ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಿಶೇಷ ಬರಹ

ಅಮರಾವತಿ ಹಿರೇಮಠ

ಕಿಚ್ಚಿಲ್ಲದ ಬೆಂಕಿಯಲ್ಲಿ

ಬೆಂದು ಹೋಗುತ್ತಿವೆ ಮನಗಳು

ಅರವತ್ತು ವರ್ಷಗಳ ಬದುಕಿನ ಪಯಣದ ಹಾದಿಯಲ್ಲಿ ನಡೆದು ಬಂದ ಹಿಂದಣದ ಮಾಸದ ನೆನಪುಗಳ ಜೊತೆಗೆ ಭಾರವಾದ ಹೆಜ್ಜೆಗಳು ಹಾಕುತ್ತಾ ಸಾಗುವ ಪಯಣ ತುಂಬಾ ಸೂಕ್ಷ್ಮವಾಗಿರುತ್ತದೆ .
ಏಕೆಂದರೆ ? ಯೌವನದ ದಿನಗಳು ಊಹೆಗೂ ಮೀರಿದ ಕನಸುಗಳು ಸಾಕಾರ ಮಾಡುವಲ್ಲಿ ಯೌವನ ಕಳೆದು ಮುಪ್ಪು ಆವರಿಸಿ ಬಿಟ್ಟಿರುತ್ತದೆ.
ಸದಾ ಗಳಿಸುವ ಹುಮ್ಮಸ್ಸಿನಲ್ಲಿ ಆಯುಷ್ಯ ಕಳೆಯುತ್ತಾ ಬಂದರು ಅರಿವಿಗೆ ಬಾರದ ಬದುಕಿನ ಜೊತೆಗೆ ,
ಅವಿಭಕ್ತ ಕುಟುಂಬಗಳ ನಡುವೆ ಬಾಳಿದ ಜೀವಗಳು ಇಂದು ಒಂಟಿತನದ ನೋವು ಕಾಡುತ್ತಿದ್ದರೂ ಮಕ್ಕಳ ಮುಂದೆ ತೋರಿಸಿ ಕೊಳ್ಳದೆ ಇರುವ ಗಟ್ಟಿತನದ ಹೃದಯದೊಳಗೆ ಸಾವಿರ ಪ್ರಶ್ನೆಗಳು ಏಳುತ್ತವೆ.
ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ. ಉತ್ತರ ಹುಡುಕುತ್ತಾ ಹೊರಟರೆ , ಸಮಯ ಮರಳಿ ಬರಬಹುದೇ ? ಖಂಡಿತ ಇಲ್ಲ .
ಏಕೆಂದರೆ ಮತ್ತೆ ಮರಳಿ ಹೋಗದ ದಾರಿಗೆ ಬಂದಿದ್ದೇವೆ .
ಅರವತ್ತು ವಸಂತಗಳು ಉರುಳಿ ಹೋಗಿವೆ. ಹುಡುಗಾಟದಲ್ಲಿ  ಕಳೆದು ಹೋದ ” ಬಾಲ್ಯ ” ಬದುಕು ಅಂದ್ರೆ ಏನು ಅಂತ ತಿಳಿಯದೆ ಕಳೆಯಿತು.
ಯೌವನ ಕಾಲಿಡುವ ವೇಳೆಗೆ ಡಿಗ್ರಿ ಮುಗಿಸಬೇಕು ಎನ್ನುವ ಆತಂಕದಲ್ಲಿ ದಿನಗಳು ಉರುಳಿ ಹೋದವು . ಡಿಗ್ರಿ ಮುಗಿಸಿದ ಮೇಲೆ ನೌಕರಿಗೆ ಅಲೆದಾಟ . ನೌಕರಿ ಆದ ತಕ್ಷಣ ಮದುವೆಯ ಜಂಜಾಟ . ಮದುವೆ ಆದ ಮೇಲೆ ಸಂಸಾರದ ನೊಗ ಹೊತ್ತ ಸಾಗುವಾಗ ಹಗಲಿರುಳು ದುಡಿದು ಮಕ್ಕಳ ಪಾಲನೆ ಪೋಷಣೆಯಲ್ಲಿ ನಮ್ಮ ಮುಂದಿನ ಬದುಕಿನ ಪರಿವೆ ಇಲ್ಲದೆ ಕಳೆಯುವುದು . ಮಕ್ಕಳಿಗಾಗಿ ಬದುಕು ಸವಿದು ಹೋದರು ಪರವಾಗಿಲ್ಲ ಮಕ್ಕಳು ಚೆನ್ನಾಗಿ ಇರಬೇಕೆಂದು ದುಡಿದು ದುಡಿದು ಕೂಡಿ ಇಡಬೇಕು ಎಂದು ಬ್ಯಾಂಕ್ ಬ್ಯಾಲೆನ್ಸ್ ಮತ್ತು ಆಸ್ತಿ ಪಾಸ್ತಿ ಮಾಡುವಲ್ಲಿ  ತಮಗಾಗಿ ಏನಾದರೂ ಇಟ್ಟು ಕೊಳ್ಳಬೇಕು ಎಂಬ ಪ್ರಜ್ಞೆ ಇಲ್ಲದೆ ಬಾಳು ಸಾಗಿ ಬಂದಿರುವುದು.
ಅದಕ್ಕೂ ಒಂದು ಕಾರಣ ಇದೆ.

ನಮ್ಮ ಪೂರ್ವಿಕರು ಬದುಕಿನಂತೆ ನಮ್ಮ ಬದುಕು ಇರಬಹುದು ಎಂದು ನಂಬಿಕೊಂಡು ಬಂದಿರುವುದು ಒಂದು ರೀತಿಯಲ್ಲಿ ಮುಖ೯ತನ  
ಇರಬಹುದು. ಆದರೆ ಅವರುಗಳ ಬದುಕು ನೆಮ್ಮದಿಯಿಂದ ಕೂಡಿದಾಗಿತ್ತು . ಯಾವುದೇ ಸ್ವಾರ್ಥ ಇಲ್ಲದ ಮನಸ್ಸುಗಳು ಒಂದಾಗಿ ಬಾಳುತ್ತಿದ್ದವು . ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುತ್ತಿದ್ದರು .
ಕಷ್ಟ ಸುಖಗಳಲ್ಲಿ ಒಂದಾಗಿದ್ದ ಮನಗಳು ಹಂಚಿಕೊಂಡು ತಿನ್ನುವ ಮನೋಭಾವ ಬೆಳೆಸಿಕೊಂಡಿದ್ದರು  . ಹಿರಿಯರು ಕಿರಿಯರು ಸೇರಿ ಒಗ್ಗಟ್ಟಿನಿಂದ ಕೆಲಸ ಮಾಡಿ ರಾತ್ರಿ ಮಲಗುವಾಗ ಹರಟೆ ಹೊಡೆಯುತ್ತಾ ತಮ್ಮ ತಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳುತ್ತಾ ಇರಬೇಕಾದರೆ ಎಂತಹ ಪ್ರಸಂಗ ಬಂದರೂ ನಿಭಾಯಿಸುವ ಸಾಮರ್ಥ್ಯ ಹೊಂದಿರುತ್ತಿದ್ದರು .
ಆದರೆ ಈಗ ಹಾಗಲ್ಲ . ಒಂದೇ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು
ಬೆಳೆಯುತ್ತಿದ್ದಂತೆ ಅವರವರ ಬದುಕು ಬೇರೆ ಬೇರೆಯಾಗಿ ಹೋಗುತ್ತಿವೆ . ಒಂದು ಮನೆ ಹೋಗಿ ನಾಲ್ಕು ಮನೆಗಳು ತಲೆ ಎತ್ತುತ್ತಿವೆ .
ತಮ್ಮ ತಮ್ಮ ಸ್ವಾರ್ಥದಲ್ಲಿ ಹೆತ್ತವರು ಬೀದಿ ಪಾಲು ಎಂಬಂತಾದರೂ ಕನಿಕರ ಇಲ್ಲದ ಮಕ್ಕಳು .
ಹದಿ ಹರೆಯದ ಮಕ್ಕಳ  ವಿಚಾರಗಳು ಹೇಳ ತೀರದು . ಮನೆಯ ಸ್ಥಿತಿ ಗತಿ ನೋಡದೆ ತಮ್ಮ ಮನ ಬಂದಂತೆ ವರ್ತಿಸುವರು .
ಅವರುಗಳ ಮುಂದೆ ತಂದೆ ತಾಯಿ ಚಿಕ್ಕವರು ಎನ್ನುವಂತಾಗಿದೆ .
 ಹೆತ್ತವರು ಏನಾದರೂ ಹೇಳಲು ಹೋದರೆ , ನಿಮ್ಮ ಕಾಲ ಬೇರೆಯಾಗಿತ್ತು . ಇಂದಿನ ಕಾಲಮಾನ ಬೇರೆಯಾಗಿದೆ ಎಂದು ಅವರುಗಳ ಬಾಯಿ ಮುಚ್ಚಿಸಿ ಬಿಡುತ್ತಾರೆ . ಇಂತಹ ಹೀನಾಯ ಸ್ಥಿತಿಗೆ ಬಂದು ಮುಟ್ಟಿದೆ ಇಂದಿನ ಆಧುನಿಕ ಜೀವನ.

ಯಾವ ತಂದೆ ತಾಯಿಯೂ ಮಕ್ಕಳಿಗೆ ಕೆಟ್ಟದು ಕಲಿಸುವುದಿಲ್ಲ .
ತಮ್ಮ ಮಕ್ಕಳು ಎಲ್ಲರಿಗಿಂತ ಎತ್ತರದ ಸ್ಥಾನದಲ್ಲಿ ನಿಲ್ಲಬೇಕು ಎಂದು ಬಯಸುತ್ತಾರೆ.
ಅದಕ್ಕಾಗಿ ತಮ್ಮನ್ನೇ ಅರ್ಪಿಸುತ್ತಾರೆ .
ಆದರೆ ಇಂದಿನ ಮಕ್ಕಳು ತಂದೆ ತಾಯಿಯ ಮನಸ್ಸು ಅರ್ಥ ಮಾಡಿಕೊಳ್ಳುವುದಿಲ್ಲ .
ನಿನ್ನೆ ಮೊನ್ನೆ ಬಂದವರನ್ನು ನಂಬಿ ಮೋಸ ಹೋಗುತ್ತಿದ್ದಾರೆ .
ಪ್ರೀತಿಯ ಬಲೆ ಬೀಸಿ ; ತಾವು ಬೀಸಿದ ಬಲೆಯಲ್ಲಿ ತಾವೇ ಬಿದ್ದು ತಮ್ಮ ಜೀವನ ಹಾಳು ಮಾಡಿ ಕೊಳ್ಳುವುದಲ್ಲದೆ ಮನೆಯ ಮಾನ ಮರ್ಯಾದೆ ಹರಾಜು ಮಾಡುತ್ತಿದ್ದಾರೆ ಇಂದಿನ ಯುವ ಪೀಳಿಗೆಯ ಹುಚ್ಚು ಕೋಡಿ ಮನಸ್ಸುಗಳು.
ತಂದೆ ತಾಯಿಗಳು ತಮ್ಮ ನೆರಳಿಗೆ ತಾವು ಅಂಜಿ ನಡೆಯುತ್ತಿದ್ದು ಇಂತಹ ಘಟನೆಗಳಿಂದಾಗಿ ಜೀವಂತ ಶವವಾಗಿ ಬಾಳುತ್ತಿದ್ದಾರೆ.
ಚಿಗುರು ಮೀಸೆ ಮೂಡದ ಮಕ್ಕಳು ನಾನಾ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.
ಹೆಣ್ಣು ಮಕ್ಕಳು ತಮ್ಮ ಮನೆ ಮನೆತನ ನೋಡದೆ ಮೂರನೇಯವರು ಮಾತಿಗೆ ಮರುಳಾಗಿ ಮನೆ ಬಿಟ್ಟು ಓಡಿ ಹೋಗಿ ಅಂತರ ಜಾತಿ ವಿವಾಹ ಮಾಡಿ ಕೊಳ್ಳುತ್ತಿದ್ದಾರೆ .
ಸಂಸ್ಕಾರ ಸಂಸ್ಕೃತಿ ಸಂಪ್ರದಾಯದ ಅಡಿಯಲ್ಲಿ ಅರಳಿದ ಮಕ್ಕಳು ಸಹವಾಸ ದೋಷದಿಂದ ದಾರಿ ತಪ್ಪುತ್ತಿದ್ದಾರೆ .
ಇದಕ್ಕೆಲ್ಲಾ ಕಾರಣ ಏನಿರಬಹುದು ಎಂದು ಯೋಚಿಸುತ್ತಾ ಹೋದರೆ , ಸಮಾಜದ ಪಿಡುಗು ದಾರಿ ತಪ್ಪಿಸುತ್ತಿವೆ.
ಪ್ರೀ ಪ್ರೀ ಎಂದು ಸರ್ಕಾರ ಕೊಡುವ ಭಿಕ್ಷೆಗೆ ಸೋಮಾರಿಯಾಗುತ್ತಿದ್ದಾರೆ  .
ಸದಾ ಕೈಯಲ್ಲಿ ಯಂತ್ರ ಹಿಡಿದು ಕೊಂಡು ಓಡಾಡುವ ಮನುಜ ಯಂತ್ರ ಮಾನವ ಆಗುತ್ತಿರುವುದು ವಿಷಾದನೀಯ ಸಂಗತಿ ಆಗಿದೆ.
ಮೊಬೈಲ್ ಬಳಕೆ ಹೆಚ್ಚಾದಂತೆ ಮನುಷ್ಯ ಒಂಟಿ ಜೀವನ ಬಯಸುತ್ತಿದ್ದಾನೆ. ಏಕೆಂದರೆ ಇಪ್ಪತ್ನಾಲ್ಕು ಗಂಟೆಯೂ ಕೈಯಲ್ಲಿ ಹಿಡಿದುಕೊಂಡು ತಮ್ಮೊಳಗೆ ತಾವು ಮಗ್ನವಾಗಿ  ಯಾರ ಜೊತೆಗೂ ತಮ್ಮ ಭಾವನೆಗಳು ಹಂಚಿಕೊಳ್ಳದೇ ಮುಖ ಪ್ರೇಕ್ಷಕನಂತೆ ಬಾಳುತ್ತಿದ್ದಾರೆ .
ವಯಸ್ಸಾದಂತೆ ಮಕ್ಕಳ ನಡುವಳಿಕೆ ನೋಡಿ ಮರಗುವ ಜೀವಿಗಳಿಗೆ ಇತ್ತ ನುಂಗಕ್ಕೂ ಆಗದೆ ಉಗುಳಕ್ಕೂ ಆಗಿದೆ ನೋವು ಪಡುತ್ತಿದ್ದಾರೆ.

ಈ ಮಕ್ಕಳು ಹೀಗಾಗುವುದಕ್ಕೆ ತಂದೆ ತಾಯಿಗಳು ಕಾರಣ ಆಗಬಹುದು.
ಏಕೆಂದರೆ , ಅವರಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಮನೆಯ ಎಲ್ಲಾ ಕೆಲಸಗಳು ಹಚ್ಚುತ್ತಾ  ನಾವು ಮಾಡುವ ಕಾಯಕದಲ್ಲಿ ತೊಡಗಿಸಿದರೆ  ಚೆನ್ನಾಗಿರುತ್ತಿತ್ತು .
ಆದರೆ ನಾವುಗಳು ತಪ್ಪು ಮಾಡಿದ್ದೇವೆ .
ಮನೆಯ ಸಂಬಂಧಿಸಿದ ಸಂಬಂಧಗಳಿಂದ ದೂರ ಇಟ್ಟು .
ನೀನೇನು ಕಡಿಮೆ ಎಂದು ಅವರನ್ನು ಅಹಂಕಾರಿಯನ್ನಾಗಿ ಮಾಡಿದ್ದೇವೆ .
ಹಿರಿಯರ ಜೊತೆಗೆ ಬೆರೆಯಲು ಬಿಡದೆ ಅವರನ್ನು ಪುಸ್ತಕದ ಹುಳುಗಳಾಗಿ ಬೆಳೆಸಿದ್ದೇವೆ .
ಹಿಂದಿನ ಕಾಲದಲ್ಲಿ ಸಂಜೆಯಾಗುತ್ತಿದ್ದಂತೆ  ಮನೆಯ ಹಿರಿಯರು ಊರಲ್ಲಿರುವ ಮಠಗಳಿಗೆ ಕರೆದು ಕೊಂಡು ಹೋಗಿ ದೇವರ ಸಮನಾದ ಗುರುವಿನ ಮುಂದೆ ಕುಳಿತು ಧಾರ್ಮಿಕ ವಿಧಿ ವಿಧಾನಗಳನ್ನು ಕಲೆಯುತ್ತಿದ್ದರು . ಭಜನೆ ಮತ್ತು ಭಕ್ತಿ  ಹಾಡುಗಳು ಅಲ್ಲದೆ ತತ್ವ ಪದಗಳು ಆಲಿಸುತ್ತಾ ಬೆಳೆದ ಮಕ್ಕಳಲ್ಲಿ ಸಂಸ್ಕಾರ ತಾನಾಗಿಯೇ ಬೆಳೆದು ಬರುತ್ತಿತ್ತು .
ಸಮಾನತೆ ಮತ್ತು ಎಲ್ಲರೊಂದಿಗೆ ಬೆರೆತು ಬಾಳುವ ಮನೋಭಾವ ಬೆಳೆದು ಬರುತ್ತಿತ್ತು .
ಹೀಗಾಗಿ ಜೇನು ಗೂಡಿನ ಮನೆಯಲ್ಲಿ ಯಾವುದಕ್ಕೂ ಆಸ್ಪದವೇ ಇಲ್ಲದೆ ಬರೀ ಪ್ರೀತಿ ಮತ್ತು ಅಭಿಮಾನ ಗೌರವ ತುಂಬಿರುತ್ತಿತ್ತು. ಸಮಯ ಬಂದರೆ ಒಬ್ಬರನೊಬ್ಬರು ತ್ಯಾಗ ಬಲಿದಾನಕ್ಕೂ ಸಿದ್ಧವಾಗಿರುತ್ತಿದ್ದರು . ಇಂತಹ ಮನೆತನದಲ್ಲಿ ಏನಿಲ್ಲವೆಂದರೂ ಮುವತ್ತು ರಿಂದ ನಲವತ್ತು ಜನ
ಜೊತೆ ಜೊತೆಯಾಗಿ ಇರುತ್ತಿದ್ದರು .
ಹೀಗಾಗಿ ಯಾರಿಗೂ ಯಾವ ರೋಗಗಳು ಇರುತ್ತಿರಲಿಲ್ಲ .
ಎಲ್ಲರೂ ನೆಮ್ಮದಿ ಬದುಕು ನಡೆಸುತ್ತಿದ್ದರು .
ಆದರೆ ಈಗ ಎಲ್ಲವೂ ಞಮಾಯವಾಗಿ ಬಿಟ್ಟಿದೆ .
ಯಾರಿಗೆ ಯಾರೂ ಎಂಬಂತಾಗಿದೆ .

ದೊಡ್ಡ ದೊಡ್ಡ ಮನೆಯಲ್ಲಿ ಇರುವ ನಾಲ್ಕು ಜನ ನಾಲ್ಕು ದಿಕ್ಕಿನಲ್ಲಿ ಇರುವುದು ಞಅನಿವಾರ್ಯ ಆಗಿದೆ .
ಒಂದೇ ಸೂರಿನಡಿಯಲ್ಲಿ ವಾಸವಾಗಿದ್ದರು , ಮನಸ್ಸುಗಳು ಒಂದಾಗಿಲ್ಲ .
ಇದಕ್ಕೆಲ್ಲಾ ಕಾರಣ ಬೆಳೆದು ನಿಂತ ಆಧುನಿಕ ಜೀವನ .
ಏನೇ ಆದರೂ ಕಾಲದ ಜೊತೆಯಲ್ಲಿ ಹೆಜ್ಜೆ ಹಾಕಲೇಬೇಕು
ಇದು ಇಂದಿನ ವಾಸ್ತವದ ಸತ್ಯ .


ಅಮರಾವತಿ ಹಿರೇಮಠ

About The Author

Leave a Reply

You cannot copy content of this page

Scroll to Top