ಪ್ರಸ್ತುತ

ವಾಟ್ಸ್ಯಾಪ್ ಮತ್ತು ಫೇಸ್ ಬುಕ್ ಗುಂಪುಗಳು

ಗಂಗಾಧರ ಬಿ ಎಲ್ ನಿಟ್ಟೂರ್

The Eight Best Types of Social Media for Advertising | Five ...

ವಾಟ್ಸ್ಯಾಪ್ ಮತ್ತು ಫೇಸ್ ಬುಕ್ ಗುಂಪುಗಳು ಅವಲೋಕಿಸಲೇಬೇಕಾದ ಕೆಲ ಅಂಶಗಳು  //

   ಪರಸ್ಪರ ಪರಿಚಯ, ವಿಚಾರ ವಿನಿಮಯ, ಆರೋಗ್ಯಕರ ಚರ್ಚೆ, ಪ್ರತಿಭೆಯ ಅನಾವರಣ ಹಾಗೂ ಹೊಸ ಕಲಿಕೆಯ ಮೂಲ ಉದ್ದೇಶದಿಂದ ಇಂದು ಎಲ್ಲ ಕ್ಷೇತ್ರದಲ್ಲೂ ಸಾಮಾಜಿಕ ಜಾಲತಾಣವನ್ನು ಮಾಧ್ಯಮವನ್ನಾಗಿಸಿಕೊಂಡು ಒಂದಲ್ಲ ಒಂದು ವಾಟ್ಸಾಪ್ ಅಥವಾ ಫೇಸ್‌ಬುಕ್ ಗುಂಪು ರಚನೆಯಾಗಿರುವುದು ಸರ್ವರಿಗೂ ತಿಳಿದ ಸಾಮಾನ್ಯ ಸಂಗತಿ. ಯಾರು ಯಾರಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ, ಅಭಿರುಚಿ ಇದೆಯೋ ಅಂಥವರು ತಮ್ಮಿಷ್ಟದ ಆಯಾ ಕ್ಷೇತ್ರದ ಒಂದು ಅಥವಾ ಹಲವು ಗುಂಪುಗಳಲ್ಲಿ ಸಕ್ರಿಯ ಸದಸ್ಯರಾಗಿ ಗುಂಪಿನ ಸದ್ಭಳಕೆಯಲ್ಲಿ ತೊಡಗಿದ್ದಾರೆ.

      ಸದಾ ಒಂದಿಲ್ಲೊಂದು ಕ್ರಿಯಾತ್ಮಕ ಚಟುವಟಿಕೆ ರೂಪಿಸಿ ಸರ್ವ ಸದಸ್ಯರನ್ನು ಹುರಿದುಂಬಿಸಿ ಸೃಜನಶೀಲತೆ ಮತ್ತು ಕ್ರಿಯಾಶೀಲತೆಗೆ ವೇದಿಕೆ ಕಲ್ಪಿಸುತ್ತಿರುವ ವಿವಿಧ ಬಳಗಗಳ ಸಂಚಾಲಕರು ಅಥವಾ ಅಡ್ಮಿನ್ ಗಳ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯ.

   ಆಯಾ ಕ್ಷೇತ್ರದ ಬಳಗಗಳು ತಮ್ಮ ಬಳಗದ ಸದಸ್ಯರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ನಾನಾ ಪ್ರಕಾರಗಳನ್ನು ಪರಿಚಯಿಸುವ ಮತ್ತು ಅದರಲ್ಲಿ ತೊಡಗಿಸುವ ವಿವಿಧ ಸ್ಪರ್ಧೆಗಳನ್ನು ನಡೆಸಿ ಸಲಹೆ ಸೂಚನೆಗಳೊಂದಿಗೆ ಜ್ಞಾನಾರ್ಜನೆಗೆ ಇಂಬು ನೀಡುತ್ತಿರುವುದಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಫರ್ಧಾಥಿಗಳಿಗೆ ಪುಸ್ತಕ ಅಥವಾ ನಗದು ರೂಪದ ಪುರಸ್ಕಾರ ಇಲ್ಲವೇ 3 ಬಹುಮಾನಗಳ ಘೋಷಣೆ ಮಾಡುವ ಮೂಲಕ ಪ್ರೋತ್ಸಾಹಿಸುತ್ತಿವೆ. ಕೆಲವೇ ಕೆಲ ಬಳಗಗಳು ಮಾತ್ರ ಭಾಗವಹಿಸುವ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸ್ಥಾನ ನೀಡಿ ಉತ್ತೇಜಿಸುವ ಜತೆ ಅಭಿನಂದನಾ ಪತ್ರ ನೀಡಿ ಗೌರವಿಸುವ ಸಂಪ್ರದಾಯ ರೂಢಿಸಿಕೊಂಡಿವೆ. ಇದು ಸ್ತುತ್ಯಾರ್ಹ ಮತ್ತು ಮಾದರಿ ಕಾರ್ಯ. ಇತರೆ ಗ್ರೂಪ್ ಗಳ ಚಟುವಟಿಕೆಗಳಿಗಿಂತಲೂ ವಿಭಿನ್ನ, ವಿಶೇಷ ನಡೆ ಎಂದು ಬಣ್ಣಿಸುವ ಜತೆ ಇದು ಆಯಾ ಬಳಗದ ಮುಖ್ಯಸ್ಥರ ಸಹೃದತೆಗೆ ಸಾಕ್ಷಿಯೂ ಸಹ ಆಗಿದೆ ಎಂದರೂ ಅತಿಶಯೋಕ್ತಿ ಏನಲ್ಲ.

       ಆದಾಗ್ಯೂ ಈ ಪ್ರೋತ್ಸಾಹ – ಪ್ರೇರಣೆಗೆ ಮೌಲ್ಯ – ಘನತೆ ಇಮ್ಮಡಿಸುವ ನಿಟ್ಟಿನಲ್ಲಿ, ಬಳಗದ ಚಟುವಟಿಕೆಗಳು ಮತ್ತು ನಿರ್ವಾಹಕ ಮಂಡಳಿಯ ಬಗ್ಗೆ ಈಗಾಗಲೇ ಸದಸ್ಯರಲ್ಲಿರುವ ಅಭಿಮಾನವನ್ನು ಚಿರಕಾಲ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಹಾಗೂ ಬಳಗದ ಸರ್ವ ಸದಸ್ಯರ ಸೌಹಾರ್ದತೆಯನ್ನು ಸದಾ ಕಾಪಾಡುವ ದಿಸೆಯಲ್ಲಿ ವಾಟ್ಸಾಪ್ ಗುಂಪು / ಬಳಗದ ಅಡ್ಮಿನ್ ಗಳು ಅಥವಾ ಸಂಚಾಲಕರು ತಂತಮ್ಮ ಗುಂಪಿನ ಚಟುವಟಿಕೆಗಳನ್ನು ಮತ್ತು ಸ್ಪರ್ಧೆಯನ್ನು ಆಯೋಜಿಸುವ ವೇಳೆ ಈ ಕೆಳಕಂಡ ಕೆಲ ಅಂಶಗಳನ್ನು ಅವಶ್ಯವಾಗಿ ಅವಲೋಕಿಸುವುದು ಅಥವಾ ಪಾಲಿಸುವುದು ಅವಶ್ಯ  ಎನಿಸುತ್ತದೆ ….

* ಸಾಮಾನ್ಯವಾಗಿ ಯಾವುದೇ ಬಳಗಗಳಲ್ಲಿ ಪ್ರಮುಖವಾಗಿ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದ ಹಳೆಯ ಮತ್ತು ಹೊಸ ಹೊಸ ಆವಿಷ್ಕಾರ – ಸಂಶೋಧನೆಗಳ ಕುರಿತು ಹಾಗೂ ಆಯಾ ಕ್ಷೇತ್ರದ ಸಾಧಕರುಗಳ ಕುರಿತು ಪರಸ್ಪರ ವಿಚಾರ ವಿನಿಮಯ, ಮಾಹಿತಿಯ ಹಂಚಿಕೆಯ ಕಾರ್ಯವಾಗಬೇಕು ಎಂಬುದು ಹಿರಿಯರ, ಅನುಭವಿ ಪರಿಣಿತರ ಮತ್ತು ತಜ್ಞರ ಅಭಿಪ್ರಾಯ.

* ಎರಡನೆಯದಾಗಿ ಆಯಾ ಬಳಗದ ಸದಸ್ಯರ ಪ್ರತಿಭೆ, ಸಾಧನೆ, ಸಂಶೋಧನೆ, ಆರೋಗ್ಯಕರ ಚರ್ಚೆ, ಜ್ಞಾನಾನುಭವಗಳ ಅನಾವರಣಕ್ಕೆ ಅವಕಾಶ ಕಲ್ಪಿಸುವ ಕಾರ್ಯ ನಡೆಯಬೇಕು.

* ವಾಟ್ಸಾಪ್ ಅಥವಾ ಫೇಸ್ ಬುಕ್ ಗುಂಪು ಎಂಬುದು ಒಂದು ರೀತಿ ಸಾರ್ವಜನಿಕ ವಲಯವಿದ್ದಂತೆ. ಅಲ್ಲಿ ಕೇವಲ ನಮ್ಮ ಪರಿಚಿತರಷ್ಟೇ ಅಲ್ಲ, ನಮಗೆ ಪರಿಚಯವಿಲ್ಲದ ನಮ್ಮ ಸ್ನೇಹಿತರ ಸ್ನೇಹಿತರು, ವಿವಿಧ ವಯೋಮಾನದವರು, ಹೊಸಬರು, ಕಲಿಕಾರ್ಥಿಗಳು ಮತ್ತು ಪರಿಣಿತರು ಸಹ ಇರುತ್ತಾರೆ. ಹಾಗಾಗಿ ವೈಯಕ್ತಿಕ / ವ್ಯಕ್ತಿಗತ ವಿಚಾರಗಳ ವಿನಿಮಯ, ಅನಗತ್ಯ ಚರ್ಚೆ, ಹಾಯ್ ಬಾಯ್ ಮೆಸೆಜ್, ವೈಯಕ್ತಿಕ ಅಥವಾ ಸಾಮುದಾಯಿಕವಾಗಿ ಯಾವುದೇ ರೂಪದ ಅವಮಾನ, ನಿಂದನೆ, ಅವಹೇಳನ, ಮನಸ್ತಾಪಕ್ಕೆ ಕಾರಣವಾಗುವಂತಹ ಸಂದೇಶಗಳ ರವಾನೆ ಮಾಡದೆ ಜ್ಞಾನ ವೃದ್ಧಿ, ಪರಸ್ಪರ ಪ್ರೀತಿ, ವಿಶ್ವಾಸ, ಗೌರವಾದರ ಮೂಲಕ ಬಾಂಧವ್ಯ ಬೆಸೆಯುವುದಕ್ಕೆ ಮಾತ್ರ ಆದ್ಯತೆ ನೀಡಬೇಕು.

*  ಸುಲಭವಾಗಿ ವಿವಿಧ ರೂಪದಲ್ಲಿ ಹಣ ವಸೂಲಿ, ವೈಯಕ್ತಿಕ ಲಾಭ ಇತ್ಯಾದಿ ಸ್ವಾರ್ಥ ಪರ ಧೋರಣೆಯ / ದುರುದ್ದೇಶದಿಂದ ಕೂಡಿದ ಕೆಲವು ಬಳಗಗಳು ಸಹ ರಚನೆಯಾಗುತ್ತಿವೆ. ಸದಸ್ಯರು ಇಂತಹ ಬಳಗಗಳ ಬಗ್ಗೆ ಎಚ್ಚರದಿಂದಿರಬೇಕು.

* ಸಾಮಾನ್ಯವಾಗಿ ಶಿಕ್ಷಣ, ಸಾಹಿತ್ಯ, ಸಂಗೀತ, ವಿಜ್ಞಾನ, ಕಲೆ ಮತ್ತು ಸಾಂಸ್ಕೃತಿಕ ಬಳಗಗಳಲ್ಲಿ ಸ್ಪರ್ಧೆಗಳನ್ನು ನಡೆಸುವ ಪರಂಪರೆ ಅತಿ ಹೆಚ್ಚು ರೂಢಿಯಲ್ಲಿದೆ. ಸ್ಪರ್ಧೆಗಳನ್ನು ನಡೆಸುವುದು ಅತ್ಯಂತ ಸೂಕ್ಷ್ಮ ಕಾರ್ಯ. ಹಾಗಾಗಿ ಅನಿವಾರ್ಯ ಮತ್ತು ತೀರಾ ಅಗತ್ಯ ಎಂದಾದಲ್ಲಿ ಮಾತ್ರ ಸ್ಪರ್ಧೆಗಳನ್ನು ಆಯೋಜಿಸಬೇಕು. ಯಾವುದೇ ಕ್ಷೇತ್ರಕ್ಕೆ ಸಂಬಂಧಿಸಿದ ಅಥವಾ ಆಯಾ ಕ್ಷೇತ್ರದ ಒಳ ಪ್ರಕಾರಗಳ ಸ್ಪರ್ಧೆ ನಡೆಸುವಾಗ ಆಯಾ ಪ್ರಕಾರದಲ್ಲಿ ಆಳವಾಗಿ ಅಧ್ಯಯನ ನಡೆಸಿರುವ ಅಥವಾ ಈಗಾಗಲೇ ಆ ಕ್ಷೇತ್ರದಲ್ಲಿ ಕೃಷಿ ಮಾಡಿ ಹೆಸರಾಗಿರುವ ಬಳಗದ ಸದಸ್ಯರಲ್ಲದ ಹೊರಗಿನ ಪರಿಣಿತರನ್ನು  ಮಾತ್ರವೇ ತೀರ್ಪುಗಾರರನ್ನಾಗಿ ನೇಮಿಸುವುದು ಸೂಕ್ತ.

* ಸ್ಪರ್ಧೆಗಳನ್ನು ನಡೆಸುವ ವೇಳೆ ಯಾವುದೇ ಕಾರಣಕ್ಕೂ ಆಯಾ ಬಳಗದ ಸದಸ್ಯರನ್ನು ತೀರ್ಪುಗಾರರನ್ನಾಗಿ ನೇಮಿಸಲೇಕೂಡದು. ಇದರಿಂದಾಗಿ ಸದಸ್ಯರ ನಡುವಿನ ಸೌಹಾರ್ದತೆಗೆ ಧಕ್ಕೆ ಉಂಟಾಗಬಹುದು. ಇಲ್ಲವೇ ಒಬ್ಬೊಬ್ಬರೇ ಆ ಗುಂಪಿನಿಂದ ವಿದಾಯ ಹೇಳುವ ಪ್ರಸಂಗ ಸೃಷ್ಟಿಯಾದರೂ ಅಚ್ಚರಿಯೇನಿಲ್ಲ.

ಆರಂಭದಲ್ಲಿ ತುಂಬಾ ವೇಗವಾಗಿ ಚಟುವಟಿಕೆಗಳು ನಡೆದು ಕ್ರಮೇಣ ಕ್ಷೀಣಿಸಬಹುದು ಅಥವಾ ನಿಂತೇ ಹೋಗಬಹುದು. ಇದು ಕಟ್ಟು ಕಥೆಯಲ್ಲ. ಯೋಚಿಸಲೇಬೇಕಾದ ವಾಸ್ತವ ಸಂಗತಿ

* ಪ್ರಥಮ, ದ್ವಿತೀಯ, ತೃತೀಯದ ಹೊರತಾಗಿ ಉತ್ತಮ, ಅತ್ಯುತ್ತಮ ಎಂಬ ಬಹುಮಾನಗಳ ಘೋಷಣೆ ಇರಲೇಕೂಡದು. ಎಲ್ಲರಿಗೂ ಒಂದಲ್ಲ ಒಂದು ಬಹುಮಾನ ನೀಡಲೇಬೇಕೆಂಬ ಔದಾರ್ಯ ತೋರುವುದಾದಲ್ಲಿ ಅದೇ 3 ಬಹುಮಾನಗಳ ಪಟ್ಟಿಯಲ್ಲೇ ಎಲ್ಲರನ್ನೂ ಸೇರಿಸಬಹುದಲ್ಲವೇ.

* ಪ್ರಥಮ, ದ್ವಿತೀಯ ಎಂಬಿತ್ಯಾದಿ ಬಹುಮಾನ ಘೋಷಣೆ ಬದಲು ಭಾಗವಹಿಸುವ ಎಲ್ಲರಿಗೂ ಅಭಿನಂದನಾ ಪತ್ರ ನೀಡಿ ಸುಮ್ಮನಿರುವುದು ಒಳಿತು ಅಥವಾ ಪ್ರತಿಭೆಗೆ ಅನುಗುಣವಾಗಿ ಅದಕ್ಕೊಪ್ಪುವ ಗೌರವ ಸೂಚಕ ವಿಶೇಷಣ ಪದ ನೀಡುವ ಮೂಲಕ ಅಭಿನಂದನಾ ಪತ್ರ ವಿತರಿಸಬಹುದು. ಹೇಗೂ ಭಾಗವಹಿಸದೆ ಇರುವ ಸದಸ್ಯರಿಗಂತೂ ಅಭಿನಂದನಾ ಪತ್ರ ವಿತರಿಸುವುದಿಲ್ಲವಲ್ಲ. ಹಾಗಾಗಿ ಭಾಗವಹಿಸುವ ಆಯಾ ಬಳಗದ ಸದಸ್ಯರಿಗೆ ಇದೇ ಒಂದು ದೊಡ್ಡ ಪ್ರೋತ್ಸಾಹ – ಪುರಸ್ಕಾರವೆಂದು ಪರಿಗಣಿಸಲ್ಲಡುತ್ತದೆ ಅಲ್ಲವೆ.

* ಪ್ರತಿಭೆಗೆ ಬಹುಮಾನವೇ ಎಂದಿಗೂ ಮಾನದಂಡವಾಗಲಾರದು. ಅದರಲ್ಲೂ ಸರ್ಕಾರಿ ಸಂಸ್ಥೆಗಳ ಹೊರತಾಗಿ ಅನ್ಯ ಖಾಸಗಿ ಸಂಸ್ಥೆಗಳು ನೀಡುವ ಪ್ರಶಸ್ತಿ – ಪುರಸ್ಕಾರ ಅಥವಾ ಅಭಿನಂದನಾ ಪತ್ರಗಳು ಯಾವುದೇ ರೀತಿಯ ಸರ್ಕಾರಿ ಆಯ್ಕೆ ಪ್ರಕ್ರಿಯೆಯಲ್ಲಿ ಪರಿಗಣನೆಗೆ ಬಾರದಿರುವುದರಿಂದ ಅವು ಕೇವಲ ಪ್ರೋತ್ಸಾಹದ ಉದ್ದೀಪನಗಳು ಮಾತ್ರ. ಭಾಗವಹಿಸುವ ಸ್ಪರ್ಧಾರ್ಥಿಗಳು ಸಹ ಇದನ್ನು ಮನಗಂಡು ಅವುಗಳ ಬೆನ್ನ ಹಿಂದೆ ಬೀಳುವುದಾಗಲಿ ಅಥವಾ ಬಹುಮಾನ ದೆಸೆಯಿಂದಲೇ ಭಾಗವಹಿಸಲು ಮುಂದಾಗುವುದು ತರವಲ್ಲ.

* ಎಲ್ಲಾ ಬಳಗಗಳಲ್ಲಿ ಅಲ್ಲದೆ ಇದ್ದರೂ ಸಾಮಾನ್ಯವಾಗಿ ಬಹುತೇಕ ಬಳಗಗಳಲ್ಲಿ ನಡೆಯುವ ಎಲ್ಲರನ್ನೂ ಓಲೈಸುವ ತಂತ್ರಗಾರಿಕೆಯ ಪರಿಣಾಮವಾಗಿ ಬಹುಮಾನಗಳ ಘೋಷಣೆಯಲ್ಲಿಯೂ ಸಹಜವಾಗಿಯೇ ವೈರುದ್ಯಗಳು ಸಂಭವಿಸುತ್ತವೆ. ಇದರಿಂದಾಗಿ ನೈಜ ಪ್ರತಿಭೆಗೆ ಧಕ್ಕೆ ಉಂಟಾಗಬಹುದು, ನಿರಾಸಕ್ತಿ ಮೂಡಬಹುದು, ಕಮರಬಹುದು, ತುಳಿತಕ್ಕೆ ಒಳಗಾಗಬಹುದು ಅಥವಾ ವಾಮಮಾರ್ಗದ ಹಾದಿ ತುಳಿಯಲು ಕಾರಣವಾಗಬಹುದು ಇಲ್ಲವೇ ನಿಜ ಪ್ರತಿಭೆ ಸತ್ತು ಹೋಗಲೂಬಹುದು.

* ಸ್ಪರ್ಧೆಯಲ್ಲಿ ಭಾಗವಹಿಸುವ ಸದಸ್ಯರಲ್ಲೇ ಒಬ್ಬರು ಮತ್ತೊಬ್ಬರ ರಚನೆ ಕುರಿತು ಅಭಿಪ್ರಾಯ, ಅನಿಸಿಕೆ ಹಂಚಿಕೊಳ್ಳಲು ಸೂಚಿಸುವುದು ಮತ್ತೊಂದು ಎಡವಟ್ಟಿಗೆ ಕಾರಣ. ಅದರ ಬದಲು ತೀರ್ಪುಗಾರರೇ ಬಹುಮಾನಿತ ರಚನೆಗಳ ಆಯ್ಕೆಯ ಕುರಿತು ತಮ್ಮ ಅನಿಸಿಕೆ ಬರೆಯುವಂತೆ ವ್ಯವಸ್ಥೆ ಮಾಡುವುದು ಹೆಚ್ಚು ಸೂಕ್ತ.

* ಸಾಹಿತ್ಯ ಬಳಗಗಳಲ್ಲಿ ಒಬ್ಬರು ಮತ್ತೊಬ್ಬರ ರಚನೆಯ ಕುರಿತು ಅಭಿಪ್ರಾಯಿಸುವ ಅನಿಸಿಕೆಯನ್ನು “ವಿಮರ್ಶೆ” ಎಂದು ಕರೆಯಲೇಬಾರದು. ಏಕೆಂದರೆ ವಿಮರ್ಶೆ ಎಂಬ ಶಬ್ಧದ ಅರ್ಥ, ವ್ಯಾಪ್ತಿ, ವಿಸ್ತಾರ ಪರಿಧಿ ಮತ್ತು ಹಿರಿಮೆ – ಗರಿಮೆ ಬಹಳವೇ ದೊಡ್ಡದು. ಕಲಿಕಾರ್ಥಿಗಳ ಅನಿಸಿಕೆ ಎಂದಿಗೂ ವಿಮರ್ಶೆಯಾಗಲಾರದು. ಅದು ವಿಮರ್ಶಾ ಲೋಕದಲ್ಲಿ ಪಳಗಿದ ಬಹು ದೊಡ್ಡ ದೊಡ್ಡ ವಿದ್ವಾಂಸರು ಮಾಡುವ ಕಾರ್ಯ. ಹಾಗಾಗಿ ” ವಿಮರ್ಶೆ ” ಎಂಬ ಪದ ಬಳಕೆ ಸರ್ವಥಾ ಸಲ್ಲದು.

    ಗುಂಪುಗಳು ಮೂಲ ಸ್ವರೂಪ ಮತ್ತು ಮೂಲ ಉದ್ದೇಶ ಮರೆತಲ್ಲಿ ಪರಿಶ್ರಮ ನೀರಿನಲ್ಲಿ ಹುಣಸೆ ಹಣ್ಣು ತೊಳೆದಂತಾಗಿ ದಿಕ್ಕು ದೆಸೆಯಿಲ್ಲದೆ ಮೂಲ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಬಹುದು ಅಥವಾ ಕಳಂಕಕ್ಕೆ ತುತ್ತಾಗಬಹುದು.

        ಹಾಗಾಗಿ ಇಂತಹ ಹತ್ತು ಹಲವು ಸೂಕ್ಷ್ಮ ಸಂಗತಿಗಳ ಕುರಿತು ಬಳಗಗಳ ಅಡ್ಮಿನ್ ಗಳು / ಸಂಚಾಲಕರು ಎಚ್ಚರಿಕೆ ವಹಿಸಿ ಗುಂಪುಗಳ ರಚನೆ ಮತ್ತು ಚಟುವಟಿಕೆಗಳ ಆಯೋಜನೆ ಮಾಡಲು ಮುಂದಾಗಬೇಕು. ಆಗ ಮಾತ್ರ ಅಂತಹ ಬಳಗಗಳು ಚಿರಕಾಲ ಉಳಿಯುತ್ತವೆ, ಬೆಳೆಯುತ್ತವೆ, ಮಾದರಿಯಾಗುತ್ತವೆ ಮತ್ತು ಜನಮಾನಸದಲ್ಲಿ ಹೆಸರಾಗಿ ಹಸಿರಾಗುತ್ತವೆ. ಆ ದಿಕ್ಕಿನಲ್ಲಿ ಗುಂಪುಗಳ ರಚನೆಯಾಗಲಿ ಎಂಬುದಷ್ಟೇ ಈ ಲೇಖನದ ಆಶಯ.

**********

Leave a Reply

Back To Top