ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ : ಶತಮಾನೋತ್ಸವ ಡಾ.ಎಸ್.ಬಿ. ಬಸೆಟ್ಟಿ ಅವರ ವಿಶೇಷ ಲೇಖನ

ಬೆಳಗಾವಿ ಅಧಿವೇಶನದ ನೂರು ವರ್ಷದ ಸವಿನೆನಪಿಗಾಗಿ ಈ ಲೇಖನ.. ಕುಂದಾನಗರಿ ಬೆಳಗಾವಿ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ನಗರ. ೧೦೦ ವರ್ಷಗಳ ಹಿಂದೆ ಅಂದರೆ ೧೯೨೪ ನೇ ಇಸ್ವಿ ಡಿಸೆಂಬರ್ ತಿಂಗಳ ೨೬ ಮತ್ತು ೨೭ ನೇ ತಾರೀಖನಂದು ೨ ದಿನಗಳ ಕಾಲ ಸ್ವಾತಂತ್ರ‍್ಯ ಸಂಗ್ರಾಮದ ಮುಂಚೂಣಿ ನೇತಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ನಮ್ಮ ಬೆಳಗಾವಿಯಲ್ಲಿ ರಾಷ್ಟ್ರೀಯ ಕಾಂಗ್ರೆಸಿನ ೩೯ನೇ ಮಹಾಅಧಿವೇಶನ ಜರುಗಿತು. ಅಧಿವೇಶನಕ್ಕೆ ೬ ದಿನ ಮುಂಚಿತವಾಗಿ ಮಹಾತ್ಮ ಗಾಂಧೀಜಿಯವರು ರೈಲಿನ ಮೂಲಕ ಬೆಳಗಾವಿಗೆ ಆಗಮಿಸಿದ್ದರು. ‘ಸ್ವರಾಜ್’ ಬಣ ಮತ್ತು ‘ಬದಲಾವಣೆ ಇಲ್ಲ’ ಬಣದ ನಡುವೆ ಐಕ್ಯತೆಯನ್ನು ರೂಪಿಸಲು ಗಾಂಧೀಜಿ ಕಾಂಗ್ರೆಸ್ ಅಧಿವೇಶನಕ್ಕೆ ಆರು ದಿನಗಳ ಮೊದಲು ಆಗಮಿಸಿದರು. ಪುಣ್ಯ ಪುರುಷ ಮಹಾತ್ಮಾ ಗಾಂಧೀಜಿಯವರು ಬೆಳಗಾವಿ ಮಣ್ಣನ್ನು ಸ್ಪರ್ಶಿಸಿದ್ದು ಐತಿಹಾಸಿಕ ಗಳೀಗೆಯೆಂದೇ ಹೇಳಬಹುದು.
ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ೩೯ ನೇ ಅಧಿವೇಶನವನ್ನು ಪ್ರಾರಂಭಿಸಿತು. ಇಡೀ ಇತಿಹಾಸದ ಪುಟಗಳಲ್ಲಿ ಬಾಪೂಜಿ ಇದೊಂದೇ ಅವಧಿಗೆ ಮಾತ್ರ ಅಧ್ಯಕ್ಷರಾಗಿದ್ದರು. ಮತ್ತೇ ಅವರು ಅಧ್ಯಕ್ಷರಾಗಲಿಲ್ಲ. ಗಾಂಧೀಜಿ ಅಧ್ಯಕ್ಷೀಯ ಭಾಷಣ ಮಾಡಿ ಕಲ್ಕತ್ತಾ ಒಪ್ಪಂದವನ್ನು ಅನುಮೋದಿಸುವ ನಿರ್ಣಯದ ಮೇಲೆ ಮಾತನಾಡಿದರು. ಕಾಂಗ್ರೆಸ್ ಅಧಿವೇಶನದ ವಿವಿಧ ಅಂಶಗಳ ವ್ಯವಸ್ಥೆಗೆ ನಿಖರವಾದ ಯೋಜನೆ ಮತ್ತು ಸಿದ್ಧತೆ ನಡೆಯಿತು. ಮಹಾತ್ಮ ಗಾಂಧೀಜಿಯವರು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಪ್ರವೇಶ ಮಾಡುವ ಮುನ್ನ ಕಾಂಗ್ರೆಸ್ ಪಕ್ಷ ಕೇವಲ ಒಂದು ರಾಜಕೀಯ ಪಕ್ಷವಾಗಿತ್ತು. ಆದರೆ ಗಾಂಧೀಜಿಯವರು ಅಧ್ಯಕ್ಷರಾದ ಮೇಲೆ ದೇಶದ ಒಗ್ಗಟ್ಟಿನ ಮಂತ್ರಕ್ಕೆ ಸ್ವಾತಂತ್ರ‍್ಯ ಹೋರಾಟಕ್ಕೆ ಸಮಾಜ ಸುಧಾರಣೆಯ ಅಂಶಗಳನ್ನು ಪಕ್ಷದ ಅಜೆಂಡಾದಲ್ಲಿ ಅಳವಡಿಸಿ, ಸರ್ವೋದಯ ತತ್ವದಡಿಯಲ್ಲಿ ಇಡೀ ದೇಶದ ಜನರನ್ನು ಒಗ್ಗೂಡಿಸಿ. ಸ್ವಾತಂತ್ರ‍್ಯ ಚಳವಳಿಯನ್ನು ರಾಷ್ಟ್ರೀಕರಣಗೊಳಿಸಿದರು. ಮಹಾತ್ಮನ ಅವಧಿಯಲ್ಲಿಯೇ ಕಾಂಗ್ರೆಸ್ ಕೀರ್ತಿ ದೇಶವ್ಯಾಪಿ ಹಬ್ಬಿತು.
೧೯೨೪ ರಲ್ಲಿ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಹಾಜರಾಗಬೇಡಿ ಎಂದು ಕೆಲವರು ಗಾಂಧೀಜಿಗೆ ಹೇಳಿದ್ದರು. ಆದರೆ ಗಂಗಾಧರ ರಾವ್ ದೇಶಪಾಂಡೆ ಅವರು ಈ ಪ್ರದೇಶದಲ್ಲಿ ಸ್ವಾತಂತ್ರ‍್ಯ ಚಳವಳಿಗೆ ಹೊಸ ಹುರುಪು ನೀಡಲು ಗಾಂಧೀಜಿ ಅಧಿವೇಶನದಲ್ಲಿ ಭಾಗವಹಿಸಬೇಕೆಂದು ಬಯಸಿದ್ದರು.  ಬೆಳಗಾವಿ ಕಾಂಗ್ರೇಸ್ಸು ಎಲ್ಲ ದೃಷ್ಟಿಯಿಂದಲೂ ಮಹತ್ವ ಪೂರ್ಣವಾಗಿತ್ತು. ಸ್ಥಳದ ದೃಷ್ಟಿಯಿಂದ, ಊಟ ವಸತಿ ದೃಷ್ಟಿ,ಯಿಂದ ಸ್ವಚ್ಛತೆ ಮುಂತಾದ ದೃಷ್ಟಿಯಿದ, ರಾಜಕೀಯ ದೃಷ್ಟಿಯಿಂದ ಅಂದು ಕಾಂಗ್ರೆಸ್ಸು ಸಾಧಿಸಿದ ಸಮನ್ವಯ ದೃಷ್ಟಿಯಿಂದ ಕಾಂಗ್ರೆಸ್ ಅಧ್ಯಕ್ಷರ ದೃಷ್ಟಿಯಿಂದ-ಹೀಗೆ ಎಲ್ಲ ಬಗೆಯಿಂದಲೂ ಆದು ಮಹತ್ತ್ವಪೂರ್ಣವಾಗಿತ್ತು. ಬೆಳಗಾವಿ ಕಾಂಗ್ರೇಸ್ಸಿನ ಹೆಸರು ತೆಗೆದುಕೊಂಡ ಕೂಡಲೆ ಅಂದು ಅಲ್ಲಿ ಇದ್ದವರಿಗೆ, ಅದನ್ನು ನೋಡಿದವರಿಗೆ, ಅದರಲ್ಲಿ ಕೆಲಸ ಮಾಡಿದವರಿಗೆ ಮೈ ಪುಲುಕಿತವಾಗುತ್ತದೆ. ಹರುಷದಿಂದ ಕಂಠ ಬಿಗಿದುಬರುತ್ತದೆ. ಕಣ್ಣಲ್ಲಿ ಆನಂದಭಾಷ್ಪಗಳುದುರುತ್ತವೆ. ಅಂಥ ಕಾಂಗ್ರೇಸ್ “ನ ಭೂತೋ ನ ಭವಿಷ್ಯತಿ” ಎಂದು ಮಾತಾಡಿ ಕೊಳ್ಳುತಾರೆ.


ಅಖಿಲ ಭಾರತ ಕಾಂಗ್ರೆಸ್ಸಿಗೆ ಕರ್ಣಾಟಕದ ಆಮಂತ್ರಣ:
೧೯೨೩ನೇ ಇಸ್ವಿಯ ಕಾಂಗ್ರೆಸ್ಸು ಕಾಕಿನಾಡಿನಲ್ಲಿ ಸೇರಿತು. ಅದಕ್ಕೆ ಕರ್ನಾಟಕದಿಂದ ಬಹಳ ಜನ ಪ್ರತಿನಿಧಿಗಳು ಹೋಗಿದ್ದರು. ಮುಂದಿನ ವರುಷದ ಅಂದರೆ ೧೯೨೪ನೇ ಇಸ್ವಿಯ ಕಾಂಗ್ರೆಸ್ಸನ್ನು ಕರ್ನಾಟಕದಲ್ಲಿ ನಡೆಸಲು ಆಮಂತ್ರಣ ಕೊಡುವ ಉದ್ದೇಶದಿಂದಲೇ ಬಹಳ ದೊಡ್ಡ ಸಂಖ್ಯೆಯಲ್ಲಿ ಪ್ರತಿನಿಧಿಗಳು ಹೋಗಿದ್ದರು. ಆಗ ಗಾಂಧೀಜಿಯವರು ಯರವಾಡ ಸೆರೆಮನೆಯಲ್ಲಿದ್ದರು. ಮೊಟ್ಟ ಮೊದಲು ಆ ಕಾಂಗ್ರೆಸ್ಸಿನಲ್ಲಿ-ಕನ್ನಡದಲ್ಲಿ ೧೫-೨೦ ನಿಮಿಷ ಭಾಷಣವನ್ನು ಶ್ರೀಗಂಗಾಧರರಾಯ ದೇಶಪಾಂಡೆಯವರು ಮಾಡಿ. ನಂತರ ಆ ಪ್ರಕಾರ ಮುಂದಿನ ವರ್ಷದ ಕಾಂಗ್ರೆಸ್ಸನ್ನು ಕರ್ನಾಟಕದಲ್ಲಿ ಕರೆಯಬೇಕೆಂದು ಕರ್ನಾಟಕದ ಪರವಾಗಿ ಆಮಂತ್ರಣ ಕೊಡಲಾಯಿತು. ಇತರ ಪ್ರಾಂತಗಳಿಂದಲೂ ಆಮಂತ್ರಣ ಬಂದಿದ್ದವು. ಮತಕ್ಕೆ ಹಾಕಲಾಯಿತು. ಕರ್ನಾಟಕಕ್ಕೆ ಬಹುಮತ ಬಿದ್ದವು. ಕಾಂಗ್ರೆಸ್ಸಿನ ಅಧ್ಯಕ್ಷರಾದ ಮಹಮ್ಮದಲ್ಲಿಯವರೂ ತಮ್ಮ ಮತವನ್ನು ಕರ್ನಾಟಕಕ್ಕೆ ಕೊಟ್ಟರು. ಅದನ್ನು ಪುಷ್ಠೀಕರಿಸಿದರು. ಅಧ್ಯಕ್ಷರೇ ಸಮರ್ಥಿಸಿದ ಮೇಲೆ ಉಳಿದ ಎಲ್ಲ ಆಮಂತ್ರಗಳು ಹಿಂದಕ್ಕೆ ಹೋದವು. ಬಿಜಾಪುರದ ಕಾಂಗ್ರೆಸ್ಸ್ ಮುಖಂಡರಾದ ಶ್ರೀ ಕೌಜಲಗಿ ಶ್ರೀನಿವಾಸರಾಯರು ಆ ಆಮಂತ್ರಣದ ಸೂಚನೆಯನ್ನು ಮಂಡಿಸಿದರು. ಅದು ಮಾನ್ಯವಾಯಿತು. ಕರ್ನಾಟಕದ ಆಮಂತ್ರಣ ಸ್ವೀಕೃತವಾಯಿತು. ಆದರೆ ಕರ್ನಾಟಕದಲ್ಲಿ ಇಂಥ ಊರಲ್ಲಿಯೇ ಕಾಂಗ್ರೆಸ್ಸನ್ನು ಸೇರಿಸಬೇಕೆಂದು ಅಲ್ಲಿ ಗೊತ್ತಾಗಲಿಲ್ಲ. ಅದನ್ನು ಕರ್ನಾಟಕದವರಿಗೇ ಬಿಡಲಾಯಿತು.
ಕರ್ನಾಟಕದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸೇರುವ ಸ್ಥಳದ ಬಗ್ಗೆ ಭಿನ್ನಾಭಿಪ್ರಾಯ:
ಕರ್ನಾಟಕದಲ್ಲಿ ಅಖಿಲ ಭಾರತ ಕಾಂಗ್ರೆಸ್ಸು ಸೇರುವದು ಇದೇ ಮೊದಲನೆಯ ಸಲ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿವೇಶನ ನಡೆಸಬೇಕು- ಆದರೆ ಎಲ್ಲಿ? ಈ ಪ್ರಶ್ನೆಯನ್ನು ಕಾಂಗ್ರೆಸ್ ತೀರ್ಮಾನಿಸಲಿಲ್ಲ. ಪ್ರಾಂತಿಯ ಕಾಂಗ್ರೆಸ್ ಸಮಿತಿಗೇ ಬಿಟ್ಟುಬಿಟ್ಟರು. ಇದು ಅಷ್ಟು ಸುಲಭವಾಗಿ ಇತ್ಯರ್ಥವಾಗುವ ಮಾತು ಅಲ್ಲ. ಸುಲಭವಾಗಿ ಸಮರಸ ಆಗಿ ತೀರ್ಮಾನ ಆಗಲೂ ಇಲ್ಲ. ಆದುದರಿಂದ ಪ್ರತಿಯೊಂದು ಜಿಲ್ಲೆಯವರೂ ಕಾಂಗ್ರೆಸ್ಸು ತಮ್ಮಲ್ಲಿ ಸೇರಬೇಕೆಂದು ಇಚ್ಛೆಪಡುವದು ಸ್ವಾಭಾವಿಕ. ಬಿಜಾಪುರದವರಿಗೆ ಬಿಜಾಪುರದಲ್ಲಿ ಅಧಿವೇಶನ ನಡೆಸಬೇಕು ಎಂಬ ಆಶೆ. ಮಂಗಳೂರಿನಲ್ಲಿ ಆಗಬೇಕು ಎಂದು ಮಂಗಳೂರಿನವರಿಗೆ, ಧಾರವಾಡದಲ್ಲಿ ಆಗಬೇಕು ಎಂದು ಧಾರವಾಡದವರಿಗೆ. ಗಂಗಾಧರರಾಯರಿಗೆ ಬೆಳಗಾಂವಿಯಲ್ಲಿ ನಡೆಸಬೇಕು ಎಂಬ ಬಯಕೆ. ಆದರೆ ಮಂಗಳೂರಿನ ಕಾರ್ನಾಡ ಸದಾಶಿವರಾಯರೂ, ವಿಜಾಪುರದ ಕೌಜಲಿಗಿ ಶ್ರೀನಿವಾಸರಾಯರೂ, ಬೆಳಗಾಂವಿಯ ದೇಶಪಾಂಡೆ ಗಂಗಾಧರರಾಯರೂ ಕಾಂಗ್ರೆಸ್ಸು ತಮ್ಮ ಜಿಲ್ಲೆಯಲ್ಲಿ ಸೇರಬೇಕೆಂದು ಹೆಚ್ಚು ಆಗ್ರಹಪಟ್ಟರು. ಪ್ರತಿಯೊಬ್ಬರೂ ತಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ಸನ್ನು ಕರೆಯುವುದಕ್ಕೆ ತಮ್ಮ ಜಿಲ್ಲೆಯ ವೈಶಿಷ್ಟ್ಯವನ್ನು ವರ್ಣಿಸತೊಡಗಿದರು. ಸದಾಶಿವರಾಯರು ಮಂಗಳೂರಿನ ಸೃಷ್ಟಿಸೌಂದರ್ಯವನ್ನು ವರ್ಣಿಸಿದರೆ ಶ್ರೀನಿವಾಸ ರಾಯರು ವಿಜಾಪುರದ ಐತಿಹಾಸಿಕ ವರ್ಣನೆಮಾಡಿದರು. ಬೆಳಗಾವಿಯನ್ನು ವರ್ಣಿಸುವದಕ್ಕೆ ಇಂಥದೇನೂ ಇರಲಿಲ್ಲ.
ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿಯ ಸಭೆ ಹುಬ್ಬಳ್ಳಿಯಲ್ಲಿ ನಡೆಯಿತು. ಆಗ ಕರ್ನಾಟಕದಲ್ಲಿ ಇದ್ದದ್ದು ಎರಡೇ ದೊಡ್ಡ ಪಟ್ಟಣ: ಒಂದು ಬೆಂಗಳೂರು, ಒಂದು ಹುಬ್ಬಳ್ಳಿ ಆಗ ಮೈಸೂರು ಸಂಸ್ಥಾನಕ್ಕೆ ಸೇರಿದ್ದಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರು ಮಹಾರಾಜರು, ಗಾಂಧೀಜಿಗೆ ದೇಶೀ ಸಂಸ್ಥಾನಗಳಲ್ಲಿ ರಾಜಕೀಯ ಚಳವಳಿ ನಡೆಸುವುದು ಇಷ್ಟವಿರಲಿಲ್ಲ. ಆದ್ದರಿಂದ ಬೆಂಗಳೂರಲ್ಲಿ ಕಾಂಗ್ರೆಸ್ ನಡೆಸುವ ಮಾತೇ ಇರಲಿಲ್ಲ. ಉಳಿದದ್ದು ಹುಬ್ಬಳ್ಳಿ ಹುಬ್ಬಳ್ಳಿಯೇನೋ ವ್ಯಾಪಾರ ಸ್ಥಳವೇ. ಅಲ್ಲಿ ಹತ್ತಿವ್ಯಾಪಾರ ಹೆಚ್ಚೇ. ಆದರೆ ಅಲ್ಲಿನ ಜನರಿಗೆ ಕಾಂಗ್ರೆಸ್ ನಡೆಸುವ ಮನಸ್ಸು ಇರಲಿಲ್ಲ. ಮನಸ್ಸು ಮಾಡಿದ್ದರೆ ಕಾಂಗ್ರೆಸ್ ನಡೆಸುವುದು ಅವರಿಗೆ ಕಷ್ಟ ಆಗುತ್ತಿರಲಿಲ್ಲ, ಬಳ್ಳಾರಿ, ಕಾರವಾರ ಜಿಲ್ಲೆಗಳಲ್ಲಿ ಜನರಿಗೆ ಉತ್ಸಾಹ ಕಡಿಮೆ ಇತ್ತು ತಮ್ಮಿಂದ ಸಾಧ್ಯ ಇಲ್ಲ – ಎಂದು ಅಲ್ಲಿನ ಜನ ಹೇಳಿಬಿಟ್ಟರು. ಧಾರವಾಡದಲ್ಲಿ ಮಾಡಬೇಕು ಎಂದು ಕೆಲವರೆಗೆ ಭಾರಿ ಹುರುಪು. ಮಂಗಳೂರಿನಲ್ಲಿ ಮಾಡಬೇಕು ಎನ್ನುವ ಉತ್ಸಾಹ ಕುರ್ನಾಡ ಸದಾಶಿವರಾಯರಿಗೆ ಇತ್ತು. ಕಾಂಗ್ರೆಸ್ಸನ್ನು ನಡೆಸಲು ಪ್ರಾರಂಭದ ವೆಚ್ಚವೇ ಕೆಲವು ಸಾವಿರ ಆಗುತ್ತದೆ. ಕಡೇ ಪಕ್ಷ ೫೦ ಸಾವಿರ ಆದರೂ ಬೇಕು. ಬೆಳಗಾಂವಿ, ಶಹಪುರದ ವರ್ತಕರನ್ನು ಕೇಳಿ, ೩೦ ಸಾವಿರ ರೂಪಾಯಿನ ವಾಗ್ದಾನ ಪಡೆದಿದ್ದರು ಗಂಗಾಧರರಾಯರು, ಆ ವರ್ತಕರು ತಮ್ಮ ವಾಗ್ದಾನವನ್ನು ಬರೆದೇ ಕೊಟ್ಟಿದ್ದರು. ಕೆಲವರಂತೂ ಈ ಸುಸಂಧಿಯನ್ನು ಕಳೆದುಕೊಳ್ಳಬಾರದು ಎಂದು ತಮ್ಮ ಆಮಂತ್ರಣವನ್ನು ಒತ್ತಾಯಿಸಲು ಪ್ರಾಂತೀಯ ಸಮಿತಿಯ ಸಭೆಗೇ ಬಂದಿದ್ದರು. ಆದರೆ ಗಂಗಾಧರರಾಯರು ಕಾಂಗ್ರೆಸ್ಸಿನ ಪೂರ್ವಸಿದ್ದತೆಗಾಗಿ ಕೂಡಿಸಬೇಕಾದ ಹಣ, ಮುನಿಸಿಪಾಲಿಟಿ ಮತ್ತು ಇತರ ಸಂಸ್ಥೆಗಳ, ಪಕ್ಷ ಪಂಗಡಗಳ ಸಹಕಾರ ಮುಂತಾದುದರ ವಿಚಾರಮಾಡಿ ಹಣದ ಬಗ್ಗೆ ವಾಗ್ದಾನಗಳನ್ನೂ ಸಂಘ ಸಂಸ್ಥೆಗಳಿಂದ ಸಹಕಾರದ ಆಶ್ವಾಸನವನ್ನೂ ತೆಗೆದುಕೊಂಡು ಬಂದಿದ್ದರು. ಬಹಳ ಹೊತ್ತು ಚರ್ಚೆ ನಡೆದು ಕೊನೆಗೆ ಮತಕ್ಕೆ ಹಾಕಲಾಯಿತು. ಬೆಳಗಾವಿಗೆ ಹೆಚ್ಚು ಮತ ಬಿದ್ದು ಬೆಳಗಾವಿಯಲ್ಲಿ ಕಾಂಗ್ರೆಸ್ಸು ಕೂಡಿಸುವದು ನಿಶ್ಚಿತವಾಯಿತು.
ಕರ್ನಾಟಕದ ಪ್ರಾಂತೀಯ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಣಯ:
ಪ್ರಾಂತೀಯ ಸಮಿತಿಯ ಸಭೆಗೆ ಬಿಜಾಪುರ, ಮಂಗಳೂರು, ಕಾರವಾರ ಜಿಲ್ಲೆಗಳ ಜನರು ಎಲ್ಲರೂ ಬಂದಿದ್ದರು. ತಮ್ಮ ತಮ್ಮ ಜಿಲ್ಲೆಯಲ್ಲಿ ಕಾಂಗ್ರೆಸ್ ನಡೆಯಬೇಕೆಂದು ಎಲ್ಲರದೂ ಭಾರಿ ಪ್ರಯತ್ನ ಮಂಗಳೂರಿನ ಪರ ಶ್ರೀ ಕಾರ್ನಾಡ ಸದಾಶಿವರಾಯರೂ, ಬಿಜಾಪುರದ ಪರ ಶ್ರೀ ಕೌಜಲಗಿ ಶ್ರೀನಿವಾಸರಾಯರೂ ಬಹಳ ಗಟ್ಟಿಯಾಗಿ ವಾದಿಸಿದರು. ಎರಡೂ ಊರಿನದೂ ಸ್ವಲ್ಪ ಹೆಚ್ಚುಗಾರಿಕೆ ಇತ್ತು ಬಿಜಾಪುರ ಹಿಂದಿನ ವೈಭವದ ಅವಶೇಷ, ಮಂಗಳೂರು ಸೃಷ್ಟಿ ಸೌಂದರ್ಯದ ಗಣಿ, ಬೆಳಗಾಂವಿಯಲ್ಲಿ ಈ ಎರಡೂ ಇಲ್ಲ. ಹೀಗಿದ್ದೂ ಆ ಸಭೆಯಲ್ಲಿ ಕರ್ನಾಟಕದ ಈ ಕಾಂಗ್ರೆಸ್ಸನ್ನು ಬೆಳಗಾಂವಿಯಲ್ಲೇ ನಡೆಸಬೇಕು’ ಎಂದು ತೀರ್ಮಾನ ಆಯಿತು. ಅದರಂತೆ ಬೆಳಗಾಂವಿಯಲ್ಲಿ ಸರ್ವಸಿದ್ಧತೆಗಳೂ ಆಗತೊಡಗಿದವು.
ಅಖಿಲ ಭಾರತ ಕಾಂಗ್ರೆಸ್ಸಿನ ಅಧಿವೇಶನ ಬೆಳಗಾವಿಯಲ್ಲೇ ಏಕೆ? :
ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧಿವೇಶನ ಸೇರಿಸುವುದಕ್ಕೆ ಒಂದು ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಲು ೧೯೨೪- ಮಾರ್ಚದಲ್ಲಿ ಸಭೆ ಸೇರಿತ್ತು. ಕರ್ನಾಟಕದ ಅನೇಕ ಸ್ಥಳಗಳು ಸೂಚಿಸಲ್ಪಟ್ಟರೂ ಕೊನೆಗೆ ಬೆಳಗಾವಿಯನ್ನು ಆಯ್ಕೆ ಮಾಡಲಾಯಿತು. ಬೆಳಗಾವಿ ಅಷ್ಟೇನೂ ದೊಡ್ಡ ನಗರವಲ್ಲ, ದಟ್ಟ ಜನಸಂಖ್ಯೆಯನ್ನು ಹೊಂದಿದುದಲ್ಲ, ಆದರೂ ಈ ಮಹಾಧಿವೇಶನ ನಡೆಸುವುದಕ್ಕೆ ಎಲ್ಲ ಅನುಕೂಲತೆಗಳನ್ನು ಸಾಧನ-ಸಂಪನ್ಮೂಲಗಳನ್ನು ಹೊಂದಿದೆ. ಎಲ್ಲರಿಗೂ ಸಮಾಧಾನಕರವೆನಿಸುವಂತೆ ಸೌಲಭ್ಯಗಳನ್ನು ಏರ್ಪಾಟು ಮಾಡಲು ಶಕ್ತವಿದೆ. ರಾಷ್ಟ್ರದ ಇತ್ತೀಚಿನ ರಾಜಕೀಯ ಚಟುವಟಿಕೆಗಳಲ್ಲಿ ಬೆಳಗಾವಿ ಮಹತ್ವದ ಪಾತ್ರ ವಹಿಸುತ್ತ ಬಂದಿದೆ. ೧೯೧೬ರಲ್ಲಿ ೧೬ನೇ ಮುಂಬಯಿ ಪ್ರಾಂತಿಯ ಕಾಂಗ್ರೆಸ್ ಅಧಿವೇಶನ ನಡೆದುದು ಬೆಳಗಾವಿಯಲ್ಲೇ. ಅದೇ ಕಾಲದಲ್ಲಿ ಕಾಂಗ್ರೆಸ್ಸಿನಲ್ಲಿಯ ಮಂದಗಾಮಿಗಳು ಮತ್ತು ಉಗ್ರಗಾಮಿಗಳು ತಮ್ಮ ಏಕತೆಗೆ ಭದ್ರ ಅಡಿಪಾಯ ಹಾಕಿಕೊಂಡರು. ನಂತರ ಲಖನೌದಲ್ಲಿಯ ಧ್ವಜದ ಮಹಾಧಿವೇಶನದಲ್ಲಿ ಎರಡೂ ಗುಂಪುಗಳೂ ಕಾಂಗ್ರೇಸ್ಸಿನ ಒಂದೇ ಸೂರಡಿ ಬೆರೆತು ಕಾರ್ಯ ಮಾಡತೊಡಗಿದವು.  ಲೋಕಮಾನ್ಯ ಬಾಳಗಂಗಾಧರ ಟಿಳಕರು ೧೯೧೬ರಲ್ಲಿ ಭಾರತದ ಹೋಮ್ ರೂಲ್ ಲೀಗ್  ಸ್ಥಾಪಿಸಿದುದು ಬೆಳಗಾವಿಯಲ್ಲೇ. ಕಾಂಗ್ರೇಸನ್ ಮಹಾ ಆಧಿವೇಶನ ಬೆಳಗಾವಿಯಲ್ಲೇ ನಡೆಸಲು ಪ್ರಮುಖ ಕಾರಣವೆಂದರೆ ಲೋಕಮಾನ್ಯ ಬಾಲಗಂಗಾಧರ ತಿಲಕ್. ಅವರ ಪ್ರಭಾವ ಮತ್ತು ಮುಂಬೈ ಪ್ರಸಿಡೆನ್ಸಿಗೆ ಬೆಳಗಾವಿ ಒಳಪಟ್ಟ ಹಿನ್ನಲೆಯಲ್ಲಿ, ಸ್ವಾತಂತ್ರ‍್ಯದ ಕಾವು ಜನರಲ್ಲಿ ಜೋರಾಗಿತ್ತು.


ಬೆಳಗಾವಿ ಅಖಿಲ ಭಾರತ ಕಾಂಗ್ರೆಸ್ಸಿನ ಅಧ್ಯಕ್ಷರು:
ಈ ಸಲದ ಕಾಂಗ್ರೆಸ್ಸಿನ ಅಧ್ಯಕ್ಷರಾರಾಗಬೇಕೆಂಬ ಬಗ್ಗೆ ವಿಚಾರ ನಡೆದು ಸರೋಜಿನಿದೇವಿಯವರ ಹೆಸರು ಕೇಳಿ ಬರುತಿತ್ತು. ಇದೇ ಸಮಯದಲ್ಲಿ ಅನಾರೋಗ್ಯದ ನಿಮಿತ್ತ ಗಾಂಧೀಜಿಯವರನ್ನು ಬಿಡುಗಡೆ ಮಾಡಲಾಯಿತು. ಅವರ ಬಿಡುಗಡೆಯ ಸುದ್ದಿ ಕೇಳಿ ರಾಷ್ಟ್ರದ ಎಲ್ಲ ಮುಖಂಡರ ದೃಷ್ಟಿಯೂ ಅವರ ಕಡೆಗೆ ಹೊರಳಿತು. ಈ ಸಲದ ಕಾಂಗ್ರೆಸ್ಸಿಗೆ ಅವರನ್ನೇ ಅಧ್ಯಕ್ಷರನ್ನು ಮಾಡಬೇಕೆಂದು ಎಲ್ಲರ ಅಭಿಪ್ರಾಯವಾಗಿತ್ತು. ಗಾಂಧೀಜಿಯವರು ಸಹ ಅದನ್ನು ಒಪ್ಪಿಕೊಂಡರು. ಇದರಿಂದ ಕರ್ನಾಟಕದ ಜನರ ಹಾಗು ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಸಿ ಕೆಲಸವನ್ನು ಭರದಿಂದ ನಡೆಸಿದರು.
೩೯ನೇ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನ ಸ್ವಾಗತ ಸಮಿತಿ ಹಾಗೂ ವಿವಿಧ ಉಪಸಮಿತಿಗಳು:
ಕರ್ನಾಟಕ ಪ್ರಾಂತೀಯ ಕಾಂಗ್ರೇಸ್ ಸಮಿತಿಯು ಈಗಾಗಲೇ ಪ್ರಸ್ತಾಪಿತವಾದ ತನ್ನ ಸಭೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಿತ್ತು. ಮರುದಿನವೇ ಆ ಸಮಿತಿಯು ಸಭೆ ಸೇರಿ ಪದಾಧಿಕಾರಿಗಳ ನೇಮಕ ಮಾಡಿತು. ಅಗಸ್ಟದಲ್ಲಿ ಸ್ವಾಗತ ಸಮಿತಿ ಮತ್ತೆ ಸಭೆ ಸೇರಿ ಪದಾಧಿಕಾರಿಗಳ ನೇಮಕವನ್ನು ಅಂತಿಮಗೊಳಿಸಿತು. ಕಾರ್ಯಕಾರಿ ಮಂಡಳ ಹಾಗೂ ವಿವಿಧ ಉಪ ಸಮಿತಿಗಳನ್ನು ನೇಮಿಸಲಾಯಿತು. ೧೬ ಉಪ ಸಮಿತಿಗಳು ಸ್ವಾಗತಾಧ್ಯಕ್ಷ ಸಮಿತಿಯ ಬೇರೆ ಬೇರೆ ಕಾರ್ಯಗಳ ನಿರ್ವಹಣೆಯ ಹೊಣೆಯನ್ನು ಹೊತ್ತುಕೊಂಡವು. ಸ್ವಾಗತ ಸಮಿತಿಯ ಕಾರ್ಯದರ್ಶಿ ಇವರು ಎಲ್ಲ ಉಪ ಸಮಿತಿಗಳಲ್ಲಿ ಪದನಿಮಿತ್ತ ಸದಸ್ಯರಾದರು.

೧). ಬೆಳಗಾವಿ ಅಧಿವೇಶನ ಸ್ವಾಗತ ಸಮಿತಿ :
ಸ್ವಾಗತಾಧ್ಯಕ್ಷರು:  ಶ್ರೀಯುತ ಗಂಗಾಧರರಾವ್ ದೇಶಪಾಂಡೆ
ಉಪಾಧ್ಯಕ್ಷರು : ಸರ್ವಶ್ರೀ ಡಿ.ವಿ. ಬೆಳವಿ, ರಘುನಾಥರಾನ್ ಸರಾಫ, ನೂರಂದಪ್ಪನ್ನು ಶೆಟ್ಟಿ, ವಾಮನರಾವ್ ಕಲಘಟಗಿ, ಮೌಲವಿ ಕುತುಬುದ್ದೀನ್, ರಾಮರಾವ್ ಮಾನೆ, ಜ್ಯೋತಿಬಾ ಉರ್ಫ ಭಾವೂ ಸಾಹೇಬ ಪಿರಾಳೆ, ವಿನಯ ಕಲಾಲ್, ಬಿ.ಜೋಶಿ, ನರಪಾನ್ ವಸಾಯ, ವಿ.ಎನ್.ಜೋಗ್, ಕಾರ್ನಾಡ ಸದಾಶಿವರಾಯರು, ಕಲ್ಯಾಣಪುರ ರಾಮು ರಾಮರಾವ್, ಹೊಸಕೊಪ್ಪ, ಕೃಷ್ಣರಾವ್, ರಾಮದಾಸ ದರ್ಬಾರ್, ದಿವಾನಸಾಬ ಜಾನವೇಕರ, ನೀಲಕಂಠಪ್ಪ ಸುಗಂಧಿ, ಬಿ. ಭೀಮರಾವ್, ಜೆ.ಎ. ಸುಲ್ದಾನಾ.
ಪ್ರಧಾನ ಕಾರ್ಯದರ್ಶಿಗಳು: ಮಧ್ವರಾನ್ ಕೆಂಭಾವಿ, ಬಿ. ಬಿ. ಪೋತದಾರ, ಎಸ್. ಎಲ್. ಸೋಮಣ್ಣ
ಲೆಕ್ಕ ತಪಾಸಿಗರು : ಸಿದ್ದುರಾವ್ ಪೂಜಾರಿ, ಅಡಿಟರ ಕೆ.ಪಿ.ಸಿ.ಸಿ
ಕೋಶಾಧ್ಯಕ್ಷರು: ನಾಗೇಶರಾವ್ ಹೆರೇಕರ್, ವಿರುಪಾಕ್ಷ ದೇಶಪಾಂಡೆ.

೨) ಹಣಕಾಸು ಸಮಿತಿ: ಡಿ.ವಿ.ಬೆಳವಿ(ಕಾರ್ಯದರ್ಶಿ),
೩) ಮಂಟಪ-ಅಲAಕಾರ ಸಮಿತಿ : ದಾದಾಸಾಹೇಬ ನರಗುಂದಕರ (ಕಾರ್ಯದರ್ಶಿ),
೪) ವಸತಿ ಸಮಿತಿ : ಎನ್.ಎಸ್. ನರಗುಂದಕರ (ಕಾರ್ಯದರ್ಶಿ),
೫) ನೀರು ಪೂರೈಕೆ ಸಮಿತಿ : ಆನಂತರಾವ್ ಕಲಮದಾನಿ(ಕಾರ್ಯದರ್ಶಿ),
೬) ಭೋಜನೋಪಹಾರ ಸಮಿತಿ : ವಾಮನರಾವ್ ಕಾನಣೆ (ಕಾರ್ಯದರ್ಶಿ),
೭) ದೀಪಗಳ ವ್ಯವಸ್ಥೆ ಸಮಿತಿ : ವಿ. ವಾಚ್, ಸಾವರ (ಕಾರ್ಯದರ್ಶಿ),
೮) ಸ್ಟೇಶನ್ ಹಾಗೂ ವಾಹನ: ಡಾ. ಗಿಂಡೆ (ಕಾರ್ಯದರ್ಶಿ),

೯) ಸ್ವಯಂ ಸೇವಕರ ಸಮಿತಿ: ಡಾ. ನಾ. ಸು. ಹರ್ಡಿಕರ (ಕಾರ್ಯದರ್ಶಿ),
೧೦) ನೈರ್ಮಲ್ಯ ಸಮಿತಿ : ಡಾ. ಕೊಳಕರ (ಕಾರ್ಯದರ್ಶಿ),
೧೧) ವೈದ್ಯಕೀಯ ಸಮಿತಿ ; ಡಾ. ಸವನೂರ (ಕಾರ್ಯದರ್ಶಿ),
೧೩) ಪ್ರದರ್ಶನ ಸಮಿತಿ : ಎಚ್. ಎಸ್. ಕೌಜಲಗಿ(ಕಾರ್ಯದರ್ಶಿ),
೧೪) ತಿಕೀಟುಗಳ ಸಮಿತಿ: ರಾಜಾರಾಮ ಸಂತ ಕೇಳಕರ (ಕಾರ್ಯದರ್ಶಿ),
೧೫) ಸಂಗೀತ ಸಮಿತಿ: ಕೆ.ಎಚ್. ಮುದವೀಡಕರ (ಕಾರ್ಯದರ್ಶಿ),
೧೬) ಪ್ರಚಾರ ಸಮಿತಿ: ಡಿ.ಕೆ. ಭಾರದ್ವಾಜ್ (ಕಾರ್ಯದರ್ಶಿ),
೧೭) ಉಗ್ರಾಣ ಸಮಿತಿ: ವಾಮನರಾವ್ ಕಲಘಟಗಿ(ಕಾರ್ಯದರ್ಶಿ),
೧೮) ಕಾರ್ಯ ಸಮಿತಿ: ಜಿ. ಪಿ. ದೇಸಪಾಂಡೆ (ಕಾರ್ಯ
ದರ್ಶಿ),

ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಎಲ್ಲರೂ ಒಂದಾಗಿ ದುಡಿದರು:
ಕಾಂಗ್ರೆಸ್ಸನ್ನು ಎಲ್ಲಿ ಸೇರಿಸಬೇಕೆಂಬ ಬಗ್ಗೆ ಭಿನ್ನಾಭಿಪ್ರಾಯವಾಗಿದ್ದರೂ ಕಾಂಗ್ರೆಸ್ಸನ್ನು ಬೆಳಗಾವಿಯಲ್ಲಿ ಸೇರಿಸಬೇಕೆಂದು ತೀರ್ಮಾನವಾದ ಮೇಲೆ ಕರ್ನಾಟಕದ ಎಲ್ಲ ಮುಂದಾಳುಗಳೂ ಕಾರ್ಯಕರ್ತರೂ ಕಾಂಗ್ರೆಸ್ಸಿನ ಯಶಸ್ಸಿಗಾಗಿ ಮನಃಪೂರ್ವಕ ದುಡಿದರು.
ಕಾರ್ಯಗಳ ವಿಭಾಗಮಾಡಿ ಒಂದೊAದು ಕಾರ್ಯವನ್ನು ಒಬ್ಬೊಬ್ಬರಿಗೆ ಒಪ್ಪಿಸಿಕೊಡಲಾಯಿತು. ಗಂಗಾಧರರಾಯರೇ ಸ್ವಾಗತ ಸಮಿತಿಯ ಅಧ್ಯಕ್ಷರಾದರು. ಭೀಮರಾವ್ ಪೋದ್ದಾರ, ಬಾಬಾಸಾಹೇಬ ಸೋಮಣ, ಮಧ್ವರಾವ್ ಕೆಂಬಾವಿ ಇವರು ಕಾರ್ಯದರ್ಶಿಗಳಾದರು. ಡಾ|| ಹರ್ಡಿಕರರು ಸ್ವಯಂಸೇವಕ ದಳದ ನಾಯಕರಾಗಿದ್ದರು. ಧಾರವಾಡದ ಗೋಪಾಲರಾವ್ ದೇಶಪಾಂಡೆ ಅಡಿಗೆ ಊಟದ ವ್ಯವಸ್ಥಾಪಕರಾದರು. ಯಾಳಗಿ ಬಂಧುಗಳು ಪ್ರತಿನಿಧಿಗಳ ವಸತಿಸೌಕರ್ಯ, ಅಧಿವೇಶನದ ಮಂಟಪ ಮೊದಲಾದ ವ್ಯವಸ್ಥೆ, ವಿದ್ಯುದ್ದೀಪದ ವ್ಯವಸ್ಥೆ ಕೆಲಸವನ್ನು ವಹಿಸಿಕೊಂಡರು. ಪುಂಡಲೀಕಜಿ ಕಾತ್‌ಗಡೆ ಗಾಂಧೀ ಕುಟೀರದ ಮೇಲ್ವಿಚಾರಣೆ ಮಾಡುತ್ತಿದ್ದರು. ಹನುಮಂತರಾವ್ ಕೌಜಲಗಿಯವರಿಗೆ ಖಾದಿ-ಗ್ರಾಮೋದ್ಯೋಗ ವಸ್ತು ಪ್ರದರ್ಶನದ ವ್ಯವಸ್ಥೆಯನ್ನು ಒಪ್ಪಿಸಲಾಗಿತ್ತು. ದಿವಾಕರರು ಪ್ರಚಾರ ಹಾಗು ಪ್ರಕಾಶನದ ಕಾರ್ಯ ತೆಗೆದುಕೊಂಡಿದ್ದರು. ಎಲ್ಲರೂ ತಮ್ಮ ತಮ್ಮ ಕಾರ್ಯಗಳನ್ನು ಉತ್ಸಾಹದಿಂದ ಮಾಡತೊಡಗಿದರು.
ಬೆಳಗಾವಿ ಕಾಂಗ್ರೆಸ್ ಅಧಿವೇಶನದ ವಿಷಯ ನಿಯಾಮಕ ಸಮಿತಿಯಲ್ಲಿ ಭಾಗವಹಿಸಿದ್ದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರು ಹಾಗೂ ನೇತಾರರು. ಪದನಿಮಿತ್ತ ಸದಸ್ಯರು :
ಮಹಾತ್ಮಾ ಗಾಂಧೀಜಿ, ಚಿತ್ತರಂಜನದಾಸ, ಪಂ. ಮೋತಿಲಾಲ ನೆಹರು, ಲಾಲಾ ಲಜಪತರಾಯ್, ಮೌಲಾನಾ ಅಬ್ದುಲ್ ಕಲಾಮ್ ಆಚಾದ, ಮೌಲಾನಾ ಮೊಹ್ಮದ್ ಅಲಿ, ಸೇಠ ಕೀವಾ ಶಂಕರ, ಜಗಜೀವನ ಝವೇರಿ, ಜಮ್ನಾಲಾಲ ಬಜಾಜ, ಶೋಯಬï ಕುರೇಶಿ, ಬಿ. ಎಫ್, ಭರೂಚಾ, ಪಂ. ಜವಾಹರಲಾಲ ನೆಹರು, ಕರ್ನಾಟಕದಿಂದ ವ್ಹಿ. ಎನ್. ಜೋಗ, ಎಚ್. ನಾರಾಯಣರಾವ್, ಎಂ.ಅರ್.ಕೆಂಭಾವಿ, ಬಿ. ಭೀಮರಾವ್ ಜಲಿ, ಆರ್.ಕೆ. ಶೇವಡೆ, ಎಸ್. ಏನ್. ಎಂ. ರಝಮಿ, ಎಂ. ಅರ್. ಕಬ್ಬೂರ, ಡಾ. ವಿ.ಎಸ್. ಉಮಚಗಿ, ಡಾ. ನಾ.ಸು. ಹರ್ಡಿಕರ ಮುಂತಾದವರು ಭಾಗವಹಿಸಿದರು
ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಕರ್ನಾಟಕದಿಂದ ಅಂದರೆ ಕನ್ನಡ ಭಾಷಿಕ ಪ್ರದೇಶಗಳಿಂದ ಬಂದು ಭಾಗವಹಿಸಿದ ಚುನಾಯಿತ ಪ್ರತಿನಿಧಿಗಳು ೨೩೦ ಜನರು. ಇವರಷ್ಟೇ ಅಲ್ಲದೇ ೩೨೦ ಜನ ಕನ್ನಡಿಗರು ಅಧಿಕೃತ ಸದಸ್ಯರಾಗಿ ಭಾಗವಹಿಸಿದ್ದರು.
ಅಜಮೀರ, ಮೇವಾಡ, ಆಂಧ್ರಪ್ರದೇಶ, ಆಸ್ಸಾಂ, ಬಿಹಾರ, ಬಂಗಾಲ, ಮುಂಬಯಿ, ಬ್ರಹ್ಮದೇಶ, ಮದ್ಯಪ್ರಾಂತ ಹಿಂದಿ ಹಾಗು ಮರಾಠಿ ವಿಭಾಗ, ದಿಲ್ಲಿ ಗುಜರಾಥ, ಕೇರಳ, ತಮಿಳನಾಡು, ಮಹಾರಾಷ್ಟ್ರ, ಪಂಜಾಬ, ಸಿಂಧ, ಸಂಯುಕ್ತ ಪ್ರಾಂತ, ಉತ್ಕಲ ಇವುಗಳ ಪ್ರತಿನಿಧಿಗಳು ಸೇರಿ ಒಟ್ಟು ೬೨೩೪ ಚುನಾಯಿತ ಪ್ರತಿನಿಧಿಗಳು, ೧೮೪೪ ಇತರ ಪ್ರತಿನಿಧಿಗಳು ಭಾಗವಹಿಸಿದ್ದರು.
ಬೆಳಗಾವಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ಸ್ಥಳದ ಏರ್ಪಾಡುಗಳು:
ಬೆಳಗಾವಿ ನಗರದ ಟಿಳಕವಾಡಿ ಹೊರಗಡೆ ನಿಸರ್ಗ ರಮ್ಯವಾದ ೮೦ ಎಕರೆ ವಿಶಾಲ ಭೂ ಪ್ರವೇಶವನ್ನು ಅಧಿವೇಶನಕ್ಕೆಂದು ಸ್ವಾಗತ ಸಮಿತಿಯು ಆಯ್ಕೆ ಮಾಡಿತು. ಒಂದೆಡೆ ನಿಸರ್ಗ- ರಮಣೀಯ ವಾತಾವರಣ, ಗ್ರಾಮೀಣ ಸುಂದರ ಪರಿಸರ, ಇನ್ನೊಂದೆಡೆ ಆಧುನಿಕ ನಗರ ಜೀವನದ ಎಲ್ಲ ಸಾಧನ ಅನುಕೂಲತೆಗಳ ಲಭ್ಯತೆ ಹೀಗೆ ಎಲ್ಲವನ್ನು ಹೊಂದಿದ, ಬೆಳಗಾವಿ ಅಧಿವೇಶನದ ಈ ಪರಿಸರಕ್ಕೆ ಕರ್ನಾಟಕದ ಮಹಾ ಸಾಮ್ರಾಜ್ಯವನ್ನು ಸ್ಮರಣೆಗೆ ತಂದುಕೊಟ್ಟು ಅಭಿಮನ ಉತ್ಸಾಹಗಳನ್ನು ಚಿಮ್ಮುವಂತೆ ಮಾಡುವ ವಿಜಯನಗರ ಎಂಬ ಸಾರ್ಥಕ ಐತಿಹಾಸಿಕ ಮಹತ್ವದ ಹೆಸರಿನ್ನಿರಿಸಲಾಯಿತು. ಈ ವಿಜಯನಗರದಲ್ಲಿ ಸ್ವಾಗತ ಸಮಿತಿ ಇವೆಲ್ಲ ಏರ್ಪಾಡಗಳನ್ನು ಮಾಡಿತ್ತು. ಗೋಪುರ ಶೈಲಿಯ ಪ್ರವೇಶ ದ್ವಾರವನ್ನು ಈ ಅಧಿವೇಶನದಲ್ಲಿ ನಿರ್ಮಾಣ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ಅಧಿವೇಶನ ನಡೆಯುವ ಆವರಣಕ್ಕೆ ಹೊಂದಿಕೊಂಡತೆ ವಿಶೇಷ ರೈಲು ನಿಲ್ದಾಣದ ವ್ಯವಸ್ಥೆಯನ್ನು ಮಾಡಲಾಗಿತ್ತು.

೧). ಬೆಳಗಾವಿ ಕಾಂಗ್ರೇಸ ಅಧಿವೇಶನದ ಬೃಹತ್ ಸಭಾ ಮಂಟಪ :
ಬೆಳಗಾವಿಯಲ್ಲಿ ಈಗಿರುವ ಟಿಳಕವಾಡಿ(ವಿಸ್ತೀರ್ಣ) ಆಗಿನ್ನೂ ಬೆಳದಿರಲಿಲ್ಲ. ಅಲ್ಲಲ್ಲಿ ಒಂದೊಂದು ಬಂಗ್ಲೆಗಳು ಮಾತ್ರ ಇದ್ದವು. ರಸ್ತೆ ಇರಲಿಲ್ಲ. ವಿದ್ಯುದ್ವೀಪವಿರಲಿಲ್ಲ. ನೀರಿನ ಸೌಕರ್ಯವಿರಲಿಲ್ಲ. ಎಲ್ಲವನ್ನೂ ಹೊಸದಾಗಿ ಮಾಡಬೇಕಾಗಿತ್ತು. ಮುನಸಿಪಾಲಿಟಿಯವರು ಮನ:ಪೂರ್ವಕವಾಗಿ ಸಹಾಯ ಮಾಡಿದರು. ಹೊಸದಾಗಿ ರಸ್ತೆಗಳನ್ನು ರಚಿಸಿಕೊಟ್ಟರು. ವಿದ್ಯುದ್ವೀಪಗಳ ವ್ಯವಸ್ಥೆಯಾಯಿತು. ಕಾಕಿನಾಡಾದಲ್ಲಿ ಜರುಗಿದ ಕಾಂಗ್ರೆಸ್ ಮಹಾಧಿವೇಶನಕ್ಕಾಗಿಯೆಂದೇ ಅಲ್ಲಿಯ ಸ್ವಾಗತ ಸಮಿತಿಯು ಕಲಕತ್ತೆಯ ಮೆಸರ್ಸ್ ಎ.ಎನ್. ಮುಖರ್ಜಿಯವರಿಂದ ಮಾಡಿಸಿದ್ದ ನಂತರ, ಕಾಂಗ್ರೆಸ್ ಅಧಿವೇಶನಗಳಿಗೊಸ್ಕರವೆಂದೇ ಅಖಿಲ ಭಾರತ ಕಾಂಗ್ರೆಸ್ ಸಮಿತಿಯಿಂದ ಖರೀದಿಸಲಾದ ಬೃಹತ್ ಖಾದಿ ಬಟ್ಟೆಯ ಸಭಾ ಮಂಟಪವನ್ನು ನಿಯೋಜಿತ ಬೆಳಗಾವಿ ಮಹಾಧಿವೇಶನದ ಸ್ವಾಗತ ಸಮಿತಿ ಬಾಡಿಗೆಗೆ ಪಡೆದುಕೊಂಡಿತ್ತು. ಕಾಂಗ್ರೇಸ್ ಅಧೀವೇಶನಕ್ಕಾಗಿ ದೊಡ್ಡದೊಂದು ತಂಬು(ಗುಡಾರ) ಖರೀದಿ ಮಾಡಲಾಯಿತು. ಅದರಲ್ಲಿ ಸುಮಾರು ಹದಿನೇಳು ಸಾವಿರಕ್ಕೂ ಕಡಿಮೆ ಇಲ್ಲದಷ್ಟು ಜನರು ಹಿಡಿಸುತ್ತಿದ್ದರು. ಡಿಸೆಂಬರ್ ೨೬, ೧೯೨೪ ರಂದು, ಕಾಂಗ್ರೆಸ್ ಅಧಿವೇಶನಕ್ಕೆ ಹಾಕಲಾಗಿದ್ದ ಬೃಹತ್ ಶಾಮಿಯಾನದಿಂದ ಪ್ರತಿನಿಧಿಗಳು ದಿಗ್ಭ್ರಮೆಗೊಂಡರು. ಸರ್ಕಸ್ ಟೆಂಟ್‌ನಂತೆ ವಿಶಾಲವಾಗಿದ್ದು, ಬಾಡಿಗೆ ರೂ. ೫೦೦೦/- (ಅದನ್ನು ರೂ. ೫೦೦೦/- ಕ್ಕೆ ಬೆಂಕಿಯ ವಿರುದ್ಧ ವಿಮೆ ಮಾಡಲಾಗಿತ್ತು) ಅದರ ಅಲಂಕಾರಕ್ಕೆ ಖರ್ಚು ಮಾಡಿದ ಮೊತ್ತವನ್ನು ಗಾಂಧೀಜಿ ವಿರೋಧಿಸಿದರು! ನಿಯೋಗ ಶುಲ್ಕವನ್ನು ರೂ.ನಿಂದ ಇಳಿಸಬೇಕು ಎಂದು ಮನವಿ ಮಾಡಿದರು. ೧೦ ರಿಂದ ರೂ. ೧ ಇದನ್ನು ಮಾಡಲಾಯಿತು. ಇಷ್ಟೆಲ್ಲ ಆದ ನಂತರವೂ ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್‌ಗೆ ರೂ. ೭೭೩, ಇದರಲ್ಲಿ ರೂ. ೭೪೫ ಪಿಯುಸಿಸಿ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದು, ರೂ. ೨೫/- ಕಾರ್ಯದರ್ಶಿಯೊಂದಿಗೆ ಅನಿಶ್ಚಯತೆಗಾಗಿ ಇರಿಸಲಾಗಿದೆ ಮತ್ತು ರೂ. ೧/- ಸಣ್ಣ ಖರ್ಚಿಗಾಗಿ ಖಜಾಂಚಿ ಎನ್. ವಿ. ಹೆರೇಕರ್ ಬಳಿ ಇರಿಸಲಾಗಿದೆ! ಅಂದಿನ ಅಧಿವೇಶನಕ್ಕೆ ಒಟ್ಟು ಖರ್ಚಾಗಿದ್ದು ೨,೨೦,೮೨೯ ಐದು ಆಣೆ ಹಾಗೂ ಆರು ಪೈಸೆ ಆಗಿತ್ತು. ಖಾದಿ ಬಟ್ಟೆಗಳನ್ನೇ ಬಳಸಿ ನಿರ್ಮಿಸಲಾದ ಈ ಬೃಹತ್ ಸಭಾ ಮಂಟಪವನ್ನು ಅತ್ಯಂತ ಸುಂದರವಾಗಿ ಅಲಂಕೃತಗೊಳಿಸಲಾಗಿತ್ತು.
ವೇದಿಕೆಯ ಬಳಿ ಮಧ್ಯದಲ್ಲಿ ರಾಷ್ಟ್ರ ಸೇವೆಯಲ್ಲೇ ಹೆಸರು ಗಳಿಸಿದ ಲೋಕಮಾನ್ಯ ಬಾಳಗಂಗಾಧರ ಟಿಳಕ ಹಾಗೂ ಮಹಾತ್ಮಾ ಗಾಂಧೀಜಿಯವರ ಪೂರ್ಣ ದೇಹಾಕೃತಿಯ ಬೃಹತ್ ಭಾವ ಚಿತ್ರಗಳನ್ನು ನಿಲ್ಲಿಸಲಾಗಿತ್ತು. ಸುತ್ತಲೂ ಎಲ್ಲ ಬದಿಗಳಲ್ಲಿ ರಾಷ್ಟçದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿರಿಸಿ ಪ್ರಸಿದ್ಧರಾಗಿರುವ ಅನೇಕ ದೇಶಭಕ್ತರ ಚಿತ್ರಗಳನ್ನು ಪ್ರದರ್ಶಿಸಲಾಗಿತ್ತು. ಕಳೆದ ಮೂರು ವರ್ಷಗಳಿಂದ ನಡೆದು ಬಂದ ಕ್ರಮವನ್ನು ಆನುಕರಿಸಿ ಸಂದರ್ಶಕರನ್ನು ಹೊರತು ಪಡಿಸಿ ಎಲ್ಲ ಪ್ರತಿನಿಧಿಗಳಿಗೆ ಕುಳಿತುಕೊಳ್ಳಲು ನೆಲದ ಮೇಲೆ ಚಾಪಿ, ಕಂಬಳಿಗಳನ್ನು ಹಾಸಲಾಗಿತ್ತು, ಸಂದರ್ಶಕರಿಗಾಗಿ ಸಭಾ ಮಂಟಪದಲ್ಲಿ ಕೂಡಲು ಎಲ್ಲೆಡೆ ಕಟ್ಟಿಗೆ ಭಳಗಳನ್ನು ವ್ಯವಸ್ಥೆಗೊಳಿಸಲಾಗಿತ್ತು. ಸಭಾ ಮಂಟಪದ ಎದುರು, ಮಧ್ಯದಲ್ಲಿ ಅದ್ಭುತ ಶಿಲೆಗಳಿಂದ ಸುಂದರವಾದ ಕಾರಂಜೆಯನ್ನು ನಿಮಿಸಿದ್ದು ಆದರಲ್ಲಿಂದ ನೀರು ಯಾವಾಗಲೂ ಚೆಂದವಾಗಿ ಪುಟಿಯುತ್ತ ಎಲ್ಲರ ಕಣ್ಮನಗಳನ್ನು ತಣಿಸುತ್ತ ಸ್ವಾಗತ ಕೋರುತ್ತಿತ್ತು.
೨). ಬೆಳಗಾವಿ ಕಾಂಗ್ರೇಸ ಅಧಿವೇಶನದ ಬೃಹತ್ ಸಭಾ ಮಂಟಪದ ಗೋಪುರ:
ಬೆಳಗಾವಿ ಕಾಂಗ್ರೇಸ ಅಧಿವೇಶನದ ಬೃಹತ್ ಸಭಾಮಂಟಪದ ಮುಖ್ಯ ಪ್ರವೇಶ ದ್ವಾರವು ವಿಶಿಷ್ಟ ರೀತಿಯಲ್ಲಿ ಅಲಂಕೃತವಾಗಿ ಎಲ್ಲರ ಮನ ಸೆಳೆದಿತ್ತು, ಮುಂಬಯಿಯಲ್ಲಿ ಶ್ರೀನಿವಾಸ್ ಆಯಂಡ್ ಕಂಪನಿ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿರುವ ಕರ್ನಾಟಕದ ಪ್ರತಿಭಾನ್ವಿತ ಯುವ ಕಲಾವಿದರಿಂದ ಅದರ ವಿನ್ಯಾಸ ರೂಪಿಸಲ್ಪಟ್ಟು ನಿರ್ಮಿಸಲಾದ ಅದು ಹಂಪಿಯ ‘ವಿಜಯ ನಗರ’ ಸಾಮ್ರಾಜ್ಯದ ಎಂದು ಕರೆಯಲ್ಪಡುವ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪೆಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಮಹಾದ್ವಾರದ ಮಾದರಿಯದಿತ್ತು. ಕಾಂಗ್ರೆಸ್ ಅಧಿವೇಶನದ ಪ್ರವೇಶದ್ವಾರದಲ್ಲಿ ೭೦ ಅಡಿ ಎತ್ತರದ ಹಂಪಿ ವಿರೂಪಾಕ್ಷ ದೇವಸ್ಥಾನದ ಗೋಪುರದಂತೆ ದೊಡ್ಡದೂಂದು ಗೋಪುರವನ್ನು ವಿನ್ಯಾಸಗೊಳಿಸಲಾಗಿದೆ. ಅದೇ ಸ್ಥಳ ರಾತ್ರಿಯಲ್ಲಿ ಈ ಗೋಪುರ ವರ್ಣಮಯ ವಿದ್ಯುದ್ದೀಪಗಳಿಂದ ಅಲಂಕೃತವಾಗಿ ಅಂದವಾಗಿ ಬಿಳುಗುತಿತ್ತು, ಅದನ್ನು ಬಣ್ಣ ಬಣ್ಣದ ವಿದ್ಯುದ್ವೀಪಗಳಿಂದ ಅಲಂಕರಿಸಲಾಗಿತ್ತು. ಸಹಸ್ರಾರು ಜನರು ರಾತ್ರಿ ಅದನ್ನು ಎಷ್ಟೋ ಹೊತ್ತು ನೋಡುತ್ತ ನಿಲ್ಲುತ್ತಿದ್ದರು. ಕಾಂಗ್ರೆಸ್ ಅಧಿವೇಶನದ ಸಭಾಮಂಟಪದ ನಗರಕ್ಕೆ ‘ವಿಜಯನಗರ’ ಎಂದು ಹೆಸರಿಡಲಾಯಿತು. ಈ ಎಲ್ಲ ವ್ಯವಸ್ಥೆಯನ್ನೂ ನೋಡಿದರೆ ವಿಜಯನಗರವೇ ಮತ್ತೆ ಮೈವೆತ್ತು ಬಂದು ನಿಂತಿದೆಯೊ ಎಂದು ಜನರಿಗೆ ಭಾಸವಾಗುವಂತಿತ್ತು.
೩). ವಿಷಯ ನಿಯಾಮಕ ಸಮಿತಿಯ ಸಭಾಗೃಹ :
ಹದಿನಾಲ್ಕು ಸಾವಿರ ಚೌರಸ್ ಫೂಟುಗಳ ವಿಶಾಲ ಬಯಲಿನಲ್ಲಿ ಅಷ್ಟ ಕೋನಾಕೃತಿಯ ಈ ವಿಶಾಲ ಸಭಾಗೃಹವನ್ನು ಮುಖ್ಯ ಸಭಾಗೃಹದ ಸನಿಹದಲ್ಲಿ ನಿರ್ಮಿಸಲಾಗಿತ್ತು. ವಿಷಯ ನಿಯಾಮಕ ಸಮಿತಿಯ ಕಾರ್ಯ ಕಲಾಪಗಳನ್ನು ವೀಕ್ಷಿಸಬಯಸುವ ಆಸಕ್ತ ಸಂದರ್ಶಕರಿಗೂ ಅಸಮಾಧಾನವಾಗದ ರೀತಿಯಲ್ಲಿ ಅವರೆಲ್ಲರಿಗೂ ಸ್ಥಳಾವಕಾಶ ಒದಗಿಸಲಾಗಿತ್ತು. ಕಾಂಗ್ರೆಸ್ ಮೈದಾನದಲ್ಲಿ ಅಧಿವೇಶನದ ಅಂಗವಾಗಿ ನಡೆಯುತ್ತಿದ್ದ ಬೇರೆ ಬೇರೆ ಸಮಾವೇಶಗಳಿಗೂ ಈ ಸಭಾ ಮಂಟಪದಲ್ಲಿ ಅವಕಾಶ ನೀಡಲಾಗಿತ್ತು. ಅವುಗಳಿಗಾಗಿ ಎಲ್ಲ ಏರ್ಪಾಟುಗಳನ್ನು ಮಾಡಲಾಗಿತ್ತು.
೪). ಕೇಂದ್ರ ಕಾರ್ಯಾಲಯಗಳು :
ವಿಷಯ ನಿಯಾಮಕ ಸಮಿತಿಯ ಸಭಾಗೃಹಕ್ಕೆ ಹೊಂದಿಕೊಂಡೇ ನಿರ್ಮಿಸಲಾದ ಚತುಷ್ಕೋನಾಕೃತಿಯ ವಿಶಾಲ ಮಂಟಪದಲ್ಲಿ ಅಂಚೆ, ತಂತಿ ರವಾನೆ, ಬ್ಯಾಂಕ್ ಸೇವೆಗಳನ್ನು ಒಳಗೊಂಡಂತೆಯೇ ಸ್ವಾಗತ ಸಮಿತಿಯ ವಿವಿಧ ಕಚೇರಿಗಳು ಕಾರ್ಯನಿರತವಾಗಿದ್ದವು.
 ೫). ಖಾದಿ ಅರಮನೆ (ಟೆಂಟ್‌ನಲ್ಲಿ ಗಾಂಧೀಜಿಯವರ ವಾಸ್ತವ್ಯ) :
ಸರಳ ಜೀವನ ಅಳವಡಿಸಿಕೊಂಡಿದ್ದ ಮಹಾತ್ಮ ಗಾಂಧೀಜಿಯವರು ಬೆಳಗಾವಿ ಅಧಿವೇಶನಕ್ಕೆ ಒಂದು ವಾರ ಮುಂಚೆಯೇ ನಗರಕ್ಕೆ ಆಗಮಿಸಿದ್ದರು. ಅಂದಿನ ಮುಖಂಡರು ಗಾಂಧೀಜಿಯವರ ವಾಸ್ತವ್ಯಕ್ಕೆ ಮನೆಗಳಲ್ಲಿ ವ್ಯವಸ್ಥೆ ಮಾಡಿದ್ದರು. ಆದರೆ ಅದಕ್ಕೆ ಒಪ್ಪದ ಬಾಪೂ ಅಧಿವೇಶನ ನಡೆಯುತ್ತಿದ್ದ ಸ್ಥಳದಲ್ಲೇ ಒಂದು ಟೆಂಟ್ ಹಾಕಿಕೊಂಡು ಅಲ್ಲಿಯೇ ವಾಸ್ತವ್ಯ ಮಾಡಿದ್ದರು. ಗಾಂಧೀಜಿಗಾಗಿ, ಬಿದಿರು ಮತ್ತು ಹುಲ್ಲಿನ ಸಣ್ಣ ಗುಡಿಸಲನ್ನು ನಿರ್ಮಿಸಲಾಯಿತು. ಗಾಂಧೀಜಿಯವರು ಇರುವದಕ್ಕಾಗಿ ಒಂದು ಖಾದಿ ಕುಟೀರವನ್ನು ರಚಿಸಲಾಯಿತು. ಅದು ಸಹ ಬಹಳ ಸುಂದರವಾಗಿತ್ತು. ಇದನ್ನು ಗಾಂಧೀಜಿಯವರು ಖಾದಿ ಅರಮನೆ ಎಂದು ಕರೆದರು. ಎಲ್ಲವೂ ಸಿದ್ದವಾಯಿತು.  ಈ ಸಂದರ್ಭದಲ್ಲಿ ಪಕ್ಕದ ಗ್ರಾಮಗಳಿಗೆ ಭೇಟಿ ನೀಡಿ ಜನರಲ್ಲಿ ಸ್ವಾತಂತ್ರ‍್ಯ ಹೋರಾಟದ ಅರಿವು ಮೂಡಿಸಿದ್ದರು. ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮದವರಾದ ಕರ್ನಾಟಕದ ಖಾದಿ ಭಗೀರಥ ಎಂದೇ ಖ್ಯಾತಿ ಹೊಂದಿದ್ದ ಶ್ರೀ ಗಂಗಾದರ್ ರಾವ್ ದೇಶಪಾಂಡೆ ಅವರು ಸಂಪೂರ್ಣ ಅಧಿವೇಶನದ ಉಸ್ತುವಾರಿ ತಂಡದಲ್ಲಿದ್ದರು. ವಿಷಯ ನಿಯಾಮಕ ಸಮಿತಿ ಸಭಾಗೃಹಕ್ಕೆ ಹೊಂದಿಕೊಂಡೇ ಮಹಾಧಿವೇಶನದ ಸರ್ವಾಧ್ಯಕ್ಷರ ಸಲುವಾಗಿ ಖಾದೀ ಅರಮನೆ ನಿರ್ಮಿಸಲಾಗಿತ್ತು. ಚಿಕ್ಕ ಹಾಗೂ ಸಣ್ಣ ರೀತಿಯಲ್ಲಿ ನಿರ್ಮಿತವಾಗದ್ದ ಅದು ತನ್ನ ವಿಶಿಷ್ಟ ಅಲಂಕಾರಗಳಿಂದಾಗಿ ಅರಮನೆ ಎಂಬ ಸಾರ್ಥಕ ನಾಮದಿಂದ ಗುರುತಿಸಲ್ಪಟ್ಟಿತ್ತು. ಆದರೆ ವೆಚ್ಚದ ದೃಷ್ಟಿಯಿಂದ ಅದು ಒಂದು ಕುಟೀರವೆ ಸರಿ.
೬). ಉಚಿತ ಆಸ್ಪತ್ರೆ ಹಾಗೂ ವೈದ್ಯಕೀಯ ನೆರವು :
ಅಧಿವೇಶನದ ಸರ್ವಾಧ್ಯಕ್ಷರ ಶಿಬಿರದಿಂದ ಪಶ್ಚಿಮಕ್ಕೆ ಸ್ವಲ್ಪ ಅಂತರದಲ್ಲಿ ಶಾಂತಪೂರ್ಣ ಸ್ಥಳದಲ್ಲಿ ಆಸ್ಪತ್ರೆಯನ್ನು ವ್ಯವಸ್ಥೆಗೊಳಿಸಲಾಗಿದ್ದು, ಅಲ್ಲಿ ವೈದ್ಯಕೀಯ ತಜ್ಞರುಗಳು ಸೇವೆ ಸಲ್ಲಿಸಲು ಸದಾ ಸಿದ್ಧರಾಗಿರುತ್ತಿದ್ದರು. ಇಷ್ಟೇ ಅಲ್ಲದೇ ಅನೇಕ ತಜ್ಞ ಡಾಕ್ಟರರ ಮಾರ್ಗದರ್ಶನದಲ್ಲಿ ಪ್ರತಿನಿಧಿ ಹಾಗೂ ಸಂದರ್ಶಕರಿಗೋಸ್ಕರ ಒಂದು ಉಚಿತ ಆಸ್ಪತ್ರೆಯನ್ನು ವ್ಯವಸ್ಥೆಗೊಳಿಸಲಾಗಿತ್ತು.
೭). ನೂಲುವ ನೆಲೆ:
ನೂಲು ತೆಗೆಯ ಬಯಸುವ ಪ್ರತಿನಿಧಿಗಳು ಅನುಕೂಲಕ್ಕಾಗಿ ಚರಖಾ ಹಾಗೂ ಇತರ ಸಾಧನೆಗಳಿಂದ ಪರಿಪೂರ್ಣವಾದ ಸಭಾಗೃಹವನ್ನು ಒದಗಿಸಲಾಗಿತ್ತು. ಇಲ್ಲಿಯೇ ನೂಲುವ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳೊಂದಿಗೆ ಸನ್ಮಾನಿಸಲಾಯಿತು. ಕಲಕತ್ತೆಯ ಖಾದಿ ಪ್ರತಿಷ್ಠಾನದ ಶ್ರೀ ಸತೀಶಚಂದ್ರ ದಾಸಗುಪ್ತ.ಮಾಯಾಲಾಂದ್ರಗಳ ಮೂಲಕ ಆಂಗ್ಲ ಪ್ರಭುತ್ವ ಪೂರ್ವದ ಭಾರತದ ಸುಸಮೃದ್ಧಿ, ಖಾದಿ ಆಂದೋಲನದ ಮಹತ್ವ ಹಾಗೂ ವೈಭವಪೂರ್ಣ ಗತಕಾಲದ ಮರುಸೃಷ್ಟಿ ಮೊದಲಾದವುಗಳನ್ನು ಕುರಿತು ಚಿತ್ರ ಪ್ರದರ್ಶನ ಹಾಗೂ ಚೈತನ್ಯದಾಯಕ ವ್ಯಾಖ್ಯೆಗಳನ್ನು ಇಲ್ಲಿ ವಿಶಾಲ ಜನ ಸಮೂಹಕ್ಕಾಗಿ ವಿರ್ಪಾಡು ಮಾಡಿದ್ದರು
೮). ಮನರಂಜನಾ ಗೃಹ :
ಸಂಗೀತ ಹಾಗೂ ನಾದ್ಯೋಪಕರಣಾದಿಗಳ ಕಾರ್ಯಕ್ರಮ ನೃತ್ಯನಾಟಕಾದಿ ಮನರಂಜನ ಕಾರ್ಯಕ್ರಮಗಳಿಗೋಸ್ಕರ ನೂಲುವ ಮನೆಗೆ ಸನಿಹದಲ್ಲೇ ಆಧುನಿಕ ಥೇಟರಿನ ಎಲ್ಲ ವ್ಯವಸ್ಥೆಗಳುಳ್ಳ ವೇದಿಕೆ ಹಾಗೂ ಸಭಾಗೃಹ ನಿರ್ಮಿಸಲಾಗಿತ್ತು. ಕನ್ನಡ ಸಂಗೀತ, ರಾಗ, ತಾಳ ಮೇಳಗಳಿಗೆ ಆಗ್ರ ಪ್ರಾಶಸ್ತ್ರ ನೀಡಲಾಗಿದ್ದು ಸುವಿಖ್ಯಾತ ವೀಣೆ ಶೇಷಣ್ಣನವರನ್ನು ಒಳಗೊಂಡಂತೆಯೇ ಆನೇಕ ಸುಪ್ರಸಿದ ಗಾಯಕರು ಹಾಗೂ ವಾದ್ಯ ವಾದನ ಪಟುಗಳು ಜನರನ್ನು ತಮ್ಮ ಚಿತ್ತಾಕರ್ಷಕ ಕಾರ್ಯಕ್ರಮ ನೀಡಿ ರಂಜಿಸುತ್ತಿದ್ದರು
೯). ವಸತಿ ವ್ಯವಸ್ಥೆ :
ಪ್ರತಿನಿಧಿಗಳಿಗೆ ಸ್ವಾಗತ ಸಮಿತಿಯ ಸದಸ್ಯರುಗಳಿಗೆ, ಹಾಗೂ ಸಂದರ್ಶಕರಿಗೆ ರಸ್ತೆಯ ಎರಡೂ ಬದಿಗೆ ಸಾಲುಸಾಲಾಗಿ ಕುಟೀರಗಳು ಸಿದ್ಧವಾದವು. ಪ್ರತಿಯೊಂದು ಕೊಠಡಿಯಲ್ಲಿ ಆರು ಜನರಿಗೆ ವಸತಿ ಅವಕಾಶವುಳ್ಳ ಹನ್ನೆರಡು ಕೊಠಡಿಗಳನ್ನು ಒಳಗೊಂಡ ಒಟ್ಟು ೭೨ ಬ್ಲಾಕುಗಳನ್ನು ನಿರ್ಮಿಸಲಾಗಿತ್ತು. ಅವುಗಳ ಪೈಕಿ ಮೂವತ್ತು ಬ್ಲಾಕುಗಳು ಸಂಪೂರ್ಣ ಖಾದಿ ಬಟ್ಟೆಯಿಂದ ನಿರ್ಮಿತವಿದ್ದವು. ಪ್ರತಿನಿಧಿಗಳಿಗೆ ಸ್ವಾಗತ ಸಮಿತಿಯ ಸದಸ್ಯರುಗಳಿಗೆ, ಹಾಗೂ ಸಂದರ್ಶಕರಿಗೆ ಖಾದಿ ಅಥವಾ ಬಿದರಿನ ಚಾಪೆಗಳಿಂದ ನಿರ್ಮಿಸಲಾದ ಬ್ಲಾಕಗಳನ್ನು ಒದಗಿಸಲಾಗಿತ್ತು. ಇವುಗಳಷ್ಟೇ ಅಲ್ಲದೇ ಪ್ರತ್ಯೇಕ ಅಡುಗೆ ಮನೆ, ಕಕ್ಕಸು, ಬಚ್ಚಲು ನಿರಂತರ ನೀರು ಪೂರೈಕೆ ಏರ್ಪಾಟುಗಳನ್ನು ಒಳಗೊಂಡ ೭೦ ವಿಶೇಷ ಕುಟೀರಗಳು ಇದ್ದವು. ಭಾರತದ ಎಲ್ಲಾ ಮೂಲೆಗಳಿಂದ ಸುಮಾರು ಹದಿನೇಳು ಸಾವಿರ ಜನರು ಪಶ್ಚಿಮದ ಕ್ವೆಟ್ಟಾದಿಂದ ಪೂರ್ವದ ಬರ್ಮಾದವರೆಗೆ, ಕಾಶ್ಮೀರದಿಂದ ಕೇರಳದವರೆಗೆ ಈ ಸೈಟ್ಗೆ ಬಂದು ಇಳಿದರು ಮತ್ತು ಅವರಿಗೆ ವಸತಿ ನೀಡಬೇಕಾಯಿತು. ಸ್ವಯಂಸೇವಕರು ಭಾಗವಹಿಸಿದ ಎಲ್ಲರಿಗೂ ಎಲ್ಲಾ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ಇದನ್ನು ಸೌಜನ್ಯದಿಂದ ವಸತಿ ವ್ಯವಸ್ಥೆ ಮಾಡಲಾಯಿತು.
೧೦). ಭೋಜನ ಹಾಗೂ ಉಪಾಹಾರದ ಏರ್ಪಾಟು :
ಭಾರತದ ಎಲ್ಲಾ ಮೂಲೆಗಳಿಂದ ಜನರು ಬಂದಿದ್ದರು.  ಮಧ್ಯವರ್ತಿಯಾದ ಒಂದು ದೊಡ್ಡ ಸಾಮಾನ್ಯ ಅಡುಗೆ ಮನೆ ನಿರ್ಮಿಸಲಾಗಿತ್ತು. ಅಲ್ಲಿ ಕರ್ನಾಟಕ ಮಾದರಿಯ ಭೋಜನೋಪಹಾರ ಸಿದ್ದಗೊಳ್ಳುತ್ತಿತ್ತು ೫೦೦×೧೦೦ ಚೌರಸ್ ಫೂಟು ವಿಶಾಲವಾದ ಭೋಜನ ಗೃಹ ನಿರ್ಮಿಸಲಾಗಿತ್ತು. ಬೇರೆ ಬೇರೆ ಪ್ರಾಂತಗಳವರಿಗಾಗಿ ಅವರದೇ ಆದ ಆಹಾರ ಸಿದ್ದಪಡಿಸುವಂಥ ಪ್ರತ್ಯೇಕ ಅಡುಗೆ ಮನೆಗಳನ್ನು ಏರ್ಪಾಟು ಮಾಡಲಾಗಿತ್ತು. ಅವರಿಗೆ ಅವರದೇ ಆದ ಆಹಾರ ನೀಡಬೇಕಾಯಿತು. ಅಡುಗೆ ಮನೆಗಳಿಗೆ ಹೊಂದಿಯೇ ಖರೀದಿಸಲಾದ ದರದಲ್ಲಿ ಕಿರಾಣಿ ಸಾಮಾನುಗಳನ್ನು ಒದಗಿಸುವ ಲಾಭಗಳಿಕೆ ಹಾಗೂ ಹಾನಿ ರಹಿತ ಯೋಗ್ಯ ದರದ ಅಂಗಡಿಯೂ ಇತ್ತು. ಊಟದ ವ್ಯವಸ್ಥೆಯೂ ಬಹಳ ಚೆನ್ನಾಗಿತ್ತು. ಒಂದೇ ಸಲಕ್ಕೆ ನಾಲ್ಕಾರು ಸಾವಿರ ಜನರು ಊಟಕ್ಕೆ ಕೂಡುವಷ್ಟು ವ್ಯವಸ್ಥೆ ಮಾಡಲಾಗಿತ್ತು. ಪ್ರತಿ ಸಾಲಿಗೂ ಬಡಿಸುವ ವ್ಯವಸ್ಥೆ ಪ್ರಶತ್ಯೇಕವಾಗಿತ್ತು. ಊಟದ ಪದಾರ್ಥವೂ ಸಮೀಚೀನವಾಗಿ ಇದ್ದವು. ತಿಂದಷ್ಟು ತುಪ್ಪ, ಶ್ರೀಖಂಡ ಬಡಿಸುತ್ತಿದ್ದರು. ಅಂದು ಅಲ್ಲಿ ಊಟ ಮಾಡಿದವರು ಅದರ ನೆನಪು ಬಂದರೆ ಶ್ರೀಖಂಡದ ವಾಸನೆ ಹೋಗಿದೆಯೊ ಇಲ್ಲವೊ ಎಂದು ಇಂದಿಗೂ ಅಭಿಮಾನದಿಂದ ತಮ್ಮ ಕೈಮೂಸಿ ನೋಡಿಕೊಳ್ಳುತ್ತಾರೆ.
ಅಧಿವೇಶನಕ್ಕೆ ಬರುವ ಜನರ ಊಟೋಪಚಾರ ಹಾಗೂ ವಾಸ್ತವ್ಯ ಮಾಡಲು ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಮುಖಂಡರಾದ ಡಾ. ಎನ್.ಎಸ್. ಹರ್ಡಿಕರ್, ಭೀಮರಾವ್ ಪೋದ್ದಾರ್, ಆರ್.ಕೆಂಭಾವಿ. ಎಸ್.ಎಲ್. ವಾಮನ್, ಗೋವಿಂದರಾವ್ ಯಾಳಗಿ, ಜೀವನ್ ರಾವ್ ಯಾಳಗಿ ಸೇರಿದಂತೆ ಇನ್ನೂ ಹಲವರು ಜನ ನಾಯಕರು ಯಾವುದಕ್ಕೂ ಕೊರತೆ ಬಾರದಂತೆ ನೋಡಿಕೊಂಡರು. ಇಲ್ಲಿನ ಶಿಸ್ತುಬದ್ಧ ವ್ಯವಸ್ಥೆಯನ್ನು ನೋಡಿದ ಗಾಂಧೀಜಿಯವರು ಮುಕ್ತಕಂಠದಿಂದ ಹೊಗಳಿದ್ದರು.
೧೧). ಅಧಿವೇಶನಕ್ಕೆ ಬಾವಿಯಿಂದ ನೀರು ಪೂರೈಕೆ :
೧೯೨೪ರ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಕಡೆಗೆ ನಡೆಯುವುದು ಬೃಹತ್ ಪ್ರದೇಶ – ವ್ಯಾಕ್ಸಿನ್ ಡಿಪೋದಿಂದ ಮಿಲಿಟರಿ ಕೇಂದ್ರದವರೆಗೆ ಕಾಂಗ್ರೆಸ್‌ಗೆ ಸುತ್ತುವರಿಯಲಾಯಿತು. ಬೆಳಗಾವಿ ನಗರವು ಯಾವುದೇ ರೀತಿಯ ನೀರು ಪೂರೈಕೆ ವ್ಯವಸ್ಥೆಯನ್ನು ಹೊಂದಿರಲಿಲ್ಲವಾದ್ದರಿAದ ಕಾಂಗ್ರೆಸ್ ಮಹಾಧಿವೇಶನದ ಸ್ಥಳಕ್ಕೆ ನೀರು ಪೂರೈಕೆ ಮಾಡುವ ವಿಶೇಷ ಏರ್ಪಾಟನ್ನು ಮಾಡಬೇಕಾಯಿತು. ಅಗಾಧವಾದ ಬಾವಿಯನ್ನು ಅಗೆಯಲಾಯಿತು. ಬಾವಿ ತೋಡುತ್ತಿದ್ದಾಗ ಹರಪನಹಳ್ಳಿ ಎಂಬ ಪುಟ್ಟ ಬಾಲಕ ಬಿದ್ದು ಸಾವನ್ನಪ್ಪಿದ್ದಾನೆ. ಗಂಗಾಧರರಾವ್ ದೇಶಪಾಂಡೆ ಅವರು ಪ್ರತಿನಿತ್ಯ ಕುದುರೆ ಏರಿ ಎಲ್ಲಾ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು, ಇದನ್ನು ಕೆಟ್ಟ ಶಕುನವೆಂದು ಪರಿಗಣಿಸದಂತೆ ಜನರನ್ನು ತಡೆಯುತ್ತಾರೆ ಮತ್ತು ಕೆಲಸವನ್ನು ಮುಂದುವರಿಸುವಂತೆ ಹೇಳಿದರು. ನಂತರ ಸೈನ್ಯವು ಬಾವಿಯನ್ನು ವಿರೋಧಿಸಿತು ಏಕೆಂದರೆ ಬಾವಿಯು ತಮ್ಮ ಈಜುಕೊಳದಿಂದ ನೀರನ್ನು ತಿರುಗಿಸುತ್ತದೆ (ಸುಮಾರು ಅರ್ಧ ಮೈಲಿ ದೂರ!) ಗಂಗಾಧರರಾವ್ ಅವರು ಕಾಂಗ್ರೆಸ್ ಅಧಿವೇಶನದ ನಂತರ ಮತ್ತೆ ಬಾವಿಯನ್ನು ತುಂಬಿಸಲಾಗುವುದು ಎಂದು ಭರವಸೆ ನೀಡಿದರು.
ಮೊಹಮ್ಮದ್ ಅಲಿ ೧೯೨೪ ರ ಬೆಳಗಾವಿ ಅಧಿವೇಶನದ ಪಂಡಲ್ಗೆ ಹೋಗುವ ದಾರಿಯಲ್ಲಿ ಕೊನೆಗೆ ಹೆಸರಾಂತ ಬಾವಿ ಸಿದ್ಧವಾಯಿತು. ೫೦x೫೦ ಚೌರಸ ಫೂಟು ವಿಸ್ತೀರ್ಣದ ಸುಮಾರು ೪೦ ಅಡಿ ಆಳದ ಒಂದು ದೊಡ್ಡ ಭಾವಿಯನ್ನು ತೋಡಿಸಿ ನಿರಂತರ ಅನಿರ್ಬಂಧ ನೀರು ಪೂರೈಕೆಯಾಗುವಂತೆ ಕ್ರಮಗಳನ್ನು ಕೈಕೊಳ್ಳಲಾಯಿತು. ಸುದೈವದಿಂದ ಅದಕ್ಕೆ ಸಾಕಷ್ಟು  ನೀರು ಬಿತ್ತು,  ನೀರಿನ ಸಲುವಾಗಿ ದೊಡ್ಡದೊದು  ಪಂಪುಹಚ್ಚಿ  ಎಲ್ಲ ಕಡೆಗೂ ನೀರು ಬರುವಂತೆ ವ್ಯವಸ್ಥೆ ಮಾಡಲಾಯಿತ್ತು. ಬಾವಿಯಲ್ಲಿ ಸ್ಟೀಮ್ ಪಂಪಗಳನ್ನು ಜೋಡಣೆ ಮಾಡಿ ೩೦ ಸಾವಿರ ಗ್ಯಾಲನ್ ಸಂಗ್ರಹ ಸಾಮರ್ಥ್ಯದ ಟ್ಯಾಂಕ್‌ಗಳಲ್ಲಿ ಆ ನೀರನ್ನು ಸಂಗ್ರಹಿಸಿ ಕಾಂಗ್ರೆಸ್ ಅಧಿವೇಶನದ ಮಹಾಧಿವೇಶನದ ಸ್ಥಳ ವಿಜಯನಗರದಾದ್ಯಂತ ನಲ್ಲಿಗಳ ಮೂಲಕ ನೀರನ್ನು ಪೂರೈಸಲಾಗಿತ್ತು. ಈ ಬಾವಿಗೆ ‘ಪಂಪ ಸರೋವರ’ ಎಂದು ಹೆಸರಿಡಲಾಗಿತು. ಒರಟಾದ ಗ್ರಾನೈಟ್ನಿಂದ ನಿರ್ಮಿಸಲಾದ ಇದು ನೀರನ್ನು ಎಳೆಯಲು ಮತ್ತು ಅಂತಿಮ ಬಳಕೆದಾರರ ಬಿಂದುಗಳಿಗೆ ಸ್ಲೂಸ್(ರಭಸವಾಗಿ ನೀರಿನ ಸುರಿತ) ಮಾಡಲು ೧೦ ಕಮಾನುಗಳನ್ನು ಹೊಂದಿತ್ತು. ಜನರ ಬಾಯಾರಿಕೆ ನೀಗಿಸಲು ಅಧಿವೇಶನ ಸಂದರ್ಭದಲ್ಲಿ ನಿರ್ಮಾಣವಾದ ಪಂಪ ಸರೋವರ(ಕಾಂಗ್ರೆಸ್ ಭಾವಿ)ದ ವೆಚ್ಚ ಒಟ್ಟು ವೆಚ್ಚ ರೂ. ೪,೩೭೦ ಮತ್ತು ೩ ಆಣೆಗಳು ಆಗಿತ್ತು. ಪೈಪ್ಲೈನ್ಗಳಿಗೆ ರೂ. ೯೨೯೩ ಮತ್ತು ೩ ಪೈಗಳು. ಅದುವೇ ಈಗಲೂ ಇರುವ ಕಾಂಗ್ರೆಸ್ ಭಾವಿ. ಅಂದಿನಿಂದ ಇಂದಿನ ವರೆಗೂ ಈ ಭಾವಿ ಬತ್ತಿದ ನಿದರ್ಶನಗಳೇ ಇಲ್ಲ. ಆ ಬಾವಿ ಇನ್ನೂ ಇದೆ. ಅದನ್ನು ಚೆನ್ನಾಗಿ ಕಟ್ಟಿ ಈಸುವ ಭಾವಿಯನ್ನು ಮಾಡಿದ್ದಾರೆ.
೧೨). ಆರೋಗ್ಯ ರಕ್ಷಣೆ ಹಾಗೂ ನೈರ್ಮಲ್ಯ ವ್ಯವಸ್ಥೆ (ಬ್ರಾಹ್ಮಣ ಹುಡುಗರ ಭಂಗೀ ಕೆಲಸ):
ಹಿಂದಿನ ಆನೇಕ ವರ್ಷಗಳಲ್ಲಿಯಂತೆ ಕಕ್ಕಸ ಮಾಡುವುದಕ್ಕಾಗಿ ತಗ್ಗು, ಇಂಗು ಬಚ್ಚಲ ಇಂಗು ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಸೈಟ್ ಅನ್ನು ನಿರ್ಮಲವಾಗಿಡಲು ನೈರ್ಮಲ್ಯ ಸಮಿತಿಯು ಮಾಡಿದ ವ್ಯವಸ್ಥೆಗಳು ವಿಶೇಷವಾಗಿ ಆಕರ್ಷಕವಾಗಿವೆ. ಶೂಚಕೂಪ ಹಾಗೂ ಸ್ವಚ್ಛತೆಯ ವ್ಯವಸ್ಥೆಯನ್ನು ಕಾಕಾಸಾಹೇಬ ಕಾಲೇಲಕರರು ವಹಿಸಿಕೊಂಡಿದ್ದರು. ಐದುಕೊಂಡಿದ್ದರು. ಕಾಕಾಸಾಹೇಬ ಕಾಲೇಲಕರರು ಹತ್ತಿರದ ಶಹಪೂರದವರು. ಅವರು ಒಂದು ಕರಾರು ಹಾಕಿದರು : “ಭಂಗಿ ಕೆಲಸ ಕೀಳು ಕೆಲಸ, ಅದನ್ನು ಮಾಡುವವರು ಅಸ್ಪೃಶ್ಯರು ಎಂದು ಇವತ್ತು ಸಮಾಜದಲ್ಲಿ ತಿಳಿವಳಿಕೆ ಇದೆ. ಹೋಗಲಾಡಿಸಬೇಕಾದರೆ ಉಚ್ಚವರ್ಣದವರೆಂದು ಹೇಳಿಸಿ ಕೊಳ್ಳುವ ಬ್ರಾಹ್ಮಣ ತರುಣರೇ ಈ ಕೆಲಸಕ್ಕೆ ಸ್ವಯಂಸೇವಕರಾಗಿ ಬರಬೇಕು” ಎಂದು ಹೇಳಿದರು. ಸುಮಾರು ೭೫ ಜನ ಬ್ರಾಹ್ಮಣರು ನಗುಮೊಗದಿಂದ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಭಂಗಿಗಳೊಂದಿಗೆ ಭುಜಗಳನ್ನು ಉಜ್ಜಿದರು. ನಗರ ಪಾಲಿಕೆ ಸಬ್ಬಂದಿ ಹಾಗೂ ಸೇವಾ ಸಮರ್ಪಿತ ಸ್ವಯಂ ಸೇವಕರುಗಳು ಶ್ರೀ.ಡಿ.ಬಿ.ಕಾಲೇಲಕರ ಮತ್ತು ಶ್ರೀ ವಾಮನರಾವ ದೇಸಾಯಿ ಬಿದರಿ ಮೇಲ್ವಿಚಾರಣೆಯಲ್ಲಿ ಕಕ್ಕಸುಗಳನ್ನು ಸ್ವಚ್ಛ ಮಾಡುವ ಸೇವೆ ಸಲ್ಲಿಸಿದರು. ಸೇವಾ ಸಮರ್ಪಿತ ಸ್ವಯಂ ಸೇವಕರವರಾದುದರಿಂದ ಕಕ್ಕಸುಗಳ ಚರಂಡಿ, ಬಚ್ಚಲು ನಿರ್ಮಲೀಕರಣ ವ್ಯಯಸ್ಥಿತವಾಗಿ ನಡೆಯುತ್ತಿತ್ತು ಸ್ವಯಂ ಸೇವಕರು ಕೆಲಸದಲ್ಲಿ ತೊಡಗಿಸಿಕೊಳ್ಳದಿದ್ದಲ್ಲಿ ಇದು ಅಶಕ್ಯವೇ ಆಗುತ್ತಿದ್ದು. ಈ ರೀತಿ ಈ ಕೆಲಸಕ್ಕೆ ಬ್ರಾಹ್ಮಣರ ತರುಣರೇ ಸ್ವಯಂಸೇವಕರಾಗಿ ಬಂದರು ಮತ್ತು ಮನಃಪೂರ್ವಕ  ಭಂಗಿ ಕೆಲಸ ಮಾಡಿ ಗಾಂಧೀಜಿಯ ಪ್ರೀತಿಗೆ ಪಾತ್ರರಾದರು.
೧೩). ವಿದ್ಯುದ್ದೀಪಗಳ ವ್ಯವಸ್ಥೆ :
ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ವಿದ್ಯುದ್ದೀಪಗಳ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಸ್ವದೇಶೀ ಹಾಗೂ ಕೈಗಾರಿಕ ಪ್ರದರ್ಶನಕ್ಕೆ ವಿದ್ಯುದ್ದೀಪಗಳ ವಿಶೇಷ ನಿಯೋಜನೆ ಮಾಡಲಾಗಿತು. ಮತ್ತು ಮುಖ್ಯ ಸಭಾ ಮಂಟಪ, ವಿಜಯ ನಿಯಾಮಿಕ ಸಮಿತಿ, ಸಭಾಗೃಹ, ವಿವಿದ ಕಾರ್ಯಾಲಯ, ಸ್ವಯಂಸೇವಕರ ಬಿಡಾರ, ಸರ್ವಾಧ್ಯಕ್ಷರ ವಸತಿ ಇವುಗಳಿಗೆ ವಿದ್ಯುದ್ದೀಪಗಳನ್ನು ಓದಗಿಸಲಾಗಿತ್ತು. ಸರ್ವಾಧ್ಯಕ್ಷರ ವಸತಿಯಲ್ಲಿ ಪೆಟ್ರೋಮ್ಯಾಕ್ಸ್ ದೀಪಗಳನ್ನು ಸಹ ಇರಿಸಲಾಗಿತ್ತು. ಅಡುಗೆ ಮನೆ, ಭೋಜನಾಲಯ, ಇವುಗಳಲ್ಲಿ ಹಾಗೂ ಬೀದಿಗಳಿಗುಂಟ ವಿದ್ಯುದ್ದೀಪ ಹಾಗೂ ಪೆಟ್ರೋಮ್ಯಾಕ್ಸ್ ದೀಪಗಳನ್ನು ವ್ಯವಸ್ಥೆಗೊಳಿಸಲಾಗಿತ್ತು. ಸಾರ್ವಜನಿಕ ಸಂದಣಿಯ ಸ್ಥಳಗಳಲ್ಲಿ ಕಿಟ್ಸನ್ ಲೈಟ್ಸ, ಪ್ರತಿನಿಧಿಗಳಿರುವೆಡೆಯಲ್ಲಿ ಡಿಯೆಟ್ಜ ಲಾಂದ್ರ, ಲ್ಯಾಂಪ್ ಗಳನ್ನಿರಿಸಲಾಗಿತ್ತು.
೧೪). ಸ್ವಯಂಸೇವಕರ ಕಾರ್ಯ:
ಬೆಳಗಾವಿ ಕಾಂಗ್ರೆಸ್ಸಿನ ಒಂದು ವಿಶೇಷವೇಂದರೆ ಸ್ವಯಂಸೇವಕರ ಸಂಘಟನೆ. ಡಾ|| ನಾರಾಯಣ ಸುಬ್ಬರಾವ ಹರ್ಡಿಕರರಿಗೆ ಕಾಂಗ್ರೆಸ್ಸಿನ ವ್ಯವಸ್ಥೆಯ ಕೆಲಸವನ್ನು ನೀಡಲಾಗಿತ್ತಷ್ಟೆ ! ಈ ಕೆಲಸ ಅಷ್ಟೊಂದು ಸುಲಭವಾಗಿರಲಿಲ್ಲ. ಪೊಲೀಸರ ಸಹಾಯವಿಲ್ಲದೆ ಸ್ವಯಂಸೇವಕರಿಂದಲೇ ಶಿಸ್ತಿನಿಂದ ಕೆಲಸ ಮಾಡಿಸಿಕೊಳ್ಳಬೇಕಾಗಿತ್ತು. ಲಕ್ಷಾವಧಿ ಜನರ ಗದ್ದಲವನ್ನು ನಿಯಂತ್ರಿಸಬೇಕಾಗುತ್ತಿತ್ತು. ಈ ಕಾರ್ಯಕ್ಕೆ ಕನಿಷ್ಟ ೨-೩ ಸಾವಿರ ಸ್ವಯಂಸೇವಕರು ಬೇಕಾಗಬಹುದೆಂದು ಅಂದಾಜು ಮಾಡಲಾಗಿದ್ದು. ತರಬೇತಿ ಹೊಂದಿದ ಆಗುಂತಕ ಸ್ವಯಂಸೇವಕರಿಂದ ಈ ಕಾರ್ಯ ಆಗದೆಂದು ಅವರಿಗೆ ಗೊತ್ತು. ಆದ್ದರಿಂದ ಅವರು ಕಾಂಗ್ರೇಸ್ ಸೇರುವುದಕ್ಕಿಂತ ಆರು ತಿಂಗಳು ಮೊದಲೇ ರಾಜ್ಯದಲ್ಲಿ ಬೇರೆ ಬೇರೆ ಕಡೆಗೆ ಶಿಬಿರಗಳನ್ನು ತೆರೆದು ಸ್ವಯಂಸೇವಕರಿಗೆ ತರಬೇತಿ ಕೊಡುವ ಕಾರ್ಯ ಕೈಕೊಂಡರು. ಏಪ್ರಿಲ್ ತಿಂಗಳ ಆರಂಭದಲ್ಲೇ ಡಾ|| ನಾರಾಯಣ ಸುಬ್ಬರಾವ ಹರ್ಡೀಕರ ಇವರು ಕಾಂಗ್ರೆಸ್ ಅಧಿವೇಶನಕ್ಕಾಗಿಯೇ ಸ್ವಯಂಸೇವಕರನ್ನು ತರಬೇತುಗೊಳಿಸುವುದನ್ನು ಕೈಗೊಂಡರು. ಹಣದ ಕೊರತೆ ಕಾರಣದಿಂದಾಗಿ ಈ ಯೋಜನೆ ಅಂಶಿಕವಾಗಿ ಕಾರ್ಯಗತಗೊಂಡಿತ್ತು. ಸ್ವಯಂಸೇವಕರ ಒಟ್ಟು ಸಂಖ್ಯೆ ೧೧೫೬, ಅವರಲ್ಲಿ ೮೧೭ ಸಹಾಯಕರು, ೧೪೧ ಸಹಾಯಕಿಯರಿದ್ದರು. ೧೯೮ ಸ್ಕೌಟ್ಸಗಳ ಸೇವೆ ಪಡೆಯಲಾಯಿತು. ಇವರೆಲ್ಲರೂ ಕರ್ನಾಟಕದ ವಿವಿಧ ಸ್ಥಳಗಳಲ್ಲಿಂದ, ಆಂಧ್ರ, ಮಹಾರಾಷ್ಟ್ರ ಹಾಗೂ ಮುಂಬಯಿ ಪ್ರಾಂತಗಳಿಂದ ಬಂದ ಕನ್ನಡಿಗರಾಗಿದ್ದರು. ಇವರಲ್ಲಯ ೩೫೪ ಸಹಾಯಕರು, ಸ್ವಯಂ ಸೇವಕರ ಪೂರ್ಣಾವಧಿ ತರಬೇತಿ ಶಿಬಿರಗಳಲ್ಲಿ ಇದ್ದು ತರಬೇತಿ ಪಡೆದುಕೊಂಡವರಿದ್ದರು. ಅಧಿವೇಶನಕ್ಕೋಸ್ಕರವೇ ತರಬೇಕಾಗಿದ್ದರು. ಹೀಗೆ ಕ್ರಮ ಬದ್ದ ತರಬೇತಿ ಪಡೆದ ಅನೇಕರು ಬೇರೆ ಬೇರೆ ಸ್ವಯಂ ಸೇವಕರಿಗೆ ತರಬೇತಿ ವರ್ಗಗಳನ್ನು ನಡೆಸಿ ತರಬೇತಿ ನೀಡಿದ್ದರು. ಜನ ಸಂದಣಿಯ ನಿಯಂತ್ರಣ, ಶಾಂತಿ ಪಾಲನೆ, ರಸ್ತೆ ಸಾರಿಗೆ ನಿಯಂತ್ರಣ, ರಾತ್ರಿಯಲ್ಲಿ ಪಹರೆ, ಅಧಿವೇಕನುದ್ದಕ್ಕೂ ಕಾವಲು ಹಾಗೂ ಶಾಂತಿ ಪಾಲನೆ ಮೊದಲಾದ ಕರ್ತವ್ಯಗಳಲ್ಲಿ ಅವರು ಸದಾ  ತತ್ಪರರಾಗಿರುತ್ತಿದ್ದರು. ಸಮರ್ಥ ನಾಯಕರ ನೇತೃತ್ವದಲ್ಲಿ ಅತ್ಯುತ್ತಮ ರೀತಿಯಿಂದ ಕಾರ್ಯ ನಿರ್ವಿಹಿಸದರು. ಆದರಿಂದ ಅವರ ಕಾರ್ಯವ್ಯವಸ್ಥಿತವಾಗಿ ನಡೆಯಿತು. ಸ್ವಯಂಸೇವಕರ ಶಿಬಿರ, ಸ್ವಯಂಸೇವಕರ ಶಿಸ್ತು, ಅವರ ಕಾರ್ಯ ಮುಂತಾದ್ದನ್ನು ನೋಡಿದರೆ ಅದೊಂದು ರಾಷ್ಟೀಯ ಸೈನ್ಯ ಬೀಡುಬಿಟ್ಟಂತೆ ಕಾಣುತ್ತಿತ್ತು. ಡಾ|| ಹರ್ಡಿಕರರು ಅದರ ಮಹಾ ದಂಡನಾಯಕರಂತೆ ಕಾಣುತ್ತಿದ್ದರು. ಅವರೂ ಅವರ ಸ್ವಯಂಸೇವಕರೂ ತಮ್ಮ ಶಿಸ್ತಿನ ಕೆಲಸದಿಂದ ಗಾಂಧೀಜಿಯವರ ಮನ್ನಣೆಯನ್ನು ಪಡೆದರು.
೧೫). ಕಾಂಗ್ರೆಸ್ ರಾಷ್ಟ್ರಧ್ವಜ :
ವಿಶಾಲವಾದ ಚೌಕೋನಾಕೃತಿಯ ಶಿಬಿರದಲ್ಲಿ ಸ್ವಯಂ ಸೇವಕರಿಗೆ ವಸತಿಯ ಏರ್ಪಾಡು ಮಾಡಲಾಗಿತ್ತು. ಮಧ್ಯದಲ್ಲಿ ಸೇನಾಪತಿಗೆ ಟೆಂಟ್ ನಿರ್ಮಿಸಲಾಗಿತ್ತು. ಈ ಶಿಬಿರಕ್ಕೆ ಹೊಂದಿಯೇ ವಿಶಾಲವಾದ ಬಯಲಿನಲ್ಲಿ ಎತ್ತರವಾದ ಧ್ವಜ ಸ್ಥಂಭ ನಿಲ್ಲಿಸಿ ಮೇಲ್ಗಡೆ ಶುದ್ದ ಖಾದಿಯ ಚರಖಾ ಸಹಿತ ಕಾಂಗ್ರೆಸ್ ರಾಷ್ಟ್ರ ಧ್ವಜವನ್ನು ಪ್ರತಿದಿನವೂ ಕಲಾಪಗಳ ಆರಂಭಕ್ಕೆ ಮೊದಲು ಆರೋಹಿಸಲಾಗುತ್ತಿತ್ತು. ನಂತರ ವಂದನೆ ಸಲ್ಲಿಸಲಾಗುತ್ತಿತ್ತು. ಸಂಜೆ ಮತ್ತೊಮ್ಮೆ ವಂದನೆ ಸಲ್ಲಿಸಿ ಧ್ವಜಾರೋಹಣ ಮಾಡಲಾಗುತ್ತಿತ್ತು. ಧ್ವಜಾರೋಹಣ ಹಾಗೂ ಅವರೋಹಣ ಸಂದರ್ಭದಲ್ಲಿ ಖಾಕಿ ಅರ್ಧ ಚಣ್ಣ, ಬಿಳಿ ಅಂಗಿ ಈ ಗಣವೇಷಧಾರಿ ಸ್ವಯಂ ಸೇವಕರು, ಸಹಾಯಕರು ಅದೇ ರೀತಿ ತ್ರಿವರ್ಣದ ಅಂಚುಳ್ಳ ಕಪ್ಪು ಸೀರೆಗಳನ್ನುಟ್ಟ ಸ್ವಯಂಸೇವಿಕೆ, ಸಹಾಯಕರು, ಸ್ವಾರ್ಥಗಳನ್ನು ತೊಟ್ಟ ಸೌಟು ಬಾಲಕರು ಬಾಲಿಕೆಯರು ರಾಷ್ಟ್ರಧ್ವಜಕ್ಕೆ ಪ್ರಣಾಮ ಸಲ್ಲಿಸುತ್ತಿದ್ದರು. ಅಶ್ವಾರೋಹಿ ಸ್ವಯಂ ಸೇವಕ ಗಣ್ಯರು ಆಕರ್ಷಿಸುತ್ತಿದ್ದರು. ಪ್ರತಿ ದಿನ ಬೆಳಿಗ್ಗೆ ನಡೆಯುತ್ತಿದ್ದ ರಾಷ್ಟ್ರಧ್ವಜರೋಹಣ ಹಾಗೂ ಸಂಜೆಯಲ್ಲಿಯ ಧ್ವಜಾವತರಣ ಕಾಂಗ್ರೆಸ್ ಸ್ವಯಂ ಸೇವಕರ ಇತಿಹಾಸದಲ್ಲೇ ವಿನೂತನ ಉತ್ಸಾಹಪೂರ್ಣ ಸಮಾರಂಭವಾಗಿತ್ತು.
೧೬). ಸ್ವದೇಶೀ ವಸ್ತು ಪ್ರದರ್ಶನ :
ಸ್ವದೇಶೀ ವಸ್ತು ಪ್ರದರ್ಶನವನ್ನು ೩೫೦×೨೦೦ ಚೌರಸ ಫೂಟುಗಳ ವಿಶೇಷ ಟೆಂಟಿನಲ್ಲಿ ಏಪಾಡಿಸಲಾಗಿತ್ತು.
ಅ) ವಸ್ತು ಸಂಗ್ರಹಾಲಯ ಮ್ಯೂಜಿಯಂ (ಬ) ಪ್ರಾತ್ಯಕ್ಷಿಕೆ (ಕ) ವ್ಯಾಪಾರ (ಡ) ಆಯುರ್ವೇದಿಯ ಹೀಗೆ ನಾಲ್ಕು ವಿಭಾಗಗಳನ್ನು ಅದು ಹೊಂದಿತ್ತು.
ಅ) ವಸ್ತು ಸಂಗ್ರಹಾಲಯದಲ್ಲಿ ವಿವಿಧ ಭಾರತೀಯ ಕಲೆ ಹಾಗೂ ಕೈಗಾರಿಕೆ ವಸ್ತುಗಳನ್ನು ಪ್ರದರ್ಶಿಸಲು ಅನುವು ಮಾಡಿಕೊಡಲಾಗಿತ್ತು. ಕೃಷಿಗೆ ಸಂಬAಧಿಸಿದ ಸುಂದರವಾದ ಅನೇಕ ವಸ್ತುಗಳನ್ನು ವಿವಿಧ ಕೈಗಾರಿಕೋತ್ಪನ್ನಗಳನ್ನು ಮೈಸೂರ ಸರಕಾರ ಪ್ರದರ್ಶಿಸಿ ಸಂಸ್ಥಾನದಲ್ಲಿಯ ಉದ್ದಿಮೆ ಚಟುವಟಿಕೆಗಳ ವಿಕಾಸವನ್ನು ಬಿಂಬಿಸಲು ಯತ್ನಿಸಿತ್ತು.
ಬ) ಪ್ರಾತ್ಯಕ್ಷಿಕೆ ವಿಭಾಗದಲ್ಲಿ ಅರಳಿಯ ಜನ್ನಿಂಗ ಮೊದಲಗೊಂಡು ಚರ್ಖಾದ ಮೇಲೆ ನೂಲುವಿಕೆ, ಕೈ ನೂಲಿನಿಂದ ಕೈಮಗ್ಗದಲ್ಲಿ ಬಟ್ಟೆ ನೇಯುವುದನ್ನು ತೋರಿಸಲಾಗಿತ್ತು.
ಕ) ಭಾರತದ ಉದ್ದಿಮೆ ಕೈಗಾರಿಕೆಗಳಿಂದ ಉತ್ಪಾದಿತವಾದ ಹಲವಾರು ವಸ್ತುಗಳನ್ನು ಮಾರಾಟ ವಿಭಾಗದಲ್ಲಿ ಮಾರಲಾಗುತ್ತಿತ್ತು.
ಡ) ಆಯುರ್ವೇದಿಯ ವಿಭಾಗದಲ್ಲಿ ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಗಿಡಮೂಲಿಕೆಗಳಿಂದ ಸಿದ್ಧಪಡಿಸಲಾದ ಔಷಧಿಗಳನ್ನು ಚಿಕಿತ್ಸಾ ಕ್ರಮಗಳನ್ನು ಪ್ರದರ್ಶಿಸಲಾಗಿತ್ತಲ್ಲದೇ ಆಯುರ್ವೇದಿಯ ಚಿಕಿತ್ಸೆ ನೀಡಲಾಗುತ್ತಿತ್ತು.
೧೭). ಇತರ ಸಂಘ ಸಂಸ್ಥೆಗಳ ಸಹಕಾರ:
ಎಂ. ಆರ್. ಕೆಂಭಾವಿ ಪ್ರಧಾನ ಕಾರ್ಯದರ್ಶಿ (ಬೆಳಗಾವಿ ೨೦ ಮೇ ೧೯೨೫) “ಕಾಂಗ್ರೆಸ್ ಅಧಿವೇಶನದ ಸ್ಥಳದ ಬಳಿ ಒಂದು ತಾತ್ತೂರ್ತಿಕ ರೈಲು ನಿಲ್ದಾಣ ಸ್ಥಾಪಿಸುವಂತೆ ಸ್ವಾಗತ ಸಮಿತಿ ಕೇಳಿಕೊಂಡಿದ್ದಕ್ಕೆ ಮದ್ರಾಸ ಹಾಗೂ ಸದರ್ನ್ ಮರಾಠಾ ಎಂ ಮತ್ತು ಎಸ್.ಎಂ. ರೇಲ್ವೆ ಸಮ್ಮತಿಸಿ ವಿಜಯನಗರ ರೈಲು ನಿಲ್ದಾಣ ಸ್ಥಾಪಿಸಲು ನೆರವಾಯಿತು. ಇಷ್ಟೇ ಅಲ್ಲದೇ ಸ್ವಾಗತ ಸಮಿತಿಗೆ ಎಲ್ಲ ರೀತಿಯಿಂದ ಸಹಕರಿಸುವ ಭರವಸೆ ನೀಡಿತು. ಕೊನೆಯದಾಗಿ ಅಂದರೆ ಅತಿ ಮಹತ್ವದ ವಿಷಯವೆಂದರೆ ಉತ್ಸಾಹಪೂರ್ಣ ಸಹಕಾರ ನೀಡಿದ ಬೆಳಗಾವಿ ನಗರ ಪಾಲಿಕೆ ಹಾಗೂ ಅದರ ಅಧಿಕಾರಿಗಳಿಗೆ ನಾವು ಚಿರಋಣಿ ಎಂದು ಹೇಳಬಯಸುವದಾಗಿದೆ. ಅವರಿಗೆ ನಮ್ಮ ಹೃತ್ತೂರ್ವಕ ಧನ್ಯವಾದಗಳು. ಇವರೆಲ್ಲರ ಸಹಾಯ ಸಹಕಾರಗಳಿಲ್ಲದೇ ಹೋಗಿದ್ದರೆ ನಾವು ಇಷ್ಟೊಂದು ಮಹಾಸಾಧನೆಗೈಯ್ಯುತ್ತಿರಲೇ ಇಲ್ಲ. ಇವರೆಲ್ಲರುಗಳಿಗೆ ಸ್ವಾಗತ ಸಮಿತಿಯ ಹೃತ್ತೂರ್ವಕ ಕೃತಜ್ಞತೆಗಳು, ಬೆಳಗಾವಿಯಲ್ಲಿ ಕಾಂಗ್ರೆಸ್ಸಿನ ಸಂವಿಧಾನಕ್ಕೆ ಮಾಡಲಾದ ತಿದ್ದುಪಡಿ ಕೈ ಸೇರಬೇಕಾದುದರಿಂದ ಈ ವರದಿಯನ್ನು ದಿನಾಂಕ ೨೮ ಎಪ್ರಿಲï ೧೯೨೫ ಮೊದಲು ಸಲ್ಲಿಸಲು ಸಾಧ್ಯವಾಗದ್ದಕ್ಕೆ ಕ್ಷಮೆ ಕೋರುತ್ತೇವೆ. ನಮ್ಮ ನಿಯಂತ್ರಣಕ್ಕೆ ಮೀರಿದ ಹಲವಾರು ಕಾರಣಗಳಿಂದಾಗಿ ಆಗಿರುವ ಈ ವಿಳಂಬಕ್ಕೆ ನಾವು ವಿಷಾದಿಸುತ್ತೇವೆ.¨ಎಂದು ಹೇಳಿದರು.
ಅಧಿವೇಶನದಲ್ಲಿ ತೆಗೆದುಕೊಂಡ ನಿರ್ಣಯಗಳು:
೧) ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ‍್ಯ ಹೋರಾಟ ನಡೆಸಬೇಕು. ದೇಶದ ಜನ ಹಿಂಸೆಯ ಮಾರ್ಗ ತುಳಿಯಬಾರದು.
೨) ಅಸಹಕಾರ ಚಳವಳಿಯ ಮೂಲಕ ಬ್ರಿಟಿಷರು ದೇಶ ಬಿಟ್ಟು ತೊಡಗುವಂತೆ ಮಾಡಬೇಕು ಎಂದು ಗಾಂಧೀಜಿಯವರು ಈ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದರು.
೩) ದೇಶದ ಜನರಲ್ಲಿ ಒಗ್ಗಟ್ಟಿಗಾಗಿ, ಸ್ಥಳೀಯ ಭಾಷೆಯ ಮಹತ್ವ ಹಾಗೂ ಪ್ರಾದೇಶಿಕ ಪ್ರಾಂತ್ಯಗಳ ನಿರ್ಮಾಣ.
೪) ಅಸ್ಪೃಶ್ಯತೆಯ ನಿವಾರಣೆಗಾಗಿ ಸಾಮಾಜಿಕ ಕಾರ್ಯಕ್ರಮಗಳು.
ಬೆಳಗಾವಿ ಕಾಂಗ್ರೇಸ್ಸಿನ ತಮ್ಮ ಸಂಸ್ಮರಣೆಯ ಬಗೆ ಗಾಂಧೀಜಿ ೧ನೇ ಜನೇವರಿ ೧೯೨೫ ನೇಇಸ್ವಿ ಯಂಗ್ ಇಂಡಿಯದಲ್ಲಿ ಈ ರೀತಿ ಬರೆಯುತ್ತಾರೆ :
“ಅನೇಕ ಸಂಸ್ಮರಣೆಗಳು ಅಭಿವ್ಯಕ್ತಿಗಾಗಿ ಹಾತೊರೆಯುತ್ತಿರುವಾಗ, ಅವುಗಳನ್ನು ಹೊರಪಡಿಸಬೇಕೆಂಬಾತನ ಬವಣೆ ಯಾರಿಗೂ ಬೇಡ, ಬೆಳಗಾವಿಯ ಸಂಸ್ಮರಣೆಗಳನ್ನು ಬರೆಯಲು ಕೈಯಲ್ಲಿ ಪೆನ್ಸಿಲ್ ತೆಗೆದುಕೊಂಡ ಕೂಡಲೇ ನನ್ನ ಪರಿಸ್ಥಿತಿಯ ಹಾಗೇ ಆಗಿದೆ. ಅಂತೂ ನಾನು ಪ್ರಯತ್ನಿಸುತ್ತೇನೆ.
ಗಂಗಾಧರರಾವ್ ದೇಶಪಾಂಡೆ ಮತ್ತು ಅವರ ಕಾರ್ಯಕರ್ತರ ತಂಡದವರು ಅತ್ಯುನ್ನತ ಮಟ್ಟಕ್ಕೆ ಮುಟ್ಟಿದರು. ಅವರ ವಿಜಯನಗರವು ಜಯಶೀಲವಾಯಿತು. ಆ ಜಯ ಇನ್ನೂ ಸ್ವರಾಜ್ಯದ್ದೆಲ್ಲ, ಆದರೆ ಅದು ನಿಶ್ಚಿತವಾಗಿಯೂ ಸಂಘಟನೆಯದು. ಪ್ರತಿಯೊಂದು ವಿವರವನ್ನೂ ಮೊದಲೇ ಚೆನ್ನಾಗಿ ವಿಚಾರ ಪೂರ್ವಕ ನಿರ್ಧರಿಸಲಾಗಿತ್ತು. ಡಾ|| ನಾರಾಯಣ ಸುಬ್ಬರಾವ ಹರ್ಡಿಕರ ಅವರ ಸ್ವಯಂಸೇವಕರು ಚುರುಕಾಗಿಯೂ ಕಾರ್ಯಧಕ್ಷರಾಗಿಯೂ ಇದ್ದರು. ಮಾರ್ಗಗಳು ಹರವಾಗಿಯೂ ಸ್ವಚ್ಛವಾಗಿಯೂ ಇದ್ದವು…….”
ಗಾಂಧೀಜಿಯವರ ಪ್ರಾರ್ಥನೆಯ ಕಾಲಕ್ಕೆ ಕನ್ನಡದಲ್ಲಿ ಪುರಂದರದಾಸರ ಹಾಡುಗಳನ್ನು ಹೇಳಲು ಉತ್ತಮ ಹಾಡು ಗಾರರ ವ್ಯವಸ್ಥೆ ಮಾಡಲಾಗಿತ್ತು. ಕರ್ನಾಟಕದ ಹಾಡುಗಾರಿಕೆ, ವೀಣಾವಾದನೆಗಳನ್ನು ಗಾಂಧೀಜಿ ಹಾಗೂ ಇತರ ಪ್ರತಿನಿಧಿಗಳಿಗೆ ಕೇಳಿಸುವುದಕ್ಕಾಗಿ ಮೈಸೂರಿನಿಂದ ಉತ್ತಮ ಸಂಗೀತಗಾರರನ್ನೂ ವೀಣೆಯ ಶೇಷಣ್ಣನವರು ಮುಂತಾದವರನ್ನೂ ಕರೆಸಲಾಗಿತ್ತು ಈ ವ್ಯವಸ್ಥೆಯನ್ನು ಕೃಷ್ಣರಾವ್ ಮುದುವೇಡಕರರುದು ಮಾಡಿದ್ದರು. ದಿವಾಕರು ಕರ್ನಾಟಕದಲ್ಲಿಯ ಐತಿಹಾಸಿಕ ಹಾಗೂ ಪ್ರೇಕ್ಷಣಿಯ ಸ್ಥಳ, ಕಲೆ ಮುಂತಾದ ಮಾಹಿತಿಯನ್ನೊಳಗಂಡ ಒಂದು ಕೈಪಿಡಿ ತಯಾರಿಸುವ ಕೆಲಸದಲ್ಲಿ ತೊಡಗಿದ್ದರು. ಈ ಕೆಲಸಕ್ಕೆ ಸಹಾಯಕರೆಂದು ಕೆ. ಸಂಪದ್ದಿರಿರಾವ್ ಮತ್ತು ಡಿ.ಕೆ.ಭರದ್ವಾಜರನ್ನು ಕರೆಯಿಸಿ ಈ ಕೆಲಸವನ್ನು ಹಗಲೂ-ರಾತ್ರಿ ಕುಳಿತು ಪರ‍್ತಿ ಮಾಡಿದರು. ಅದನ್ನು ಮುದ್ರಿಸಿ ಗಾಂಧೀಜಿಗೂ ಇತರೆ ಪ್ರತಿನಿಧಿಗಳಿಗೂ ಹಂಚಿದರು.
ಮೇಲೆ ಹೇಳಿದ ವ್ಯವಸ್ಥೆ ಸಾಮನ್ಯ ಪ್ರತಿನಿದಿಗಳ ಸಲುವಾಗಿ ಆಯಿತು. ಆದರೆ ಸರೋಜಿನಿದೇವಿ, ದಾಸ, ಮೋತಿಲಾಲ ನೆಹರು. ಅನಿಬೆಸಂಟ್ ಮೊದಲಾದ ಉಚ್ಚ ಅಂತಸ್ತಿನ ಮತ್ತು ಹಿರಿಯ ರಾಷ್ಟ್ರದ ನಾಯಕರ ವ್ಯವಸ್ಥೆ ಮಾಡುವದು ಅಷ್ಟು ಸುಲಭವಿರಲಿಲ್ಲ. ಪ್ರತಿಯೊಬ್ಬರಿಗೂ ಅವರು ಕೇಳಿದ ಹೊತ್ತಿಗೆ ಕೇಳಿದ ಸಾಮಾನು ಸಿದ್ದವಿರಬೇಕು. ಅದರಲ್ಲಿ ಸ್ವಲ್ಪವೂ ಹೆಚ್ಚು ಕಡಿಮೆ ಆಗಕೂಡದು. ಬೇರೆ ಬೇರೆ ಬಂಗಲೆಗಳನ್ನು ಹಿಡಿದು ಅಲ್ಲಿ ಬೇಕಾಗುವ ವ್ಯವಸ್ಥೆ ಮಾಡಲಾಗಿತ್ತು. ಯಾರಿಗೂ ಯಾವ ಕೊರತೆಯೂ ಆಗದಂತೆ ವ್ಯವಸ್ಥೆ ನೊಡಿ ಕೊಳಲು ಸಯಂಸೇವಕರನ್ನು ಇಡಲಾಯಿತ್ತು. ಈ ವಿಷಯದಲ್ಲಿ ಮಹದೇವಭಾಯಿ ದೇಸಾಯಿ ತಮ್ಮ ಬೆಳಗವಿ ಸಂಸ್ಮರಣೆಯಲ್ಲಿ ಬರೆಯತ್ತಾರೆ:-. “ಯಾರಿಗೂ ಯಾವ ಕೊರತೆಯೂ ಭಾಸವಾಗದಂತೆ ಆಗದಂತೆ ವ್ಯವಸ್ಥೆ ಮಾಡಲಾಗಿತ್ತು. ಶ್ರೀಮತಿ ಸರೋಜಿನಿ ದೇವಿಯವರಿಗೆ ವಿಶೇಸ ಅನುಕೂಲತೆಗಳನ್ನು ಮಾಡಲಾಗಿತ್ತು. ಡಾ|| ಅನಿಬೆಸಂಟ್, ದಾಸ, ಪಂಡಿ ಮೋತಿಲಾಲ ನೆಹರು  ಮುಂತಾದ ದುಬಾರಿ ಅಥಿತಿಗಳಿಗಾಗಿ  ಸುಂದರವಾದ ಅಲೇಷನ್ ವೈಭವಯಕ್ತ ಬಂಗಲೆಗಳನ್ನು ಸಿದ್ದಗೊಳಿಸಲಾಗಿತ್ತು. ಯಾರಿಗೂ ಯಾವುದರ ಕೊರತೆಯೂ ಭಾಸವಾಗಲಿಲ್ಲ.”
ಬೆಳಗಾವಿಯಲ್ಲಿ ಹಿಂದೂಮುಸಲ್ಮಾನ ಐಕ್ಕ ಸೌಹಾರ್ದಯುತವಾಗಿತ್ತು. ಅಲೀ ಬಂಧುಗಳ ವ್ಯವಸ್ಥೆಯನ್ನು ಖಿಲಾಫತ್ ಕಮಿಟಿಯವರು ಮಾಡಿದ್ದರು.
ವಸ್ತುಪ್ರದರ್ಶನವೂ ಸಹ ಬಹಳ ಸುಂದರವಾಗಿದ್ದಿತಲ್ಲದೆ ಬೋಧಪ್ರದವೂ ಆಗಿತ್ತು. ಆ ಕಾಲಕ್ಕೆ ಕೇವಲ ಖಾದಿ ಹಾಗು ಗ್ರಾಮೋದ್ಯೋಗ ವಸ್ತುಗಳ ಪ್ರದರ್ಶನವನ್ನೇ ಏರ್ಪಡಿಸಲಾಗುತ್ತಿತ್ತು. ಆದರೂ ಸಹ ಅದನ್ನು ನೋಡಿದವರು ನಮ್ಮ ವರು ಸಹ ಇಂಥ ಸುಂದರವಾದ ವಸ್ತುಗಳನ್ನು ಕೈಯಿಂದ ತಯಾರಿಸಬಲ್ಲರೇ ? ಎಂದು ಉದ್ಗಾರ ತೆಗೆಯುತ್ತಿದ್ದರು. ಬೆಳಗಾವಿ ಕಾಂಗ್ರೆಸ್ಸಿನ ನೆನಹುಗಳ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ.
ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ಸೇರುವ ದಿನ ಸಮಯದ ಮಹತ್ವ:
ಗಾಂಧೀಜಿಯವರು ಸಮಯಕ್ಕೆ ಕೊಡುತ್ತಿದ್ದ ಮಹತ್ವ ಎಲ್ಲರಿಗೂ ಗೊತ್ತಿದ್ದ ವಿಷಯ. ಆದರೆ ಅದು ಬೆಳಗಾವಿ ಕಾಂಗ್ರೆಸ್ಸಿನ ಕಾಲಕ್ಕೆ ಸ್ಪಷ್ಟ ವ್ಯಕ್ತವಾಯಿತು. ಕಾಂಗ್ರೆಸ್ ಅಧಿವೇಶನ ಸೇರುವ ದಿನ ಗಂಗಾಧರರಾಯರನ್ನು ಕರೆದು ಗಾಂಧೀಜಿ ಹೇಳಿದರು. ಭಾಷಣಗಳಲ್ಲಿ ವೇಳೆಕಳೆಯದೆ ಆದಷ್ಟು ಬೇಗ ಕೆಲಸ ಮುಗಿಸುವದು ತಮ್ಮ ಇಚ್ಛೆ ಎಂದು. ಅದಕ್ಕೆ ಗಂಗಾಧರರಾಯರೂ ಸಮ್ಮತಿಸಿದರು. ಬೆಳಗಾವಿ ಕಾಂಗ್ರೆಸ್ಸಿಗಿಂತ ಮೊದಲು ಯಾವ ಕಾಂಗ್ರೆಸ್ಸಿನ ಕಾರ್ಯಕಲಾಪಗಳೂ ಮೂರು ದಿನಗಳಿಗಿಂತ ಕಡಿಮೆ ಕಾಲದಲ್ಲಿ ಮುಗಿದಿರಲಿಲ್ಲ. ಕೆಲವು ೫-೬ ದಿನಗಳ ವರೆಗೂ ನಡೆದಿದ್ದವು. ಆದರೆ ಗಾಂಧೀಜಿಯವರು ಕಾಂಗ್ರೆಸ್ಸಿನ ಕಾರ್ಯಕಲಾಪವನ್ನು ವ್ಯವಸ್ಥಿತವಾಗಿ ಬೇಗನೆ ಹೇಗೆ ಮುಗಿಸಬೇಕೆಂಬುದನ್ನು ತೋರಿಸಿ ಕೊಟ್ಟರು. ಗಾಂಧೀಜಿ ಗಂಗಾಧರರಾಯರನ್ನು ಕೇಳಿದರು. “ನಿಮ್ಮ ಸ್ವಾಗತ ಭಾಷಣಕ್ಕೆ ಎಷ್ಟು ಸಮಯ ಹಿಡಿಯಬಹುದು?” ಎಂದು “ಸುಮಾರು ೧೫ ನಿಮಿಷ ಎಂದರು” ಗಂಗಾಧರರಾಯರು. ಗಾಂಧೀಜಿ ನಗುತ್ತಾ ಕೇಳಿದರು, “ಅದಕ್ಕಿಂತ ಕಡಿಮೆ ಸಮಯ ಸಾಕಾಗುವದಿಲ್ಲವೆ?” ಎಂದು, ಅದಕ್ಕೆ ಗಂಗಾಧರರಾಯರು, “ಪೂರ್ತಿ ಭಾಷಣವನ್ನು ಓದದೆ ಪ್ರಾಂತೀಯ ಭಾಷೆಯಲ್ಲಿ ಅದರ ಸಾರಾಂಶ ಹೇಳಿದರೆ ೫-೬ ನಿಮಿಷಗಳಲ್ಲಿ ಮುಗಿಯಬಹುದು” ಎಂದರು. ಗಾಂಧೀಜಿಗೆ ಈ ವಿಚಾರ ಬಹಳ ಹಿಡಿಸಿತು. “ಹಾಗೇ ಮಾಡಿರಿ. ನಿಮ್ಮ ಭಾಷಣವನ್ನು ಮುದ್ರಿಸಿ ಪ್ರತಿನಿಧಿಗಳಿಗೆ ಮುಂಚಿತವಾಗಿ ಉಚಿತವಾಗಿ ಹಂಚಿರಿ, ಇತರರಿಗೆ ಸಾಮಾನ್ಯ ಬೆಲೆಗೆ ಮಾರಾಟ ಮಾಡಿರಿ. ನನ್ನ ಭಾಷಣವನ್ನು ಮುದ್ರಿಸಿ ತಂದಿದ್ದೇನೆ, ಅದನ್ನೂ ಹಾಗೇ ಮಾಡಿರಿ”. ಎಂದು ಹೇಳಿದರು. ಅದರಂತೆ ಮಾಡಲಾಯಿತು. ಸ್ವಾಗತಗೀತೆಯನ್ನು ಸಹ ಅಧ್ಯಕ್ಷರು ಸಭೆಗೆ ಬರುವುದಕ್ಕಿಂತ ಮೊದಲೇ ಪ್ರಾರಂಭಿಸಿ ಅಧ್ಯಕ್ಷರು ಬಂದ ೧೦ ನಿಮಿಷದೊಳಗೆ ಅದನ್ನು ಮುಗಿಸಲಾಯಿತು. ಹಿಂದಿನ ಅಧ್ಯಕ್ಷರಾದ ಮಹಮ್ಮದಲ್ಲಿಯವರು ಗಾಂಧೀಜಿಗೆ ಚಾರ್ಜು ಕೊಟ್ಟ ಎರಡು ನಿಮಿಷದಲ್ಲಿ ತಮ್ಮ ಭಾಷಣವನ್ನು ಮುಗಿಸಿದರು. ಗಾಂಧೀಜಿಯವರು ಸಹ ತಮ್ಮ ಭಾಷಣವನ್ನು ಎರಡು ನಿಮಿಷದಲ್ಲಿ ಮುಗಿಸಿದರು. ಗಂಗಾದರರಾಯರು ೫ ನಿಮಿಷದಲ್ಲಿ ತಮ್ಮ ಸ್ವಾಗತ ಭಾಷಣವನ್ನು ಕನ್ನಡದಲ್ಲಿ ಹೇಳಿ ಮುಗಿಸಿದರು.
ಗಾಂಧೀಜಿಯವರ ಅಧ್ಯಕ್ಷ ಭಾಷಣಕ್ಕೆ ಮುಕ್ಕಾಲು ಗಂಟೆ ಹಿಡಿಯಿತು. ಇದಾದ ಕೂಡಲೇ ಅಧಿವೇಶನದ ಮುಂದೆ ಮುಖ್ಯ ಠರಾವು ಬಂತು. “ ಕಾಂಗ್ರೇಸ್ಸನ್ನು  ಸ್ವರಾಜ್ಯ ಪಕ್ಷದವರ ಕಡೆಗೆ ಕೊಡಬೇಕು. ಪಾಟ್ನಾದಲ್ಲಿ ಕಾರ್ಯಕಾರಿ ಸಮಿತಿಯಲ್ಲಿ ಸ್ವೀಕೃತವಾದ ಠರಾವಿನ ಸಾರಾಂಶ. ವಿಷಯ ನಿಯಾಮಕ ಸಮಿತಿಯಲ್ಲಿ ಕಾಂಗ್ರೇಸ್ಸಿನ ಮುಂದೆ ಬರುವ ವಿಷಯಗಳಲ್ಲಿ ಚರ್ಚೆಯಾಗಿ ತೀರ್ಮಾನಿಸಲ್ಪಟಿದ್ದರಿಂದ ವಿಶೇಷ ಚರ್ಚೆಯಾಗಲಿಲ್ಲ. ಠರಾವು ಇದ್ದಕ್ಕಿದ್ದಂತೆ ಸ್ವೀಕೃತವಾಯಿತು. ಮುಂದೆ ಒಂದೊಂದನ್ನಾಗಿ ವಿಷಯ ತೆಗೆದುಕೊಂಡು  ಮಹತ್ವದ ವಿಷಯ ಮುಗಿಸಲಾಯಿತ್ತು. “ ಮೊದಲನೆಯ ದಿವಸದ ಮಹತ್ವದ ಕೆಲಸಗಳು ಮುಗಿದಿದ್ದರಿಂದ ಎರಡನೆಯ ದಿವಸವೇ ಅಧಿವೇಶನ ಮುಗಿಯುವದು. ಇದರಿಂದ ಒಂದು ದಿವಸದ ತೀಕೆಟು ಮಾರಾಟ ಕಡಿಮೆಯಾಗಿ ಎಲ್ಲಿ ಹಾನಿಯಾಗುತ್ತಿದೆಯೋ” ಎಂದು ಸ್ವಾಗತ ಸಮಿತಿಯವರಿಗೆ ಭಯ ಉಂಟಾಯಿತು. ಇದ್ದನ್ನು ಗಾಂಧೀಜಿಯವರ ಕಿವಿಯಮೇಲೆ ಹಾಕಲಾಯಿತು. ಆದರೆ ಹಣದ ಸಲುವಾಗಿ ಒಂದು ದಿವಸ ಅಧೀವೇಶನ ಬೆಳೆಸುವದು ಗಾಂಧೀಜಿಯವರಿಗೆ ಸರಿಕಾಣಲಿಲ್ಲ. ಅವರ ಇಚ್ಛೆಯ ಪ್ರಕಾರ ಎರಡೇ ದಿವಸಗಳಲ್ಲಿ ಕಾಂಗ್ರೇಸ್ ಅಧಿವೇಶನ ಮುಗಿಯಿತು.
ಅನಿಬೆಸಂಟರು ಬೆಳಗಾವಿ ಕಾಂಗ್ರೇಸ್ಸಿಗೆ ಬಂದು ಮೂಲ ಠರಾವನ್ನು ವಿರೋಧಿಸಬೇಕೆಂದಿದ್ದರು. ಅವರಿಗೆ ಬರಲು ಒಂದು ದಿವಸ ತಡವಾಯಿತು. ಮುಖ್ಯ ಠರಾವು ಬಹಿರಂಗ ಅಧಿವೇಶನದ ಮುಂದೆ ಬರುವದಕ್ಕೆ ಎರಡು ಮೂರು ದಿನಗಳಾದರೂಬೇಕೆಂದು ಅವರ ಕಲ್ಪನೆ. ಮೊದಲನೆಯ ದಿವಸ ಠರಾವುಗಳು ಬರುವದು ಸಾಧ್ಯವೇ ಇಲ್ಲ. ಯಾಕಂದರೆ ಪ್ರತಿ ಕಾಂಗ್ರೆಸ್ಸಿನಲ್ಲಾಗುವAತೆ ಅವತ್ತು ಸ್ವಾಗತಾಧ್ಯಕ್ಷರ ಭಾಷಣ, ಅಧ್ಯಕ್ಷರ ಭಾಷಣ ಇವುಗಳಲ್ಲಿಯೇ ಸಮಯ ಹೋಗುತ್ತದೆ. ಠರಾವುಗಳು ಬರಬೇಕಾದರೆ ಮರುದಿನ ಅಥವಾ ಅದರ ಮರುದಿನ ಬರಬೇಕು-ಎಂದು ಅವರ ತಿಳಿವಳಿಕೆಯಾಗಿತ್ತು. ಆದರೆ ಮುಖ್ಯ ಠರಾವು ಮತ್ತು ಇತರ ಮಹತ್ವದ ವಿಷಯಗಳನ್ನು ಮೊದಲನೆಯ ದಿವಸವೇ ಮುಗಿಸಿ ಬಿಟ್ಟಿದ್ದರು. ಆನಿಬೆಸೆಂಟರನ್ನು ಕರೆತರಲು ಗಂಗಾಧರರಾಯರು ಸ್ಟೇಷನ್ ಹೋಗಿದ್ದರು. ಬೆಸೆಂಟಬಾಯಿಯವರು ಗಾಡಿಯಿಂದ ಇಳಿದ ಕೂಡಲೇ ಗಂಗಾಧರರಾಯರನ್ನು, “ಕಾಂಗ್ರೆಸ್ಸಿನ ಕಾರ್ಯಕಲಾಪ ಎಲ್ಲಿಗೆ ಬಂದಿದೆ” ಎಂದು ಕೇಳಿದರು. ಗಂಗಾಧರ ರಾಯರು, “ಮುಖ್ಯ ಠರಾವು ನಿನ್ನೆಯೇ ಸ್ವೀಕೃತವಾಗಿ ಹೋಗಿದೆ” ಎಂದು ಹೇಳಿದರು. ಇದರಿಂದ ಬೆಸೆಂಟಬಾಯಿಯವರಿಗೆ ನಿರಾಶೆಯಾಯಿತು. ಅವರು ಅದೇ ರಾತ್ರಿ ಗಾಡಿಗೆ ತಮ್ಮ ಸೀಟು ರಿಜರ್ವ ಮಾಡಿಸಿ ಹೊರಟುಹೋದರು. ಪ್ರತಿ ವರುಷದ ಕಾಂಗ್ರೆಸನಂತೆ ಎಲ್ಲ ಕೆಲಸಗಳೂ ನಿದಾನವಾಗಿ ಆಗಬಹುದೆಂದು ತಿಳಿದುಕೊಂಡವರು ಗಾಂಧೀಜಿಯವರ ಸಮಯದ ಶಿಸ್ತಿನಿಂದ ನಿರಾಶೆಹೊಂದಿದರು.
ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಲೆಕ್ಕ ಸರಿಯಾಗಿ ಒಪ್ಪಿಸಲಾಯಿತು:
ಕಾಂಗ್ರೆಸ್ ಅಧಿವೇಶನಕ್ಕೆ ಬಂದ ಪ್ರತಿನಿಧಿಗಳಿಂದ ಶುಲ್ಕ ತೆಗೆದುಕೊಳ್ಳಲಾಗುತ್ತದೆ. ಅದರಲ್ಲಿ ಒಂದು ಭಾಗದಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ ಕೊಡಬೇಕೆಂಬ ನಿಯಮವಿರುತ್ತದೆ. ಆದರೆ ಅನೇಕ ಕಾಂಗ್ರೆಸ್ ಕಮಿಟಿಗಳು ಈ ಹಣವನ್ನು ಸರಿಯಾಗಿ ಕೊಡುವದಿಲ್ಲ. ಕೊಟ್ಟರೂ ವರ್ಷಾರು ತಿಂಗಳ  ಮೇಲೆ ಕೊಡುತ್ತಾರೆ. ಆದರೆ ಬೆಳಗಾವಿ ಕಾಂಗ್ರೆಸ್ಸು ಮುಗಿದು ಕೊನೆಯ ದಿನವೇ ಪ್ರತಿನಿಧಿಗಳಿಂದ ಬಂದ ಶುಲ್ಕದ ಲೆಕ್ಕ ಮಾಡಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕೋಶಾಧ್ಯಕ್ಷರಾಗಿದ್ದರು. ಅವರು ಬೆಳಗಾವಿಯಿಂದ ಹೊರಡುವ ಕಾಲಕ್ಕೆ ಅವರ ಕೈಯಲ್ಲಿ ೮ ಸಾವಿರ ರೂಪಾಯಿಗಳ ಚೆಕ್ಕೊಂದನ್ನು ಗಂಗಾಧರರಾಯರು ಕೊಟ್ಟರು. ಇಷ್ಟು ದೊಡ್ಡ ಕಾಂಗ್ರೆಸ ಬೇಗನೆ ಇಷ್ಟು ವ್ಯವಸ್ಥಿತ ರೀತಿಯಿಂದ ಹಾಗೂ ಮಿತವ್ಯಯದಿಂದ ಅದದ್ದು ಇದೇ ಮೊದಲನೆಯದು. “ಇಷ್ಟು ಬೇಗನೆ ಲೆಕ್ಕ ಮಾಡಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ ಹಣ ಕೊಟ್ಟ ಕಾಂಗ್ರೆಸ್ ಸಹ ಇದೇ ವೊದಲನೆಯದು” ಎಂದು ಜಮನಲಾಲರು ಉದ್ಗಾರ ತೆಗೆದರು.
ಅದ್ಯಮೇ ಸಫಲಂ ಜನ್ಮ:
ಅಂತೂ ಬೆಳಗಾವಿ ಕಾಂಗ್ರೇಸ್ಸು ಯಶಸ್ವಿಯಾಗಿ ಮುಗಿಯಿತು. ಉದ್ವಿಗ್ನ ಮನಸ್ಸಿನಿಂದ ಬಂದ ಮುಖಂಡರೂ ಪ್ರತಿನಿಧಿಗಳು ಹರ್ಷಚಿತ್ತರಾಗಿ ಹಿಂದಿರುಗಿದರು. ಕರ್ನಾಟಕದ ಕಾರ್ಯಕರ್ತರಲ್ಲಿ ಹಾಗೂ ಮುಂದಾಳುಗಳಲ್ಲಿ ತಾವು ಕೃತಕೃತ್ಯರಾದೆವೆಂಬ ಭಾವನೆ ಬಂದುದು ಸ್ವಾಭಾವಿಕ. ಕಾಂಗ್ರೇಸ್ಸಿನ ಕಾಲಕ್ಕೆ ಗಂಗಾಧರ ರಾಯರು ಹರ್ಷಚಿತ್ತದಿಂದ ಕುದುರೆಯ ಮೇಲೆ ಕುಳಿತು ವ್ಯವಸ್ಥೆ ನೋಡುವುದನ್ನು ಕಂಡು ಮಹದೇವಭಾಯಿ ದೇಸಾಯಿಯವರು ಬೆಳಗಾವಿ ಕಾಂಗ್ರೆಸ್ಸಿನ ತಮ್ಮ ಸಂಸ್ಮರಣೆಯಲ್ಲಿ ಹೀಗೆ ಬರೆದಿದ್ದಾರೆ :-
“”ಆದ್ಯಮೇ ಸಫಲಂ ಜನ್ಮ” ಎಂಬಂತೆ ಗುಗಾಧರರಾಯರ ಮುಖದ ಮೇಲೆ ಕಂಡುಬರುತ್ತದೆ” ಎಂದು. ಯಾರಿಗಾದರೂ ತಾವು ಕೈಕೊಂಡ ಕಾರ್ಯ ಯಶಸ್ವಿಯಾಗಿ ನೆರವೇರಿದರೆ ತಮ್ಮ ಜನ್ಮ ಸಾರ್ಥಕವಾಯಿತೆಂದು ಅನಿಸುವದು ಸ್ವಾಭಾವಿಕ. ಕರ್ನಾಟಕದಲ್ಲಿ ಕಾಂಗ್ರೆಸ್ಸನ್ನು ಕರೆದುದು ಇದೇ ಮೊದಲನೆಯ ಸಲ. ಅದಕ್ಕೆ ಗಾಂಧೀಜಿಯವರೇ ಅಧ್ಯಕ್ಷರಾಗಿ ದೊರೆಕಿದರು. ಎಲ್ಲವೂ ಸುವ್ಯವಸ್ಥೆಯಿಂದ ನಡೆಯಿತು ಮತ್ತು ಇದೇ ಕಾಂಗ್ರೆಸ್ಸಿನಲ್ಲಿ ರಾಷ್ಟçದ ಮುಂದಿನ ಬಿಕ್ಕಟ್ಟಿನ ಪ್ರಶ್ನೆ ಸುಗಮವಾಗಿ ಬಗೆಹರಿಯಿತ್ತು. ಎಲ್ಲವೂ ತಮ್ಮ ಮನಸ್ಸಿಗೆ ತಕ್ಕಂತೆ ನಡೆದರೆ ಮನುಷ್ಯನಿಗೆ ತಾನು ಕೃತಕೃತ್ಯನಾದನೆಂದು ಅನಿಸುವುದು ಸ್ವಾಭಾವಿಕ ಅದರಂತೆ ಕಾಂಗ್ರೆಸ್ಸನ್ನು ಕರೆದವರಿಗೆ ಮತ್ತು ಅದರಲ್ಲಿ ದುಡಿದವರಿಗೆ ತಾವು  ಕೃತಕೃತ್ಯರಾದೆವೆಂಬ ಭಾವನೆ ಉಂಟಾದರೆ ಆಶ್ಚಯವೇನು? ಮಹದೇವಭಾಯಿ ದೇಸಾಯಿಯವರು, “ಅದ್ಯಮೇ ಸಫಲಂ ಜನ್ಮ” ಎಂದು ಹೇಳಿದ್ದು ಕೇವಲ ಗಂಗಾಧರರಾಯರಿಗಷ್ಟೇ ಅಲ್ಲ, ಕರ್ನಾಟಕದ ಎಲ್ಲ ಮುಖಂಡರಿಗೂ ಕಾರ್ಯಕರ್ತರಿಗೂ ಆನ್ವಯಿಸುತ್ತದೆ.
ಅಧಿವೇಶನ ನೆನಪಿಗೆ ವೀರಸೌಧ ನಿರ್ಮಾಣ:
ಮಹಾತ್ಮ ಗಾಂಧೀಜಿಯವರು ಅಧ್ಯಕ್ಷರಾಗಿದ್ದ ಐತಿಹಾಸಿಕ ೧೯೨೪ರ ಕಾಂಗ್ರೆಸ್ ಮಹಾ ಅಧಿವೇಶನ ಸವಿ ನೆನಪಿಗಾಗಿ  ನಗರದ ತಿಲಕ್ ವಾಡಿಯಲ್ಲಿ ವೀರಸೌಧ ವನ್ನು ನಿರ್ಮಾಣ ಮಾಡಲಾಗಿದೆ. ಅಧಿವೇಶನ ನಡೆದ ಸಂದರ್ಭದಲ್ಲಿ ಇದ್ದ ವಿಶಾಲವಾದ ಜಾಗದಲ್ಲಿ ಇಂದು ಕಟ್ಟಡಗಳು ತಲೆ ಎತ್ತಿವೆ. ಅಂದು ತೋಡಿದ್ದ ಭಾವಿಯನ್ನು ಈಗಲೂ ಕಾಣಬಹುದು. ೧೯೨೪ ರ ಅಧಿವೇಶನದ ಸಂಪೂರ್ಣ ಮಾಹಿತಿಯೂ ಈ ಸೌಧದಲ್ಲಿ ಲಭ್ಯವಿದ್ದು ಅಂದಿನ ಮಹತ್ವದ ಪೋಟೋಗಳನ್ನು ಇಲ್ಲಿ ಇರಿಸಲಾಗಿದೆ. ಜೊತೆಗೆ ಗ್ರಂಥಾಲಯವನ್ನೂ ಸಹ ನಿರ್ಮಿಸಲಾಗಿದೆ.
ಭಾರತೀಯ ರಾಷ್ಟಿçÃಯ ಕಾಂಗ್ರೆಸ್ನ ಬೆಳಗಾವಿ ಅಧಿವೇಶನವು ಸ್ವಾತಂತ್ರ‍್ಯ ಹೋರಾಟವನ್ನು ಮುನ್ನಡೆಸಲು ಸಹಾಯ ಮಾಡಿದ ಮತ್ತು ನಮ್ಮ ದೇಶದ ಮೇಲೆ ಛಾಪು ಮೂಡಿಸಿದ ವ್ಯಕ್ತಿಗಳ ಸಮೂಹವನ್ನು ಒಟ್ಟುಗೂಡಿಸಿತು. ಮಹಾತ್ಮ ಗಾಂಧಿಯವರಲ್ಲದೆ, ಮೋತಿಲಾಲ್ ಜವಾಹರಲಾಲ್ ನೆಹರು, ಲಾಲಾ ಲಜಪತರಾಯ್, ರಾಜಗೋಪಾಲಾಚಾರಿ, ಡಾ. ಅನ್ನಿಬೆಸೆಂಟ್, ಸರೋಜಿನಿ ನಾಯ್ಡು, ಚಿತ್ತರಂಜನದಾಸ್, ಪಂಡಿತ್ ಮದನ್ ಮೋಹನ್ ಮಳ್ವಿಯಾ, ಸೈಫುದ್ದೀನ್ ಕಿಚ್ಚಲು ಮತ್ತು ಮೌಲಾನಾ ಅಬುಲ್ ಕಲಾಂ ಆಜಾದ್, ಮೊಹಮ್ಮ ಅಲಿ ಮತ್ತು ಮೌಲಾನಾ ಶೌಕತ್ ಅಲಿ, ರಾಜೇಂದ್ರ ಪ್ರಸಾದ್, ವಲ್ಲಭಭಾಯಿ ಪಟೇಲ್, ರಂಗಸ್ವಾಮಿ ಅಯ್ಯಂಗಾರ್ ಹೀಗೆ ಅನೇಕರು. ಬೆಳಗಾವಿ ಅಧಿವೇಶನವು ಸ್ವಾತಂತ್ರ‍್ಯ ಹೋರಾಟವನ್ನು ಮುನ್ನಡೆಸಲು ಸಮೂಹವನ್ನು ಒಟ್ಟುಗೂಡಿಸಿತು ರಾಷ್ಟ್ರೀಯ ನಾಯಕರನ್ನು ಒಟ್ಟುಗೂಡಿಸಿತು. ಜೊತೆಗೆ ಭಾರತಕ್ಕೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಸಿಗಬೇಕೆಂಬ ನಿರ್ಣಯ ಕೈಕೊಂಡದು ಕೂಡಾ ಇಲ್ಲಿಯೇ. ಬೆಳಗಾವಿ ಅಧಿವೇಶನವು ಗಾಂಧೀಜಿಯವರನ್ನು ಕರ್ನಾಟಕದೊಂದಿಗೆ ಭಾವನಾತ್ಮಕವಾಗಿ ಸಂಬAಧ ಬೆಸೆಯಿತು ಎಂಬುವದನ್ನು ಹೇಳುವದು ಅಗತ್ಯ. ಗಾಂಧೀಜಿಯವರಿಗೆ ಬೆಳಗಾವಿ ಎಷ್ಟು ಇಷ್ಟವಾದ ಪ್ರದೇಶವಾಯಿತ್ತೆಂದರೆ. ಅವರು ಒಟ್ಟು ಆರು ಸಲ ಕರ್ನಾಟಕಕ್ಕೆ ಬಂದಿದ್ದರು. ೧೯೨೪ರಲ್ಲಿ ಅಧಿವೇಶನಕ್ಕೆ ಬಂದಿದ್ದ ಸಂದರ್ಭದಲ್ಲಿ ಗಾಂಧೀಜಿ ೧೫ ದಿನ ಬೆಳಗಾವಿಯಲ್ಲಿಯೇ ತಂಗಿದ್ದರು
 “ಗಾಂಧೀ ಭಾರತ” ವರ್ಷವಿಡೀ ಕಾರ್ಯಕ್ರಮಗಳು(೨೦೨೪-೨೦೨೫):
೧೯೨೪ ರಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೇಸ್ ಅಧಿವೇಶನದ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ವಿಶೇಷ ಕಾರ್ಯಕ್ರಮವನ್ನು  ಮುಖ್ಯಮಂತ್ರಿಯವರು ೨೦೨೪-೨೫ನೇ ಸಾಲಿನ ಬಜೆಟನಲ್ಲಿ ಘೋಷಿಸಿದ್ದಾರೆ.  “ಗಾಂಧೀ ಭಾರತ” ಹೆಸರಿನಲ್ಲಿ ವರ್ಷವಿಡೀ ರಾಜ್ಯದಾದ್ಯಂತ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾಗಿರುವ ಕಾನೂನು, ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವರಾದ ಎಚ್.ಕೆ.ಪಾಟೀಲ. ವಿಧಾನಸೌಧದಲ್ಲಿ ೨೩, ಅಕ್ಟೋಬರ್೨೦೨೪ ರಂದು ನಡೆದ ಶತಮಾನೋತ್ಸವ ಸಮಿತಿಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
೧೯೨೪ ರ ಡಿಸೆಂಬರ್ ೨೬-೨೭ ರಂದು ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಕಾಂಗ್ರೇಸ್ ಅಧಿವೇಶನ ಜರುಗಿದೆ. ಇದರ ನೆನಪನ್ನು ಮರುಸ್ಥಾಪಿಸಲು ಛಾಯಾಚಿತ್ರ ಪ್ರದರ್ಶನ, ಒಂದು ವರ್ಷ ಕಾಲ ವಸ್ತು ಪ್ರದರ್ಶನ, ಸ್ಮಾರಕ ಸ್ಥಂಭ ಸ್ಥಾಪನೆ ಮತ್ತಿತರ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಉದ್ದೇಶಗಳಿವೆ ಎಂದರು. ಗಾಂಧೀಜಿಯವರಿಗೆ ಆಪ್ತವಾದ ಗ್ರಾಮೀಣಾಭಿವೃದ್ಧಿ ಮತ್ತು ಸ್ವರಾಜ್ ಚಟುವಟಿಕೆಗಳನ್ನು ಸಂಬಂಧಿಸಿದ ಇಲಾಖೆಗಳೊಂದಿಗೆ ಹಮ್ಮಿಕೊಳ್ಳಲಾಗುವುದು.  ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಮತ್ತು ಗಾಂಧೀ ವಿಚಾರಗಳ ಪರಿಣಿತರ ಸಲಹೆ ಪಡೆದು ಅರ್ಥಪೂರ್ಣ, ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಎಚ್.ಕೆ. ಪಾಟೀಲ ಅವರು ಹೇಳಿದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮಾತನಾಡಿ, ಶತಮಾನೋತ್ಸವದ ಅಂಗವಾಗಿ ಒಂದು ವರ್ಷದ ಕಾಲ ಮಹಾತ್ಮಾ ಗಾಂಧೀಜಿಯವರ ಚಿಂತನೆ, ಪ್ರಯೋಗಗಳನ್ನು ಪುನರ್ ಮನನ ಮಾಡುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು. ಮಕ್ಕಳು, ಯುವಜನರ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು.  ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಬಿ.ಎಲ್. ಶಂಕರ ಮಾತನಾಡಿ,  ಗಾಂಧೀ ಮತ್ತು ಭಾರತವನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಆದ್ದರಿಂದ ಈ ಕಾರ್ಯಕ್ರಮಕ್ಕೆ “ಗಾಂಧೀ ಭಾರತ” ಎಂಬ ಶೀರ್ಷಿಕೆ ನೀಡಲಾಗಿದೆ.  ಪ್ರಾಥಮಿಕ, ಪ್ರೌಢ, ಉನ್ನತ ಶಿಕ್ಷಣ, ಕನ್ನಡ ಮತ್ತು ಸಂಸ್ಕೃತಿ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಸಂಬAಧಿಸಿದ ಇಲಾಖೆಗಳು ತಕ್ಷಣ ಜಾರಿಗೊಳಿಸಬಹುದಾದ, ಮಧ್ಯಮಾವಧಿಯ ಮತ್ತು ಧೀರ್ಘಾವಧಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಎಲ್ಲ ಸರ್ಕಾರಿ ಮತ್ತು ಖಾಸಗಿ ಶಾಲೆ, ಕಾಲೇಜುಗಳ ಪ್ರಮುಖ ಸ್ಥಳಗಳಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿರುವ ಗಾಂಧೀಜಿಯವರ ಭಾವಚಿತ್ರಗಳನ್ನು ಅಳವಡಿಸಲು ಕ್ರಮವಹಿಸಬೇಕು. ಗಾಂಧೀ ಭವನ, ಚಿತ್ರಕಲಾ ಪರಿಷತ್ ಈ ಚಿತ್ರಗಳನ್ನು ಒದಗಿಸಲಿವೆ. ಡಿ.ಎಸ್. ನಾಗಭೂಷಣ್ ಅವರು ಬರೆದ ಗಾಂಧೀ ಕಥನ ಕೃತಿಯನ್ನು ಮುದ್ರಿಸಿ ವಿತರಿಸಲು ಹಾಗೂ ರಿಚರ್ಡ್ ಅಟೆನ್ ಬರೋ ನಿರ್ದೇಶನದ ಮಹಾತ್ಮಾ ಗಾಂಧೀ ಚಲನಚಿತ್ರವನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಿಸುವ ಕಾರ್ಯವನ್ನು ಕೈಗೊಳ್ಳಬೇಕೆಂದು ಸಲಹೆ ನೀಡಿದರು.
 ಶಾಲಾ ಶಿಕ್ಷಣ ಮತ್ತು ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾತನಾಡಿ, ರಾಜ್ಯದಲ್ಲಿ ೫೭ ಸಾವಿರಕ್ಕೂ ಹೆಚ್ಚು ಶಾಲೆಗಳಿವೆ. ಶೈಕ್ಷಣಿಕ ಕ್ಯಾಲೆಂಡರ್‌ಗೆ ವ್ಯತ್ಯಯವಾಗದಂತೆ ಗಾಂಧೀಜಿಯವರ ಕುರಿತು ಪ್ರಬಂಧ, ಭಾಷಣ, ಚಿತ್ರಕಲೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಗಾಂಧೀಜಿಯವರ ಉಕ್ತಿಗಳು ಹಾಗೂ ಅವರು ಹೇಳಿದ ಏಳು ಸಾಮಾಜಿಕ ಪಾತಕಗಳ ಕುರಿತು ಡಿಜಿಟಲ್ ಮುದ್ರಣಗಳನ್ನು ಎಲ್ಲ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಅನಾವರಣಗೊಳಿಸಲು ಕ್ರಮ ವಹಿಸಲಾಗುವುದೆಂದು ತಿಳಿಸಿದರು.  
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಹೊಸ ತಂತ್ರಜ್ಞಾನದ ಮೂಲಕ ಬೆರಳ ತುದಿಯಲ್ಲಿ ಗಾಂಧೀಜಿಯವರ ಮಹತ್ವ ಕುರಿತ ಮಾಹಿತಿಗಳನ್ನು ಯುವಜನರು ಮತ್ತು ಹೊಸ ಪೀಳಿಗೆಗೆ ಮರುಪರಿಚಯಿಸುವ ಹಾಗೂ ಜಾಗತಿಕವಾಗಿ ಸುಮಾರು ೧೦೦ ಕ್ಕೂ ಹೆಚ್ಚು ದೇಶಗಳಲ್ಲಿರುವ ಮಹಾತ್ಮಾ ಗಾಂಧೀಜಿಯವರ ಪ್ರತಿಮೆ ಮತ್ತು ಸಂಬಂಧಿತ ಸ್ಥಳಗಳ ಕುರಿತ ಮಾಹಿತಿಯನ್ನು ಯುವಜನರು ಮತ್ತು ಹೊಸಪೀಳಿಗೆಗೆ ಪರಿಚಯಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಗಳ ಮೂಲಕ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು.  ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ಆಗಿ ೩೦ ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವರಾಜ್ ಸಮ್ಮೇಳನಗಳನ್ನು ರಾಜ್ಯದಲ್ಲಿ ಪ್ರಾದೇಶಿಕವಾರು ಆಯೋಜಿಸಲಾಗುವುದು. ಗಾಂಧೀ ಮತ್ತು ಬಸವಣ್ಣನವರ ವಿಚಾರಗಳಿಗೆ ಸಂಬಂಧಿಸಿದಂತೆ ಕಾಯಕ ಪಂಚಾಯಿತಿ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದರು .
ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಮಾತನಾಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿವಿಧ ಅಕಾಡೆಮಿಗಳ ಮೂಲಕ ಹಿಂದಿ, ಉರ್ದು, ತುಳು, ಕೊಡವ, ಕೊಂಕಣಿ, ಲಂಬಾಣಿ ಮತ್ತಿತರ ಭಾಷೆಗಳಲ್ಲಿ ಮಹಾತ್ಮಾ ಗಾಂಧೀಜಿಯವರ ಕುರಿತು ಕಿರುಪುಸ್ತಕಗಳನ್ನು ಪ್ರಕಟಿಸಿ ವಿತರಿಸಲಾಗುವುದು ಎಂದರು.  ಅರಣ್ಯ, ಜೀವಿ ಪರಿಸ್ಥಿತಿ ಹಾಗೂ ಪರಿಸರ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಗಾಂಧಿ ಭಾರತ ಕಾರ್ಯಕ್ರಮದ ಸ್ಮರಣಾರ್ಥ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ೧೦೦ ಲಕ್ಷ ಸಸಿಗಳನ್ನು ಹೆಚ್ಚುವರಿಯಾಗಿ ನೆಡಲು ಕ್ರಮವಹಿಸಲಾಗುವುದು ಎಂದರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಮಾತನಾಡಿ, ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಗಾಂಧೀ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಈಗಾಗಲೇ ಕೆಲವು ವಿಶ್ವವಿದ್ಯಾಲಯಗಳಲ್ಲಿರುವ ಗಾಂಧೀ ಅಧ್ಯಯನ ವಿಭಾಗಗಳ ಚಟುವಟಿಕೆಗಳನ್ನು ಪುನಶ್ಚೇತನಗೊಳಿಸಲಾಗುವುದು ಎಂದರು. ಕರ್ನಾಟಕ ಸರಕಾರವು ಬೆಳಗಾವಿ ಅಧಿವೇಶನದ ನೆನಪಿಗೆ ಈಗಾಗಲೇ ಅನೇಕ ಉಪಯುಕ್ತ ಕಾರ್ಯಗಳನ್ನು ಹಾಕಿಕೊಂಡಿದೆ. ಕರ್ನಾಟಕ ಸರಕಾರವು ರಾಜ್ಯದಾದ್ಯಂತ ವರ್ಷವಿಡೀ “ಗಾಂಧೀ ಭಾರತ” ಕಾರ್ಯಕ್ರಮಗಳ ಹಾಕಿಕೊಂಡಿದೆ.  
 ಆಧಾರ ಗ್ರಂಥಗಳು :
೧) ಯಂಗ ಇಂಡಿಯಾ-೧-೧-೧೯೨೫, ೮-೧-೧೯೨೫, ೨೨-೧-೧೯೨೫,(ಸಂಚಿಕೆಯಿAದ)
೨). ಮನೋಜ ಪಾಟೀಲ: “ಮಹಾತ್ಮಾ ಗಾಂಧೀಜಿ ಬೆಳಗಾವಿ-೧೯೨೪”-ಪವನ ಪುಸ್ತಕ ಪ್ರಕಾಶನ ಧಾರವಾಡ(೨೦೧೩)  
೩) ಶೈಲಜಾ ಹೀರೆಮಠ: “ಐತಿಹಾಸಿಕ ಬೆಳಗಾವಿಯ ಕಾಂಗ್ರೆಸ್ ಮಹಾಧಿವೇಶನ”- ಬಾಪು ಪ್ರಪಂಚ ಮಾಸಿಕ ಪತ್ರಿಕೆ ಕರ್ನಾಟಕ     ಸ್ಮಾರಕ ನಿಧಿ, ಬೆಂಗಳೂರು(ಜನವರಿ೨೦೨೪)
೪) ಅಂತರರ್ಜಾಲ

5) Karnatak Gazetteer Department: Belgaum District Gazetteer- Government of Karnatak(1982)
6) Mahatma Gandhi : Collected Works of Mahatma Gandhi vol. Xxv,-Publication Division, Ministry of Information &Broadcasting, Goverment of India, New Dehli-(1956)
7) Somaling Malgali and Achyut R. Vadavi: “History of Freedom Struggles & Gandhi”-Pictorial India, New Dehli(2012).
8) Indian National Congress: “ Report of the Thirty Ninth Indian Nation Congress Held at Belgaum on the 26th and December1924”-M.R. Kembavi, General Secretary , Reception Committee office, India, New Dehli(1925).


ಡಾ.ಎಸ್.ಬಿ. ಬಸೆಟ್ಟಿ

Leave a Reply

Back To Top