ಸಿನಿಮಾ ಎಂಬ ಮಾಯಾಲೋಕ-ಡಾ ಅನ್ನಪೂರ್ಣ ಹಿರೇಮಠ ಅವರ ವಿಶೇಷ ಲೇಖನ

ವಿಶೇಷ ಲೇಖನ

ಸಿನಿಮಾ ಎಂಬ ಮಾಯಾಲೋಕ

ಡಾ ಅನ್ನಪೂರ್ಣ ಹಿರೇಮಠ ಅವರ ವಿಶೇಷ ಲೇಖನ

 ಜಗತ್ತು ಹುಟ್ಟಿದ ಬಗೆ ಅರಿಯೆವು, ಮಾನವ ಜನಾಂಗ ಉದಿಸಿದ ಪರಿ ತಿಳಿಯೆವು, ಸಕಲ ಜೀವರಾಶಿಗಳಲ್ಲಿ ಮಾನವ ಕುಲ ಶ್ರೇಷ್ಠ. ಅನಂತ ಪಾಪ ಪುಣ್ಯ ಗೈದು ಮನುಜರಾಗಿ ಹುಟ್ಟುತ್ತೇವೆ ಎಂಬ ನಂಬಿಕೆ .ನಮ್ಮ ಉಹೆಗೆ ನಿಲುಕದ ನಿಟ್ಟಿನಲ್ಲಿ ಹೇಳಬೇಕೆಂದರೆ ಚರಾಚರ ನೂರ ಎಂಬತ್ತು ಕೋಟಿ ಜೀವರಾಶಿಗಳಲ್ಲಿ ಮಾತನಾಡುವ ಮತ್ತು ಇನ್ನೊಂದನ್ನು ನಿಗ್ರಹಿಸಬಲ್ಲ ಶಕ್ತಿ ಸಾಮರ್ಥ್ಯ, ಚಾಣಾಕ್ಷತೆ, ಚತುರತೆ ಹೊಂದಿದ ಪ್ರಾಣಿ ಎಂದರೆ ಈ ಮನುಷ್ಯ ಜೀವಿ.

ಎಂದಾದ ಮೇಲೆ ಅದು ಮನುಜನಿಗೆ ಮಾತ್ರ ಅಲ್ಲವೇ ?ಎಲ್ಲಾ ವಿದ್ಯೆ ಒಲಿಯುವುದು. ಅಂತ ಮನುಜನ ಹುಟ್ಟು, ಬೆಳವಣಿಗೆ, ನಾಗರಿಕತೆ ವೈಚಾರಿಕತೆ, ಮಾನ, ಅವಮಾನ ,ಮೌಲ್ಯ ,ಅಪಮೌಲ್ಯ, ಕುಟುಂಬ ಜೀವನ ,ವಿಶಿಷ್ಟತೆಗಳ ಅರಿಕೆ, ಅವಿಷ್ಕಾರಗಳು, ವೈಜ್ಞಾನಿಕ ಬೆಳವಣಿಗೆ, ಜಗತ್ತಿನ್ನೆಲ್ಲವ  ತಿಳಿಯುತ್ತ ಅನಂತವನ್ನೇ ಕೆಣಕುವಷ್ಟು ,ದಿಗಂತವನ್ನು ಮುಟ್ಟುವಷ್ಟು, ಪ್ರಪಂಚದಾಚೆ ನಿಂತು ಈ ಜಗತ್ತು ನೋಡುವ ಕುತೂಹಲ ತುಂಬಿಕೊಂಡು ನಾಗಲೋಟದಲ್ಲಿ ಸಾಗುತ್ತಿದ್ದೇವೆ. ಗುರಿ ನಿರ್ಧಾರಗಳ ಪರಿವೆ ಇಲ್ಲ .ಮುಂದಿನ ಆಗು ಹೋಗುಗಳ ಹೆದರಿಕೆ ಇಲ್ಲ ,ಮುಂದಾಲೋಚನೆಯ ಮಂಥನ ಚಿಂತನಗಳಿಲ್ಲ. ನಾನು ನನದೆಂಬ, ನಾನೇ ಎಲ್ಲಾ ಎಂಬ ಜಂಬದ ಸೊಕ್ಕಿದ ಹಯವನೇರಿದ ಪಯಣದ ಸಾರಥಿ ಇಲ್ಲದ ಸಾರೋಟಲ್ಲಿ ಕುಳಿತಂತೆ ಸಾಗಿದೆ ನಮ್ಮೆಲ್ಲರ ನಿಲ್ಲದ ಪಯಣ .ನೆನೆಸಿಕೊಂಡರೆ ಎಂತಹ ಭಯಾನಕ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಅರಿವಾಗುವುದು.

ಮುಂಗನಂತಿದ್ದ ಮಾನವ ಎರಡು ಕಾಲಿನ ಮೇಲೆ ನಿಲ್ಲಲು ಕಲಿತು ಕುಟುಂಬ ಜೀವನಕ್ಕೆ ಕಾಲಿಟ್ಟ ಪರಿ ಏನೆಂಬ ಅರಿವಿದೆ ನಮಗೆ. ಅಲ್ಲಿಂದ ಶುರುವಾಯಿತು ನಮ್ಮ ಬೆಳವಣಿಗೆಯ ನಾಗಾಲೋಟ. ಕುಟುಂಬ ಜೀವನಕ್ಕೆ ಮನೆ ಮಾರು, ಬಟ್ಟೆ ಬರೆ ,ಆಹಾರ ಹೀಗೆ ಮೂಲ ಅವಶ್ಯಕತೆಗಳೊಂದಿಗೆ ಆಡಂಬರ, ಅದಕ್ಕೆ ಹೊಂದುವ ನೂರಾರು ಅವಶ್ಯಕ ವಸ್ತುಗಳು, ಅದರೊಂದಿಗೆ ಆಟ, ಪಾಠ ಹೀಗೆ ಅವಿಷ್ಕಾರ, ಅಧ್ಯಯನ, ಬುದ್ಧಿವರ್ಧನೆ, ಹಾಗೆಯೇ ನಾಗರಿಕ ಜೀವನದ ನಾಗಾಲೋಟ ,ನಾನು ನನ್ನದೆಂಬ ಆಸೆ, ಆಕಾಂಕ್ಷೆಗಳ ಕೂಟ. ಅಭಿಕ್ಷೇಗಳ ಪೂರೈಸಿಕೊಳ್ಳಲು ನಿತ್ಯ ಹೋರಾಟ, ಕಚ್ಚಾಟ, ಬಡಿದಾಟಗಳು, ಸ್ವಾರ್ಥ, ದುರಾಸೆಗಳು ,ಪದವಿ -ಪಟ್ಟ, ಅಂತಸ್ತು- ಆಸ್ತಿ, ಹಣ ಹೀಗೆ ನಮಗರಿವಿಲ್ಲದೆ ನಮ್ಮನ್ನು ಮೆಟ್ಟಿ ಸಾಗತೊಡಗಿದ ರೀತಿ ಆಶ್ಚರ್ಯಕರ. ಹಾಗೆ ಸಂಚಾರಕ್ಕೆ ಭಾರಿ ವಾಹನಗಳು, ಆಕಾಶ, ನೆಲ, ಜಲ ಎಲ್ಲವನ್ನೊ ಆಕ್ರಮಿಸಿ, ಎಲ್ಲದರ ಮೇಲೆ ಮನುಷ್ಯನು ಅತಿಕ್ರಮನ ಮಾಡಿ ಬಲಾಡ್ಯತನ ,ಬಂಡತನದ, ಹೆಚ್ಚುಗಾರಿಕೆ ಮೆರೆಯುತ್ತಿದ್ದಾನೆ. ಇದರೊಂದಿಗೆ ಮನರಂಜನೆಗೆ ನಾಟಕ ,ಪಾರಿಜಾತ ಇತ್ಯಾದಿ, ಅವು ಪ್ರಾರಂಭದಲ್ಲಿ ಮನರಂಜನೆಯೊಂದಿಗೆ ಬದುಕು ಹೀಗೆ ಇರಬೇಕು, ಹೀಗಿದ್ದರೆ ಸುಂದರ ಬಾಳು ನೀತಿ ನಿಯಮ ನಡವಳಿಕೆ ಕಾಯಕ ಕೆಲಸ ಹೀಗಿದ್ದರೆ ನೀ ಸಮಾಧಾನ ಸಂತೃಪ್ತಿ ,ಹೀಗೆಯೇ ನಾವೆಲ್ಲ ಬದುಕಬೇಕು, ಬದುಕುವ ಕಲೆ ಕಲಿಯಬೇಕು, ಸಂಬಂಧಗಳ ಕಟ್ಟು ಮುರಿಯದೆ ಪ್ರೀತಿಯ ಜೀವನ ಕಟ್ಟಿಕೊಳ್ಳಬೇಕು, ಬದುಕುವ ಶೈಲಿ ಹೇಗಿರಬೇಕೆಂದು ಕಲಿಸುತ್ತಿದ್ದವು. ಮತ್ತು ನ್ಯಾಯ- ಅನ್ಯಾಯ ,ಒಳ್ಳೆಯದು- ಕೆಟ್ಟದ್ದು ,ಒಳ್ಳೆಯದಕ್ಕೆ ಉತ್ತಮ ಪ್ರತಿಫಲ. ಕೆಟ್ಟದ್ದಕ್ಕೆ ಕೆಟ್ಟ ಪ್ರತಿಫಲ ಎಂದು ಅರಿವು ಮೂಡಿಸುವ ನಾಟಕಗಳನ್ನು ಆಡುತ್ತಿದ್ದರು. ಮುಂದೆ ಮುಂದೆ ಇದೇ ನಾಟಕಗಳು ಚಲನಚಿತ್ರಗಳಾಗಿ ಪರದೆಯ ಮೇಲೆ ಮೂಡಿ ಬಂದಾಗ ಆದ ಆನಂದ ಅಷ್ಟಿಷ್ಟಲ್ಲ.ನಮ್ಮ ಮುಂದೆ ನಮ್ಮ ಜೀವನಗಳ ಚಿತ್ರಣ !ಅದೆಂತಹ ಅದ್ಭುತ! ಅಳು- ನಗು, ದುಃಖ- ದುಮ್ಮಾನಗಳು ಶಮಣ ಆಗುತ್ತಿತ್ತು. ಅಂದು ಹಾಗೆ ಚಲನಚಿತ್ರಗಳು ಸಾಮಾಜಿಕ, ರಾಜಕೀಯ, ಕೌಟುಂಬಿಕ, ಪೌರಾಣಿಕ ಹೀಗೆ ಎಲ್ಲಾ ಆಯಾಮಗಳಲ್ಲಿ ಸಲಹೆ -ಸೂಚನೆ, ಪರಿಹಾರ ಹೀಗೆ ಬದುಕಬೇಕೆಂಬ ಹಂಬಲ  ಹುರುಪು ತುಂಬುತ್ತಾ ಹಿತ ಸಂದೇಶ ಹೊತ್ತು ಬರುತ್ತಿದ್ದವು. ಸಾಮಾಜಿಕ, ಪೌರಾಣಿಕ, ಕೌಟುಂಬಿಕ ಅನುಭವಗಳನ್ನು ನಮ್ಮ ಕಣ್ಣು ಮುಂದೆ ತಂದುಡುತ್ತಿದ್ದವು. ಸಂಬಂಧಗಳ ಸಲುಗೆಯಲ್ಲಿದ್ದರೆ ಹೇಗೆ ಬಾಳು ಚೆನ್ನ ?ಸಂಬಂಧಗಳು ಒಡೆದು ಹೋದರೆ ಎಷ್ಟೊಂದು ದುರಾದೃಷ್ಟಕ,? ಹೇಗೆ ಸಂತೋಷ ಮನೆ ಮಾಡುತ್ತದೆ ?ಎಂಬಲ್ಲ ವಿಷಯಗಳು ನಮಗೆ ಈ ಸಿನಿಮಾಗಳಿಂದ ತಿಳಿಯುತ್ತಿದ್ದವು.  ಈ ಸಿನಿಮಾಗಳನ್ನು ನೋಡಿ ತಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಂಡದ್ದನ್ನು ನಾನು ಕಂಡಿದ್ದೇನೆ.
ಎಲ್ಲಾ ದುಶ್ಚಟ ದುರ್ಗುಣಗಳನ್ನು ಬಿಟ್ಟು ಬದುಕಿದ ಹಲವು ಜನರನ್ನು ನೋಡಿದ್ದೇವೆ.

ಹಾಗೆಯೇ ಮುಂದುವರಿಯುತ್ತಾ ಮನರಂಜನೆಯ ಬೆನ್ನತ್ತಿ ಜೀವ ಬಯಕೆಗಳಿಗೆ ಅನುಗುಣವಾಗಿ ಭಿನ್ನ-ಭಿನ್ನ ಚಿತ್ರಗಳು ಬರತೊಡಗಿದವು. ಬರಬರುತ್ತಾ ಅದೊಂದು ಉದ್ಯೋಗವಾಗಿ ,ಉದ್ವೇಗಗೊಳಿಸುವ ಪ್ರಸಂಗಗಳ ಅನಾವರಣ ಬಂಧ- ಸಂಭಂದ ,ಪ್ರೀತಿ -ಪ್ರೇಮ, ಒಲವು- ಗೆಲುವು ,ಗೆಳೆತನ ,ಸಹೋದರತ್ವ ,ಗುರುಹಿರಿಯರು, ತಂದೆ -ತಾಯಿ ,ಬಂಧು -ಬಳಗ ಅವರೊಂದಿಗಿನ ಒಡನಾಟ, ನೆನಪು, ಆದರ್ಶ ವ್ಯಕ್ತಿಗಳ ಜೀವನ ಚಿತ್ರಣ ,ಗತಕಾಲದ ವೈಭವ ,ಆಗಿನ ಆಡಳಿತ ,ವೈಚಾರಿಕತೆ ಹೀಗೆ ನಾನಾ ನಿಟ್ಟಿನಲ್ಲಿ ಸಂದೇಶಗಳ ಹೊತ್ತು ಒಳ್ಳೆಯದಕ್ಕೆ ಕೆಟ್ಟದ್ದಕ್ಕೆ ಸಿಗುವ ಫಲಗಳು ಎಂತಹವು,? ಎಂದು ಮನಮುಟ್ಟುವಂತೆ ಬಿಂಬಿಸುವ ಚಲನಚಿತ್ರಗಳು ಅಂದೊಮ್ಮೆ ಎಲ್ಲರನ್ನು ತಮ್ಮತ್ತ ಸೆಳೆದಿರುವುದು ಸತ್ಯ ಸಂಗತಿ. ಆಗ ಮನರಂಜನೆಯೊಂದಿಗೆ ಸಾರ ಸತ್ವ ,ಪ್ರತಿಯೊಬ್ಬರ ಜೀವನದಲ್ಲಿ ನಡೆಯುವ ,ನಡೆದುಹೋದ ಘಟನೆಗಳ ಸರಣಿಯೇ ಕಣ್ಮುಂದೆ ಬಂದು ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸಿದ್ದು ನಿಜ. ಎಷ್ಟು ಸಿನಿಮಾಗಳು ನಮ್ಮ ಮನಕ್ಕೆ ತಟ್ಟಿ, ಮನಮುಟ್ಟಿ ನಮ್ಮನ್ನು ಬಡಿದೆಬ್ಬಿಸಿ, ನಮ್ಮನ್ನು ಅಳಿಸಿದ್ದು ಉಂಟು ,ನಗಿಸಿದ್ದು ಉಂಟು, ವಿಚಾರಕ್ಕೆ ದೂಡಿದ್ದು ಉಂಟು, ಚಿಂತನ ಮಂಥನಕ್ಕೆ ನಮ್ಮನ್ನು ತಳ್ಳಿದ್ದೂ ಉಂಟು. ಹಿರಿಯರು ಬಾಳಿ ಬದುಕಿ ದಾರಿದೀಪವಾದ ಅಂತಹ ನಡೆಗಳು ,ಆ ಪರೋಪಕಾರ ,ಕರುಣೆ ,ಮಮತೆ ,ಸಹಾಯ, ಸಹಕಾರ ,ನೊಂದವರ ಬೆಂದವರ ಸೇವೆ, ಹೀಗೆ ಎಲ್ಲಾ ನಮ್ಮ ಮುಂದೆ ಚಲನಚಿತ್ರಗಳು ನೀಡುತ್ತಿದ್ದವು. ಮಧ್ಯ ಒಂದಿಷ್ಟು ಹಾಸ್ಯ ,ನಾಟ್ಯ ,ಹಾಡು ಇರುತ್ತಿತ್ತು. ಅವು ಕೂಡ ಮನರಂಜನೆ ನೀಡುತ್ತಿದ್ದವು. ಆಗಿನ ಸಿನಿಮಾಗಳಲ್ಲಿ ಬಡೆದಾಟ ಹೊಡೆದಾಟಗಳು ಸುಮ್ಮನೆ ಅವನ ಶಕ್ತಿ ಪ್ರದರ್ಶನಕ್ಕೂ ಅಥವಾ ಸತ್ಯ ಅರಿವಾಗಿಸುವ ದಾರಿಗಾಗಿಯೂ ಇರುತ್ತಿತ್ತು.

ಇತ್ತೀಚಿಗೆ ಪ್ರಾರಂಭವಾದವು ನೋಡಿ ! ಸಿಟ್ಟು, ಕೋಪ ,ಅಸೂಯೆ, ಮತ್ಸರಗಳು ,ಬಲಾಡ್ಯತನದ ಮೇಲುಗೈ ಮೆರೆಯತೊಡಗಿತು .ತಂತ್ರ ಕುತಂತ್ರಗಳಲ್ಲಿ ಜಾನ್ಮೆ, ಚತುರತೆ ರಾರಾಜಿಸತೊಡಗಿತು. ಅದರೊಂದಿಗೆ ಹಣದ ಆಟ ,ಚೆಲ್ಲಾಟ, ಕಿತ್ತಾಟ ಪ್ರಾರಂಭವಾಯಿತು. ಹವ್ಯಾಸಕ್ಕಾಗಿ ಮಾಡುವ ಪಾತ್ರಗಳು ಹಣಕ್ಕೆ ಮಾರಾಟವಾಗತೊಡಗಿದವು. ಅಭಿನಯ ಹವ್ಯಾಸವಾಗದೆ ವೃತ್ತಿಯಾಯಿತು. ಸೃಜನಶೀಲತೆ ಮಾಯವಾಗಿ ಆಡಂಬರ, ವೈಭವೀಕರಣ ಊಹಿಸಲು ಸಾಧ್ಯವಾಗದ ಗಡಿ ದಾಟಿ ನಿಂತಿದೆ .ಪಾತ್ರಗಳಿಗೆ ತಕ್ಕಂತೆ ಅಭಿನಯ ,ಅಭಿನಯಕ್ಕೆ ತಕ್ಕಂತೆ ವ್ಯಕ್ತಿತ್ವ ಹೀಗಿತ್ತು ಮೊದಲು. ಈಗ ಹಾಸ್ಯಕ್ಕೆಂದೆ ಹನಿ ಚಟಾಕಿಗಳು ಚಟವಾಗಿವೆ. ಮನರಂಜನೆಗೆಂದು ನಾಟ್ಯ ನೃತ್ಯ ಅಂಗಾಂಗ ಪ್ರದರ್ಶನದ ಚಿತ್ರಗಳಾಗಿವೆ. ಮಾರಾಟಕ್ಕಿಟ್ಟ ವಸ್ತುಗಳಂತೆ ಇವರ ರೇಟುಗಳು, ಸೌಂದರ್ಯಕ್ಕೆ ತಕ್ಕಂತೆ ಅವರ ಬೆಲೆಗಳು ಹೆಚ್ಚಾಗಿ, ಮೈ ಮಾಟ ,ಸದೃಢ ದೇಹ ಹರಾಜ್ ಆಗತೊಡಗಿದವು. ಇನ್ನು ಮುಂದೆ ನೋಡಿದಾಗ ಇತ್ತೀಚಿನ ಸಿನಿಮಾಗಳಲ್ಲಿ  ಬಲಾಡ್ಯತನದ ಮೆರವಣಿಗೆ ,ಅನಾಗರಿಕತೆ .ಅನಾಗರಿಕನಂತೆ ಬರಿ ಹೊಡೆದಾಟ ,ಬಡೆದಾಟ ಅದು ಹೇಗೆ ??!ಮಚ್ಚು ಲಾಂಗು ಪಿಸ್ತೂಲು ಗನ್ನಮಷೀನ್ ಗಳನ್ನುಹಿಡಿದು  ಎಲ್ಲರನ್ನು ನೆಲಸಮ ಮಾಡುವ ಪರಿ ?ದೇವರೇ ಇವನ್ನೆಲ್ಲ ಬುದ್ಧಿ ಜೀವಿ ಅನಿಸಿಕೊಂಡ ಮಾನವ ಇವನೇನಾ ?ಮಂಗನಿಂದ ಮಾನವನಾದ ನಾಗರಿಕತೆ ಹರಿಕಾರ ಇವನೇನಾ ?ಎಂದು ಉಳಿಸಿಕೊಳ್ಳಲು ನಾಚಿಕೆಗೇಡು, ಅವಮಾನ, ಕಾಡು ಪ್ರಾಣಿಗಳಾದರೂ ನಿಯತ್ತಿನವು ತಮ್ಮ ಹಸಿವೆಗಾಗಿ ಮಾತ್ರ ಪ್ರಾಣಿಯನ್ನು ತಿನ್ನುತ್ತವೆ. ಯಾರಿಗೂ ಕೇಡು  ಮಾಡವು ಅತಿಯಾಸೆ ,ದುರಾಸೆ ತೋರಿಸವು. ಅಂತಹದರಲ್ಲಿ ಮನುಷ್ಯನಾಗಿ ರಾಕ್ಷಸಿ ಗುಣಕ್ಕೆ ಬಣ್ಣ ವುಕ್ಕ ಹಚ್ಚಿ ಮೇಲೆ ಗರಿ ಚುಚ್ಚಿ ,ಅವನ ಹೊಡೆದಾಟ ,ಬಡಿದಾಟದ ಶೂರತನ ತೋರಿಸುವದರಿಂದ ಏನು ಪ್ರಯೋಜನವಾಗುತ್ತಿದೆ,? ಇಂದಿನ ಯುವಕರ ಮೇಲೆ ಅವು ಬೀರುತ್ತಿರುವ ಪರಿಣಾಮವೇನು? ವಿಚಾರಿಸುವ ಮತಿ ಇಲ್ಲ .ಹೀರೋಗಿರಿಗೇನು ಕಮ್ಮಿ ಇಲ್ಲ. ಅವನ ವೇಷ ಭೂಷಣಗಳು, ಅವನ ಹೇರ್ ಸ್ಟೈಲ್, ಅವನಾಡುವ ಅನಾಗರಿಕ ಮಾತುಗಳು ,ಅವನ ಚಟ, ಹಠ ,ಮಾದಕತೆ ಎಲ್ಲಾ ಉನ್ಮಾದವೇರಿಸುವ ನಡೆಗಳು. ನಮ್ಮಂತವರಿಗೆ ಭಯ ,ಆಶ್ಚರ್ಯ, ಆತಂಕ, ನಾಚಿಕೆಪಡಿಸುವ ದೃಶ್ಯಗಳ ಅನಾವರಣ. ಕೊಲೆ, ಸುಲುಗೆ, ಭ್ರಷ್ಟಾಚಾರ ,ಬಂಡತನ ,ಪುಂಡಾಟಿಕೆಗಳ ಪ್ರದರ್ಶನ .ಇಂದಿನ ಯುವ ಪೀಳಿಗೆಗೆ ಇವು ಅಗತ್ಯವೇ? ಅವರ ಮೇಲೆ ಬೀರುತ್ತಿರುವ ಪರಿಣಾಮವೇನು?? ಇನ್ನೂ ಹೇಳಬೇಕೆಂದರೆ ಹೆಣ್ಣು ತುಂಡುಬಟ್ಟೆಯ ತೊಟ್ಟು ಹೊಸಗುವ ಚಿಟ್ಟೆಯಂತೆ ವೀಪರೀತ ಅಂಗಾಂಗ ಪ್ರದರ್ಶನ ಬಚ್ಚಿಡಲೆನಿಲ್ಲ !ಎಲ್ಲದರ ಅನಾವರಣ. ತಾಯಿ, ತಂಗಿ , ಮನದನ್ನೆ ಎಂಬ ಭೇದವಿಲ್ಲದ ನಡೆಯಲ್ಲಿ ಎಲ್ಲಾ ಸಾಗುತಿದೆ. ಅದೇನೋ ದೇವ? ಅರಿಯೇನು  ನಾ?ಇದರಿಂದಲೇ ಅತ್ಯಾಚಾರ ,ಅನಾಚಾರಗಳು ಮುಗಿಲು ಮುಟ್ಟುವಂತೆ ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

ಆಗ ಬಟ್ಟೆ ಇರದೇ ಬಡತನಕ್ಕೆ ಬೆತ್ತಲು. ಈಗ ಬಟ್ಟೆ ಇದ್ದು ಹರಕು ಬಟ್ಟೆ ತೊಟ್ಟು, ಗಾಂಜಾ ,ಅಫೀಮ್ ಅನೇಕ ಮಾದಕ ದ್ರವ್ಯಗಳ ದಾಸ ದಾಸಿಯಾಗಿ ಅನಾಗರಿಕನಂತೆ ನಡೆದುಕೊಳ್ಳುವ ರೀತಿ ? ಅಯ್ಯೋ ನನ್ನ ಅಜ್ಜಿ ಇದ್ದಿದ್ದರೆ ಎದೆ ಒಡೆದೆ ಸಾಯುತ್ತಿದ್ದಳು. ನನ್ನ ತಂದೆ ಇದ್ದಿದ್ದರೆ ಜೀವವನ್ನೇ ಬಿಡುತ್ತಿದ್ದರು.

ಹೀರೋ ಎಂದರೆ ಕೈಯಲ್ಲಿ ಮಚ್ಚು ಲಾಂಗು ಪಿಸ್ತೂಲ್ ಗನ್ ಅವರು ತೋರುವ ಕ್ರೌರ್ಯದ ಅತಿಶಯೋಕ್ತಿಯ ಶೋಭಾಯಮಾನ ಚಿತ್ರ! ಬಾಯಲ್ಲಿ ಸಿಗರೇಟ್, ಕೈಯಲ್ಲಿ ಎಣ್ಣೆ ಬಾಟಲಿ, ಕರ್ಮಕ್ಕೆ ಪರದೆಯ ಮೇಲೆ “ಧೂಮ್ರಪಾನ ಆರೋಗ್ಯಕ್ಕೆ ಹಾನಿಕಾರಕ” ಎಂದು ಮತ್ತೆ ಮತ್ತೆ ಬರುವ ಅಡ್ವಟೈಸ್ಮೆಂಟ್. ಕೊನೆಗೆ ಅವನನ್ನು ನೀವು ಒಳ್ಳೆಯವನಾದ ಎಂದು ತೋರಿಸುವ ಒಂದು ಕ್ಷಣವನ್ನು ಯಾವ ಯುವಕನು ನೆನಪಿಟ್ಟುಕೊಳ್ಳಲಾರ. ಅವನ ಮನದಲ್ಲಿ ಉಳಿಯುವುದು ಅವನ ಧಿಮಾಕು, ಭಂಡತನ, ಸ್ಟೈಲ್, ಅವನ ಪುಡಾರಿತನ. ಹಾಗಿದ್ದರೆ ಕೊಲ್ಲುವುದೆಂದರೆ ಸೊಳ್ಳೆ ಹೊಸಕೆ ಹಾಕಿದಷ್ಟು ಸುಲಭವೇ? ಎಲ್ಲ ವಿದ್ಯಾರ್ಥಿಗಳಿಗೆ ಇವರೇ ಮಾದರಿ .ಅವನೇಂತೆಯೆ ಸ್ಟೈಲ್, ಅವನಂತೆ ಬಲಾಡ್ಯತನ . ಹುಟ್ಟಿದ ದಿನವೇ ಮಗು ಪಿಸ್ತೂಲ್ ಬೇಕು ಎನ್ನುವಂತಿದೆ. ತಂದೆ ತಾಯಿಯನ್ನೇ ಒದೆಯುತ್ತಿದೆ .ಹುಚ್ಚಾಟದ ನಡೆ ಇದು. ಯಾವ ನಾಗರಿಕತೆ, ಇವರು ನಿಜ ಮಾನವರಾಗುವ ದಾರಿ ತೋರುತ್ತಿರುವರೆ? ಇದು ಜಗತ್ತಿಗೆ ,ಜನರಿಗೆ ಮಾದರಿಯೇ ?ಇದು ಬದುಕಿಗೆ ಆದರ್ಶವೇ ?ನೆನೆಸಿಕೊಂಡರೆ ಭಯವಾಗುತ್ತದೆ. ಮೊನ್ನೆ ನಮ್ಮ ಮನೆಯ ಪಕ್ಕದ ಹುಡುಗ ಹೇಳುತ್ತಿದ್ದ ನನಗೆ ಕೊಲೆ ಮಾಡುವುದು ಇಷ್ಟ ಹೆಚ್ಚು ಜನ ಸತ್ತಷ್ಟು ನನಗೆ ಖುಷಿ ಎಂದು ಗಹಗಹಿಸಿ ನಗುತ್ತಿದ್ದ. ಇನ್ನೊಬ್ಬ ನನ್ನ ಜೀವನದಲ್ಲಿ ಕಂಡವರನ್ನೆಲ್ಲ ಕೊಲ್ಲುತ್ತಾ ಹೋಗುವೆ ಎಲ್ಲ ಸರಿ ಹೋಗುತ್ತದೆ. ನಾನು ಈ ಜಗತ್ತನ್ನು ಸರಿ ಮಾಡುವೆ ಎಂದು .ಮತ್ತೊಬ್ಬ ಎಣ್ಣೆ ಬಾಟಲಿ 7ನೇ ತರಗತಿಯಲ್ಲಿ ಬ್ಯಾಗಿನಲ್ಲಿ! ನಾಲ್ಕು ನಾಲ್ಕು ಜನ ಹೈಸ್ಕೂಲ್ ವಿದ್ಯಾರ್ಥಿಗಳು ಸಿಗರೇಟ್ ಸೇದುತ್ತಾ, ಕುಡಿಯುವುದು ಇದೆಲ್ಲ ಎಲ್ಲಿಂದ ಕಲಿತರು? ಎಂದರೆ ಸಿನಿಮಾ ಪ್ರಭಾವ ಅಲ್ಲವೇ? ಇದು ಬೇಕಾ? ಇದರಿಂದ ಯಾರಿಗೆ ಒಳಿತು? ಇಂತಹ ಸಿನಿಮಾಗಳಿಗೆ ಪುರಸ್ಕಾರಗಳು! ರಾಶಿಗಟ್ಟಲೆ ಹಣ ಗಳಿಕೆ .ಮತ್ತೆ ಹೀರೋ ಎಂದು ಮೆರವಣಿಗೆ .ಈ ಹುಡುಗರಿಗೆ ಅವನ ಹತ್ರವಿದ್ದಂತಹ ಬೈಕ್ ಬೇಕು. ಕಾರು ಬೇಕು. ಅವನು ತೊಟ್ಟಂತಹ ಶರ್ಟ್ ಪ್ಯಾಂಟ್ ಬೇಕು. ಅದಕ್ಕಾಗಿ ತಂದೆ ತಾಯಿಯನ್ನೂ ಕೊಲೆ ಮಾಡಿ ಮೆರೆಯಬೇಕೆಂಬ ಬಯಕೆಯ ಹುಟ್ಟು ಹಾಕುತ್ತಿರುವವರಾರು? ನಮ್ಮ ಚಲನಚಿತ್ರ ಹುಟ್ಟಿಕೊಂಡ ಆ ಆರಂಭದ ಚಿತ್ರಗಳನ್ನು ನೋಡಿ ಎಷ್ಟು ಜನರ ಒಡೆದ ಸಂಸಾರಗಳು ಒಂದಾಗಿವೆ. ಎಷ್ಟು ಜನ ಪರೋಪಕಾರ ಮಾಡಿ ತಮ್ಮ ಮಾನವೀಯತೆ ಮೆರೆದಿದ್ದಾರೆ. ಎಷ್ಟು ಜನ ಭಕ್ತಿಯಲ್ಲಿ ತಲ್ಲೀನರಾಗಿ ದೇವರನ್ನು ಕಂಡಿದ್ದಾರೆ. ಅತ್ಯಂತ ತೃಪ್ತಿದಾಯಕ ಜೀವನಗಳನ್ನು ಬದುಕಿದ್ದಾರೆ ಅವಲೋಕಿಸಿ .ಆತ್ಮವಲೋಕನ ಮಾಡಿಕೊಳ್ಳಿ .ಬರಿ ಹಣಕ್ಕಾಗಿ ಏನೆಲ್ಲಾ ಮಾಡುತಿದ್ದಾರೆ ಈ ಮನುಷ್ಯ ಎಂದು ಶಾಂತವಾಗಿ ವಿಚಾರಿಸಿದರೆ ಮೈ ನಡುಕ ಹುಟ್ಟಿ ಚಳಿ ಜ್ವರ ಬರುತ್ತದೆ..
ನೀತಿ- ನಿಯಮ, ಕಾಯಕ ನಿಷ್ಠೆ ಹಾಳಾಗಿ ಹೋಗಿ ಹಣ ಗಳಿಸುವ ಉದ್ಯೋಗವಷ್ಟೇ, ಆರೋಗ್ಯಕರ ನಡೆಯಿಲ್ಲ ಇದು ಮಾನವನ ಅಳಿವಿಗೆ ಹಾಕುತ್ತಿರುವ ನೇಣು ಎನಿಸುತ್ತಿದೆ. ನಾವು ಕುಸಿದು ಹೋಗುತ್ತಿದ್ದೇವೆ. ಯಾಕೆ ಹೀಗೆ ?ಎಂಬ ಚಿಂತೆಗೆ  ನನ್ನ ನಿದ್ದೆ ಮಾಯವಾಗಿದೆ. ಚಿಂತೆ ಸದಾ ಮನತಟ್ಟುತ್ತಿದೆ. ಎದೆ ಹಿಂಡುತ್ತಿದೆ, ಹೃದಯ ಚೂಟುತ್ತಿದೆ, ಬಾಲ್ಯ ಮರೆತ ಕಂದರುಗಳು, ವಿದ್ಯಾರ್ಥಿ ಜೀವನ ತೊರೆದ ಹುಡುಗರು. ಅದೇನು ಭ್ರಮೆಯಲ್ಲಿ ಬದುಕಿಂದು ಎಲ್ಲಾ ಇದ್ದು ಬರಡಾದ ರೀತಿಯಲ್ಲಿ ಸಾಗುತ್ತಿದೆ. ಆಗೊಂದು ಕಾಲ ಇತ್ತು ಊಟಕ್ಕಾಗಿ ಪರದಾಡುವ ಪರಿಸ್ಥಿತಿ ತುತ್ತು ಅನ್ನಕ್ಕೆ ಹೊತ್ತು ಸವೆಸಬೇಕಾಗಿತ್ತು. ಮನೆ ಮಾರು ಇಲ್ಲದೆ ಗುಡಿ ಗುಂಡಾರಗಳಲ್ಲಿ ಬದುಕಬೇಕಾಗಿತ್ತು. ಈಗ ಹಾಗಿಲ್ಲ ಪ್ರತಿಯೊಬ್ಬ ತಂದೆ ತಾಯಿ ತಮ್ಮ ಮಕ್ಕಳಿಗೆ ಎಲ್ಲಾ ಒದಗಿಸುವ ಸ್ಥಿತಿಯಲ್ಲಿ ಇದ್ದಾರೆ. ಇಂದಿನವರ ನಾಳೆಗೆ ಇದು ಸಿನಿಮಾ ಎಂಬ ಮಾಯಲೋಕದ ಅವಲೋಕನ.

ಅಂದು ಮನುಕುಲ ಹುಟ್ಟಿದಾಗ ಅನಾಗರಿಕನಾಗಿದ್ದ ಮನುಕುಲದ ಹುಟ್ಟಿನ ಮಾನವನ ಅನುಕರಣೆಯೇ ಇದು? ಅವನು ಹೊಟ್ಟೆ ಹೊರೆಯಲು ಬೇಟೆಯಾಡುತ್ತಿದ್ದ ,ಆಯುಧಗಳ ಕಂಡುಹಿಡಿದ. ಭೇಟಿ ಎಂದರೆ ಎಲ್ಲರನ್ನೂ ಹೊಸಗುವುದೇ? ಇದಕ್ಕೆ ಬೇರೆ ಮಾರ್ಗವಿಲ್ಲವೇ? ಆಗ ಮಾನ ಮುಚ್ಚಿಕೊಳ್ಳಲು ಬಟ್ಟೆಯನ್ನೇ ಅವಸ್ಕರಿಸಿದ ಕಾರಣ ಮರೆತ. ತೊಗಟೆ ಪ್ರಾಣಿಗಳ ಚರ್ಮ ತೊಡೆತ್ತಿದ್ದ. ಈಗ ಮತ್ತೆ ಅದೇ ಅನಾಗರಿಕ ಜೀವನದ ರಸಾತಳಕ್ಕೆ ಕರೆದೊಯುತ್ತಿದ್ದೀರಾ? ಅದೇನು ವಿಚಾರಗಳು ಅದೆಷ್ಟು ಜಾನ್ಮೆ? ಅದೆಂತಹ ಅದ್ಭುತ ಜ್ಞಾನ? ನಮ್ಮನ್ನು ನಾವೇ ಹೊಗಳಿಕೊಳ್ಳಬೇಕು.! ಎಲ್ಲಾ ವಿಪರ್ಯಾಸ ಅವಸಾನದ ಅಟ್ಟಹಾಸ.


ಡಾ ಅನ್ನಪೂರ್ಣ ಹಿರೇಮಠ

Leave a Reply

Back To Top