ಅಪ್ಪ ಸಿಡಿಸಿದ ಪಟಾಕಿ
ಸಿಂಧು ಭಾರ್ಗವ್.
ದೀಪಾವಳಿ ಬಂತೆಂದರೆ ಎಲ್ಲಿಲ್ಲದ ಸಂಭ್ರಮ, ಸಡಗರ. ಪುಟಾಣಿಗಳಿಗೆ ಹೊಸ ಝಯಿತಾರಿ ಅಂಗಿ ಕೊಡಿಸುವರು. ಬೊಗಸೆ ತುಂಬಾ ಸಿಹಿಯನ್ನು ನೀಡುವರು. ಯಾರ ಮನೆಗೆ ಹೋದರೂ ಸಿಹಿತಿಂಡಿ ನೀಡಿ ಆ ಪುಟ್ಟ ಮಕ್ಕಳ ಖುಷಿಯನ್ನು ತಾವೂ ಅನುಭವಿಸುವರು. ಅದಲ್ಲದೇ ಇದಕ್ಕಿಂತ ಹೆಚ್ಚೆಂದರೆ ಅಪ್ಪ ಪಟಾಕಿ ತರುವುದು ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಕುಣಿದು ಕುಪ್ಪಳಿಸುತ್ತಾರೆ. ಬೆಂಗಳೂರಿನಂತಹ ಮಹಾನಗರದಲ್ಲಿ ಕಟ್ಟಡಗಳ ಹಾವಳಿಯೇ ವಿನಃ, ಮಕ್ಕಳಿಗೆ ಆಡಲು ಅನುಕೂಲವಾಗುವಂತಹ ವಾತಾವರಣ ಕಡಿಮೆ. ಆದರೂ ಈ ದೀಪಾವಳಿ ಹಬ್ಬ ಬಂತೆಂದರೆ ಎಲ್ಲರೂ ರಸ್ತೆಯಲ್ಲೇ ಇರುತ್ತಾರೆ. ಯಾವ ವಾಹನಗಳಿಗೂ ಹೋಗಲು ಬಿಡುವುದಿಲ್ಲ. ಓಣಿಯ ಮಕ್ಕಳೆಲ್ಲ ಒಂದಾಗಿ ರಾಕೇಟ್, ಬಿರ್ಸು, ನಕ್ಷತ್ರ ಕಡ್ಡಿ, ಬಾಳೆಮರ, ಲಕ್ಷ್ಮೀ ಪಟಾಕಿ, ನೆಲಚಕ್ರ, ಆಟಂಬಾಂಬ್ ಹೀಗೆ ಬಗೆಬಗೆಯ ಪಟಾಕಿಗಳ ಸಿಡಿಸುತ್ತಾ ಸಂಭ್ರಮ ಪಡುತ್ತಾರೆ. ಅಲ್ಲದೇ ಸಂಜೆ ಆದ ಮೇಲೆ ಎಲ್ಲರ ಮನೆಯ ಗಂಡಸರು ಅಂದರೆ ಅಪ್ಪಂದಿರು ರಸ್ತೆಗಿಳಿದು ತಮ್ಮ ಮಕ್ಕಳ ಜೊತೆ ಪಟಾಕಿ ಸಿಡಿಸಿ ಸಂಭ್ರಮ ಹೆಚ್ಚಿಸುತ್ತಾರೆ.
ಹೀಗಿರುವಾಗ ಒಮ್ಮೆ ಪಕ್ಕದ ಮನೆಯ ಅಂಕಲ್ ಸಂಜೆ ವೇಳೆಗೆ ಒಂದು ದೊಡ್ಡ ಬಾಕ್ಸ್ ಪಟಾಕಿ ತಂದಿದ್ದರು. ಮಕ್ಕಳನ್ನೆಲ್ಲ ದೂರ ನಿಲ್ಲಲು ಹೇಳಿ ಒಂದೊಂದೇ ಜಾತಿಯ ಪಟಾಕಿ ಸಿಡಿಸುತ್ತಾ ಮಕ್ಕಳಲ್ಲಿ ಮೋಜು ಹೆಚ್ಚಿಸುತ್ತ ಇದ್ದರು. ಅದೊಂದು ಹೀರೋತನ ಪ್ರದರ್ಶನ ನಡೆಯುತ್ತಾ ಇತ್ತು. ಇದನ್ನೆಲ್ಲ ಹೆಚ್ಚಿನವರು ಅವರವರ ಮನೆಯ ಮಹಡಿ ಮೇಲಿಂದಲೂ ನೋಡುತ್ತ ಇದ್ದರು. ಹೀಗಿರುವಾಗ, ಅಂಕಲ್ ಮೊದಮೊದಲು ಸಣ್ಣಗಿನ ನೆಲಚಕ್ರ, ನಕ್ಷತ್ರ ಕಡ್ಡಿ , ಬಾಳೆಗಿಡ ಎಲ್ಲವನ್ನೂ ಹಚ್ಚುತ್ತ ಬಂದರು. ಈ ನಡುವೆ ಒಂದು ರಾಕೆಟ್ ತುದಿಗೆ ಬೆಂಕಿ ಹಚ್ಚಿಯೇ ಬಿಟ್ಟರು. ಮಕ್ಕಳು ವರ್ಣಮಯ ಬೆಳಕನ್ನು ನೋಡುವುದರಲ್ಲೇ ತಲ್ಲೀನ.
ಕುಣಿಯುತ್ತ ಚಪ್ಪಾಳೆ ತಟ್ಟುತ್ತಾ ಕೇಕೆ ಹಾಕುತ್ತಿರುವಾಗಲೇ ಆಗಸಕ್ಕೆ ಹಾರಬೇಕಿದ್ದ ಆ ರಾಕೇಟ್ ಸರಕ್ಕನೆ ಮಕ್ಕಳು ಇರುವ ಜಾಗಕ್ಕೆ ಬಂದು ಒಂದು ಪುಟಾಣಿ ಹುಡುಗಿಯ ಎದೆಯನ್ನು ಸೀಳಿ ರಸ್ತೆ ಮೇಲೇಯೇ ನೇರವಾಗಿ ಹೋಗಿ ಒಂದು ಕಾರಿಗೆ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದಿತು. “ಏನಾಯಿತು….?? ಓ ಮೈ ಗಾಡ್…” ಎಂದು ನೋಡುವಷ್ಟರಲ್ಲೇ ಆ ಮಗು ಪ್ರಜ್ಞೆ ತಪ್ಪಿ ಬಿದ್ದತು. ಮುಂಜಾಗ್ರತೆಗಾಗಿ ಏನನ್ನು ಹತ್ತಿರದಲ್ಲಿ ಇಟ್ಟುಕೊಂಡಿರಲಿಲ್ಲ. ಗಾಬರಿಯಾಗಿ ಆ ಮಗುವನ್ನು ಎತ್ತಿಕೊಂಡು ಮನೆ ಕಡೆ ಓಡತೊಡಗಿದರು. ಮಹಡಿ ಮೇಲೆ ನಿಂತು ನೋಡುತ್ತಿದ್ದವರೆಲ್ಲ ಭಯದಿಂದ “ಮಗು…ಮಗು…” ಎಂದು ಕಿರುಚುತ್ತ ಇದ್ದರು. ಕೊನೆಗೆ ಆ ಅಂಕಲ್ ಮನೆಯೊಳಗೆ ಹೋದಾಗ ಮಗುವ ನೋಡಿ ಅದರ ತಾಯಿಗೆ ಭಯವಾಗಿ ಅವರೂ ಕಿರುಚಿದರು. ಹೀಗೆ ಯಾರಿಗೂ ಏನು ಮಾಡಬೇಕು ಎಂದು ಅರಿವಾಗುತ್ತಲೇ ಇರಲಿಲ್ಲ. ಭಯದಿಂದ ಕೈಕಾಲುಗಳು ನಡುಗುತ್ತಿದ್ದವು. ನಂತರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗುತ್ತದೆ. ಮಗುವಿನ ಎದೆಯ ಭಾಗ ಸುಟ್ಟು ದೊಡ್ಡ ಗುಳ್ಳೆಯೊಂದು ಮೂಡುತ್ತದೆ. ಆ ಕಿರುಚಾಟ, ನೋವು ಒಂದೆರಡು ತಿಂಗಳುಗಳ ಕಾಲ ಎಲ್ಲರ ನಿದ್ರೆ ಕೆಡಿಸಿತ್ತು. ಹಾಗೆಯೇ ಅದೊಂದು ಕಲೆಯಾಗಿ ಆ ಮಗುವಿನ ಎದೆಯಲ್ಲಿ ಹಾಗೆಯೆ ಉಳಿದಿದೆ.
ಸ್ನೇಹಿತರೇ, ಪಟಾಕಿ ಸಿಡಿಸುವುದು ತಪ್ಪಲ್ಲ. ಪುಟಾಣಿ ಮಕ್ಕಳ ಎದುರು ಹೀರೋ ಎಂದು ತೋರಿಸಲು ಹೋಗಿ ಅವಘಡಕ್ಕೆ ಸಿಲುಕಬೇಡಿ. ಮುಂಜಾಗ್ರತೆಗಾಗಿ ಒಂದು ಬಕೇಟು ಮರಳು, ನೀರು, ಐಸ್ ಕ್ಯೂಬ್, ಜೇನುಪುಪ್ಪ, ಬರ್ನಾಲ್ ಮುಲಾಮು ಸಗಣಿ, ಒಂದು ಪಾತ್ರೆ ಹುಣಸೆರಸ ಹೀಗೆ ಒಂದಿಲ್ಲೊಂದನ್ನು ಹತ್ತಿರದಲ್ಲೇ ಇರಿಸಿಕೊಂಡಿರಿ. ಈ ಎಂಟು ಹತ್ತು ವರುಷದ ಮಕ್ಕಳೋ ಇಲ್ಲ ಹದಿಹರೆಯದವರೂ ಕೂಡ ಪಟಾಕಿಗಳ ಜೊತೆ ಸರಸವಾಡುವುದನ್ನು ಕಡಿಮೆ ಮಾಡಿ. ನಿಮ್ಮ ಮೋಜು ಮಸ್ತಿ ಇನ್ನೊಬ್ಬರ ಭವಿಷ್ಯವನ್ನೇ ಹಾಳು ಮಾಡಬಹುದು. ಕಣ್ಣುಗಳು ಕುರುಡಾಗಲೂ ಬಹುದು. ದೇಹದ ವಿವಿಧ ಅಂಗಗಳ ಮೇಲಾಗುವ ಸುಟ್ಟಗಾಯ, ಕಲೆ ಎಂದೂ ಮರೆಯಲು ಸಾಧ್ಯವಿಲ್ಲ. ಆ ವಿಷಮದ್ದನ್ನು ಒಳಗೊಂಡ ಸುಟ್ಟಗಾಯ ತುಂಬಾ ಉರಿ ಕೊಡುತ್ತದೆ. ಕ್ಯಾಂಡಲ್ ಉರಿಸುವ ಬದಲು ಮಣ್ಣಿನ ಹಣತೆಯಿಂದ ದೀಪವ ಹಚ್ಚಿರಿ. ಸಿಹಿಯ ಹಂಚಿ ಸಂಭ್ರಮಿಸಿರಿ. ಎಲ್ಲರಿಗೂ ಹಬ್ಬದ ಶುಭಾಶಯಗಳು.