ಕಾವ್ಯಸಂಗಾತಿ
ನಾರಾಯಣಸ್ವಾಮಿ ವಿ ಕೋಲಾರ-
ಗಜಲ್
ನರಮನುಜನೇ ನನ್ನನ್ನು ಮುಟ್ಟಲು ಅಸಹ್ಯಪಡುತ್ತಿದ್ದಾಗ ನೀನೊಬ್ಬಳು ಮುದ್ದಿಸಿದೆ ಅಮ್ಮ
ಈ ಜಗವೇ ನನ್ನನ್ನು ನಿಕೃಷ್ಠವಾಗಿ ಕಾಣುತ್ತಿದ್ದಾಗ ನೀನೊಬ್ಬಳು ಕಣ್ಣೀರು ಹರಿಸಿದೆ ಅಮ್ಮ
ನಿನ್ನ ಜೀವಕೆ ಉಸಿರು ನೀಡುವೆನೆಂದು ಬಂದವರೆಲ್ಲಾ ಸ್ವಾಥ೯ವನು ಹುಡುಕುತ್ತಾ ಹೋದರು
ಇಡೀ ಸಮಾಜವೇ ನನ್ನನ್ನು ತಿರಸ್ಕರಿಸಿದಾಗ ನೀನೊಬ್ಬಳು ಮಡಿನಲಿ ಆಶ್ರಯ ನೀಡಿದೆ ಅಮ್ಮ
ಹಸಿವಿಗಾಗಿ ಅಂಗಲಾಚಿದಾಗ ಚಂದ್ರನ ನಗುವನು ತೋರಿಸಿ ನೋವನು ನುಂಗಿದೆ ನೀನು
ಮೃಷ್ಟಾನ್ನ ಸವಿಯುವವರ ಹಾದಿಯಲಿ ಹರಿದ ಸೆರಗನೆ ಅಡ್ಡವಾಗಿಸಿದೆ ಅಮ್ಮ
ಸುಳ್ಳಿನ ಮಾತುಗಳ ಸರಮಾಲೆಯನು ಹಣೆಯಲು ಬಾರದ ಮೂಕನು ನಾನಿಲ್ಲಿ
ಕಗ್ಗತ್ತಲಿನಲಿ ನಾನು ಕಳೆದು ಹೋದಾಗ ಉಸಿರಿನ ಜಾಡನೇ ಹಿಡಿದು ಹುಡುಕಿದೆ ಅಮ್ಮ
ಕ್ಷಣಕೊಂದು ರೂಪ ತಾಳುವ ಜನರ ಮಧ್ಯದಲ್ಲಿ ಕರಿಯನಾಗಿಯೆ ಉಳಿದಿದ್ದಾನೆ ನಾನಿ
ಬಣ್ಣ ಹಚ್ಚುವ ಮುಖಗಳ ನಡುವೆ ಬಾಳ್ವೆ ಮಾಡುವುದನು ಕಲಿಸದೆ ಹೋದೆ ಅಮ್ಮ
ನಾರಾಯಣಸ್ವಾಮಿ ವಿ ಕೋಲಾರ