ಲೇಖನ ಸಂಗಾತಿ
ಶಿಕ್ಷಕರೆಂದರೆ.. ಒಂದು ಆತ್ಮಾವಲೋಕನ
ಸುಧಾ ಭಂಡಾರಿ.
ಪೋಟೊ:ಗೂಗಲ್ ಕೃಪೆ:
ಸಂಗಾತಿ ಸಾಹಿತ್ಯ ಪತ್ರಿಕೆ: ಶಿಕ್ಷಕರೆಂದರೆ ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ತನ್ನನ್ನು ಉನ್ನತೀಕರಿಸಿಕೊಳ್ಳುತ್ತ, ನಿರಂತರ ವಿದ್ಯಾರ್ಥಿ ಎಂಬ ವಿನಮ್ರತೆಯೊಂದಿಗೆ ಸರ್ವಜ್ಞನ ತೆರದಿ ಸರ್ವರೊಳಗೊಂದೊಂದು ವಿದ್ಯೆಯ ಕಲಿತು, ಶಿಸ್ತು, ಸಮಯ ಪಾಲನೆ ಹಾಗೂ ತನ್ನ ನಡೆ ನುಡಿಯಿಂದ ವಿದ್ಯಾರ್ಥಿಗಳನ್ನು ಪ್ರಭಾವಿಸುವ ಪವಿತ್ರ ಕರ್ತವ್ಯ ನಿಭಾಯಿಸುವ ರಾಷ್ಟ್ರ ನಿರ್ಮಾಪಕ. ಎಲ್ಲಾ ಕಾಲದಲ್ಲೂ ,ಎಲ್ಲಾ ದೇಶಗಳಲ್ಲೂ ಶಿಕ್ಷಕರಿಗೆ ಮಾನ್ಯತೆ ,ಗೌರವಯುತ ಸ್ಥಾನಮಾನ ಇದ್ದೇ ಇದೆ. ೧೯೪೫ ರ ಅಣುಬಾಂಬ್ ದುರಂತದಲ್ಲಿ ಭಯಾನಕ ಸಾವು ನೋವುಗಳೊಂದಿಗೆ ಪಾತಾಳಕ್ಕಿಳಿದ ಜಪಾನ ದೇಶ ತೆಗೆದುಕೊಂಡ ಒಂದು ದಿಟ್ಟ ನಿರ್ಧಾರವೆಂದರೆ ಆ ದೇಶದ ಪ್ರತಿಭಾವಂತ ಯುವ ಸಮುದಾಯವನ್ನು ಆಯ್ದು ತರಬೇತಿ ನೀಡಿ ಶಿಕ್ಷಕರ ಹುದ್ದೆಗೆ ನೇಮಕ ಮಾಡಿದ್ದು; ಆ ನಿರ್ಧಾರವೇ ಜಪಾನ್ ದಂತ ಪುಟ್ಟ ರಾಷ್ಟ್ರ ಮತ್ತೆ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿ ನಿಲ್ಲುವಂತೆ ಪ್ರೇರೇಪಿಸಿತು! ಅದರಲ್ಲೂ ಭಾರತದಂತ ಪವಿತ್ರ ನೆಲದಲ್ಲಿ ಗುರುವಿನ ಸ್ಥಾನ ಅಂದಿಗೂ ಇಂದಿಗೂ ಎಂದೆಂದಿಗೂ ಹಿರಿದೇ. ಒಂದು ಕಾಲದಲ್ಲಿ ಗ್ರಾಮೀಣ ಭಾರತದಲ್ಲಿ ಶಿಕ್ಷಕ ಎಂದರೆ ಸಮುದಾಯದ ಕೇಂದ್ರ ಬಿಂದುವೇ ಆಗಿದ್ದ. ಇಂದಿಗೂ ಕಾಲ ತೀರಾ ಏನೂ ಬದಲಾಗಿಲ್ಲ!
ಶಿಕ್ಷಕರ ಮುಂದಿರುವ ಸವಾಲುಗಳು:
ವಿಜ್ಞಾನ , ತಂತ್ರಜ್ಞಾನದಲ್ಲಾದ ಕ್ಷಿಪ್ರ ಸುಧಾರಣೆಗಳು, ಶೈಕ್ಷಣಿಕ ಪರಿಕಲ್ಪನೆಯಲ್ಲಾದ ಆಮೂಲಾಗ್ರ ಬದಲಾವಣೆಗಳಿಂದ ಶಿಕ್ಷಕರ ಮುಂದೆ ಬಹು ದೊಡ್ಡ ಸವಾಲುಗಳ ಸರಮಾಲೆಯೇ ಇದೆ. ೨೦೨೦ರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯ ಗುರಿ ಹೊಂದಿದೆ. ಇವೆಲ್ಲವೂ ಶಿಕ್ಷಕರ ಇಚ್ಛಾಶಕ್ತಿಯ ಮೇಲೆಯೇ ಅವಲಂಬಿತವಾಗಿವೆ. ಈಗಿರುವ ಕಾರ್ಯಭಾರದ ಒತ್ತಡ ಶಿಕ್ಷಕರಲ್ಲಿ ಕಳವಳ ಉಂಟು ಮಾಡದೆ ಇರದು;
ಹಾಗಂತ ಕೈ ಚೆಲ್ಲಿ ಕುಳಿತುಕೊಳ್ಳುವ ಜಾಯಮಾನ ಶಿಕ್ಷಕರದ್ದಲ್ಲ. ಸದಾ ಹೊಸ ಹೊಸ ಬದಲಾವಣೆಗಳಿಗೆ ತೆರೆದುಕೊಳ್ಳುತ್ತ , ಇಲಾಖೆ ನೀಡಿದ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಕರ್ತೃತ್ವ ಶಕ್ತಿ ಇಡೀ ಶಿಕ್ಷಕ ಸಮುದಾಯಕ್ಕಿದೆ. ಶಿಕ್ಷಕ ಸಂಘಟನೆಗಿದೆ. ಇಷ್ಟಾಗಿಯೂ ಸರ್ಕಾರಿ ಶಾಲೆಗಳು ಮಕ್ಕಳ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಾ ಸೋಲುತ್ತಿರುವುದೆಲ್ಲಿ?! ಪ್ರತಿಯೊಬ್ಬ ಶಿಕ್ಷಕ ಸ್ವಯಂ ಪ್ರೇರಿತನಾಗಿ ತನ್ನನ್ನು ತಾನು ಆತ್ಮವಿಮರ್ಶೆ ಮಾಡಿಕೊಳ್ಳಲೇಬೇಕು; ಇದರರ್ಥ ಸರ್ಕಾರಿ ಶಾಲೆಗಳ ಪ್ರಸ್ತುತ ಸ್ಥಿಗತಿಗತಿಗಳಿಗೆ ಶಿಕ್ಷಕರು ಹೊಣೆಗಾರರೆಂದರ್ಥವಲ್ಲ. ಪ್ರತ್ಯಕ್ಷವಾಗಲೀ ಪರೋಕ್ಷವಾಗಿಯಾಗಲೀ ಅದರ ಬಿಸಿ ತಟ್ಟುವುದು ಶಿಕ್ಷಕರನ್ನೆ! ಹೀಗಾಗಿ ಸೋಲಿನ ಪರಾಮರ್ಶೆ ನಮ್ಮಿಂದಲೇ ಆರಂಭವಾಗಿ ಅಧಿಕಾರಿಗಳ ಗಮನ ಸೆಳೆಯುವಂತಾದರೆ ಪರಿಹಾರ ಸಾಧ್ಯವೇನೊ! ಆಡಳಿತಾತ್ಮಕವಾಗಿ ಇರುವ ಅತಿಯಾದ ಒತ್ತಡ, ಇಲಾಖೆ ನಮ್ಮಿಂದ ನಿರೀಕ್ಷಿಸುವ ತುಸು ಅತಿ ಎನ್ನಿಸುವಷ್ಟು ಫಲಾಪೇಕ್ಷೆ. ಜನಸಾಮಾನ್ಯರಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ಇರುವ ನಿರ್ಲಕ್ಯ ಧೋರಣೆ , ಇಂಗ್ಲೀಷ್ ವ್ಯಾಮೋಹ , ಶಾಲೆಗಳಲ್ಲಿ ಇರುವ ಶಿಕ್ಷಕರ ಕೊರತೆ, ಇರುವ ಶಿಕ್ಷಕರಲ್ಲಿಯೇ ಇರುವ ಶೀತಲ ಸಮರ, ಉಢಾಫೆ ಧೋರಣೆ, ಕಾಲೆಳೆಯುವಿಕೆ ,ಸ್ವ ಪ್ರತಿಷ್ಠೆ, ಹೊಂದಾಣಿಕೆಯ ಕೊರತೆ ಎಲ್ಲವೂ ಈ ಸೋಲಿಗೆ ಕಾರಣಗಳಲ್ಲಿ ಒಂದು ಎಂಬ ಬೆಳಕಿನಂತ ಸತ್ಯವನ್ನು ಜವಾಬ್ದಾರಿಯುತ ಸ್ಥಾನಮಾನದಲ್ಲಿರುವ ಪ್ರತಿಯೊಬ್ಬ ಭಾಗೀದಾರನೂ ಒಪ್ಪಿಕೊಳ್ಳಲೇಬೇಕು! ವರ್ಷದಿಂದ ವರ್ಷಕ್ಕೆ ರ್ಯಾಂಕ್ ವಿಜೇತರ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ಆದಾಗ್ಯೂ ಹೆಚ್ಚುತ್ತಿರುವ ಸಾಮಾಜಿಕ ದೌರ್ಜನ್ಯಗಳು, ಭ್ರಷ್ಟಾಚಾರ, ಅವ್ಯವಹಾರಗಳು ಎಲ್ಲೊ ನಾವಿಂದು ಮೌಲ್ಯಾಧಾರಿತ ಬದುಕಿನ ಶಿಕ್ಷಣವನ್ನು ನೀಡುವಲ್ಲಿ ಸೋಲುತ್ತಿದ್ದೇವೇನೊ ಎಂಬ ಪಾಪ ಪ್ರಜ್ಞೆ ನಮ್ಮೊಳಗೆ ಒಮ್ಮೊಮ್ಮೆ ಇಣುಕಿದರೂ ತಪ್ಪೇನಿಲ್ಲ. ನಾವಿಂದು ಒಂದು ಸಾಮಾಜಿಕ ಸ್ಥಿತ್ಯಂತರದ ವಿಷಮ ಕಾಲಘಟ್ಟದಲ್ಲಿ ಇದ್ದೇವೆ. ಭಾವನೆಗಳಿಗಿಂತ ಬುದ್ಧಿವಂತಿಕೆ, ಮನುಷ್ಯತ್ವಕ್ಕಿಂತ ಮೃಗೀಯ ವರ್ತನೆ ಹಿಂದೆಂದಿಗಿಂತಲೂ ಸಾಕ್ಷರರ ಸಂಖ್ಯೆ ಹೆಚ್ಚಾಗಿರುವ ಕಾಲದಲ್ಲಿ ಉಲ್ಬಣಗೊಳ್ಳುತ್ತಿರುವುದು ವಿಷಾದನೀಯ..’ The best teachers are those who inspire us to think about ourselves’ . ಮಗುವಿನಲ್ಲಿ ಸುಪ್ತಾವಸ್ಥೆಯಲ್ಲಿದ್ದ ಪ್ರತಿಭೆ, ಕೌಶಲಗಳನ್ನು ಹೊರಗೆಳೆದು ಪ್ರೇರೇಪಿಸಿ, ಮಗುವಿನ ಭಾಷಿಕ, ಆಂಗಿಕ, ಬೌದ್ಧಿಕ, ಸಾಮಾಜಿಕ, ಭಾವನಾತ್ಮಕ ಕುಂದುಕೊರತೆಗಳನ್ನು, ಲೋಪದೋಷಗಳನ್ನು ತಿದ್ದಿ ತೀಡಿ ಬದುಕಿನ ಶಿಕ್ಷಣ ಕಲಿಸುವವನೇ ನಿಜವಾದ ಶಿಕ್ಷಕ. ‘ The end product of education is a fine creative man’
ಶಿಕ್ಷಕರಲ್ಲಿರಬೇಕಾದ ಬದ್ಧತೆ, ಇಚ್ಛಾಶಕ್ತಿ:
ಇಂದು ನಮ್ಮೆಲ್ಲರ ಕುಟುಂಬಗಳು ಆರ್ಥಿಕವಾಗಿ ಸುಭದ್ರವಾಗಿದ್ದು ಒಂದು ತೆರನಾದ ಸಂತೃಪ್ತ ಭಾವ ನಮ್ಮಲ್ಲಿದೆ.. ನಾವು ಮಾಡುವ ಕೆಲಸಕ್ಕೆ ಸರ್ಕಾರ ಕೈ ತುಂಬಾ ಸಂಬಳ ನೀಡಿ ಭದ್ರತೆಯನ್ನೂ ನೀಡುತ್ತಿದೆ. ಈ ಋಣಭಾರ ಸದಾ ನಮ್ಮನ್ನು ಜಾಗೃತರನ್ನಾಗಿರಿಸಬೇಕು. ಈ ಬಗ್ಗೆ ಉಢಾಫೆಯ ಧೋರಣೆ ಎಂದೂ ಸಲ್ಲದು. ನಮ್ಮದು ನಿರ್ಜೀವ ಕಂಪ್ಯೂಟರ್ ,ಫೈಲ್ ಗಳ ಜೊತೆಗಿನ ವ್ಯವಹಾರವಲ್ಲ. ನಿರಂತರ ಮಕ್ಕಳೊಂದಿಗಿನ ಒಡನಾಟ . ಇದು ನಮ್ಮನ್ನು ಕ್ರಿಯಾಶೀಲವಾಗಿರಿಸಬೇಕು. ಹೇಗಾದರೂ ನಡೆದೀತು ಎಂಬ ಭಾವ ಸರ್ವತಾ ಸಲ್ಲದು. ಒಂದು ಶಾಲೆಯಲ್ಲಿರುವ ನಾಲ್ವರು ಶಿಕ್ಷಕರೆಂದರೆ ಆ ಶಾಲೆಯ ನಾಲ್ಕು ಆಧಾರ ಸ್ತಂಭಗಳಿದ್ದಂತೆ. ಇಂದು ಅದೆಷ್ಟೋ ಸರ್ಕಾರಿ ಶಾಲೆಗಳ ಶಿಕ್ಷಕರ ಸಾಮೂಹಿಕ ಇಚ್ಛಾಶಕ್ತಿಯಿಂದಾಗಿ ಶಾಲೆಗಳು ನಂದನವನದಂತೆ ಶೋಭಿಸುತ್ತಿವೆ. ಖಾಸಗೀ ಶಾಲೆಗಳಿಗೆ ಸಡ್ಡು ಹೊಡೆದು ನಿಂತಿವೆ. ಆದರೆ ಅದೆಷ್ಟೋ ಶಾಲೆಗಳಲ್ಲಿ ಶಿಕ್ಷಕರ ನಡುವಿನ ಮುಸುಕಿನ ಗುದ್ದಾಟ, ಕಾಲೆಳೆಯುವಿಕೆ, ಪರಸ್ಪರ ಸಹಕಾರದ ಕೊರತೆ ಕಣ್ಣಿಗೆ ರಾಚುವಷ್ಟು ಎದ್ದು ಕಾಣುತ್ತದೆ. ಎಂದೋ ಉಂಟಾದ ಭಿನ್ನಾಭಿಪ್ರಾಯಗಳಿಗೆ ಸದಾ ಉಪ್ಪು, ಖಾರ ಹಚ್ಚಿ ಗಾಯ ಸದಾ ಹಸಿಯಾಗಿರುವಂತೆ ಮಾಡಿ ಇಡೀ ಶಾಲೆಯ ವಾತಾವರಣವೇ ಸದಾ ನೋಯುವಂತೆ ಮಾಡುವ ಶಿಕ್ಷಕರು ನಮ್ಮ ನಡುವೆ ಇದ್ದಾರೆ ಎಂಬುದನ್ನು ತುಂಬಾ ವಿಷಾದದಿಂದ ಹೇಳಿಕೊಳ್ಳಬೇಕಾದ ಪರಿಸ್ಥಿತಿ ಇದೆ.ಇದು ಖಂಡಿತ ಯಾರೊಬ್ಬ ಶಿಕ್ಷಕರನ್ನು ಗುರಿಯಾಗಿಟ್ಟುಕೊಂಡು ಹೇಳುತ್ತಿರುವ ಮಾತಲ್ಲ. ಯಾರೋ ಬೆರಳೆಣಿಕೆಯಷ್ಟು ಸಂಖ್ಯೆಯ ಶಿಕ್ಷಕರು ಮಾಡುವ ತಪ್ಪಿಗೆ ಎಲ್ಲರೂ ತಲೆ ತಗ್ಗಿಸುವಂತಾಗುತ್ತದೆ. ಬೇರೆ ಯಾವುದೇ ಇಲಾಖೆ, ನೌಕರರಂತಲ್ಲ ಶಿಕ್ಷಕರೆಂದರೆ; ಅವರಿಗೆ ವಿಶೇಷ ಸ್ಥಾನಮಾನ, ಗೌರವ ಎಲ್ಲವನ್ನೂ ಈ ಸಮಾಜ ಕೊಟ್ಟಿದೆ. ಅದನ್ನು ಉಳಿಸಿಕೊಳ್ಳುವ ಬದ್ಧತೆ , ಎಚ್ಚರಿಕೆ ಸದಾ ಇರಲೇಬೇಕು. ಹಲವು ಶಾಲೆಗಳಲ್ಲಿ ಮುಸುಕಿನ ಗುದ್ದಾಟ ಶಾಲೆಯ ಕಾಂಪೌಂಡ್ ಒಳಗಿದ್ದರೆ ಕೆಲವು ಶಾಲೆಗಳಲ್ಲಿ ಸಾರ್ವಜನಿಕರ ಬಾಯಿಗೆ ಸುಲಭದ ತುತ್ತಾಗಿದೆ. ಶಾಲೆಯೆಂಬುದು ಅಕ್ಷರ ದೇಗುಲವಿದ್ದಂತೆ.; ಇಲ್ಲಿ ವಿದ್ಯೆಯ ,ಜ್ನಾನದ ಆರಾಧನೆಯ ಜೊತೆ ಹೊತೆಗೆ ಸಂಸ್ಕೃತಿ ನಿರ್ಮಾಣ ಕಾರ್ಯವೂ ನಡೆಯುತ್ತಿರುತ್ತದೆ…
ಶಿಕ್ಷಕರಲ್ಲಿರಬೇಕಾದ
ಹೃದಯ ವೈಶಾಲ್ಯತೆ:
ಶಿಕ್ಷಕರೆಂದರೆ ಅಂದು ಇಂದು ಎಂದೆಂದಿಗೂ ಒಂದು ಆದರ್ಶ ಸ್ಥಾನಮಾನ. ಕರ್ತವ್ಯದ ಜೊತೆ ಜೊತೆಗೆ ಒಂದಿಷ್ಟು ಸಮರ್ಪಣಾ ಮನೋಭಾವ, ಭಾವನಾತ್ಮಕ ಒಡನಾಟವನ್ನು ಸಮುದಾಯದೊಂದಿಗೆ ಹೊಂದಿದ್ದರೆ ಜೀವನಪರ್ಯಂತ ಸಾರ್ಥಕವೆನಿಸುವಷ್ಟು, ಪ್ರೀತಿ, ಗೌರವವನ್ನು ಮೊಗೆ ಮೊಗೆದು ಉಣಬಡಿಸುತ್ತಾರೆ. ನಾವಿಂದು ಪ್ರತಿ ತಿಂಗಳು ಐದಂಕಿಯ ಸಂಬಳ ಪಡೆಯುತ್ತೇವೆ.. ಆ ತೃಪ್ತಿ ಇರಲೇಬೇಕು. ಇಷ್ಟಾಗಿಯೂ ಶಾಲೆಗಾಗಿ, ಮಕ್ಕಳಿಗಾಗಿ ಪ್ರತಿ ತಿಂಗಳು, ಹೋಗಲಿ ವರ್ಷಕ್ಕೊಮ್ಮೆ ಎರಡಂಕಿಯ ಕಿರು ವೆಚ್ಚ ಮಾಡಬೇಕಾಗಿ ಬಂದಾಗ ಮೂಗು ಮುರಿಯುವವರಿದ್ದಾರೆ.! ಅದಕ್ಕಾಗಿಯೇ ಸಾರ್ವಜನಿಕರ ಕೆಂಗಣ್ಣಿಗೆ ಒಮ್ಮೊಮ್ಮೆ ಗುರಿಯಾಗುವುದುಂಟು . ನಾನು ಕಳೆದ ಇಪ್ಪತೈದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಗುಂಡಬಾಳ ಶಾಲೆಯ ಪಕ್ಕದಲ್ಲಿ ಆರೋಗ್ಯ ಮಾತಾ ಪ್ರೌಢಶಾಲೆ ಇದೆ. ಇದೊಂದು ಅನುದಾನಿತ ಪ್ರೌಢಶಾಲೆ. ಇಲ್ಲಿರುವ ಸ್ನೇಹಮಯಿ ,ಹೃದಯ ವೈಶಾಲ್ಯತೆಯುಳ್ಳ ಶಿಕ್ಷಕ ಸಮುದಾಯ ತಮ್ಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಉಳಿಸಿಕೊಳ್ಳಲು ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳ ಜೊತೆಗೆ ದೂರದಿಂದ ಬರುವ ವಿದ್ಯಾರ್ಥಿಗಳಿಗಾಗಿ ವಾಹನ ವ್ಯವಸ್ಥೆ, ಇನ್ನಿತರ ಶಾಲಾ ಸೌಲಭ್ಯಗಳಿಗಾಗಿ ಪ್ರತಿಯೊಬ್ಬ ಶಿಕ್ಷಕರೂ ಪ್ರತಿ ತಂಗಳೂ ಒಂದಿಷ್ಟು ವೆಚ್ಚವನ್ನು ತಾವೇ ಭರಿಸುತ್ತಾರೆ.; ಆದರೆ ಅವರೆಂದೂ ಕೊರಗುವುದಿಲ್ಲ; ಹೇಳಿಕೊಳ್ಳುವುದೂ ಇಲ್ಲ. ನಿಜಕ್ಕೂ ಇದೊಂದು ಅಪರೂಪದ ತ್ಯಾಗವೇ ಸರಿ.ಇದೊಂದು ಉದಾಹರಣೆ ಮಾತ್ರ. ಇಂತಹ ಶಾಲೆಗಳು, ಉದಾರ ಹೃದಯದ ಶಿಕ್ಷಕರು ಸಾಕಷ್ಟು ಜನ ನಮ್ಮ ನಡುವೆಯೇ ಇದ್ದಾರೆ. ಶಿಕ್ಷಕರಾದವರು ಶಾಲೆ, ಮನೆ ಇಷ್ಟಕ್ಕೇ ಸೀಮಿತರಾಗಿರದೆ ಸಾಂಸ್ಕೃತಿಕ, ಸಾಮುದಾಯಿಕ ಚಟುವಟಿಕೆಗಳೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಸಮುದಾಯದ , ಮಕ್ಕಳ ಪಾಲಿಗೆ ಆದರ್ಶ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು. ಇಂದಿಗೂ ಜನರ ಮನಸ್ಥಿತಿ ತೀರಾ ಏನು ಬದಲಾಗಿಲ್ಲ; ಆದರೆ ಜನ ಹಿಂದಿನಂತೆ ಮುಗ್ಧರಲ್ಲ. ಮೀಡಿಯಾಗಳು ಬಹಳ ಫಾಸ್ಟ್ ಆಗಿವೆ.. ಕೊರೊನಾ ನಂತರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗಿರುವುದು ಸಂತಸದಾಯಕ ವಿಚಾರ. ಇಂದಿಗೂ ಇಪ್ಪತೈದು ,ಮೂವತ್ತು ವರ್ಷ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡಾಗಲೂ ಅವರನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯಿಂದಲೂ ಪ್ರಯತ್ನಿಸಿ ಇಡೀ ಊರಿಗೆ ಊರೇ ಪರಿತಪಿಸಿ ಬೀಳ್ಕೊಟ್ಟ ಉದಾಹರಣೆಗಳೂ ಸಾಕಷ್ಟಿವೆ.ಇಂತಹ ಎಲ್ಲಾ ಶಿಕ್ಷಕರನ್ನು ಮನಸಾರೆ ಅಭಿನಂದಿಸುತ್ತಾ , ಸರ್ಕಾರಿ ಶಾಲೆಗಳ ಉಳಿವು- ಗೆಲವು ಶಿಕ್ಷಕರ ಇಚ್ಛಾಶಕ್ತಿ, ಬದ್ಧತೆಯ ಮೇಲೆ ನಿಂತಿದೆ ಎಂಬ ಸತ್ಯವನ್ನು ಅರಿತು ಕನ್ನಡ ಶಾಲೆಗಳ ಸಬಲೀಕರಣದತ್ತ ದೃಢ ಸಂಕಲ್ಪ ಮಾಡೋಣ ಎಂಬ ಸದಾಶಯಗಳೊಂದಿಗೆ…….
ಸುಧಾ ಭಂಡಾರಿ.
Your thinking, your thoughts, your way of living is priceless. Happiness is hot and we pray for our friend’s success.( Jaffer Kuwait)