ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ ಕವಿತೆ
ನೀ ಬಂದು
ನಾ ಸೀರೆ ಉಡುವಾಗ ಬಂದು
ನೀರಿಗೆಗಳ ಕೆಡಿಸಿ
ಸಿಟ್ಟು ಬರುವಂತೆ ಮಾಡಿ
ಗಲ್ಲ ನೇವರಿಸಿ
ಮೆಲ್ಲಗೆ ರಮಿಸಿ
ಅರಿಯದಂತೆ ನನ್ನ ಬಳಸಿ
ಮುತ್ತು ಕೊಡುವೆ ಎಂದುಕೊಂಡಿದ್ದೆ//
ನಾ ಹನಿ ಬೋಟ್ಟು ಇಡುವಾಗ ಬಂದು
ಕಣ್ಹೊಳೆದು ಕೆಣಕಿ
ಕಣ್ಣಲ್ಲಿ ಕಣ್ಣಿಟ್ಟು
ಮೋಡಿ ಮಾಡಿ
ಪ್ರೀತಿ ಬಾಣವ ಹೂಡಿ
ಎದೆಯಲಿ ಪವಡಿಸಿ ಮೈಮರೆಸುವೆ
ಎಂದುಕೊಂಡಿದ್ದೆ//
ಕೈ ಬಳೆ ತೊಡುವಾಗ ಬಂದು
ಮೆಲ್ಲ ಕೈ ಹಿಡಿದು
ಸ್ಪರ್ಶ ಸುಖದ ಹರ್ಷದೆ
ಉನ್ಮಾದ ಉಕ್ಕಿಸಿ
ದೇಹ ಕಂಪಿಸುವಾಗ
ಅಪ್ಪಿ ಮುದ್ದಾಡಿ ಜಗ ಮರೆಸುವೆ
ಎಂದುಕೊಂಡಿದ್ದೆ//
ಆಭರಣ ಇಡುವಾಗ ಬಂದು
ಕೋಮಲ ಕೊರಳ ಸುತ್ತೆಲ್ಲ
ನಿನ್ನರಾಯ ಭಾರ
ಸಿಹಿ ಮುತ್ತುಗಳ ಮಣಿಹಾರ
ತೊಡಿಸಿ ಸಿಂಗರಿಸಿ
ಸ್ವರ್ಗ ಸುಖದಿ ವಿಹರಿಸುತ
ನೀಗಿ ಎದೆಯ ಭಾರ
ಹೃದಯ ಹಗುರಾಗಿಸುವೆ ಎಂದುಕೊಂಡಿದ್ದೆ//
ಬರುವೆನೆಂದು ಭರವಸೆ
ಕೊಟ್ಟವನೂ ನೀನೆ
ತಾಳು ಎಂದವನೂ ನೀನೆ
ಕಾದು ಕಾದು ಕಂಗೆಟ್ಟು
ವಿರಹದಲಿ ಬೆಂದು ಬೆಂದು
ಬಸವಳಿದು ಬೆಂಗಾಡಲಿ
ಅಲೆಯುವಂತೆ ಮಾಡಿ
ಎಲ್ಲಿರುವೆ ನೀ ಹೇಗಿರುವೆ ಮರೆಯಾಗಿ//
ಡಾ ಅನ್ನಪೂರ್ಣ ಹಿರೇಮಠ
ಅದ್ಭುತ ವಿರಹ ವೇದನೆ ಸೊರಗಿದ ಭಾವ
ಕನಸಿನ ಕಡಲು ಉಕ್ಕಿ ಹರಿದು ಮೆರೆದ ನೋವ
ಬೆಳೆವ ಬೆರೆತು ಬೆ ಸೆ ವ ತುಡಿತ ಎದೆಯಲ್ಲಿ
ಇನಿಯನ ಜೊತೆ ಪ್ರೇಮಯಾನದ ಕನಸಿಲ್ಲಿ
ಓದುವುದೇ ಅದ್ಭುತ ಅನುಭವ ನಮಸ್ಕಾರ