ಬದುಕು ಒಂದು ಕಲೆ-ಡಾ. ಮೀನಾಕ್ಷಿ ಪಾಟೀಲ್

ಲೇಖನ ಸಂಗಾತಿ

ಡಾ. ಮೀನಾಕ್ಷಿ ಪಾಟೀಲ್

ಬದುಕು ಒಂದು ಕಲೆ

ಬದುಕು ಎಂದಾಕ್ಷಣ ಸಾಮಾನ್ಯವಾಗಿ ಎಲ್ಲರೂ ಬದುಕುತ್ತಿರುವ ರೀತಿ ಎಂದು ಹೇಳಬಹುದು. ಭೂಮಿಯ ಮೇಲೆ ಸಕಲ ಚರಾಚರ ಪ್ರಾಣಿಗಳಲ್ಲಿ ಮನುಷ್ಯ ಪ್ರಾಣಿ ಶ್ರೇಷ್ಠವಾದದ್ದು. ಮನುಷ್ಯನನ್ನು ಬುದ್ಧಿವಂತ ಪ್ರಾಣಿ ಎಂದು ಹೇಳಲಾಗುತ್ತದೆ. ಆದ್ದರಿಂದ ಜೀವನ ಮಾಡುವವನು ಮನುಷ್ಯ ಮಾತ್ರ ಇನ್ನುಳಿದ ಪ್ರಾಣಿಗಳಿಗೆ ಜೀವನವಿಲ್ಲ. ಅವುಗಳು ಕೇವಲ ಬದುಕುತ್ತವೆ.ಹಿಗೆಂದಾಗ ಬದುಕು,ಜೀವಿಸು ಮತ್ತು ಜೀವನದ ಅಲ್ಪ ವುತ್ಯಾಸದ ಅರ್ಥ ನಮಗಾಗುತ್ತದೆ. ಮನುಷ್ಯ ಹುಟ್ಟಿದ ಮೇಲೆ ಸಾರ್ಥಕ ಜೀವನವನ್ನು ನಡೆಯಿಸಿಕೊಂಡು ಹೋಗಬೇಕು ಎಂದು ಸಂತರು, ಮಹಾತ್ಮರು ಹೇಳುತ್ತಾರೆ.ಅಂದಾಗ ಮಾತ್ರ ಅವರ ಬದುಕು ಸುಂದರವಾುತ್ತದೆ. ಬದುಕಿನ ಬಗ್ಗೆ ದಾಸರು ಕೂಡಾ ತಮ್ಮ ಕೀರ್ತೆಗಳಲ್ಲಿ ಹೇಳುತ್ತಾರೆ ‘ಮಾನವ ಜನ್ಮ ದೊಡ್ಡದು ಅದನ್ನು ಹಾಳುಮಾಡಿಕೊಳ್ಳಬೇಡಿ ಹುಚ್ಚಪ್ಪಾಗಳಿರಾ’ಎಂದು. ಎಂದರೆ ಮಾನವ ಜನ್ಮಎನ್ನುವುದು ಅಂತ್ಯಂತ ಶ್ರೇಷ್ಠವಾದದ್ದು.ಬದುಕು ಎಂದರೆ ಮನುಷ್ಯನ ಹುಟ್ಟು ಸಾವಿನ ಮಧ್ಯೆ ನಡೆಯುವ ಕ್ರಿಯಾಚಟುವಟಿಕೆ. ಸಾರ್ವತ್ರಿಕವಾಗಿ ನಡೆಯುವ ಈ ಕ್ರಿಯೆಗಳ ಲೆಕ್ಕಾಚಾರವನ್ನು ಸ್ಥಿತಿ ಎಂದು ಕರೆಯಬಹುದು. ಬದುಕಿನ ಈ ಸ್ಥಿತಿಗತಿಗಳ ಲೆಕ್ಕಾಚಾರ ವ್ಯಕ್ತಿಯಿದ ವ್ಯಕ್ತಿಗೆ ಭಿನ್ನವಾಗುತ್ತದೆ. ಮನುಷ್ಯರು ಬದುಕಿನ ಮೂರು ಹಂತಗಳನ್ನು ದಾಟಿ ಹೋಗಬೇಕು. ಬಾಲ್ಯ, ಯೌವ್ವನ, ವೃದ್ಧಾಪ್ಯ ಆಯಾ ಹಂತದಲ್ಲಿ ಸಾರ್ಥಕವಾದ ಬದುಕನ್ನು ಬಾಳಿ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ಬದುಕನ್ನು ಒಂದು ಕಲೆಯಂತೆ ಭಾವಿಸಿದಾಗ ಬದುಕು ಕಲಾತ್ಮಕವಾಗುತ್ತದೆ. ನಮಗೆ ಬದುಕು ಅಖಂಡವಾಗಿ ದೊರೆಯುವುದಿಲ್ಲ ಖಂಡ ಖಂಡವಾಗಿ ದೊರೆಯುತ್ತದೆ. ಇದನ್ನೇ ನಾವು ವ್ಯಕ್ತಿ ಬದುಕಿನ ಹಂತಗಳು ಎಂದು ಕರೆಯುತ್ತೇವೆ.ಬಾಲ್ಯದಲ್ಲಿ ಮಗುವಿಗೆ ತಾಯಿ ಶಿಕ್ಷಣ ಸಂಸ್ಕಾರ ಸಂಸ್ಕೃತಿಯನ್ನು ಕಲಿಸಿದಾಗ ಮಾತ್ರ ಮುಂದೆ ಮಗು ಸುಂದರವಾದ ಬದುಕನ್ನು ಬದುಕಲು ಸಾಧ್ಯವಾಗುತ್ತದೆ. ಶಿವಾಜಿಯ ತಾಯಿ ಜೀಜಾಮಾತಾ ಬಾಲ್ಯದಲ್ಲಿ ಶೌರ್ಯ,ಸಾಹಸ ಯುದ್ಧಕಲೆಗಳ ಬಗ್ಗೆ ಕಲಿಸಿದ್ದರಿಂದ ಮುಂದೆ ಶಿವಾಜಿ ಅಪ್ರತಿಮ ಯೋಧನಾಗಿ ಒಂದು ಸಾಮ್ರಾಜ್ಯವನ್ನು ಕಟ್ಟಿದನು. ಇತಿಹಾಸದಲ್ಲಿ ಅವನ ಹೆಸರು ದಾಖಲವಾಗುತ್ತದೆ. ಇದು ಶಿವಾಜಿಯ ಸಾರ್ಥಕ ಜೀವನ. ಥಾಮಸ್ ಆಲ್ವಾ ಎಡಿಸನ್ ತಾಯಿಯಿಂದ ಶಿಕ್ಷಣ ಪಡೆಯದಿದ್ದರೆ ಜಗತ್ಪ್ರಸಿದ್ಧ ವಿಜ್ಞಾಯಾಗುತ್ತಿರಲಿಲ್ಲ ಸಂತ ಅನ್ನಮ್ಮ ಮಗು ಏಸುವಿಗೆ ಶಾಂತಿ, ಸಹನೆ, ಕರುಣೆಯ ಗುಣಗಳನ್ನು ಕಲಿಸದಿದ್ದರೆ ಏಸುಕ್ರಿಸ್ತ ಕರುಣಾಮಯಿ ಎನಿಸಿಕೊಳ್ಳುತ್ತಿರಲಿಲ್ಲ. ಬಾಲಕ ಮೋಹನ ದಾಸನ ಮನಸ್ಸಿನ ಮೇಲೆ ಶ್ರವಣಕುಮಾರ ಮತ್ತು ಸತ್ಯ ಹರಿಶ್ಚಂದ್ರ ನಾಟಕಗಳು ಪ್ರಭಾವ ಬೀರದಿದ್ದರೆ ಮುಂದೆ ಸತ್ಯ ಅಹಿಂಸೆಯ ಮಹಾತ್ಮನಾಗಿ ಗಾಂಧಿ ಬೆಳೆಯುತ್ತಿರಲಿಲ್ಲ. ಬಾಲಕ ಅಬ್ದುಲ್ ಕಲಾಂ ಅವರ ಮನೆಯಲ್ಲಿ ಅವರ ತಂದೆ ತಾಯಿ ಬಡವರಿಗೆ ನೀಡುವ ಒಪ್ಪತ್ತು ಊಟ ಮತ್ತು ಸಹಾಯಗುಣ ಅಂತಃಕರಣ ಮನಸ್ಸು ಕಲಾಂರ ಮನಸ್ಸಿನ ಮೇಲೆ ಪ್ರಭಾವ ಬೀರಿತು. ಮುಂದೆ ಅವರೊಬ್ಬ ರಾಷ್ಟ್ರ ನಾಯಕರೇನಿಸಿದರು. ಬಾಲ್ಯದಲ್ಲಿಯೇ  ಬಸವಣ್ಣ ಮೌಢ್ಯದ   ಆಚಾರವನ್ನು ತೊರೆದು ಮನೆ ಬಿಟ್ಟು ಹೊರ ನಡೆದರು. ಜನರಲ್ಲಿ ವೈಚಾರಿಕ ಪ್ರಜ್ಞೆಯ ಅರಿವನ್ನು ಮೂಡಿಸಿದರು. ಜಾತಿಯ ಮೇಲಾಟಕ್ಕೆ ತಡೆಯೊಡ್ಡಿ ಕೆಳ ಜಾತಿಯವರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಎಲ್ಲರಿಗೂ ಲಿಂಗಧಾರಣ ಮಾಡಿಸಿ’ಲಿಂಗಾಯಿತರು’ ಎಂದು ಕರೆದರು. ವಿಶ್ವ ಬಂದುತ್ವದ ಸಂದೇಶ ಸಾರಿದರು. ಇಂಥ ಅನೇಕ ಸಾಧಕರು ಬಾಲ್ಯದಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಪಡೆದು ಮುಂದೆ ಭವಿಷ್ಯದಲ್ಲಿ ಸಾರ್ಥಕ ಬದುಕನ್ನು ಬದುಕಿದರು. ಬದುಕಿನ ಅರ್ಥ ವಿಶಾಲವಾದದ್ದು  ಹಿಡಿತಕ್ಕೆ ಸಿಗದು ಭಿನ್ನ ವಿಚಾರ, ಭಿನ್ನ ತಿಳುವಳಿಕೆ, ಭಿನ್ನವಾದ ಅರ್ಥ, ವಿಭಿನ್ನ ದೃಷ್ಟಿಕೋನ ಹೀಗೆ ಅವರವರ ದೃಷ್ಟಿಕೋನದಂತೆ ಬದುಕು ಅನಾವರಣಗೊಳ್ಳುತ್ತದೆ. ಹುಟ್ಟಿನಿಂದ ಸಾಯುವವರೆಗಿನ ಆ ‘ಸ್ಥಿತಿ’ ದಿನದಿಂದ ದಿನಕ್ಕೆ ಹೊಸ ಆಯಾಮವನ್ನು ಪಡೆಯುತ್ತಾ ಹೋಗುತ್ತದೆ.ವ್ಯಕ್ತಿ ಬದುಕಿನ ನಿತ್ಯ ವ್ಯವಹಾರಗಳು ಬೇರೆ ಬೇರೆಯಾಗಿರುತ್ತವೆ. ಬದುಕನ್ನು ವ್ಯರ್ಥವಾಗಿ ಹಾಳು ಮಾಡಿಕೊಳ್ಳದೆ ಸಾರ್ಥಕವಾಗುವಂತೆ ಬದುಕಬೇಕು.ಬದುಕು ಸೂರ್ಯನೊಂದಿಗೆ ಹುಟ್ಟುತ್ತದೆ. ಪ್ರತಿದಿನವೂ ಹೊಸದಿನ, ಹೊಸ
ಕ್ಷಣ,ಹೊಸ ಆನಂದ, ಕ್ಷಣ ಕ್ಷಣವೂ ಹೊಸದನ್ನು ಕಲಿಯಬಹುದಾಗಿದೆ.ಬದುಕಿನ ನಾವೆಗೆ ಸಾವಿರ ಬಣ್ಣ ಹಂತ ಹಂತವಾಗಿ ಬದುಕು ನಮಗೆ ಪಾಠವನ್ನು ಕಲಿಸುತ್ತದೆ.ಅದನ್ನು ಸರಿಯಾಗಿ ಕಲಿತ್ತದೆ ಆದರೆ ಬದುಕು ಕಲೆಯಾಗಿ ಅರಳುತ್ತದೆ ನಮ್ಮ ಬದುಕು ನಮಗೆ ಸರ್ಗ ಸುಖವನ್ನು ನೀಡುತ್ತದೆ.

              ಒಬ್ಬ ಜ್ಞಾನಿ ಜೀವನ ಎಂದರೇನು ಎಂದು ತಿಳಿಯಲು ಹೊರಟ ನಾಡೆಲ್ಲ ಸುತ್ತಿದ ಜೀವನವೆಂದರೆ ಏನು ಎಂದು ಕಂಡವರನ್ನೆಲ್ಲ ಕೇಳಿದ. ಇದುವರೆಗೆ ನಾವು ಇಂಥ ಪ್ರಶ್ನೆ ಕೇಳಿಲ್ಲ ಎಂದರು ಜನ ಇನ್ನು ಕೆಲವರು ತಣ್ಣಗಿರುವುದನ್ನು ಸುಮ್ಮನೆ ಏಕೆ ತಲೆ ಕೆಡಿಸಿಕೊಳ್ಳುತ್ತಿ ಎಂದರು. ಇದರಿಂದ ಆತನ ಕುತೂಹಲ ಹೆಚ್ಚಾಗಿ ಇದರಿಂದ ಆತನ ಕುತೂಹಲ ಹೆಚ್ಚಾಗಿ ನಾಡಿನಿಂದ ಕಾಡಿನತ್ತ ಹೆಜ್ಜೆ ಹಾಕಿದ. ಬಣ್ಣ ಬಣ್ಣದ ಪಾತರಗಿತ್ತಿ ಹಾರುತ್ತಾ ಎದುರಿಗೆ ಬಂತು. ಅದಕ್ಕೆ ಜೀವನವೆಂದರೇನು? ಎಂದು ಈತ ಕೇಳಿದ. ಜೀವನವೆಂದರೆ ಮಕರಂದ ಕುಡಿಯುವುದು ಎಂದು ಅದು ಹೇಳಿತು. ಜೀವನವೆಂದರೆ ಬರಿ ಹೋರಾಟ ಎಂದು ಭಾವಿಸಿದ ಈತನು ಪಾತರಗಿತ್ತಿ ಮಾತಿನಿಂದ ಆನಂದಶ್ಚರ್ಯನಾಗಿ ಮುನ್ನಡೆದ. ಅಲ್ಲಿ ಒಂದು ಮೈನಾ ಹಕ್ಕಿ ಹಾಡುತ್ತಾ ಕುಳಿತಿತ್ತು. ಅದಕ್ಕೂ ಇದೇ ರೀತಿ ಪ್ರಶ್ನೆ ಮಾಡಿದ. ಜೀವನವೆಂದರೆ ಮಧುರ ಗೀತೆಗಳನ್ನು ಹಾಡುತ್ತಿರುವುದು ಎಂದಿದ್ದು ಮೈನಾ ಹಕ್ಕಿ ಇನ್ನುಆತ ಮತ್ತಷ್ಟು ಆಶ್ಚರ್ಯಬರಿತನಾಗಿ ಮುನ್ನಡೆದ. ಅಲ್ಲಿ ಜೇನು ಹುಳು ಗೂಡಿನಲ್ಲಿ ಮಕರಂದವನ್ನು ಸಂಗ್ರಹಿಸುತ್ತಿತ್ತು. ಜೇನು ಹುಳುವನ್ನು ಕೇಳಿದ ಜೀವನವೆಂದರೇನು? ಜೇನು ಹುಳು ಹೇಳಿತು ಹೂದೋಟದಲ್ಲಿ ತಿರುಗಾಡಿ ಹೂವಿನ ಮಕರಂದವನ್ನು ಹೀರಿ ತಂದು ಗೂಡಿನಲ್ಲಿ ಸಂಗ್ರಹಿಸುವುದು ಎಂದು. ಆಗ ಜ್ಞಾನಿ ತಿಳಿದ ಮನುಷ್ಯನು ಹೊಟ್ಟೆಗಾಗಿ ತಿರುಗಾಡಿ ಅಲೆದಾಡಿ ತಿನ್ನಲು ಸಂಗ್ರಹಿಸುವುದು ಜೀವನ ಎಂದು. ಮತ್ತಷ್ಟು ದೂರ ನಡೆದ ಅಲ್ಲಿ ಮರದಲ್ಲಿ ಒಂದು ಗುಬ್ಬಿಗೂಡು ಕಟ್ಟುತ್ತಿತ್ತು. ಗುಬ್ಬಿಯನ್ನು ಕೇಳಿದ ಜೀವನವೆಂದರೇನು? ಗುಬ್ಬಿ ಹೇಳಿದ್ದು ಮಕ್ಕಳು ಮರಿಗಾಗಿ ಗೂಡು ಕಟ್ಟುತ್ತಿದ್ದೇನೆ ಅದೇ ಜೀವನ ಎಂದು. ಮುಂದೆ ಮುಂದೆ ನಡೆದ ಮರದಲ್ಲೊಂದು ಗೂಗೆ ಕುಳಿತಿತ್ತು. ಗೂಗೆಗೆ ಕೇಳಿದ ಜೀವನವೆಂದರೇನು? ಜೀವನವೆಂದರೆ ‘ಕತ್ತಲೆಯಲಲ್ಲೂ ಬೆಳಕನ್ನು ಕಾಣುವುದು’ ಎಂದಿತು ಗೂಗೆ ಕೊನೆಯ ಉತ್ತರದಿಂದ ಜ್ಞಾನಿ ಸಂತೃಪ್ತನಾದ. ಬದುಕಿನಲ್ಲಿ ಬರುವ ಅನೇಕ ತೊಂದರೆಗಳಿಗೆ ಎದೆಗುಂದದೆ ಅವುಗಳಿಗಾಗಿ ಚಿಂತಿಸದೆ ಪರಿಹಾರ ಚಿಂತನೆ ಮಾಡುತ್ತಾ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು. “ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ”ಎಂಬ ಡಿವಿಜಿಯವರ ಪದ್ಯದ ಸಾಲುಗಳನ್ನು ನೆನಪಿಸಿಕೊಂಡಾಗ ಸೃಷ್ಟಿಕರ್ತನು ನಡೆಯಿಸಿದಂತೆ ನಡೆಯುವವರು ನಾವುಗಳು. ಸೂತ್ರ ಅವನ ಕೈಯಲ್ಲಿ ಪಾತ್ರ ನಮ್ಮ ಕೈಯಲ್ಲಿ ಕೌಶಲ್ಯ ಪೂರ್ಣವಾಗಿ ಆ ಪಾತ್ರವನ್ನು ಮಾಡಿದಾಗ ಮಾತ್ರ ಪ್ರೇಕ್ಷಕರು ಮೆಚ್ಚುತ್ತಾರೆ. ಇಂಥ ಸರಳ ಜೀವನ ಸೂತ್ರ ಮತ್ತೊಂದಿಲ್ಲ. ಬದುಕು ಕೂಡ ಒಂದು ಕೌಶಲ್ಯ ಪೂರ್ಣವಾದ ಕಲಾಕೃತಿ. ಆ ಕಲಾಕೃತಿಯನ್ನು ಯಾರು ಎಷ್ಟು ಚೆನ್ನಾಗಿ ಬಿಡಿಸುತ್ತಾರೆ: ಆಕರ್ಷಕವಾಗಿ ಕಾಣುವಂತೆ ಬಣ್ಣ ತುಂಬುತ್ತಾರೆ ಅವರಿಗೆ ಅದೊಂದು ಸುಂದರ ಕಲಾಕೃತಿ. ಇಂಥ ಸುಂದರ ಬಾಳನ್ನು ಬದುಕಿ ಅಮರರಾದವರು ಅನೇಕರು. ಅಂಥ ಸಾಧಕರು ದೇಹದಿಂದ ದೂರವಾಗಿದ್ದಾರೆ ಜನಮನದಿಂದ ದೂರವಾಗಿಲ್ಲ. ಸಮಾಜದಲ್ಲಿ ಮಾದರಿಯಾಗಿ ಉಳಿದಿದ್ದಾರೆ. ಬದುಕು ಎಂದರೆ ಜಡವಾಗಿ ಇರುವುದಲ್ಲ ಸಮಾಜೋಪಕಾರಿಯಾಗಿ ಯಾವತ್ತು ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುತ್ತಾ ಕ್ರಿಯಾಶೀಲರಾಗಿ ಇರುವುದು. ಶ್ರೇಷ್ಠ ನಾಟಕಕಾರ ಷೇಕ್ಸ್ಪಿಯರ್ ಹೇಳುತ್ತಾನೆ “ನಾವು ಏನಾದರೊಂದನ್ನು ಮಾಡಿದರೆ ಏನಾದರೂ ನಮಗೆ ದೊರೆಯುತ್ತದೆ ನಾವು ಏನನ್ನು ಮಾಡದಿದ್ದರೆ ನಮಗೆ ಏನು ದೊರೆಯುವುದಿಲ್ಲ”ಬದುಕನ್ನು ಕಲಾತ್ಮಕವಾಗಿ ರೂಪಿಸಿಕೊಳ್ಳಲು ಬೇಕಾದಷ್ಟು ಅವಕಾಶಗಳನ್ನು ಬದುಕು ಕೊಟ್ಟಿದೆ. ಆದರೆ ತಿಳಿಯದೆ ಬದುಕನ್ನು ಹಾಳು ಮಾಡಿಕೊಳ್ಳುವವರು ಅನೇಕರು. ವಿದ್ಯಾರ್ಥಿಯಾದವನು ಪರೀಕ್ಷೆಯಲ್ಲಿ ಫೇಲಾದೆ ಎಂತಲೋ, ಕಡಿಮೆ ಅಂಕ ಬಂದಿದೆ ಅಂತ ಎಂತಲೋ ಹತಾಶರಾಗಿ ಆತ್ಮಹತ್ಯೆಗೆ ಮುಂದಾಗುತ್ತಾರೆ. ಜೀವನದಲ್ಲಿ ಜೀವನದಲ್ಲಿ ಶೈಕ್ಷಣಿಕ ಪರೀಕ್ಷೆಯೇ ಮುಖ್ಯವಲ್ಲ ಬದುಕಿನ ಪರೀಕ್ಷೆಯಲ್ಲಿ ಪಾಸಾಗ ಬೇಕು. ಹತಾಶರಾಗಿ ಆತ್ಮಹತ್ಯೆ ಮಾಡಿಕೊಳ್ಳುವುದೆಂದರೆ ಜೀವನದ ಪರೀಕ್ಷೆಯಲ್ಲಿ ಫೇಲಾದೆ ಎಂದರ್ಥ. ಪರೀಕ್ಷೆಯ ಜೀವನದ ಅಂತಿಮ ಘಟ್ಟವಲ್ಲ. ಪಾಲಕರು ಮಕ್ಕಳಲ್ಲಿ ತಿಳಿಹೇಳಿ ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುವ ಕೆಲಸ ಮಾಡಬೇಕು. ಅವರು ಇನ್ನೂ ಚಿಕ್ಕವರು ಬದುಕಿನ ಕಲೆ ಅವರಿಗೆ ಗೊತ್ತಿಲ್ಲ. ಬದುಕೆಂದರೇನು ಎಂದು ಅನೇಕರಿಗೆ ತಿಳಿ ಹೇಳಿದಾಗ ಅವರಲ್ಲಿ ಆತ್ಮವಿಶ್ವಾಸ ಮೂಡುವುದು. ಮುಂದೆ ಭವಿಷ್ಯದಲ್ಲಿ ಸುಂದರ ಬದುಕನ್ನು ಕಟ್ಟಿಕೊಂಡು ಬಂಗಾರದಂತೆ ಬಾಳನ್ನು ಬದುಕುತ್ತಾರೆ. ವಿದ್ಯಾರ್ಥಿಗಳ ಜೀವನದ ಹತಾಶೆ ಒಂದು ರೀತಿಯಾದರೆ ದೊಡ್ಡವರ ಬದುಕಿನ ಹತಾಶ ಮತ್ತೊಂದು ರೀತಿಯದು.

                           ಕೆಲವು ಉದ್ಯಮಿಗಳು ವ್ಯಾಪಾರದಲ್ಲಿ ನಷ್ಟವಾಗಿದೆ ಎಂದು ಕುಡಿತದ ಚಟಕ್ಕೆ ಇನ್ಯಾವುದೊ ಕೆಟ್ಟ ಚಟಗಳಿಗೆ ಬಲಿಯಾಗಿ ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾರೆ. ಇಂಥವರು ನೀವು ಸ್ಮಿವಜಾಬ್ಸ್ ನಂಥವರ ಆತ್ಮ ಚರಿತ್ರೆಯನ್ನು ತಿಳಿದುಕೊಳ್ಳವ ಪ್ರಯತ್ನ ಮಾಡಬೇಕು. ತಾನೆ ಕಟ್ಟಿದ ಆ್ಯಪಲ್ ಕಂಪನಿಯಿಂದ ಆಡಳಿತ ಮಂಡಳಿಯವರು ಹೊರ ಹಾಕುತ್ತಾರೆ. ಆದರೂ ಎದೆಗುಂದದೆ ಆತ್ಮವಿಶ್ವಾಸ ಬಲದಿಂದ ಮತ್ತೊಂದು ಕಂಪನಿಯನ್ನು ಸ್ಥಾಪಿಸಿ ಮುಂದೆ ಅದೇ ಆಡಳಿತ ಮಂಡಳಿಯವರು ಆ್ಯಪಲ್ ಕಂಪನಿಯೊಂದಿಗೆ ವಿಲೀನಗೊಳಿಸಲು ರಾಜಿ ಮಾಡಿಕೊಳ್ಳುತ್ತಾರೆ. ಮತ್ತೆ ಸಂಸ್ಥೆಯನ್ನು ಉತ್ತುಂಗಕ್ಕೆ ಬೆಳೆಸುತ್ತಾನೆ. ಸೋತೆ ಎಂಬ ಮನಸ್ಸಿನ ಹತಾಶೆಯ ಭಾವ ಮತ್ತೆ ಮತ್ತೆ ನಮ್ಮನ್ನು ಕೆಳಕ್ಕೆ ನೂಕುತ್ತದೆ. ಆದರೆ ಮುಂದಿನ ಬಾರಿ ಗೆದ್ದೇ ತೀರುವೆನೆಂಬ ಮನೋಬಲ ನಮ್ಮನ್ನು ಮೇಲಕೆತುತ್ತದೆ. ಮನಸ್ಸಿನ ಆ ಛಲ ನಮ್ಮನ್ನು ಸುಮ್ಮನೆ ಕುಳಿತುಕೊಳ್ಳಲು ಬಿಡುವುದಿಲ್ಲ. ಧೀರೂಬಾಯಿ ಅಂಬಾನಿ ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕರ ಮಗ. ಕೇವಲ 10ನೇ ತರಗತಿಯವರೆಗೆ ಓದಿ ಪ್ರಾರಂಭದಲ್ಲಿ ಒಂದು ಯಮನ ರಾಷ್ಟ್ರದ ಪೆಟ್ರೋಕೆಮಿಕಲ್ ಕಂಪನಿಯಲ್ಲಿ ತಿಂಗಳಿಗೆ ಕೇವಲ 50₹ ರೂಗಳ ಬಂಡವಾಳದೊಂದಿಗೆ
 ಟೆಕ್ಸಟೈಲ್ ವ್ಯಾಪಾರ ಶುರು ಮಾಡಿದರು.ಮುಂದೆ ಹೆಜ್ಜೆ ಹೆಜ್ಜೆಗೂ ಯಶಸ್ಸು ಕಂಡು ರೀಲಯನ್ಸ್ ಎಂಬ ದೈತ್ಯಾಕಾರದ ಜಗತ್ಪ್ರಸಿದ್ಧ ಕಂಪನಿಯೊಂದು ಸ್ಥಾಪಿಸುತ್ತಾರೆ. ಈ ಕಂಪನಿಯ ಮುಂದಿನ ಕಥೆ ಪ್ರಪಂಚದಾದ್ಯಂತ ಎಲ್ಲರಿಗೂ ಗೊತ್ತು. ಬದುಕೆಂದರೆ ಹುಟ್ಟುವುದು ಬೆಳೆಯುವುದು ಸುಮ್ಮನೆ ತಿರುಗಾಡುವುದು ಅಲ್ಲ ಹುಟ್ಟಿದ ಮೇಲೆ ಏನಾದರೊಂದನ್ನು ಮಾಡುತ್ತಲೇ ಇರಬೇಕು. ಆಗ ಸಾಧನೆಯ ಸಾಲುಗಳು ನಮ್ಮ ಕಣ್ಮುಂದೆ ಬರುತ್ತವೆ. ಸಾಧಿಸುವ ಛಲವಿದ್ದಾಗ ಬದುಕಿಗೆ ಒಂದು ಥ್ರಿಲ್ ಇರುತ್ತದೆ. ಬದುಕು ಒಂದು ಛಲ, ಬದುಕು ಒಂದು ಹೋರಾಟ, ಬದುಕು ಒಂದು ಸವಾಲು, ಬದುಕು ಒಂದು ಕಲೆ ಹೀಗೆ ಬದುಕಿನ ಆಯಾಮಗಳು ವಿಭಿನ್ನವಾಗಿರುತ್ತದೆ. ಅವರವರ ದೃಷ್ಟಿಕೋನದಂತೆ ಅದು ಅರ್ಥೈಸಿಕೊಳ್ಳುತ್ತದೆ. 9ನೇ ತರಗತಿಗೆ ಓದು ನಿಲ್ಲಿಸಿದ ದಲಿತ ಮಹಿಳೆ ಕಲ್ಪನಾ ಸರೋಜ್ ಟೈಲರಿಂಗ್ ಶ್ಯಪವೊಂದರಲ್ಲಿ 2ರೂ ದಿನಗೂಲಿಯೊಂದಿಗೆ ಕೆಲಸಕ್ಕೆ ಸೇರಿ ಕಷ್ಟ ಪಟ್ಟು ದುಡಿದು ತನ್ನದೇ ಸ್ವಂತ ಉದ್ಯಮವೊಂದನ್ನು ಕಟ್ಟಿ ಈಗ 100 ಕೋಟಿ ರೂ ವ್ಯವಹಾರದ ಒಡತಿಯಾಗಿದ್ದಾಳೆ. ಹತಾಶರಾದ ಹೆಣ್ಣು ಮಕ್ಕಳಿಗೆ ಇವಳು ಮಾದರಿಯಾಗಿದ್ದಾಳೆ. ಬದುಕು ಎನ್ನುವುದು ದೇವರು ನಮಗೆ ಕೊಟ್ಟ ಒಂದು ಅವಕಾಶ. ಇಂಥ ಅವಕಾಶಗಳನ್ನು ಬಳಸಿಕೊಂಡು ಸುಂದರ ಬದುಕನ್ನು ಕಟ್ಟಿಕೊಳ್ಳಬೇಕಿದೆ. ಇಂದಿನ ದಿನಮಾನಗಳಲ್ಲಿ ಬದುಕನ್ನು ಕಟ್ಟಿಕೊಳ್ಳುವುದು ಒಂದು ದೊಡ್ಡ ಸವಾಲು. ಬದುಕೇಂದರೆ ಕೇವಲ ದುಡ್ಡುಗಳಿಸುವುದೊಂದೇ ಎಂದು ಅನೇಕರು ಭಾವಿಸಿಕೊಂಡಿದ್ದಾರೆ. ಹಣ ಗಳಿಸುವ ಭರದಲ್ಲಿ ನೈತಿಕತೆಯನ್ನು ಮರೆತು ವಾಮ ಮಾರ್ಗದಲ್ಲಿ ನಡೆಯುವವರೆ ಹೆಚ್ಚು. ಇಂಥ ಪ್ರಲೋಭನೆಗೆ ಶಾಂತಿ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ ಜನಸೇವೆಯೇ ಸಂಪತ್ತು ಎಂದು ಬದುಕುವವರು ಇದ್ದಾರೆ. ಕೇರಳದ ತ್ರಿಶೂರನಲ್ಲಿರುವ ಒಬ್ಬ ಉಪನ್ಯಾಸಕಿ ಭಾನುಮತಿ ಅವರಿಗೆ 51 ಬುದ್ಧಿಮಾಂದ್ಯ ಮಕ್ಕಳು ಈ ಮಕ್ಕಳನ್ನು ಸಾಕುವುದಕ್ಕಾಗಿಯೇ ತಮ್ಮ ಮದುವೆಯನ್ನು ನಿರಾಕರಿಸಿದರು. ಮುಂದೆ ಇವರಂತ ಅಭಿರುಚಿಯುಳ್ಳ ಒಬ್ಬರನ್ನು ಮದುವೆಯಾಗುತ್ತಾರೆ. ಇಬ್ಬರು ಈ ಮಕ್ಕಳ ಸೇವೆಗೆ ನಿಲ್ಲುತ್ತಾರೆ. ತಮ್ಮ ಸ್ವಂತ ಮಕ್ಕಳು ಹುಟ್ಟಿದರೆ ಈ  ಮಕ್ಕಳ ಮೇಲೆ ಪ್ರೀತಿ ಕಡಿಮೆಯಾದೀತೆಂದು ಮಕ್ಕಳು ಬೇಡವೆಂದು ನಿರ್ಧರಿಸಿದರು. ಬುದ್ಧಿಮಾಂದ್ಯ ಮಕ್ಕಳಿಗಾಗಿ ತಮ್ಮ ಜೀವನವನ್ನು ಸಮರ್ಪಿಸಿದರು. ಅದರಂತೆ ಮದರ್ ತೆರಸಾ ಕೂಡ ಅನಾಥ ಮಕ್ಕಳಿಗೆ ತಾಯಿಯಾದರು. ಇಂಥವರ ಸಾರ್ಥಕ ಬದುಕು ಸಮಾಜಕ್ಕೆ ಮಾದರಿ. ಹೀಗೆ ಬದುಕನ್ನು ರೂಪಿಸಿಕೊಂಡು ಸಾರ್ಥಕ ಬಾಳನ್ನು ಬಾಳಿದವರು ಅನೇಕರು. ಇವರೆಲ್ಲರಂತೆ ನಾವು ಆಗಲಾರೆವು. ಆದರೆ ಸಾಸಿವೆಯಷ್ಟಾದರೂ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕೆಂಬ ಮನಸ್ಸು ನಮ್ಮದಾಗಬೇಕು.


ಡಾ. ಮೀನಾಕ್ಷಿ ಪಾಟೀಲ್

Leave a Reply

Back To Top