ಬಿತ್ತಿದ ಬೆಂಕಿ

ಬಿತ್ತಿದ ಬೆಂಕಿ

ಇಲ್ಲಿ ಬಿತ್ತಿದ ಬೆಂಕಿ ಸುಡುವುದಿಲ್ಲ, ಪರಿವರ್ತಿಸಿ ಬೆಳೆಸುತ್ತದೆ.

ಇತ್ತೀಚೆಗೆ ಕಾದಂಬರಿಕಾರರು ಮತ್ತು ಹಿರಿಯ ಲೇಖಕರು, ಕವಿತೆಗಳನ್ನು ರಚಿಸುವುದರಲ್ಲಿ ತೊಡಗಿರುವುದು ಆಸಕ್ತಿಕರ ಸಂಗತಿ. ನಾನು ಗಮನಿಸಿದಂತೆ ಅವರಲ್ಲಿ ಎಸ್. ದಿವಾಕರ, ಇಂದ್ರಕುಮಾರ್ ಎಚ್.ಬಿ ಜೊತೆಗೆ ಶ್ರೀಧರ ಬನವಾಸಿ ಅವರು ಪ್ರಮುಖರು. ಏಕೆ ಹೀಗೆ ಎಂಬುದು ಕೂಡಾ ಚರ್ಚಾರ್ಹ ಸಂಗತಿಯೇ!

ಫಕೀರ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಶ್ರೀಧರ ಬನವಾಸಿ ಅವರು ಬೇರು (2017) ಕಾದಂಬರಿಯ ಮೂಲಕ ಮನೆಮಾತಾದವರು. ಬೇರು ಒಟ್ಟು ಒಂಬತ್ತು ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅವರು ಈ ಮೊದಲೇ ತಿಗರಿಯ ಹೂಗಳು ( 2014) ಎಂಬ ಕವನ ಸಂಕಲನ ರಚಿಸಿದ್ದಾರೆ. ಅಮ್ಮನ ಆಟೋಗ್ರಾಫ್, ದೇವರ ಜೋಳಿಗೆ, ಬ್ರಿಟಿಷ್ ಬಂಗ್ಲೆ ಅವರ ಕಥಾಸಂಕಲನಗಳು.

ತಿಗರಿಯ ಹೂಗಳು ಕವನ ಸಂಕಲನದಲ್ಲಿ ಹೆಣ್ಣು, ನಿಸರ್ಗ, ತಾನು, ಕವಿತೆಗಳ ಬಗ್ಗೆ ಬರೆದಿದ್ದ ಶ್ರೀಧರರು ಈ ಸಂಕಲನದಲ್ಲಿ ಇದೇ ವಿಚಾರಗಳ ಅಂತಃಸತ್ವ, ಆಧ್ಯಾತ್ಮ, ಇಹ- ಪರ ಮತ್ತು ಮನೋವ್ಯಾಪಾರಗಳನ್ನು ಚಿತ್ರಿಸಲು ಯತ್ನಿಸಿದ್ದಾರೆ.

ಅಂತಹ ಒಂದು ಪ್ರಯತ್ನದಲ್ಲಿ ಬರುವ ಸಾಲುಗಳು..

” ಜಗದ ಗಗನ ಕುಸುಮವೆಂಬಂತೆ
ಮುಗಿಲ ಲೋಹದ ಹಕ್ಕಿಯು ಹಾರುತ್ತಿತ್ತು”

ಮುನ್ನುಡಿಯಲ್ಲಿ ಡಾ.ಮಲರ್ ವಿಳಿ ಕೆ ಅವರು ಹೇಳಿದಂತೆ ಇಲ್ಲಿ ಕವಿಯ ವರ್ಣನೆಯ ಶಕ್ತಿ ಅನಾವರಣವಾಗಿದೆ.

ಸಿಕ್ಕಿದ್ದು ಮತ್ತು ದಕ್ಕಿದ್ದು, ಈ ಎರಡು ತುದಿಗಳ ನಡುವಿನ ತೊಳಲಾಟವೇ ಕಾವ್ಯದ ದರ್ದು, ದಂದುಗ. ಈ ಅಂತರದ ಬಗ್ಗೆ ಶ್ರೀಧರರು ನಿಗಾವಹಿಸಿರುವುದು ಅವರ ಕಾವ್ಯ ಚಿಂತನೆಯ ವಿಶೇಷ ಎಂದು ಡಾ.ಎಚ್.ಎಸ್ ಶಿವಪ್ರಕಾಶ್ ಅವರು ಬೆನ್ನುಡಿಯಲ್ಲಿ ಹೇಳಿರುವುದು ತುಂಬಾ ಪ್ರಸ್ತುತವಾಗಿದೆ.

‘ಕೊನೆ ಎಂದಿಗೋ’ ಕವಿತೆಯು ತಪ್ಪುಗಳು ಘಟಿಸುವ ಕುರಿತಾಗಿದೆ, ಆದ ತಪ್ಪುಗಳು ಪುನರಾವರ್ತನೆ ಆಗಬಾರದು ಎಂಬ ಆಸ್ಥೆಯಿದೆ. ಆದರೂ ಅಪರಾಧಗಳಾಗುತ್ತವೆ. ಮತ್ತೆ ಪಶ್ಚಾತ್ತಾಪ, ಕ್ಷಮೆಯಾಚನೆ ಎಲ್ಲಾ! ಹೀಗೆ ಕೊನೆ ಎಂದಿಗೋ? ಎಂಬ ಪ್ರಶ್ನೆಯಲ್ಲಿ ಕವನ ಮುಗಿಯುತ್ತದೆ.

ನೀ ಬಂಧಿಯಲ್ಲ! ಎಂಬ ಕವಿತೆಯನ್ನು ನೋಡಿ..

ಕಟುಕನ ಕತ್ತಿಗೆ ದೇಹ ಯಾವುದಾದರೇನು?
ಎಷ್ಟು ರುಚಿಯಿದ್ದರೇನು! ಕತ್ತಿ ಅನುಭವಿಸಿತೇ?

“… ಅನಿರೀಕ್ಷಿತ ಆಕರ್ಷಣೆಯ ಬೆಸುಗೆಯೂ ಆಗಿಬಿಡುತ್ತದೆ
ಸುಂದರ ತನುಘಟದ ಮಾಯೆಯ ಬತ್ತಳಿಕೆಯಲ್ಲಿ”

ವಾಸ್ತವವಾದ ಜಗತ್ತಿನ ಅನಾವರಣ ಮಾಡಿದ್ದಾರೆ.

“ರಕ್ತ ಚಿಮ್ಮುವ ಹೃದಯದಲ್ಲಿ
ಯಾವ ವ್ಯಾಘ್ರವು ಅಡಗಿಹುದೋ
?”

ಸೂರ್ಯನ ಸುತ್ತಲೂ ಕತ್ತಲು ಕವನದ ಸಾಲುಗಳು ರಾಜಕೀಯದ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತದೆ.

ಹೊಕ್ಕಳ ಬಳ್ಳಿಯ ರಕ್ತ
ಜಿನುಗುತಿದೆ….

…….
ಕ್ರೌರ್ಯ ತುಂಬಿದ ಧರ್ಮದ ಹೃದಯದಲಿ
ಅದೆಂಥ ರಾಕ್ಷಸನು ಅಡಗಿರುವನೋ ?”

‘ಧರ್ಮದ ಬತ್ತಳಿಕೆಯಲ್ಲಿ ‘ ಕವಿತೆಯಲ್ಲಿ ಧರ್ಮದ ನಕಾರಾತ್ಮಕ ಬಳಕೆಯ ಕುರಿತು ಕವಿ ಮಿಡಿದಿದ್ದಾರೆ.

ಕೆಲವು ತರ್ಕಗಳು ಆಧ್ಯಾತ್ಮಿಕ ತುಡಿತ ತುಂಬಿದ ಕವಿತೆ.

” ಹುಟ್ಟಿದ ಪ್ರೀತಿ
ಬಿತ್ತಿದ ಬೆಂಕಿ
ಎರಡೂ ಭಯಾನಕ
ಸುಡುವುದು ಒಂದು ಒಳಗೆ
ಇನ್ನೊಂದು ಹೊರಗೆ”

ಸತ್ಯದ ಹುಡುಕಾಟದಲ್ಲಿ ತೊಡಗಿದ ಕವಿಗೆ ಕಾಣುವ ಮತ್ತು ಕಾಡುವ ಸಂಗತಿಯಿದು.

ವೃಕ್ಷಮಾತೆ ಪರಿಸರದ ಕುರಿತು, ಸಾಲುಮರದ ತಿಮ್ಮಕ್ಕ ಅವರ ಬಗ್ಗೆ ಇರುವ ಕವಿತೆ. ಬಡವನ ನೊಗದಾಗ ನೂರೆಂಟು ಭಾರ ಮತ್ತು ಮುತ್ತೈದೆಯ ಮೂಗುತಿ ಜನಪದ ಶೈಲಿಯ ಗಮನಾರ್ಹ ಕವಿತೆಗಳು.

ಹೀಗೆ ಭಾಷೆ, ವಿಷಯ ವೈವಿಧ್ಯವನ್ನು ಹೊಂದಿರುವ ಈ ಕವನ ಸಂಕಲನದ ಸೊಗಸನ್ನು ಓದಿಯೇ ಅನುಭವಿಸಬೇಕು. ಒಂದು ಒಳ್ಳೆಯ ಕವನ ಸಂಕಲನ. ಬಿತ್ತಿದ ಬೆಂಕಿ ಕವನ ಸಂಕಲನವನ್ನು ಒಮ್ಮೆ ಓದಿ.
*************

ಡಾ. ಅಜಿತ್ ಹರೀಶಿ

Leave a Reply

Back To Top