ʼಮಗಳಿಗೊಂದು ಮಾತುʼ ಅರುಣಾ ನರೇಂದ್ರ ಅವರ ಬರಹ

ಹೇಗಿದ್ದೀ.. ಮಗಳೇ ನಿನ್ನನ್ನು ನೋಡದೆ ಬಹಳ ದಿನಗಳಾದವು. ಮದುವೆಯಾಗಿ ಗಂಡನ ಮನೆ ಸೇರಿದ ನಂತರ ವಾರಕೊಮ್ಮೆಯಾದರೂ ಫೋನಿನಲ್ಲಿ ಮನ ಬಿಚ್ಚಿ ಮಾತಾಡುತ್ತಿದ್ದಿ. ಎಲ್ಲವನ್ನು ನನ್ನ ಹತ್ತಿರ ಹೇಳಿಕೊಳ್ಳುತ್ತಿದ್ದಿ. ಇತ್ತೀಚಿಗಂತೂ ಫೋನಿನಲ್ಲಿ ಮಾತನಾಡಲೂ ನಿನಗೆ ಸಮಯವೂ ಕೂಡ ಸಿಗದಂತಾಗಿದೆ.ತೀರಾ ಸಾಮಾನ್ಯ ಅನ್ನುವ ಹಾಗೆ ದಿನಾಲೂ ಅವಸರದಲ್ಲಿ ಒಂದೆರಡು ಮಾತಾಡಿ ಫೋನು ಕಟ್ ಮಾಡುತ್ತಿ. ನನಗೆ ಗೊತ್ತು ಉದ್ಯೋಗಸ್ಥಳಾದ ನಿನಗೆ ಈಗ ಸಂಸಾರಿಕ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದ್ದರಿಂದ ಕೆಲಸದ ಗಡಿಬಿಡಿ, ಕೌಟುಂಬಿಕ ಒತ್ತಡದಿಂದಾಗಿ ಸಮಯ ಸಿಗುತ್ತಿಲ್ಲ ಅಲ್ಲವೇ. ಇಲ್ಲಿ ನಮ್ಮ ಮನೆಯಲ್ಲಿ ಇದ್ದಾಗ ನೀನು ಅತ್ಯಂತ ಮುದ್ದಿನಿಂದ ಬೆಳೆದಿ. ನೀನು ಬಸ್ಸು ಹಿಡಿದು ಸಿಟಿಗೆ ಹೋಗಿ ಕಚೇರಿ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬರುವುದರೊಳಗೆ ಸುಸ್ತಾಗಿ ಅಮ್ಮನ ಮೇಲೆ ರೇಗಾಡಿ  ಎಲ್ಲಾ ಸೇವೆ ಮಾಡಿಸಿಕೊಂಡು ಆರಾಮಾಗಿದ್ದಿ. ನೀನು ಗಂಡನ ಮನೆಗೆ ಹೋದ ಮೇಲೆ ನಾನೂ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಮಗಳೇ ! ಒಂದೊಂದು ಸಾರಿಯಂತೂ ತುಂಬಾ ಬೇಜಾರು ಅನಿಸುತ್ತಿರುತ್ತದೆ. ನಿನ್ನನ್ನು ನೋಡಬೇಕೆನಿಸುತ್ತದೆ. ಹೇಗಿರುವಿ ಮಗಳೇ ?.. ಉದ್ಯೋಗದ ಜೊತೆಗೆ ಗಂಡ, ಅತ್ತೆ-ಮಾವ, ಮನೆಗೆ ಬರುವವರು, ಹೋಗುವವರು, ಎಲ್ಲರನ್ನೂ ನೀನು ನೋಡಿಕೊಳ್ಳಬೇಕು. ಅಲ್ಲದೆ ಈಗ ನೀನು ಮಗುವಿನ ತಾಯಿಯಾಗುತ್ತಿರುವಿಯಂತೆ ?! ಈ ಎಲ್ಲವನ್ನು ಹೇಗೆ ನಿಭಾಯಿಸುತ್ತಿ?..

 ತಾಯಿತನದ ತೊಂದರೆಗಳನ್ನು ನಿನ್ನ ಅತ್ತೆಯ ಹತ್ತಿರ ಹೇಳಿಕೋ ಅವರ ಸಲಹೆ ಪಡೆದುಕೋ ಅವರಿಗೂ ಸಂತೋಷವಾಗುತ್ತದೆ.ನಿನಗೂ ಸಮಾಧಾನವಾಗುತ್ತದೆ. ತಾಯಿತನದ ಹೊಸ ಅನುಭವಗಳನ್ನು ಸಂಗಾತಿಯೊಂದಿಗೆ ಹಂಚಿಕೋ ಖುಷಿ ಅನಿಸುತ್ತದೆ. ನೆಮ್ಮದಿ ದೊರೆಯುತ್ತದೆ. ನಿನ್ನ ಮತ್ತು ಮಗುವಿನ ಆರೋಗ್ಯ ಪೋಷಣೆಯ ಕಡೆ ಗಮನವಿರಲಿ. ಕಳೆದ ದಿನಗಳ ಸುಖ ಸಂತೋಷಗಳನ್ನು ನೆನಪು ಮಾಡಿಕೊಳ್ಳುತ್ತಾ ಇಂದಿನ ದಿನಗಳನ್ನು ಹಾಳು ಮಾಡಿಕೊಳ್ಳಬೇಡ. ಜೀವನ ಯಾವಾಗಲೂ ಒಂದೇ ರೀತಿಯಾಗಿರುವುದಿಲ್ಲ. ಬೇರೆ ಬೇರೆ ಮಜಲುಗಳನ್ನು ಹತ್ತುತ್ತಾ ಯಶಸ್ಸಿನ ದಾರಿ ಕಾಣಬೇಕಾಗುತ್ತದೆ. ಬದಲಾಗುತ್ತಿರುವ ವಾತಾವರಣಕ್ಕೆ ತಕ್ಕಂತೆ ನಾವು ಹೊಂದಿಕೊಳ್ಳಬೇಕು. ಇದು ಪ್ರಕೃತಿ ನಿಯಮವೂ ಹೌದು ಸಾಮಾಜಿಕ ಜವಾಬ್ದಾರಿಯೂ ಹೌದು.

ನನಗೆ ಗೊತ್ತು ನಿನಗೆ ಅಲ್ಲಿ ಎಲ್ಲವೂ ಹೊಸದು ಎಲ್ಲವೂ ಸಮಸ್ಯೆ ಎಂದು ನಿನಗೆ ಅನಿಸುತ್ತಿರಬಹುದು. ಮನೆಯವರ ಬೇಕು ಬೇಡಗಳಿಗೆ ಸ್ಪಂದಿಸುವುದರಲ್ಲಿಯೇ ನಿನಗೆ ಸಾಕಾಗಿರುತ್ತದೆ‌.ನಿನ್ನನ್ನು ಕಂಡು ಅಕ್ಕಪಕ್ಕದ ಕೆಲವು ಗ್ರಹಿಣಿಯರು ಮೂಗು ಮುರಿಯುತ್ತಿರಬಹುದು. ನಿನಗಿರುವ ಭಾಗ್ಯ ತಮಗಿಲ್ಲವಲ್ಲ ಎಂಬ ಅಸಮಾಧಾನ ಅವರಿಗೆ ಇರಬಹುದು.ಅವರೊಡನೆ ಕುಳಿತು ಗಂಟೆಗಟ್ಟಲೆ ಹರಟೆ ಹೊಡೆಯಲು ನಿನಗೆ ಸಮಯವೆಲ್ಲಿದೆ? ದುಡಿಯುತ್ತೇನೆ ಎಂದು ನಿನಗೆ ಅಹಂ ಇದೆ ಎಂದು ಅವರು ಆಡಿಕೊಳ್ಳುತ್ತಾರೆಯೇ.. ಅಂಥವರ ಯಾವ ಮಾತುಗಳನ್ನೂ ನಿನ್ನ ಕಿವಿಗೆ ಹಾಕಿಕೊಳ್ಳಬೇಡ. ಬಂಧುಗಳ ಮನೆಯಲ್ಲಿಯ ಸಮಾರಂಭಕ್ಕೆ ಹೋಗುವುದಕ್ಕಾಗಲಿಲ್ಲ ಎಂಬ ಕೊರಗು ನಿನ್ನನ್ನು ಕಾಡುತ್ತಿರಬಹುದು. ನೀನು ಅವರೊಂದಿಗೆ ಬೆರೆಯುತ್ತಿಲ್ಲವೆಂದು ನಿನ್ನನ್ನು ದೂಷಿಸಿದರೂ ದೂಷಿಸಬಹುದು. ಚಿಂತಿಸಬೇಡ ಮುಂದೆ ಎಂದಾದರೂ ಒಂದು ದಿನ ನಿನ್ನ ಪರಿಸ್ಥಿತಿ ಅವರಿಗೂ ಅರ್ಥವಾಗತ್ತದೆ. ಆಗ ನಿನ್ನ ಬಗ್ಗೆ ಅವರೂ ಸದಭಿಪ್ರಾಯ ಹೊಂದುತ್ತಾರೆ.
ತಾಯಿಯಾಗುವುದೆಂದರೆ ಸುಮ್ಮನೆ ಅಲ್ಲ! ಭೂಮಿಗೆ ತಾಯಿಯೆನ್ನುತ್ತಾರೆ, ಪ್ರಕೃತಿಗೆ ಪ್ರಕೃತಿ ಮಾತೆ ಎನ್ನುತ್ತಾರೆ, ನೀರಿಗೆ ಗಂಗಮ್ಮ ಗಂಗಾ ಮಾತೆ ಎನ್ನುತ್ತಾರೆ, ಯಾಕೆಂದರೆ ತಾಯಿ ಮಕ್ಕಳಲ್ಲಿ ಕುಂದೆಣಿಸದೇ ಎಲ್ಲರನ್ನೂ ಸಮಾನವಾಗಿ ಕಾಣುತ್ತಾಳೆ. ಎಲ್ಲರಿಗಾಗಿ ಬದುಕುತ್ತಾಳೆ. ಅಂತಿಯೇ ನೀನು ನಿನ್ನ ಮಗುವಿಗೆ ಅಷ್ಟೇ ತಾಯಿಯಾಗುವುದಲ್ಲ ತಾಯಿತನದ ಗುಣ ಸ್ವಭಾವಗಳು ಉನ್ನತ ವಿಚಾರಗಳು ನಿನ್ನಲ್ಲಿರಬೇಕು. ಅಂತಹ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಎಲ್ಲವನ್ನು ನಿಭಾಯಿಸುತ್ತ ಸಂದರ್ಭಕ್ಕನುಸಾರವಾಗಿ ತಪ್ಪು ಮಾಡಿದರೆ ಕ್ಷಮಿಸಿ, ಬುದ್ಧಿ ಹೇಳುತ್ತ ಎಲ್ಲರನ್ನು ಎಲ್ಲವನ್ನು ಮುನ್ನಡೆಸಬೇಕು. ಉದ್ಯೋಗ ಮತ್ತು ಸಂಸಾರ ಎರಡಕ್ಕೂ ತೊಂದರೆ ಆಗದಂತೆ ನೀನು ಕೆಲಸ ನಿರ್ವಹಿಸಬೇಕಾಗಿದೆ‌. ಇದು ಹರಿತವಾದ ಅಲಗಿನ ಮೇಲಿನ ನಡಿಗೆ!

ಬದುಕಿನಲ್ಲಿ ಆರ್ಥಿಕ ಭದ್ರತೆಯನ್ನು ಒದಗಿಸುವ ನೌಕರಿಯನ್ನು ಎಂದೂ ಕಡೆಗಣಿಸಲಾಗದು. ಹಾಗೆಯೇ ಸಾಮಾಜಿಕ ನೆಮ್ಮದಿಯನ್ನು ತರುವ ಸಂಸಾರವನ್ನೂ!.. ಕಚೇರಿಯಲ್ಲಿ ಎಲ್ಲರೊಂದಿಗೆ ನಗುನಗುತಾ ಕೆಲಸ ನಿರ್ವಹಿಸು. ನಿನ್ನಂಥ ಜವಾಬ್ದಾರಿಯುತ ಮಹಿಳಾ ಉದ್ಯೋಗಿಗಳಿಂದಲೇ ಕಚೇರಿಗಳು ಶೋಭಿಸುತ್ತವೆ. ದುಡಿಮೆಯೇ ದೇವರ ಸೇವೆ ಅಲ್ಲವೇ?..ಅದರಂತೆ ಕುಟುಂಬದಲ್ಲಿ ತಂದೆ ತಾಯಿಯರು ಮಗಳು ತಮಗೆ ಒಳ್ಳೆಯ ಹೆಸರನ್ನು ತರಲಿ ಎಂದು ಅಪೇಕ್ಷಿಸುತ್ತಿರುತ್ತಾರೆ. ಗಂಡ ಅತ್ತೆ ಮಾವ ನಿನ್ನಿಂದ ಒಳ್ಳೆಯ ನಿರೀಕ್ಷೆಯನ್ನೇ ಇಟ್ಟುಕೊಂಡಿರುತ್ತಾರೆ. ಎಲ್ಲರನ್ನೂ ಪ್ರೀತಿಯಿಂದ ಕಾಣು. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸು. ಕಷ್ಟ ನಷ್ಟಗಳು ಏನೇ ಬರಲಿ ನಗುನಗುತ್ತಾ ಎದುರಿಸು. ಒಳ್ಳೆಯ ಮಗಳಾಗಿ ಅಕ್ಕ- ತಂಗಿಯಾಗಿ, ಹೆಂಡತಿಯಾಗಿ, ಸೊಸೆಯಾಗಿ, ತಾಯಿಯಾಗಿ ಬಂಧುವಾಗಿ, ಗೆಳತಿಯಾಗಿ ಸಾಮರಸ್ಯದಿಂದ ಬಾಳು.

“ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
 ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
 ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಗೆ
 ಎಲ್ಲರೊಳಗೊಂದಾಗು ಮಂಕುತಿಮ್ಮ” 

ಎಂದು ಡಿವಿಜಿ ಯವರು ಹೇಳಿದಂತೆ ಬದುಕಲು ಪ್ರಯತ್ನಿಸು. ನಾನು ಇಂದು ನಿನ್ನೊಂದಿಗೆ ಬಹಳ ಮಾತನಾಡಿದೆ ಎನಿಸುತ್ತದೆ. ನಿನ್ನನ್ನು ಕೆಲಸಗಳು ಕರೆಯುತ್ತಿರಬಹುದು. ಫೋನ್ ಕಟ್ ಮಾಡುತ್ತೇನೆ. ಶುಭವಾಗಲಿ ಮಗಳೇ..


One thought on “ʼಮಗಳಿಗೊಂದು ಮಾತುʼ ಅರುಣಾ ನರೇಂದ್ರ ಅವರ ಬರಹ

  1. ತುಂಬಾ ಜವಾಬ್ದಾರಿಯುತ ಮಾತುಗಳನ್ನೇ ನಿಮ್ಮ ಮಗಳಿಗೆ ಹೇಳಿದಂತೆ ಹೇಳಿದ್ದೀರಿ ಒಬ್ಬ ಜವಾಬ್ದಾರಿಯುತ ತಾಯಿಯಾಗಿ ಸಮಾಜಿಕ ಬದ್ಧತೆಯನ್ನು ಕಳಕಳಿಯನ್ನ ಸಂಸಾರಿಕ ಕಾಳಜಿಯನ್ನು ಎಷ್ಟೊಂದು ಸುಂದರವಾಗಿ ಹೆಣೆದು ಬರೆದಿರುವಿರಿ ಇದು ಪ್ರತಿಯೊಬ್ಬ ತಾಯಂದಿರಿಗೂ ಒಂದು ಕಿವಿಮಾತು ಮಗಳಿಗೂ ಕಿವಿಮಾತು ಶುಭವಾಗಲಿ.

Leave a Reply

Back To Top