ಅಮೃತ ವರ್ಷಿಣಿ ಕವನ ಸಂಗ್ರಹ-ಎನ್.ಆರ್.ಕುಲಕರ್ಣಿಯವರ ಸಂಪಾದಕತ್ವದ ಕೃತಿ ಪರಿಚಯ ಡಾ.ಕುಸುಮಾ

ಪುಸ್ತಕ ಸಂಗಾತಿ

ಅಮೃತ ವರ್ಷಿಣಿ ಕವನ ಸಂಗ್ರಹ

ಎನ್.ಆರ್.ಕುಲಕರ್ಣಿಯವರ

ಸಂಪಾದಕತ್ವದ ಕೃತಿ

ಪರಿಚಯ ಡಾ.ಕುಸುಮಾ

ಸ್ವಾತಂತ್ರ್ಯವನ್ನು ಪಡೆದು 75 ಸಂವತ್ಸರಗಳನ್ನು ಕಳೆದು  ನಿಂತಿರುವ ನಮ್ಮ ದೇಶವು  ವಿಜ್ಞಾನ, ತಂತ್ರಜ್ಞಾನಗಳಲ್ಲಿ ಪ್ರಗತಿ ಸಾಧಿಸಿರುವುದು ಹೆಮ್ಮೆ ಪಡುವಂತಹ ವಿಷಯ., ಆದರೆ  ಜಾತಿ -ಧರ್ಮಗಳ ವೈಷಮ್ಯ, ಹರಿಯುತ್ತಿರುವ ರಕ್ತ ನದಿ,  ಅತ್ಯಾಚಾರದಂತಹ ಸಾಮಾಜಿಕ ಪಿಡುಗುಗಳನ್ನು ಸ್ವಾತಂತ್ರ್ಯವು    ಪೋಷಿಸುತ್ತಾ ಬಂದಿದೆಯೇ ಎಂದು  ನಮಗೆ ನಾವೇ ಪ್ರಶ್ನಿಸಿಕೊಳ್ಳುವಂತಾಗಿದೆ.
ಇವುಗಳ ಮಧ್ಯೆ ದೇಶಪ್ರೇಮ ದೇಶಭಕ್ತಿ ಮರೆಯಾಗುತ್ತಾ ಬಂದಿದೆ  ಎನ್ನುವುದೂ ಸತ್ಯ.  

ಈ ಕವನ  ಸಂಗ್ರಹವನ್ನು ಯಾಕೆ ಹೊರತಂದಿದ್ದಾರೆ ಎನ್ನುವುದನ್ನು ಸಂಪಾದಕರು ಬಹಳ ಸುಂದರವಾಗಿ ‘ನನ್ನ ನುಡಿ’ಯಲ್ಲಿ ಹೇಳಿಕೊಂಡಿದ್ದಾರೆ .
‘ಸಮಾಜ ಪರಿವರ್ತನೆಯ ಪ್ರಮುಖ ಅಸ್ತ್ರ ಸಾಹಿತ್ಯವಾಗಿರುವುದರಿಂದ ನಾನು ಈ ಅಮೃತವರ್ಷಿಣಿ ಕವನ ಸಂಕಲನದ ಮೂಲಕ ಜನತೆಗೆ ಯೋಗ್ಯ ದಾರಿ ತೋರಿಸಲು ಕಿರು ಪ್ರಯತ್ನ ಮಾಡಿರುವೆ’ ಎಂದು. ಒಗ್ಗಟ್ಟಿನ ಮಹತ್ವವನ್ನು ಮನವರಿಕೆ ಮಾಡುವ ಉದ್ದೇಶದಿಂದ ಭಾರತೀಯ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಲುವಾಗಿ  ‘ಅಮೃತವರ್ಷಿಣಿ ‘ ಎಂಬ ಕವನ ಸಂಗ್ರಹವನ್ನು ಶ್ರೀ ಎನ್ ಆರ್ ಕುಲಕರ್ಣಿ ಅವರು ಹೊರ ತಂದಿರುವುದು ಔಚಿತ್ಯಪೂರ್ಣವಾಗಿದೆ.

ಶ್ರೀ  ಎನ್. ಆರ್ ಕುಲಕರ್ಣಿ ಅವರು  ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಾಂಬಾ ಗ್ರಾಮದವರು. 30 ವರ್ಷಗಳ ಕಾಲ ಶಿಕ್ಷಕರಾಗಿ ಮಹಾರಾಷ್ಟ್ರದ ಅಕ್ಕಲಕೋಟೆ ತಾಲೂಕಿನ ನಾಗಣಸೂರು ಗ್ರಾಮದ ಎಚ್. ಜಿ. ಪ್ರಚಂಡ  ಪ್ರೌಢಶಾಲೆಯಲ್ಲಿ ಕಾರ್ಯನಿರ್ವಹಿಸಿ ನಂತರ ಮೂರು ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದವರು. 2015 ರಿಂದ ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷರಾಗಿ  ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಸಮಾಜ ಮುಖಿಯಾಗಿ ತಮ್ಮನ್ನು ತೊಡಗಿಸಿಕೊಂಡು ಜನಪ್ರಿಯ ರಾಗಿದ್ದಾರೆ. ಸಾಹಿತ್ಯ ಲೋಕಕ್ಕೆ ಇದೀಗಾಗಲೇ ಇವರ 8 ಕೃತಿಗಳು ಸೇರ್ಪಡೆಗೊಂಡಿವೆ.

 ಇವರ ಸಂಪಾದಕತ್ವದಲ್ಲಿ ಬಂದಿರುವ ‘ಅಮೃತವರ್ಷಿಣಿ’ ಕವನ ಸಂಗ್ರಹದಲ್ಲಿ 20 ಜಿಲ್ಲೆಗಳ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ ಪುಣೆ ,ಮುಂಬಯಿ ನಗರಗಳ ಒಟ್ಟು 75 ಕವಿಗಳ 75 ಕವನಗಳಿವೆ. ಸಿರಿಗನ್ನಡ ವೇದಿಕೆಯ 5ನೇ ಕೃತಿಯಾಗಿ ‘ಅಮೃತವರ್ಷಿಣಿ’ ಪ್ರಕಟಗೊಂಡಿದೆ.

 ಈ ಸಂಕಲನದಲ್ಲಿ ದೇಶಪ್ರೇಮ, ದೇಶಭಕ್ತಿ, ಸ್ವಾತಂತ್ರ್ಯದ ಬಗೆಗಿನ ವೈವಿಧ್ಯಮಯ ಕವನಗಳಿವೆ. ಸಂಪಾದಕರು ಹೇಳಿಕೊಂಡಿರುವಂತೆ  ‘ಹಗೆಯ ಜಾಗದಲ್ಲಿ ನಗೆ ಚಿಗುರಬೇಕು.’ ಇದು ಈ ಸಂಗ್ರಹದ ಆಶಯವೂ ಹೌದು.
ಮುನ್ನುಡಿ
ಇದೊಂದು ಮೂಗಿನ  ಹಾಗೆ ಎಂದಿದ್ದಾರೆ …..ನಿಜ ,ಆದರೆ ನಾಡಿನ ಹಿರಿಯ ಹೆಸರಾಂತ ವಿದ್ವಾಂಸರಾದ ಡಾ. ಹೆಬ್ರಿ ಅವರು ವಜ್ರದ ಮೂಗುತಿಯನ್ನೇ ತೊಡಿಸಿದ್ದಾರೆ ಎನ್ನಬೇಕು.ವಿಶಿಷ್ಟ ರೀತಿಯಲ್ಲಿ ಅವರು ಬರೆದ ಮುನ್ನುಡಿ ಕೃತಿಯನ್ನು ಅಲಂಕರಿಸಿದೆ. ಪ್ರತಿಯೊಂದು ಕವನದ ಒಳಾರ್ಥವನ್ನು ತಳಸ್ಪರ್ಶಿಯಾಗಿ ವಿವರಿಸಿರುವ ಪರಿ ಅನನ್ಯವಾದುದು.


 ‘ ದೇಶಪ್ರೇಮವೆಂದರೆ ನಾನು ನೀನು
 ಕೂಡಿ ಕಟ್ಟುವ ಬದುಕು
 ದೇಶಪ್ರೇಮವೆಂದರೆ ಅದಲ್ಲೋ ಇರುವವರ
ಎದೆಯಲ್ಲಿ ಅರಳುವ ಹೂವು…’

 ಎಂದು ಡಾ. ಹಸೀನಾ ಹೆಚ್ ಕೆ ಬರೆದಿರುವ ಸಾಲುಗಳು ಮನದ ಕದತಟ್ಟಿ ಕಣ್ಣೆದುರು ಭಾವನೆಗಳ  ಸಿಂಚನಗೈಯುತ್ತವೆ. ನಿಜವಾದ ದೇಶ ಪ್ರೇಮವೆಂದರೆ ಇದುವೇನೋ ಎನ್ನುವ ಹಾಗೆ ಚಿಂತನೆಗೆ ಹಚ್ಚುವ ಸಾಲುಗಳಿವು.

ನಾಡ ಹಿರಿಯರ ಕನಸು ಮಣ್ಣಾಗಿಹುದು ಇಲ್ಲಿ !
ಬಂದಿದೆಯೇ ನಮಗೆ ದಿಟದ ಸ್ವಾತಂತ್ರ್ಯ?

 ಎಂದು ಕೇಳುವ ರಜಿತ ಕಾರ್ಯಪ್ಪ ವಿ.ಎನ್ ಅವರ ಕವಿತೆ ವರ್ತಮಾನವನ್ನು ಪ್ರಶ್ನಿಸುತ್ತಿರುವುದು ಸಹಜ. ಇದು ಎಲ್ಲರ ಮನದ ಪ್ರಶ್ನೆಯಾಗಿ ಮೂಡಿಬಂದಿದೆ. ಹಿಂಸೆಯ ಭೀತಿ, ಬಾಂಬುಗಳ ದಾಳಿ, ಧರ್ಮ ಭೇದದ ರೀತಿ, ಸ್ತ್ರೀ ಮಾನಭಂಗದ…..ನಿಜಾರ್ಥದಲ್ಲಿ ಇವಕ್ಕೆಲ್ಲ ಸ್ವಾತಂತ್ರ್ಯ ಸಿಕ್ಕಿದೆ…..ಇಲ್ಲಿ ದೇಶದ ಮಾಜಿ ಪ್ರಧಾನಿ ವಾಜಪೇಯಿ ಅವರ ಸಾಲುಗಳು ನೆನಪಿಗೆ ಬರುತ್ತವೆ.’ ಆಜಾದಿ ಅಭೀ ಅದೂರಿ ಹೈ, ಸಪ್ನೆ ಸಚ್ ಹೋನಾ ಬಾಕಿ ಹೈ.’  ಆದೇ ರೀತಿ ಕವಿ ಕೇಳುತ್ತಿದ್ದಾರೆ ಬಂದಿದೆಯೇ ನಮಗೆ ದಿಟದ ಸ್ವಾತಂತ್ರ್ಯ ? ಎಂದು.
ರಜಿತರವರ ಕವನ ಸತ್ಯವನ್ನು ಮನಗಾಣಿಸುವಂತಹದ್ದು.

ಈ ಸಂಗ್ರಹದಲ್ಲಿಯ ಒಂದು ಉತ್ತಮ ಕವನ
ಪ್ರಸಿದ್ಧ ಕವಿ ಜಯಂತ ಕಾಯ್ಕಿಣಿಯವರ ‘ವೇಷ ‘.ಗಾಂಧಿಯವರನ್ನು ಕಣ್ಣೆದುರಿಗಿರಿಸಿ ಭಾರತದೊಳಗನ್ನು ಚಿತ್ರಿಸಿದ್ದಾರೆ.
ಅವರ ಕವನ ಒಂದೇ ಓದಿಗೆ ದಕ್ಕುವಂತಹದ್ದಲ್ಲ.
ರೂಪಕ ಪ್ರತಿಮೆಗಳನ್ನು ಇಲ್ಲಿ ಬಹಳ ನಾಜೂಕಾಗಿ ಬಳಸಲಾಗಿದೆ. ಡಾ. ಹೆಬ್ರಿಯವರು ಈ ಕವನದ ಬಗ್ಗೆ ‘ ಗಾಂಧಿಯನ್ನು ಹಿನ್ನೆಲೆಯಾಗಿರಿಸಿಕೊಂಡು ರೂಪಕ ಧ್ವನಿಯಿಂದ ಬಡಿದೆಬ್ಬಿಸುವ ಕವನವಿದು.’ ಎಂದಿರುವುದು ಸಮಂಜಸವಾಗಿದೆ.

ನ್ಯಾಯಾಂಗದಲ್ಲಿ ನಂಬಿಕೆಯಿಲ್ಲ
ಅನ್ಯಾಯವೇ ತುಂಬಿದೆಯಲ್ಲೆಲ್ಲ
 ಬಡವನ ಕೇಸು ದವಡೆಗೆ ಮೂಲವಾಗುತ್ತಿದೆ
 ಅಧಿಕಾರ ಗದ್ದುಗೆಗೆ ರಾಜಕಾರಣಿಗಳ ಬೀದಿ
 ರಂಪಾಟ –  (ಸಾಧನೆಯಲ್ಲಿ ಭಾರತ)
ಡಾ. ಗೌರಮ್ಮ ಆರ್ ಏಳಂಗಡಿ.

 ನಾಡಿನುದ್ದಗಲ ಲಂಗು ಲಗಾಮಿಲ್ಲದ
ಭ್ರಷ್ಟಾಚಾರ ಕುದುರೆಯ ನಾಗಾಲೋಟ!!!
 (ನೆಲದೆದೆಯ ಹಾಡು ಪಾಡೂ…)
–  ಗೋಪಾಲ ತ್ರಾಸಿ

 ಬಾಲವಿಲ್ಲದ ನಾಯಕರು
 ಬಲ್ಲಂತೆ ಜಿಗಿದಾಡುವರು (ಬಕಾಸುರ)
– ಡಾ. ದಾಕ್ಷಾಯಿಣಿ ಯಡಹಳ್ಳಿ

ಹೀಗೆ ಅನೇಕ ಕವಿಗಳು ಈ ನೆಲದ ಸ್ವಾತಂತ್ರ್ಯ ದ ಬೆಳವಣಿಗೆಯನ್ನು ಅಕ್ಷರಗಳಲ್ಲಿ ಹಿಡಿದಿಟ್ಟಿದ್ದಾರೆ.


ಡಾ.ಕುಸುಮ ಮುಂಬೈ

One thought on “ಅಮೃತ ವರ್ಷಿಣಿ ಕವನ ಸಂಗ್ರಹ-ಎನ್.ಆರ್.ಕುಲಕರ್ಣಿಯವರ ಸಂಪಾದಕತ್ವದ ಕೃತಿ ಪರಿಚಯ ಡಾ.ಕುಸುಮಾ

Leave a Reply

Back To Top