ಪುಸ್ತಕಸಂಗಾತಿ
ಗೊರೂರು ಅನಂತರಾಜು ಕೃತಿ
ರಂಗಾಂತರಂಗ(ರಂಗಕಲಾವಿದರ ರಂಗಭೂಮಿ)
ಡಾ.ಪ್ರದೀಪ್‍ಕುಮಾರ್ ಹೆಬ್ರಿ,
ರಂಗಾಂತರಂಗ ರಂಗಭೂಮಿಗೆ ಸಂಬಂಧಿಸಿದಂತೆ ಶ್ರೀ ಗೊರೂರು ಅನಂತರಾಜು ಅವರು ಬರೆದಿರುವ 35 ಲೇಖನಗಳ ಕೃತಿ. ಹತ್ತು ನಾಟಕಗಳೂ ಸೇರಿದಂತೆ ಸಾಹಿತ್ಯ ವಿವಿಧ ಪ್ರಕಾರಗಳಲ್ಲಿ ನಲ್ವತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಶ್ರೀ ಗೊರೂರು ಅನಂತರಾಜು ಅವರ ‘ರಂಗಭೂಮಿ’ಯೊಡನೆಯೇ ತಮ್ಮ ಬದುಕನ್ನು ಅರಳಿಸಿಕೊಂಡವರು. ನಟ, ನಾಟಕಕಾರ, ನಿರ್ದೇಶಕ, ವಿಮರ್ಶಕರಾಗಿ ರಂಗಭಾವವನ್ನು ಪಡಿಮೂಡಿಸುವ ಶ್ರೀಯುತರು ನೂರೈವತ್ತಕ್ಕೂ ಮೀರಿ ರಂಗಕಲಾವಿದರನ್ನು ಪರಿಚಯಿಸಿದ ಕೃತಿ (ಅಭಿನಯ-ಅಭಿವ್ಯಕ್ತಿ) ಯೊಂದನ್ನು ಹೊರತಂದಿದ್ದಾರೆ. ಈ ಕೃತಿಯ 35 ಲೇಖನಗಳು ಹಾಸನದ ದಿನಪತ್ರಿಕೆ‘ ಜನಹಿತ’ದಲ್ಲಿ ಅಂಕಣ ಬರಹಗಳಾಗಿ ಒಡಮೂಡಿ ರಂಗರಸಿಕರ ಮನ ಗೆದ್ದಿವೆ.
ಈ ಕೃತಿಯ ಮೊದಲ ಲೇಖನ ‘ಕನ್ನಡ ವಿಲಾಸಿ ರಂಗಭೂಮಿಯ ಮೊದಲ ಆಡುಮಾತಿನ ನಾಟಕ’. ಲೇಖಕರು ಈ ಲೇಖನದಲ್ಲಿ ‘ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ’ ಕೃತಿ ಪರಿಚಯ ಮಾಡುತ್ತ, ಸಮಾಜದ ಕುಂದು ಕೊರತೆಗಳನ್ನು ಪೀಡೆ ಪ್ರಮೇಯಗಳನ್ನು ಅನ್ಯಾಯ ಮೋಸ ವಂಚನೆ ಢಾಂಬಿಕತೆ ಮೊದಲಾದ ಸಮಾಜಘಾತುಕ ಪ್ರವೃತ್ತಿಗಳನ್ನು ನಿಸ್ಪøಹತೆಯಿಂದ ಚಿತ್ತವತ್ತಾಗಿ ಸಂಭಾಷಣೆಯ ರೂಪವಾಗಿ ಕನ್ನಡದಲ್ಲಿ ಹೊಸತನದ ಕಲ್ಪನೆ ಇನ್ನೂ ಕೂಸಾಗಿರುವಾಗಲೇ ಕನ್ನಡದಲ್ಲಿ ಪ್ರಕಟವಾಗಿರುವ ಕ್ರಿಯಾಶೀಲ ಕೃತಿಯಿದು ಎಂದಿದ್ದಾರೆ. ‘ಲಾವೊಶೆಯ ಟೀ ಹೌಸ್– ಚೈನಾ ಲೈಫ್ ನಲ್ಲಿ’ ಸಾಮಾನ್ಯರ ಬದುಕಿನ ಅಂತ:ಸಾಕ್ಷಿಯಾಗಿ ಜೀವಂತವಾಗಿದ್ದ ಟೀ ಹೌಸ್ ಕೋಮಿಂಗ್ ಟಾಂಗ್‍ನ ನೆಲೆಯಾಗಿ ಕ್ಲಬ್ ರೂಪವನ್ನು ಪಡೆದುಕೊಳ್ಳುತ್ತದೆ ಎನ್ನುತ್ತ ಅಂದಿನ ಚೀನಿಯರ ಬದುಕಿನ ಅನೇಕ ವಿವರಗಳನ್ನು ಸಶಕ್ತವಾಗಿ ಕಟ್ಟಿಕೊಟ್ಟಿದೆಯೆಂದು ಮೆಚ್ಚು ನುಡಿಗಳನ್ನಾಡಿದ್ದಾರೆ. ‘ರಾವಿ ನದಿಯ ದಂಡಯಲ್ಲಿ-ಗೋಡ್ಸೆ ಮತ್ತುಗಾಂಧಿ.ಕಾಮ್’ ಕೃತಿಯಲ್ಲಿನ ಹಲವಾರು ಮನ ಮುಟ್ಟುವ ಸಂಭಾಷಣೆಗಳನ್ನು ಉದ್ಧರಿಸಿ ಅದ್ರ ರಾಗಿಸಿದ್ದಾರೆ. ಇಡೀ ನಾಟಕ ರತನ್ ಬಾಯಿ ಮತ್ತು ಮಿರ್ಜಾ ಕುಟುಂಬದ ಮೂಲಕ ನಾನಾ ರೀತಿಯ ಮಾನವೀಯ ಮುಖಗಳನ್ನು ಪಡೆಯುತ್ತ ಹೋಗುತ್ತದೆಂದು ನಾಟಕದ ಅಂತರಾಳವನ್ನು ತೋರಿಗೊಡುತ್ತಾ ರಾಜಕೀಯ ವಿಷಯದ ಜೊತೆಗೆ ಮಾನವೀಯ ಸಂಬಂಧಗಳ ಅಂತರ್ಯದ ಇದರ ಕಥಾನಕವನ್ನು ಹೆಚ್ಚು ಗ್ರಾಹ್ಯ ಮಾಡುವ ಪ್ರಯತ್ನ ಮಾಡಲಾಗಿದೆ ಎಂದಿದ್ದಾರೆ.
ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ರಂಗಾಭಿನಯದ ಮೂರು ಪಾತ್ರಗಳು ಲೇಖನವು ತಮ್ಮ ಬಾಲ್ಯದ ದಿನದಲ್ಲಿ ತಾವು ಕಂಡ ನಾಟಕದ ಸವಿ ನೆನಪುಗಳ ದಾಖಲೀಕರಣ. ಇದರಲ್ಲಿ ಡಾ.ಗೊರೂರರು ಅಭಿನಯಿಸಿದ್ದನ್ನೂ ಉಲ್ಲೇಖಿಸಿದ್ದಾರೆ. ಡಾ.ಗೊರೂರರ ವೇಷವೇ ಜನರಿಗೆ ವಿಶೇಷ ನಗುವನ್ನುಂಟು ಮಾಡಿ ಸಂತೋಷವನ್ನುಂಟು ಮಾಡಿತು, ಸಂಭಾಷಣೆಯಲ್ಲಿ ಹೆಜ್ಜೆ ಹೆಜ್ಜೆಗೂ ವಿನೋದ ಚಿಮ್ಮುತ್ತಿತ್ತೆನ್ನುತ್ತ ನಾವು ಆ ಶತಮಾನವನ್ನು ನೆನೆಯುವಂತೆ ಮಾಡಿದ್ದಾರೆ. ‘ತಾಯಿ ಪಾತ್ರಕ್ಕೆ ಹೆಸರಾದ ಪಂಡರಿಬಾಯಿ ರಂಗಭೂಮಿ ಸಿನಿಮಾ ರಂಗವು ಜನಪ್ರಿಯ ಹಿರಿಯ ತಾರೆ ಪಂಡರಿಬಾಯಿಯವರ ಕುರಿತಾದುದು. ಅವರ ಬಾಲ್ಯ ಅವರ ಹರಿಕಥಾ ಕಾರ್ಯಕ್ರಮಗಳು ನಾಟಕಗಳು ಚಲನಚಿತ್ರಗಳಾದಿಗಳನ್ನು ವಿವರಿಸಿ ಅಲ್ಲಲ್ಲಿ ಪಂಡರಿಬಾಯಿಯವರು ಬೇರೆ ಬೇರೆ ಸಂದರ್ಭದಲ್ಲಿ ನುಡಿದ ನುಡಿಮುತ್ತುಗಳನ್ನು ಉಲ್ಲೇಖಿಸಿದ್ದಾರೆ. ಈ ಲೇಖನದಿಂದ ನಾವು ಪಂಡರಿಬಾಯಿಯವರ ಬದುಕು ಬವಣೆಗಳೊಡನೆ ಅವರನ್ನು ಕಲಾವಿದೆಯಾಗಿಸಿದ ಸಿನಿಮಾಗಳ ಹೆಸರು ತಿಳಿಯಬಹುದು. ‘ಅಭಿನಯದಲ್ಲೇ ಬದುಕಿನ ಹಾದಿ ಸವೆಸಿದ ನಟ ರಾಜಾನಂದರ ಜೀವನ ವೃತ್ತಾಂತ್ತವನ್ನರುಹಿದೆ. ರಾಜಾನಂದರು ನಟಿಸಿದ ನಾಟಕಗಳು ಕಟ್ಟಿದ ನಾಟಕ ಸಂಸ್ಥೆಗಳು ಅವರ ಸಾಹಿತ್ಯ ರಚನೆಗಳು ಅಭಿನಯದ ಚಿತ್ರಗಳು..ಹೀಗೆ ವಿವರಗಳಿವೆ. ಆದರೆ ಬರವಣಗೆ ತುಂಬ ಯಾಂತ್ರಿಕವಾಗಿದೆ. ಓರ್ವ ಶ್ರೇಷ್ಠ ಹಿರಿಯ ನಟನನ್ನು ಪರಿಚಯಿಸುವಾಗ ಇನ್ನಷ್ಟು ರಸಪೂರ್ಣವಾಗಿರಬೇಕಿತ್ತು. ‘ನಾಟಕದಿಂದ ಸಿನಮಾವರೆಗೆ ಉಮಾಶ್ರೀ’ ರಂಗಭೂಮಿ ಚಿತ್ರರಂಗ ರಾಜಕೀಯ ಈ ಮೂರು ಕ್ಷೇತ್ರಗಳಲ್ಲಿ ತಮ್ಮದೇ ವ್ಯಕ್ತಿತ್ವ ಸಾಧನೆಯಿಂದ ಗಮನ ಸೆಳೆದ ಶ್ರೇಷ್ಠ ಕಲಾವಿದೆ ಉಮಾಶ್ರೀ ಅವರ ಪರಿಚಯ ಲೇಖನ. ಉಮಾಶ್ರೀ ಅವರನ್ನು ಮಾನವೀಯ ನೆಲೆಯಲ್ಲಿ ಅವರ ನೋವು ನಲಿವುಗಳನ್ನು ಹೃದ್ಯವಾಗಿ ಪರಿಚಯಿಸಿದ್ದಾರೆ. ಉಮಾಶ್ರೀ ಅವರ ಪರಿಚಯವನ್ನು ಓದುತ್ತಿದ್ದಂತೆ ‘ಬೆಂಕಿಯಲ್ಲಿ ಅರಳಿದ ಹೂವು’ ಮಾತು ನೆನಪಿಗೆ ಬರುತ್ತದೆ. ‘ಪ್ರಸಾದ್ ರಕ್ಕಿದಿ ಬೆಳ್ಳೇಕೆರೆ ಹಳ್ಳಿ ಥೇಟರ್’ ಕೃತಿ ಪರಿಚಯ ಲೇಖನ. ಈ ಕೃತಿಯಲ್ಲಿ ಸುಮಾರು ಮೂವತ್ತು ವರ್ಷಗಳ ಕಾಲ ಕೃತಿಕಾರರು ಬೆಳ್ಳೆಕೆರೆಯಲ್ಲಿ ಸಾಗಿ ಬಂದ ಬದುಕಿನ ವಿವರಗಳಿವೆ ಎಂದು ರಂಗದೊಂದಿಗೆ ಸಾಗಿದ ಪ್ರಸಾದ್ ರಕ್ಷಿದಿ ಅವರ ಬದುಕನ್ನು ವಿವರಿಸಿದ್ದಾರೆ. ಜಾತಿ ಸಂಘರ್ಷದ ಕಥಾನಕ-ಮಾರಿ ನಾಟಕವು ಡಾ. ಮಂಡ್ಯ ರವಿ ಅವರು ತಮ್ಮ ಮಾರಿ ನಾಟಕಕ್ಕೆ ಆಧರಿಸಿದ ನೆಲಮಂಗಲದ ಚೌಡಿಕೆ ಸುಬ್ಬಯ್ಯನವರು ಹಾಡಿರುವ ಅಸಾದಿ ಸಂಪ್ರದಾಯದ ಮಾರಮ್ಮನ ಕಥೆ ಎಂದು ಲೇಖಕರು ಈ ಕೃತಿಯಲ್ಲಿ ಎಲ್ಲ ದುಡಿಯುವ ವರ್ಗದವರಿಂದಲೂ ಪೂಜೆಗೊಳ್ಳುವ ಮಾರಮ್ಮ ಗ್ರಾಮ ದೇವತೆ ಎನಿಸಿದುದು ಸಹಜವೇ ಆಗಿದೆ. ದುಡಿಯುವ ವರ್ಗದವರಲ್ಲಿಯ ಪರಸ್ಪರ ಸಹಕಾರ ಹೊಂದಾಣಿಕೆ ಮನೋಭಾವ ಈ ಕಥೆಯಲ್ಲಿ ವ್ಯಕ್ತವಾಗಿದೆ. ‘ವೃತ್ತಿ ರಂಗಭೂಮಿಯ ಕಲಾಕಿನ್ನರ ಟಿ.ದುರ್ಗಾದಾಸ’ ವೃತ್ತಿ ರಂಗಭೂಮಿಯ ಖ್ಯಾತನಾಮರಾದ ಡಿ.ದುರ್ಗಾದಾಸರ ಜೀವನದ ವಿವರಣೆಯ ಲೇಖನ. ಅವರು ಅಭಿನಯಿಸಿದ ನಾಟಕಗಳನ್ನು ಲೇಖಕರು ಪರಿಚಯಿಸಿದ್ದಾರೆ. ಅವರ ಅಭಿನಯದ ನಾಟಕ ಕಂಪನಿಗಳ ಹೆಸರು ದಾಖಲಿಸಿದ್ದಾರೆ.
‘ರಂಗ ಪ್ರಾಚಾರ್ಯ ಬಿ.ಚಂದ್ರಶೇಖರ್ ಮತ್ತು ನಟ ನಿರ್ದೇಶಕ ಶಿವಶಂಕರರಾಜು ಆಯಾ ವ್ಯಕ್ತಿಗಳ ರಂಗ ಸಾಧನೆಯನ್ನು ಪರಿಚಯಿಸಿದ ಲೇಖನ. ಪರಿಚಯದೊಡನೆಯೇ ಅಭಿನಯಿಸಿದ ನಿರ್ದೇಶಿಸಿದ ನಾಟಕಗಳ ಸೂಕ್ತ ಪರಿಚಯವೂ ಇದೆ. ಇಲ್ಲಿ ಪರಿಚಯಿಸಿ ಅದಕ್ಕೆ ಒಂದಷ್ಟು ಭಾವನೆಯ ಬಣ್ಣ ಹಚ್ಚಿ ಆಯಾ ಕಲಾವಿದರ ಆಂತರ್ಯವನ್ನೂ ತೋರಿಗೊಟ್ಟಿದ್ದರೆ ಲೇಖನಕ್ಕೆ ಇನ್ನಷ್ಟು ರಂಗು ತುಂಬುತ್ತಿತ್ತು.
‘ಕೈವಾರ ರಾಜಾರಾವ್ ಒಂದು ದುರಂತ ನಾಟಕ’ ಏಕಾಂತ ನಾಟಕಗಳ ರಚನೆಯಲ್ಲಿ ಹೆಸರಾದ ಕೈವಾರ ರಾಜಾರಾವ್ ಅವರ ಬದುಕು ಹಾಗೂ ರಂಗ ಸಾಧನೆಯನ್ನು ನಿರೂಪಿಸಿದ ಲೇಖನ. ಅವರ ‘ಒಂದು ದುರಂತ’ ನಾಟಕವನ್ನು ಸುಧೀರ್ಘವಾಗಿ ವಿಮರ್ಶಿಸಿದ್ದಾರೆ. ಲೇಖಕರು ತಮ್ಮ ಮೆಚ್ಚುಗೆ ಜೊತೆಗೆ ತುಂಬಾ ಕುತೂಹಲಭರಿತವಾಗಿ ಸಾಗುವ ನಾಟಕದ ಸಂಭಾಷಣೆಯೂ ಅಷ್ಟೇ ಸರಳ ಸೊಗಸಾಗಿ ನಿರೂಪಿತವಾಗಿದೆಯೆಂದು ಶ್ಲಾಘಿಸಿದ್ದಾರೆ. ‘ಮರಡಿಹಳ್ಳಿ ಸೀತಾರಾಮ ರೆಡ್ಡಿಯವರ ಯುದ್ಧ ವಿರೋಧಿ ನಾಟಕಗಳು’ ಲೇಖನವು 1906ರಲ್ಲಿ ಜನಿಸಿದ್ದ ಮರಡಿಹಳ್ಳಿ ಸೀತಾರಾಮ ರೆಡ್ಡಿಯವರು ಹಾರ್ಮೋನಿಯಂ ವಾದಕರಾಗಿ ಮುಮ್ಮೇಳಗಾರರಾಗಿ ಗಮಕಿಗಳಾಗಿ ಸ್ವಾತಂತ್ರ್ಯ ಹೋರಾಟಗಾರರಾಗಿ, ಚಿತ್ರದುರ್ಗ ಜಿಲ್ಲಾ ಬೋರ್ಡಿನ ಉಪಾಧ್ಯಕ್ಷರಾಗಿ, ಜಿಲ್ಲಾ ವಯಸ್ಕರ ಶಿಕ್ಷಣದ ಸಂಚಾಲಕರಾಗಿ ಭೂದಾನದ ಪಾದಯಾತ್ರಿಯಾಗಿ ನಾಟಕಕಾರರಾಗಿ ಸಲ್ಲಿಸಿದ ಸೇವೆಯನ್ನು ಮುಕ್ತವಾಗಿ ಮೆಚ್ಚಿಕೊಂಡಿದ್ದಾರೆ. ‘ರಂಗಭೂಮಿ ಹುಲಿ ಸೀತಾರಾಮ ಶಾಸ್ತ್ರಿ ಹುಲಿಮನೆ’ ಲೇಖನದಲ್ಲಿ ಗೊರೂರು ಅವರು ಶಾಸ್ತ್ರಿಗಳ ಟಿಪ್ಪು ಪಾತ್ರವನ್ನು ಶ್ಲಾಘಿಸುತ್ತ ಶಾಸ್ತ್ರಿಗಳ ಅಭಿನಯವನ್ನು ನೋಡಿದ ಪ್ರೇಕ್ಷಕನಿಗೂ ಮರೆಯಲು ಸಾಧ್ಯವಿಲ್ಲ. ಶಾಸ್ತ್ರಿಗಳು ಪ್ರಖ್ಯಾತ ನಟನಾಗಿರುವಂತೆ ಪ್ರಖ್ಯಾತ ಸಾಹಿತಿಗಳೂ ಹೌದೆಂದು ಅವರ ಒಂಭತ್ತು ನಾಟಕ ಕೃತಿಗಳ ಕುರಿತು ಗಿರೀಶ್ ಕಾರ್ನಾಡರ ಮೆಚ್ಚುಗೆಯ ಮಾತು ಉಲ್ಲೇಖಿಸಿದ್ದಾರೆ.
‘ಸ್ತ್ರೀ ಪಾತ್ರದಾರಿ ಈಶ್ವರ ಚಂದ್ರ ಎಸ್. ಬೆಟಗೇರಿ’ ಲೇಖನವು ಬೆಟಗೇರಿ ಅವರ ವ್ಯಕ್ತಿತ್ವವನ್ನು ವಣಿ೯ಸಿದೆ. ‘ಕಾರ್ಕಡ ಶ್ರೀನಿವಾಸ ಉಡುಪರ ನಾಟಕ ಪ್ರಹಸನಗಳು’ ಲೇಖನ ಅವರ ನಾಟಕ ಪ್ರದರ್ಶನ ಪರಿಚಯಿಸಿವೆ. ಉಡುಪರ ಬಗ್ಗೆ ಇತರ ಹಿರಿಯರು ಬರೆದ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ‘ಕಾಲ್ಪನಿಕ ಸನ್ನಿವೇಶ ವೈಚಾರಿಕ ನಿಲುವು ಪುನರುತ್ಥಾನ’ ಲೇಖನವು ಭೂಹಳ್ಳಿ ಪುಟ್ಟಸ್ವಾಮಿ ಅವರ ವೃತ್ತಿ ಪ್ರವೃತ್ತಿ ಸಾಹಸ ಸಾಧನೆಗಳನ್ನು ವಿವರಿಸಿದೆ. ‘ಡಾ.ಎಂ.ಬೈರೇಗೌಡರ ವೇಷದ ಹುಲಿ’ ನಾಟಕವು ಮಾನವ ಕ್ರೋಧವನ್ನು ಪ್ರೀತಿಯ ಸಿಂಚನದಿಂದ ಮಾತ್ರ ದೂರ ಮಾಡಲು ಸಾಧ್ಯ’ ಎಂಬುದನ್ನು ನಿರೂಪಿಸಿದೆ. ‘ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಅವರ ಮಹಾಚೈತ್ರವೇ’ ದಲ್ಲಿ ಗೊರೂರರು ಹೊನ್ನಶೆಟ್ಟಿಹಳ್ಳಿ ಗಿರಿರಾಜ್ ಅವರ ವ್ಯಕ್ತಿತ್ವ ದರ್ಶನ ಮಾಡಿಸಿದ್ದಾರೆ. ‘ಹಾಸ್ಯವೇ ಪ್ರಧಾನ- ಶ್ರೀಕೃಷ್ಣ ಸಂಧಾನ’ವು ನಾವು ಎಲ್ಲಿಯವರೆಗೆ ವಿದ್ಯಾವಂತರಾಗೋದಿಲ್ಲ ಅಲ್ಲಿಯವರೆಗೂ ಈ ದೇಶವೂ ಮುಂದುವರಿಯೋದಿಲ್ಲ ಎಂಬ ಕಟು ಸತ್ಯವನ್ನರುಹಿದೆ. ‘ಬೀದಿ ನಾಟಕ ಸಾರಾಯಿ ಸಂಕಟ’ವು ಮೈಸೂರು ರಮಾನಂದರ ಅಭಿನಯ ಲೇಖಕರು ಮೆಚ್ಚಿಕೊಂಡಿರುವುದನ್ನರುಹಿದೆ. ‘ಗಿರಿಭಟ್ಟರ ತಮ್ಮಯ್ಯ ವಿರಚಿತ ಮನ್ಮಥ ವಿಜಯ’ವು ಎ.ವಿ.ವರದಾಚಾರ್ಯರ ಕಂಪನಿಯ ಹೆಸರಾಂತ ನಾಟಕಗಳಲ್ಲಿ ಒಂದಾದ ಮನ್ಮಥ ವಿಜಯದ ವಿಷಯವನ್ನು ಅರುಹಿದೆ. ಗೊರೂರು ಸರ್ ಆಚಾರ್ಯರ ಕೈಯಲ್ಲಿ ಮನ್ಮಥ ವಿಜಯ ನಾಟಕವನ್ನು ಅಪೂರ್ವ ಅನುಭವ ಒಂದು ರಸಗಟ್ಟಿಯಾಗಿತ್ತೆಂಬ ಹಿರಿಯರ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ‘ತುಳುನಾಡ ಸಿರಿ ರಂಗ ಪ್ರಯೋಗವು ತುಳುನಾಡ ಸಿರಿಯ ವಿಶೇಷತೆಯನ್ನರುಹಿದೆ. ದೊಡ್ಡಗೇಣಿಗೆರೆ ರಂಗಪ್ಪದಾಸ್ ನಿರ್ದೇಶನದ ತ್ರಿಜನ್ಮ ಮೋಕ್ಷವು ನಾಟಕದ ಸ್ವಾರಸ್ಯವನ್ನು ವಿವರಿಸಿದೆ. ‘ರಂಗನಟ ರತ್ನಾಕರ’ ರಂಗ ನಟರಾಗಿ ಹಾಡುಗಾರರಾಗಿ ಸಿನಿಮಾ ನಟರಾಗಿ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ರತ್ನಾಕರ ಅವರ ವ್ಯಕ್ತಿ ಪರಿಚಯ ಮಾಡಿದೆ. ‘ರಂಗಭೂಮಿಯಿಂದ ಚಿತ್ರರಂಗ- ಡಿಂಗ್ರಿ ನಾಗರಾಜ್’ ಕಲಾವಿದ ಡಿಂಗ್ರಿ ನಾಗರಾಜ್ ಅವರನ್ನು ಪರಿಚಯಿಸಿದೆ. ‘ನಮ್ಮ ಕುಟುಂಬವೇ ಒಂದು ನಾಟಕ ಕಂಪನಿ- ತಬಲ ಕೃಷ್ಣಮೂರ್ತಿ’ ಲೇಖನವು ಗೊರೂರು ಸರ್ ತಬಲ ಕೃಷ್ಣಮೂರ್ತಿ ಅವರನ್ನು ಸಂದರ್ಶಿಸಿ ಬರೆದುದು. ಲೇಖಕರು ಸಂದರ್ಶಿಸಿದವರ ನುಡಿಗಳನ್ನು ಅಂತೆಯೇ ಉದ್ದರಿಸಿದ್ದಾರೆ. ‘ಬೀದಿ ನಾಟಕ- ಡಾ. ಹೆಚ್.ಆರ್.ಸ್ವಾಮಿ’ ಲೇಖನ ಡಾ. ಎಸ್.ಆರ್.ಸ್ವಾಮಿ ಅವರನ್ನು ಪರಿಚಯಿಸಿ ಅವರ ರಂಗ ಚಟುವಟಿಕೆ ದಾಖಲಿಸಿದೆ. ‘ನಟ ನಾಗರಾಜ್ ಕೋಟೆ ಬಾನಾಡಿ ಚಿತ್ರವು ನಾಗರಾಜ್ ಕೋಟೆ ಅವರ ಬಹುಮುಖ ಪ್ರತಿಭೆ ಬಣ್ಣಿಸಿದೆ. ಅವರ ‘ಬಾನಾಡಿ’ ಚಿತ್ರ ವಿಮರ್ಶೆ ಆಗಿದೆ. ‘ಹಗಲಲ್ಲಿ ಚಂದ್ರ ಹೀಗಾದ್ರೇ ಹೇಗೆ? ಸರ್ಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗಿ ನಿರಂತರ ಸಾಹಿತ್ಯ ಕೃಷಿ ನಡೆಸುತ್ತಿರುವ ಕೋಲಾರ ಜಿಲ್ಲೆಯ ಕುಪ್ಪೂರಿನ ಡಾ. ಕೆ.ವೈ.ನಾರಾಯಣಸ್ವಾಮಿ ಅವರ ಬಗೆಗಿನ ಲೇಖನ. ‘ಹೀಗಾದ್ರೆ ಹೇಗೆ’? ನಾಟಕದ ವಿಮರ್ಶೆಯನ್ನು ಅವರ ವ್ಯಕ್ತಿತ್ವದ ಬಣ್ಣನೆಯೊಡನೆ ಮಾಡಿದ್ದಾರೆ. ‘ಘಟನಾವಳಿಯ ರಂಗ ರೂಪಾಂತರ ಕುಂಬಾಲಪಲ್ಲಿ’ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಮೂರು ದಿನಗಳ ಜಿಲ್ಲಾ ರಂಗೋತ್ಸವದಲ್ಲಿ ಅಭಿನಯಿಸಲ್ಪಟ್ಟ ಮೂರು ನಾಟಕಗಳ ವಿವರದೊಡನೆ ‘ಕುಂಬಾಲಪಲ್ಲಿ’ ನಾಟಕವನ್ನು ಪರಿಚಯಿಸಿ ಕುಂಬಾಲಪಲ್ಲಿ ಆರ್ಭಟಕ್ಕೆ ಪೌರಾಣಿಕ ನಾಟಕಗಳು ಮಂಕಾದವು ಎಂದಿದ್ದಾರೆ. ‘ಜೀನ್ ಜೆನೆಯ ಸಾಮಾಜಿಕ ಪ್ರತಿಭಟನೆಯ ರಂಗಭೂಮಿಯು ಜೆನೆಯ ನಾಟಕಗಳು ಸಮಾಜದಿಂದ ಬಹಿಷ್ಕೃತರಾದವರ ಕನಸುಗಳಲ್ಲಿ ಮಾನವನ ದೀನ ಸ್ಥಿತಿಯನ್ನು ಏಕಾಂಗಿತನವನ್ನು ನೈಜ ಲೌಕಿಕ ಅಸ್ತಿತ್ವಕ್ಕಾಗಿ ಅವನು ನಡೆಸಿದ ಹೆಣಗಾಟಗಳನ್ನು ದರ್ಪಣೆ ಶಾಲೆಯಂಥ ಮಾದ್ಯಮದಲ್ಲಿ ಅದಕ್ಕಿಲ ಅಕರಾಳ ವಿಕರಾಳ ಚಿತ್ರಗಳೊಂದಿಗೆ ಅನಾವರಣಗೊಳ್ಳುತ್ತದೆ ಎಂದು ಜೀನ್ ಜೆನೆಯ ಕೆಲವು ನಾಟಕಗಳನ್ನು ವಿಮರ್ಶಿಸಿದ್ದಾರೆ. ‘ಶಿವ ಸಂಚಾರ ತಂಡದ ಮೂರು ಪ್ರಯೋಗಗಳು’ ಶಿವ ಸಂಚಾರದ ಮೂರು ನಾಟಕಗಳ ಕುರಿತಾದ ಲೇಖನ. ‘ತವನಿಧಿ ದಾಸಿಮಯ’, ‘ಧನ್ವಂತರಿ ಚಿಕಿತ್ಸೆ’ ಹಾಗೂ ‘ನಾನು ಚಂದ್ರಗುಪ್ತನೆಂಬ ಮೌರ್ಯ ನಾಟಕಗಳ ಪರಿಚಯಾತ್ಮಕ ಬರಹ. ಈ ಕೃತಿಯ ಕೊನೆಯ ಲೇಖನ ‘ಹಾಸ್ಯ ಪ್ರಧಾನ ವೀರಪ್ಪನ್ ಭೂತ ನಾಟಕ ಗೊರೂರು ಅನಂತರಾಜು ಅವರ ರಚನೆಯ ನಾಟಕ ಹೆಸರೇ ಸೂಚಿಸುವಂತೆ ಜೀವಂತ ಪ್ರೇತವಾದ ಕಾಡುಗಳ್ಳ ನರಹಂತಕ ದಂತಚೋರ ಕುಖ್ಯಾತ ವೀರಪ್ಪನ್‍ನನ್ನು ಸೆರೆ ಹಿಡಿಯಲು ಸರ್ಕಾರ ಅರಣ್ಯಾಧಿಕಾರಿಗಳು ಪಡುವ ಶ್ರಮದ ಸುತ್ತ ಸುತ್ತುವ ನಾಟಕದ ವಸ್ತು ವಾಸ್ತವ ವಸ್ತು ಸ್ಥಿತಿಗೆ ಹತ್ತಿರವಾಗಿ ನೈಜತೆಯಲ್ಲಿ ನವಿರು ಹಾಸ್ಯಭರಿತ ಸಂಭಾಷಣೆಯ ಲೇಪನದಿಂದ ರಂಜಿಸಿದೆ ಎಂದು ಕವಿ ಎನ್.ಎಲ್.ಚನ್ನೇಗೌಡರು ಉಲ್ಲೇಖಿಸಿದ್ದಾರೆ.
ರಂಗಭೂಮಿ ಹಾಗೂ ರಂಗಕರ್ಮಿಗಳನ್ನು ಪರಿಚಯಿಸುವ ಗೊರೂರು ಅನಂತರಾಜು ಅವರು ಅಂಕಣ ಬರಹದ ಲೇಖನಗಳನ್ನು ’ರಂಗಾಂತರಂಗ’ ಕೃತಿಯಾಗಿ ಸ್ತುತ್ಯಾರ್ಹ ಕೆಲಸ ಮಾಡಿದ್ದಾರೆ. ನಾಟಕ ಕ್ಷೇತ್ರದಲ್ಲಿ ಆಸಕ್ತಿಯಿರುವವರೆಲ್ಲರೂ ಓದಲೇ ಬೇಕಾದ ಸಂಗ್ರಹಿಸಿ ಇಡಬೇಕಾದ ಕೃತಿಯಿದು. ಈ ಕೃತಿಯಿಂದ ನಮಗೆ ಹಲವಾರು ರಂಗಕಲಾವಿದರ, ರಂಗ ಕೃತಿಗಳ ಪರಿಚಯವಾಗುತ್ತದೆ. ಲೇಖಕರು ಲೇಖನದ ಯಾವ ಭಾಗದಲ್ಲೂ (ತಮ್ಮ ಪಾತ್ರವಿರುವ ಲೇಖನಗಳನ್ನು ಹೊರತುಪಡಿಸಿ) ಪ್ರವೇಶ ಮಾಡದೆ ಮೂರನೇ ವ್ಯಕ್ತಿಯಾಗಿ ನಿರೂಪಿಸಿದ್ದು ಜಡತನವನ್ನು ತೋರಿದಂತಿದೆ. ತಮ್ಮ ಅನುಭವದ ಸಾರವನ್ನು ಲೇಖನದಲ್ಲಿ ಅಲ್ಲಲ್ಲಿ ವ್ಯಕ್ತಪಡಿಸಿದ್ದರೆ ಲೇಖನಗಳು ಇನ್ನಷ್ಟು ಕಳೆಗಟ್ಟುತ್ತಿದ್ದವು. ವಿಷಯ ನಿರೂಪಣೆಯನ್ನು ಮಾತ್ರ ಪ್ರಧಾನವಾಗಿಸಿಕೊಳ್ಳಬೇಕೆಂಬ ಗೊರೂರ್ ಅವರ ನಿಲುವೇ ಈ ಮನಸ್ಥಿತಿಗೆ ಕಾರಣವಾಗಿದ್ದಿರಬಹುದು. ‘ರಂಗಾಂತರಂಗ’ ಕೃತಿಯ ಮೂಲಕ ಅನೇಕ ಕಲಾವಿದರನ್ನು ಅನೇಕ ರಂಗಕೃತಿಗಳನ್ನು ಪರಿಚಯಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಶ್ರೀ ಗೊರೂರು ಅನಂತರಾಜು ಅವರ ರಂಗಾಸಕ್ತಿಗೆ, ಸಾಹಿತ್ಯ ಪ್ರೀತಿಗೆ ಹಾರ್ದಿಕ ಅಭಿನಂದನೆಗಳು. ಮುಂದಿನ ರಂಗ ಪ್ರಧಾನ ಲೇಖನಗಳು ಇನ್ನಷ್ಟು ಹಾವ-ಭಾವದ ನವರಸ ಚಿತ್ರದಿಂದಿರಲೆಂದು ಆಶಿಸುವೆ.
ಡಾ.ಪ್ರದೀಪ್‍ಕುಮಾರ್ ಹೆಬ್ರಿ,