ಶರಣಪ್ಪ ಕರಡಿ ವಿರಚಿತ ಪದಶ್ಯಾಣನ ಪ್ರಪಂಚ ಕೃತಿ ಪರಿಚಯ ಮರುಳಸಿದ್ಧಪ್ಪ ದೊಡ್ಡಮನಿ

ಪುಸ್ತಕ ಸಂಗಾತಿ

ಶರಣಪ್ಪ ಕರಡಿ ವಿರಚಿತ

ಪದಶ್ಯಾಣನ ಪ್ರಪಂಚ

ಕೃತಿ ಪರಿಚಯ

ಮರುಳಸಿದ್ಧಪ್ಪ ದೊಡ್ಡಮನಿ

ಕವಿ ಶರಣಪ್ಪ ಕರಡಿರವರು ತ್ರಿಪದಿಗಳ ಮೂಲಕ ಈಗಾಗಲೇ ಮುಖಪುಟದಲ್ಲಿ ತತ್ವಪದಗಳ ರಸಾನುಭವವನ್ನು ನಾಡಿನ ಓದುಗರ ಮನಮುಟ್ಟುವಲ್ಲಿ ಯಶಸ್ವಿಯಾಗಿರುವುದು ಗಮನಿಸಬೇಕಾದ ಅಂಶ.

ಜಾನಪದದ ಸೊಗಡಿನ ದೇಶಿಯ ಭಾಷೆಯನ್ನು ದುಡಿಸಿಕೊಂಡು ಮಾನವ ಪ್ರೀತಿ, ಪರಿಸರ, ಬದುಕು, ಜೀವನ ಮೌಲ್ಯಗಳು ಸಮಾಜಮುಖಿಯಾದ ಚಿಂತನೆಯನ್ನು ತಮ್ಮ ವಿಚಾರ ಲಹರಿಯ ಮುಖೇನ ಬಿಂಬಿಸಿರುವುದು ಅವರ ಬರವಣಿಗೆಯ ಶಕ್ತಿಯನ್ನು ತೋರಿಸುತ್ತದೆ.
ನೋವು, ಹತಾಶೆ, ಮೇಲುಕೀಳು, ತಾರತಮ್ಯಗಳನ್ನು ತಿವಿದು, ಅನ್ಯಾಯ, ಅನಾಚಾರ, ಮೌಢ್ಯಗಳಿಗೆ ಕಿಚ್ಚು ಹಚ್ಚಿ ಸಮಾಜದ ಏಳಿಗೆಗೆ ಕಾವ್ಯದ ಮುಖಾಂತರ ಸಮನ್ವಯತೆಯನ್ನು ಸಾರಿಸಾರಿ ಹೇಳಿರುವುದು ಗಮನಾರ್ಹವಾದ ಸಂಗತಿ.

ಕಾಯಕ ತತ್ವವನ್ನು, ನೇಗಿಲು ಧರ್ಮದ ಕರ್ಮದ ಫಲದ ಬಗ್ಗೆ ಅನುಸಂಧಾನಿಸಿರುವುದು, ಕವಿ ಬದುಕಿನ ಎಲ್ಲ ತಲ್ಲಣಗಳನ್ನು ತಮ್ಮ ಒಳಗಣ್ಣಿನ ನೋಟದ ಮುಖಾಂತರ ಅನುಭವಿಸಿ ಬರೆದಿರುವುದು ಇವರ ಕಾವ್ಯದ ಕಸುವಿನ ಶಕ್ತಿಯೂ ಹೌದು.
ಒಬ್ಬ ಬರಹಗಾರ ಒಳಗಣ್ಣಿನ ಅಂರ್ತಮುಖಿಯಾಗಿ ಅನುಭಾವದ ಮೂಸೆಯಲ್ಲಿ ಮಿಂದು ಬರೆದಾಗ ಕವಿತ್ವಕ್ಕೆ ಕಾವ್ಯಕ್ಕೆ, ಬಹುದೊಡ್ಡ ಶಕ್ತಿಯು ದೊರೆಯುತ್ತದೆ.

ಶರಣಪ್ಪ ನಮ್ಮ ನಡುವಿನ ನಾನ್ ಅಕಾಡೆಮಿಕ್ ಬರಹಗಾರನಾಗಿದ್ದರು. ಅಕಾಡೆಮಿಕ್ ವಲಯದ ಬರಹಗಾರರೂ ಹೌದಹುದು ಎನ್ನುವಂತೆ ತತ್ವಪದಗಳನ್ನು ಬರೆಯಬಲ್ಲ ಶಕ್ತಿ ಅವರಿಗೆ ಸಿದ್ಧಿಸಿದೆ.

ಸೂಕ್ಷ್ಮ ಸಂವೇದನೆಯ ಮೂಲಕ ಸಾಮಾಜಿಕ ಅನಿಷ್ಟಗಳನ್ನು ತಮ್ಮ ತ್ರಿಪದಿಯ ಮೂಲಕ ತಿದ್ದುವ ಪ್ರಯತ್ನ ಮಾಡಿರುವುದು ಸ್ವಾಗತಾರ್ಹವಾದುದು.


ಇಲ್ಲಿ ಇವರ ತ್ರಿಪದಿಯ ಸಾಲನ್ನು ಗಮನಿಸುವುದಾದರೆ-


“ಕಳ್ಳ ಮಳ್ಳರು ಕೂಡಿ ಮಳ್ಳಜನರ ಮಾಡಿ
ಕಳ್ಳಿಯ ಕರಿಗಡಬು ಬಸಿದಾರ ! ಮನದೊಳ್ಗ
ಸುಳ್ಳಪಿಳ್ಳದ ಅಂದ ಹಾಕ್ಯಾರ.”


ವಾಸ್ತವಿಕ ಕಾಲದ ಚಿಂತನೆಯ ಈ ಸಾಲುಗಳು ಸಧ್ಯದ ಮನುಜರ ದುರಾಸೆಗಳನ್ನು ಅವಲೋಕಿಸಿ ಬರೆದಿರುವುದು ಸತ್ಯವಾದ ಮಾತು.

ಈ ಕಾಲಘಟ್ಟದ ಮನುಜನ ಆಸೆ ಆಕಾಂಕ್ಷೆಗಳಿಗೆ ಈ ಮೇಲಿನ ಸಾಲುಗಳು ಸಾಮ್ಯವಾಗಬಲ್ಲವು.
ಬಿಡಿಕ್ಯಾರನ ಬಡದ್ಹಾಕು ಬಾಳೋಳ್ಗ ಅನ್ನುವ ಕವಿತೆಯ ಸಾಲುಗಳನ್ನು ಗಮನಿಸಿದರೆ –


ಕಾಮಿನಿ ಕಾನಿ ಜನರೊಳ್ಗ ಪ್ರೇಮವ ಕಾಣಲೋದೆ
ಕಾಮಿಸಿ ಕಾಡ್ಯಾರ ಬಾಳಲ್ಲಿ, ಪಡೆದವ್ವ
ಕಾಮಣಿ ಕಣ್ಣಿಂದ ಬಿಡಸವ್ವ.


ಎಂಥಾ ಅರ್ಥಪೂರ್ಣ ಸಾಲುಗಳು ಇವು. ಕಾಮಿನಿ ಎಂದರೆ ಕಾಮಪಿಪಾಸು ತುಂಬಿದ ಜನರ ಮಧ್ಯೆ ಪ್ರೇಮವ ಅರಸಿದೆ. ಕಾಮಕೂ, ಪ್ರೇಮಕೂ ವ್ಯತ್ಯಾಸ ಅರಿಯದ ಜನ ಪೀಡಕರಾಗಿ ಕಾಮದ ಆಸೆಯಿಂದ ನೋಡಿರುವ ಪರಿಯನ್ನು ಕಾಮದ ಕಣ್ಣಿಂದ ನನ್ನನ್ನು ಬಂಧ ಮುಕ್ತವಾಗಿಸು ಎಂದು ಇಲ್ಲಿ ಬೇಡಿರುವುದು ಬಹಳ ಸಾಂದರ್ಭಿಕ. ಪ್ರಸ್ತುತ ವಿದ್ಯಮಾನದ ನೋವನ್ನು ಕಂಡು ನೊಂದು ಬರೆದ ಸಾಲುಗಳು, ಇವು ಸಮಾಜವನ್ನು ಅಂಕುಶದಿಂದ ತಿವಿದು ಎಚ್ಚರಿಸುವ ಸಾಲುಗಳಾಗಿವೆ.
`
`ತವರಿನ ಮಾತೊಳ್ಗ ಬೆವರಿನ ಮೈಯೊಳ್ಗ
ಬಡತನದ ತೇರೊಂದು ಎಳಿತಾದ ! ಮನೆಯೊಳ್ಗ
ಸಿರಿತನದ ಮನವೊಂದು ಮೆರಿಸ್ಯಾಳ”


ತವರಿನ ಬಡತನದ ಬೆವರಿನ ಮೈ ಮನದ ಸಿರಿಯನ್ನು ಕಾವ್ಯಾತ್ಮಕವಾಗಿ ಹರಸಿರುವುದು ನಮ್ಮ ನಡುವಿನ ಬಡತನ ಸಿರಿತನಗಳ ಸಾಲುಗಳು ಹೃದ್ಯವಾಗಿ ಮೂಡಿರುವುದು ಅನುಭವದ ಮೂಸೆಯಲ್ಲಿ ಅರಳಿ ನಿಂತಿದೆ. ಇಂತಹ ಹಲವಾರು ಪ್ರತಿಮೆ, ರೂಪಕಗಳು, ಹಸನಾದ ಸಾಲುಗಳು ಹುಟ್ಟಲು ಕಾರಣವಾಗಿರುವುದು ಬದುಕಿನ ಅನೇಕ ಮಜಲುಗಳನ್ನು ಕಂಡು ಅನುಭವಿಸಿ ಬರೆದಿರುವ ಶರಣಪ್ಪ ಕರಡಿಯವರು ಅನೇಕ ಸಂಕಲನಗಳನ್ನು ತರುವ ಮುಖೇನ ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ಛಾಪು ಮೂಡಿಸಲೆಂದು ಹಾರೈಸಿ ನನ್ನ ಮಾತಿಗೆ ಅಲ್ಪವಿರಾಮ ನೀಡುವೆ.

——————————————————

ಮರುಳಸಿದ್ಧಪ್ಪ ದೊಡ್ಡಮನಿ

Leave a Reply

Back To Top