‘ಕಲಬುರ್ಗಿಯಲ್ಲಿ ಗಜಲ್ ಗುಂಜನ’-ಕೆ ಗೋವಿಂದ ಭಟ್

25-08-2024 ರಂದು ಕಲಬುರ್ಗಿ ವಿ.ವಿ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಪ್ರಥಮ ಗಜಲ್ ಸಮ್ಮೇಳನ ಸಂಭ್ರಮ ಸಡಗರದಿಂದ ಜರುಗಿತು. ಗೋಷ್ಠಿ -೪ (ನಿನ್ನ ಗಜಲ್ ಗೆ ನನ್ನ ಕವಿತೆ) ಕಾರ್ಯಕ್ರಮ ವಿಶೇಷ ಗಮನ ಸೆಳೆಯಿತು. ಈ ಗೋಷ್ಠಿಯ ಅಧ್ಯಕ್ಷತೆಯನ್ನು  ಕೊಪ್ಪಳದ ಗಜಲ್ ಕವಯತ್ರಿ ಹಾಗು ಸಂಗೀತಗಾರ್ತಿ ಅನುಸೂಯ ಶಾಸ್ತ್ರಿ (ಜಹಗೀರದಾರ)ವಹಿಸಿದ್ದರು. ಅವರು ಅರ್ಥಪೂರ್ಣವಾಗಿ ಆಡಿದ ನುಡಿಗಳು  ಭಾವಪೂರ್ಣ.
ಮನಸೂರೆಗೊಂಡವು.
“ಗಜಲ್ ಗೇಯತೆಯ ನಡಿಗೆಯ ಭಾವ ಮೆಹಸೂಸಿನ ರಾಣಿ.ಹಾಡುಗಬ್ಬ.ಪ್ರೀತಿ ಎಂದಿಗೂ ಅಪಥ್ಯವಲ್ಲ.ಅದೆಲ್ಲರಿಗೂ ಅವಶ್ಯವಾದುದು.ಅಂತೆಯೇ ಪ್ರೇಮ ಪ್ರೀತಿ ಮೋಹ ಮೊಹಬ್ಬತ್ ಇಷ್ಕ ವಿಷಯ
ವಸ್ತುವುಳ್ಳ ಗಜಲ್ ಗಳೂ ಎಂದಿಗೂ ಎಲ್ಲರಿಗೂ ಪ್ರಿಯವಾದವುಗಳೇ,ಹಾಡಲು ಹೇಳಲು ಮತ್ತು ಓದಲು ಇಷ್ಟವಾದವುಗಳೇ ಆಗಿವೆ.ಈ ಪ್ರೀತಿ ವಯಕ್ತಿಕ,ಕೌಟುಂಬಿಕ,ಸಾಮಾಜಿಕ,ಮಾನವೀಯ ಅಂತಃಕರಣ ನೆಲೆಯುಳ್ಳದ್ದಾಗಿದೆ.ಆತ್ಮಿಕ ಆಧ್ಯಾತ್ಮಿಕ ನೆಲೆಯುಳ್ಳದ್ದಾಗಿದೆ.ಅದೊಂದು ಮೌನ.ಅದೊಂದು ಧ್ಯಾನ.ಅದೊಂದು ಗುಂಗು.ಅದೊಂದು ಲಹರಿ.ಅದೊಂದು ನಾದ.ಸದಾ ರಿಂಗಣಿಸುವ ಕಿವಿಗಳಲಿ ಗುಯ್ ಗುಡುವ ನಾದವೇ ಆಗಿದೆ.ಅದೇ ನಶೆಯಾಗಿದೆ.ಅತಿಯಾದ ಪ್ರೀತಿಯೂ ಭಕ್ತಿಯೇ ಆಗಿದೆ.ಎಂದು ಅನಸೂಯ ಜಹಗೀರದಾರ ಭಾವುಕರಾಗಿ ಹೇಳಿದರು.

ಸಾಹಿತ್ಯಕ್ಕೂ ಸಂಗೀತಕ್ಕೂ ಇರುವ ಅನಾದಿಕಾಲದ ನಂಟಿದೆ.ಕಾವ್ಯೇಶು ನಾಟಕಂ ರಮ್ಯಂ ಅನ್ನುವಂತೆ ಭರತನ ನಾಟ್ಯ ಶಾಸ್ತ್ರದಲ್ಲಿ ರಸಗಳ ಉಲ್ಲೇಖವಿದೆ.ರಸ ಪ್ರಧಾನ ರಾಗಗಳನ್ನು ಬಳಸಿ ನಾಟಕಗಳಲ್ಲಿ ಗೇಯ ಗೀತೆಗಳನ್ನು ಭಾವಪ್ರಧಾನವಾಗಿ ಬಳಸಿಕೊಳ್ಳಲಾಗಿದೆ.ನಮ್ಮ ಜನಪದರು ಗೇಯ ಗೀತೆಗಳನ್ನೇ ದೇಸಿ ಛಂದಸ್ಸಿನಲ್ಲಿ ಹಾಡಿದರು.ಕನ್ನಡದ ಬಯಲಾಟ,ಯಕ್ಷಗಾನ,ಶ್ರೀಕೃಷ್ಣ ಪಾರಿಜಾತ ಗೇಯ ಸಂದರ್ಭೋಚಿತ ಕಥಾವಸ್ತುವುಳ್ಳ ಸಂಗೀತ ಅಳವೆಡಿಸಿದ ಗೇಯಗೀತೆಗಳುಳ್ಳ ನೃತ್ಯ ರೂಪಕಗಳು ಪ್ರಖ್ಯಾತಿ ಪಡೆದಿವೆ.ಜನಮನ ಸೂರೆಗೊಂಡಿವೆ.ಮನರಂಜನೆಯ ಜೊತೆಜೊತಗೆ ಮನಕೆ ಆಹ್ಲಾದ ಉಂಟುಮಾಡುವ ಜನರ ಮನ ಮನ ಬೆಸೆಯುವ ತಾರೀಫಿಗೆ ಪಾತ್ರವಾಗುವ ಜನಪದ ಕಲೆಗಳಿವು.ಶಿಲಾಯುಗದ ಜನರೂ ಸಹ ತಮಗರ ತಿಳಿದ ತಾಳ,ಲಯ,ರಾಗದಲ್ಲಿ ಹಾಡಿರಬಹುದು.ಹಾಡು ಒಂದು ಭಾವಾಭಿವ್ಯಕ್ತಿ.ಸಂಗೀತ ವರ್ಣಾತೀತ.ಇಲ್ಲಿ ವರ್ಣವೆಂದರೆ ಅದು ಅಕ್ಷರಾತೀತ ಕೂಡ..! ಎಲ್ಲ ಭಾಷೆಗಳನ್ನು ಬೆಸೆಯುವ ಎಲ್ಲ ಭಾಷಿಗರನ್ನು ಬೆಸೆಯುವ ತಾಕತ್ತು ಸಂಗೀತಕ್ಕೆ ಮಾತ್ರ ಇದೆ.

ಚಂಪೂ,ಷಟ್ಪದಿ,ಕಂದಪದ್ಯ,ಸಾಂಗತ್ಯ,ತ್ರಿಪದಿ,ಮುಕ್ತಕ ಕಾವ್ಯಗಳು ಗಮಕ ಹಾಡುಗಾರಿಕೆ ವ್ಯಾಖ್ಯಾನದಲ್ಲಿ ಮನೆ ಮನೆ ಮಾತಾದವು.ಕಾವ್ಯ ಕತೆ ಮತ್ತು ವ್ಯಥೆಗಳನ್ನು ಮನೆ ಮನೆಗೆ ಮನ ಮನಕ್ಕೆ ತಲುಪಿಸಿದವು.ಇವತ್ತು ಕುಮಾರವ್ಯಾಸಭಾರತ,ಹರಿಶ್ಚಂದ್ರ ಕಾವ್ಯ,ಪ್ರಭುಲಿಂಗಲೀಲೆ ಜನಪ್ರಿಯಗೊಂಡವೆಂದರೆ ಅನಕ್ಷರಸ್ಥರು ಆ ಕತೆಯನ್ನು ತಿಳಿದು ಆನಂದಿಸಿ,ಪೇಚಾಡಿ,ಆಸ್ವಾದಿಸುತ್ತಾರೆಂದರೆ ಅದು ಗಮಕ ಕಲೆಗೆ ಇರುವ ಶಕ್ತಿಯಾಗಿದೆ.ಕೀರ್ತನೆ ಹೇಳುವ ಕೀರ್ತನಕಾರರು,ಪುರಾಣಕಾರರು ಸಂಗೀತ ಮತ್ತು ಸಾಹಿತ್ಯವನ್ನು ಅಳವಡಿಕೊಂಡಿರುತ್ತಾರೆ.ಪ್ರೇಕ್ಷಕ ಸಹೃದಯರನ್ನು ಭಕ್ತಿ ರಸದಲ್ಲಿ ತೇಳಿಸುತ್ತಾರೆ.ಸ್ವಾತಂತ್ಯ ಪೂರ್ವದಲ್ಲಿ,ಭಾಷಾನಾಡುಗಳು ರಚನೆಹೊಂದುವ ಪೂರ್ವದಲ್ಲಿ ದೇಶಭಕ್ತಿ ಗೀತೆ,ನಾಡಗೀತೆಗಳು ಜನರಲ್ಲಿ ಜಾಗೃತಿ ಮೂಡಿಸಿದವು.ಇದು ವೀರರಸ ಆಧಾರಿತ ರಾಗಗಳಲ್ಲಿ ಸಂಯೋಜನೆಯಾದ ಸಂಗೀತವಾಗಿತ್ತು.ವಂದೇ ಮತರಂ,ಸಾರೆ ಜಹಾಂಸೆ ಅಚ್ಛಾ,ಬಾರಿಸು ಕನ್ನಡ ಡಿಂಡಿಮವ,ಹಚ್ಚೇವು ಕನ್ನಡದ ದೀಪ ಈ ಎಲ್ಲ ಗೀತೆಗಳೂ ಗೇಯಗೀತೆಗಳೇ ಆಗಿವೆ.

ವಚನಗಳು ಗದ್ಯ ಕಾವ್ಯ ಎನಿಸಿದರೂ ಅನೇಕ ಗೇಯತೆಯ ವಚನಗಳನ್ನು ನಾವು ನೋಡಿದ್ದೇವೆ.ಸಂಗೀತಕ್ಕೆ ಅಳವಡಿಸಿದ್ದೇವೆ.ರಾಗ ಸಂಯೋಜನೆ ಮಾಡಿ ಹಾಡಿದ್ದೇವೆ.ತದನಂತರ ಹರಿದಾಸರು ಕರ್ನಾಟಕ ಸಂಗೀತವನ್ನು ಆವಿಷ್ಕರಿಸಿ ಅದ್ಭುತ ಕೊಡುಗೆ ನೀಡಿದರು.ಕರ್ನಾಟಕ ಸಂಗೀತವೆಂದೇ ಪ್ರಸಿದ್ಧಿ ಪಡೆಯಿತು.ಪುರುಂದರ ದಾಸರು ಅದರ ಹರಿಕಾರರಾದರು.ದಾಸ ವಾಙ್ಮಯದಲ್ಲಿ ಕೀರ್ತನೆಗಳು,ಉಗಾಭೋಗಗಳು ಸುಳಾದಿಗಳು ಪ್ರಸಿದ್ಧಿ ಪಡೆದವು ಸರಾಗವಾಗಿ ಹಾಡಲು ಬರುವಂತಾದವು.ತತ್ವಪದಗಳೂ ಸಹ ಗೇಯಗೀತೆಗಳಾಗಿವೆ.ಆಧುನಿಕ ರಂಗಗೀತೆಗಳನ್ನು ಹೆಸರಿಸಬಹಿದು.ಗೀತನಾಟಕಗಳು,ರೂಪಕಗಳನ್ನು ಉದಾಹರಿಸಬಹುದು. ಭಾವಗೀತೆಗಳು ಗೇಯ
ಗೀತೆಗಳಾದವು‌.ನವೋದಯ ಸಾಹಿತ್ಯ ಹಾಡುಗಾರಿಕೆಯಲ್ಲಿ ತನ್ನದೇ ಸ್ಥಾನ ಪಡೆಯಿತು. ನಂತರ ಕನ್ನಡದಲ್ಲಿ ಗಜಲ್ ಗಳೂ ಹಾಡುಗಾರಿಕೆಯಲ್ಲಿ ಸ್ಥಾನ ಪಡೆದಿವೆ. ಪಡೆಯುತ್ತಿವೆ. ಬಹಳಷ್ಟು ಧ್ವನಿಸುರುಳಿಗಳು ಬಂದಿವೆ.ಇದು ಕನ್ನಡದ ಸಾಹಿತ್ಯದ ಒಂದು ಸುತ್ತು ಪ್ರದಕ್ಷಿಣೆ.ಕೇವಲ ಪಕ್ಷಿನೋಟ.

ಇನ್ನು ಉರ್ದುಮತ್ತು ಹಿಂದಿ ಸಾಹಿತ್ಯದತ್ತ ಪಯಣಿಸಿದರೆ ಗಜಲ್ ಹಾಡುಗಾರಿಕೆ ತನ್ನದೇ ಗಟ್ಟಿ ಸ್ಥಾನ ಪಡೆದುಕೊಂಡಿದೆ.ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ಗಜಲ್ ಹಾಡುಗಾರಿಕೆಯೂ ಸೇರಿದೆ.
ಕಜರಿ,ಹೋರಿ,ದೃಪದ,ಧಮಾರ,ಚತುರಂಗ,ಟಪ್ಪಾ,
ತರಾನಾ,ಠುಮ್ರಿ,ದಾದರಾ,ಭಜನ್,ಖ್ಯಾಲ,ಖವ್ವಾಲಿ ಈ ಎಲ್ಲ ಗೀತ ಪ್ರಕಾರಗಳಂತೆ ಗಜಲ್ ಕೂಡ ಗಟ್ಟಿ ಸ್ಥಾನ ಉಳಿಸಿಕೊಂಡಿದೆ.ಗಜಲ್ ಹಾಡುಗಾರಿಕೆಗೆ ಶಾಸ್ತ್ರೀಯ ಪದ್ಧತಿ ಇದೆ.ಹಾಗೆಯೇ ಹಾಡುಗಾರಿಕೆಯಲ್ಲಿ ಶಾಸ್ತ್ರೀಯ ಹಿನ್ನೆಲೆ ಇಟ್ಟುಕೊಂಡು ಸಾಕಷ್ಟು ಬದಲಾವಣೆ ಆಗಿವೆ.ಆಗುತ್ತಿದೆ.ಹೊಸ ಗತಿಯಲ್ಲೂ ಗಜಲ್ ಗಳಲ್ಲಿ,ತಾಳ,ಭಾವ ರಸ ಬದ್ಧವಾದ ಹಾಡುಗಾರಿಕೆ ಇದೆ.
ಇವು ಜಹಗೀರದಾರ ಅವರ ಅಧ್ಯಕ್ಷೀಯ ನುಡಿಗಳಾಗಿದ್ದವು.ಈ ಮಾತುಗಳು ಗಜಲಿರಿಗೆ ಹೊಸಬರಾದವರಿಗೆ ಆ ಪ್ರಕಾರದ ಸಂಕ್ಷಿಪ್ತ ಚರಿತ್ರೆ ಕೇಳಿದಂತಾಯಿತು.

ಇದರೊಂದಿಗೆ ಕೆಲ ಉರ್ದು ಮತ್ತು ಹಿಂದಿ ಗಜಲ್ ಗಳನ್ನು ಓದಿ ಮತ್ತು ಹಾಡಿ ವಿವರಿಸಿದರು.
ವಿವರಣೆ ತಾನೇತಾನಾಗಿ ಹೊರಬಂದಂತೆ ಅನಿಸಿತು. ಹೃದಯದ  ಮಾತುಗಳಂತಿದ್ದುವು.
ಪ್ರತಿ ಹೃದಯವನ್ನು ತಲುಪಿದುವು. ಸಂಗೀತವೇ ಹಾಗೆ ಅದು ಸ್ಪರ್ಶಿಸುವುದು ನೇರ ರೂಹನ್ನು(ಆತ್ಮವನ್ನು).  ಜನ ಇಷ್ಟ ಪಟ್ಟರು.

ಹಜಾರೋಂ ಖ್ವಾಯಿಶೇಂ ಐಸೀ ಥಿ ಕೆ ಹರ ಖ್ವಾಯಿಶ್ ಪೆ ಗಮ್ ನಿಕಲೇ
ಬಹುತ ನಿಕಲೇ ಮೇರೇ ಅರಮಾನ್ ಲೇಖಿನ್
ಫಿರ ಭಿ ಕಮ್ ನಿಕಲೇ
ಅಸದುಲ್ಲಾ ಗಾಲಿಬ್ ರ ಈ ಗಜಲ್ ನ್ನು ವಿವರಣೆ ಸಹಿತ
ಹಾಡಿದರು.

ಅದೇ ರೀತಿ ತಮ್ಮದೇ ಒಂದು ಗಜಲ್
ನಿನ್ನ ನೋಡಿದ ಮೇಲೆ ಕವಿತೆಯೇ ಹುಟ್ಟಿಕೊಂಡಿತು
ಕಬ್ಬಿಗತಿ ನಾನಾದೆ ಭಾವೋನ್ಮಾದ ಬೆಸೆದುಕೊಂಡಿತು


ಇದನ್ನು ಶೃಂಗಾರ ರಸ ಪ್ರಧಾನವಾದ ಯಮನ್ ಕಲ್ಯಾಣ ರಾಗದಲ್ಲಿ ಹಾಡಿ ರಂಜಿಸಿದರು.ಇನ್ನೂ ಕೇಳಬೇಕೆನಿಸುತ್ತಿತ್ತು ಅಂತೆಲ್ಲ ಅಲ್ಲಿಯ ಸಭಿಕರು ಹೇಳುತ್ತಿದ್ದರು.ಆದರೆ ಸಮಯದ ಆಭಾವವಿತ್ತು.

ಶ್ರೀಮತಿ ಅನುಸೂಯ ಶಾಸ್ತ್ರಿ ಅವರು ಬಾಲ್ಯದಲ್ಲಿ ಮೊದಲು ಪ್ರವೇಶಿಸಿದ್ದು ಸಂಗೀತ ಮನೆಯನ್ನು. ೫ ನೆಯ ತರಗತಿಯಿಂದಲೇ ಕಲಿಯುತ್ತಿದ್ದರು. ೧೯೯೩ ರಲ್ಲಿ ಹಿಂದುಸ್ತಾನಿ ಕ್ಲಾಸಿಕ್ ವೋಕಲ್ ಸಂಗೀತದಲ್ಲಿವಿದ್ವತ್ ನ್ನು ಪ್ರಥಮ ಶ್ತೇಣಿಯಲ್ಲಿ ಪಾಸು ಮಾಡಿದ್ದರು.ಅಲ್ಲಲ್ಲಿ ಕಾರ್ಯಕ್ರಮ ಅಂತ ಬಂದಾಗ,ಹಾಡುವುದು ಅನಿವಾರ್ಯವಾದಾಗ, ಇಷ್ಟವಿದ್ದಾಗ ಮಾತ್ರ ರಿಯಾಜ್ ಮಾಡುವುದು. ನಂತರ ಕೈಚೆಲ್ಲಿ ಬಿಟ್ಟುಬಿಡುವುದು ಇದೇ ಆಗಿತ್ತು.ಸಂಸಾರ,ಉದ್ಯೋಗ,ಸಂಘಟನೆ ಮತ್ತು ಸಾಹಿತ್ತಿಕ ಕಾರ್ಯಕ್ರಮ ಹೀಗೆ..! ಇನ್ನು ಮುಂದೆ ಸಂಗೀತದತ್ತ ವಾಲುವ ಮನಸ್ಸಾಗಿದೆ ಎಂದು ಅನಸೂಯ ಶಾಸ್ತ್ರಿ ಅವರು ಹೇಳಿದರು.ಸಂಗೀತದ ಅನುಭೂತಿಯೇ ಬೇರೆ.ಆ ಮಾಧುರ್ಯ ಅಮಿತಾನಂದವಾದುದು.ಲೋಕ ನಾಯಕ ಈಶ್ವರನೊಂದಿಗಿನ ನೇರ ಬೆಸೆಯುವ ನಂಟೇ ಅದು.!! ಕಲಾಕಾರರ ಜಗತ್ತೇ ಹಾಗೆ.ಅವರು ತಮ್ಮ ಜಗತ್ತಿನ (ಸಲ್ತನತ್) ಬಾದಶಹರು.ಎಂದು ಮನದುಂಬಿ ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಚಾಲನೆಯನ್ನು ಮತ್ತು ನಿರೂಪಣೆಯನ್ನು ಗಜಲ್ ಅಕಾಡೆಮಿ ಕಾರ್ಯದರ್ಶಿಯಾದ ಈ ಕಾರ್ಯಕ್ರಮದ ಆಧಾರ ಸ್ಥಂಭಗಳಲ್ಲಿ ಒಬ್ಬರಾದ ಕ್ರಿಯಾಶೀಲತೆ ಮತ್ತು ವಿನೂತನ ಪ್ರಯೋಗಗಳ ರುವಾರಿ ಮಹಿಪಾಲರೆಡ್ಡಿ  ವಹಿಸಿಕೊಂಡಿದ್ದರು.ಗಜಲ್ ಜ್ಞಾನ ಪ್ರೌಢಿಮೆಯ ಮಾತೆ ಅಂತಃಕರಣದ ಒರತೆಯಾದ ಗಜಲ್ ಸಮ್ಮೇಳನದ ಸರ್ವಾಧ್ಯಕ್ಷರೂ ಆದ  ಶ್ರೀಮತಿ ಪ್ರಭಾವತಿ ದೇಸಾಯಿ ಮೇಡಮ್ ವೇದಿಕೆಯಲ್ಲಿದ್ದು ಕಾರ್ಯಕ್ರಮಕ್ಕೆ ಕಳೆ ತಂದಿದ್ದರು.ಶ್ರೀ ಶ್ರೀನಿವಾಸಪ್ರಭು ಮತ್ತು ಶ್ರೀಮತಿ ರಂಜನಿ ಪ್ರಭು ನಿನ್ನ ಗಜಲ್ ಗೆ ನನ್ನ ಕವಿತೆ ವಿನೂತನ ಕಾರ್ಯಕ್ರಮ ನಡೆಸಿಕೊಟ್ಟರು.

ಸುಂದರ ಅರ್ಥಪೂರ್ಣ ಅಚ್ಚುಕಟ್ಟು ಕಾರ್ಯಕ್ರಮ. ಇಡೀ ದಿನ ಆತ್ಮೀಯ ವಾತಾವರಣ ಅಲ್ಲಿ ಮನೆ ಮಾಡಿತ್ತು.ಬೇಸರ ತರಿಸದಂತಹ ಗೋಷ್ಠಿಗಳಿದ್ದವು. ಇಡೀ ದಿನ ಹಬ್ಬದ ವಾತಾವರಣ. ೪೦ ಜನ ಗಜಲಿಗರ ಎರಡು ಕವಿಗೋಷ್ಟಿಗಳು ಜರುಗಿದವು.ಅಚ್ಚುಕಟ್ಟು,ಶಿಸ್ತಿನ ಸಮಯ ಪ್ರಜ್ಞೆಯ ಕಾರ್ಯಕ್ರಮ ಇದಾಗಿತ್ತು.
ಗಜಲ್ ಘಮ ಘಮಿಸುತ್ತಿರಲಿ.ಇಂತಹ ಗೋಷ್ಠಿಗಳು ಮೇಲಿಂದ ಮೇಲೆ ಆಗುತ್ತಿರಲಿ.ಸಭಿಕರ ಮನಸೂರೆಗೊಳ್ಳುತ್ತಿರಲಿ


Leave a Reply

Back To Top