ಸಂಗಾತಿ ವಾರ್ಷಿಕ ವಿಶೇಷ
ಸುಜಾತ ಲಕ್ಷ್ಮೀಪುರ ಕವಿತೆ-
ಸಂಕಟ
ಮುಂದೆ ಶತಶತಮಾನದ ರಾತ್ರಿಗಳು
ಬಿಕ್ಕುತ್ತವೆ ಉಸಿರುಗಟ್ಟಿ
ನವಬಣ್ಣಗಳೆಲ್ಲಾ ರಕ್ತದೋಕುಳಿ
ಪ್ರೀತಿ ಪ್ರೇಮ ಜನನ ನಗುವಿನ ಕೆಂಪು
ಪ್ರಾಣ ಕಳೆದುಕೊಂಡು ರಕ್ತಸಿಕ್ತ
ನಾಡ ಹಬ್ಬಕ್ಕೆ ಸೂತಕ.
ಭಯದ ಕೆಂಪು ನೋವಿನ ಕಪ್ಪು
ಸಾವಿನ ತಣ್ಣನೆಯ ಹಳದಿ
ಕೋಪ ದ್ವೇಷ ಕ್ರೋಧವು ಹೆಸರಿಲ್ಲದೆ
ಉರಿಯುವ ಬಣ್ಣಗಳು
ಕಂದಮ್ಮರ ಕೊರಳು ಹಿಚುಕಿ
ಹಿಂಸೆ ಸದ್ದಿಲ್ಲದೆ ಸದ್ದು ಮಾಡಿದೆ
ಹಸುಕಂದಮ್ಮನ ಆಕ್ರಂದನ
ಮನೆ ಮನೆಯ ನೋವಿನ ರೋದನ
ಮೂಲೆಮೂಲೆಯಲ್ಲೂ ಮಾರ್ದನಿಸಿದೆ
ಸಾವಿನ ಭಯದಲ್ಲಿ ಜೀವಗಳು ಒದ್ದಾಡಿ
ರಕುತದಲಿ ಇಳೆಯೆಲ್ಲಾ ಕೆಂಪಾಗಿದೆ
ಹಸಿರುಗರ್ಭದ ಎದೆಯಾಳದಲಿ
ರಕುತದ ಬೀಜ ಬಿತ್ತಿ ರಕುತದ ಮಳೆಗರೆದು
ಹರಿವ ನೀರಿನೊಳಗೆ ರಕುತ ಬೆರಸಿ
ಗಾಳಿಗೂ ರಕುತದ ಘಮಲು ಅಂಟಿಸಿ
ದೆಸೆದೆಸೆಗೂ ರುಂಡ ಮುಂಡದ ಫಸಲು
ನೆಲದಲ್ಲೆಲ್ಲಾ ಚೆಲ್ಲಾಡಿದೆ
ಒಬ್ಬೊಬ್ಬ ಹೆಣ್ಣುಮಕ್ಕಳೂ ದೇವಿಯಾಗಿ
ಕೋಟ್ಯಾಂತರ ಹಸುಗೂಸನ್ನು ಸಾಕಿ
ಹಾಲೂಡಿ ಬೆಳೆಸಿದರೂ ಎದೆ ಹಾಲು ನಂಜಾಗಿ
ಹಾಲಾಹಲವೇ ಉಕ್ಕುಕ್ಕಿ ಬರುತಿದೆ
ನಾನೆಂಬ ಪೈಶಾಚಿಕತೆಯೇ ಮೈತಾಳಿ
ಕೊಲ್ಲುವ ವಿಕೃತಿಯೇ ತಾಂಡವಾಡಿದೆ
ಯುದ್ದೋನ್ಮಾದದಲಿ ಬಣಗಳಾಗಿ
ಆಯುಧಗಳು ಕುಣಿದು ಜಗವು ತಲ್ಲಣಿಸುತಿದೆ
ದಿಕ್ಕುಕಾಣದೆ ಪರಿತಪಿಸುತಿವೆ
ಅರೆಉಳಿದ ಅರೆಬೆಂದ ನೊಂದ ಜೀವಗಳು
ಅಧಿಕಾರ ದರ್ಪ ದೌರ್ಜನ್ಯದ ಎದುರು
ಅಸಹಾಯಕತೆಯೆ ಕಣ್ಣೀರಿಟ್ಟಿದೆ
ಕೊಲ್ಲುವ ಮನಸ್ಸುಗಳಿಗೆ ಕೈಗಳಿಗೆ
ಗರಬಡಿಯುವುದೆಂದಿಗೆ
ಹಿಂಸೆಯ ಕೈ ಮೊಂಡಾಗಿ ಮೂಲೆ ಸೇರುವುದೆಂದಿಗೆ
ದ್ವೇಷ ಕ್ರೋಧದ ಉಸಿರಾಟ ನಿಂತು
ಶಾಂತಿ ಸಹಬಾಳ್ವೆಯೆ ಹುಟ್ಟಿ ಬರುವುದೆಂದಿಗೆ
ಅಧಿಕಾರ ಕೇಂದ್ರಗಳಿಗೆ ಪ್ರಜ್ಞೆ
ಶ್ರೀಸಾಮಾನ್ಯನ ಎದೆಯಲ್ಲಿ ವಿವೇಕ
ಮಾನವೀಯತೆ ಮೊಳೆತು ಬೆಳುವುದು ಎಂದಿಗೆ??
ಸುಜಾತ ಲಕ್ಷ್ಮೀಪುರ
ಸೊಗಸಾಗಿದೆ ಸುಜಾತ ಮೇಡಂ. ಶುಭವಾಗಲಿ.