ಮನುಕುಲದ ಮತಿಗೇಡಿ ನಡೆಗಳ ಅವಘಡಗಳು:ಪರಿಣಯ ಪ್ರಸಂಗ ನಾಟಕ

ರಂಗ ಸಂಗಾತಿ

ಮನುಕುಲದ ಮತಿಗೇಡಿ ನಡೆಗಳ

ಅವಘಡಗಳು:

ಪರಿಣಯ ಪ್ರಸಂಗ ನಾಟಕ

ಲೇ:ಗೊರೂರು ಅನಂತರಾಜು

ಸಾಂಸ್ಕೃತಿಕವಾಗಿ ಮತ್ತು ಇತಿಹಾಸದ ಹಲವು ಕುರುಹುಗಳ ಬಾಹುಳ್ಯದಿಂದಾಗಿ ಶ್ರೀರಂಗಪಟ್ಟಣ ಗಮನೀಯವಾಗಿದೆ. ಮಂಡ್ಯ ಜಿಲ್ಲೆಯ ಕಲಾಪರಂಪರೆಗೆ ಇಲ್ಲಿನ ಕಲಾ ಕೊಡುಗೆಯೂ ಸಾಕಷ್ಟಿದೆ. ಗ್ರಾಮೀಣ ಭಾಗದ ಆಸಕ್ತರಿಂದ ಮೊದಲ್ಗೊಂಡು ಪಟ್ಟಣವಾಸಿಗಳನ್ನು ಒಳಗೊಂಡು ಒಂದು ಶಿಷ್ಟ ತಂಡವಾಗಿ ರೂಪುಗೊಳ್ಳುತ್ತಾ ರಂಗಾಭ್ಯಾಸದ ಹಿನ್ನೆಲೆಯೊಂದಿಗೆ ಒಂದಿಷ್ಟು ಕಲಾ ಕೈಂಕರ್ಯವನ್ನು ಕೈಗೆತ್ತಿಕೊಳ್ಳುವ ಹುಮ್ಮಸ್ಸಿನಲ್ಲಿ ರಮ್ಯ ರೂಪುಗೊಂಡಿದೆ ಎನ್ನುತ್ತಾರೆ ರಮ್ಯ ಸಂಘಟಕ ಜೆ.ನಾರಾಯಣಸ್ವಾಮಿ. ಇವರು ನಾಗಮಂಗಲದ ಕನ್ನಡ ಸಂಘದ ಸೃಜನಾತ್ಮಕ ಚಟುವಟಿಕೆಗಳಲಿ ತೊಡಗಿಸಿಕೊಳ್ಳುತ್ತಾ ಮಂಡ್ಯ ರಮೇಶ, ಪ್ರಶಾಂತ ಹಿರೇಮಠ್, ಸಂತೋಷಕುಮಾರ ಕುಸನೂರ, ಕೃಷ್ಣಪ್ರಸಾದ್, ಎಸ್.ಆರ್.ರಮೇಶ್, ಸಿ.ಬಸವಲಿಂಗಯ್ಯ, ಬಿ. ಸುರೇಶ್‌ ಇವರ ಮಾರ್ಗದರ್ಶನದಲ್ಲಿ ಬೆಳೆದವರು. ಇವರು ನಟನೆ ಜೊತೆಗೆ ಸಖಿಗೀತ, ಪರಿಕಸು, ಜೀವನಾರ್ಥ, ಮಂಕುತಿಮ್ಮನ ಕಗ್ಗ, ಡಾ.ಸಿದ್ರಾಜು, ಮಹಿಮಾಪುರ, ಪರಿತ್ಯಕ್ತ, ಅರಹಂತ, ಹುಲಿಕಥೆ ನಾಟಕಗಳನ್ನು ನಿರ್ದೇಶಿಸಿದವರು. ಇವರ ರಮ್ಯ ತಂಡ ಹಾಸನದ ಹಾಸನಾಂಬ ಕಲಾಕ್ಷೇತ್ರದ ಹೊರ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಪಾಂಚಜನ್ಯ ಗಣಪತಿ ಸೇವೆ ಸಮಿತಿಯ ಹೊರಂಗಣದಲ್ಲಿ ರೂಪಿಸಿದ್ದ ರಂಗ ವೇದಿಕೆಯಲ್ಲಿ  ಪರಿಣಯ ಪ್ರಸಂಗ ನಾಟಕ ಪ್ರದರ್ಶಿಸಿದರು. ನಾಟಕದ ರಚನೆ ಸಂಗೀತ ಮುರಳಿ ಶೃಂಗೇರಿ ಅವರದು. ಈ ಪ್ರಹಸನವು ವಸುಭಾಗ ಭಟ್ಟನ ಪಂಚತಂತ್ರದ ಉಪಕಥೆ ಆಧರಿಸಿದೆ. ಇದೊಂದು ಜನಪದ ಕಥೆಯಾದರೂ ಪೌರಾಣಿಕ ಪಾತ್ರಗಳು ಒಳಗೊಂಡು ಮಾನವ ಲೋಕದ ವ್ಯವಹಾರಗಳು ಎಂತೆಂತಹ ಸಂದಿಗ್ಧಗಳನ್ನು ತಂಡೊಡ್ಡುತ್ತವೆ ಎಂಬುದನ್ನು ನಿರೂಪಿಸುತ್ತದೆ. ಜನಪದ ಕಥೆಯಲ್ಲಿ ಬರುವಂತೆ ಒAದೂರಿನಲ್ಲಿ ಒಬ್ಬ ರಾಜ ಅವಳಿಗೊಬ್ಬಳು ರಾಣಿ. ಇವರಿಬ್ಬರಿಗೆ ಒಬ್ಬಳು ರಾಜಕುಮಾರಿ. ರಾಣಿವಾಸದ ರಾಜಕುಮಾರಿಯಿಂದ ಶ್ರೀಕೃಷ್ಣನ ವ್ರತಾಚರಣೆ. ದಿಡೀರ್ ಪ್ರತ್ಯಕ್ಷನಾಗುತ್ತಾನೆ ಸಾಮಾನ್ಯ ನೇಕಾರ ವೃತ್ತಿಯ ಹುಲುಮಾನವ. ಈ ನೇಕಾರನಿಗೆ ರಾಣಿಯನ್ನು ವರಿಸುವ ಬಯಕೆ. ಇದಕ್ಕೆ ಮಿತ್ರ ಬಡಗಿಯ ಸಹಾಯಹಸ್ತ. ಬಡಗಿ ತಯಾರಿಸಿದ ಗರುಡ ಯಂತ್ರದಿಂದ ಅರ್ಧರಾತ್ರಿ ಅರಮನೆ ಪ್ರವೇಶಿಸಿ ತಾನೇ ಶ್ರೀಕೃಷ್ಣನೆಂದು ರಾಣಿಯನ್ನು ಪಟಾಯಿಸುತ್ತಾನೆ. ಚಪಲ ಚನ್ನಿಗರಾಯ ರಾಜನಿಗೆ ಅರಮನೆಯಲ್ಲಿ ಸುಂದರಿ ರಾಣಿ ಇದ್ದರೂ ಗಾಳಿ ಬೀಸುವ ಸಖಿಯ ಮೇಲೆ ಕಾಮದ ಕಣ್ಣು. ಶ್ರೀಕೃಷ್ಣ ಪರಮಾತ್ಮನೇ ಅಳಿಯನಾದನೆಂಬ ಹಮ್ಮು ಬಿಮ್ಮಿನಲ್ಲಿ ಊರಲ್ಲಿ ಮೆರವಣಿಗೆ ಮಾಡಿ ಪ್ರಜೆಗಳೊಂದಿಗೆ ಕುಣಿಯುವುದು ವಿಡಂಬನಾತ್ಮಕವಾಗಿ ಮೂಡಿ ಬರುತ್ತದೆ. ಅತ್ತ ಪಕ್ಕದ ರಾಜ್ಯದ ಮೇಲೆ ಯುದ್ದ ಮಾಡುವ ಪ್ರಸಂಗ ಎದುರಾಗಿ ಈ ವಿದ್ಯಮಾನದಿಂದ ಕೆಂಗೆಟ್ಟ ದೇವತೆಗಳು ಪರಿಹಾರ ಕಾರ್ಯಕ್ಕೆ ಇಳಿಯಬೇಕಾಗಿ ಅಳಿಯನ ಗುಟ್ಟು ಬಯಲಾಗುತ್ತದೆ. ಮನುಕುಲದ ಮತಿಗೇಡಿ ನಡೆಗಳು ಅವಘಡಗಳಿಗೆ ತುತ್ತಾಗುವುದನ್ನು ವಿಡಂಬಿಸುವ ಈ ಪ್ರಹಸನ ಸಮಕಾಲೀನ ವಸ್ತು ವಿಷಯಗಳನ್ನು ಪ್ರಯೋಗದುದ್ದಕ್ಕೂ ತೂರಿಸಿಯೂ ನಗು ಉಕ್ಕಿಸುವಲ್ಲಿ ವಿಫಲವಾಗುತ್ತದೆ.  ಬಗೆಬಗೆಯ ಧ್ವನಿ ಕಾಕುಗಳನ್ನು ಬಳಸುತ್ತಾ ಗ್ರಾಂಥಿಕ ಹಾಗೂ ಗ್ರಾಮ್ಯ ಭಾಷೆಗಳೆರಡನ್ನೂ ಬೆಸೆದು ನಿರೂಪಿಸಿದ ನಾಟಕದ ವಿನ್ಯಾಸ  ನಿರ್ದೇಶನ ರಮೇಶ ಕೆ. ಬೆಣಕಲ್‌ ಅವರದು.  ಸಂಗೀತ ಆದಿತ್ಯ ಗಮ್ಯ, ಬೆಳಕು ಮಧು ಮಳವಳ್ಳಿ. ತಂಡದ ನಾಗರಾಜ್, ವಿಶ್ವಾಸ್, ಯಶ್ವಂತ, ಅಭಿಷೇಕ್, ಸಾಗರ್, ಪ್ರಾಶ, ಸಾನಿಕ, ರಮ್ಯ, ವಿಠಲ್, ಅನುಶ್ರೀ, ಪರಿಮಳ, ಶಿವಲಿಂಗ, ಜಯದೇವ್‌ರಾವ್, ತೇಜು, ಸುಕನ್ಯ, ಲಿಖಿತ್‌ ಆರಾಧ್ಯ, ಮನೋಜ್, ಸುಮಂತ್.. ಇವರೆಲ್ಲಾ ಶ್ರೀರಂಗಪಟ್ಟಣ ಸುತ್ತಲ  ಹವ್ಯಾಸಿ ಕಲಾವಿದರು. ರಂಗಸಜ್ಜಿಕೆ ಮಂಜುನಾಥ್, ರಾಹುಲ್, ಪರಿಕರ ಮತ್ತು ಪ್ರಸಾಧನ ನಾರಾಯಣ ಸ್ವಾಮಿ ಸಿ. ಅವರದು.

—————————-

ಗೊರೂರು ಅನಂತರಾಜು

Leave a Reply

Back To Top