ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ನನ್ನ ಇಷ್ಟದ ಕವಿತೆ

ನನ್ನ ಇಷ್ಟದ ಕವಿತೆ ಡಾ.ಎಂ.ಗೋಪಾಲಕೃಷ್ಣ ಅಡಿಗ ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನುಯಾವ ಬೃಂದಾವನವು ಸೆಳೆಯಿತು ನಿನ್ನ ಮಣ್ಣಿನ ಕಣ್ಣನು ಹೂವು ಹಾಸಿಗೆ ಚಂದ್ರ ಚಂದನ ಬಾಹುಬಂಧನ ಚುಂಬನಬಯಕೆ ತೋಟದ ಬೇಲಿಯೊಳಗೆ ಕರಣ ಗಣದೀ ರಿಂಗಣಒಲಿದ ಮಿದುವೆದೆ , ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರಇಷ್ಟೇ ಸಾಕೆಂದಿದ್ದೆಯಲ್ಲೋ ? ಇಂದು ಏನಿದು ಬೇಸರ?ಸಪ್ತ ಸಾಗರದಾಚೆಯೆಲ್ಲೊಸುಪ್ತ ಸಾಗರ ಕಾದಿದೆಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೇ?ಏನಿದೇನಿದು ಹೊರಳುಗಣ್ಣಿನ ತೇಲುನೋಟದ ಸೂಚನೆ?ಯಾವ ಸುಮಧುರ ಯಾತನೆ?ಯಾವ ದಿವ್ಯ ಯಾಚನೆ?ಮರದೊಳಡಗಿದ ಬೆಂಕಿಯಂತೆ ಎಲ್ಲೊ ಮಲಗಿದ ಬೇಸರಏನೋ ತೀಡಲು ಏನೋ ತಾಗಲು ಹೊತ್ತಿ ಉರಿವುದು ಕಾತರ.ವಿವಶವಾಯಿತು ಪ್ರಾಣ ಹಾ! ಪರವಶವು ನಿನ್ನೀ ಚೇತನಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಯಾವ ಮೋಹನ ಮುರಳಿ ಕರೆಯಿತು ಇದ್ದಕಿದ್ದಲೆ ನಿನ್ನನುಯಾವ ಬೃಂದಾವನವು ಚಾಚಿತು ತನ್ನ ಮಿಂಚಿನ ಕೈಯನು. ನವೋದಯ ಕಾಲದ ಕಾವ್ಯಗಳ ಸಾಲಿನಲ್ಲಿ ಪ್ರಾತಿನಿಧಿಕ ಕವನಗಳನ್ನು ಒಳಗೊಂಡ “ಕಟ್ಟುವೆವು ನಾವು” ಕವನ ಸಂಗ್ರಹದಲ್ಲಿ ” ಯಾವ ಮೋಹನ ಮುರಳಿ ಕರೆಯಿತು” ಕವಿತೆಯೂ ಒಂದು.೧೬ ಸಾಲುಗಳ ಈ ಕವನ ಪ್ರಸಿದ್ಧ ಭಾವಗೀತೆಯೂ , ಚಿತ್ರಗೀತೆಯೂ ಹೌದು.    ಜೋಡಿ ಸಾಲುಗಳಲ್ಲಿ ಅಂತ್ಯಪ್ರಾಸ ತ್ರಾಸವಿಲ್ಲದೇ ಸರಳವಾಗಿ , ಲಯ, ಗೇಯತೆ, ಮಾಧುರ್ಯತೆಯಿಂದ ಕೂಡಿದ ಹೃದ್ಯವೆನಿಸುವ ಸುಂದರ ಪದ್ಯ. ಕೆಲವು ಸಾಲುಗಳಂತೂ ಹಾಗೆಯೇ ನಾಲಿಗೆಯ ಮೇಲೆ ನರ್ತಿಸುವಂತೆ ಭಾಸವಾಗುತ್ತವೆ.    ಭಕ್ತಿ ಭಾವದೊಂದಿಗೆ ಕೃಷ್ಣ ಹಾಗೂ ಬೃಂದಾವನ ಗಳ ಉದಾಹರಣೆಯೊಂದಿಗೆ ನಮ್ಮ ಜೀವನ ಹಾಗೂ ನಶ್ವರವಾದ ಲೌಕಿಕ ಸುಖದಿಂದ ದೂರ ಸರಿಯುವ ಸಂದೇಶವನ್ನು ಈ ಸಾಲುಗಳು ನೀಡುತ್ತವೆ. ಅದೂ ಯಾರೋ ಕಿವಿಯಲ್ಲಿ ಮಧುರ ಕಂಠದಿಂದ ಜೇನ್ಮಳೆಯನ್ನು ಸುರಿಸಿದಂತೆ ಪದಗಳು ಲೀಲಾಜಾಲವಾಗಿ ಮನಸ್ಸಿಗೆ ನಾಟುವಂತೆ ಮೂಡಿಬಂದಿದೆ.ಪದಗಳ ಬಳಕೆಯಲ್ಲಿ ಪರ್ಯಾಯ ಪದಗಳಿಗೆ ಅವಕಾಶವೇ ಇಲ್ಲವೆಂಬಂತೆ ಪ್ರಯೋಗವಾಗಿದೆ. ಯಾವ ಮೋಹನನ ಕರೆಗೆ ಮನಸ್ಸು ಕರಗಿದೆಯೋ ಅಲ್ಲಿಗೇ ಸೆಳೆತ ಹೆಚ್ಚಾಗಿ ದೂರಕ್ಕೆ ಸಾಗುವಂತೆ ಮಾಡುವ ಅದಮ್ಯ ಶಕ್ತಿಯಿಂದಾಗಿ ಇಲ್ಲಿವರೆಗೂ ದೊರೆತದ್ದೆಲ್ಲವೂ ಬೇಡವೆನಿಸಿದೆ. “ಒಲಿದ ಮಿದುವೆದೆ , ರಕ್ತ ಮಾಂಸದ ಬಿಸಿದು ಸೋಂಕಿನ ಪಂಜರ ಇಷ್ಟೇ ಸಾಕೆಂದಿದ್ದೆಯಲ್ಲೋ! ಇಂದು ಏನಿದು ಬೇಸರ?”     ಮಾನವ ಶರೀರದ ರಚನೆಯಲ್ಲಿ ರಕ್ತ- ಮಾಂಸ, ಚರ್ಮದ ಹೊದಿಕೆಯಿಂದ ಕೂಡಿದ್ದು ಕ್ಷಣಿಕ ಆಸೆಗಳೆಡೆಗೆ ಬಹುಬೇಗ ಮರುಳಾಗಿಬಿಡುತ್ತದೆ. ಪ್ರೀತಿ, ಪ್ರೇಮಗಳೆಂಬ ಮೋಹವು ಕಾಮದ ಜಾಡು ಹಿಡಿದು ಇದಿಷ್ಟೇ ಸಾಕೆಂಬ ನಿರ್ಧಾರ ಮಾಡಿದಂತಿತ್ತು.ಹಾಗೆಯೇ ತನ್ನನ್ನು ಲೌಕಿಕ ಜಗತ್ತಿನ ಗೊಡವೆಗಳ ,ಆಕರ್ಷಣೆಯ ಗುಲಾಮನಾಗಿಸಿತ್ತು. ಆದರೇಕೋ ಬಯಸಿದ, ಅನುಭವಿಸಿದ ಎಲ್ಲಾ ಸುಖ ಲೋಲುಪತೆಗಳು ಬೇಡವೆನಿಸಿ ಏಕತಾನತೆಗೆ ಮನಸ್ಸು ಹಪಹಪಿಸುತ್ತಿದೆ ಎಂಬುದು ಇದರ ಮೂಲಕ ಕಂಡುಬರುತ್ತದೆ.   ಬೇಸರಿಕೆಯೊಂದು ಮನದ ಮೂಲೆಯಲ್ಲಿ ಮೊಳೆತು ಜೀವನವೆಂದರೆ ಕೇವಲ ಪ್ರಾಪಂಚಿಕ ಸುಖದಲ್ಲಿ ಮುಳುಗಿ ಸದಾಕಾಲವೂ ಖಿನ್ನತೆ, ಮಾನಸಿಕ ವೇದನೆ ಅನುಭವಿಸುತ್ತಾ ತೊಳಲಾಡುತ್ತಿರುವುದಲ್ಲ , ಬದಲಾಗಿ ಇದೆಲ್ಲವನ್ನೂ ಮೀರಿದ ದಿವ್ಯ ಅನುಭವವೊಂದು ನಮಗಾಗಿ ಕಾದಿದೆ. ಅದನ್ನು ನಾವು ಪಡೆಯಲು ಸಜ್ಜಾಗಬೇಕಿದೆ.   ” ಯಾವ ಸುಮಧುರ ಯಾತನೆ? ಯಾವ ದಿವ್ಯ ಯಾಚನೆ?” ಈ ಅದ್ಭುತ ಸಾಲುಗಳು ನೀಡುವ ಅರ್ಥ. ” ಸಪ್ತ ಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ” ಈ ಸಾಲಿನಲ್ಲಿ ಎಲ್ಲಿಯೋ ಅಗೋಚರವಾದ ಸಪ್ತ ಸಾಗರದ ತೀರಕೆ ಸೆಳೆಯುವ ಕವಿಯ ಮನಸ್ಸಿಗೆ ಮೂಕವಾದ ಮರ್ಮರವೊಂದು ತಲುಪಿರುವಂತೆ ಭಾಸವಾಗುತ್ತಿದೆ. ನನ್ನ ಮನಸ್ಸನ್ನು ಮೆಚ್ಚಿದ ಸಾಲು ಹಾಗೂ ಸದಾ ಕಾಡುವ ಭಾವ. ಯಾವುದೋ ಅಲೌಕಿಕ ಶಕ್ತಿಯೊಂದು ಈ ಲೋಕದ ಜನರನ್ನು ಮೃದುವಾಗಿ ಎಚ್ಚರಿಸಿ ಇಹವನ್ನು ಬಿಡಲಾಗದೇ ಅಸಹಾಯಕ ಮನಸ್ಥಿತಿಯಲ್ಲಿರುವ ಯಾತನಾಮಯ ಜೀವಗಳನ್ನು ಚೈತನ್ಯಯುಕ್ತ ಜಗತ್ತಿಗೆ ಸೇರಿಸುತ್ತಿದೆ. ಹಾಗೆಯೇ ” ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ”ಈ ಸಾಲೂ ಕೂಡ ನಮ್ಮ ಸಾರ್ವಕಾಲಿಕ ಬದುಕಿಗೆ ಹಿಡಿದ ಕನ್ನಡಿಯೇ ಸರಿ. ಬದುಕೆಂದಿಗೂ ಗೊಂದಲಗಳ ಗೂಡಾಗದೇ ನೆಮ್ಮದಿಯ ತಾಣವಾಗಿರಬೇಕು.”ಇಲ್ಲ” ಗಳ ಕಡೆ ಮನಸ್ಸು ವಾಲಿರುವುದರಿಂದ ನಿಜವಾದ ಆನಂದವನ್ನು ಕೈಚೆಲ್ಲಿ ಮತ್ತೆಲ್ಲೋ ವ್ಯರ್ಥ ಪ್ರಯತ್ನ ಮಾಡುವುದೆಷ್ಟು ಸರಿ ಅಲ್ಲವೇ? ಇದ್ದುದರಲ್ಲಿ ನೆಮ್ಮದಿಯ ಕಂಡಾಗ ದೊರೆಯಬಹುದಾದ ಸಂತಸ ಪರರಿಂದ ಕಿತ್ತುಕೊಳ್ಳುವುದರಿಂದ ಸಿಗಲಾರದು, ಸಿಕ್ಕರೂ ಕ್ಷಣಿಕ.ತಮ್ಮ ಹತ್ತಿರ ಏನೋ ಇರುವುದಿಲ್ಲ ತಮಗೆ ಅದು ಬೇಕಾಗಿರುತ್ತದೆ.ಅದಕ್ಕಾಗಿ ಜಗತ್ತು ಸದಾ ಪ್ರಯತ್ನಿಸುತ್ತಲೇ ಇರುವುದನ್ನು ಕಾಣುತ್ತೇವೆ. ಪಡೆದಾಗ ಸಂತಸ ಪಡುವ ಮನಸ್ಸು ಕ್ರಮೇಣ ಮತ್ತೇನೋ ಬಯಸುತ್ತದೆ ಅಥವಾ ಇರುವುದು ಕಡಿಮೆ ಯೂ ಎನಿಸಬಹುದು. ಪುನಃ ಮನಸ್ಸು ಹಾತೊರೆಯುತ್ತದೆ.ಹೀಗೆ ಜೀವ ಇರುವ ತನಕ ಕೊರತೆಗಳಿಗೂ ಬರವಿಲ್ಲ.ಆಸೆಗಳಿರಲಿ ದುರಾಸೆಗಳು ನಿಷಿದ್ಧ. ಹೀಗೆ ಪ್ರಶ್ನೋತ್ತರಗಳ ಮೂಲಕವೇ ಸಹೃದಯ ಓದುಗರ ಅಭಿರುಚಿಗೆ ತಕ್ಕಂತೆ ಮನಮುಟ್ಟುವ , ಭಾವಗಳನ್ನು ತನ್ನೆಡೆಗೆ ಸೆಳೆಯುವ ಮೋಹಕ ಶಕ್ತಿಯಿರುವ ಪದ್ಯ. ಮರದೊಳಡಗಿದ ಬೆಂಕಿ ಕಣ್ಣಿಗೆ ಅಗೋಚರ.ಹಾಗೆಯೇ ಮನದೊಳಡಗಿರುವ ಬೇಸರವೂ. ಮನದ ಬೇಸರವು ಹೊತ್ತಿ ಉರಿದು ಕಾತರದ ರೂಪವಾಗಿದೆ. ಏನು- ಏಕೆ ಎಂಬ ಅತೀವ ಉತ್ಸುಕತೆಯ ಮನಸ್ಸಿಗೆ ಬಹಳಷ್ಟು ಕಾಡುತ್ತದೆ. ಜೀವಾಂಶವೇ ನನ್ನ ಬಿಟ್ಟು ದೂರ ಹೋದಂತೆ ಇರುವುದೆಲ್ಲವನ್ನು ಬಿಟ್ಟು ಮತ್ತೆಲ್ಲೊ ಮನಸ್ಸು ಏನನ್ನೊ ಅರಸುತ್ತಾ ಹೊರಡುತ್ತದೆ. ನಾ ಮೆಚ್ಚುವ ಈ ಕವಿತೆಯು ಸದಾ ಗುಯ್ಗುಡುತ್ತದೆ ನನ್ನ ಕಿವಿಯಲ್ಲಿ. ****************************** ಸರಿತಾ ಮಧು

ನನ್ನ ಇಷ್ಟದ ಕವಿತೆ Read Post »

ಇತರೆ

ನನ್ನ ಇಷ್ಟದ ಕವಿತೆ

ಮುಂಬೈ ಜಾತಕ ರಚನೆ —– ಜಿ.ಎಸ್.ಶಿವರುದ್ರಪ್ಪ ಹುಟ್ಟಿದ್ದು: ಆಸ್ಪತ್ರೆಯಲ್ಲಿ ಬೆಳೆದದ್ದು: ಬಸ್ಸು ಟ್ರಾಂ ಕಾರು ಟ್ಯಾಕ್ಸಿ ಎಲೆಕ್ಟ್ರಿಕ್ ಟ್ರೇನುಗಳಲ್ಲಿ ಕುಡಿದದ್ದು: ಕಾಣದೆಮ್ಮೆಯ ಕೆಚ್ಚಲು ಕರೆದು ಕಳುಹಿಸಿದ ಬಾಟ್ಲಿ ಹಾಲು, ಗ್ರೈಪ್ ಸಿರಪ್ ಹಾರ್ಲಿಕ್ಸ್ ಇತ್ಯಾದಿ ಕಂಡಿದ್ದು :ಬೆಳಗಿನಿಂದ ಸಂಜೆಯ ತನಕ ಲಕ್ಷ ಚಕ್ರದ ಉರುಳು ಅವಸರದ ಹೆಜ್ಜೆ ಯ ಮೇಲೆ ಸರಿವ ನೂರಾರು ಕೊರಳು ಕಲಿತದ್ದು: ಕ್ಯೂ ನಿಲ್ಲು:ಪುಟ್ಪಾತಿನಲ್ಲೇ ಸಂಚರಿಸು; ರಸ್ತೆವದಾಟುವಾಗೆಚ್ಚರಿಕೆ; ಓಡು, ಎಲ್ಲಿಯೂ ನಿಲ್ಲದಿರು; ಹೇಗೋ ಅವರಿವರ ತಳ್ಳಿ ಮುನ್ನುಗ್ಗು; ಎಲ್ಲಾದರೂ ಸರಿಯೆ, ಬೇರೂರು,ಹೀರು. ತಾಯಿ:  ಸಾವಿರ ಗಾಲಿ ಉರುಳಿ ಹೊರಳುವ ರಸ್ತೆ ಯಂಚಿನಲ್ಲೇ ಕೈಹಿಡಿದು ನಡೆಸಿದವಳು. ಇರುವ ಒಂದಿಂಚು ಕೋಣೆಯಲ್ಲೇ ಹೊರಲೋಕವನು ಪರಿಚಯಿಸಿ ಎಚ್ಚರಿಕೆ ಕೊಟ್ಟವಳು. ತಂದೆ: ಬೆಳಗಿನಿಂದ ಸಂಜೆಯ ತನಕ ಕಣ್ಮರೆಯಾಗಿ ರಜಾ ದಿನಗಳಲ್ಲಿ ಕಣ್ಣಿಗೆ ಕಂಡು ಕುಳಿತು ಕೆಮ್ಮುವ ಪ್ರಾಣಿ. ವಿದ್ಯೆ: ಶಾಲೆ ಕಾಲೇಜುಗಳುವಕಲಿಸಿದ್ದು; ದಾರಿ ಬದಿ ನೂರಾರು ಜಾಹೀರಾತು ತಲೆಗೆ ತುರುಕಿದ್ದು, ರೇಡಿಯೋ ಸಿಲೋನ್ ವ್ಯಾಪಾರ ವಿಭಾಗ ಶಿಫಾರಸ್ಸು ಮಾಡಿದ್ದು.  ನೀನಾಗಿ ಕಲಿತದ್ದು ಬಲು ಕಡಿಮೆ, ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆಗೆ ಕಣ್ಣಾಡಿಸುವುದೊಂದನ್ನು ಹೊರತು. ಜೀವನ:  ಈ ಲಕ್ಷ ದಾರಿಗಳ ಚದುರಂಗದಾಟದಲಿ, ನೂರು ಬೆಳಕಿನ ಕೆಳಗೆ ಯಾರದೋ ಕೈಗೊಂಬೆಯಾಗಿ ಮುಂದುವರಿಯುವುದು.  ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು; ರೈಲನ್ನೊ ಬಸ್ಸನೋ ಹಿಡಿಯುವುದು, ಸಾಯಂಕಾಲ ಸೋತು  ಸುಸ್ತಾಗಿ ರೆಪ್ಪೆಯ  ಮೇಲೆ ಹತ್ತು ಮಣ ಆಯಾಸವನ್ನು ಹೊತ್ತು ಹನ್ನೊಂದು ಘಂಟೆ ಹೊಡೆವಾಗ ಮನೆಯಲ್ಲಿ ಕಾದೂ ಕಾದೂ ತೂಕಡಿಸಿ ಮಂಕಾದ ಮಡದಿಯನು ಎಚ್ಚರಿಸುವುದು. ತಣ್ಣಗೆ ಕೊರೆವ ಕೂಳುಂಡು ಬಾಡಿಗೆ ಮನೆಯ ನೆರಳಿನ ಕೆಳಗೆ, ಮತ್ತೆ  ಸಾವಿರ ಗಾಲಿಗಳ್ಳುಜ್ಜುವ ಕನಸು ಬಂಡಿಯ ಕೆಳಗೆ ಹಾಸುಗಂಬಿಯ ಹಾಗೆ ತತ್ತರಿಸುತ್ತ ಮಲಗುವುದು.                          _________  ನಾನು ನನ್ನ ಕನ್ನಡ ತರಗತಿಗಳಲ್ಲಿ   ವಿದ್ಯಾರ್ಥಿಗಳಿಗೆ ಆಗಾಗ ಓದಿಹೇಳುವ ಮತ್ತುನನಗಿಷ್ಟವಾದ ಕೆಲವೊಂದು ಕವಿತೆಗಳ ಸಾಲಿನಲ್ಲಿ ನವೋದಯ ಸಾಹಿತ್ಯದ,  ರಾಷ್ಟ್ರ ಕವಿ     ಜಿ. ಎಸ್. ಶಿವರುದ್ರಪ್ಪನವರು ಬರೆದಿರುವ  ‘ಮುಂಬೈ ಜಾತಕ’ವೂ ಸೇರಿಕೊಳ್ಳುತ್ತದೆ. ಇದಕ್ಕೆ ಕಾರಣವೇನೆಂದು ಯೋಚಿಸಿದರೆ ನನಗೆ ಹೊಳೆದದ್ದು, ಇದೊಂದು ವಿಚಿತ್ರ ಶೈಲಿಯ, ಎಲ್ಲಾಾ ಕಾಲಕ್ಕೂ ಸರಿಹೊಂದುವ ಕವನ.   ಏಕೆಂದರೆ ಕವನಗಳ ಪ್ರಮುಖ ಲಕ್ಷಣವಾದ  ಗೇಯತೆ ಮತ್ತು ಪ್ರಾಸಗಳೆರಡನ್ನೂ ಗಾಳಿಗೆ ತೂರಿ ರಚಿಸಲಾದ ಈ ಕವಿತೆ ಸರ್ವಕಾಲಿಕ ಸತ್ಯವನ್ನು ಸಾರುತ್ತದೆ. ಆದ್ದರಿಂದಲೇ  ಅಂದು, ಇಂದು ಮತ್ತು ಎಂದೆಂದಿಗೂ ಜೀವಂತವಾಗಿ ಉಳಿಯಬಲ್ಲ ಶಕ್ತಿ ಈ ಕವನಕ್ಕಿದೆ.  ಏಕೆಂದರೆ ಆಗಿನ ಕಾಲದಲ್ಲಿ ಮುಂಬೈಗಷ್ಟೇ ಸೀಮಿತವಾಗಿದ್ದ   ಬಿಡುವುಲ್ಲದ, ಯಾಂತ್ರಿಕ ಜೀವನ ಶೈಲಿ,  ಈಗ ಭಾರತದ ಎಲ್ಲಾ  ಪ್ರಮುಖ ನಗರ ವಾಸಿಗಳ    ಜೀವನದಲ್ಲಿ ಹಾಸುಹೊಕ್ಕಾಗಿದೆ. ಕವಿ ಜಿ. ಎಸ್. ಎಸ್  ಬಯೋಡ್ಯಾಟದಲ್ಲಿ  ಕವನವನ್ನು ಹೇಳಿದ್ದಾರೋ   ಅಥವಾ ಕವನದಲ್ಲಿ ಬಯೋಡ್ಯಾಟವನ್ನು ಹೇಳಿದ್ದಾರೋ ಎನ್ನುವಷ್ಷರ ಮಟ್ಟಿಗೆ  ತಮ್ಮ  ಕವಿತೆಯಲ್ಲಿ  ನೈಜತೆ ಹಾಗೂ ಸರಳತೆಯನ್ನು ಪ್ರತಿಬಿಂಬಿಸಿದ್ದಾರೆ.  ನಗರ ಪ್ರದೇಶಗಳಲ್ಲಿ ಬೆಳೆಯುವ, ಬದುಕನ್ನು ಕಟ್ಟಿಕೊಳ್ಳುವ ಲಕ್ಷಾಂತರ ಮಧ್ಯಮ ವರ್ಗದ    ಮಕ್ಕಳ ಬದುಕಿನ ಚಿತ್ರಣವನ್ನು  ಕಣ್ಣಮುಂದೆ ಕಟ್ಟಿದ ಹಾಗೆ ಇಲ್ಲಿ ಬಿಚ್ಚಿಡಲಾಗಿದೆ. “ಹುಟ್ಟಿದ್ದು ಬೆಳೆದದ್ದು, ಕುಡಿದದ್ದು, ಕಂಡದ್ದು, ಕಲಿತದ್ದು …………”  ಹೀಗೆ ಕವಿತೆ  ನೀಡುವ ಆಮೂಲಾಗ್ರ  ವಿವರಣೆಗಳ ಹಿಂದಿರುವ ವ್ಯಂಗ್ಯ  ಓದುಗರ ಮುಂದೆ ಎಳೆಎಳೆಯಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.   ತಂದೆ, ತಾಯಿಯರ ಬಗೆಗಿರುವ ವಿವರಣೆಯಂತೂ  ನಮ್ಮ  ಮನಸ್ಸಿನ ಮೇಲೆ ಗಾಢವಾದ ಪ್ರಭಾವವನ್ನು ಬೀರುವಂತದ್ದು..  “ಇರುವ ಒಂದಿಂಚು ಕೋಣೆಯಲ್ಲೇ”  ಹೊರಲೋಕವನ್ನು ಪತಿಚಯಿಸುವ ತಾಯಿಯೊಂದು ಕಡೆಯಾದರೆ,  ಬೆಳಗಿನಿಂದ ರಾತ್ರಿಯವರೆಗೆ ಸಂಸಾರಕ್ಕಾಗಿ ದುಡಿಯುವುದರಲ್ಲೇ ಜೀವ ಸವೆಸುತ್ತಿರುವ  ತಂದೆ, ಮಕ್ಕಳ ಆಟ ಪಾಟಗಳಿಂದ ಸ್ವತಃ ವಂಚಿತ.  “ಜೀವನಕ್ಕಾಗಿ ದುಡಿಮೆಯೇ ಹೊರತು, ದುಡಿಮೆಗಾಗಿ  ಜೀವನವಲ್ಲ!  ಅಲ್ಲವೇ?”.  ದುಡಿಮೆ ನಿಜವಾದ ಅರ್ಥ ಕಳೆದುಕೊಳ್ಳುವುದು ಇಲ್ಲೇ. ಕವಿತೆ ಮುಂದುವರೆದು  ವಿದ್ಯೆಯ ಬಗ್ಗೆ ಹೇಳುತ್ತಾ, “ನೀನಾಗಿ ಕಲಿತದ್ದು ಬಲು ಕಡಿಮೆ….”.   ಎಂಬಲ್ಲಿ “ಬಸ್ ಸ್ಟಾಪಿನಲ್ಲಿ ನಿಂತ ಬಣ್ಣಗಳ ಕಡೆ ಕಣ್ಣಾಡಿಸುವುದೊಂದನ್ನು ಹೊರತು” ಎಂದು ಹೇಳುವ ಮೂಲಕ  ಕವಿ ತಮ್ಮ ಕವನಕ್ಕೆ ಹಾಸ್ಯ ಲೇಪನವನ್ನೂ ಸಹ ಮಾಡಿದ್ದಾರೆ. ಬಣ್ಣಗಳ ಕಡೆಗೆ ಕಣ್ಣಾಡಿಸುವುದನ್ನು  ಕಲಿಸಲು ಯಾವ ಶಾಲೆ, ಕಾಲೇಜುಗಳೂ ಬೇಕಿಲ್ಲವಷ್ಟೆ!    ಇಷ್ಟೆಲ್ಲಾ ಆದ ಮೇಲೆ, ಆ ಮಗುವೂ ಬೆಳೆದು ದೊಡ್ಡವನಾದಂತೆ  ತಾನೂ ಸಹ ತನ್ನ ತಂದೆಯಂತೆಯೇ  “ಏಳುವುದು, ಬಟ್ಟೆಯಲ್ಲಿ ಮೈ ತುರುಕಿ ಓಡುವುದು……”‘ ಇಂತಹದ್ದೇ  ಜೀವನ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ವಿಪರ್ಯಾಸ.   ಈಗ ತಾನೂ ತನ್ನ ತಂದೆಯಂತೆ  “ರಜಾ ದಿನಗಳಲ್ಲಿ ಕಣ್ಣಿಗೆ ಕಂಡು ಕುಳಿತು ಕೆಮ್ಮುವ ಪ್ರಾಣಿ!”  ಇದಂತೂ  ಜೀವನದ ಕಟು ಸತ್ಯವನ್ನು ಓದುಗರಿಗೆ  ಬಿಚ್ಚಿ ತೋರಿಸುತ್ತದೆ.  ತನಗಾಗಿ ಒಂದಿಷ್ಟೂ ಸಮಯವಿಲ್ಲದೆ ಜೀವನವೆಲ್ಲಾ  ದುಡಿದು ದುಡಿದೂ ಸೊರಗಿ, ಕೊನೆಗೊಮ್ಮೆ ಕಣ್ಮುಚ್ಚುವ  ಪಟ್ಟಣಿಗರ ಬದುಕಿನಲ್ಲಿ  ನಿಜವಾದ ಬದುಕೆಲ್ಲಿದೆ?  ಯಾವ ಪಟ್ಟಣಿಗನು ಈ ಕವನವನ್ನು ಓದಿದರೂ ಇದು ತನ್ನದೇ ಬಯೋಡಾಟಾ ಎಂದು ಭಾವಿಸದಿರನೇ?  ಇಂದಿನ ಜೀವನ ಶೈಲಿಯನ್ನು , ಪಟ್ಟಣಿಗರ ಪಾಡನ್ನು ಸರಳವಾಗಿ, ಸುಂದರವಾಗಿ    ಅನಾವರಣಗೊಳಿಸಿರುವ  ಜಿ ಎಸ್ ಎಸ್ ರವರ ಈ ಕವಿತೆ ನನ್ನ ಫೇವರೇಟ್. **************************** ಅರುಣಾ ರಾವ್

ನನ್ನ ಇಷ್ಟದ ಕವಿತೆ Read Post »

ಇತರೆ

ಕವಿತೆ

ಹಿರಿಯ ಕವಿಗಳ ಹಳೆಯ ಕವಿತೆಗಳು ಹೊಸ ಪೀಳಿಗೆಯ ಓದುಗರಿಗಾಗಿಹಿರಿಯಕವಿಗಳಕವಿತೆಯೊಂದನ್ನು ನಿತ್ಯ ನೀಡಲಾಗುವುದು ಅವ್ವ ನನ್ನವ್ವ ಫಲವತ್ತಾದ ಕಪ್ಪು ನೆಲಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ;ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣುಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ;ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ. ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳಬಂದಿಯ ಗೆದ್ದು,ಹೆಂಟೆಗೊಂದು ಮೊಗೆ ನೀರು ಹಿಗ್ಗಿ;ಮೆಣಸು, ಅವರೆ, ಜೋಳ, ತೊಗರಿಯ ಹೊಲವ ಕೈಯಲ್ಲಿ ಉತ್ತು,ಹೂವಲ್ಲಿ ಹೂವಾಗಿ ಕಾಯಲ್ಲಿ ಕಾಯಾಗಿಹೆಸರು ಗದ್ದೆಯ ನೋಡಿಕೊಂಡು,ಯೌವನವ ಕಳೆದವಳು ಚಿಂದಿಯ ಸೀರೆ ಉಟ್ಟುಕೊಂಡು. ಸತ್ತಳು ಈಕೆ:ಬಾಗು ಬೆನ್ನಿನ ಮುದುಕಿಗೆಷ್ಟು ಪ್ರಾಯ?ಎಷ್ಟುಗಾದಿಯ ಚಂದ್ರ, ಒಲೆಯೆದುರು ಹೋಳಿಗೆಯ ಸಂಭ್ರಮ?ಎಷ್ಟೋ ಸಲ ಈ ಮುದುಕಿ ಅತ್ತಳುಕಾಸಿಗೆ, ಕೆಟ್ಟ ಪೈರಿಗೆ, ಸತ್ತ ಕರುವಿಗೆ;ಎಷ್ಟುಸಲ ಹುಡುಕುತ್ತ ಊರೂರು ಅಲೆದಳುತಪ್ಪಿಸಿಕೊಂಡ ಮುದಿಯ ಎಮ್ಮೆಗೆ? ಸತಿ ಸಾವಿತ್ರಿ, ಜಾನಕಿ, ಉರ್ಮಿಳೆಯಲ್ಲ;ಚರಿತ್ರೆ ಪುಸ್ತಕದ ಶಾಂತ, ಶ್ವೇತ, ಗಂಭೀರೆಯಲ್ಲ;ಗಾಂಧೀಜಿ, ರಾಮಕೃಷ್ಣರ ಸತಿಯರಂತಲ್ಲ;ದೇವರ ಪೂಜಿಸಲಿಲ್ಲ; ಹರಿಕತೆ ಕೇಳಲಿಲ್ಲ;ಮುತ್ತೈದೆಯಾಗಿ ಕುಂಕುಮ ಕೂಡ ಇಡಲಿಲ್ಲ. ಬನದ ಕರಡಿಯ ಹಾಗೆಚಿಕ್ಕಮಕ್ಕಳ ಹೊತ್ತುಗಂಡನ್ನ ಸಾಕಿದಳು ಕಾಸು ಗಂಟಿಕ್ಕಿದಳು.ನೊಂದ ನಾಯಿಯ ಹಾಗೆ ಬೈದು ಗೊಣಗಿ, ಗುದ್ದಾಡಿದಳು;ಸಣ್ಣತನ, ಕೊಂಕು, ಕೆರೆದಾಟ ಕೋತಿಯ ಹಾಗೆ:ಎಲ್ಲಕ್ಕೆ ಮನೆತನದ ಉದ್ಧಾರ ಸೂತ್ರ.ಈಕೆ ಉರಿದೆದ್ದಾಳುಮಗ ಕೆಟ್ಟರೆ. ಗಂಡ ಬೇರೆ ಕಡೆ ಹೋದಾಗ ಮಾತ್ರ. ಬನದ ಕರಡಿಗೆ ನಿಮ್ಮ ಭಗವದ್ಗೀತೆ ಬೇಡ;ನನ್ನವ್ವ ಬದುಕಿದ್ದುಕಾಳುಕಡ್ಡಿಗೆ, ದುಡಿತಕ್ಕೆ, ಮಕ್ಕಳಿಗೆ;ಮೇಲೊಂದು ಸೂರು, ಅನ್ನ, ರೊಟ್ಟಿ, ಹಚಡಕ್ಕೆ;ಸರೀಕರ ಎದುರು ತಲೆಯೆತ್ತಿ ನಡೆಯಲಿಕ್ಕೆ, ಇವಳಿಗೆ ಮೆಚ್ಚುಗೆ, ಕೃತಜ್ಞತೆಯ ಕಣ್ಣೀರು;ಹೆತ್ತದ್ದಕ್ಕೆ, ಸಾಕಿದ್ದಕ್ಕೆ; ಮಣ್ಣಲ್ಲಿ ಬದುಕಿ,ಮನೆಯಿಂದ ಹೊಲಕ್ಕೆ ಹೋದಂತೆತಣ್ಣಗೆ ಮಾತಾಡುತ್ತಲೇ ಹೊರಟುಹೋದದ್ದಕ್ಕೆ ********************************* ಪಿ.ಲಂಕೇಶ್

ಕವಿತೆ Read Post »

ಇತರೆ

ವಿದ್ಯಾರ್ಥಿ ಪ್ರತಿಭೆ

ಭರವಸೆಯ ವಿದ್ಯಾರ್ಥಿ ಕವಿ ಪೂಜಾ ನಾಯಕ್ ಪೂಜಾ ನಾಯಕ್ ಮೂಲತ:  ಕುಮಟಾ ತಾಲ್ಲೂಕಿನ ನಾಡುಮಾಸ್ಕೇರಿಯವರಾಗಿದ್ದು ಸದ್ಯ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ.ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿಹೊಂದಿರುವ ಇವರು ತಮ್ಮ ಆರಂಭದ ಕೆಲ ಕವಿತೆಗಳಿಂದಲೇ ಭರವಸೆ ಮೂಡಿಸಿದ್ದಾರೆ.  ‘ಸದಾಶಯದೊಡನೆ ಮೂಡಿಬಂದ ಕವಿತೆಗಳು’               ಸಾಹಿತ್ಯ ರಚನೆಗೂ ಓದಿಗೂ ಏನಾದರೂ ಸಂಬಂಧವಿದೆಯೇ? ಸಾಹಿತ್ಯದ ವಿದ್ಯಾರ್ಥಿಗಳಿಗೆ ಮಾತ್ರವೇ ಕಾವ್ಯ ರಚನೆ ಸಿದ್ಧಿಸಿರುತ್ತದೆಯೇ? ಈ ಪ್ರಶ್ನೆಯಲ್ಲೇ ಹುರುಳಿಲ್ಲ. ಏಕೆಂದರೆ ಸಾಹಿತ್ಯೇತರ ಅಭ್ಯಾಸಗಳಲ್ಲಿ ತೊಡಗಿರುವವರಿಂದಲೂ ಹಲವಾರು ಶ್ರೇಷ್ಠ ಕೃತಿಗಳು ರಚನೆಯಾಗಿವೆ.        ಪೂಜಾ ನಾಯಕ್ ಕಾವ್ಯ ಕೃಷಿಯಲ್ಲಿ ತೊಡಗಿರುವ ವಿಜ್ಞಾನದ ವಿದ್ಯಾರ್ಥಿನಿ. ಅವರ ನಾಲ್ಕು ಕವನಗಳನ್ನು ನಾನು ಇತ್ತೀಚೆಗೆ ಓದಿದೆ. ಕಾವ್ಯದ ನಾಡಿಮಿಡಿತ  ಇವರಿಗೆ ಚೆನ್ನಾಗಿ ತಿಳಿದಿದೆ.     ಕರುಣಾಮಯಿ, ಮೂಡಿಬರಲಿ, ಜಂಜಾಟದ ಬದುಕು, ಕಾವ್ಯವಾಗಿ ಕರಗುತ್ತೇನೆ. ಇವೇ ಆ ನಾಲ್ಕು ಕವಿತೆಗಳು. ಕೇವಲ ನಾಲ್ಕು ಕವಿತೆಗಳಿಂದ ಒಬ್ಬ ಕವಿಯ ಸಮಗ್ರ ಸಾಹಿತ್ಯದ ಕುಸುರಿಯನ್ನು ಕುರಿತು ಮಾತನಾಡಲಾಗದು. ಹಾಗೆ ಮಾತನಾಡಲೂ ಬಾರದು.    ಹಾಗೆಂದು ಪೂಜಾ ಅವರ ನಾಲ್ಕು ಕವನಗಳು ನಿರ್ಲಕ್ಷಿಸಿ ಬಿಡುವಂತಹ ಕವನಗಳಲ್ಲ. ಕವಿಯ ಪ್ರಬುದ್ಧ ಮನಸ್ಸು ಹಾಗೂ ಕಾವ್ಯ ರಚನೆಯ ಹುಮ್ಮಸ್ಸನ್ನು ಈ ಕವನಗಳ ಮೂಲಕವೇ ಗುರುತಿಸಬಹುದು.  ‘ಕರುಣಾಮಯಿ’ ಕವನದ ‘ಹರಿದಿರುವ ಹರಕು ಅಂಗಿಯ ತುಂಡಿಗೂ ಮೊಂಡಾದ ಸೂಜಿಗೂ ಮಧುರವಾದ ಬಾಂಧವ್ಯ ಬೆಸೆದವಳು…’ ಎನ್ನುವ ಸಾಲುಗಳು ಲಂಕೇಶರ ‘ಅವ್ವ’ನನ್ನು ನೆನಪಿಗೆ ತಟ್ಟನೆ ತರಿಸುವಂತಿವೆ! ಆದರೆ ತಾಯೊಲುಮೆಯ ಹಿರಿಮೆ ಸಾರುವ ಈ ಕವಿತೆ ಆರಂಭಿಕ ಸಾಲುಗಳನ್ನು ಹೊರತುಪಡಿಸಿ ಉಳಿದಂತೆ ತೀರಾ ವಾಚ್ಯವಾಗಿ ಗದ್ಯದಲ್ಲಿ ನಿಂತುಬಿಡುತ್ತವೆ. ಕವಿ ಮತ್ತೊಮ್ಮೆ  ಸಾವಕಾಶ ಈ ಕವಿತೆಯನ್ನು ತಿದ್ದಿದರೆ ಉತ್ತಮ ಕವಿತೆ ಓದುಗರಿಗೆ ದಕ್ಕುತ್ತದೆ.      ‘ಕಾವ್ಯವಾಗಿ ಕರಗುತ್ತೇನೆ’ ಇದೊಂದು ಪ್ರಬುದ್ಧ ಕವಿತೆ.  ಕವಿ ಧ್ಯಾನಸ್ಥ ಮನಸ್ಥಿತಿಯಲ್ಲಿ ಈ ಕಾವ್ಯ ರಚಿಸಿದಂತಿದೆ. ನೋವು- ನಿರಾಸಗಳನ್ನು ಕಾಣುತ್ತಿರುವಾಗಲೇ ಬದುಕಿನ ಕುರಿತಂತೆ ಚಿಂತಿಸುತ್ತಾ, ತಾನು ಅದಮ್ಯ ಚೇತನವಾಗಿ ಉಳಿಯಬೇಕೆನ್ನುವ ತುಡಿತವನ್ನು ಈ  ಕಾವ್ಯದಲ್ಲಿ ಕಾಣಬಹುದು. ಎಷ್ಟೇ ವೈಫಲ್ಯ ಎದುರಾದರೂ ತನ್ನೊಳಗೆ ಗಟ್ಟಿಗೊಳ್ಳುವ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆನ್ನುವ ಛಲ ಕವಿಯದ್ದು.      ‘ಮತ್ತೆ ಮತ್ತೆ ಪ್ರವಾಹ ಬಂದೆರಗಿದಾಗ       ನನಗನಿಸುತ್ತದೆ ನಾನು ಹೀಗೆಯೇ        ಕಾವ್ಯನಾಗಿ ಮಂಜುಗಡ್ಡೆಯಂತೆ        ಕರಗಿಬಿಡಬೇಕು!’     ಇಡೀ ಕವಿತೆ ಜ್ವಾಲಾಮುಖಿ, ಅಗ್ನಿಪರ್ವತ, ಶಿವಮ ರುದ್ರ ಮೂರ್ತಿ, ಮಂಜುಗಡ್ಡೆಗಳ ರೂಪಕಗಳಲ್ಲಿ ಕುದಿಯುವ ಕವಿಮನಸ್ಸನ್ನು ಕಟ್ಟಿಕೊಡುತ್ತದೆ.      ‘ಜಂಜಾಟದ ಬದುಕು’ ಇದೂ ಸಹ ಹದಿಹರಯದ ಮಹಾತ್ವಾಕಾಂಕ್ಷೆಯುಳ್ಳ ಮನಸ್ಸಿನ ಪ್ರತಿಫಲನದಂತಹ ಕವಿತೆ. ಆಸೆಗಳು ಹಕ್ಕುಗಳಾಗಿ, ಹಕ್ಕುಗಳನ್ನು ಈಡೇರಿಸಿಕೊಳ್ಳಲು ಬಯಸುವ ಕವಿಯ ಚಿತ್ತವೃತ್ತಿ ಇಡೀ ಕವಿತೆಯಲ್ಲಿ ಎದ್ದು ಕಾಣುವ ಮುಖ್ಯಾಂಶ.        ‘ ನಿಬಿಡ ಹಗಲುಗನಸುಗಳು       ದಿಬ್ಬಣದಂತೆ ಸಾಗುತ್ತಿವೆ…’            ‘ ಕಂಡ ಕನಸುಗಳು               ದೀಪ ನಂದಿದಂತೆ              ನಂದಿಹೋಗುತಿವೆ…’         ‘ ನಿತ್ಯವೂ ದಿನಪೂರ್ತಿ ಜಂಜಾಡುತ್ತಾ                      ಮತ್ತದೇ ವಿಫಲ ಯತ್ನದತ್ತ            ಚಿತ್ತ ಹರಿಸುತ್ತ…’       ಕವಿತೆ ಹೋರಾಟ- ನಿರಾಸೆಗಳನ್ನು ಹೇಳುವುದಾದರೂ ‘ಮರಳಿ ಯತ್ನವ ಮಾಡು’ ಎಂಬ ನಾಣ್ಣುಡಿಯನ್ನು ಅಂತರಾಳದಲ್ಲಿ ಪ್ರತಿಪಾದಿಸುತ್ತದೆ.       ಕವಿತೆಯೊಳಗೆ ಕೆಲವು ಭಾವಗಳು ಹಾಗೂ ಸಾಲುಗಳು ಪುನರಪಿ ಎನಿಸುವುದರಿಂದ ಕವಿ ಮತ್ತೊಮ್ಮೆ ಕಾವ್ಯವನ್ನು ಸಮಗ್ರವಾಗಿ ಪುನರಚಿಸುವುದು ಸೂಕ್ತವಾಗಬಹುದು ಎನ್ನುವುದು ನನಿನ ಅಭಿಪ್ರಾಯ.      ‘ಮೂಡಿ ಬರಲಿ’ ಎಂಬ ಮೂರು ಮೂರು ಸಾಲುಗಳಲ್ಲಿ ರಚಿತವಾಗಿರುವ ಈ ತ್ರಿಪದಿ ಪದ್ಯ ಕವಿಯ ಕವಿತ್ವಕ್ಕೆ ಸಾಕ್ಷಿ. ಇದೊಂದು ಸದಾಶಯದ ಕವಿತೆ. ಒಳಿತನ್ನು ಕಾಣುವ, ಒಳಿತನ್ನೇ ಬಯಸುವ ಪರಿಶುದ್ಧ ಕವಿ ಮನಸ್ಸನ್ನು ನಾವಿಲ್ಲಿ ಕಾಣಬಹುದು.    ‘ಒಳ್ಳೆ ಬುದ್ಧಿಯಿಂದ      ಕಾಂತಿ ಹೊಂದಿ     ಕತ್ತಲೋಡಿ ಹೋಗಲಿ’   ‘ದವಸ-ಧಾನ್ಯ ಬೆಳೆದ ರೈತ  ನಾಡಲೆಲ್ಲಾ ಮೆರೆಯಲಿ’ ‘ ಮೇಲು – ಕೀಳು  ಕೊಳಕು ಕೊಚ್ಚಿ ಮನವು ಸ್ವಚ್ಛವಾಗಲಿ’     ಹೀಗೆ ಪುಟ್ಟ ಪುಟ್ಟ ಸಾಲುಗಳಲ್ಲಿಯೇ ಉದಾತ್ತ ಭಾವವನ್ನು ಸಾರುವ ಈ ಕವಿತೆಯನ್ನು ಓದುಯಾದ ಮೇಲೆ ಮನಸ್ಸು ಹರ್ಷಗೊಳ್ಳದೇ ಇರಲಾರದು.         ವಿಸ್ತಾರ ಓದಿನೊಡನೆ ಬುದ್ಧಿ- ಭಾವಗಳ ಸಮನ್ವಯದೊಂದಿಗೆ ಈ ಕವಿ ಮತ್ತಷ್ಟು ಉತ್ತಮ ಕವನಗಳನ್ನು ರಚಿಸಲಿ ಎನ್ನುವ ಸದಾಶಯ ಪ್ರೀತಿಯೊಡನೆ  ಶುಭಹಾರೈಸುವೆನು.  ಪೂಜಾ ನಾಯಕ್ ಕವಿತೆಗಳು ಕರುಣಾಮಯಿ ಆಸುಪಾಸಲ್ಲಿ ಬಿದ್ದಿದ್ದ ಕಟ್ಟಿಗೆಯ ತುಂಡಾಯ್ದು ಕಲಬೆರಕೆ ಅಕ್ಕಿಯಲಿ ಬೆರೆತಿದ್ದ ಕಲ್ಲಾಯ್ದು ಹೊಲದಲ್ಲಿ ಬೆಳೆದಿದ್ದ ಕಾಯಿಪಲ್ಲೆಯ ಕೊಯ್ದು ಹೊತ್ತಿಗೆ ಸರಿಯಾಗಿ ಕೈತುತ್ತು ಉಣಿಸಿದವಳು ಕರುಣಾಮಯಿ ನನ್ನಮ್ಮ… ಕಡು ಬಡತನದ ಸಂಕಟದಲ್ಲೂ ಆಶಾ-ಭರವಸೆಯ ನುಡಿಯಾಡಿ ಸಾವಿರ ಕಷ್ಟ – ಕಾರ್ಪಣ್ಯಗಳ ನಡುವೆ ತಾನೊಬ್ಬಳೇ ಹೋರಾಡಿ ಹರಿದಿರುವ ಹರುಕು ಅಂಗಿಯ ತುಂಡಿಗೂ ಮೊಂಡಾದ ಸೂಜಿಗೂ ಮಧುರವಾದ ಬಾಂಧವ್ಯ ಬೆಸೆದವಳು ಕರುಣಾಮಯಿ ನನ್ನಮ್ಮ.. ನಾ ಸೋತು ಕೂತಾಗ ಕರುಳಬಳ್ಳಿಯ ಅಳಲು ತಾ ಮನದಲ್ಲೇ ಅರಿತು ನನ್ನಲ್ಲಿ ಕೂಡ ಛಲದ ಬೀಜವನು ಬಿತ್ತಿ ನನ್ನ ಸಾವಿರ ಕನಸುಗಳನು ನನಸು ಮಾಡಲು ಹೊರಟು ನಿಂತವಳು ಕರುಣಾಮಯಿ ನನ್ನಮ್ಮ.. ಕೂಡಿಟ್ಟ ಕಾಸಿನಲಿ ಶಾಲೆಗೆ ಪೀಜು ತುಂಬಿ ತನ್ನ ಹರುಕು ಸೀರೆಯ ಲೆಕ್ಕಿಸದೆ ನನಗೊಂದು ಹೊಸ ಅಂಗಿಯ ಕೊಡಿಸಿ ದೊಡ್ಡ ಅಧಿಕಾರಿಯ ಸ್ಥಾನದಲಿ ತಾ ಕೂಸ ನೋಡಬೇಕೆಂದು ಆಸೆಯಿಂದ ಕಾಯುತ್ತ ಕುಳಿತವಳು ಕರುಣಾಮಯಿ ನನ್ನಮ್ಮ…. ತನ್ನ ಜೀವದ ಕೊನೆಯ ಉಸಿರಿನ ತನಕ ತನ್ನ ಮಗುವಿನ ಸುಖಕ್ಕಾಗಿ, ಉದ್ಧಾರಕ್ಕಾಗಿ ದುಡಿಯುವ ಆ ತಾಯಿಯ ಪ್ರೀತಿಗೆ ಎಣೆ ಎಂಬುದಿಹುದೇನು?…. ಅವಳ ಋಣ ತೀರಿಸಲು ಸಾಧ್ಯವಿಹುದೇನು?… ಅವಳ ಸ್ಥಾನವನ್ನು ಬೇರೆಯವರು ತುಂಬಲು ಅರ್ಹರೇನು?… ಅವಳಿಲ್ಲದ ಒಂದು ಕ್ಷಣ ಈ ಭೂವಿಯು ಬರೀ ಶೂನ್ಯವಲ್ಲವೇನು?. ಕಾವ್ಯವಾಗಿ ಕರಗುತ್ತೇನೆ ನಾನರಿಯಲಾಗದ  ಶೂಲೆಗಳೇ ಆಪ್ತವಾಗಿ ನನ್ನನ್ನು ಬಿಗಿದಪ್ಪಿಕೊಂಡಾಗ ಬದುಕು ಬರಡಾಗಿ ಬೆಂಬಿಡದೆ ಕಾಡಿದಾಗ ನನಗನಿಸುತ್ತದೆ, ನಾನೊಮ್ಮೆ ಜ್ವಾಲಾಮುಖಿಯಂತೆ ಭುಗಿಲೇಳಬೇಕು! ಕಳೆದುಕೊಂಡ ಮಧುರವಾದ ಪ್ರೇಮ ನೆನಪಿನಾಳದಲಿ ಪುಟಿದೆದ್ದು ಕೂತಾಗ ನನ್ನ ನಿಟ್ಟುಸಿರಿನಲೂ ಮಿಣುಕು ಹುಳುವಂತೆ ಮಿನುಗ ತೊಡಗಿದಾಗ ನನಗನಿಸುತ್ತದೆ, ನಾನೊಮ್ಮೆ ಅಗ್ನಿ ಪರ್ವತದಂತೆ ಧಗಧಗಿಸಿ ಉರಿಯಬೇಕು! ಕಗ್ಗತ್ತಲ ವೇಳೆಯಲಿ ನಿಶ್ಯಬ್ದ ನೂರಾರು ಬಯಕೆಗಳ ಹೊತ್ತ ದೂರ ದೂರ ನೇರ ಹಾದಿಗಳಲಿ ನೀರವತೆಯೇ ಮುಗುಳ್ನಕ್ಕಾಗ ನನಗನಿಸುತ್ತದೆ, ನಾನೊಮ್ಮೆ ಶಿವನಂತೆ ರುದ್ರವಾಗಿ ನರ್ತಿಸಬೇಕು! ಏಕಾಂತದಲಿ ಮರೀಚಿಕೆಯಂತ ಕನಸುಗಳು ಎಡಬಿಡದೆ ತಿವಿದಾಗ ಹಿಂದಿನ ಕಹಿ ನೆನಪೇ ತುಡಿದಾಗ ಕಂಬನಿಯೇ ಬೇರೂರಿದಾಗ ನನ್ನೆದೆಯ ಶರಧಿಯಲಿ ಮತ್ತೆ ಮತ್ತೆ ಪ್ರವಾಹ ಬಂದೆರಗಿದಾಗ ನನಗನಿಸುತ್ತದೆ, ನಾನು ಹೀಗೆಯೆ ಕಾವ್ಯವಾಗಿ   ಮಂಜುಗಡ್ಡೆಯಂತೆ ಕರಗಿಬಿಡಬೇಕು!. ಜಂಜಾಟದ ಬದುಕು ಬೆಳಗೆದ್ದು ಎತ್ತೆತ್ತ ನೋಡಿದರೂ ಕಾಣದಾ ದಿಕ್ಕು ಕಂಡರೇನಂತೆ, ಅತ್ತ ಹೋದರೆ ಸಿಗದಿರುವ ಹಕ್ಕು ಕಡಿವಾಣವಿಲ್ಲದೇ ಕಡಲಂತೆ ಬೋರ್ಗರೆವ ಆಸೆಗಳ ಈಡೇರಿಕೆಗೋಸುಗ ನಿತ್ಯವೂ ದಿನಪೂರ್ತಿ ಜಂಜಾಟ ಮತ್ತದೇ ವಿಫಲ ಯತ್ನ. ತಲೆಪೂರ್ತಿ ತುಂಬಿದಾ ನಿಬಿಡ ಹಗಲುಗನಸುಗಳು ದಿಬ್ಬಣದಂತೆ ಸಾಗುತಿವೆ ಕಂಡೆಲ್ಲ ಕನಸುಗಳು ದೀಪ ನಂದಿದಂತೆ ನಂದಿಹೋಗುತಿವೆ ಸಹಿಸಲಾಗದ ಸಂಕಟ ಎತ್ತೆತ್ತಲಿಂದಲೋ ಕುಠಾರದ ಮೊನಚಂತೆ, ಕುಹಕ ಮಾತುಗಳೇಳುತಿವೆ ಸುಡುತಿಹುದು ನನ್ನೆದೆಯ ವಾರಿಧಿಯು ಬೆಂಕಿಯಾಜ್ವಾಲೆಯಂತೆ. ತಪ್ತ ಹೃದಯಕೆ ತಿರಸ್ಕಾರ ಎಲ್ಲೆಲ್ಲೂ, ಮತ್ತೆಲ್ಲ ಯತ್ನ ನೆಲಕಚ್ಚಿಹೋದಾಗ ಕೊನೆಗೇಗೋ ಹೋಗುವುದು ಮುಂದಕ್ಕೆ ಬದುಕು ಹುರುಪು-ಗಿರುಪುಗಳಿಲ್ಲ ಬದುಕಲ್ಲಿ ನಶ್ವರವೇ ಕೊನೆಗೂ ಎಂಬ ಸಾರಕ್ಕೆ ಶಿರಬಾಗಿ ದಿಕ್ಕು-ಹಕ್ಕುಗಳಿಲ್ಲದೇ ಕಡಿವಾಣ-ಗಿಡಿವಾಣಗಳಿಲ್ಲದೇ ಬೋರ್ಗರೆವ ಆಸೆಗಳ ಈಡೇರಿಕೆಗೆ ನಿತ್ಯವೂ ದಿನಪೂರ್ತಿ ಜಂಜಾಡುತ್ತಾ ಮತ್ತದೇ ವಿಫಲ ಯತ್ನದತ್ತ ಚಿತ್ತ ಹರಿಸುತ್ತ. ಮೂಡಿ ಬರಲಿ ( ಕವನ) ಮೂಡಿ ಬರಲಿ ಮೂಡಿ ಬರಲಿ ದೇಶಪ್ರೇಮ ನಮ್ಮಲಿ..       ಕೂಡಿ ಬರುವ                    ಭಾವವೆಲ್ಲ       ಜಗದಲಿಂದು ಚಿಮ್ಮಲಿ. ಮೇಲು-ಕೀಳು ಕೊಳಕು ಕೊಚ್ಚಿ  ಮನವು ಸ್ವಚ್ಛವಾಗಲಿ.     ಒಳ್ಳೆ ಬೀಜ     ಪುಷ್ಟಿ ಗೊಬ್ಬರದಿಂದ     ಬೆಳೆಯು ಬೆಳೆದು ನಿಲ್ಲಲಿ. ದಾನ-ಧರ್ಮವ ಜಗಕೆ ಸಾರಿ ಒಳ್ಳೆ ಭಾವವು ತುಂಬಲಿ.       ಒಳ್ಳೆ ಬುದ್ಧಿಯಿಂದ       ಕಾಂತಿ ಹೊಂದಿ       ಕತ್ತಲೋಡಿ ಹೋಗಲಿ. ಊರಲೆಲ್ಲ ಮಳೆಯು ಬಿದ್ದು ಹಳ್ಳ-ಕೊಳ್ಳ ತುಂಬಿ ಹರಿಯಲಿ.       ಒಳ್ಳೆ ಬೆಳೆಯು       ಬೆಳೆದು ನಿಂತು       ಎಲ್ಲ ಜನರು ಹಾಡಲಿ. ದವಸ-ಧಾನ್ಯ ಬೆಳೆದ ರೈತ ನಾಡಲೆಲ್ಲ ಮೆರೆಯಲಿ.     ರಾಮರಾಜ್ಯ     ಪಡೆವ ಭಾಗ್ಯ     ಇಂದು ನಮ್ಮ ದಾಗಲಿ. ********************************************************* ಪರಿಚಯಬರಹ: ವಸುಂಧರಾ ಕದಲೂರು

ವಿದ್ಯಾರ್ಥಿ ಪ್ರತಿಭೆ Read Post »

ಇತರೆ

ಕಸಾಪಗೆ ಮಹಿಳಾ ಅದ್ಯಕ್ಷೆ ಬೇಕು

ಚರ್ಚೆ ಅಬ್ಬಾ! ಏನಿದು ವಿಪರ್ಯಾಸ,ಸರಾಸರಿ ನೂರು ವರ್ಷಗಳು ಉರುಳಿದರೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೀಯ ಸ್ಥಾನವನ್ನು ಮಹಿಳೆಯರು ಅಲಂಕರಿಸಲಿಲ್ಲವೇಕೆ?  ಎನ್ನುವುದು ತಿಳಿದ ತಕ್ಷಣ ನನಗೆ ಕಾಡುತ್ತಿರುವ ಒಂದು ಬಹುದೊಡ್ಡ ಪ್ರಶ್ನೆಯೇ ಅದು. ಮಹಿಳೆಯರೇ ತಮಗೆ ಆ ಪದವಿ ಬೇಡವೆಂದು ಸುಮ್ಮನುಳಿದಿದ್ದಾರೋ? ಅಥವಾ ಆ ಸ್ಥಾನಕ್ಕೆ ಹೋಗಲು ಅವರಿಗೆ ಅವಕಾಶವನ್ನೇ ನೀಡಲಿಲ್ಲವೋ? ನಾನರಿಯೆ. ಆದರೆ ಇಲ್ಲಿಯವರೆಗೂ ಅಧ್ಯಕ್ಷೀಯ ಪೀಠವನ್ನು ಹತ್ತಲಿಲ್ಲ ಎಂಬ ಸಂಗತಿಯನ್ನಂತು ತಿಳಿದುಕೊಂಡೆ. ಪುರುಷನ ಜೀವನದ ಪ್ರತಿಯೊಂದು ಹಂತದಲ್ಲೂ ಹೆಣ್ಣಿನ ಪಾತ್ರ ಬಹುಮುಖ್ಯವಾದುದು. ಜನ್ಮಕೊಟ್ಟು ಸಾಕಿ ಸಲಹುವ ತಾಯಿಯಾಗಿ, ಪ್ರೀತಿಯ ಸಹೋದರಿಯಾಗಿ, ಅತ್ತಾಗ ಸಾಂತ್ವನ ಹೇಳುವ ಗೆಳತಿಯಾಗಿ, ಮನೆಯಲ್ಲಿ ಎಲ್ಲರ ಪ್ರೀತಿಯ ಚಿಲುಮೆಯ ಮುದ್ದಿನ ಮಗಳಾಗಿ ಇಂದು ಮಹಿಳೆ ಸರ್ವ ಕ್ಷೇತ್ರಗಳಲ್ಲೂ ಸಾಧನೆಯ ದಾಪುಕಾಲನ್ನ ಹಾಕುತ್ತಾ ಜಗತ್ತಿನೆಲ್ಲರ ದೃಷ್ಟಿಯನ್ನು ತನ್ನೆಡೆಗೆ ಸೆಳೆಯುವಂತೆ ಮಾಡಿರುವಾಗ, ಕಸಾಪನ ಅಧ್ಯಕ್ಷೀಯ ಪದವಿ ನೂರು ವರ್ಷಗಳಾದರೂ ಪಡೆಯದೇ ಇರುವುದು ತುಂಬಾ ವಿಷಾದನೀಯ ಹಾಗೆಯೇ ಮಹಿಳೆಯರಿಗೆ ಇದೊಂದು ಸವಾಲಿನ ಪ್ರಶ್ನೆಯು ಹೌದು. ಒಂದು ಕಾಲದಲ್ಲಿ ಅಡಿಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆ ಈಗ ಸಾಹಿತ್ಯ, ರಾಜಕೀಯ, ಸಾಮಾಜಿಕ, ಧಾರ್ಮಿಕ, ವಿಜ್ಞಾನ, ವೈದ್ಯಕೀಯ, ಬಾಹ್ಯಾಕಾಶ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ತನ್ನ ಸಾಧನೆಯ ಛಾಪು ಮೂಡಿಸಿದ್ದಾಳೆ. ನಾನಿಲ್ಲಿ  ಕಸಾಪನ ಬಗ್ಗೆ ಹೇಳುತ್ತಿರುವುದರಿಂದ ಕೇವಲ ಸಾಹಿತ್ಯದ ಬಗ್ಗೆಯಷ್ಟೇ ಕೊಂಚ ಗಮನ ಹರಿಸೋಣ . ಬರಹಗಾರ್ತಿಯರ ಸಂಖ್ಯೆ ತುಂಬಾ ಕಡಿಮೆಯಿದ್ದ ಹಿಂದಿನ ಕಾಲದಲ್ಲಿ, ಪ್ರತಿನಿತ್ಯದ ತಮ್ಮೆಲ್ಲ ಕಷ್ಟ-ಕಾರ್ಪನ್ಯಗಳನ್ನು ದೂರಮಾಡಿಕೊಳ್ಳುವ ಸಲುವಾಗಿ ಹಾಡುಗಳನ್ನು ತಾವೇ ಕಟ್ಟಿ ರಾಗವಾಗಿ ಹಾಡುತ್ತಿದ್ದರು ಅವೇ ಜಾನಪದ ಸಾಹಿತ್ಯ. ಈ ಜಾನಪದ ಸಾಹಿತ್ಯವನ್ನ ಹಿಂದೆ ಬಹುವಾಗಿ ರಚಿಸಿದವರೆಂದರೆ ಮಹಿಳೆಯರೇ. ಆ ಸೊಗಸಾದ ಸಾಹಿತ್ಯ ಆಕೆಯ ಕುಟುಂಬ,ನೋವು-ನಲಿವು, ಅವಳ ಒಂದಿಷ್ಟು ತಳಮಳಗಳಿಗಷ್ಟೇ ಸೀಮಿತವಾಗಿತ್ತು. ಆದರೆ ಜಾನಪದ ಸಾಹಿತ್ಯದ ಸೊಗಡೇ ಅದ್ಬುತ. ಕವಿ ಮಹಲಿಂಗರಂಗರು ಹೇಳಿರುವಂತೆಯೇ “ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ,ಅಳಿದ ಉಷ್ಣದ ಹಾಲಿನಂದದಿ ಕನ್ನಡ ಸಾಹಿತ್ಯ”. ಈ ಜಾನಪದ ಸಾಹಿತ್ಯವೂ  ಹಾಗೆಯೇ ಅಷ್ಟೇ ಸುಲಭದ ಮತ್ತು ಓದುವಾಗ ಮನಸ್ಸಿಗೆ ತುಂಬಾ  ಮುದ ನೀಡುವಂತದ್ದು. ಜಾನಪದ ಸಾಹಿತ್ಯವನ್ನು ಆಗಲೇ ಗುರುತಿಸಿ ಪ್ರಶಂಸೆಯನ್ನು ನೀಡಿದ್ದೇ ಹೌದಾದರೆ ಮಹಿಳೆ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುತ್ತಿದ್ದಲೋ ಏನೋ?ಯಾರಿಗೆ ಗೊತ್ತು. ಹಾಗೆಯೇ ಅಲ್ಲಿಂದ ಮಹಿಳಾ ಸಾಹಿತ್ಯದ ಉಲ್ಲೇಖದ ಬಗ್ಗೆ ಯೋಚಿಸುತ್ತಾ ಹೋದರೆ ಸಿಗುವುದು ವೈಭವದ ಸಾಮ್ರಾಜ್ಯವಾದ ವಿಜಯನಗರ ಕಾಲದಲ್ಲಿಯೇ ಗಂಗಾದೇವಿಯ” ವೀರ ಕಂಪಣರಾಯ ಚರಿತ” ಮತ್ತು ತಿರುಮಲಾಂಬ ಅವರು ರಚಿಸಿದಂತ “ವರದಾಂಬಿಕ ಪರಿಣಯಂ”. ವಿಜಯನಗರ ಸಾಮ್ರಾಜ್ಯದ ವೈಭೋಗವನ್ನು ಅದೆಷ್ಟು ಬಾರಿ ಬಣ್ಣಿಸಿದರೂ ಸಾಲದು!! ಆ ಕಾಲದಲ್ಲಿದ್ದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ವೈಭವದಿಂದ ಮೆರೆದ ಹಂಪೆಯಲ್ಲಿನ ಪ್ರತಿಯೊಂದು ಕಲ್ಲುಗಳೂ ಕೂಡ ಹಿಂದಿನ ಗತವೈಭವವನ್ನು ಸಾರಿ ಹೇಳುತ್ತವೆ!! ಅಂದು ಹಂಪಿ ಪಟ್ಟಣವನ್ನು ಕಂಡು ಬೆರಗಾದ ಪೋರ್ಚುಗೀಸ್ ಪ್ರವಾಸಿಗ ದ್ವಾರ್ಟ್ ಬಾರ್ಬೊಸಾ, “ವಜ್ರ, ಮುತ್ತು, ರೇಶ್ಮೆ, ಬೆಲೆಬಾಳುವ ವಸ್ತುಗಳು ಬೀದಿಗಳಲ್ಲೇ ಮಾರಲ್ಪಡುತ್ತದೆ” ಎಂದು ಸಾರಿ ಹೇಳಿದ್ದ!! ಚೈನಾ ದೇಶದ ಬೌದ್ಧ ಬಿಕ್ಷು ಹೂಯನ್ ತ್ಸಾಂಗ್, “ವಿಜಯನಗರದ ಜನರು ಬಹಳ ಸಂತೋಷದಿಂದಿರುವವರು, ಎಲ್ಲಿ ನೋಡಿದರೂ ಭವ್ಯವಾದ ಅರಮನೆಗಳೇ, ರಾಜ ಬೀದಿಗಳಲ್ಲಿ ಅಸಂಖ್ಯಾತ ಮೊತ್ತದ ಚಿನ್ನ, ವಜ್ರ ವೈಡೂರ್ಯಗಳನ್ನು ರಾಶಿ ಹಾಕಿಕೊಂಡು ವರ್ತಕರು ವ್ಯಾಪಾರ ಮಾಡುತ್ತಾರೆ. ನಿಜವಾಗಿಯೂ ಇದೊಂದು ಸ್ವರ್ಗ ಭೂಮಿ” ಎಂದಿದ್ದ!! ಎನ್ನುವ ವಿಷಯವನ್ನು ನಾವೆಲ್ಲ ಇತಿಹಾಸದಲ್ಲಿ ಓದಿಯೇ ಇರುತ್ತೇವೆ. ಈ ಎಲ್ಲ ವೈಭವದ ನಡುವೆ ಮಹಿಳಾ ಸಾಹಿತ್ಯಕ್ಕೆ ಅಷ್ಟೊಂದು ಮನ್ನಣೆ ಅವರೇ ಕೊಡಲಿಲ್ಲವೋ, ಮಹಿಳೆಯರೇ ತಮ್ಮ ಸುತ್ತಲಿನ ಪರಿಧಿಯನ್ನು ಬಿಟ್ಟು ಹೊರಗೆ ನುಸುಳಿ ಬರಲಿಲ್ಲವೋ ಗೊತ್ತಿಲ್ಲ. ಉಳಿದ ರಾಜ ಮಹಾರಾಜರ ಕಾಲದಲ್ಲೂ ಸಹ ಪುರುಷರ ಸಾಹಿತ್ಯದಷ್ಟು ಸ್ತ್ರೀ ಸಾಹಿತ್ಯ ಪ್ರಚಾರಕ್ಕೆ ಬರದೇ ಹೋಯಿತು. ಒಂದಿಷ್ಟು ಆಧುನಿಕ ಕನ್ನಡ ಸಾಹಿತ್ಯದ ಕಡೆ ಕಣ್ಣಾಡಿಸಿ ನೋಡಿದರೆ ಕಥೆ, ಕವಿತೆ, ನಾಟಕ, ಕಾದಂಬರಿ, ಪ್ರಬಂಧ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲಿಯೂ ಇಂದು ಮಹಿಳೆ ಪರಿಣಿತಳಾಗಿದ್ದಾಳೆ. ನನಗಂತೂ ದ್ವಿತೀಯ ಪಿಯುಸಿ ಓದುವಾಗ ಶ್ರೀಮತಿ ನೇಮಿಚಂದ್ರರು ಬರೆದ “ಆಯ್ಕೆ ಇದೆ ನಮ್ಮ ಕೈಯಲ್ಲಿ” ಎನ್ನುವ ಅನುಭವ ಕಥನವಂತೂ ನಾ ಓದಿದಾಗ ನನ್ನ ಮನಸನ್ನೇ ಸೂರೆ ಮಾಡಿತ್ತು. ನಿರಾಸೆಯ ಮಡಿಲಿಗೆ ಬೀಳದೇ ಎಚ್ಚರಿಕೆಯ ಎಲ್ಲೆಯಲ್ಲಿ ಬದುಕನ್ನು ಬದಲಿಸಿಕೊಳ್ಳುವ, ಸಾಧಿಸುವ ತಾಳ್ಮೆ, ಸಹನೆಗಳ ಅಗತ್ಯವನ್ನು ತುಂಬಾ ಮನಮುಟ್ಟುವಂತೆ ಅಲ್ಲಿ ಬರೆದಿದ್ದಾರೆ. ಹೀಗೆ ಮಹಿಳಾ ಸಾಹಿತ್ಯವನ್ನು ಕಟ್ಟಿ ಇಲ್ಲಿಯವರೆಗೆ ತಂದು ನಿಲ್ಲಿಸಿದ ಕೀರ್ತಿ ನಮ್ಮ ಸಾರ ಅಬೂಬಕ್ಕರ, ಮಾಲತಿ ಪಟ್ಟಣಶೆಟ್ಟಿ, ನೇಮಿಚಂದ್ರ, ಸುಧಾಮೂರ್ತಿ, ಟಿ. ಸುನಂದಮ್ಮ, ಲಲಿತಾ ಸಿದ್ಧಬಸವಯ್ಯ, ಸುಕನ್ಯಾ ಮಾರುತಿ, ಹೀಗೆ ಹೆಸರುಗಳ ಪಟ್ಟಿ ಒಂದರ ನಂತರ ಒಂದರಂತೆ ಬೆಳೆಯುತ್ತಲೇ ಹೋಗುತ್ತದೆ. ದ. ರಾ. ಬೇಂದ್ರೆಯವರು ತಮ್ಮ ಭಾವಗೀತೆಯಾದ “ಹಕ್ಕಿ ಹಾರುತಿದೆ ನೋಡಿದಿರಾ” ಇದರಲ್ಲಿ ಕಾಲ ಪಕ್ಷಿಯ ಹೊಡೆತಕ್ಕೆ ಮಾನವ ಪ್ರಪಂಚದಲ್ಲಿ ಅನೇಕಾನೇಕ ಬದಲಾವಣೆ ಆಗುತ್ತಲೇ ಇರುತ್ತದೆ, ಇಂದು ಇದ್ದಂತೆ ಮುಂದೆ ಎಂದಿಗೂ ಇರಲಾರದು ಎನ್ನುವ ಮಾತಿನಂತೆ ಕಾಲಘಟ್ಟಗಳು ಬದಲಾದ ಹಾಗೆ ಮಹಿಳಾ ಸಾಹಿತ್ಯ ಲೋಕ ಕೂಡ ತುಂಬಾ ಮುಂದುವರಿದಿದೆ. ಪ್ರವಾಸ, ಕೃಷಿ, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಕೌಟುಂಬಿಕ ಹೀಗೆ ಎಲ್ಲವನ್ನೂ ಒಳಗೊಂಡ ಸಾಹಿತ್ಯವನ್ನು ರಚಿಸುವಷ್ಟು ಪ್ರಬಲವಾಗಿದ್ದಾಳೆ. ಹೀಗಿರುವಾಗ ಅವಳಿಗೆ ಅಧ್ಯಕ್ಷೀಯ ಗದ್ದುಗೆ ಸಿಗಲೇ ಬೇಕು. “ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು” ಇನ್ನೂ ಕಸಾಪನ ಅಧ್ಯಕ್ಷತೆಯ ಸ್ಥಾನದಲ್ಲಿ ಕೂರಲು ಆಕೆಗೆ ಅರ್ಹತೆ ಇಲ್ಲವೇನು?? ಅಥವಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನವೆಂಬ ತೊರೆಗೆ ಸ್ತ್ರೀ ಮತ್ತು ಪುರುಷರೆಂಬ ಪ್ರತ್ಯೇಕ ಧಾರೆಗಳ ಹರಿವೇನಾದರು ಇದೆಯೇನು? ಅಧ್ಯಕ್ಷ ಪದವಿಯ ಆಯ್ಕೆಯಲ್ಲಿ ಮಹಿಳೆಯರಿಗೂ ಮೀಸಲಾತಿ ಸೌಲಭ್ಯ ಸಿಗುವಂತಾಗಿ ಇನ್ನೂ ಹೆಚ್ಚಿನ ಉತ್ತೇಜನ ಅವರಿಗೆ ದೊರಕುವ ಮೂಲಕ ಸಾಹಿತ್ಯ ಲೋಕ ಅನೇಕಾನೇಕ ಮಹಿಳಾ ಸಾಹಿತ್ಯ ರತ್ನದ  ಮಣಿಗಳನ್ನು ಪಡೆದು ಸಾಹಿತ್ಯ ಕ್ಷೇತ್ರ ಬಾನೆತ್ತರಕ್ಕೆ ಬೆಳೆಯಲಿ ಎನ್ನುವುದು ನನ್ನದೊಂದು ಆಶಯ. “ಕನ್ನಡವೇ ಸತ್ಯ ಕನ್ನಡವೇ ನಿತ್ಯ” ********************************** ಪೂಜಾ ನಾರಾಯಣ ನಾಯಕ್..

ಕಸಾಪಗೆ ಮಹಿಳಾ ಅದ್ಯಕ್ಷೆ ಬೇಕು Read Post »

ಇತರೆ

ಮೂವರು ವೃತ್ತಿ ಕಲಾವಿದರ ಕಣ್ಮರೆ

ಲೇಖನ ಮಲ್ಲಿಕಾರ್ಜುನ ಕಡಕೋಳ ಅಂಜಲಿದೇವಿ ಅವರು ಎಂಟುಮಂದಿ ಅಕ್ಕತಂಗಿಯರು. ಎಂಟೂ ಮಂದಿಯು ವೃತ್ತಿರಂಗಭೂಮಿ ಅಭಿನೇತ್ರಿಯರು. ಆದವಾನಿ ಸುಭದ್ರಮ್ಮ, ಆದವಾನಿ ಸೀತಮ್ಮ, ಆದವಾನಿ ನಾಗರತ್ನಮ್ಮ… ಹೀಗೆ ಗದಗ ಪ್ರಾಂತ್ಯದ ಸಾಂಸ್ಕೃತಿಕ ಲೋಕದಲ್ಲಿ ಆಗ ಆದವಾನಿ ಸೋದರಿಯರದು ಬಲುದೊಡ್ಡ ಐಕಾನ್ ಹವಾ. ಮೊನ್ನೆಯಷ್ಟೇ ಗಂಗಾವತಿಯಲ್ಲಿ ನಿಧನರಾದ ಜಿ.ಎನ್.ಅಂಜಲಿದೇವಿ (೭೨ ) ಆದವಾನಿ ಸೋದರಿಯರ ಬಳಗದ ಕೊನೆಯ ಕೊಂಡಿ. ಇವರ ತಂದೆ ಆ ಕಾಲದ ಸಂಗೀತ ವಿದ್ವಾಂಸ. ಹೆಸರಾಂತ ಮೃದಂಗ ವಾದಕ. ತಂದೆಯಿಂದ ಬಳುವಳಿಯಾಗಿ ಬಂದುದು ಸಂಗೀತ ಮತ್ತು ರಂಗಭೂಮಿ ಅಭಿನಯ ಕಲೆ. ಅಂಜಲಿದೇವಿಯ ಬಾಳಸಂಗಾತಿ ನೀಲಕಂಠಪ್ಪ ಹಾರ್ಮೋನಿಯಂ ನುಡಿಸುವಲ್ಲಿ, ರಾಗಸಂಯೋಜನೆ ಮಾಡುವಲ್ಲಿ ಸುಪ್ರಸಿದ್ಧರು. ಅಷ್ಟಕ್ಕೂ ಅವರೆಲ್ಲರೂ ವೀರೇಶ್ವರ ಪುಣ್ಯಾಶ್ರಮದ ಗರಡಿಯಲ್ಲಿ ಸಾಮು ತೆಗೆದವರು. ಅಂಜಲಿದೇವಿ ರಂಗಸೇವೆಗೈಯ್ದ ಪಡೇಸೂರ ಕಂಪನಿ, ಚಿತ್ತರಗಿ ಕಂಪನಿ, ಸುಳ್ಳದ ಕಂಪನಿ, ಅರಿಷಿಣಗೋಡಿ ಕಂಪನಿ, ಏಣಗಿ ಬಾಳಪ್ಪ ಕಂಪನಿ.. ಈ ಎಲ್ಲ ನಾಟಕ ಕಂಪನಿ ಹೆಸರುಗಳೇ ಅಭಿನೇತ್ರಿ ಅಂಜಲಿದೇವಿಯ ಔನ್ನತ್ಯಕ್ಕೆ ರಂಗಸಾಕ್ಷಿ. ಕೆಲಕಾಲ ನಾಟಕ ಕಂಪನಿ ಮಾಡಿ ಅಂಜಲಿದೇವಿ ಕೈ ಸುಟ್ಟುಕೊಂಡರು. ದ್ರೌಪದಿ ಪಾತ್ರಕ್ಕೆ ಮನ್ಸೂರು ಸುಭದ್ರಮ್ಮ ರಾಜ್ಯಮಟ್ಟದಲ್ಲಿ ಮಹೋನ್ನತಿ ಸಾಧಿಸಿದರೆ ಅಂಜಲಿದೇವಿ ಗದಗ ಸೀಮೆಯಲ್ಲಿ ಅಂತಹುದೇ ಹೆಸರು ಮಾಡಿದವರು. ಅಷ್ಟಕ್ಕೂ ಅವರದು ಶಾಸ್ತ್ರೀಯ ಸಂಗೀತ ಹಿನ್ನೆಲೆಯ ಕುಟುಂಬ. ಇಟಗಿ ಭೀಮಾಂಬಿಕೆ ಪಾತ್ರದಲ್ಲಿ ತಾದಾತ್ಮ್ಯ ಸಾಧಿಸಿದ ಅವರು ಎಚ್.ಆರ್.ಜಿ. ಕ್ಯಾಂಪಲ್ಲಿ ಭೀಮಾಂಬಿಕೆ ದೇವಸ್ಥಾನವನ್ನೇ ಸ್ಥಾಪಿಸಿದರು. ಕಡೆಗೆ ಭೀಮಾಂಬಿಕೆಯ ಸನ್ನಿಧಿಯಲ್ಲೇ ರಂಗಸಾಯುಜ್ಯ ಕಾಣಬೇಕಾಯಿತು. ಸಿ. ರಮೇಶ ನಾಟಕ ಕಂಪನಿಗಳ ವಲಯದಲ್ಲಿ ದಾವಣಗೆರೆ ರಮೇಶ ಎಂತಲೇ ಚಿರಪರಿಚಿತ ಹೆಸರು. ಐವತ್ತೆರಡು, ಸಾಯುವ ವಯಸ್ಸಲ್ಲ. ಖಳನಾಯಕ ಪಾತ್ರಕ್ಕೆ ಹೇಳಿ ಮಾಡಿಸಿದ ಫೇಷಿಯಲ್ ಎಕ್ಸ್ ಪ್ರೆಸೆನ್ ಅಲ್ಲಲ್ಲ ಟ್ಯಾಲೆಂಟ್. ಕಣ್ಣು, ಹುಬ್ಬು, ಹಣೆ, ತಲೆಗೂದಲುಗಳಲ್ಲೇ ಅಭಿನಯದ ಅಮೋಘ ಚತುರತೆ ತೋರುವಲ್ಲಿ ರಮೇಶ ಪರಿಣತ. ಆತ ನಾಯಕ ಪಾತ್ರ ಮಾಡಿದರೂ ಪ್ರೇಕ್ಷಕರಿಗೆ ಖಳನಾಯಕನದೇ ಖಾಸಾ ಕನಸು. ರಮೇಶ ಮಾಡುವ ಹಾಸ್ಯ ಪಾತ್ರದಲ್ಲೂ ವಿಲನ್ ಚಹರೆಗಳ ಹುಡುಕಾಟ ನಡೆಸುವಷ್ಟು ಪ್ರೇಕ್ಷಕರಲ್ಲಿ ಖಳನಾಯಕ ರಮೇಶ್ ಅಭಿನಯ ಪ್ರಭಾವದ ಬೇರುಗಳು. ಶರೀರ ಮತ್ತು ಶಾರೀರ ಎರಡಲ್ಲೂ ರಮೇಶ ಲಕ್ಷಣವಂತ. ಸಿನೆಮಾನಟ ಧೀರೇಂದ್ರ ಗೋಪಾಲ, ವಜ್ರಮುನಿ ಅವರನ್ನು ಆವಾಹಿಸಿಕೊಂಡು ರಮೇಶ ಅಭಿನಯಿಸುತ್ತಿದ್ದರೆ ಪ್ರೇಕ್ಷಕರಿಗೆ ಹಂಡೆಹಾಲು ಕುಡಿದ ಸಂಭ್ರಮ. ” ಅಂಣಾ ನನ್ನೊಳಗಿನ ಕಲಾವಿದ ರಮೇಶನಿಗಿಂತಲೂ ಸಿನಿಮಾ ನಟರನ್ನೇ ನನ್ನ ಮೂಲಕ ನೋಡುವಲ್ಲಿ ಪ್ರೇಕ್ಷಕರು ಇಷ್ಟ ಪಡುತ್ತಾರೆ. ನನಗೆ ಅನ್ನ ನೀಡುವ ಪ್ರೇಕ್ಷಕರು ಮುಖ್ಯ. ಅವರಿಗೆ ನನ್ನೊಳಗಿನ ನಾನು ಯಾವಾಗ ಬೇಕೆಂದು ಬಯಸುತ್ತಾರೋ ಆಗ ಕಲಾವಿದ ಅಪ್ಪಟ ರಮೇಶ ಅಭಿನಯಿಸುತ್ತಾನೆ.” ಹೀಗೆ ನನ್ನೊಂದಿಗೆ ಮಾತಾಡುವಾಗ ಅನೇಕ ಬಾರಿ ಹೇಳುತ್ತಿದ್ದ. ನಿಸ್ಸಂದೇಹವಾಗಿ ರಮೇಶ ಅನುಕರಣೆಯಿಂದಲೇ ಪ್ರಸಿದ್ದಿ ಪಡೆದವರಲ್ಲ. ಅವನೊಳಗೊಬ್ಬ ಅನನ್ಯತೆಯ ನಾಯಕ ನಟನಿದ್ದ. ಆರ್ದ್ರತೆ ತುಂಬಿದ, ಉಕ್ಕುವ ಸಂವೇದನೆಯ ಅಪ್ರತಿಮ ಕಲಾವಿದನಿದ್ದ. ಓರ್ವ ಸಹೃದಯಿ ಸನ್ಮಿತ್ರನಿದ್ದ. ಕಂಪನಿ ಸಾಂಗತ್ಯದ ರೂಢಿಗತ ನಡವಳಿಕೆಗಳನ್ನು ಮೀರದ ದುಃಸಾಧ್ಯತೆಗಳ ನಡುವೆ ರಂಗಕರ್ಮಿ ರಮೇಶನ ಅಕಾಲಿಕ ನಿರ್ಗಮನ ಕಂಪನಿ ನಾಟಕಗಳಿಗೆ ತುಂಬಲಾಗದ ನಷ್ಟವೇ ಸೈ. ಕೋಗಳಿ ಪಂಪಣ್ಣ ಈ ಹೆಸರಿನಲ್ಲೇ ಸಾರಸ್ವತದ ಫೀಲಿಂಗ್ಸ್. ಸಂಗೀತ ಮತ್ತು ಸಾಹಿತ್ಯ ಸಮೃದ್ಧಿಯ ತುಳುಕಾಟ. ಕೋಗಳಿ ಎಂಬುದು ಕೋಗಿಲೆಯ ಮತ್ತು ಪಂಪಣ್ಣ ಎಂಬುದು ಪಂಪಕವಿಯ ನೆನಪು ತರಿಸುತ್ತವೆ. ಹೌದು ಪಂಪಣ್ಣನ ರಂಗಬದುಕು ಈ ಮಾತಿಗೆ ಹೆಚ್ಚು ಹತ್ತಿರ. ಅಷ್ಟಕ್ಕೂ ಬಳ್ಳಾರಿ ಜಿಲ್ಲೆಯ ಕೋಗಳಿಯು ಮಹಾಕವಿ ಶಿವಕೋಟಾಚಾರ್ಯರ ಕಾಯಕಭೂಮಿ. ಹುಟ್ಟಿನಿಂದಲೇ ಪೌರಾಣಿಕ ನಾಟಕಗಳಿಗೆಂದೇ ಶರೀರ ಮತ್ತು ಶಾರೀರ ಕಟ್ಟಿಕೊಂಡೇ ಬಂದಂತಹ ರಂಗ ಸಂಪನ್ನತೆ ನಮ್ಮ ಪಂಪಣ್ಣನದು. ಹದಿನಾಲ್ಕನೇ ವಯಸಿಗೆ ಸೀತೆಯ ಪಾತ್ರ. ದಶಕಕಾಲ ಹಲವಾರು ಸ್ತ್ರೀ ಪಾತ್ರಗಳಲ್ಲಿ ಶಹಬ್ಬಾಶಗಿರಿ. ನಂತರ ಪೌರಾಣಿಕ ನಾಟಕಗಳಲ್ಲಿ ಮುನ್ನಡೆ ಸಾಧಿಸಿದ ಪಂಪಣ್ಣ ಹಿನ್ನಡೆಗೆ ತಿರುಗಲಿಲ್ಲ. ವೃತ್ತಿ ನಾಟಕಗಳ ಮೂಲಕ ಗ್ರಾಮೀಣ ರಂಗಭೂಮಿಯ ಭೂಮತ್ವ ಮೆರೆದ ಪಂಪಣ್ಣ ಆಧುನಿಕ ರಂಗಭೂಮಿಯ ಸಂಗ್ಯಬಾಳ್ಯ, ಅಂಗುಲಿಮಾಲ, ಆಮ್ರಪಾಲಿ ಮೊದಲಾದ ನಾಟಕಗಳಲ್ಲೂ ಅಭಿನಯಿಸಿದ್ದಾರೆ. ರಕ್ತರಾತ್ರಿ ನಾಟಕದ ಕೃಷ್ಣನ ಪಾತ್ರ ಹೊರತು ಪಡಿಸಿ ಬಾಕಿ ಎಲ್ಲ ಪುರುಷ ಪಾತ್ರಗಳಲ್ಲಿ ಮನೋಜ್ಞ ಅಭಿನಯ. ಗುರುಮುಖೇನ ಸಂಗೀತ ಕಲಿತು ಕಂದಪದ್ಯಗಳನ್ನು ತುಂಬಾ ಸೊಗಸಾಗಿ ಹಾಡುವಲ್ಲಿ ಪರಿಣಿತರು. ಇದು ಯಾರತಪ್ಪು? ಯಾರು ನನ್ನವರು? ಇವನು ಗೆಳೆಯನೇ? ಹೀಗೆ ಪ್ರಶ್ನಾರ್ಥಕ ಚಿಹ್ನೆಹೊತ್ತ ನಾಟಕಗಳ ಮತ್ತು ಗುರುಭಕ್ತಿ ಗೀತಾಂಜಲಿ ಎಂಬ ಕವನ ಸಂಕಲನದ ರಚಯಿತೃ. ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಅಮೋಘ ಅಭಿನಯ, ಮುನ್ನೂರಿಪ್ಪತ್ತಕ್ಕೂ ಹೆಚ್ಚು ನಾಟಕಗಳ ನಿರ್ದೇಶನ ಮಾಡಿದ ಹೆಗ್ಗಳಿಕೆ ಪಂಪಣ್ಣರದು. ಲಾಲಿತ್ಯದ ಮಾತುಗಳ ಈ ವಾಗ್ಮಿ ಒಂದು ಅವಧಿಗೆ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಕ್ಷೇತ್ರದ ಜನರ ಪ್ರೀತಿಗೆ ಪಾತ್ರ. ತುಂಬಾ ತಡವಾಗಿ ಪತ್ತೆಯಾದ ಕ್ಯಾನ್ಸರ್ ನಿಂದ ಬಳಲಿ ಎಪ್ಪತ್ತಾರನೇ ಏರುವಯಸ್ಸಲ್ಲಿ ನಿಧನ. *************************************************************

ಮೂವರು ವೃತ್ತಿ ಕಲಾವಿದರ ಕಣ್ಮರೆ Read Post »

ಇತರೆ

ಏಕಾಂತದಿಂದ ಲೋಕಾಂತಕ್ಕೆ

ಏಕಾಂತದಿಂದ ಲೋಕಾಂತಕ್ಕೆ –ಲೇಖಿಕಾ ಸಾಹಿತ್ಯ ವೇದಿಕೆ ಪುಸ್ತಕ ಪರಿಚಯ ಸಾರ್ಥ್ಯಕ್ಯ ಡಿ.ಯಶೋದಾ ವಿಶ್ವಕ್ಕೇ ಕೊರೋನ   ಕಾರ್ಮೋಡ ಕವಿದಿರುವ ಇಂತಹ ಕಾಲದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ತಾಂತ್ರಿಕತೆಯ ಮೂಲಕ ಒಂದು ಗೂಡುವು ದು ವಿಶೇಷ. ಏಕಾಂತದಿಂದ ಲೋಕಾಂತಕ್ಕೆ ಎಂಬಂತೆ ತಂತ್ರ ಜ್ಞಾನದ ಮೂಲಕ ಸಂವಹನ ಮಾಡುವುದು ಇಂದಿಗೆ ಅತಿ ಮುಖ್ಯ ಎಂಬುದು ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅಭಿಮತ.ಲೇಖಿಕಾ ಸಾಹಿತ್ಯ ವೇದಿಕೆ ಯ ನನ್ನ ಮೆಚ್ಚಿನ ಪುಸ್ತಕ ಪರಿಚಯದ ಫೇಸ್‌ಬುಕ್ ಲೈವ್ ಸರಣಿ ಕಾರ್ಯಕ್ರಮದ ಅವಲೋಕನದಲ್ಲಿ ಮಾತನಾಡಿದ ಅವರು, ಮಹಿಳೆ ತನ್ನ ಚಿಂತನೆ, ಅನಿಸಿಕೆಯನ್ನು ಹಂಚಿಕೊ ಳ್ಳುವುದಕ್ಕೆ ಇದಕ್ಕಿಂತ ಉತ್ತಮ ಸಾಧನ ಬೇರೆ ಏನಿದೆ ಎಂದು ಪ್ರಶ್ನಿಸಿದರೆ. ಕೊರೋನಾ ಕಾರಣವಾಗಿ ಬಹಳಷ್ಟು ಮಂದಿ ಮನೆಯಲ್ಲಿ ಬಂಧಿ. ಆದರೆ ಮನಸ್ಸನ್ನು ಬಂಧಿಸಲು ಸಾಧ್ಯವೇ? ನಮ್ಮ ಕಲ್ಪನೆ, ಕನಸು,ಕ್ರಿಯಾಶೀಲತೆಯನ್ನು ಎಂದೂ ಬಂಧಿಸಲು ಸಾಧ್ಯವಿಲ್ಲ.ಕೊರೋನಾದಿಂದ ಒಂದು ರೀತಿಯಲ್ಲಿ ನಮಗೆ ನಿರ್ಬಂಧ ಉಂಟಾಗಿದ್ದರೂ ನಮ್ಮ ಹಲವಾರು ಚಟುವಟಿ ಕೆಗಳು ಸಮೃದ್ಧಿಗೊಳ್ಳುತ್ತಿವೆ. ಯಾರನ್ನೂ ಭೇಟಿಯಾಗದೆ, ಸಭೆ, ಸಮಾರಂಭಗಳು ನಡೆಯದೆ ಇರುವಂತಹ ಈ ಕಾಲದಲ್ಲಿ,ತಂತ್ರಜ್ಞಾನದ ಮೂಲಕ ಮನೆಯಲ್ಲಿಯೇ ಕೂತು ಜಗತ್ತನ್ನೇ ಸಂಚರಿಸುವ, ವೈವಿಧ್ಯಮಯ ಜನರನ್ನು ಭೇಟಿಯಾಗುವ, ವಿವಿಧ ವಿಚಾರಗಳನ್ನು ತಿಳಿದುಕೊಳ್ಳುವ ಸದಾವಕಾಶ ನಮ್ಮದು. ಕತೆ, ಕವನ, ವಚನಗಳ ಗೋಷ್ಠಿಗಳು, ವಿವಿಧ ವಿಚಾರಗಳ ಮಂಡನೆ, ಸ್ತ್ರೀ ವಾದಿ ಚಿಂತನೆಗಳ ಚರ್ಚೆಗಳು,ಪುಸ್ತಕ ಗಳ ಪರಿಚಯ, ಹಾಡು, ನೃತ್ಯ… ಒಂದೇ ಎರಡೇ ಸಾಹಿತ್ಯ, ಸಾಂಸ್ಕೃತಿಕ ಕಲೆಗಳಿಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳು ಫೇಸ್‌ಬುಕ್ ಲೈವ್‌ನಲ್ಲಿ ನಡೆಯುತ್ತಿವೆ. ನಮ್ಮ ನಮ್ಮ ವಿಷಯ ಮಂಡನೆಗಳಿಗೆ, ನಮ್ಮ ಪ್ರತಿಭಾ ಪ್ರದರ್ಶನಕ್ಕೆ ದೊಡ್ಡ ದೊಡ್ಡ ಸಮಾರಂಭಗಳೇ ಆಗಬೇಕೆಂ ದೇನಿಲ್ಲ,ನೂರಾರು ಜನರು ಸೇರಬೇಕು ಎಂದೂ ಇಲ್ಲ. ಫೇಸ್‌ಬುಕ್ ವೇದಿಕೆಯಲ್ಲಿ, ನಮ್ಮ ಚೌಕಟ್ಟಿನಲ್ಲಿ ಅಚ್ಚು ಕಟ್ಟಾಗಿ ಮನಮುಟ್ಟುವಂತಹ ಕಾರ್ಯಕ್ರಮಗಳು ಜರುಗು ತ್ತಿರುವುದು ಜಗಮೆಚ್ಚುಗೆಗೆ ಕಾರಣವಾಗಿದೆ.ಇಂದಿನ ಪರಿ ಸ್ಥಿತಿಯನ್ನು ಅನುಕೂಲಕರವಾಗಿ ಮಾಡಿಕೊಂಡು ಬೆಂಗ ಳೂರಿನ ಲೇಖಿಕಾ ಸಾಹಿತ್ಯ ವೇದಿಕೆಯು ಲೇಖಕಿಯರ ಮೂಲಕ ವಿವಿಧ ಪುಸ್ತಕಗಳನ್ನು ಪರಿಚಯಿಸುವ ಕಾರ್ಯ ಕ್ರಮ ಮಾಡಿದ್ದು ಸ್ಫೂರ್ತಿದಾಯಕವಾಗಿದೆ. ಲೇಖಿಕಾ ಸಾಹಿತ್ಯ ವೇದಿಕೆಯ ನನ್ನ ಮೆಚ್ಚಿನ ಪುಸ್ತಕ ಪರಿಚ ಯ ಸರಣಿ ಕಾರ್ಯಕ್ರಮ ಫೇಸ್‌ಬುಕ್ ಲೈವ್‌ನಲ್ಲಿ ಒಂ ದೂವರೆ ತಿಂಗಳ ಕಾಲ ಮೂಡಿ ಬಂದು ಜನಪ್ರಿಯಗೊಂ ಡಿದೆ. ಇದರ ಯಶಸ್ಸು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದ ಎಲ್ಲ ಲೇಖಕಿಯರಿಗೆ ಸಲ್ಲುತ್ತದೆ. ಇಂತಹ ವಿನೂತನ ಕಾರ್ಯಕ್ರಮದ ರೂವಾರಿ ಲೇಖಿಕಾ ಸಾಹಿತ್ಯ ವೇದಿಕೆಯ ಸಂಚಾಲಕರಾದ ಲೇಖಕಿ ಶೈಲಜಾ ಸುರೇಶ್ ಅವರು ವಿಶೇ ಷವಾಗಿ ಅಭಿನಂದನಾರ್ಹರು.ಈ ಕಾರ್ಯಕ್ರಮದ ಒಂದು ಗಮನಾರ್ಹ ಅಂಶವೆಂದರೆ ಈ ಫೇಸ್‌ಬುಕ್ ತಂತ್ರಜ್ಞಾನದ ಅರಿವಿಲ್ಲದವರು, ಅದಕ್ಕೆ  ತೊಡಗಿಕೊಳ್ಳದವರೂ ಸಹ ಇದರಲ್ಲಿ ಭಾಗವಹಿಸಿ ಸೈ ಎನಿಸಿಕೊಂಡದ್ದು. ಫೇಸ್‌ಬಕ್ ಲೈವ್‌ನಲ್ಲಿ ಕೆಲವೊಮ್ಮೆ ಗೊಂದಲವಿದ್ದದ್ದು ನಿಜ, ಆದರೆ ಮಹಿಳೆಯರು ಗಲಿಬಿಲಿಯಾಗಲಿಲ್ಲ. ೨೫ ಲೇಖಕಿಯರು ೨೫ ಕೃತಿಗಳು,ಕಾರ್ಯಕ್ರಮದಲ್ಲಿ ೨೫ ಲೇಖಕಿಯರು ೨೫ ಕೃತಿಗಳು ಮತ್ತು ೨೫ ಕೃತಿಕಾರರನ್ನು ಪರಿಚಯಿಸಿದರು. ಭೈರಪ್ಪನವರ ಪರ್ವ ಕಾದಂಬರಿಯಿಂ ದ ಶುರುವಾಗಿ ನುಗ್ಗೇಹಳ್ಳಿ ಪಂಕಜಾ ಅವರ ಮದುವೆ ಗೊ ತ್ತಾದಾಗ ಕೃತಿಯೊಂದಿಗೆ ಪುಸ್ತಕ ಪರಿಚಯ ಕಾರ್ಯಕ್ರಮ ಮುಕ್ತಾಯವಾಗುತ್ತದೆ.ಜೂನ್ ೧೯ರಂದು ಡಾ. ಜಯಂತಿ ಮನೋಹರ್  ಅವರು ಡಾ. ಎಸ್.ಎಲ್. ಭೈರಪ್ಪ ಅವರ ಪರ್ವ ಕಾದಂಬರಿಯನ್ನು  ಪರಿಚಯಿಸುವ ಮೂಲಕ ಲೇ ಖಿಕಾ ಸಾಹಿತ್ಯ ವೇದಿಕೆಯ ‘ನನ್ನ ಮೆಚ್ಚಿನ ಪುಸ್ತಕ ಪರಿಚ ಯ’ಸರಣಿ ಕಾರ್ಯಕ್ರಮದ ಪರ್ವವನ್ನು ಶುರುಮಾಡಿದ ರು. ನಂತರ ಮಾಲತಿ ಮುದಕವಿ ಅವರು ಶಂಕರ ಮೊಕಾ ಶಿ ಪುಣೇಕರ ಅವರ ಗಂಗವ್ವ ಗಂಗಾಮಾಯಿ, ಶೈಲಜಾ ಸುರೇಶ್ ಅವರು  ಡಾ. ಎಸ್.ಎಲ್. ಭೈರಪ್ಪ ಅವರ ಗೃಹ ಭಂಗ, ಪ್ರಜ್ಞಾ ಮತ್ತಿಹಳ್ಳಿ ಅವರು ಜಯಂತ್ ಕಾಯ್ಕಿಣಿ ಅವರ ಚಾರ್‌ಮಿನರ್, ಡಿ.ಎನ್.ಗೀತಾ ಅವರು ಗಿರಿಮನೆ ಶ್ಯಾಮರಾವ್ ಅವರ ಒಂದು ಆನೆಯ ಸುತ್ತಾ, ವಿಜಯಾ ಗುರುರಾಜ್ ಅವರು ಭಾಗ್ಯಲಕ್ಷ್ಮೀ ಅವರ ತರಗು, ಸಹನಾ ಪ್ರಸಾದ್ ಅವರು ಬಿ.ಯು. ಗೀತಾ ಅವರ ಕೈಹಿಡಿದು ನಡೆಸೆನ್ನನು,  ಎ. ಎಸ್. ವಸುಂಧರಾ ಅವರು ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ, ಮಧುರಾ ಕರ್ಣಮ್ ಅವರು  ಶ್ರೀನಿವಾಸ ವೈದ್ಯ ಅವರ ಹಳ್ಳ ಬಂತು ಹಳ್ಳ,  ಕೃಷ್ಣಬಾಯಿ ಹಾಗಲವಾಡಿ ಅವರು ಕಮಲಾ ಹಂಪನಾ ಅವರ ಬಲಾಕ, ಡಿ. ಯಶೋದಾ ಅವರು ಬೇಬಿ ಹಾಲ್ದಾರ್ ಅವರ  ನೋವು ತುಂಬಿದ ಬದುಕು, ಸುಮಾ ವೀಣಾ ಅವರು ಡಿವಿಜಿ ಅವರ ಅಂತಃಪುರ ಗೀತೆಗಳು, ವಿಭಾ ಪುರೋಹಿತ್ ಅವರು ಕೆಎಸ್ ನರಸಿಂಹಸ್ವಾಮಿ ಅವರ ತೆರೆದ ಬಾಗಿಲು,  ಶಾಂತಲಾ ಸುರೇಶ್ ಅವರು ಸೋನು ಅವರ ಸಂಶಯದ ಬಲೆ, ಎಂ. ವಾಣಿ ಅವರು ಸುರೇಶ್ ಸೋಮಪುರ ಅವರ ಅಘೋರಿಗಳ ನಡುವೆ, ರತ್ನಾ ನಾಗರಾಜ್  ಅವರು ಮಾಣಿಕ್ ಬಂಡೋಪಾಧ್ಯಯ ಅವರ ಪ್ರಿಮಿವಾಲ್ ಮತ್ತು ಇತರ ಕತೆಗಳು, ಅರುಣಾ ಉದಯ ಭಾಸ್ಕರ್ ಅವರು ಗುರುರಾಜ ಕರ್ಜಗಿ ಅವರ ಕರುಣಾಳು ಬಾ ಬೆಳಕೆ,  ಶೈಲಜಾ ಪ್ರಸಾದ್ ಅವರು ನೇಮಿಚಂದ್ರ ಅವರ ಸಾವೇ ಬರುವುದಿದ್ದರೆ ನಾಳೆ ಬಾ,  ಲೇಖಿಕಾ ವೇದಿಕೆಯ ಹಿರಿಯ ಲೇಖಕಿ ಸತ್ಯವತಿ ರಾಮನಾ ಥ್ ಅವರು ಶ್ರೀ ಸಚ್ಚಿದಾನಂದ ಸರಸ್ವತಿ. ಸ್ವಾಮೀಜಿಯವರ  ಗೀತಾ ಶಾಸ್ತ್ರೋಪದೇಶ ಸೋಪಾನ ಪಂಕ್ತಿ, ಇಂದಿರಾ ಶರಣ್ ಜಮ್ಮಲದಿನ್ನಿ ಅವರು ವಿವೇಕ್ ಶಾನ್‌ಬಾಗ್ ಅವರ ಹುಲಿಸವಾರಿ,ಎಲ್.ಎಚ್.ಶಕುಂತಲಾ ಅವರು ಶಿವರಾಮ ಕಾರಂತರ ಅಳಿದ ಮೇಲೆ, ಸುಶೀಲಾ ಸೋಮಶೇಖರ್ ಅವರು ನರಹಳ್ಳಿ ಬಾಲಸುಬ್ರಹ್ಮಣ್ಯಂ ಅವರ ಕೆ.ಎಸ್. ನರಸಿಂಹಸ್ವಾಮಿ, ಪರಿಣಿತಾ ರವಿ ಅವರು ಎ.ಆರ್. ಮಣಿಕಾಂತ ಅವರ ಅಪ್ಪನೆಂಬ ಆಕಾಶ,ನಾಗರ ತ್ನಾ ಮೂರ್ತಿ ಅವರು ಶತಾವಧಾನಿ ಆರ್. ಗಣೇಶ್ ಅವರ ಧೂಮದೂತ,ವಿನುತಾ ಹಂಚಿನಮನೆ ಅವರು ನೇಮಿಚಂ ದ್ರ ಅವರ ಯಾದ್ ವ ಶೇಮ್,  ಸವಿತಾ ನಾಗೇಶ್ ಅವರು  ನುಗ್ಗೇಹಳ್ಳಿ ಪಂಕಜಾ ಅವರ ಮದುವೆ ಗೊತ್ತಾದಾಗ ಪುಸ್ತ ಕಗಳನ್ನು ಪರಿಚಯಿಸಿದರು. ಹಿರಿಯ ಲೇಖಕಿಯರ ಅವಲೋಕನ ಐದು ವಾರದ ಈ ಕಾರ್ಯಕ್ರಮದ ಬಗ್ಗೆ ಮತ್ತೊಂದು ವಾರ ಐದು ಹಿರಿಯ ಲೇಖಕಿಯರಾದ ಬಿ.ಯು. ಗೀತಾ, ವನಮಾಲ ಸಂಪನ್ನ ಕುಮಾರ್, ಕಾನ್ಸೆಪ್ಟಾ ಫರ್ನಾಂಡಿಸ್, ಆರ್. ಪೂರ್ಣಿಮಾ ಹಾಗೂ ಶೈಲಜಾ ಸುರೇಶ್ ಅವರು ಅವಲೋಕನ ಮಾಡಿ ದ್ದು ವಿಶೇಷ. ಇದರ ಜೊತೆಗೆ ಪ್ರತಿ ಶುಕ್ರವಾರ ಪುಸ್ತಕ ಪರಿ ಚಯವಾದ ಮೇಲೆ ಒಂದು ವಾರದ ಪುಸ್ತಕ ಪರಿಚಯ ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಯನ್ನು ಶೈಲಜಾ ಸು ರೇಶ್ ಅವರು ವ್ಯಕ್ತಪಡಿಸುತ್ತಿದ್ದರು. ಪುಸ್ತಕದ ಬಗ್ಗೆ ತಿಳಿಸುವಾಗ ಪುಸ್ತಕದ ಕತೆ ಹೇಳುವ ಅವ ಶ್ಯಕತೆ ಇಲ್ಲ, ಕೃತಿಕಾರರ ಶೈಲಿಯ ಬಗ್ಗೆ, ಕತೆಯನ್ನು ಬೆಳೆಸಿ ಕೊಂಡು ಹೋಗುವ ರೀತಿಯನ್ನು ಹೇಳಿದರೆ ಉತ್ತಮ ಎಂ ದು ಲೇಖಕಿ ಬಿ.ಯು. ಗೀತಾ ಅವರು ಸಲಹೆ ನೀಡಿದರು. ಓದು ನಾವು ಕಾಣದ ಪ್ರಪಂಚವನ್ನು ತೆರೆದಿಡುತ್ತದೆ ಹಾಗಾ ಗಿ ಹೆಚ್ಚು ಹೆಚ್ಚು  ಓದಬೇಕು ಎಂದೂ ಅವರು ಹೇಳಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ವನಮಾ ಲ ಸಂಪನ್ನಕುಮಾರ್ ಅವರು ಪುಸ್ತಕಗಳನ್ನು ಓದುವುದ ರಿಂದ ನಮ್ಮಲ್ಲಿ ಒಂದು ಗಟ್ಟಿತನ ಮೂಡುತ್ತದೆ. ಓದುವು ದರಿಂದ ಬರೆಯುವ ಹಂಬಲವೂ ಉಂಟಾಗುತ್ತದೆ ಎಂದ ರು. ಮಹಿಳಾ ವೇದಿಕೆಯಲ್ಲಿ ಮಹಿಳೆಯರ ಪುಸ್ತಕಗಳನ್ನೇ ಪರಿ ಚಯಿಸುವುದು ಸೂಕ್ತ ಎಂದು ಬೆಂಗಳೂರು ಆಕಾಶವಾಣಿ ಕೇಂದ್ರದ ಕಾನ್ಸೆಪ್ಟಾ ಫರ್ನಾಂಡಿಸ್ ಅವರು ಹೇಳಿದರು.  ಎಷ್ಟೋ ಸಂದರ್ಭಗಳಲ್ಲಿ ಮಹಿಳೆಯರ ಪುಸ್ತಕಗಳು ಪರಿಗಣನೆಗೇ ಬರುವುದಿಲ್ಲ, ಸಾಹಿತ್ಯ ಸಮ್ಮೇಳನಗಳಲ್ಲಿ ಕೆಲವರಿಗಷ್ಟೇ ಗೋಷ್ಟಿಗಳ ಅಧ್ಯಕ್ಷತೆ ಸಿಕ್ಕಿರುತ್ತದೆ. ಹಾಗಾಗಿ ನಮ್ಮದೇ ವೇದಿಕೆ ಇರುವಾಗ ನಾವು ನಮ್ಮದೇ ಪುಸ್ತಕಗಳನ್ನು ಪರಿಚಯಿಸುವ ಕೆಲಸ ಮಾಡಬಹುದು ಎಂದರು.ಒಂದು ಪುಸ್ತಕ ಓದಿದಾಗ ನಮಗೆ ಸಾಕಷ್ಟು ವಿಷಯ ತಿಳಿಯುತ್ತದೆ. ಆ ವಿಷಯಗಳನ್ನು ಬೇರೆಯ‌ವ ರೊಂದಿಗೆ ಹಂಚಿ ಕೊಂಡಾಗ ನಾವೂ ಕೂಡ ವಿಚಾರಗಳಲ್ಲಿ ಬೆಳೆಯುತ್ತವೆ, ಇನ್ನೊಬ್ಬರ ವಿಚಾರವೂ ತಿಳಿಯುತ್ತದೆ. ಇದು ಕೂಡ ಒಂದು ರೀತಿಯ ಓದು ಬರಹ ಎಂದು ಪುಸ್ತಕ ಪರಿಚಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದವರು ಆರ್. ಪೂರ್ಣಿಮಾ‘ನಾನು ಕೇವಲ ಓದು ಬರಹ ಮಾಡಿ ಕೊಂಡು ಇರುತ್ತೇನೆ’ ಎಂದು ಯಾವ ಲೇಖಕಿಯೂ ಹೇಳ ಲಿಕ್ಕಾಗುವುದಿಲ್ಲ. ಯಾವುದೇ ಪುಸ್ತಕದಲ್ಲಿದ್ದರೂ ಅದು ಹೇಳಬೇಕಾದ ಸಾಮಾಜಿಕ ಸಂದೇಶ ಇರುತ್ತದೆ. ಅದನ್ನು ಗುರುತಿಸಿ, ಚರ್ಚಿಸಬೇಕು. ವಿವಿಧ ಆಯಾಮಗಳನ್ನು ಗಮನಿಸುವಂತಹ ಚರ್ಚಾ ಕಾರ್ಯಕ್ರಮಗಳು ಲೇಖಿಕಾ ಸಾಹಿತ್ಯ ವೇದಿಕೆ ವತಿಯಿಂದ ನಡೆಯಲಿ ಎಂಬ ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಕೊನೆಯ ದಿನ ಶೈಲಜಾ ಸುರೇಶ್ ಇಡೀ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ನಾವು ಬೆಳೆಯು ವುದರ ಜೊತೆಗೆ ನಮ್ಮ ಜೊತೆ ಇನ್ನಷ್ಟು ಜನರನ್ನು ಬೆಳೆಸು ವ ಆಸೆಯೇ ಈ ಕಾರ್ಯಕ್ರಮಕ್ಕೆ ಕಾರಣ ಎಂದ ಅವರು,  ಅವಕಾಶಗಳನ್ನು ಯಾರೂ ಬಂಗಾರದ ಹರಿವಾಣದಲ್ಲಿಟ್ಟು ಕೊಡುವುದಿಲ್ಲ. ಮಹಿಳೆಯರಂತೂ ಒಂದೊಂದು ಅವಕಾ ಶವನ್ನು ಪಡೆದುಕೊಳ್ಳಲು ಹೋರಾಟ ಮಾಡಬೇಕು.ಹಾಗೆ ಯೇ ನಮ್ಮ ನಮ್ಮ ಅವಕಾಶಗಳನ್ನು ನಾವೇ ಸೃಷ್ಟಿ ಮಾಡಿ ಕೊಳ್ಳಬೇಕು ಎಂದರು.ಈ ಕಾರ್ಯಕ್ರಮದ ಆಧಾರದ ಮೇಲೆ ಬೆಂಗಳೂರು ಆಕಾಶವಾಣಿ ಸಹ ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮವನ್ನು ಪ್ರಸಾರ ಮಾಡಿರುವುದಾಗಿ ಅವರು ಹೇಳಿದರು. ಲೇಖಿಕಾ ವೇದಿಕೆಯ ಪುಸ್ತಕ ಪರಿಚಯ ಕಾರ್ಯಕ್ರಮದ ಜನಪ್ರಿಯತೆಯಿಂದ ಸಾಕಷ್ಟು ಲೇಖಕಿಯರು ಇದರ ಸದಸ್ಯತ್ವ ಪಡೆಯಲು ಬಯಸಿದರೆ. ಈ ವೇದಿಕೆಗೆ ಬರಲು ಸಾಕಷ್ಟು ಪುರುಷರು ಸಹ ಆಸಕ್ತಿ ತೋರಿಸಿದ್ದಾರೆ, ಆದರೆ ಇದು ಮಹಿಳೆಯರಿಗಾಗಿ ಮಾತ್ರ ಎಂಬುದನ್ನು ಶೈಲಜಾ ಅವರು ಸ್ಪಷ್ಟಪಡಿಸಿದ್ದಾರೆ.ಈ ಕಾರ್ಯಕ್ರಮದಲ್ಲಿ ಭಾಗವ ಹಿಸಿದ ಪ್ರತಿಯೊಬ್ಬ ಲೇಖಕಿಗೂ ಚಿಕ್ಕಮಗಳೂರಿನಎಂ.ಜೆ. ನಾಗಲಕ್ಷ್ಮಿ ಅವರು ಪ್ರಶಂಸನಾ ಪತ್ರವನ್ನು ಮಾಡಿ ಕೊಟ್ಟಿ ದ್ದಾರೆ. ಇದರ ವಿಶೇಷ ಎಂದರೆ ಪ್ರತಿಯೊಬ್ಬರ ಹೆಸರಿನ ಒಂದೊಂದು ಅಕ್ಷ ರಗಳಿಗೂ ಒಂದೊಂದು ವಾಕ್ಯದ ಅರ್ಥ ವನ್ನು ಬರೆದಿರುವುದು. ತಿಂಗಳಿಗೊಬ್ಬ ಲೇಖಕಿ ಲೇಖಿಕಾ ಸಾಹಿತ್ಯ ವೇದಿಕೆಯ ಒಂದೊಂದು ತಿಂಗಳು ಒಬ್ಬೊಬ್ಬ ಲೇಖಕಿಯನ್ನು ಪರಿಚ ಯಿಸುವ ನನ್ನ ಮೆಚ್ಚಿನ ಲೇಖಕಿ ಎಂಬ ಮತ್ತೊಂದು ಸರಣಿ ಕಾರ್ಯಕ್ರಮ ಈಗಾಗಲೇ ಶುರುವಾಗಿದ್ದು, ಈ ಮೂಲಕ ಆಗಸ್ಟ್ ತಿಂಗಳಲ್ಲಿ ಅನುಪಮಾ ನಿರಂಜನ,ಸೆಪ್ಟೆಂಬರ್‌ನಲ್ಲಿ ತ್ರಿವೇಣಿ, ಅಕ್ಟೋಬರ್‌ನಲ್ಲಿ ಎಂ.ಕೆ. ಇಂದಿರಾ, ನವೆಂಬರ್‌ ನಲ್ಲಿ ವಾಣಿ… ಹೀಗೆ ತಿಂಗಳಿಗೊಬ್ಬ ಲೇಖಕಿಯ ಬದುಕು- ಬರಹವನ್ನು ವಿವಿಧ ಲೇಖಕಿಯರಿಂದ ಪರಿಚಯಿಸಲಾಗು ವುದು. ವಾರಕ್ಕೊಂದು ಕತೆ ಶೈಲಜಾ ಸುರೇಶ್ ಜೊತೆ ಇದರ ಜೊತೆ ಗೆ ಶೈಲಜಾ ಸುರೇಶ್ ಅವರು  ವಾರಕ್ಕೊಂದು ಕತೆ ಶೈಲಜಾ ಸುರೇಶ್ ಜೊತೆ ಎಂಬ ಮತ್ತೊಂದು ಕಾರ್ಯಕ್ರಮವನ್ನೂ ನಡೆಸುತ್ತಿದ್ದಾರೆ. ಇದರಲ್ಲಿ ಈಗಾಗಲೇ ಸ್ನೇಹಲತಾ ದಿವಾ‌ ಕರ್, ರೂಪಾ ಜೋಷಿ ತಮ್ಮ ಕತೆಗಳನ್ನು ಓದಿದ್ದಾರೆ.ಆಸ ಕ್ತಿ ಇರುವವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹು ದು **********************************************. ಡಿ.ಯಶೋದಾ

ಏಕಾಂತದಿಂದ ಲೋಕಾಂತಕ್ಕೆ Read Post »

ಇತರೆ

ಆಕಾಶಯಾನವೂ ಆಧ್ಯಾತ್ಮಿಕ ಚಿಂತನೆಯೂ

ಲೇಖನ ಚಂದಕಚರ್ಲ ರಮೇಶ ಬಾಬು ತಲೆಬರಹ ನೋಡಿಯೇ ಇದೇನಪ್ಪ ಇವನು ಯಾವುದನ್ನ ಯಾವುದಕ್ಕೋ ಜೋಡಿಸ ತೊಡಗಿದ್ದಾನೆ ಎನ್ನುತ್ತೀರಾ ! ಕರ್ಮಸಿದ್ಧಾಂತಕ್ಕೂ ನಾವು ಕೈಗೊಳ್ಳುವ ವಿಮಾನಯಾನಕ್ಕೂ ಎಲ್ಲಿಯ ಸಾಪತ್ಯ ವೆನ್ನುತ್ತೀರಾ !. ಏನೋ ಹೇಳಲು ಹೋಗಿ ಏನೋ ಹೇಳ್ತಿದೀನಿ ಅಂತ ಅನ್ನಿಸ್ತಿದೆಯಾ ? ಅದೇನೂ ಅಲ್ಲ. ನಾನು ನಿಮಗೆ ಅನುಭವಗಳ ದೃಷ್ಟಾಂತಗಳನ್ನು ಕೊಡುತ್ತಾ ಹೋದಾಗ ನೀವೇ ಒಪ್ತೀರಾ ! ಆದ್ರೆ ಒಂದು. ಇದು ಹೊಂದೋದು ವಿದೇಶೀ ವಿಮಾನಯಾನಕ್ಕೆ ಮಾತ್ರ.  ಈಗ ನಾವು ಇದರ ಚರ್ಚೆಗೆ ಬರೋಣ. ನೀವು ನಮ್ಮ ದೇಶದ ಯಾವುದೋ ವಿಮಾನ ನಿಲ್ದಾಣದಿಂದ ವಿದೇಶೀಯಾನಕ್ಕೆ ತಯಾರಾಗಿದ್ದೀರಿ. ನಿಮ್ಮನ್ನ ಬೀಳ್ಕೊಡಲು ನಿಮ್ಮವರೆಲ್ಲಾ ಬಂದಿದ್ದಾರೆ. ನಿಮ್ಮನ್ನ ಅಪ್ಪಿಕೊಂಡು ಕನ್ನಡದಲ್ಲೋ ಇಂಗ್ಲೀಷಿನಲ್ಲೋ ಶುಭಯಾತ್ರೆ ಹೇಳುತ್ತಾರೆ. ನೀವು ಒಳಗಡೆಗೆ ಸಾಗುತ್ತೀರಿ ಕೈಬೀಸುತ್ತಾ. ಅವರು ಅಲ್ಲೇನಿಲ್ಲುತ್ತಾರೆ. ಕ್ರಮೇಣ ಅವರು ಕಣ್ಮರೆಯಾಗುತ್ತಾರೆ. ಅಲ್ಲಿಂದ ಮೊದಲಾಗುತ್ತದೆ ನಿಮ್ಮ ಕರ್ಮಕಾಂಡ. ಇಲ್ಲಿಂದ ಹಿಡಿದು ನೀವು ಅದ್ಯಾವುದೋ ದೇಶದ ವಿಮಾನ ನಿಲ್ದಾಣದಲ್ಲಿ ಇಳಿದು ಹೊರಬರುವ ವರೆಗೂ ನಿಮಗಾಗುವ ಅನುಭವ ನಿಮಗೊಂದು ಹೊಸ ಜನ್ಮ ತಾಳಿ ಬಂದಂತೆ ಎಂದು ನನ್ನ ಅನಿಸಿಕೆ. ಈ ಪ್ರಯಾಣದಲ್ಲಿ ನಿಮಗೆ ಸಿಗುವ ಅನುಭವಗಳು ನೀವು ಮಾಡಿದ ಪಾಪ ಪುಣ್ಯಗಳ ಮೇಲೆ ಅಂದರೇ ಕರ್ಮ ಸಿದ್ಧಾಂತದ ಮೇಲೆ ಅವಲಂಬಿಸಿರುತ್ತವೆ ಎಂದು ನನ್ನ ಭಾವನೆ. ಮುಂಚೆ ನಾವೆಲ್ಲಾ ವಿಮಾನಯಾತ್ರೆ ಮಾಡುತ್ತೇವೆಂದು ಎಣಿಸಿದವರಲ್ಲ. ನಮ್ಮ ಚಿಕ್ಕಂದಿನ ದಿನಗಳಲ್ಲಿ ( ನಾನೀಗ ೬೬ ವರ್ಷದವ ) ಮೇಲೆ ಹಾರುತ್ತಿದ್ದ ವಿಮಾನವನ್ನು ತಲೆ ಎತ್ತಿ  ನೋಡುತ್ತಾ ಕೈ ಬೀಸುವುದೊಂದೇ ನಮಗೆ ಗೊತ್ತಿತ್ತು. ನಾವು ಬೀಸುವ ಆ ಕೈ ಅಲ್ಲಿಯವರಿಗೆ ಕಾಣುವುದಿಲ್ಲ ಅಂತ ಸಹ ನಮಗೆ ಆಗ ತಿಳಿದಿರಲಿಲ್ಲ. ಕೆಲಸಕ್ಕೆ ಸೇರಿ ಪದವಿಗಳಲ್ಲಿ ಮೇಲೇರಿ ಒಂದು ಹಂತ ತಲುಪಿದಾಗ ಕಚೇರಿಯ ವತಿಯಿಂದ ವಿಮಾನಯಾನದ ಸವಲತ್ತು ದೊರೆಯಿತು. ಎಷ್ಟೋ ಸರ್ತಿ ನಾನಿರುವ ಹೈದರಾಬಾದಿನಿಂದ  ಬೆಂಗಳೂರು, ಚೆನ್ನೈ, ಮುಂಬೈ, ಕಲಕತ್ತಾ, ಭುವನೇಶ್ವರ್, ದಿಲ್ಲಿ ಮುಂತಾದ ಊರುಗಳಿಗೆ ವಿಮಾನಗಳಲ್ಲಿ ಹೋದದ್ದು ಇದೆ. ಅಲ್ಲೂ ಸಹ ಮೊದಲ ಸಲ ಪ್ರಯಾಣ ಮಾಡುವಾಗ ಕೆಲ ಅನುಭವಗಳಾಗಿದ್ದರೂ ಅವ್ಯಾವೂ ಮೆಲಕು ಹಾಕುವಂಥವುಗಳಾಗಿರಲಿಲ್ಲ. ಮತ್ತೂ ಈ ಥರದ ವೇದಂತ ಧೋರಣಿಯನ್ನು ಅವಲಂಬಿಸುವಷ್ಟು ತೀಕ್ಷ್ಣವಾಗಿರಲಿಲ್ಲ. ನನ್ನ ಮಗಳ ಮದುವೆ ಅಮೆರಿಕಾ ಹುಡುಗನೊಂದಿಗೆ ಆದಾಗ ಮಾತ್ರ ನಮ್ಮ ಅಮೆರಿಕಾ ಪ್ರವಾಸ ಕರಾರು ಆದಂತಿತ್ತು.  ಹೊರಡಬೇಕೆಂದು ನಿರ್ಧಾರವಾದಾಗ ವೀಸಾ ಅನುಮತಿ ಪಡೆಯಲು ಮಾಡಬೇಕಾದ ಪದ್ಧತಿಗಳ ಬಗ್ಗೆ ನನ್ನ ಮಗಳು ಮತ್ತು ಅಳಿಯ ತುಂಬಾ ಶ್ರದ್ಧೆ ವಹಿಸಿ ಅದಕ್ಕೆ ಬೇಕಾದ ಕ್ರಮದ ಬಗ್ಗೆ ನಮಗೆ ತಿಳಿಸಿ ಹೇಳಿದರು.  ನಮಗೆ ಆ ಪ್ರಶ್ನೋತ್ತರದ ತರಬೇತಿ ನೋಡಿಯೇ ಒಂಥರಾ ಕಳವಳ ಪ್ರಾರಂಭವಾಗಿತ್ತು. ಒಳ್ಳೆ ಪರೀಕ್ಷೆಗೆ ತಯಾರಿ ನಡೆಸಿದ ಹಾಗೆ ನಡೆದಿತ್ತು. ನಡುವಿನಲ್ಲಿ ನನ್ನ ಮಗಳ ಅಣಕು ಸಂದರ್ಶನ ಸಹ ನಡೆದಿತ್ತು.   ವೀಸಾ ಕಚೇರಿಯಲ್ಲಿ ನಡೆದ ಸಂದರ್ಶನದಲ್ಲಿ ಅಲ್ಲಲಿ ಸ್ವಲ್ಪ ತಡವರಿಸಿದರೂ ಮೊದಲನೇ ಸಂದರ್ಶನದಲ್ಲೇ ವೀಸಾ  ಪಡೆಯಲು ಯಶಸ್ವಿಯಾದೆವು. ಅಲ್ಲಿಂದ ಪ್ರಾರಂಭವಾಯಿತು ನಮ್ಮ ಪ್ರಯಾಣದ ಸಿದ್ದತೆ. ನಾವು ಕೊಂಡೊಯ್ಯಬೇಕಾದ ನಾಲ್ಕು ಪೆಟ್ಟಿಗೆಗಳ ಸರಿಯಾದ ಅಳತೆ, ಅವುಗಳ ಒಂದೊಂದರ ಭಾರ, ತೆಗೆದುಕೊಂಡು ಹೋಗಬೇಕಾದ ವಸ್ತುಗಳ ಪಟ್ಟಿ, ಮತ್ತೆ ಅಮೆರಿಕಾಗೆ ತರಬಾರದ ವಸ್ತುಗಳ ಬಗ್ಗೆ ನಮಗೆ ತಿಳಿಹೇಳುತ್ತಾ ಮಗಳು ಅಳಿಯ ನಮಗೆ  ಮನದಟ್ಟು ಮಾಡಿಸಿದರು. ನಾವು ಸಹ ಅಂತರ್ಜಾಲದಲ್ಲಿ ಹುಡುಕಿ, ನಿಷಿದ್ಧವಾದ ವಸ್ತುಗಳನ್ನ ಬಿಟ್ಟು ಉಳಿದದ್ದನ್ನೇ ಕಟ್ಟಿಕೊಂಡೆವು, ಅಥವಾ ಹಾಗೆ ಅಂದುಕೊಂಡೆವು. ಎರಡೆರಡು ಸರ್ತಿ ಸರಿ ನೋಡಿಕೊಂಡು ಸಿದ್ದರಾದೆವು. ಅವರ ಮಾರ್ಗದರ್ಶನದಲ್ಲಿ ಏನೂ ಸಮಸ್ಯೆ ಬರಲಿಕ್ಕಿಲ್ಲ ಎಂದು ಮುಂದುವರೆಸಿದೆವು. ನಾವು ಹೈದರಾಬಾದಿನಿಂದ ಹೊರಟು ದುಬೈನಲ್ಲಿ ವಿಮಾನ ಬದಲಿಸಬೇಕಿತ್ತು.  ಹೈದರಾಬಾದ್ ನಲ್ಲಿ ಮತ್ತೆ ದುಬೈನಲ್ಲಿ ಯಾವುದೇ ತರದ ಅಡಚಣೆಯಾಗಲಿಲ್ಲ. ದುಬೈನಲ್ಲಿ ನಮ್ಮ ಗೇಟ್ ಹುಡುಕಲು ತುಂಬಾ ತಡವಾಗಿ ಏನೂ ತಿನ್ನದೇ ವಿಮಾನದೊಳಗೆ ಹಸಗೊಂಡು ಕೂತು ಅವರು ಯಾವಾಗ ತಿನ್ನಲು ಕೊಡುತ್ತಾರೋ ಎಂದು ಕಾದದ್ದು ಬಿಟ್ಟರೇ ಮತ್ಯಾವ ತೊಂದರೆಯೂ ಆಗಿರಲಿಲ್ಲ. ಸಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿದು  ಅಲ್ಲಿಯ ವಲಸೆ ಬರುವವರನ್ನು ಪ್ರಶ್ನಿಸುವ ಕಿಡಿಕಿಯಲ್ಲಿ ಮತ್ತೆ ಸ್ವಲ್ಪ ತಡವರಸಿ ಉತ್ತರಕೊಟ್ಟು ಕಿಡಿಕಿಯ ಹಿಂದಿನ ಅಧಿಕಾರಿಯ ಕೊಂಕು ನಗೆಯನ್ನು ಸಹಿಸಿ  ನಮ್ಮ ನಾಲ್ಕು ಪೆಟ್ಟಿಗೆಗಳನ್ನ ಟ್ರಾಲಿ ಮೇಲೆ ಕಷ್ಟಪಟ್ಟು ಸೇರಿಸಿ ಅವರು ಹೋಗು ಎಂದ ಕಡೆಗೆ  ಹೊರಟೆವು. ಎಲ್ಲವೂ ಸಲೀಸಾಗಿ ಸಾಗುತ್ತಿದೆ ಎನಿಸಿತ್ತು. ಅದು ಬರೀ ಭ್ರಮೆ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ನಮ್ಮ ಪೆಟ್ಟಿಗೆಗಳು ಕ್ಷಕಿರಣದ ಪರೀಕ್ಷೆಗೆ ಒಳಪಡಬೇಕೆಂದು ಬರೆಯಲಾಗಿತ್ತು. ಮೊದಲನೆ ಸಲ ಅಮೆರಿಕಾಗೆ ಬಂದ ನಮ್ಮಂತ ಹಿರಿಯರ ಪೆಟ್ಟಿಗೆಗಳು ಕಡ್ಡಾಯವಾಗಿ ತಪಾಸನೆಗೊಳಗಾಗುತ್ತವೆ ಅಂತ ನಂತರ ನನ್ನ ಮಗಳು ಹೇಳಿದಳು. ಅಮೆರಿಕದವರಿಗೆ ಭಾರತೀಯರ ಕೌಟುಂಬಿಕ ಒಲವಿನ ಬಗ್ಗೆ ತುಂಬಾ ಗುಮಾನಿಯಂತೆ. ಅದರಲ್ಲೂ ಇಲ್ಲಿಯ ತಿಂಡಿಗಳನ್ನು ತಮ್ಮ ಮಕ್ಕಳ ಸಲುವಾಗಿ ತಂದೇ ತರುತ್ತಾರೆ ಅಂತ ಅವರಿಗೆ ಖಾತರಿಯಂತೆ. ಹಾಗಾಗಿ ತಪಾಸನಾ ಮಶೀನಿಗೆ ಪೆಟ್ಟಿಗೆಗಳನ್ನ ಕಷ್ಟದಿಂದ ಟ್ರಾಲಿಯಿಂದ ಹಾಕಿ ಈಚೆ ಬಂದು ನಿಂತೆವು. ಒಂದೊದೇ ಪೆಟ್ಟಿಗೆಯನ್ನ  ತೆಗೆಯಲು ಹೇಳಿ ಅವುಗಳಳೊಗಿನ ಪದಾರ್ಥಗಳನ್ನು ತಪಾಶಿಸುತ್ತಿದ್ದರು. ನಾವು ಇಲ್ಲಿಂದ ಹೊತ್ತ ಚಟ್ನಿಪುಡಿ, ಉಪ್ಪಿನಕಾಯಿ, ಹಪ್ಪಳ, ಸಿಹಿತಿಂಡಿ ಇವುಗಳೆಲ್ಲಾ ಅವರ ಪರೀಕ್ಷೆಗೆ ಒಳಗಾದವು. ನಮಗೆ ನಮ್ಮ ಮೇಲೆ ಭರವಸೆ. ಅಂಥದ್ದೇನೂ ತಂದಿಲ್ಲವಾದ್ದರಿಂದ ಬೇಗ ಮುಗಿಯಬಹುದೆಂದು. ಕೊನೆಯಲ್ಲಿ ಒಂದು ಪ್ಲಾಸ್ಟಿಕ್ ಚೀಲವನ್ನು ಹಿಡಿದು ಬೆಕ್ಕಿನ ಮರಿಯನ್ನು ಎತ್ತುವ ಹಾಗೆ ಎತ್ತಿ, ನಮಗೆ ತೋರಿಸುತ್ತಾ “ಇದೇನಿದು “ ಎಂದರು ಇಂಗ್ಲೀಷ್ ನಲ್ಲಿ. ಅವರ ಮುಖಚರ್ಯೆ ನೋಡಿದರೇ ನಮ್ಮ ಭಾರತದವರೇ ಎನಿಸಿತು. ನಮ್ಮವರೇ ಆದಕಾರಣ ಅವರನ್ನು ಸಮಜಾಯಿಸಬಹುದು ಎಂದುಕೊಳ್ಳುತ್ತಾ “ ಇದು ಬದರೀನಾರಾಯಣನ ಪ್ರಸಾದ ಮೇಡಮ್ “ ಎಂದೆವು. ಅವರು ಇನ್ನೇನು ನಮ್ಮ ಈ ಸಮಜಾಯಿಷಿಗೆ ಒಪ್ಪೇ ಬಿಡುತ್ತಾರೆ ಎನ್ನುವ ಭರವಸೆ ನಮ್ಮದು. ಆದರೇ ಹಾಗೆ ಆಗಲಿಲ್ಲ. ಅವರು ತಮ್ಮ ಮುಖಭಾವವನ್ನ ಒಂಚೂರೂ ಬದಲಿಸದೇ “ ಸೋ ಆದರೇನಂತೆ . ಇದರಲ್ಲಿರುವುದು ಅಕ್ಕಿ ಮತ್ತು ಕಡಲೇಬೇಳೆ ತಾನೇ ? ಇದು ಅಮೆರಿಕಾಕ್ಕೆ ತರಬಾರದು ಅಂತ ನಿಮಗೆ ಗೊತ್ತಿಲ್ವಾ ?  ಹೀಗೆ ತಂದವರಿಗೆ ಮುನ್ನೂರು ಡಾಲರ್ ಜುರ್ಮಾನೆ ಬೀಳುತ್ತೆ. ಗೊತ್ತಾ ? “ ಎಂದರು. ನಾನು ಸ್ವಲ್ಪ ಅಧಿಕ ಪ್ರಸಂಗತನ ಮಾಡುತ್ತಾ “ ಮ್ಯಾಡಮ್ ! ಬೀಜಗಳು ತರಬಾರದು ಅಂತ ಬರೆದಿದ್ದಾರೆ. ಇವುಗಳು ಬೀಜ ಅಲ್ಲವಲ್ಲ. ಇವುಗಳನ್ನ ಬಿತ್ತಿದರೇ ಮೊಳಕೆ ಬರುವುದಿಲ್ಲ “ ಎಂದೆ. ಅದಕ್ಕವರು ಕೂಲಾಗಿ “ ಇಲ್ಲಿಯ ಸರಕಾರದಲ್ಲಿ ಕೆಲಸ ಮಾಡುವವರು ನೀವೋ ನಾನೋ ? ಇಲ್ಲಿಗೆ ಯಾವುದು ತರಬೇಕು ಯಾವುದು ಬೇಡ ಅಂತ ನಾನು ನಿಮ್ಮಿಂದ ತಿಳಿಯಬೇಕಿಲ್ಲ. ದಿಸೀಜ್ ನಾಟ್ ಅಲೋಡ್ “ ಎನ್ನುತ್ತಾ ಆ ಚೀಲವನ್ನ ಕಸದ ಬುಟ್ಟಿಗೆ ಹಾಕಿದರು. ನನ್ನ ಹೆಂಡತಿ “ ಅಯ್ಯೋ” ಎಂದಳು . “ಪಾಪೀ” ಎನ್ನುವ ಕೂಗು ಅವಳ ಕೊರಳಲ್ಲೇ ಹೂತುಹೋಗಿತ್ತು..  ಅವಳ ಕೈ ಅಮುಕುತ್ತಾ ಅಲ್ಲಲ್ಲಿ ಹರಡಿದ ಉಳಿದ ಸಾಮಾನನ್ನು ಮತ್ತೆ ಪೆಟ್ಟಿಗೆಗಳೊಳಗೆ ಜೋಡಿಸಿ ನಾವು ಹೊರಬಂದೆವು. ನನ್ನ ಹೆಂಡತಿಯಂತೂ  ಪ್ರಸಾದ ಕಸದ ಬುಟ್ಟಿಗೆ ಬಿದ್ದ ಶಾಕಿನಿಂದ ಹೊರಬಂದಿರಲಿಲ್ಲ. ಹೊರಗೆ ಸಿಕ್ಕ ನನ್ನ ಮಗಳು ಮತ್ತು ಅಳಿಯಂದಿರೊಡನೆ “ ನಿಮ್ಮ ಅಮೆರಿಕಾ ಏನ್ ಚೆನ್ನಾಗಿಲ್ಲ. ಅವಳ್ಯಾರೋ ನಮ್ಮದೇಶದವಳೇ ಆದ್ರೂ ಪ್ರಸಾದ ಅಂತ ಹೇಳ್ತಿದ್ರೂ ಕಸದ ಬುಟ್ಟಿಗೆ ಹಾಕಿದ್ಲು. “ ಅಂತ ಹಾರಾಡಿದ್ಲು. ಈಗ ಹೇಳಿ. ಎಲ್ಲಾ ತರ ನಾವು ತರಬೇತಿ ಪಡೆದರೂ ಸಹ ನಮಗೀ ಅನುಭವ ಬೇಕಿತ್ತೇ ? ಅದಕ್ಕೇ ನಾನು ಹೇಳಿದ್ದು. ವಿಮಾನಾಶ್ರಯದ ಒಳಗೆ ಹೊಕ್ಕಾಗಿನಿಂದ ಮತ್ತೆ ಹೊರಗೆ ಬರುವವರೆಗೆನ  ಪ್ರಯಾಣ ನಮ್ಮ ಮಾನವ ಜನ್ಮದ ತರಾ. ಮನುಷ್ಯರಾಗಿ ನಾವು ಏನೆಲ್ಲಾ ಕಷ್ಟ ಸುಖ ಅನುಭವಿಸಿರುತ್ತೇವೋ ಇಲ್ಲಿ ಸಹ ಹಾಗೇನೇ. ಏನೇನು ಅನುಭವ ಕಾದಿರುತ್ತಾವೋ ಗೊತ್ತಾಗುವುದಿಲ್ಲ. ಒಟ್ಟಾರೆ ನಮ್ಮಪುಣ್ಯ. ಅಥವಾ ಪಾಪ  ಅಂತಿಟ್ಕೊಳ್ಳಿ. ಒಂದು ಅನುಭವಕ್ಕೇ ನಾನಿಷ್ಟು ವೇದಾಂತಿಯಾಗಬೇಕಾಗಿಲ್ಲ ಅಂತ ನೀವನ್ನಬಹುದು. ಮುಂದೆ ಕೇಳಿ. ನಾವುಗಳು ಬಂದಮೇಲೆ ನಮ್ಮ ಬೀಗರು ಅಮೆರಿಕಾಕ್ಕೆ ಹೊರಟರು. ನಮ್ಮ ಅನುಭವವನ್ನೆಲ್ಲಾ ಅವರಿಗೆ ತಿಳಿಸಿ, ಅವರಿಗೆ ಟ್ರೈನಿಂಗ್ ಕೊಟ್ಟೆವು. ಅವರು ಇಂಥ ಅನುಭವಕ್ಕೆ ತಯಾರಾಗಿ ಹೋದರು. ಅವರಿಗಾದ ಅನುಭವವೇ ಬೇರೇ. ನಮಗೆ ಮೊಮ್ಮಗಳು ಹುಟ್ಟಿದ್ದರಿಂದ ಅವರು ಮಗುವಿಗೆ ಬೆಳ್ಳಿ ಗೆಜ್ಜೆ, ಕಾಲ್ಗಡಗ, ಉಡಿದಾರ, ಹಾಲುಡಿಗೆ, ಚಂದನದ ಬಟ್ಟಲು ಮೊದಲಾದವುಗಳನ್ನೆಲ್ಲಾ ಹೊತ್ತು ಸಾಗಿದ್ದರು. ನಮ್ಮ ತಪಾಸಣೆಯಲ್ಲಿ ಬಂಗಾರದ ಒಡವೆ ಮತ್ತು ಬೆಳ್ಳಿ ವಸ್ತುಗಳ ಮೇಲೆ ಅವರ ನಿಶಿತ ದೃಷ್ಟಿ ಬಿದ್ದಿರಲಿಲ್ಲ. ಆದರೇ ನಮ್ಮ ಬೀಗರ ಅನುಭವ ಬೇರೇ ಆಗಿತ್ತು. ಅಷ್ಟು ಬೆಳ್ಳಿ ಸಾಮಾನುಗಳನ್ನ ನೋಡಿ “ ನೀವು ಇಷ್ಟು ಸಾಮಾನು ಯಾತಕ್ಕೆ ತಂದಿದೀರಾ ? ಮಾರಾಟಕ್ಕಾ ? “ ಅಂತ ಕೇಳಿದರಂತೆ. ಇವರು ಕಂಗಾಲಾಗಿ ಇಲ್ಲ ಅಂತ ಎಷ್ಟು ಹೇಳಿದರೂ ಕೇಳದೇ ಅವರು ಹೇಳಿಕೆ ಪತ್ರದಲ್ಲಿ ಬರೆದುಕೊಟ್ಟಹಾಗೆ ಅವುಗಳ ತೂಕ ಸರಿಯಾಗಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಿದರಂತೆ. ಇದೆಲ್ಲಾ ಆಗಿ ಮುಗಿಯುವಾಗ ಒಂದು ಗಂಟೆ ತಡ. ಎಲ್ಲ ಸೂಟ್ ಕೇಸುಗಳು ಬಾಯಿತೆಗೆದು, ತಮ್ಮ ಮುಂದೆ. ಇಳಿಯುತ್ತಿದ್ದ ಬೆವರು. ಸುಸ್ತಾಗಿ ಹೋದೆವು ಅಂತ ನಮಗೆ ಹೇಳಿದರು. ಈಗ ಹೇಳಿ. ಯಾರ ಯಾರ ಅನುಭವ ಅವರದು. ಯಾರ ಯಾರ ಅನಾನುಕೂಲ ಅವರದು. ಅಲ್ಲವೇ ? ಜೀವನ ಸಹ ಅದೇ ರೀತಿ ಅಲ್ಲವೇ ? ಅವರವರ ಕಷ್ಟ ಸುಖ ಅವರವರು ಮಾಡಿದ ಪುಣ್ಯ ಪಾಪಗಳ ಮೇಲೆ ಆಧಾರಪಟ್ಟಿರುತ್ತೆ. ಅಂದರೇ ಅದೇ ಕರ್ಮ ಸಿದ್ಧಾಂತ. ಸರಿ. ಇವುಗಳಿಗೆ ಪುಷ್ಟಿಕೊಡುವ ಅನುಭವ ಮತ್ತೊಂದು ನನ್ನ ಮಗಳು ಹೇಳಿದ್ದು. ಅದೂ ತಿಳಿಸಿಬಿಡುತ್ತೇನೆ ನಿಮಗೆ. ಅವರ ಸ್ನೇಹಿತೆಯ ತಾಯಿ ಒಬ್ಬರೇ ಬಂದಿಳಿದರಂತೆ ಅಮೆರಿಕಾಗೆ. ಅವರ ಸಾಮಾನನ್ನು ತಪಾಸಿಸುವಾಗ ಆರು ಸುಲಿದ ತೆಂಗಿನಕಾಯಿ ಕಂಡುಬಂದವಂತೆ. ಅವುಗಳನ್ನು ಅವರು ಅಮೆರಿಕದೊಳಗೆ ಬಿಡಲೊಪ್ಪಲಿಲ್ಲವಂತೆ. ಅವರ ವಾದ ಅವುಗಳು ಕೊಳೆಯುವ ಪದಾರ್ಥಗಳು ನಾಟ್ ಅಲೋಡ್ ಎಂದು. ಇವರ ವಾದ ಒಂದೇ ಒಡೆದರೇ ಮಾತ್ರ ಅವುಗಳು ಹಾಳಾಗುತ್ತವೆ. ಅವುಗಳು ಇಡೀಯಾಗಿವೆಯಲ್ಲ. ಅವುಗಳು ಪೆರಿಷಬಲ್ ಅಲ್ಲ ಅಂತ. ಮತ್ತೆ ಅವರ ರಾಮಬಾಣ ವಾದ ಅದೇ “ನಿಮಗ್ಗೊತ್ತಾ ನನಗ್ಗೊತ್ತಾ”  ಅಂತ ಹೇಳಿ ಅವುಗಳನ್ನ ತಮ್ಮ ಪಕ್ಕದಲ್ಲಿದ್ದ ಕ.ಬು.ಗೆ ಹಾಕಿದರಂತೆ. ನಮ್ಮ ಆ ಹಿರಿಯ ಹೆಂಗಸಿನ ವಾದ ಸರಿಯೆನಿಸಿದರೂ ಅವರಿಗೆ ನ್ಯಾಯ ಸಿಕ್ಕಲಿಲ್ಲ. ಜೀವನದಲ್ಲೂ ಹಾಗೇ ಅಲ್ಲವೇ ? ನೀವು ಎಷ್ಟೇ ನಿಯತ್ತಿನಿಂದ ಇದ್ದರೂ ನಿಮಗೆ ಕಷ್ಟ ತಪ್ಪಲ್ಲ. ಆದಕಾರಣ ನಾನು ಹೇಳುವುದು ಎರಡು ವಿಮಾನಾಶ್ರಯಗಳ ನಡುವಿನ ಆ ಪ್ರಯಾಣ ಯಾವ ಜೀವನದ ಪ್ರಯಾಣಕ್ಕಿಂತ ಕಮ್ಮಿ ಏನಲ್ಲ ಅಂತ.                                                 ******************************

ಆಕಾಶಯಾನವೂ ಆಧ್ಯಾತ್ಮಿಕ ಚಿಂತನೆಯೂ Read Post »

ಇತರೆ

ಕಸಾಪಕ್ಕೆ ಮಹಿಳೆ ಅಧ್ಯಕ್ಷರಾಗಬೇಕು

12ನೇ ಶತಮಾನದಿಂದ ಇಲ್ಲಿಯವರೆಗೂ ಮಹಿಳೆಯರಾದ ನಾವು ಪ್ರತಿಯೊಂದು ವಿಷಯದಲ್ಲೂ ಪ್ರತಿಭಟನೆಯ ಮಾಡಿಯೇ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುತ್ತಾ ಬಂದಿದ್ದೇವೆ. ಸಮಾನತೆಯೆಂದು ಎಷ್ಟೇ ಬೊಬ್ಬೆ ಹೊಡೆದರು ಅದರ ಸಂಪೂರ್ಣ ಫಲ ದೊರೆಯುತ್ತಿಲ್ಲ .ಹಾಗಾಗಿ ಮಹಿಳೆಯರು ಒಂದು ಹೆಜ್ಜೆ ಮುಂದೆ ಇಡಬೇಕು .ಇಲ್ಲವೆಂದರೆ ನಮ್ಮನ್ನು ನಾವೇ ಅಂತರ್ಯದಲ್ಲಿ ಅಂಜಿಕೆ ಎಂಬ ಶೋಷಣೆ ಮಾಡಿಕೊಂಡಂತಾಗುತ್ತದೆ . ಡಾಕ್ಟರ್ ಗುರುರಾಜ ಕರ್ಜಗಿ ಅವರು ಹೇಳುವಂತೆ ಚಕ್ರವರ್ತಿ ಆಗಬೇಕೆಂದರೆ ಯಾವುದೇ ಅದೃಷ್ಟದ ಗೆರೆಗಳು ಬೇಕಾಗಿಲ್ಲ .ಆತ್ಮಸ್ಥೈರ್ಯವಿದ್ದರೆ ಸಾಕು . ಆ ಬಲದಿಂದಲೇ ಏನನ್ನು ನಾವು ಗೆಲ್ಲಬಹುದು. ಸಾಮಾಜಿಕವಾಗಿ ,ರಾಜಕೀಯವಾಗಿ ,ಆರ್ಥಿಕವಾಗಿ, ಕೌಟುಂಬಿಕವಾಗಿ ಮಹಿಳೆಯು ಒಂದಲ್ಲ ಒಂದು ರೀತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸೈ ಎನಿಸಿಕೊಂಡಿದ್ದಾಳೆ . ಸಾಧನೆ ಮಾಡಿದ ಮಹಿಳೆಯರನ್ನೆಲ್ಲ ಒಮ್ಮೆ ಹಿಂದಿರುಗಿ ನೋಡಿದರೆ ನಮಗೆ ಸಾಲು ಸಾಲುಗಳ ಪಟ್ಟಿಯೇ ಸಿಗುತ್ತದೆ. ಸಮಾಜ ಸೇವೆ ಎಂದ ತಕ್ಷಣ ನೆನಪಿಗೆ ಬರುವುದು ಮದರ ತೆರೇಸಾ . ಬಡವರ, ದಲಿತರ ,ಅನಾರೋಗ್ಯ ಮಕ್ಕಳ ಸೇವೆ ಮಾಡುತ್ತಾ ವಿಶ್ವದಲ್ಲೇ ಗುರುತಿಸಿಕೊಂಡವರು. ಹಾಗೆ ಮೊದಲ ಮಹಿಳಾ ಪ್ರಭಾವಿ ರಾಜಕಾರಣಿ ,ಪ್ರಧಾನಮಂತ್ರಿಯಾಗಿ ಹೊರಹೊಮ್ಮಿದ ಇಂದಿರಾಗಾಂಧಿಯವರು , ಮೊದಲ ಬಾರಿಗೆ ಐಪಿಎಸ್ ಅಧಿಕಾರಿಯಾಗಿ ಎಲ್ಲಾ ಮಹಿಳೆಯವರಿಗೂ ಸ್ಫೂರ್ತಿದಾಯಕರಾದ ಕಿರಣ ಬೇಡಿಯವರು, ಈ ಸಂದರ್ಭದಲ್ಲಿ ನಾವು ನೆನೆಯಬಹುದು. ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಮೊದಲ ಮಹಿಳಾ ಭೂ ಸೇನಾ ಅಧಿಕಾರಿ ಮೇ ಪ್ರಿಯಾ ಝಿಂಗಲ್ ,ಮಹಿಳಾ ನ್ಯಾಯಾಧೀಶರು ಫಾತಿಮಾ ಬೀವಿ ಹೀಗೆ ಮಹಿಳೆಯರ ಕೊಡುಗೆ ಅಳತೆ ಮಾಡಲು ಸಾಧ್ಯವಿಲ್ಲ. ಹಿಂದಿನ ಕಾಲ ಘಟ್ಟವನ್ನು ಪರಿಗಣಿಸಿದರೆ ಕೆಳದಿ ಚೆನ್ನಮ್ಮ ,ರಾಣಿ ಚೆನ್ನಮ್ಮ, ಲಕ್ಷ್ಮೀಬಾಯಿ ರಾಜ್ಯ ,ದೇಶವೆಂದು ಹೋರಾಟ ನಡೆಸಿದ ಛಲಗಾರ್ತಿಯರು. ಇವರೆಲ್ಲ ತಮ್ಮನ್ನು ತಾವೇ ಜನಸೇವೆಗೆ ಒಪ್ಪಿಸಿಕೊಂಡು ಮುಂದಿನ ಪೀಳಿಗೆಗೆ ಮಾದರಿಯಾದವರು . ಮಹಿಳೆಯರ ಸಾಧನೆ ಹೀಗಿರಲು ನೂರು ವರ್ಷಗಳು ಕಳೆದರೂ ಒಂದು ಮಹಿಳೆಯು ಕಸಾಪಕ್ಕೆ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಲಿಲ್ಲ ಎನ್ನುವುದೇ ವಿಪರ್ಯಾಸ . ವಚನಕಾರ್ತಿಯರು ವಚನಗಳ ಮೂಲಕ ತಮ್ಮ ಸೇವೆಯನ್ನು ಅಕ್ಷರ ಲೋಕಕ್ಕೆ ನೀಡುತ್ತಾ ಬಂದಿದ್ದಾರೆ . ಅವುರುಗಳಲ್ಲಿ ಅಕ್ಕಮ್ಮ ,ಅಕ್ಕಮಹಾದೇವಿ, ಗಂಗಮ್ಮ, ಲಕ್ಷ್ಮಮ್ಮರನ್ನು ನೋಡಬಹುದು. ಇಂದು ಗೀತಾ ನಾಗಭೂಷಣ್, ಡಾಕ್ಟರ್ ಅನುಪಮ ನಿರಂಜನ, ಎಂ.ಕೆ ಇಂದಿರಾ, ತ್ರಿವೇಣಿ , ವೈದೇಹಿ ಡಾಕ್ಟರ್ ಅನುಪಮಾ ಇವರೆಲ್ಲ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾದ್ದದು.ಏನೇ ಇರಲಿ ಯಾವುದೇ ಲಿಂಗ, ಮತ , ಜಾತಿ , ಧರ್ಮ, ಇನ್ನಿತರ ಪಂಗಡಕ್ಕೆ ಜೋತು ಬೀಳದೆ ಸಶಕ್ತವೆನಿಸಿದ ಮಹಿಳೆಯೊಬ್ಬಳು ಕಸಾಪಕ್ಕೆ ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಬೇಕೆಂದು ನಾವೆಲ್ಲ ಒಂದೇ ಮನಸ್ಸಿನಿಂದ ಪಣತೊಡಬೇಕು. ************************ ಎಂ.ಜಿ.ತಿಲೋತ್ತಮೆ

ಕಸಾಪಕ್ಕೆ ಮಹಿಳೆ ಅಧ್ಯಕ್ಷರಾಗಬೇಕು Read Post »

You cannot copy content of this page

Scroll to Top