ಸಂಪ್ರೋಕ್ಷಣ
ಬಣ್ಣಗಳಲ್ಲದ್ದಿದ ಬದುಕು
ಅಂಜನಾ ಹೆಗಡೆ
ಬಣ್ಣಗಳೇ ಇರದಿದ್ದರೆ ಜಗತ್ತು ಹೇಗಿರುತ್ತಿತ್ತು ಯೋಚಿಸಿ ನೋಡಿ. ಪುಟ್ಟ ಮಗುವೊಂದು ಬಣ್ಣದ ಬಲೂನುಗಳ ಹಿಂದೆ ಓಡುವ ದೃಶ್ಯವೇ ಕಾಣಸಿಗುತ್ತಿರಲಿಲ್ಲ. ಗಾಳಿಪಟವೊಂದು ಚೂರುಚೂರೇ ನೆಗೆಯುತ್ತ ಆಕಾಶಕ್ಕೆ ಎಗರಿ ಬಣ್ಣದ ಲೋಕವೊಂದನ್ನು ಸೃಷ್ಟಿಸುತ್ತಲೇ ಇರಲಿಲ್ಲ. ಕೆಂಡಸಂಪಿಗೆಗೆ ಕೆಂಡದಂತಹ ಬಣ್ಣವಿರುತ್ತಿರಲಿಲ್ಲ. ಕಾಮನಬಿಲ್ಲೊಂದು ಹುಟ್ಟುತ್ತಲೇ ಇರಲಿಲ್ಲ. ಬಣ್ಣಗಳಿಲ್ಲದಿದ್ದರೆ ಕಲೆ, ಸೌಂದರ್ಯ, ಪ್ರಕೃತಿ ಇವೆಲ್ಲವುಗಳ ಪರಿಕಲ್ಪನೆ ಬೇರೆಯೇ ಏನೋ ಆಗಿರುತ್ತಿತ್ತು. ಅದೇನಾಗಿರಬಹುದಿತ್ತು ಎಂದು ಒಂದು ಸೆಕೆಂಡು ಯೋಚಿಸಿದರೂ ಒಂದಿಷ್ಟು ಬಣ್ಣಗಳೂ ಯೋಚನೆಯೊಂದಿಗೆ ಅಂಟಿಕೊಳ್ಳುತ್ತವೆ.
ಯೋಚನೆಗಳಷ್ಟೇ ಅಲ್ಲದೇ ಮನುಷ್ಯನ ಭಾವನೆಗಳೊಂದಿಗೂ ಬೆಸೆದುಕೊಂಡಿರುವಂಥದ್ದು ಈ ಬಣ್ಣಗಳ ಪ್ರಭಾವ. ಹೆಣ್ಣು ಎಂದರೆ ಗುಲಾಬಿಬಣ್ಣ, ಪ್ರೀತಿಯೆಂದರೆ ಕೆಂಪು, ಸಂಭ್ರಮಕ್ಕೆ ಹಸಿರು, ದುಃಖಕ್ಕೆ ಬಿಳಿ-ಕಪ್ಪು, ಹೀಗೆ ವಿವೇಚನೆ ಅಥವಾ ತರ್ಕಗಳೆಲ್ಲ ಅಮುಖ್ಯವಾಗಿ ಭಾವನೆಗಳೊಂದಿಗೆ ಬಣ್ಣಗಳು ಬೆರೆತುಹೋಗಿವೆ. ಸೀಮಂತಕ್ಕೋ, ಮದುವೆಗೋ ಹಸಿರುಸೀರೆಯನ್ನೇ ಏಕೆ ಉಡಬೇಕು ಎಂದು ಪ್ರಶ್ನಿಸುವವರನ್ನು ಯಾವ ನ್ಯಾಯಾಲಯವೂ ಜೈಲಿಗೆ ತಳ್ಳುವುದಿಲ್ಲ. ಧಾರೆಸೀರೆಗೆ ಹಸಿರುಬಣ್ಣವೇ ಶ್ರೇಷ್ಠ ಎಂದ ಅಮ್ಮ, ಸೀಮಂತಕ್ಕೆ ಹಸಿರುಸೀರೆ ಉಡುವುದು ಉತ್ತಮ ಎಂದ ಅತ್ತೆ ಇವರುಗಳೇ ನ್ಯಾಯಾಧೀಶರಾಗಿ ನಮ್ಮ ಸಂಭ್ರಮಕ್ಕೊಂದಷ್ಟು ಬಣ್ಣಗಳನ್ನು ತುಂಬುತ್ತಾರೆ. ಅಷ್ಟಕ್ಕೂ ಬದುಕಿನಲ್ಲಿ ಯಾವತ್ತಿಗೂ ಮರೆಯಾಗದ, ಮುಗಿದುಹೋಗದ ಸಂಭ್ರಮಗಳೆಂದರೆ ಬಣ್ಣಗಳೇ ಅಲ್ಲವೇ!
ಮನುಷ್ಯನಿಗೆ ಬಾಲ್ಯಕ್ಕಿಂತ ಬಲುದೊಡ್ಡ ಸಂಭ್ರಮ ಇನ್ನೊಂದಿಲ್ಲ ಎಂದು ನಂಬಿದವಳು ನಾನು. ಕಾಲ ದೇಶ ಭಾಷೆ ಜಾತಿ ಧರ್ಮ ಯಾವ ಬೇಲಿಯನ್ನಾದರೂ ಕಟ್ಟಿಕೊಳ್ಳಿ, ಅದರಾಚೆಗಿನ ಸ್ವಚ್ಛಂದ ಬಾಲ್ಯವೊಂದರ ನೆನಪು ಎಲ್ಲರೊಳಗೂ ಸದಾ ಜಾಗ್ರತ. ಇನ್ನೊಮ್ಮೆ ಬಾಲ್ಯಕ್ಕೆ ಮರಳುವುದು ಸಾಧ್ಯವಾದರೆ ಅದನ್ನು ಇನ್ನಷ್ಟು ಸುಂದರವಾಗಿಸುವ ಹಗಲುಗನಸೊಂದು ಎಲ್ಲರ ಹೆಗಲಮೇಲೂ ನೇತಾಡುತ್ತಿರುತ್ತದೆ; ಆ ಕನಸುಗಳನ್ನೆಲ್ಲ ಒಂದಿಷ್ಟು ಬಣ್ಣಗಳು ನೇವರಿಸುತ್ತಿರುತ್ತವೆ ಆಗಾಗ. ಬಾಲ್ಯವೊಂದು ಕನಸಾಗುವ ಗಳಿಗೆಯಲ್ಲಿ ಆಗಷ್ಟೇ ನೆಲಕ್ಕುರುಳಿದ ಅಚ್ಚಹಳದಿ ಕರವೀರದ ಮೇಲೆ ಇಬ್ಬನಿಯೊಂದು ಹೂಬಿಸಿಲಿಗೆ ಹೊಳೆದು, ಆ ಜಾಗವನ್ನೆಲ್ಲ ತಿಳಿಹಳದಿ ಬಣ್ಣವೊಂದು ಮಾಯೆಯಾಗಿ ಆವರಿಸಿದಂತೆ ಅನ್ನಿಸುವುದುಂಟು ನನಗೆ. ಹೂಹೃದಯದ ಹುಡುಗನೊಬ್ಬನಿಗೆ, ತಿಳಿಗುಲಾಬಿ ಬಣ್ಣದ ಗ್ರೀಟಿಂಗ್ ಕಾರ್ಡೊಳಗೆ ಹಸಿರು ಜೆಲ್ ಪೆನ್ನಿನಲ್ಲಿ ಬಿಡಿಸಿದ್ದ ಹೃದಯವೊಂದು ಕೆಂಪು ಚೂಡಿದಾರ ಧರಿಸಿ ಕನಸಿನೊಳಗೊಂದು ಕನಸ ಹುಟ್ಟಿಸಿರಬಹುದು. ಒಂಟಿಜೀವವೊಂದು, ಬಾಲ್ಯಕ್ಕೊಂದಿಷ್ಟು ಕನಸುಗಳ ಕರುಣಿಸಿ ಮರೆಯಾದ ನೀಲಿಕಣ್ಣಿನ ಹುಡುಗನ ನೆನಪಲ್ಲಿ ಹೊಸಹೊಸ ಕನಸುಗಳ ಸ್ವೆಟರೊಂದನ್ನು ಹೆಣೆಯುತ್ತಿರಬಹುದು.
ಹೀಗೆ ನೆನಪುಗಳಿಗೆ ಜಾರಿದಂತೆಲ್ಲ ಜೊತೆಗಿಷ್ಟು ಬಣ್ಣಗಳು ಹಿಂಬಾಲಿಸುತ್ತಲೇ ಇರುತ್ತವೆ. ಅಜ್ಜಿಯೋ, ಅಮ್ಮನೋ, ಚಿಕ್ಕಮ್ಮನೋ ನಮ್ಮ ಬಾಲ್ಯದ ಕಥೆ ಹೇಳುವುದನ್ನು ಯಾವತ್ತಾದರೂ ಗಮನಿಸಿದ್ದೀರಾ! ಪುಟ್ಟಪುಟ್ಟ ಸರಕುಗಳೆಲ್ಲ ಸಕಲ ಬಣ್ಣಗಳನ್ನೊಳಗೊಂಡ ವಿವರಗಳಾಗಿ, ಸಾದಾಸೀದಾ ಸುಂದರ ಕಥೆಯೊಂದರಂತೆ ನಮ್ಮ ಬಾಲ್ಯ ಅನನ್ಯ ಅನುಭೂತಿಯಾಗಿ ನಮ್ಮೆದುರು ತೆರೆದುಕೊಳ್ಳುವ ಸಮಯವಿದೆಯಲ್ಲ, ಅದಕ್ಕಾಗಿ ಸದಾ ಕಾಯುತ್ತಿರುತ್ತೇನೆ ನಾನು. ಅಂಥದ್ದೇ ಒಂದು ಚಂದದ ಕಥೆಯಲ್ಲಿ ನನ್ನ ಬಾಲ್ಯ ಒಂದಿಷ್ಟು ಬಣ್ಣಬಣ್ಣದ ಮಣಿಗಳೊಂದಿಗೆ ಸೇರಿಕೊಂಡಿದೆ. ಜೀವನಶೈಲಿಯಂತೆಯೇ ಆಟಿಕೆಗಳೂ ಸಿಂಪಲ್ಲಾಗಿದ್ದ ಹಳ್ಳಿಗಳಲ್ಲಿ ಆಗೆಲ್ಲ ಕಾಣಸಿಗುತ್ತಿದ್ದ ಆಟಿಕೆಗಳೆಂದರೆ ಜಾತ್ರೆಗಳಲ್ಲೋ ಅಥವಾ ತೇರುಗಳಲ್ಲೋ ಮಾರಾಟವಾಗುತ್ತಿದ್ದ ಪ್ಲಾಸ್ಟಿಕ್ ಚೆಂಡುಗಳು, ಲಾರಿ-ಬಸ್ಸುಗಳ ಆಕಾರದ ಪುಟ್ಟಪುಟ್ಟ ಪ್ಲಾಸ್ಟಿಕ್ ವಾಹನಗಳು. ಅವುಗಳಿಗೆ ದಾರಕಟ್ಟಿ ಎಳೆಯುತ್ತಾ ಕೇರಿಯ ಮನೆಗಳನ್ನೆಲ್ಲ ಸುತ್ತುತ್ತಾ ಹಗಲುಗಳು ಕಳೆದುಹೋಗುತ್ತಿದ್ದವಾದರೂ ರಾತ್ರಿಗಳಲ್ಲಿ ಮಾತ್ರ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿತ್ತು. ಹಗಲುಗಳ ಶಾಂತಸ್ವರೂಪಿ ಅಮ್ಮಂದಿರೆಲ್ಲ ರಾತ್ರಿ ರಣಚಂಡಿಯ ಅವತಾರವನ್ನು ತಾಳುವ ದೃಶ್ಯ ಸಾಮಾನ್ಯವಾಗಿತ್ತು. ಅಂತಹ ದೃಶ್ಯವೊಂದನ್ನು ಸುಂದರ ಕಾವ್ಯವನ್ನಾಗಿ ಪರಿವರ್ತಿಸಿದ್ದು ಬಣ್ಣದ ಮಣಿಗಳ ಹಳೆಯದೊಂದು ಪುಟ್ಟ ಪೆಟ್ಟಿಗೆ.
ಅಮ್ಮನಿಗೆ ಆ ಪೆಟ್ಟಿಗೆಯನ್ನು ನನ್ನ ಆಟಿಕೆಯನ್ನಾಗಿಸುವ ಯೋಚನೆ ಅದೆಲ್ಲಿಂದ ಬಂತು ಅವಳಿಗೂ ಗೊತ್ತಿಲ್ಲ. ಅಥವಾ ಆ ಪೆಟ್ಟಿಗೆಯೊಳಗೆ ಮಣಿಗಳು ಎಲ್ಲಿಂದ ಬಂದು ಸೇರಿಕೊಂಡವು ಎನ್ನುವುದಕ್ಕೂ ಉತ್ತರವಿಲ್ಲ. ತುಂಬುಕುಟುಂಬದ ಯಾವುದೋ ಹೆಣ್ಣುಮಗಳ ಸರವೊಂದು ಹರಿದುಹೋದಾಗಲೋ, ಮಕ್ಕಳ ಕೈಗಳನ್ನು ಅಲಂಕರಿಸುತ್ತಿದ್ದ ಕರಿಮಣಿಯ ಬಳೆಯೊಂದು ತುಂಡಾದಾಗಲೋ ಚಲ್ಲಾಪಿಲ್ಲಿಯಾದ ಮಣಿಗಳನ್ನೆಲ್ಲ ಯಾರೋ ಅದರಲ್ಲಿ ತುಂಬಿಸಿಟ್ಟಿರಬಹುದು. ಈಗಲೂ ಅಟ್ಟದಮೇಲೆ ನೆನಪುಗಳ ಪಳೆಯುಳಿಕೆಯಂತೆ ಬೆಚ್ಚಗೆ ಕುಳಿತಿರುವ ಆ ಪೆಟ್ಟಿಗೆಯಲ್ಲಿ ಬಣ್ಣಗಳೆಲ್ಲ ಬೆಳಕಿಗೆ ಹೊರಳಲು ಹಾತೊರೆಯುತ್ತಿರುವ ಹಂಬಲವೊಂದು ಕಾಣಿಸುವುದುಂಟು ನನಗೆ. ಆಕಾಶಬಣ್ಣದ ನುಣುಪಾದ ಮಣಿಗಳು, ಪಾರಿವಾಳದ ಕಣ್ಣುಗಳು ಅತ್ತಿತ್ತ ಹರಿದಾಡುವ ಅನುಭವ ನೀಡುವ ಕಪ್ಪುಮಿಶ್ರಿತ ಕೆಂಪುಮಣಿಗಳು, ಜೊತೆಗೊಂದಿಷ್ಟು ಬೇರೆಬೇರೆ ಆಕಾರ-ಗಾತ್ರಗಳ ಕರಿಮಣಿಗಳು ಎಲ್ಲವೂ ಇದ್ದವು ಅದರಲ್ಲಿ. ಮನೆಯ ಕೆಲಸಗಳನ್ನೆಲ್ಲ ಮುಗಿಸಿ ಮಲಗಲು ರೆಡಿಯಾಗುತ್ತಿದ್ದ ಅಮ್ಮ ರೂಮಿನ ಲೈಟನ್ನು ಉರಿಯಲು ಬಿಟ್ಟು, ಪೆಟ್ಟಿಗೆಯ ಪುಟ್ಟ ಪ್ರಪಂಚವನ್ನು ನನ್ನೆದುರು ತೆರೆದಿಟ್ಟು, ಕೈಗೊಂದು ದಾರವನ್ನು ಕೊಟ್ಟು ಮಲಗಿಬಿಡುತ್ತಿದ್ದಳಂತೆ. ನಾನು ದಾರದೊಳಗೆ ಒಂದೊಂದಾಗಿ ಮಣಿಗಳನ್ನು ಪೋಣಿಸಿ, ಬಣ್ಣಬಣ್ಣದ ಸರವೊಂದನ್ನು ಸೃಷ್ಟಿ ಮಾಡಿ ಪೆಟ್ಟಿಗೆಯೊಳಗೆ ಇಟ್ಟು, ಡ್ಯೂಟಿಯೊಂದನ್ನು ಮುಗಿಸಿದವಳಂತೆ ಅಪ್ಪನ ಕೆಂಪುಚಾದರದೊಳಗೆ ಸೇರಿಕೊಂಡು ಮಲಗುತ್ತಿದ್ದೆನಂತೆ. ಒಂದೆರಡು ದಿನಗಳ ಕಥೆಯಲ್ಲ ಈ ಮಣಿಸರಗಳದ್ದು; ಎರಡು ಮೂರು ವರ್ಷಗಳ ದಿನಚರಿ. ಪುಟ್ಟಮಗುವೊಂದು ಪುಟ್ಟಪುಟ್ಟ ಕೈಗಳಲ್ಲಿ ದಾರ ಹಿಡಿದು ಮಣಿಗಳನ್ನು ಪೋಣಿಸುತ್ತಾ, ತನ್ನ ಸುತ್ತ ಬಣ್ಣದ ಲೋಕವೊಂದನ್ನು ಸೃಷ್ಟಿಸಿಕೊಳ್ಳುವಂತಹ ಸುಂದರ ದೃಶ್ಯಕಾವ್ಯ ಬೇರೆಲ್ಲಾದರೂ ನೋಡಲು ಸಿಕ್ಕೀತೇ!
ಹೀಗೆ ಬಾಲ್ಯವೆಂಬ ಸಂಭ್ರಮ ಅಚ್ಚುಕಟ್ಟಾಗಿ ಬಣ್ಣಗಳೊಂದಿಗೆ ಬೆರೆತು, ನೆನಪಾಗಿ ಎದೆಯ ಗೋಡೆಗಂಟಿಕೊಂಡಿತು. ಜಡೆಯ ಮೇಲೆ ಹೂವಾಗಿ ಅರಳುತ್ತಿದ್ದ ಕೆಂಪು, ಹಸಿರು ರಿಬ್ಬನ್ನುಗಳನ್ನು ಲವ್ ಇನ್ ಟೋಕಿಯೊ ಹೇರ್ ಕ್ಲಿಪ್ ಗಳು ರಿಪ್ಲೇಸ್ ಮಾಡಿದವು. ಉದ್ದಜಡೆಯ ಮೋಹ ಮರೆಯಾದಂತೆಲ್ಲ ಪಾರ್ಲರುಗಳ ಕೆಂಪು, ಗೋಲ್ಡನ್ ಕಲರುಗಳು ಸ್ಟ್ರೀಕ್ಸುಗಳಾಗಿ ತಲೆಯನ್ನೇರಿದವು. ಬಾಲ್ಯದ, ಯೌವನದ ಅವೆಷ್ಟೋ ಆಸೆ-ಕನಸುಗಳು ಕಣ್ಮರೆಯಾಗಿ ಹೋದರೂ ಬಣ್ಣಗಳೆಡೆಗಿನ ಮೋಹ ಮಾತ್ರ ಅಟ್ಟದ ಮೇಲಿನ ಪೆಟ್ಟಿಗೆಯಂತೆ; ಮುಪ್ಪಾಗುವುದಿಲ್ಲ. ಮಳೆಗಾಲಕ್ಕೆ ತಿಳಿಹಳದಿ ಕೊಡೆಯೊಂದು ಸಂಗಾತಿಯಾಗಿ ಜಗಲಿಗಿಳಿದರೆ, ಚಳಿಗಾಲಕ್ಕೊಂದು ಬಣ್ಣಬಣ್ಣದ ಹೂಗಳ ದುಪ್ಪಟಿ ಮಂಚವೇರುತ್ತದೆ. ಬೇಸಿಗೆಯ ತಿಳಿಮಜ್ಜಿಗೆಯ ಮೇಲೆ ಅಚ್ಚಹಸಿರು ಕೊತ್ತಂಬರಿಸೊಪ್ಪಿನ ಎಲೆಯೊಂದು ತಣ್ಣಗೆ ತೇಲುತ್ತಿರುತ್ತದೆ; ನೆನಪುಗಳಂತೆ!
ಹೀಗೆ ಹಚ್ಚಹಸಿರಾಗಿ ತೇಲುವ ನೆನಪುಗಳಲ್ಲಿ ಆಫೀಸಿನ ಹೋಳೀಹಬ್ಬವೊಂದು ಕೂಡಾ ಶಾಮೀಲಾಗಿದೆ. ಅಲ್ಲೊಬ್ಬ ಹುಡುಗನಿದ್ದ; ಲೆನ್ಸ್ ಹಾಕುತ್ತಿದ್ದ ಅವನ ಕಣ್ಣುಗಳಲ್ಲೊಂದು ಅನನ್ಯವಾದ ನಿರ್ಲಿಪ್ತತೆಯಿರುತ್ತಿತ್ತು. ಅವನೊಂದಿಗೆ ಮಾತನಾಡುವಂತಹ ಯಾವ ಅಗತ್ಯವೂ ಇರದಿದ್ದ ಕಾರಣ ಅವನು ಎದುರಾದಾಗಲೆಲ್ಲ ಅವನ ಕಣ್ಣುಗಳನ್ನೊಮ್ಮೆ ನೋಡಿ ಸುಮ್ಮನಾಗಿಬಿಡುತ್ತಿದ್ದೆ. ಆಫೀಸಿನ ತುಂಬಾ ಹೋಳೀಹಬ್ಬದ ಸಂಭ್ರಮ ತುಂಬಿದ್ದ ಒಂದು ಸಂಜೆ ನಾನೊಬ್ಬಳೇ ಮುಗಿಸಲೇಬೇಕಾದ ಕೇಸೊಂದನ್ನು ಹಿಡಿದು ಕೂತಿದ್ದೆ. ಡ್ರಾದಲ್ಲಿದ್ದ ಬಣ್ಣದ ಪ್ಯಾಕೇಟುಗಳನ್ನು ಒಯ್ಯುತ್ತಿದ್ದ ಅದೇ ಲೆನ್ಸ್ ಕಣ್ಣಿನ ಹುಡುಗ ನನ್ನ ಡೆಸ್ಕಿನೆದುರು ಒಮ್ಮೆ ನಿಂತು ಗಿಳಿಹಸಿರು ಬಣ್ಣದ ಪ್ಯಾಕೆಟೊಂದರ ಟಾಚಣಿಯನ್ನು ಬಿಡಿಸಿ, ಚಿಟಿಕೆಬಣ್ಣವನ್ನು ಕೆನ್ನೆಗಂಟಿಸಿ ಅವನ ಪಾಡಿಗೆ ಹೊರಟುಹೋದ. ಆ ಘಟನೆಯಿಂದಾಗಿ ನಮ್ಮ ಮಧ್ಯೆ ಪ್ರೇಮಾಂಕುರವಾಗುವಂತಹ ಅದ್ಭುತಗಳೇನೂ ಘಟಿಸದೇ ಹೋದರೂ, ಈಗಲೂ ಹೋಳೀಹಬ್ಬದ ಗಿಳಿಹಸಿರು ಬಣ್ಣದ ಪ್ಯಾಕೆಟನ್ನು ನೋಡಿದಾಗಲೆಲ್ಲ ನಿರ್ಲಿಪ್ತ ಕಣ್ಣುಗಳಿಂದ ಟಾಚಣಿ ಬಿಡಿಸಿದ ಹುಡುಗ ನೆನಪಾಗುತ್ತಾನೆ. ಅವನ ಬೆರಳಂಚಿಗೂ ಗಿಳಿಹಸಿರು ಬಣ್ಣದ ನೆನಪೊಂದು ಅಂಟಿಕೊಂಡಿರಬಹುದು!
****
ಲೇಖಕರ ಬಗ್ಗೆ ಎರಡು ಮಾತು:
ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು; ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡೆನಿಂಗ್ ಇವರ ನೆಚ್ಚಿನ ಹವ್ಯಾಸ
ಆಹಾ! what a start.. beautifully crafted ❤
Thank u so much Suresh
ಬಾಲ್ಯ ಕಾಲದ ಆಪ್ತವಾದ ನೆನೆಕೆಗಳಿಗೆ ನವಿರಾದ ಬಣ್ಣವನ್ನು ಚಿಮುಕಿಸಿದ್ದೀರಿ, ಶೀರ್ಷಿಕೆಗೆ ಒಪ್ಪುವಂತೆ.
.ಬರಹದುದ್ದಕೂ ಕಾವ್ಯಮಯ ಸಾಲುಗಳದ್ದೇ ಮೇಲುಗೈ.
ಅಭಿನಂದನೆಗಳು….
ಥ್ಯಾಂಕ್ಯೂ !!
Wow! Nice
ಥ್ಯಾಂಕ್ಯೂ !!
ಅಂಕಣದ ಮೂಲಕ ನೆನಪುಗಳ Some ಪ್ರೋಕ್ಷಣೆ ಆಗುತ್ತಿದೆ. ಬಣ್ಣಗಳು ನಿಮ್ಮ ಬರವಣಿಗೆಗೆ ರಂಗುತಂದಿದೆ. ಸಂಪ್ರೋಕ್ಷಣದ ಮಳೆಬಿಲ್ಲು ಎಲ್ಲರನ್ನೂ ತನ್ನೆಡೆಗೆ ಸೆಳೆಯಲಿ… ಶುಭಾರಂಭ ಚೆನ್ನಾಗಿದೆ.
ಹಲೋ ಸರ್, ಆರಾಮ? ಥ್ಯಾಂಕ್ಯೂ !!
ಬಣ್ಣ ಗಳ ಹಿಂದೆ ಬಣ್ಣ ಬಣ್ಣದ ಕಥನಗಳು.ಈ ಬಣ್ಣ ಇರದಿರೆ ನಮ್ಮ ನಿಮ್ಮ ಮತ್ತು ಈ ಜನರ ಬಣ್ಣ ಗಳೂ ಗೊತ್ತಾಗ್ತಿರಲಿಲ್ಲ….ಏನಂತೀರ….ಒಳ್ಳೆಯ ಬರಹ.
ಫೈಜ್
ಅಂಜನಾ, ಬಣ್ಣಗಳ ಕುರಿತು ಇಷ್ಟೆಲ್ಲ ಬರೆಯ ಬಹುದೇ?ನವಿರು ನವಿರು.ಚೆಂದದ ಬರಹ _ಸ್ಮಿತಾ ಅಮೃತರಾಜ್