ಕನ್ನಡದ ಅಸ್ಮಿತೆ

ನಾಡ ದ್ವಜ ಯಾಕೆ

ಬೇಕು?

ಚಂದ್ರಪ್ರಭ

ಏರುತಿಹುದು ಹಾರುತಿಹುದು
ನೋಡು ನಮ್ಮ ಬಾವುಟ
ತೋರುತಿಹುದು ಹೊಡೆದು ಹೊಡೆದು
ಬಾನಿನಗಲ ಪಟ ಪಟ

  • ಕಯ್ಯಾರ ಕಿಞ್ಞಣ್ಣ ರೈ

ದೇಶ, ಭಾಷೆ, ಸಂಸ್ಕೃತಿ, ಸಂಪ್ರದಾಯ ಇತ್ಯಾದಿ ಎಲ್ಲವುಗಳ ಮೂಲ ನೆಲೆ ಅಸ್ಮಿತೆ. ಅಷ್ಟೇ ಅಲ್ಲ ಇವೆಲ್ಲ ಒಂದನ್ನೊಂದು ಪೂರಕವಾಗಿ ಪ್ರಭಾವಿಸುವ ಅಂಶಗಳು. ವ್ಯಕ್ತಿ, ವ್ಯಕ್ತಿಯ ಮನೆತನ, ಪ್ರದೇಶ ಎಲ್ಲಕ್ಕೂ ಒಂದು ಹೆಸರಿದೆ. ಹತ್ತಾರು ಸಂಗತಿಗಳನ್ನು ಹೇಳಿ ಬಿಡುವ ತಾಕತ್ತು ಆ ಒಂದು ಹೆಸರಿಗಿದೆ. ಗುರುತಿಸುವಿಕೆಯ ಇಂಥದ್ದೊಂದು ಅಂಶವಾಗಿ ಹುಟ್ಟಿದ್ದು ‘ಧ್ವಜ’ ಎಂಬ ಪರಿಕಲ್ಪನೆ.

ಉರಗ ಪತಾಕ ಎಂದೊಡನೆ ತಟ್ಟನೆ ನೆನಪಾಗುವುದು ದುರ್ಯೋಧನ ಮತ್ತವನ ಛಲ. ಗರುಡಧ್ವಜನೆಂದಾಗ ಕೃಷ್ಣ, ಕಪಿಧ್ವಜನೆಂದಾಗ ಅರ್ಜುನ, ವರಾಹ ಧ್ವಜ ಅಂದಾಗ ವಿಜಯನಗರ ಸಾಮ್ರಾಜ್ಯ, ಭಗವಾ ಧ್ವಜ ಅಂದಾಗ ಮರಾಠಾ ಸಾಮ್ರಾಜ್ಯ ನೆನಪಿಗೆ ಬರುವುದು. ಧ್ವಜ, ಪತಾಕೆ, ಬಾವುಟ ಎಂದೆಲ್ಲ ಕರೆಸಿಕೊಳ್ಳುವ ಈ ಸಂಗತಿ ನಿರ್ದಿಷ್ಟ ಕಾರ್ಯೋದ್ದೇಶವನ್ನು ಸೂಚಿಸುತ್ತದೆ. ನಿರಂತರ ಎಲ್ಲರ ಲಕ್ಷ್ಯವನ್ನು ತನ್ನತ್ತ ಸೆಳೆದು ಗುರಿ ತಲುಪುವ ಸಂಕೇತವನ್ನು ಪ್ರತಿನಿಧಿಸುತ್ತದೆ. ಕೆಂಪು ಕೋಟೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಬೇಕೆಂಬ ಕನಸು ನನಸಾದ ಕ್ಷಣದ ಹಿಂದೆ ಏನೆಲ್ಲ ಹೋರಾಟ, ತ್ಯಾಗ, ಬಲಿದಾನಗಳಿವೆ.. ಕೆಲವಷ್ಟು ಮೊಳದ ಬಟ್ಟೆಯಾಗಿರದೇ ಇಡಿಯಾಗಿ ‘ಇಂಡಿಯಾ’ ವನ್ನು ಎಲ್ಲಾ ಗೌರವ, ಸ್ಥಾನ, ಮಾನ ಸಮ್ಮಾನಗಳ ಎತ್ತರದಲ್ಲಿ ನಿರೂಪಿಸುವ ಅಂಶವಾಗಿ ತ್ರಿವರ್ಣ ಧ್ವಜ ಪ್ರತಿಯೊಬ್ಬ ದೇಶವಾಸಿಯ ಎದೆಯಲ್ಲಿ ಸ್ಥಾನ ಪಡೆದಿದೆ.

ಸ್ವಾತಂತ್ರ್ಯ ಪೂರ್ವದ ಸಂಸ್ಥಾನಿಕ ಅರಸರ ನಿಯಂತ್ರಣದಲ್ಲಿದ್ದ ಬಿಡಿ ಬಿಡಿ ಪ್ರದೇಶಗಳು ಇಡಿಯಾಗಿ “ಒಂದು ದೇಶ” ದ ಪರಿಕಲ್ಪನೆಯಡಿ ಬರುವಾಗಲೂ ಸಂಸ್ಥಾನಗಳು ಭಾಷೆ, ಸಂಸ್ಕೃತಿ ಇತ್ಯಾದಿ ಹಲವಾರು ಸಂಗತಿಗಳ ವಿಷಯದಲ್ಲಿ ತಮ್ಮತನವನ್ನು ಉಳಿಸಿಕೊಳ್ಳುತ್ತವೆ… ಅದರಲ್ಲಿ ಒಕ್ಕೂಟದ ಸಾಂಕೇತಿಕ ಪ್ರತಿನಿಧಿತ್ವದ ಹಸ್ತಕ್ಷೇಪ ಇರುವುದಿಲ್ಲ ಎಂಬ ಅಂಶವನ್ನು ಸ್ಪಷ್ಟಪಡಿಸಿದ ಬಳಿಕವಷ್ಟೇ ಸಂಸ್ಥಾನಗಳ ವಿಲೀನ ಕಾರ್ಯ ಸಾಧ್ಯವಾಗಿದ್ದು ಮತ್ತು ಅಂದಿನ ಹಿರಿಯರ ನಿರಂತರ ಮನವೊಲಿಸುವ ಪ್ರಯತ್ನದಿಂದ ಅದು ನೆರವೇರಿದ್ದು.

ಚಿಕ್ಕದೊಂದು ಉದಾಹರಣೆ ಈ ಸಂಗತಿಯನ್ನು ಪ್ರಸ್ತುತ ಪಡಿಸುವುದು – ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡೆಗಳು ನಡೆದಿವೆ ಎಂದುಕೊಳ್ಳೋಣ. ಅಲ್ಲಿ ಒಂದು ಗುಂಪಿನವರು ತಮಿಳು ಧ್ವಜ ಎತ್ತಿ ಹಿಡಿದಿದ್ದಾರೆ, ಕೆಲವರು ಮಲಯಾಳ ಧ್ವಜ, ಮತ್ತೆ ಕೆಲವರು ಪಂಜಾಬಿ..ಇತ್ಯಾದಿ ಅನುಕ್ರಮವಾಗಿ ತಮ್ಮ ತಮ್ಮ ಧ್ವಜ ಹಿಡಿದು ನಿಂತಿರುವಾಗ ನೀವು ಎತ್ತಿ ಹಿಡಿಯುವ ಧ್ವಜ ಕನ್ನಡ ಧ್ವಜವೇ ಆಗಿರುತ್ತದೆ. ಅಖಂಡತೆಯ ಸೂಚಕ ಎಂಬ ಕಾರಣಕ್ಕೆ ಅಲ್ಲಿ ನೀವು ಭಾರತದ ಧ್ವಜ ಹಿಡಿಯಲಾಗದು.

ಕನ್ನಡ ಧ್ವಜ ಎಂದಾಗ ಅದು ಬಸವಾದಿ ಶರಣರು, ಸೂಫಿ ಸಂತರು, ಚೆನ್ನಮ್ಮ-ಅಬ್ಬಕ್ಕ ರಂಥ ಧೀರ ರಾಣಿಯರು, ಟಿಪ್ಪು, ಒಡೆಯರ್ ಮೊದಲಾದ ರಾಜರು ; ಪಂಪ, ರನ್ನ ಪೊನ್ನರಿಂದ ಹಿಡಿದು ಕುವೆಂಪು, ಬೇಂದ್ರೆ ವರೆಗಿನ ಕವಿಗಳನ್ನು… ಅವರು ಬಿತ್ತಿ ಹೋದ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ. ಕರ್ನಾಟಕದ ಇತಿಹಾಸ, ಪರಂಪರೆಯನ್ನು ಪ್ರತಿನಿಧಿಸುವ ಕನ್ನಡತನದ ಪ್ರತೀಕ ಕನ್ನಡ ಧ್ವಜ. ಶಾಂತಿ, ಸೌಹಾರ್ದತೆ ಕನ್ನಡಿಗರ ಮೂಲ ಗುಣ, ಸ್ವಭಾವ. ತನ್ನ ಇಂಥ ಮೌಲ್ಯಗಳ ಮೂಲಕವೇ ಕರ್ನಾಟಕ ಭಾರತೀಯತೆಯನ್ನು ಅಭಿವ್ಯಕ್ತಿಗೊಳಿಸುತ್ತ ಬಂದಿದೆ.

ವಿವಿಧತೆಯಲ್ಲಿ ಏಕತೆ ಭಾರತದ ಹೆಗ್ಗಳಿಕೆ. ಭಾಷೆ, ಸಂಸ್ಕೃತಿ, ಆಚರಣೆಗಳಲ್ಲಿರುವ ವೈವಿಧ್ಯತೆ ಭಾರತದ ಅಂತಃಸತ್ವ.  ಈ ಜಾತ್ಯತೀತ ಸ್ವರೂಪ, ಬಹುತ್ವದ ನೆಲೆಯೇ ಭಾರತ ವಿಶ್ವಮಾನ್ಯವಾಗಲು ಕಾರಣವಾದ ಅಂಶವಾಗಿದೆ. ಈ ಅರ್ಥದಲ್ಲಿ ಭಾರತವೆಂದರೆ ನೂರಾರು ಸುಂದರ ಅಸ್ಮಿತೆಗಳ ಸಂಘಟಿತ ರೂಪ. ಎಲ್ಲ ರಾಜ್ಯಗಳೂ ತಮ್ಮತನವನ್ನು ಉಳಿಸಿಕೊಂಡೇ ಭಾರತೀಯತೆಯನ್ನು ಒಪ್ಪಿಕೊಂಡಿವೆ. ‘ಭಾರತ ಜನನಿಯ ತನುಜಾತೆ’ ಎಂದು ಬಣ್ಣಿಸುವಾಗ ಕುವೆಂಪು ನಿರೂಪಿಸುವುದು ಈ ಅಂಶವನ್ನೇ. ಆಯಾ ರಾಜ್ಯಗಳ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಗೌರವಿಸುವುದು ಒಕ್ಕೂಟ ವ್ಯವಸ್ಥೆಯ ಹೊಣೆ ಮತ್ತು ನಿಜವಾದ ಭಾರತೀಯತೆಯ ಲಕ್ಷಣ. ರಾಜ್ಯಗಳು ರಾಷ್ಟ್ರ ಧ್ವಜದ ಅಡಿಯಲ್ಲಿ ತಮ್ಮ ಅಸ್ಮಿತೆಯ ಕುರುಹಾಗಿ ಸ್ವಂತ ಧ್ವಜ ಹೊಂದುವುದರಲ್ಲಿ ಎಂಥ ಅತಿರೇಕವೂ ಇಲ್ಲ. ರಾಜ್ಯೋತ್ಸವದ ಸಂದರ್ಭದಲ್ಲಿ ಆ ಧ್ವಜ ಹಾರಿಸುವುದರಲ್ಲಿ ಯಾವ ತಪ್ಪೂ ಇಲ್ಲ. ಈ ಧ್ವಜವನ್ನು ನಿರಾಕರಿಸಿ ಅಲ್ಲಿ ‘ಒಂದು ಧ್ವಜ’ ಪರಿಕಲ್ಪನೆಯನ್ನು ಹೇರುವ ಪ್ರಯತ್ನಗಳು ನಡೆದರೆ ಅದು ಪರೋಕ್ಷವಾಗಿ ಕರ್ನಾಟಕದ ಇತಿಹಾಸ, ಪರಂಪರೆಯನ್ನು ನಿರಾಕರಿಸುವುದೇ ಆಗಿದೆ. ಕನ್ನಡಿಗರು ಕನ್ನಡ ಧ್ವಜವನ್ನು ಪ್ರೀತಿಸಿದರೆ ಅದೊಂದು ಸಹಜ ಪ್ರಕ್ರಿಯೆ.

ಅದನ್ನು ಪ್ರತಿಯೊಬ್ಬನೂ ಗೌರವಿಸಬೇಕು.

=============================================

Leave a Reply

Back To Top