‘ನಂದಗೋಪನ ಉಲಿಗಳು’ ಮುಕ್ತಕ ಮಾಲೆಯ ಅವಲೋಕನದೊಳಗೆ ನಾನು……ಅಭಿಜ್ಞಾ ಪಿ.ಎಮ್.ಗೌಡ

ಪುಸ್ತಕ ಸಂಗಾತಿ

‘ನಂದಗೋಪನ ಉಲಿಗಳು’

ಮುಕ್ತಕ ಮಾಲೆಯ ಅವಲೋಕನ

ಅಭಿಜ್ಞಾ ಪಿ.ಎಮ್.ಗೌಡ

[*ನಂದಗೋಪನ ಉಲಿಗಳು ಮುಕ್ತಕ ಮಾಲೆಯ
ಅವಲೋಕನದೊಳಗೆ ನಾನು*……

ಲೇಖಕರು:—ಶ್ರೀ ಮಧುಕೇಶವ ಭಾಗ್ವತ್ ಮತ್ತು ಶ್ರೀಮತಿ ಮಂಗಲಾ ಭಾಗ್ವತ್
ವಿಮರ್ಶಕರು:—ಅಭಿಜ್ಞಾ ಪಿ.ಎಮ್.ಗೌಡ

ಮಧುಕೇಶವರೊಡಗೂಡಿದ ಮಂಗಳೆಯ ಸಾಲು
ವಿಧವಿಧದಿ ರಂಗೇರಿ ಸಂಭ್ರಮಿಸಿವೆ
ಪದಪುಂಜ ಮುತ್ತಾಗಿ ಮುಕ್ತಕವು ಸೊಗಸಾಗಿ
ಸದಮಲದಿ ಸಾಗುತಿವೆ ಅಭಿಚೇತನ…

          ಶ್ರೀಯುತರಾದ ಮಧುಕೇಶವ ಭಾಗ್ವತ್ ಹಾಗು ಮಂಗಲ ಭಾಗ್ವತ್ ರವರ ಈ ನಂದಗೋಪನ ಉಲಿಗಳು ಎಂಬ ಶಿರೋನಾಮೆಯೊಂದಿಗೆ ಬಿಡುಗಡೆಗೊಂಡಿರುವ ಈ ಸಂಕಲನವು ಓದುತ್ತಿದ್ದರೆ ಮತ್ತೊಮ್ಮೆ ಓದ ಬೇಕೆನಿಸುವುದಂತು ಸತ್ಯ.
ಏಕೆಂದರೆ ಅಷ್ಟೊಂದು ಅರ್ಥಪೂರ್ಣ ಹಾಗು ಅದ್ಭುತವಾಗಿ ಮೂಡಿಬಂದಿವೆ.ಈ ಸಂಕಲನದಲ್ಲಿರುವ ಪ್ರತಿಯೊಂದು ಮುಕ್ತಕಗಳು ಕೂಡ ನಿಯಮಬದ್ಧವಾಗಿವಾಗಿವೆ.ಹಾಗೆಯೇ ಮುಕ್ತಕಗಳಲ್ಲಿ ಬರುವ ಎಲ್ಲಾ ಪ್ರಾಸಗಳು ಅಂದರೆ ಸಿಂಹಪ್ರಾಸ ,ಗಜ ಪ್ರಾಸ,ವೃಷಭ ಪ್ರಾಸ,
ಹಯ ಪ್ರಾಸ,ಶರಭ ಪ್ರಾಸ, ಅಜ ಪ್ರಾಸಗಳಲ್ಲಿ ಹೆಚ್ಚು ಕಡಿಮೆ ಮುಕ್ತಕಗಳು ಮೂಡಿಬಂದಿರುವುದು ನಿಜಕ್ಕೂ ಖುಷಿಯ ಸಂಗತಿಯಾಗಿದೆ.
ಸಾಹಿತ್ಯದಲ್ಲಿರುವ ಹಲವಾರು ಪ್ರಕಾರಗಳಲ್ಲಿ ಈ ಮುಕ್ತಕಗಳು ಕೂಡ ಒಂದಾಗಿದೆ. ಮುಕ್ತಕ ಎಂದರೆ ಮುತ್ತಿನ ಹಾರವೆಂದು ಕೂಡ ಹೇಳಬಹುದು.
ಏಕೆಂದರೆ ಈ ಮುಕ್ತಕಗಳು ಚಿಕ್ಕದಾಗಿದ್ದರು ಚೊಕ್ಕವಾಗಿದ್ದು ಅರ್ಥಪೂರ್ಣವಾಗಿ ಕೂಡಿರುತ್ತವೆ.ಮುಕ್ತಕಗಳಲ್ಲಿ ದ್ವಿಪದಿ ,ತ್ರಿಪದಿ, ಚೌಪದಿ, ಪಂಚಪದಿ, ಷಡ್ದಳ ,ಮುಕ್ತಕಗಳೆಂದು ಹಲವಾರು ವಿಧಗಳಿರುವವು.ಇಲ್ಲಿ ಸಾಲುಗಳಲ್ಲಿರುವ ಅರ್ಥ,ಬಳಸುವ ಪದಪುಂಜಗಳು ಎರಡೂ ಕೂಡ ಮುಖ್ಯವಾಗಿವೆ.ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ಬಸವಣ್ಣನವರ ವಚನದಂತೆ ಇಲ್ಲಿನ ಪ್ರತಿಯೊಂದು ಮುಕ್ತಕಗಳ ನುಡಿಗಳು ಸಹ ಅಷ್ಟೆ ಅರ್ಥಗರ್ಭಿತವಾಗಿದ್ದು,
ಚಿಕ್ಕದಾದರೂ ಅರ್ಥಪೂರ್ಣವಾಗಿ ಮಿಂಚುತಿರುವ ಸುಂದರ ಪದ್ಯಗಳಾಗಿವೆ…

      ಪ್ರತಿ ಕವಿತೆಗಳಲ್ಲಿ ಹೆಚ್ಚು ಅರ್ಥವನ್ನು ಕೊಡುವ ಕೊನೆಯ ಎರಡು ಸಾಲುಗಳು ಹಾಗು ಕೊನೆಯ ಸಾಲಿನ ಮುಕ್ತಾಯದಲ್ಲಿ ತಮ್ಮದೆ ಕಾವ್ಯನಾಮ ಈ ಮುಕ್ತಕಗಳಿಗೆ ಶೋಭೆ ತರುವುದು.ಇಲ್ಲಿರುವ ಮುಕ್ತಕಗಳು ಆದಿಪ್ರಾಸದಿಂದ ಕೂಡಿದ್ದು, ಸೊಗಸಾಗಿ ಹಾಡಬಹುದಾದ ಕವಿತೆಗಳಾಗಿವೆ.ಎಂತಹ ಮುಕ್ತಕಗಳಾಗಿರಲಿ ಅಥವ ಯಾವುದೇ ಕಾವ್ಯ ಪ್ರಕಾರಗಳಾಗಿರಲಿ ಜನಮನವನ್ನು ಮುಟ್ಟಬೇಕಾದರೆ ಹಾಡಿನ ಮೂಲಕ ಸಾಧ್ಯ. ಗದ್ಯ ರೂಪದಲ್ಲಿರುವ ಮುಕ್ತಕಗಳನ್ನು ಹಾಡುತ್ತಿರುವುದು ವಿಶೇಷವಾಗಿದೆ. ಇಂತಹ ಮುಕ್ತಕ ಎಂಬುದು ಕಡಿಮೆ ಶಬ್ಧ ಹೆಚ್ಚು ಅರ್ಥವುಳ್ಳವಾಗಿವೆ.ಕನ್ನಡ ಪ್ರಾಚೀನ ಕಾಲದಿಂದಲೂ ಮುಕ್ತಕವು ತನ್ನ ಪರಂಪರೆಯನ್ನು ಹೊಂದಿದ್ದು,ಮುಕ್ತ ಎಂದರೆ ವಿಶಾಲ ಅರ್ಥವನ್ನು ನೀಡುತ್ತದೆ. ಮುಕ್ತಕಗಳನ್ನು ಹಾಡುವುದು ಹಾಡುಗಾರನ ಸಾಮರ್ಥ್ಯವನ್ನು ನಿರ್ಧರಿಸುತ್ತದೆ. ಗಮಕ ಶೈಲಿ ಮತ್ತು ತಾಲವನ್ನು ಇರಿಸಿಕೊಂಡು ಮುಕ್ತಕಗಳನ್ನು ಹಾಡಲಾಗುತ್ತದೆ.ಎಲ್ಲಾ ಮುಕ್ತಕಗಳಿಗೂ ರಾಗ, ತಾಳ ಹೊಂದುವುದಿಲ್ಲ ಹಾಗಾಗಿ ಗಮಕಶೈಲಿಯಲ್ಲಿ ಅದ್ಭುತವಾಗಿ ಹಾಡುವರು.ಈ ಸಂಕಲನದಲ್ಲಿರುವ ಮುಕ್ತಕಗಳನ್ನು ಸಹ ಗಮಕಶೈಲಿಯಲ್ಲಿ ಸುಂದರವಾಗಿ ಹಾಡಬಹುದಾಗಿದೆ..ಅಷ್ಟು ಚಂದದಿ ಇಲ್ಲಿನ ಮುಕ್ತಕಗಳು ಕವಿ ಹಾಗು ಕವಯತ್ರಿಯಿಂದ ರಚಿತಗೊಂಡಿವೆ.

   ಕವಿ ಮತ್ತು ಕವಯತ್ರಿಯರಾದ ಶ್ರೀ ಮಧುಕೇಶವ ಭಾಗ್ವತ್ ಹಾಗು ಶ್ರೀಮತಿ ಮಂಗಲಾ ಭಾಗ್ವತ್ ರವರು ಕೂಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ರಚನೆ ಮಾಡುತ್ತಿರುವುದು ತುಂಬಾ ಖುಷಿಯ ವಿಷಯವಾಗಿದೆ.ಇವರು ‘ನಂದಗೋಪನ ಉಲಿಗಳು’ ಸಂಕಲನವನ್ನು ಅದ್ಭುತವಾಗಿ ಛಂದೋಬದ್ಧವಾಗಿ ರಚನೆ ಮಾಡಿದ್ದು ,ಒಮ್ಮೆ ಅವರ ಈ ಮುಕ್ತಕಗಳನ್ನು ಅವಲೋಕಿಸಿದಾಗ ನನ್ನ ಮನಃಪಟಲದಲ್ಲಿ ಹಾದು ಬಂದ ವಿಷಯವಸ್ತುಗಳ ಸಂಪತ್ತು ನಿಜಕ್ಕೂ ಅನುಪಮವೆನಿಸಿತು…

              ಮಧುಕೇಶವ ಸರ್ ರವರು ಒಟ್ಟು ೩೧೪ ಹಾಗು ಮಂಗಲಾ ಮೇಡಮ್ ರವರು ಒಟ್ಟು ೧೦೦ ಮುಕ್ತಕಗಳಲ್ಲಿ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ್ದು,ಘಟನೆಗಳು ಹಾಗು ಪ್ರಸ್ತುತ ವಿಚಾರಧಾರೆಗಳಲ್ಲಿ ತಮ್ಮ ಕೈಚಳಕವನ್ನು ತೋರಿರುವುದು ಶ್ಲಾಘನೀಯವಾಗಿದೆ. ಕವಿಗಳು ಮತ್ತು ಕವಯತ್ರಿಗಳ ವಿಚಾರಪರತೆಯ ಅಡಿಯಲ್ಲಿ ಕತ್ತಲೆಯ ತಾಣದಿಂದ ಆರಂಭಿಸಿ,ನಂಬಿಕೆ ವಿಶ್ವಾಸಗಳ ಹಾದಿಯಲ್ಲಿ ಆದರ್ಶಪರತೆ, ಪ್ರಕೃತಿಯ ಮಡಿಲು, ನಿಸರ್ಗದ ಅಗತ್ಯತೆಗಳು ,ಸತ್ಯದ ಪರಾಕಾಷ್ಟೆ ,ಮಿಥ್ಯದ ಆರ್ಭಟವನ್ನು ಬಿಂಬಿಸಿದ್ದಾರೆ.
ನೋವು, ನಲಿವುಗಳ ಜೋಕಾಲಿಯಲ್ಲಿ ಬಾಳಬಂಡಿಯ ಓಟ. ಹರುಷ, ದುಃಖಗಳ ಪಾಲುಗಾರಿಕೆಯ ಪಾತ್ರ. ಗರ್ವ, ನಿಗರ್ವಗಳ ತುಲನೆ. ಕೋಪ, ದುಃಖ, ಬೇಸರಗಳು ಬಾಳಿನಲಿ ಬಂದ್ಹೋಗುವ ಸಂದರ್ಭಗಳನ್ನು ಅದ್ಭುತವಾಗಿ ವಿವರಿಸಿರುವರು.ಪ್ರಾಮಾಣಿಕತೆಯ ಪೈರನ್ನು ಬೆಳಸಿ ಅಂತಃಕರಣಭಾವವನ್ನು ತುಂಬುತ್ತ ಕಾಳಜಿ,
ಮೌಲ್ಯಗಳು,ಸಹನೆ ,ಆದರ್ಶ ,ಸತ್ಯ, ನಿಷ್ಟೆ, ಭಕ್ತಿಭಾವದೊಂದಿಗೆ ತಮ್ಮ ಬರಹದ ಛಾಪನ್ನು ಮೂಡಿಸಿದ್ದಾರೆ. ಮಾನವೀಯತೆಯ ಸೂರಿನಡಿ ಮಮತೆ, ಚಿಕ್ಕ ಮಕ್ಕಳ ಮೇಲಿನ ವಾತ್ಸಲ್ಯ, ಬಂಧುರ ಬಾಂಧವ್ಯಗಳಲ್ಲಿ ವಿಶ್ವಾಸದ ಬಂಧವನ್ನು ಈ ಮುಕ್ತಕಗಳಲ್ಲಿ ತೋರಿಸಿದ್ದಾರೆ.ಸ್ನೇಹವೆಂಬ ಲೋಕದೊಳಗೆ ಪ್ರೀತಿ ,ವಿಶ್ವಾಸ,ನಂಬಿಕೆ, ಪ್ರಾಮಾಣಿಕತೆ,ರಮಣೀಯತೆ ,ಸೂಕ್ತ ಬಂಧ,
ಸಂಬಂಧಗಳ ಬೆಸೆಯುವಿಕೆಯನ್ನು ಕೂಲಂಕಷವಾಗಿ ವಿವರಿಸುವ ಪರಿ ಅದ್ಭುತ ಅನನ್ಯವಾಗಿದೆ. ಹಾಗೆಯೆ ಹಗೆತನದ ಅಟ್ಟಹಾಸ .ಬದುಕು ಬವಣೆಯೊಡನೆ ಸರಿತಪ್ಪುಗಳ ತುಲನೆ , ಮನದೊಳಗಿನ ತಳಮಳ, ಸಂಕಟ, ಸಂಶಯಗಳ ಹೊಗೆಯನ್ನು ಎಳೆಎಳೆಯಾಗಿ ಬಿಡಿಸಿ ಅದರ ಗುಣಾವಗುಣಗಳ ಸುಂದರವಾಗಿ ಬಿಂಬಿಸುತ್ತ ,ಪ್ರಕೃತಿಯ ಸ್ವಚ್ಛತೆ ಅದನ್ನು ಉಳಿಸಿ ಬೆಳೆಸುವ ಅರಿವಿನ ದೀವಿಗೆಯನ್ನು ಬೆಳೆಗಿದ್ದಾರೆ.
ಬರಹ, ಬದುಕು ಇದರೊಳಗಿನ ನೂರಾರು ಮುಖವಾಡಗಳ ಮೇಲಾಟ. ಮನದ ಹುಚ್ಚುತನಗಳ ಬಗ್ಗೆ ಬರೆದ ಸಂದೇಶಗಳ ಸಾಲು ಅನುಭವ ಅನುಭಾವಗಳೊಂದಿಗಿನ ಮಿಳಿತವಾಗಿವೆ. ಮಣ್ಣು, ಹೆಣ್ಣು,ಹೊನ್ನು, ಬಗೆಗಿನ ಗೌರವ ,ಛಲ ದಿಟ್ಟತನದ ಒಲವಿದೆ. ಪ್ರದರ್ಶಿಸುವ ಮನಸಿದೆ.ಮನದ ಚಂಚಲತೆಯನ್ನು ತೊರೆದು ಮನಸ್ಸನ್ನು ಉಲ್ಲಸಿತಗೊಳಿಸುವ ಪರಿ ಚನ್ನಾಗಿದೆ.ಪ್ರತಿಮಾತಿಗೆ ತಿರುಗೇಟು ನೀಡುವ ಚಾಕ್ಯತೆ ಹಾಗು ವರ್ಣಿಸುವ ವೈಖರಿ, ವಿಚಾರಪರತೆ ಅಮೋಘವಾಗಿದೆ.
ಪ್ರಕೃತಿಯೊಳಗಿನ ಸಿರಿ, ಮರಗಿಡಗಳು ಲತಾಬಳ್ಳಿಗಳು ಅವುಗಳ ಉಪಯೋಗ ಹಾಗು ಅವುಗಳನ್ನು ನಾಶಮಾಡಿದರೆ ಆಗುವ ತೊಂದರೆಗಳನ್ನು ಬಹಳ ಸೂಕ್ಷ್ಮವಾಗಿ ವಿವರಿಸಿದ್ದಾರೆ. ಪ್ರಕೃತಿಯ ವೈಚಿತ್ರಗಳು ಅದರ ವೈಖರಿ ಮರಗಿಡಗಳು ,ಹೂವಿನ ,ವ್ಯತ್ಯಾಸ, ಸಂಬಂಧ ,ಸತ್ಕೃತಿಗಳ ಪರಿಚಯ, ವಿಷಾದ, ವೈಷಮ್ಯ,ವಿಷಯ ,ವಿಶೇಷ, ವೈಶಿಷ್ಟ್ಯಗಳ ಪರಿಕಲ್ಪನೆ.ಮುಗಿಲು, ತಾರೆ, ಚಂದ್ರನ ವರ್ಣನೆ.
ಹಳತು, ಹೊಸತುಗಳ ಸಾಲಿನಲ್ಲಿ ಬದಲಾದ ವಿಷಯಗಳ ಚರ್ಚೆ.ಒಳಿತು ,ಕೆಡಕು ತೊಡಕುಗಳು.
ಜೀವನದ ಸೋಲು ,ಗೆಲುವು. ಕಪಟತನದಲ್ಲಿ ವಂಚನೆಗಳಿಗೆ ದಾರಿ.ಮನದ ಗೊಂದಲ ,
ನಿರೀಕ್ಷೆ ,ಪರೀಕ್ಷೆಗಳ ಪರಿಷೆ. ಭಯವೆಂಬ ಮಾಯಾ ಜಾಲದೊಳಗೆ ಪಾಪಕೃತ್ಯ, ಚಿಂತೆ, ಬಯಕೆ ,
ನಡೆನುಡಿಗಳು. ಮಾನವೀಯತೆಯ ಕಣಜದೊಳಗಿನ ಶ್ರದ್ಧೆ ,ಸತ್ಯ, ನಿಷ್ಟೆ, ವಿಶ್ವಾಸ ,ಹಿರಿತನ ,ಘನತೆಯನ್ನು
ಮೆರೆದಿದ್ದಾರೆ.ತಂದೆ, ತಾಯಿ, ಗೃಹಿಣಿಯರ ,ನೋವು ,
ನಲಿವು ,ಸಮಸ್ಯೆ, ಸವಾಲು. ವಿಸ್ಮಯ ,ನಾವಿನ್ಯತೆ, ಬೆರಗು, ಚೈತನ್ಯ ,ಭರವಸೆಗಳ ಬಗ್ಗೆ ಹರಿದಾಡಿರುವ ಮುಕ್ತಕಗಳ ಸಾಲು ಅದ್ಭುತವಾಗಿವೆ.

   ಗುರು, ಗುರುವಿನ ಮಹತ್ವ ಕಲಿಕೆಗೆ ಮಾರ್ಗದರ್ಶನ ನೀಡುವ ಗುರುವಿನ ಕಾರ್ಯ ಶ್ಲಾಘನೆ.ಅದರ ಫಲ, ಪ್ರತಿಫಲ. ಬಡತನ ವಿಧಿಯಾಟಗಳಗನ್ನು ಮಾರ್ಮಿಕವಾಗಿ ಚೌಪದಿಯಲ್ಲಿ ಬಿತ್ತರಿಸಿರುವುದು ನಿಜಕ್ಕೂ ಖುಷಿಯಾಗುತ್ತದೆ.ಹಾಗೆಯೆ ಉತ್ತಮ ಮೌಲ್ಯಗಳ ಅರಿವು ಮೂಡಿಸಿರುವುದು.ಸತ್ಯ ,ನಿಷ್ಟೆ, ನ್ಯಾಯ, ಧರ್ಮಗಳ  ಮೇಲೆ ಬೆಳಕು ಚಲ್ಲಿರುವುದು.ಹಾಗೆಯೆ ಸತ್ಯ, ಮಿಥ್ಯಗಳು ಸರಿ ,ತಪ್ಪುಗಳ ಬಗ್ಗೆ ಚರ್ಚೆ. ಶಿಕ್ಷಣ, ಶಿಕ್ಷಕರ ನುಡಿಗಳು ಅವರಿಗೆ ನೀಡುವ ಗೌರವ ಗುರುಭಕ್ತಿಯ ಬಗ್ಗೆ ಸುದೀರ್ಘ ವಿಚಾರಧಾರೆಗಳಿವೆ…

                   ಪ್ರತಿಯೊಂದು ಮುಕ್ತಕಗಳನ್ನು ಓದಿ ಅನುಭವಿಸುವಾಗ ನಡೆಯುತ್ತಿರುವ ಪ್ರತಿಯೊಂದು ಘಟನೆಗಳನ್ನಾಧರಿಸಿ ಹಾಗು ಅನೇಕ ವಿಷಯಧಾರಿತ ಅಂಶಗಳ ಮೇಲೆ ಕವಿ ,ಕವಯತ್ರಿ ಇಬ್ಬರೂ ಕೂಡ
ಇಲ್ಲಿ ಬೆಳಕು ಚೆಲ್ಲಿದ್ದಾರೆ.ಏಕೆ.? ಹೇಗೆ .?ಯಾವುದು.? ಯಾವಾಗ.? ಎಲ್ಲಿ.? ಏನು.? ಯಾರಿಂದ.?ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಾಗಿರುವುದು ಇವರ ಬರಹಗಳ ಚಮತ್ಕಾರವಾಗಿದೆ.ಹಾಗು ಇವರ ಸಾಹಿತ್ಯ ರಚನೆಯ ಹಾದಿ ಸೊಗಸಾಗಿದ್ದು ಮುಕ್ತಕಗಳ ರಚನೆಯಿಂದಲೆ ಭಾಷಾ ಪ್ರೌಢಿಮೆಯಿಂದ ಕೂಡಿರುವುದು ತಿಳಿಯುತ್ತದೆ.ಹಾಗೆಯೆ ಓದುಗರಿಗೆ ಉತ್ತಮ ಸಂದೇಶಗಳನ್ನು ನೀಡಿದ್ದು ಅರ್ಥಪೂರ್ಣವಾಗಿವೆ..ಈ ಸಂಕಲನದಲ್ಲಿರುವ ಮುಕ್ತಕಗಳನ್ನು ಓದಿ ಅರ್ಥೈಸಿಕೊಂಡಾಗ ನಿಜಕ್ಕೂ ಅಮೋಘವೆನಿಸಿದ್ದು ಸುಳ್ಳಾಗಿಲ್ಲ.ಇಲ್ಲಿ ಕವಿ ಹಾಗು ಕವಯತ್ರಿ ಇಬ್ಬರ ಮುಕ್ತಕಗಳು ಮನಸೂರೆಗೊಂಡವು…

೦೧…

ಜೀವನದ ಹಾದಿಯಲಿ ಕಷ್ಟಸುಖ ಸಹಜವದು
ಬೇವುಬೆಲ್ಲಗಳೆರಡು ಸಮನಾಗಿ ಇರಲಿ
ಭಾವನೆಯ ಸಂತೆಯಲಿ ಮುಳುಗದಿರು ಅನುದಿನವು
ನೋವಿನಲು ನಗುತಲಿರು ನಂದಗೋಪ…..

ಜೀವನ ಬೇವು ಬೆಲ್ಲದಂತೆ ನಿಜ ನೋವು ನಲಿವಿನ ಹೂರಣ.ಬೇವೆಂಬ ಕಹಿಯಂತೆ ಕಷ್ಟಗಳು ಬಂದಾಗ ಕುಗ್ಗದೆ ಮುನ್ನುಗ್ಗಬೇಕು .ಬೆಲ್ಲವೆಂಬ ಸಿಹಿಯ ರೂಪದಲ್ಲಿ ಪರಿಹಾರ ಖಂಡಿತ ಸಿಗುವುದು. ಕೇವಲ ಖುಷಿಯಿದ್ದರಷ್ಟೆ ಬಾಳು ಎನಿಸಿಕೊಳ್ಳಲಾರದು .
ಖುಷಿಯ ಜೊತೆಯಲ್ಲಿ ನೋವು ಇದ್ದರೆ ಜೀವನ ಸಾರ್ಥಕ.ಅದೆಂತಹ ಏಳು ಬೀಳುಗಳು ಬಂದರೂ ಜಗ್ಗದೆ, ಕುಗ್ಗದೆ, ಬಗ್ಗದೆ ಮುಂದೆ ಸಾಗುತ್ತಿರಬೇಕು.
ಅದೆ ಬದುಕಿನ ಛಲ.ನೋವು ಬಂದಾಕ್ಷಣ ಕೊರಗದೆ ಕೂರದಿರು.ನೋವಿದ್ದರು ನಗುತ್ತ ಸಾಗುತಿರಿ ಎಂದು ನೋವಿರುವ ಮಂದಿಗೆ ಉತ್ತಮ ಸಂದೇಶವನ್ನು ತಮ್ಮ ಮುಕ್ತಕದಲ್ಲಿ ಸಾರಿದ್ದಾರೆ..

೦೨……

ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲ
ಒಕ್ಕದಿರೆ ಬೆಳೆಯುವುದೆ ಭೂಮಿಯಲಿ ಫಸಲು
ಒಕ್ಕುತಿಹ ರೈತನಿಗೆ ಸಹಕರಿಸಿ ಹೆಚ್ಚಿನಲಿ
ಹಕ್ಕಿನಲಿ ನೀ ಉಣುವೆ ನಂದಗೋಪ….

ಒಕ್ಕಲಿಗ ಬಿತ್ತಿದ ಬೀಜ ಮೊಳಕೆ ಒಡೆದು, ಚಿಗುರಿ ಗಿಡವಾಗಿ ಫಲವು ಅರಳುವವರೆಗೂ ಅದೆಷ್ಟು ಶ್ರಮ ವಹಿಸಬೇಕು. ಕಷ್ಟವೆಂದು ಹಾಗೆ ಕೂತರೆ ಜಗತ್ತಿನ ಹಸಿವನ್ನು ನೀಗಿಸುವವರು ಯಾರು.?ರೈತ ಅದೆಷ್ಟು ಕಷ್ಟಪಟ್ಟರೂ ಹಲವಾರು ಬಾರಿ ರೈತನ ಲೆಕ್ಕಚಾರಗಳೆಲ್ಲವೂ ತಲೆಕೆಳಗಾಗುವ ಸಾಧ್ಯತೆಯಿದೆ. ರೈತ ಕರುಣಾಮಯಿ.ಆಗಾಗಿ ಜಗತ್ತಿಗೆ ಅನ್ನವನ್ನು ನೀಡುತಿರುವ ರೈತನಿಗೆ ನಾವೆಲ್ಲ ಸಹಕರಿಸಬೇಕು ಎಂದಿದಾರೆ.ರೈತರಿಲ್ಲದ ಜಗತ್ತನ್ನು ಯಾರೂ ಕೂಡ ಕಲ್ಪಿಸಿಕೊಳ್ಳುವುದು ಅಸಾಧ್ಯ. ನಾವು ತಿನ್ನುವ ನಿತ್ಯದ ಊಟದ ಹಿಂದೆ ರೈತನ ಶ್ರಮವಿದೆ. ಇಡೀ ಜಗತ್ತು ಬೆಳಗುವ ರೈತ ಯಾವಾಗಲೂ ತೆರೆಮರೆಯಲ್ಲೇ ಇರುತ್ತಾನೆ. ಆತನ ಸಂಕಟ, ನೋವು, ದುಮ್ಮಾನಗಳಿಗೆ ಎಣೆಯೇ ಇಲ್ಲ. ಆದರೂ, ನೇಗಿಲು ಹೊತ್ತ ಯೋಗಿ ತನ್ನ ಕಾಯಕ ಮಾಡುತ್ತಲೇ ಇರುತ್ತಾನೆ. ಅಂಥ ನಿಸ್ವಾರ್ಥಿಯ ರೈತನಿಗೆ ಕಷ್ಟ ಕಾಲದಲ್ಲಿ ಸಹಕರಿಸಬೇಕು.ಅವನೆ ಇಲ್ಲದಿದ್ದರೆ ಜಗತ್ತು ಇರಲು ಸಾಧ್ಯವಿಲ್ಲವೆಂಬುದನ್ನು ಸೂಕ್ಷ್ಮವಾಗಿ ಹೇಳಿರುವರು..

೦೩…..

ಕೊಟ್ಟಿರುವ ಮಾತುಗಳು ಉಳಿಸದೇ ನಡೆದಲ್ಲಿ
ಬಿಟ್ಟಿರುವ ಬಾಣವದು ತಾಗುವುದು ಎದೆಗೆ
ಕಟ್ಟಿರುವ ಮಹಲಿನಲಿ ನೆಮ್ಮದಿಯು ಇಲ್ಲದಿರೆ
ಮೆಟ್ಟಿನಡೆ ಸತ್ಯವನು ನಂದಗೋಪ…

ಯಾರೇ ಆಗಲಿ ಕೊಟ್ಟ ಮಾತಿಗೆ ತಪ್ಪಿ ನಡೆಯಬಾರದು.ಕೊಟ್ಟ ಮಾತು ನಂಬಿಕೆ ವಿಶ್ವಾಸದ ಮೇಲೆ ನಿಂತಿರುತ್ತದೆ.ಕೊಟ್ಟ ಮಾತಿಗೆ ತಪ್ಪಿ ನಡೆದರೆ ಯಾವ ದೇವ ಮೆಚ್ಚನು.ಮಾಡಿದ ತಪ್ಪಿಗೆ ಪಶ್ಚಾತಾಪ ಪಡಬೇಕಾಗುವುದು.ಸತ್ಯ ನಿಷ್ಟೆ ನ್ಯಾಯಸಮ್ಮತವಾಗಿ ನಡೆದರೆ ಜೀವನ ಸಾರ್ಥಕವಾಗುವುದು.
ನಿಸ್ವಾರ್ಥಿಯಾಗದೆ ಸ್ವಾರ್ಥ ದಾರಿಯಲ್ಲಿ ನಡೆದರೆ ಜೀವನಯಾನ ಪೂರ್ತಿ ಕೊರಗುವ ಪರಿಸ್ಥಿತಿ ಬರಬಹುದು.ಆದ್ದರಿಂದ ಮಾತಿನಂತೆ ನಡೆಯಿರಲಿ.
ಎಂತಹ ಅದ್ಭುತ ಸಂದೇಶ ಸಾರಿದ್ದಾರೆ..

೦೪……

ದುಡಿಸದಿರಿ ಬಾಲಕರ ಕೆಲಸದಲಿ ಸೇರಿಸುತ
ಕೆಡಸದಿರಿ ಬಾಲ್ಯವದು ಸಿಗದೆಂದು ಮುಂದೆ
ಕೊಡಿಸಿರಲು ವಿದ್ಯೆಯನು ಬಾಲಕರ ಜೀವನವ
ಕಡೆತನಕ ಪೊರೆಯುವುದು ನಂದಗೋಪ…

ಚಿಕ್ಕ ಚಿಕ್ಕ ಮಕ್ಕಳಿಂದ ದುಡಿಸಿಕೊಳ್ಳಬೇಡಿ.ಏಕೆಂದರೆ ಭವಿಷ್ಯದ ಪ್ರಜೆಗಳವರು ಅವರನ್ನು ಯಾವುದೆ ಕಾರಣಕ್ಕೆ ಬಾಲಕಾರ್ಮಿಕರಾಗಿ ಮಾಡಬೇಡಿ.


ಮಾಡಿದರೆ ಅವರ ಬಾಲ್ಯ ನಾಶವಾಗುತ್ತದೆ.
ನಾಶವಾದರೆ ಮತ್ತೊಮ್ಮೆ ಸಿಗದು ಆ ಬಾಲ್ಯ.


ಆದ್ದರಿಂದ ಎಳೆ ಮಕ್ಕಳ ಬಾಲ್ಯವನ್ನು ಯಾರು ಕಸಿದುಕೊಳ್ಳುವ ಕೆಲಸ ಮಾಡಬೇಡಿ.ಬಾಲ್ಯ
ವ್ಯವಸ್ಥೆಯಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ, ಉತ್ತಮ ಮಾರ್ಗದರ್ಶನ ನೀಡಿ ಪ್ರಜ್ಞಾವಂತ ಪ್ರಜೆಯನ್ನಾಗಿ ಮಾಡುವುದು ನಮ್ಮ, ನಿಮ್ಮೆಲ್ಲರ ಕರ್ತವ್ಯ. ಬಾಲ್ಯದಲ್ಲಿಯೇ ಮಕ್ಕಳು ಕಾರ್ಮಿಕರಾಗಿ ದುಡಿಸಿಕೊಳ್ಳುತಿದ್ದರೆ, ಅವರು ದುಶ್ಚಟಗಳಿಗೆ ದಾಸರಾಗಬಹುದು.ಆಗಾಗುವುದು ಬೇಡ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ.ಕಡೆತನಕವೂ ಬಾಲರನ್ನು ಪೊರೆಯೋಣ ಅವರ ಕನಸುಗಳಿಗೆ ಪುಷ್ಟಿ ನೀಡೋಣವೆಂದಿರುವುದು ನಿಜ ಈ ನಾಲ್ಕು ಸಾಲುಗಳಲ್ಲಿ ಅದೆಷ್ಟು ಸಾರವಿದೆ…

೦೫…..

ಶಿಸ್ತಿನಲಿ ಕಲಿಕೆಯಲಿ ಕುಳಿತಿರುವ ಮಕ್ಕಳಿಗೆ
ಪುಸ್ತಕದ ತಿಳುವಳಿಕೆ ಮಸ್ತಕದಿ ತುಂಬಿ
ಸುಸ್ತಿರದೆ ಶಿಕ್ಷಕರು ಕಲಿಸುತಿರೆ ಪಾಠವನು
ವಿಸ್ತರಿಸಿ ಜ್ಞಾನವನು ಮಾತೆ ಲಲಿತೆ…

ಮನೆಯೆ ಮೊದಲ ಪಾಠಶಾಲೆ, ತಾಯಿಯೆ ಮೊದಲು ಗುರುವೆಂಬಂತೆ ;ಮನೆಯಲ್ಲಿ ಪ್ರತಿಯೊಂದು ಸಂಸ್ಕಾರವನ್ನು ಹೇಳಿಕೊಡುವವಳು ಹೆತ್ತ ತಾಯಿ.ನಂತರ ಶಾಲೆ ಶಾಲೆಯಲ್ಲಿ ಪ್ರತಿಯೊಂದು ಕಲಿಕೆಯನ್ನು ಕಲಿಸುವವರು ಶಿಕ್ಷಕರು. ಶಿಸ್ತು, ಸಂಯಮ ,ಸಮಯಪಾಲನೆ, ಪ್ರಾಮಾಣಿಕತೆ ಇತ್ಯಾದಿ ಮೌಲ್ಯಗಳನ್ನು ಪ್ರತಿ ಮಗುವಿಗೂ ಕಲಿಸುವವರು ಶಿಕ್ಷಕರು. ಮಕ್ಕಳ ವೈವಿಧ್ಯಮಯ ಅಗತ್ಯಗಳನ್ನು ಗುರುತಿಸಲು ತರಬೇತಿ ಪಡೆದ ಗುರುಗಳ ಅಗತ್ಯವಿರುತ್ತದೆ. ಸಮಾಜದ ಮತ್ತು ಪ್ರಪಂಚದ ಬೆಳೆಯುತ್ತಿರುವ ಅಗತ್ಯಗಳನ್ನು ಪೂರೈಸುವ ಸಲುವಾಗಿ ಇತ್ತೀಚಿನ ವರ್ಷಗಳಲ್ಲಿ ಅಂತರ್ಗತ ಶಿಕ್ಷಣವು ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ವಿದ್ಯಾರ್ಥಿಗಳಿಗೆ ಲಭ್ಯವಿರುವ ಅರಿವಿನ ಅವಕಾಶಗಳನ್ನು ಮಿತಿಗೊಳಿಸುವ ಅಥವಾ ಆ ಅವಕಾಶಗಳನ್ನು ಬಳಸದಂತೆ ತಡೆಯುವ ಅಡೆತಡೆಗಳು ಇರಬಹುದೇ ಎಂದು ನಿರ್ಧರಿಸಲು ಅವರು ತಮ್ಮ ತರಗತಿಗಳನ್ನು ವಿಶ್ಲೇಷಿಸಬೇಕಾಗಿದೆ. ಪ್ರತಿ ಕಲಿಕೆಯ ಜ್ಞಾನವನ್ನು ಪುಸ್ತಕದಿಂದ ಮಸ್ತಕಕೆ ತುಂಬುತ್ತ ಅವರನ್ನು ಸನ್ಮಾರ್ಗದೆಡೆ ಸಾಗಿಸುತಿರುವ ಶಿಕ್ಷಕ ಪಾತ್ರ ಅದ್ಭುತ ಅನನ್ಯ.ಹೀಗೆ ಗುರುವಿನ ಮಹತ್ವ ಹಾಗೂ ಅವನ ಕರ್ತವ್ಯಗಳನ್ನು ತುಂಬ ಸೊಗಸಾಗಿ ಹೇಳಿರುವರು.

೦೬…..

ಹೆಣ್ಣು ಮಗುವೊಂದಿರಲು ಸಂಭ್ರಮವು ಮನೆಯಲ್ಲಿ
ಹುಣ್ಣಿಮೆಯ ಬೆಳಕಂತೆ ಬೆಳಗುವಳು ಮನವ
ಹೆಣ್ಣೆಂದು ಜರಿಯದಿರು ತಾತ್ಸಾರ ಮಾಡದಿರು
ಹೆಣ್ಣು ಕಣ್ಣಾಗುವಳು ಮಾತೆ ಲಲಿತೆ….

ಹೆಣ್ಣಾದರೇನು ಗಂಡಾದರೇನು ಮಕ್ಕಳು ಮಕ್ಕಳ್ಳವೇ..? ಗಂಡು ಹುಟ್ಟಿದರೆ ಸಂಭ್ರಮ. ಅದೆ ಹೆಣ್ಣು ಹುಟ್ಟಿದರೆ ಮೂದಲಿಕೆಯ ಮಾತುಗಳು.ಹೆಣ್ಣು ಹೆಣ್ಣೆಂದು ಜರಿಯುವ ಮನುಜರಿಗೇನು ಕಡಿಮೆಯಿಲ್ಲ ಈ ಹೆಣ್ಣು.ಹೆಣ್ಣೆ ಕೊನೆಯವರೆಗೂ ನೋಡುವವಳು ,ಸಾಕುವವಳು.ಅವಳಿದ್ದರೆ ಮನೆಯೊಂದು ನಂದನವನ ಆ ವನ ಸದಾ ಅರಳುತಿದ್ದರೆ ಮನೆ ಮನುಸುಗಳೆರಡು ನೆಮ್ಮದಿಯಿಂದ ಸಾಗುವವು.ಅವಳಿದ್ದರೆ ಮನೆಗೊಂದು ಕಳೆ.ಒಂದು ರೀತಿ ಪ್ರಜ್ವಲಿಸುವ ಜ್ಯೋತಿಯಂತೆ..ಇಂತಹ ಹೆಣ್ಣನ್ನು ಜರಿಯದಿರಿ.ತಾತ್ಸಾರ ಮಾಡದಿರಿ.ಅವಳೆ ಕಣ್ಣಾಗಾವಳು ಎಂದು .ಹೇಳಿರುವ ಪರಿ ನಿಜಕ್ಕೂ ಸುಂದರವಾಗಿದೆ.ಹೆಣ್ಣು ಮಗುವಿನ ಮಹತ್ವ ಅವಳ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿದಿರುವುದು ತುಂಬಾ ಚನ್ನಾಗಿದೆ…

     ಈ ಒಂದು ಮುಕ್ತಕ ಸಂಕಲನಕ್ಕೆ ಅಮೋಘವಾಗಿ ಮುನ್ನುಡಿಯನ್ನು ಬರೆದಿರುವಂತಹ ಶ್ರೀಮತಿ ಸುಮನಾ ಆರ್. ಹೇರ್ಳೆ ಮೇಡಮ್ .ಹಾಗೆ ಬೆನ್ನುಡಿಯನ್ನು ಬಹಳ ಅಚ್ಚುಕಟ್ಟಾಗಿ ,
ಅರ್ಥಪೂರ್ಣವಾಗಿ ತಮ್ಮ ಅಮೂಲ್ಯ ಅಣಿಮುತ್ತುಗಳೊಂದಿಗೆ ಹೆಣೆದಿರುವ ಶ್ರೀಮತಿ ಶೋಭಾ ಹರಿಪ್ರಸಾದ್ ಮೇಡಮ್ ರವರು ಬರೆದಿರುವರು.ಹಾಗೆಯೆ ಶ್ರೀಮತಿ ವಿನಿ ವಿಜಯ ನಿರ್ಮಲರವರ ಶುಭಾಶಿರ್ವಾದದ ನುಡಿಗಳು ಈ ಮುಕ್ತಕ ಮಾಲೆಗೆ ಮತ್ತಷ್ಟು ಸೊಬಗನ್ನು ತಂದು ಕೊಟ್ಟಿವೆ.ಕವಿ ಸಾಹಿತಿಗಳಾದ ಶ್ರೀಯುತ ಮಧುಕೇಶವ ಭಾಗ್ವತ್ ಹಾಗು ಶ್ರೀಮತಿ ಮಂಗಲಾ ಭಾಗ್ವತ್ ರವರ ಪ್ರತಿಭೆ ,ಸೃಜನಶೀಲತೆ ಈ ಕೃತಿಯಲ್ಲಿ ತುಂಬ ಸೊಗಸಾಗಿ ಪ್ರತಿಬಿಂಬವಾಗಿ ಮೂಡಿ ಬಂದಿದೆ. ಇವರ ಮುಕ್ತಕ ರಚನಾ ಕೌಶಲ್ಯ ಮತ್ತಷ್ಟು ಹೆಚ್ಚಲಿ.ಮಗದಷ್ಟು ಉತ್ತಮ ಪದಪುಂಜಗಳೊಂದಿಗೆ ಪ್ರತಿ ಆರು ಪ್ರಾಸಗಳಲ್ಲೂ ರಚನೆಗೊಳ್ಳುತ್ತ ನಿಮ್ಮಿಬ್ಬರ ಸೃಜನಶೀಲ ಗುಣ ಬೆಳೆಯುತ್ತಲೇ ಸಾಗಲಿ ಎಂದು ಹಾರೈಸುತ್ತಾ. ಸಾಹಿತ್ಯ ಪ್ರಿಯರು ಈ ಮುಕ್ತಕ ಸಂಕಲನವನ್ನು ಪ್ರೀತಿಯಿಂದ ಓದುತ್ತಾರೆಂಬ ಭರವಸೆಯೊಂದಿಗೆ…ಶುಭಹಾರೈಸುವೆ
ಧನ್ಯವಾದಗಳೊಂದಿಗೆ

———————————-


ಅಭಿಜ್ಞಾ ಪಿ.ಎಮ್ ಗೌಡ

Leave a Reply

Back To Top