ಅರುಣ್ ಕೊಪ್ಪ
ಊರ ಬಾಗಿಲು ಮುಂದೆ ಭಯಭಕ್ತ ಕಲ್ಲುಗಳು, ತೀರಾ ಹಳೆಯವು
ಅಲ್ಲಲ್ಲಿ ಹಾಲು ಸೋಕುವ ಮರಗಳು, ಮುಗಿದರೆ ಕೈ ದೇವರು, ಹಾಗೋ ಹೀಗೋ ಗಾಳಿ ಬಂದಾಗ ಬುಡಸಡಿಲವಾಗುವ ಭಯ ಮಹಾಮಯ !
ಮುಂಗಾರಮುಂದೆ ಮಾತು ಕಥೆ, ಅಂತೂ ಕುದುರಿಸಿಯೇ ಬಿಟ್ಟರು
ಮಾರಿ ಹಬ್ಬವಂತೆ, ಕುರಿ ಕೋಳಿಯ ಜಾತ್ರೆ ಊರೊಳಗೆ, ಮುಟ್ಟು ಮೈಲಿಗೆ ಹೆಂಗಸರ ಸ್ಥಳಾಂತರ
ಒಪ್ಪ, ವಾಗತಿಯಲಿ ಹಬ್ಬ ಸಜ್ಜು
ಊರ ಹಬ್ಬದ ಸಲುವಾಗೆ ಶಣ್ಣಿ ಮದುವಿ ಮುಂದಾತು
ಕಿವಿಗಿಲ್ಲ ಮೂಗಿಗಿಲ್ಲ ಎಲ್ಲ ದುಬಾರಿಮಯ..
ಇದ್ದದ್ದು ನಾಕು ಬತ್ತದ ಕಾಳು, ಕೂಲಿ ಹುಟ್ಟದು
ಅರ್ದಮ್ಮುರ್ದಬಣ್ಣ ಅಡಿಕೆ ಅದೆಷ್ಟು? ಕವಳಕ್ಕೆ ಹೆಚ್ಚು ಮಾರಕೆ ಕಡಿಮೆ
ಮನೆ ಮುಗಿದಿಲ್ಲ ಬಿಲ್ಲೂ ಆಗಿಲ್ಲ, ಪಿಡಿಓ, ಪಂಚಾಯತಿ ಅಲೆದಾಟ, ಆಗೇ ಹೋತು ಹನಿ ಹಿಡಿತು ಜಡಿ ಕಟ್ಟಿಲ್ಲ
ಜಾತ್ರೆ ಮುಗಿಸಿ ಬತ್ತ ನೆನಸಿ, ಊರ ದೇವರ ಹಬ್ಬ ಮುಗ್ಸಿ ಹ್ವಾಕೆ ಹೊಡಿಯೋ ಎತ್ತುಗಳು ಈ ವರುಸ ಕೆಟ್ಟಿಲ್ಲ ಮೈ ತುಂಬಿದಾವ
ದಡ್ಡಿ ಗೊಬ್ಬರ ಚೆಲ್ಲಿ, ಒಣ ಕಟ್ಟಿಗೆ ಸರಿದು, ಗ್ಯಾಸ್ ಇದ್ದರೂ ಬೇಕು ಬೆಂಕಿ ಕಾಸಲು ತಾಸೊತ್ತು ಹೊದ್ದ ಕಂಬಳಿ ಕೊಪ್ಪೆಗೆ, ಹೊಡುಚುಲು ಹಾಕಿ ಸುತ್ತ ಕೂತು ಚುಟ್ಟಿ ಸೇದು ಕಫ ವ್ಯಾಕರಿಸಿ ಗರಟಿ ತುಂಬಿಸಿದ ಅಜ್ಜ
ಶೇಂಗಾ ಹುರಿದು ವಡಚುವಾಗ ಗುಡುಗಿನ ಶಬ್ಧ ಮಂಗಮಾಯ
(ಹ್ವಾಕೆ =ಮೊದಲ ನೇಗಿಲ ಸಾಲು
ಹೊಡುಚುಲು =ಬೆಂಕಿ ಗುಡ್ಡೆ, ಕಂಬಳಿ ವಣಸಲು ಹಳ್ಳಿಯಲ್ಲಿ ಮಾಡುವದು
ಕೊಪ್ಪೆ =ಮಳೆಗೆ ತಲೆಗೆ ಹಾಕುವ ಸಾಧನ )
========================
ಅರುಣ್ ಕೊಪ್ಪ
ಕವಿ ಪರಿಚಯ:
ಯುವ ಬರಹಗಾರರು ಕೃಷಿಕರು, ಔಷಧಿ ವ್ಯಾಪಾರಿಗಳು, ಸಂಘಟಕರು ಬಿ ಎ. ಪದವಿ ಪ್ರಥಮ ಕವನ ಸಂಕಲನ ಭಾವಗಳು ಬಸುರಾದಾಗ (2018)ಪ್ರಕಟಣೆ ಹಂತದಲ್ಲಿ ಹನಿಗಳ ಹಂದರ ಎಂಬ ದ್ವಿತೀಯ ಹನಿ ಗವನಗಳ ಸಂಕಲನ ಅನೇಕ ಪತ್ರಿಕೆಗಳಲ್ಲಿ ಕವಿತೆ ಪ್ರಕಟ ಆಕಾಶವಾಣಿಯಲ್ಲಿ ಕವಿತೆ ವಾಚನ, ಸಂದರ್ಶನ ತಾಲ್ಲೂಕು ಕಬಡ್ಡಿ ಅಮೇಚೂರ್ ಶಿರಸಿ ಪ್ರಧಾನ ಕಾರ್ಯದರ್ಶಿಯಾಗಿ ಕ್ರೀಡಾ ಸಂಘಟನೆ
ನಿಮ್ಮ ಕವನ ಮತ್ತು ಚುಟುಕು ಬರೆಯುವ ಈ ಕಲೆಯು ಹೀಗೆ ಮುಂದುವರೆಯಲಿ.ಧನ್ಯವಾದಗಳು
ನಮ್ಮ ಕಾಲದ ಅನುಭವಿ ಕವಿಕಾವ್ಯ ಭಾವದ
.. ನಮ್ಮ ಅರುಣ್ ಕೊಪ್ಪ ರವರು…ಸೊಗಸಾಗಿ ಕವನ ಸಂಕಲಿಸಿದ್ದಾರೆ