ಹೊತ್ತಾರೆ

(ಅಮ್ಮನೂರಿನ ನೆನಪುಗಳು!)

ಅಮೇರಿಕಾದಿಂದ ಅಶ್ವಥ್ ಬರೆಯುತ್ತಿದ್ದಾರೆ

ಅಶ್ವಥ್

ಕಾನ್ವೆಂಟ್ ಪ್ರವೇಶ

ಅಕ್ಕನ ಜೊತೆಯಲ್ಲಿ ಅಕ್ಕನೂರಿಗೆ ಹೋಗುವುದು ಅಂದರೆ ನನಗೆ ಬಾಲ್ಯದ ಆ ದಿನಗಳಲ್ಲಿ ಸಿಕ್ಕಾಪಟ್ಟೆ ಕೋಪ. ಆಗ ನನಗಿನ್ನೂ ನಾಲ್ಕು ವರ್ಷ ವಯಸ್ಸು. ಅಮ್ಮನ ಜೊತೆಯಲ್ಲೇ ಬೆಳೆಯುತ್ತಿದ್ದ ನನಗೆ ಅಕ್ಕ ಊರಿಗೆ ಬಂದರೆಂದರೆ ಎಲ್ಲಿಲ್ಲದ ಸಂತೋಷ. ಒಂದೆರಡು ದಿನ ಇದ್ದು ಮತ್ತೆ ಊರಿಗೆ ಹೊರಡುವ ಸಮಯವಾಯಿತು ಅಂದರೆ ಅಕ್ಕನಿಂದ ತಪ್ಪಿಸಿಕೊಳ್ಳುವುದು ಹೇಗೆ ಅನ್ನುವ ಆತಂಕ. ಅಕ್ಕ ಅಂದರೆ ನನ್ನ ತಾಯಿ. ಅಮ್ಮ ನನ್ನ ಅಜ್ಜಿ. ಅಪ್ಪನನ್ನು ಅಣ್ಣ ಅನ್ನುತ್ತೇನೆ. ನನ್ನ ಸೋದರಮಾವಂದಿರಲ್ಲಿ ಕಿರಿಯರಿಬ್ಬರು ನನ್ನ ತಾಯಿಯನ್ನು ಪುಟ್ಟಕ್ಕ ಅನ್ನುತ್ತಿದ್ದುದೋ ಅಥವಾ ಅವರ ತಾಯಿಯನ್ನು ಅಕ್ಕ ಅನ್ನುತ್ತಿದ್ದುದೋ ನನ್ನ ಈ ಹೆಸರಲ್ಲದ ಹೆಸರುಗಳ ಅವಾಂತರಕ್ಕೆ ಕಾರಣವಿದ್ದಿರಬಹುದು. ಈಗ ಅವುಗಳ ಬಗ್ಗೆ ಗಂಟೆಗಟ್ಟಲೆ ವಿವರಣೆ ಕೊಡಬೇಕಾಗಿ ಬಂದರೂ ಏನೂ ಬೇಸರವಿಲ್ಲ. ಆದರೆ ಬಾಲ್ಯದಿಂದ ರೂಢಿಗತವಾಗಿ ಬಂದಿರುವ ಹೆಸರುಗಳನ್ನು ಬದಲಿಸುವುದೆಂದರೆ, ಗೊಮ್ಮಟನಿಗೆ ಚಡ್ಡಿ ಹೊಲಿಸುವುದರಷ್ಟೇ ಕಷ್ಟ! ಹೆಸರು ಏನೇ ಆಗಿರಲಿ, ನಾನು ಯಾವಾಗಲೂ ನನಗೆ ಮೂವರು ತಾಯಂದಿರು ಅಂತಲೇ ಗುರುತಿಸಿಕೊಳ್ಳುವುದು. ಒಂದು, ಅಕ್ಕ; ನನ್ನ ಹೆತ್ತ ತಾಯಿ; ಎರಡು, ಅಮ್ಮ, ನನ್ನ ತಾಯಿಯನ್ನು ಹೆತ್ತ ತಾಯಿ ಹಾಗೂ ನಮ್ಮಿಬ್ಬರನ್ನೂ ಸಲಹಿದ ತಾಯಿ. ಮೂರು, ನನ್ನ ಆಂಟಿ(ಚಿಕ್ಕಮ್ಮ), ಬಾಲ್ಯದಲ್ಲಿ ನನ್ನನ್ನು ಮಡಿಲಿನಲ್ಲಿರಿಸಿಕೊಂಡು ಸಂತೈಸಿದ ತಾಯಿ. ಆಂಟಿ ಆಗಿನ್ನೂ ಅವಿವಾಹಿತೆಯಾಗಿದ್ದರಿಂದ, ಮಕ್ಕಳ ರಂಪಾಟದ ಬಗ್ಗೆ ಅವರಿಗೆ ಅಧೀಕೃತ ಅಪ್ರೆಂಟಿಸ್ಶಿಪ್ ತರಬೇತಿ ಕೊಟ್ಟಿದ್ದು ನಾನೇ!

ಅಕ್ಕನೂರು ಅಂದರೆ ಕಾನೂನಾತ್ಮಕವಾಗಿ ನನ್ನದೇ ಊರು. Native-in-law ಹ್ಹಹ್ಹಹ್ಹ! ಪಿತ್ರಾರ್ಜಿತ ಆಸ್ತಿಯಿರುವ ಊರು; ಊಓಹ್ ಅದನ್ನು ಈಗ ಎಲ್ಲಾದರೂ ಮರೆಯುವುದುಂಟೇ? ಆದರೆ ನನ್ನ ಬಾಲ್ಯದಲ್ಲಿ ಆ ಊರು ನನ್ನ ಊರು ಅನಿಸಿದ್ದಿರಲಿಲ್ಲ. ನಾನು ಹುಟ್ಟಿದಾಗಿನಿಂದಲೂ ನನ್ನ ಅಮ್ಮನ ಊರಿನಲ್ಲೇ ಇದ್ದು ಹೊಂದಿಕೊಂಡಿದ್ದರಿಂದ ಅದೇ ನನ್ನ ಊರಾಗಿತ್ತು. ಅಕ್ಕ ತಿಂಗಳಿಗೋ, ಎರಡು ತಿಂಗಳಿಗೋ ಊರಿಗೆ ಬಂದರೆ ಸ್ವಾಭಾವಿಕವಾಗಿಯೇ ಅತಿ ಉತ್ಸಾಹದಿಂದ ಇರುತ್ತಿದೆ. ಆದರೆ ಅಕ್ಕನ ಹೊರಡುವ ಏರ್ಪಾಡಿನ ಒಂದೇ ಒಂದು ಮಾತು ನನ್ನ ಕಿವಿಗೆ ಬಿದ್ದರೂ ಊರೊಳಗಿನ ಎಳೆಯಗೆಳೆಯರೊಟ್ಟಿಗೆ ಕಳ್ಳಾಪೊಲೀಸ್ ಆಡುವುದಕ್ಕೋ, ಮರಕೋತಿ ಆಡುವುದಕ್ಕೋ, ಅದ್ಯಾವುದೂ ಇಲ್ಲವೆಂದರೆ ಹೊಲಗದ್ದೆಗಳ ಕಡೆ ಹೋಗಿಯೋ, ಒಟ್ಟು ಅಕ್ಕನನ್ನು ಊರಿಂದ ಸಾಗುಹಾಕಿದರೆ ಸಾಕಪ್ಪಾ! ಇಲ್ಲವಾದರೆ ನನ್ನನ್ನೂ ಕರ್ಕೊಂಡು ಹೊರಟುಬಿಡ್ತಾರೆ ಅನ್ನುವ ಆತಂಕ. ಅಕ್ಕನ ಜೊತೆ ಹೋಗಬೇಕೆನ್ನುವುದು ಬರೀ ಅಕ್ಕನ ಅನಿಸಿಕೆಯಷ್ಟೇ ಅಲ್ಲ, ಮನೆಯವರೆಲ್ಲರ ಒತ್ತಾಯವೂ ಆಗಿರುತ್ತಿತ್ತು. ನಿಮ್ಮವ್ವನ ಜೊತೆ ಹೋಗದೇ ಮತ್ತೆ ಇನ್ನೂ ಎಷ್ಟು ದಿನ ಅಂತ ಇಲ್ಲೇ ಇರ್ತೀಯಾ ಕಳ್ಳ್ ನನ್ ಮಗ್ನೇ ಅಂತ ಅಮ್ಮ ಒತ್ತಾಯಿಸಿದರೆ, ಒಂದೆರಡು ವಾರಕ್ಕೆ ಹೋಗಿರು, ನಾನು ಹಿಂದಿಂದಲೇ ಬಂದು ಕರ್ಕೊಂಡು ಬಂದುಬಿಡ್ತೀನಿ ಅಂತ ತಾತ. ಚಿಕ್ಕಮ್ಮನಿಗೆ ತನ್ನ ಅಕ್ಕನ ವಕಾಲತ್ತು ವಹಿಸದೇ ಇರಲಾಗುವುದಿಲ್ಲ. ಇವರೆಲ್ಲರನ್ನೂ ಮೀರಿ ಹಠ ಹಿಡಿದು ಊರಿಗೆ ಹೋಗುವುದನ್ನು ತಪ್ಪಿಸಿಕೊಳ್ಳುತ್ತಿದ್ದೆ. ನನ್ನ ಬಾಲ್ಯದ ಬುದ್ಧಿಗೆ ತಿಳಿದಿದ್ದು ಇಷ್ಟೇ. ಅಕ್ಕನ ಊರಿಗೆ ಹೋಗಿ ಒಂದು ರಾತ್ರಿ ಕಳೆಯುವಷ್ಟರಲ್ಲಿ ಇದ್ಯಾವುದೋ ಪರದೇಶಕ್ಕೆ ದೂಡಿಬಿಟ್ಟರಲ್ಲಾ ನನ್ನನ್ನ ಅನಿಸಿಬಿಡುತ್ತಿತ್ತು.

ನಮ್ಮೂರಿನಲ್ಲಿ ಎಲ್ಲವೂ ಸುಭಿಕ್ಷವಾಗಿತ್ತು. ಚೊಕ್ಕವಾದ ಮನೆ, ಅಚ್ಚುಕಟ್ಟಾದ ವ್ಯವಸಾಯ, ಚಿಂತೆಯಿಲ್ಲದೇ ನಡೆಯುತ್ತಿದ್ದ ಖರ್ಚುವೆಚ್ಚಗಳು; ಊರಿನ ಹಲವರೆಲ್ಲ ಮನೆಗೆ ಬಂದು ಹೋಗುತ್ತಿದ್ದುದು. ಹತ್ತು ಬೆರಳುಗಳ ಲೆಕ್ಕಕ್ಕೆ ಸರಿಯಾಗಿ ಸಿಗುವಂತಿದ್ದ ಬಾಲ್ಯದ ಗೆಳೆಯರು, ಅವರ ಸೀನಿಯರ್ ಗಳೂ ಸೇರಿದರೆ ಆಗುತ್ತಿದ್ದ ವಾನರಪಡೆ. ಪುಟ್ಟಕ್ಕನ ಮಗ ಎನ್ನುತ್ತಾ ಮುದ್ದಿನಿಂದ ನೋಡಿಕೊಳ್ಳುತ್ತಿದ್ದ ನಮ್ಮ ಮನೆಯವರು ಒಂದೆಡೆಯಾದರೆ, ನಮ್ಮ ಮನೆಯ ಬಗ್ಗೆ ಊರಿನವರೆಲ್ಲರಲ್ಲಿದ್ದ ಗೌರವದ ಕಾರಣದಿಂದಲೋ ಏನೋ, ಗೆಳೆಯರ ಗುಂಪಿನಲ್ಲಿ ತಮ್ಮ ಮನೆಯವನೇ ಏನೋ ಅಂದುಕೊಳ್ಳುವಂತಿರುತ್ತಿದ್ದ ಭಾವನೆ. ಅಲ್ಲದೇ ಅಮ್ಮನಾದಿಯಾಗಿ ಮಾವಂದಿರವರೆಗೆ ಯಾವಾಗಲೂ ಯಾವುದಕ್ಕೂ ಅಡ್ಡಿಯಿಲ್ಲದೇ ಸಾಗುತ್ತಿದ್ದ ಸಮೃದ್ಧ ಬಾಲ್ಯ. ಬೃಂದಾವನದಲ್ಲಿ ಕೃಷ್ಣನ ಬಾಲ್ಯ ಹೇಗಿದ್ದಿರಬಹುದು ಅನ್ನುವ ಕೊಂಚಮಟ್ಟಿನ ಅನುಭವವಾದರೂ ನನಗಿದೆ ಅಂದರೆ ಅದು ಖಂಡಿತಾ ಉತ್ಪ್ರೇಕ್ಷೆಯಲ್ಲ.

ಹೀಗೇ ನಡೆಯುತ್ತಿದ್ದ ಬಾಲ್ಯದಲ್ಲಿ ಒಂದು ದಿನ ಊರಿಗೆ ಹೋಗಲೇಬೇಕಾದ ಸಂದರ್ಭ ಬಂದೇಬಿಟ್ಟಿತು. ಶಿಶುವಿಹಾರದ ಸರೋಜಕ್ಕ ಹೇಳಿಕೊಡುತ್ತಿದ್ದ ಅ ಆ ಇ ಈ, ಒಂದು ಎರಡು ಬಾಳೆಲೆ ಹರಡು, ಅಂತಹ ಪದ್ಯಗಳು, ಜಯಕ್ಕ ಕೊಡುತ್ತಿದ್ದ ಕಡಲೇ ಉಸ್ಲಿ, ಕೇರುಪ್ಪಿಟ್ಟು, ಪೌಷ್ಠಿಕ ಆಹಾರ ಎಂದು ಕೊಡುತ್ತಿದ್ದ ಹಿಟ್ಟಿನ ಉಂಡೆ ಇವೆಲ್ಲವೂ ಏನೂ ವಿಶೇಷವಲ್ಲ. ನೀನು ನನ್ನ ಜೊತೆ ಬಂದರೆ ಕಾನ್ವೆಂಟಿಗೆ ಸೇರಿಸ್ತೇನೆ, ಅಲ್ಲಿ ನಿನಗೆ ಅ ಆ ಇ ಈ ಜೊತೆಗೆ ಎಬಿಸಿಡಿಯನ್ನೂ ಹೇಳಿಕೊಡ್ತಾರೆ. ದೊಡ್ಡ ದೊಡ್ಡ ಪದ್ಯ ಹೇಳ್ತಾರೆ. ಸೈಕಲ್ಲಿನಲ್ಲಿ ಕೂರಿಸಿಕೊಂಡು ಕಾನ್ವೆಂಟಿಗೆ ಬಿಟ್ಟು ಬರ್ತಾರೆ. ನಿನಗೆ ಹಸಿರು ಬಣ್ಣದ ಚಡ್ಡಿ ಕೊಡಿಸ್ತಿನಿ. ಕಾಲಿಗೆ ಬೂಟು ಕೊಡಿಸ್ತೀನಿ ಅಂತೆಲ್ಲ ಅಕ್ಕ ಹೇಳಿದ್ದೇ ತಡ, ನನ್ನ ಮನಸ್ಸು ಗೊತ್ತಿಲ್ಲದ ಕಾನ್ವೆಂಟಿನ ಬಗ್ಗೆ ಕಿನ್ನರಲೋಕದ ಕಲ್ಪನೆಯನ್ನೇ ಕಣ್ಣುಮುಂದೆ ತಂದಿರಿಸಿತು. ಮರುಮಾತನಾಡದೇ ಅಕ್ಕನ ಜೊತೆ ಹೊರಡಲೇಬೇಕಾಯಿತು.

ಊರಿಗೆ ಬಂದರೆ ಮತ್ತದೇ ಬೇಸರ, ದೊಡ್ಡಪ್ಪಂದಿರ ಮಕ್ಕಳು ಜೊತೆಯಲ್ಲಿಯೇ ಇದ್ದರೂ ಅವರು ನಮ್ಮ ಊರಿನಲ್ಲಿ ನಾನು ಇದ್ದ ಹಾಗೆ ಸ್ವೇಚ್ಛೆಯಾಗಿ ಇರಲಾಗುತ್ತಿರಲಿಲ್ಲ. ಸುಮಾರು ಮೂವತ್ತು ಜನರಿದ್ದ ಅವಿಭಕ್ತ ಕುಟುಂಬ. ದೊಡ್ಡಪ್ಪನ ಮಕ್ಕಳಲ್ಲಿ ಕೆಲವರು ಆಗಲೇ ಕೆಲಸ ಮಾಡಬಹುದಾದಷ್ಟು ದೊಡ್ಡ ಮಕ್ಕಳಾಗಿದ್ದರಿಂದ ಹೊಲದಲ್ಲಿ ಯಾವುದೋ ಕೆಲಸವೋ ಅಥವಾ ದನ ಎಮ್ಮೆಗಳನ್ನು ಕಟ್ಟುವುದೋ, ಹೀಗೆ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿರುತ್ತಿದ್ದರು. ಅಲ್ಲದೇ ನಾನು ಅವರೊಟ್ಟಿಗೆ ಬೆಳೆದಿರಲಿಲ್ಲವಾದ್ದರಿಂದ ಅವರೊಂದಿಗೆ ನಾನು ಯಾರೋ ನೆಂಟರ ಹುಡುಗನಂತೆ ಅಷ್ಟೇ.

ಒಂದೆರಡು ದಿನ ಕಳೆದು ಹೇಗೋ, ಕಾನ್ವೆಂಟ್ ಪ್ರವೇಶವಂತೂ ಆಯಿತು. ರಾಣಿ ಮೇಡಮ್ಮು ನನ್ನ ಮೊದಲ ಸ್ಕೂಲ್ ಮೇಡಮ್ಮು. ನಾನು ಎಲ್ಡ್ ಕೇಜಿ. ನನ್ನ ಅಕ್ಷರ ಮಗ್ಗಿ, ಚೈತ್ರ ವೈಶಾಖ, ಪುಟ್ಟ ಹಾಡುಗಳನ್ನು ಮೆಚ್ಚಿಕೊಳ್ಳುತ್ತಿದ್ದ ರಾಣಿ ಮೇಡಮ್ಮು ಹೊಸದಾಗಿ ಎ ಫಾರ್ ಆಪಲ್ ಅಂತೇನೋ ಹೇಳಿಕೊಡಲು ಶುರು ಮಾಡಿದರು. ಆದರೂ ನನ್ನ ಬೇಸರವಂತೂ ಕಡಿಮೆಯಾಗಲೇ ಇಲ್ಲ. ನನ್ನ ಗೆಳೆಯರೆಲ್ಲ ದೂರವಾಗಿಬಿಟ್ಟರಲ್ಲ ಅನ್ನುತ್ತಾ ಮನಸ್ಸು ಕೊರಗುತ್ತಲೇ ಇರುತ್ತಿತ್ತು. ಇಷ್ಟು ಸಾಲದೆನ್ನುವಂತೆ, ಅಮ್ಮನ ಮನೆಯ ಬೆಣ್ಣೆ ತುಪ್ಪದ ಊಟದೊಂದಿಗೆ ಮುದ್ದಾಗಿ ಬೆಳೆದಿದ್ದ ನಾನು ಈ ಊರಿನ ಕೆಲವರ ಕಣ್ಣಿಗೆ ಫಾರಂ ಕೋಳಿ, ಸಿಂದಿಹಸುವಿನ ಹಾಗೆ ಕಾಣುವುದು ಶುರುವಾಯ್ತು. ಅಲ್ಲಿಯವರೆಗೆ ಡುಮ್ಮ, ಗುಂಡಪ್ಪ, ಅರಭಟ್ಟ… ಮರಿಭೀಮ ಅನ್ನುವ ಅನ್ವರ್ಥನಾಮಗಳನ್ನು ಕೇಳಿದ್ದ ನನಗೆ ಒಬ್ಬನಂತೂ ʼಅದ್ಯಾವ ಹಿಂಡಿ ಹಾಕ್ತಾರೋ ಅವರ ಅಜ್ಜಿಮನೆಯಲ್ಲಿ, ನೋಡು ಹೆಂಗ್ ಮಿಂಚ್ತಾನೇ ಒಳ್ಳೆ ಸಿಂದಿಕರುವಿನಂಗೆʼ ಅಂದಿದ್ದು ಇನ್ನಿಲ್ಲದ ಬೇಸರ ತರಿಸಿಬಿಟ್ಟಿತು. ನನಗೆ ಆಶ್ವಾಸನೆ ಕೊಟ್ಟ ಹಾಗೆ ಸೈಕಲ್ಲಿನಲ್ಲಿ ಯಾರೂ ಶಾಲೆಗೆ ಬಿಟ್ಟು ಬರುತ್ತಿರಲಿಲ್ಲ. ಮಿಡ್ಲ್ ಸ್ಕೂಲ್ ಗೆ ಹೋಗುತ್ತಿದ್ದ ನನ್ನ ದೊಡ್ಡಪ್ಪನ ಮಗಳು ದಿನವೂ ನನ್ನನ್ನು ಕೂಸುಮರಿ ಮಾಡಿ ಎರಡು ಮೈಲಿ ದೂರದ ದಾರಿಯಲ್ಲಿ ಅವಳಿಗೆ ಸಾಧ್ಯವಾಗುವಷ್ಟು ದೂರ ಹೊತ್ತು ಉಳಿದ ದಾರಿಯಲ್ಲಿ ನಡೆಸಿಕೊಂಡು ಬಂದು ನನ್ನನ್ನು ಶಾಲೆ ತಲುಪಿಸಿ ಆಮೇಲೆ ತನ್ನ ಶಾಲೆಗೆ ಹೋಗುತ್ತಿದ್ದಳು. ಶಾಲೆಯು ಮಧ್ಯಾಹ್ನಕ್ಕೇ ಮುಗಿಯುತ್ತಿದ್ದರಿಂದ ದೊಡ್ಡಪ್ಪನ ಮಗಳು ಸಂಜೆ ಶಾಲೆ ಮುಗಿಸುವ ತನಕ ಮತ್ತೆ ರಾಣಿ ಮೇಡಮ್ ಮನೆಗೇ ಹೋಗಿ ಅವರ ಮನೆಯ ಕೈತೋಟದ ಮಾವು, ನಿಂಬೆಗಿಡದ ಅಡಿಯಲ್ಲಿ ಆಡುತ್ತಲಿರುತ್ತಿದ್ದೆ. ಹೀಗೆಯೇ ಒಂದು ದಿನ ರಾಣಿ ಮೇಡಮ್ಮು ಅಕ್ಕನನ್ನು ಕರೆಸಿ ಇವನಿಗೆ ಎರಡು ವರ್ಷ ಕಾನ್ವೆಂಟ್ ಕ್ಲಾಸೇನೂ ಬೇಡ. ಮುಂದಿನ ಸಾರ್ತಿ ಸ್ಕೂಲಿಗೆ ಸೇರಿಸಿಬಿಡಿ ಅಂದಿದ್ದರು. ರಾಣಿ ಮೇಡಮ್ ಮನೆಯು ಸ್ಕೂಲ್ ಗೆ ಹೋಗುವುದಕ್ಕೂ ಮೊದಲೇ ದಾರಿಯಲ್ಲಿದ್ದರಿಂದ ಕೆಲವೊಮ್ಮೆ ದೊಡ್ಡಪ್ಪನ ಮಗಳು ನನ್ನನ್ನು ಮೇಡಮ್ ಮನೆ ಹತ್ತಿರವೇ ಬಿಟ್ಟು ಹೋಗುತ್ತಿದ್ದಳು. ಹಾಗೆಂದು ಮೇಡಮ್ಮೇ ಹೇಳಿದ್ದರೆಂದು ನೆನಪು. ಅವರ ಮನೆಯಲ್ಲಿ ಒಂದಿಷ್ಟು ತಿಂಡಿ ಕೊಡ್ತಿದ್ದರು, ಆಮೇಲೆ ಮೇಡಮ್ ಜೊತೆಯಲ್ಲೇ ಶಾಲೆಗೆ ಬರುತ್ತಿದ್ದೆ. ಹೀಗೇ ಸುಮಾರು ಮೂರ್ನಾಲ್ಕು ತಿಂಗಳು ನಡೆದಿದ್ದ ಕೆಜಿ ಕ್ಲಾಸಿನಲ್ಲೂ ಬೇಸರ ಕಾದಿತ್ತು. ಒಂದು ದಿನ ರಾಣಿ ಮೇಡಮ್ ಮನೆಯಲ್ಲಿ ಸಿಹಿತಿಂಡಿ ಗಿಣ್ಣು ಕಡುಬು ಕೊಟ್ಟು ಹೊಟ್ಟೆತುಂಬಾ ತಿನ್ನು ಅಂತ ಹೇಳಿ ಆಮೇಲೆ ಹಿಂದಿನಿಂದಲೇ ಮೇಡಮ್ ತಂದೆ ʼಇನ್ಮೇಲೆ ನಿಮ್ಮ ಮೇಡಮ್ ಸ್ಕೂಲಿಗೆ ಬರೋದಿಲ್ಲʼ ಅವಳು ಮದ್ವೆ ಆಗ್ತಿದಾಳೆ, ಊರಿಂದ ಹೊರಟುಹೋಗ್ತಾಳೆ, ಹಾಗಾಗಿ ನೀನು ಇನ್ಮೇಲೆ ದಿನಾ ನೇರ ಶಾಲೆಗೇ ಹೋಗುʼ ಅಂತ ಹೇಳಿಬಿಟ್ಟರು. ಕೆಜಿ ಕ್ಲಾಸಿನಲ್ಲಿ ಬೇಸರವಾಗದೇ ಇರುವುದಕ್ಕಿದ್ದ ಒಂದೇ ಕಾರಣ ರಾಣಿ ಮೇಡಮ್ಮೂ ಬರದಿದ್ದ ಮೇಲೆ ಅಲ್ಲಿಯ ಆಸಕ್ತಿ ಉಳಿಯಲೇ ಇಲ್ಲ.

===========================================

(ಮುಂದುವರೆಯುವುದು,ನಿರೀಕ್ಷಿಸಿ)

ಪರಿಚಯ:

ಹೆಸರು: ಅಶ್ವತ್ಥ್ ಪುಟ್ಟಸ್ವಾಮಿ (ಅಶ್ವತ್ಥ್ ಅ)
ಊರು: ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಚಿಕ್ಕಗಾವನಹಳ್ಳಿ. ಕಂಪ್ಯೂಟರ್ ಸೈನ್ಸ್ & ಎಂಜಿನಿಯರಿಂಗ್ ಓದಿ, ಪ್ರಸ್ತುತ ಅಮೇರಿಕಾದ ಪೆನ್ಸಿಲ್ವೇನಿಯಾ ಸ್ಟೇಟ್ ನಲ್ಲಿ ವಾಸವಾಗಿದ್ದು ಪೆನ್ನ್ ಸ್ಟೇಟ್ ಯೂನಿವರ್ಸಿಟಿಯ ಐಟಿ ವಿಭಾಗದ ತಂತ್ರಜ್ಞನಾಗಿ ವೃತ್ತಿನಿರತ. ಕನ್ನಡದ ಓದು ಬರಹ ಹವ್ಯಾಸವಾಗಿರಿಸಿಕೊಂಡಿರುವ ಅಮೇರಿಕನ್ನಡಿಗ. ಕನ್ನಡಪರ ಕೆಲಸಗಳಲ್ಲಿ, ಕನ್ನಡದ ಡಿಜಿಟಲೀಕರಣ, ಕನ್ನಡದಲ್ಲಿ ಶಿಕ್ಷಣ, ದುಡಿಮೆಯ ಭಾಷೆಯಾಗಿ ಕನ್ನಡ ಮುಂತಾದ ವಿಚಾರಗಳಲ್ಲಿ ಆಸಕ್ತ.

One thought on “ಹೊತ್ತಾರೆ

Leave a Reply

Back To Top