ಮಾಳೇಟಿರ ಸೀತಮ್ಮ ವಿವೇಕ್‌ ಅವರ ಕೃತಿ “ಭಾವ ಕುಸುಮ” ಅವಲೋಕನ ಗೊರೂರು ಅನಂತ ರಾಜು

ಪುಸ್ತಕ ಸಂಗಾತಿ

ಮಾಳೇಟಿರ ಸೀತಮ್ಮ ವಿವೇಕ್‌

ಅವರ ಕೃತಿ “ಭಾವ ಕುಸುಮ”

ಗೊರೂರು ಅನಂತ ರಾಜು

ತಲೆ ಸವರಿ ಕಳುಹಿಸಿಕೊಟ್ಟಿದ್ದ ಆ ಜೀವಾತ್ಮ ಕೊನೆಯುಸಿರೆಳೆದಿತ್ತು..

ಗೊರೂರು ಅನಂತರಾಜು,. ಹಾಸನ.

ಭಾವ ಸಂಗಮ ಮಾಳೇಟಿರ ಸೀತಮ್ಮ ವಿವೇಕ್‌ ಅವರ ೩ನೇ ಕೃತಿ ಹಾಗೂ ಇವರ ಮೊದಲ ಕವನ ಸಂಕಲನ. ಮಡಿಕೇರಿ ತಾ. ಬೇತ್ರಿ ಊರು,ಬಾಡಗ ಗ್ರಾಮ ನಿವೃತ್ತ ದೈಹಿಕ ಶಿಕ್ಷಕರು ಕಂಬೀರಂಡ ಕಿಟ್ಟು ಕಾಳಪ್ಪ ಮತ್ತು ಮುತ್ತಮ್ಮ ದಂಪತಿಗಳ ಸುಪುತ್ರಿ. ತಂದೆಯ ಪ್ರಭಾವವೊ ಏನೋ ಬಾಲ್ಯದಲ್ಲಿಯೇ ಕ್ರೀಡೆಯಲ್ಲಿ ಹೆಸರು ಮಾಡಿದಾಕೆ. ಇತಿಹಾಸ ಸ್ನಾತಕೋತ್ತರ ಪದವಿ ಸಂದರ್ಭ ಉದಯ ವಾಹಿನಿಯಲ್ಲಿ ವಾರ್ತಾ ವಾಚಕಿ.  ಇದು ಕನ್ನಡ ಮತ್ತು ಕೊಡವ ಭಾಷೆಯ ಪ್ರೌಢಿಮೆ ಹೆಚ್ಚಿಸಿಕೊಳ್ಳಲು ತಳಪಾಯ ಎನ್ನುವ ಇವರು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ದಲ್ಲಿ ಎಂ.ಎ.ಪದವಿ ಪಡೆದು ಜೈನ ಅರಸರ ಆಡಳಿತ ಶ್ರವಣಬೆಳಗೊಳದ ಪ್ರಾಕೃತ ವಿಶ್ವವಿದ್ಯಾಲಯದಲ್ಲಿ ಲಭ್ಯ ಜೈನ ವಿದ್ವಾಂಸರ ಕೃತಿ ಪುರಾಣಗಳು, ದತ್ತಿ ಶಾಸನ, ತಾಳೆಗರಿ, ಸ್ಥಳ ಅಧ್ಯಯನ ನಿರತರು.

ಕಾವೇರಿ ನದಿಯ ಮಡಿಲದು
ಪ್ರಕೃತಿ ಸಂಪತ್ತಿನ ಒಡಲದು
ಕೊಡವರಿಗೆ ಕೊಡವ್ ನಾಡದು

ತಮ್ಮೂರು ಭಾಷೆ ನೆಲದ ಅಭಿಮಾನ ವಿಶೇಷಣಗಳು ಸಂಕಲನ ಮೊದಲ ಕವಿತೆ ‘ಕೊಡವ ಕುಲ-ಕೊಡವ್ ನೆಲ’ ದಲ್ಲಿ ಅಭಿವ್ಯಕ್ತಿಗೊಂಡಿದೆ. ಕೊಡವ ನಾಡು ಕ್ರೀಡೆಗೆ ಮತ್ತು ಸೈನಿಕ ಸೇವೆಗೆ ಹೆಸರುವಾಸಿ. ಸ್ವತ: ಲೇಖಕಿಯೇ ಹಿಂದೊಮ್ಮೆ ಉತ್ತಮ ಕ್ರೀಡಾಪಟು ಎಂಬುದನ್ನು ಕವಿತೆಯಲ್ಲಿ ಹೇಳಿಕೊಂಡಿದ್ದಾರೆ.

ಅಂದೊಮ್ಮೊ ನಾನೂ ಬೆನ್ನತ್ತಿದ್ದ ಕ್ರೀಡೆ ಭರ್ಜಿ ಎಸೆತ
ಇಂದು ನನ್ನನ್ನು ಮಾಡಿದೆ ಅತ್ಯಂತ ಪ್ರಫುಲ್ಲ ಪುಳಕಿತ..!

ಹೌದು ಕ್ರೀಡೆ ನಮ್ಮ ಮನಸ್ಸು ದೇಹವನ್ನು ಸದಾ ಲವಲವಿಕೆಯಿಂದ ಇರಿಸಿಕೊಳ್ಳಲು ಸಹಕಾರಿ. ನಾನು ಕೂಡ ಕಾಲೇಜು ದಿನಗಳಲ್ಲಿ ಕ್ರೀಡಾಪಟುವಾಗಿ ಬಾಲ್ ಬ್ಯಾಡ್ಮಿಂಟನ್, ಷಟಲ್‌ ಕಾಕ್, ಟೇಬಲ್ ಟೆನಿಸ್ ಆಟಗಳಲ್ಲಿ ಪಾಲ್ಗೊಳುತ್ತಿದ್ದೆ. ಬಿ.ಕಾಂ.ಪದವಿ ಮುಗಿಸಿ ನೈಟ್‌ ಕಾಲೇಜ್‌ ಎಲ್.ಎಲ್.ಬಿ. ಓದುವಾಗ ಮತ್ತು ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ನಾನು ವಯೋನಿವೃತ್ತಿ ಹೊಂದಿದ ಅರವತ್ತು ವಯಸ್ಸಿನವರೆಗೂ  ಪಾಲ್ಗೊಳ್ಳುತ್ತಾ ಬಂದೆ.. ಇರಲಿ ಇತ್ತ  ಸಂಕಲನದ ಜೀವಾತ್ಮ ಕವಿತೆ ಪ್ರಕೃತಿ ಪ್ರೀತಿಯ ಆತ್ಮ ನಿವೇದನೆಯಾಗಿದೆ.

ಅಪ್ಪ ಜರಿದರೆಂದು
 ನಡೆದಿದ್ದೆ ರಭಸದಿಂದ
ಕಾವೇರಿ ತೀರದ ಕಾನನದೊಳಗಂದು..
ತಿಳಿ ಹೇಳುವವರಾರು ಮೋಹ ದಾಹದ ಮನುಜ ಮತಿಗೆ
ಪ್ರಕೃತಿಗು ಜೀವವಿದೆ ಪ್ರೀತಿಯಿಂದೆಲ್ಲವನು ಉಳಿಸಿ ಬಳಸಿಕೊಳ್ಳಿರೆಂದು..

ಮೇಡಂ ಈ ಕವಿತೆಯನ್ನು ಇತ್ತೀಚಿಗೆ ನಡೆದ ಮನೆ ಮನೆ ಕವಿ ಗೋಷ್ಠಿಯಲ್ಲಿ ವಾಚಿಸುವಾಗ ಭಾವುಕರಾಗಿ ಅತ್ತುಬಿಟ್ಟಿದ್ದರು.

ಮಾಡಿದ ತಪ್ಪನ್ನರಿತು ಜೋರಾಗಿ ಅತ್ತಿದ್ದೆ
ಕುಳಿತು ಬೃಹತ್ ವೃಕ್ಷದ ಹೋಟೆಯೊಳಗೆ ನೊಂದು..

ಗಿಡ ಮರ ಕಡಿದು ಪರಿಸರ ನಾಶಕ್ಕೆ ಕಾರಣವಾಗುತ್ತಿರುವ ಮನುಜ ಕುಲಕ್ಕೆ ಒಂದು ಎಚ್ಚರಿಕೆಯ ಸಂದೇಶ ರವಾನಿಸುತ್ತಲೇ ಬಾಲ್ಯದಲ್ಲಿ ತಾವು ಆಡಿ ಬೆಳೆದ ವೃಕ್ಷ ಕವಯಿತ್ರಿಗೆ ಆಪ್ತವಾಗಿದೆ. ಅದು ಉರುಳಿದಾಗ ಅವರ ಕಣ್ಣಲ್ಲಿ ನೀರು ಜಿನುಗಿದೆ. ಈ ಕವಿತೆ ಓದುವಾಗ ನನದೊಂದು (ಗೊರೂರುಅನಂತರಾಜ) ಕವಿತೆ ನೆನಪಾಗುತ್ತದೆ. ಈ ಕವಿತೆಗೊಂದು ಪೀಠಿಕೆಯಿದೆ. ಆಗ ನನ್ನ ಕಾವ್ಯ ರಚನೆಯ ಆರಂಭಿಕ ದಿನ. ನಾನು ಮತ್ತು ಬಾಲ್ ಬ್ಯಾಡ್ಮಿಂಟನ್ ಪಾರ್ಟನರ್‌ ರವಿ ಹೇಮಾವತಿ ನದಿ ದಡದಲ್ಲಿ ನಡೆಯುತ್ತಿದ್ದವು. ರವಿ ಆಗ ತಾನೇ ಒಂದು ಹೊಸ ಕ್ಯಾಮರ ಖರೀದಿಸಿದ್ದನು. ನದಿಯ ದಡದಲ್ಲಿ ಹೇಮಾವತಿ ನದಿಗೆ ಬಾಗಿ ಚಾಚಿಕೊಂಡಿದ್ದ ಒಂದು ಬೋಳು ಮರ ನಮಗೆ ಕಾಣಿಸಿತು.  ರವಿ ಆ ಮರದ ಪೋಟೋ ಕ್ಲಿಕ್ಕಿಸಿದನು.

ಅಂದು
ನಾ ಚಿಗುರಿದಾಗ
ನನ್ನ ಹರೆಯಕ್ಕೆ ವಸಂತ ಸ್ಪಂಧಿಸಿದಾಗ
ಕೊಂಬೆ ಕೊಂಬೆಗಳಲ್ಲಿ ಕುಳಿತ
ಹಕ್ಕಿ ಪಿಕ್ಕಿಗಳು ಕೂಗಿ ಕರೆದಾಗ
ಹೃದಯ ಮಂದಿರದಲ್ಲಿ
ದುಂಬಿಗಳು ಝೆಂಕರಿಸಿದಾಗ
ಜುಳು ಜುಳು ನಾದದೊಂದಿಗೆ ಸ್ಫರ್ಶಿಸುತ್ತಿದ್ದ
ನನ್ನ ಜೀವ ಸಂಜೀವಿನಿ
ಹೇಮಾವತಿ ಹೊಳೆ
ಮಾಗಿದ ಫಲಕ್ಕಾಗಿ ಹಾತೊರೆದು
ಈಜಲು ಬರುತ್ತಿದ್ದ ಮೋಜಿನ ಹುಡುಗರು.

ನಾವು ಪೋಟೋ ತೆಗೆದ ರಾತ್ರಿಯೇ ಗುಡುಗು ಸಿಡಿಲಿನ ಜೋರು ಮಳೆ ಬಂದು ಆ ಬೋಳು ಮರ ಬುಡ ಸಮೇತ ಧಾರಾಶಾಯಿಯಾಗಿತ್ತು. ನಾನು ಬೆಳಿಗ್ಗೆ ಹೇಮಾವತಿ ನದಿ ದಡಕ್ಕೆ ಹೋಗಿ ನೋಡಿದರೆ ನಮ್ಮೂರಿನ ಜನ ಕೊಡಲಿ ಹಿಡಿದು ಮರ ಕಡಿಯುತ್ತಿದ್ದರು. ಮದ್ಯಾಹ್ನದ ವೇಳೆಗೆ ಆ ಮರ ಅಲ್ಲಿ ಇತ್ತೆಂಬ  ಸುಳಿವೇ ಇಲ್ಲ! ಈಗ ಅಲ್ಲಿ ಹಾಸನ ನಗರಕ್ಕೆ ನೀರು ಸರಬರಾಜು ಮಾಡುವ ಪಂಪ್‌ ಹೌಸ್‌ ಕಟ್ಟಲಾಗಿದೆ.

ಇಂದು
ಇವರು ನನ್ನಿಂದ ದೂರ..
ಬಹು ದೂರ
ವಸಂತನಿಲ್ಲದ ಬರಡು ಜೀವನ
ಹಸಿರು ಚಿಗುರದೆ ನೊಂದು
ನಾ ಆಹ್ವಾನಿಸುತ್ತಿದ್ದೇನೆ
ಬೀಸುವ ಬಿರುಗಾಳಿಯನ್ನು
ಇಲ್ಲಾ
ಕಡಿದೊಯ್ಯುವ ಮರ ಕಟುಕರನ್ನು..

ಅಂತೆಯೇ ಕವಯಿತ್ರಿಯ ಜೀವಾತ್ಮದಲ್ಲಿ

ವರುಷ ಹೀಗೆ ಕಳೆದಿತ್ತು ವೃಕ್ಷದೊಂದಿಗೆ ಗಾಢ ಬಾಂಧವ್ಯ ಬೆಳೆದಿತ್ತು
ಊರ ತೊರೆವ ಸಮಯವು ಆಗಲೇ ಬಂದಿತ್ತು..

ಈಗ ಊರು ತೊರೆದು ಬಂದಿರುವ ನನ್ನ ಜೀವಾತ್ಮವು ಕೂಡ ಹುಟ್ಟಿದೂರಿನ ಬಾಲ್ಯದ ಸ್ಮರಣೆಗಳನ್ನು ಬರೆಯಲು ಆಗಿಂದಾಗ್ಗೆ ಪ್ರೇರೇಪಿಸುತ್ತಿರುತ್ತದೆ.

ತಿಂಗಳತ್ತು ಕಳೆದಾಗ ಊರು ಕೇರಿ ನದಿ ತೀರ ಅತಿ ನೆನಪಾಗಿತ್ತು
ಹುರುಪಿನಿಂದೊರಟ ನನ್ನೊಸ ಸಂಸಾರ ಊರನು ಮುಟ್ಟಿತ್ತು
ಬೋಳು ಬದಿಯ ಹೊಸ ವಿಸ್ತಾರವಾದ ರಸ್ತೆ ಅಲ್ಲಿ ಕಂಡಿತ್ತು..
ಆ ನನ್ನ ಪ್ರೀತಿಯ ಮರವನ್ನು ನಿರ್ದಯವಾಗಿ ಕಡಿಯಲಾಗಿತ್ತು
ತಲೆ ಸವರಿ ಕಳುಹಿಸಿಕೊಟ್ಟಿದ್ದ ಆ ಜೀವಾತ್ಮ ಕೊನೆಯುಸಿರೆಳೆದಿತ್ತು.

ಹೀಗೆ ಶ್ರೀಮತಿ ಮಾಳೇಟಿರ ಸೀತಮ್ಮ ವಿವೇಕ್‌ ಅವರ ಈ ಒಂದು ಕವಿತೆಯು ಅವರ ಅನುಭವಮೃತವಾಗಿ ಜೀವಾತ್ಮ ಕವಿತೆ ಬರೆಯಲು ಕಾಡಿದೆ. ಕವಿ ಎನ್.ಎಲ್.ಚನ್ನೇಗೌಡರು ಬರೆದಂತೆ ಎಲ್ಲ ಕವನಗಳ ಪ್ರತಿ ಸಾಲುಗಳು ಚೆಂದವಿರಬೇಕೆಂದಿಲ್ಲ. ಇಪ್ಪತ್ತು ಸಾಲಿನ ಕವಿತೆಗಳಲ್ಲಿ ಎಲ್ಲೋ ಎರಡು ಸಾಲು ವಿರಾಜಮಾನವಾಗಿದ್ದರೂ ಆ ಕವನ ಸಾರ್ಥಕವೇ.
ದೇಶಕ್ಕೆ ಸೈನಿಕರನ್ನು ಕೊಡುಗೆಯಾಗಿ ಕೊಟ್ಟ ಕೊಡಗಿನ ಕವಯಿತ್ರಿಯ ಸೈನಿಕರಿಗೆ ನಮನ ಕವಿತೆಯ ನಾಲ್ಕು ಸಾಲುಗಳೊಂದಿಗೆ ನನ್ನ ಕಿರು ವಿಮರ್ಶೆಗೆ ಮಂಗಳಂ.

ವೀರ ಯೋಧರ ಕಾಯಕ ನಿಷ್ಟೆಗೆ
ಭಾರತ ಭೂಪಟವಾಗಿದೆ ಪರಿಪೂರ್ಣ
ಧೀರ ಯೋಧರ ದಿಟ್ಟ ನಡೆಗೆ ದೇಶ
ನಮ್ಮದಾಗಿ ಉಳಿದಿದೆ ಸಂಪೂರ್ಣ
.
———————————-

ಗೊರೂರುಅನಂತರಾಜು, ಹಾಸನ.

Leave a Reply

Back To Top