ಅಂಕಣ ಸಂಗಾತಿ

ಒಲವ ಧಾರೆ.

ರಮೇಶ ಸಿ ಬನ್ನಿಕೊಪ್ಪ

ಮುಖವಾಡದ ಬದುಕು ಕಳಚುವ ಮುನ್ನ..

ಅವಳು ಯುವ ಜನತೆಯಲ್ಲಿ ಧರ್ಮದ ಅಮಲನ್ನು ಹೆಚ್ಚಿಸುವ ಮಾತುಗಳನ್ನು ಪುಂಕಾನು ಪುಂಕವಾಗಿ ಮಾತನಾಡುತ್ತಾಳೆ.

  ಈ ಗೆಳೆಯನೊಬ್ಬನು  “ತನ್ನ ಧರ್ಮವೇ ಶ್ರೇಷ್ಠವೆಂದು” ಹೇಳುತ್ತಾ.. ಹೇಳುತ್ತಾ.. ತನ್ನ ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳುತ್ತಲೇ ಸಮಾಜದಲ್ಲಿ ತನ್ನದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾನೆ.

 ಇನ್ನೊಬ್ಬ…

 ಒಂದು ಪಕ್ಷದ ಪರವಾಗಿಯೋ, ಧರ್ಮದ ಪರವಾಗಿಯೋ  ಸಮಾಜದಲ್ಲಿ ಅನೇಕ ಸುಳ್ಳುಗಳನ್ನು ಬಿತ್ತುತ್ತಲೇ, ಸಮಾಜಮುಖಿ ಯುವಕರನ್ನು ದಾರಿ ತಪ್ಪಿಸುತ್ತ ತನ್ನದೇ ಒಂದು ಕೋಟೆಯನ್ನು ಕಟ್ಟಿಕೊಂಡು ಸಮಾಜದಲ್ಲಿ ಗಣ್ಯಾತಿಗಣ್ಯ ವ್ಯಕ್ತಿಯೆನಿಸಿಕೊಳ್ಳುತ್ತಾನೆ.

ಹೀಗೆ ಮೇಲಿನ ವ್ಯಕ್ತಿಗಳು ಬರಹದಿಂದ, ಪ್ರಖರ ಭಾಷಣದಿಂದ,  ಧರ್ಮದಿಂದ, ಜಾತಿಯಿಂದ, ರಾಜಕೀಯದಿಂದ, ಉದ್ದಿಮೆಯಿಂದ ಅನೇಕ ಕ್ಷೇತ್ರಗಳನ್ನು ತಮ್ಮ ಕೈವಶ ಮಾಡಿಕೊಂಡು, ತಮ್ಮ ಮಾತುಗಳ ಮೂಲಕ  ಸಮಾಜದಲ್ಲಿ ಗಣ್ಯ ವ್ಯಕ್ತಿಯೆನಿಸಿಕೊಳ್ಳುತ್ತಾರೆ.

ಆ ಗಣ್ಯ ವ್ಯಕ್ತಿಗೆ ತನ್ನದೇ ಆದ ಅಭಿಮಾನಿಗಳನ್ನು ಹೊಂದುತ್ತಾನೆ. ಆತ ಹೇಳುವ ಒಂದೊಂದು ಮಾತುಗಳು ಯುವಕರಿಗೆ ಮಾರ್ಗದರ್ಶನವಾಗಬಲ್ಲವು ಎಂದು ನಂಬಿಕೊಂಡಿರುತ್ತಾರೆ. ಅವರ ಪ್ರತಿ ನಡೆಯಲ್ಲಿ, ನುಡಿಯಲ್ಲಿ, ಅವರ ನೆರಳನ್ನೇ ಅನುಸರಿಸುವ ಒಂದು ದೊಡ್ಡ ಪಡೆಯೇ ನಿರ್ಮಾಣವಾಗಿರುತ್ತದೆ.

 ಒಂದು ವೇಳೆ…

ಅಂತಹ ವ್ಯಕ್ತಿಗಳು ದಾರಿ ತಪ್ಪಿದರೆ.. ಹೌದು ಇಂದಿನ ಸಮಾಜದಲ್ಲಿ ದಿಢೀರನೆ ಶ್ರೀಮಂತರಾಗಬೇಕು..! ಹೆಚ್ಚಿನ ಸಂಪತ್ತನ್ನು ಗಳಿಸಬೇಕು..!!  ಎನ್ನುವ ಹಪಾಹಪಿಯಲ್ಲಿ ತಮ್ಮ ವ್ಯಕ್ತಿತ್ವವನ್ನು ಮರೆತುಬಿಡುತ್ತಾರೆ.

 ತಮಗಿರುವ ಸಾಮಾಜಿಕ ಜವಾಬ್ದಾರಿ ಮತ್ತು ಹೊಣೆಗಾರಿಕೆಯ ಮೌಲ್ಯಗಳನ್ನು ಮರೆತು ಅಡ್ಡ ಹಾದಿ ಹಿಡಿಯುವ, ಇನ್ನೊಬ್ಬರಿಗೆ ಮೋಸಗೊಳಿಸುವ ಕೆಲಸಕ್ಕೆ ಕೈಹಾಕಿಬಿಡುತ್ತಾರೆ..!!  ಈ ಘನ ವ್ಯಕ್ತಿತ್ವವನ್ನು ಹೊಂದಿರುವ ಮಹಾಶಯರ ಪಡಿಯಚ್ಚಿನಂತಿರುವ ಅಭಿಮಾನಿಗಳು ಇವರ ನಡತೆಯನ್ನು ಅನುಮಾನದಿಂದಲೇ ನೋಡುವಂತಾಗಿ ಬಿಡುತ್ತದೆ.

 “ಅಯ್ಯೋ ಇಷ್ಟು ದಿವಸ ನಾನು ಆರಾಧಿಸುತ್ತಿದ್ದ ಈ ವ್ಯಕ್ತಿ ಇವರೇನಾ..?  ನನ್ನ ಪಾಲಿನ ಹೀರೋ, ನನ್ನ ಜೀವನದ ಮಾರ್ಗದರ್ಶಕರು..” ಎಂದು ನಂಬಿಕೊಂಡ ವ್ಯಕ್ತಿ ಇಷ್ಟು ಕೀಳುಮುಟ್ಟದ ಕೆಲಸ ಮಾಡುತ್ತಾರಾ..?  ಎನ್ನುವ ಹಪಾಹಪಿ ಅಭಿಮಾನಿ ಯುವ ಜನತೆಯಲ್ಲಿ ಉಂಟಾಗಿ ಬಿಡುತ್ತದೆ.

 ತನ್ನ ಅಭಿಮಾನಿಗಳ ಕೋಟೆಯನ್ನ ಕಟ್ಟಿರುವ ಇಂತಹ ವ್ಯಕ್ತಿಗಳು ಸಮಾಜಿಕ ಜವಾಬ್ದಾರಿಯ ಹೊಣೆಗಾರಿಕೆಯನ್ನು ಅರಿಯದೆ ಹೋಗಿರುವುದು ದುರಂತವೆಂದೇ ಹೇಳಬಹುದು..!!

ಇಂತಹ ವ್ಯಕ್ತಿಗಳ ನಡತೆ ಒಂದೇ ತೆರನಾಗಿರುವುದಿಲ್ಲ. ವೈಯಕ್ತಿಕ ಬದುಕು ಮತ್ತು ಸಾಮಾಜಿಕ ಬದುಕು ಒಂದೇ ಎಂದು  ತಿಳಿದಾಗ ಇಂತಹ ತಪ್ಪುಗಳು ನಡೆಯುವುದಿಲ್ಲ. ಆದರೆ ವೈಯಕ್ತಿಕ ಬದುಕಿನಲ್ಲಿ ಇನ್ನೊಬ್ಬರಿಗೆ ಮೋಸಗೊಳಿಸುತ್ತಾ, ವಂಚನೆ ಮಾಡುತ್ತಾ ಸಮಾಜಕ ಬದುಕಿನಲ್ಲಿ ಘನವಾದ ಮಾತುಗಳನ್ನಾಡುತ್ತಾ ಹೋದಂತೆ ಇವರ ಒಂದೊಂದು ಬಣ್ಣ ಬಯಲಾಗುತ್ತಾ ಹೋಗುತ್ತದೆ.

 ಇಂತಹ ಬಣ್ಣ ಬಣ್ಣದ ಮಾತುಗಳ ನಾಟಕವಾಡುವ ವ್ಯಕ್ತಿಗಳು ಯಾರಲ್ಲಿಯೂ ಕೂಡ ವಿಶ್ವಾಸವನ್ನು ಉಳಿಸಿಕೊಳ್ಳುವುದಿಲ್ಲ. ಅದು ಪಕ್ಷ ನಿಷ್ಠೆಯಾಗಿರಬಹುದು, ಧರ್ಮ ನಿಷ್ಠೆಯಾಗಿರಬಹುದು, ದೇಶಭಕ್ತಿಯ ನಿಷ್ಠೆಯಾಗಿರಬಹುದು, ಅಭಿಮಾನಿಗಳ ವಿಶ್ವಾಸದ ನಿಷ್ಠೆಯೂ ಆಗಿರಬಹುದು.  ಸದಾ ಅವರ ಒಂದೊಂದು ಮುಖವಾಡಗಳು ಕಳಚಿದಂತೆ ವಾಸ್ತವದ ಅರಿವು ಅವರ ಅಭಿಮಾನಿಗಳಿಗೆ ತಟ್ಟುತ್ತದೆ.

 “ಕೇವಲ ಹಣವೇ ಪ್ರಧಾನವೆಂದು” ತಿಳಿದು ಅಡ್ಡದಾರಿ ಹಿಡಿದ ಇವರು,  ಉದ್ಯಮಿಯ ಹೆಸರಿನಲ್ಲಿ ಮೋಸ ಮಾಡುವ, ರಾಜಕೀಯ ಟಿಕೆಟ್ ಕೊಡಿಸುವ, ಸಸ್ತಾ ಬೆಲೆಗೆ ಭೂಮಿ ಕೊಡಿಸುತ್ತೇನೆ ಎಂದು ನಂಬಿಸುವ, ತೆರಿಗೆ ಉಳಿಸಿ ಮೋಸಗೊಳಿಸುವ, ಅಮಾಯಕರಾ ಚೀಟಿ ದುಡ್ಡುಗಳನ್ನು ಕದ್ದು ಒಯ್ಯುವ.. ಇಂತಹ ಹಲವು ಘನ ವ್ಯಕ್ತಿತ್ವದ ಮುಖವಾಡಗಳು..!!

 ಪೊಲೀಸರ ಕೈಗೆ ಸಿಕ್ಕ ತಕ್ಷಣವೇ ಒಂದೊಂದೇ  ಅವರ ಮೋಸದ ಜಾಲಗಳು ಕಳುಚುತ್ತಾ ಹೋಗುತ್ತವೆ. ಅದೆಂತಹ  ವ್ಯಕ್ತಿತ್ವ ಇವರದು..! ಅದೆಂತಹ ದೇಶಭಕ್ತಿಯ ಮಾತುಗಳು..!! ಇವರ  ಪ್ರೀತಿಯ ಮಾತುಗಳನ್ನೇ ಮೊಗೆಮೊಗೆದು ಕುಡಿದ ಅಮಾಯಕರೆಷ್ಟೋ..!!
ನಮ್ಮ ನೋವುಗಳಿಗೆ ಮಲಾಮಗುವ ಇವರ ಸಾಂತ್ವಾನದ ಹುಸಿ ಮಾತುಗಳಿಗೆ ಮರಳಾಗಿ ಹೋದ ಅಮಾಯಕ ಯುವ ಜನರಿಗೆ ಸಿಗುವುದು ಕೇವಲ ಮೋಸ, ವಂಚನೆ..!!

 ಇಂಥವರ ಜಾಲಕ್ಕೆ ಬೀಳುವ ಮುನ್ನ ನಾವು ಎಚ್ಚರಗೊಳ್ಳಬೇಕು..!!

ಯಾವಾಗ ವ್ಯಕ್ತಿ ಪೊಲೀಸರ ಕೈಗೆ ಸಿಗುತ್ತಾನೋ, ಕೋರ್ಟಿನ ಕಟೆ ಕಟೆ ಹತ್ತುತ್ತಾನೆಯೋ,  ಒಂದೊಂದೇ ಕೇಸ್ ಗಳನ್ನು ತನಿಖೆಗೆ ಒಳಪಡಿಸುತ್ತಾರೆಯೋ  
 ಆಗ ಅವರ ಮೋಸದ ವಿವಿಧ ಮುಖವಾಡಗಳು ಕಳಚುತ್ತಲೇ ಹೋಗುತ್ತವೆ.  

ಹಾಗೆ ಮುಖವಾಡಗಳು ಕಳಚುವಾಗ..

 ಬಹುಬೇಗನೆ ಅನುಯಾಯಿಗಳು, ಅಭಿಮಾನಿಗಳು ನಂಬುವುದಿಲ್ಲ..!  ಸುಮ್ಮನಿರುವುದಿಲ್ಲ ಅನಾರೋಗ್ಯದ ನಾಟಕವಾಡುತ್ತಲೇ ಮತ್ತೆ ಮೋಸಗೊಳಿಸುತ್ತಾ ಮತ್ತೊಂದು ಮುಖವಾಡವನ್ನು ತೋರಿಸುತ್ತಾ ಹೋಗುತ್ತಾರೆ ಆದರೆ ಇದು ಎಷ್ಟು ದಿನ ನಡೆಯುತ್ತದೆ ಹೇಳಿ..?  

ತನಿಖೆ ಪೂರ್ಣಗೊಂಡ ನಂತರ ಇವರು ‘ಅಪರಾಧಿ’ ಗಳೆಂದರೆ..! ಸಮಾಜದಿಂದ ಇವರಿಗೆ ಸಿಗುವ ಗೌರವ ಎಂತಹದು..? ಸಮಾಜದಲ್ಲಿ ಇವರು ಮುಖವೆತ್ತಿ ನಡೆಯಲು ಸಾಧ್ಯವೇ..? ಇಂತಹವರಿಂದ ಸಮಾಜ ಉದ್ಧಾರವಾಗುವುದೇ..? ಇವರಿಂದ ದೇಶಭಕ್ತಿಯ ಪಾಠವನ್ನು ನಾವು ಕಲಿಯಬೇಕೆ  ಎನ್ನುವುದನ್ನು ನಮ್ಮೊಟ್ಟಿಗೆ ನಾವೇ ಪ್ರಶ್ನಿಸಿಕೊಳ್ಳಬೇಕು.

 ಧರ್ಮ ಎಂದರೆ ಅದು ಇನ್ನೊಬ್ಬರನ್ನು ಪ್ರೀತಿಯಿಂದ ಕಾಣುವುದು. ಧರ್ಮವೆಂದರೆ ಇನ್ನೊಂದು ಧರ್ಮವನ್ನು ಸಹಿಷ್ಣುತೆಯಿಂದ ನೋಡುವುದು. ಯಾವ ಧರ್ಮವೂ ಕೊಲ್ಲು ಎಂದು ಹೇಳುವುದಿಲ್ಲ.   ಒಂದು ವೇಳೆ  ಕೊಲ್ಲು ಎಂದರೆ ಅದು  ಧರ್ಮವೇ ಅಲ್ಲ..!

 ದಾಸರು, ಶರಣರು, ಮೌಲ್ವಿಗಳು, ಸೂಫಿಗಳು, ವಚನಕಾರರು ಧರ್ಮವನ್ನು ಕುರಿತು ಮಾರ್ಮಿಕವಾಗಿ ಮಾತನಾಡಿದ್ದಾರೆ.  ಅಣ್ಣ ಬಸವಣ್ಣನವರು,  “ದಯವೇ ಧರ್ಮದ ಮೂಲವಯ್ಯ, ದಯವಿರಬೇಕು ಸಕಲ ಪ್ರಾಣಿಗಳಲ್ಲಿ ದಯವಿಲ್ಲದ  ಧರ್ಮ ಅದ್ಯಾವುದಯ್ಯ..? ದಯವಿರಬೇಕು ಸಕಲ ಪ್ರಾಣಿಗಳಲ್ಲಿ” ಎಂದು ನುಡಿದಿದ್ದಾರೆ.

ನಮಗೆ  ಬರ್ಚಿಗಳು, ಗನ್ನುಗಳು, ತ್ರಿಶೂಲಗಳು, ತಲ್ವಾರಗಳು.. ನಮ್ಮ ಧರ್ಮದ ಸಂಕೇತಗಳಾಗಬಾರದು. ಪ್ರೀತಿಯ ಮಾತುಗಳು, ನಂಬಿಕೆ ಒಬ್ಬರನ್ನೊಬ್ಬರು ಅಪ್ಪಿಕೊಂಡು ನೆಡೆಯುವ,  ಕಷ್ಟ ಸುಖಗಳಿಗೆ ಆಗುವ ಸಾಂತ್ವಾನದ ಮಾತುಗಳೇ ನಮ್ಮ ಧರ್ಮದ ಬುನಾದಿಯಾಗಬೇಕು.

 ಇಲ್ಲದೆ ಹೋದರೆ…

ಒಂದು ಧರ್ಮದ ಜನರನ್ನು ಅನುಮಾನದಿಂದ ನೋಡುವ, ಒಂದು ದೊಡ್ಡ ಪೀಳಿಗೆಯನ್ನೇ ನಾವು ಬೆಳೆಸಿದಂತಾಗುತ್ತದೆ. ಅನ್ಯಕೋಮಿನ ಧರ್ಮದವರೂ ಅಷ್ಟೇ ಇನ್ನೊಂದು ಧರ್ಮವನ್ನು ಪ್ರೀತಿಯಿಂದ ಕಂಡಾಗ ಇಂತಹ ಕೋಮುಗಲಭೆಗಳು ಕಡಿಮೆಯಾಗುತ್ತವೆ. ಇಂತಹ ಕೋಮುಗಲಭೆಯನ್ನು ಸೃಷ್ಟಿಸುವ ಮೋಸಗಾರರ ಜಾಲವೂ ಬಯಲಾಗಿ ಅವರ ಮುಖವಾಡವನ್ನು ಕಳಚಬೇಕು.  ಆಗ ಅವರ ಮೋಸದಾಟಗಳು, ಬಣ್ಣ ಬಣ್ಣದ ಒಣ ಮಾತುಗಳು, ಕಳಚಿ ಬೀಳುತ್ತವೆ.

ಅಂತಹವರ ಮುಖವಾಡಗಳನ್ನು ಕಳಚುತಲ್ಲೇ ಮನುಷ್ಯತ್ವವನ್ನು ಬೆಳಸೋಣ. ಇಂತಹವರಿಂದ  ಅಮಾಯಕರನ್ನು  ರಕ್ಷಿಸುವ  ಮನುಷ್ಯ ಪ್ರೀತಿಯ ನಾಲ್ಕು ಮಾತುಗಳನ್ನಾಡೋಣ.


ರಮೇಶ ಸಿ ಬನ್ನಿಕೊಪ್ಪ ಹಲಗೇರಿ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.

One thought on “

  1. ಒಬ್ಬರ ಬಣ್ಣದ ಮಾತುಗಳನ್ನು ನಂಬುತ್ತಾ ಮೋಸ ಹೋಗುವ ಜನರಿಗೆ ಸ್ವಂತ ವಿಚಾರ ಮಾಡುವ ಬುದ್ಧಿಯೂ ಇಲ್ಲವಾಗಿದೆ ಏನೋ…? ಮೈಮುರಿದು ದುಡಿದು ತಿನ್ನಲಾರದ ಜನ ತಮ್ಮ ಜೇನಂಥಹ ಸಿಹಿ ಮಾತುಗಳಿಂದ ಅಮಾಯಕ ಜನರನ್ನು ಹಾದಿ ತಪ್ಪಿಸುತ್ತಲೇ ಇದ್ದಾರೆ. ಇಂತಹವರಿಗೆ ಕಠಿಣ ಕಾನೂನು ಕ್ರಮಗಳು ಜರುಗದೇ ಇರುವುದರಿಂದ ಇಂತಹ ಘಟಗಳು ತಮ್ಮ ಕೈಚಳಕ ತೋರಿಸುತ್ತಲೇ ಇರುತ್ತಾರೆ. ಅವರ ಅಟ್ಟಹಾಸ ಮೆರೆಯುತ್ತಲೇ ಇರುತ್ತವೆ.
    ಸಮಯೋಚಿತ ಅರ್ಥಪೂರ್ಣ ಲೇಖನ.
    ಅಭಿನಂದನೆಗಳು.

Leave a Reply

Back To Top