ಚಿಂತನ ಸಂಗಾತಿ
ಡಾ. ಯಲ್ಲಮ್ಮ ಕೆ
ಕೈಯಾಗ ಬಂಗಾರ ಇದ್ದಮ್ಯಾಲ
ಅರಗ ಹೊಂದಿಸೋದು ಎಷ್ಟೊತ್ತು..?
ಆ ದಿನ, ಯಾವ ದಿನ, ಸಮಯ, ಗಳಿಗೆ-ಪಳ, ಶುಭಾಶುಭಗಳ ಲೆಕ್ಕಾಚಾರ ನನಗೆ ಅಷ್ಟಾಗಿ ತಿಳಿದಿಲ್ಲವಾದ್ದರಿಂದ ಆ ದಿನ ಯಾವುದೆಂದು ಕರಾರುವಾಕ್ಕಾಗಿ ಹೇಳಲು ಆಗದು, ನಿನ್ನೆ, ಇಂದು ಮತ್ತು ನಾಳೆಗಳು ಪ್ರತಿಯೊಬ್ಬರ ಜೀವನದಲ್ಲೂ ಬರುವಂತೆ, ಆ ದಿನ ನನ್ನ ಕಾರ್ಯಕ್ಷೇತ್ರವಾದ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ತಾವರಗೇರಾ ಪಟ್ಟಣದಿಂದ ‘ವೃತ್ತಿ ಬುನಾದಿ ತರಬೇತಿ’ಗೆಂದು ವಾಯಾ – ಕುಷ್ಟಗಿ – ಗಜೇಂದ್ರಗಡ – ಗದಗ, ಹುಬ್ಬಳ್ಳಿ ಮಾರ್ಗವಾಗಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡಗೆ ಶ್ರೀ ಸಾಮಾನ್ಯ ದರ್ಜೆಯ ಬಸ್ ನಲ್ಲಿ ಹೊರಟಿದ್ದೆ, ಪ್ರಯಾಣ ಪ್ರಯಾಸದಾಯಕವಾಗದಿರಲು ಪಕ್ಕದಲ್ಲಿರುವವನನ್ನು ಮಾತಿಗೆ ಎಳೆಯೋಣ ಎಂದರೆ ಸಿಡುಕು ಮೋತಿ ಸಿದ್ದಪ್ಪನ ತರ ಮುಖ ಊದುಬಾಯಿಸಿಕೊಂಡು ಕುಂತಿದ್ದ, ಅದೇನು ಅಂತಾರಲ್ಲ ‘ಸುಮ್ನಿರಲಾರದೆ ಇರುವೆ ಬಿಟ್ಟುಕೊಂಡರು ಅಂತಾರಲ್ಲ’ ಹಾಗಾಗಬಾರದೆಂದು ಮನಸ್ಸು ಹಿಂದೇಟು ಹಾಕಿತು ಸುಮ್ಮನಾದೆ, ಮುಂದೆ ಆತ ಗಜೇಂದ್ರಗಡದಲ್ಲಿ ಆತ ಇಳಿದುಕೊಂಡ, ಎಡ-ಬಲ ಹಿಂದೆ-ಮುಂದೆ ಕಣ್ಣಾಡಿಸಿದೆ ಅಜ್ಜಿ ಒಬ್ಬಳು ಬಸ್ ಏರುವುದನ್ನ ಕಂಡೆ ಕೂಡಲೇ ನನ್ನ ವ್ಯಾನಿಟಿ ಬ್ಯಾಗ್ ಪಕ್ಕಕ್ಕೆ ಇಟ್ಟುಕೊಂಡು, ಅಜ್ಜಿಯನ್ನು ಕೂಗಿ ಕರೆದೆ, ನಮ್ಮ ರಾಜಕಾರಣಿಗಳಿಗೆ ಎಂಪಿ, ಎಂ.ಎಲ್.ಎ. ಎಲೆಕ್ಷನ್ಗೆ ರಾಷ್ಟ್ರೀಯ ಪಕ್ಷಗಳಿಂದ ಟಿಕೆಟ್ ಸಿಕ್ಕಷ್ಟೇ ಸಂತಸದಿ, ಬಸ್ ನಲ್ಲಿ ಸೀಟ್ ಸಿಕ್ಕಿದ್ದಕ್ಕೆ ಹಿರಿಹಿರಿ ಹಿಗ್ಗಿದ್ದಳು, ಅಜ್ಜಿಯನ್ನು ಮಾತಿಗೆ ಎಳೆಯೋಣ ಎನ್ನುವಷ್ಟರಲ್ಲಿ ತನ್ನ ಎಲೆ ಅಡಿಕೆ ಚೀಲದಿಂದ ಒಂದು ಚೀಟಿಯನ್ನು ತೆಗೆದು ಅದರಲ್ಲಿರುವ ನಂಬರ್ ಗೆ ಕಾಲ್ ಮಾಡುವಂತೆ ಕೇಳಿದಳು ನಾನು ಕಾಲ್ ಮಾಡಿ ಕೊಟ್ಟೆ, ‘ಮಾತ್ ಸಿಕ್ರೆ ಮ್ಯಾನೇದ ಹೊಲ ಸಿಕ್ಕಂಗೆ’ ಅಂತ ನಮ್ ಕಡೆಯ ಜನಜನಿತ ಮಾತಿದೆ, ಈ ಮಾತಿಗೆ ಇಂಬು ಕೊಡುವಂತೆ ಕಡಿಮೆ ಅಂದರೂ ಒಂದು ಗಂಟೆ ಮಾತನಾಡಿದಳು ಕಿವಿಗೊಟ್ಟು ಕೂತಿದ್ದ ನಾನು ಮಧ್ಯೆ ಬಾಯ್ಹಾಕಿದ್ದರಿಂದ ಮಾತು ಮುಗಿಸಿದಳು, ಅವಳ ಸಂಭಾಷಣೆಯ ಸಾರವಿಷ್ಟೇ – ಅಜ್ಜಿ ತಮ್ಮ ಸಂಬಂಧಿಯೊಬ್ಬಳ ಮಗನಿಗೆ ಹೆಣ್ಣು ನೋಡಲು ಗದಗನಲ್ಲಿ ಅವರನ್ನು ಕೂಡಿಕೊಂಡು ಹುಬ್ಬಳ್ಳಿಗೆ ಹೊರಡುವವಳಿದ್ದಳು, ಆ ಹೆಣ್ಣಿನ ಕುರಿತಾಗಿ ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿ ಹೊಲ-ಮನೆ, ಆಸ್ತಿಪಾಸ್ತಿ ಹೀಗೆಲ್ಲಾ ಯೋಚಿಸಿ ಅವರಿಗೆ ನಮಗೆ ಸಂಬಂಧ ಹೊಂದಿಕೆ ಆಗ್ತದ? ಅಜಗಜಾಂತರ! ಎಂಬ ಹುಡುಗನ ತಾಯಿಯ ಚಡಪಡಿಕೆಗೆ ಅಜ್ಜಿ ಸಮಜಾಯಿಸಿ ನೀಡಿದ ಮಾತಿಗೆ ಬೆರಗಾದೆ – “ಕೈಯಾಗ ಬಂಗಾರಿದ್ದಮ್ಯಾಲೆ ಅರಗ ಹೊಂದಿಸೋದು ಎಷ್ಟೊತ್ತು? ಅದು ಅಲ್ದೆ ಒಂದು ಹೆಣ್ಣಿಗೆ ಒಂದು ಗಂಡು, ಜತಿ-ಜೋಡು ಅಂತ ಹಣ್ಯಾಗ ಬರ್ದಿರ್ತಾನಂತೆ ಆ ಬೊಮ್ಮ, ಅವರವರ ರಿಣಾ ಎಲ್ಲಿ ಇರುತ್ತೋ ಅಲ್ಲಿ ಆಕಯ್ತಿ, ನಾವು ನಮ್ ಪ್ರಯತ್ನ ಮಾಡಬೇಕು ಅಷ್ಟೇ, ಎಲ್ಲಾ ಶಿವನಿಚ್ಛೆ” ಎಂದು ಮಾತು ಮುಗಿಸಿದ್ದಳು.
ಒಂದು ತಿಂಗಳ ತರಬೇತಿ ಅವಧಿಯಲ್ಲಿ ಏನನ್ನು ಕಲಿತೇನೋ ಏನೋ? ಆ ಅಜ್ಜಿಯ ಸಂಭಾಷಣೆಯಿಂದ ಬದುಕಿನ ‘ಪರಿ’ಪಾಠವನ್ನು ಕಲಿತೆ. ಆಯಾ ಕಾಲಘಟ್ಟದ ಜನ-ಜೀವನದ ಸಾಮಾಜೋಸಾಂಸ್ಕೃತಿಕ
ಇಕ್ಕಟ್ಟು – ಬಿಕ್ಕಟ್ಟುಗಳನ್ನು, ಬದುಕಿನ ಯತಾರ್ಥವನ್ನು ನಾಣ್ನುಡಿ, ಪಡೆನುಡಿ, ಗಾದೆಮಾತುಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಕುರಿತಾಗಿ ವಿಸ್ತೃತ ಅಧ್ಯಯನ, ಸಂಶೋಧನೆಗಳು ನಡೆಸಬಹುದಾಗಿದೆ.
“ಕೈಯಾಗ ಬಂಗಾರಿದ್ದಮ್ಯಾಲೆ ಅರಗ ಹೊಂದಿಸೋದು ಎಷ್ಟೊತ್ತು?” ಎಂಬ ನುಡಿಯೊಂದರಿಂದಲೇ ಅನಾದಿಕಾಲದಿಂದಲೂ ಹೆಣ್ಣನ್ನು ತಿರಸ್ಕಾರ ಮನೋಭಾವದಿ ಕಂಡಿರುವುದನ್ನು ಮನಗಾಣಬಹುದು.
ತನ್ನ ಮನಮೋಹಕ ಬಣ್ಣದಿಂದಲೇ ನೆಲೆ ಬೆಲೆಯನ್ನು ಕಂಡುಕೊಂಡ [ಕೆ.ಡಿ.ಎಂ, 916 – ಹಾಲ್ ಮಾರ್ಕ್ 24 ಕ್ಯಾರೆಟ್ ಗೋಲ್ಡ್ ] ಬಂಗಾರವೆಂದರೆ ಗಂಡು ಹೆಣ್ಣೆಂದರೆ ಕವಡೆಕಾಸಿನ ಕಿಮ್ಮತ್ತಿಲ್ಲದ ಕಪ್ಪು ಬಣ್ಣದ ಅರಗ [ವ್ಯಾಕ್ಸ್], ಹಿಂದಿನ ಕಾಲದಿ ಗ್ರಾಮೀಣ ಪ್ರದೇಶದ ಕಡುಮಧ್ಯಮ ವರ್ಗದ ಜನರ ಪಾಲಿಗೆ ಅರಗ ತುಂಬಿದ
ಟಿಕೆಮಣಿ, ಗುಂಡಿನಟೀಕಿ, ಗೆಜ್ಜೆಟೀಕೀ, ತಾಳಿಸರ ಇತರೆ
ಬಂಗಾರದ ಆಭರಣಗಳನ್ನು ಹಬ್ಬ-ಹರಿದಿನ, ಜಾತ್ರಾಮಹೋತ್ಸವ, ಮದುವೆ-ಮುಂಜಿ ಶುಭಕಾರ್ಯಗಳಲ್ಲಿ ಮೈತುಂಬ ಧರಿಸಿಕೊಂಡು ಮುಂದಾಳಾಗಿ ಶೋಭಿಸುತ್ತಿದ್ದರು. ಮುಂದುವರೆದು ‘ಅಜ್ಜಿ ಬಂಗಾರ ಮೊಮ್ಮಗಳಿಗೆ’ ಎನ್ನುವ ಮಾತಿನಂತೆ –
ತಲೆಮಾರಿನ ಅಂತರದಿ ಬದಲಾದ ಮನಸ್ಥಿತಿಯಲ್ಲಿ ಹಳೆ ಬಂಗಾರ ಮುರಿಸಿ ಹೊಸ ವಿನ್ಯಾಸದಿ ಮಾಡಿಸುವಾಗ ಅರಗ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಬಗೆಯು
ಪ್ರಸ್ತುತ ಸ್ತ್ರೀ ಅಸ್ಮಿತೆಯ ಪ್ರಶ್ನೆಯೇ ಆಗಿದೆಯೇ? ಈ ಹಿನ್ನಲೆಯಲ್ಲಿ ‘ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕೆ ಊರೂರು ಅಲೆದರಂತೆ’, ‘ಹೆಣ್ಣುಮಕ್ಕಳ ಬುದ್ಧಿ ಮೊಣಕಾಲು ಕೆಳಗೆ’, ಹೆಣ್ಣಿಗೆ ಹೆಣ್ಣೇ ಶತ್ರು ಅಂತ್ಹೇಳಿ ಮೂಗಿಗೆ ತುಪ್ಪ ಸವರಿ, ಎರಡು ಜೆಡೆಗಳನ್ನು ಒಂದು ಮಾಡಲಾಗದೆಂದು ಈರ್ವರ ನಡುವೆ ಜಗಳ ತಂದಿತ್ತುದರ ಹಿಂದಿನ ಮರ್ಮವ ತಿಳಿಯಬೇಕು, ಹೀಗೆ ಇನ್ನಿತರೆ ಮಾತುಗಳನ್ನು ಅವಲೋಕಿಸಬೇಕಿದೆ,
ಸಾಮಾನ್ಯವಾಗಿ ಹೆಣ್ಣುಮಕ್ಕಳು ಬಂಗಾರ ಪ್ರಿಯರು ಎನ್ನುವ ಮಾತಿದೆ, ಹಾಗಾದ್ರೆ ಹೆಣ್ಣು ಬಯಸುವ ಬಂಗಾರ ಯಾವುದು – ಗಂಡೇ? ಹಿಂದು ಸನಾತನ ಧರ್ಮದ ತಳಹದಿಯಲ್ಲಿ ಕಟ್ಟಿಕೊಡಲಾದ ವೇದ-ಉಪನಿಷತ್ತುಗಳಲ್ಲಿ – ಸ್ತ್ರೀಯರನ್ನು ಕಂಡಿರುವ ಬಗೆಗೂ ಜನಪದರ ಕಂಡಿರುವ ಬಗೆಗೂ ಹೆಚ್ಚು ಭಿನ್ನತೆಯನ್ನು ಕಾಣಬಹುದು. ಒಂದೆಡೆ ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ ನಾಟಕದಿ ಕಣ್ವ ಮಹರ್ಷಿಗಳು ಹೇಳುವ ಮಾತು “ಹೆಣ್ಣೆಂದರೆ ಪೆರರ್ ಒಡವೆ” ಆ ಒಡವೆ ಯಾವುದು? ಬಂಗಾರದವೋ, ಗಿಲಿಟಿನ್ ಒಡವೆಯೋ?
ಸೀತೆ ರಾವಣನ ಅಷ್ಟೈಶ್ವರ್ಯಗಳನ್ನು ತೊರೆದುದು, ಮತ್ತೊಂದೆಡೆ ಜನ್ನನ ಯಶೋಧರ ಚರಿತೆಯಲ್ಲಿ ಅಮೃತಮತಿ ರಾಜವೈಭೋಗವನ್ನು ತೊರೆದುದು ಈರ್ವರು ಬಯಸಿದುದು ಏನು? ಹೆಣ್ಣೆಂದರೆ ಅರಗವೇ? ಗಂಡೆಂದರೆ ಬಂಗಾರವೇ? ಮತ್ತೊಮ್ಮೆ ಆಲೋಚಿಸಬೇಕಿದೆ.
ಡಾ. ಯಲ್ಲಮ್ಮ ಕೆ
ಬರಹ ಸ್ವಾರಸ್ಯಕರವಾಗಿದೆ. ಅಜ್ಜಿ ಆಡಿದ ಒಂದು ಮಾತಿನ ಎಳೆಯ ಹಿಂದೆ ಎಷ್ಟೆಲ್ಲ ಅರ್ಥ ಇದೆ ಎಂಬುದನ್ನು ವ್ಯವಸ್ಥೆಯೊಂದಿಗೆ ಅನುಸಂಧಾನಗೊಳಿಸಿ ನಡಿಸಿದ ಚಿಂತನಾ ಲಹರಿ, ಮತ್ತು ಬರಹದ ಭಾಷಾ ಸೊಗಡು ಓದುಗರಿಗೆ ಆಪ್ತವಾಗುತ್ತದೆ. ಹೆಣ್ಸಾಣ ಬದುಕಿನ ಬಗೆಗಿರುವ ಸಾಮಾಜಿಕ ಮನಸ್ಥಿತಿಯನ್ನು ಲೇಖನ ತೆರೆದಿಡುವಲ್ಲಿ ಮತ್ತು ಆ ಕುರಿತು ಚಿಂತನೆಗೆ ಹಚ್ಚುವಲ್ಲಿ ಇಲ್ಲಿನ ಬರಹ ಯಶಸ್ವಿಯಾಗಿದೆ. ಅಭಿನಂದನೆಗಳು ಯಲ್ಲಮ್ಮ ಅವರೆ.
ಡಾ.ಸುಮಂಗಲಾ ಅತ್ತಿಗೇರಿ, ಶಿಗ್ಗಾಂವ, ಹಾವೇರಿ ಜಿಲ್ಲೆ.