ದಸರಾ ಫಿಲಂ ಫೆಸ್ಟಿವೆಲ್: ಮನುಷ್ಯ ಬದುಕಿನ ಕೊನೆಯ ನಿಲ್ದಾಣ’-ಗೊರೂರು ಅನಂತರಾಜು,

ವಿಶೇಷ ಲೇಖನ

ದಸರಾ ಫಿಲಂ ಫೆಸ್ಟಿವೆಲ್

ಮನುಷ್ಯ ಬದುಕಿನ ಕೊನೆಯ ನಿಲ್ದಾಣ’-

ಗೊರೂರು ಅನಂತರಾಜು,

ಹುಟ್ಟು ಸಾವು ಎನ್ನುವುದು ನಿರಂತರ ಪ್ರಕ್ರಿಯೆ. ಯಾರಾದರೂ ಶಾಶ್ವತವಾಗಿ ಈ ಭೂಮಿಯ ಮೇಲೆ ಬದುಕಿರಲಿಕ್ಕೆ ಸಾಧ್ಯವೇ? ಇಲ್ಲ ಖಂಡಿತ ಸಾಧ್ಯವಿಲ್ಲ. ಅವ ಪ್ರಪಂಚವನ್ನಾಳುವ ದಳಪತಿಯಾಗಿರಲಿ ಅಥವಾ ರಸ್ತೆಯಲ್ಲಿ ಭಿಕ್ಷೆ ಬೇಡುವ ಭಿಕ್ಷಾಧಿಪತಿಯಾಗಿರಲಿ ಅವನ ಕೊನೆಯ ನಿಲ್ದಾಣ ಸ್ಮಶಾಣವೇ ಸೈ. ಕವಿ ಡಿವಿಜಿ ಅವರ ‘ಮಸಣಗಳು ಎಷ್ಟೋ ತೊಟ್ಟಿಲಗಳೆಷ್ಟೋ ಧರೆಯೊಳಗೆ ತೊಟ್ಟಲಿಗಷ್ಟೋ ಮಸಣಗಳಷ್ಟು ಧರೆಯೊಳಗೆ’ ಎಂಬ ಸಾಲುಗಳು ಕೊನೆಯ ನಿಲ್ದಾಣ ಚಿತ್ರಕ್ಕೆ ಮೂಲ ಪ್ರೇರಣೆ. ಮೂರು ದಶಕಕ್ಕೂ ಹೆಚ್ಚು ಕಾಲ ರುದ್ರಭೂಮಿಯಲ್ಲಿ ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ತೋಡಿರುವ ನೀಲಮ್ಮನ ರಿಯಲ್‌ ಕಥೆ ರೀಲ್‌ನಲ್ಲಿ ಸಿದ್ಧವಾಗಿದೆ. ಮೈಸೂರಿನ ವಿ.ವಿ.ಪುರಂ ವೀರಶೈವ ರುದ್ರಭೂಮಿಯಲ್ಲಿ ಗುಂಡಿ ತೋಡುವ ಕಾಯಕದ ನೀಲಮ್ಮರಿಗೆ ಈಗ ೭೦ ವರ್ಷ. ಈ ಕೆಲಸವನ್ನು ಇಳಿ ವಯಸ್ಸಿನಲ್ಲೂ ಮುಂದುವರಿಸಿರುವಲ್ಲಿ ಬಸವಣ್ಣನವರ ಕಾಯಕವೇ ಕೈಲಾಸ ತತ್ವ ಆದ್ಯಾತ್ಮಿಕ ನೆಲೆಯಲ್ಲಿ ಚಿತ್ರಕಥೆ ಹೆಣೆಯಲಾಗಿದೆ. ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವ ಚಿತ್ರ.  ನೀಲಮ್ಮನ ಕಾಯಕ ನಿಷ್ಠೆ ಮಾನ್ಯ ಪ್ರಧಾನಿ ಮೋದಿಯವರಿಗೂ ತಲುಪಿ ಮನ್ ಕಿ ಬಾತ್‌ನಲ್ಲಿ ಇವರ ಬಗ್ಗೆ ಮಾತನಾಡಿದ್ದಾರೆ. ಇವರ ಬದುಕಿನ ಕಥೆಯನ್ನು ಆಧರಿಸಿ ಎಂ.ಡಿ.ಕೌಶಿಕ್ ಚಿತ್ರಕಥೆ ನಿರ್ದೇಶನ ಮಾಡಿದ್ದಾರೆ. ಕೌಶಿಕ್ ಮೂಲತ: ಹಾಸನ ತಾಲ್ಲೂಕಿನ ಕೌಶಿಕದವರು. ಈಗಾಗಲೇ ಸಿನಿರಂಗದಲ್ಲಿ ನಟರಾಗಿ ಹೆಸರು ಮಾಡಿದವರು.

ಇನ್ನೂ ನೀಲಮ್ಮನ ಪಾತ್ರ ನಿರ್ವಹಿಸಿರುವ ಪೂಜಾ ರಘುನಂದನ್‌ ತಾಯಿಯಾಗುವುದೆಂದರೆ ಏಕವ್ಯಕ್ತಿ ರಂಗ ಪ್ರಯೋಗದಿಂದ ರಾಜ್ಯದ ಗಮನ ಸೆಳೆದವರು. ಈ ನಾಟಕ ಈಗಾಗಲೇ ರಾಜ್ಯಾದ್ಯಂತ ಇಪ್ಪತ್ತು ಪ್ರಯೋಗ ಕಂಡಿದೆ.  ಮೊದಲ ಪ್ರಯೋಗ ವೀಕ್ಷಿಸಿ ನಾನು ವಿಮರ್ಶೆ ಬರೆದಿದ್ದೆ. ಕೊನೆಯ ನಿಲ್ದಾಣ ಪೂರ್ಣ ವಿ.ವಿ.ಪುರಂನ ಸ್ಮಶಾಣದಲ್ಲೇ ಚಿತ್ರೀಕರಣವಾಗಿದೆ. ಪೂಜಾ ಅವರು ೧೮ ವರ್ಷದ ಯುವತಿಯಾಗಿ ೩೫ ವರ್ಷದ ಮಹಿಳೆಯಾಗಿ ಹಾಗೂ ೬೫ ವರ್ಷದ ವಯೋವೃದ್ದೆಯಾಗಿ ಮೂರು ಪಾತ್ರವನ್ನು ನಿಭಾಯಿಸಿದ್ದಾರೆ. ಈ ಚಿತ್ರ ಮೈಸೂರು ದಸರಾ ಪೆಸ್ಟಿವೆಲ್‌ನಲ್ಲಿ ತಾ. ೨೨-೧೦- ೨೦೨೩ರ ಭಾನುವಾರ ಸಂಜೆ ೭.೧೫ಕ್ಕೆ  ಐನಾಕ್ಸ್  ಚತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತದೆ. ಚಿತ್ರದ ನಿರ್ಮಾಪಕರು ಹರೀಶ್‌ ಕೋಲಾರ್. ಸಂಗೀತ ಮೂಡಲ್‌ ಕುಣಿಗಲ್‌ ಕೆರೆ ರಾಮಪ್ರಕಾಶ್. ಗೀತೆ ರಚನೆ ಪ್ರೊ.ದೊಡ್ಡರಂಗೇಗೌಡ, ಕೃಷ್ಣ ಪ್ರಸಾದ್, ಮಧು ಅಕ್ಕಿ ಹೆಬ್ಬಾಳ್. ಛಾಯಾಗ್ರಹಣ ಪಿ.ವಿ.ಆರ್.ಸ್ವಾಮಿ. ಕಥೆ ಸಂಭಾಷಣೆ ಬಿ.ಶಿವಾನಂದ ಅವರದು.
ಚಿತ್ರ ಕುರಿತಾಗಿ ಮಾಹಿತಿ ಹಂಚಿಕೊಂಡ ಹೊಯ್ಸಳ ಪಥ ಪತ್ರಿಕೆ ಸಂಪಾದಕರು ರಘುನಂದನ್ ಅವರು ಅನಂತರಾಜ್ ಸರ್, ಮೈಸೂರಿನಲ್ಲಿ ಅದ್ದೂರಿಯಾಗಿ ದಸರಾ ಉತ್ಸವ ಆಚರಿಸಲಾಗುತ್ತಿದೆ ಸಂತೋಷ. ಹಾಸನದಲ್ಲೂ ನವೆಂಬರ್ ಮಾಹೆಯಲ್ಲಿ ಕನ್ನಡ ರಾಜ್ಯೋತ್ಸವ ಜೊತೆಗೆ ಹಾಸನಾಂಬ ಜಾತ್ರೆ ಉತ್ಸವ ನಡೆಯುತ್ತಿದೆ. ಮೈಸೂರು ದಸರಾ ಮಾದರಿಯಲ್ಲೇ ಹಾಸನಾಂಬ ಜಾತ್ರಾ ಮಹೋತ್ಸವ ನಡೆಸುವ ಆಶಾಭಾವನೆ ವ್ಯಕ್ತಪಡಿಸಲಾಗಿದೆ. ಅಂದ ಮೇಲೇ ಹಾಸನದಲ್ಲೂ ಮೈಸೂರು ಮಾದರಿಯಲ್ಲೇ ಫಿಲಂ ಫೆಸ್ಟಿವೆಲ್ ನಾಟಕೋತ್ಸವ ನೃತ್ಯೋತ್ಸವ ಸಂಗೀತೋತ್ಸವ ಕವಿಗೋಷ್ಠಿ  ಚಿತ್ರಕಲಾ ಪ್ರದರ್ಶನ ಹೀಗೆಲ್ಲಾ ನಡೆಯಬೇಕಲ್ಲವೇ..? ಎಂದು ಪ್ರಶ್ನೆ ಎತ್ತಿದರು.


ಹೌದು ರಘು,  ನಮ್ಮ ಹಾಸನ ಜಿಲ್ಲೆಯ ಹಲವಾರು ಪ್ರತಿಭ್ವಾನಿತ ಕಲಾವಿದರು, ನಿರ್ದೇಶಕರು, ನಟರು ನಾಟಕ ಸಿನಿಮಾ ರಂಗದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಉದಾಹರಣೆಗೆ ಸಿದ್ದು ಪೂರ್ಣಚಂದ್ರ ಹೊಳೆನರಸೀಪುರದವರು.  ಇವರ ನಿರ್ದೇಶನದ ದಾರಿ ಯಾವುದಯ್ಯ  ವೈಕುಂಠಕ್ಕೆ ಸಿನಿಮಾ ನೂರಕ್ಕೂ ಹೆಚ್ಚು ರಾಷ್ಟೀಯ ಅಂತರಾಷ್ಟೀಯ ಪ್ರಶಸ್ತಿ ಗೆದ್ದಿದೆ.  ೨೦೨೩ರ ದಸರಾ ಪೆಸ್ಟಿವೆಲ್‌ಗೆ ಪೂರ್ಣಚಂದ್ರರ ಬ್ರಹ್ಮ ಕಮಲ   ಎಂ.ಡಿ.ಕೌಶಿಕ್‌ರ ಕೊನೆಯ ನಿಲ್ದಾಣ, ಹಾಸನ ತಾ. ಮೊಸಳೆ ಲೋಕೇಶ್ ನಿರ್ದೇಶನದ ಹಕ್ಕಿಯ ನೆಲದ ಹಾಡು. ರಾಮನಾಥಪುರ ಮಂಜುನಾಥ್ ಸಂಗಡಿಗರ ಗಾ೦ಧಿ  ಮತ್ತು ನೋಟು ಆಯ್ಕೆಯಾಗಿವೆ. ಪೃಥ್ವಿ ಕೊಣನೂರು ನಿರ್ದೇಶನದ ರೈಲ್ವೆ ಚಿಲ್ಡ್ರನ್ ಹಲವು ಪ್ರಶಸ್ತಿ ವಿಜೇತ ಚಿತ್ರ. ಶಾಂತಿಗ್ರಾಮದ ಜಿ.ಆರ್.ಮಂಜೇಶ್‌ ಮತ್ತು ರವೀಂದ್ರನಾಥ್ ಸಿರಿವರ ನಿರ್ಮಾಣದ ಕೌದಿ ಚಿತ್ರವಿದೆ, ಗೊರೂರು ಜ್ಞಾನೇಶ್ ನಿರ್ಮಾಣದ ಅಂಗೈಲಿ  ಅಕ್ಷರ  ಹಾಸನ ಚನ್ನಪಟ್ಟಣದ ಸುನೀಲ್‌ ಅವರ ಪಾರ್ಕ್ ರೋಡ್ ೧೦೦ ರೂಪಾಯಿ ಇವೆಲ್ಲಾ ಚಿತ್ರಗಳಿವೆ.ಇವೇ ಮೊದಲಾದ ಸಿನಿಮಾಗಳು ಹಾಸನದಲ್ಲಿ ಪ್ರದರ್ಶನಗೊಳ್ಳಲೆಂಬುದು ನನ್ನ ಆಶಯವು ಹೌದೆಂದೆ.
———————————————————————-

ಗೊರೂರು ಅನಂತರಾಜು

Leave a Reply

Back To Top