ಜಪಾನಿನ ಕಾವ್ಯ ಪ್ರಕಾರ ತಂಕಾ, ಕನ್ನಡದ ಅಂಗಳದಲ್ಲಿ
ಮನುಷ್ಯ ಭಾವನಾ ಜೀವಿ. ತನ್ನ ಭಾವನೆಗಳ ಅಭಿವ್ಯಕ್ತಿಗೆ ತನಗೆ ಅನುಕೂಲವಾದ ಭಾಷೆಯನ್ನು ಬಳಸಿಕೊಳ್ಳುತ್ತಾನೆ. ಅದುವೇ ಮುಂದೆ ಸಾಹಿತ್ಯದ ರೂಪ ಪಡೆಯಿತು. ಸಹೃದಯರಿಗೆ ಭಾಷೆಯ ಹಂಗು ಇರುವುದಿಲ್ಲ. ಅಂತೆಯೇ ಅವರು ತಮ್ಮ ಹೃದಯಕ್ಕೆ ಸ್ಪಂದಿಸುವ ಸಾಹಿತ್ಯದ ಕಡೆಗೆ ವಾಲುತ್ತಾರೆ. ಅದಕ್ಕೆ ಭಾಷಾಂತರವೂ ಒಂದು ವರವಾಗಿದೆ. ಆ ಕಾರಣಕ್ಕಾಗಿಯೇ ಎಲ್ಲಿಯೊ ಇರುವ ಜಪಾನಿನ ಹಲವು ಸಾಹಿತ್ಯ ಪ್ರಕಾರಗಳು ಕನ್ನಡಿಗರ ಮನಗೆದ್ದು, ಸ್ವತಂತ್ರವಾಗಿ ಕನ್ನಡದಲ್ಲಿಯೆ ಕೃಷಿ ಆರಂಭಿಸಿವೆ. ಅವುಗಳಲ್ಲಿ ಹೈಕು, ತಂಕಾ… ಮುಂಚೂಣಿಯಲ್ಲಿವೆ.
ಭಾಷಾಂತರದ ಕಾರಣವಾಗಿ ಸಾಹಿತ್ಯ ಪ್ರಕಾರಗಳನ್ನು ಹಲವು ರೀತಿಯಲ್ಲಿ ಗುರುತಿಸಲಾಗುತ್ತಿದೆ. ಉದಾಹರಣೆಗೆ ತಂಕಾ..ಇದನ್ನು ಟಂಕಾ, ತಾಂಕಾ, ಟ್ಯಾಂಕಾ… ..ಎಂತಲೂ ಕರೆಯಲಾಗುತ್ತಿದೆ. ಇದು ಜಪಾನ್ ದಲ್ಲಿ ಏಳನೆಯ ಶತಮಾನದಲ್ಲಿಯೇ ಪ್ರವರ್ಧಮಾನದಲ್ಲಿತ್ತು. ಇದು ಎಷ್ಟು ಜನಪ್ರಿಯವಾಗಿತ್ತು ಎಂದರೆ ಅಂದಿನ ಜಪಾನಿನ ಇಂಪೀರಿಯಲ್ ನ್ಯಾಯಾಲಯದ ಗಣ್ಯರು ‘ತಂಕಾ’ ಕವನ ಸ್ಪರ್ಧೆಗಳಲ್ಲಿ ಭಾಗವಹಿಸುತಿದ್ದರಂತೆ…!!
‘ಚಕಾ’ ಎನ್ನುವ ಉದ್ದನೆಯ ಸಾಹಿತ್ಯ ಪ್ರಕಾರವನ್ನು ತುಂಡರಿಸಿ ‘ತಂಕಾ’ ಸಾಹಿತ್ಯ ಪ್ರಕಾರ ಹುಟ್ಟಿಕೊಂಡಿದೆಯೆಂದು ಜಪಾನಿನ ಕವಿ ಮತ್ತು ವಿಮರ್ಶಕ ಮಸೋಕಾ ಶಿಕಿ ಅವರು ಹೇಳುತ್ತಾರೆ. ಇದು ಮೂವತ್ತೊಂದು ಉಚ್ಚರಾಂಶಗಳನ್ನು ಹೊಂದಿದ್ದು, ಮುರಿಯದ ಒಂದೇ ಸಾಲಿನಲ್ಲಿ ಬರೆಯಲಾಗುತಿತ್ತು. ಮುಂದೆ ಇಂಗ್ಲೀಷ್ ಭಾಷಾಂತರಗಳಲ್ಲಿ ಐದು ಸಾಲಿನ ರೂಪವನ್ನು ಪಡೆಯಿತು. ಮೊದಲನೆಯ ಮತ್ತು ಮೂರನೆಯ ಸಾಲುಗಳು ಐದು ಉಚ್ಚರಾಂಶ/ ಅಕ್ಷರಗಳನ್ನು ಹೊಂದಿರುತ್ತದೆ. ಇನ್ನೂ ಎರಡನೆಯ, ನಾಲ್ಕನೆಯ ಮತ್ತು ಐದನೆಯ ಸಾಲುಗಳು ಏಳು ಉಚ್ಚರಾಂಶ/ ಅಕ್ಷರಗಳನ್ನು ಹೊಂದಿರುತ್ತದೆ. ಇದಕ್ಕೆ ಕೆಲವು ಉದಾಹರಣೆಗಳನ್ನು ನೋಡಬಹುದು..
ಅಕಿ-ಸುಕೆ ಯವರ ಪ್ರಸಿದ್ಧ ತಂಕಾ ಪ್ರಕೃತಿಯ ಸುಂದರ ಚಿತ್ರಣವನ್ನು ನೀಡುತ್ತದೆ.
“ನೋಡು, ಮಾಗಿಯ ಮಾರುತ ಹೇಗೆ ಓಡಿಸುತ್ತಿದೆ ಮೋಡಗಳನ್ನು ಎಡ ಬಲಕ್ಕೆ ; ಎಡಕಿನಿಂದ ಚಂದಿರ ಇಣುಕುತ್ತಾನೆ ಕಿರಣಗಳಿಂದ ಓಡಿಸುತ್ತಾ ರಾತ್ರಿಯ ಕತ್ತಲನು”
ಕ್ರಿ.ಶ.670 ಮತ್ತು ಕ್ರಿ. ಶ.1235 ರ ಮಧ್ಯದ 565 ವರ್ಷಗಳಲ್ಲಿಯ ಅನುಪಮ ಕವನಗಳನ್ನು ಆಯ್ದು ಕ್ರಿ.ಶ. 1235 ರಲ್ಲಿ ನೂರು ಜನರ, ನೂರು ಕವನಗಳನ್ನು ಸಂಪಾದಿಸಿ ಪ್ರಕಟಿಸಿರುವುದು ಸದೈಯೋ ರುಜಿವಾರ ರವರ ಅಮೋಘ ಸಾಧನೆಯೆಂಬುದು ತಿಳಿದು ಬರುತ್ತದೆ. ಇದನ್ನೇ ಮುಂದೆ ವಿಲಿಯಂ ಪೋರ್ಟರ್ ರವರು ಇಂಗ್ಲೀಷಿಗೆ ತರ್ಜುಮೆ ಮಾಡಿದ್ದಾರೆ. ಈ ಕೃತಿಗಳು ಇಂದಿಗೂ ಓದುಗರನ್ನು ಸೆಳೆಯುತ್ತಿವೆ..!
ಪ್ರಣಯದ ಆರಂಭದಲ್ಲಿ ಈ ತಂಕಾಗಳು ಕೋಮಲವಾಗಿರುತ್ತವೆ. ಇಬ್ಬರು ಪ್ರೇಮಿಗಳು ಒಟ್ಟಿಗೆ ಇರಲು ರಾತ್ರಿಯಲ್ಲಿ ನುಸುಳುತ್ತಾರೆ ಮತ್ತು ಮರುದಿನ ಬೆಳಿಗ್ಗೆ ಪರಸ್ಪರ ಕೃತಜ್ಞತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಲು ಈ ತಂಕಾಗಳನ್ನು ಬಳಸುತಿದ್ದರು.
ಜಪಾನಿನ ಸಂಸ್ಕೃತಿಯಲ್ಲಿ ತಂಕಾ ಪ್ರಮುಖ ಸಾಹಿತ್ಯ ರೂಪವಾಗಿದೆ. ಈ ತಂಕಾಗಳು ಭಾವನಾತ್ಮಕವಾಗಿ ಓದುಗನ ಕಲ್ಪನೆಗೆ ಗರಿ ಕಟ್ಟುವಂತೆ ಇರುತ್ತವೆ. ಪ್ರಾಸ, ಲಯ ಇಲ್ಲಿ ಇರುವುದಿಲ್ಲವಾದರೂ ಶ್ಲೇಷೆ ಇರುತ್ತದೆ. ಪದಗಳ ಪರ್ಯಾಯ ಅರ್ಥಗಳೊಂದಿಗಿನ ಆಟಗಳು ಇಲ್ಲಿ ಇರುತ್ತವೆ. ಇದರಲ್ಲಿ ಚೀನಿ ಪದಗಳ ಪ್ರಭಾವವಿಲ್ಲ, ಅಪ್ಪಟ ಜಪಾನಿನ ಭಾಷೆಯ ಬಳಕೆಯಾಗಿದೆ. ಜನಜೀವನದ ಸಣ್ಣಪುಟ್ಟ ದೃಶ್ಯಗಳು ತಂಕಾಗಳಾಗಿವೆ. ಇಲ್ಲಿ ರಕ್ತಪಾತ, ಅಂಧಕಾರ, ಅಪರಾಧ, ಭೂಗತ ಜಗತ್ತು, ಮೋಸ, ಕಪಟತನ, ಅತಿರೇಕದ ಭಾವ, ವಿಜೃಂಭಣೆ… ಯಾವುದು ಇರುವುದಿಲ್ಲ. ಹೃದಯಕ್ಕೆ ಮುದ ನೀಡುವಂತಿರುತ್ತವೆ. ಕವಿತೆಯ ಶಕ್ತಿ ಇರುವುದು ಕಾವ್ಯದ ನಿರ್ವಾತದಲ್ಲಿ. ಶೂನ್ಯದಿಂದ ಸಂಪಾದನೆಯೆಡೆಗೆ ಸಾಗುತ್ತಿರುತ್ತದೆ. ಇಬ್ಬರು ವ್ಯಕ್ತಿಗಳ ಅಥವಾ ಎರಡು ಚಿತ್ರಗಳು ಒಂದಕ್ಕೊಂದು ಭೇಟಿಯಾದಾಗ ಮೂಡುವ ಒಂದು ಕ್ಷಣದ ಭಾವವೇ ‘ತಂಕಾ’ ಕ್ಕೆ ಜನ್ಮ ನೀಡುತ್ತದೆ. ಮೌನದ ಘಳಿಗೆಯಲ್ಲಿ ಉದಯಿಸಿದ ಕವಿತೆಯೊಂದು ಹೀಗಿದೆ.
“ಎರಡು ಎ.ಎಂ
ನಾನು ನನ್ನ ಮಲಗುವ ಕೋಣೆ ಬಾಗಿಲು ತೆರೆದಿದ್ದೇನೆ
ಬಿಳಿ ಬೆಕ್ಕು ಓಡಿ ಹೋಯಿತು
ಕ್ಲಾಂಗಿಂಗ್ ಪತನದಿಂದ ಬೆಚ್ಚಿ ಬಿದ್ದಿದೆ
ಸತ್ಕಾರದ ಜಾರ್ನ್ ಲೋಹದ ಮುಚ್ಚಳದಲ್ಲಿ”
ಇದು ತುಂಬಾ ಪ್ರಮುಖವಾದ ತಂಕಾ. ಇದರಲ್ಲಿ ಗಮನಿಸಬೇಕಾದ ಒಂದು ಪ್ರಮುಖ ಅಂಶವಿದೆ. ಇಲ್ಲಿಯ ಮೂರನೆ ಸಾಲನ್ನು “ಪಿವೋಟ್” ಎನ್ನುವರು. ಅಂದರೆ ಮಹತ್ವದ ತಿರುವು ಎಂದಾಗುತ್ತದೆ. ಇದು “ತಂಕಾ” ವನ್ನು ಎರಡು ವಿಭಿನ್ನ ವಿಭಾಗಗಳಾಗಿ ವಿಂಗಡಿಸುತ್ತದೆ. ಈ ತಂಕಾದಲ್ಲಿ ‘ಬಿಳಿ ಬೆಕ್ಕು ಓಡಿ ಹೋಯಿತು’ ಎಂಬ ಮೂರನೆಯ ಸಾಲು ತಂಕಾವನ್ನು ವಿಭಾಗಿಸಿ ಪ್ರತ್ಯೇಕ ಅರ್ಥವನ್ನು ನೀಡುತ್ತದೆ..!
ಇಷ್ಟೆಲ್ಲ ಗಮನಿಸಿದಾಗ ನಮಗೆ ಒಂದು ಅಂಶ ತುಂಬಾ ಕಾಡುತ್ತದೆ. ‘ಈ ತಂಕಾ ಎಂಬ ಜಪಾನಿನ ಕಾವ್ಯ ಪ್ರಕಾರ ನಮಗೆ ಇಷ್ಟವಾಗುತ್ತಿರುವುದು ಯಾಕೆ’ ಎಂಬ ಪ್ರಶ್ನೆ. ಅದಕ್ಕೆ ನಾವು ಹಲವು ಕಾರಣಗಳನ್ನು ಹುಡುಕಬಹುದು. ನಮ್ಮ ಗೌತಮ ಬುದ್ಧ ಅವರನ್ನು ಜಪಾನಿನ ಜನರು ಸ್ವೀಕರಿಸಿದ್ದು, ಭಾರತೀಯರಂತೆ ಅವರೂ ಕೈ ಜೋಡಿಸಿ ನಮಸ್ಕರಿಸುವುದು, ನಮ್ಮಂತೆಯೇ ಅವರೂ ಕೂಡ ಸಂಪ್ರದಾಯಿಕ ಮನಸ್ಥಿತಿ ಹೊಂದಿರುವುದು… ಇವೆಲ್ಲ ಕಾರಣಗಳು ಆಗಿರಬಹುದು…!!
ಇಲ್ಲಿಯವರೆಗೆ ನಾವು ಜಪಾನಿನ ತಂಕಾಗಳ ಬಗ್ಗೆ ಮಾಹಿತಿ ಹಂಚಿಕೊಂಡೆವು. ಇನ್ನೂ ಕನ್ನಡದ ಕೆಲವು ತಂಕಾಗಳನ್ನು ಅಧ್ಯಯನಕ್ಕಾಗಿ ಗಮನಿಸಬಹುದು.
ಸ್ಮಶಾನದಲ್ಲಿ
ಪಿಂಡ ತಿನ್ನೋರ ನೋಡಿ
ಗೋರಿಯಲ್ಲಿಯ
ಶವ ವೇದನೆಯಲ್ಲಿ
ಕಿಲ ಕಿಲ ನಗ್ತಿತ್ತು ..
ಸಾವಿಗೆ ಎಲ್ಲಿ
ಮಾನದಂಡ, ಜೀವಕ್ಕೆ
ಎಲ್ಲಿದೆ ನ್ಯಾಯ;
ಬಾಳ ತಕ್ಕಡಿಯಲ್ಲಿ
ಎಲ್ಲವೂ ಅಯೋಮಯ..!
ಬುದ್ಧಿವಂತರು
ಸಾಕಷ್ಟು ಇರುವರು
ಸಮಾಜದಲ್ಲಿ ;
ಹೃದಯವಂತರಿಗೆ
ಹುಡುಕುತಿದೆ ಇಂದು
ಬಿಡುವು ಇಲ್ಲ
ಎನ್ನುವ ವ್ಯಕ್ತಿಗಳ
ಸ್ವತ್ತಲ್ಲ ಕಾಲ
ಪಾದರಸದಂತದ್ದು
ಚಲನೆಗೆ ಸ್ವಂತದ್ದು
ನಂಬಿಕೆ ಜೀವ
ತೆಗೆಯುವ ಸಾಧನ
ಆಗಬಾರದು
ಬಾಳು ಮುನ್ನಡೆಸುವ
ದಾರಿದೀಪ ಆಗಲಿ
ಗೌರವಿಸುವ
ಕಲೆ ಹೃದಯದಲ್ಲಿ
ಮೂಡಿರುತ್ತದೆ;
ಪಡೆದವರಿಗಿಂತ
ಕೊಟ್ಟವರು ತೃಪ್ತರು..
ಕತ್ತಲೆಂದಿಗೂ
ಅಮಂಗಳವಲ್ಲಯ್ಯ
ನಮ್ಮ ಬಾಳಿಗೆ
ಅದುವೇ ದೀಪವಾಗಿ
ಮುನ್ನಡೆಸುವುದಯ್ಯ
ಮಹಾಭಾರತ
ಓದಿ ನೋಡಿ, ಬದುಕಿನ
ಏರಿಳಿತವು
ಹೃದಯದಿ ಇಳಿದು
ದಾರಿ ತೋರಿಸುತ್ತದೆ..
*******
ಡಾ. ಮಲ್ಲಿನಾಥ ಶಿ. ತಳವಾರ