ಸಿನಿ ಸಂಗಾತಿ
ಗೊರೂರು ಶಿವೇಶ್
ಕಲ್ಕಿ ಕ್ರಿಶ 2898 ವಿಮರ್ಶೆ
ಕಲ್ಕಿ ಕ್ರಿಸ್ತಶಕ 2898 :
ಪುರಾಣದೊಂದಿಗೆ
ವಿಜ್ಞಾನದ ಬೆಸುಗೆ
(ಅಶ್ವತ್ಥಾಮ ಶಾಪಗ್ರಸ್ತನಾಗುವ ಸಂದರ್ಭ ಮತ್ತು ತನ್ನ ತಪ್ಪಿಗಾಗಿ ಪಶ್ಚಾತಾಪ ಪಟ್ಟು ಮುಕ್ತಿಗಾಗಿ ಯಾಚಿಸುವ ಸಂದರ್ಭದಲ್ಲಿ ದಶಾವತಾರದ 8ನೇ ಅವತಾರದಲ್ಲಿದ್ದ ಕೃಷ್ಣ ಮತ್ತೊಮ್ಮೆ ಕಲಿಯುಗದ ಪಾತಕಗಳು ಹೆಚ್ಚಾಗಿ ಧರ್ಮ ನಶಿಸುವ ಸಂದರ್ಭ ಕಲ್ಕಿಯಾಗಿ ಉದಯಿಸುತ್ತೇನೆ, ಆ ಸಂದರ್ಭದಲ್ಲಿ ತಾಯಿ ಮತ್ತು ಉದರದಲ್ಲಿನ ಮಗುವನ್ನು ಕಾಯಬೇಕಾದ ಜವಾಬ್ದಾರಿಯನ್ನು ಅಶ್ವತ್ಥಾಮನಿಗೆ ನೀಡಿ ತದನಂತರ ಮೋಕ್ಷವೆಂದು ತಿಳಿಸುತ್ತಾನೆ.)
ಕಲ್ಕಿ ಕ್ರಿಸ್ತಶಕ 2898 : ಪುರಾಣದೊಂದಿಗೆ ವಿಜ್ಞಾನದ ಬೆಸುಗೆ
“ಇಂಥರ್ಪನ್ ಇಲ್ಲಮೇಂದಿದ್ದೆ ಈಗಲೋ ಇಂಥರ್ಪನ್ ಇಲ್ಲಮೆಂದೆ ಆದೆ ” ಇದು ನಾನು ಅಧ್ಯಾಪಕನಾಗಿದ್ದಾಗ ನನಗೆ ಪ್ರಿನ್ಸಿಪಾಲಾಗಿದ್ದ ಎಂ ಕೆ ರಾಜುರವರು ನೆನಪಿಸಿಕೊಳ್ಳುತ್ತಿದ್ದ ಬಿಎಂಶ್ರೀ ಅವರ ಅಶ್ವತ್ಥಾಮನ್ ನಾಟಕದ ಸಾಲುಗಳು .ಗ್ರೀಕ್ ರುದ್ರ ನಾಟಕಗಳನ್ನು ಕನ್ನಡಕ್ಕೆ ತಂದ ಕನ್ನಡದ ಕಣ್ವ ಬಿ ಎಂ ಶ್ರೀ ಅವರು ಅದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ಸಫೋಕ್ಲಿಸ್ ನ ಎಜಾಕ್ಸ್. ಕನ್ನಡಕ್ಕೆ ತರಲು ಹೊರಟಾಗ ಆ ಪಾತ್ರಕ್ಕೆ ಸಮಾಂತರವಾಗಿ ಕಂಡುಕೊಂಡ ಪಾತ್ರವೇ ಅಶ್ವತ್ಥಾಮ ಅದಕ್ಕಾಗಿ ಆಯ್ದುಕೊಂಡ ಸಂದರ್ಭ ಕುರುಕ್ಷೇತ್ರದ ಅಂತಿಮ ದಿನಗಳು. . ಭಾರತೀಯ ಜಾಯಮಾನಕೆ ಅಷ್ಟಾಗಿ ಒಗ್ಗದ ಈ ದುರಂತ ನಾಟಕಗಳು ಮುಂದೆ ಲಂಕೇಶರ ಅಂತಿಗೊನೆ ಕುವೆಂಪುರವರ ರಕ್ತಾಕ್ಷಿಯಲ್ಲಿ ಮುಂದುವರೆದು ಸಾಕಷ್ಟು ದುರಂತ ನಾಟಕಗಳು ವಿಭಿನ್ನ ನೆಲೆಯಲ್ಲಿ ರಚಿತವಾಗಿವೆ
ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ಊರು ಭಂಗವಾಗಿ ತೊಡೆಮರಿದು ಸಾವಿನ ನಿರೀಕ್ಷೆಯಲ್ಲಿರುವ ದುರ್ಯೋಧನ ಬಳಿ ಬರುವ ಅಶ್ವತ್ಥಾಮ ದುರ್ಯೋಧನನ ಕೊನೆಯ ಬೇಡಿಕೆಯನ್ನು ನೆರವೇರಿಸಲು ಪಂಚಪಾಂಡವರ ತಲೆಯನ್ನು ತರಲು ಹೊರಟು ಕೃಷ್ಣನ ತಂತ್ರದಿಂದಾಗಿ ಬಾಲ ಪಾಂಡವರ ತಲೆಗಳ ( ನಾಟಕದಲ್ಲಿ ಪ್ರಾಣಿಗಳ) ತರಿದು ತಂದು ದುರ್ಯೋಧನನಲ್ಲಿ ನಿರಾಸೆ ಮೂಡಿಸುವುದರ ಜೊತೆಗೆ ಶಿಶು ಹತ್ಯೆಯ ದೋಷಿತನಾಗಿ ಕೃಷ್ಣನಿಂದ ಶಾಪ ಪಡೆದು ಸಮಾಜ ಭ್ರಷ್ಟನಾಗುವ ಕಥೆಯನ್ನು ಕೂಡ ಬಾಲ್ಯದಲ್ಲಿ ಕೇಳಿದ್ದೇವೆ. ಇಂತಹ ವಿಶಿಷ್ಟ ಕಥೆಗಳನ್ನು ಆಧರಿಸಿ ಭಾರತೀಯ ಬಹು ಭಾಷೆಗಳಲ್ಲಿ ಬಿಡುಗಡೆ ಆಗಿರುವ 600 ಕೋಟಿ ಅಧಿಕ ವೆಚ್ಚದ ಕಲ್ಕಿ ಚಿತ್ರ ಬಿಡುಗಡೆಯಾದ ಒಂದು ವಾರದೊಳಗೆ ತನ್ನ ಬಂಡವಾಳವನ್ನು ಹಿಂಪಡೆದು ಸಹಸ್ರ ಕೋಟಿಗಳ ಗಳಿಕೆಯ ಕಡೆಗೆ ದಾಪುಗಾಲು ಹಾಕುತ್ತಿದ್ದು ಮುಂದೆ ಭಾರತೀಯ ಭಾಷೆಗಳಲ್ಲಿ ಅತಿ ಹೆಚ್ಚು ಗಳಿಕೆಯ ಸಿನಿಮಾಗಳಲ್ಲೊಂದು ಎಂದು ಹೆಗ್ಗಳಿಕೆಗೆ ಪಾತ್ರರಾಗುವುದರಲ್ಲಿ ಸಂದೇಹವಿಲ್ಲ.
ಇಪ್ಪತ್ತನೇ ಶತಮಾನದ ಅರವತ್ತು ಎಪ್ಪತ್ತರ ದಶಕದ ಬಹುಭಾಷಾ ನಟಿ ಸಾವಿತ್ರಿಯವರ ಜೀವನ ಚರಿತ್ರೆಯನ್ನು ಆದರಿಸಿ ನಾಗ್ ಅಶ್ವಿನ್ ನಿರ್ದೇಶಿಸಿದ ಮಹಾನಟಿ ಆರು ವರ್ಷಗಳ ಹಿಂದೆ ತೆಲುಗಿನಲ್ಲಿ ಬಿಡುಗಡೆಯಾಗಿ ಯಶಸ್ವಿಯಾದ ಚಿತ್ರ. ಅದರಲ್ಲಿ ನನಗೆ ಆಕರ್ಷಿಸಿದ್ದು ಒಂದು ಕನಸಿನ ಹಾಡಿನ ಚಿತ್ರಣ .ದೂರ ಗಗನದಲ್ಲಿನ ಪ್ರಿಯತಮೆಯ ದನಿಯನ್ನು ಕೇಳಿ ಹಾರಿ ಹೋಗುವ ನಾಯಕ ಹಂತ ಹಂತವಾಗಿ ಮೇಲೇರಿ ಪ್ರಿಯತಮೆ ಜೊತೆಗೂಡಿ ಚಂದ್ರಲೋಕ ತಲುಪಿ ಅಲ್ಲಿ ವಿಹರಿಸುವ “ಮೂಗ ಮನಸಲು” ಹಾಡು ಸುಶ್ರಾವ್ಯವಾಗಿರುವುದರ ಜೊತೆಗೆ ಚಿತ್ರಣದ ಕಲ್ಪನೆಯೂ ಕೂಡ ಖುಷಿ ನೀಡುತ್ತದೆ, ಆ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಈಗ ಅದೇ ಬ್ಯಾನರ್ಗೆ ವಿಜ್ಞಾನ ಮತ್ತು ಪುರಾಣ ಮಿಶ್ರಿತ ಕಥೆಯನ್ನು ನಿರ್ದೇಶಿಸಿದ್ದಾರೆ.
ಚಿತ್ರದ ಭಾಗ ಒಂದು ಬಿಡುಗಡೆಯಾಗಿದೆ. ಅಶ್ವತ್ಥಾಮ ಶಾಪಗ್ರಸ್ತನಾಗುವ ಸಂದರ್ಭ ಮತ್ತು ತನ್ನ ತಪ್ಪಿಗಾಗಿ ಪಶ್ಚಾತಾಪ ಪಟ್ಟು ಮುಕ್ತಿಗಾಗಿ ಯಾಚಿಸುವ ಸಂದರ್ಭದಲ್ಲಿ ದಶಾವತಾರದ 8ನೇ ಅವತಾರದಲ್ಲಿದ್ದ ಕೃಷ್ಣ ಮತ್ತೊಮ್ಮೆ ಕಲಿಯುಗದ ಪಾತಕಗಳು ಹೆಚ್ಚಾಗಿ ಧರ್ಮ ನಶಿಸುವ ಸಂದರ್ಭ ಕಲ್ಕಿಯಾಗಿ ಉದಯಿಸುತ್ತೇನೆ, ಆ ಸಂದರ್ಭದಲ್ಲಿ ತಾಯಿ ಮತ್ತು ಉದರದಲ್ಲಿನ ಮಗುವನ್ನು ಕಾಯಬೇಕಾದ ಜವಾಬ್ದಾರಿಯನ್ನು ಅಶ್ವತ್ಥಾಮನಿಗೆ ನೀಡಿ ತದನಂತರ ಮೋಕ್ಷವೆಂದು ತಿಳಿಸುತ್ತಾನೆ.
ಮುಂದೆ ಚಿತ್ರ6,000 ವರ್ಷ ಮುಂದಕ್ಕೆ ಕ್ರಿಸ್ತಶಕ 2898ಕ್ಕೆ ಬದಲಾಗುತ್ತದೆ ಕಲ್ಕಿಯ ಅವತಾರವಾಗುವ ಮುಂಚಿನ ಸನ್ನಿವೇಶ. ಪ್ರಳಯ ನಂತರದ ಭೂಮಿಯ ಮೇಲಣ ಕಾಂಪ್ಲೆಕ್ಸ್ ವಿಶೇಷ ವಲಯದಲ್ಲಿ ವಾಸಿಸುತ್ತಾ ವಿಶ್ವವನ್ನೇ ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡು ತನ್ನ ಕಮಾಂಡರ್ಗಳ ಮೂಲಕ ಆಳುತ್ತಿರುವ ಯಾಸ್ಕೀನ್( ಕಮಲಹಾಸನ್). ಆತ ಗರ್ಭಿಣಿಯರ ಭ್ರೂಣದ ಸಿರಮ್ ಅನ್ನು ಪಡೆದುಕೊಂಡು ತನ್ನ ಆಯಸ್ಸು ಹೆಚ್ಚಿಸಿಕೊಂಡಿದ್ದಾನೆ . ಆದರೆ ಇದುವರೆಗೂ ಅವನಿಗೆ ದಕ್ಕಿದ್ದು ಕೇವಲ ಈಗ ಅವನದೇ ಸುಪರ್ದಿಯಲ್ಲಿ ಇರುವ ಗರ್ಭಿಣಿಯರಲ್ಲಿನ 120 ದಿನ ದಾಟದ ಭ್ರೂಣಗಳ ಸಿರಂ. ನಾನು ಗರ್ಭಿಣಿ ಎಂಬುದನ್ನು ಗೌಪ್ಯವಾಗಿ ಕಾಯ್ದಿಟ್ಟುಕೊಂಡ ನಾಯಕಿ( ದೀಪಿಕಾ ಪಡುಕೋಣೆ ). ಆಕಸ್ಮಿಕವಾಗಿ ಆಕೆ ಸೆರೆ ಸಿಕ್ಕಾಗ ಆಕೆ 150 ದಿನಗಳ ಭ್ರೂಣದ ಒಡತಿ ಎಂಬ ಅರಿವು ಯಾಸ್ಕಿನ್ ನ ಕಮಾಂಡರ್ ಗಳಿಗೆ ಗೊತ್ತಾಗುತ್ತದೆ . ಆಕೆಯ ಬ್ರೂಣದ ಒಂದು ರಕ್ತದ ಬಿಂದು ಇನ್ನೂರು ವರ್ಷ ದಾಟಿರುವ ಯಾಸ್ಕಿನ್ನನ್ನು ಮತ್ತೆ ನಳನಳಿಸುವಂತೆ ಮಾಡಿದೆ. ಅವತಾರ ಪುರುಷನ ಆಗಮನ ಸನ್ನಿ ಹಿತವಾಗಿದೆ ಎಂಬ ಅರಿವು ಮೂಡುವಷ್ಟರಲ್ಲಿ ಆಕೆ ತಪ್ಪಿಸಿಕೊಳ್ಳುತ್ತಾಳೆ ಈಗ ಆಕೆಯನ್ನು ಕಾಯುವ ಜವಾಬ್ದಾರಿ ಅಶ್ವತ್ಥಮನದು ( ಅಮಿತಾಬ್ ಬಚ್ಚನ್) .
ಕಥೆಗೆ ಸಮಾಂತರವಾಗಿ ಕಂಪ್ಲೆಕ್ಸ್ ನೋಳಗೆ ಪ್ರವೇಶ ಪಡೆಯಲು ಬೇಕಾದ ದಶಲಕ್ಷ ಯೂನಿಟ್ ಗಳನ್ನು (ಡಿಜಿಟಲ್ ಕರೆನ್ಸಿ) ಗಳಿಸಲು ಹೆಣಗಾಡುತ್ತಿರುವ ಬೌಂಟಿ ಕಿಲ್ಲರ್ ಭೈರವ (ಹಣಕ್ಕಾಗಿ ಅಪರಾಧಿಗಳನ್ನು ಕೊಲ್ಲುವವ) ತನ್ನ ಎ ಐ ಸ್ನೇಹಿತ ಬೂಜಿ ರಣರಂಗ ಪ್ರವೇಶ ಮಾಡುತ್ತಾನೆ ಕಾಯುವ ಕೊಲ್ಲುವ ಅವರಿಬ್ಬರ ನಡುವೆ ಹೋರಾಟ ಸಾಗುತ್ತಿರುವಂತೆ ಭೈರವ ಮಹಾಭಾರತದ ಕರ್ಣ ಎಂಬ ಸೂಚನೆಯನ್ನು ಪ್ರೇಕ್ಷಕರಿಗೆ ನೀಡಿ ಚಿತ್ರ ಮುಕ್ತಾಯವಾಗುತ್ತದೆ .ಭಾಗ ಎರಡರಲ್ಲಿ ಮಹಾಭಾರತದ ರೋಚಕ ಕಥನವನ್ನು ಎದುರು ನೋಡುತ್ತಾ ಪ್ರೇಕ್ಷಕ ಹೊರಬರುತ್ತಾನೆ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಂಡರೆ ಅದು ಮೂರನೇ ಭಾಗಕ್ಕೆ ಹೋಗಬಹುದು.
ಚಿತ್ರದಲ್ಲಿ 800 ವರ್ಷಗಳ ಭವಿಷ್ಯತ್ತಿನ ಜಗತ್ತನ್ನು ನಿರ್ದೇಶಕರು ಹೇಳಹೊರಟಿದ್ದು ಕಥೆ ತುಂಬಾ ಸಂಕೀರ್ಣ. ಇತ್ತೀಚೆಗೆ ಪಾಶ್ಚಾತ್ಯ ಚಿತ್ರಗಳ ಬಾಹ್ಯಾಕಾಶ ಜೀವಿಗಳು ಯಂತ್ರ ಮಾನವರು ಬೃಹತ್ ತೆರೆಯನ್ನು ಆವರಿಸುವ ಪ್ರಾಣಿ ಪಕ್ಷಿಗಳು ಕಲ್ಪನಾ ಶಕ್ತಿಯನ್ನು ಮೀರಿದ ವಾಹನಗಳು ಆಯುಧಗಳು ಉಪಕರಣಗಳು ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ಹಳೆಯ ತಲೆಮಾರಿನ ಪ್ರೇಕ್ಷಕರಿಗೆ ರುಚಿಸದಿದ್ದರೂ ಆರಂಭಿಕ ಅಂತ್ಯದಲ್ಲಿರುವ ಪೌರಾಣಿಕ ಸನ್ನಿವೇಶಗಳು ಇಷ್ಟವಾಗಬಹುದು ಇತ್ತೀಚೆಗೆ ಇಂತಹದ್ದೇ ಹಾಲಿವುಡ್ ಸಿನಿಮಾಗಳು ವೆಬ್ ಸೀರೀಸ್ ಗಳು ನೋಡುತ್ತಿರುವ ಯುವಜನತೆಗೆ ಚಿತ್ರ ಇಷ್ಟವಾಗುತ್ತದೆ. ಗ್ರಾಫಿಕ್ಸ್, ಆಧುನಿಕ ಸಿನಿಮಾ ತಂತ್ರಗಳ ಛಾಯಾಗ್ರಹಣ ,ಕಿವಿಗಡಚಿಕ್ಕುವ ಸದ್ದು, ವಿಜೃಂಭಿಸಿರುವ ಚಿತ್ರದಲ್ಲಿ ಅಶ್ವತ್ಥಾಮನ್( ಅಮಿತಾಬ್) ಪಾತ್ರಕ್ಕೆ ಹೆಚ್ಚು ಒತ್ತು ನೀಡಿದ್ದು ಎರಡನೇ ಭಾಗದಲ್ಲಿ ಭೈರವ ಪತ್ರ (ಪ್ರಭಾಸ್ )ವಿಜ್ರಂಭಿಸಬಹುದು ಎಂಬ ಸುಳಿವು ಸಿನಿಮಾದ ಅಂತ್ಯದಲ್ಲಿ ಸಿಗುತ್ತದೆ .
ಗೊರೂರು ಶಿವೇಶ್
ಕನ್ನಡ ಭಾಷೆಯಲ್ಲಿ ಇರೋದು ನೋಡಿದ್ರೆ ಸಿನಿಮಾ ಅರ್ಥ ಆಗ್ತಾ ಇತ್ತು, ಗ್ರಾಫಿಕ್ ಟೆಕ್ನಾಲಜಿ ಜಾಸ್ತಿ ಇದೆ, ಕೊನೆಯ ಅಂತ ಮಾತ್ರ ಇಷ್ಟವಾಯ್ತು. ಚಂದದ ವಿಶ್ಲೇಷಣೆ sir ಓದಿದ ಮೇಲೆ ಮೂವಿ ಸ್ವಲ್ಪ ಅರ್ಥ ಆಯ್ತು
ಧನ್ಯವಾದಗಳು