ಅಂಕಣ ಸಂಗಾತಿ
ಹನಿಬಿಂದು
ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ
ತಿದ್ದಿಕೊಳ್ಳುವ ಕಾಲವಿದು
ಮನದ ಕದವ ತೆರೆದು ಬದುಕೆ ಮನಕೆ ನಿತ್ಯ ಹರ್ಷವು
ಕನಸ ಗೂಡಿನೊಳಗೆ ಇಣುಕೆ ಸಾಧನೆಯು ಸಾಧ್ಯವು..
ಹೌದು, ನಮ್ಮ ಜೀವನವೆಲ್ಲಾ ಪಕ್ಕದ ಮನೆಯವರು ಏನು ಮಾಡುತ್ತಾರೆ, ಅವರು ಯಾವ ರೀತಿಯ ಬಟ್ಟೆ ಬರೆಗಳನ್ನು ತೊಡುತ್ತಾರೆ, ಅವರು ಎಲ್ಲೆಲ್ಲಿಗೆ ಹೋಗುತ್ತಾರೆ, ಅವರೊಂದಿಗೆ ಯಾರ್ಯಾರು ಇರ್ತಾರೆ, ಅವರ ಬಂಧುಗಳು ಯಾರೆಲ್ಲ, ಗೆಳೆಯರು, ಫ್ಯಾಮಿಲಿ ಫ್ರೆಂಡ್ಸ್ ಯಾರೆಲ್ಲಾ, ಅವರು ಯಾವಾಗೆಲ್ಲಾ ಮನೆಗೆ ಬಂದು ಹೋಗುತ್ತಾರೆ, ಸಂತೆಗೆ ಹೋಗಿ ಅವರು ಎಂತೆಲ್ಲ ತರಕಾರಿ ತಂದ್ರು, ಅವರ ಮನೆಯಲ್ಲಿ ಇರುವಂತಹ ಅಂಡ್ರಾಯ್ಡ್ ಟಿವಿನೆ ನಮ್ಮ ಮನೆಗೂ ಬೇಕು. ನಾವು ಅವರು ಹಾಕಿದ್ದಕ್ಕಿಂತ ಹೆಚ್ಚಿನ ಬೆಲೆಯ ಬಟ್ಟೆಗಳನ್ನು ಹಾಕಿ ಕೊಳ್ಳಬೇಕು.ಹೀಗೆಲ್ಲಾ ಯೋಚನೆ ಮಾಡುವ ಬದಲು, ಪಕ್ಕದ ಮನೆ, ಆಚೀಚೆ ಮನೆಯವರ ಬಿಟ್ಟು, ನಿನ್ನೆ ನಾನು ಏನೆಲ್ಲಾ ಮಾಡಿದ್ದೇನೆ, ನನ್ನ ಬದುಕನ್ನು ನಾನು ನಿನ್ನೆಗಿಂತ ಇಂದು ಹೇಗೆ ಉತ್ತಮಗೊಳಿಸಿಕೊಳ್ಳಬಹುದು, ಇನ್ನಷ್ಟು ನನ್ನ ವ್ಯಕ್ತಿತ್ವವನ್ನು ನಾನು ಹೇಗೆ ಚೆನ್ನಾಗಿ ರೂಪಿಸಿಕೊಳ್ಳಬಹುದು, ನನ್ನ ಜೀವನವನ್ನು ನಾನು ಇತರರಿಗಿಂತ ಹೇಗೆ ವಿಭಿನ್ನವಾಗಿ ನಡೆಸಬಹುದು ಹೀಗೆ ತರಹೇವಾರಿ ಆಲೋಚನೆ, ಅಭಿವ್ಯಕ್ತಿಗೊಳಿಸುತ್ತಾ ಮತ್ತೆ ಹಲವಾರು ಪುಸ್ತಕಗಳನ್ನು ಓದುತ್ತಾ ನಮ್ಮ ಮಸ್ತಕದ ಬ್ಯಾಂಕಿಗೆ ಒಂದಷ್ಟು ಹೆಚ್ಚಿನ ವಿಷಯಗಳನ್ನು ಡೆಪಾಸಿಟ್ ಮಾಡಿಕೊಂಡು ಅದನ್ನು ಜೀವನಪೂರ್ತಿ ಉಪಯೋಗಿಸಿಕೊಳ್ಳಬಹುದು. ಪುಸ್ತಕಗಳನ್ನು ಓದುವುದು ಎಲ್ಲಾ ಬಗೆಯ ಹವ್ಯಾಸಗಳಲ್ಲಿ ಉತ್ತಮ ಹವ್ಯಾಸ. ಇದರಿಂದ ಯಾರಿಗೂ ತೊಂದರೆಯಾಗದ ಹಾಗೆ ಹೊಸ ಹೊಸ ವಿಚಾರಗಳನ್ನು ತಲೆಯೊಳಗೆ ತುಂಬಿಸಿ ನಮ್ಮನ್ನು ನಾವು ಬದುಕಲ್ಲಿ ಎತ್ತರಕ್ಕೆ ಏರಿಸಿಕೊಳ್ಳಲು ಅನುಕೂಲ ಅಲ್ಲವೇ?
ನಾವು ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾದ ರಾಜಕೀಯ, ಸಾಮಾಜಿಕ, ಆರ್ಥಿಕ, ಆಟೋಟಗಳ ವಿಚಾರ ನಿರರ್ಗಳವಾಗಿ ಮಾತನಾಡುವ, ಚರ್ಚಿಸುವ ನಮಗೆ ಪಕ್ಕದ ಮನೆಯ ಆಂಟಿ ಸ್ನಾನದ ಮನೆಯಲ್ಲಿ ಕಾಲು ಜಾರಿ ಬಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಿದ ವಿಷಯ ಗೊತ್ತೇ ಇರುವುದಿಲ್ಲ. ಅದು ತಿಳಿಯುವಷ್ಟರಲ್ಲಿ ಅವರ ನಲವತ್ತು ದಿನದ ಬ್ಯಾಂಡೇಜ್ ಬಿಚ್ಚುವ ಸಮಯ ಆಗಿರುತ್ತದೆ.
ನಾವು ಬಸ್ಸಿನಲ್ಲಿ ಓಡಾಡುವ ಕಾಲಕ್ಕೆ ಸರ್ವರನ್ನು ಮಾತನಾಡಿಸುವ, ಸರ್ವರ ಕಷ್ಟ ಸುಖ ಅರಿಯುವ, ವಿವಿಧ ಸ್ತರದ ಜನ ಜೀವನ ಓದುವ, ಪರರಿಗೆ ಸಹಾಯ ಮಾಡುವ, ಹಿರಿಯರಿಗೆ ಗೌರವ ಕೊಡುವ, ಪರರ ಕಷ್ಟಗಳನ್ನು ಅರಿತು ಸ್ಪಂದಿಸುವ ಗುಣಗಳು ಹಿರಿಯರಿಗೂ, ಅವರಿಂದ ಮಕ್ಕಳಿಗೂ ತಿಳಿಯುತ್ತಿತ್ತು. ಆದರೆ ಈಗ ಕಾರುಗಳ ಯುಗ. ಹೆಚ್ಚಿನ ಪ್ರತಿಯೊಂದು ಕುಟುಂಬಕ್ಕೂ ಅವರದೇ ಸ್ವಂತ ಕಾರುಗಳಿವೆ. ಅವರು ಎಲ್ಲಿ ತಿರುಗಾಡಲು ಹೋಗುವಾಗಲೂ ತಾನು,ತನ್ನ ಕುಟುಂಬ, ತನ್ನದು ಅಷ್ಟೇ. ಪರರ ಬಗ್ಗೆ ಯೋಚಿಸಲು ಹೋಗುವುದಿಲ್ಲ ಅವರು. ಇದರಿಂದ ಈಗಿನ ಜನರೇಶನ್ ಮಾನಸಿಕವಾಗಿ ಸಂಕುಚಿತವಾಗಿದೆ. ಪ್ರಪಂಚದ ವಿಷಯಗಳು ತಿಳಿದರೂ ತನ್ನ ಜೀವನ, ಕುಟುಂಬ, ಕಷ್ಟವನ್ನು ಹಾಗೂ ಸುಖವನ್ನು ಒಂದೇ ಸಮನಾಗಿ ಎದುರಿಸುವ ಧೈರ್ಯ, ತಮಗಿಂತ ಕೆಳಗಿನವರು ಕೂಡ ಬದುಕುವರು, ಅವರ ಬದುಕಿನ ಸೂತ್ರ ತಿಳಿದು ತನ್ನ ಸ್ಥಾನವನ್ನು ಅರಿಯುವ ಧೈರ್ಯ, ತಿಳಿಯದವರಿಗೆ ಬುದ್ಧಿ ಹೇಳುವ ಚಾಕಚಕ್ಯತೆಯನ್ನು ಇಂದಿನ ಜನಾಂಗ ಕಲಿಯಬೇಕಿದೆ. ಫಸ್ಟ್ ಏಡ್ ಕಲಿತವ ಮಾತ್ರ ಪರರಿಗೆ ಬಿದ್ದಾಗ ಸಹಾಯ ಮಾಡಲು ಹೋಗುವುದು, ತನ್ನ ಕಾಲ ಕೆಳಗೆ ಕಸ ಬಿದ್ದಿದ್ದರೂ, ಗಮನಿಸಿದರೂ ಗಮನಿಸದಂತೆ ಇರುವುದು, ತೆಗೆದ ವಸ್ತುಗಳನ್ನು ಉಪಯೋಗಿಸಿದ ಬಳಿಕ ಮರಳಿ ಅದರ ಸ್ಥಾನಕ್ಕೆ ಇಡದೆ ಇರುವುದು, ಬೆಳಗ್ಗೆ ಎದ್ದ ಕೂಡಲೇ ತಾನು ಹೊದ್ದುಕೊಂಡು ಮಲಗಿದ ಬೆಡ್ ಶೀಟ್ ಮಡಚದೆ ಇರುವುದು,ಹೊರಗೆ ಹೋಗಿ ಬಂದು ಕೈ ಕಾಲು ತೊಳೆಯದೆ ಮಲಗುವುದು, ಹಿರಿಯರಿಗೆ ಗೌರವ ಕೊಡುವ ಕಾರ್ಯದಲ್ಲಿ ಹಿಂದೆ ಬೀಳುವುದು, ಪೋಷಕರಿಗೆ ತಿರುಗಿ ಮಾತನಾಡುವುದು, ಸ್ವಾರ್ಥ, ಹoಚಿ ತಿನ್ನುವ ಗುಣ ಇಲ್ಲದೆ ಇರುವುದು, ಶಿಕ್ಷಕರಿಗೂ ಗೌರವ ಕೊಡದೆ ಇರುವುದು ಇವೆಲ್ಲ ನಾವು ಹಲವಾರು ಮಕ್ಕಳಲ್ಲಿ ಕಾಣುವ ಗುಣಗಳು. ಇವು ಮಕ್ಕಳು ಬೆಳೆಯುತ್ತಾ ಹೋದಂತೆ ಹೆಚ್ಚಾಗುತ್ತಲೇ ಹೋಗುತ್ತದೆ. ಬೆಳೆಯ ಸಿರಿ ಮೊಳಕೆಯಲ್ಲಿಯೇ ತಿಳಿಯುತ್ತದೆ ಎಂಬ ಹಾಗೆ ಸಣ್ಣ ಮಕ್ಕಳಲ್ಲಿಯೆ ಉತ್ತಮ ಗುಣ ಬೆಳೆದರೆ ಮುಂದೆ ಅದು ಹೆಚ್ಚುತ್ತಾ ಹೋಗುತ್ತದೆ ಅಲ್ಲವೇ?
ಉತ್ತಮ ಗುಣ ನಡತೆ ಕಲಿಸಲು , ಮಕ್ಕಳನ್ನು ತಿದ್ದಿ ಸರಿಪಡಿಸಲು, ತಪ್ಪುಗಳನ್ನು ಸರಿ ಅಲ್ಲ ಎಂದು ಅಲ್ಲಲ್ಲೇ ಹೇಳಿ ಕೊಡಲು ಇಂದಿನ ಪೋಷಕರಿಗೆ ಸಮಯ ಇಲ್ಲ, ಹಣದ ಹಿಂದೆ ಓಡುವ ಕಾಲ ಇದಾಗಿದೆ. ಹಾಗಾಗಿ ಹಣ ಹೆಚ್ಚಿದಷ್ಟೂ ಗುಣ ಕಾಣೆಯಾಗಿದೆ. ಹಣದ ಜೊತೆ ಉತ್ತಮ ಗುಣ ಇರುವವರನ್ನು ಇಂದು ಸಿರಿವಂತರು ಎನ್ನಬಹುದು ಆದರೆ ಒಳ್ಳೆಯ ಹೃದಯದ ಜೊತೆಗೆ ಒಳ್ಳೆಯ ಆರೋಗ್ಯವೂ ಇರಬೇಕು. ಇಂದಿನ ಊಟವನ್ನು ಗಮನಿಸಿದರೆ ಸಸ್ಯಾಹಾರವೇ ಆಗಲಿ ಮಾಂಸಾಹಾರವೇ ಆಗಲಿ ವಿಷವಿಲ್ಲದ ಸಾವಯವ ಊಟ ಇಂದು ಇಲ್ಲ. ಎಲ್ಲಾ ಆಹಾರಕ್ಕೂ ನಾವು ವಿಷ ಬೆರೆಸಿ ಬಿಟ್ಟಿದ್ದೇವೆ. ಅಷ್ಟೇ ಅಲ್ಲದೆ ನಮ್ಮ ಮನಸ್ಸಿನ ಜೊತೆಗೆ ಮಕ್ಕಳ ಮನಸ್ಸನ್ನೂ ಕೂಡಾ ಕಲುಷಿತಗೊಳಿಸಿ ಹಾಕಿದ್ದೇವೆ. ಮತ್ತೆ ಕಿರಿಯರನ್ನು ತಿದ್ದಬೇಕಾದ ಹಿರಿಯರೇ ಮಕ್ಕಳ ಹಾಗೆ ಆಡುವಾಗ ಇನ್ನು ಮಕ್ಕಳು ತಾನೇ ಏನು ಮಾಡಿಯಾರು? ಈಗ ಮಕ್ಕಳ ಶಾಲೆಗಿಂತ ಹೆಚ್ಚಾಗಿ ಹಿರಿಯರಿಗೆ ನ್ಯಾಯಾಲಯಗಳು ಬೇಕಿವೆ. ಹಿರಿಯರೇ ಪರಿಸರ ಮಲಿನ ಮಾಡುವುದರಲ್ಲಿ ಮಕ್ಕಳಿಗಿಂತ ಹೆಚ್ಚಿನ ಪಾಲು. ಇನ್ನು ಬುದ್ಧಿ ಹೇಳುವುದು ಯಾರಿಗೆ? ಬೇಲಿಯೇ ಎದ್ದು ಹೊಲ ಮೇದಂತೆ ಅಲ್ಲವೇ? ನಮಗೆ ನಾವೇ ಬುದ್ಧಿ ಹೇಳಿಕೊಂಡು ನಮ್ಮನ್ನು ನಾವೇ ತಿದ್ದಿಕೊಳ್ಳಬೇಕಾದ ಕಾಲವಿದು. ನಮ್ಮ ಬದುಕಿನಲ್ಲಿ ನಾವು ಒಳ್ಳೆಯ ಕೆಲಸ ಮಾದ ಬೇಕೋ, ಕೆಟ್ಟ ಕೆಲಸ ಮಾಡಬೇಕೋ ನಿರ್ಧರಿಸುವವರು ನಾವೇ. ಕರ್ಮ ನಮ್ಮದು. ಫಲ ದೇವರದ್ದು. ನೀವೇನಂತೀರಿ?
——————–
ಹನಿಬಿಂದು
ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.