ಮೇಘ ರಾಮದಾಸ್ -ಜಿ’ಪುಸ್ತಕ ಪ್ರೀತಿ ಮತ್ತಷ್ಟು ಬೆಳೆಯಲಿ’ ಪುಸ್ತಕಪ್ರೇಮಿಗಳ ದಿನಕ್ಕೆ

ಪುಸ್ತಕಗಳು ಅನೇಕ ಅನುಭವ, ಅನಿಸಿಕೆ, ಸಂಶೋಧನೆಗಳ  ಭಾವಾಂತರಂಗಗಳ ಸಾರವನ್ನು ಬರಹಗಾರರ ದೃಷ್ಟಿಕೋನದಿಂದ ಓದುಗರ ಮನಸ್ಸುಗಳಿಗೆ ತಲುಪಿಸುವ ಸುಂದರ ಸಾಧನಗಳಾಗಿವೆ. ಇವು ಕೆಲವೊಮ್ಮೆ ಬರಹಗಾರರ ನಿಜ ಜೀವನದ ಘಟನೆಗಳಿಗೆ ಹಿಡಿದ ಕನ್ನಡಿಗಳಾಗಿದ್ದರೆ, ಇನ್ನು ಕೆಲವು ಬರಹಗಾರರ ಕಲ್ಪನೆಯ ಬುತ್ತಿಗಳಾಗಿರುತ್ತವೆ, ಮತ್ತೂ ಕೆಲವು ಸಮಾಜದ ಕರಾಳ ಮುಖದ ಅನಾವರಣಗಳಾಗಿದ್ದರೆ, ಮತ್ತಷ್ಟು ಸಾಮಾಜಿಕ ಅಸಮಾನತೆಗಳಿಗೆ ಪರಿಹಾರೋಪಾಯದ ರೂಪದಲ್ಲಿ ಇರುತ್ತವೆ. ಎಷ್ಟೋ ಬರಹಗಳು ಸಮಾಜದಲ್ಲಿ ತುಳಿಯಲ್ಪಟ್ಟ ಸಮುದಾಯಗಳ ನೋವಿನ ಚಿತ್ರಗಳಾಗಿರುತ್ತವೆ. ಕೆಲವು ಪುಸ್ತಕಗಳು ಒಬ್ಬ ವ್ಯಕ್ತಿಯ ಅಥವಾ ಒಂದು ವಿಚಾರದ, ಆಚರಣೆಯ, ನಂಬಿಕೆಯ ವೈಭವೀಕರಣದ ಪ್ರತೀಕಗಳಾಗಿರುತ್ತವೆ. ಅದೇನೇ ಇದ್ದರು ಪುಸ್ತಕಗಳು ಅನೇಕ ರೀತಿಯ ಜವಾಬ್ದಾರಿಗಳನ್ನು ಹೊತ್ತು ಓದುಗರ ಕೈ ಸೇರುತ್ತವೆ.
 ಇಂಥ ಪುಸ್ತಕಗಳು ಹಲವು ವಿಷಯಗಳನ್ನು ಓದುಗರ ಮನಸ್ಸುಗಳಿಗೆ ಸೇರಿಸುವ ಕೆಲಸವನ್ನು ಅನೇಕ ವಿಧಗಳ ಮೂಲಕ ಮಾಡುತ್ತವೆ. ಅವು ಕವನ, ಲೇಖನ, ಕಥೆ, ಕಾದಂಬರಿ, ಪ್ರಬಂಧ, ಸಣ್ಣ ಕಥೆ, ಮಕ್ಕಳ ಕಥೆ, ಸಂಶೋಧನಾ ಕೃತಿ, ಪ್ರವಾಸ ಕಥನ, ಆತ್ಮಕಥನ, ಅನುಭವ ಕಥನ, ಸಂಗ್ರಹಗಳು, ಮಾಹಿತಿ ಕೈಪಿಡಿ ಹೀಗೆ ವಿಭಿನ್ನ ಶೈಲಿಯ ಬಟ್ಟೆ ತೊಟ್ಟು ಜನರ ಮಡಿಲು ಸೇರುತ್ತವೆ. ಹಾಗೆಯೇ ಎಲ್ಲಾ ಪ್ರಕಾರಗಳಲ್ಲೂ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿವೆ. ಎಲ್ಲವೂ ತನ್ನದೇ ಓದುಗ ಬಳಗವನ್ನು ಹೊಂದಿವೆ. ಹೀಗೆ ಪುಸ್ತಕಗಳು ಇಂದು ಅಂದು ಎಂದೆಂದೂ ಮನುಕುಲದ ಸಂಗಾತಿಗಳಾಗಿವೆ.
 ಪುಸ್ತಕಗಳು ಎಷ್ಟರಮಟ್ಟಿಗೆ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿವೆ ಎಂದರೆ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಯುನೆಸ್ಕೋನ (UNESCO) ಪ್ರಕಾರ ಒಂದು ವರ್ಷಕ್ಕೆ ಜಗತ್ತಿನಲ್ಲಿ 2.2 ಮಿಲಿಯನ್ ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಈ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ 2023ರ ಹೊತ್ತಿಗೆ ಪ್ರಪಂಚದಲ್ಲಿ 158,464,880 ವಿಭಿನ್ನ ಪುಸ್ತಕಗಳಿವೆ.  ಇನ್ನು ಭಾರತದಲ್ಲಿ ಒಂದು ವರ್ಷಕ್ಕೆ ಸುಮಾರು 90000 ಪುಸ್ತಕಗಳು ಪ್ರಕಟವಾಗಿ ಬಿಡುಗಡೆಗೊಳ್ಳುತ್ತಿವೆ. ಒಂದು ವರದಿಯ ಪ್ರಕಾರ ಕರ್ನಾಟಕದಲ್ಲಿ ವರ್ಷಕ್ಕೆ ಸುಮಾರು 5,000 ಕ್ಕಿಂತ ಹೆಚ್ಚು ಪುಸ್ತಕಗಳು ಬಿಡುಗಡೆಗೊಳ್ಳುತ್ತಿವೆ. ಈ ಪುಸ್ತಕ ಸಂಖ್ಯೆಗಳು,  ಹೆಚ್ಚುತ್ತಿರುವ ಬರಹಗಾರರ ಸಂಖ್ಯೆಯನ್ನು ಸಹ ಸೂಚಿಸುತ್ತಿವೆ. ಇದು ಒಂದು ರೀತಿಯಾಗಿ ಪ್ರಗತಿಪೂರಕ ವಿಚಾರವಾಗಿದೆ
 ಇಂದು ಕೇವಲ ಪುಸ್ತಕಗಳ ಅಥವಾ ಬರಹಗಾರರ ಸಂಖ್ಯೆ ಮಾತ್ರ ಹೆಚ್ಚುತ್ತಿಲ್ಲ ಇದರ ಜೊತೆಗೆ ಓದುಗಾರರ ಸಂಖ್ಯೆಯು ಸಹ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಕಂಡುಬರುತ್ತದೆ.  ಅದರಲ್ಲೂ ಯುವ ಮನಸುಗಳು ಪುಸ್ತಕಗಳ ಸಹವಾಸ ಮಾಡುತ್ತಿರುವುದು ಸಕಾರಾತ್ಮಕ ವಿಚಾರವಾಗಿದೆ. ಯುವ ಓದುಗರಷ್ಟೇ ಅಲ್ಲದೆ ಯುವ ಬರಹಗಾರರು ಸಹ ಇಂದು ಕನ್ನಡ ಸಾಹಿತ್ಯ ಲೋಕದಲ್ಲಿ ದೊಡ್ಡ ಚಾಪು ಮೂಡಿಸುತ್ತಿರುವುದು ಗಮನಾರ್ಹ.
 ಪುಸ್ತಕಗಳು ಮಾನಸಿಕ ಆರೋಗ್ಯದ ಮೇಲೆ ಅತಿ ದೊಡ್ಡ ಪೂರಕ ಪ್ರಭಾವವನ್ನು ಬೀರುತ್ತವೆ. ಸಾಮಾಜಿಕ ಜಾಲತಾಣಗಳಿಗೆ ಹೆಚ್ಚು ವ್ಯಸನಿಗಳಾಗಿರುವಂತೆ ತೋರುವ ಯುವ ಜನತೆ ಸ್ವಲ್ಪ ಮಟ್ಟಿಗಾದರೂ ಸಾಹಿತ್ಯದ ಕಡೆಗೆ ವಾಲುತ್ತಿರುವುದನ್ನು ಕಾಣಬಹುದಾಗಿದೆ. ದೇಶಾ, ಭಾಷೆ, ವಿಷಯ, ಪ್ರಾಂತ್ಯ, ಲಿಂಗ, ವರ್ಗ, ವರ್ಣ, ಇದ್ಯಾವುದರ ಹಂಗಿಲ್ಲದೆ ಎಲ್ಲಾ ವಿಧದ ಯುವ ಜನತೆಯನ್ನು ಪುಸ್ತಕ ಆಕರ್ಷಿಸಿದೆ. ಈ ಮಟ್ಟಕ್ಕೆ ಪುಸ್ತಕಗಳು ಮನಸ್ಸುಗಳನ್ನು ಮುಟ್ಟಿ ತಮ್ಮ ಸ್ಥಾನ ಭದ್ರಗೊಳಿಸಿಕೊಳ್ಳುತ್ತಿವೆ.
ಬರವಣಿಗೆ ಮತ್ತು ಓದು ಇವೆರಡೂ ಯುವಜನರ ವ್ಯಕ್ತಿತ್ವ ಬೆಳವಣಿಗೆಯ ಮೇಲೆ ಉತ್ತಮ ಪ್ರಭಾವ ಬೀರುತ್ತವೆ. ದೇಶದಲ್ಲಿ ಹೆಚ್ಚು ಮಾನಸಿಕ ಒತ್ತಡದ ಸ್ಥಿತಿ ಅನುಭವಿಸುತ್ತಿರುವ ಯುವ ಜನತೆಗೆ ಓದು ಮತ್ತು ಬರಹ ಎರಡೂ ಅತೀ ದೊಡ್ಡ  ಆತ್ಮಶಕ್ತಿಯಾಗಿ ನಿಲ್ಲುತ್ತವೆ. ಅವರ ಮನಸ್ಸಿನ ಒತ್ತಡಗಳನ್ನು ಕಡಿಮೆ ಮಾಡಿ ಮಾನಸಿಕ ಸ್ಥಿತಿಯನ್ನು ಶಾಂತವಾಗಿಸಲು ಸಹಾಯ ಮಾಡುತ್ತದೆ. ಒಟ್ಟಾರೆಯಾಗಿ ಅಕ್ಷರಗಳ, ಪುಸ್ತಕಗಳ ಸನಿಹದಿಂದ ಯುವಜನತೆಯಲ್ಲಿ ಚಿಂತಿಸುವ ಮನೋಭಾವ, ವಿಚಾರಗಳನ್ನು ಅಭಿವ್ಯಕ್ತಿಗೊಳಿಸುವ ಮನಸ್ಥಿತಿ, ವಿವೇಚನಾ ಶಕ್ತಿ ಈ ಎಲ್ಲವೂ ಬೆಳೆಸಿಕೊಳ್ಳುತ್ತಿರುವುದನ್ನು ಗಮನಿಸಬಹುದಾಗಿದೆ.
ಯುವ ಸಮುದಾಯ ಇಂದು ತಮ್ಮ ಮನಸ್ಸಿನ ತುಮುಲಗಳನ್ನು, ಭಾವನೆಗಳನ್ನು, ಅನಿಸಿಕೆ – ಅಭಿಪ್ರಾಯಗಳನ್ನು, ಕೋಪ – ಅಸಹನೆ – ವಿರೋಧಗಳನ್ನು, ಪ್ರೀತಿ – ಸ್ನೇಹ – ಸಂಬಂಧಗಳ ಮೌಲ್ಯಗಳನ್ನು, ಅಕ್ಷರಗಳ ಜೋಡಣೆಯಿಂದ ಪದಗಳ ರೂಪಕ್ಕೇ ಇಳಿಸಲು ಮುಂದಾಗಿದ್ದಾರೆ. ಇವುಗಳನ್ನು ಪುಸ್ತಕಗಳ ಚೌಕಟ್ಟಿನಲ್ಲಿ ಮಾತ್ರ ಸೇರಿಸಬೇಕು ಎಂದೇನಿಲ್ಲ, ಸೋಶಿಯಲ್ ಮೀಡಿಯಾ ಎಂಬ ಜಾಗತಿಕ ಸುದ್ದಿ ತಾಣಗಳ ಮೂಲಕ ಇನ್ನೂ ಹೆಚ್ಚು ಜನರನ್ನು ತಲುಪಬಹುದೆಂದು ತೋರಿಸಿಕೊಟ್ಟಿದ್ದಾರೆ. ಸೋಶಿಯಲ್ ಪ್ಲಾಟ್ ಫಾರ್ಮ್ ನಲ್ಲಿ ಪ್ರಕಟವಾದ ಎಷ್ಟು ಬರಹಗಳು ಇಂದು ಪುಸ್ತಕವಾಗಿ ಮಾರ್ಪಟ್ಟಿರುವುದು ಸುಳ್ಳಲ್ಲ. ಹೀಗೆ ಪುಸ್ತಕ ಹಾಗೂ ಯುವಜನತೆಯ ಸಂಬಂಧ ಬೆಸೆಯುತ್ತಿದೆ. ಯುವ ಮನಸ್ಸುಗಳನ್ನು ಸೇರಿದಂತೆ ಎಲ್ಲರೂ ಪುಸ್ತಕ ಪ್ರೇಮಿಗಳಾಗುತ್ತಿದ್ದಾರೆ ಅನ್ನಿಸುತ್ತಿದೆ.
 ಸಂವಿಧಾನದ ಅಭಿವ್ಯಕ್ತಿ ಸ್ವತಂತ್ರದ ಪ್ರತೀಕವಾಗಿ ಇಂದು ಪುಸ್ತಕಗಳು ಸಮಾಜದ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲುವ ಕಾಯಕ ಮಾಡುತ್ತಿವೆ. ಪರಿಸರ, ತಂತ್ರಜ್ಞಾನ, ಜೀವನ, ರಾಜಕೀಯ, ಆಳುವವರ – ಆಳಿಸಿಕೊಳ್ಳುವವರ, ಮಹಿಳೆಯರ, ಮಕ್ಕಳ, ಲಿಂಗತ್ವ ಅಲ್ಪಸಂಖ್ಯಾತರ, ಶೋಷಿತರ, ದಮನಿತರ ಸರ್ವಜನಾಂಗದ ಸಮಾಜಮುಖಿ ವಿಷಯಗಳ ಬಗ್ಗೆ ಮನವರಿಕೆ ಮಾಡುವ ಹಲವು ಪುಸ್ತಕಗಳು ಇಂದು ಮುದ್ರಣಗೊಳ್ಳುತ್ತಿವೆ. ಈ ಮೂಲಕ ಬಹುಸಂಖ್ಯಾತರ ಮನಸ್ಸುಗಳನ್ನು ಸಹ ಗೆದ್ದಿವೆ.
ಇಂತಹ ಸಕಾರಾತ್ಮಕ ಪುಸ್ತಕಗಳಿಗೆ ಇಂದು ಜನರೆಲ್ಲ ಪ್ರೇಮಿಗಳಾಗುತ್ತಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ಈ ಬೆಳವಣಿಗೆ ಆಗಸ್ಟ್ 9 ರಂದು ಪ್ರತಿವರ್ಷ ಆಚರಿಸಲ್ಪಡುವ “ ರಾಷ್ಟ್ರೀಯ ಪುಸ್ತಕ ಪ್ರೇಮಿಗಳ “ ದಿನಕ್ಕೆ ಹೆಮ್ಮೆ ತರುವ ವಿಷಯವಾಗಿದೆ. ಒಂದು ದಿನದ ಮಟ್ಟಿಗಾದರೂ ಸಾಮಾಜಿಕ ಜಾಣತಾಳಗಳಿಂದ ದೂರವಿದ್ದು ಪುಸ್ತಕಗಳಿಗೆ ಹತ್ತಿರವಾಗಲೆಂದೆ ಈ ದಿನವನ್ನು ಸೀಮಿತಗೊಳಿಸಲಾಗಿದೆ. ಆದರೆ ಇಂದು ಪ್ರತಿದಿನ ಪುಸ್ತಕ ಜನರ ಪ್ರೇಮಿಯಾಗಿ ದೊಡ್ಡ ಬದಲಾವಣೆಗೆ ಮುನ್ನುಡಿ ಬರೆದಿರುವಂತಿದೆ. ಇಂತಹ ಬೆಳೆವಣಿಗೆಯಿಂದ ಈ ದಿನಕ್ಕೊಂದು ಸಾರ್ಥಕತೆ ಲಭಿಸಿದೆ. ಪುಸ್ತಕದ ಹುಚ್ಚು ಮತ್ತಷ್ಟು ಹೆಚ್ಚಲಿ. ಎಲ್ಲರಿಗೂ ರಾಷ್ಟ್ರೀಯ ಪುಸ್ತಕ ಪ್ರೇಮಿಗಳ ದಿನದ ಶುಭಾಶಯಗಳು.


Leave a Reply

Back To Top