ಶಾರು–ಗೆಳತಿ ಅವನವಳುಶಾರು

ಕಾವ್ಯಸಂಗಾತಿ

ಶಾರು

ಗೆಳತಿ ಅವನವಳುಶಾರು

ಮನದಿ ತೇವಗೊಂಡಿದೆ ಭಾವ
ತಳಮಳ ತಳದಾಳದಿಂದ ಜೀವ
ಬದುಕಿನ ನೆನಹು ಬದುಕಿನ ಸಿರಿಯು
ಹರಿವ ಸೆಳೆವಲಿ ಹಸಿರ ತಡಿಯಂತೆ
ಗೆಳತಿ ಅವನವಳು! ನೋಡs,

ಅರಳುತಿದೆ ಇರುಳು ಹಗಲಾಗಿ
ಹೊರಳುತಿದೆ ಪ್ರೀತಿ ಮರುಳಾಗಿ
ಅಪ್ಪಿದವು ತಪ್ಪು ಒಪ್ಪುಗಳೆಲ್ಲ
ಕೋಪ ತಾಪಗಳು ನುಸುಳದಂತೆ
ಗೆಳತಿ ಅವನವಳು! ನೋಡs,

ಮನದ ಪಿಸುಮಾತಿಗಿಲ್ಲ ಸಾಕ್ಷಿ
ಅನುಭಾವಿಸುವುದೆ ಅದರ ಅಕ್ಷಿ
ಹರಿವ ನೀರದು ಸದಾ ನಿರ್ಮಲ
ಸ್ಪುರಿವ ಪ್ರೇಮ ಭಾವಪ್ರಾಂಜಲದಂತೆ
ಗೆಳತಿ ಅವನವಳು! ನೋಡs,

ನೆಂದ ಮನ ಉಳುಮೆಯ ಹೊಲ
ಬೆಳೆವುದಲ್ಲಿ ಪ್ರೀತಿ ಪ್ರೇಮ ಫಲ
ಸಮಭಾವರೇಖೆ ಅನಂತದಲಿ
ಬಿಗಿದಪ್ಪಿ ಚುಂಬಿಸುವ ನೆಲ ಮುಗಿಲಂತೆ
ಗೆಳತಿ ಅವನವಳು! ನೋಡs,

ಗುನುಗುನಿಸಿ ದನಿದನಿಸಿ ಪದದನಿ
ಪ್ರೀತಿ ರಮಿಸಿದ ರಸ ಜೀನ ಹನಿ
ಸವೆದು ದಣಿದು ತಣಿಸುವ ಧೇನಾಗಿ
ತೇವದ ಮನ ಬಿಕ್ಕಿ ಶರಣು ತಾನಂತೆ
ಗೆಳತಿ ಅವನವಳು! ನೋಡs,

ಕಳವು ಇಲ್ಲದ ಅಳಿವು ಇಲ್ಲದ ಪ್ರೀತಿ
ಸಹಜ ಮುಗ್ಧ ಸರಳ ಅದರ ರೀತಿ
ಬೊಗ್ಗೆ ಬೊಗ್ಗೆ ಅರಳಿ ಪಲ್ಲವಿಸುವಂತೆ
ಸುಮ ಹರಡುವ ಪರಿಮಳದಂತೆ
ಗೆಳತಿ ಅವನವಳು! ನೋಡs,


ಶಾರು

Leave a Reply

Back To Top