ಧಾರಾವಾಹಿ

ಒಬ್ಬ ಅಮ್ಮನ ಕಥೆ

ರುಕ್ಮಿಣಿ ನಾಯರ್

ಅದ್ಯಾಯ–ಎರಡು

ಹೊಸ ನೆಲದತ್ತ ಚಿತ್ತಹರಿಸಿದ ಅಪ್ಪ

ಹತ್ತನೇ ತರಗತಿಯನ್ನು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಸುಮತಿ ಮುಂದೆ ಹೆಚ್ಚಿನ ವಿದ್ಯಾರ್ಜನೆ ಮಾಡುವ ಕನಸು ಕಾಣತೊಡಗಿದಳು. ಒಂದೋ ಒಳ್ಳೆಯ ಕೆಲಸಕ್ಕೆ ಸೇರಬೇಕು ಇಲ್ಲ ಎಂದರೆ ತಂದೆ ತಾಯಿಯ ಅಪ್ಪಣೆ ಪಡೆದು ಓದು ಮುಂದುವರೆಸಬೇಕು ಎಂದು ಅಂದುಕೊಳ್ಳುತ್ತಾ ಅಕ್ಕ ತಮ್ಮಂದಿರು ಹಾಗೂ ಗೆಳತಿಯರೊಂದಿಗೆ ಆಟವಾಡುತ್ತಾ ಹರಟುತ್ತಾ ಸಂತೋಷದಿಂದ ಮುಂದಿನ ದಿನಗಳ ಬಗ್ಗೆ ಬಣ್ಣ ಬಣ್ಣದ ಸುಂದರ ಕನಸುಗಳನ್ನು ಹೆಣೆಯುತ್ತಾ ಸಮಯ ಕಳೆಯುತ್ತಿದ್ದಳು. ಹೀಗೇ ಇರುವಾಗ ಒಂದು ದಿನ ನಾರಾಯಣನ್ ನಾಯರ್ ತಮ್ಮ ದೈನಂದಿನ ಕೆಲಸವೆಲ್ಲ ಮುಗಿಸಿ ಮಲಗುವ ಕೋಣೆಗೆ ಬಂದು ಪತ್ನಿಯ ಬರವನ್ನೇ ಕಾಯುತ್ತಾ ಇದ್ದರು. ಕಲ್ಯಾಣಿಯವರು ಕೆಲಸವೆಲ್ಲ ಮುಗಿಸಿ ಮಕ್ಕಳ ಜೊತೆ ಮಾತನಾಡಿ ಅವರ ಬೇಕು ಬೇಡಗಳನ್ನು ವಿಚಾರಿಸಿ ನಿದ್ರೆ ಮಾಡಿದರು ಎಂದು ಖಾತ್ರಿ ಯಾದ ನಂತರ ಮಲಗುವ ಕೋಣೆಗೆ ಬಂದರು. ಪತಿ ಇನ್ನೂ ನಿದ್ರೆ ಮಾಡದೇ ಎಚ್ಚರ ಇರುವುದನ್ನು ಅರಿತ ಅವರು ಕೇಳಿದರು…. ” ಏನೂಂದ್ರೆ ಇನ್ನೂ ಏಕೆ ನಿದ್ರೆ ಮಾಡದೆ ಇರುವಿರಿ? ಏನಾದರೂ ಹೇಳುವುದು ಇದೆಯೇ”…..ಎಂದು ಕೇಳಿದಾಗ ನಾಣು ಹೇಳಿದರು …..”ಕಲ್ಯಾಣಿ ಒಂದು ಮುಖ್ಯವಾದ ವಿಷಯವನ್ನು ನಿನ್ನಲ್ಲಿ ಹಾಗೂ ಮಕ್ಕಳಲ್ಲಿ ಹೇಳಬೇಕೆಂದು ಇರುವೆ ವಿಷಯ ತಿಳಿದ ನಂತರ ಏನು ಹೇಳುವೆಯೋ ತಿಳಿಯದು” ….ಎಂದು ಪತ್ನಿಯ ಮುಖವನ್ನು ತದೇಕ ಚಿತ್ತದಿಂದ ನೋಡಿದರು. ನಾರಾಯಣನ್ ರವರನ್ನು ಪ್ರೀತಿಯಿಂದ ನಾಣು ಎಂದೇ ಅವರ ಹತ್ತಿರದವರು ಕರೆಯುತ್ತಾ ಇದ್ದಿದ್ದು.

.

ಕಲ್ಯಾಣಿಯವರು ಆಶ್ಚರ್ಯದಿಂದ ಪತಿಯ ಕಡೆ ನೋಡಿ ಕೇಳಿದರು …..”ಇದು ಏನು ಹೊಸ ವರಸೆ ಹೀಗೆಲ್ಲಾ ಪೀಠಿಕೆಯೊಂದಿಗೆ ನೀವು ಮಾತನಾಡಿದ್ದೇ ಇಲ್ಲ ಈಗೇಕೆ ಹೀಗೆ ಬಹುಶಃ ತುಂಬಾ ಮುಖ್ಯವಾದ ವಿಚಾರವೇ ಇರಬೇಕು ಅದೇನು ಹೇಳಿ ” ….ಎಂದು ಮಂಚದ ಮೇಲೆ ಮಲಗಿದ್ದ ಪತಿಯ ಬಳಿ ಹೋಗಿ ಕುಳಿತರು. ವಿಷಯವನ್ನು ಹೇಗೆ ಹೇಳಲಿ ಎಂದು ನಾಣು ಒಂದೆರಡು ಕ್ಷಣಗಳು ಮೌನವಾಗಿದ್ದು ನಂತರ ಹೇಳಿದರು…” ನಾನು ಹೇಳುವುದನ್ನು ಸ್ವಲ್ಪ ಗಮನವಿಟ್ಟು ಕೇಳು…. ನನ್ನ ಅಕ್ಕನ ಮಗಳು ಹಾಗೂ ಅವರ ಸಂಬಂಧಿಕರು ಮೈಸೂರಿನಲ್ಲಿ ಇದ್ದಾರೆ (ಆಗ ಕರ್ನಾಟಕ ರಾಜ್ಯವನ್ನು ಮೈಸೂರು ಎಂದು ಕರೆಯುತ್ತಾ ಇದ್ದರು)….. ಅವರ ಮನೆಗೆ ಒಮ್ಮೆ ಹೋಗಿ ಬರುವೆ. …..ಅವರು ಹೇಳಿದ ಪ್ರಕಾರ ಅಲ್ಲಿ ಇಲ್ಲಿಗಿಂತಾ ಕಡಿಮೆ ಬೆಲೆಗೆ ಭೂಮಿ ಕೊಂಡುಕೊಳ್ಳಬಹುದು ಅಂತ ಹೇಳಿದ್ದಾರೆ…. ಆದಷ್ಟು ಬೇಗ ಹೋಗಿ ನೋಡಿಬರುವೆ…. ನಿನ್ನ ಅಭ್ಯಂತರ ಇಲ್ಲ ತಾನೇ”… ಎಂದು ಕೇಳಿದರು.
ಇದನ್ನು ಕೇಳಿದ ಕಲ್ಯಾಣಿಯವರು ಅತೀವ ಅಚ್ಚರಿಯಿಂದ ಪತಿಯನ್ನು ಅರೆ ಕ್ಷಣ ಕಣ್ಣುಗಳನ್ನು ಅರಳಿಸಿ ನೋಡುತ್ತಾ ಕುಳಿತು ಬಿಟ್ಟರು. ನಂತರ ಸಾವರಿಸಿಕೊಂಡು ಕೇಳಿದರು
” ನಮಗೆ ಈಗ ಇಲ್ಲಿ ಯಾವುದರ ಕೊರತೆ ಇದೆ ನೂರು ಎಕರೆ ಭೂಮಿ ಇಲ್ಲಿಯೇ ಇದೆ ನಮ್ಮ ಜೀವನಕ್ಕೆ ಬೇಕಾದುದಕ್ಕಿಂತ ಹೆಚ್ಚೇ ಇದೆ….. ಅದೂ ಅಲ್ಲದೆ ಈ ಊರಿನಲ್ಲಿ ನಿಮಗೆ ಹಾಗೂ ನಮ್ಮ ಕುಟುಂಬಕ್ಕೆ ಒಳ್ಳೆಯ ಗೌರವ ಕೂಡಾ ಇದೆ… ಇಲ್ಲಿ ಬಿಟ್ಟು ನಾವು ಪರ ರಾಜ್ಯಕ್ಕೆ ಹೋಗುವುದೇ ಅದೂ ಅಲ್ಲದೇ ಅಲ್ಲಿನ ಭಾಷೆ ನಮಗೆ ಬಾರದು…. ಮಕ್ಕಳ ವಿದ್ಯಾಭ್ಯಾಸ ಇನ್ನೂ ಮುಗಿದಿಲ್ಲ…. ಈ ವಿಷಯಗಳ ಬಗ್ಗೆ ಸ್ವಲ್ಪ ಗಮನ ಹರಿಸಿ ನೋಡಿ”….
ಹೆಣ್ಣು ಮಕ್ಕಳು ಇಬ್ಬರೂ ಸ್ವಲ್ಪ ದೊಡ್ಡವರು ಅವರು ಹತ್ತನೇ ತರಗತಿ ಮುಗಿಸಿದ್ದಾರೆ……ದೊಡ್ಡ ಮಗಳಿಗೆ ಗಂಡು ಹುಡುಕಿ ಮದುವೆ ಮಾಡಬೇಕು….. ಸುಮತಿಗೆ ಕೆಲಸ ಮಾಡಬೇಕು ಅಥವಾ ಸಾಧ್ಯವಾದರೆ ವಿಧ್ಯಾಭ್ಯಾಸ ಮುಂದುವರೆಸಬೇಕು ಎಂಬ ಆಸೆ ಇದೆ…..ಗಂಡು ಮಕ್ಕಳು ಇಬ್ಬರೂ ಚಿಕ್ಕವರು ಅವರೂ ಕೂಡಾ ವಿಧ್ಯಾಭ್ಯಾಸವನ್ನು ಪೂರ್ಣಗೊಳಿಸಬೇಕು ಅಲ್ಲವೇ”?
ಎಂದು ತಮ್ಮ ಮನದ ಆಶಂಕೆಯನ್ನು ವ್ಯಕ್ತ ಪಡಿಸಿದರು.

ಪತ್ನಿಯ ಈ ಮಾತುಗಳನ್ನು ಕೇಳಿದ ನಾಣು ಮುಗುಳ್ನಕ್ಕು “ನಾನು ಈ ವಿಷಯಗಳ ಬಗ್ಗೆ ಗಮನಿಸದೇ ಇರುವೆನೇ
ನಾವು ಈಗಲೇ ಏನೂ ಅಲ್ಲಿಗೆ ಹೋಗುವುದಿಲ್ಲ…. ಸಂಬಂಧಿಕರ ಮನೆಗೆ ಹೋದಾಗ ನೋಡಿಕೊಂಡು ಬರುವೆ ಅಷ್ಟೇ…. ನನಗೂ ಸರಿ ಅನ್ನಿಸಿದರೆ ಮಾತ್ರ ಮುಂದಿನ ಮಾತು” ….. ಎಂದು ಹೇಳುತ್ತಾ ಆಲೋಚನೆಯಲ್ಲಿ ಮುಳುಗಿದ್ದ ಪತ್ನಿಯ ತಲೆ ನೇವರಿಸುತ್ತಾ ಮೆಲುವಾಗಿ ನಕ್ಕು ನಿದ್ರೆ ಬರುತ್ತಿದ್ದ ಕಾರಣ ನಾಳೆ ಎಲ್ಲವನ್ನೂ ಸರಿಯಾಗಿ ವಿವರಿಸಿದರೆ ಆಯಿತು ಎಂದು ಮನದಲ್ಲೇ ಅಂದು ಕೊಳ್ಳುತ್ತಾ ಮಲಗಿದರು. ಕಲ್ಯಾಣಿಯವರಿಗೆ ಬೇಗ ನಿದ್ರೆ ಬರಲಿಲ್ಲ. ಪತಿ ಹೇಳಿದ ವಿಷಯದ ಬಗ್ಗೆ ತುಂಬಾ ಹೊತ್ತು ಯೋಚಿಸುತ್ತಾ ನಿದ್ರೆ ಬಾರದೇ ಮಗ್ಗಲು ಬದಲಿಸಿ ನಿದ್ರೆ ಮಾಡುವ ಪ್ರಯತ್ನ ಮಾಡಿದರು. ಎಷ್ಟು ಯೋಚಿಸಿದರೂ ಅವರಿಗೆ ಏಕೋ ಈ ವಿಷಯವನ್ನು ಸರಳವಾಗಿ ತೆಗೆದುಕೊಳ್ಳಲು ಆಗಲಿಲ್ಲ.
ಅದೇ ವಿಷಯದ ಬಗ್ಗೆ ಯೋಚಿಸುತ್ತಾ ಅವರಿಗೆ ಯಾವಾಗ ನಿದ್ರೆ ಹತ್ತಿತೋ ತಿಳಿಯಲಿಲ್ಲ. ಬೆಳಗ್ಗೆ ಸುಮಾರು ಐದರ ಸಮಯಕ್ಕೆ ಕೋಳಿ ಕೂಗಿದಾಗಲೇ ಅವರಿಗೆ ಎಚ್ಚರ ಆಗಿದ್ದು. ಎದ್ದು ಪಕ್ಕದಲ್ಲಿ ಹೊರಳಿ ನೋಡಿದರೆ ಪತಿಯು ಆಗಲೇ ಎದ್ದು ಹೋಗಿದ್ದರು. ಎದ್ದವರು ಮಂಡಿಯವರೆಗೆ ಇಳಿಬಿದ್ದ ಕಪ್ಪು ನೀಳವಾದ ಕೇಶರಾಶಿಯನ್ನು ಕೈಯಿಂದಲೇ ಒಪ್ಪವಾಗಿಸಿ ಸೂಡಿ ಕಟ್ಟಿ ಉಟ್ಟಿದ್ದ ಮುಂಡನ್ನು(ಮುಂಡು ಎಂದರೆ ಸಣ್ಣ ಜರಿಯ ಅಂಚು ಇರುವ ಬಿಳೀ ಪಂಚೆ) ಸರಿ ಪಡಿಸಿ ಎದ್ದು ಇದ್ದಲು ಹಾಗೂ ಉಪ್ಪು ಮಿಶ್ರಿತ ಪುಡಿಯಿಂದ ಹಲ್ಲುಜ್ಜಿ ಗಿಡ ಮೂಲಿಕೆಗಳನ್ನು ಹಾಕಿ ಕಾಯಿಸಿದ ಕೊಬ್ಬರಿ ಎಣ್ಣೆಯನ್ನು ತಲೆಗೆ ಚೆನ್ನಾಗಿ ಹಚ್ಚಿಕೊಂಡು ದಾಸವಾಳದ ಎಲೆ ಹಾಗೂ ಇನ್ನೊಂದು ಬಗೆ ಎಲೆ ಮತ್ತು ಸಿಗೇಕಾಯಿಯನ್ನು ಸೇರಿಸಿ ಹಿಂಡಿದ ಲೋಳೆಯಂತಹ ನೀರಿನಿಂದ ತಲೆ ಕೂದಲನ್ನು ಉಜ್ಜಿ ತೊಳೆದು ಮನೆಯ ಹತ್ತಿರದಲ್ಲಿಯೇ ಇದ್ದ ಕೊಳದಲ್ಲಿ ಮುಳುಗಿ ಮಿಂದು ನೀರಿನಲ್ಲಿ ಹಿಂಡಿ ತೆಗೆದ ಮಡಿ ವಸ್ತ್ರವನ್ನು ಉಟ್ಟು ದೇವರ ಕೋಣೆಗೆ ಹೋಗಿ ದೀಪ ಹಚ್ಚಿ ಕುಲದೈವ ಶ್ರೀ ಕೃಷ್ಣನನ್ನು ಮನಸಾರೆ ವಂದಿಸಿ ದೇವರೇ ನಮ್ಮ ಕುಟುಂಬವನ್ನು ಹಾಗೂ ಈ ಲೋಕದಲ್ಲಿ ಇರುವ ಎಲ್ಲ ಚರಾಚರ ಜೀವಿಗಳನ್ನೂ ಪ್ರಕೃತಿ ಮಾತೆಯ ಮಡಿಲಲ್ಲಿ ಇರುವ ಎಲ್ಲರನ್ನೂ ರಕ್ಷಿಸು ಕೃಷ್ಣಾ ಎಂದು ಪ್ರಾರ್ಥಿಸಿ ದೇವರ ಶ್ಲೋಕಗಳನ್ನು ಹೇಳುತ್ತಾ ತುಳಸೀ ಕಟ್ಟೆಗೆ ದೀಪ ಇಟ್ಟು ಪ್ರದಕ್ಷಿಣೆ ಹಾಕಿ ಕೈಮುಗಿದು ಒಂದು ತುಳಸಿ ಕದಿರನ್ನು ತೆಗೆದುಕೊಂಡು ಮುಡಿಗೆ ಸಿಕ್ಕಿಸಿ ಕೊಟ್ಟಿಗೆಗೆ ಹೋಗಿ ಹಸುವನ್ನು ನಮಿಸಿ ಹಾಲನ್ನು ಹಿಂಡಿ ತಂದು ಕಾಯಿಸಲು ಸೌದೆಯ ಒಲೆಯ ಮೇಲೆ ಇಟ್ಟು ಕೋಣೆಗೆ ಹೋಗಿ ಬಟ್ಟೆ ಬದಲಿಸಿ ಕೊಂಡು ಪುನಃ ಅಡುಗೆ ಮನೆಗೆ ಬಂದು ಹಾಲಿನ ಪಾತ್ರೆಯಿಂದ ಸ್ವಲ್ಪ ಹಾಲನ್ನು ಇನ್ನೊಂದು ಪುಟ್ಟ ಪಾತ್ರೆಗೆ ಬಗ್ಗಿಸಿ ಪತಿಗಾಗಿ ಚಾಯ್ ಮಾಡಲು ದೊಡ್ಡ ಒಲೆಯ ಕೊನೆಗೆ ಚಿಕ್ಕದಾಗಿ ಮಾಡಿದ್ದ ಪುಟ್ಟ ಒಲೆಯ ಮೇಲೆ ಇಟ್ಟು ಸ್ವಲ್ಪ ಸಕ್ಕರೆ ಹಾಗೂ ಚಹಾ ಪುಡಿಯನ್ನು ಹಾಕಿ ಅದು ಕುದಿಯುವುದನ್ನೇ ನೋಡುತ್ತಾ ನಿಂತರು.

ಅಷ್ಟು ಹೊತ್ತಿಗಾಗಲೇ ನಾರಾಯಣನ್ ಕೂಡಾ ಸ್ನಾನ ಮುಗಿಸಿ ದೇವರಿಗೆ ವಂದಿಸಿ ಅಡುಗೆ ಮನೆಗೆ ಬಂದರು.
” ಕಲ್ಯಾಣಿ ಚಾಯ್ ತಯಾರಾಯಿತೇ ನಾನು ಸ್ವಲ್ಪ ಹೊರಗೆ ಹೋಗಬೇಕು ಪಂಚಾಯತಿಯ ಕೆಲಸಗಳು ಇವೆ….. ಎಂದು ಹೇಳುತ್ತಾ ಪತ್ನಿ ಕಲ್ಯಾಣಿಯವರನ್ನು ಅಡಿಯಿಂದ ಮುಡಿಯರೆಗೆ ವೀಕ್ಷಿಸಿ ಮೆಚ್ಚುಗೆಯ ನೋಟ ಬೀರಿದರು. ಅವರು ಉಟ್ಟಿದ್ದ ಸಣ್ಣ ಜರಿಯ ಅಂಚಿನ ಬಿಳಿಯ ಬಣ್ಣದ ಮುಂಡು ಅದಕ್ಕೆ ಒಪ್ಪುವ ಹಸಿರು ಬಣ್ಣದ ರವಿಕೆ ಎದೆಯನ್ನು ಮುಚ್ಚಲು ಹೊದ್ದಿದ್ದ ಸಣ್ಣ ಜರಿಯ ಬಿಳಿ ಅಂಗವಸ್ತ್ರ ಇನ್ನೂ ಒದ್ದೆಯಾಗಿ ನೀರು ತೊಟ್ಟಿಕ್ಕುತ್ತಾ ಇದ್ದ ದಟ್ಟ ನೀಳ ಕೇಶರಾಶಿ ಅದರ ನಡುವೆ ಹೆಣೆದಿದ್ದ ಕೂದಲಿಗೆ ಸಿಕ್ಕಿಸಿದ ತುಳಸಿ ಕದಿರು ನೆತ್ತಿಯಲ್ಲಿ ಕುಂಕುಮದ ಮೇಲೆ ಇಟ್ಟ ಚಂದನಕ್ಕುರಿ ತನ್ನ ಪತ್ನಿ ನಾಲ್ಕು ಮಕ್ಕಳ ತಾಯಿಯಾದರೂ ಕೂಡಾ ಇನ್ನೂ ಸುಂದರಿಯೇ ವಯಸ್ಸಾದಂತೆ ಇವಳ ಸೌಂದರ್ಯ ಇನ್ನೂ ಹೆಚ್ಚುತ್ತಿದೆಯೇ ಹೊರತು ಮಾಸಿಲ್ಲ ಎಂದು ಮನದಲ್ಲೇ ಅಂದುಕೊಂಡು ಮುಗುಳ್ನಕ್ಕು ಪತ್ನಿ ನೀಡಿದ ಚಾಯ್ ಕಪ್ ಹಾಗೂ ಸಣ್ಣ ಬೆಲ್ಲದ ಅಚ್ಚನ್ನು ಕೈಗೆ ತೆಗೆದುಕೊಂಡು …..”ನನ್ನ ಸುಂದರಿ ಕಲ್ಯಾಣಿ ಕುಟ್ಟಿ” ಎಂದು ಹೇಳಿ ಚಾಯ್ ಹೀರುತ್ತಾ ತುಂಟ ನಗೆಯೊಂದಿಗೆ ಅವರನ್ನು ನೋಡಿದರು. ಪತಿಯ ನೇರ ದೃಷ್ಟಿಯನ್ನು ಎದುರಿಸಲಾಗದೆ ಕಲ್ಯಾಣಿ ನಾಚಿ …. “ಹೋಗಿ ಅಂದ್ರೆ. ನೀವು ಹೀಗೆಯೇ…. ನನ್ನ ಹೋಗಳದೇ ಇರಲು ನಿಮಗೆ ಆಗದೇ” ಎಂದು ಮುಗುಳು ನಗುತ್ತಾ ಖಾಲಿಯಾದ ಚಾಯ್ ಕಪ್ ಅನ್ನು ಪತಿಯ ಕೈಯಿಂದ ತೆಗೆದುಕೊಂಡು ಅಡುಗೆ ಮನೆಯಲ್ಲಿ ಇಟ್ಟು ಈ ದಿನ ನಿಮಗೆ ಶುಭವಾಗಲಿ ಎಂದು ಹೇಳಿ ದೇವರ ಕೋಣೆಗೆ ಹೋಗಿ ಚಂದನದ ಬಟ್ಟಲನ್ನು ತೆಗೆದುಕೊಂಡು ಬಂದು ಪತಿಯ ಹಣೆಗೆ ತಿಲಕ ಇಟ್ಟರು. ಅಷ್ಟು ಹೊತ್ತಿಗಾಗಲೇ ಮಕ್ಕಳು ಕೂಡಾ ಎದ್ದು ನಿತ್ಯ ಕರ್ಮ ಮುಗಿಸಿ ಅಪ್ಪ ಅಮ್ಮ ಮಾತನಾಡುತ್ತಾ ಇರುವುದನ್ನು ಕೇಳಿ ಹೊರಗೆ ಬಂದರು. ಅಪ್ಪ ಬೇಗ ಹೊರಗೆ ಹೋಗಲು ತಯಾರಾಗಿ ಇರುವುದನ್ನು ಗಮನಿಸಿದ ಸುಮತಿ ಅಮ್ಮನ ಮುಖವನ್ನು ಪ್ರಶ್ನಾರ್ಥಕವಾಗಿ ನೋಡಿದಳು. ಜೊತೆಗೆ ಉಳಿದ ಮೂವರು ಮಕ್ಕಳು ಕೂಡಾ ಅಮ್ಮನೆಡೆಗೆ ನೋಡಿದರು ಆಗ ಕಲ್ಯಾಣಿಯವರು ಕಣ್ಸನ್ನೆಯಲ್ಲೇ ನಂತರ ಹೇಳುವೆ ಎಂದು ಸೂಚಿಸಿದರು. ಇದನ್ನು ಕಂಡ ನಾಣು ಮಕ್ಕಳೇ ಬಂದ ನಂತರ ನಿಮಗೂ ಒಂದು ಮುಖ್ಯವಾದ ವಿಷಯ ತಿಳಿಸುವೆ. ನಿಮ್ಮ ಅಭಿಪ್ರಾಯವನ್ನು ಕೂಡಾ ನಾನು ತಿಳಿಯಬೇಕಿದೆ ಎಂದು ಹೇಳಿ ಹೊರ ನಡೆದರು. ಮಕ್ಕಳು ಹಾಗೂ ಕಲ್ಯಾಣಿಯವರು ಅವರು ಗೇಟ್ ದಾಟಿ ಅಷ್ಟು ದೂರ ಹೋಗುವವರೆಗೂ ನೋಡುತ್ತಾ ಹಾಗೇ ಸ್ವಲ್ಪ ಹೊತ್ತು ಅಲ್ಲೇ ನಿಂತಿದ್ದರು.


ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು

6 thoughts on “

  1. ಬಹಳ ಸುಂದರವಾದ ಪಕೃತಿಯ ಮಡಿಲಲ್ಲಿ..
    ಸುಂದರವಾದ ಸಂಸಾರದ ಕಲ್ಪನೆಯನ್ನು ಮೂಡಿಸುತ್ತಿದೆ ನಿಮ್ಮ ಕಥೆ
    ಬರವಣಿಗೆಯಂತೂ…ಕಣ್ಣಿಗೆ ಕಟ್ಟಿದಂತಿದೆ…ದೃಶ್ಯಗಳು..

    ಮುಂದಿನ ಸರಣಿಗಾಗಿ ಕಾಯುತ್ತಿದ್ದೇನೆ….

    1. ನಿಮ್ಮ ಮೆಚ್ಚುಗೆಯ ಅಭಿಪ್ರಾಯಗಳು ನನ್ನ ಈ ಕಥೆಗೆ ದೊರೆತ ಬಹುಮಾನ…
      ಮನತುಂಬಿ ಧನ್ಯವಾದಗಳು

  2. ನಿಮ್ಮ ವಿವರಣೆಯನ್ನು ಓದುತ್ತಾ…ಕಲ್ಯಾಣಿಯ ಚಿತ್ರ ಮನಸ್ಸಿನಲ್ಲಿ ಮೂಡಿತು. ತುಂಬಾ ಚಂದದ ಕಥೆ ಹಾಗೂ ಬರವಣಿಗೆ.

    1. ವಂದನೆಗಳು… ನಿಮ್ಮ ಪ್ರೋತ್ಸಾಹ ಎಂದಿಗೂ ಹೀಗೆ ನನಗಿರಲಿ

  3. ಸರಳವಾದ ಮಾತುಗಳಲ್ಲಿ ಕಥೆಯು ನಿಜ ಜೀವನದ ವಿವರಣೆಯಂತೆ ಮನಮುಟ್ಟಿದೆ.. ಅಭಿನಂದನೆಗಳು ಮೇಡಂ.. ❤️

Leave a Reply

Back To Top