ಅಂಕಣ ಸಂಗಾತಿ
ಒಲವ ಧಾರೆ.
ರಮೇಶ ಸಿ ಬನ್ನಿಕೊಪ್ಪ
ಉತ್ಸವಗಳು ಅರ್ಥಪೂರ್ಣವಾದರೇ ಇನ್ನಷ್ಟು ಚೆಂದ…
ಉತ್ಸವಗಳು ಅರ್ಥಪೂರ್ಣವಾದರೇ ಇನ್ನಷ್ಟು ಚೆಂದ…
ಅಲ್ಲಿ ರಕ್ತದಾನದ ಶಿಬಿರ ನಡೆಯುತ್ತಿತ್ತು, ಯುವಕರೆಲ್ಲರೂ ಸರದಿಯಂತೆ ನಿಂತು ರಕ್ತವನ್ನು ನೀಡುತ್ತಿದ್ದಾರೆ.
ಇನ್ನೊಂದು ಕಡೆ..
ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಬಹುಮಾನಗಳ ರೂಪದಲ್ಲಿ ನೀಡಿ, ಪ್ರೋತ್ಸಾಹದ ಮಾತುಗಳನಾಡುತ್ತಿದ್ದಾರೆ…
ಈ ಮೇಲಿನ ಎರಡು ಸನ್ನಿವೇಶಗಳು ಈ ಹಿಂದೆ ಅನೇಕ ಉತ್ಸವಗಳಲ್ಲಿ, ಹಬ್ಬಗಳಲ್ಲಿ ಹಾಗೂ ಜಾತ್ರೆಗಳ ಸಮಯದಲ್ಲಿ ಇಂತಹ ಸನ್ನಿವೇಶಗಳನ್ನು ನಾವು ಕಾಣುತ್ತಿದ್ದೆವು.
ಆದರೆ…
ಇತ್ತೀಚಿನ ದಿನಗಳಲ್ಲಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳ ಕೊರತೆ ಎದ್ದು ಕಾಣುತ್ತದೆ ಎನ್ನುವ ನೋವು ನಮ್ಮನ್ನು ಕಾಡದೇ ಇರದು.
ಇಂದಿನ ಕೊಳ್ಳುಬಾಕ ಸಂಸ್ಕೃತಿಯಲ್ಲಿ ವಿಜೃಂಭಣೆ, ಆಡಂಬರಕ್ಕೆ ಕಟ್ಟುಬಿದ್ದು ದುಂದುವೆಚ್ಚ ಮಾಡುವುದನ್ನು ನೋಡುತ್ತೇವೆ. ದೇವರ ಹೆಸರಿನಲ್ಲಿ ಅನೇಕ ಉತ್ಸವಗಳು ಹಬ್ಬಗಳು, ಜಾತ್ರೆಗಳನ್ನು ಆಚರಿಸುತ್ತೇವೆ ನಿಜ. ಅಲ್ಲಲ್ಲಿ ಕೆಲವು ಉತ್ಸವಗಳನ್ನು ಅರ್ಥಪೂರ್ಣವಾಗಿ ಆಚರಿಸುವುದನ್ನು ಬಿಟ್ಟರೆ, ಬಹುತೇಕ ಕಡೆ ದುಂದುವೆಚ್ಚಕ್ಕೆ ಜೋತುಬಿದ್ದಿರುವುದು ಸತ್ಯ. ತಾವು ದುಡಿದ ತಮ್ಮ ಬೆವರಿನ ಹಣವನ್ನು ಯಥೇಚ್ಛವಾಗಿ ವೆಚ್ಚ ಮಾಡಿ, ತಮ್ಮ ಆರ್ಥಿಕ ಮುಗ್ಗಟ್ಟಿಗೆ ತಾವೇ ಕಾರಣವಾಗುವುದನ್ನು ನಾವು ಕಾಣುತ್ತೇವೆ.
“ದೇವರಿಗೆ ಬೇಡಿಕೊಂಡಿದ್ದೇವೆ, ಹರಕೆಯನ್ನು ತೀರಿಸೋಣ” ಎನ್ನುವ ನೆಪದಲ್ಲಿ ‘ಬ್ಯಾಟಿ’ ಮಾಡುವದು, ಹರಕೆ ತೀರಿಸುವುದು..ಇವು ಕೆಲವು ಉದಾಹರಣೆಗಳು ಮಾತ್ರ..! ಇನ್ನೂ ಕೆಲವು ಉತ್ಸವಗಳಲ್ಲಿ, ಜಾತ್ರೆಗಳಲ್ಲಿ ವಿಶೇಷವಾಗಿ ಗಣೇಶ ಉತ್ಸವ ಇತ್ತೀಚಿನ ದಿನಗಳಲ್ಲಿ ಆಡಂಬರಕ್ಕೆ, ವಿಜೃಂಭಣೆಗೆ ಕಟ್ಟುಬಿದ್ದಿರುವ ಯುವಕರ ದಂಡೇ ಇರುವುದು ವಾಸ್ತವ ಸ್ಥಿತಿ.
ಐವತ್ತರಿಂದ ಒಂದು ಲಕ್ಷ ಇಲ್ಲವೇ ಎರಡು ಲಕ್ಷದವರೆಗೂ ಬೆಲೆ ಬಾಳುವ ಗಣೇಶನ ಮೂರ್ತಿಯನ್ನು ತಂದು, ಸುಮಾರು ಐದು ದಿನದವರೆಗೆ ಕುಡಿಸುತ್ತಾರೆ. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವ ಯುವಕರು ಗಣೇಶನ ಉತ್ಸವವನ್ನು ಆಚರಿಸುವ ಐದು ದಿನಗಳವರೆಗೂ ಅನೇಕ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ತುಂಬಾ ಚೆಂದ ಅಲ್ಲವೇ..?
ವಿದ್ಯಾರ್ಥಿಗಳಿಗೆ ನೃತ್ಯ ಸ್ಪರ್ಧೆ, ರಸಪ್ರಶ್ನೆ , ಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಗಾಯನ ಸ್ಪರ್ಧೆ… ಹೀಗೆ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಹಣದ ರೂಪದಲ್ಲಿಯಾಗಲಿ, ಪುಸ್ತಕಗಳ ರೂಪದಲ್ಲಿಯಾಗಲಿ ಬಹುಮಾನವನ್ನು ನೀಡಿ ಪ್ರೋತ್ಸಾಹಿಸಿದರೆ ಅರ್ಥಪೂರ್ಣವಾಗುತ್ತದೆ.
ಆದರೆ…
ಇಂದು ಏನಾಗಿದೆ..?
ಕಿವಿಗಡಚ್ಚುವ ಅಬ್ಬರದ ಸೌಂಡ್ ಬಾಕ್ಸ್ ಗಳು , ನಾಚಿಕೆ ಪಡುವ ನೃತ್ಯಗಳು.. ಈ ಸಂದರ್ಭದಲ್ಲಿ ನೆಡೆಯುವುದು ಯಾಕೋ ಬೇಸರವೆನಿಸುತ್ತದೆ.
ಮೆರವಣಿಗೆಯ ಸಮಯದಲ್ಲಿ ಒಬ್ಬರಿಗೊಬ್ಬರು ಯಾವುದೋ ದ್ವೇಷದ ಮಾತುಗಳು… ಒಂದಕ್ಕೊಂದು ಅರ್ಥವಿಲ್ಲದ ಮನಸ್ತಾಪಗಳು.. ಇಂತಹ ಅನೇಕ ಘಟನೆಗಳು ಜರುಗುವುದನ್ನು ನಾವು ನೋಡುತ್ತಿರುವುದು ವಿಷಾದನೀಯ.
ಗಣೇಶ ಉತ್ಸವವಾಗಲಿ, ದಸರಾ ಉತ್ಸವವಾಗಲಿ, ಮೊಹರಮ್ ಉತ್ಸವವಾಗಲಿ, ಇನ್ನಿತರ ಯಾವುದೇ ಧರ್ಮದ ಆಚರಣೆಗಳಿಗೆ ಮತ್ತು ಇನ್ನಿತರ ಹಬ್ಬಗಳಾಗಲಿ ಜಾತ್ರೆಗಳಾಗಲಿ ಅರ್ಥಪೂರ್ಣವಾಗಿ ಆಚರಿಸಬೇಕೆಂದರೆ ಮೊದಲು ನಾವು ಸೌಹಾರ್ದವಾದಂತಹ ಪ್ರೀತಿಯನ್ನು ಬೆರೆಸಬೇಕು. “ಎಲ್ಲಾ ಧರ್ಮದವರು ಒಂದೇ” ಎನ್ನುವ ಮನೋಭಾವದಿಂದ ಭಾವಿಸಿಕೊಂಡಾಗ ಇಂತಹ ಅಚಾತುರ್ಯಗಳು ನಡೆಯುವುದಿಲ್ಲ.
ಮೆರವಣಿಗೆಯು ಮಸೀದಿ ಹತ್ತಿರ ಬಂದಾಗ, ಜೋರಾಗಿ ಹ್ಯಾಗೆಬೇಕೋ ಹಾಗೇ ಕೂಗುವುದಾಗಲಿ, ಕುಣಿಯುತ್ತ ಕುಣಿಯುತ್ತಾ... ಕಲ್ಲು ಹೊಡೆಯುವುದಾಗಲಿ, ಅದೇ ರೀತಿ, ಮಂದಿರ ಹತ್ತಿರ ಬಂದಾಗ ಮನಸ್ಸೋ ಇಚ್ಛೆ ಏನೇನು ತಿಳಿಯುತ್ತದೆಯೋ ಅದೆಲ್ಲವನ್ನು ಅನ್ನುತ್ತಾ ಕಲ್ಲು ಹಚ್ಚುವುದಾಗಲಿ, ಯಾವ ಧರ್ಮಕ್ಕೂ ಅದು ಒಳಿತಲ್ಲ..! ಅದನ್ನು ದೇವರು ಕೂಡ ಮೆಚ್ಚುವುದಿಲ್ಲ..!! ಅಂತಹದನ್ನು ಯಾರು ಬಯಸಬಾರದು.
ಹಾಗಾದರೆ…
ನಾವು ಮಾಡಬೇಕಾದ ಅರ್ಥಪೂರ್ಣ ಕೆಲಸಗಳು ಸಾಕಷ್ಟಿವೆ…
ಬಡವರ ಕಣ್ಣೀರು ಒರೆಸುವ, ವಿದ್ಯಾರ್ಥಿಗಳ ಓದು ಬರಹಕ್ಕೆ ಪ್ರೋತ್ಸಾಹಿಸುವ, ವಿಕಲಚೇತನ ಬಂಧುಗಳಿಗೆ ಸಹಾಯ ಮಾಡುವ, ನಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಹೆಚ್ಚಿಸುವ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ, ನಮ್ಮ ಜಾನಪದ ಆಟಗಳನ್ನು ಉಳಿಸಿ ಬೆಳೆಸುವ ಹತ್ತುಹಲವಾರು ಕ್ರಿಯಾಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಮಾತ್ರ ನಮ್ಮ ಪರಂಪರೆಯನ್ನು ಎತ್ತಿ ಹಿಡಿದಂತಾಗುತ್ತದೆ.
ನಾವು ‘ಮನುಷ್ಯ ಪ್ರೀತಿಯ ಆಚರಣೆಯ ಪರಂಪರೆ’ ನಮ್ಮ ಮುಂದಿನ ಪೀಳಿಗೆಗೆ ನಾವು ಕೊಡಬಹುದಾದ ಬಹುದೊಡ್ಡ ಕೊಡುಗೆ. ಹಿಂದೆ ನಮ್ಮ ಹಿರಿಯರು ಹಬ್ಬ, ಜಾತ್ರೆ, ಉತ್ಸವಗಳಲ್ಲಿ, ಅನ್ಯ ಧರ್ಮದ ಸ್ನೇಹಿತರನ್ನು ಮನೆಗಳಿಗೆ ಕರೆಯಿಸಿ ಪ್ರೀತಿಯ ಭೋಜನವನ್ನು ಏರ್ಪಡಿಸುವುದರ ಮೂಲಕ ಸ್ನೇಹವನ್ನು ಗಟ್ಟಿಗೊಳಿಸುವ ಆಪ್ತವಾದ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದರು. ಅಂತಹ ಆಪ್ತ ವಾತಾವರಣವನ್ನು ನಿರ್ಮಾಣ ಮಾಡಬೇಕಾದ ತುರ್ತು ಅಗತ್ಯವಿದೆ.
ಅಂದು ಬಡತನದಲ್ಲಿದ್ದ ಕುಟುಂಬಗಳಿಗೆ ಆಯಾ ಧರ್ಮದ ಹಬ್ಬಗಳು ಬಂದಾಗ ಒಬ್ಬರಿಗೊಬ್ಬರು ಸಹಾಯ ಮಾಡುವುದರ ಮೂಲಕ ಹಬ್ಬಗಳನ್ನು ಆಚರಿಸುವುದಕ್ಕೆ ಸಹಕರಿಸುತ್ತಿದ್ದರು. ಅಲ್ಲದೆ ಬದುಕಿನಲ್ಲಿ “ನಾವು ನಿಮ್ಮ ಜೊತೆಗೆ ಇದ್ದೇವೆ” ಎನ್ನುವ ಅಗಾಧವಾದ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು. ‘ಸಂಬಂಧ ಸೂಚಕ ಪದಗಳ’ ನ್ನು ಸದಾ ಬಳಸುತ್ತ, ವಿಶಾಲವಾದ ಹೃದಯವನ್ನು ಜಾತಿ, ಧರ್ಮ, ಭಾಷೆ, ಪ್ರಾದೇಶಿಕತೆಯನ್ನು ಮೀರಿ ಮನುಷ್ಯತ್ವವನ್ನು ಬೆಸೆಯುತಿದ್ದರು.
ಅಂತಹ ಅನೇಕ ಹಬ್ಬಗಳು, ಜಾತ್ರೆಗಳು, ಉರುಸುಗಳು ನಮಗೆ ನೆಪವಾಗಿರುತ್ತಿದ್ದವು. ಅಲ್ಲಿ ಪ್ರೀತಿಯಿಂದ ಮಾತನಾಡುವ, ಊಟ ಮಾಡುವ, ಒಬ್ಬರಿಗೊಬ್ಬರು ತಮಾಷೆಯಿಂದಲೇ ಕಾಲೆಳೆಯುವ, ಯಾವುದನ್ನೂ ದ್ವೇಷ ಭಾವನೆಯಿಂದ ನೋಡದೇ ಸದಾ ವಾತ್ಸಲ್ಯ ಪೂರ್ಣವಾದ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದ ಕಾಲವದು.
ಅವರ ಮೊಹರಂ, ಇದ್ ಮಿಲಾದ್, ಕ್ರಿಸ್ಮಸ್… ಮುಂತಾದ ಹಬ್ಬಗಳಲ್ಲಿ ನಾವು ಭಾಗವಹಿಸುವ, ನಮ್ಮ ದೀಪಾವಳಿ, ಯುಗಾದಿ, ಗಣೇಶ ಚತುರ್ಥಿ… ಮುಂತಾದ ಹಬ್ಬಗಳಲ್ಲಿ ಅವರು ಕೂಡಿ ಬೆರೆತು ಹಬ್ಬ ಆಚರಿಸುವಂತಹ ವಿಶಾಲ ಮನೋಭಾವ ಎಲ್ಲರೊಳಗೆ ಒಡಮೂಡಬೇಕು. ಆಗ ಬಹುತ್ವ ಭಾರತದ ಭಾವೈಕ್ಯತೆ ಸದಾ ನಮ್ಮೊಂದಿಗಿರಲು ಸಾಧ್ಯ.
ಅಂತಹ ಬಹುತ್ವ ಭಾರತದಲ್ಲಿ ಎಲ್ಲಾ ಕಡೆಯೂ ಸೌಹಾರ್ದ ವಾತಾವರಣ ಇರುವುದು ಸಮಾಧಾನ. ಹಬ್ಬ, ಉತ್ಸವಗಳು ಅರ್ಥಪೂರ್ಣವಾಗಿ ಮಾನವೀಯ ಮೌಲ್ಯವನ್ನು ಬಿತ್ತುವ, ಅಂತ:ಕರಣದ ಪ್ರೀತಿಯನ್ನು ಹಂಚುವ, ಸಹಾನುಭೂತಿಯಿಂದ ಸಹಾಯ ಮಾಡುವ ಸೇತುವೆಗಳಾಗಲಿ ಎಂದು ಪ್ರೀತಿಯಿಂದಲೇ ಶುಭ ಹಾರೈಸುವೆ.
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.
Super sir