ಡಾ.ಪ್ರದೀಪ್ ಕುಮಾರ್ ಹೆಬ್ರಿ ಅವರ ಕೃತಿ ‘ಗುಜರಾತಿಗೊಂದು ಸುತ್ತು’ ಒಂದು ಅವಲೋಕನ ಗೊರೂರು ಅನಂತರಾಜು.

ಡಾ.ಪ್ರದೀಪ್ ಕುಮಾರ್ ಹೆಬ್ರಿ ಅವರ ಕೃತಿ ಗುಜರಾತಿಗೊಂದು ಸುತ್ತು.. ಮೊನ್ನೆ ನನ್ನ ಕೈ ಸೇರಿತು.  ಲೇಖಕರು ತಾವು ಹತ್ತು ದಿನಗಳ ಗುಜರಾತ್ ಪ್ರವಾಸ ಮಾಡಿ ಬಂದು ಬರೆದ ಕೃತಿ ಕುತೂಹಲದಿಂದ ಓದಿದೆ. ಲೇಖಕರು ಕನ್ನಡ ವಿಶ್ವಕೋಶ, ಸಾಮಾಜಿಕ ಜಾಲತಾಣಗಳಿಂದ ಕೆಲವು ವಿಷಯಗಳನ್ನು ಸಂಗ್ರಹಿಸಿ. ಇದಕ್ಕೆ ತಮ್ಮ ಪ್ರವಾಸಿ ಅನುಭವವನ್ನು ಸಂಮಿಶ್ರಗೊಳಿಸಿ ಸೊಗಸಾಗಿ ದ್ವಾರಕಾ ದರ್ಶನ ಮಾಡಿಸಿದ್ದಾರೆ. ‘ಇದು ಪ್ರವಾಸ ಕಥನವಲ್ಲ, ಪ್ರವಾಸ ದರ್ಶನ ಎಂದಿದ್ದಾರೆ. ಕಳೆದ ೨ ವರ್ಷಗಳ ಹಿಂದೆ ನಾನು ಮತ್ತು  ನಮ್ಮ ಕುಟುಂಬ ಗುಜರಾತ್ ಪ್ರವಾಸ ಮಾಡಿ ದ್ವಾರಕಾ ದರ್ಶನ ಮಾಡಿ ಬಂದಿದ್ದೇವೆ. ಈ ಪುಸ್ತಕದ ಓದು ಮತ್ತೆ ನಮ್ಮ ಪ್ರವಾಸದ ಆ  ದಿನಗಳನ್ನು ನೆನಪಿಸಿ ಭಕ್ತಿ ಪರವಶತೆ ಮೂಡಿಸಿತು. ಪುಸ್ತಕದಿಂದ ಆಯ್ದ ಒಂದಿಷ್ಟು ಮಾಹಿತಿ ಇದು.
 ಗುಜರಾತ್ ಭಾರತದ ಪ್ರಮುಖ ಕೈಗಾರಿಕೆಗಳನ್ನು ಒಳಗೊಂಡ ರಾಜ್ಯ. ಮಹಾತ್ಮ ಗಾಂಧೀ, ಸರ್ದಾರ್ ವಲಭಬಾಯಿ ಪಟೇಲ್ ಜನಿಸಿದ, ಶ್ರೀ ಕೃಷ್ಣನ ದ್ವಾರಕಾ ಇರುವ ರಾಜ್ಯ. ಪ್ರಧಾನಿ ಮೋದಿಜಿ ಮುಖ್ಯಮಂತ್ರಿಯಾಗಿದ್ದ ರಾಜ್ಯ. ಗುಜರಾತ್ ಅರಬ್ಬೀ ಸಮುದ್ರ, ಪಾಕಿಸ್ತಾನದ ಸೀಮೆಗೆ ಸಮೀಪವಿದೆ. ಗುಜರಾತ್‌ನ ರಾಜಧಾನಿ ಗಾಂಧಿನಗರ. ಗುಜರಾತ್‌ನ ವಾಣಿಜ್ಯ ರಾಜಧಾನಿ ಅಹಮದಬಾದ್. ಗುಜರಾತಿನ ಪ್ರಾದೇಶಿಕ ಬಾಷೆ ಗುಜರಾತಿ. ಐತಿಹಾಸಿಕ, ಸಾಂಸ್ಕೃತಿಕ ಹಿನ್ನೆಲೆಯುಳ್ಳ ರಾಜ್ಯವಿದು. ಶ್ರೀಕೃಷ್ಣನ ಮೊಮ್ಮಗ ಅನಿರುದ್ಧನ ಮಡದಿ ಉಷಾ ಆರಂಭಿಸಿದ ಲಾಸ್ಯ ಪರಂಪರೆ ಇಂದಿಗೂ ಈ ರಾಜ್ಯದ ಹಬ್ಬ. ಹುಣ್ಣಿಮೆಗಳಲ್ಲಿ ಮುಖ್ಯವಾಗಿ ನವರಾತ್ರಿ ಹಬ್ಬದಲ್ಲಿ ಗರ್ಭಾ ನೃತ್ಯದಲ್ಲಿ ಇದು ಉಳಿದು ಬಂದಿದೆ,
ಈಗಿನ ಗುಜರಾತಿನ ಪ್ರದೇಶದಲ್ಲಿ ಹಿಂದೆ ಆನರ್ತ, ಸೌರಾಷ್ಟ್ರ. ಲಾಟ ಎಂಬ ಮೂರು ಭೌಗೋಳಿಕ ಭಾಗಗಳಿದ್ದವು. ಆನರ್ತ ಗುಜರಾತಿನ ಉತ್ತರ ಭಾಗ. ಮಹಾಭಾರತ ಕಾಲದಲ್ಲಿ ಇದರ ರಾಜಧಾನಿ ಕುಶಸ್ಥಲೀ. ಈ ನಗರ ನಾಶವಾದ ಬಳಿಕ ದ್ವಾರಕಾ ನಗರ ಹೊಸದಾಗಿ ಸ್ಥಾಪಿತವಾಯಿತು. ಇದು ಯಾದವರ ರಾಜಧಾನಿಯಾಯಿತು. ದ್ವಾರಕಾ, ಪ್ರಭಾಸಗಳರೆಡೂ ಸೌರಾಷ್ಟ್ರದಲ್ಲಿದ್ದವು. ಆನರ್ತದ ಮುಖ್ಯ ಪಟ್ಟಣ ಈಗಿನ ವಡ್ನಾಗರ. ಸೌರಾಷ್ಟ್ರ ಎಂಬುದು ಈಗಿನ ಕಾಠಿಯಾವಾಡಕ್ಕೆ ೧೮ನೇ ಶತಮಾನದವರೆಗೂ ಇದ್ದ ಹೆಸರು. ಮಾಹೆಯಿಂದ ತಾಪಿ ನದಿಯವರೆಗಿನ ಗುಜರಾತಿನ ಪ್ರದೇಶಕ್ಕೆ ಲಾಟ ಎಂಬ ಹೆಸರಿದೆ.
ವಿಷ್ಣು ಪುರಾಣದಲ್ಲಿ ಸೌರಾಷ್ಟ್ರವನ್ನು ಕುರಿತು ಕತೆಯೊಂದಿದೆ. ಅನತರ್ತ್ ಎಂಬ  ದೊರೆ ಕುಶಸ್ಥಲೀ ರಾಜಧಾನಿಯಿಂದ ಆಳುತ್ತಿದ್ದ. ಅನತರ್ತ್ ಸಹ ಇವನ ರಾಜ್ಯದ ಒಂದು ಭಾಗವಾಗಿತ್ತು. ಇವನ ಮಗ ರೇವತನ ಮೊಮ್ಮಗಳು ರೇವತಿಯು ಯಾದವ ವಂಶದ ಅರಸನಾದ ದ್ವಾರಕೆಯ ಬಲದೇವನ ಪತ್ನಿ. ರೇವತಿಯ ತಂದೆ ರೈವತ. ರೈವತನನ್ನು ಸೋಲಿಸಿ ಬಲದೇವ ಸೌರಾಷ್ಟ್ರ ಅಧಿಪತಿಯಾದ. ವಸುದೇವ ಯಾದವರ ವಂಶದಲ್ಲಿ ಜನಿಸಿದವನು. ಇವನು ಕೃಷ್ಣನ ತಂದೆ. ಮಗನನ್ನು ಯಶೋದೆಯ ಬಳಿ ಇಟ್ಟು ಬಂದಿದ್ದ. ಯಶೋದೆಯ ಗಂಡ ನಂದಗೋಪ. ಈ ದಂಪತಿಗಳ ಮಗ ಬಲರಾಮ. ಮಧುರಾಪತಿ ಕಂಸನ ಮರಣಾ ನಂತರ ಕಂಸನ ಮಾವನಾದ ಜರಾಸಂಧನ ಉಪಟಳವನ್ನು ತಡೆಯಲಾರದೆ ಅವರು ಮಥುರೆಯನ್ನು ಬಿಟ್ಟು ಅನತರ್ತ್ ದೇಶದಲ್ಲಿ ದ್ವಾರಕೆಯನ್ನು ನಿರ್ಮಿಸಿದರು. ಸೌರಾಷ್ಟ್ರದಲ್ಲಿ ಆಳಿದ ಯಾದವರು ಅಂತ:ಕಲಹಗಳ ಪರಿಣಾಮವಾಗಿ ಕುರುಕ್ಷೇತ್ರ ಯುದ್ದ ಮುಗಿದ ೩೬ ವರ್ಷಗಳಲ್ಲಿಯೇ ಬಡಿದಾಡಿಕೊಂಡು ಸತ್ತರು. ದ್ವಾರಕೆ ನಿರ್ಜನವಾಯಿತು. ಇದನ್ನು ಸಮುದ್ರ ನುಂಗಿತು. ನಮ್ಮ ಪುರಾಣ ಕಥೆಗಳಾದ ಮಹಾಭಾರತ, ಹರಿವಂಶ, ಭಾಗವತ, ಸ್ಕಂದ, ವಿಷ್ಣು ಪುರಾಣಗಳ ಅನುಸಾರ ದ್ವಾರಕವು ಈಗಿನ ದ್ವಾರಕಾ ನಗರದ ಬಳಿಯಲ್ಲೇ ಇತ್ತು. ಆದರದು ಸಮುದ್ರದಲ್ಲಿ ಮುಳುಗಿ ಮರಳಿನಿಂದ ಆವೃತ್ತವಾಗಿದೆ.
ದ್ವಾರಕವು ಜಾಮ್ ನಗರ ಜಿಲ್ಲೆಯ ನಗರಸಭಾ ಪ್ರದೇಶ. ದೇಶದ ೧೦ ಅತಿ ಪುರಾತನ ನಗರಗಳಲ್ಲಿ ಇದು ಒಂದು. ದ್ವಾರಕಾ ನಗರವು ಭಗವಾನ್ ಶ್ರೀಕೃಷ್ಣನು ವಾಸಿಸುತ್ತಿದ್ದ ಸ್ಥಳ. ಈ ನಗರವು ಸಮುದ್ರದಲ್ಲಿ ೬ ಬಾರಿ ಮುಳುಗಿ ಹೋಗಿ ಹೆಚ್ಚಿನ ಹಾನಿ ನಾಶಕ್ಕೆ ಒಳಗಾದ ಪ್ರದೇಶ. ಆಧುನಿಕ ದ್ವಾರಕಾವು ೭ನೇ ಬಾರಿ ಅದೇ ಪ್ರದೇಶದಲ್ಲಿ ನಿರ್ಮಿಸಿದ ನಗರ. ಈಗ ಯಾತ್ರಾಸ್ಥಳವಾಗಿ ಶ್ರೀಕೃಷ್ಣ ಭಕ್ತರ ಪರಮ ಪವಿತ್ರ ತಾಣ. ದ್ವಾರಕಾ ನಗರವನ್ನು ಕುಬೇರನ ಅಲಕಾಪುರಿಗೆ ಹೋಲಿಸುತ್ತಾರೆ. ಮಹಾಭಾರತದ ಸಭಾ ಪರ್ವದಲ್ಲೂ, ಮಾಘನ ಶಿಶುಪಾಲ ವಧೆಯ ೩ನೇ ಸರ್ಗದಲ್ಲಿಯೂ ಇದರ ವರ್ಣನೆ ಇದೆ. ಶ್ರೀಕೃಷ್ಣನ ನಿರ್ಯಾಣಾ ನಂತರ ಅವರ ಅರಮನೆಯೊಂದನ್ನು ಬಿಟ್ಟು ಉಳಿದ ದ್ವಾರಕಾ ನಗರವೆಲ್ಲಾ ಸಮುದ್ರದಲ್ಲಿ ಮುಳುಗಿತು. ನಂತರ ಶ್ರೀಕೃಷ್ಣನ ಅರಮನೆ ಇದ್ದ ಜಾಗದಲ್ಲಿ ವಜ್ರನಾಥನೆಂಬ ದೊರೆ ರಣಭೋಡಜಿ ಎಂಬ ಶ್ರೀಕೃಷ್ಣನ ಮೂಲ ಮಂದಿರವನ್ನು ನಿರ್ಮಿಸಿದನೆಂದು ಹೇಳಲಾಗಿದೆ.
ದ್ವಾರಕದಲ್ಲಿರುವ ಶ್ರೀ ದ್ವಾರಕಾಧೀಶ ೫ ಮಹಡಿಗಳ ಗೋಪುರ ಹೊಂದಿದ ದೇವಾಲಯ. ಇದನ್ನು ಭಗವಾನ್ ಶ್ರೀಕೃಷ್ಣನ ಮೊಮ್ಮಗ ಸಾಂಬ ಕಟ್ಟಿಸಿ ವಿಶ್ವಕರ್ಮನಿಂದ ನಿರ್ಮಿತವೆಂಬ ನಂಬಿಕೆಯಿದೆ. ಈ ದೇವಸ್ಥಾನವು ಸುಣ್ಣದ ಕಲ್ಲು ಮತ್ತು ಮರಳಿನಿಂದ ನಿರ್ಮಾಣಗೊಂಡುದಾಗಿದೆ. ಪ್ರತೀದಿನ ದೇವಸ್ಥಾನದ ಗೋಪುರದ ಮೇಲೆ ಧ್ವಜವನ್ನು ಐದು ಬಾರಿ ಹಾರಿಸುತ್ತಾರೆ. ಈ ಧ್ವಜವು ಬೀಸುವ ಗಾಳಿಗೆ ಪಟಪಟನೆ ಬಡಿಯುತ್ತಾ ನಮ್ಮ ಮನಸ್ಸನ್ನು ಸೆಳೆಯುತ್ತದೆ. ದೇವಾಲಯಕ್ಕೆ ೨ ದ್ವಾರಗಳಿವೆ. ನಾವು ಪ್ರವೇಶಿಸುವ ಸ್ವರ್ಗದ್ವಾರ ಮತ್ತು ನಿರ್ಗಮಿಸುವ ಮೋಕ್ಷದ್ವಾರ. ಗೋಮತಿ ನದಿಯು ಸಮುದ್ರದೆಡೆಗೆ ಹರಿದು ಸೇರುವ ಸಂಗಮ ಈ ದೇವಸ್ಥಾನದ ಬಳಿ ನಿಂತು ನೋಡಿ ಕಣ್ತುಂಬಿಕೊಂಡವು. ದ್ವಾರಕಾದಲ್ಲಿ ವಸುದೇವ, ದೇವಕಿ, ಬಲರಾಮ ಹಾಗೂ ರೇವತಿ, ಸುಭದ್ರಾ ರುಕ್ಮೀಣಿದೇವಿ, ಜಾಂಬವತಿದೇವಿ, ಸತ್ಯಾಭಾಮದೇವಿಯರ ದೇವಾಲಯಗಳಿವೆ. ಬೆಟ್ ದ್ವಾರಕಾಕ್ಕೆ ದೋಣಿಯಲ್ಲಿ ಹೋಗಬೇಕು. ಹೋದೆವು. ಇಲ್ಲಿ ಭಗವಾನ್ ದ್ವಾರಕನಾಥನ ತರಹವೇ ಇರುವ ದೇವರ ವಿಗ್ರಹವಿದೆ. ದೇವಸ್ಥಾನವು ಅರಮನೆಯಂತಿದೆ. ಈ ದೇವಾಲಯವು ಲಕ್ಷ್ಮೀನಾರಾಯಣ, ತ್ರಿವಿಕ್ರಮ, ಜಾಂಬವತಿದೇವಿ, ಸತ್ಯಭಾಮದೇವಿ, ರುಕ್ಮಿಣಿದೇವಿ ದೇವಾಲಯಗಳನ್ನು ಹೊಂದಿದೆ. ದ್ವಾರಕಾನಗರದ ಹೆಸರು ದ್ವಾರ ಎಂಬ ಶಬ್ಧದಿಂದ ಉತ್ಪತ್ತಿಯಾಗಿದೆ. ದ್ವಾರ ಎಂದರೆ ಬಾಗಿಲು. ದ್ವಾರಕಾವನ್ನು ಹಿಂದೂ ಧರ್ಮೀಯರ ನಂಬಿಕೆಯ ಪವಿತ್ರ ನಗರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಕೃಷ್ಣನದೇ ಒಂದು ರೂಪವಾದ ದ್ವಾರಕಾಧೀಶನನ್ನು ಹೊಂದಿರುವ ಜಗತ್ಮಂದಿರವೂ ದ್ವಾರಕಾನಗರದಲ್ಲಿ ನೆಲೆಯಾಗಿದೆ. ದ್ವಾರಕಾವು ದ್ವಾರಕಾಪೀಠವನ್ನೂ ಹೊಂದಿದೆ. ಇದನ್ನು ಶಾರದಾಪೀಠ ಎಂದೂ ಕರೆಯುತ್ತಾರೆ. ಅಚಾರ್ಯ ಶ್ರೀ ಶಂಕರರು ಸ್ಥಾಪಿಸಿದ ಶೃಂಗೇರಿ, ಪುರಿ,  ಜ್ಯೋತಿರ್ಮಠವು ಸೇರಿದಂತೆ ನಾಲ್ಕು ಪ್ರಮುಖ ಮಠಗಳಲ್ಲಿ ಇದೂ ಒಂದಾಗಿದೆ. ಆದಿಶಂಕರರು ದ್ವಾರಕಾಧೀಶನ ದೇವಾಲಯಕ್ಕೂ ಭೇಟಿ ನೀಡಿದ್ದರು. ಇಲ್ಲಿ ಭಗವಂತನು ಕಲ್ಯಾಣ ಕೋಲಮ್ ವೇಷಧಾರಿ ಯಾಗಿದ್ದು, ವೈಭವಯುಕ್ತ ಮದುವೆ ವೇಷಭೂಷಣದಲ್ಲಿ ಕಾಣಿಸಿಕೊಂಡಿದ್ದಾನೆ. ಭಗವಾನ್ ಶ್ರೀಕೃಷ್ಣನು ಇಲ್ಲಿ ವಾಸವಿದ್ದು ಅವನ ವಂಶಜರು ಈ ದೇವಾಲಯವನ್ನು ನಿರ್ಮಿಸಿದರೆಂಬ ನಂಬಿಕೆಯೂ ನಮ್ಮಲ್ಲಿ ಭಕ್ತಿ ಪರವಶತೆಯನ್ನು ಉಕ್ಕಿಸುತ್ತದೆ.  
———————————————–

Leave a Reply

Back To Top