ಶರಧಿಗೆ
ದೀಪ್ತಿ ಭದ್ರಾವತಿ
ಶರಧಿಗೆ..
ನಿನ್ನ ತೀರದಲಿ ಹೆಜ್ಜೆ ಊರಿ ಕೂತಿದ್ದೇನೆ
ಅಳಿಸದಿರು
ಬಲ್ಲೆ ನಾನು
ನಿನ್ನ ಉನ್ಮತ್ತ ಅಗಾಧ ಕರುಣೆಯ
ಅಂತರಾಳವನ್ನು
ನೂರೆಂಟು ನದಿಗಳ ಲೀನದಲ್ಲಿಯು
ಸಾಧಿಸುವ ನಿಶ್ಚಲತೆಯನ್ನು
ಮೌನದ ಕಡು ಮೋಹಿಯೇ
ಜಗದ ನೋವುಗಳ ಹೆಕ್ಕಿ ನೀನು ಮೊರೆವಾಗಲೆಲ್ಲ’
ಇಟ್ಟ ಅದೆಷ್ಟೋ ಗುರುತುಗಳು
ಆವಿಯಾಗುತ್ತವೆ
ಹುಟ್ಟಿದ ಮೋಹಗಳು
ಕಬಂಧ ಬಾಹುಗಳಲಿ
ಇಲ್ಲವಾಗುತ್ತವೆ
ಆದರೂ,
ನಿನ್ನೆದೆಯ ರೇವೆಯಲಿ ಹೆಸರು ಗೀಚುವ
ಹುಚ್ಚು ಹಂಬಲಕೆ ಬಿದ್ದಿದ್ದೇನೆ
ಅಲೆದು ದಣಿದ ಕಾವುಗಳಲಿ
ತೇವ ಹೀರಿಕೊಳ್ಳಲು ಕಾಯುತ್ತಿದ್ದೇನೆ..
ಇಲ್ಲವೆನ್ನಬೇಡ
ಕಟ್ಟಿದ ಒದ್ದೆ ನೆನೆಹಿಕೆಗಳ ಹಾಗೆಯೇ ಇರಿಸು
ಉಕ್ಕಿ ಬಾ ಒಮ್ಮೆ ತೋಳ ಚಾಚಿ
ಆಲಂಗಿಸು
ನಿನ್ನಂತೆಯೇ ನನ್ನ ಉಳಿಸು
*******
ಚಂದದ ಕವಿತೆ. ಶರಧಿ ಸಂಗಾತಿ ಯ ರೂಪಕ ವಾಗಿ ಚೆನ್ನಾಗಿ ಮೂಡಿ ಬಂದಿದೆ ! Hats off madam !