ಕೋವಿಡ್-19,ಆತ್ಮಾವಲೋಕನ

ಸುರೇಶ್ ಎನ್.ಶಿಕಾರಿಪುರ

ಕೋವಿಡ್ -೧೯ ಆತ್ಮಾವಲೋಕನದ ಅದೃಶ್ಯ ದೂತ.

ತೊಂಬತ್ತರ ದಶಕದಿಂದ ಇಲ್ಲಿಯ ವರೆಗೆ ಅಂದರೆ ಸುಮಾರು ಮೂವತ್ತು ವರ್ಷಗಳಿಂದ ಈ ದೇಶದಲ್ಲಿ ಮಂದಿರ – ಮಸೀದಿಗಾಗಿ ನಡೆದ ಕಲಹ ಕಿತ್ತಾಟ ಹೋರಾಟ ರಾಜಕೀಯ ಈಗ ಫಲ ನೀಡುತ್ತಿದೆ. ಬಿತ್ತಿದ್ದೇ ಬೆಳೆಯುವುದು. ಜ್ಞಾನವನ್ನು ಬಿತ್ತಿದರೆ ಜ್ಞಾನ ಅಜ್ಞಾನವನ್ನು ಬಿತ್ತಿದರೆ ಅಜ್ಞಾನ. ಈ ದೇಶದ ಬಹುದೊಡ್ಡ ಯುವ ಸಮುದಾಯವನ್ನು ಮಂದಿರ ನಿರ್ನಾಮ ಮತ್ತು ನಿರ್ಮಾಣಕ್ಕೆ ಹುರಿದುಂಬಿಸಿ ನಾನಾ ಬಗೆಯ ಧಾರ್ಮಿಕ ತಳಹದಿಯ ಸಂಘಟನೆಗಳನ್ನು ಕಟ್ಟಿ ಹಿಂದೂ ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಯೋಧರನ್ನಾಗಿ ಪ್ರಯೋಗಿಸಲಾಯಿತು. ಈಗಲೂ ಅದು ಮುಂದುವರೆದೇ ಇದೆ. ಈ ಮತೀಯ ಹೋರಾಟಗಳು ಸೃಷ್ಟಿಸಿದ ಹಿಂಸೆ ಒಡಕು ಅಶಾಂತಿ ಅಂಧಕಾರ ಅಪನಂಬಿಕೆ ಅಂತಿಂಥಾದ್ದಲ್ಲ. ಪ್ರಗತಿಪರವಾಗಿ ಯುವ ಸಮುದಾಯವನ್ನು ಕಟ್ಟದೇ ಹೋದರೆ ಏನೇನು ಯಡವಟ್ಟುಗಳಾಗಬೇಕೊ ಅವೆಲ್ಲವೂ ಆಗುತ್ತವೆ‌ ಎಂಬುದಕ್ಕೆ ನಮ್ಮ ದೇಶದ ಇಂದಿನ ಸ್ಥಿತಿ ತಾಜಾ ಉದಾಹರಣೆ. ರಾಜಕೀಯ ಪಕ್ಷಗಳು ಧರ್ಮಾಧಾರಿತವಾದಾಗ ಅವು ಮಂದಿರ ಮಸೀದಿ ಇಗರ್ಜಿ, ಮಠಗಳು, ಬಾಬಾಗಳು, ದೇವರು ದಿಂಡಿರುಗಳ ಕಡೆಗೇ ಯೋಚಿಸುತ್ತವೋ ಹೊರತು ಒಂದು ಸಶಕ್ತ ವೈಜ್ಞಾನಿಕ ವೈಚಾರಿಕ ಸಮಾಜವನ್ನು ದೇಶವನ್ನು ಕಟ್ಟಲು ಅವುಗಳಿಂದ ಸಾಧ್ಯವಿಲ್ಲ‌. ಅದರ ಪ್ರತಿಫಲವೇ ಇಂದು ಭಾರತ ಎದುರಿಸುತ್ತಿರುವ ಕೋವಿಡ್-19 ಸಮಸ್ಯೆ. ಇದು ಒಂದು ಉದಾಹರಣೆಯಷ್ಟೆ. ಭಾರತದ ದಾರಿದ್ರ್ಯದ ಹಿಂದೆ ಇರುವುದೂ ಈ ವಿಚಾರಗಳೇ. ಈ ದೇಶದಲ್ಲಿ ಮಂದಿರ ಮಸೀದಿಗಾಗಿ ನಡೆದ ಮೆರವಣಿಗೆ, ಹೊಡೆದಾಟ, ವಾಗ್ವಾದ, ವಿಮರ್ಶೆ, ಊರು, ದೇಶ, ರಾಜ್ಯಗಳ ಬಂದ್ ಗಳು, ಸಮಾವೇಷಗಳು, ಬೈಟಕ್ ಗಳು, ರ್ಯಾಲಿಗಳು, ಭಾಷಣಗಳು, ಚುನಾವಣಾ ಪ್ರಣಾಳಿಕೆಗಳು, ಘೋಷಣೆಗಳು, ಶಂಕನಾದಗಳು, ರಥ ಯಾತ್ರೆಗಳು, ರಸ್ತೆ ತಡೆಗಳು, ಬಯ್ಕಾಟುಗಳು, ಆರೋಗ್ಯ ಶಿಕ್ಷಣ, ಸದೃಢ ಆರೋಗ್ಯ ವ್ಯವಸ್ಥೆ, ಆಸ್ಪತ್ರೆಗಳ ನಿರ್ಮಾಣ, ಸಂಶೋಧನೆಗಳು, ಪ್ರಯೋಗಾಯಲಗಳು, ಹೊಸಹೊಸ ವೈದ್ಯಕೀಯ ಆವಿಷ್ಕಾರಗಳು, ಔಷಧ, ಅಂಬ್ಯುಲೆನ್ಸ್, ಸಿಬ್ಬಂಧಿ ನೇಮಕಾತಿ ಮೊದಲಾದ ಮೂಲಭೂತ ಸೌಕರ್ಯಗಳು, ಶಿಕ್ಷಣ ಮೊದಲಾದವಕ್ಕಾಗಿ ನೆಡೆದಿದ್ದರೆ ಇಂದು ಭಾರತ ಅತ್ಯಂತ ಮುಂದುವರೆದ ದೇಶಗಳೆನಿಸಿಕೊಳ್ಳುತ್ತಿರು ಯಾವುದೇ ರಾಷ್ಟ್ರಗಳಿಗಿಂತ ಉನ್ನತ ಸ್ಥಿತಿಯಲ್ಲಿರುತ್ತಿತ್ತು. ಚಿಕಿತ್ಸೆ ಸಿಗದೆ, ಅನ್ನ ಸಿಗದೆ, ಆಶ್ರಯ ಸಿಗದೆ ಜನರು ಗುಳೇ ಹೋಗುವ, ಬೀದಿ ಬೀದಿಯಲ್ಲಿ ಬಿದ್ದು ಸಾಯುವ ಸ್ಥಿತಿ ಬರುತ್ತಿರಲಿಲ್ಲ. ಕೋವಿಡ್ – 19ರ ಈ ತುರ್ತು ಪರಿಸ್ಥಿತಿಯಲ್ಲಿ ಮಂದಿರ ಮಸೀದಿಗಳು ಜನರನ್ನು ರಕ್ಷಿಸಲಾರವು ಎಂಬುದನ್ನು ಈಗಲಾದರೂ ನಮ್ಮ ಯುವ ಸಮುದಾಯ ಅರ್ಥ ಮಾಡಿಕೊಳ್ಳಬೇಕು‌. ದಶಕಗಳಿಂದ ಯುವಕರನ್ನು ಧಾರ್ಮಿಕ ವಿಚಾರಗಳಿಗೆ ಪ್ರಚೋದಿಸಿ ಬಳಸಿಕೊಂಡದ್ದೇನಾದರೂ ಇಂದು ಉಪಯೋಗಕ್ಕೆ ಬರುತ್ತಿದೆಯೇ ಎಂಬುದನ್ನು ಆಲೋಚಿಸಬೇಕು. ಮನುಷ್ಯರ ಜೀವವನ್ನು ಉಳಿಸಲು, ರಕ್ಷಿಸಲು ಉಪಯೋಕ್ಕೆ ಬಾರದ ಮಂದಿರ – ಮಸೀದಿ ಧರ್ಮಗಳ ಗುಂಗಿನಿಂದ ಈಗಲಾದರೂ ಹೊರಬರಬೇಕು.

ನಮ್ಮ ದೇಶ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವ ಪ್ರಯತ್ನ ಮಾಡುತ್ತಿದೆ. ನಮಗೆ ಸರಿಯಾದ ಸುರಕ್ಷತಾ ವ್ಯವಸ್ಥೆಗಳು ಇಲ್ಲ ಎಂದು ವೈದ್ಯಕೀಯ ವಲಯದಿಂದ ಹತಾಷೆಯ ಕೂಗುಗಳು ಅಲ್ಲಲ್ಲಿ ಕೇಳಬರುತ್ತಿವೆ. ಯಾರನ್ನು ಯೋಧರು ಎಂದು ಈಗ ಪರಿಗಣಿಸಲಾಗಿದೆಯೋ ಅವರು ಚಿಕಿತ್ಸೆ ನೀಡಲು ಹೆದರುತ್ತಿದ್ದಾರೆ ಹಿಂಜರಿಯುತ್ತಿದ್ದಾರೆ. ಜನ ಭೀತಿಯಿಂದ ಕಂಗಾಲಾಗಿದ್ದಾರೆ. ಖಾಸಗೀ ಆಸ್ಪತ್ರೆಗಳು ಕೊರೋನಾ ರೋಗಿಗಳಿಗಾಗಿ ಬಿಲ್ ಬುಕ್ಕು ಹಿಡಿದು ರೆಡ್ ಕಾರ್ಪೆಟ್ ಹಾಸಿ ಕಾಯುತ್ತಿವೆ‌. ಸರ್ಕಾರಿ ವ್ಯವಸ್ಥೆ ವಿಫಲವಾಗಿದೆ, ಸೋತು ಕೈ ಚೆಲ್ಲವ ಹತಾಶ ಹಂತ ತಲುಪಿಯಾಗಿದೆ. ಇದೆಲ್ಲವೂ ಅವಿವೇಕದ ಅವೈಜ್ಞಾನಿಕ ಹಾಗೂ ಅವೈಚಾರಿಕ ವಿಚಾರಗಳಿಗೆ ಮನ್ನಣೆ ಕೊಟ್ಟದ್ದರ ಫಲ. ಭ್ರಷ್ಟಾಚಾರದ ಫಲ ಹಾಗೂ ಹೊಣೆಗೇಡಿತನದ, ಸ್ವಾರ್ಥದ ಫಲ. ಸರ್ಕಾರವೂ ವಿಫಲವಾಗಿದೆ. ಹಣವೂ ಇಲ್ಲ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳೂ ಇಲ್ಲ. ಕೋವಿಡ್ ಹೆಸರಿನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಕೂಗೂ ಎದ್ದಿದೆ. ಇದೇ ಸರಿಯಾದ ಹೊತ್ತು ಎಂದು ಕೊರೋನಾಕ್ಕೆ ಮದ್ದು ಕಂಡು ಹಿಡಿದಿರುವುದಾಗಿ ಸುಳ್ಳು ಪ್ರಚಾರ ಮಾಡಿ ಆ ಮೂಲಕ ಜನರ ಆರೋಗ್ಯದ ಜೊತೆ ಆತಂಕದ ಜೊತೆ ಚಲ್ಲಾಟವಾಡುತ್ತಾ ಅವರ ಮಾನಸಿಕ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಂಡು ಕೋಟಿ ಕೋಟಿ ಹಣ ಲಪಟಾಯಿಸುವ ಔಷಧ ದಂಧೆ ಕೋರರು ಕುಣಿದಾಡುತ್ತಿದ್ದಾರೆ. ಹಾಗಿದ್ದರೂ ಆಳುವ ವ್ಯವಸ್ಥೆ ಅಂತವರ ಮೇಲೆ ಮೃದು ಧೋರಣೆಯನ್ನು ತಾಳಿದೆ. ಇದರ ವಿರುದ್ಧ ಯುವ ಸಮುದಾಯ ಜನತೆ ದಂಗೆ ಏಳುವುದಿಲ್ಲ ಎಂಬ ಖಾತ್ರಿ ಮೇಲಿನವರಿಗಿದೆ ಏಕೆಂದರೆ ಜನತೆಯನ್ನು ಹೇಗೆ ಭಾವನಾತ್ಮಕವಾಗಿ ವಂಚಿಸಿದ್ದೇವೆ ಅದು ಯಾವ ರೀತಿಯ ಕೆಲಸ ಮಾಡುತ್ತಿದೆ ಎಂಬ ಸತ್ಯ ಅವರಿಗೂ ಚನ್ನಾಗಿಯೇ ಗೊತ್ತಿದೆ. ಒಂದು ಸಂಸ್ಥೆಯಂತೂ ಈಗಾಗಲೇ ಕೋವಿಡ್ ಗೆ ತಾನು ಔಷಧ ಕಂಡು ಹಿಡಿದಿದ್ದು ಮುಂಬರು ಅಗಸ್ಟ್ ೧೫ ಕ್ಕೆ ಅದನ್ನು ಬಿಡುಗಡೆ ಮಾಡುವುದಾಗಿಯೂ ಘೋಷಿಸಿದೆ ಅದರ ವೈಜ್ಞಾನಿಕ ಸಾಧ್ಯಾಸಾಧ್ಯತೆಗಳ ವಿರುದ್ಧ  ದನಿ ಎದ್ದಾಗ ಎಚ್ಚೆತ್ತು ಮುಂಬರುವ ವರ್ಷಕ್ಕೆ ಔಷದ ಲಭ್ಯತೆಯ ಸಾಧ್ಯತೆಯನ್ನು ಮುಂದೂಡಿದೆ. ಯೋಗ ಗುರುವೊಬ್ಬರು ಕೆಮ್ಮು ಮತ್ತು ಜ್ವರಕ್ಕೆ ತಾನು ಔಷಧ ತಯಾರಿಸಿರುವುದಾಗಿ ಕೇಂದ್ರ ಆಯುಷ್ ಇಲಾಖೆಗೆ ಅನುಮತಿ ಕೋರಿ ಅರ್ಜಿ ಹಾಕಿ ಇತ್ತ ತಾನು ಕೊರೋನಾ ಜ್ವರಕ್ಕೆ ಕೊರೋನಿಲ್ ಎಂಬ ಔಷಧ ತಯಾರಿಸಿರುವುದಾಗಿ ದೊಡ್ಡ ಜಾಹಿರಾತು ನೀಡುವ ಮೂಲಕ ಲಾಭಿಗೆ ನಿತ್ತಿದೆ. ಆಯುಷ್ ಇಲಾಖೆ ನೋಟಿಸ್ ನೀಡಿದ್ದರೂ, ಬಾಬಾ ರಾಮದೇವ ಅವರ ಮೇಲೆ ಹಾಗೂ ಅವರ ಆಪ್ತರೊಬ್ಬರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿರುವುದಾಗಿ ಹೇಳುತ್ತಿದ್ದರೂ ಕೇಂದ್ರದ ಮಂತ್ರಿಗಳು ಮಾತ್ರ ವಿಶ್ವಾಸಾರ್ಹವಲ್ಲದ ಲಾಭದ ದಂಧೆಯಾಗಿರುವ ಇದನ್ನು ಸಮರ್ಥಿಸಿಕೊಳ್ಳುತ್ತಾರೆ‌. ಇದನ್ನೆಲ್ಲ ಹ್ಞೂ ಎನ್ನಲು ದೇಶದ ಮೂಲೆ ಮೂಲೆಯಲ್ಲಿ ಅಂಧಾಭಿಮಾನಿಗಳ ದೊಡ್ಡಪಡೆಯೂ ಅವರ ಬೆನ್ನಿಗೆ ಇದೆ. ಅಂತಿಮವಾಗಿ ಇದರ ಫಲಿತಾಂಶ ಪ್ರಜಾ ಸಮೂಹದ ಮೇಲೆಯೇ. ವೈಜ್ಞಾನಿಕ ಮನೋಭಾವವನ್ನು ದೇಶದ  ಯುವಕರಲ್ಲಿ ಸಮಸ್ತ ಪ್ರಜಾ ಸಮೂಹದಲ್ಲಿ ಬೆಳೆಸದೆ ಧಾರ್ಮಿಕ ಮನೋಭಾವವನ್ನು ಬಿತ್ತಿ ಬೆಳೆದಿದ್ದರ ಫಲ ಇಂದು ಕಣ್ಣೆದುರೇ ಕಾಣುತ್ತಿದೆ.

ಬಾಲ್ಕನಿಗೆ ಬಂದು ಚಪ್ಪಾಳೆ ಹೊಡೆದೂ ಆಯಿತು, ಮನೆ ಮನೆಯಲ್ಲಿ ಹಣತೆ ಹಚ್ಚಿಯೂ ಆಯಿತು. ಬಾಲ್ಕನಿಗೆ ಬಂದು ಚಪ್ಪಾಳೆ ತಟ್ಟಿದರೆ ಊರೊಳಗೆ ನುಗ್ಗಿದ ಮಾರಿ ಹೆದರಿ ಓಡಿ ಹೋಗಲು ಅದೇನು ಗದ್ದೆಯ ಫಸಲಿಗೆ ಮುತ್ತಿದ ಹಕ್ಕಿಯ ಹಿಂಡೇ…? ಕೊನೆಗೆ ಇದೆಲ್ಲವನ್ನೂ ಮಾಡಲು ಹೇಳಿ ಮಾಡಿಸಿದ ಆಳುವ ನಾಯಕ ‘ಕೋವಿಡ್ ನೊಂದಿಗೆ ಜೀವಿಸುವುದ ಕಲಿಯಿರಿ’ ಎಂದುಬಿಟ್ಟ. ಇಂತಹ ಸ್ಥಿತಿ ನಿರ್ಮಾಣವಾಗುವುದು ದೌರ್ಬಲ್ಯದಿಂದ. ದೌರ್ಬಲ್ಯವು ಬರುವುದು ಮೌಢ್ಯ ಮತ್ತು ಮತೀಯ ಸೈದ್ಧಾಂತಿಕತೆಯನ್ನು ಬಿತ್ತಿ ವೈಜ್ಞಾನಿಕತೆಯನ್ನು ಉದಾಸೀನ ಮಾಡುವುದರಿಂದ.

ಲಂಕೇಶ್ ಅಂದೇ ಹೇಳಿದ್ದರು ‘ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ’ ಎಂದು. ಆ ಮಾತು ಈಗ ನೆನಪಾಗುತ್ತಿದೆ. ಪವಿತ್ರವಾದ ಜೀವಗಳನ್ನು ಉಳಿಸಲು ಈಗ ಯಾವ ಮಂದಿರ ಮಸೀದಿಗಳೂ ಆ ಕುರಿತ ರಾಜಕೀಯ ವಿಚಾರ ವಾಗ್ವಾದಗಳೂ ಬರುವುದಿಲ್ಲ ಹಾಗೂ ಸಶಕ್ತವಾಗಿಲ್ಲ. ಜಢ ಸಿದ್ಧಾಂತಗಳಿಂದ ಹೊರಬಂದು ನಾವೀಗ ಅವಲೋಕಿಸಬೇಕಾಗಿದೆ. ನಾವು ಮಾತ್ರವಲ್ಲ ನಮ್ಮನ್ನಾಳುವ ನಾಯಕರೂ…

“ಓ ಬನ್ನಿ ಸೋದರರೆ ಬೇಗ ಬನ್ನಿ

ಗುಡಿ ಚರ್ಚು  ಮಸಜೀದಿಗಳ ಬಿಟ್ಟು ಹೊರ ಬನ್ನಿ

ಬಡತನವ ಬುಡಮಟ್ಟ ಕೀಳ ಬನ್ನಿ

ಮೌಡ್ಯತೆಯ ಮಾರಿಯನು ಹೊರದೂಡಲೈ ತನ್ನಿ

ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ

ಓ ಬನ್ನಿ ಸೋದರರೆ ಬೇಗ ಬನ್ನಿ…….

ಸಿಲುಕದಿರಿ ಮತವೆಂಬ ಮೊಹದಜ್ಞಾನಕ್ಕೆ

ಮತಿಯಿಂದ ದುಡುಯಿರೈ ಲೋಕ ಹಿತಕೆ

ಆ ಮತದ ಈ ಮತದ ಹಳೆಮತದ ಸಹವಾಸ

ಸಾಕಿನ್ನು ಸೇರಿರೈ ಮನುಜ ಮತಕ್ಕೆ

ಓ ಬನ್ನಿ ಸೋದರರೇ ವಿಶ್ವ ಪಥಕೆ…..” ಎಂದು ಕವಿ ಕುವೆಂಪು ಸುಮ್ಮನೇ ಕರೆ ನೀಡಲಿಲ್ಲ. ದೇಶದ ಯುವಕರನ್ನು ಕುರಿತು ವಿವೇಕಾನಂದರು ಸುಮ್ಮಸುಮ್ಮನೇ ಕಂಠಶೋಷಣೆ ಮಾಡಿಕೊಂಡು ಕರೆನೀಡಲಿಲ್ಲ. ಅವರೆಲ್ಲರ ಧಾರ್ಮಿಕ ದೃಷ್ಟಿ ವೈಜ್ಞಾನಿಕತೆಯಿಂದ ಕೂಡಿತ್ತು. ದೇಶ ಮತ್ತು ಅದರ ಸಮಸ್ತ ಅಭಿವೃದ್ಧಿಯ ಕುರಿತು ಅವರ ದಾರ್ಶನಿಕತೆ ದೂರದೃಷ್ಟಿಯಿಂದ ಕೂಡಿತ್ತು. ಅದೆಂದೂ ಅವೈಜ್ಞಾನಿಕವೂ ಮತೀಯಾಂಧಕಾರಿಯೂ ಆಗಿರಲಿಲ್ಲ. ಅವರು ಬದುಕಿದ್ದ ಕಾಲದಲ್ಲೂ ಸಾಂಕ್ರಾಮಿಕ ರೋಗಗಳು ದೇಶವನ್ನು ನುಗ್ಗಿ ಜನರನ್ನು ಇನ್ನಿಲ್ಲದಂತೆ ಬಾದಿಸಿದ್ದವು. ದೇಶದ ವಿಜ್ಞಾನಿಗಳು ಆಗ ಔಷಧ ಶೋಧದಲ್ಲಿ ತೊಡಗಿದರು. ಸರ್ಕಾರಗಳು ನೈಜ ಕಾಳಜಿಯಿಂದ ಕೆಲಸ ಮಾಡಿದವು. ಭಾರತವೇ ಕ್ಷಯ ರೋಗಕ್ಕೆ, ರೇಬಿಸ್ಸಿಗೆ, ಪ್ಲೇಗ್, ಕಾಲರಾ, ಪೋಲಿಯೋ ಮೊದಲಾದ ಖಾಯಿಲೆಗಳಿಗೆ ಮದ್ದು ಅರೆಯಿತು. ಇದು ಸಾಧ್ಯವಾದದ್ದು ವಿಜ್ಞಾನಕ್ಕೆ ನೀಡಿದೆ ಒತ್ತಿನಿಂದ ಪ್ರಾಮುಖ್ಯತೆಯಿಂದ. ಇಂದು ಭಾರತ ಮೇಲ್ಕಂಡ ಕಾಯಿಲೆಗಳನ್ನು ಯಶಸ್ವಿಯಾಗಿ ಎದುರಿಸಿದೆ. ಈಗ ಬಂದಿರುವ ಕೊರೋನಾ ಹಾಗೆ ನೋಡಿದರೆ ಹಿಂದಿನ ವಿನಾಶಕಾರಿ ಸಾಂಕ್ರಾಮಿಕಗಳ ಸ್ವರೂಪದ್ದಲ್ಲ ‘ಹುಲಿಗಿಂತ ಹುಲಿಯ ಬಣ್ಣನೆಯೇ ಹೆದರಿಸಿತ್ತು’ ಎಂಬ ಗಾದೆ ಮಾತಿನಂತೆ ಕೊರೋನಾಕ್ಕಿಂತ ಅದರ ಬಗೆಗಿನ ವರ್ಣನೆಗಳು, ಭಯಾನಕ ಸುದ್ಧಿಗಳು ಎಬ್ಬಿಸುವ ಬೊಬ್ಬೆಯೇ ಇಂದು ಭಯಾನಕತೆಯನ್ನು ಸೃಷ್ಟಿಸಿದೆ. ಇಲ್ಲಿಯೂ ಆಳುವ ವ್ಯವಸ್ಥೆ ಕೋಮು ರಾಜಕೀಯವನ್ನೇನೂ ಬಿಡಲಿಲ್ಲ. ಮಾದ್ಯಮಗಳು ಮುಸ್ಲಿಮ್ ತಬ್ಲಿಘಿಗಳನ್ನು  ಕೊರೋನಾ ಪ್ರಸಾರಕರು ಎಂಬಂತೆ ಬಿಂಬಿಸಿದವು. ಹಳ್ಳಿಹಳ್ಳಿಗಳಲ್ಲಿ ಡಂಗುರ ಹೊಡೆಸಿದರು, ಸಣ್ಣಪುಟ್ಟ ಬಡ ವ್ಯಾಪಾರಿಗಳನ್ನು ಹೆದರಿಸಿ ಗದರಿಸಿ ಹೊಡೆದು ಬಡಿದು ಓಡಿಸಿದರು. ಎಸ್ಟೋ ಬಡವರು ಮನೆ ಹೊಟ್ಟೆಗಿಲ್ಲದೆ ನರಳುವ ಸ್ಥಿತಿ ಸೃಷ್ಟಿ ಮಾಡಿದರು. ಕೊರೋನಾದ ಹೆಸರಲ್ಲಿ ಒಂದು ಸಮುದಾಯವನ್ನು ಅಸ್ಪೃಷ್ಯರನ್ನಾಗಿಸುವ, ಪರಕೀಯರರನ್ನಾಗಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಿ ಮುಗಿಸಿದರು. ಇದು ಧಾರ್ಮಿಕ ಮನೋಭಾವ ಎಂಥಹಾ ಅಮಾನವೀಯ ಮನಸ್ಥಿತಿಗಳನ್ನು ಪರಿಸ್ಥಿತಿಗಳನ್ನು ಸೃಷ್ಟಿಸಬಲ್ಲದು ಎಂಬುದಕ್ಕೆ ಉದಾಹರಣೆ. ಈಗಾಗಲೇ ದ್ವೇಷದ ಮೂಟೆಗಳಾಗಿರುವ ಯುವ ಸಮುದಾಯ ಒಂದು ನಿರ್ದಿಷ್ಟ ಸಮುದಾಯದ ಮೇಲೆ ಕೃದ್ಧರಾಗಿ ಕುದಿಯುವಂತಾಯಿತು. ಸಾಂಕ್ರಾಮಿಕ ರೋಗದಲ್ಲೂ ಧರ್ಮದ ವಿಷಬೀಜ ಬಿತ್ತಿ ರಾಜಕೀಯ ಅಧಿಕಾರದ ಫಸಲು ತೆಗೆಯುವ ಕೃಷಿಯನ್ನು ಭಲೆ ನಾಜೂಕಿನಿಂದ ನಿರ್ವಹಿಸಲಾಯಿತು. ಕೋಟ್ಯಾಂತರ ಕಾರ್ಮಿಕರು ಅನ್ನ ಆಶ್ರಯವಿಲ್ಲದೆ ಗುಳೇ ಹೊರಟು ಹಾದಿಬೀದಿಯಲ್ಲಿ ಬಿದ್ದು ಸತ್ತದ್ದು ಲೆಕ್ಕಕ್ಕಿಲ್ಲವಾಯಿತು.‌ ದೇಶ ಕಟ್ಟಿದವರು ಸೋಂಕಿತರಾದರು ದೇಶ ದೋಚಿದವರು ತಮ್ಮ ಬಹು ಮಹಡಿಯ ಕಟ್ಟಡಗಳಲ್ಲಿ ಸುರಕ್ಷಿತರಾದರು. ಒಟ್ಟಿನಲ್ಲಿ ಅವಿವೇಕದ ಪರಮಾವಧಿ, ಅಲಕ್ಷ್ಯ, ಬಡವರು ದುಡಿಯುವ ವರ್ಗದ ಬಗೆಗಿನ ಅಸಡ್ಡೆ ತಿರಸ್ಕಾರ ಮನೋಭಾವಗಳು ಈ ದೇಶದಲ್ಲಿ ಕಾಯಿಲೆ ವ್ಯಾಪಕವಾಗಿ ಹಬ್ಬಲು ಕಾರಣವಾದವು. ವಿಶ್ವ ಆರೋಗ್ಯ ಸಂಸ್ಥೆಯು ಭಾರತದಂತಹಾ ದೇಶದಲ್ಲಿ ಸೋಂಕು ಸಮುದಾಯದ ಹಂತವನ್ನು ತಲುಪಿದರೆ ಏನು ಅನಾಹುತ ಆಗಬಹುದು ಎಂದು ಎಚ್ಚರಿಸಿತ್ತೋ ಅದು ನಮಗೆ ಎಚ್ಚರವಾದಂತೆ ಕಾಣಲಿಲ್ಲ.

ನಾವು ಯಾವುದನ್ನು ಪ್ರಶ್ನಿಸಬೇಕೊ ಅದನ್ನು ಪ್ರಶ್ನಿಸಲಿಲ್ಲ ಯಾವುದನ್ನು ಬೆಂಬಲಿಸ ಬಾರದೊ ಯಾವುದನ್ನು ಒಪ್ಪ ಬಾರದೊ‌ ಯಾವುದನ್ನು ಹಿಂಬಾಲಿಸಬಾರದೋ ಅವುಗಳನ್ನು ಬೆಂಬಲಿಸಿದ್ದರ ಹಿಂಬಾಲಿಸಿದ್ದರ ಒಪ್ಪಿದ್ದರ ಫಲವನ್ನೀಗ ಉಣ್ಣುತ್ತಿದ್ದೇವೆ. ದಶಕಗಳಿಂದ ಧರ್ಮದ ನಿದ್ದೆ ಗುಳಿಗೆ ನುಂಗಿ ಮತ್ತೇರಿ ನಿಶೆಯೊಳಗೆ ನಿದ್ದೆಹೋದದ್ದರ ಫಲ ಇಂದು ಅಸಹಾಯಕ ಸ್ಥಿತಿಗೆ ಸೃಷ್ಟಿಯಾಗುವಂತೆ ಮಾಡಿದೆ.

ಇನ್ನಾದರೂ ಈ ಅವಿಚಾರಗಳಿಂದ ಹೊರ ಬಂದು ಪ್ರಗತಿಪರವಾಗಿ ಯೋಚಿಸುವುದನ್ನು ಕಲಿಯಬೇಕು ವೈಜ್ಞಾನಿಕ ಮನೋಧರ್ಮವನ್ನು ರೂಢಿಸಿಕೊಳ್ಳುವ ಮೂಲಕ ಧರ್ಮ ದೇವರು ಜಾತಿಗಳೆಂಬ ಶ್ರೇಷ್ಟತೆಯ ವ್ಯಸನಗಳಿಂದ ಹೊರಬಂದು ದೇಶವನ್ನು ಆಂತರಿಕವಾಗಿ ಬಲಪಡಿಸಬೇಕು. ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆ ಕುಸಿದರೆ ಅಂತಹಾ ದೇಶಕ್ಕೆ ಯಾವತ್ತಿಗೂ ಭವಿಷ್ಯವಿಲ್ಲ. ಧರ್ಮದ ಅಂಧಾಕಾರದ ತಳಹದಿಯ ಮೇಲೆ ದೇಶ ಕಟ್ಟಲು ಹೊರಟರೆ ಅಂತಹಾ ದೇಶ ಎಂದಿಗೂ ಸದೃಢ ದೇಶವಾಗಲಾರದು.

*******************

6 thoughts on “ಕೋವಿಡ್-19,ಆತ್ಮಾವಲೋಕನ

  1. What happened to america China. Sir. Everything u wanted to turn to anti modhi.anti rss. By doing this u r misguiding others

    1. ಹಾಗೇ ಅನ್ಕೊಳಿ ಸರ್…… ವಂದನೆಗಳು…ವ್ಯವಸ್ಥೆಯ ತಪ್ಪುಗಳನ್ನ ಹೇಳಿದ್ರೆ ಅದು ಮಿಸ್ ಗೈಡಿಂಗ್ ಅನಿಸತ್ತೆ. ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಆಶಯ ವ್ಯಕ್ತ ಪಡಿಸೋದು ಮಿಸ್ ಗೈಡಿಂಗ್ ಅನಿಸತ್ತೆ. ದುರಂತ ಏನಂದ್ರೆ ಒಳ್ಳೆಯ ವಿಚಾರಗಳನ್ನ ಮಿಸ್ ಗೈಡಿಂಗ್ ಅಂತ ಹೇಳೋ ಮೂಲಕ ಅದನ್ನ ಒಪ್ಪಿಕೊಳ್ಳಲಾಗದ ಮನಸ್ಥಿತಿಗಳು.

Leave a Reply

Back To Top