ಲೀಲಾಕುಮಾರಿ ತೊಡಿಕಾನರವರ ಕೃತಿ ‘ಹನಿ ಹನಿ ಇಬ್ಬನಿ’ ಅವಲೋಕನ ಸುನೀತ ಕುಶಾಲನಗರ

ಪುಸ್ತಕ ಸಂಗಾತಿ

ಲೀಲಾಕುಮಾರಿ ತೊಡಿಕಾನ

‘ಹನಿ ಹನಿ ಇಬ್ಬನಿ’

ಸುನೀತ ಕುಶಾಲನಗರ

ಕೃತಿಯ ಹೆಸರು. ಹನಿ ಹನಿ ಇಬ್ಬನಿ
ಕವಯಿತ್ರಿ ಲೀಲಾಕುಮಾರಿ ತೊಡಿಕಾನ
ಪ್ರಕಾರ. ಚುಟುಕುಗಳು
ಬೆಲೆ. 140
ಕವಯಿತ್ರಿ ಮೊ.ಸಂಖ್ಯೆ 9449284365

 ಎನ್ನೆದೆಯ ನೋವುಗಳನ್ನೆಲ್ಲಾ…
ನೀ ಹಂಚಿಕೊಳ್ಳಬೇಕಿಲ್ಲ..
ಘನೀಭೂತವಾದ ನೋವುಗಳಿಗೆ
ಪ್ರೀತಿಯ ಕಾವು ನೀಡು
ಅಷ್ಟೇ…ಸಾಕು
ಹಾಗೆ..ಕರಗಬಹುದೆಂಬ
ಹಂಬಲವಷ್ಟೇ…


ತನ್ನೆದೆ ತುಡಿತಗಳನ್ನು  ಹನಿ ಹನಿಯಾಗಿ  ಅಕ್ಷರಕ್ಕಿಳಿಸಿದ   ಲೀಲಾಕುಮಾರಿ ತೊಡಿಕಾನರ ಹನಿ ಹನಿ ಇಬ್ಬನಿ ಕೃತಿ ಓದಲು ಕೈಗೆತ್ತಿಕೊಂಡಾಗ ಚುಟುಕುಗಳ ಬ್ರಹ್ಮ ದಿನಕರ ದೇಸಾಯಿ ನೆನಪಾದರು. ಪ್ರತಿ ದಿನ ತುಂಟಿಯಂಚಿನಲಿ ನಗು ಚಿಮ್ಮಿಸುವ ಡುಂಡಿರಾಜರು  ಕಣ್ಮುಂದೆ ಬಾರದಿರಲು ಸಾಧ್ಯವೇ? ಅದರಲ್ಲೂ ಅವರದೇ ಮುನ್ನುಡಿ ದೊರೆತ್ತಿರುವುದು ಇವರಿಗೆ ದಕ್ಕಿದ ಸೌಭಾಗ್ಯವೇ ಸರಿ.
   ಹಿರಿಯ ವಿಮರ್ಶಕರು ಕಿರುಗವನಗಳಿಗಿರುವ ಸಾಹಿತ್ಯಿಕ ಮೌಲ್ಯದ ಕುರಿತು ಹೇಳುತ್ತಾ ಕಾವ್ಯವಿರುವುದು ಕವಿತೆಯ ಗಾತ್ರದಲ್ಲಲ್ಲ: ಅದು ನೀಡುವ ಅನುಭವದಲ್ಲಿ ಎಂಬ ಅರ್ಥಪೂರ್ಣ ಸಾಲುಗಳನ್ನು ಡುಂಡಿರಾಜ್ ಅವರು ಮುನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ.
      ಸಂಕಲನದ ಬಹುತೇಕ ಕವನಗಳು ವಿದ್ಯಾರ್ಥಿಗಳ ಹಾಗೂ ಸಮಾಜದ ಮೇಲಿಟ್ಟಿರುವ ಕಾಳಜಿಯನ್ನು ಬಿಂಬಿಸುತ್ತದೆ. ಕಾವ್ಯ ಹುಟ್ಟಬೇಕೇ ಹೊರತು ಕಟ್ಟಬಾರದು ಎಂಬಂತೆ ಹಠಕ್ಕೆ ಬಿದ್ದ ಇವರ ಸಾಲುಗಳು ಓದುಗರಿಗೆ ಹೃದ್ಯವಾಗುತ್ತದೆ.
       ಕೆಲವೇ ಸಾಲುಗಳಲ್ಲಿ ಹೇಳಬೇಕಾದುದನ್ನು  ಹೇಳಿ  ಹೆಜ್ಜೆಯಿಡುವ ಲೀಲು ಚುಟುಕಗಳನ್ನು ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದಕ್ಕೆ ಇಲ್ಲೊಂದು ನಿದರ್ಶನವಿದೆ.


ಬೆಂದ ನೆಲದಲ್ಲಿ
ಹೆಚ್ಚು ಫಲವತ್ತತೆ
ನೊಂದು ಬೆಂದ  ಹೃದಯದಲಿ
ಹೆಚ್ಚು ಪ್ರೀತಿಯೊರತೆ.


     ಇವರು ಚುಟುಕುಗಳನ್ನು ರಚಿಸುವಾಗ ಎಲ್ಲೂ ಪದಗಳಿಗಾಗಿ ತಿಣುಕಾಡಿದಂತೆ ಕಾಣುವುದಿಲ್ಲ.ನಿಧಾನವಾಗಿ ,ಸರಾಗವಾಗಿ ಎಲ್ಲರಿಗೂ ಅರ್ಥವಾಗುವಂತೆ ಸರಳ ಭಾಷೆಯನ್ನು ಓದುಗರಿಗೆ  ತ್ರಾಸಾಗದಂತೆ ಬಳಸಿದ್ದಾರೆ.


    ಎಷ್ಟೊಂದು ಕನಸುಗಳ
      ಹೊತ್ತು ಹೊಳೆ
       ಹೊರಟಿತ್ತು
      ಕಡಲಿನೆಡೆಗೆ..
       ಕಡೆಗೂ..ಸಿಹಿ ಬದುಕು
        ಉಪ್ಪಾಯಿತು
       ಅಸ್ತಿತ್ವ ಕಳೆದುಕೊಂಡು!


ಚಿಂತನೆಗೆ ಹಚ್ಚುವ ಈ ಚುಟುಕದಂತೆ ಹನಿ ಹನಿ ಇಬ್ಬನಿಯೊಳಗಿನ ಬಹುತೇಕ ಸಾಲುಗಳು ಎದೆಯೊಳಗಿಳಿದು  ಉಳಿಯುವಂತೆ ಮಾಡುತ್ತದೆ.
    ಲೀಲಾಕುಮಾರಿ ತೊಡಿಕಾನರ ಈ ಕೃತಿ ಚೆಂದದ  ಶೀರ್ಷಿಕೆಯೊಂದಿಗೆ ವಾತ್ಸಲ್ಯದ ಒರತೆಯಂತೆ ಆಕರ್ಷಕ ಮುಖಪುಟ ನೀಡಿ ನೂರಾ ಮೂವತ್ತೆರಡು ಪುಟಗಳನ್ನು ಹೊಂದಿದೆ. ಮುನ್ನುಡಿ ಬೆನ್ನುಡಿಗಳು ಕೂಡಾ ಪುಸ್ತಕಕ್ಕೆ ಹಿಡಿದ ಕನ್ನಡಿಯಂತಿದೆ.  


      ದಿನಕ್ಕೆ ನೂರು ಕವಿತೆ
       ಗೀಚಿದರೇನು ಫಲ
      ಜಳ್ಳಂತೆ ಹಾರಿ
      ಹೋಗುವುದಾದರೆ…
     ಗಟ್ಟಿಯಾಗಿ ಉಳಿಯಬಲ್ಲ
    ಒಂದೇ ಕವಿತೆ ಸಾಕು
     ನೂರ್ಕಾಲ
     ಉಳಿಯುವುದಾದರೆ.


ಇವರೇ ಹೇಳಿದಂತೆ ಮೌಲ್ಯ ತುಂಬುವ  ಮನಸೆಳೆಯುವ
ಮತ್ತಷ್ಟು ಬರೆಹಗಳು ಇವರಿಂದ  ಸಾಧ್ಯವಾಗಲಿ. ಸಾಹಿತ್ಯ ಕೃಷಿಯ ಕನಸು ನನಸಾಗಲಿ.

———————–

ನೀತ ಕುಶಾಲನಗರ

One thought on “ಲೀಲಾಕುಮಾರಿ ತೊಡಿಕಾನರವರ ಕೃತಿ ‘ಹನಿ ಹನಿ ಇಬ್ಬನಿ’ ಅವಲೋಕನ ಸುನೀತ ಕುಶಾಲನಗರ

  1. ಕವನ ಹೇಗೆ ಎಲ್ಲರ ಮನ ತಟ್ಟುವಂತಿದೆಯೋ, ಸುನೀತರವರ ವಿಮರ್ಶೆಯೂ ಸುಂದರ.

Leave a Reply

Back To Top