ಎ,ಎನ್,ರಮೇಶ್.ಗುಬ್ಬಿ.ನಿವೇದನೆ!

ಸಂಗಾತಿ ವಾರ್ಷಿಕ ವಿಶೇ‍ಷಾಂಕ

ಎ,ಎನ್,ರಮೇಶ್.ಗುಬ್ಬಿ.

ನಿವೇದನೆ!

ಕೊಟ್ಟು ನರಳಿಸುವುದಕಿಂತ
ಕೊಡದೆ ಕೆರಳಿಸಿಬಿಡು ಗೆಳೆಯ
ಒಲಿದು ಒದ್ದಾಡಿಸುವುದಕಿಂತ
ಜರಿದು ದೂರಾಗಿಬಿಡು ಗೆಳೆಯ.!

ಕೊಡದಿದ್ದಾಗ ನಿಷ್ಕರುಣಿಯೆಂದು
ಶಪಿಸಿಕೊಂಡು ಸುಮ್ಮನಾದೇನು
ಒಲಿಯದಿದ್ದಾಗ ನಿರ್ಭಾವುಕನೆಂದು
ನನ್ನೊಳಗೆ ಸಮಾಧಾನಿಸಿಕೊಂಡೇನು.!

ಕೊಟ್ಟು ಅಡಿಗಡಿಗು ಹಂಗಿಸಿದರೆ
ಹೆಜ್ಜೆಹೆಜ್ಜೆಗು ಬದುಕು ರೌರವ ನರಕ
ಒಲಿದು ಕ್ಷಣಕ್ಷಣವು ಕಾಡಿಸಿದರೆ
ಪ್ರತಿಕ್ಷಣವು ಕಂಬನಿಯ ಅಭಿಷೇಕ.!

ಕೊಟ್ಟಿಹೆನೆಂಬ ನಿನ್ನಹಮ್ಮಿನಡಿಯಲಿ
ಇರಿವ ಅನುಕಂಪದಾ ಆ ನೋಟದಲಿ
ಅನುಕ್ಷಣ ಭಿಕ್ಷಾಪಾತ್ರೆ ಹಿಡಿದಂತ ಭಾವ
ಕೀಳರಿಮೆಯಲಿ ಬೇಯುವುದು ಜೀವ.!

ಒಲಿದು ಉದ್ದರಿಸಿಹೆನೆಂಬ ನಿನ್ನೊಂದಿಗೆ
ಅನುದಿನವೂ ಜೀವನ ಕುದಿವೆಣ್ಣೆ ಯಾನ
ನಿನ್ನಯ ಆತ್ಮರತಿ ಮೇಲರಿಮೆಗಳೊಂದಿಗೆ
ನಿತ್ಯವೂ ಘಾಸಿಗೊಳ್ಳುವುದು ಆತ್ಮಾಭಿಮಾನ.!

ಋಣಭಾರದಡಿ ಉಸಿರುಗಟ್ಟಿ ನರಳಿಸುವುದಕಿಂತ
ತೃಣವು ಋಣವಿಲ್ಲದೆ ಅರಳಲು ಬಿಟ್ಟುಬಿಡು
ಋಣಸಂದಾಯದ ಬೇಡಿಯಲಿ ಬಂಧಿಸುವುದಕಿಂತ
ಋಣಮುಕ್ತನಾಗಿಸಿ ಬಾಳ ಶಾಂತಿ ಕೊಟ್ಟುಬಿಡು.!

ನೋಡಲ್ಲಿ ಬದುಕಿತ್ತ ಆ ಭಗವಂತನಾಗಲೀ
ಬಾಳಿಗೆ ಪಂಚಭೂತಗಳಿತ್ತ ನಿಸರ್ಗವಾಗಲೀ
ಕಸಿದುಕೊಂಡಿಲ್ಲ ಯಾರದೂ ಬಾಳಸ್ವಾತಂತ್ರ್ಯ
ಕುಗ್ಗಿಸಿಲ್ಲ ಯಾರದೂ ಒಡಲ ಭಾವಚೈತನ್ಯ
ಅದುವೆ ಔದಾರ್ಯ ಕಾರುಣ್ಯಗಳ ಮಾಧುರ್ಯ.!


ಎ,ಎನ್,ರಮೇಶ್.ಗುಬ್ಬಿ.

Leave a Reply

Back To Top