ಕೇವಲ ಹಣಕ್ಕಾಗಿ ಮಾಡದೆ, ಆತ್ಮ ಸಂತೋಷಕ್ಕಾಗಿ “ ಮಾಡುವ ಚಟುವಟಿಕೆ ಎಂದು ಹೇಳಲಾಗಿದೆ. ಇದು ಏಕೆ ಮುಖ್ಯ ಎಂದು ಒಮ್ಮೆ ನೋಡೋಣ. ಇತ್ತೀಚಿನ ಹಲವಾರು ಸಂದರ್ಶನಗಳಲ್ಲಿ ಅಭ್ಯರ್ಥಿಗಳಿಗೆ ಅವರ ವೃತ್ತಿಪರವಾದ ಪ್ರಶ್ನೆಗಳನ್ನೇ ಅಲ್ಲದೆ ನಿಮ್ಮ ಹವ್ಯಾಸವೇನು ಎಂದು ಕೇಳುತ್ತಿರುವುದು ನಮಗೆಲ್ಲ ಕೇಳಿಬಂದಿದೆ. ಆಯ್ಕೆ ಮಾಡುವಾಗ ಈ ಅಂಶವನ್ನೂ ಪರಿಗಣನೆಗೆ ತೆಗೊಳ್ಳುವುದು ಮುಖ್ಯ ಎಂದು ಮಾನವ ಸಂಪನ್ಮೂಲದ ಅಧಿಕಾರಿಗಳು ಅಭಿಪ್ರಾಯ ಪಡುತ್ತಿದ್ದಾರೆ. ವೃತ್ತಿಯ ಒತ್ತಡ ಮತ್ತು ಹವ್ಯಾಸಗಳೆರಡರನ್ನೂ ಸಮತೋಲನೆ ಮಾಡಬೇಕಾಗಿರುವ ಅವಶ್ಯಕತೆ ಎಲ್ಲ ಕ್ಷೇತ್ರಗಳಲ್ಲೂ ಕಂಡು ಬಂದಿದೆ. ಹವ್ಯಾಸ  ಮನಸ್ಸಿಗೆ ಹಿತವೆನಿಸಿದ್ದು ಮಾಡುವಂಥದ್ದಾಗಿದೆ. ಹಾಗಾಗಿ ಮನಸ್ಸು ಪ್ರಫುಲ್ಲವಾಗುತ್ತದೆ. ಅದರಲ್ಲೂ ಒಂದು ಸ್ತರದ ಪರಿಣಿತಿ ಸಾಧಿಸಿದರೆ ಅದು ಇನ್ನೂ ಹುಮ್ಮಸ್ಸು ತುಂಬುತ್ತದೆ. ಧನಾತ್ಮಕ ಶಕ್ತಿ ಹೆಚ್ಚುತ್ತದೆ. ನಮ್ಮ ಮೈಯಲ್ಲಿ ಬಿಡುಗಡೆಯಾಗುವ ತತ್ಸಂಬಂಧೀ ಹಾರ್ಮೋನುಗಳಿಂದ ನಮ್ಮ ಆರೋಗ್ಯ ಸುಧಾರಿಸುತ್ತದೆ. ಆದಕಾರಣ ಮೈ ಮತ್ತು ಮನಗಳ ಹಿತಕ್ಕಾಗಿ ಹವ್ಯಾಸ ಅವಶ್ಯಕವಾಗಿದೆ. ನಾವು ಇದುವರೆಗೆ ನೋಡಿದಂತೆ ಹವ್ಯಾಸಗಳು ಸ್ವತಃ ಬೆಳೆದಿರಬಹುದು. ಲಲಿತ ಕಲೆಗಳು ಇದರ ಕೆಳಗೆ ಬರುತ್ತವೆ. ಇವೆಲ್ಲ ಬಹುತೇಕ ಸ್ವತಃ ಸಿದ್ಧಗಳೇ. ಬರವಣಿಗೆ, ಹಾಡುಗಾರಿಕೆ, ಚಿತ್ರಕಲೆ ಇವೆಲ್ಲ ದೈವದತ್ತ ಪ್ರತಿಭೆಗಳು. ಇವುಗಳಿಗೆ ಮೆರಗನ್ನು ಕೊಟ್ಟು ಬೆಳೆಸಿ ಹವ್ಯಾಸಗಳನ್ನಾಗಿ ಮಾಡಿಕೊಂಡರೆ ಇತರೆ ಹವ್ಯಾಸಗಳಿಗಾಗಿ ಹುಡುಕಬೇಕಾಗುವುದಿಲ್ಲ. ಹಲವಾರು ಮಹನೀಯರು ಈ ತರದ ತಮ್ಮ ಪ್ರತಿಭೆಗಳನ್ನು ಅನುಸರಿಸಿ ಅವುಗಳಲ್ಲಿ ಸಹ ಹೆಸರು ಗಳಿಸಿದ್ದಾರೆ. ನಮ್ಮ ಮಾಜೀ ಪ್ರಧಾನಿ ಶ್ರೀ ವಾಜಪೇಯಿ ಅವರು ಕವಿಗಳಾಗಿದ್ದರು. ಮಾಜೀ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಮ್ ಅವರು ಅತ್ಯುತ್ತಮ ಬರಹಗಾರರಾಗಿದ್ದರು.  ಇನ್ನು ಹವ್ಯಾಸವನ್ನು ಬೆಳೆಸಿಕೊಳ್ಳುವುದರ ಕಡೆಗೆ ಗಮನ ಹರಿಸೋಣ. ಪುಸ್ತಕ ಓದುವುದು, ದೇಶ ಸುತ್ತುವುದು, ತೋಟಗಾರಿಕೆ, ಪರ್ವತಾರೋಹಣ, ಯೋಗ ಮತ್ತು ಪ್ರಾಣಾಯಾಮ ಹೀಗೆ ಕೆಲವು ರೂಢಿ ಮಾಡಿಕೊಳ್ಳಬಹುದು. ಇವುಗಳಲ್ಲಿ ಸಹ ನಮ್ಮ ಮನಸ್ಸಿಗೆ ಯಾವುದು ಹಿತವೆನಿಸುತ್ತದೋ ಅದನ್ನು ಆಯ್ದುಕೊಂಡು ಅವುಗಳಲ್ಲಿ ತೊಡಗಬಹುದು. ತಾಂತ್ರಿಕ ವಿಸ್ಫೋಟದ ಈ ಯುಗದಲ್ಲಿ ಈ ದಿಕ್ಕಿನಲ್ಲಿ ತುಂಬಾ ಆಯ್ಕೆಗಳು ಸಿಗುತ್ತಿವೆ.     ಬರೀ ಯುವ ಪೀಳಿಗೆಯಲ್ಲದೆ ವಯಸ್ಸಾದವರು ಸಹ ಇವುಗಳ ಲಾಭ  ಪಡೆಯುತ್ತಿದ್ದಾರೆ. ಉದಾ: ವಾಟ್ಸಪ್, ಫೇಸ್ಬುಕ್, ಕರೊಕೆ ಹಾಡುಗಾರಿಕೆ ಮುಂತಾದವು.  ಲಾಕ್ ಡೌನ್ ಸಮಯದಲ್ಲಂತೂ ಇವುಗಳ ಉಪಯೋಗ ಜಾಸ್ತಿಯಾಗಿ ಹವ್ಯಾಸಗಳ ಹೊಸ ಬಾಗಿಲನ್ನೇ ತೆರೆದಿದೆ. ಟಿವಿ, ಅಂತರ್ಜಾಲ, ಚರವಾಣಿ ಇವೆಲ್ಲವೂ ಇಲ್ಲದ ಸಮಯದಲ್ಲಿ ಸ್ನೇಹಿತರೆಲ್ಲ ಒಟ್ಟಾಗಿ ಹರಟೆ ಹೊಡೆಯುತ್ತಿದ್ದುದ್ದು ಸಹ ಉಲ್ಲಾಸಕ್ಕಾಗಿ ಮಾಡಿಕೊಂಡ ಹವ್ಯಾಸವೇ. ನಾಟಕಗಳು, ಸಂಗೀತ ಕಚೇರಿಗಳು, ಸಾಹಿತ್ಯ ಕಾರ್ಯಕ್ರಮಗಳು, ಕವಿಗೋಷ್ಠಿ, ಬಯಲು ನಾಟಕ, ಯಕ್ಷಗಾನ  ಇವೆಲ್ಲ ಮನೋಲ್ಲಾಸದ ದಾರಿಗಳು. ಪಾತ್ರಧಾರಿಗಳೇ ಆಗಬೇಕಾಗಿಲ್ಲ, ಪ್ರೇಕ್ಷಕರಾಗುವ ಹವ್ಯಾಸವನ್ನು ಸಹ ಹಾಕಿಕೊಳ್ಳ ಬಹುದು. ಹವ್ಯಾಸಗಳಿಗಾಗಿ ಸಮಯವಿಲ್ಲ ಎಂದು ಹೇಳುವುದು ಬೇಡ. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕಾಗಿ ಹವ್ಯಾಸ ಬೆಳೆಸಿಕೊಳ್ಳುವುದು ಬರೀ ಒಳಿತೇ ಅಲ್ಲ ಅನಿವಾರ್ಯವು ಸಹ ಈಗ. ಹಾಗಂತ ಯಾವುದೇ ಹವ್ಯಾಸ ಚಟವಾಗಬಾರದು. ಅದರಿಂದ ನಮ್ಮ ಮಾನಸಿಕ ಅಥವಾ ದೈಹಿಕ ಸ್ವಾಸ್ಥ್ಯ ಕೆಡಬಾರದು. ಹಣ ಪೋಲಾಗಬಾರದು. ಒಂದು ಒಳ್ಳೆಯ ಹವ್ಯಾಸ ನಮ್ಮ ವೃತ್ತಿ ಜೀವನದ ಒತ್ತಡವನ್ನು ಕಮ್ಮಿಮಾಡಿದರೆ, ಚಟವಾದಾಗ ಅದು ಸಹ ಒತ್ತಡ ಕೊಟ್ಟು ನಮ್ಮ ಸ್ಥಿತಿಯನ್ನು ಹದಗೆಡಿಸುತ್ತದೆ. ಮಿತಿ ಅರಿತು ಅಭ್ಯಾಸ ಮಾಡಿಕೊಂಡು ಹವ್ಯಾಸದ ಲಾಭ ಪಡೆಯುವುದೇ ವಿಜ್ಞರ ಜಾಣತನ. *********************************

ವೃತ್ತಿಯಷ್ಟೇ ಹವ್ಯಾಸ ಮುಖ್ಯ Read Post »

ಇತರೆ

ಜೀವನ ಪೂರ್ತಿ ಜೀವದ ಗೆಳೆಯ

ಜಯಶ್ರೀ ಜೆ.ಅಬ್ಬಿಗೇರಿ ಅದೆಷ್ಟೋ ದಿನಗಳಿಂದ ಹಗಲು ರಾತ್ರಿ ಪ್ರಯತ್ನಿಸಿದರೂ ನಿನ್ನನ್ನು ಮರೆಯಲಾಗುತ್ತಿಲ್ಲ. ನಿನ್ನ ನೆನಪುಗಳು ತಲೆಯಿಂದ ಆಚೀಚೆ ಕದಲದೇ ಕರಗದ ಗುಡ್ಡದಂತೆ ಕುಳಿತುಕೊಂಡು ಬಿಟ್ಟಿವೆ. ಅದ್ಯಾಕೋ ಮರೆಯಲಾಗುತ್ತಿಲ್ಲ. ಮರೆಯಬೇಕೆಂದಷ್ಟು ಹಟ ಹಿಡಿದರೂ ನಾ ಮುಂದು ತಾ ಮುಂದು ಎಂದು ಮನಃಪಟಲದ ಮೇಲೆ ನೆನಪಿಗೆ ಬಂದು ಕಾಡುತ್ತವೆ. ಹೀಗೇಕೆ? ಅಂತ ಹೃದಯ ನೂರಾರು ಬಾರಿ ಪ್ರಶ್ನಿಸಿದರೂ ಮನಸ್ಸು ತನ್ನ ಮಾತುಗಳನ್ನು ಹೇಳಲಾಗದೇ ತನ್ನ ನಾಲಿಗೆಗೆ ದೊಡ್ಡದೊಂದು ಬೀಗ ಹಾಕಿಕೊಂಡು ತನ್ನೊಳಗೆ ಮಾತುಗಳನ್ನು ಬಂಧಿಸಿಟ್ಟು ಮೌನದಲ್ಲೇ  ಕ್ಷಣ ಕ್ಷಣವೂ ನನ್ನನ್ನು ಕೊಲ್ಲುತ್ತಿದೆ. ನಿನ್ನೊಂದಿಗೆ ಕಳೆದ ಒಲವಿನ ನೆನಪುಗಳನು ಬಿಟ್ಟು ಬಿಡದೇ ಮನದಾಗಸದಿಂದ ಮಳೆಯ ಹನಿಗಳಂತೆ ಸುರಿಯುತ್ತಿವೆ. ನೀ ದೂರವಿದ್ದರೂ ನಿನ್ನ ನೆನಪುಗಳು ಮಾತ್ರ ಹೃದಯಕ್ಕೆ ತೀರಾ ತೀರಾ ಹತ್ತಿರ.  ಬದುಕಿನ ಪಯಣದಲ್ಲಿ ಸಿಹಿ ಜೇನಿನಂಥ ನಿನ್ನ ಪ್ರೀತಿಯ ನೆನಪುಗಳು ನನ್ನವು. ಬದುಕಲು ಅದೆಷ್ಟೊ ದಾರಿಗಳಿವೆ. ಪ್ರೀತಿಯಲ್ಲಿ ಕವಲು ದಾರಿಯಲ್ಲಿ ನಿಂತ ನನಗೆ ನನ್ನ ಕಂಗಳಿನ ತುಂಬ ನೀನೇ ಬಂದೇ ಬರುತ್ತಿಯಾ ಎಂಬ ನಂಬಿಕೆಯ ಕನಸು ಹೊತ್ತು ರಾತ್ರಿಯೆಲ್ಲ ಕಣ್ಣ ರೆಪ್ಪೆ ಮುಚ್ಚದೇ ಕಾಯುತ್ತಿದ್ದೇನೆ. ಆ ನಂಬಿಕೆಯಲ್ಲಿ ದಿನ ನಿತ್ಯದ ಬದುಕು ಸಾಗುತ್ತಲೇ ಇದೆ. ಅದೆಂತ ಅನಿವಾರ್ಯತೆ ನಿನ್ನನ್ನು ಕಾಡುತ್ತಿದೆಯೊ ಗೊತ್ತಿಲ್ಲ. ಸಹಿಸಲೇಬೇಕಾದ ಅನಿವಾರ್ಯತೆ ನನಗಿದೆ. ನಿನ್ನ ಅನಿವಾರ್ಯತೆಯನ್ನು ವಿರೋಧಿಸಲೂ ಆಗದೇ ಬಿಸಿ ತುಪ್ಪ ಬಾಯಲ್ಲಿ ಹಾಕಿಕೊಂಡ ಪರಿಸ್ಥಿತಿ ಅನುಭವಿಸುತ್ತಿದ್ದೇನೆ. ನೀನು ಒಳ್ಳೆಯವನೋ ಕೆಟ್ಟವನೋ ಎಂದು ಗೊತ್ತಾಗುವ ಮುನ್ನವೇ ನೀ ನನ್ನ ಹೃದಯದಲ್ಲಿ ಬಲಗಾಲಿಟ್ಟು ಪ್ರವೇಶ ಪಡೆದಾಗಿತ್ತು. ನಿನ್ನಲ್ಲಿ ನನಗಿರುವುದು ಅತಿಯಾದ ಸ್ನೇಹವೊ ಬೆಳೆದ ಸ್ನೇಹದ ಮುಂದುವರಿದ ಭಾಗವಾದ ಪ್ರೀತಿಯೋ? ಅತಿ ಎನಿಸುವಷ್ಟು ಆಕರ್ಷಣೆಯೋ ಯಾವುದು ಒಂದೂ ತಿಳಿಯುತ್ತಿಲ್ಲ. ಪೂರ್ತಿ ಗೊಂದಲದ ಮಡುವಿನಲ್ಲಿ ಬಿದ್ದಿದ್ದೇನೆ. ನಮ್ಮಿಬ್ಬರ ಸಂಬಂಧಕೆ ಅದ್ಯಾವ ಹೆಸರಿಡಲಿ ತಿಳಿಯದಾಗಿದೆ.? ಹೆಸರಿಟ್ಟು ಸೀಮಿತಗೊಳಿಸುವುದು ಬೇಡವೆಂದು ಮನಸ್ಸು ಹೇಳುತ್ತಿದೆ. ಒಮ್ಮೊಮ್ಮೆ ಪ್ರೀತಿಯ ಹೆಸರಿಟ್ಟು ಬಲೆಗೆ ಸಿಕ್ಕ ಮೀನಿನಂತೆ ಒದ್ದಾಡುವ ಬದಲು ಸ್ನೇಹದ ಕಡಲಲ್ಲಿ ಇಬ್ಬರೂ ಒಂದೇ ದೋಣಿಯಲ್ಲಿ ಪಯಣಿಸುವುದೇ ಒಳ್ಳೆಯದೇನೋ ಅನಿಸುತ್ತಿದೆ. ಬೆರಳುಗಳ ಸಂದಿಯಲ್ಲಿ ನಿನ್ನ ಬೆರಳುಗಳನ್ನು ಸಿಕ್ಕಿಸಿ ಭುಜಕ್ಕೊರಗಿದಾಗ ತಂಗಾಳಿಗೆ ಆಚೀಚೆ ನಲಿದಾಡುವ ಮುಂಗುರುಳುಗಳ ಮೋಡಿಗೆ ಸೋತು ನನ್ನನ್ನೇ ನೋಡುತ್ತಿರುವಾಗ ನಿನ್ನೊಂದಿಗೆ ಹಂಚಿಕೊಳ್ಳದ ವಿಷಯವೇ ಇಲ್ಲ. ಆದರೂ ಒಮ್ಮೆಯೂ ನಿನ್ನ ಮನದ ತರಂಗಗಳಲಿ ನನ್ನ ಪ್ರೀತಿಯೇ ತುಂಬಿಕೊಂಡಿದೆಯೇ? ಎಂದು ಕೇಳಲೇ ಇಲ್ಲ. ಕೇಳಬೇಕೆನಿಸಿದರೂ ನೀನು ತಪ್ಪಾಗಿ ತಿಳಿದು ನನ್ನಿಂದ ದೂರವಾಗಿ ಬಿಡುತ್ತಿಯೇನೋ ಎಂಬ ಭಯದಲ್ಲಿ ಬೇಕಂತಲೇ ಬಾಯಿಗೆ ಬೀಗ ಹಾಕಿದ್ದೆ. ಗೆಳೆಯಾ ನಿಜ ಹೇಳು ನನ್ನೊಂದಿಗೆ ಕಳೆದ ಪ್ರತಿ ಕ್ಷಣವು ನೀನು ಸಂತಸದಿಂದಿರಲಿಲ್ಲವೇ? ಇಷ್ಟು ವರ್ಷ ಜೊತೆಗಿದ್ದರೂ ಜೊತೆಗಾತಿಯಾಗಿ ಬಾಳು ಹಂಚಿಕೊಳ್ಳಲು ಸಿದ್ದಳಿದ್ದಿಯಾ? ಎಂದು ಒಂದು ಸಾರಿ ಕೇಳಲಿಲ್ಲವೇಕೆ? ನನಗಿಂತಲೂ ಹೆಚ್ಚು ಹುಚ್ಚು ಹಿಡಿಸಿಕೊಂಡು ತುಸು ಹೆಚ್ಚೆನಿಸುವ ಹಾಗೆ ಒಳಗೊಳಗೆ ನನ್ನನ್ನು ಪ್ರೀತಿಸುತ್ತಿದ್ದರೂ ಹೇಳಿಕೊಳ್ಳಲಾಗದೇ ಮೌನಿಯಾದೆ. ಅದೇನೆ ಇರಲಿ ನೀನು ಮಾತ್ರ ನನ್ನಿಂದ ದೂರವಾಗಬೇಡ. ಹುಣ್ಣಿಮೆ ರಾತ್ರಿ ಸಾಗರ ಚಂದಿರನ ಮುಟ್ಟಲು ಜಿಗಿಯುವಾಸೆ. ಮನಸ್ಸು ನೆಗೆಯುತ್ತಿದ್ದರೂ ಪ್ರೀತಿಯ ನಿವೇದನೆಯನ್ನು ನಿನ್ನ ಮುಂದಿಡದೇ ಮೌನದಲ್ಲೇ ಕಾಲ ಕಳೆಯುತ್ತಿದ್ದೇನೆ. ನವ ಬಾಳಿನ ಹೊಸ್ತಿಲು ದಾಟುವಾಗ ನನ್ನ ಹೆಜ್ಜೆಯ ಹಿಂದೆ ನಿನ್ನ ಹೆಜ್ಜೆ ಇರುತ್ತದೆಂದು ಸುಂದರ ಕನಸು ಕಂಡಿದ್ದೇನೆ. ಹಾಡು ಹಗಲೇ ಲೂಟಿ ಹೊಡೆಯುವ ನಿನ್ನ ನೆನಪುಗಳಲ್ಲೂ ಅದೇನೋ ಹಿತವೆನಿಸುವ ಭಾವ. ನಿನ್ನ ತುಟಿಯಂಚಿನ ತುಂಟ ನಗು ಓರೆಗಣ್ಣಿನಿದ ಕದ್ದು ಕದ್ದು ನೋಡುತ್ತಿದ್ದ  ನಿನ್ನ ನೋಟ ರಂಗಿನಾಟಕೆ ಹಾತೊರೆಯುತ್ತಿದ್ದ ನಿನ್ನ ಮನಸ್ಸು ಒಲವಿನ ಮಿಡಿತವನ್ನು ತುಂಬಿಕೊAಡ ನಿನ್ನ ಹೃದಯವನ್ನು ನನ್ನಿಂದ ಎಂದೂ ಮರೆಯಲಾಗುವುದಿಲ್ಲ. ಮೊನ್ನೆ ಊರ ದೇವಿಯ ಜಾತ್ರೆಯಲ್ಲಿ ನೀನು ನನ್ನನ್ನೇ ಕದ್ದು ಕದ್ದು ನೋಡಿದ್ದನ್ನು  ಮನಸ್ಸು ಜಿಂಕೆಯಂತೆ ಜಿಗಿದಾಡಿತು.. ಜೀವನ ಪೂರ್ತಿ ನನ್ನ ಜೀವದ ಗೆಳೆಯ ನೀನೇ ಎಂದು ಮನೆಯಲ್ಲಿ ಹೇಳಿ ಒಪ್ಪಿಗೆ ಪಡೆದಾಗಿದೆ.ನನ್ನಪ್ಪ ನಿನ್ನಪ್ಪನೊಂದಿಗೆ ಮಾತಾಡಿಯೂ ಆಗಿದೆ  ಇನ್ನೇಕೆ ಹಮ್ಮು ಬಿಮ್ಮು. ಬಂದು ಬಿಡು ನದಿಯ ದಂಡೆಗೆ ಜೀವನ ಪೂರ್ತಿ ಜೀವದ ಗೆಳತಿಯಾಗಿ ಇದ್ದು ಬಿಡುವೆ ನಿನ್ನ ತೋಳ ತೆಕ್ಕೆಯಲ್ಲಿ. ===========================================================

ಜೀವನ ಪೂರ್ತಿ ಜೀವದ ಗೆಳೆಯ Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು

ಮಹಿಳಾ ಅಧ್ಯಕ್ಷರು ಸಾಹಿತ್ಯ ಪರಿಷತ್ ಅಧ್ಯಕ್ಷರಾಗುವದು ಗೌರವದ ಸಂಕೇತ ಕನ್ನಡ ಸಾಹಿತ್ಯ ಸೇವೆಯ ದ್ಯೇಯದಡಿ ಕನ್ನಡ ಸಾಹಿತ್ಯ ಪರಿಷತ್ ನೂರು ವರ್ಷದ ಸಂಭ್ರಮದಲ್ಲಿರುವದು ಅತ್ಯಂತ ಸಂತಸದ ಸಂಗತಿ. ಈಗಾಗಲೇ ಅನೇಕ ಸಾರಥಿಗಳು ಸಾಹಿತ್ಯ ಪರಿಷತ್ ಆಳಿದ್ದು ತಮಗೆಲ್ಲ ಗೊತ್ತಿರುವ ಸಂಗತಿ ಪ್ರಸ್ತುತ ಶ್ರೀ ಮನು ಬಳಿಗಾರ ಸೇರಿದಂತೆ ಅನೇಕರು ಇಲ್ಲಿ ಅಧ್ಯಕ್ಷೀಯ ಸೇವೆ ಸಲ್ಲಿಸಿದ್ದನ್ನು ಸ್ಮರಿಸಬಹುದು. ಜೊತೆಗೆ ಈ ನಡುವೆ ಗಮನಿಸಬೇಕಾದದ್ದು ಮಹಿಳೆಯರೊಬ್ಬರು ಇನ್ನು ಅಧ್ಯಕ್ಷರಾಗದೆ ಇತಿಹಾಸ ಸ್ರಷ್ಟಿಸದ ವಿಚಾರ. ಈ ದೇಶವನ್ನೇ ಆಳಿದ ಮಹಿಳಾ ಪ್ರಧಾನಿಗಳು ಮಾದರಿ -ಹಾಗೂ ಪರ ವಿರೋದಗಳ ತಿಕ್ಕಾಟ ಸ್ವಾಭಾವಿಕವಿದ್ದರೂ ಕೆಲವು ಬದಲಾವಣೆ ಸಹಜಸಾಧ್ಯ. ಈ ಸಾಹಿತ್ಯ ಕ್ಷೇತ್ರದಲ್ಲೂ ನಾವು ಅಳೆದು ತೂಗಿ ನೋಡಿದರೆ ಸಾಹಿತ್ಯ ಕ್ರಷಿಯಲ್ಲಿ ಹೆಚ್ಚಿಗರು ಮಹಿಳೆಯರೇ. ಹಾಗೂ ಸಂಘಟನೆ ,ಶಿಸ್ತು, ಹಾಗೂ ಇನ್ನೂ ಹೆಚ್ಚಿನ ಕ್ರಾಂತಿ ಸಾಹಿತ್ಯ ಪರಿಷತ್ ನಲ್ಲಿ ಆಗಬೇಕಾಗಿದ್ದು ಇದ್ದು ಆಗುವ ಭರವಸೆ ಭವಿಷ್ಯತ್ ಕಾಲವೇ ಸರಿ. ಯಾಕೆಂದರೆ ಇನ್ನೂ ಅಧಿಕಾರ ಸಿಕ್ಕಿಲ್ಲ, ಅಷ್ಟಕ್ಕೂ ಈ ಎಲ್ಲ ಕೂಗಿಗೆ ಉತ್ತರ ಯಾರು ಮಹಿಳೆಯಾದರೆ ಯಾರು ಸಮರ್ಥರು ?ಎನ್ನುವ ಪ್ರಶ್ನೆ ಹೊಸ ಅನ್ವೇಷಣೆಯೋ ಅಥವಾ ಇದಕ್ಕೆ ಸೂಕ್ತ ಅಕ್ಷರಶಃ ತಯಾರಿಯಲ್ಲಿ ಇದ್ದಾರೋ ಅಥವಾ ಅವರಲ್ಲಿನ ಕೆಲ ಕಷ್ಟ ಸಾಧ್ಯಗಳು ಹೇಗೆ ನೆರವೇರುವವು. ಈ ಎಲ್ಲ ಪ್ರಶ್ನೆಗಳು ಹೊಸ ನಾಳೆಗೆ ಸಿಗುವದಂತೂ ನಿಶ್ಚಿತ .ಎಕಾ ಏಕಿ ಇಂತಹ ಕೂಗಿಗೆ ಸ್ವಾಗತ ಹೇಳಬೇಕಾದರೂ ಸೂಕ್ತರ ಲಭ್ಯತೆ ಕೂಡ ಅಷ್ಟೇ ಮುಖ್ಯ. ಬದಲಾವಣೆ ಜಗದ ನಿಯಮ ಎನ್ನುವ ಹಾಗೆ ಶತಮಾನದ ಈ ಕನಸು ಸಾಕಾರಗೊಳಿಸಲು ಯಾರೆಲ್ಲ ನಿರೀಕ್ಷೆ ಮಾಡುತ್ತ ಇದ್ದೀರಾ  ಅವರಿಗೆಲ್ಲ ಶುಭವಾಗಲಿ .ಆದರೆ ಎಲ್ಲ ಕ್ಷೇತ್ರಗಳಂತೆ ಇಲ್ಲಿ ಮಹಿಳಾ ಸ್ಥಾನ ಕೇಳಿದರೆ ಹಂತ ಹಂತವಾಗಿ ಮೀಸಲಾತಿ ,ಹೀಗೆ ಹತ್ತಲವು ರಾಜಕೀಯ ಅನುಕರಣೀಯ ಪ್ರತ್ಯಕ್ಷ ಬೆಳವಣಿಗೆಗೆ ಕಾರಣವಾಗಬಹುದೇ ?ಎಂಬ ಭಯ ಜೊತೆಗೆ ಶತಮಾನದ ಸಾಹಿತ್ಯ ಪರಿಷತ್ ಉತ್ತುಂಗಕ್ಕೆ ಏರಲಿ, ಶ್ರೇಷ್ಠತೆ ಉಳಿಸಿಕೊಳ್ಳಲಿ ಎಂಬುದೇ ನನ್ನ ಹಾರೈಕೆ. ಶತಮಾನದ ಸಂಭ್ರಮಕೆ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ************************* ಅರುಣ್ ಕೊಪ್ಪ

ಕಸಾಪಗೆ ಮಹಿಳಾ ಅಧ್ಯಕ್ಷರು Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು???

ಹತ್ತಿರ ಬರುತ್ತಿರುವ ಕ.ಸಾ.ಪ. ಚುನಾವಣೆಗಳು ಆಕಾಶಕ್ಕೆ ಸಣ್ಣ, ಸಣ್ಣ ತೂತುಗಳು ಬಿದ್ದು, ಅವುಗಳಿಂದ ಸಣ್ಣ ಸಣ್ಣದಾಗಿ ತೊಟ್ಟಿಕ್ಕುವ ಸೋರುಮಳೆ. ಸೂರ್ಯನ ನಿಚ್ಚಳ ಬಿಸಿಲ ಬೆಳಕಿಲ್ಲದೇ ಸುಂಯ್ಯಂತ ಸಣ್ಣಗೆ ಸೂಸಿ ಬರುವ ತಂಗಾಳಿ ತುಂಬಿದ ಮಳೆ ಮೋಡಗಳು. ಉಣ್ಣೆಕಂಬಳಿ ಹೊದ್ದು ಮನೆಯೊಳಗೆ ಬೆಚ್ಚಗೆ ಮಲಗಬೇಕೆನ್ನುವ ಆಶ್ಲೇಷ ಮಳೆಯ ಸುಡುರುಗಾಳಿ. ಮುಗಿಲು ತುಂಬಾ ತುಂಬಿ ತುಳುಕುವ ಹೊಗೆಮಂಜು ಭರಿತ ಶೀತದ ವಾತಾವರಣ‌. ಇಂತಹ ಬರ್ಫಿನ ಶೀತಗಾಳಿಗಳ ನಡುವೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಳ ಸಿದ್ದತೆಯ ಸುದ್ಧಿಗಳು ಸಣ್ಣಗೆ ಕೇಳಿ ಬರುತ್ತಿವೆ. ಒಂದಿಬ್ಬರು ಅಭ್ಯರ್ಥಿಗಳು ಫೀಲ್ಡಿಗಿಳಿದು  ಮತಬೇಟೆಗೆ ತೊಡಗಿರುವ ವಿದ್ಯಮಾನಗಳು ಬೇರೆ,ಬೇರೆ ರೂಪ ಮತ್ತು ಮೂಲಗಳಲ್ಲಿ ಗೋಚರವಾಗುತ್ತಿವೆ. ಕನ್ನಡ ಸಂಸ್ಕೃತಿಗೆ ಘೋರ ಅಪಚಾರದಂತೆ ಮತ್ತೆ ಯಥಾಪ್ರಕಾರ, ಹೊಲಬುಗೆಟ್ಟ ರಾಜಕಾರಣ ಮಾದರಿಯ ಜಾತಿ, ಮತ, ಪ್ರಾದೇಶಿಕತೆಯ ಪ್ರಲೋಭನೆಗಳು ಸಹಜವಾಗಿ ಮುಂಚೂಣಿಗೆ ಬರುತ್ತಿವೆ. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನೂರೈದು ವರುಷಗಳ ಇತಿಹಾಸದಲ್ಲಿ ಮಹಿಳೆಯೊಬ್ಬಳು ಪರಿಷತ್ತಿನ ಅಧ್ಯಕ್ಷರಾದ ನಿದರ್ಶನವಿಲ್ಲ. ಅಷ್ಟೇಯಾಕೆ ಮಹಿಳೆಯರು ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ನಿದರ್ಶನಗಳೂ ಅಪರೂಪವೇ. ನಮ್ಮನಡುವೆ ಐ.ಟಿ. ಬಿ.ಟಿ.ಯಂತಹ ಉನ್ನತ ವಿದ್ಯುನ್ಮಾನ ಉದ್ಯಮಗಳನ್ನೇ ಸ್ಥಾಪಿಸಿ ಹೆಸರು ಮಾಡಿದ ಮಹಿಳೆಯರಿದ್ದಾರೆ. ರಾಜಕೀಯವಾಗಿ ಮಹಿಳೆಯರು ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ರಾಜ್ಯಗಳನ್ನು, ದೇಶವನ್ನು ಆಳಿದ ಯಶಸ್ವಿ ನಿದರ್ಶನಗಳಿರುವಾಗ ಸಾಂಸ್ಕೃತಿಕ ಸಂಸ್ಥೆಯೊಂದರ ಚುಕ್ಕಾಣಿ ಹಿಡಿದು ಮುನ್ನಡೆಸುವುದು ಮಹಿಳೆಯಿಂದ ಸಾಧ್ಯವಿಲ್ಲವೇ.? ಹಾಗಿದ್ದಲ್ಲಿ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಮಹಿಳೆಯರ ಹೆಸರು ಚಲಾವಣೆಗೆ ಬರುತ್ತಿಲ್ಲವೇಕೆ.? ಮಹಿಳೆಯ ಹೆಸರು ಚಾಲನೆಗೆ, ಚರ್ಚೆಗೆ ಬಾರದಂತೆ ಪುರುಷ ಪ್ರಧಾನ ಪುರುಷಾಹಂಕಾರಗಳ ಸೂಕ್ಷ್ಮ ಶ್ಯಾಣೇತನಗಳು ವರ್ಕೌಟ್ ಆಗುತ್ತಲೇ ಇವೆ. ಈಗ್ಗೆ ಆರೇಳು ತಿಂಗಳುಗಳ ಹಿಂದೆ ” ಮಹಿಳೆಗೆ ಈ ಬಾರಿ ಪರಿಷತ್ತಿನ ಅಧ್ಯಕ್ಷಗಿರಿ ಮೀಸಲು ” ಎಂಬಂತೆ ಸಣ್ಣದಾಗಿ ಚರ್ಚೆಗೆ ಬರುತ್ತಿದ್ದಂತೆ ಅದು ತಮಣಿಯಾಯ್ತು. ಹಾಗೆ ಚರ್ಚೆ ಮಾಡಿದವರೇ ಪುರುಷಪರ ವಾಲಿಕೊಂಡರು. ಮತ್ತೊಂದು ಪ್ರಮುಖ ಸಂಗತಿಯೆಂದರೆ ಪ್ರಾದೇಶಿಕ ನ್ಯಾಯ ಸಮಾನತೆಯ ಅವಕಾಶಗಳದ್ದು. ನಿಸ್ಸಂದೇಹವಾಗಿ ಪ್ರಾದೇಶಿಕತೆಗೆ ಅವಕಾಶ ದಕ್ಕಬೇಕೆಂಬುದು ಗಂಭೀರ ವಿಷಯ. ಸಾಂಸ್ಕೃತಿಕವಾಗಿ ಹಲವು ವಂಚನೆಗಳಿಗೆ ಈಡಾಗಿರುವ ಕಲ್ಯಾಣ ಕರ್ನಾಟಕಕ್ಕೂ ಒಂದು “ಅವಕಾಶ ನೀಡೋಣ” ಎಂಬ ಬೆಂಗಳೂರು ಕೇಂದ್ರಿತ ಸಾಂಸ್ಕೃತಿಕ ಹಿಡಿತಗಳ ಅಮೂರ್ತಧ್ವನಿ ಅನುಕಂಪ ಲೇಪಿತ ಉದಾರ ಸ್ವರವಾಗಿ ಕೇಳಿಬರುತ್ತದೆ. ಬೆಂಗಳೂರೇತರ ಕಲ್ಯಾಣ ಕರ್ನಾಟಕಕ್ಕೆ ಬೆಂಗಳೂರಿನ ಮರ್ಜಿ, ಮುಲಾಜು, ಹಂಗಿನ ದೇಹಿಭಾವಗಳಿಂದ ಬಿಡುಗಡೆಯ ಅಗತ್ಯವಿದೆ. ಪ್ರಾದೇಶಿಕ ಪ್ರಜ್ಞೆಯು ಪರದೇಶಿ ಪ್ರಜ್ಞೆಯನ್ನುಂಟು ಮಾಡುವಂತಾಗುತ್ತಿದೆ. ಮತ್ತೆ ಮತ್ತೆ ಬೆಂಗಳೂರು, ಮೈಸೂರು ಪ್ರಾಂತ್ಯಗಳೆಂಬ ದಕ್ಷಿಣದ ದಾಕ್ಷಿಣ್ಯದಲ್ಲಿ ಬದುಕುತ್ತಿರುವ ಭಾವಗಳು ಬಂಧುರಗೊಂಡು, ಕಲ್ಯಾಣ ಕರ್ನಾಟಕವು ಸಾಂಸ್ಕೃತಿಕ ಅವಕಾಶಗಳ  ಅಪೌಷ್ಟಿಕತೆಯಿಂದ ನರಳುವಂತಾಗಿದೆ. ಕಲ್ಯಾಣ ಕರ್ನಾಟಕಕ್ಕೆ ಸಾಂಸ್ಕೃತಿಕ ಹಕ್ಕಿನೊಡೆತನ ಸಿಗುವುದು ಬೇಡವೇ.?  ಅಲ್ಲಿನವರು ಹಕ್ಕಿನ ಒಡೆಯರಾಗುವುದು ಯಾವಾಗ.? ಇದು ಸಾಹಿತ್ಯ ಪರಿಷತ್ತಿಗೆ ಮಾತ್ರ ಅನ್ವಯವಾಗದೇ ಅಕಾಡೆಮಿಗಳು ಸೇರಿದಂತೆ ಪ್ರಾಧಿಕಾರ, ಪ್ರತಿಷ್ಠಾನ ಇತರೆ ಎಲ್ಲ ಸಾಂಸ್ಕೃತಿಕ ಸಂದರ್ಭಗಳಿಗೂ ಲಾಗೂ ಆಗುತ್ತದೆ. ಮತ್ತೊಂದು ಅಪಾಯದ ಬೆಳವಣಿಗೆ ಇಲ್ಲಿದೆ. ಅದೇನೆಂದರೆ : ಬಲಾಢ್ಯ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಜನಾಂಗದವರು ” ನಮ್ಮ ಜನಾಂಗದ ಓಟುಗಳು ಇಷ್ಟಿಷ್ಟಿವೆ. ನಮ್ಮ ಜಾತಿ ಮಠಗಳು ನಮ್ಮ ಬೆಂಬಲಕ್ಕಿವೆ ” ಎಂಬ ಮತಪೆಟ್ಟಿಗೆ ಲೆಕ್ಕಾಚಾರಗಳು ರಾಜಾ ರೋಷವಾಗಿಯೇ ಚರ್ಚೆಯಾಗುವುದು ಅಚ್ಚರಿಯೇನಲ್ಲ!. ಮತಪ್ರಜ್ಞೆಗಳ ಲೆಕ್ಕಾಚಾರದಲ್ಲಿ ಬ್ರಾಹ್ಮಣ ಸಮುದಾಯ ಹಿಂದೆ ಬಿದ್ದಿಲ್ಲ. ಸೂಕ್ಷ್ಮಾತೀಸೂಕ್ಷ್ಮ ಹವಣಿಕೆಯ ಮುಂಚೂಣಿಯಲ್ಲಿದೆ ಎನ್ನುವುದನ್ನು ಮರೆಯಲಾಗದು. ಸಾಹಿತ್ಯ ಪರಿಷತ್ತು ಜಾತಿ, ಮತ, ಧರ್ಮ, ಲಿಂಗ ತಾರತಮ್ಯಗಳನ್ನು ಮೀರಿ ನಿಲ್ಲುವ ” ಮನುಷ್ಯ ಜಾತಿ ತಾನೊಂದೇ ಒಲಂ ” ಎಂಬ ಘೋಷವಾಕ್ಯ ಮೆರೆಯಬೇಕಲ್ಲವೇ.? ಅದೆಲ್ಲ ಹೇಳ ಹೆಸರಿಲ್ಲದೇ ಪರಿಷತ್ತು ಚುನಾವಣೆಗಳು ಕೊಳಕು ರಾಜಕಾರಣವನ್ನು ಮೀರಿಸುತ್ತಿರುವುದು ಕನ್ನಡ ಭಾಷೆ, ಸಂಸ್ಕೃತಿಗಳ ಘೋರ ದುರಂತವೇ ಹೌದು. ಒಂದು ಮೂಲದ ಪ್ರಕಾರ ಈ ಬಾರಿ ಕ. ಸಾ. ಪ. ಚುನಾವಣೆಗಳು ಜರುಗಿದರೆ ಅಂದಾಜು ನಾಲ್ಕು ಲಕ್ಷದಷ್ಟು ಮತದಾರರು ಮತ ಚಲಾಯಿಸಲಿದ್ದಾರೆ. ಸರಕಾರಿ ಅಂಚೆವೆಚ್ಚದ ಐದು ರುಪಾಯಿ ಖರ್ಚಿನ ಒಂದು ಮನವಿಪತ್ರ ಬರೆದು ಮತ ಯಾಚಿಸಬೇಕೆಂದರೆ ಓರ್ವ ಹುರಿಯಾಳು ಕನಿಷ್ಠ ಇಪ್ಪತ್ತು ಲಕ್ಷದಷ್ಟು ಹಣ ಖರ್ಚು ಮಾಡಲೇಬೇಕು. ಅಷ್ಟಕ್ಕೂ ಒಣ ಮನವಿಪತ್ರಕ್ಕೇ ಮತಗಳು ಖಂಡಿತಾ ಉದುರಲಾರವು. ಮತದಾರನ ವಯಕ್ತಿಕ ಭೇಟಿ ಮಾಡುವುದು ಸೇರಿದಂತೆ ತಾಲೂಕಿಗೊಂದಾದರೂ ಮೀಟಿಂಗ್, ಇನ್ನೂರಿಪ್ಪತ್ತೈದು ಕಡೆ ಮಾಡಬೇಕು. ಮತ್ತು ಜಿಲ್ಲೆಗೊಂದರಂತೆ ಮೂವತ್ತು ಜಿಲ್ಲಾ ಮೀಟಿಂಗ್. ಬೆಂಗಳೂರಿನಲ್ಲಿ ನೂರಾರು ಕಡೆ ಸಭೆ ಮಾಡಬೇಕಾಗತ್ತದೆ. ಹೀಗೆ ಕ.ಸಾ.ಪ. ರಾಜ್ಯಾಧ್ಯಕ್ಷನಾಗಲು ಕೋಟಿ, ಕೋಟಿ ಹಣಖರ್ಚು ಮಾಡಬೇಕಾದ ಒಂದು ಬಗೆಯ ಅನಿವಾರ್ಯಸ್ಥಿತಿ ನಿರ್ಮಾಣಗೊಂಡಿದೆ. ಇದು ಸಾಮಾನ್ಯ  ಸಾಹಿತಿಗಳಿಂದ ಅಕ್ಷರಶಃ ದುಃಸಾಧ್ಯದ ಮತ್ತು ದುಃಖದ ಸಂಗತಿ. ಹೀಗಾಗಿ ಸಾಹಿತ್ಯ ಪರಿಷತ್ತು ಚುನಾವಣೆ ಎಂದರೆ ವಿಧಾನ ಪರಿಷತ್ತಿನ ಚುನಾವಣೆಯನ್ನು ಮೀರಿಸುವಂತಾಗಿದೆ. ಮತ್ತೊಂದು ಬಹುಮುಖ್ಯ ಸಂಗತಿಯೆಂದರೆ ಐದುವರ್ಷದ ಅವಧಿಗೆ ಬೈಲಾ ಬದಲಾಯಿಸಿದಂತೆ ಕ.ಸಾ.ಪ. ಚುನಾವಣೆ ನಿಯಮ ಬದಲಿಸಿ ಸರಕಾರಿ ನೌಕರ ಸಂಘದ ಮಾದರಿಯಲ್ಲಿ ಚುನಾವಣೆಗಳು ನೆರವೇರುವಂತೆ ಬೈಲಾ ತಿದ್ದುಪಡಿ ಆಗಬೇಕು. ಅಂದರೆ ತಾಲೂಕು, ಜಿಲ್ಲಾಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷರ ಆಯ್ಕೆಯ ಅವಕಾಶಗಳಿರಬೇಕು. ಈಗ ನೇರವಾಗಿ ಸಾಮಾನ್ಯ ಮತದಾರರಿಂದ ರಾಜ್ಯಾಧ್ಯಕ್ಷರ ಆಯ್ಕೆ ನಡೆಯುತ್ತದೆ. ಆ ಮೂಲಕ ಜಿಲ್ಲಾಧ್ಯಕ್ಷರ, ತಾಲ್ಲೂಕು ಅಧ್ಯಕ್ಷರ ಮಹತ್ವ ಕಡಿಮೆ ಮಾಡಿದಂತಾಗುತ್ತದೆ. ಹಾಗೆಯೇ ಜಿಲ್ಲಾಧ್ಯಕ್ಷರಾದವರು ತಾಲ್ಲೂಕು ಪದಾಧಿಕಾರಿಗಳನ್ನು ನೇಮಿಸುವ ಅಧಿಕಾರ ಹೊಂದಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಯ ವಿರೋಧಿಯಾಗಿದೆ. ಇಂತಹ ಕೆಲವು ತಿದ್ದುಪಡಿಗಳ ತುರ್ತು ಅಗತ್ಯವಿದೆ. ಪರಿಷತ್ತಿನ ಸದಸ್ಯತ್ವ ಹಾಗೂ ಮತದಾನದ ಹಕ್ಕು ಬೇರೆ ಬೇರೆಯಾಗಬೇಕು. ಕುರಿತೋದದ ಕಾವ್ಯ ಪ್ರಯೋಗಿಗಳನೇಕರು ಎಂಬಂತೆ ಅಂದರೆ ಇ.ಎ.ಹೆ.ಗುರುತಿನ ಬಹುಪಾಲು ಮತದಾರರಿದ್ದಾರೆ. ಕ.ಸಾ.ಪ. ಸದಸ್ಯತ್ವ ಹುಟ್ಟುಹಾಕುವ ವಿಷಮಜಾಲವೇ ಇಲ್ಲಿದೆ. ಜಾತಿನಿಷ್ಠ ನೀಚ ಮನಸುಗಳ ಕೊಳಕು ಹುನ್ನಾರಗಳು ಅಪಾಯದಮಟ್ಟ ಮೀರಿ ಬೆಳೆದು ಸದಸ್ಯತ್ವದ ಜಾತಿಜಾಲ ಹೆಣೆದಿವೆ. ಬರೀಜಾತಿ ಪಾರಮ್ಯವಲ್ಲದೇ ಒಳಜಾತಿ, ಉಪಜಾತಿ, ನೆಂಟರಿಷ್ಟರನ್ನೇ ಸದಸ್ಯರನ್ನಾಗಿಸಿರುವ ಕೊಚ್ಚೆ ರಾಜಕಾರಣ ಪರಿಷತ್ತಿನೊಳಗೆ ನುಸುಳಿ ಕೆಲವು ವರ್ಷಗಳೇ ಕಳೆದು ಪರಿಷತ್ತಿನ ಪಾವಿತ್ರ್ಯಕ್ಕೆ ಧಕ್ಕೆಯುಂಟಾಗಿದೆ. ಬಲಾಢ್ಯ ಮೇಲ್ಜಾತಿಗಳ ಅಧಿಪತ್ಯದಲ್ಲಿ ಪರಿಷತ್ತಿನ ಅಸ್ಮಿತೆ ಎಂಬಂತಾಗಿದೆ. ಅದೆಲ್ಲ ರಿಪೇರಿ ಮಾಡಲು ಸಾಧ್ಯವೇ.? ಕಡೆಯಪಕ್ಷ ಕನಿಷ್ಠ ಮಟ್ಟದಲ್ಲಾದರೂ ಸಾಹಿತ್ಯದ ಓದು, ಬರಹ, ಸಾಹಿತ್ಯ ಕೃತಿ ರಚನೆಗಳ ಅಗತ್ಯ ಮಾನದಂಡಗಳನ್ನು ಮತದಾರ ಹಾಗೂ ಪದಾಧಿಕಾರಿ ಸ್ಪರ್ಧೆಗಳಿಗೆ ಕಡ್ಡಾಯವಾಗುವ ನಿಯಮಗಳನ್ನು ರೂಪಿಸಬೇಕು. ಆ ಮೂಲಕ ಪರಿಷತ್ತು ಸ್ವಲ್ಪಮಟ್ಟಿಗಾದರೂ ಜಾತಿ, ಮತ, ಧರ್ಮ, ಲಿಂಗ ತಾರತಮ್ಯ ಮುಕ್ತವಾಗಬೇಕು. *****************************   ಮಲ್ಲಿಕಾರ್ಜುನ ಕಡಕೋಳ

ಕಸಾಪಗೆ ಮಹಿಳಾ ಅಧ್ಯಕ್ಷರು??? Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು

ಕನ್ನಡ ಸಾರಸ್ವತ ಲೋಕಕ್ಕೆ ವಿದ್ಯಾ ದೇವಿ ಸರಸ್ವತಿಯ ಪಾತ್ರ ಬಹುಮುಖ್ಯವಾದುದು.ಧನ ಕನಕಗಳಿಗೆ ಲಕ್ಷ್ಮಿ ಅಧಿದೇವತೆಯಾದಂತೆ ಎಲ್ಲ ದೇವತಾ ಕಾರ್ಯಗಳು ಸಮಾನತೆಯಲಿ ಬೇಧ ಭಾವವಿಲ್ಲದೆ ನಡೆಯುವುದು. ಪೂಜೆಗಷ್ಟೇ ಸಿಮೀತ. ಅದು ದೇವರ ರೂಪದಲ್ಲಿರುವ ಸ್ತ್ರೀ ಮೂರ್ತಿಗಳಿಗೆ ಮಾತ್ರ.ಆದರೆ ವಾಸ್ತವದಲ್ಲಿ ಅವೆಲ್ಲ ಸ್ಥಾನ ಗಳು ನಿಲುಕಲು ಸಾಧ್ಯವೇ. ಅವು ಶೋಕಿಸಿನಲ್ಲಿ‌ಡುವ ಮೂರ್ತಿಗಳು.ಇವೇ ನಮಗೆ ಉತ್ತರ ನೀಡಬಲ್ಲ ಮಾನ ದಂಡಗಳು. ಮಹಿಳಾ ಸಂಘಟನೆಗಳಿಗೇನು ಬರವಿಲ್ಲ.ಆದರೆ ಮುಂದೆ ನಿಂತು ನಿಭಾಯಿಸುವ ಜವಾಬ್ದಾರಿ ಬೇಕಲ್ಲ.ಪುರುಷರಂತೆ ಮೂರು ಹೊತ್ತು ಆ ಕೆಲಸ ಮಾಡಲು ಆತ್ಮ ನಿರ್ಭರತೆಯಿ ರುವ ಮಹಿಳೆಯರಿಗೇನು ಕೊರತೆಯಿಲ್ಲ. ಆದರೆ ಆ ಮಹಿ ಳೆಯ ಮನೋಬಲ ಕುಗ್ಗಿಸುವ ಪಿತೂರಿಗಳಿಗೇನು ಬರವೇ ನಾವು ನಿಮ್ಮ ಜೊತೆ ಎಂದು ಧೈರ್ಯ ತುಂಬಿ ಬೆಳೆಸುವವ ರು ಬೆರಳೆಣಿಕೆಯಷ್ಟು. ಸಮಾನತೆ ಡಂಗುರ ಸಾರಿ ಕೂಗಿದ್ದೆ ಬಂತು.ಸಮಾನತೆ ಮಾತ್ರ ಮಂಗ ತಕ್ಕಡಿಯಿಂದ ಬೆಣ್ಣೆ ಹಂಚಿದಂತೆ.ತೊಟ್ಟಿಲ ತೂಗುವ ಕೈ ಜಗತ್ತನ್ನೇ ತೂಗಬಲ್ಲ ದು ಆತ್ಮವಿಶ್ವಾಸಕ್ಕೆ ಹೆಸರೆ ಸ್ತ್ರೀ.. ಅಬಲೆಯೆಂಬ ಪಟ್ಟ ಇಂದು ನಿನ್ನೆಯದಲ್ಲ,ಅದು ಶತಮಾನಗಳಿಂದ‌ ಬಂದರೂ ಆ ಪಟ್ಟವನ್ನು ಅಲ್ಲಗಳೆದು, ಎಲ್ಲ ಕ್ಷೇತ್ರಗಳಲ್ಲೂ ಧೈರ್ಯ ಗುಂದದೇ ದಿಟ್ಟ ನಡಿಗೆಯ ಛಾಪು ಮೂಡಿಸಿದರೂ,ನಂಬಿ ಕೆ ಮೇಲ್ನೊಟಕೆ ಸಬಲೆ‌ಯಪಟ್ಟ. ಪಟ್ಟು ಹಿಡಿದು ಪಡೆಯ ಲು ಧೈರ್ಯ ಸಾತಿಲ್ಲ. ಇದೊಂದು ಅವಕಾಶ.ಪ್ರಯತ್ನದ ಹಾದಿಯ ಮುನ್ನುಡಿ ಬರೆಯಲು ಅವಕಾಶ.ಕನ್ನಡವೇ ಸತ್ಯ ಕನ್ನಡವೇ ನಿತ್ಯ… ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರರ ಸಂಭ್ರಮ.ಹೇಳಿಕೊಳ್ಳ ಲು‌ ಹೆಮ್ಮೆಪಡುವಂತ ವಿಚಾರ.ಆದರೆ ಆ ಸಂಭ್ರಮ ವನ್ನು ಪ್ರಶ್ನಿಸುವವರು ಯ್ಯಾರು? ಬೆಕ್ಕಿಗೆ ಗಂಟೆ ಕಟ್ಟಿದಂತೆ.ತುಂ ಬಾ ಮಹಿಳೆಯರು ಆಕಾಂಕ್ಷಿಗಳಾದರೂ ಅವರ ಬೆಂಬಲಕ್ಕೆ ನಿಲ್ಲುವವರಾರು? ಸಣ್ಣ ಪುಟ್ಟ ಹುದ್ದೆ ನೀಡಿ ಸಮಾಧಾನ ಪಡಿಸಲು ಮೊದಲೇ ಸಿದ್ದತೆ ನಡೆದಿರುವುದು ಗೊತ್ತಿಲ್ಲದ ವಿಚಾರವೇನಲ್ಲ.ತಾಲೂಕಿನ ಕ‌.ಸಾ.ಪ ಅಧ್ಯಕ್ಷರ ನೇಮಕಕ್ಕೆ ಆಕಾಂಕ್ಷಿಗಳಾರು ಎಂದು ಕೇಳುವ ಸಭೆ.ನಾನು ಕ.ಸಾ.ಪ. ಸದಸ್ಯೆಯಾಗಿದ್ದಕ್ಕೆ ಆ ಸಭೆಗೆ ನಾನು ಭಾಗವಹಿಸಿ ದ್ದೆ.ಎಲ್ಲ ಪುರುಷರು ತಾವುಗಳು ಆಕಾಂಕ್ಷಿಗಳೆಂದು ಹೇಳುವಾಗ, ಅಲ್ಲಿ ಯಾವ ಒಬ್ಬ ಮಹಿಳೆಯು ಉಪಸ್ಥಿತರಿರಲಿಲ್ಲ, ಇದ್ದವಳು ನಾನೊಬ್ಬಳೇ..ಅವರೆಲ್ಲ ಕೇಳುವಾಗ ನಾನು ಯ್ಯಾಕೆ ಕೇಳಬಾರದೆಂದು ಧೈರ್ಯ ಮಾಡಿ ನಿಂತು ನಾನು ಆಕಾಂಕ್ಷಿಯೆಂದು ಹೇಳಿದ್ದೆ ತಡ ಎಲ್ಲರ ಕಣ್ಣುಗಳು ನನ್ನೆ ನೋಡುತ್ತಿದ್ದವು ಅಷ್ಟೇ.ನಾನು ತಪ್ಪು ಕೇಳಿದೆನಾ ಎಂಬ ಭಾವ.ಅಂದರೆ ನಾವುಗಳು ಬಯಸಬಾರದು.ಆ ಹುದ್ದೆಗ ಳು ಅವರಿಗೆ ಮಾತ್ರ ಮೀಸಲು.ಅದು ಸಿಗದಂತೆ ಮಾಡುವ ರಾಜಕೀಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲೂ ನಡಿಯತ್ತೆ ಅ ನ್ನುವ ವಾಸ್ತವ ಅರಿವಾಗಲು ಬಹಳ ಸಮಯ ಬೇಕಾಗಲಿ ಲ್ಲ. ಮಹಿಳಾ ಸಂಘಟನೆಗಳು ಮನೋಬಲದಿಂದ ಒಗ್ಗೂಡ ಬೇಕು ಅದು ಅನಿವಾರ್ಯ.ಅಲ್ಲದೇ ಕನ್ನಡ ಸಾಹಿತ್ಯ ಪರಂ ಪರೆಗೆ ದಕ್ಕೆಯಾಗದಂತೆ ನಡೆಸಿಕೊಂಡು ಹೋಗುವ,ರಾಜ ಕೀಯ ತಂತ್ರದಿಂದ ಹೊರಬಂದು ಮನೆಬಾಗಿಲಿಗೆ ಕನ್ನಡದ ಕಂಪನ್ನು ಪಸರಿಸುವ ಮನಸ್ಸು ಮಹಿಳೆಯರಿಗೆ ಇದೆ. ಸಂ ಸಾರವನ್ನು ಅಚ್ಚುಕಟ್ಟಾಗಿ ನಡೆಸುವ,ಮಕ್ಕಳಿಗೆ ಸಂಸ್ಕಾರ ಬಿತ್ತುವ ಸಂಸ್ಕೃತಿ ನೆಲೆಯಾಗಿರಿವುದು‌ ಮಹಿಳೆಯರಲ್ಲಿ ಎಂಬುದನ್ನು ಅಲ್ಲಗಳೆಯುವಂತಿಲ್ಲ.ಎಲ್ಲೋ ಅಪವಾದ ವೆಂಬಂತೆ ಕಳಂಕಿತರು ಪುರುಷರಲ್ಲಿಯು,ಮಹಿಳೆಯರಲ್ಲಿ ಯು ಇಲ್ಲವೆಂದು ಹೇಳಲು ಸಾಧ್ಯವೇ? ಹಾಗಂತ ದೊರಕುವವರಿಗೂ ದೊರಕದೇ ವಂಚಿತರಾಗಿರುವುದು ನ್ಯಾಯವೇ? ಪ್ರಕೃತಿ ಸಮಾನತೆಯನ್ನು ಕಾಯ್ದು ಕೊಳ್ಳುವಂತೆ,ನಾವು ಕಾಯ್ದು ಕೊಳ್ಳುವುದು ಮುಖ್ಯ. ಇಲ್ಲವಾದರೆ ಸುನಾಮಿ, ಭೂಕಂಪ ಆಗುವುದೆಂಬ ನಿರೀಕ್ಷೆ.ಇದು ಕೇವಲ ಪರಿಸರ ಕ್ಕೊಂದೇ ಇರುವ ಮಾನದಂಡ.ನಾವುಗಳು ಮುಂದಾಗುವ ಅನಾಹುತ ಮನೆಯಿಂದಲೇ ಎಂದು ನೆನೆದು.ಮೌನವಾಗು ತ್ತೆವೆ.ಅದರ ಸರಿಯಾದ ಉಪಯೋಗ ಹಾಗೂ ಉತ್ತರ ನಮ್ಮ ಮುಂದಿದೆ.ನೂರು ವರುಷ ಅದರೂ ಅಧ್ಯಕ್ಷ ಸ್ಥಾನ ಕ್ಕೆ ಯಾವ ಮಹಿಳೆಗೂ ಅವಕಾಶ ದೊರಕದಿರುವುದು. ಇನ್ನಾದರೂ ಎಚ್ಚರಗೊಂಡು ಆಂತರಂಗಿಕವಾಗಿ ಚಳುವಳಿ ನಡೆಸುವುದು ಅವಶ್ಯಕತೆಯಿದೆ. ಹೆಸರಿಗೆ ಮಹಿಳಾ ಸಂಘಟನೆಗಳು‌ ಎಂಬ ಹಣೆಪಟ್ಟಿ ಕಿತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಗದ್ದುಗೆಯ ಏರುವ ಮನಸ್ಸು ಮಾಡಬೇಕು.ಇಷ್ಟು ವರುಷ ಬೆಂಬಲ ನೀಡುತ್ತ ಕೆಲಸ ಮಾಡಿದ್ದೆವೆ.ಮುಂದೆಯು ಮಾಡುವ ತಾಕತ್ತು ಇದೆ. ನಾವು ಕೊಟ್ಟ ಬೆಂಬಲಕ್ಕೆ ಪ್ರತಿಯಾಗಿ ಮಹಿಳೆಯರಿಗೆ ಅಧ್ಯಕ್ಷ ಸ್ತಾನ ಸಿಗುವಲ್ಲಿ ಧ್ಬನಿಯತ್ತಬೇಕು…ಕಾಗದ ಪತ್ರಗಳಲ್ಲಿಇದ್ದುದು ವಾಸ್ತವವಾಗಿ ಕೈಗೆಟುಕುವಂತೆ ಮಾಡಬೇಕು.ಧ್ವನಿ ಎತ್ತುವವರ ಧ್ವನಿ ನಿಲ್ಲುವಂತಾಗದಿದ್ದರೆ ಸಾಕು. ಆಪಾದನೆ,ನಿಂದನೆ,ಚಾರಿತ್ರ್ಯಿಕ ಹಾನಿಯ ಹುನ್ನಾರಗಳು ಮಹಿಳೆಯ ಆತ್ಮಾಭಿಮಾನ ಕುಗ್ಗಿದರೆ ಅವಳೆಂದೆಂದಿಗೂ ನಾಲ್ಕು ಗೋಡೆಯ ಬಿಟ್ಟು ಬರಲಾರಳು. ಕನ್ನಡ ಸಾಹಿತ್ಯ ಪರಿಷತ್ತು ಎಲ್ಲರ ಸೊತ್ತು.ಕನ್ನಡ ಸಾಹಿತ್ಯ ಅನೇಕ ಅನರ್ಘ್ಯ ರತ್ನಗಳು ನೀಡಿದ ಆಸ್ತಿ.ಅದನ್ನು‌ ಉಳಿಸಿ,ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ಅದರ ಸೇವೆ ಮಾಡುವ ಭಾಗ್ಯ ಎಲ್ಲರಿಗೂ ದೊರೆಯಬೇಕು. ಮಹಿಳೆಯರಿಗೆ ಮೊದಲು.ಈ ಸಲವಾದರೂ ಶುಕ್ರದೆಸೆ ಪ್ರಾರಂಭವಾಗಲಿ ಎಂಬ ಆಶಯ.ಬದಲಾವಣೆಯತ್ತ ಹೆಜ್ಜೆ ಹಾಕೋಣ…..ಸಿರಿಗನ್ನಡಂ‌ ಗೆಲ್ಗೆ ಸಿರಿಗನ್ನಡಂ ಬಾಳ್ಗೆ. **************************************************** ಶಿವಲೀಲಾ ಹುಣಸಗಿ

ಕಸಾಪಗೆ ಮಹಿಳಾ ಅಧ್ಯಕ್ಷರು Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು

ಕರ್ನಾಟಕ ಸಾಹಿತ್ಯ ಪರಿಷತ್ ಎಂಬ ಹೆಸರಿನೊಂದಿಗೆ 1915 ರಲ್ಲೇ ಕನ್ನಡ ನಾಡು ನುಡಿಯ ರಕ್ಷಣೆ ಹಾಗೂ ಕನ್ನಡ ಲೇಖಕ ಲೇಖಕಿಯರನ್ನು ಪ್ರೋತ್ಸಾಹಿಸಲೆಂದೇ ಹುಟ್ಟಿಕೊಂಡ ಸಂಸ್ಥೆ, ನಂತರದಲ್ಲಿ 1935ರಲ್ಲಿ ಅರ್ಥಪೂರ್ಣವಾಗಿ ಕನ್ನಡ ಸಾಹಿತ್ಯ ಪರಿಷತ್ ಎಂದು ಮರು ನಾಮಕರಣಗೊಂಡಿದ್ದು ಕನ್ನಡ ಭಾಷೆಯ ಗರಿಮೆಗೆ ಸಾಕ್ಷಿ. ಇಲ್ಲಿಯವರೆಗೂ ಅನೇಕ ಕನ್ನಡ ಸಾಹಿತ್ಯ ಸಮ್ಮೇಳನಗಳು , ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಜರುಗುವುದರೊಂದಿಗೆ ಎಲ್ಲೆಡೆ ಕನ್ನಡ ಸಾಹಿತ್ಯದ ಘಮ ಪಸರಿಸಿದ ಹಿರಿಮೆ ಕನ್ನಡ ಸಾಹಿತ್ಯ ಪರಿಷತ್ ಗೆ ಸೇರಿದೆ ಎಂದರೆ ತಪ್ಪಾಗಲಾರದು. ಸುಮಾರು ನೂರು ವರ್ಷಗಳ ಕನ್ನಡ ಸಾಹಿತ್ಯ ಪರಿಷತ್ ನ ಯಾನದಲ್ಲಿ ಹೆಚ್.ವಿ.ನಂಜುಂಡಯ್ಯನವರಿಂದ ಮುಂದುವರಿದು ಮನು ಬಳಿಗಾರ್ ರವರೆಗೆ ಸರಿ ಸುಮಾರು ಇಪ್ಪತ್ತೈದು ಅಧ್ಯಕ್ಷರುಗಳನ್ನು ಕನ್ನಡ ಸಾಹಿತ್ಯ ಪರಿಷತ್ ಕಂಡಿದೆ. ಮುಖ್ಯವಾಗಿ ಕನ್ನಡದ ಮಹಿಳಾ ಸಾಹಿತಿಗಳಿಗೆ ಪ್ರೋತ್ಸಾಹ ನೀಡಿ ಮಹಿಳಾ ದನಿಗಳನ್ನು ಎತ್ತರಿಸುವ ಉದ್ದೇಶ ಹೊಂದಿದ ಪರಿಷತ್ ನಲ್ಲಿ ಈವರೆಗೂ ಒಬ್ಬ ಮಹಿಳಾ ಸಾಹಿತಿ ಅಧ್ಯಕ್ಷರ ಗಾದಿ ಏರದಿರುವುದು ಕನ್ನಡ ಸಾಹಿತ್ಯ ಪರಿಷತ್ ನ ಕಪ್ಪು ಚುಕ್ಕೆ ಎಂದರೆ ತಪ್ಪಾಗಲಾರದು. ಇಷ್ಟಕ್ಕೂ ನಮ್ಮ ಕನ್ನಡ ನಾಡಿನ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ದನಿಗಳ ಕೊರತೆಯುಂಟೇ ಎನ್ನುವುದನ್ನೊಮ್ಮೆ ಒರೆ ಹಚ್ಚಿ ನೋಡಬೇಕಾಗಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಇತ್ತೀಚಿನದ್ದೇನಲ್ಲ ಸರಿಸುಮಾರು 1500 ವರ್ಷಗಳ ಹಿಂದಿನಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯ ಗುರುತುಗಳಿವೆ. ಹನ್ನೆರಡನೆಯ ಶತಮಾನದ ವಚನಕಾಲದಲ್ಲಿ ಮೊದಲ ಬಂಡಾಯ ಲೇಖಕಿಯಾಗಿ ಅಕ್ಕಮಹಾದೇವಿ ಕಂಡುಬಂದರೂ ಸಹ ಅವರೊಟ್ಟಿಗೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಸುಮಾರು ಮೂವತ್ತಾರು ವಚನಕಾರ್ತಿಯರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮೆರಗು ತುಂಬಿದವರೇ, ವಿಶೇಷವೆಂದರೆ ಈ ಕಾಲಘಟ್ಟದಲ್ಲಿ ದಲಿತ ಸ್ತ್ರೀಯರಾದ ಸಂಕವ್ವೆ ಗುಡ್ಡವ್ವೆ ಕೇತಲದೇವಿಯಂತವರೂ ವಚನ ಸಾಹಿತ್ಯಕ್ಕೆ ತಮ್ಮದೇ ಕೊಡುಗೆ ನೀಡುವುದರೊಂದಿಗೆ ದಲಿತಸಾಹಿತ್ಯದ ದನಿಯಾಗಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಸಾರ್ವಜನಿಕ ಜೀವನಕ್ಕೆ ತೆರೆದುಕೊಳ್ಳಲಾರದ ಮಹಿಳೆಯರು ಮುಖ್ಯವಾಹಿನಿಗೆ ಬರುವುದು ತಡವಾಯಿತಾದರೂ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ತಮ್ಮದೇ ಛಾಪು ಮೂಡಿಸಿದ್ದಾರೆ. ಪುರುಷ ಪ್ರಧಾನ ಸಮಾಜವನ್ನು ಪ್ರಶ್ನಿಸುವುದರೊಂದಿಗೆ ಸಾಹಿತ್ಯ ಸೃಷ್ಟಿ ಸಾಂಸ್ಕೃತಿಕ ಬದಲಾವಣೆಗೆ ಲೇಖಕಿಯರು ಕಾರಣರಾಗಿದ್ದಾರೆ. ದಾಸ ಸಾಹಿತ್ಯದಲ್ಲೂ ಮಹಿಳೆಯರು ರಚಿಸಿದ ಕೀರ್ತನೆಗಳ ಕುರುಹಿದೆ. ಜನಪದ ಗೀತೆಗಳ ರಚನೆಯಲ್ಲಿ ಮಹಿಳೆಯರ ಪಾತ್ರ ಮಹತ್ತರವಾದುದು ಎಂದರೆ ತಪ್ಪಾಗಲಾರದು. ಕಾಲದಿಂದಲೂ ಪುರುಷ ಪ್ರಧಾನ ವ್ಯವಸ್ಥೆಯಡಿ ಮರೆಯಾಗಿದ್ದಂತಹ ಬಹಳಷ್ಟು ಲೇಖಕಿಯರ ನಡುವೆ ಇಪ್ಪತ್ತನೆಯ ಶತಮಾನದಲ್ಲಿ ಮುಕ್ತವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಪುರುಷ ಪ್ರಾಬಲ್ಯವುಳ್ಳ ಕನ್ನಡ ಸಾಹಿತ್ಯ ಲೋಕದಲ್ಲಿ ತ್ರಿವೇಣಿ ಇಂದಿರಾ ರಂತಹ ಕಾದಂಬರಿಗಾರ್ತಿಯರು ಮಿನುಗು ಚುಕ್ಕೆಯಂತೆ ಮಿನುಗಿದ್ದಾರೆ. 1970ರ ನಂತರ ದಲಿತ ಸಾಹಿತ್ಯದ ರಚನೆಯಲ್ಲಿ ತೊಡಗಿಸಿಕೊಂಡಿರುವ ಲೇಖಕಿಯರಾದ ಗೀತಾ ನಾಗಭೂಷಣ, ಅನುಪಮಾ ನಿರಂಜನ್ ಮುಂತಾದವರನ್ನು ಕಾಣಬಹುದು, ಸ್ತ್ರೀ ಸಮಾನತೆ ಎತ್ತಿ ಹಿಡಿದು, ಸ್ತ್ರೀ ಶೋಷಣೆಗಳ ವಿರುದ್ಧ ಲೇಖನಿಯಾಗಿರುವ ಅನೇಕ ಮಹಿಳಾ ಲೇಖಕಿಯರು ಕವಯಿತ್ರಿಯರು ನಮ್ಮ ನಡುವೆ ಇದ್ದಾರೆ. ಕನ್ನಡ ಸಾಹಿತ್ಯಕ್ಕೆ ಇಷ್ಟೆಲ್ಲಾ ಕೊಡುಗೆ ನೀಡಿರುವ ಮಹಿಳೆಯರು ಇದ್ದಾಗಿಯೂ ಸಹ ಕನ್ನಡ ಸಾಹಿತ್ಯ ಪರಿಷತ್ ಮಹಿಳೆಯರಿಗೆ ಸ್ಥಾನಮಾನ ದೊರಕಿಕೊಡದಿರುವುದು ವಿಷಾದನೀಯ. 1985ರಲ್ಲೇ ಸರೋಜಿನಿ ಮಹಿಷಿಯವರು ಮಹಿಳೆಯರಿಗಾಗಿಯೇ ಪ್ರಥಮ ಮಹಿಳಾ ಸಾಹಿತ್ಯ ಸಮ್ಮೇಳನ ನಡೆಸಿ ಮಹಿಳಾ ಸಾಹಿತಿಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡಿರುವುದು ಪ್ರಶಂಸಾರ್ಹ. ಇದೆಲ್ಲದರ ನಡುವೆಯೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಾದಿಗೆ ಮಹಿಳೆಯರನ್ನು ಕಡೆಗಣಿಸಿರುವುದು ಕನ್ನಡ ಸಾಹಿತ್ಯದಲ್ಲಿ ಪುರುಷರ ಪ್ರಾಬಲ್ಯವನ್ನು ಎತ್ತಿ ತೋರಿಸಿದೆ. ನೂರು ವರ್ಷಗಳನ್ನು ಪೂರೈಸಿರುವ ನಮ್ಮ ಕನ್ನಡ ಸಾಹಿತ್ಯ ಪರಿಷತ್ ಇನ್ನಾದರೂ ಕನ್ನಡ ಸಾಹಿತ್ಯ ಲೋಕದಲ್ಲಿ ಮಹಿಳೆಯರಿಗೆ ದೊರೆಯಬೇಕಾದ ಸ್ಥಾನಮಾನ ಹಾಗೂ ಪ್ರಾತಿನಿಧ್ಯ ನೀಡುವುದರೊಂದಿಗೆ ಸಮಾನತೆ ಎತ್ತಿ ಹಿಡಿಯಲಿ, ಮಹಿಳಾ ಲೇಖಕಿಯರಿಗೆ ಪ್ರೋತ್ಸಾಹ ನೀಡುವುದರೊಂದಿಗೆ ಕನ್ನಡದ ತೇರು ಒಟ್ಟಾಗಿ ಎಳೆಯುವಂತಾಗಲಿ. *********************************************************** ಅರ್ಪಣಾ ಮೂರ್ತಿ

ಕಸಾಪಗೆ ಮಹಿಳಾ ಅಧ್ಯಕ್ಷರು Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು

‘ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು’ ಇದು ಸಾಬೀತಾಗಿ ಶತಮಾನಗಳೇ ಕಳೆದರೂ ನಮ್ಮ ಕಸಾಪ ಗೆ ಒಮ್ಮೆಯೂ ಮಹಿಳಾ ಅಧ್ಯಕ್ಷರ ಆಯ್ಕೆ ಆಗಿಲ್ಲ, ಯಾರೂ ಸಹ ಸ್ಪರ್ಧಿಸಲಾಗಿಲ್ಲ. ಭಾರತವೆಂಬ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವನ್ನ ಇಂದಿರಾ ಗಾಂಧಿಯವರು ಆಳಿದರು. ಅಂತೆಯೇ ನಮ್ಮ ಕಸಾಪ ಗೂ ಮಹಿಳಾ ಅಧ್ಯಕ್ಷೆಯ ಆಯ್ಕೆ ಆಗಬೇಕು. ಮನೆಯಲ್ಲಿ ಅಡುಗೆ ಮಾಡುವುದರಿಂದ ಹಿಡಿದು ಆಕಾಶದಲ್ಲಿ ವಿಮಾನ ಚಾಲನೆ, ಅಷ್ಟೇ ಏಕೆ ಅಂತರಿಕ್ಷದವರೆಗೂ ಮಹಿಳೆ ತಲುಪಿಯಾಗಿದೆ. ಪ್ರತಿ ಕ್ಷೇತ್ರದಲ್ಲೂ ಮಹಿಳೆ ತನ್ನ ಪ್ರತಿಭೆ ಮೆರೆದಾಗಿದೆ. ಇಲ್ಲಿ ಮಹಿಳೆ ಪುರುಷನಿಗೆ ಸಮ ಎಂದು ಹೇಳುವದಕ್ಕಿಂತ ಮಹಿಳೆಗೆ ಒಂದು ಕೈ ಹೆಚ್ಚೇ ಸಾಮರ್ಥ್ಯವಿದೆ ಎಂದರೆ ಖಂಡಿತ ಉತ್ಪ್ರೇಕ್ಷೆ ಅಲ್ಲ! ಮನೆ, ಮಕ್ಕಳು, ಸಂಸಾರ, ಉದ್ಯೋಗ, ಕೆರಿಯರ್, ಆಸಕ್ತಿಗಳು ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿರುವಂತಹ ಮಹಿಳೆ ಕಸಾಪ ಅಧ್ಯಕ್ಷೆ ಆಗಿಯೂ ಬಹಳಷ್ಟು ಕೆಲಸಗಳನ್ನ ಪರಿಷತ್ತಿನ ಔನ್ಯತ್ಯಕ್ಕಾಗಿ ಮಾಡಬಲ್ಲಳು. ಶರಣರ ಕಾಲದಿಂದಲೂ ಕವಯಿತ್ರಿಯರು ಕನ್ನಡ ಸಾಹಿತ್ಯಕ್ಕೆ ಉತ್ಕೃಷ್ಟ ಕೊಡುಗೆ ಮಹಿಳೆಯರು ನೀಡುತ್ತಲೇ ಬಂದಿದ್ದಾರೆ. ಪ್ರಸ್ತುತ ನಮ್ಮಲ್ಲಿ ಬಹಳಷ್ಟು ಹಿರಿಯ ಮಹಿಳಾ ಸಾಹಿತಿಗಳಿದ್ದಾರೆ, ಅವರಲ್ಲಿ ಯಾರಾದರೂ ಸ್ಪರ್ಧಿಸಿ ಅಧ್ಯಕ್ಷರ ಸ್ಥಾನ ತುಂಬಿದರೆ ಇಲ್ಲಿಯವರೆಗೂ ಮಹಿಳಾ ಅಧ್ಯಕ್ಷೆ ಇಲ್ಲ ಎನ್ನುವ ಕೊರಗೂ ನೀಗುತ್ತೆ. ಮತ್ತಷ್ಟು ಹೊಸ ಕನ್ನಡ ಪರ ಕೆಲಸಗಳನ್ನ, ಹೊಸ ಸಾಹಿತ್ಯಿಕ ಚಟುವಟಿಕೆಗಳನ್ನ ಮಾಡಿ ಪರಿಷತ್ತಿನ ಜೀರ್ಣೋದ್ಧಾರ ಮಾಡಲಿ ಅನ್ನೋದು ನನ್ನ ಆಶಯ. **************************************************************** ಚೈತ್ರಾ ಶಿವಯೋಗಿಮಠ

ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು Read Post »

ಇತರೆ

ಕಸಾಪಗೆ ಮಹಿಳಾ ಅಧ್ಯಕ್ಷರು ಯಾಕಿಲ್ಲ?

ಚರ್ಚೆ . ಕನ್ನಡ ಸಾಹಿತ್ಯ ಪರಿಷತ್ತು ನೂರು ವರ್ಷದ ಹಾದಿ ಸವೆಸಿ ಮೇಲೆ ನಾಲ್ಕು ವರ್ಷಗಳಾಗಿವೆ.‌ ಮತ್ತೊಂದು  ಚುನಾವಣೆ ಎದುರಿಸಿ, ಕಸಾಪ ಅಧ್ಯಕ್ಷ ಗದ್ದುಗೆ ಏರಲು ಹಲವಾರು ಕಸರತ್ತುಗಳು ನಡೆದಿವೆ. ಕಸಾಪ ಅಧ್ಯಕ್ಷರ  ಅವಧಿ ಐದು ವರ್ಷ ಎಂದೂ ಬೈ ಲಾದಲ್ಲಿ (ಠರಾವು)ತಿದ್ದುಪಡಿಯಾಗಿ, ಅದಕ್ಕೆ ಕಸಾಪ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮುದ್ರೆ ಸಹ ಬಿದ್ದಿದೆ. ಚಾಮರಾಜನಗರದಲ್ಲಿ  ೨೦೧೯ ರಲ್ಲಿ ನಡೆದ ರಾಜ್ಯ ಕಸಾಪ ಸರ್ವಸದಸ್ಯರ ಸಭೆಯಲ್ಲಿ ಅಧ್ಯಕ್ಷರ ಅವಧಿ ಐದು ವರ್ಷ ಎಂದು ಅನುಮೋದನೆ ಸಹ ಸಿಕ್ಕಿದೆ. ಅದರ ಫಲ ಮುಂದೆ ಕಸಾಪ ಅಧ್ಯಕ್ಷರಾಗಿ ಗೆದ್ದು ಬರುವವರು ಉಣ್ಣಲಿದ್ದಾರೆ‌ .ಈಗ  ಕಸಾಪ ಅಧ್ಯಕ್ಷರಾಗಿ ಸಾಹಿತ್ಯದ ರಥ ಎಳೆಯಲು ಕೆಲವರು  ಬಹಿರಂಗ ವಾಗಿ, ಕೆಲವರು ಅಪ್ತರಲ್ಲಿ  ಚುನಾವಣೆಗೆ ಸ್ಪರ್ಧಿಸುವ ಬಯಕೆ ವ್ಯಕ್ತಪಡಿಸುತ್ತಿದ್ದಾರೆ‌ . ಇದು ಸಹಜ. ಪ್ರಜಾಪ್ರಭುತ್ವದ ದಾರಿಯಲ್ಲಿ ಎಲ್ಲವೂ ಸಾಗಿದೆ. ಪ್ರಶ್ನೆ ಏನಪ ಅಂದರ ಕಸಾಪ ೧೦೪ ವರ್ಷದ ತನ್ನ ಅವಧಿಯಲ್ಲಿ ಒಮ್ಮೆಯೂ ಮಹಿಳಾ ಅಧ್ಯಕ್ಷೆಯನ್ನು ಕಂಡಿಲ್ಲ.‌ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಅರ್ಹರಾದ ಮಹಿಳೆಯರು , ಮಹಿಳಾ ಸಾಹಿತಿಗಳ ದೊಡ್ಡ ಪಡೆ ನಮ್ಮಲ್ಲಿದೆ. ಕರ್ನಾಟಕ ಲೇಖಕಿಯರ ಸಂಘವೂ ಇದೆ. ಆದರೆ ಅವರು ಚುನಾವಣೆಗೆ ಸ್ಪರ್ಧಿಸಲು ಮನಸು ಮಾಡಿದಂತಿಲ್ಲ.‌ ಯಾಕೆ ಮನಸು ಮಾಡಲಿಲ್ಲ ಎಂಬ ಪ್ರಶ್ನೆ ಗಿಂತ , ಮುಂದೆ ಅವರು ಸ್ಪರ್ಧಿಸಲಿ ಎಂಬುವ ಪುರುಷ ಮನಸುಗಳು  ಸಹ ಇವೆ.‌ಹಣ ,ಜಾತಿ ರಾಜಕೀಯ, ರಾಜಕೀಯದ ಪರೋಕ್ಷ ಬೆಂಬಲ ಇವೆಲ್ಲವನ್ನೂ ಪಕ್ಕಕ್ಕೆ ಇಟ್ಟು , ಸ್ಪರ್ಧಿಸಲು ಅವಕಾಶವಿದೆ. ಅತ್ಯಂತ ಪ್ರಖರ ವೈಚಾರಿಕತೆ ಇರುವ ಮಹಿಳಾ ಬರಹಗಾರರು ಇದ್ದಾರೆ.‌ಹಾಗಾಗಿ ಮಹಿಳೆಯೊಬ್ಬರು ಮುಂಬರುವ ಕಸಾಪ ಅಧ್ಯಕ್ಷ ಗಾದಿಗೆ ಸ್ಪರ್ಧಿಸಬೇಕಿದೆ.‌ಇದು ಸಾಹಿತ್ಯ ಸಂಗಾತಿ ಕನ್ನಡ ವೆಬ್ನ ಆಶಯ. ಯಾಕೆ ಮಹಿಳೆ ಬೇಕು? ಕಸಾಪ ಅಧ್ಯಕ್ಷ ಹುದ್ದೆಗೆ ಮಹಿಳೆ;  ಪುರುಷರಷ್ಟೇ ಅರ್ಹಳು. ಇದು ಕರ್ನಾಟಕ.‌ ಮಹಿಳಾ ಸಮಾನತೆಯನ್ನು ೧೨ ನೇ ಶತಮಾನದಲ್ಲಿ ಸಾಧಿಸಿದ ನೆಲ. ಪುರುಷರಷ್ಟೇ , ಸಮರ್ಥ ಆಡಳಿತ ನೀಡುವ ಹಾಗೂ ಪಾರದರ್ಶಕ ಆಡಳಿತ ನೀಡಲು ಮಹಿಳೆಯರಿಗೂ ಸಾಧ್ಯವಿದೆ.‌ ಆಡಳಿತ ಮಾಡುವ ಛಾತಿ ಇದೆ.‌ಸಮ್ಮೇಳನ ನಡೆಸುವ ಚಾಕಚಕ್ಯತೆ ಇದೆ.‌ಒಮ್ಮೆ ಕಣಕ್ಕೆ ಇಳಿದರೆ, ಚುನಾವಣಾ ವಾತಾವರಣ ಬದಲಾಗಿ ಮಹಿಳೆಯನ್ನೇ  ಅವಿರೋಧವಾಗಿ ಆಯ್ಕೆ ಮಾಡುವ ಸನ್ನಿವೇಶ ಸೃಷ್ಟಿಯಾಗಬಹುದು.ಸಾಹಿತ್ಯ ಸಮ್ಮೇಳನದಲ್ಲಿ ಪುರುಷ ಪ್ರಾಬಲ್ಯವನ್ನು ತಪ್ಪಿಸಬಹುದು. ಅಲ್ಲದೆ ಇಚ್ಛಾ ಶಕ್ತಿಯಿಂದ ಸಮ್ಮೇಳನದ ನಿರ್ಣಯಗಳನ್ನು ಜಾರಿ ಮಾಡಿಸಬಹುದು . ಮುಖ್ಯಮಂತ್ರಿಗಳ ಕಿವಿಹಿಂಡಿ ಕನ್ನಡದಲ್ಲಿ ಆಡಳಿತವನ್ನು ಇನ್ನೂ ಪರಿಣಾಮಕಾರಿ ಮಾಡಬಹದು.ಕಾರಣ ಮಹಿಳೆಗೆ ತಾಯ್ತನದ ಗುಣವಿರುತ್ತದೆ‌ .ಹಾಗಾಗಿ ಈ ಸಲ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಮಹಿಳಾ ಸಾಹಿತಿ ಸ್ಪರ್ಧಿಸುವುದು ಔಚಿತ್ಯಪೂರ್ಣ. ಅಲ್ಲದೇ ಇದು ಲಿಂಗ ಸಮಾನತೆಯ ಪ್ರಶ್ನೆಯೂ ಆಗಿದೆ.ಕಸಾಪವನ್ನು ಇನ್ನೂ ಎಷ್ಟು ದಿನ ಪುರುಷಪ್ರಧಾನ ವ್ಯವಸ್ಥೆಯಲ್ಲಿ ನಡೆಸುವುದು?. ಈ ಸಲ ಮಹಿಳಾ ಸಾಹಿತಿಗಳು ಸಭೆ ಸೇರಿ ಒಂದು ನಿರ್ಧಾರಕ್ಕೆ ಬರಲಿ. ‌ನಮ್ಮಲ್ಲಿ ಹಿರಿಯರಾದ ವೀಣಾ ಶಾಂತೇಶ್ವರ, ಸುಕನ್ಯಾ ಮಾರುತಿ, ಬಿ.ಟಿ.ಜಾನ್ಹವಿ, ಬಿ.ಟಿ.ಲಲಿತಾ ನಾಯಕ, ವಸುಂದರಾ ಭೂಪತಿ, ಸುನಂದಾ‌ಕಡಮೆ, ಸಾರಾ ಅಬೂಬಕರ್,‌ಮಹಿಳಾ  ವಿ.ವಿ.ಕುಲಪತಿಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಸಬಿಹಾ ಭೂಮಿಗೌಡ, ಕನ್ನಡ ಹಂಪಿ ವಿವಿ ನಿಕಟಪೂರ್ವ ಕುಲಪತಿ‌ ಮಲ್ಲಿಕಾ‌ ಘಂಟಿ, ಭಾನು‌ ಮುಷ್ತಾಕ, ಡಾ.ಎಚ್.ಎಸ್.ಅನುಪಮಾ, ವೈದೇಹಿ, ಡಾ.ಮೀನಾಕ್ಷಿ  ಬಾಳಿ, ಗುಲ್ಬರ್ಗಾದ ಹೋರಾಟಗಾರ್ತಿ ನೀಲಾ,  ದು.ಸರಸ್ವತಿ , ಪ್ರತಿಭಾ ನಂದಕುಮಾರ್…ಹೀಗೆ  ದೊಡ್ಡ ಮಹಿಳಾ ಪಡೆಯೇ ಕರ್ನಾಟಕದಲ್ಲಿ ಇದೆ. ಇವರಲ್ಲಿ ಯಾರಾದರೂ ಒಬ್ಬರೂ ಕಸಾಪ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಬೇಕು. ಕನ್ನಡಿಗರಾದ ನಾವು ಅವರ ಚುನಾವಣಾ ವೆಚ್ಚ ಭರಿಸೋಣ.  ಪಾರದರ್ಶಕವಾಗಿ ಕಸಾಪ ಸದಸ್ಯರ ಮತ ಕೇಳೋಣ.‌ ಇದು‌ ಮಹಿಳಾ ಸಮಾನತೆಯ ಹಕ್ಕಿನ ಪ್ರಶ್ನೆ .‌ಬಾಯ್ಮತಲ್ಲಿ  ಮಹಿಳಾ ಪ್ರಾತಿನಿಧ್ಯ ಎಂಬುದಕ್ಕಿಂತ ಅದು ಕಸಾಪ ಅಧ್ಯಕ್ಷ ಸ್ಥಾನದಿಂದ ಅನುಷ್ಠಾನವಾಗಲಿ. ಕನ್ನಡಿಗರ ಪ್ರಾತಿನಿಧಿಕ ಕನ್ನಡ ಸಾಹಿತ್ಯ ಪರಿಷತ್ತಗೆ  ಮಹಿಳೆ ಅಧ್ಯಕ್ಷೆಯಾಗಿ ೫ ವರ್ಷ ಕನ್ನಡಿಗರ ಕಷ್ಟ ಸುಖಗಳಿಗೆ ಸ್ಪಂದಿಸಲಿ.‌ ಸರ್ಕಾರಕ್ಕೆ  ಕನ್ನಡ ಭಾಷೆ, ಆಡಳಿತ, ಶಿಕ್ಷಣದ ವಿಷಯದಲ್ಲಿ ಮಹತ್ವದ ಮಾರ್ಗದರ್ಶನ ಮಾಡುವಂತಾಗಲಿ.‌ ಈ ಎಲ್ಲಾ ದೃಷ್ಟಿಯಿಂದ  ರಾಜ್ಯ ಕಸಾಪ ಅಧ್ಯಕ್ಷ ಸ್ಥಾನಕ್ಕೆ ಮಹಿಳೆ, ಮಹಿಳಾ ಸಾಹಿತಿ ಸ್ಪರ್ಧಿಸಬೇಕೆಂದು ನನ್ನ  ಹಾಗೂ ಸಾಹಿತ್ಯ ಸಂಗಾತಿಯ ಆಶಯವಾಗಿದೆ. ಈ ಸಂಬಂಧ ಮುಕ್ತ ಚರ್ಚೆಗೆ ಸಾಹಿತ್ಯ ಸಂಗಾತಿ ವೇದಿಕೆ ಒದಗಿಸುತ್ತದೆ. …. ************************* ನಾಗರಾಜ ಹರಪನಹಳ್ಳಿ ಈ ಅಭಿಯಾನದಲ್ಲಿ ತಾವೂ ಪಾಲ್ಗೊಳ್ಳಬಹುದು. ನಿಮ್ಮಅಭಿಪ್ರಾಯಗಳನ್ನುನಮಗೆಬರೆಯಿರಿ

ಕಸಾಪಗೆ ಮಹಿಳಾ ಅಧ್ಯಕ್ಷರು ಯಾಕಿಲ್ಲ? Read Post »

ಇತರೆ

ಕಾಡುವ ನೆನಪು

ನೆನಪು ವೀಣಾ ನಿರಂಜನ್ ಭೂತದ ಹುತ್ತದಲ್ಲಿ ಅಡಗಿ ಕುಳಿತಿರುವ ನೆನಪುಗಳನ್ನು ಮೆಲುಕು ಹಾಕುತ್ತಾ ಮೊದಲ ಕವಿತೆಯ ರೋಮಾಂಚನವನ್ನು ಅನುಭವಿಸುತ್ತಿದ್ದೇನೆ. ನಾನು ಯಾವ ಗಳಿಗೆಯಲ್ಲಿ, ಯಾಕೆ ಕವಿತೆಯನ್ನು ಹಚ್ಚಿಕೊಂಡೆ ಎನ್ನುವುದೇ ಮೊದಲ ಕವಿತೆಯ ಹುಟ್ಟಿಗೂ ಕಾರಣವಾಯಿತೇನೊ. ನನ್ನಪ್ಪ ನನಗೊಂದು ಅಚ್ಚರಿಯಾಗಿದ್ದ. ಮೇಷ್ಟ್ರಾಗಿದ್ದ ಅಪ್ಪ ಯಾವುದೇ ವಿಷಯದ ಕುರಿತು ತುಂಬ ಸೊಗಸಾಗಿ, ವಿಸ್ತಾರವಾಗಿ, ಪ್ರಭುತ್ವದಿಂದ ಪಾಠ ಮಾಡುತ್ತಿದ್ದ. ಭಾಷಣ ಮಾಡುತ್ತಿದ್ದ. ಮನೆ ತುಂಬ ಪುಸ್ತಕಗಳು. ಅಪ್ಪನ ಭೇಟಿಗೆಂದು ಮನೆಗೆ ಬರುತ್ತಿದ್ದವರು ಕೂಡ ಅಂಥವರೇ. ಸದಾ ಸಾಹಿತ್ಯ, ಕಲೆಯ ಕುರಿತು ಚರ್ಚೆ, ಮಾತುಗಳು. ಚಿಕ್ಕವಳಾಗಿದ್ದ ನಾನು ಇದೆಲ್ಲವನ್ನೂ ವಿಸ್ಮಯದಿಂದ ನೋಡುತ್ತಿದ್ದೆ. ಆದರೆ ದುರದೃಷ್ಟವಶಾತ್ ಅಪ್ಪ ನಾನಿನ್ನೂ ಬದುಕನ್ನು ಬೆರಗಿನಿಂದ ನೋಡುತ್ತಿರುವಾಗಲೇ ಮರಳಿ ಬಾರದ ಲೋಕಕ್ಕೆ ತೆರಳಿ ಬಿಟ್ಟ. ಕಾಯಿಲೆಯಿಂದ ನರಳುತ್ತಿದ್ದ ಅಪ್ಪನ ಸಂಕಟ ಮತ್ತು ಸಾವು ಆಗಲೇ ನನ್ನನ್ನು ಅಕಾಲ ಮುಪ್ಪಿಗೆ ತಳ್ಳಿದಂತೆ ಯೋಚಿಸತೊಡಗಿದ್ದೆ. ಅಪ್ಪ ಇಲ್ಲದೆ ಸೃಷ್ಟಿಯಾದ  ನಿರ್ವಾತದಿಂದ, ಅನಾಥ ಪ್ರಜ್ಞೆಯಿಂದ ಬಿಡುಗಡೆ ಪಡೆಯುವುದಕ್ಕಾಗಿಯೇ ಎಂಬಂತೆ ಓದನ್ನು, ಬರವಣಿಗೆಯನ್ನು ವಿಪರೀತ ಹಚ್ಚಿಕೊಂಡು ಬಿಟ್ಟೆ.     ಅಪ್ಪ…     ಇಂದು ನೀವಿದ್ದಿದ್ದರೆ     ಖಂಡಿತ ಹೀಗಾಗುತ್ತಿರಲಿಲ್ಲ     ನಾವು ಭೂತದ ಕಡೆಗೆ     ತಲೆ ತೂರಿಸುತ್ತಿರಲಿಲ್ಲ     ಭವಿಷ್ಯಕ್ಕೆ ಹೆದರುತ್ತಿರಲಿಲ್ಲ     ಪದೇ ಪದೇ ಮುಗ್ಗರಿಸಿ     ಪಶ್ಚಾತ್ತಾಪ ಪಡುತ್ತಿರಲಿಲ್ಲ.     ಅಂತ ಏನೇನೋ ಹಳಹಳಿಕೆಗಳೇ ಕವಿತೆಯಾಗಿ ಮೂಡಿ ಬರತೊಡಗಿದ್ದವು ಆಗ.     ಕುವೆಂಪು ಅವರು ನಮ್ಮನ್ನಗಲಿದ ದಿನ ಹೀಗೇ ತೋಚಿದ್ದು ಗೀಚಿದ್ದೆ.      ಮರೆಯಾಯಿತು      ಮರೆಯಾಗಿ ಮಲೆನಾಡ ಕಾಡಿನ      ಭವ್ಯ ರಮಣೀಯತೆಯಲ್ಲಿ      ರುದ್ರ ಭಯಂಕರ ಮನೋಹರ      ಶೂನ್ಯದಲ್ಲಿ ಸೇರಿಕೊಂಡಿತು      ಮರೆಯಾಯಿತು ಕರುನಾಡ ಜ್ಯೋತಿ      ಅಪ್ಪ ಲಂಕೇಶ್ ಪತ್ರಿಕೆಯ ಕಟ್ಟಾ ಅಭಿಮಾನಿ. ಮನೆಗೆ ತಪ್ಪದೆ ಪತ್ರಿಕೆ ಬರುತ್ತಿತ್ತು. ಅಪ್ಪನ ನಂತರವೂ ಪತ್ರಿಕೆ ಬರುವುದು ನಿಲ್ಲಲಿಲ್ಲ. ಆಗ ಪತ್ರಿಕೆಯಲ್ಲಿ ಪುಂಡಲೀಕ ಶೇಟ್ ಅವರ ಕಾಲಂ ಬರುತ್ತಿತ್ತು. ಅವರು ಉತ್ತರ ಕರ್ನಾಟಕದ ಅಪ್ಪಟ ಜವಾರಿ ಕನ್ನಡದಲ್ಲಿ ಅದನ್ನು ಬರೆಯುತ್ತಿದ್ದುದು ಎಲ್ಲರಿಗೂ ಗೊತ್ತಿದ್ದದ್ದೆ. ನಾನು ಡಿಗ್ರಿ ಓದುತ್ತಿದ್ದಾಗ ಅಕಸ್ಮಾತ್ ಒಂದು ಪುಂಡಲೀಕ ಶೇಟ್ ಅವರು ಅಪಘಾತದಲ್ಲಿ ಹೋಗಿ ಬಿಟ್ಟರು ಎನ್ನುವ ಸುದ್ದಿ ಬಂತು. ಅವರ ಅಭಿಮಾನಿಯಾಗಿದ್ದ ನಾನು ಮತ್ತೊಮ್ಮೆ ಸಾವಿನ ಕುರಿತು ಯೋಚಿಸಿದ್ದೆ. ಅವರ ಅಕಾಲಿಕ ಅಗಲಿಕೆಯ ಕುರಿತು ನಮ್ಮ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿಯೇ ಒಂದು ಕವಿತೆ ಬರೆದೆ ‘ಹ್ಯಾಂಗ ಮರಿಯೂದು’ ಅಂತ. ಆ ಕವಿತೆಯನ್ನು ಒಂದು ಕವಿಗೋಷ್ಠಿಯಲ್ಲಿ ಓದುವ ಅವಕಾಶ ಸಿಕ್ಕಿತು. ಅಳುಕುತ್ತ, ಹಿಂಜರಿಯುತ್ತ ಓದಿ ಬಂದಿದ್ದೆ. ಮೊದಲೇ ಸಂಕೋಚದ ಮುದ್ದೆ ನಾನು. ಓದಿ ಬಂದು ಮೂಲೆಯಲ್ಲಿ ಮುದ್ದೆಯಾಗಿ ಕುಳಿತೆ. ನಂತರ ಅಂದಿನ ಕವಿಗೋಷ್ಠಿಯ ಅಧ್ಯಕ್ಷರು ನನ್ನ ಕವಿತೆಯನ್ನೇ ಪ್ರಧಾನವಾಗಿ ಎತ್ತಿಕೊಂಡು ಭಾಷಣ ಪ್ರಾರಂಭಿಸಿದಾಗ ಪುಳಕದಿಂದ, ಹೆಮ್ಮೆಯಿಂದ ಬೀಗಿದ್ದೆ. ಮುಂದೆ ಆ ಕವಿತೆ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದಾಗ ಎಲ್ಲ ಕಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ಬಂದು ನಾನು ನನಗೆ ತಿಳಿಯದೇ ಕವಿಯತ್ರಿಯ ಪಟ್ಟ ಧರಿಸಿ ಬಿಟ್ಟಿದ್ದೆ. ಆದರೆ ಆ ಕವಿತೆ ಈಗ ನನ್ನ ಬಳಿ ಇಲ್ಲ ಹಾಗೂ ಅದರ ಸಾಲುಗಳು ನೆನಪಿನಲ್ಲಿಲ್ಲ. ನನ್ನ ಬದುಕಿನ ಅಸ್ತವ್ಯಸ್ತ ಅಧ್ಯಾಯದಲ್ಲಿ ಎಲ್ಲೋ ಕಳೆದು ಹೋಗಿದೆ.        ಹೀಗೆ ಏಕಾಏಕಿ ದೊರಕಿದ ಕವಿಯತ್ರಿ ಎಂಬ ಬಿರುದು ನನ್ನನ್ನು ಮತ್ತೆ ಮತ್ತೆ ಬರೆಯುವಂತೆ ಪ್ರೇರೇಪಿಸಿತು. ಆಕಾಶವಾಣಿ ಧಾರವಾಡ ಕೇಂದ್ರವು ಏರ್ಪಡಿಸಿದ್ದ ಕವನ ಸ್ಪರ್ಧೆಯಲ್ಲಿ ನನ್ನ ಮತ್ತೊಂದು ಕವಿತೆ ಪ್ರಥಮ ಸ್ಥಾನ ಪಡೆದಿತ್ತು. ಸ್ಪರ್ಧೆಯ ತೀರ್ಪುಗಾರರಾಗಿ ಬಂದಿದ್ದ ಹಿರಿಯ ಕವಿ ಚೆನ್ನವೀರ ಕಣವಿಯವರು ಕವಿತೆಯ ಕುರಿತು ಆಡಿದ ಮಾತುಗಳು ನನ್ನನ್ನು ಭಾವುಕಳನ್ನಾಗಿಸಿ ಬಿಟ್ಟಿದ್ದವು. ಆ ಕವಿತೆ      ಇದೆಂಥ ಊರು!      ಎಲ್ಲಿಯೋ ಉದಿಸಿ ಎಲ್ಲಿಯೋ ಬೆಳಗಿ      ಮತ್ತೆಲ್ಲಿಯೋ ಮುಳುಗುವ      ಸೂರ್ಯ ಕೂಡ      ಇಲ್ಲಿಯವನೇ ಆಗಿ ಬಿಡುತ್ತಾನಲ್ಲ ! ಅಂತ ಶುರುವಾಗಿ       ನನ್ನೂರು, ನನ್ನ ಮನೆ, ನನ್ನ ನಾಡು       ಎಂದೆಲ್ಲ ಹತ್ತಿರವಾದಂತೆ       ಹರವು ಪಡೆಯುತ್ತ ಬಿಚ್ಚಿ ಕೊಳ್ಳುತ್ತ       ನಮ್ಮೂರು, ನಮ್ಮ ಮನೆ, ನಮ್ಮ ನಾಡು         ಎಂದೆಲ್ಲ ವಿಶಾಲವಾಗಿ ಬಿಡುತ್ತದಲ್ಲ!       ಒಳಹೊಕ್ಕು ತಡಕಾಡಿದಾಗ       ತನ್ನೆಲ್ಲವನ್ನೂ ತೆರೆಕೊಂಡು        ಈಟೀಟು ಇಡಿ ಇಡಿಯಾಗಿ       ಬೆರೆತು ಕೊಂಡು ಮತ್ತೆ       ಆಪ್ತವಾಗಿ ಬಿಡುತ್ತದಲ್ಲ !!                                             ಹೀಗೆ ಕವಿತೆ ನಿಧಾನವಾಗಿ ನನ್ನನ್ನು ನನ್ನ ನೋವುಗಳಿಂದ, ಹಳಹಳಿಕೆಗಳಿಂದ ದೂರ ಮಾಡುತ್ತಾ, ಸಾಂತ್ವನ ಹೇಳುತ್ತ ನನ್ನ ಸುತ್ತ ಹೊಸದೊಂದು ಲೋಕವನ್ನು ನಿರ್ಮಾಣ ಮಾಡತೊಡಗಿತು. ಮುಂದೆ ಕವಿವಿ ಕನ್ನಡ ಅಧ್ಯಯನ ಪೀಠ, ಕ್ರೈಸ್ಟ್ ಕಾಲೇಜು ಸಂಘ, ಜೆ ಎಸ್ ಎಸ್ ಧಾರವಾಡ ಮುಂತಾದವರು ಏರ್ಪಡಿಸಿದ ಕವನ ಸ್ಪರ್ಧೆಗಳಲ್ಲಿ ಸತತವಾಗಿ ಬಹುಮಾನ ಪಡೆದೆ. ಆದರೆ ನಂತರದ ದಿನಗಳಲ್ಲಿ ವೈಯಕ್ತಿಕ ಬದುಕಿನಲ್ಲಿ ಘಟಿಸಿದ ಅನಿರೀಕ್ಷಿತ ಆಘಾತಗಳು, ಅದರಿಂದಾದ ಆರೋಗ್ಯದಲ್ಲಿನ ಏರುಪೇರುಗಳು, ಸಂಸಾರದ ಜವಾಬ್ದಾರಿ ಎಲ್ಲವೂ ಸೇರಿ ಒಂದು ಸುದೀರ್ಘ ಮೌನ… ಕಾವ್ಯ ಸಖಿಯಿಂದ ವಿಮುಖಳಾಗಿ ಬಿಟ್ಟೆ. ಇತ್ತೀಚೆಗೆ ಮತ್ತೆ ಕಾವ್ಯ ನನ್ನನ್ನು ತನ್ನೆಡೆಗೆ ಸೆಳೆಯುತ್ತಿದೆ.  ಈ ಸೆಳೆತವೇ ಒಂದೂ ಸಂಕಲನವಿಲ್ಲದ ನನ್ನನ್ನು ಕೂಡ ಮೊದಲ ಕವಿತೆಯ ಕುರಿತು ಬರೆಯುತವಂತೆ ಪ್ರೇರೆಪಿಸಿದ್ದು. ಎಲ್ಲ ಹಳವಂಡಗಳಿಂದ ನನ್ನ ಮುಕ್ತ ಗೊಳಿಸಿ ಕಾವ್ಯದ ಮೇಲಿನ ಮೋಹ ಮತ್ತೊಮ್ಮೆ ಬದುಕನ್ನು ಪ್ರೀತಿಸುವಂತೆ ಮಾಡಿದೆ. **********************************

ಕಾಡುವ ನೆನಪು Read Post »

ಇತರೆ, ಸಿನೆಮಾ

ನೂತನ ನೋಡಿದ ಸಿನೆಮಾ

ವಿದ್ಯಾ ಕಸಂ ಶಕುಂತಲಾ ದೇವಿ ನೂತನ ದೋಶೆಟ್ಟಿ ವಿದ್ಯಾ ಕಸಂ ಈ ಶಬ್ದಗಳು , ಇತ್ತೀಚೆಗೆ ಬಿಡುಗಡೆಯಾದ, ಖ್ಯಾತ ಗಣಿತಜ್ಞೆ , ಸಂಖ್ಯಾ ನಿಪುಣೆ, ಮಾನವ ಕಂಪ್ಯೂಟರ್ ಎಂದೇ ಹೆಸರಾಗಿದ್ದ ಶಕುಂತಲಾ ದೇವಿ ಅವರ ಜೀವನಾಧಾರಿತ ಹಿಂದಿ ಚಲನಚಿತ್ರದಲ್ಲಿ ಬಹಳ ವಿಶೇಷವಾಗಿ ಉಪಯೋಗಿಸಲ್ಪಡುತ್ತವೆ. ಈ ವಿದ್ಯಾ ಕಸಂ ಎಂಬ ಆಣೆ- ಪ್ರಮಾಣ ಚಿತ್ರದುದ್ದಕ್ಕೂ ಬೇರೆ ಬೇರೆ ಸಂದರ್ಭಗಳಲ್ಲಿ ಹೊಸ ತಿರುವನ್ನು ಕೊಡುತ್ತ ಹೋಗುತ್ತದೆ. ಅಮೇಜಾನ್ ಪ್ರೈಂನಲ್ಲಿ ಜುಲೈ 31 ರಂದು ಬಿಡುಗಡೆಯಾದ ಈ ಚಿತ್ರವನ್ನು ನಾನು ನೋಡಿದ್ದು ವಿದ್ಯಾ ಬಾಲನ್ ಎಂಬ ಅನನ್ಯ ಅಭಿನೇತ್ರಿಗಾಗಿ. ಗಣಿತಕ್ಕೂ ನನಗೂ ಎಣ್ಣೆ – ಸೀಗೆಕಾಯಿ ಸಂಬಂಧ. ಹಾಗಾಗಿ ಶಕುಂತಲಾ ದೇವಿಯವರ ಬಗ್ಗೆ ನನಗೆ ಇದ್ದದ್ದು ಅಪಾರ ಭಯ ಮಿಶ್ರಿತ ಗೌರವ. ಅವರ ಬಗ್ಗೆ ಸಾಕಷ್ಟು ಪತ್ರಿಕೆಗಳಲ್ಲಿ ಓದಿ, ಆನಂತರದಲ್ಲಿ ಟಿವಿಯಲ್ಲಿ ನೋಡಿ ಬೆರಗಾಗಿದ್ದಿದೆ. ಸಂಖ್ಯೆಗಳೊಂದಿಗೆ ಅವರ ಸರಸ, ಸಲಿಗೆ ಆಗ ವಿಶ್ವದಾದ್ಯಂತ ಮನೆಮಾತಾಗಿತ್ತು.ಅಂಥ ಶಕುಂತಲಾ ದೇವಿಯವರ ಬಗೆಗಿನ ಚಲನಚಿತ್ರವನ್ನು ಕುತೂಹಲದಿಂದಲೇ ನೋಡಲು ಕುಳಿತೆ.  ಆರಂಭದಲ್ಲೇ ನಿರ್ದೇಶಕ ಅನು ಮೆನನ್, ಶಕುಂತಲಾ ದೇವಿಯವರ ಮಗಳು ಅನುಪಮಾ ಬ್ಯಾನರ್ಜಿಯವರು ಹೇಳಿರುವಂತೆ ಚಿತ್ರಿಸಲಾಗಿದೆ ಎಂದು ಹೇಳಿ ತಾವು ಸುರಕ್ಷರಾಗುವುದರೊಂದಿಗೆ ಚಿತ್ರದ ಆಯಾಮವನ್ನು ಸಿದ್ಧಪಡಿಸುತ್ತಾರೆ. ಇಡಿಯ ಚಿತ್ರ ಮಗಳ ಕಣ್ಣೋಟದಲ್ಲೇ ಸಾಗುತ್ತದೆ. ಆರಂಭವಾಗುವುದೇ ಮಗಳು ಅನು, ಶಕುಂತಲಾ ದೇವಿ ಎಂಬ, ಅಪ್ರತಿಮ ಬುದ್ಧಿಮತ್ತೆಗಾಗಿ ವಿಶ್ವಮಾನ್ಯಳಾದ , ತನ್ನ ತಾಯಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕುವ ಮೂಲಕ. ನೋಡುಗರನ್ನು ಅವಾಕ್ಕಾಗಿಸಿ ಸೆರೆ ಹಿಡಿಯುವ ತಂತ್ರ ಇಲ್ಲಿ ಕೆಲಸ ಮಾಡಿದೆ. ಚಿತ್ರ ಮುಂದುವರೆದಂತೆ ‘ದೇವಿ’ಎಂಬ ಹೆಣ್ಣು, ಪತ್ನಿ, ತಾಯಿಯೇ ವಿಜ್ರಂಭಿಸುತ್ತಾಳೆ! ಬಾಲ್ಯದಲ್ಲಿ ತಂದೆಯಿಂದಲೇ ಶೋಷಣೆಗೆ ಒಳಗಾಗಿ ತನ್ನ ಬಾಲ್ಯವನ್ನೇ ಪುಟ್ಟ ದೇವಿ ಕಳೆದುಕೊಳ್ಳುತ್ತಾಳೆ. ಅವಳ ಬುದ್ಧಿಮತ್ತೆಯನ್ನು ತನ್ನ ಮನೆಯ ಹೊಟ್ಟೆ ಹೊರೆಯಲು ಬಳಸಿಕೊಳ್ಳುವ ಕಟುಕ ಹಾಗೂ ಹೀನ ಬುದ್ಧಿಯ ತಂದೆಯಾಗಿ ಪ್ರಕಾಶ್ ಬೆಳವಾಡಿ ಅಭಿನಯಿಸಿದ್ದಾರೆ. ಶಾಲೆ, ಆಟ-ಪಾಠಗಳಿಂದ ವಂಚಿತಳಾಗಿ ಅವುಗಳನ್ನು ಹಂಬಲಿಸುವ ದೇವಿ ಕೊನೆಗೆ ಮನೆಯಲ್ಲಿ ತನ್ನ ಅಂಗವಿಕಲ ಅಕ್ಕನೊಂದಿಗೆ ಕೆಲ ಹೊತ್ತು ನಗುತ್ತ, ತನ್ನಿಷ್ಟದ ಕೊಳಲು ನುಡಿಸುತ್ತ ಕಾಲ ಕಳೆಯುವುದಕ್ಕೂ ತಂದೆ ಅವಕಾಶ ಕೊಡದಾಗ ವ್ಯಗ್ರಳಾಗುತ್ತಾಳೆ. ತಂದೆಯನ್ನು ತುಟಿಪಿಟಕ್ಕೆನ್ನದೆ ಸಹಿಸಿಕೊಳ್ಳುವ ತಾಯಿಯನ್ನು ದ್ವೇಷಿಸಲು ಆರಂಭಿಸುತ್ತಾಳೆ. ಈ ಎಲ್ಲ ರೇಜಿಗೆ ಗಳಿಂದ ಮುಕ್ತಿ ಹೊಂದಲು  ಯೌವನದಲ್ಲಿ ಇಂಗ್ಲೆಂಡಿಗೆ ಹಾರಿ ಬಿಡುತ್ತಾಳೆ. 1950 ರ ಆಸುಪಾಸಿನಲ್ಲಿ ಆಕೆ ಹೇಗೆ ಅಲ್ಲಿಗೆ ಹೋದರು ಎಂಬುದರ ಬಗ್ಗೆ ಯಾವ ಮಾಹಿತಿಯೂ ಚಿತ್ರದಲ್ಲಿಲ್ಲ! ಒಬ್ಬಳೇ ಹೆಣ್ಣುಮಗಳು ತನ್ನ ಬದುಕನ್ನು ಅರಸಿ ಮಾಡುವ ಮುಂದಿನ ಪ್ರಯಾಣ ಹಳೆಯ ಹಿಂದಿ ರೊಮ್ಯಾಂಟಿಕ್ ಚಿತ್ರದಂತೆ ಸಾಗಿಬಿಡುತ್ತದೆ. ದೇವಿ ಪುರುಷರೊಂದಿಗೆ ತೀರ ಸಲಿಗೆಯಿಂದಿರುತ್ತಾಳೆ. ಮೊದಲ ಜೊತೆಗಾರ ತನ್ನ ಮದುವೆಯನ್ನೇ ಅವಳಿಂದ ಮುಚ್ಚಿಟ್ಟದ್ದು ತಿಳಿದಾಗ ಅವನದೇ ಬಂದೂಕಿನಿಂದ ಅವನ ಕಿವಿಹಾರಿಸಿ ಓಡಿ ಹೋಗುತ್ತಾಳೆ. ಆನಂತರ ಒಬ್ಬ ಸ್ಪೇನಿಯವನೊಂದಿಗೆ ಸರಸ. ಅವನು ಅವಳ ಪ್ರತಿಭೆಗೆ  ಅಪಾರ ಮನ್ನಣೆ ಸಿಗುವಂತೆ ಮಾಡುತ್ತಾನೆ. ದೇವಿ ಹಣವನ್ನು ಎರಡು ಕೈಗಳಲ್ಲಿ ಬಾಚಿ ದುಡಿಯುತ್ತಾಳೆ.  ಈ ಹೊತ್ತಿಗೆ ಅವಳು ಪ್ರಖ್ಯಾತರಾಗಿರುತ್ತಾಳೆ.  ಅವನು ಅವಳನ್ನು ಬಿಟ್ಟು ತನ್ನ ದೇಶಕ್ಕೆ ಹೊರಡಬೇಕಾದಾಗ ಸ್ವಲ್ಪ ದುಃಖವಾದರೂ ದೇವಿಗೆ ಸಂಬಂಧಗಳ ಬಂಧದಲ್ಲಿ ನಂಬಿಕೆ ಇದ್ದಂತೆ ಕಾಣುವುದಿಲ್ಲ. ತನಗಾಗಿ, ತನ್ನಿಷ್ಟದಂತೆ ಬದುಕುವುದು ಅವಳ ಜೀವನದ ಏಕೈಕ ಗುರಿ. ಅವಳು ಖ್ಯಾತಿಯ ಉತ್ತುಂಗದಲ್ಲಿದ್ದಾಗ ಅವಳ ಜೀವನ ಪ್ರವೇಶಿಸಿದವನು  ಪಾರಿತೋಷ್ ಬ್ಯಾನರ್ಜಿ. ಅವನಲ್ಲಿ ಅವಳು ಕೇಳುವುದು ಮಗುವನ್ನು. ಮದುವೆಯನ್ನಲ್ಲ. ಬಾಲ್ಯದಲ್ಲೇ ಗಳಿಕೆಗೆ ಇಳಿದ ಪುಟ್ಟ ಬಾಲಕಿ, ಮನೆಯನ್ನು ನಡೆಸುವ ಒಡತಿಯಾಗಿ, ತಂದೆಯ ಪಾಖಂಡಿತನ, ತಾಯಿಯ ಅಸಹಾಯಕತೆಯನ್ನು ತನಗೆ ಅರ್ಥವಾದಂತೆ ಅರ್ಥೈಸಿಕೊಂಡು ಹಠ, ಮೊಂಡು, ಮಹತ್ವಾಕಾಂಕ್ಷೆ, ಬಂಧನರಹಿತ ಸ್ವಾತಂತ್ರ್ಯ, ಕಟ್ಟುಪಾಡುಗಳಿರದ ಜೀವನಕ್ಕೆ ಹಾತೊರೆಯುವಂತೆ ಚಿತ್ರಿಸಲಾಗಿದೆ. ಹೀಗಿದ್ದರೆ ಶಕುಂತಲಾ ದೇವಿ ಎಂದು ಆಶ್ಚರ್ಯ ವಾಗುತ್ತದೆ. ಅವರದು ಸ್ವಾಭಿಮಾನವೋ ಅಂಹಂಕಾರವೋ ತಿಳಿಯುವುದಿಲ್ಲ.  ಒಬ್ಬ ಓವರ್ ಪೊಸೆಸಿವ್ ತಾಯಿಯಾಗಿ ಅವರನ್ನು ತೋರಿಸಲಾಗಿದೆ. ತನ್ನ ಮಗು ತನ್ನಂತೆಯೇ ಆಗಬೇಕು. ತನ್ನ ನೆರಳಿನಲ್ಲೇ ಇರಬೇಕು ಎಂಬ ಹಠದಿಂದ ಮಗು ಅನುಳನ್ನು ತಂದೆಯಿಂದ ದೂರ ಮಾಡುವುದಷ್ಟೇ ಅಲ್ಲ ಅವಳ ಬಾಲ್ಯದಿಂದಲೂ ವಂಚಿಸುತ್ತಾಳೆ. ರಾಷ್ಟ್ರಗಳಿಂದ ರಾಷ್ಟ್ರಕ್ಕೆ ಹಾರುತ್ತ ಹಣ, ಖ್ಯಾತಿ  ಗಳಿಸುವ ಗೀಳು ಹೆಣ್ಣಾಗಿ ಅವರು ಕಾಣಿಸುತ್ತಾರೆ. ಸಿಟ್ಟು, ಸ್ವೇಚ್ಛೆ,  ಸ್ವಾರ್ಥದ ಮೂರ್ತ ರೂಪವೇ ಆಗಿ ಕಾಣುತ್ತಾರೆ. ವಿದ್ಯಾ ಅವರ ನಟನೆಯಲ್ಲಿ  ಶಕುಂತಲಾ ದೇವಿ ಬಹು ಹಗುರವಾಗಿ, ಕೆಲವೊಮ್ಮೆ ಉಡಾಫೆಯಾಗಿ ಕಾಣುತ್ತಾರೆ. ವಿದ್ಯಾ ಅಗತ್ಯಕ್ಕಿಂತ  ಹೆಚ್ಚೇ ಗಹಗಹಿಸುತ್ತಾರೆ. ದೇವಿ ನಿಜವಾಗಿಯೂ ಹಾಗಿದ್ದರೆ ಅಥವಾ ಪ್ರೇಕ್ಷಕರಿಗಾಗಿ ಅವರನ್ನು ಹಾಗೆ ಮಾಡಲಾಗಿದೆಯೇ ಗೊತ್ತಿಲ್ಲ. ಆರಂಭದಲ್ಲಿ ಇರುವ ಕುತೂಹಲ, ಗತಿಯ ಬಿಗಿ ಬಂಧ ಅರ್ಧಕ್ಕಿಂತ ಮೊದಲೇ ಕಳೆದು ಹೋಗುತ್ತದೆ. ಒಟ್ಟಿನಲ್ಲಿ ಸಿನಿಮಾ ಅನುಪಮಾ ಬ್ಯಾನರ್ಜಿಯವರ ಏಕಮುಖ ದ್ರಷ್ಟಿಕೋನದಂತೆ ಇದೆ. ಕೊನೆಯಲ್ಲಿ ನಿರಾಸೆಯೂ ಆಗುತ್ತದೆ. ‘ಶಕುಂತಲಾ ದೇವಿ’ ಎಂಬ ಹೆಸರಿನ ಮಾಂತ್ರಿಕತೆ ಚಿತ್ರದಲ್ಲಿ ಒಡಮೂಡಿಲ್ಲ. ಆದರೂ ವಿದ್ಯಾ ಬಾಲನ್  ಅವರ ನಟನೆಯ  ಕೆಲ ಸನ್ನಿವೇಶಗಳು, ಅಲ್ಲಲ್ಲಿ ಹಾಯಾಗಿ ಸಾಗುವ ಕೆಲ ಪಾತ್ರಗಳು, ಅನುಪಮಾ ಪಾತ್ರದ  ಸನ್ಯಾ ಮಲ್ಹೋತ್ರಾ , ಅವಳ ಗಂಡನ ಪಾತ್ರದಲ್ಲಿ ಅಮಿತ್ ಸಾಧ್ಯ , ಪಾರಿತೋಷ್   ಬ್ಯಾನರ್ಜಿಯ  ಪಾತ್ರದಲ್ಲಿ ಜಿಷು ಸೇನ್ ಗುಪ್ತ ಹಿಡಿದು ಕೂರಿಸಿ ಪೂರ್ಣ ಚಿತ್ರ ತೋರಿಸಿ ಬಿಡುತ್ತಾರೆ.ಅಪ್ರತಿಮ ಸಂಖ್ಯಾ ಕುಶಲೆಗೆ ಬಾಲ್ಯದಲ್ಲಿ ಆದ  ಆಘಾತ ಆಕೆ ಬೆಳೆದಂತೆ ಮಾನಸಿಕ ತೊಂದರೆಯಾಗಿತ್ತೇ ಎಂಬ ಅನುಮಾನ ಬರುತ್ತದೆ. ಯಾವುದಕ್ಕೂ ಸರಿಯಾದ ಉತ್ತರ ಸಿಗದೆ, ಹಾಗೆಂದು ತೀರ  ಗೋಜಲಾಗದಂತೆ ಎಚ್ಚರವಹಿಸಿ ಮಾಡಿದಂತಿದೆ ಈ ಚಿತ್ರ.  ಭಾಗ್ ಮಿಲ್ಖಾ ಭಾಗ್, ಎಂ ಎಸ್ ಧೋನಿ ಮೊದಲಾದ ಚಿತ್ರಗಳೆದುರು ಕಳೆಗುಂದುತ್ತದೆ. ನಿರೀಕ್ಷೆ ಹುಸಿಯಾಗುತ್ತದೆ. ಆದರೆ ವಿದ್ಯಾ ಬಾಲನ್ ಇಡಿಯ ಚಿತ್ರವನ್ನು ಅಳುತ್ತಾರೆ. ವಿದ್ಯಾ ಕಸಂ…  ಅವರಿಗೆ ಪ್ರಶಸ್ತಿ ಬಂದರೂ ಆಶ್ಚರ್ಯವಿಲ್ಲ. *********************************************

ನೂತನ ನೋಡಿದ ಸಿನೆಮಾ Read Post »

You cannot copy content of this page

Scroll to Top