ದುಡಿಯುತ್ತಿರುವ ಮಹಿಳೆಯರ ಸಮಸ್ಯೆಗಳು…..ಅಭಿಜ್ಞಾ ಪಿ.ಎಮ್.ಗೌಡ

ವಿಶೇಷ ಲೇಖನ

ಅಭಿಜ್ಞಾ ಪಿ.ಎಮ್.ಗೌಡ

ದುಡಿಯುತ್ತಿರುವ ಮಹಿಳೆಯರ ಸಮಸ್ಯೆಗಳು…..

ಒಳಗೆ ಹೊರಗೆ ದುಡಿಯುತಿದ್ದು
ಸಮತೆಗಾಗಿ ಕಹಳೆಯೂದಿ
ಅಭಿಭವಗಳ ಮೆಟ್ಟಿ ನಿಂತ
ಛಲದ ಹೆಣ್ಣು ಸದ್ಗುಣಿ ಈ ಕಣ್ಮಣಿ…
ಅಭಿಮಾನದಿ ಬಾಳುತಿಹ ಮಾನಿನಿ
ದುಡಿತದಲ್ಲೂ ಖುಷಿಯ ಪಟ್ಟು
ಬಂಧಗಳಿಗೆ ಮಿಡಿತಗೊಂಡು
ಭವಸಾಗರ ಈಜುತ್ತ
ಭವಿತವ್ಯವ ಚಿಂತಿಸುತಿಹ ಶಾಲಿನಿ….

        ಹೆಣ್ಣು ದುಡಿತದ ಪರವಾನಿಗೆಯನ್ನು ಜೊತೆಯಲ್ಲೆ ಹಿಡಿದು ಕೊಂಡೆ ಬೆಳೆಯುವಳು ಎಂದರೆ ತಪ್ಪಾಗಲಾರದು.ಏಕೆಂದರೆ ಮಹಿಳೆ ಒಳಗೆ, ಹೊರಗೆ ದುಡಿಯುವ ಯಂತ್ರವಿದ್ದಂತೆ.
ಸದಾ ಗೃಹಕೃತ್ಯಗಳಲ್ಲಿ ಹಾಗೆಯೆ ಹೊರಗಡೆಯು ದುಡಿಯುತ್ತಲೆ ಇರುವ ಭಾವನಾತ್ಮಕ ಜೀವಿ.ಅದೆಷ್ಟೆ ನೋವು ,ದುಃಖ, ದುಮ್ಮಾನಗಳು ಇರಲಿ ಯಾವುದನ್ನು ಹೊರ ಲೋಕಕ್ಕೆ ತೋರಿಸದೆ ನಗುವೆಂಬ ಆಭರಣವನ್ನು ತೊಟ್ಟು ಲವಲವಿಕೆಯಿಂದ ದುಡಿಯುತ್ತಿರುವಳು….

ಒಂದು ರಾಷ್ಟ್ರದ ಅಭಿವೃದ್ಧಿಯ ಕಾರ್ಯದಲ್ಲಿ ಪ್ರತಿಯೊಬ್ಬ ಮಹಿಳೆಯು ನಿರ್ಣಾಯಕ ಪಾತ್ರ ವಹಿಸುವಳು.ಹಾಗೆಯೆ ಸಮಾಜದಲ್ಲಿ ಸಾಮಾನ್ಯ ಜನರಿಗೆ ಮಾದರಿಯಾಗಿ ದುಡಿಯುತ್ತ, ಯಾವುದೆ ಪುರುಷನಿಗೆ ಕಡಿಮೆಯಿಲ್ಲದಂತೆ ಸರಿ ಸಮಾನವಾಗಿ ದುಡಿದು ಜನಮನ್ನಣೆ ಗಳಿಸುತ್ತಿರುವಳು.”ತೊಟ್ಟಿಲು ತೂಗುವ ಕೈಗಳು ಇಡೀ ದೇಶವನ್ನೆ ಆಳುತ್ತಿರುವುದು” ಒಂಥರ ಹೆಮ್ಮೆಯೆ ಸಂಗತಿ.ಇದರಿಂದ ಹೆಣ್ಣು ಅಬಲೆಯಲ್ಲ, ಸಬಲೆ. ಎಂಬುದನ್ನು ದೃಢವಾಗಿ ಎತ್ತಿತೋರಿಸಿದ್ದಾಳೆ. ಸಾರ್ವಜನಿಕ , ಸಾಮಾಜಿಕ, ಆರ್ಥಿಕ ,ಸಾಹಿತ್ಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮಹಿಳೆಯರ ಸಕಾರಾತ್ಮಕ ಪ್ರತಿಕ್ರಿಯೆಗಳು ಹಾಗು ಅವರೊಳಗಿನ ಕ್ರಿಯಾಶೀಲತೆ ಏನಾದರೂ ಮೌನತಳೆದರಂತು ಮುಗಿತು.! ಯಾವುದೇ ರಾಷ್ಟ್ರದ ಪ್ರಗತಿ ಹಳಸಿದಂತಾಗುತ್ತದೆ.ಅತ್ಯಧಿಕ ಮಟ್ಟದಲ್ಲಿ ಏರುತ್ತಿರುವ ಮಾನವ ಸಂಪನ್ಮೂಲ ಹಾಗು ಆಧುನಿಕತೆಯ ಅಬ್ಬರದಿಂದ ಸಮಾಜದಲ್ಲಿ ಆಗುತ್ತಿರುವ ಬದಲಾವಣೆಗಳು ಹಲವಾರು, ಪ್ರತಿಯೊಂದು ಕ್ಷೇತ್ರದಲ್ಲೂ ಕೂಡ ವೈವಿದ್ಯತೆಯ ಮೆರುಗು, ಜೊತೆಗೆ ಶಿಕ್ಷಣ, ಉತ್ತಮ ಸಾವಧಾನತೆ ಮತ್ತು ಕುಟುಂಬದ ವಿನಂತಿಗಳನ್ನು ವಿಸ್ತರಿಸುವುದರಿಂದ, ಮಹಿಳೆಯರು ಸಹ ಹೊರಗೆ ಹೋಗಿ ವೃತ್ತಿಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಂತು ಭಾರತೀಯ ಮಹಿಳೆಯರು ತಮ್ಮ ಮನೆಯಿಂದ ಹೊರಗು ದುಡಿಮೆ ಮಾಡುತ್ತಿರುವುದು ಹೆಚ್ಚಾಗಿ ಕಂಡು ಬರುತಿದೆ.ಆದರೆ ಅವರು ತಮ್ಮ, ತಮ್ಮ ಕ್ಷೇತ್ರಗಳಲ್ಲಿ ಅಷ್ಟು ಸುಲಭವಾಗಿ ನೆಮ್ಮದಿಯಿಂದ ಕಾರ್ಯ ನಿರ್ವಹಿಸಲು ಹಲವಾರು ಸಮಸ್ಯೆಗಳು ಎದುರಾಗುತ್ತಿರುವುದಂತು ತುಂಬಾ ವಿಷಾದನೀಯವಾಗಿದೆ..

  ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಪೈಪೋಟಿಗಳು ಹೆಚ್ಚುತಿವೆ.ಯಾವುದೇ ಕ್ಷೇತ್ರದಲ್ಲಾದರು ನೋಡಿ..! ಮಹಿಳೆಯರದ್ದೆ ಮೇಲುಗೈ. ಇಂತಹ ಕೆಲಸಗಳು ಬರುವುದಿಲ್ಲವೆಂದು ಹೇಳದೆ,ಎಲ್ಲದರಲ್ಲೂ ತನ್ನ ಚಾಣಾಕ್ಷತನವನ್ನು ಮೆರೆಯುತಿರುವಳು.ಮನೆಯ ಮಗಳಾಗಿ, ಸಹೋದರಿಯಾಗಿ, ಸಂಗಾತಿಯಾಗಿ ,
ತಾಯಿಯಾಗಿ, ಅತ್ತೆಯಾಗಿ ತನ್ನ ಅದ್ಭುತ ಪಾತ್ರಗಳನ್ನು ಸುಸಲಿತವಾಗಿ ನಿರ್ವಹಿಸುತ್ತ ಎಲ್ಲರ ಬೇಕು, ಬೇಡಗಳನ್ನು ಪೂರೈಸಿ ,ಮನೆಯ ಜವಾಬ್ಧಾರಿಗಳನ್ನು ಹೊತ್ತು ಗಂಡನಿಗೆ ಸಾರಥಿಯಾಗಿ,ಮೆಚ್ಚಿನ ಮಡದಿಯಾಗಿ, ಮಕ್ಕಳಿಗೆ ಮುದ್ದು ಅಮ್ಮನಾಗಿ ನೋವು ,ನಲಿವಿನ ಬಾಳಬಂಡಿಯನ್ನು ತಾಳ್ಮೆಯಿಂದ ಎಳೆಯುವಳು ಜೊತೆಗೆ ಮನೆಯ ಹೊರಗು ಗಂಡನಿಗೆ ಸರಿಸಮಾನವಾಗಿ ಎಲ್ಲವನ್ನು ಸಹಿಸಿಕೊಂಡು ನಗುಮೊಗದೊಂದಿಗೆ ದುಡಿಯುತ್ತಿರುವ ಈ ಜಗಜ್ಜನನಿ ನಿಜಕ್ಕೂ ಕ್ಷಮಯಾಧರಿತ್ರಿಯೆ ಸರಿ..!

ಆದರೆ ಕೆಲವು ಸಂದರ್ಭಗಳಲ್ಲಿ ಅವರ ಕೆಲಸದ ವಾತಾವರಣದಲ್ಲಿ ಅವರನ್ನು ಒಂದೇ ರೀತಿ ಪರಿಗಣಿಸಲಾಗುವುದಿಲ್ಲ. ಗಂಡಸರಿಗೆ ಸಿಗುವ ಅನುಕೂಲಗಳು ಅವರಿಗೆ ಸಿಗುತ್ತಿಲ್ಲ.ಇಲ್ಲಿ ಗಂಡು ಬಲಿಷ್ಠನೆಂದೆ ಪರಿಗಣಿಸಿ ತಾರತಮ್ಯ ತೋರುವರು.ಹೆಣ್ಣು ತನ್ನ ಜೀವನದ ಪ್ರತಿ ಹಂತದಲ್ಲು ನೂರಾರು ಕಷ್ಟ ,ನೋವು ,
ದುಃಖವನ್ನು ಅನುಭವಿಸಿ ಬಂದಿರುವಳು. ಇಂತಹ ಹೆಣ್ಣಿಗೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಸಾಮರ್ಥ್ಯವಿರುವುದಿಲ್ವಾ.? ಯಾಕೆ..? ಸಮಾಜ ಕೆಲವೊಂದು ವಿಷಯಗಳಲ್ಲಿ ಗಂಡು ,ಹೆಣ್ಣು ಎಂದು ಭೇದಭಾವ ಮಾಡುವುದು.
ಅವಳು ಸಶಕ್ತಳೆಂದು ಯಾಕೆ ಮನಗಾಣುವುದಿಲ್ಲ..? ದಿನಗೂಲಿಯಲ್ಲೂ ಅವಳಿಗೆ ಅನ್ಯಾಯ.ಪುರುಷರಿಗೆ ಸರಿಸಮವಾಗಿ ದುಡಿದರು ಕೂಡ ಕೊಡುವ ಕೂಲಿ ಹಣ ಮಾತ್ರ ಪುರುಷರಿಗಿಂತ ಕಡಿಮೆ ಇದು ನ್ಯಾಯವೇ..?

ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೇರಿವೆ.ಗಂಡ ಒಬ್ಬ ದುಡಿದು ಮನೆಯನ್ನು ನಿರ್ವಾಹಿಸುವುದು ತುಂಬಾ ಕಷ್ಟವಾಗುತ್ತಿದೆ.ಖರ್ಚು, ವೆಚ್ಚಗಳ ಅಬ್ಬರದಿಂದ ಮಹಿಳೆಯು ಕೂಡ ಹೊರಗೆ ದುಡಿಯುವ ಮನಸ್ಸು ಮಾಡಿದ್ದಾಳೆ.ಆದರೆ ಅವಳಿಗೆ ಸೂಕ್ತವಾದ ಭದ್ರತೆ ಹಾಗೂ ಸುರಕ್ಷತೆಯಿಲ್ಲವಾಗಿದೆ. ರಾತ್ರಿ ಪಾಳಿಯಲ್ಲಿ ನಿರತರಾಗುವ ಮಹಿಳೆ ಹಲವಾರು ಸಮಸ್ಯೆಗಳಿಂದ ಝರ್ಜರಿತಳಾಗಿರುವಳು.
ಅದೆಷ್ಟೋ ಅತ್ಯಾಚಾರಗಳು, ಕೊಲೆ, ದರೋಡೆ ,ಸುಲಿಗೆಗಳು ಹೆಚ್ಚಾಗಿ ಮಹಿಳೆ ನೆಮ್ಮದಿಯಿಂದ ಬದುಕುವುದು ದುಸ್ತರವಾಗುತಿದೆ..

ಸಮಂಜಸವಲ್ಲದ ಪರಿಹಾರಗಳು, ಮಾನಸಿಕ ಮತ್ತು ದೈಹಿಕ ಕಿರುಕುಳ, ಅಸಮರ್ಪಕ ರಜೆಯು ಕೂಡ ಕೆಲಸ ಮಾಡುವ ವಾತಾವರಣದಲ್ಲಿ ಮಹಿಳೆಯರ ವಿವಾದದ ಕೇಂದ್ರಬಿಂದುಗಳಾಗಿದ್ದು,
ಮಹಿಳೆಯರಿಗೆ ಸುರಕ್ಷತೆ ಮತ್ತು ಭದ್ರತೆ ಹೆಚ್ಚಾಗಿ ಸಿಗದಿರಲಿ, ಭಾರತದಲ್ಲಿ ಮಹಿಳೆಯರು ಎದುರಿಸುತ್ತಿರುವ ರಾತ್ರಿ ಪಾಳಿ ಉದ್ಯೋಗದಲ್ಲಿ ತಮ್ಮ ಸಹೋದ್ಯೋಗಿಗಳಿಂದ, ಅಧಿಕಾರಿಗಳಿಂದ ಕಿರುಕುಳಕ್ಕೆ ಆಗಾಗ್ಗೆ ಒಳಗಾಗುತ್ತಿರುವುದನ್ನು ಸಾಮಾನ್ಯವಾಗಿ ನೋಡುತ್ತಿದ್ದೇವೆ. ಇಂತಹ ಸಮಯದಲ್ಲಿ ಆಕೆ ಪ್ರತಿಭಟಿಸಿದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ. ಹಾಗೇ ಸುಮ್ಮನಿದ್ದರೆ ತನ್ನ ಜೀವನವೇ ದುಸ್ಥಿತಿಗೆ ನಿಲ್ಲುವುದನ್ನು ನೋಡಬೇಕಾಗಿರುವಂತಹ ಸಂದಿಗ್ಧ ಪರಿಸ್ಥಿತಿಗೆ ತಲುಪುತ್ತಿದ್ದಾರೆ. ರಾತ್ರಿ ವೇಳೆ ಕೆಲಸ ಮುಗಿಸಿ ಮನೆಗೆ ತೆರಳುವ ಸಂದರ್ಭದಲ್ಲಿ ಹೆಚ್ಚಿನ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗಾಗಿ ಖಾಸಗಿ ಸಂಸ್ಥೆಯ ಕ್ಯಾಬ್‌ಗಳ ವ್ಯವಸ್ಥೆ ಮಾಡಿರುತ್ತವೆ. ಬಹುತೇಕವಾಗಿ ಮಹಿಳೆಯರಿಗೆ ಪ್ರತ್ಯೇಕ ಕ್ಯಾಬ್‌ ವ್ಯವಸ್ಥೆ ಇರುವುದಿಲ್ಲ. ಇಲ್ಲದಿದ್ದಕ್ಕೆ ಎಷ್ಟೋ ಕಡೆಗಳಲ್ಲಿ ಒಂಟಿ ಮಹಿಳೆ ಕ್ಯಾಬ್‌ನಲ್ಲಿ ಸಿಕ್ಕಾಗ ಅವಳ ಮೇಲೆ ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳು ನಡೆದಿರುವುದನ್ನು ನಾವು ತಳ್ಳಿಹಾಕುವಂತಿಲ್ಲ. ವಿಮಾನದಲ್ಲಿ ಪೈಲೆಟ್ ನಿಂದ ಹಿಡಿದು ಎತ್ತಿನಗಾಡಿಯವರೆಗೂ ಚಾಲಕಳಾಗಿ ಕೆಲಸ ನಿರ್ವಹಿಸುವ ಹೆಣ್ಣು ಪುರುಷರಷ್ಟೆ ಶ್ರಮವಹಿಸಿ ಮುತುವರ್ಜಿಯಿಂದ ತನ್ನ ಕಾರ್ಯವನ್ನು ನಿರ್ವಹಿಸುವಳು.ಇಂತಹ ಮಹಿಳೆಗೆ ಭದ್ರತೆಯ ಕೊರತೆ ಹೆಚ್ಚಾಗಿದೆ.ಸುರಕ್ಷತೆ, ಸಾಮರಸ್ಯವು ಇಲ್ಲವಾಗಿದೆ.ಹಾಗೆಯೇ ಇನ್ನು ಹಲವಾರು ಕ್ಷೇತ್ರಗಳಲ್ಲಿ ಶ್ರದ್ಧೆಯಿಂದ ದುಡಿಯುತ್ತಿರುವ ಮಹಿಳೆಯರಲ್ಲಿ ಲಿಂಗಾಧಾರಿತ ತಾರತಮ್ಯ, ವೇತನ ತಾರತಮ್ಯಗಳನ್ನೂ ಸಹ ಕಾಣಬಹುದು. ಇನ್ನು ಇಂತಹ ಹುದ್ದೆಗಳಲ್ಲಿ ಹಗಲು ರಾತ್ರಿಯೆನ್ನದೆ ದುಡಿಯಬೇಕಾದುದರಿಂದ ಅವರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮಗಳಾಗುತ್ತಿರುತ್ತದೆ.

ಪ್ರತಿನಿತ್ಯ ಕೆಲಸ ಮಾಡುವ ಕಛೇರಿಯಾಗಿರಬಹುದು, ಕಾರ್ಖಾನೆಗಳಾಗಿರಬಹುದು ಮಹಿಳೆಯ ಮೇಲಿನ ತಾರತಮ್ಯವು ದುಷ್ಕೃತ್ಯವೆಂದರೂ ತಪ್ಪಾಗಲಾರದು.ಮಹಿಳಾ ಸಹೋದ್ಯೋಗಿಯ ಸಾಮರ್ಥ್ಯಗಳ ಬಗ್ಗೆ ವ್ಯಂಗ್ಯವಾಡುವುದು, ಕೀಳುಭಾವನೆಗಳನ್ನು ಸೃಷ್ಟಿಸುವುದು, ಕೆಲಸದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಾಗ ಅದರ ಆಧಾರದ ಮೇಲೆ ಅವರ ಶ್ರೀಮಂತರು ಬಡವರು ಎಂದು ನಿರ್ಣಯಿಸುವುದು ಹೀಗೆ ಮಹಿಳೆಯರು ನಿರಂತರವಾಗಿ ಒಂದಲ್ಲ ಒಂದು ಸಮಸ್ಯೆಗಳಿಗೆ ಒಳಗಾಗುತ್ತಲೆ ಬರುತ್ತಿದ್ದಾರೆ.ಹಾಗೆಯೇ ಅವರ
ಕೆಲಸದಲ್ಲಿ ಲೈಂಗಿಕ ಕಿರುಕುಳವು ಅತಿರೇಕವಾಗಿದ್ದು ,ಅದರಲ್ಲಿ ಹೆಚ್ಚಿನವು ಯಾರ ಗಮನಕ್ಕೂ ಬರದೆ ಹೋಗುತ್ತಿರುವುದು ವಿಪರ್ಯಾಸವಾಗಿದೆ.

ಅನೇಕ ಕಡೆಗಳಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಪ್ರತ್ಯೇಕವಾದ ಕ್ಯಾಂಟೀನ್, ಸಾರಿಗೆ ಮತ್ತು ವಿಶ್ರಾಂತಿ ಕೊಠಡಿ ಸೌಲಭ್ಯಗಳು ಇಲ್ಲದಿರುವುದು ಕೂಡ ಸಮಸ್ಯೆಯೆ ಆಗಿದೆ.ಇಷ್ಟೆ ಅಲ್ಲದೆ ಮಹಿಳೆಯು ಕುಟುಂಬ ನಿರ್ವಹಣೆ ಮತ್ತು ಕಚೇರಿ ಕೆಲಸ ಎರಡಕ್ಕೂ ನ್ಯಾಯ ಒದಗಿಸುತ್ತಾ ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇತ್ತೀಚೆಗೆ ಹೆಚ್ಚಾಗಿದೆ. ಅದಕ್ಕೆ ಹೊಂದಿಕೊಳ್ಳದಿದ್ದರೆ
ಸಂಸಾರ ಛಿದ್ರ.ಮಾನಸಿಕ ಖಿನ್ನತೆ ,ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಮನೆಯ ಆರ್ಥಿಕ ಸಮಸ್ಯೆಗಳು ಸಹ ಉಂಟಾಗುವುದು.ಕೆಲವು ಕಛೇರಿ, ಕಾರ್ಖಾನೆಗಳಲ್ಲಿ ಇರುವಂತಹ ಲಿಂಗ ತಾರತಮ್ಯ, ಶೋಷಣೆ ಇತ್ಯಾದಿಗಳಿಂದ ಹೆಣ್ಣು ತುಂಬಾ ಸಂಕಟ ಅನುಭವಿಸುತ್ತಿದ್ದಾಳೆ.
ಹಾಗೆಯೆ ಅವಳು ಅಷ್ಟೆ ಉತ್ತಮ ಶಿಕ್ಷಣ ಪಡೆದಿದ್ದರು ,ಪುರುಷ ಉದ್ಯೋಗಿಗಳಿಗಿಂತ
ಕಡಿಮೆ ಸಂಬಳ ನೀಡುವುದು.
ಅನಿರೀಕ್ಷಿತವಾಗಿ ದೂರದೂರಿಗೆ ವರ್ಗವಾದರೆ ಮನೆ, ಮಕ್ಕಳು, ಅತ್ತೆ ,ಮಾವ ,ಗಂಡ ಎಲ್ಲರನ್ನು ಬಿಟ್ಟು ಹೋಗುವ ಪರಿಸ್ಥಿತಿಗಳು ತಲೆದೂರಿ ತೊಂದರೆಗಳ ಬೆಟ್ಟವನ್ನೆ ನಿಭಾಯಿಸಬೇಕಾಗುವುದು.ಮಹಿಳೆಗೆ ಅನಿವಾರ್ಯವು ಇಲ್ಲದಿದ್ದರೆ ಗಂಡ ಬೇಡವೆಂದರೆ ಕೆಲಸವನ್ನೆ ಬಿಡುವ ಸ್ಥಿತಿಗಳು ಕೂಡ ಉಂಟಾಗಿ ತಾಕಲಾಟಕೆ ಸಿಲುಕುವಳು. ಕೆಲವೊಮ್ಮೆ ಇವಳಿಂದ ಏನಾಗುತ್ತದೆ.? ಇವೆಲ್ಲ ಇವಳಿಂದ ಸಾಧ್ಯವೇ..? ಎಂಬ ಕೆಲವರ ಕುಹಕ ನಡೆ ನುಡಿಗಳು ಮನಸ್ಸನ್ನು ಹಿಂಡಿ ಹಿಪ್ಪೆಮಾಡುತ್ತಿರುವುದು ಅವಳಿಗೆ ಸಹಿಸದಾಗಿದೆ.ಹೀಗೆ ಮಹಿಳೆ ರಾಜಕೀಯ, ಸಿನಿಮಾ, ಪತ್ರಿಕೋದ್ಯಮ ಸೇರಿದಂತೆ ಸವಾಲಿನ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತ ಸಮಾಜಕ್ಕೆ ಬಹಳಷ್ಟು ಕೊಡುಗೆ ಕೊಡುತಿದ್ದರು ಕೆಲವೆಡೆಗಳಲ್ಲಿ ಸಮಸ್ಯೆಗಳೆಂಬ ಸುಳಿಯೊಳಗೆ ಸಿಲುಕಿಕೊಂಡು ಅವಮಾನಗಳನ್ನು ಸಹಿಸಿಕೊಂಡು ಸಾಗುತ್ತಿರುವುದನ್ನು ನಾವು ನೀವೆಲ್ಲರೂ ನೋಡುತಿದ್ದೇವೆ….

ಅಭಿಜ್ಞಾ ಪಿ.ಎಮ್.ಗೌಡ

Leave a Reply

Back To Top