ಮಕ್ಕಳ: ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
ಅಭಿಜಿತ… ಗ್ರಾಂಡ್ ಮಾಸ್ಟರ್ ಆಫ್ ರೈಟಿಂಗ್
( ಇಂದಿನ ಪಾಲಕರು ಅರಿಯಬೇಕಾದ್ದು )
ತನ್ನ 7ನೇ ವಯಸ್ಸಿನಲ್ಲಿ ಪುಸ್ತಕವನ್ನು ಪ್ರಕಟಿಸಿರುವ ಗಾಜಿಯಾಬಾದ್ ಮೂಲದ ಅಭಿಜಿತ ಎಂಬ ಎಂಟು ವರ್ಷದ ಬಾಲಕಿ ಬರವಣಿಗೆಯ ಕ್ಷೇತ್ರದಲ್ಲಿ ಮಿಂಚುತ್ತಿದ್ದಾಳೆ
ಈಗಾಗಲೇ ಮೂರು ಪುಸ್ತಕಗಳನ್ನು ಬರೆದಿರುವ ಅಭಿಜಿತ ಗ್ರಾಂಡ್ ಮಾಸ್ಟರ್ ಆಫ್ ರೈಟಿಂಗ್ ಎಂಬ ಟೈಟಲ್ ಅನ್ನು ಪಡೆದಿದ್ದಾಳೆ. ಐದು ವರ್ಷದ ಬಾಲಕಿಯಾಗಿದ್ದಾಗಲೇ ಮೊದಲ ಕಥೆಯನ್ನು ಬರೆದಿರುವ ಅಭಿಜಿತಳ ಬರೆಯುವ ಆಸಕ್ತಿಯನ್ನು ಕಂಡ ಆಕೆಯ ಪಾಲಕರು ಆಕೆಗೆ ಪ್ರೋತ್ಸಾಹಿಸಿದರು. ಲಾಕ್ಡೌನ್ ನ ಸಮಯದಲ್ಲಿ ಆಕೆಯ ಬರವಣಿಗೆ ಮತ್ತಷ್ಟು ಬೆಳವಣಿಗೆಯನ್ನು ಕಂಡಿತು.
ಲಾಕ್ ಡೌನ್ ಗಳಿಗೆಗಳಲ್ಲಿ ಮನೆಯಿಂದ ಹೊರಗೆ ಕಾಲಿಡಲಾಗದ ಪರಿಸ್ಥಿತಿಯಲ್ಲಿ ಬರಹದ ಜಗತ್ತಿನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಳು ಅಭಿಜಿತ. ಅಭಿಜಿತಳ ತಂದೆ ಆಕೆಗೆ ಹೊಸ ಹೊಸ ವಿಷಯಗಳನ್ನು ಅರಿತುಕೊಳ್ಳಲು, ಟಿವಿ ಮತ್ತು ಮೊಬೈಲ್ಗಳಿಂದ ದೂರವಿರಿಸಲು ಪುಸ್ತಕ ಓದುವುದನ್ನು ರೂಢಿ ಮಾಡಿಸಿದರು.
ದೇಶದ ಸುಪ್ರಸಿದ್ಧ ಕವಿ ಮೈಥಿಲಿಶರಣ್ ಗುಪ್ತ ಅವರ ಸಂಬಂಧಿಯಾಗಿರುವ ಅಭಿಜಿತಳ ಹೆಸರಿನಲ್ಲಿ ಈಗಾಗಲೇ ಐದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಾಖಲೆಗಳಿವೆ.ಅತ್ಯಂತ ಚಿಕ್ಕ ವಯಸ್ಸಿನಲ್ಲಿ ದೇಶದ 40 ಜನ ಯುವ ಐಕಾನ್ ಗಳಲ್ಲಿ ಒಬ್ಬಳಾಗಿ ಆಕೆಯನ್ನು ಗುರುತಿಸಿರುವ ಸರ್ಕಾರ ಆಕೆಗೆ ‘ಗ್ರಾಂಡ್ ಮಾಸ್ಟರ್ ಆಫ್ ರೈಟಿಂಗ್’ ಎಂದು ಕರೆದು ಗೌರವಿಸಿದೆ.
ಬರಹದ ಜೊತೆ ಜೊತೆಗೆ ಅಭಿಜಿತ ವರ್ಣ ಚಿತ್ರ ಮತ್ತು ರೇಖಾ ಚಿತ್ರಗಳನ್ನು ಕೂಡ ಹವ್ಯಾಸವಾಗಿ ಮುಂದುವರೆಸಿದ್ದಾಳೆ ಆಕೆಯ ಪಾಲಕರೆ ಒತ್ತಾಸೆ ಮತ್ತು ಆಕೆಯ ಸ್ವ ಆಸಕ್ತಿ ಆಕೆಯನ್ನು ಇಂದು ದೇಶದ ಮುಂಚೂಣಿ ಯುವಬರಹಗಾರರಲ್ಲಿ ಒಬ್ಬಳನ್ನಾಗಿಸಿದೆ.
ನಾನು ನನ್ನ ಬರಹದ ಮೂಲಕ ಇಡೀ ಜಗತ್ತಿನ ಜೊತೆ ಮಾತನಾಡಬಲ್ಲೆ ಎಂದು ತನ್ನ ಬರಹದ ಬಗೆಗಿನ ಪ್ರೀತಿಯನ್ನು ಹೇಳಿಕೊಳ್ಳುವ ಅಭಿಜಿತ ಇಂದಿನ ನವ ಪೀಳಿಗೆಯ ಮಕ್ಕಳಿಗೆ ಮಾದರಿಯಾಗಿದ್ದಾಳೆ.
ಅಯ್ಯೋ! ನಮ್ಮ ಮಕ್ಕಳು ಮೂರು ಹೊತ್ತೂ ಮೊಬೈಲ್ ಹಿಡಿತಾರೆ, ಒಂಚೂರು ನಮ್ಮ ಮಾತು ಕೇಳೋದಿಲ್ಲ ಒಂಚೂರು ನಮ್ಮ ಮಾತು ಕೇಳೋದಿಲ್ಲ, ಓದಿನಲ್ಲಿ ಆಸಕ್ತಿ ಇಲ್ಲ, ಪುಸ್ತಕ ಹಿಡಿಯೋದಿಲ್ಲ, ಶಾಲೆಯ ಪರೀಕ್ಷೆಗಳಲ್ಲಿ ಕಡಿಮೆ ಮಾರ್ಕು ತರುತ್ತಾರೆ ಎಂದು ಮಕ್ಕಳ ತಪ್ಪುಗಳನ್ನು ಪಟ್ಟಿ ಮಾಡಿ ಹೇಳುವ ಪಾಲಕರೇ ಹೆಚ್ಚಾಗಿರುವ ನಮ್ಮ ಸಮಾಜದಲ್ಲಿ ಮಕ್ಕಳ ಆಸಕ್ತಿಯನ್ನು ಗಮನಿಸಿ ಅದಕ್ಕೆ ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಟ್ಟರೆ ಅವರು ಕೂಡ ಅಭಿಜಿತಾಳಂತೆ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಹೆಸರು ಮಾಡಬಹುದು.
ಮಕ್ಕಳು ಶಾಲೆಯಿಂದ ಮನೆಗೆ ಬಂದ ಕೂಡಲೇ ಅವರಿಗೆ ಸುಧಾರಿಸಿಕೊಳ್ಳಲು ಕೂಡ ಬಿಡದೆ ಬ್ಯಾಗನ್ನು ಎತ್ತಿಡು, ಡ್ರೆಸ್ ಚೇಂಜ್ ಮಾಡು, ಕೈ ಕಾಲು ಮುಖ ತೊಳೆದುಕೊಂಡು ಬಾ ಎಂದು ಶಿಸ್ತಿನ ಪಾಠ ಮಾಡತೊಡಗಿದರೆ ಮಕ್ಕಳು ಬೇಸರ ಮಾಡಿಕೊಳ್ಳುತ್ತವೆ.
ಮಕ್ಕಳು ಶಾಲೆಯಿಂದ ಬಂದ ನಂತರ ಅವರಿಗೆ ಸುಧಾರಿಸಿಕೊಳ್ಳಲು ಸಮಯಾವಕಾಶ ನೀಡಿ, ಅಂದು ಶಾಲೆಯಲ್ಲಿ ಏನು ನಡೆಯಿತು ಎಂಬುದರ ಕುರಿತು ಕುತೂಹಲ ವ್ಯಕ್ತಪಡಿಸಿದರೆ ಮಕ್ಕಳು ತಮ್ಮೆಲ್ಲ ಶಾಲಾ ದಿನಚರಿಯನ್ನು ಪಾಲಕರ ಮುಂದೆ ಹೇಳುತ್ತಾರೆ. ಆಸಕ್ತಿಯಿಂದ ಅವರು ಹೇಳುವ ಎಲ್ಲ ಮಾತುಗಳನ್ನು ಕೇಳಿ, ಮಕ್ಕಳಿಗೆ ಸೂಚಿಸಿದರೆ ತಕರಾರಿಲ್ಲದೆ ಮುಂದಿನ ಕೆಲಸಕ್ಕೆ ಅಣಿಯಾಗುತ್ತಾರೆ.
ಮಕ್ಕಳು ಚೆನ್ನಾಗಿ ಓದಬೇಕಾದರೆ ಮನೆಯಲ್ಲಿ ಪಾಲಕರು ಮಕ್ಕಳಿಗೆ ಮನೆಯಲ್ಲಿ ಸರಿಯಾದ ಸ್ಥಳಾವಕಾಶ, ಕಾಲಾವಕಾಶವನ್ನು ಒದಗಿಸಿಕೊಡಬೇಕು. ಮಕ್ಕಳಿಗೆ ಬೇಕಾಗಿರೋದು ಅಪ್ಪ ಅಮ್ಮ ತಮ್ಮ ಜೊತೆ ಸಮಯ ಕಳೆಯಲಿ ಎಂಬ ಪುಟ್ಟ ಅಪೇಕ್ಷೆ.ಅಪ್ಪ ಅಮ್ಮ ಜೋರು ಜೋರಾಗಿ ಸ್ನೇಹಿತರೊಂದಿಗೆ ಮೊಬೈಲಿನಲ್ಲಿ ಮಾತನಾಡುತ್ತಾ ಇಲ್ಲವೇ ಟಿವಿ ನೋಡುತ್ತಾ ಮಕ್ಕಳಿಗೆ ರೂಮಿನಲ್ಲಿ ಕುಳಿತುಕೊಂಡು ಓದಿಕೋ ಬರೆದುಕೋ ಎಂದು ಹೇಳಿದರೆ ಯಾವ ಮಕ್ಕಳು ತಾನೇ ಕುಳಿತು ಓದುತ್ತಾರೆ?
ಮಕ್ಕಳಿಗೆ ಸಾಯಂಕಾಲ ಒಂದು ಗಂಟೆಯ ಕಾಲ ಆಟ ಆಡಲು ಅವಕಾಶ ನೀಡಿ ನಂತರ ಕೈ ಕಾಲು ಮುಖ ತೊಳೆಯಲು ಹೇಳಿ ಪ್ರತಿದಿನ ಸಾಯಂಕಾಲ ಇಲ್ಲವೇ ರಾತ್ರಿ ಸಮಯವೊಂದನ್ನು ನಿಗದಿ ಮಾಡಿ ಆ ಸಮಯದಲ್ಲಿ ಮಕ್ಕಳಿಗೆ ಅವರ ಶಾಲಾ ಹೋಂವರ್ಕ್ ಮಾಡಿಕೊಳ್ಳುವಾಗ ಪಾಲಕರು ಸಹ ಅವರೊಂದಿಗೆ ಕುಳಿತು ಅವರ ಕಾರ್ಯ ಚಟುವಟಿಕೆಗಳಲ್ಲಿ ಆಸಕ್ತಿವಹಿಸಿದರೆ ಮಕ್ಕಳು ನಿರಾಯಾಸವಾಗಿ ಹೋಮ್ ವರ್ಕ್ ಮುಗಿಸುತ್ತಾರೆ, ಪಾಲಕರು ಜೊತೆಗಿರುವುದರಿಂದ ಅವರ ಹುಮ್ಮಸ್ಸು ಮತ್ತಷ್ಟು ಹೆಚ್ಚುತ್ತದೆ.
ಇದರ ಜೊತೆಗೆ ಮಕ್ಕಳ ಆಸಕ್ತಿಗಳತ್ತ ಗಮನಹರಿಸಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ. ಮಕ್ಕಳು ಬಾಲ್ಯ ಜೀವನದಲ್ಲಿ ಕಲಿತ ಕೆಲ ಪಾಠಗಳು ಮರೆತು ಹೋಗಬಹುದು ಆದರೆ ಬಟ್ಟೆ ತರ ಚಟುವಟಿಕೆಗಳಲ್ಲಿ ಅವರು ಮಾಡಿದ ಚಿಕ್ಕ ಪುಟ್ಟ ಸಾಧನೆಗಳು ಅದಕ್ಕಾಗಿನ ಅವರ ತಯಾರಿ ಜೀವಿತದ ಕೊನೆಯವರೆಗೂ ಮಧುರ ನೆನಪಾಗಿ ಉಳಿದುಹೋಗುತ್ತದೆ.
ಭಾರತದ ಮಾಜಿ ರಾಷ್ಟ್ರಪತಿ, ಕ್ಷಿಪಣಿ ವಿಜ್ಞಾನಿ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರು ಕ್ಲಾಸ್ ರೂಮ್ ನ ಕೊನೆಯ ಬೆಂಚುಗಳಲ್ಲಿ ನಾವು ಮಾಡಿದ ತುಂಟಾಟಗಳು ನಮ್ಮ ಬದುಕಿನ ಮಧುರ ಸವಿ ಕ್ಷಣಗಳು ಎಂದು ಹೇಳಿರುವುದು ಇದಕ್ಕೇ ಇರಬಹುದು.
ಆದ್ದರಿಂದ ಪಾಲಕರೆ, ನಿಮ್ಮ ಮಕ್ಕಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಸಮಾನವಾಗಿ ಭಾಗವಹಿಸಲು ಪ್ರೋತ್ಸಾಹಿಸಿ ಅವರ ಭವ್ಯ ಭವಿಷ್ಯಕ್ಕೆ ಮುನ್ನುಡಿ ಬರೆಯಿರಿ. ಯಾರು ಬಲ್ಲರು ನಮ್ಮ ನಿಮ್ಮ ಮನೆಗಳಲ್ಲಿಯೂ ಕೂಡ ಓರ್ವ ಸಂಗೀತಗಾರ /ರ್ತಿ, ನೃತ್ಯಪಟು, ವಾದ್ಯಪಟು, ಕ್ರೀಡಾಪಟು, ವರ್ಣ ಚಿತ್ರ ಕಲಾವಿದ, ಬರಹಗಾರ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಪ್ರತಿಭಾನ್ವಿತ ಮಕ್ಕಳಿರಬಹುದು. ಮಕ್ಕಳು ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಬದುಕನ್ನು ಕಟ್ಟಿಕೊಳ್ಳಬಹುದು.ಐಷಾರಾಮಿ ಬದುಕನ್ನು ಸಾಗಿಸಲಾಗುವುದಿಲ್ಲ ಎಂದು ನೀವು ಅಂದುಕೊಳ್ಳುವುದಾದರೆ ಆತ್ಮ ಸಂತೃಪ್ತಿಗೆ ಸಮನಾದ ಐಶ್ವರ್ಯ ಇಲ್ಲ ಎಂಬುದು ನನ್ನ ಅಂಬೋಣ. ಏನಂತೀರಾ?
ವೀಣಾ ಹೇಮಂತ್ ಗೌಡ ಪಾಟೀಲ್