ಚಿಂತನೆ

ಇಷ್ಟಕ್ಕೆ ಹೀಗೆ ವರಿ ಮಾಡೋದಾ?

ಪಿ.ಎಂ.ಇಕ್ಭಾಲ್ ಕೈರಂಗಳ

ಮಾನಸಿಕವಾದ ಸಮಸ್ಯೆಗಳೇ ಹಾಗೆ‌. ಬಲು ಸಂಕೀರ್ಣ.  ಹೀಗೇ ಇರುತ್ತದೆ ಎಂಬ ನಿಯಮವಿರಲ್ಲ.  ಒಂದೊಂದು ಸಮಸ್ಯೆಯೂ ವೈವಿಧ್ಯ. ಅವುಗಳ ತೀವ್ರತೆ ಎಷ್ಟು ಎಂದು ಅವುಗಳನ್ನು ಅನುಭವಿಸುವ ನತದೃಷ್ಟರಿಗೇನೇ ಗೊತ್ತು. ಆದರೆ ಒಂದು ನೆನಪಿರಲಿ. ‘ನನ್ನ ಸಮಸ್ಯೆಗೆ ಪರಿಹಾರವಿಲ್ಲ’ ಎಂದು ತಿಳಿದು ಹತಾಶರಾದರೆ ಸಮಸ್ಯೆಯ ವ್ಯಾಪ್ತಿ ಮತ್ತಷ್ಟು ದೊಡ್ಡದಾಗುತ್ತದೆ. ಮಾನಸಿಕವಾಗಿ ಅನುಭವಿಸುವ ನೋವು, ಕೊರಗು ಅಥವಾ ಒತ್ತಡ ಸಣ್ಣ ಸಮಸ್ಯೆಯೇನಲ್ಲ. ಇತರರಿಗಾಗಿ ಅವರ ವಿಷಯದ ಆಳಕ್ಕಿಳಿದು ವಸ್ತುನಿಷ್ಠವಾಗಿ ಚಿಂತಿಸಿ ಅರ್ಥೈಸಲು ಮುಂದೆ ಬರುವವರು ಕಡಿಮೆ. ನನಗೆ ಯಾರಿಲ್ಲ ಎಂಬ ಭಾವ ಸೇಡಾಗಿ ಕನ್ವರ್ಟು ಆಗಿ  ಹಿಂಸೆಗೆ ಇಳಿಯುವವರೂ ಇದ್ದಾರೆ.  ಆತ್ಮಹತ್ಯೆಯ ದಾರಿ ಹಿಡಿದವರೂ ಇದ್ದಾರೆ. ಇವೆರಡೂ  ಪರಿಹಾರ ಅಂತೂ ಅಲ್ಲ.

ಸಮಸ್ಯೆ ಎಂದರೇನೇ ಹಾಗೆ‌, ತಡೆಯಲಾಗದು. ತಡೆಯಲಾಗದಿದ್ದರೇನೇ ಅದು ಸಮಸ್ಯೆ ಎನಿಸಿಕೊಳ್ಳುವುದು. ಆದರೆ ‘ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ’ ಎಂದು ತಿಳಿದು ಪರಿಹಾರದತ್ತ ಯೋಚಿಸುವುದು ಮತ್ತು ಪ್ರಯತ್ನಿಸುವುದು ಪ್ರಬುದ್ಧತೆ. ಆಗ ಅಷ್ಟರವರೆಗೆ ನಾವಿರುವುದಕ್ಕಿಂತ ಹೆಚ್ಚಿನ ತಾಳ್ಮೆಯನ್ನು ಹೊರತರಬೇಕಾಗುತ್ತದೆ.  ಮನಸ್ಸನ್ನು ವಿಶಾಲಗೊಳಿಸಬೇಕಾಗುತ್ತದೆ. ವಿಷಯವನ್ನು ಬೇರೆ ಬೇರೆ ಕೋನಗಳಿಂದ ನೋಡುವ ಸಾಮರ್ಥ್ಯವನ್ನು ಹೊರಗೆ ತರಬೇಕಾಗುತ್ತದೆ. ಹಾಗೆ ಮಾಡಿಯೂ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲತೆ ಕಾಣಬಹುದು. ಆಗ  ಮರಳಿಯತ್ನ ಮಾಡಬೇಕು.

ಪ್ರಧಾನ ವಿಷಯ ಏನು ಅಂದರೆ, ಇನ್ನಿಲ್ಲದಂತೆ ಕಾಟ ಕೊಡುತ್ತಿದ್ದ ಸಮಸ್ಯೆಯೊಂದು ಎದ್ದು ಹೋಗುವಾಗ ಅದು ಒಮ್ಮೆ ದೊಡ್ಡದಾದಂತೆ ಕಾಣಬಹುದು.  ಹಾಗಾಗುವುದು ಪರಿಹಾರದ ಒಂದು ಹಂತವಾಗಿರಬಹುದು. ಆ ಹಂತವನ್ನೇ ದೊಡ್ಡ ಸಮಸ್ಯೆಯಾಗಿ ಕಾಣಬಾರದು. ಹಾಗೆ ಹತಾಶೆ ಆದರೆ ಅದರ ಬೀಳ್ಕೊಡುವಿಕೆ ಪ್ರೊಗ್ರಾಮು ಕ್ಯಾನ್ಸಲ್ ಆಗಿಬಿಡಬಹುದು!
ಎಷ್ಟೋ ಮಂದಿ ಈ ತಪ್ಪನ್ನು ಮಾಡುತ್ತಾರೆ. ಆ ಮೂಲಕ ಸಮಸ್ಯೆಗೆ ದೀರ್ಘಾಯಸ್ಸು ಕರುಣಿಸುತ್ತಾರೆ.

ಇಬ್ಬರ ನಡುವಿನ ಮನಸ್ತಾಪ ಒಂದು ಸಮಸ್ಯೆಯಾದರೆ, ಒಂದೆಡೆ ಕೂತು ಸಾಧ್ಯತೆಯ ಪರಮಾವಧಿ ತಾಳ್ಮೆಯಿಂದ ಪರಸ್ಪರ ಮಾತಾಡೋದು  ಪರಿಹಾರದ ಹಂತ. ಆ ಹಂತವು ಒಂದಷ್ಟು ಕಷ್ಟಾನೇ. ಆದರೆ ಆ ಸಮಸ್ಯೆಗೆ‌ ಅದೇ ಪರಿಹಾರದದ  ಹಂತ. ಅದಲ್ಲದೆ ಬೇರೆ ಪರಿಹಾರವೇ ಇಲ್ಲ. ಅದರಿಂದ ಎಸ್ಕೇಪು ಆದಷ್ಟೂ ಆ ಸಮಸ್ಯೆ ಜೀವಂತ. ಕೆಲವೊಮ್ಮೆ ಅನಾಹುತಕ್ಕೇ ಅವಕಾಶ. ರೋಗಪೀಡಿತನಾಗುವುದು ಸಮಸ್ಯೆ. ಕೆಲವೊಮ್ಮೆ  ಅಡ್ಮಿಟು, ಇಂಜಕ್ಷನು, ಐಸಿಯು, ಅಪರೇಷನು, ಲಕ್ಷಾಂತರ ಖರ್ಚು ಇವೆಲ್ಲಾ ಅದರ ಪರಿಹಾರದ ಹಂತವಾಗುತ್ತದೆ. ಆ ಹಂತವನ್ನೇ ಸಮಸ್ಯೆಯಾಗಿ ಕಂಡು ಅದರಿಂದ ಎಸ್ಕೇಪು ಆದಷ್ಟೂ ಸಮಸ್ಯೆಯು ಜೋರಾಗುತ್ತದೆ. ರೋಗಿ ಸಾಯಬಹುದು.

ಪರಿಹಾರದ ಹಂತದಲ್ಲಿ ಅಣುವಿನಷ್ಟೂ  ಹತಾಶೆರಾಗಬಾರದು. ಅಗತ್ಯವಿದ್ದರೆ ಸಹೃದಯರಾದ ಇನ್ನೊಬ್ಬರದ್ದೋ ಹೆಚ್ಚಿನವರದ್ದೋ ಸಹಾಯ ಪಡೆಯಬೇಕು.

ಸಮಸ್ಯೆಯೆಯೇ ಹಾಗೆ. ಅದು ಮನುಷ್ಯನನ್ನು ಒಂಟಿ ಮಾಡುತ್ತದೆ. ಒಂದು ಉದಾಹರಣೆ ನೊಡಿ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದದ್ದಕ್ಕೆ ಆತ್ಮಹತ್ಯೆ ಮಾಡೋಕೆ ಆಲೊಚಿಸುವ ಎಸ್ಸೆಸೆಲ್ಸಿಯ ತಂಗಿಯನ್ನು ನೋಡಿ ಎಂಬಿಬಿಎಸ್ ಕಲಿಯುವ ಅಕ್ಕ ನಕ್ಕಳು. ತಾಯಿ, ತಂದೇನೂ ಆ ನಗುವಿಗೆ ಜೊತೆಗೂಡಿದರು. ಅವರಿಗೆಲ್ಲ ಅವಳು Silly ಹುಡುಗಿ ಎಂದೆನಿಸಿತು. ‘ಇಷ್ಟಕೇ ಹೀಗೆ ವರಿ ಆಗೋದಾ’ ಎಂದು  ಕೇಳಿದರು. ಇದೆಲ್ಲ ವರಿ ಮಾಡ್ಕೊಬೇಕಾದ ವಿಷಯವಾಗಿ ಅಕ್ಕನಿಗೆ, ಅಮ್ಮನಿಗೆ ಮತ್ತು ಅಪ್ಪನಿಗೆ ಕಾಣಲಿಲ್ಲ. 

ಅದೇ ಅಕ್ಕ ಒಂದು ದಿನ ಹತಾಶಳಾಗಿ ಕೂರುತ್ತಾಳೆ.   ಸಹಪಾಟಿಯೊಬ್ಬನ ಇನ್ಸಲ್ಟು ಅವಳ ಮನ ಕೊರೆಯುತ್ತಿತ್ತು. ಕಣ್ಣು ಜಲಾಶಯವಾಗುತ್ತಿತ್ತು. ‘ಇಷ್ಟಕ್ಕೇ ಇಷ್ಟೆಲ್ಲ ವರಿನಾ’ ಎಂದು ತಂಗಿ, ತಾಯಿ, ಅಪ್ಪ ಅಂದುಕೊಂಡರು. ಮನಸ್ಸು ಗಟ್ಟಿಯಿರಬೇಕು ಎಂದು  ಉಪದೇಶ ಹೇಳಿದರು. ಮುಂದೊಂದು ದಿನ ತಾಯಿಯ ಸರದಿ. ಜಗಳವೊಂದರ ಮಧ್ಯೆ ಗಂಡ ‘ನಿನ್ನನು ಮದುವೆಯಾಗಿ ತಪ್ಪು ಮಾಡಿದೆ’ ಎಂದ  ಮಾತೊಂದು ಬಾಣವಾಗಿ ನಾಟಿ ಅವಳ ಎದೆಯನ್ನು ನೋಯಿಸುತ್ತಿತ್ತು. ‘ಹೀಗೆಲ್ಲ ಹೇಳಲೇಬಾರದಿತ್ತು ನಿಮ್ಮಪ್ಪ’ ಎಂದು ಮಕ್ಕಳಲ್ಲಿ ಅಳಲು ಶುರುವಿಟ್ಟುಕೊಂಡಳು.  ‘Silly mom’ ಎಂದು ಮಕ್ಕಳ ನಗು. ‘ತುಂಬಾ ವೀಕು’ ಎಂಬ ಗಂಡನ ಸರ್ಟಿಫಿಕೇಟು.

ಒಂದು ದಿನ ಯಜಮಾನನೇ ಮಂಕು. ಸೋತುಬಿಟ್ಟೆ, ಇನ್ನು ಜಯವಿಲ್ಲ ಎಂಬ ಹತಾಶೆಯಲ್ಲಿ ಬಿದ್ದ. ಬಿಸಿನೆಸ್ಸಲ್ಲಿ ಆದ ಲಾಸು ಕಾಸು ಬರಿದು ಮಾಡಿಬಿಟ್ಟಾಗ ಆತ ಹಾಗಾದ. ಯಾಕೊ ಉಮ್ಮಳಿಸಿ ಬರುವ ದುಖವನ್ನು ತಡೆಹಿಡಿಯಲಾಗದೆ ಹೆಂಡ್ತಿ ಮಕ್ಕಳ ಮುಂದೆ ಮಗುವಾದ. ‘ಅಯ್ಯೋ ಅಪ್ಪ, ಇದೆಲ್ಲ ಮಾಮೂಲು. ಹತಾಶೆಯಾಗುವಂತದೇ ಅಲ್ಲ’  ಮಕ್ಕಳ ಪ್ರತಿಕ್ರಿಯೆ. ಹೆಂಡ್ತಿಗೂ ಗಂಡ ಅಷ್ಟು ದುಖ ಪಡುವಷ್ಟು Silly fellow ಆದುದಕ್ಕೆ ಸಹಮತ ಇಲ್ಲ.

ಇಲ್ಲಿ ಎಲ್ಲರೂ ತೋರಿಸಿದ್ದು ಒಂದೇ ಸ್ವಭಾವ. ಇನ್ನೊಬ್ಬರ ಮಾನಸಿಕ ಸನಸ್ಯೆಗಳನ್ನು ತಮ್ಮ ಭಾಗದಿಂದ ಮಾತ್ರ ನೋಡಿದ್ದು.ಯಾರಿಗೆ ಯಾರೂ ಜೊತೆಯಾಗದೆನೇ ವರಿ ಮಾಡದಿರಲು ಉಪದೇಶಿಸಿದ್ದು. ‘ಹೌದು ಇದು ನೋವಾಗುವಂತಹದೇ ವಿಷಯ, ನನಗೆ ಅರ್ಥವಾಗುತ್ತೆ, ಸಮಾಧಾನ ಪಡು’ ಎಂದು ಯಾರೂ ಹೇಳಿಲ್ಲ. ಹೇಳಿದ್ದು, ‘ಇದು ನೋವಾಗೋ ಮ್ಯಾಟರೇ ಅಲ್ಲ’ ಎಂದು. ಸಮಸ್ಯೆಯಲ್ಲಿ ಬಿದ್ದಾಗ ಒಬ್ನೊಬ್ಬರೂ ಒಂಟಿಯಾಗಿದ್ದರು.

ಒಬ್ಬರ ಸಮಸ್ಯೆ ಇನ್ನೊಬ್ನರಿಗೆ ಏನೂ ಅಲ್ಲ. ಹೆಚ್ಚಿನವರು ಇನ್ನೊಬ್ನರ ಸಮಸ್ಯೆಯನ್ನು ಮೇಲಿನ ಉದಾಹರಣೆಯಂತೆ ತಮ್ಮ ಕೋನದಿಂದ ಮಾತ್ರ ನೋಡುತ್ತಾರೆ. ಸಮಸ್ಯೆಯಲ್ಲಿ ಬಿದ್ದವರಿಗೆ ಅದು ಕೊಡುತ್ತಿರುವ ಯಾತನೆ, ಪರಿಣಾಮವು ಇನ್ನೊಬ್ಬರ ಪಾಲಿಗೆ ನಗಣ್ಯ. ಬಾಂಧವ್ಯವು ಕೂಡ ಹಳಸಿ ಹೋಗೋದು ಆಗಲೇ.

ಸಮಸ್ಯೆಯನ್ನು ಅದನ್ನು ಅನುಭವಿಸುವವರ ಕೊನದಿಂದ ನೋಡಬೇಕು. ಹಾಗೆ ಮಾಡುವಷ್ಟು ನಾವು ಬೆಳೆಯಬೇಕು. ಅದವರಿಗೆ ಕೊಡುವ ನೋವನ್ನು ಅರ್ಥಮಾಡಿ  ‘ಅರ್ಥಮಾಡಿದ್ದೇನೆ’ ಎಂಬುದನ್ನು ಅವರಿಗೆ ತಿಳಿಸಬೇಕು. ಆಗ ಅದವರಿಗೆ ಮಹದುಪಕಾರ ಆಗುತ್ತದೆ. ಅವರು ಅನುಭವಿಸುವ ನೋವಿನ ಅಲೆಗಳ ಆರ್ಭಟ ಕಡಿಮೆ ಆಗುತ್ತದೆ. ಹಾಗೆ ಮಾಡಿದರೆ ಬಾಂಧವ್ಯಕ್ಕೆ ಟಾನಿಕ್ಕು. ಎಲ್ಲ ಸಮಸ್ಯೆಗಳೂ ಅನುಭವಿಸುವವರ ವೀಕುನೆಸ್ಸಿನಿಂದಾಗಿ  ದೊಡ್ಡದಾಗುವುದಲ್ಲ. ಹಾಗೆ ನೋಡೋದಾದರೆ ಕೆಲವು ವಿಷಯಗಳಲ್ಲಿ ಎಲ್ಲರೂ ವೀಕೇ.

ತಿಳಿದಿರಲಿ, ಕೆಲವು ಸಮಸ್ಯೆ ಅಂತೂ ದೊಡ್ಡದೇ. ಇನ್ನೊಬ್ಬರ ಪಾಲಿಗೆ ಏನೂ ಅಲ್ಲದ ವಿಷಯದೊಳಗಡೆ ಒಂದು ಲೋಕವೇ ಅವಿತುಕೊಂಡಿರುತ್ತದೆ. ಅದನ್ನು ಅರಿಯಲು ಸಮಸ್ಯೆ ಅನುಭವಿಸುವವರ ಭಾಗದಿಂದ ವಿಷಯವನ್ನು ಅಧ್ಯಯನ ಮಾಡಬೇಕಾಗುತ್ತದೆ. ಹೃದಯ ವಿಶಾಲತೆ ಇದ್ದರೇನೇ ಅದು ಸಾಧ್ಯ. ಇನ್ನೊಬ್ಬರ ಸ್ಥಾನದಲ್ಲಿ ನಿಂತು ಅದನ್ನು ನೋಡಲು ತಯಾರಿರೋರು ಕಡಿಮೆ. ಕೆಲವು ಸಮಸ್ಯೆಗಳು ಇನ್ನೊಬ್ಬರ  ಭಾವನಾತ್ಮಕ ಸಾಮೀಪ್ಯಕ್ಕೆ ಮಂಜಿನಂತೆ ಕರಗಿಹೋಗುವಂತಹದ್ದು. ಅಂತಹವರು ಒಂದಷ್ಟು ಇದ್ದರೆ ಈ ಜಗದ ಆತ್ಮಹತ್ಯೆಗಳ ಪ್ರಮಾಣ ಕಡಿಮೆಯಾಗುತ್ತಿತ್ತು.

ಸಮಸ್ಯೆಗೆ ಬಿದ್ದ ವ್ಯಕ್ತಿಗಳ ಭಾಗದಿಂದ ವಿಷಯವನ್ನು ನೋಡಲು ಅವರ ಆಪ್ತರೇ ತಯಾರಿರೋದಿಲ್ಲ. ಯಾವ ವ್ಯಕ್ತಿ ಸಕ್ಸಸು ಆಗಿದ್ದರೆ ಯಾರಿಗೆ ಲಾಜಿಕ್ ಬಿಟ್ಟು ಮನ-ಹಣದಿಂದ ಸಹಾಯ ಮಾಡಿ, ಕಣ್ಣರೆಪ್ಪೆಯಂತೆ ಅವರನ್ನು ಕಾಯುತ್ತಿದ್ದನೋ, ಆ ವ್ಯಕ್ತಿಯೇ ಯಾರದೋ ಸ್ವಾರ್ಥಕ್ಕೆ ಬಲಿಯಾಗಿಯೋ, ವಿಧಿಯಾಟಕ್ಕೆ ಸಿಳುಕಿಯೋ ಸೂಕ್ಷ್ಮವಾದೊಂದು ಮನಸಿನ ಸಮಸ್ಯೆಯಲ್ಲಿ ಬಿದ್ದರೆ  ಅವನಿಗೆ ಅವರೇ ಇರುವುದಿಲ್ಲ. ಸಮಸ್ಯೆಗೆ ಬಿದ್ದವರಿಗೆ ಒಂಟಿತನವು ಬೋನಸ್ಸು. ಎಷ್ಟೊ ಆತ್ಮಹತ್ಯೆಗಳು ನಡೆಯುವುದು ಅವರ ಸಮಸ್ಯೆಯಿಂದಲ್ಲ, ಆ ಸಮಸ್ಯೆ ಅವರಿಗೆ ಬೋನಸ್ಸಾಗಿ ಕೊಟ್ಟ ಲೋನ್ಲಿನೆಸ್ಸಿನ ಕಾರಣಕ್ಕಾಗಿ. ಈ ಪಾಯಿಂಟು  ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು.

ಸಮಸ್ಯೆಗಳಲ್ಲಿ ಬೀಳದ ವ್ಯಕ್ತಿಗಳಿಲ್ಲ. ಕೆಲವು ಮೇಲೆ ಉದಾಹರಿಸಿದಂತಹುಗಳು. ಗಾಳಿ ಮಳೆಯಂತಹವು, ತಾತ್ಕಾಲಿಕ. ಕೆಲವು ಸುಂಟರಗಾಳಿಗಳಂತಹದೇ ಇರುತ್ತದೆ. ತೀವ್ರತೆ ಹೆಚ್ಚು. ಕೆಲವು ಅಂತೂ ಪಕ್ಕಾ ಸುನಾಮಿ ಅಲೆಗಳೇ.

ಕೆಲವು ಸಮಸ್ಯೆಗಳು ತನ್ನಿಂದ ತಾನೇ ಪ್ರಭಾವ ಕಡಿಮೆಗೊಳಿಸಿದೆ ಎನಿಸುವುದು ಇದೆ. ಒಬ್ಬ ಸಂತನ ಬಳಿ ಒಬ್ಬ ಸಮಸ್ಯೆಯೊಂದನ್ನು ಹೇಳಿ ಗೋಳೋ ಎಂದು ಅತ್ತುಬಿಟ್ನನಂತೆ. ಸಂತ ಹೇಳಿದನಂತೆ, “ಒಂದಾರು ತಿಂಗಳು ಕಳೀಲಿ. ನಿನ್ನ ಅಳು ಮಾಯವಾಗುತ್ತದೆ” ಎಂದು. ಅವನು ಕೇಳಿದನಂತೆ, “ಆರು ತಿಂಗಳಲ್ಲಿ ನನ್ನ ಸಮಸ್ಯೆ ಇಲ್ಲವಾಗುತ್ತಾ” ಎಂದು. ಸಂತನ ಉತ್ತರ, “ಇಲ್ಲ. ಆರು ತಿಂಗಳಲ್ಲಿ  ನಿನಗೆ ಇದು ಅಭ್ಯಾಸವಾಗುತ್ತದೆ!”

ಕೆಲವು ಸಮಸ್ಯೆಗಳ ಆರಂಭದಲ್ಲಿ ಮನುಷ್ಯ ಪೇಚಾಡುತ್ತಾನೆ. ಜೀವಿಸೋಕೆ‌ ಆಗಲ್ಲ ಎಂಬಂತಾಗುತ್ತಾನೆ. ಕ್ರಮೇಣ ಆ ಸಮಸ್ಯೆ ಅಭ್ಯಾಸವಾಗಿ ಸಮಸ್ಯೆನೇ ಬಲಹೀನಗೊಂಡಂತಾಗುತ್ತದೆ.

ಎಲ್ಲ ಸಮಸ್ಯೆಗಳಿಗೆ ಪರಿಹಾರವಿದ್ದೇ ಇದೆ. ಅಥವಾ ಹಾಗಂತನೇ ನಾವು ತಿಳಿದುಕೊಳ್ಳಬೇಕು. ಆದರೆ ಕೆಲವೊಮ್ಮೆ ಪರಿಹಾರ  ಎಂಬ ಅಸಾಮಿಯು ಪ್ರಬಲ ಇಚ್ಛಾಶಕ್ತಿ, ಅಪಾರ ತಾಳ್ಮೆ, ಬುದ್ಧಿಮತ್ತೆ ಮತ್ತು ಕಾಲಾವಕಾಶವನ್ನು ನಮ್ಮಿಂದ  ಬಯಸುತ್ತಾನೆ. ಅದ್ಯಾತ್ಮಲೋಕದಲ್ಲಿ ತನ್ನನ್ನು ತೊಡಗಿಸಿಕೊಳ್ಳೋದೂ  ಸಮಸ್ಯೆಗಳ ತೀವ್ರತೆಯನ್ನು ಕಡಿಮೆಗೊಳಿಸುತ್ತದೆ. ಆಗ ಮನ ರಿಲಾಕ್ಸು ಆಗಿ ಪರಿಹಾರದ ಬಾಗಿಲು ತೆರೆಯೋದೂ ಇದೆ. ಅದಕ್ಕೇ‌ ಪಕ್ಕಾ ನಾಸ್ತಿಕ ಸೈಕಾಲಜಿ ಡಾಕ್ಟರೂ ದೇವರನ್ನು ಬಳಿ ಕೂರಿಸಲು ಸಲಹೆ ನೀಡೋದು.

ಇನ್ನೊಬ್ಬರ ಪಾಲಿಗೆ ವಿಪರೀತ, ಸಹಿಸಲಾಗದು ಎಂದೆನಿಸಿದ  ಮಾನಸಿಕ ಕೊರಗು, ನೋವನ್ನು ಪರಿಗಣನೆಗೆ ಅರ್ಹ ಎಂದೇ ತಿಳಿಯಬೇಕು. ಅದೆಷ್ಟು ಸಣ್ಣದೇ ಇರಲಿ, ‘ನಮ್ಮ ಭಾಗಕ್ಕೆ ಮಾತ್ರ ಅದು ಸಣ್ಣದು, ಅವರ ಭಾಗಕ್ಕೆ ಸಣ್ಣದಲ್ಲ’ ಎಂದು ತಿಳಿಯಬೇಕು.  ಅವರ ಭಾಗದಿಂದ ವಿಷಯವನ್ನು ನೋಡಿ, ಅರ್ಥೈಸಿ ‘ಅರ್ಥಮಾಡಿದ್ದೇನೆ’ ಎಂದು ಹೇಳಬೇಕು. ಸಮಾಧಾನ ಹೇಳಬೇಕು. ಪರಿಹಾರಕ್ಕೆ ಮುಂದಾಗಬೇಕು. ಇಷ್ಟು ಮಾತ್ರ ಮಾಡದೆ ಬೇರೇನೂ ಮಾಡಿದರೂ ಸಾಕಾಗದು. ಇಷ್ಟು ಮಾಡಲಾಗದ ಹತ್ತಿರದವರು, ಬಂಧುಗಳು ಹೃದಯಹೀನರೇ ಸರಿ‌. ನಾವು ಹಾಗಾಗದಿರೋಣ.

===============================================


Leave a Reply

Back To Top