ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕಲ್ಯಾಣ ಕರ್ನಾಟಕವೆಂಬ ಬಹುತ್ವದ ಮಹಾ ಬಯಲಲಿ

ಲೇಖನ ಕಲ್ಯಾಣ ಕರ್ನಾಟಕವೆಂಬ ಬಹುತ್ವದ ಮಹಾ ಬಯಲಲಿ ನಿಂತು ಮಲ್ಲಿಕಾರ್ಜುನ ಕಡಕೋಳ  ಕಳೆದವರ್ಷದವರೆಗೆ ಹೈದ್ರಾಬಾದ್ ಕರ್ನಾಟಕವೆಂದು ಕರೆಯಲಾಗುತ್ತಿದ್ದ  ಕಲಬುರಗಿ ನಾಡನ್ನು ೧೭.೦೯.೨೦೧೯ ರಂದು ಮುಖ್ಯಮಂತ್ರಿ ಯಡಿಯೂರಪ್ಪ  “ಕಲ್ಯಾಣ ಕರ್ನಾಟಕ” ಎಂದು ನಾಮಕರಣ ಮಾಡಿದರು. ಆ ಮೂಲಕ  ಹೈದ್ರಾಬಾದ್ ಕರ್ನಾಟಕ ಕನ್ನಡನಾಡ ಪ್ರಜ್ಞೆಗೆ ಹೊಸವಿನ್ಯಾಸದ ತಾಜಾ ತಾಜಾ ಖುಷಿ ದೊರಕಿದಂತಾಗಿದೆ. ಇದು ಸಾಂಸ್ಕೃತಿಕವಾಗಿ ವಿನೂತನ ಉಮೇದು. ಅಂದು ಕಳಚೂರಿ ಬಿಜ್ಜಳನ ಕಲ್ಯಾಣ ರಾಜ್ಯದ ಮಂತ್ರಿಯಾಗಿದ್ದ ಬಸವಣ್ಣ, ಪ್ರಭುತ್ವದ ಎಲ್ಲೆಮೀರಿ ವಚನಗಳ ಮೂಲಕ ಜನಚಳವಳಿ ರೂಪಿಸಿದ್ದು ಜನಕಲ್ಯಾಣದ ಕಳಕಳಿಯ ದ್ಯೋತಕ. ಜನರಿಗೆ ಮತ್ತೆ ಅಂದಿನ ಕಲ್ಯಾಣದ  ಕನಸುಗಳನ್ನು ಇಂದು ಕಾಣುವ ತವಕ. ೧೫.೦೮.೧೯೪೭ ರಂದು ಇಡೀ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಕನ್ನಡ ನೆಲದ ಅಂದಿನ ಕಲಬುರ್ಗಿ, ಬೀದರ, ರಾಯಚೂರು ಈ ಮೂರು ಜಿಲ್ಲೆಗಳು, ಮರಾಠಿಯ ಐದು, ತೆಲಂಗಾಣದ ಎಂಟು ಜಿಲ್ಲೆಗಳು ಅಂದಿನ ಮುಸ್ಲಿಂ ದೊರೆ ಮೀರ್ ಉಸ್ಮಾನ್ ಅಲಿಖಾನ್ ಬಹದ್ದೂರ್  (ಇದು ನಿಜಾಮನ ಪೂರ್ಣ ಹೆಸರು)  ಆಡಳಿತದಲ್ಲೇ ಇದ್ದವು. ಹತ್ತು ಹಲವು ಹೋರಾಟಗಳ ಫಲವಾಗಿ ೧೭.೦೯.೧೯೪೮ ರಂದು ಭಾರತದ ಒಕ್ಕೂಟಕ್ಕೆ ಇವು ಸೇರಿದವು. ಒಂದಲ್ಲ, ಎರಡಲ್ಲ ಅಜಮಾಸು ಆರುನೂರು ವರ್ಷಗಳ ಸುದೀರ್ಘ ಕಾಲದ ದೇಶಿಯ ಪರಕೀಯತೆಯಲ್ಲಿದ್ದುದು ಹೈದ್ರಾಬಾದ ಕರ್ನಾಟಕ. ಸಹಜವಾಗಿ ಉರ್ದು, ದಖನಿ, ಮೋಡಿ, ಮರಾಠಿ, ತೆಲುಗು, ಕನ್ನಡಗಳ ಬಹುಭಾಷಾ ಸೌಹಾರ್ದತೆ, ಸಾಮಾಜಿಕ ಸೌಂದರ್ಯ ಸಂಸ್ಕೃತಿಯ ಚಾರಿತ್ರಿಕ ನೆಲ ಇದು. ಇವತ್ತಿಗೂ ದಖನಿ ಛಾಯೆಯ ಉರ್ದು, ಮರಾಠಿ ಮೋಡಿಯ ಹಿಂದಿ ಭಾಷಾ ಸಂಸ್ಕೃತಿಗಳು  ಇಲ್ಲಿನ ಕನ್ನಡದ ಬದುಕಿನ ತುಂಬೆಲ್ಲ ಹಾಸು ಹೊಕ್ಕಾಗಿವೆ.  ಘಮ ಘಮಿಸುವ ಸೂಜಿಮಲ್ಲಿಗೆಯ ಹೂವರಳಿದಂತಹ ಖಮ್ಮನೆಯ ಉರ್ದು ಮಾತಾಡುವ ಮುಸ್ಲಿಮೇತರ ಅನೇಕರು ಇಲ್ಲಿರುವುದು ಸರ್ವೇಸಾಮಾನ್ಯ. ಅದೇ ನಮ್ಮ ಬೀದರ ಕನ್ನಡದ ರಾಗಮಾಧುರ್ಯವೇ ತುಸು ಭಿನ್ನ. ಅದನ್ನವರು ಎನ್ಕಿ, ತ್ವಾಡೇ ಫರಕ್ ಅಂದಾರು… ” ಯಾನ ಮಾಡ್ಲತ್ತರಿ… ಹೊಂಟೀರಿ… ನೀ ಹೋರಿ… ನಾ.. ಬರ್ತಾ…”  ಹೀಗೆ ಅದರ ದೇಸಿಯತೆಯ ಜೀವಧ್ವನಿ. ಕಲಬುರ್ಗಿಯದು ಹಾಂಗಲ್ಲ… ಯವ್ವಾ, ಯಪ್ಪಾ, ಯಣ್ಣಾ, ಯಕ್ಕಾ ಎನ್ನುವ ಮೊಗಲಾಯಿಯ ಜವಾರಿ ಬನಿ.  ನಿಜಾಮನ ಕಾಲದಲ್ಲಿ ಭಾಳ ಸಂಖ್ಯೆಯ ಸೂಫಿ – ಸಂತರು, ತತ್ವಪದಗಳ ಅನುಭಾವಿಗಳು ಮೈ ಮನಸು ಬಿಚ್ಚಿ ಕನ್ನಡದಲ್ಲಿ ಮಹಾಕಾವ್ಯಗಳನ್ನೇ ರಚಿಸಿದ್ದಾರೆ. ಹಾಗೆಂದು  ಆಳರಸ ನಿಜಾಮ ಇವರಿಗೆ ಪ್ರೇರಕ, ಪ್ರೋತ್ಸಾಹಕನೇನು ಆಗಿರಲಿಲ್ಲ.‌ ಆದರೆ  ಸೂಫಿ, ಅವಧೂತ, ಆರೂಢ ಕವಿಗಳಿಗೆ ಯಾವುದೇ ಘೋಷಿತ ಇಲ್ಲವೇ ಅಘೋಷಿತ ನಿರ್ಬಂಧಗಳನ್ನು ಆತ ವಿಧಿಸಿರಲಿಲ್ಲ ಎಂಬುದು ಮುಖ್ಯ. ಜಂಗಮನಾಗಬೇಕಾದರೆ / ಮನಲಿಂಗ ಮಾಡಿಕೊಂಡಿರಬೇಕು// ಅಂತ ಚನ್ನೂರ ಜಲಾಲ ಸಾಹೇಬ ಹಾಡಿದರೆ ಫಕೀರನಾಗಬೇಕಾದರೆ/ ಮನಃ ಧಿಕ್ಕಾರ ಮಾಡಿಕೊಂಡಿರಬೇಕು// ಇದು ಕಡಕೋಳ ಮಡಿವಾಳಪ್ಪನವರು ಜಲಾಲ ಸಾಹೇಬರಿಗೆ ಕೊಡುವ ಉತ್ತರ. ಹೀಗೆ ಇಬ್ಬರದು ಬೇರೆ ಬೇರೆ ಮತ ಧರ್ಮಗಳ ಒಂದೇ ಗುರುಮಾರ್ಗ ಪಂಥದ ಸೌಹಾರ್ದಯುತ, ಸಾಂಸ್ಕೃತಿಕ ಸಂವಾದದ ಸಣ್ಣದೊಂದು ಝಲಕ್. ಇಂಥ ನೂರಾರು ನಿದರ್ಶನಗಳು ಇಲ್ಲಿವೆ.  ಸಬ್  ಕಹತೆ ಹೈ ಈಶ್ವರ ಅಲ್ಲಾ ಅಲ್ಲಾ/ ಇದರ ಒಳಮರ್ಮ ಯಾರಿಗೂ ತಿಳಿದಿಲ್ಲಾ// ಹೀಗೆ ಉರ್ದು ಕನ್ನಡ ಮಿಶ್ರಿತ ಸಂಕರ ಪ್ರಜ್ಞೆಯಿಂದ ರೂಪುಗೊಂಡ ಅನೇಕ ತತ್ವಪದಗಳ ಭಾವ ಮತ್ತು ಭಾಷೆಯಲ್ಲಿ ಸಹೃದಯ ಸಮನ್ವಯತೆ ಸಾಧಿಸಿರುವುದನ್ನು ಗುರುತಿಸಬಹುದು . ಕಸವರಮೆಂಬುದು ನೆರೆ ಸೈರಿಸಲಾರ್ಪೊಡೆ ಪರ ಧರ್ಮಮುಮಂ/ ಪರ ವಿಚಾರಮುಮಂ// ಒಂದೂವರೆ ಸಾವಿರ ವರ್ಷಗಳ ಹಿಂದೆಯೇ ಕವಿರಾಜಮಾರ್ಗಕಾರನು ಹೇಳಿದ ಪರರ ಧರ್ಮ ಮತ್ತು ಪರರ ವಿಚಾರಗಳನ್ನು ಗೌರವಿಸುವುದೇ, ಮನುಷ್ಯ ಪ್ರೀತಿಯ ನಿಜದ ನೆಲೆಯ ಸಂಪತ್ತು. ನೃಪತುಂಗ ನೆಲದ ಇಂತಹ ಬೀಜದಮಾತುಗಳು ಇಡೀ ದೇಶಕ್ಕೇ ಇವತ್ತು ಹೆಚ್ಚು ಹೆಚ್ಚು ಅನ್ವಯಿಸಿ ಅನುಷ್ಠಾನಕ್ಕೆ ಬರಬೇಕಾಗಿದೆ. ಆಗ ಅದನ್ನು ದುರಿತ ನಿವಾರಕ ಕಾಲವೆಂದು ಕರೆಯಬಹುದು. ಬುದ್ಧಧರ್ಮದ ‘ಸಾರ’ ಸಾರುವ ಅಶೋಕ ಚಕ್ರವರ್ತಿಯ ‘ದೇವನಾಂಪ್ರಿಯ’ ಕುರುಹು ದೊರಕಿದ ಸನ್ನತಿ, ಘಟಿಕಾಲಯಗಳ ನಾಗಾವಿ, ಬಸವ ಅಲ್ಲಮರ ವಚನ ಚಳವಳಿಯ ಶಕ್ತಿಕೇಂದ್ರ,  ಸಂತ ಕಥನದ ಗೇಸುದರಾಜ್ ಬಂದೇನವಾಜ್, ಗಾಣಗಾಪುರದ ದತ್ತಾವಧೂತ,  ಮಹಾದಾಸೋಹಿ ಶರಣಬಸವೇಶ್ವರ,  ತತ್ವಪದಗಳ ಹರಿಕಾರ ಕಡಕೋಳ ಮಡಿವಾಳಪ್ಪ ಮತ್ತು ಅವರ ಅನೇಕ ಮಂದಿ ತತ್ವಪದಕಾರ ಶಿಸುಮಕ್ಕಳು, ಊರೂರಿಗೂ ದೊರಕುವರು.   ಇಂತಹ ನೂರಾರು ಮಂದಿ ಹಿಂದೂ ಮುಸ್ಲಿಂ ಸೂಫಿ ಸಂತರು ಬಾಳಿ ಬದುಕಿದ ಕಲ್ಯಾಣ ಕರ್ನಾಟಕವು ಕನ್ನಡ ಸಂಸ್ಕೃತಿ ಮತ್ತು  ಸೌಹಾರ್ದತೆಯ ಸಾಕ್ಷಿಪ್ರಜ್ಞೆಯೇ ಆಗಿದೆ. ಇವತ್ತಿಗೂ ಸಾವಳಗಿಯ ಶಿವಲಿಂಗೇಶ್ವರ ಜಾತ್ರೆಯಲ್ಲಿ ಗದ್ದುಗೆಗೆ ಮುಸ್ಲಿಂ ಧರ್ಮದ ಹಸಿರು ಗಲ್ಲೀಫದ ಗೌರವ ಸಲ್ಲುತ್ತದೆ. ಅಲ್ಲಿನ ಸ್ವಾಮೀಜಿಯವರು ಸುತ್ತುವ ರುಮಾಲು ಹಸಿರು. ಲಾಂಛನಕ್ಕೆ ಶರಣೆಂಬೆನೆಂಬ ಅಂತಃಕರಣದ ಅನುಭಾವ ಪರಂಪರೆ ಅದು. ಇಂದಿಗೂ ಕಲಬುರ್ಗಿಯ ಬಂದೇನವಾಜ ಉರುಸಿನಲ್ಲಿ, ನಿತ್ಯದ ದರ್ಗಾದ  ದರುಶನದಲ್ಲಿ ಸಹಸ್ರ ಸಹಸ್ರ ಸಂಖ್ಯೆಯ ಹಿಂದೂಗಳ ಸಕ್ಕರೆ ಲೋಬಾನದ ಅಕ್ಕರೆ. ಇದು ನಿಸರ್ಗ ಸುಭಗ ಕೋಮು ಸೌಹಾರ್ದತೆಯ ಕುರುಹು. ಆದರೆ ಇತ್ತೀಚೆಗೆ  ಕೆಲವು ಮತಾಂಧರಿಂದ ಚುನಾವಣಾ ರಾಜಕಾರಣದ ಕೊಳಕು ಹುನ್ನಾರಗಳು ಸೈತಾನ ನೃತ್ಯದ ದೆವ್ವಗಾಳಿಗಳಾಗಿ ರಕ್ಕಸತನದಿಂದ ಬೀಸುತ್ತಿರುತ್ತವೆ. ಶತಮಾನಗಳಿಂದ ಕೃಷ್ಣೆಯ ಒಂದು ದಡ ಹರಿದಾಸ ಸಾಹಿತ್ಯ, ಮತ್ತೊಂದು ದಡ ತತ್ವಪದ ಮತ್ತು ವಚನಗಳ  ಬಹುತ್ವದ ಜೀವತುಂಬಿ ಹರಿದಿದೆ. ” ಓಂ ಏಕ್ ಲಾಖ್ ಅಸ್ಸೀ ಹಜಾರ ಪಾಚೋಪೀರ್ ಮೌನ್ಧೀನ್ ” ತಿಂಥಣಿ ಮೋನಪ್ಪಯ್ಯನ  ಇಂಥ ನುಡಿಗಟ್ಟುಗಳು  ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಹಿಡಿದ ನಿಲುಗನ್ನಡಿ. ಎಡ – ಬಲ ಪಂಥಗಳೆರಡರ ಅತಿರೇಕಗಳನ್ನು ಮೀರಿದ ಲೋಕಪಂಥದ ಬೆರಗಿನ ಬಯಲು ನಮ್ಮ ಕಲ್ಯಾಣ ಕರ್ನಾಟಕದ ನೆಲ. ಅಫಜಲಪುರ, ಆಳಂದ, ಜೇವರ್ಗಿ, ಶಹಾಪುರ ಹೀಗೆ ಕಲ್ಯಾಣ ಕರ್ನಾಟಕದ ಅನೇಕ ಭಾಗಗಳಲ್ಲಿ ಹಿಂದೂಗಳ ಮನೆದೇವರುಗಳೆಂದರೆ ಸೂಫಿ ಸಂತರು. ಕರ್ಜಗಿಯ ಸೈಫುಲ್ಲಾ ಮುಲ್ಕ ದರ್ಗಾ, ನೀಲೂರು ಮಹಬೂಬ ಸುಬಾನಿ ದರ್ಗಾ, ಹೈದ್ರಾ ದರ್ಗಾಗಳ ಸೂಫಿ ದೈವಗಳು ಬಹುಪಾಲು ಹಿಂದೂ ವೀರಶೈವ, ಲಿಂಗಾಯತರ ಪಾಲಿನ ಉಪಾಸನ ದೇವರುಗಳು. ಹಾಗೇನೇ ಅನೇಕ ಮಂದಿ ಮುಸಲ್ಮಾನರು ಎಲ್ಲ ಹಿಂದೂ ಹಬ್ಬಗಳನ್ನು ಆಚರಿಸುತ್ತಾರೆ. ಭಸ್ಮವಿಭೂತಿ ಧರಿಸುತ್ತಾರೆ. ಮೊಹರಮ್ ಹಬ್ಬಗಳಲ್ಲಿ ಫಕೀರರಾಗಿ ಬಹುಪಾಲು ಮುಸ್ಲಿಮೇತರರು ಅಲಾಯಿ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ಹೀಗೆ ಭಾವೈಕ್ಯತೆಗೆ ಕಲ್ಯಾಣ ಕರ್ನಾಟಕ ಹೇಳಿ ಮಾಡಿಸಿದ ಹೆಸರು. ಒಂದೆರಡು ಜಿಲ್ಲೆಯಲ್ಲಿ ಹರಿದಾಡುವ ಕಾವೇರಿ ಸಮಗ್ರ ಕನ್ನಡನಾಡಿನ ಜೀವನದಿಯಾಗಿ ಅಲ್ಲಿನ ಸಿನೆಮಾಗಳಿಗೆ, ಸಾಹಿತಿಗಳಿಗೆ ಗೋಚರಿಸುತ್ತಾಳೆ. ಆದರೆ ನಮ್ಮಭಾಗದ ಆರೇಳು ಜಿಲ್ಲೆಗಳ ತುಂಬೆಲ್ಲ ತುಂಬಿ ತುಳುಕುವ, ಇಲ್ಲಿನ ಜನಜೀವನದ ಸಮಗ್ರ ಬದುಕನ್ನು ಸಮೃದ್ಧಗೊಳಿಸುವ ಕೃಷ್ಣೆ, ಭೀಮೆಯರು ಬೆಂಗಳೂರು ಕೇಂದ್ರಿತ ಸಾಂಸ್ಕೃತಿಕ ಲೋಕಕ್ಕೆ, ಸಿನೆಮಾ ಜಗತ್ತಿಗೆ ಇವು ಬರೀ ನದಿಗಳಾಗಿಯೇ ಗೋಚರ. ಈ ಬಗೆಯ ಸಾಂಸ್ಕೃತಿಕ ರಾಜಕಾರಣ ಕುರಿತು ತಲೆ ಕೆಡಿಸಿಕೊಳ್ಳದ ಮುಗ್ಧ ಮೊಗಲಾಯಿ ಮಂದಿ ನಮ್ಮವರು. ನಿಜವಾದ ರಾಜಕೀಯಪ್ರಜ್ಞೆ ಎಂಬುದರ ಅರಿವಿರದೇ ಥೇಟ್ ರಾಜಕೀಯ ಪಕ್ಷಗಳ ಕಾರ್ಯಕರ್ತರಂತೆ ಮಾತಾಡುವುದನ್ನೇ ರಾಜಕೀಯಪ್ರಜ್ಞೆ ಎಂದು ನಂಬಿರುವ ಹುಂಬತನ ನಮ್ಮವರದು. ಅತಿಯಾದ ಸಿಹಿ, ಅತಿಯಾದ ಖಾರಪ್ರಿಯರು ಇವರು. ಹೀಗೆ ಎರಡರಲ್ಲೂ  ಅತಿರೇಕಗಳು.  ಕೃಷ್ಣೆ ಮೈತುಂಬಿ ಹರಿದರೂ ಕಷ್ಟಗಳು ಬಗೆ ಹರಿಯಲಿಲ್ಲ. ಅಷ್ಟಕ್ಕೂ ಕೃಷ್ಣೆ ರೈತರ ಹೊಲಗಳಿಗಿಂತ ಕೆಲಸಗೇಡಿ ಹಳ್ಳ್ಳ ಕೊಳ್ಳಗಳಲ್ಲೇ ಹೆಚ್ಚು ಹರಿಯುತ್ತಿರುವಳು. CADA  ಎಂಬುದು ಈ ಭಾಗದಲ್ಲಿ ಕಿಲುಬು ಕಾಸಿನಷ್ಟು ಕೆಲಸ ಮಾಡಿಲ್ಲ.   ೩೭೧ ಜೆ ‘ಲಾಗೂ’ ಆದರೂ ನಮ್ಮ ಎಲ್ಲ ಸಂಕಟಗಳು ಹಾಗೇ ಇವೆ. ನಾವು ಹಕ್ಕಿನೊಡೆಯರಾಗಿ ಮೂಲ ಸೌಲಭ್ಯಗಳನ್ನು ಪಡೆಯದೇ ಬಡವಾದವರು. ಕನ್ನಡನಾಡಿಗೆ ಇಬ್ಬರು ಮುಖ್ಯಮಂತ್ರಿಗಳನ್ನು ಕೊಟ್ಟ ನಾವು ಹಿಂದುಳಿದವರಲ್ಲ, ಹಿಂದುಳಿಸಲ್ಪಟ್ಟವರು. ಎಲ್ಲಕ್ಕೂ ” ಜಾಂದೇ ಚೋಡೋ ” ಎಂದು ಉದಾಸೀನ ತೋರುವ ಅಸಡ್ಡೆ ಜಾಯಮಾನ ನಮ್ಮದು. ಜವಾರಿ ಮುಗ್ದತೆ ಉಳಿಸಿಕೊಂಡುದೇ ನಮ್ಮ ಹೆಗ್ಗಳಿಕೆ. ಕಲಬುರ್ಗಿ ಹೆಸರಿನೊಂದಿಗೆ ಅಂಟಿಕೊಂಡಿರುವುದು ಕೆಂಡದ ಬಿಸಿಲು ಮತ್ತು ತೊಗರಿ.  ಕಲಬುರ್ಗಿಯಲ್ಲಿ ಸರ್ಕಾರದ ಖರೀದಿಗಿಂತಲೂ ಭರ್ಜರಿಯಾಗಿ ಖಾಸಗಿ ಖರೀದಿದಾರರ  ಕಿಗ್ಗಳದ ರೇಟುಗಳಿಗೆ ರೈತರು ತೊಗರಿ ಮತ್ತು ಹತ್ತಿ ಮಾರುವಂತಾಗಿದೆ. ಸರಕಾರ ಎಂಬುದರ ದರಕಾರವಿಲ್ಲದೇ ಹೆದ್ದಾರಿಗಳ  ಬಾಜೂಕೆ ರಾಜಾರೋಷವಾಗಿ ಖಾಸಗಿ ಸಾಹುಕಾರರು  ತಕ್ಕಡಿ ಕಲ್ಲುಗಳನ್ನಿಟ್ಟುಕೊಂಡು ಮುಗ್ದರೈತರು ಬೆಳೆದ ಹತ್ತಿ, ತೊಗರಿ, ಇತರೆ ಫಸಲುಗಳನ್ನು ಕಾಟಾ ಖರೀದಿ ಮಾಡುವ ಕಾಳದಂಧೆ ಯಾವೊಂದು ಎಗ್ಗಿಲ್ಲದೇ ಜಗ್ಗಿ ಪ್ರಮಾಣದಲ್ಲೇ ಜರುಗುತ್ತಲಿರುತ್ತವೆ. ಅದೇ ರಸ್ತೆಗಳಲ್ಲಿ ಮಂತ್ರಿ, ಎಮ್ಮೆಲ್ಲೆ, ಎಂಪಿ, ಇತರೆ ರಾಜಕಾರಣಿಗಳು ಅದನ್ನು ನೋಡುತ್ತಲೇ ಓಡಾಡುತ್ತಾರೆ. ರೈತರನ್ನು ಲೂಟಿ ಮಾಡುವ ಈ ಹಗಲು ದರೋಡೆಕೋರ ದಂಡನ್ನು ಇದುವರೆಗೂ ಯಾವೊಬ್ಬ ತೀಸ್ಮರ್ಕ ರಾಜಕಾರಣಿ ತಡವಿಕೊಂಡ ನಿದರ್ಶನವಿಲ್ಲ. ಇಂತಹ ಹತ್ತು ಹಲವು ಶೋಷಣೆಗಳ ಬಲಿಪಶುಗಳಾಗಿರುವ ನಮ್ಮವರನ್ನು ಹೆಸರಲ್ಲಿ ಮಾತ್ರ ಕಲ್ಯಾಣ ಗೊಳಿಸಿದ್ದಾಗಿದೆ.  ಹೈದ್ರಾಬಾದ್ ಕರ್ನಾಟಕ ಹೆಸರಲ್ಲಷ್ಟೇ ಬದಲಾದರೆ ಸಾಕೇ.? ಖರೇ ಖರೇ ಕಲ್ಯಾಣ ಕರ್ನಾಟಕ ಆಗೋದು ಯಾವಾಗ ***********************************************   

ಕಲ್ಯಾಣ ಕರ್ನಾಟಕವೆಂಬ ಬಹುತ್ವದ ಮಹಾ ಬಯಲಲಿ Read Post »

ಇತರೆ

ಕನ್ನಡ ಸಾಹಿತ್ಯ, ಸಾಹಿತ್ಯ ಪರಿಷತ್ತು ಮತ್ತು ಮಹಿಳೆ..!

ಲೇಖನ ಕನ್ನಡ ಸಾಹಿತ್ಯ, ಸಾಹಿತ್ಯ ಪರಿಷತ್ತು ಮತ್ತು ಮಹಿಳೆ..! ಮಹಿಳೆಯೊಬ್ಬರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಬೇಕು ಎಂಬ ಚರ್ಚೆಗೆ ಜೀವ ಬಂದಿದೆ. ಶತಮಾನ ಪೂರೈಸಿರುವ ಈ ಸಂಸ್ಥೆಯು ಇದುವರೆಗೆ ಮಹಿಳಾ ಅಧ್ಯಕ್ಷರನ್ನು ಕಂಡಿಲ್ಲ. ಅಧಿಕಾರ-ಹಣ-ವರ್ಚಸ್ಸು ಇರುವ ಕ.ಸಾ.ಪ,ದಲ್ಲಿ ಚುನಾವಣೆಯ ಬಲಾಬಲ ಪರೀಕ್ಷೆಯಲ್ಲಿ ಮಹಿಳೆಯರು ಕಾಣಿಸಿಕೊಳ್ಳಬಹುದೇ? ಅಂತಹ ಅವಕಾಶವನ್ನು ’ಮತ’ ಚಲಾಯಿಸುವ ಸದಸ್ಯರು ಒಪ್ಪಿಕೊಳ್ಳುವರೇ? ಎಂದು ಕೇಳಿರುವ ಪತ್ರಕರ್ತವೊಬ್ಬರು ಚರ್ಚೆಯನ್ನು ಆರಂಭಿಸಿದ್ದಾರೆ. ನೂರೈದು ವರ್ಷ ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಕೆಲ ವರುಷಗಳಿಂದ ಒಳ್ಳೆಯ ಕಾರಣಕ್ಕಾಗಿ ಸುದ್ದಿಯಾದದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ’ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ’ ಎಂದು ಗುರುತಿಸಲಾಗುವ ಈ ಸಂಸ್ಥೆ ಹಾಗೆ ನಡೆದು ಕೊಂಡದ್ದು ಮಾತ್ರ ಅಪರೂಪದಲ್ಲಿ ಅಪರೂಪ. ಚಾರಿತ್ರಿಕ ಮಹತ್ವದ ಈ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿದವರು ಇತ್ತೀಚಿನ ದಿನಗಳಲ್ಲಿ ಅದರ ಘನತೆಗೆ ತಕ್ಕಂತೆ ವರ್ತಿಸದೇ ಇರುವದಕ್ಕೂ ಸಾಕ್ಷಿಯಾಯಿತು. ಜಾತಿ ರಾಜಕಾರಣ, ಸ್ವಜನ ಪಕ್ಷಪಾತ, ಅಧಿಕಾರ ಲೋಲುಪತೆ ಸೇರಿದಂತೆ ಸಕ್ರಿಯರಾಗಿ ರಾಜಕಾರಣದ ಎಲ್ಲ ರೋಗಗಳನ್ನೂ ಹೊಂದಿದೆ. ನಿಂತ ನೀರಾಗಿರುವುದರ ಜೊತೆಗೆ ಮಲೆತು ವಾಸನೆ ಬರುವ ಹಂತ ತಲುಪಿರುವ ಸಾಹಿತ್ಯ ಪರಿಷತ್ತು ಕಾಯಕಲ್ಪಕ್ಕಾಗಿ ಕಾಯುತ್ತ ನಿಂತಿದೆ. ಅಧಿಕಾರ-ಹಣಗಳೆರಡೂ ಒಂದೆಡೆಯೇ ಸೇರಿದ ಮೇಲೆ ಅದರ ಜೊತೆಗೆ ರಾಜಕಾರಣ ಕೂಡ ಸಹಜವಾಗಿಯೇ ಬಂದು ನಿಲ್ಲುತ್ತವೆ. ತೋಳ್ಬಲ-ಸಂಖ್ಯಾಬಲಗಳೇ ಬಹುಮುಖ್ಯವಾದ ಮೇಲೆ ಆ ಮೂಲಕ ಆಯ್ಕೆಯಾಗಿ ಬಂದವರಿಂದ ಶಿಸ್ತು, ಸೌಜನ್ಯ, ಮೌಲ್ಯ, ಪ್ರಾಮಾಣಿಕತೆ ನಿರೀಕ್ಷಿಸುವುದು ದುರಾಸೆಯಾದೀತು. ಇಂತಿಪ್ಪ ಈ ಸಾಹಿತ್ಯ ಪರಿಷತ್ತಿನ ಗದ್ದುಗೆಯಲ್ಲಿ ಕುಳಿತವರು ಮೂರನ್ನೂ ಬಿಡದೇ ಇದ್ದಿದ್ದರೆ ಈ ಹಿಂದೆ ಚುನಾವಣೆ ನಡೆದು ಎರಡು ವರ್ಷ ಕಳೆಯಬೇಕಿತ್ತು. ಸಾಹಿತ್ಯಲೋಕದ ಒಬ್ಬ ಪ್ರತಿನಿಧಿಯಂತೆ ವರ್ತಿಸದೇ ದುರಾಸೆಯಿಂದ ಬೈಲಾ ತಿದ್ದುಪಡಿ ಅದನ್ನು ತನ್ನ ಅವಧಿಗೇ ಅಳವಡಿಸಿಕೊಂಡು-ವಿಸ್ತರಿಸಿಕೊಂಡ ನಾಚಿಕೆಗೇಡಿನ ಸಂಗತಿಗೂ ಕಸಾಪ ಸಾಕ್ಷಿಯಾಯಿತು. ಸಾಹಿತ್ಯ ಪರಿಷತ್ತಿಗೆ ’ಕಪ್ಪುಚುಕ್ಕೆ’ ಬಳಿಯಲೂ ಕಾರಣವಾಯಿತು. ಈ ಹಿಂದೆಯೂ ಬೈಲಾ ತಿದ್ದುಪಡಿಯ ಚರ್ಚೆ ನಡೆದಿತ್ತು. ಆದರೆ ಅದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಆಗ ಅಧ್ಯಕ್ಷರಾಗಿದ್ದವರು ಮೂರನ್ನೂ ಬಿಡುವಷ್ಟು ಧೈರ್ಯವಂತರಾಗಿರಲಿಲ್ಲ. ಕನಿಷ್ಠ ಮಟ್ಟದ ಸ್ವಪ್ರಜ್ಞೆಯ ಜೊತೆಗೆ ಪರಿಷತ್ತಿನ ಘನತೆಯೂ ಅವರನ್ನು ತಮಗೆ ಬೇಕಾದಂತೆ ಮಾಡದೇ ಇರುವಂತೆ ತಡೆದಿತ್ತು. ಜೀವ ವಿರೋಧಿ- ಜನವಿರೋಧಿ ನಡೆ ನಡೆದುಕೊಳ್ಳಲೂ ಹಿಂದೇಟು ಹಾಕದ ಸ್ಥಿತಿಗೆ ಸಾಹಿತ್ಯ ಪರಿಷತ್ತು ತಲುಪಿದೆ. ಅದು ನಡೆಸುವ ವಾರ್ಷಿಕ ಕ್ರಿಯಾವಿಧಿಯ ಸಾಹಿತ್ಯ ಸಮ್ಮೇಳನದಲ್ಲಿಯೇ ಪರಿಷತ್ತಿನ ಅಧ್ಯಕ್ಷರ ನಡವಳಿಕೆ ಬಗ್ಗೆ ಬಹಿರಂಗ ಪ್ರತಿರೋಧವೂ ವ್ಯಕ್ತವಾಯಿತು. ತೋಯ್ದ ಮುಖ ನನ್ನದಲ್ಲ ಎಂದು ಒರೆಸಿಕೊಂಡದ್ದನ್ನೂ ಕನ್ನಡ ಜನತೆ ನೋಡಬೇಕಾಯಿತು. ಇಂತಹ ಘನ ಇತಿಹಾಸ-ಪರಂಪರೆ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹಿಳೆಯೊಬ್ಬರು ಅಧ್ಯಕ್ಷರಾದರೆ? ಎಂಬ ಪ್ರಶ್ನೆ ತೇಲಿಬಂದಿತು ಆಗಲೇ. ತೇಲಿ ಬಂದ ಮಾತು ಚರ್ಚೆ- ಸಂವಾದಕ್ಕೂ ಕಾರಣವಾಗಿಯಿತು. ಅಪರೂಪಕ್ಕೆ ಪರಿಷತ್ತು ಧನಾತ್ಮಕ ಕಾರಣಕ್ಕಾಗಿ ಚರ್ಚೆಗೆ ಒಳಗಾಗಿದೆ. ಅಥವಾ ಪರಿಷತ್ತಿನ ಬಗ್ಗೆ ಕಾಳಜಿ ಇರುವವರು ಧನಾತ್ಮಕ ನೆಲೆಯಲ್ಲಿ ಚರ್ಚೆ ಹುಟ್ಟು ಹಾಕಿದ್ದಾರೆ. ಅದರ ಫಲ-ಫಲಿತ ಧನಾತ್ಮಕವಾಗಿಯೇ ಇರಬೇಕು ಎಂದೇನಿಲ್ಲ. ಅಲ್ಲವೇ? ಸಾಹಿತ್ಯ ಪರಿಷತ್ತು ಘನತೆಯಿಂದ ವರ್ತಿಸಿದ್ದನ್ನೂ ನೋಡಿ ದೀರ್ಘ ಕಾಲವಾಗಿದೆ. 1905 ರಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ವರ್ಷ ವಾರ್ಷಿಕ ಸಮ್ಮೇಳನ ನಡೆಸುವ ಪರಿಪಾಠ ಇಟ್ಟುಕೊಂಡಿದೆ. ಆರಂಭದ ದಿನಗಳಲ್ಲಿ ಪರಿಷತ್ತಿನ ಅಧ್ಯಕ್ಷರೇ ಸಮ್ಮೇಳನದ ಅಧ್ಯಕ್ಷತೆಯನ್ನೂ ವಹಿಸುತ್ತಿದ್ದರು. ಕೆಲವರ್ಷಗಳ ನಂತರ ಈ ಪರಿಪಾಠ ಬದಲಾಯಿಸಿ, ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಸಾಹಿತಿ-ಲೇಖಕರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಗೆ ಬಂತು. ಕಳೆದ ನೂರೈದು ವರ್ಷಗಳಲ್ಲಿ ಸಾಹಿತ್ಯ ಪರಿಷತ್ತು ಇದುವರೆಗೆ 85 ರ ಮೇಲೆ ಸಮ್ಮೇಳನಗಳನ್ನು ನಡೆಸಿದೆ. ಮತ್ತು ನಡೆಸುತ್ತದೆ. ಈ ಸಮ್ಮೇಳನ ಅಧ್ಯಕ್ಷರ ಪಟ್ಟಿ ಮೇಲೆ ಕಣ್ಣು ಹಾಯಿಸಿದರೆ ಪರಿಷತ್ತಿನ ಪುರುಷ ಪ್ರಧಾನ ’ಮ್ಯಾಚೋ’ ಗುಣ ಢಾಳಾಗಿ ಎದ್ದು ಕಾಣುತ್ತದೆ. ಅಪರೂಪಕ್ಕೆ ಆಗಾಗ ಅಂದರೆ ಬೆರಳೆಣಿಕೆಗಿಂತ ಕಡಿಮೆ ಸಲ ಪರಿಷತ್ತು ತನ್ನದೇ ರೂಢಿಯನ್ನು ಮುರಿಯುವ ಧೈರ್ಯವನ್ನೂ ಮಾಡಿದೆ. ಉತ್ತರದ ಗಡಿಭಾಗದಲ್ಲಿ ಕನ್ನಡದ ಕೆಲಸ ಮಾಡಿದ ಲೇಖಕಿ, ಕನ್ನಡಕ್ಕಾಗಿ ಸಿಂಹಿಣಿಯಂತೆ ಹೋರಾಟ ಮಾಡುತ್ತಿದ್ದ ಜಯದೇವಿ ತಾಯಿ ಲಿಗಾಡೆ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತ್ತು. ಅಪ್ಪಟ ಕನ್ನಡದ ನೆಲ ಸಿದ್ಧರಾಮನ ಸೊನ್ನಲಿಗೆಯವರಾದ ತಾಯಿ ಲಿಗಾಡೆ ಅವರು ಏಕೀಕರಣ ಮತ್ತು ನಂತರದ ದಿನಗಳಲ್ಲಿ ನಡೆದ ಹೋರಾಟಗಳಲ್ಲಿ ಸಕ್ರಿಯರಾಗಿದ್ದವರು. ತಾಯಿಯ ಪದಗಳು, ಸಿದ್ಧರಾಮ ಪುರಾಣದಂತಹ ಗಮನಾರ್ಹ ಕೃತಿ ರಚಿಸಿದ ಜಯದೇವಿ ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದರು. ಮಂಡ್ಯದಲ್ಲಿ (1972) ದಲ್ಲಿ ನಡೆದ 48 ನೇ ಸಾಹಿತ್ಯ ಸಮ್ಮೇಳನಕ್ಕೆ ಜಯದೇವಿ ತಾಯಿ ಲಿಗಾಡೆ ಅವರು ಅಧ್ಯಕ್ಷರಾಗಿದ್ದರು. ಅದಾದ ಮೇಲೆ ಮತ್ತೊಮ್ಮೆ ಮಹಿಳೆಯೊಬ್ಬರಿಗೆ ಸಮ್ಮೇಳನದ ಅಧ್ಯಕ್ಷತೆಯ ಗೌರವ ದೊರೆತದ್ದು 1999 ರಲ್ಲಿ. ಬಾಗಲಕೋಟೆಯಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆಗೆ ಹಿರಿಯ ಲೇಖಕಿ ಶಾಂತಾದೇವಿ ಮಾಳವಾಡ ಅವರನ್ನು ಆಯ್ಕೆ ಮಾಡಲಾಗಿತ್ತು. ಅದಾದ ಮೇಲೆ 2003 ರಲ್ಲಿ ಮೂಡಬಿದರೆಯಲ್ಲಿ ನಡೆದ 71ನೇ ಸಾಹಿತ್ಯ ಸಮ್ಮೇಳನಕ್ಕೆ ಡಾ.ಕಮಲಾ ಹಂಪನಾ ಆಯ್ಕೆಯಾಗಿದ್ದರು. ಅದಲ್ಲದೇ ಗದಗದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷೆಯನ್ನಾಗಿ ಗೀತಾ ನಾಗಭೂಷಣ ಆಯ್ಕೆಯಾಗಿದ್ದರು. ಈ ನಾಲ್ಕು ಅಪರೂಪದ ಅಪವಾದಗಳನ್ನು ಹೊರತು ಪಡಿಸಿದರೆ ಪರಿಷತ್ತು ಅಂದರೆ ಅದರ ಅಧಿಕಾರದ ಚುಕ್ಕಾಣಿ ಹಿಡಿದವರು-ಪದಾಧಿಕಾರಿಗಳು ಅರ್ಧದಷ್ಟು ಕನ್ನಡಿಗರಿರುವ ಮಹಿಳೆಯರನ್ನು ಗಂಭೀರವಾಗಿ ಪರಿಗಣಿಸಿದ್ದೇ ಇಲ್ಲ. ಹಾಗೆಂದರೆ ಅದು ಪೂರ್ಣ ಸತ್ಯ ಅಲ್ಲ ಎಂದು ವಾದಿಸಬಹುದು. ಕಾರ್ಯಕಾರಿ ಮಂಡಳಿಯಲ್ಲಿ ’ಮಹಿಳಾ ಪ್ರತಿನಿಧಿ’ಯ ನೇಮಕ ಮತ್ತು ಮಹಿಳಾ ಸಾಹಿತ್ಯದ ಕುರಿತ ಚರ್ಚೆ-ಸಂವಾದ-ಗೋಷ್ಠಿ ನಡೆಸುವ ಔದಾರ್ಯವನ್ನು ಪರಿಷತ್ತು ತೋರಿಸುತ್ತಲೇ ಬಂದಿಲ್ಲ. ಇಂತಹ ಪುರುಷ ಪ್ರಧಾನ, ಯಜಮಾನಿಕೆಯನ್ನು ಹೊಂದಿರುವ ಕನ್ನಡದ- ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಚುಕ್ಕಾಣಿ ಮಹಿಳೆಯೊಬ್ಬರಿಗೆ ಯಾಕೆ ಸಿಗಬಾರದು? ಎಂಬ ಪ್ರಶ್ನೆ ಸಕಾರಣ ಮತ್ತು ಸಕಾಲಿಕ. ಆದರೆ, ಪ್ರಶ್ನೆ ಇರುವಷ್ಟು ಸುಲಭವಾಗಿ ಉತ್ತರ ಇರುವುದಿಲ್ಲ. ಉತ್ತರ-ದಕ್ಷಿಣ, ಪ್ರಬಲ ಸಮುದಾಯಗಳ ಹಿಡಿತದಲ್ಲಿ ಇರುವ ಹಣ ಮತ್ತು ಅಧಿಕಾರ ಇರುವ ಈ ಸ್ಥಾನ ಮಹಿಳೆಗೆ ಸಿಗಬಹುದೇ? ಎಂದು ಯೋಚಿಸಿದರೆ ’ಬೆಳಕಿನ ಕಿರಣ’ ಪರಿಷತ್ತಿನ ಸುತ್ತೆಲ್ಲೂ ಕಾಣಿಸುವುದಿಲ್ಲ. ಒಂದು ಲಕ್ಷಕ್ಕೂ ಹೆಚ್ಚು ಜನ ಸದಸ್ಯರನ್ನು ಹೊಂದಿರುವ ಪರಿಷತ್ತು ಚುನಾವಣಾ ರಾಜಕಾರಣದ ಅಖಾಡವಾಗಿದೆ. ತೋಳ್ಬಲ-ಧನಬಲ-ಜಾತಿಬಲ ಇಲ್ಲದವರಾರೂ ಪರಿಷತ್ತಿನ ಸುತ್ತ ಸುಳಿಯುವ ಹಾಗಿಲ್ಲ. ಅಧ್ಯಕ್ಷರಾಗಲು ಅರ್ಹ ಮಹಿಳೆಯರಿಲ್ಲವೇ? ಈಗ ಪರಿಷತ್ತಿನ ಅಧ್ಯಕ್ಷರಾಗಲು ಬೇಕಿರುವುದು ಸಾಹಿತ್ಯ ರಚನೆ, ಸಾಹಿತ್ಯದ ಒಡನಾಟ, ಸಾಹಿತ್ಯಾಸಕ್ತಿ, ಆಡಳಿತದ ಅನುಭವ ಯಾವುದೂ ಮುಖ್ಯವಲ್ಲ. ಇಂತಿಪ್ಪ ಸಕಾರಣ ಕಾರಣಗಳ ಅಗತ್ಯವೇ ಇಲ್ಲದ ಅಧ್ಯಕ್ಷ ಹುದ್ದೆಯು ಮಹಿಳೆಯರಿಗೆ ಪೈಪೋಟಿಯಾಚೆಗಿನ ಸಂಗತಿ ಎಂಬಂತೆ ಗೋಚರವಾಗುತ್ತಿದೆ. ಮಹಿಳೆಯರಿಗೆ ಅಧಿಕಾರ ’ನೀಡುವ’? ಔದಾರ್ಯ ಪರಿಷತ್ತಿನ ಸದಸ್ಯರು ತೋರಬಹುದೇ? ಚುನಾವಣೆಯಲ್ಲಿ ಇಬ್ಬರು ಮಹಿಳೆಯರು ನಿಂತರೆ ಅಥವಾ ಅವಿರೋಧ ಆಯ್ಕೆಯಾದರೆ ಮಾತ್ರ ಪರಿಷತ್ತು ಮಹಿಳಾ ಅಧ್ಯಕ್ಷೆಯನ್ನು ಕಾಣಬಹುದು. ಅದಿಲ್ಲದಿದ್ದರೆ ತೋಳ್ಬಲದ ಪೈಪೋಟಿಗೆ ಇಳಿದು ಮಹಿಳೆಯೊಬ್ಬರು ಅಧ್ಯಕ್ಷರಾಗುವುದು ಕಷ್ಟಸಾಧ್ಯದ ಸಂಗತಿ ಎಂದೇ ತೋರುತ್ತದೆ. ಈಗಿನ ದಿನಮಾನದಲ್ಲಿ ಚುನಾವಣೆ ನಡೆಯುವ ಹುದ್ದೆಗಳಿಗೆ ಅವಿರೋಧ ಆಯ್ಕೆ ನಿರೀಕ್ಷಿಸುವುದು ಅಸಾಧ್ಯವಾದ ಸಂಗತಿ. ಹೀಗಿರುವಾಗ ಉಳಿಯುವ ಒಂದೇ ಆಯ್ಕೆ ಎಂದರೆ ಇಬ್ಬರು ಮಹಿಳೆಯರನ್ನು ಚುನಾವಣೆಯ ಕಣಕ್ಕೆ ಇಳಿಸುವುದು ಅಥವಾ ಮಹಿಳೆಯರಿಬ್ಬರು ಚುನಾವಣೆಗೆ ಸ್ಪರ್ಧಿಸುವುದು. ಸಾರ್ವಜನಿಕ ಹುದ್ದೆಗಳಲ್ಲಿ ಅಂದರೆ ಅಧಿಕಾರ ನಡೆಸಿದ ಅನುಭವ, ಸಾಹಿತ್ಯದ ಆಸಕ್ತಿ, ಬರವಣಿಗೆಯಲ್ಲಿ ಆಸಕ್ತಿ ಇರುವ ಕೆಲವು ಮಹಿಳೆಯರು ಪರಿಷತ್ತಿನ ಅಧ್ಯಕ್ಷತೆ ವಹಿಸುವುದು ಸೂಕ್ತ ಎಂಬ ಅಭಿಪ್ರಾಯ ನನ್ನದು. ಹಿರಿಯ ಕಾದಂಬರಿಕಾರ್ತಿ-ಲೇಖಕಿ ವೀಣಾ ಶಾಂತೇಶ್ವರ ಅವರು ಧಾರವಾಡದ ಕರ್ನಾಟಕ ಕಾಲೇಜಿನ ಪ್ರಾಂಶುಪಾಲರಾಗಿದ್ದವರು. ಇಂಗ್ಲಿಷ್‌ ಸಾಹಿತ್ಯದ ಅಧ್ಯಾಪಕಿಯಾಗಿದ್ದ ವೀಣಾ ಶಾಂತೇಶ್ವರ ಅವರು ಕನ್ನಡದಲ್ಲಿ ಗಮನಾರ್ಹ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ವೀಣಾ ಶಾಂತೇಶ್ವರ ಅವರ ಅಧ್ಯಕ್ಷರಾದರೆ ತಪ್ಪೇನು? ಸ್ವದೇಶಿ ಹೆಲಿಕ್ಯಾಪ್ಟರ್‌ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ವಿಜ್ಞಾನ ಲೇಖಕಿ-ಕತೆಗಾರ್ತಿ ನೇಮಿಚಂದ್ರ, ಕನ್ನಡ ಪತ್ರಿಕೋದ್ಯಮದಲ್ಲಿ ನಾಲ್ಕು ದಶಕಗಳ ಕಾರ್ಯನಿರ್ವಹಿಸಿದ, ಪತ್ರಿಕೆಯೊಂದರ ಸಂಪಾದಕರೂ ಆಗಿದ್ದ ಆರ್‌.ಪೂರ್ಣಿಮಾ, ಮಾತು-ಚಟುವಟಿಕೆ ಹಾಗೂ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕೆ.ನೀಲಾ, ತಮ್ಮ ಸೊಗಸಾದ ಕವಿತೆಗಳ ಮೂಲಕ ಗಮನ ಸೆಳೆದಿರುವ ಸವಿತಾ.ನಾಗಭೂಷಣ, ವಿಮರ್ಶಕಿಯಾಗಿ ಚಿರಪರಿಚಿತರಿರುವ ಎಂ.ಎಸ್‌.ಆಶಾದೇವಿ… ಹೀಗೆಯೇ ಪಟ್ಟಿಯನ್ನು ಬೆಳೆಸಬಹುದು. ಪರಿಷತ್ತಿನ ಚುನಾವಣೆಯು ಇಂತಹ ’ಹೊಸ’ ಆಲೋಚನೆಗೆ ಇಂಬು ನೀಡುವಷ್ಟು ಪ್ರಗತಿಪರವಾಗಿದೆಯೇ ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ. ಮತ್ತು ನೀಡಬೇಕು..! ************************************* ಕೆ.ಶಿವು.ಲಕ್ಕಣ್ಣವರ

ಕನ್ನಡ ಸಾಹಿತ್ಯ, ಸಾಹಿತ್ಯ ಪರಿಷತ್ತು ಮತ್ತು ಮಹಿಳೆ..! Read Post »

ಇತರೆ, ಲಹರಿ

ಏಕೀ ಏಕತಾನತೆ

ಲಹರಿ ಏಕೀ ಏಕತಾನತೆ ಸ್ಮಿತಾ ಭಟ್ ಅಮ್ಮಾ ನಿಂಗೆ ಇತ್ತೀಚಿಗೆ ಫಲಾವ್ ಮಾಡೋಕೆ ಬರಲ್ಲ ಎಂದು ಊಟಕ್ಕೆ ಕುಳಿತವ ಅಸಾಧ್ಯವಾದ ಅಸಮಾಧಾನ ತೋರಿಸಿ ಎರಡು ತುತ್ತು ತಿಂದ ಶಾಸ್ತ್ರ ಮಾಡಿ ಗೊಣಗುತ್ತಾ ಎದ್ದು ಹೊರಟೇ ಹೋದ. ನನಗೋ ಅಳುವೇ ತುಟಿಗೆ ಬಂದ ಅನುಭವ. ಮಾತು ಮಾತಿಗೂ ಅಮ್ಮನ ಫಲಾವ್ ಅಂದ್ರೆ ಅದೆಷ್ಟು ರುಚಿ, ಯಾರಿಗೂ ಈತರ ಮಾಡೋಕೆ ಬರಲ್ಲ ಎಂದು ಯಾರದ್ದಾದರೂ ಮನೆಯಲ್ಲಿ, ಹೋಟೆಲ್‌ ಗಳಲ್ಲಿ , ತಿಂದು ಬಂದಾಗೆಲ್ಲ ಪಲಾವ್ ನ ಗುಣ ಸ್ವಭಾವ ದೂರುತ್ತ ನನಗೆ ಕೊಟ್ಟ ಸರ್ಟಿಫಿಕೇಟ್ ನ ಲೆಕ್ಕವೇ ಇಲ್ಲ. ಇದೇನು ಇದ್ದಕ್ಕಿದ್ದಂತೆ ಈ ಪರಿ ಬದಲಾವಣೆ!? ನಿರಿಕ್ಷೆಗೂ ಮೀರಿದ ಪ್ರತಿಕ್ರಿಯೆ ಅಡುಗೆಯೆಂಬ ಅರಮನೆಯಲ್ಲಿ ನನ್ನ ಜಂಗಾಬಲವೇ ಉಡುಗಿಹೋಗಿತ್ತು. ಎದ್ದು ಹೊರಟವನ ಹಿಂದಿಂದೇ ಹೋಗಿ ಯಾಕೋ ಏನಾಯ್ತು ಹೇಳು. ಮತ್ತೆ ಇಷ್ಟು ದಿನ ಬಾಯಿ ಚಪ್ಪರಿಸಿ ಚಪ್ಪರಿಸಿ ತಿಂತಾ ಇದ್ದೆ ಈಗೆನಾಯ್ತು ಅಂತದ್ದು. ಸೋತ ಭಾವದೊಳಗೆ ಅವನ ಪರಿ ಪರಿಯಾಗಿ ಕೇಳುತ್ತಿದ್ದೆ. ಅದು ಆವಾಗ ಆಗಿತ್ತು,ಈಗ ಅಲ್ಲ. ಈಗಂತೂ ನಿನ್ನ ಫಲಾವ್ ಯಾಕೋ ಮೊದಲಿನ ರುಚಿ ಬರೋದೇ ಇಲ್ಲ. ಮರೆತೇ ಹೋಗಿದೆ ಅಮ್ಮಾ ನಿಂಗೆ ಆವತ್ತಿನ ರುಚಿ ಎನ್ನುತ್ತ, ಯಾವ ಪ್ರತಿಕ್ರಿಯೆಗೂ ಕಾಯದೇ ಹೊರಟೇ ಹೋಗಿದ್ದ. ಮನೆಯ ಎಲ್ಲ ಸದಸ್ಯರಿಂದ ಇಂತಹದ್ದೊಂದು ತಕರಾರು ಸದಾ ಸ್ವೀಕರಿಸುವ ನನಗೆ,ರೂಡಿಯಾದ ವಿಚಾರವೇ ಆದರೂ ಮಗನಿಂದ ಬಂದ ಪ್ರತಿಕ್ರಿಯೆಗೆ ಬೆರಗಾಗಿದ್ದೆ. ಮತ್ತದರ ನಿರೀಕ್ಷೆಯೂ ಇರಲಿಲ್ಲ. ಇಲ್ಲ ಕಣೋ ಬಹಳ ದಿನದಿಂದ ಒಂದೇ ತೆರನಾದ ರುಚಿ, ಕೈ ಅಡುಗೆ ತಿಂತಾ ಇದ್ದೀಯಲ್ಲ.ಅದೂ ಅಲ್ಲದೇ ನಿತ್ಯ ಫಲಾವ್ ಬೇಕು ಅಂತೀಯಲ್ಲ,ಅದಕ್ಕೆ ನಿನಗೆ ಬೇಜಾರು ಬಂದಿದೆ. ಎಂದು ವಾಸ್ತವದ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದೆ. ಇರಬಹುದು ಬಿಡು ಅಮ್ಮಾ,, ಆದ್ರೂ ನೀನ್ಯಾಕೆ ಮೊದಲಿನಂತೆ ಅಡುಗೆ ಮಾಡೋದಿಲ್ಲ ಈಗ, ಎನ್ನುತ್ತಲೇ ಎದ್ದು ನಡೆದಿದ್ದ. ಅಡುಗೆ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ ಬೇಸಿನ್ ಒಳಗೆ ಇದ್ದ ಪಾತ್ರೆಗಳು. ಅಲ್ಲಲ್ಲೇ ತಿಂದು ಎದ್ದು ಹೋದ ತಟ್ಟೆಗಳು. ಒರೆಸಿ ಇಡಬೇಕಾದ ಪಿಂಗಾಣಿಗಳು. ಪಿಲ್ಟರ್ ಕೆಳಗೆ ಚೆಲ್ಲಿದ ನೀರು. ತುಂಬಿಟ್ಟ ತರಕಾರಿಳ ದಂಡು. ಜಾಗ ತಪ್ಪಿದ ಡಬ್ಬಿಗಳು. ಮಾಡಬೇಕಾದ ನಿತ್ಯದ ಏಕತಾನತೆಯ ನೋವನ್ನು ನೆನಪಿಸುತ್ತಿತ್ತು. ಸ್ವಲ್ಪ ಯೋಚಿಸಿ ಊಟ ಮಾಡುವವರಿಗೇ ಏಕತಾನತೆ ಕಾಡುವಾಗ ಅಡುಗೆ ಮಾಡುವರಿಗೆ ಇನ್ನೆಂತ ಏಕತಾನತೆ ಕಾಡುತ್ತದೆ ಎಂದು. ಕೇವಲ ಊಟ, ಅಡುಗೆ ವಿಷಯ ಮಾತ್ರವಲ್ಲ, ಪ್ರತೀ ಕೆಲಸದಲ್ಲೂ ಅಷ್ಟೇ ಮಾಡುವ ಕಷ್ಟ ಆಡುವವನಿಗೆ ಎಂದೂ ಅರ್ಥವಾಗುವದಿಲ್ಲ. ಅದಕ್ಕೇ ಹೇಳೋದು ಮಾತೊಗೆದು ಹೋಗುವಾಗಿನ ಅಹಂಕಾರ ಮೈ ಮುರಿದ ದುಡಿಯುವಾಗ ಇರೋದಿಲ್ಲ ಎಂದು. ಈಗ ಐದಾರು ತಿಂಗಳಿನಿಂದ ಕರೋನಾ ಕಾರಣದಿಂದಾಗಿ, ಕಾಲ ಎಲ್ಲರನ್ನೂ ಬದಿಗೆ ಸರಿಸಿ ತಾನು ಮಾತ್ರ ಓಡುತ್ತಿದೆಯೇ ಅನ್ನಿಸುತ್ತಿದೆ. ಅದೆಷ್ಟೋ ಜನರ ಮನದೊಳಗೆ ಏಕತಾನತೆ ರೇಜಿಗೆ ಹುಟ್ಟಿಸುವಷ್ಟು ಹರಡಿಕೊಂಡಿದೆ. ತಲೆ ತಲಾಂತರಗಳಿಂದ ನಡೆದುಕೊಂಡು ಬಂದ ಪದ್ದತಿಗೆ ಪುಲ್ ಸ್ಟಾಪ್ ಇಟ್ಟು ನಗುತ್ತಿದೆ. ಕರೋನಾ. ಇಂದು ಸರಿ ಹೋಗುತ್ತದೆ, ನಾಳೆ ಸರಿ ಹೋಗುತ್ತದೆ, ಎಂದು ಕಾದು ಕಾದು ಸುಸ್ತಾದ ಭಾವಗಳಿಗೆ ವಾಸ್ತವದ ಅರಿವು ಮೂಡಿಸಲು ಶತ ಪ್ರಯತ್ನ ಪಡುತ್ತಿದ್ದೇವೆ. ಒಂದೇ ಊಟ, ಒಂದೇ ನೋಟ, ಒಂದೇ ಮಾತು,ಕುಳಿತಲ್ಲೇ ಕೆಲಸ,ಪಿಳಿ ಪಿಳಿ ಕಣ್ಣು ಅದೇ ಮುಖ,ಅದೇ ಭಾವ,ಎಲ್ಲಿಯೂ ಹೋಗೋದು ಬರೋದು ಅಂತೂ ಇಲ್ವೇ ಇಲ್ಲ.ಕೇವಲ ಭಯ ಭಯ. ಕಪಾಟಿನಲ್ಲಿ ಡ್ರೆಸ್ಸುಗಳಂತೆ ಬದುಕು ಬಣ್ಣ ಮಾಸುತ್ತಿದೆ ದುಬಾರಿ ಮೇಕಪ್ ಕಿಟ್‌ಗಳಂತೆ ಭಾವಗಳು ಡೇಟ್ ಬಾರ ಆಗುತ್ತಿವೆ. ಒಂದಿನ ರಜೆ ಸಿಕ್ಕಿದ್ರೆ ಸಾಕಪ್ಪ ಅಂತಿದ್ದವರು ಯಾವಾಗಪ್ಪ ಕೆಲಸಕ್ಕೆ ಹೋಗೋದು ಎಂದು ಒದ್ದಾಡುತ್ತಿದ್ದಾರೆ. ಮಾಡಬೇಕಾದ ಕೆಲಸಗಳೆಲ್ಲ ಮಕಾಡೆ ಮಲಗಿವೆ. ಆದರೆ ರಾತ್ರಿ ಬೆಳಗು ಮಾತ್ರ ಆಗುತ್ತಲೇ ಇದೆ,  ನಾವು ಮಾತ್ರವೇ ನಿಂತ ನೀರಾಗಿದ್ದೇವೆ ಎಂದು ಅಲವತ್ತು ಕೊಳ್ಳುತ್ತ,  ಆವಾಹನೆ ಮಾಡದೇ ಹೋದರೂ ಬರುವ ಬೇಸರದ ಬೂತಕ್ಕೆ ಬಸವಳಿದು ಹೋಗಿದ್ದೇವೆ. ಆರಂಭದ ಬದಲಾವಣೆಯನ್ನು ನಗು ನಗುತ್ತಲೇ ಸ್ವೀಕರಿಸಿದ ನಾವು,ಹೊಸ ಮಾರ್ಪಾಡಾಗಿ ಬದಲಾಯಿಸಿಕೊಳ್ಳಬೇಕೆಂದುಕೊಂಡ ನಾವು, ಈಗ ಮುಗುಮ್ಮಾಗಿ ಕುಳಿತಿದ್ದೇವೆ. ಉತ್ಸಾಹ ಕುಂದಿದೆ.ಅಯ್ಯೋ ಏನಾದರೂ ಆಗಲಿ, ಒಂದು ಬದಲಾವಣೆ ಬರಲಿ, ಎಂದು ಬಕ ಪಕ್ಷಿಯಂತೆ ಕಾಯುತ್ತಿದ್ದೇವೆ. ಬಂದಿಸಿಟ್ಟ ಸಮಯವನ್ನೂ ಸಂಯಮದಿಂದ ಕಳೆಯಬೇಕು. ಹೊಸತೇನ್ನೋ ಕಂಡುಕೊಳ್ಳಬೇಕು,ಎಂದು ಮನಸಿನಲ್ಲಿ ಲೆಕ್ಕ ಹಾಕಿದ ಸರಕುಗಳೆಲ್ಲ ಮುಗಿದು ಹೋಗಿವೆ. ಏನನ್ನೇ ಆದರೂ ಎದುರಿಸುವ ಛಲ ಕಳ್ಳಬೆಕ್ಕಿನಂತೆ ಓಡಾಡುತ್ತಿದೆ. ಯಾವ ಏಕತಾನತೆಯೇ ಆದರೂ ಬೇಸರ ತರಿಸುವುದು ಮನುಷ್ಯನ ಸ್ವಾಭಾವಿಕ ಗುಣಲಕ್ಷಣ,ಬಂಗಲೆಯಲ್ಲಿ ಬದುಕುವವಗೆ ಗುಡಿಸಲು ಆಕರ್ಷಿಸುವಂತೆ, ಗುಡಿಸಲು ಅರಮನೆಯ ಕನಸು ಕಾಣುವಂತೆ, ನಿರಂತರವಾದ ಸುಖ, ಪ್ರೀತಿ,ನೋವು, ಕಷ್ಟಗಳೂ, ಬದಲಾವಣೆಯನ್ನು ಬಯಸುತ್ತವೆ ಮತ್ತು ಬದಲಾವಣೆಯ ಮಾರ್ಗವನ್ನೂ ಕಂಡುಕೊಳ್ಳುತ್ತವೆ. ಯಾಕೆಂದರೆ ಮನುಷ್ಯ ಸದಾ ಚಲನೆಯನ್ನು ಇಷ್ಟಪಡುತ್ತಾನೆ. ನಿಂತ ನೀರಾದರೆ ಅಸಾಧ್ಯ ಅಸಹನೆಯಿಂದ ಗಬ್ಬುನಾರಲು ಶುರುವಾಗುತ್ತಾನೆ. ಓಡುವ ಮೋಡ,ಹರಿಯುವ ನದಿ. ಬೀಸುವ ಗಾಳಿ,ಕೊನೆಗೆ ಭೂಮಿ ಸೂರ್ಯ ಚಂದ್ರ ಸಕಲ ಗ್ರಹಗಳೂ ಚಲನೆಯ ಪ್ರತೀಕವೇ.ಅವುಗಳನ್ನೆಲ್ಲ ಹೇಗೆ ತಡೆದು ಹಿಡಿಯಲು ಸಾಧ್ಯವಿಲ್ಲವೋ , ತಡೆದರೂ ಅನಾಹುತವಾಗುವದೋ, ಮನುಷ್ಯನ ಚಲನೆಯನ್ನು ತಡೆದರೂ ಅದೇ ಸಂಭವಿಸುತ್ತದೆ.  ಇನ್ನು ಪುಟ್ಟ ಪುಟ್ಟ ಮಕ್ಕಳನ್ನು ಹೇಗೆ ಒಂದೇ ಗತಿಯಲ್ಲಿ ಇಡಲು ಸಾಧ್ಯ. ಬಹಳವೇ ಖಿನ್ನರಾಗುತ್ತಿದ್ದಾರೆ ಅವರು. ಶಾಲೆ ಎನ್ನುವುದು ಮಕ್ಕಳಿಗೆ ಬೇಸರಕ್ಕಿಂತ ಹೆಚ್ಚು ಆಪ್ತಸಂಗತಿ. ಮನೆಯಲ್ಲಿ ಇದ್ದೂ ಇದ್ದೂ ಏನೂ ಘಟಿಸದ ಬದುಕಿನಿಂದ ಬೇಸತ್ತ ಭಾವ ಹಲವು ಮಕ್ಕಳಲ್ಲಿ ವ್ಯಕ್ತವಾಗುತ್ತಿದೆ. ಸ್ವಚ್ಚಂದ ಹಕ್ಕಿಗಳ ಗೂಡಿನಲ್ಲಿ ತುಂಬಿದರೆ ಏನಾದೀತು ಅಲ್ಲವೇ!? ಎನನ್ನೇ ಆದರೂ ಸ್ವಲ್ಪ ದಿನ ಸಹಿಸಿಕೊಳ್ಳುತ್ತದೆ. ಮನಸು. ಬಹಳ ಧೀರ್ಘಕಾಲದವರೆಗಿನ ಏಕತಾನತೆಗೆ ಒಳಗಾಗಲಾರದು. ಬದಲಾವಣೆ ಬಯಸುತ್ತಲೇ ಇರುತ್ತದೆ. ಆಗಲೇ ಅಲ್ಲವೇ? ನಾವು ಪ್ರವಾಸ, ಶಾಪಿಂಗ್,ಸಂಬಂಧಿಕರಮನೆ,ಅಂತೆಲ್ಲ ತಾತ್ಕಾಲಿಕ ಗ್ಯಾಪ್ ತೆಗೆದುಕೊಂಡು ಮತ್ತೆ ಸ್ವಕ್ಷೇತ್ರಕ್ಕೆ ಮರಳುವದು. ಜೀವನದ ಪರ್ಯಂತ ನಾವು ಹೀಗೆ ಮನಸ್ಸನ್ನು, ಬದುಕನ್ನು, ರಿಪ್ರೆಷ್ ಆಗುವ ಕಾರ್ಯ ಮಾಡುತ್ತಲೇ ಇರುತ್ತೇವೆ,ಏಕೆಂದರೆ ಆಗಾಗ ಬರುವ ಏಕತಾನತೆಯಿಂದ ಮಕ್ತಿಪಡೆಯಲು,ಅದು ಸರಿಕೂಡಾ. ಆದರೆ ಈಗ !? ಬದಲಾವಣೆಗಳನ್ನು ಬರಮಾಡಿಕೊಳ್ಳಲಾಗದೇ ಅಸಹಾಯಕರಾಗಿ ಪರ ಪರ ಕೆರೆದುಕೊಳ್ಳುವ ಹಂತಕ್ಕೆ ತಲುಪಿದ್ದೇವೆ. ಅಪರೂಪಕ್ಕೆ ಹೊರಗೆ ಕಾಲಿಟ್ಟ ಗಳಿಗೆಯನ್ನೇ ಭಯಂಕರ ಖುಷಿಯಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಇಷ್ಟೆಲ್ಲ ಬದಲಾವಣೆಗಳನ್ನು ಮನಸು ಬಯಸುವಾಗ, ಇನ್ನೆಷ್ಟು ದಿನ ಒಂದೇ ರುಚಿಯ ಫಲಾವ್ ಅನ್ನೇ ಹೊಗಳಿ ಹೊಗಳಿ ತಿನ್ನಲು ಸಾಧ್ಯ!? ಅವನ ಏಕತಾನತೆಗೂ ಅರ್ಥವಿದೆ ಅಂತನ್ನಿಸಿತು ನನಗೂ. ಮತ್ತೆ ನನ್ನೆದುರು ಬಂದು ಅಮ್ಮಾ ಶಾಲೆ ಶುರುವಾದರೆ ಎಲ್ಲ ಸರಿಯಾಗುತ್ತೆ ಅಂದ. ಹೌದು ಕಣೋ ಶಾಲೆಗೆ ಹೋಗಿ ಬಿಸಿಯೂಟ ಉಂಡು ಸ್ನೇಹಿತರ ಜೊತೆ ಕಳೆದು ಓದು ಬರಹ ತಲೆ ತುಂಬಾ ಹೊದ್ದು ಹೈರಾಣಾದಾಗ. ಖಂಡಿತವಾಗಿ ಮತ್ತದೇ ಫಲಾವ್ ಗೆ ಬಾಯಿ ಚಪ್ಪರಿಸುತ್ತೀಯಾ. ಬದುಕೂ ಹಾಗೆ  ಸಂಪೂರ್ಣವಾಗಿ ನಿರಂತರ ಬದಲಾವಣೆಯೊಂದಿಗೇ ಅನುಭವಿಸುತ್ತಿರಬೇಕು ಆಗಲೇ ಲವಲವಿಕೆ. ಕಾಲ ಚಕ್ರದ ಗತಿಯಲ್ಲಿ ಏಳುಬೀಳುಗಳ ಸರಿದೂಗಿಸಿ ಹೋರಾಡುತ್ತಿದ್ದರೇ ಬದುಕಿಗೊಂದು ಅರ್ಥ ಎಂದೆ. ಬೇಗ ಶಾಲೆ ಶುರುವಾಗಲಿ ಎಂದು ಪ್ರಾರ್ಥಿಸುತ್ತಿದ್ದ. *******************************************************

ಏಕೀ ಏಕತಾನತೆ Read Post »

ಇತರೆ

ನಿತ್ಯ ಸಾವುಗಳ ಸಂತೆಯಲಿ ನಿಂತು

ಲೇಖನ ನಿತ್ಯ ಸಾವುಗಳ ಸಂತೆಯಲಿ ನಿಂತು ಬದುಕ ಪ್ರೀತಿ ಧೇನಿಸುತ್ತಾ… ಮಲ್ಲಿಕಾರ್ಜುನ ಕಡಕೋಳ ಕೊರೊನಾ ಎಂಬ ಸಾವುಗಳ ಶಕೆ ಆರಂಭವಾಗಿ ಆರೇಳು ತಿಂಗಳುಗಳೇ ಕಳೆಯುತ್ತಿವೆ. ತೀರಾ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳನ್ನು ಜಾಲಾಡುತ್ತಿದ್ದರೆ ಗುಡ್ಡೆ, ಗುಡ್ಡೆ ಸಾವುಗಳ ಗುಡ್ಡವೇ ಗೋಚರ. ಜತೆಯಲಿ ಕೆಲಸ ಮಾಡಿದ ಸಹೋದ್ಯೋಗಿಗಳು ಸೇರಿದಂತೆ ನಮ್ಮ ಸಾಂಸ್ಕೃತಿಕ ಬಳಗದ ಒಡನಾಟದಲ್ಲಿರುವ ಸಾಹಿತಿ, ಕಲಾವಿದರ ಸಾಲು ಸಾಲು ಸಾವುಗಳು. ಸಾಹಿತಿ, ಕಲಾವಿದರ ಸಾವಿಲ್ಲದ ದಿನಗಳೇ ಇಲ್ಲ ಎನ್ನುವಂತಾಗಿದೆ. ನಾಳೆ ಯಾರ ಸರದಿಯೋ..? ಸಾವಿನ ಸರದಿಯಲ್ಲಿ ಕಾಯುತ್ತಾ ನಿಂತಂತಹ ನಡುಕ ಹುಟ್ಟಿಸುವ ದುಗುಡ, ದುಮ್ಮಾನ ಬಹುತೇಕ ಎಲ್ಲರನ್ನೂ ಕಾಡುತ್ತಿರುವುದು ಸುಳ್ಳಲ್ಲ. ಅರೇ! ಇದೇನಿದು ಸಂಸ್ಕೃತಿ ಚಿಂತಕರು ಈ ಪರಿಯಾಗಿ ಸಾವಿಗಂಜುವುದೇ!? ಅಂತ ಅನಿಸಬಹುದು. ಹಾಗೆ ಅಂಜಿ ಅಡಗಿ ಕುಳಿತರೇನು ಸಾವು ದೂರ ಸರಿಯುವುದುಂಟೇ ? ಇಲ್ಲವೇ ಇಲ್ಲ ಅದು ಯಾರನ್ನೂ ಬಿಡುವುದಿಲ್ಲ. ಸಾವು ಬಂದರೇನು ಸಿಟ್ಟಿಲ್ಲ. ಅದು ಮಹಾ ಮಹಾಂತರನೇ ಬಿಟ್ಟಿಲ್ಲ ಎಂಬ ತತ್ವಪದ ನೆರವಿಗಿದ್ದರೂ ಸಾವು ಬೇಕಾದರೆ ಬರಲಿ. ಆದರೆ ಕೊರೊನಾ ಬಾರದಿರಲಿ. ಸೋಜಿಗವೆಂದರೆ ದುಗುಡ ತುಂಬಿದ ಈ ದುರಿತ ಕಾಲದಲ್ಲೇ ಬಹಳಷ್ಟು ಬರಹಗಳು, ಚಿಂತನೆಗಳು, ಆನ್ ಲೈನ್ ಎಂಬ ಮಹಾಬಯಲು ಆಲಯದಲ್ಲಿ ಬೆಳಕು ಕಾಣುತ್ತಿವೆ. ಒಂದು ಮಾತು ಮಾತ್ರ ಖರೇ, ಅದೇನೆಂದರೆ : ಸಾವಿಗಂಜದವರೂ ಪ್ರಾಣಹಂತಕ ಕೊರೊನಾ ವೈರಾಣುವಿಗೆ ಹೆದರಿದ್ದಾರೆ. ಹೀಗೆ ಕೊರೊನಾಕ್ಕೆ ಹೆದರಿ, ಹೆದರಿ ಖಿನ್ನತೆಯ ದರಪ್ರಮಾಣ ಯದ್ವಾತದ್ವಾ  ಏರಿಕೆಯಾಗಿದೆ. ಸಮೀಕ್ಷೆಯೊಂದರ ಪ್ರಕಾರ ಶೇಕಡಾ ಎಪ್ಪತ್ತಕ್ಕೂ ಹೆಚ್ಚುಮಂದಿ ಮಧ್ಯಮ ವರ್ಗದವರು ಕೊರೊನಾ ಭೀತಿರೋಗದ ಖಿನ್ನತೆಯಿಂದ ನರಳುತ್ತಿದ್ದಾರೆ. ಮನುಷ್ಯರ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ನೆನಪಿಗೆ ಬರುವುದೇ ಕೊವಿಡ್. ಅವರಿಗೆ ಬಂದುದು ಕೊವಿಡ್ಅಲ್ಲರಿ, ಅದು ಹಾರ್ಟ್ ಅಟ್ಯಾಕ್ ಅಂತ ಹೇಳಿದರೂ ನಂಬುಗೆಯೇ ಬರುವುದಿಲ್ಲ. ಕೊವಿಡ್ ಎಂಬ ಕಳಂಕದ ಅಪರಾಧಪ್ರಜ್ಞೆ ಭಲೇ ಭಲೇ ವಿದ್ಯಾವಂತರನ್ನೇ ಕಾಡುತ್ತಿದೆ. ಪತ್ರಿಕೆ, ಮೊಬೈಲುಗಳ ತುಂಬೆಲ್ಲಾ ದಿನನಿತ್ಯವೂ ಸಾವಿನ ಸುದ್ದಿಗಳದೇ ಸುಗ್ಗಿ. ವಾಟ್ಸ್ಯಾಪ್, ಮುಖಹೊತ್ತಿಗೆಗಳನ್ನು ಓಪನ್ ಮಾಡಲು ಧೈರ್ಯಬಾರದು. ಅಬ್ಬಾ! ಇವತ್ತು ಯಾರು ನಮ್ಮನ್ನು ಅಗಲಿದ್ದಾರೆಂಬ ಭಯಾನಕ ಹೆದರಿಕೆ. ತೀರಿಹೋದ ಸಾಹಿತಿ, ಕಲಾವಿದರ ಕೃತಿಗಳು ಅವರ ಬದುಕಿನ ಸಾಂಸ್ಕೃತಿಕ ಒಡನಾಟಗಳು, ಅವರ ಸಕ್ರಿಯ ಚಟುವಟಿಕೆಗಳು ನನ್ನಂಥ ಅನೇಕರನ್ನು ಆರ್ದ್ರವಾಗಿ ಕಾಡುವುದು ಸಹಜ. ಅದೆಲ್ಲ ಭಾವನಾತ್ಮಕ ನಡವಳಿಕೆ, ಪುಕ್ಕಲು ಮನಸ್ಥಿತಿ  ಎಂದು ಹಗುರವಾಗಿ ಪರಿಗಣಿಸಲು ಬಾರದು, ಅದು ತರವಲ್ಲ. ಹೀಗೆ ಕಾಡುತ್ತಲೇ ಇರುವ ಕಾಡಾಟದ ಹಿಂದೆ ದೈಹಿಕ ಸಾವಿಗೆ ಕಾರಣವಾದ ಪೈಶಾಚಿಕ ಗಾತ್ರದ ಪ್ಯಾಂಡಮಿಕ್ ಹುಡುಕಾಟ. ಈ ಜಿಜ್ಞಾಸೆ ಅತಿರೇಕಗೊಂಡು ದುಃಸ್ವಪ್ನದಂತೆ ನಮಗೆ ನಾವೇ ಕಂಡುಕೊಳ್ಳುವ ಎಲ್ಲ ಸಾವುಗಳ ಹಿಂದಿನ ಕಾರಣ ಕೊರೊನಾ. ಅದೀಗ ಜಾಗತಿಕ ಮಟ್ಟದಲ್ಲಿ ಮೃತ್ಯುವಿನ ಪೆಡಂಭೂತವಾಗಿದೆ. ಹೌದು ಸಾವಿಗೆ ಪರ್ಯಾಯ ಪದವೇ ಮತ್ತೆ ಮತ್ತೆ ಕೊರೊನಾ.. ಕೊರೊನಾ.. ಮಾತ್ರ ಎನ್ನುವಂತಾಗಿದೆ.  ಹೀಗೆ ಎಲ್ಲ ಸಾವುಗಳ ಹಿಂದೆ ಕೊರೊನಾ ಡೊಕ್ಕು ಹೊಡೆದಿರುತ್ತದೆಂಬ ಅಚಲ ನಂಬಿಕೆಯು ಸಾರ್ವತ್ರಿಕವಾಗತೊಡಗಿದೆ. ಅಕ್ಷರಶಃ ಅಕ್ಷರಸ್ಥ ಮತ್ತು ವಿದ್ಯುನ್ಮಾನ ಲೋಕದ ಒಡನಾಟವಿರುವ ಎಲ್ಲರ ಗಾಢ ನಂಬುಗೆಯೆಂದರೆ ನಿಸ್ಸಂದೇಹವೆಂಬಂತೆ  ಜಗತ್ ಪ್ರಸಿದ್ದ ಜಡ್ಡು ಎಂಬ ಖ್ಯಾತಿ ಗಳಿಸಿರುವ ಕೊರೊನವೇ ಸಾವಿನ ಮೂಲ. ಅದೀಗ ಹಳ್ಳಿ ಹಳ್ಳಿಗಳಲ್ಲಿಯೂ ರುದ್ರನರ್ತನ ಶುರುಮಾಡಿದೆ. ಕೊರೊನಾ ವೈರಾಣುಗಿಂತ ಅದರ ಸುತ್ತ ಹೆಣೆದು ಸ್ಥಾಯೀಗೊಳಿಸಿದ ಥರಾವರಿ ಹುನ್ನಾರದ ಕಥಾಕಥಿತ ಭಯಾನಕ ವಿದ್ಯಮಾನಗಳೇ ಮರಣವನ್ನು ತರುತ್ತಿವೆ. ಇಂತಹ ಸಾವುಗಳ ಶವಸಂಸ್ಕಾರ ಮತ್ತೊಂದು ಘನಘೋರ ಎಪಿಸೋಡ್. ಕ್ರೂರಿ ಕೊರೊನಾದ ಈ ಕಾಲಘಟ್ಟದಲ್ಲಿ ವಯೋಸಹಜ ಸಾವಿಗೂ ಸಿಗಬೇಕಾದ ಗೌರವ ಖಂಡಿತಾ ಸಿಗುತ್ತಿಲ್ಲ. ಎಲ್ಲಾ ಸಾವುಗಳನ್ನು ಕೊರೊನಾ ಕನ್ನಡಕದ ಮೂಲಕ ನೋಡುವಂತಾಗಿದೆ. ಮುಂಬಯಿನಂತಹ ಮಹಾನಗರಗಳಲ್ಲಿ ಕೊರೊನಾ ಪೀಡಿತರ ಸಾವುಗಳ ಕುಟುಂಬದವರೇ ಶವವನ್ನು ಪಡೆಯದೇ ಅನಾಥ ಶವಗಳಂತೆ ಮಹಾನಗರ ಪಾಲಿಕೆಗೆ ಶವ ಒಪ್ಪಿಸಿಬಿಡುವ ಅಮಾನವೀಯ ಸ್ಥಿತಿ ನಿರ್ಮಾಣಗೊಂಡಿದೆ. ನಮ್ಮಲ್ಲಿಯೂ ಪರಿಸ್ಥಿತಿ ಅಷ್ಟೇನು ಭಿನ್ನವಾಗಿಲ್ಲ. ಮಹಾನಗರ ಪಾಲಿಕೆಗಳು ನೆರವೇರಿಸುವ ಕೊವಿಡ್ ಶವಸಂಸ್ಕಾರ ಹೇಗಿರುತ್ತದೆಂಬುದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಅಸಲಿಗೆ ಅಲ್ಲಿ ಶವಸಂಸ್ಕಾರದ ತರಬೇತಿ ಪಡೆದ ಸಿಬ್ಬಂದಿ ಇರುವುದಿಲ್ಲ. ಮನುಷ್ಯರಿಗೆ ಬದುಕಿದ್ದಾಗಲೂ ಗೌರವ ಸಿಗದ ಸನ್ನಿವೇಶದ ಈ ಕಾಲದಲ್ಲಿ ಸತ್ತಾಗಲಾದರೂ ಕಿಂಚಿತ್ ಗೌರವ ಬೇಡವೇ.? ಬಳ್ಳಾರಿ, ಚನ್ನಗಿರಿ, ಯಾದಗಿರಿ ಘಟನೆಗಳು ನಮ್ಮೆದುರಿಗಿವೆ . ಬಳ್ಳಾರಿಯಲ್ಲಂತೂ ಒಂಬತ್ತು ಹೆಣಗಳನ್ನು ಸತ್ತ ನಾಯಿ, ಹಂದಿಗಳನ್ನು ಎಳಕೊಂಡು ಬರುವಂತೆ ದರದರನೆ ಎಳಕೊಂಡು ಬಂದು ಎಲ್ಲಾ ಒಂಬತ್ತು ಹೆಣಗಳನ್ನು ಒಂದೇ ಗುಣಿಯಲ್ಲಿ ಎಸೆದು ಬಿಡುವ ದೃಶ್ಯಗಳನ್ನು ನೋಡುತ್ತಿದ್ದರೆ ಕೊರೊನಾ ಎಂತಹ ರಣಭೀಕರ ಭಯ ಹುಟ್ಟಿಸಿದೆಯೆಂಬುದು ತಿಳಿಯುತ್ತದೆ. ಖುದ್ದು ಮಗನೇ ತಂದೆ ತಾಯಿ ಹೆಣದ ಮುಖ ನೋಡಲು ಸಿದ್ದನಿಲ್ಲ. ಇನ್ನು ಒಡಹುಟ್ಟಿದವರು ತಮ್ಮ ತಮ್ಮ ಮನೆಯವರ ಕೊವಿಡ್ ಹೆಣಗಳನ್ನು ಖುದ್ದು ಶವಸಂಸ್ಕಾರಕ್ಕೆ ಸಿದ್ಧರಿಲ್ಲ. ಹೀಗೆ ಮನುಷ್ಯ ಸಂಬಂಧ, ಪ್ರೀತಿ, ಅಂತಃಕರಣಗಳು ನಿರ್ನಾಮಗೊಳ್ಳುತ್ತಿವೆ. ಒಟ್ಟು ಮಾನವ ಸಮಾಜ ಮಾನವೀಯತೆ ಕಳೆದುಕೊಳ್ಳುವ ಹೆದ್ದಾರಿಯಲ್ಲಿದೆ. ಇದೆಲ್ಲ ಗಮನಿಸುತ್ತಿದ್ದರೆ ಕೊವಿಡ್ ಸಂವೇದನಾಶೀಲ ಜೀವಸಂಬಂಧಗಳನ್ನೇ ಛಿದ್ರ ವಿಛಿದ್ರಗೊಳಿಸಿದ್ದು ಖರೇ. ತಂದೆ, ತಾಯಿ, ಮಕ್ಕಳ ನಡುವಿನ ಸಂಬಂಧಗಳನ್ನೇ ಕೊಂದು ಹಾಕಿದೆ. ತಿಂಗಳುಗಟ್ಟಲೇ ವಿದ್ಯುನ್ಮಾನ ಮಾಧ್ಯಮಗಳು ಕೊರೊನಾ ಕುರಿತು ರಣಭಯಂಕರ ಭಯ ಹುಟ್ಟಿಸಿ ಇದೀಗ ತಾರಾಲೋಕದ ನಶಾ ಜಗತ್ತಿನತ್ತ ಚಿತ್ತ ಹರಿಸಿವೆ. ಕೊವಿಡ್ ಕುರಿತು ಅವು  ಒಂದು ವರ್ಷಕ್ಕಾಗುವಷ್ಟು ಭಯೋತ್ಪಾದನೆಯ ಎಲ್ಲ ಬಗೆಯ ವೈರಾಣುವಿಗಿಂತ ಭೀಕರವಾದ ಸರಕು, ಶಸ್ತ್ರಾಸ್ತ್ರಗಳನ್ನು ಸಿದ್ಧಗೊಳಿಸಿಯಾಗಿದೆ‌.    ಕೊವಿಡ್ ಕೇಂದ್ರಗಳು ಮತ್ತು ಜಿಲ್ಲಾ ಮಟ್ಟದ ಎಲ್ಲಾ ಆಸ್ಪತ್ರೆಗಳಲ್ಲಿ ಮುಖ್ಯವಾಗಿ ಬೇಕಿರುವುದು ಆಪ್ತಸಮಾಲೋಚನೆಯ ಘಟಕ. ಅಲ್ಲಿ ಪರಿಣಿತ ಸಿಬ್ಬಂದಿಗಳಿರಬೇಕು. ಎಷ್ಟೋಮಂದಿ ಭಯಭೀತರಾಗಿ ಕೊರೊನಾ ಶಂಕೆಯಿಂದಾಗಿ ಆತ್ಮಹತ್ಯೆಯ ಮೊರೆ ಹೋಗಿರುವುದುಂಟು. ಇಂಥವರಿಗೆ ಸಕಾಲದಲ್ಲಿ ಆಪ್ತಸಮಾಲೋಚಕರಿಂದ ಸೂಕ್ತ ಕೌನ್ಸೆಲಿಂಗ್ ದೊರಕಿದ್ದರೆ ಬದುಕುಳಿಯುವ ಸಾಧ್ಯತೆಗಳಿದ್ದವು. ಕೊರೊನಾಕ್ಕೆ ಚಿಕಿತ್ಸೆಯೇ ಇಲ್ಲವೆಂದಾದಲ್ಲಿ ಹೆಚ್ಚುಪಾಲು ಆಪ್ತ ಸಮಾಲೋಚನೆಯೇ ಸರಿಯಾದ ಮದ್ದು. ಬಹಳಷ್ಟು ಜನ ಕೊರೊನಾ ಕುರಿತು ಪ್ಯಾನಿಕ್ ಆಗಿಯೇ ರೋಗನಿರೋಧಕ ಶಕ್ತಿ ಕಳೆದುಕೊಳ್ಳುತ್ತಾರೆ. ಅಂಥವರೇ ಅಧಿಕ ಸಂಖ್ಯೆಯಲ್ಲಿರುವುದರಿಂದ ಆಪ್ತ ಸಮಾಲೋಚನೆಗೆ ಅಧಿಕ ಆದ್ಯತೆ ನೀಡಬೇಕಿದೆ. ಮಾಸ್ಕ್ ಬಿಸಾಕಿ ನಿರ್ಭಯವಾಗಿ ಜನರ ನಡುವೆ ಓಡಾಡುವ, ಮೊದಲಿನಂತೆ ಸಮುದಾಯದಲ್ಲಿ ನಿರ್ಭೀತಿಯಿಂದ ಬೆರೆತು ಬಾಳುವ ಸಹಭಾಗಿತ್ವದ ವಾತಾವರಣ ಇನ್ನುಮುಂದೆ ಇಲ್ಲವೇ? ಕೊವಿಡ್ ಹತ್ತೊಂಬತ್ತರ ದುರಿತಕಾಲ ಕೊನೆಗೊಂಡು ಮತ್ತೆ ಮರಳಿ ಹಿಂದಿನ ಆ ದಿನಗಳನ್ನು ಕಾಣಬಲ್ಲೆವೇ ? ಕಾಣುವುದಾದರೆ ಯಾವಾಗ ಯಾವ ತಿಂಗಳ ಯಾವ ದಿನಗಳಿಂದ ? ಮಣಭಾರದ ಈ ಪ್ರಶ್ನೆಗಳಿಗೆ ಸರಕಾರದ ಬಳಿ, ವಿಜ್ಞಾನಿಗಳ ಬಳಿ, ವೈದ್ಯರ ಬಳಿ, ಹೋಗಲಿ ದೇವರಿದ್ದರೆ ದೇವರ ಬಳಿ ಹೀಗೆ ಯಾರ ಬಳಿಯಲ್ಲಾದರು ಉತ್ತರಗಳಿದ್ದರೆ ಸಾರ್ವಜನಿಕವಾಗಿ ತಿಳಿಸಿ ಪುಣ್ಯ ಕಟ್ಟಿಕೊಳ್ಳಲಿ. *********************************************  

ನಿತ್ಯ ಸಾವುಗಳ ಸಂತೆಯಲಿ ನಿಂತು Read Post »

ಇತರೆ

ಎಂಜಿನಿಯರ್ಸ್ ಆಗಿ ನಾವೇನು ಮಾಡಬಹುದು?

ಲೇಖನ ಎಂಜಿನಿಯರ್ಸ್ ಆಗಿ ನಾವೇನು ಮಾಡಬಹುದು? ಸುಶ್ಮಿತಾ ಐತಾಳ್        ಎಂಜಿನಿಯರ್ಸ್ ಡೇ ಆದ ಇಂದು ಎಲ್ಲೆಲ್ಲೂ ನಮಗೆ ಆದರ್ಶ ಪ್ರಾಯರಾಗಿರುವ ಮಹಾನ್ ವ್ಯಕ್ತಿ ವಿಶ್ವೇಶ್ವರಯ್ಯನವರ ಭಾವಚಿತ್ರಗಳು ರಾರಾಜಿಸುತ್ತಿರುವುದು ಕಾಣುತ್ತಿವೆ. ಅವರು ಎಷ್ಟು  ಬುದ್ಧಿವಂತರಾಗಿದ್ದರು, ಎಷ್ಟು ಪರಿಶ್ರಮಿಗಳೂ ಪ್ರಾಮಾಣಿಕ ಕೆಲಸಗಾರರೂ ಶಿಸ್ತಿನ ಸಿಪಾಯಿಯೂ ಆಗಿದ್ದರು ಮುಂತಾಗಿ ಅವರ ಗುಣ ಗಾನ ಮಾಡುವುದು ಕೇಳುತ್ತಿದೆ. ಆದರೆ ಇಷ್ಟು ಮಾಡಿದರೆ ಮುಗಿಯಿತೇ? ವಿಶ್ವೇಶ್ವರಯ್ಯ ಅವರ ಹುಟ್ಟಿದ ದಿನವನ್ನು ಎಂಜಿನಿಯರ್ಸ್ ಡೇ ಎಂದು ನಾವು ಯಾಕೆ ಆಚರಿಸುತ್ತೇವೆ? ಈ ದಿನ ನಾವು ಏನನ್ನು ನೆನಪಿಸಿಕೊಳ್ಳ ಬೇಕಾಗಿದೆ?         ನಮ್ಮ ದೇಶದಲ್ಲಿ ದಿನದಿನವೂ ಸಾವಿರಾರು ಅಪಘಡ ಮತ್ತು ಅಪಘಾತಗಳ ಬಗ್ಗೆ ನಾವು ಕೇಳುತ್ತಿದ್ದೇವೆ..ರಸ್ತೆಗಳುದ್ದಕ್ಕೂ ಕಾಣುವ ಹೊಂಡ ಗುಂಡಿಗಳು, ಮುರಿದು ಬೀಳುವ ಸೇತುವೆಗಳು, ಬಿರುಕು ಬಿಡುವ ಗೋಡೆಗಳು, ಸೋರುವ ತಾರಸಿಗಳು, ಕುಸಿಯುವ ಕಟ್ಟಡಗಳು, ಹೊಗೆಯುಗುಳಿ ಪರಿಸರವನ್ನು ವಿಷಮಯಗೊಳಿಸುವ ಕಾರ್ಖಾನೆಗಳು- ಹೀಗೆ ಎಲ್ಲೆಡೆಯೂ ಸರಕಾರದಿಂದಲೋ ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳಿಂದಲೋ  ಹಂಚಿಕೆಗೊಳಿಸಲ್ಪಡುವ ಹಣವನ್ನು ನುಂಗಿ ಒಳಗೆ ಹಾಕಿಕೊಂಡು ಯಾವುದೇ ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆ ಇಲ್ಲದೆ ಜನತೆಗೆ ದ್ರೋಹ ಬಗೆಯುವ ಎಂಜಿನಿಯರ್ಗಳು ನಮ್ಮ ನಡುವೆ ಸಾಕಷ್ಟು ಮಂದಿ ಇದ್ದಾರೆ. ಇಂಥವರಲ್ಲಿ ಜವಾಬ್ದಾರಿಯ ಅರಿವು ಮೂಡಿಸುವವರು ಯಾರು? ಅಥವಾ ಮೂಡಿಸುವ ಬಗೆ ಎಂತು?     ಮನುಷ್ಯ ಮನಸ್ಸು ಮಾಡಿದರೆ ಸಾಧ್ಯವಾಗದಿರುವುದು ಯಾವುದೂ ಇಲ್ಲ. ಸಂಕಲ್ಪ ಶಕ್ತಿ ನಮ್ಮಲ್ಲಿ ಇರಬೇಕು ಅಷ್ಟೆ. ಎಂಜಿನಿಯರುಗಳು ದೇಶದ ಬೆನ್ನೆಲುಬು ಇದ್ದ ಹಾಗೆ. ಅನೇಕ ಯುವ ಎಂಜಿನಿಯರುಗಳಿಗೆ ತಾವೇನು ಮಾಡಬೇಕಾಗಿದೆ, ಏನು ಮಾಡುತ್ತಿದ್ದೇವೆ ಅನ್ನುವ ಅರಿವಾಗಲಿ ಚಿಂತನೆಯಾಗಲಿ ಇರುವುದಿಲ್ಲ. ಕೈಗೆ ಸಂಬಳವೋ ಗಿಂಬಳವೊ ಬಂದರಾಯಿತು, ಜನತೆಯ ಸೌಖ್ಯದ ಚಿಂತೆ ತಮಗೆ ಯಾಕೆ ಅಂದುಕೊಳ್ಳುತ್ತಾರೆ. ಅಂಥವರಲ್ಲಿ ಅರಿವು ಮೂಡಿಸುವ ಕೆಲಸವನ್ನು ಎಂಜಿನಿಯರುಗಳ ಸಂಘಟನೆಗಳು ಮಾಡಬೇಕು. ಕಾಲಕಾಲಕ್ಕೆ ಇಂಥ ವಿಷಯಗಳ ಬಗ್ಗೆ ಸಭೆಗಳಲ್ಲಿ ಚರ್ಚಿಸುವುದರಿಂದ ರಾತ್ರಿ ಬೆಳಗಾಗುವುದರೊಳಗೆ ಬದಲಾವಣೆಯಾಗದಿದ್ದರೂ, ಯುವಜನತೆಯಲ್ಲಿ     ಜವಾಬ್ದಾರಿಯ ಪ್ರಜ್ಞೆ ಮೂಡಿಸುವ ಕೆಲಸವಾದರೂ ಆಗಬಹುದು.ಆ ಮೂಲಕ ವಿಶ್ವೇಶ್ವರಯ್ಯನವರು ಮಾಡಿದ ಘನಕಾರ್ಯಗಳಿಗೆ ಗೌರವವಿತ್ತಂತಾಗಬಹುದು. *******************************************

ಎಂಜಿನಿಯರ್ಸ್ ಆಗಿ ನಾವೇನು ಮಾಡಬಹುದು? Read Post »

ಇತರೆ

ವಿಶ್ವ ಅಭಿಯಂತರರ ದಿನಾಚರಣೆ.

ಲೇಖನ ವಿಶ್ವ ಅಭಿಯಂತರರ ದಿನಾಚರಣೆ. ಜಯಶ್ರೀ.ಭ.ಭಂಡಾರಿ. ಮೋಕ್ಷಗುಂಡ ವಿಶ್ವೇಶರಯ್ಯನವರ ಜನ್ಮದಿನವನ್ನು ಇಂಜನೀಯರ್ಸ ಡೇಯಾಗಿ ಆಚರಿಸಲಾಗುತ್ತದೆ. ಇಂದು (ಸಪ್ಟಂಬರ 15) ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲೊಬ್ಬರಾದ ಭಾರತರತ್ನ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಜನ್ನದಿನ. ಇದನ್ನು ಭಾರತದಲ್ಲಿ ಇಂಜನೀಯರ್ಸ ಡೇ ಯನ್ನಾಗಿ ಆಚರಿಸಲಾಗುತ್ತಿದೆ.ಇಂಜನೀಯರಿಂಗ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಅಪಾರ ಸೇವೆಯ ನೆನಪಿಗಾಗಿ ಅವರ ಜನ್ಮ ದಿನವನ್ನು ‘ಇಂಜನೀಯರ ದಿನ’ವನ್ನಾಗಿ ಆಚರಿಸಲಾಗುತ್ತದೆ.ಭಾರತ ಜನನಿಯ ತನುಜಾತೆ ಕರ್ನಾಟಕಕ್ಕೆ ವಿಶ್ವೇಶ್ವರಯ್ಯನವರು ದೊಡ್ಡ ಕೊಡುಗೆ.ಸಪ್ಟಂಬರ 15 1860 ರಂದು ಜನಸಿದ ಇವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಮುಂಬೈ ರಾಜ್ಯದ ಪೂನಾದಲ್ಲಿ 1884 ರಲ್ಲಿ ಇಂಜನೀಯರಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂಬೈ ಸರ್ಕಾರದಲ್ಲಿ ಸೇವೆಯನ್ನು ಆರಂಭಿಸಿದರು.1907 ರವರೆಗೆ ಮುಂಬೈ ಸರ್ಕಾರದಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಮುಂದಿನ ಅವಧಿಯಲ್ಲಿ ಇಡೀ ಭಾರತ ದೇಶದಲ್ಲಿ ತಮ್ಮ ಪ್ರತಿಭೆಯಿಂದ ಹಾಗೂ ಕಾರ್ಯಗಳಿಂದ ಪ್ರಸಿದ್ಧರಾದರು.   ಮುಂಬೈ ರಾಜ್ಯದಲ್ಲಿ ವಿಶ್ವೇಶ್ವರಯ್ಯನವರ ಸೇವೆ ಅಸಾಧಾರಣ.ಪುಣೆ,ಕೊಲ್ಲಾಪುರ,ಸೋಲಾಪುರ, ವಿಜಾಪುರ ಮತ್ತು ಧಾರವಾಡ ಈ ನಗರಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.ಮುಂಬೈ ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವಾಗಲೇ ಇಟಲಿ ದೇಶದ ವಿಲಾಸ ಮತ್ತು ಈಡನ ನಗರಗಳಿಗೆ ಭೇಟ್ಟಿ ನೀಡಿ ಆ ನಗರಗಳ ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಗಳ ಯೋಜನೆಯನ್ನು ರೂಪಿಸಿದ್ದರು. ಮುಂಬೈ ರಾಜ್ಯದಲ್ಲಿ ಅವರು ಸೇವೆಯಲ್ಲಿದ್ದಾಗ ಪುಣೆ ನಗರದಲ್ಲಿ ಆಗಿನ ಮಹಾನ ನಾಯಕರಾಗಿದ್ದ ಲೋಕಮಾನ್ಯ ತಿಲಕ,ರಾನಡೆಯವರು ಮತ್ತು ಗೋಪಾಲಕೃಷ್ಣ ಗೋಖಲೆಯವರಿಂದ ದೇಶಪ್ರೇಮವನ್ನು ಬೆಳೆಯಿಸಿಕೊಂಡರು.ಈ ಧೀಮಂತ ನಾಯಕರುಗಳ ಸಂಪರ್ಕದಿಂದ ರಾಷ್ಟ್ರಕ್ಕಾಗಿ ಯಾವ ರೀತಿಯಿಂದ ಸೇವೆ ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು.1902 ರಲ್ಲಿ ವಿಶ್ವೇಶ್ವರಯ್ಯನವರು ಮುಂಬೈಯಲ್ಲಿ ಸೇವೆಯಲ್ಲಿದ್ದಾಗಲೇ “Pಡಿeseಟಿಣ Sಣಚಿಣe oಜಿ ಇಜuಛಿಚಿಣioಟಿ iಟಿ ಒಥಿsoಡಿe” ಎನ್ನುವ ಪುಸ್ತಕವನ್ನು ಬರೆದು ಆಗಿನ ಮೈಸೂರು ಸಂಸ್ಥಾನದಲ್ಲಿ ಇರುವ ಸ್ಥಿತಿಗತಿಗಳನ್ನು ಉತ್ತಮ ಪಡಿಸುವುದಕ್ಕಾಗಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ರೂಪುರೇಷೆಗಳನ್ನು ಹಾಕಿದ್ದರು. ಮುಂಬೈ ರಾಜ್ಯದಲ್ಲಿ ನಿವೃತ್ತಿ ಪಡೆದುಕೊಂಡ ನಂತರ ಹೈದ್ರಾಬಾದ ಸಂಸ್ಥಾನದ ನಿಜಾಮರ ಕರೆ ಮೇರೆಗೆ ಹೈದ್ರಾಬಾದ ನಗರದ ನೀರು ಸರಬರಾಜು ಒಳಚರಂಡಿ ವ್ಯವಸ್ಥೆಯನ್ನು ಅಧ್ಯಯನ ಮಾಡಿ ಒಂದು ಯೋಜನೆಯನ್ನು ವಿನ್ಯಾಸಗೊಳಿಸಿದರು . ವಿಶ್ವೇಶ್ವರಯ್ಯನವರ ಸೇವೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಹೈದ್ರಾಬಾದ ಸಂಸ್ಥಾನದ ನಿಜಾಮರು ವಿಶ್ವೇಶ್ವರಯ್ಯನವರು ರೂಪಿಸಿದ ಯೋಜನೆಯನ್ನು ಅನುಷ್ಠಾನಗೊಳಿಸಿದರು.ಹೈದ್ರಾಬಾದ ನಗರವನ್ನು ನವೀಕರಿಸಿ ಆಧುನೀಕರಿಸುವಲ್ಲಿ ವಿಶ್ವೇಶ್ವರಯ್ಯನವರ ಪಾತ್ರ ಹಿರಿದಾಗಿತ್ತು. ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಇವರು ವಿಶ್ವೇಶ್ವರಯ್ಯನವರ ಖ್ಯಾತಿಯನ್ನು ಮನಗಂಡು ಅವರ ಸೇವೆಯನ್ನು ಮೈಸೂರಿಗೆ ಬಳಸಿಕೊಳ್ಳಲು ಇಚ್ಛಿಸಿದಾಗ ವಿಶ್ವೇಶ್ವರಯ್ಯನವರು ಮೈಸೂರ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ರಾಜ್ಯದ ಸರ್ವಾಂಗೀಣ ಪ್ರಗತಿಗಾಗಿ ನನ್ನ ಸೇವೆ ಮೀಸಲಿರುವುದಾಗಿ ತಿಳಿಸಿ,ಇದಕ್ಕೆ ಒಪ್ಪುವುದಾದರೆ ನನ್ನ ಸೇವೆ ಮೈಸೂರು ರಾಜ್ಯಕ್ಕೆ ಲಭ್ಯವೆಂದು ತಿಳಿಸಿದರು.ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ ಸಹ ಸಂಸ್ಥಾನದ ಅಭಿವೃದ್ಧಿ ಕುರಿತು ದೂರದೃಷ್ಠಿ ಹೊಂದಿದ್ದರಿಂದ ವಿಶ್ವೇಶ್ವರಯ್ಯನವರ ಬೇಡಿಕೆಗೆ ಒಪ್ಪಿದರು. ವಿಶ್ವೇಶ್ವರಯ್ಯನವರು 1909ರಲ್ಲಿ ಮೈಸೂರು ಸಂಸ್ಥಾನದ ಮುಖ್ಯ ಇಂಜೀಯರ ಆಗಿ ಸೇವೆ ಸಲ್ಲಿಸುತ್ತಿದ್ದರೂ,ಇವರು ತಮ್ಮ ವ್ಯಾಪ್ತಿಯನ್ನು ಮುಖ್ಯ ಇಂಜನೀಯರ ಹುದ್ದೆಗೆ ಸೀಮಿತಗೊಳಿಸದೇ ಮೈಸೂರು ಸಂಸ್ಥಾನದಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ರೂಪಿಸುವಲ್ಲಿ ಕಾರಣೀಭೂತರಾದರು.ಇವರು ಮೈಸೂರು ಸಂಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಿ 1911 ರಲ್ಲಿ ಸಂಪದಭಿವೃದ್ಧಿ ಸಮ್ಮೇಳನ ವನ್ನು ಪ್ರಾರಂಭಿಸಿ ಸಂಸ್ಥಾನದ ಪ್ರಮುಖರೆಲ್ಲರನ್ನು ಸೇರಿಸಿ ರಾಜ್ಯದ ಸಂಪನ್ಮೂಲಗಳು,ಕೈಗಾರಿಕೆಗಳು ಇವುಗಳನ್ನು ಯಾವ ರೀತಿಯಲ್ಲಿ ಬಳಸಿಕೊಳ್ಳಬಹುದೆಂಬ ಬಗ್ಗೆ ಅಧ್ಯಯನ ಕೈಗೊಂಡರು.ತಂತ್ರಜ್ಞಾನ ಇಷ್ಟೊಂದು ಆಧುನಿಕರವಾಗಿರದ ಅಂದಿನ ಕಾಲದಲ್ಲಿಯೇ ಅವರು ನಿರ್ಮಿಸಿದ ಕರ್ನಾಟಕದ ಕೃಷ್ಣರಾಜ ಸಾಗರ ಆಣಿಕಟ್ಟು,ಬೃಂದಾವನ ಗಾರ್ಡನ,ಭದ್ರಾವತಿಯ ಉಕ್ಕಿನ ಕಾರ್ಖಾನೆ,ಮೈಸೂರು ಗಂಧದೆಣ್ಣೆ ಕಾರ್ಖಾನೆ ಮುಂತಾದವುಗಳ ಮೂಲಕ ವಿಶ್ವೇಶ್ವರಯ್ಯನವರು ಕರ್ನಾಟಕ್ಕೆ ಸರ್ವಾಂಗೀಣ ಪ್ರಗತಿಗೆ ಕಾರಣರಾದರು.ತಂತ್ರಜ್ಞಾನದ ಅದ್ಭುತಗಳನ್ನು ಭಾರತಕ್ಕೆ ಕೊಟ್ಟ ವಿಶ್ವೇಶ್ವರಯ್ಯನವರಿಗೆ ಬ್ರಿಟಿಷ ಸರಕಾರ ಸ್ವಾತಂತ್ರ್ಯ ಪೂರ್ವದಲ್ಲಿಯೇ ‘ನೈಟಹುಡ್’ ಪ್ರಶಸ್ತಿ ನೀಡಿತ್ತು. 1955 ರಲ್ಲಿ ಅವರಿಗೆ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಆಂಗ್ಲರು ಭಾರತದ ಸಂಪತ್ತನ್ನು ದೋಚಿ ತಮ್ಮ ದೇಶಕ್ಕೆ ರವಾನೆ ಮಾಡಿ,ಅಲ್ಲಿ ಸಿದ್ಧಪಡಿಸಿದ ವಸ್ತುಗಳನ್ನು ಭಾರತಕ್ಕೆ ಮಾರಾಟ ಮಾಡಿ, ಭಾರತೀಯ ಗುಡಿ ಕೈಗಾರಿಕೆಗಳನನು ಸಂಪೂರ್ಣ ನಾಶಮಾಡಿ ತಮ್ಮ ಸರಕುಗಳಿಗೆ ಭಾರತವನ್ನು ಮಾರುಕಟ್ಟೆ ಮಾಡಿಕೊಂಡು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುತ್ತಿದ್ದರು. ಪರಿಸ್ಥಿತಿಯ ತೀವ್ರತೆಯನ್ನು ಅರಿತ ಸರ ಎಂ.ವಿ. ಬ್ರಿಟಿಷರ ವಿರೋಧದ ನಡುವೆಯೂ ಭಾರತೀಯ ಕೈಗಾರಿಕೆಗಳನ್ನು ಉಳಿಸಿ,ಬೆಳೆಸುವ ಹಲವಾರು ಯೋಜನೆಯನ್ನು ಕಾರ್ಯರೂಪಕ್ಕೆ ತಂದರು. ಉಕ್ಕಿನ ಕಾರ್ಖಾನೆಯಂತಹ ಬೃಹತ್ ಕೈಗಾರಿಕೆಗಳಿಗೆ ವಿಶ್ವ ಮಾನ್ಯತೆ ದೊರಕಿಸಿಕೊಡುವಲ್ಲಿ ಯಶಸ್ವಿಯಾದರು ಇಂತಹ ಮಾನವ ಕುಲ ಈ ದಿನವನ್ನು “ವಿಶ್ವ ಅಭಿಯಂತರ ದಿನ” ಎಂದೆ ಪರಿಗಣಿಸಿ ಅವರನ್ನು ಅವರ ಕಾಯಕ ನಿಷ್ಠತೆಯನ್ನು ನೆನಪಿಸಿಕೊಳ್ಳುತ್ತದೆ.ಆ ಮೂಲಕ ವಿಶ್ವದ ಮಹಾನ ಚೇತನಕ್ಕೆ ಈ ದಿನದ ಗೌರವ ಸಮಪಿರ್ತವಾಗಿದೆ.ಕನ್ನಡಿಗರ ಆರಾಧ್ಯ ದೈವ ಈ ಅಭಿಯಂತರರು ವಿಶ್ವೇಶ್ವರಯ್ಯನವರು. ನಾವೆಲ್ಲರೂ ಮಾಡುವ ಕಾಯಕದಲ್ಲಿ ಶಿಸ್ತು, ಸ್ವಯಮ,ಆದರ್ಶಗಳನ್ನು ಅಳವಡಿಸಿಕೊಂಡು ಅವಿರತವಾಗಿ ದುಡಿದು ಅವರ ಪಥದಲ್ಲಿ ಸಾಗೋಣ ಈ ಮೂಲಕ ಅವರಿಗೆ ಗೌರವ ನಮನಗಳನ್ನು ಸಲ್ಲಿಸೋಣ.  ಜಗತ್ತು ಸುತ್ತಿಕೊಂಡ ಮಹಾಮಾರಿಗೆ ಎಲ್ಲ ಉತ್ಸವ, ಹಬ್ಬ-ಹರಿದಿನಗಳು, ಜಾತ್ರೆ ನಿಬ್ಬಣಗಳು, ದಿನಾಚರಣೆ, ಜಯಂತಿಗಳು ಬೆರಳೆಣಿಕೆಯಷ್ಟು ಜನರ‌ ನಡುವೆ ಅತೀ ಸರಳವಾಗಿ ನಡೆಯುತ್ತಿವೆ.ಇದು ಇಂದಿನ ಕಾಲಘಟ್ಟದಲ್ಲಿ ತುಂಬಾ ಅನಿವಾರ್ಯ ಕೂಡ. ವಿಶ್ವಮಾನ್ಯ ವಿಶ್ವೇಶ್ವರಯ್ಯ ನವರ ದಿನಾಚರಣೆ ಕೂಡ ಸರಳವಾಗಿ ಆಚರಿಸಿ ಪುನೀತರಾಗೋಣ.ಎಲ್ಲರಿಗೂ ವಿಶ್ವ ಅಭಿಯಂತರ ದಿನಾಚರಣೆ ಶುಭಾಶಯಗಳು. ***************************************

ವಿಶ್ವ ಅಭಿಯಂತರರ ದಿನಾಚರಣೆ. Read Post »

ಇತರೆ, ಪ್ರಬಂಧ

ಆಡು ಭಾಷೆಯ ವೈಶಿಷ್ಟ್ಯತೆ

ಪ್ರಬಂಧ ಆಡು ಭಾಷೆಯ ವೈಶಿಷ್ಟ್ಯತೆ ಬಾಲಾಜಿ ಕುಂಬಾರ ನಮ್ಮ ಉತ್ತರ ಕರ್ನಾಟಕದ ಭಾಷೆಗೂ ದಕ್ಷಿಣ ಕನ್ನಡದ ಮಾತುಗಾರಿಕೆಗೂ ತುಂಬಾ ವ್ಯತ್ಯಾಸ ಕಾಣುತ್ತೇವೆ. ಉತ್ತರ ಕರ್ನಾಟಕದ ಮಂದಿ ಹೇಳಿ ಕೇಳಿ ತುಂಬಾ ಸೀದಾ ಸಾದಾ, ಭಾಳ ಮುಗ್ದ ಸ್ವಭಾವದ ಗಟ್ಟಿ ಜನ, ಬಿಳಿ ಜೋಳ ರೊಟ್ಟಿ , ಫುಂಡೆ ಪಲ್ಯ ಜೊತೆಗೆ ಉಳಾಗಡ್ಡೆ ಖಾರಾ, ಹಸಿ ಖಾರಾ ತಿಂದರೂ ‘ಇನ್ನೂ ಸ್ವಲ್ಪ ಸಪ್ಪಗೆ ಆಗ್ಯಾದ್ ಪಲ್ಯ’ ಎನ್ನುವ ಜವಾರಿ ಜನ, ಎಲ್ಲಿ ಹೋದರೂ ಏನಾದರೂ ಹೊಸತನ ಕಾಣುವುದು, ಹೊಸ ಕಲಿಕೆ, ಹೊಸ ಅಲೋಚನೆ , ವಿಶಿಷ್ಟ ಕಾರ್ಯಗಳಿಗೆ ಹೆಸರುವಾಸಿ ಜನ ಉತ್ತರ ಕರ್ನಾಟಕ ಮಂದಿ, ಹೀಗಾಗಿ ಉತ್ತರ ಕರ್ನಾಟಕ ಭಾಷೆ ಕೂಡ ಅಷ್ಟೇ ವೈವಿಧ್ಯಮಯ ಲವಲವಿಕೆಯಿಂದ ಕೂಡಿದೆ.  ಇಲ್ಲಿನ ಜನ ಹೊರಗಡೆ ಹೋಗಲು ಬಸ್ ರೈಲುಗಳಲ್ಲಿ ಪ್ರಯಾಣ ಮಾಡಬೇಕಾದರೆ ಪಕ್ಕದ ಸೀಟಿನಲ್ಲಿ ಕುಳಿತಿರುವ ದಕ್ಷಿಣ ಕನ್ನಡ ಭಾಗದವರಿಗೆ ನಾವು ಬೀದರ್ ನವರು ಎಂದು ಹೇಳಬೇಕಾಗಿಲ್ಲ.  ‘ಎಲ್ಲಿ , ಕಲ್ಲಿ, ಹೊಂಟಾನ, ಹೋಗ್ಯಾನ’ ಇಷ್ಟು ಸಾಕು, ಅವರು ಅನಾಮತ್ತಾಗಿ ನೀವು ಬೀದರ್ ದವರು ಅಲ್ಲವೇ? ಎಂದು ಕೇಳೇ ಬೀಡ್ತಾರೆ.  ಇನ್ನೂ ನಮ್ಮ ಬೀದರ್, ಮೊದಲೇ ಗಡಿನಾಡು ಜಿಲ್ಲೆ ,  ಆ ಕಡೆ ‘ಎಕ್ಕಡ’ ಎನ್ನುವ ಆಂಧ್ರ ಪ್ರದೇಶ, ಹಾಗೇ ಸ್ವಲ್ಪ ದೂರ ಹೋದರೆ ‘ರಂಡಿ, ಪೊಂಡಿ’ ಎಂದು ಮತ್ತು ತೆಲುಗುಮಾತನಾಡುವ ತೆಲಂಗಾಣ, ಈ ಕಡೆ ‘ಕಸ,ಕಾಯಿ, ಗೇಲಾ, ಏ ರೇ’ ಎನ್ನುವ ಮರಾಠಿ ಪದಗಳು, ‘ಕಲ್ ‘ ಎನ್ನುವ ಹಿಂದಿ ಪದ ಕನ್ನಡದಲ್ಲಿ ‘ಕಲ್ಲು’ ಎನ್ನುವ ಅರ್ಥ ಕೊಡುತ್ತದೆ, ಹೀಗೆ ಕನ್ನಡದವರಿಗೆ ವಿಭಿನ್ನ ಅರ್ಥಗಳಾಗಿ ಕಾಣುತ್ತವೆ.  ಬೀದರಿನ ಹೆಚ್ಚಿನ ಜನರು ತ್ರಿಭಾಷಾ ಪಾಂಡಿತ್ಯ ಉಳ್ಳವರು, ಕನ್ನಡ ನಾಡಿನ ಯಾವುದೇ ಭಾಗದಲ್ಲಿ ಹೋಗಿ, ನಾಲ್ಕೈದು ಕಿ.ಮೀ. ಗೊಂದು ಬದಲಾಗುವ ಭಾಷಾಶೈಲಿ, ಜನರ ಬದುಕು, ಕಲೆ, ಉಣ್ಣುವ ಅನ್ನ, ತೊಡುವ ಬಟ್ಟೆ ಎಲ್ಲವೂ ಭಿನ್ನ ವಿಭಿನ್ನ, ಇದೇ ನಮ್ಮ ನಾಡಿನ ವೈಶಿಷ್ಟ್ಯತೆ ಕನ್ನಡದ ಅಸ್ಮಿತೆ, ಹಸಿರು, ಉಸಿರು ಎಲ್ಲವೂ ಒಳಗೊಂಡಿದೆ.  ನಾವೊಮ್ಮೆ ಶಾಲಾ ಮಕ್ಕಳಿಗೆ ಮೈಸೂರು ಭಾಗದ ವಿವಿಧ ಕಡೆ ಪ್ರವಾಸಕ್ಕೆ ತೆಗೆದುಕೊಂಡು ಹೋಗಿದ್ದೇವು, ಆ ಭಾಗದ ಬಹುತೇಕ ಗ್ರಾಮ, ಪಟ್ಟಣಗಳ ಹೆಸರು ಓದಿಕೊಂಡು ನಮ್ಮ ಶಾಲಾ ಮಕ್ಕಳಿಗೆ ವಿಚಿತ್ರ  ಅನುಭವ ಹಾಗೂ ನಗುತ್ತಿದ್ದರು. ಹಾಗೇ ಬೀದರ್ ಜಿಲ್ಲೆಯಲ್ಲಿ ಒಂದು ಗ್ರಾಮದ ಹೆಸರು ‘ಹುಡುಗಿ’ ಅಂತ ಇದೆ, ಬೇರೆ ಭಾಗದವರು ಈ ಕಡೆ ಬಂದರೆ ಈ ‘ಹುಡುಗಿ’ ಎಲ್ಲಿ ಸರ್, ಇನೆಷ್ಟು ದೂರ ಸರ್ ಎಂದು ಕೇಳಿ ತುಂಬಾ ನಗಬಹುದು, ಆ ಕಡೆ ‘ಸೂಳೆಬಾವಿ’ ಎಂದು ಕೇಳಿ ನಗಬಹುದು, ಆದರೆ ಹಾಸ್ಯವಾಗಿ ಕಂಡರು ತನ್ನದೇ ಆದ ವೈವಿಧ್ಯಮಯ ಹೊಂದಿರುವ ಪ್ರದೇಶಗಳು ಎಂದು ಅರ್ಥೈಸಿಕೊಳ್ಳಬೇಕು. ಹಾಗೇ ಉತ್ತರ ಕರ್ನಾಟಕದ ತಿಂಡಿ ತಿನಿಸು, ಹೆಸರು, ಅಡ್ಡ ಹೆಸರು, ಮಾತು, ಬೈಗಳು ತುಂಬಾ ವಿಚಿತ್ರ, ಇಂಗ್ಲಿಷ್ ಬಾರದ ನಮ್ಮ ಹಳ್ಳಿಯ ಜನರೂ ಕೂಡ ಗ್ಲಾಸ್ ಬದಲಿಗೆ ‘ಗಿಲಾಸ್’ ಫೋಟೋ ಬದಲಿಗೆ ‘ಫೂಟೂ’ ಕೋಟೆಗೆ ‘ಕ್ವಾಟೀ’ ಮದುವೆಗೆ ‘ಮದಿ’ ಮುದುಕ ಬದಲು ‘ಮುದ್ಯಾ’ ಖರೀದಿ ಬದಲಾಗಿ ಖರ್ದಿ, ಬಟ್ಟೆ ಬದಲಿಗೆ ‘ಅರ್ಬಿ’ ಮಕ್ಕಳಿಗೆ ನಿಮ್ಗು ಎಷ್ಟು ‘ಪಾರುಗೋಳು’ ಎಂದು ಕೇಳುತ್ತಾರೆ.  ಒಮ್ಮೆ ಮಹಾರಾಷ್ಟ್ರದ ಒಂದು ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ‘ಕಚರಾ ಕುಂಡಿ’ ಎಂದು ಮರಾಠಿಯಲ್ಲಿ ಬರೆದಿದ್ದು ನೋಡಿ ನಾವೇ ನಕ್ಕಿದ್ದೇವೆ. ಇಂತಹ ಬಹುತೇಕ ಮಿಶ್ರಿತ ಭಾಷೆ, ಅನ್ಯ ಭಾಷೆ, ವಿವಿಧ ಅರ್ಥಗಳಿಂದ ಕೂಡಿದ್ದು ಈ ನೆಲದ ವಿಶೇಷ ಎನ್ನಬಹುದು.  ತರಕಾರಿಗಳಿಗೂ ವಿಚಿತ್ರವಾಗಿ ಕರೀತಾರೆ, ಉಳಾಗಡ್ಡೆ ಬದಲು ‘ಉಳಗಡ್ಡಿ’ ಬೆಳ್ಳುಳ್ಳಿ ಬದಲು ‘ಬೆಳಗಡ್ಡಿ’ ಕೊತ್ತಂಬರಿ ಅನ್ನುವ ಬದಲು’ ಕೊತ್ಮೀರಿ, ಟಮೋಟೋ ಅನ್ನದೇ ‘ಟಮಾಟೆ ,ಟಮಟಾ’ ಮೌಂಸದ ಬದಲು ಇಗೊತ್ತು ಸಂಡೇ ಅದಾ ‘ಖಂಡಾ’ ತಿಂಬರೀ ಅಂತಾರೆ. ಶಾಲೆ ಅಂತೂ ಕರೆಯುವ ಅಪರೂಪದ ಜನರ ನಡುವೆ ಈವತ್ತು ‘ಸಾಳಿ’ ಅವನಾ ಸರ್’ ಎಂದೇ ಬಹಳಷ್ಟು ಜನ ಕೇಳುತ್ತಾರೆ. ಕೆಟ್ಟದ್ದಕ್ಕೆ ‘ಖರಾಬ್’ ಎಂದು, ಚಟಗಳಿಗೆ ‘ರಾಟಿ’ ಜೋಳಕ್ಕೆ ‘ಜ್ವಾಳಾ’, ಜ್ವರ ಬಂದರೆ ‘ಉರಿ’ ಬಂದವ ಎನ್ನುತ್ತಾರೆ.  ಇನ್ನೂ ಸಿಟ್ಟು ಬಂದಾಗ  ‘ಸುಳೆಮಗಾ’ ‘ಅಕ್ಕಲ್’  ಆ ಮಗಾ ಎಷ್ಟು ಹುಷಾರ್ ಆಗ್ಯಾನ್ ಅಂತ ‘ಜರಾ ತೋರ್ಸತಾ’ ಎನ್ನುತ್ತಾರೆ, ಮತ್ತೆ ಚಿಕ್ಕ ಮಕ್ಕಳಿಗೆ ಸಲುಗೆಯಿಂದ ‘ಹಲ್ಕಟ್ ಹಾಟ್ಯಾ’ ‘ಭಾಡಕಾವ್’ ‘ಮುಕುಡ್ಯಾ’ ಅವನ ‘ಇವ್ನ ಹೆಣ ಎತ್ಲಿ’ ಎಂದು ಪ್ರೀತಿಯಿಂದಲೇ ಬೈಯ್ತಾರೆ. ಹೀಗಾಗಿ ‘ಬೀದರ್ ಜಿಲ್ಲೆಯ ಬೈಗಳು’ ಎನ್ನುವ ಪುಸ್ತಕ ಬೀದರ್ ಭಾಷೆ ವೈಶಿಷ್ಟ್ಯತೆ ಬಿಂಬಿಸುತ್ತದೆ. ಇತ್ತೀಚೆಗೆ ಲಾಕ್ ಡೌನ್ ಸಂದರ್ಭದಲ್ಲಿ ‘ಲಂಗ್ ಡಂಗ್’ ‘ಲಾಕ್ ಡಾನ್’ ಮುಖ ಬದಲಿಗೆ ‘ಮೂತಿ’ ‘ಮಾರಿ’ ಮಾಸ್ಕ್ ಬದಲಿಗೆ ‘ಮುಸ್ಕಿ’ ಡ್ರೆಸ್ ಬದಲು ‘ಡಿರೇಸ್’ ‘ಸಾರಿ’ಗೆ ‘ಸೀರಿ’ ಒನ್ ಪ್ಲಾಟ್ ಜಾಗ ಎನ್ನದೇ ‘ಒಂದು ಪಿಲೇಟ್ ಜಾಗ’ ಎಂದು ಉಚ್ಚರಿಸುತ್ತಾರೆ. ಕನ್ನಡ ನಾಡಿನ ಇಂಗ್ಲಿಷ್ ಬಲ್ಲವರಿಗೆ ಇವೆಲ್ಲ ಹಾಸ್ಯ ಅನ್ನಿಸಬಹುದು, ಆದರೆ ತಾಯ್ನುಡಿಯವರು ಅವುಗಳನ್ನು ಉಚ್ಚರಿಸುವುದು ಬೇರೆ ರೀತಿ.  ಹೆಚ್ಚು ಕಾಡಿಸುವರನ್ನು ಕಂಡು ಅವನ ‘ಕಟ ಕಟಿ’ ಜಾಸ್ತಿ ಮತನಾಡಿದರೆ ಹೆಚ್ಚಿಗ್ ‘ತಿನ್ಕಬ್ಯಾಡ್’ ಅಂತಾರೆ, ಮೆಣಸಿನಕಾಯಿ, ಕತ್ತೆ, ಮೊಸರೆ, ತುಪ್ಪ, ಜೀರ್ಗೆ, ಉಳಾಗಡ್ಡೆ, ಲಂಗೋಟಿ, ಬ್ಯಾಳೆ ಎನ್ನುವ ಅಡ್ಡ ಹೆಸರುಗಳು ಈ ಪ್ರಾದೇಶಿಕ ವೈಶಿಷ್ಟ್ಯ ಹಾಗೂ ಪುರಾತನ ಸಂಸ್ಕೃತಿಯ ಸಂಕೇತವಾಗಿ ಗುರುತಿಸುತ್ತೇವೆ.  ಹಾಗೇ ನಮ್ಮ ಬೀದರ್ ಕಲ್ಬುರ್ಗಿ ಭಾಗದಲ್ಲಿ ಬಹುತೇಕ ಹಣ್ಣುಗಳಿಗೆ ಹಣ್ಣು ಎಂದು ಕರೆಯುವ ಬದಲಿಗೆ ಕಾಯಿ ಎಂದೇ ಉಚ್ಚರಿಸುತ್ತಾರೆ. ಮಾವಿನಕಾಯಿ, ಬಾಳೆಕಾಯಿ, ಕ್ಯಾರೆಕಾಯಿ ಎನ್ನುತ್ತಾರೆ. ಸೀತಾಫಲ ಹಣ್ಣಿಗೆ ಚಿಪ್ಪುಲಕಾಯಿ, ನೆರಳೆ ಹಣ್ಣಿಗೆ ನೆಳ್ಳೆಕಾಯಿ ಕರೆಯುತ್ತಾರೆ,  ಹೆಜ್ಜೆ ಹೆಜ್ಜೆಗೂ ಭಾಷಾ ಭಿನ್ನತೆ ಮಾತಿನ ಉಚ್ಚಾರದಲ್ಲಿ ವ್ಯತ್ಯಾಸ, ವಿವಿಧ ಅರ್ಥದಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ರೊಟ್ಟಿ- ಗಿಟ್ಟಿ, ಬ್ಯಾಳಿ- ಗೀಳಿ, ಎನ್ನುವ ಹಲವು ವಿಭಿನ್ನತೆಗಳು ಇರುವಾಗ ಈ ಕೆಲವರು ಕೊತ್ತುಂಬರಿಗೆ ಕೊತ್ಮೀರಿ ಎನ್ನುವುದು ಏನು ದೊಡ್ಡ ವಿಷಯವೇ ಆಗಬೇಕಿರಲಿಲ್ಲ‌. ಚಂದಿರನಿಗೆ ‘ಚಂದಮಾಮ’, ಭೂಮಿಗೆ ‘ತಾಯಿ’, ನೀರಿಗೆ ‘ದೇವತೆ’ ಎಂದು ಪೂಜಿಸುತ್ತಾರೆ. ಇನ್ನೂ ಅನೇಕ ವ್ಯಕ್ತಿಗಳ ಹೆಸರುಗಳು ಕೂಡ ಆಯಾ ಪ್ರಾದೇಶಿಕ ಪರಂಪರೆ, ಐತಿಹಾಸಿಕ ಹಿನ್ನೆಲೆಯನ್ನು ಪ್ರತಿಬಿಂಬಿಸುತ್ತವೆ. ಉತ್ತರ ಕರ್ನಾಟಕ ಭಾಗದಲ್ಲಿ ಬಸವಾದಿ ಶರಣರ ಪ್ರಭಾವ ಹೆಚ್ಚಿದೆ, ಬಸಪ್ಪ , ಶರಣಪ್ಪ, ಕಲ್ಲಪ್ಪ, ಮಹಾದೇವಿ, ಶರಣಮ್ಮ, ಹೀಗೆ ಪಟ್ಟಿ ಬೆಳೆಯುತ್ತದೆ. ಇನ್ನೂ ಒಂದು ವಿಚಿತ್ರ ಎಂದರೆ ಕೃಷಿಕರು ಹೊಲದಲ್ಲಿ ಕೆಲಸಕ್ಕೆ ಹೋದಾಗ ಮಗು ಜನನ ಆಗಿರುವ ಕಾರಣಕ್ಕೆ ಅಡೆಪ್ಪಾ, ಹುಲ್ಲಪ್ಪ ಎನ್ನುವ ಹೆಸರುಗಳು ಉಂಟು, ದೇವರ ಹೆಸರುಗಳೇ ತಮ್ಮ ಮಕ್ಕಳಿಗೆ ಹೆಸರಿಡುವ ಪರಂಪರೆ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿದೆ ಎಂದು ಹೇಳಬಹುದು. ಸಮಾಜದಲ್ಲಿ ಕೊರೊನಾ ವೈರಸ್ ಗಿಂತಲೂ ಭೀಕರ ಮತ್ತು ಅಷ್ಟೇ ಮಾರಕವಾಗಿ ಹರಡಿರುವ ‘ಕೋಮು ವೈರಸ್ ‘ ಈಗ ಬಹುತೇಕ ಮೆದುಳುಗಳ ಒಳಹೊಕ್ಕಿ ಕೊಳೆತು ನಾರುತ್ತಿದೆ. ಹಳ್ಳಿಗಾಡಿನ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಬಸಪ್ಪ – ಬಶೀರ್ ಅವರಿಗೆ ಯಾವುದೇ ಜಾತಿ ಧರ್ಮಗಳಿಲ್ಲ, ತಮ್ಮನ್ನು ತಾವು ಭಾಯಿ – ಭಾಯಿಗಳಾಗಿ ಅನ್ಯೋನ್ಯತೆ ಬೆಳೆಸಿಕೊಂಡು ಬದುಕುತ್ತಿದ್ದಾರೆ. ರಕ್ತ ಸಂಬಂಧಗಳು ಇರದೇ ಇರುವ ಮುಸ್ಲಿಂ ಸಹೋದರು ಹಿಂದೂ ಸಹೋದರಿಯರಿಗೆ ಅವ್ವ, ಸಣ್ಣಪ್ಪಾ, ದೊಡ್ಡಪ್ಪ , ಕಾಕಾ ಎಂದು ಆಪ್ತವಾದ ಸಂಬಂಧ ಹೊಂದಿದ್ದಾರೆ. ಹೀಗಾಗಿ ಹಳ್ಳಿಗಾಡಿನಲ್ಲಿ ಇಂದಿಗೂ ಜಾತಿ ಧರ್ಮಗಳ ಚೌಕಟ್ಟ ಮೀರಿ ಸೌಹಾರ್ದತೆ ಪ್ರೀತಿಯೇ ಉಸಿರಾಡುತ್ತಿದೆ.  ಆಡು ಭಾಷೆಯ ಆಳ ಯಾರಿಗೂ ನಿಲುಕಲು ಸಾಧ್ಯವಿಲ್ಲ, ಅದರ ವ್ಯಾಪ್ತಿ ವಿಶಾಲವಾಗಿ ಬೇರೂರಿದೆ. ಇದುವೇ ಕನ್ನಡ ನಾಡಿನ ವಿಶೇಷ ಗಮ್ಮತ್ತು, ಇದರೊಳಗೆ ಅಡಗಿದೆ ಕನ್ನಡತನದ ತಂಪು, ಇಂಪು, ಉಸಿರು, ಹಸಿರು… ಎಲ್ಲವೂ…ಹೌದಲ್ಲವೇ..? *************************************************

ಆಡು ಭಾಷೆಯ ವೈಶಿಷ್ಟ್ಯತೆ Read Post »

ಇತರೆ

ಕನ್ನಡ ಸಾಹಿತ್ಯ ಪರಿಷತ್ತು ನಡೆದ ಬಂದ ದಾರಿ..!

ಕನ್ನಡ ಸಾಹಿತ್ಯ ಪರಿಷತ್ತು ನಡೆದ ಬಂದ ದಾರಿ..! ಈಗ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ನಡೆಬೇಕಿದೆ. ಪ್ರಸ್ತವಾಗಿ ಮ.ನು.ಬಳೆಗಾರರ ಅವಧಿ ಮುಗಿದಿದೆ. ಅದಕ್ಕಾಗಿ ಈಗಾಗಲೇ ತಯ್ಯಾರಿಯೂ ನಡೆದಿದೆ. ಹಾಗಾದರೆ ಈ ನಮ್ಮ ಕನ್ನಡ ಸಾಹಿತ್ಯ ಪರಿಷತ್ತು ನಡೆದು ಬಂದ ದಾರಿಯನ್ನು ಅವಲೇಕಿಸೋಣ..! ಬ್ರಿಟಿಷ್‌ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದ್ದ ಮದ್ರಾಸ್‌, ಮುಂಬೈ ಪ್ರಾಂತ್ಯಗಳಲ್ಲಿ ದ್ವೀಪಗಳಂತೆ ಸೊಂಡೂರು, ಸವಣೂರು, ರಾಮದುರ್ಗ ಮುಂತಾದ ಹಿರಿಯ, ಕಿರಿಯ ಸಂಸ್ಥಾನಗಳು ಇದ್ದವು. ಕನ್ನಡ ಜನ ಭಿನ್ನ ಭಿನ್ನ ಆಡಳಿತ ಘಟಕಗಳ ಹಿಡಿತದಲ್ಲಿದ್ದರೂ ಅವರು ಆಡುತ್ತಿದ್ದ ಕನ್ನಡ ಭಾಷೆಯ ಮೇಲೆ ಅನ್ಯ ಭಾಷಾ ಪ್ರಭಾವ ಬಿದ್ದು, ಉಚ್ಚಾರಣೆಯಲ್ಲಿ ವ್ಯತ್ಯಾಸಗಳು ಉಂಟಾಗಿದ್ದವು. ಇವುಗಳ ಪರಿಣಾಮವಾಗಿ ವಿವಿಧ ಪ್ರದೇಶಗಳ ಕನ್ನಡಿಗರು ಅಪರಿಚಿತರಂತೆ ವ್ಯವಹರಿಸುವ ಅಸ್ವಾಭಾವಿಕ ಪರಿಸ್ಥಿತಿ ಉಂಟಾಗಿತ್ತು. ಆಗ ಮೈಸೂರು ಸಂಸ್ಥಾನದ ಅಂದಿನ ದಿವಾನರಾಗಿದ್ದ ಸರ್‌.ಎಂ.ವಿಶ್ವೇಶ್ವರಯ್ಯನವರು ಕನ್ನಡ ಭಾಷೆ, ಸಂಸ್ಕೃತಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಅವಶ್ಯಕತೆಗಾಗಿ ‘ಮೈಸೂರು ಸಂಪದಭ್ಯುದಯ ಸಮಾಜ’( ಮೈಸೂರು ಎಕನಾಮಿಕ್‌ ಕಾನ್ಫರನ್ಸ್‌ ) ರಚಿಸಿದರು. ವಿದ್ಯಾವಿಷಯಗಳಿಗಾಗಿ ಸಂಬಂಧಪಟ್ಟಂತೆ ವಿದ್ಯಾವಿಷಯಕ ಮಂಡಳಿ ರೂಪಿಸಿ, ಆ ಜವಾಬ್ದಾರಿಯನ್ನು ಹೆಚ್‌.ವಿ.ನಂಜುಂಡಯ್ಯನವರಿಗೆ ವಹಿಸಿದರು. ಮೈಸೂರು ಸಂಪದಭ್ಯುದಯ ಸಮಾಜವು 03.10.1914ರ ವಾರ್ಷಿಕ ಅಧಿವೇಶನದಲ್ಲಿ, ಕರ್ನಾಟಕ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸಿರುವವರನ್ನ ಪ್ರೋತ್ಸಾಹಿಸಲು ನಿರ್ಧರಿಸಿತು. ಈ ನಿಟ್ಟಿನಲ್ಲಿ ತನ್ನ ವಿದ್ಯಾವಿಷಯಕ ಮಂಡಳಿಯ ಮೂಲಕ ಒಂದು ಉಪಸಮಿತಿಯನ್ನು ರಚಿಸಿತು. ಉಪಸಮಿತಿಯು ಕನ್ನಡ ಭಾಷಾ ಸಾಹಿತ್ಯದ ಅಭಿವೃದ್ಧಿ ಮಾರ್ಗವನ್ನು ಕುರಿತು ಸಲಹೆ ಪಡೆಯಲು ತೀರ್ಮಾನಿಸಿ ಐದು ಭಾಗಗಳಾಗಿ ವಿಂಗಡಿಸಿತು. 1) ಕನ್ನಡ ನಾಡಿನ ಬೇರೆ ಬೇರೆ ಭಾಗಗಳಲ್ಲಿರುವ ಭಾಷಾ ಭಿನ್ನರಲ್ಲಿ ಐಕ್ಯಮತವನ್ನು ಪರಸ್ಪರ ಸೌಹಾರ್ದವನ್ನು ಹೆಚ್ಚಿಸುವುದಕ್ಕಾಗಿ ಉತ್ತಮೋತ್ತಮ ಉಪಾಯಗಳನ್ನು ನಿರ್ಧರಿಸುವುದು. 2) ಕನ್ನಡ ನಾಡಿನ ಬೇರೆ ಬೇರೆ ಭಾಗಗಳಲ್ಲಿ ಪ್ರಚಾರದಲ್ಲಿರುವ ಗ್ರಾಂಥಿಕ ಭಾಷೆಯನ್ನು ಒಂದೇ ರೂಪಕ್ಕೆ ತರಲು ತಕ್ಕ ಮಾರ್ಗಗಳನ್ನು ನಿಶ್ಚಯಿಸುವುದು. 3) ಕನ್ನಡವನ್ನು ಓದುವ ವಿದ್ಯಾರ್ಥಿಗಳಿಗೆ ಎಲ್ಲಾ ವಿದ್ಯಾ ಶಾಲೆಗಳಲ್ಲಿ ಪಠ್ಯಪುಸ್ತಕಗಳು ಒಂದೇ ಆಗಿರುವುದಕ್ಕೆ ಬೇಕಾದ ಪ್ರಯತ್ನಗಳನ್ನುಮಾಡುವುದು. 4) ಕನ್ನಡವನ್ನಾಡುವ ಜನಸಾಮಾನ್ಯರಲ್ಲಿ ಲೋಕ ವ್ಯವಹಾರ ಜ್ಞಾನವು ಹರಡುವಂತ ತಕ್ಕ ಪುಸ್ತಕಗಳನ್ನು ಬರೆಯಿಸಿ, ಪ್ರಚಾರ ಮಾಡುವುದಕ್ಕೆ ಸಾಧಕವಾದ ಉತ್ತಮೋತ್ತಮ ಉಪಾಯಗಳನ್ನು ನಿರ್ಣಯಿಸುವುದು. 5) ಕನ್ನಡದಲ್ಲಿ ಬರೆಯುವ ಭೌತಿಕವಾದ ನಾನಾ ಶಾಸ್ತ್ರಗಳನ್ನು ಪ್ರಯೋಗಿಸಬೇಕಾದ ಪಾರಿಭಾಷಿಕ ಶಬ್ದಗಳನ್ನು ನಿರ್ಣಯಿಸುವುದಕ್ಕೆ ತಕ್ಕ ಉತ್ತಮೋತ್ತಮ ಉಪಾಯಗಳನ್ನು ಪರಿಶೀಲಿಸುವುದು. ಮೇಲ್ಕಡ ಐದು ವಿಷಯಗಳ ಕುರಿತು ಸಲಹೆ ರೂಪದಲ್ಲಿ ಲೇಖನಗಳನ್ನು ಬರೆದು ಕಳುಹಿಸುವಂತೆ ಆಹ್ವಾನಿಸಿದರು. ಆಗ ವಿದ್ವಾಂಸರು, ಸಾಹಿತಿಗಳು ಉತ್ಸಾಹದ ಪ್ರತಿಕ್ರಿಯೆ ತೋರಿಸಿ ಅಮೂಲ್ಯವಾದ ಸಲಹೆ ಸೂಚನೆಗಳನ್ನು ಕಳುಹಿಸಿದರು. ಆಗ ಉಪಸಮಿತಿಯು ಮೇ 3 ಬೆಂಗಳೂರಿನಲ್ಲಿ ಒಂದು ಸಮ್ಮೇಳನವನ್ನು ನಡೆಸಬೇಕೆಂದು ನಿರ್ಧರಿಸಿ ಸಮ್ಮೇಳನದ ಏರ್ಪಾಡು ಮಾಡಿತು. 03.05.1915ರಂದು ಬೆಂಗಳೂರಿನ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಸಮ್ಮೇಳನ ನಡೆಯಿತು. ಸಮ್ಮೇಳನಕ್ಕೆ ಕರ್ನಾಟಕದ ನಾನಾ ಪ್ರಾಂತ್ಯಗಳಿಂದ ಪ್ರಮುಖ ವಿದ್ವಾಂಸರು ಮತ್ತು ಪತ್ರಿಕೆಗಳ ಸಂಪಾದಕರು ಆಗಮಿಸಿದ್ದರು. ನಂತರ ಸಭೆಯಲ್ಲಿ ನೆರೆದಿದ್ದ ಪತ್ರಿಕೆ ಸಂಪಾದಕರು, ವಿದ್ವಾಂಸರು ಮತ್ತು ಮಹಾಜನಗಳು ರಾಜ್ಯ ಮಂತ್ರಿ ಪ್ರವೀಣ ಹೆಚ್‌.ವಿ.ನಂಜುಂಡಯ್ಯನವರನ್ನು ಅಧ್ಯಕ್ಷರಾನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದರು. ನಂತರ ಸಮ್ಮೇಳನದಲ್ಲಿ ಈ ಕೆಳಗಿನ ಮುಖ್ಯ ಉದ್ದೇಶಗಳನ್ನು ಪ್ರಕಟಿಸಿಸಲಾಯಿತು. ಕರ್ನಾಟಕ ಭಾಷಾ ಸಂಸ್ಕರಣಕ್ಕಾಗಿ ಮತ್ತು ಕರ್ನಾಟಕ ಗ್ರಂಥಾವಳಿಯ ಅಭಿವೃದ್ಧಿಗಾಗಿ ಬೆಂಗಳೂರಿನಲ್ಲಿ ‘ಕರ್ನಾಟಕ ಸಾಹಿತ್ಯ ಪರಿಷತ್’ ಎಂಬ ಹೆಸರಿನೊಡನೆ ಪ್ರಧಾನ ಸಭೆಯಾಂದು ಸ್ಥಾಪಿತವಾಗಬೇಕು. ಮುಂಬೈ, ಮದ್ರಾಸ್‌, ಹೈದರಾಬಾದ್‌,ಕೊಡಗು ಪ್ರಾಂತ್ಯಗಳಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಉದಯವಾಯಿತು. ಇದರ ಉದ್ದೇಶ ಕನ್ನಡ ಭಾಷೆ, ಸಾಹಿತ್ಯ,ಕಲೆ, ಸಂಸ್ಕೃತಿ, ಇತಿಹಾಸ ಇವುಗಳ ರಕ್ಷಣೆ ಹಾಗೂ ಅಭಿವೃದ್ಧಿ ಮುಖ್ಯ ಉದ್ದೇಶವಾಗಿತು. ಪರಿಷತ್ತು ಸ್ಥಾಪನೆಯಾದಾಗಿನಿಂದ ಐದು ವರ್ಷ (1915-1920)ಗಳ ಕಾಲ ಹೆಚ್‌.ವಿ.ನಂಜುಂಡಯ್ಯನವರು ಅಧ್ಯಕ್ಷರಾಗಿ ಪರಿಷತ್ತಿನ ಮುನ್ನಡೆಗೆ ದಾರಿ ಮಾಡಿಕೊಟ್ಟರು. ಹೆಚ್‌.ವಿ.ನಂಜುಂಡಯ್ಯನವರು ಕಾಲವಾದ ನಂತರ 1947ರವರೆಗೆ ರಾಜ ಮನೆತನದವರಿಗೆ ಅಧ್ಯಕ್ಷ ಸ್ಥಾನ ಸೀಮಿತವಾಗಿತ್ತು. 12.04.1937ರಂದು ಪರಿಷತ್ತಿನ ಉಪಾಧ್ಯಕ್ಷರಾದ ಕರ್ಪೂರ ಶ್ರೀನಿವಾಸರಾಯರು ಪರಿಷತ್ತಿನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ನಂತರ ಕಟ್ಟಡ ನಿರ್ಮಾಣ ಪೂರ್ಣಗೊಂಡು 29.05.1938ರಂದು ಶ್ರೀ ಕೃಷ್ಣರಾಜ ಪರಿಷನ್ಮಂದಿರ ಉದ್ಘಾಟನೆಯಾಯಿತು. 1935 ರಲ್ಲಿ ಸಾಹಿತ್ಯ ಸಮ್ಮೇಳನದ ವೇಳಾಪಟ್ಟಿಯನ್ನು ಪ್ರಕಟಿಸಿ, ಪ್ರತಿ ವರ್ಷವು ಡಿಸೆಂಬರ್‌ ತಿಂಗಳ ಕಡೇ ವಾರದಲ್ಲಿ ಸಮ್ಮೇಳನ ನಡೆಸಬೇಕೆಂದು, ಸ್ವಾಗತ ಮಂಡಳಿ ಯೋಜನೆ, ಆಹ್ವಾನ ಸ್ವೀಕಾರ, ಅಧ್ಯಕ್ಷ ಸ್ಥಾನಕ್ಕೆ ಹೆಸರು ಸೂಚನೆ, ಸಮ್ಮೇಳನ ದಿನಾಂಕ ಗೊತ್ತುಪಡಿಸುವುದು, ಪ್ರಬಂಧಕರು, ನಿರ್ಣಯ ಸೂಚಕರು, ಉಪನ್ಯಾಸಕರು ಗೊತ್ತುಪಡಿಸುವುದು ಪ್ರಬಂಧ ಸಂಗ್ರಹಗಳು, ಸೂಚನೆಗಳ ಮುದ್ರಣ ಕಾರ್ಯಗಳ ಬಗ್ಗೆ ವೇಳಾಪಟ್ಟಿಯನ್ನು ತಯಾರು ಮಾಡಿತು. 1938ರಲ್ಲಿ ಕನ್ನಡನಾಡಿನ ನಕ್ಷೆಯಲ್ಲಿ ಪರಿಷತ್ತಿನ ಲಾಛನವನ್ನು (‘ಸಿರಿಗನ್ನಡಂ ಗೆಲ್ಗೆ, ಕನ್ನಡ ಸಾಹಿತ್ಯಪರಿಷತ್‌’) ಬಿ.ಎಂ.ಶ್ರೀಕಂಠಯ್ಯನವರು ರೂಪಿಸಿದರು. 1938 ಡಿಸೆಂಬರ್‌ ತಿಂಗಳಲ್ಲಿ ಬಳ್ಳಾರಿಯಲ್ಲಿ ನಡೆದ 23 ನೇ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತು ಎಂಬ ಹೆಸರಿನ ಬದಲಿಗೆ ‘ಕನ್ನಡ ಸಾಹಿತ್ಯ ಪರಿಷತ್’ ಎಂಬ ನಾಮಕರಣಗೊಂಡಿತು. ಬಿ.ಎಂ.ಶ್ರೀಕಂಠಯ್ಯನವರು ಉಪಾಧ್ಯಕ್ಷರಾಗಿದ್ದಾಗ (1938-1942) ಪರಿಷತ್ತಿಗೆ ಭದ್ರ ಬುನಾದಿ ಹಾಕಿದರು. ಮಹಿಳಾ ಶಾಖೆ ಪರಿಷತ್ತಿನ ಮುದ್ರಣಾಲಯ, ಕನ್ನಡ ನುಡಿ ಪತ್ರಿಕೆ. ಸಾಹಿತ್ಯ ಪರೀಕ್ಷೆಗಳು, ಗ್ರಂಥ ಪ್ರಕಟಣೆ, ಮಾರಾಟ ಮತ್ತು ಬೆಳ್ಳಿ ಹಬ್ಬದ ಆಚರಣೆ ಹಾಗೂ ಕನ್ನಡದ ಬಾವುಟದ ಪ್ರಕಟಣೆಗಳ ಕಾರ್ಯಗಳೂ ಪರಿಷತ್ತಿನ ಮುನ್ನಡೆಗೆ ಸಹಾಯಕವಾದವು. ದಿನಾಂಕ 29.12.1948 ರಂದು ಕಾಸರಗೋಡಿನಲ್ಲಿ ನಡೆದ 31ನೇ ಪರಿಷತ್ತಿನ ಸಭೆಯಲ್ಲಿ ಮುಂದೆ ಉಪಾಧ್ಯಕ್ಷರ ಹುದ್ಧೆ ರದ್ದುಪಡಿಸಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರೇ ಪರಿಷತ್ತಿನ ಅಧ್ಯಕ್ಷರಾಗಬೇಕೆಂದು ಜಾರಿಗೆ ತಂದರು. ದಿನಾಂಕ 24.05.1950 ರಂದು ಸೊಲ್ಲಾಪುರದಲ್ಲಿ ನಡೆದ 33ನೇ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರ ಅವಧಿಯನ್ನು 3ವರ್ಷವೆಂದು ತೀರ್ಮಾನ ತೆಗೆದುಕೊಂಡು ಪರಿಷತ್ತು ಆದೇಶ ಹೊರಡಿಸಿತು. ಮೈಸೂರಿನ ಮುಖ್ಯಮಂತ್ರಿಗಳಾದ ಕೆಂಗಲ್‌ ಹನುಮಂತಯ್ಯನವರು ತಮ್ಮ ಸರ್ಕಾರದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿಗಾಗಿ ಒಂದು ಇಲಾಖೆಯನ್ನು ಪ್ರಾರಂಭಿಸಿದರು. (ಈಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ) 1956ರ ನವೆಂಬರ್‌ 1ರಂದು ಮೈಸೂರನ್ನು ಏಕೀಕರಣಗೊಳಿಸಿದರು.‘ಕಪ್ಪು ನಾಡಿನ ನಾಡು, ಆಡುವ ಭಾಷೆ ಕನ್ನಡ ಹಾಗಾಗಿ ’ ‘ಕರ್ನಾಟಕ’ ಎಂದು ನಾಮಕರಣ ಮಾಡಬೇಕೆಂದು ದೇವರಾಜ ಅರಸ್‌ 1972ರಲ್ಲಿ ಮುಖ್ಯ ಮಂತ್ರಿಯಾದಾಗ ಶಿಫಾರಸ್ಸು ಮಾಡಿದರು. ಅದರಂತೆ ಅಂದಿನಿಂದ ‘ಕರ್ನಾಟಕ ’ ರಾಜ್ಯವಾಯಿತು. 1976 ರಲ್ಲಿ ಶಿವಮೊಗ್ಗದಲ್ಲಿ ನಡೆದ 49ನೇ ಸಾಹಿತ್ಯ ಸಮ್ಮೇಳನದಿಂದ ‘ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ಎಂದು ಕರೆಯಲಾಯಿತು. 1977 ರ ಏಪ್ರಿಲ್‌ 23 ರಿಂದ 28 ರವರೆಗೆ 6 ದಿನಗಳ ಕಾಲ ವಜ್ರ ಮಹೋತ್ಸವ ಕಾರ್ಯಕ್ರಮವನ್ನು ಅನೇಕ ವೈಶಿಷ್ಟ್ಯಗಳಿಂದ ನಡೆಸಿತು. 1978ರಲ್ಲಿ 50ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಭಾರತದ ರಾಜಧಾನಿಯಾದ ನವದೆಹಲಿಯಲ್ಲಿ ನಡೆಸಿ ಕನ್ನಡದ ಇತಿಹಾಸವನ್ನು ದೇಶಕ್ಕೆ ಪಸರಿಸಿತು. ಈ ಸಮ್ಮೇಳನದ ಉದ್ಘಾಟನೆಯನ್ನು ಭಾರತದ ಆಗಿನ ಪ್ರಧಾನಮಂತ್ರಿ ಮೊರಾರ್ಜಿ ದೇಸಾಯಿ ನಡೆಸಿಕೊಟ್ಟರು. ಪರಿಷತ್ತಿನ ಅವ್ಯವಹಾರ ನಡೆದಿದೆ ಎಂಬ ವಿಷಯ ಬೆಳಕಿಗೆ ಬಂದು ಆಡಳಿತಾಧಿಕಾರಿಯನ್ನು ದಿನಾಂಕ 12.11.1987 ರಂದು ಸರ್ಕಾರ ನೇಮಿಸಿತು. ಮೂರು ವರ್ಷಗಳ ನಂತರ ಆಡಳಿತಾಧಿಕಾರಿಯನ್ನು ತೆಗೆದು ಹೊಸ ನಿಯಮದ ಪ್ರಕಾರ 2.2.1989ರಂದು ಚುನಾವಣೆ ನಡೆದು ಜಿ.ಎಸ್‌.ಸಿದ್ದಲಿಂಗಯ್ಯನವರು 17ನೇ ಪರಿಷತ್ತು ಅಧ್ಯಕ್ಷರಾದರು. 1915 ರಂದು ಒಂದು ಸಭೆ ಮುಖಾಂತರ ಪ್ರಾರಂಭವಾದ ಸಮ್ಮೇಳನ, ನಂತರ ಒಂದು ಪರಿಷತ್ತನ್ನು ಹೊಂದಿ, ಸ್ವಂತ ಕಟ್ಟಡಗಳನ್ನು ಕಟ್ಟಿಸಿಕೊಂಡು ಸರ್ಕಾರದಲ್ಲಿ ಒಂದು ಇಲಾಖೆಯನ್ನೇ ಸ್ಥಾಪಿಸಿಕೊಂಡು ಬೆಳ್ಳಿ ಹಬ್ಬ, ವಜ್ರ ಮಹೋತ್ಸವ, ಅಮೃತಮಹೋತ್ಸವ ಹಾಗೂ ಸುಮಾರು ಸಾವಿರಾರು ಪುಸ್ತಕಗಳ ಪ್ರಕಟಣೆ, ಕವಿ, ಕಾವ್ಯ, ವಿಚಾರ ಸಂಕಿರಣ, ಸಾಹಿತ್ಯ ಕಮ್ಮಟಗಳು, ಸಂಶೋಧನಾ ಕೇಂದ್ರಗಳು, ರಂಗ ಸ್ಪರ್ಧೆಗಳು, ಸಾಹಿತ್ಯ ಪರೀಕ್ಷೆಗಳನ್ನು ನಡೆಸಿಕೊಂಡು ಬರುತ್ತಾ ಇದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಪರಿಷತ್ತುಗಳನ್ನು ತೆರೆದು ಜಿಲ್ಲಾ ಮಟ್ಟದ ಪರಿಷತ್ತುಗಳಿಗೆ ಜಿಲ್ಲಾ ಪಂಚಾಯ್ತಿಯಿಂದ ಹಣದ ಸಹಾಯ ನೀಡುವಂತೆ ಮಾಡಿದೆ. ಜಿಲ್ಲಾ ಮಟ್ಟದಲ್ಲಿ ಸಮ್ಮೇಳನಗಳನ್ನು ನಡೆಸುತ್ತಾ ಬರುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೈವಿಧ್ಯಮಯ ಸಾಹಿತ್ಯದ ವಿಷಯಗಳನ್ನು ಕುರಿತು ಗೋಷ್ಠಿಗಳು, ಪ್ರಬಂಧ ಮಂಡನೆ, ಚರ್ಚೆಗಳು, ಭಾಷೆ ಮತ್ತು ಸಂಸ್ಕೃತಿಗಳ ಚರ್ಚಾಕೂಟ, ಪುಸ್ತಕಗಳ ಪ್ರಕಟಣೆ ಮತ್ತು ಬಿಡುಗಡೆ, ವಿದ್ವಾಂಸರು ಸಾಹಿತಿಗಳು ಜನಪ್ರತಿನಿಧಿಗಳಿಂದ ಭಾಷೆ, ನಾಡಿನ ಬಗ್ಗೆ ಚಿಂತನೆ ನಡೆಸುತ್ತಾ ಬರುತ್ತಿದೆ. ಸಾಹಿತಿಗಳಿಗೆ, ಕವಿಗಳಿಗೆ, ಕನ್ನಡದ ಜನತೆಗೆ ಹಬ್ಬದ ವಾತಾವರಣವನ್ನು ನಿರ್ಮಿಸಿ ಜ್ಞಾನರ್ಜನೆಯನ್ನು ನೀಡುತ್ತಾ ಬಂದಿದೆ. ಖ್ಯಾತ ಸಾಹಿತಿಗಳು, ಕವಿಗಳನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲು ಪರಿಷತ್ತು ಒಂದು ನಿಯಮವನ್ನು ಹಾಕಿಕೊಂಡು ಬರುತ್ತಿದೆ. ಪ್ರಸ್ತುತವಾಗಿ ಸದ್ಯ ಹಿರಿಯ  ನಿವೃತ್ತ ಐ.ಎ.ಎಸ್ ಅಧಿಕಾರಿ ಮ.ನು.ಬಳೆಗಾರರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಈವರೆಗೆ ಕನ್ನಡದ ಕೆಲಸ ಮಾಡಿದರು. ಬರುಬರುತ್ತ ಕನ್ನಡ ಸಾಹಿತ್ಯ ಪರಿಷತ್ತಿಗೆ ಅಸಾಹಿತಿಗಳೇ ಅಧ್ಯಕ್ಷ್ಯರಾಗುತ್ತ ಬರುವಂತಾಯಿತು. ಈಗ ಮ.ನು.ಬಳೆಗಾರರ ಅವಧಿಯೂ ಮುಗಿಯಿತು. ಸದ್ಯ ಚುನಾವಣೆ ನಡೆಯಬೇಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಈಗ..! ಈ ವರೆಗಿನ ಅಧ್ಯಕ್ಷರು– ಅವರು ಹೀಗಿದ್ದಾರೆ–     ಶ್ರೀ ಎಚ್. ವಿ. ನಂಜುಂಡಯ್ಯ – 1915-1920     ಸರ್. ಎಂ. ಕಾಂತರಾಜ ಅರಸ್ – 1920-1923     ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಬಹದ್ದೂರ್ – 1924 – 1940     ಶ್ರೀ ಜಯಚಾಮರಾಜ ಒಡೆಯರ್ ಬಹದ್ದೂರ್ – 1940-1943     ಶ್ರೀ ಬಸವಪ್ರಭು ರಾಜಾ ಲಖಮನಗೌಡ ಸರದೇಸಾಯಿ ಬಹದ್ದೂರ್ – 1941-1946     ಶ್ರೀ ಲೋಕೂರ್ ನಾರಾಯಣರಾವ್ ಸ್ವಾಮಿರಾವ್ – 8-6-1947 ರಿಂದ 29-12-1947     ಶ್ರೀ ತಿರುಮಲೆ ತಾತಾಚಾರ್ಯ ಶರ್ಮ – 29-12-1947 ರಿಂದ 6-3-1949     ಶ್ರೀ ರೆವರೆಂಡ್ ಉತ್ತಂಗಿ ಚೆನ್ನಪ್ಪ – 6-3-1949 ರಿಂದ 17-12-1950     ಶ್ರೀ ಎಂ. ಆರ್. ಶ್ರೀನಿವಾಸ ಮೂರ್ತಿ – 16-12-1950 ರಿಂದ 16-9-1953     ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ – 30-9-1953 ರಿಂದ 9-5-1954     ಪ್ರೊ. ಎ. ಎನ್. ಮೂರ್ತಿ ರಾವ್ 9-5-1954 ರಿಂದ 17-5-1956     ಶ್ರೀ ಬಿ. ಶಿವಮೂರ್ತಿ ಶಾಸ್ತ್ರಿ – 17-5-1956 ರಿಂದ 25-10-1964     ಪ್ರೊ. ಜಿ. ವೆಂಕಟಸುಬ್ಬಯ್ಯ – 25-10-1964 ರಿಂದ 11-6-1969     ಶ್ರೀ ಜಿ. ನಾರಾಯಣ – 11-6-1969 ರಿಂದ 26-7-1978     ಡಾ. ಹಂಪ ನಾಗರಾಜಯ್ಯ – 26-7-1978 ರಿಂದ 19-2-1986     ಹೆಚ್. ಬಿ. ಜ್ವಾಲನಯ್ಯ – 19-2-1987 ರಿಂದ 1-11-1988     ಪ್ರೊ. ಜಿ. ಎಸ್. ಸಿದ್ದಲಿಂಗಯ್ಯ – 7-2-1989 ರಿಂದ 14-5-1992     ಶ್ರೀ ಗೊ. ರು. ಚನ್ನಬಸಪ್ಪ – 14-5-1992 ರಿಂದ 22-6-1995     ಡಾ. ಸಾ. ಶಿ. ಮರುಳಯ್ಯ – 22-6-1995 ರಿಂದ 10-7-1998     ಶ್ರೀ ಎನ್. ಬಸವಾರಾಧ್ಯ – 10-7-1998 ರಿಂದ 11-7-2001     ಶ್ರೀ ಹರಿಕೃಷ್ಣ ಪುನರೂರು – 11-7-2001 ರಿಂದ 2-11-2004     ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) – 2-11-2004 ರಿಂದ 30-4-2008     ಡಾ. ನಲ್ಲೂರು ಪ್ರಸಾದ್ ಆರ್. ಕೆ – 27-8-2008 ರಿಂದ 27-2-2012     ಶ್ರೀ ಪುಂಡಲೀಕ ಹಾಲಂಬಿ – 02-05-2012 ಪ್ರಸ್ತುತವಾಗಿ ಮ.ನು.ಬಳೆಗಾರರು  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೆಲಸ ಮಾಡಿದರು. ಈಗ ಇವರ ಸ್ಥಾನಕ್ಕೇ ಚುನಾವಣೆ ನಡೆಬೇಕಿದೆ… ಹೀಗೆಯೇ ನಡೆದುಕೊಂಡು ಬಂದ ಸಾಹಿತ್ಯ ಪರಿಷತ್ತು ಈಗ ರಾಜಕೀಯ

ಕನ್ನಡ ಸಾಹಿತ್ಯ ಪರಿಷತ್ತು ನಡೆದ ಬಂದ ದಾರಿ..! Read Post »

ಇತರೆ

ಶ್ವಾನೋಪಾಖ್ಯಾನ

ಹಾಸ್ಯ ಲೇಖನ ಶ್ವಾನೋಪಾಖ್ಯಾನ ಚಂದಕಚರ್ಲ ರಮೇಶ ಬಾಬು ನಮಗೆಲ್ಲಾ ಗೊತ್ತಿರುವ ಹಾಗೆ ನಾಯಿಗಳು ಅಥವಾ ಮರ್ಯಾದೆಪೂರ್ವಕವಾಗಿ ಕರೆಯುವುದಾದರೇ ಶುನಕಗಳು ಅಥವಾ ಶ್ವಾನಗಳು, ನಮ್ಮ ಸಮಾಜದ ಗಣ್ಯ ಜೀವಿಗಳಾಗಿವೆ.  ನಾನು ಮುಂಚಿನಿಂದಾ ಮನೆಯಲ್ಲಿ ನಾಯಿ ಸಾಕಾಣಿಕೆಯ ವ್ಯತಿರೇಕಿ.   ಬಹುಶ ನನ್ನ ಬಾಲ್ಯದಲ್ಲಿ ನನ್ನನ್ನಟ್ಟಿಸಿಕೊಂಡು ಬಂದ ನಾಯಿ ಅದಕ್ಕೆ ಕಾರಣವಿರಬಹುದು. ಅದು ಹಿಂದೆ ಬೀಳಲು ಕಾರಣ ನಾನು ಅದರ ಬಾಲ ತುಳಿದದ್ದು ಅಂತ ಹೇಳಿದ್ರೇ ಈ ನನ್ನ ನಿಲುವು ಸ್ವಲ್ಪ ಸಡಿಲವಾಗುತ್ತದೆ ಅಂತ ಮುಂಚೆನೇ ಹೇಳಲಿಲ್ಲ ಅಂತಿಟ್ಕೊಳ್ಳಿ. ಅದು ಬೇರೇ ಮಾತು. ನನ್ನ ಹೆಂಡತಿಗಂತೂ ನಾಯಿ ಸಾಕುವುದು ಒಂದು ನೋವಿನ ಅನುಭವ. ಅವಳ ತವರು ಮನೆಯಲ್ಲಿ ಅವರೆಲ್ಲಾ ಇಷ್ಟ ಪಟ್ಟು ಬೆಳೆಸಿದ ನಾಯಿ ಅದರ ಆಯುಷ ತೀರಿ ಸತ್ತು ಹೋಯಿತು. ಮನೆಯವರಿಗೆಲ್ಲಾ ಯಾರೋ ಆತ್ಮೀಯರನ್ನ ಕಳೆದುಕೊಂಡ ನೋವು. ಹಾಗಾಗಿ ಇವಳಿಗೆ ಒಂಥರಾ ವೈರಾಗ್ಯ. ತಂದು ಸಾಕಿಕೊಳ್ಳುವುದೇಕೆ, ಸತ್ತಾಗ ಮಿಡುಕುವುದೇಕೆ ? ಎನ್ನುವ ನಿರ್ವೇದ ಭಾವ. ಹಾಗಾಗಿ ಒಮ್ಮೆ ನಮಗೆ ಅದೆಷ್ಟು ನಾಯಿ ಸಾಕಿಕೊಳ್ಳುವ ಅಗತ್ಯ ಬಂದಿದ್ದರೂ ಸಾಕಲಿಲ್ಲ. ಅದಕ್ಕೆ ಕೈ ಹಾಕಲಿಲ್ಲ ನಾಯಿಗಳಲ್ಲಿ ಊರನಾಯಿಗಳು ಮತ್ತು ಕಾಡುನಾಯಿಗಳು ಎಂಬ ಪ್ರಭೇದಗಳಿದ್ದರೂ ಕಾಡುನಾಯಿಗಳು ನಮ್ಮ ನಡುವೆ ನಿವಸಿಸುವುದಿಲ್ಲ ವಾದ್ದರಿಂದ ಅವುಗಳನ್ನ ಈ ಲೇಖನದ ವ್ಯಾಪ್ತಿಗೆ ತೊಗೊಂಡಿಲ್ಲ.  ಊರ ನಾಯಿಗಳಲ್ಲಿ ಮತ್ತೆ ಸಿಗುವ ಪ್ರಭೇದಗಳೆಂದರೇ ಸಾಕು ನಾಯಿ ಮತ್ತು ಬೀದಿ ನಾಯಿ. ಸಾಕುನಾಯಿ ಯಾರಾದರೂ ಮನೆಯ ನಾಯಿ ಯಾಗಿರುತ್ತದೆ. ಅದರ ದೇಖರೇಖೆಗಳನ್ನ ಅದರ ಯಜಮಾನ ವಹಿಸಿಕೊಳ್ಳುತ್ತಾನೆ. ಅದು ಸ್ವಲ್ಪ ಮಟ್ಟಿಗೆ ಶಿಸ್ತಿನ ನಾಯಿ ಎನ್ನಬಹುದು. ಇದು ಕಚ್ಚುವುದಿಲ್ಲವಾ ಎಂದು ಕೇಳಬೇಡಿ. ನಮ್ಮನ್ನಾಳಿದ ಬಿಳಿಯರ ಗಾದೆ “ ಬಾರ್ಕಿಂಗ್ ಡಾಗ್ಸ್ ಸೆಲ್ಡಂ ಬೈಟ್ “ ಎನ್ನುತ್ತಾ ಅವುಗಳಿಗೆ ಬೆನಿಫಿಟ್ ಆಫ್ ಡೌಟ್ ಕೊಟ್ಟರೂ ನಮ್ಮವರು ಮಾತ್ರ “ಬೊಗಳುವ ನಾಯಿ ಕಚ್ಚುವುದಿಲ್ಲ “ ಅಂತ ಸಾರಿದ್ದಾರೆ. ಹಾಗೆ ಅಂತ ನೀವು ಬೊಗಳಿದ ನಾಯಿಗಳ ಮೇಲೆ ಕಚ್ಚುತ್ತದೋ ಇಲ್ಲವೋ ಪ್ರಯೋಗ ಮಾಡಬೇಕಾಗಿಲ್ಲ.  ನಾಯಿಯ ಸಹಜ ಗುಣವೇ ಕಚ್ಚುವುದು. ಆದಕಾರಣ ಇದು ಸಹ ಕಚ್ಚುತ್ತದೆ. ಕೆಣಕಿದರೆ ಮಾತ್ರ ಅಂತ ಅದರ ಒಡೆಯನ ಒಕ್ಕಣೆಯಾದರೂ ಅವರ ಹೇಳಿಕೆಯಲ್ಲಿ ಪೂರಾ ನಂಬಿಕೆ ಇಡಲಾಗುವುದಿಲ್ಲ. ಅದು ಸಹ ಕಚ್ಚುತ್ತದೆಯಾದ ಕಾರಣ ಮನೆಯ ಹೊರಗಡೆ ಫಲಕ ನೇತಾಡುತ್ತಿರುತ್ತದೆ,”ನಾಯಿ/ನಾಯಿಗಳಿವೆ ಎಚ್ಚರಿಕೆ “ ಅಂತ.  ನೀವು ಆಗ ಅವರ ಮನೆಯೊಳಗೆ ಕಾಲಿಡುವಾಗ ತುಂಬಾ ಎಚ್ಚರ ವಹಿಸುತ್ತೀರಿ. ಅದನ್ನು ಕಟ್ಟಿಹಾಕಿದಾರೆ ಅಂತ ಗೊತ್ತಾದರೇ ಮಾತ್ರ ನೀವು ಒಳಗಡೆ ಹೋಗುವ ಸಾಹಸ ಮಾಡುತ್ತೀರಿ. ಎಲ್ಲ ನಾಯಿಗಳಿಗೂ ಅವುಗಳ ಏರಿಯಾ ಇರುತ್ತದಂತೆ. ಅದು ದಾಟಿ ಯಾರು ಬಂದರೂಅವು ಸಹಿಸುವುದಿಲ್ಲ. ಈ ಸಾಕುನಾಯಿಯ ಏರಿಯಾ ಮನೆ. ಆದ ಕಾರಣ ಅದರ ಏರಿಯಾದ ಒಳಗೆ ಬಂದರೇ ಅದು ಒಮ್ಮೆ ಬೊಗುಳುವುದರ ಮೂಲಕ ನಿಮಗೆ ಎಚ್ಚರಿಕೆ ನೀಡುತ್ತದೆ, ತೊಲಗು ಅಂತ. ಅಷ್ಟರಲ್ಲಿ ಅದರ ಒಡೆಯ ಅಥವಾ ಒಡತಿ ಅದರ ಹೆಸರು ಕರೆದು, ಬರುವವರು ನಮ್ಮವರೇ ಎಂದ ಮೇಲೆ ಮಾತ್ರ, ನಿಮ್ಮ ಕಡೆ ಅದೇನೋ ಸಂಶಯದ ನೋಟದೊಂದಿಗೆ ಗುರ್ರೆನ್ನುತ್ತಾ ಒಳಗೆ ಹೋಗಲು ಬಿಡುತ್ತದೆ. ಈ ಅನುಭವ ಬಹುಶಾ ಎಲ್ಲರಿಗೂ ಒಮ್ಮೆಯಾದರೂ ಆಗಿರುತ್ತದೆ. ನೀವು ನಿಮ್ಮ ಮನೆಯಲ್ಲಿ ನಾಯಿ ಸಾಕಿದರೂ ಬೇರೇಯವರ ಮನೆ ನಾಯಿ ನಿಮ್ಮ ಅನುಭವವನ್ನು ಪರಿಗಣಿಸುವುದಿಲ್ಲ ಮತ್ತೆ ಅದರದೇ ಸೋದರನ/ಸೋದರಿಯ ಪೋಷಣೆ ಮಾಡುತ್ತಿರುವ ನಿಮ್ಮ ಬಗ್ಗೆ ಕೃತಜ್ಞತೆಯೂ ತೋರುವುದಿಲ್ಲ. ಅದಕ್ಕೆ ಅದರ ಏರಿಯಾ ಮತ್ತು ಒಡೆಯ ಮಾತ್ರ ಮುಖ್ಯ. ತುಂಬಾ ಜನರಿಗೆ ನಾಯಿ ಇರುವ ಮನೆಗಳಿಗೆ ಹೋದಾಗ ಮೆಲಕು ಹಾಕಿಕೊಳ್ಳುವ ಅನುಭವಗಳಿರುತ್ತವೆ. ನನಗಂತೂ ಒಮ್ಮೆ ಒಬ್ಬ ತಿಳಿದವರ ಮನೆಗೆ ಊಟಕ್ಕೆ ಹೋಗ ಬೇಕಾಗಿತ್ತು. ಅವರ ಹೇಳಿಕೆ ಮೇರೆಗೆ ಅಂತಿಟ್ಟುಕೊಳ್ಳಿ. ನಾನು ನನ್ನ ಕುಟುಂಬದ ಸದಸ್ಯರು ಅವರ ಮನೆಗೆ ಹೋಗಿ ಸೋಫಾದ ಮೇಲೆ ಕೂತ ತಕ್ಷಣ ಒಂದು ದೈತ್ಯಾಕಾರದ ನಾಯಿ ಒಳಗಿಂದ ಬಂದು ನನ್ನ ಭುಜಗಳಮೇಲೆ ಅದರ ಮುಂಗಾಲು ಹಾಕಿ ನಿಂತೇಬಿಟ್ಟಿತು. ನನ್ನ ಹೆಂಡತಿ ಮತ್ತು ಮಕ್ಕಳು ಹೆದರಿ, ಚೀರಿ,ದೂರ ಸರಿದು ಹೋದರು. ಅದು ಏನೂ ಮಾಡಲಿಲ್ಲ. ಬಹುಶ ಅದು ನನ್ನ ಪರಿಚಯ ಮಾಡಿಕೊಳ್ಳುತ್ತಿತ್ತೋ ಏನೋ. ಆದರೇ ಅದರ ಈ ಪರಿಯ ಆಕ್ರಾಮಿಕ ಭಂಗಿ ನನಗೆ ಗೊತ್ತಾಗುವುದಾದರೂ ಹೇಗೆ ? ನಾನು ಮಿಸುಕಾಡಲಿಲ್ಲ. ಏನು ಮಿಸುಕಿದರೇ ಏನು ಪ್ರಮಾದವೋ  ಯಾರಿಗ್ಗೊತ್ತು. ನನ್ನ ಮಿತ್ರರು ನಗುತ್ತಾ “ ಏನೂ ಮಾಡುವುದಿಲ್ಲ ಅದು ! ತುಂಬಾ ಸಾಧು. “ ಎನ್ನುತ್ತಾ ಅದರ ಹೆಸರು ಹಿಡಿದು ಕರೆದ ತಕ್ಷಣ ನನ್ನ ಮೇಲಿನ ಕಾಲುಗಳು ಕಿತ್ತುಕೊಂಡು ಅವರ ಹತ್ತಿರ ಹೋಯಿತು. ತುಂಬಾ ಸಾಧು ಅಂತ ಅವರಗ್ಗೊತ್ತು. ನನಗೆ ? ನಾನು ಬೆವರು ವರೆಸಿಕೊಂಡು ಪೆಕರನ ಹಾಗೆ ನಗುತ್ತಾ “ಹೌದಾ” ಎಂದೆ.  ನನ್ನ ಪರಿವಾರದವರಂತೂ ಇನ್ನೂ ಕಂಗಾಲಾಗೇ ಕಂಡರು. ಅವತ್ತಿನ ಅವರ ಮನೆಯ ಔತಣ ಕಹಿ ಎನ್ನಿಸಿದ್ದರಲ್ಲಿ ತಪ್ಪೇನಿಲ್ಲ. ಕೆಲವರು ಮನೆಯಲ್ಲಿ ಐದಾರು ನಾಯಿಗಳನ್ನ ಸಾಕುತ್ತಾರೆನ್ನುವುದು ನನ್ನ ಮಧ್ಯತರಗತಿಯ ಮನಸ್ಥಿತಿಗೆ ತುಂಬಾ ಅಚ್ಚರಿ ತಂದಿತ್ತು. ನನಗೆ ಗೊತ್ತಿರುವ ಒಬ್ಬ ಉದ್ದಿಮೆದಾರ ತನ್ನ ಮನೆಯಲ್ಲಿ ಮೂವತ್ತು ವಿವಿಧ ತಳಿಗಳ ನಾಯಿಗಳಿವೆ ಎಂದು ಹೇಳಿದಾಗ ಬೆಚ್ಚಿ ಬಿದ್ದಿದ್ದೆ. ಅವುಗಳಿಗಾಗಿ ಒಂದು ಪ್ರತ್ಯೇಕ ಗಾಡಿ ಮಾಡಿದ್ದಾರಂತೆ, ನಾಲ್ಕು ಜನ ಆಳಿದ್ದಾರಂತೆ. ಅದೇನು ಶುನಕ ವ್ಯಾಮೋಹವೋ ನಾ ಕಾಣೆ ! ವಿವಿಧ ತಳಿಗಳ ನಾಯಿಗಳ ಬಗ್ಗೆ ತಿಳಿದಾಗಲೆಲ್ಲಾ ನನಗನಿಸುತ್ತಿತ್ತು, ನಾನು ನನ್ನ ಜೀವನದಲ್ಲಿ ಏನೋ ಕಳೆದುಕೊಂಡೆನೇನೋ ಎಂದು. ಆದರೇ ನಾಯಿಗಳ ಬಗ್ಗೆ ಇರುವ ನನ್ನ ಗಾಬರಿ ಮಾತ್ರ, ನನ್ನ ಅವುಗಳನ್ನ ಹತ್ತಿರ ಸೇರಲು ಬಿಡಲಿಲ್ಲ. ಹೀಗೇ ಪಾರ್ಕುಗಳಿಗೆ ಅಥವಾ ರಸ್ತೆಯ ಮೇಲೆ ವಿಹಾರಕ್ಕೆ ಹೋಗುವಾಗ, ನಾಯಿಗಳ ಒಡೆಯರು ತಮ್ಮ ಜೊತೆಗೆ ಕರೆದೊಯ್ಯುವ ತಮ್ಮ ಸಾಥಿಗಳನ್ನ ನೋಡುತ್ತಾ ಅದು ಯಾವ ತಳಿಯ ನಾಯಿ ಇರಬಹುದು ಅಂತ ಊಹೆ ಮಾಡುತ್ತಿದ್ದೆ. ಭೂಮಿಗೆ ಸಮಾನಾಂತರವಾಗಿರುವ ಕುಳ್ಳ ಕುನ್ನಿಗಳಿಂದಾ ಹಿಡಿದು ಒಡೆಯನ ಸೊಂಟದ ವರೆಗೂ ಬರುವ ಗ್ರೇಟ್ ಡೇನ್ ಕಾಲಭೈರವನ ವರೆಗೆ ಎಲ್ಲವನ್ನೂ ಕುತೂಹಲದಿಂದ ನೋಡಿದ್ದೆ. ಅಮೆರಿಕಕ್ಕೆ ಹೋದಾಗ ಅಲ್ಲಿ ಸಹ ಇನ್ನೂ ವೈವಿಧ್ಯದ ಶುನಕ ದರ್ಶನವಾಯಿತು. ಅಮೆರಿಕದಲ್ಲಿ ಶುನಕಗಳಿಗೆ ಮರ್ಯಾದೆ ಜಾಸ್ತಿ. ಅವುಗಳನ್ನ ತಮ್ಮ ಮಕ್ಕಳಿಗಿಂತ ಮಿಗಿಲಾಗಿ ನೋಡಿಕೊಳ್ಳೂತ್ತಾರೆ ಅಂತ ನನ್ನ ಮಗಳು ಹೇಳಿದಳು. ಅವುಗಳ ತರೇವಾರಿ ಅವಶ್ಯಕತೆಗಳಿಗಾಗಿ ತುಂಬಾನೇ ಪೆಟ್ ಶಾಪ್ ಗಳಿರುತ್ತವೆ.  ಅವುಗಳ ತಿಂಡಿ, ಔಷಧಿ, ಸಾಬೂನುಗಳ ಜೊತೆಗೆ ಕಾಲಕ್ಕೆ ತಕ್ಕ ಹಾಗೆ ಬದಲಿಸುವ ದಿರಿಸುಗಳು ಸಹ ಅಲ್ಲಿ ಸಿಗುತ್ತವೆ. ಶೀತಾಕಾಲದಲ್ಲಿ ಅವುಗಳಿಗೆ ಮೆತ್ತನೆಯ ಬೂಟುಗಳನ್ನು ಹಾಕಿ ಕರೆದು ತರೆತ್ತಾರೆ. ಅವುಗಳಿಗೆ ಚಳಿಯಾಗದಿರಲು ಸ್ವೆಟರ್ ಗಳು ಹಾಕುತ್ತಾರೆ. ಇನ್ನು ಡಾಗ್ ಶೋಗಳಲ್ಲಿ ಅವುಗಳಿಗೆ ಪೈಪೋಟಿಯಾಗಿ ಮಾಡುವ ಸಿಂಗಾರ ನೋಡಲು ನೂರುಕಣ್ಣು ಸಾಲದು. ಇದೆಲ್ಲದಕ್ಕೂ ಮಕುಟಾಯಮಾನವೆಂದರೇ ಅವುಗಳನ್ನು ಹೊರಗೆ ಕರೆದೊಯ್ದಾಗ ಅವುಗಳ ದೈನಂದಿನ ಬಹಿರ್ ಕೃತ್ಯಗಳಿಗಾಗಿ ಒಂದು ಪ್ಲಾಸ್ಟೀಕ್ ಚೀಲವನ್ನು ಜೊತೆಗೆ ಕೊಂಡ್ಹೋಗುವುದು. ಅವುಗಳ ಮಲವನ್ನು ಹೆಕ್ಕಿ ಆ ಚೀಲಗಳಲ್ಲಿ ಹಾಕಿ ಅಲ್ಲಲ್ಲಿ ಇದಕ್ಕಾಗಿ ಇಟ್ಟಿರುವ ಡಬ್ಬಿಗಳಲ್ಲಿ ಹಾಕಬೇಕು. ಹೊರಗೆ ಎಲ್ಲೂ ಹೇಸಿಗೆ ಆಗಬಾರದು. ಹಾಗೆ ಮಾಡಿದ್ದು ಕಂಡಲ್ಲಿ ೨೫ ಡಾಲರ್ ಜುರ್ಮಾನೆ ತೆರಬೇಕಾಗಿರುತ್ತದೆ. ಅಂದರೇ ೧೫೦೦ ಸಾವಿರ ರುಪಾಯಿ ಅಂದಾಜಿಗೆ. ಮತ್ತೆ ಅವುಗಳದ್ದು ರಾಜಭೋಗವೆಂದು ನಿಮಗೆ ಅನಿಸುವುದಿಲ್ಲವೇ ! ನಾಯಿ ಕಚ್ಚಿದರೇ ಅದಕ್ಕೆ ನಡೆಯಬೇಕಾದ ಉಪಚಾರ ಸಹ ನಮ್ಮ ತಲೆ ಕೆಡಿಸುತ್ತದೆ. ಈಗೀಗ ಅದೇನೋ ರಾಬೀಪೂರ್ ಎನ್ನುವ ಮದ್ದು ಬಂದಿದೆ ಎನ್ನುವುದು ಬಿಟ್ಟರೇ, ಹಿಂದಿನ ದಿನಗಳಲ್ಲಿ ಹೊಕ್ಕಳ ಸುತ್ತಲೂ ಹಾಕಿಸಿಕೊಳ್ಳಬೇಕಾದ ಹದಿನಾಲ್ಕು ಇಂಜೆಕ್ಷನ್ ಗಳು ನಾಯಿ ಕಡಿತಕ್ಕಿಂತ ಜಾಸ್ತಿ ಹೆದರಿಸುತ್ತಿದ್ದವು. ನಂತರ ಕಚ್ಚಿದ ನಾಯಿಯ ಮೇಲೆ ಗುಮಾನಿ ಇಡಬೇಕು. ಅದು ಹುಚ್ಚು ನಾಯಿಯಾಗಿರಬಾರದು.  ಹುಚ್ಚು ನಾಯಿ ಕಡಿದು ನಾಯಿಯ ತರ ಬೊಗಳುತ್ತಾ ಸತ್ತವರ ಕತೆಗಳು ತುಂಬಾ ಪ್ರಚಲಿತವಾಗಿದ್ದವು ಆಗ. ಅವರ ಬಾಯಿಯಿಂದ ಜೊಲ್ಲು ಸುರಿಯುತ್ತಿತ್ತು, ಅವರನ್ನ ಕಂಬಕ್ಕೆ ಕಟ್ಟಿ ಹಾಕುತ್ತಿದ್ದರು. ಇಡೀರಾತ್ರಿ ಕೆಟ್ಟದಾಗಿ ಬೊಗಳಿತ್ತಿದ್ದರು ಎನ್ನುವ ಸುದ್ದಿಗಳಿಗೇನೂ ಬರವಿರಲಿಲ್ಲ. ಈಕಾರಣಕ್ಕಾಗಿ ನಾಯಿಯನ್ನ ಸಾಕುವುದಿರಲಿ, ಹತ್ತಿರ ಬಿಟ್ಟುಕೊಳ್ಳುವುದು ಸಹ ತುಂಬಾ ಡೇಂಜರ್ರಾಗಿ ಕಾಣುತ್ತಿತ್ತು. ಈಗ ಸಹ ಈ ಹೊಸ ಲಸಿಕೆಯನ್ನ ಎಷ್ಟು ಜನ ಹಾಕಿಸಿಕೊಂಡಿದ್ದಾರೆ, ಅವರಿಗೆ ಅದು ಎಷ್ಟರ ವರೆಗೆ ಗುಣ ಕಾಣಿಸಿದೆ ಎಂದು ಇನ್ನೂ ಸರಿಯಾದ ಮಾಹಿತಿ ಗೊತ್ತಿಲ್ಲ. ಆದರೇ ಹದಿನಾಲ್ಕು ಇಂಜಕ್ಷನ್ ಬೇಡ ಎನ್ನುವುದು ಒಂತರಾ ನೆಮ್ಮದಿ. ಇನ್ನು ಈ ನಾಯಿಗಳಿಗೆ ಸೈಕಿಲುಗಳ ಮತ್ತು ದ್ವಿಚಕ್ರ ವಾಹನಗಳ ಹಿಂದೆ ಬೀಳುವ ಅಭ್ಯಾಸವಿರುತ್ತದೆ. ಕಾರಿನ ಹಿಂದೆ ಸಹ ಬೀಳುತ್ತವೆ ಆದರೇ ಅವುಗಳಲ್ಲಿ ಕೂತವರು ಸೇಫ್. ಹಾಗಾಗಿ ಪ್ರಹಸನಗಳಾಗುವುದಿಲ್ಲ. ಆದರೇ ದ್ವಿಚಕ್ರವಾಹನಗಳ ಸವಾರರ ಹಿಂದೆ ಬಿದ್ದು  ಕೆಲ ಕಹಿ ಅನುಭವಗಳನ್ನೊದಗಿಸಿವೆ ಎಂದು ಹೇಳಬಹುದು.  ನಾನು ಮತ್ತು ನನ್ನವಳು ಒಮ್ಮೆ ದೇವಸ್ಥಾನದಿಂದ ಮನೆಗೆ ಬರುವಾಗ ಒಂದು ಸಂದಿಯಲ್ಲಿ ಒಂದು ಚಿಕ್ಕ ನಾಯಿ ನಮ್ಮ ಹಿಂದೆ ಬಿದ್ದಿತ್ತು. ಚಿಕ್ಕದು ಅಂತ ಯಾಕೆ ಪ್ರತ್ಯೇಕವಾಗಿ ಹೇಳುತ್ತಿದ್ದೇನೆ ಅಂದರೇ ಅದು ಚಿಕ್ಕದಾಗಿದ್ದರಿಂದ ಅದರ ವೇಗ ತುಂಬಾ ಜಾಸ್ತಿಯಾಗಿತ್ತು. ನಾನು ಗಾಡಿಯ ವೇಗ ಜಾಸ್ತಿ ಮಾಡಿದರೂ ಅದು ನಮ್ಮನ್ನ ಬಿಡಲಿಲ್ಲ. ನನ್ನವಳ ಸೀರೆಯ ಅಂಚನ್ನ ಹಿಡಿದುಬಿಟ್ಟಿತ್ತು. ಅವಳಿಗೂ ಹೆದರಿಕೆ, ನಂಗಂತೂ ಗಾಡಿ ಬಿಡುವುದರ ಜೊತೆಗೆ ಹಿಂದೆ ಬಿದ್ದ ಈ ಅವಾಂತರವನ್ನ ನಿಭಾಯಿಸಬೇಕಾಯಿತು. ಯಾರೋ ಅದಕ್ಕೆ ಕಲ್ಲು ತೂರಿ ಬಿಡಿಸುವುದರಲ್ಲಿ ನಾವಿಬ್ಬರೂ ಆಯ ತಪ್ಪಿ ಬೀಳುವುದೇ ಆಯಿತು. ಪುಣ್ಯ ಜಾಸ್ತಿ ಪೆಟ್ಟಾಗಲಿಲ್ಲ. ಸ್ವಲ್ಪದರಲ್ಲೇ  ಬಚಾವಾಯಿತು. ಪ್ರಭಾವಲಯದ ಮಾತು ಬಂದಾಗ ಇನ್ನೊಂದು ವಿಷಯ ಚರ್ಚೆಗೆ ಬರುತ್ತದೆ. ನಾಯಿಗಳ ಜಗಳಕ್ಕೂ ಈ ಪ್ರಭಾವಲಯಕ್ಕೂ ತುಂಬಾ ನಿಕಟ ಸಂಬಂಧ. ಪ್ರತಿ ನಾಯಿಯೂ ತನ್ನ ಪ್ರಭಾವಲಯವನ್ನ ಏರ್ಪಡಿಸಿಕೊಳ್ಳುತ್ತದಂತೆ. ಸಾಕುನಾಯಿಗಳಿಕೆ ತಾವಿರುವ ಮನೆಯೇ ಈ ವ್ಯಾಪ್ತಿ ಪ್ರದೇಶ ವಾಗಿದ್ದರೇ, ಮತ್ತೆ ಬೀದಿ ನಾಯಿಗಳಿಗೆ ಯಾವುದು ಮತ್ತು ಎಲ್ಲಿಯವರಗೆಎನ್ನುವ ಪ್ರಶ್ನೆ? ಈ ಸಂದಿಗ್ಧವೇ ಜಗಳಗಳ ನಾಂದಿ. ಪ್ರತಿ ನಾಯಿ ಅಥವಾ ಆ ಬೀದಿನಾಯಿಗಳ ಗುಂಪು ಒಂದು ನಿರ್ದಿಷ್ಟ ಪ್ರದೇಶವನ್ನು ತಮ್ಮ ವ್ಯಾಪ್ತಿ ಪ್ರದೇಶವಾಗಿ ನಿರ್ದೇಶಿಸಿಕೊಳ್ಳುತ್ತವೆಯಂತೆ. ಆ ವ್ಯಾಪ್ತಿ ಪ್ರದೇಶಕ್ಕೆ ಬೇರೊಂದು ನಾಯಿ ಬಂದಾಗ ಅವುಗಳು ಬೊಗಳುತ್ತಾ ತಮ್ಮ ನಿಲುವನ್ನ ತೋರಿಸುತ್ತವೆ, “ನೀನು ನಿನ್ನ ಹದ್ದು ಮೀರಿ ಬಂದಿದೀಯಾ” ಅಂತ. ಬಾಲ ಮುದುರಿಕೊಂಡು ಓಡಿದರೇ ಸರಿ. ಇಲ್ಲಾ ಇದ್ದೇ ಇದೆಯಲ್ಲಾ ನಾಯಿತರಾ ಕಚ್ಚಾಟ. ನಾಯಿಗಳ ಬಗ್ಗೆ ತುಂಬಾ ತೆಗಳಿದ ಹಾಗಾಯಿತಲ್ಲವೇ ? ಇದನ್ನ ಶುನಕ ಪ್ರೇಮಿಗಳು ಸಲೀಸಾಗಿ ತೆಗೆದುಕೊಳ್ಳಲಿಕ್ಕಿಲ್ಲ. ಅದಕ್ಕೇ ಈ ಕೆಳಗಿನ ಸಾಲುಗಳು. ನಾಯಿಗಳು ಸಮಾಜ ಸೇವಕರಾಗಿ ಖ್ಯಾತಿ ಗಳಿಸಿವೆ. ತುಂಬಾ ವಿಶ್ವಾಸದ ಪ್ರಾಣಿ. ಅನ್ನ ಕೊಟ್ಟವರ ಮನೆಯನ್ನು ಜತನವಾಗಿ ಕಾಯುತ್ತವೆ. ನುಸುಳಿ ಬಂದವರನ್ನು ನೆಲ ಕಚ್ಚುಸುತ್ತವೆ. ಅವುಗಳ ಘ್ರಾಣ ಶಕ್ತಿ ತುಂಬಾ ತೀಕ್ಷ್ಣವಾಗಿದ್ದು, ಪೋಲಿಸ್ ಇಲಾಖೆಗೆ  “ಮೂಸುವನಾಯಿ”ಗಳಾಗಿ ತುಂಬಾ ಸೇವೆ ಗೈಯುತ್ತವೆ.  ಇನ್ನು ಉಪಾಖ್ಯಾನಕ್ಕೆ ಮಂಗಳ ಹಾಡುವ ಮುನ್ನ ಒಂದು ನಗೆಹನಿ ಇವುಗಳ ಬಗ್ಗೆ. ಹೊರಗಡೆ ತಿರುಗುತ್ತಿರವ ಒಬ್ಬರಿಗೆ ನಾಯಿ ಕಚ್ಚಿತು. ಅವರು ತಮ್ಮಕೈಲಿದ್ದ ಕೊಡೆಯಿಂದ ನಾಯಿಗೆ ನಾಲ್ಕು ಬಾರಿಸಿದರು. ನಾಯಿಗೆ ಪೆಟ್ಟಾಯಿತು. ನಾಯಿಯ ಮಾಲೀಕ ಕೋರ್ಟಿಗೆ ಹೋದ. ಕೇಸು ವಿಚಾರಣೆಗೆ ಬಂದಾಗ ಆರೋಪಿ ತನ್ನ ವಾದವನ್ನು

ಶ್ವಾನೋಪಾಖ್ಯಾನ Read Post »

ಇತರೆ, ಪ್ರಬಂದ

ಅಳುವನ್ನು ಅನುಸರಿಸಿ ಹೋಗುವವನೇ ಕವಿ

ಪ್ರಬಂಧ ಅಳುವನ್ನು ಅನುಸರಿಸಿ ಹೋಗುವವನೇ ಕವಿ ಸರಿತಾಮಧು ಹಕ್ಕಿಯಂಥ ಸಣ್ಣ ಜೀವಿಯೊಂದರ ಅಳುವಿಗೂ ಕಿವಿಯಾಗಬಲ್ಲವನೇ ಕವಿ ಎಂಬ ಮಾತು ಅಕ್ಷರಶಃ ಸತ್ಯ. “ರುದಿತಾನುಸಾರಿ ಕವಿಃ ” ಎಂಬುದಾಗಿ ಮಹರ್ಷಿ ವಾಲ್ಮೀಕಿಯನ್ನು ಕಾಳಿದಾಸ ಕವಿ ಹೆಸರಿಸಿ, ಹಕ್ಕಿಯ ಶೋಕ ಹಾಗೂ ಸೀತೆಯ ಪ್ರಲಾಪ ಎರಡನ್ನೂ ಹೃದ್ಯವಾಗಿಸಿಕೊಂಡ ಮಹಾನ್ ಕವಿ , ಅಂದರೆ ಅಳುವನ್ನು ಅನುಸರಿಸಿ ಹೋಗುವವನೇ ಕವಿ ಎಂದರ್ಥ. ನವರಸಗಳಲ್ಲಿ ಕರುಣ ರಸವೊಂದೇ ಇರುವುದು ಎಂಬ ಮೀಮಾಂಸೆಗೂ ಪಾತ್ರನಾದ ಕವಿ ವಾಲ್ಮೀಕಿ.      ಸ್ವತಃ ಬೇಡ ನಾಗಿದ್ದು ರತ್ನಾಕರ ಎಂಬ ಪೂರ್ವಾಶ್ರಮದ ನಾಮಧೇಯದ ವಾಲ್ಮೀಕಿ ನಾರದ ಮುನಿಗಳ ಉಪದೇಶದಿಂದ ರಾಮ ನಾಮ ಜಪದಲ್ಲಿ ತೊಡಗಿ  , ಧ್ಯಾನಾಸಕ್ತನಾಗಿ ಮನಃಪರಿವರ್ತನೆಯಾದ ಕಥೆ ಎಲ್ಲರಿಗೂ ಗೊತ್ತಿರುವಂಥದ್ದು. ಹೀಗಿರುವಾಗ ಒಮ್ಮೆ ವಾಲ್ಮೀಕಿ ಮಹರ್ಷಿಗಳು ತಮಸಾ ನದೀ ತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚ ಪಕ್ಷಿ ಜೋಡಿಯೊಂದನ್ನು ಆನಂದತುಂದಿಲರಾಗಿ ವೀಕ್ಷಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಬೇಡನೊಬ್ಬನು ತನ್ನ ಬಾಣದಿಂದ ಗಂಡುಹಕ್ಕಿಯನ್ನು ಕೊಲ್ಲುತ್ತಾನೆ. ಆ ಸಮಯಕ್ಕೆ ಅದರ ಸಂಗಾತಿ ಹೆಣ್ಣು ಹಕ್ಕಿಯು ವಿರಹದಿಂದ ಪ್ರಲಾಪಿಸುವುದು.ಇಂತಹ ಹೃದಯ ವಿದ್ರಾವಕ ಸನ್ನಿವೇಶವನ್ನು ಕಂಡು ಮಹರ್ಷಿಗಳು ಕರುಣೆ ಹಾಗೂ ಅತೀವ ದುಃಖದಿಂದ ಬೇಡನನ್ನು ಶಪಿಸುತ್ತಾರೆ: “ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ  ಸಮಾಃ ಯತ್ರ್ಕೌಂಚ ಮಿಥುನಾದೇಕ ಮವಧೀಃ  ಕಾಮಮೋಹಿತಮ್” ಅಂದರೆ ಕಾಮಮೋಹಿತವಾದ ಈ ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದ ನಿನಗೆ ಎಂದಿಗೂ ಶಾಂತಿ ಲಭಿಸಲಾರದು ಎಂಬ ಶೋಕದ ನುಡಿಯೇ ಶೋಕವಾಯಿತು. ಬ್ರಹ್ಮದೇವನ ಇಚ್ಛೆಯಂತೆ ನಾರದರು ತನಗೆ ಹೇಳಿದ್ದ ರಾಮನ ಕಥೆಯನ್ನು ೨೪೦೦೦ ಶ್ಲೋಕಗಳನ್ನೊಳಗೊಂಡ ಮಹಾಕಾವ್ಯವಾಗಿ ಬರೆದರು. ಹೀಗೆ ಸಂಕಟಕ್ಕೆ ಮಿಡಿದ ಮನಸ್ಸೊಂದು ಬೃಹತ್ ಕಾವ್ಯದ ಉಗಮಕ್ಕೆ ಪ್ರೇರಣೆಯಾಯಿತು. ಅಲ್ಲಿಯವರೆಗೂ ವಾಲ್ಮೀಕಿಯಲ್ಲಿ ಹುದುಗಿದ್ದ ಕಾವ್ಯ ಶಕ್ತಿ ಪ್ರಕಟವಾಯಿತು ಅವನ ಕಾವ್ಯ ಪ್ರೌಢಿಮೆಯು ನಂತರದ ಕವಿಗಳಿಗೆ ದಾರಿದೀಪವಾಯಿತು.     ಆಂಜನೇಯನಿಗೂ ಅವನ ಶಕ್ತಿ ಸಾಮರ್ಥ್ಯಗಳ  ಅರಿವು ಇರಲಿಲ್ಲವಂತೆ. ತನ್ನಿಂದೇನಾಗದು , ತಾನು ಯಶಸ್ವಿಯಾಗುವುದಿಲ್ಲ ,ತಾನೊಬ್ಬ ಸಾಧಾರಣ ವ್ಯಕ್ತಿ ಎಂದೇ ಆತ ತಿಳಿದಿರುತ್ತಾನೆ.ಇತರರು ಹೇಳಿ , ನೀನು ಮಾಡಬಲ್ಲೆ ಎಂದು ಹುರಿದುಂಬಿಸಿದರೆ ಮಾತ್ರ , ಅವನ ಶಕ್ತಿ ಸಾಮರ್ಥ್ಯ ಬೆಳಕಿಗೆ ಬರುತ್ತದೆ. ಇದು ಅವನಿಗೆ ಸೂರ್ಯದೇವನಿತ್ತ ಶಾಪ! ಅಂದರೆ ಈ ಕಥೆಯಂತೆ ವಾಲ್ಮೀಕಿಯಲ್ಲಿ ಸುಪ್ತ ವಾದ ಕಾವ್ಯಶಕ್ತಿಗೆ   ಶೋಕ ಪ್ರಚೋದನೆ ನೀಡಿತು. ಕ್ಕೊಕ್ಕರೆ, ಸಾರಸ, ಬೆಳ್ಳಕ್ಕಿ ಎಂದೂ ಕರೆಯಲ್ಪಡುತ್ತದೆ ಈ ಕ್ರೌಂಚ ಹಕ್ಕಿ.  ಸಂಸ್ಕೃತ ದಲ್ಲಿ ಸಾರಸ ಎಂದರೆ ಕೆರೆಯ ಹಕ್ಕಿ ಎಂದರ್ಥ. ಇದನ್ನು ಸಾರಂಸ ಎಂದೂ ಕರೆಯಲಾಗುತ್ತದೆ. ಯುರೋಪ್, ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಕಾಣಬರುವ ಸಾರಸ್ ಕೊಕ್ಕರೆ ಬಗ್ಗೆ ನನ್ನ ಗಮನ ಸೆಳೆದ ಪದ್ಯ ಪಂಜಾಬಿನ ಕವಿ ಮನಮೋಹನ ಸಿಂಗ್ ( ಮಾಜಿ ಪ್ರಧಾನಿ ,ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಲ್ಲ) ರವರು ಬರೆದಿರುವ “To a pair of sarus cranes”. ವಾಲ್ಮೀಕಿ ಮಹರ್ಷಿಗಳನ್ನು ಕಾಡಿದಂತಹ ಭಾವವೊಂದು ಪುನರಾವರ್ತನೆ ಆಗಿರುವಂತೆ ಇದೆ ಈ ಪದ್ಯದ ಸಾಲುಗಳಲ್ಲಿ. The male was shot as he necked to pull the reluctant sun out from the rim of horizon She flew crying As he was picked up hands and jaws And a proud neck was humbled to lie like dirty linen in a coarse washing bag  She circled the sky In movements of grace over his disgraceful end The killers went away and she returned to the death’s scene With grief that inscribed its intensity in dots and pits Like the Morse code of bird’s sorrow Transmitted to the air With her beak she kissed a few feathers Picked the ones that wind had not taken away and sat to hatch The blood stained feathers into a toddling chick A wave of the seas she had never seen Came to her from far away ಈ ಪದ್ಯದ ಮೊದಲ ಸಾಲುಗಳಲ್ಲಿ ಸೂರ್ಯೋದಯ ಸಮಯಕ್ಕೆ ಗೂಡಿನಾಚೆ ತನ್ನ ಉದ್ದನೆಯ ಕತ್ತು ಚಾಚುವಷ್ಟರಲ್ಲಿ ಬೇಡನೊಬ್ಬನ ಬಾಣದ ಗುರಿಗೆ ಗಂಡುಹಕ್ಕಿ ಬಲಿಯಾಗಿಬಿಟ್ಟಿತು.  ಹೆಣ್ಣು ಕೊಕ್ಕರೆಯು ಪ್ರಲಾಪಿಸುತ್ತಾ ಅತ್ತ ಧಾವಿಸುತ್ತಿರಲು ಬೇಡನು ಇದಾವುದನ್ನು ಲೆಕ್ಕಿಸದೇ ತನ್ನ ಹಳೆಯ ಕೈಚೀಲದೊಳಗೆ ಸತ್ತ ಗಂಡು ಕೊಕ್ಕರೆಯನ್ನು ನಿರ್ದಾಕ್ಷಿಣ್ಯವಾಗಿ ಎಳೆದುಕೊಂಡು ಹೊರಟೇಬಿಟ್ಟನು. ಆಕಾಶದಲ್ಲಿ ಪ್ರದಕ್ಷಿಣೆ ಹಾಕುತ್ತಾ ತನ್ನ ಸಂಗಾತಿ ಬಿದ್ದ ಜಾಗಕ್ಕೆ ಬರಲು , ರಕ್ತ ಸಿಕ್ತವಾಗಿ ಬಿದ್ದ ಪುಕ್ಕಗಳನ್ನು ಕೊಕ್ಕಿನಿಂದ ಎತ್ತಿ ಮುದ್ದಿಸಿ, ತನ್ನೆಲ್ಲಾ ಗರಿಗಳನ್ನು ಅದರ ಮೇಲೆ ಮುದುಡಿ ಮೊಟ್ಟೆ ಇಡುವಂತೆ ಕುಳಿತು ಬಿಟ್ಟಿತು.  ಸಮುದ್ರದಲೆಗಳ ಮೇಲಿಂದ ತೇಲಿ ಬರುವ ಬಿರುಗಾಳಿಗೆ ಆ ದುಃಖ ತಪ್ತ ಹೆಣ್ಣು ಹಕ್ಕಿಯನ್ನು ಗಂಡು ಹಕ್ಕಿಯ ಸಮೀಪಕ್ಕೆ ಕರೆದೊಯ್ದಿತು.   ಕವಿ ಇಲ್ಲಿ ಹೇಳುವುದೆಂದರೆ ಹೆಣ್ಣು ಹಕ್ಕಿಯ ಪ್ರೀತಿ ಮನುಷ್ಯರಿಗೂ ಮಿಗಿಲಾದದ್ದು. ಯಕಃಶ್ಚಿತ್ ಪಕ್ಷಿ ಅಥವಾ ಪ್ರಾಣಿ ಎಂದು ಬೇಟೆಯಾಡುವ ಮಾನವನಿಗೆ ಅವುಗಳ ಮೂಕವೇದನೆ ಅರಿವಾಗುವುದೆಂದಿಗೆ? ಹಾಗಾಗಿಯೇ ಮಹಾತ್ಮ ಗಾಂಧಿಯವರು ಹೇಳುತ್ತಾರೆ : “The greatness of nation and it’s moral progress can be judged by the way its animals are treated” ಈ ಮಾತು ನೂರಕ್ಕೆ ನೂರರಷ್ಟು ಸತ್ಯ ಅಲ್ಲವೇ? ಮೋಜಿಗಾಗಿ, ಆಹಾರಕ್ಕಾಗಿ, ವಿಹಾರಕ್ಕಾಗಿ ಹೇಯಕೃತ್ಯ ಪಕ್ಷಿ- ಪ್ರಾಣಿಗಳ ಬೇಟೆ. ಒಂದುವೇಳೆ ಮಾನವರಾದ ನಮ್ಮ ಚರ್ಮವನ್ನು ಸುಲಿದು ರಸ್ತೆ ಬದಿಯ ಅಂಗಡಿಗಳಲ್ಲಿ ತೂಗುಹಾಕಿದ್ದರೆ, ಬೆನ್ನಟ್ಟಿ ಬೇಟೆ ಆಡಿದ್ದರೆ, ಹರಕೆಯ ನೆಪದಲ್ಲಿ ಬಲಿ ಕೊಡುವಂತಿದ್ದರೆ ಮಾತು ಬರುವ ನಾವು ಸುಮ್ಮನಿರುತ್ತಿದ್ದೆವಾ? ಅವುಗಳು ಕೂಡಾ ನಮ್ಮಂತೆಯೇ ಅಥವಾ ನಮಗಿಂತಲೂ ಮಿಗಿಲು ಎನ್ನುವ ಭಾವನೆ ನಮ್ಮದಾಗಲಿ. ಪ್ರಾಣಿ ಪಕ್ಷಿಗಳ ಮೂಲಕವೇ ಹೆಣೆದಿರುವ ಸಾವಿರಾರು ಮೌಲ್ಯಯುತ ಕಥೆಗಳಿವೆ.ಅವುಗಳೊಡನೆ ನಮ್ಮ ಸಾಂಗತ್ಯ ಚಿರಂತನ. **************************************************************

ಅಳುವನ್ನು ಅನುಸರಿಸಿ ಹೋಗುವವನೇ ಕವಿ Read Post »

You cannot copy content of this page

Scroll to Top