ಅಂಕಣ ಸಂಗಾತಿ
ಒಲವ ಧಾರೆ.
ರಮೇಶ ಸಿ ಬನ್ನಿಕೊಪ್ಪ
ಸಡಿಲಗೊಳ್ಳುತಿರುವ ಸಹೋದರತ್ವದ ಬಾಂಧವ್ಯ
“..ಪಂಚಮಿ ಹಬ್ಬ ಬಂತು ಅಣ್ಣ ಬರಲಿಲ್ಲ ಕರಿಯಾಕ…”
“..ಕರಿಕಿಯಾ ಕುಡಿಯಾಂಗ ಹಬ್ಬಲಿ ಅವರ ರಸಬಳ್ಳಿ…”
“..ಹೆಣ್ಣಿನ ಜನುಮಕ ಅಣ್ಣ ತಮ್ಮರು ಬೇಕು ಬೆನ್ನು ಕಟ್ಟುವರು ಸಭೆಯೊಳಗೆ ಸಾವಿರ ಹೊನ್ನು ಕಟ್ಟುವರು ಉಡಿಯೊಳಗೆ..”
ಮೇಲಿನ ಜಾನಪದಗಳು ಸಹೋದರತ್ವದ ಮಹತ್ವವನ್ನು ತಿಳಿಸುತ್ತವೆ. ಬದುಕಿನಲ್ಲಿ ಒಡಹುಟ್ಟಿದವರು ಅದರಲ್ಲೂ ಅಕ್ಕತಂಗಿಯರು, ಅಣ್ಣತಮ್ಮಂದಿರರು ಕೂಡಿ ಆಡಿ ಬೆಳೆದ ದಿನಗಳನ್ನು ನೆನಪಿಸಿಕೊಳ್ಳಲಾರದ ದಿನಗಳಿರುವುದಿಲ್ಲ..!!
ಆದರೆ ಇಂತಹ ಸಹೋದರ ಸಂಬಂಧಕ್ಕೆ ಇಂದು ಏನಾಗಿದೆ…?? ಪ್ರತಿ ವಿಷಯದಲ್ಲಿಯೂ ನಾವು ಸಂಬಂಧಗಳಿಗಿಂತ ಸ್ವಾರ್ಥ ಬದುಕಿಗೆ ಮಾರು ಹೋಗಿದ್ದೇವೆ. ಕೊಳ್ಳುಬಾಕ ಸಂಸ್ಕೃತಿಯನ್ನು ಬದುಕಿನ ತುಂಬಾ ತುಂಬಿಕೊಂಡು ಬಾಂಧವ್ಯದ ಮಹತ್ವವನ್ನು ಕಳೆದುಕೊಂಡಿದ್ದೇವೆ. ಹಾಗಾದರೆ ನಾವು ಚಿಕ್ಕವರಿದ್ದಾಗ ನಮ್ಮ ಸಹೋದರಿಯರು ನಮಗೆ ಉಣಿಸುವ, ಉಡಿಸುವ, ಪ್ರೀತಿಯಿಂದ ಲಲ್ಲೆಗೆರೆಯುವ ವಾತ್ಸಲ್ಯ, ತನಗೆ ಏನಾದರೂ, ಯಾರದರೂ ಕೊಟ್ಟರೆ ಹಂಚಿಕೊಂಡು ತಿನ್ನುವ ವಾತ್ಸಲ್ಯದ ಕ್ಷಣಗಳನ್ನು ಇಂದಿನ ಸೋದರಿಯರು ಮರೆತಿರುವರೇ..??
ಒಂದು ಕ್ಷಣ ಹೌದೆನಿಸುತ್ತದೆ..!!
ಅದಕ್ಕೆ ಕಾರಣವೇನು..?
ಇಂದಿನ ದಿನಗಳಲ್ಲಿ ‘ಸಮಾನತೆ’ ಎನ್ನುವ ವಿಶಾಲವಾದ ಅರ್ಥವನ್ನು ಸಂಕುಚಿತಗೊಳಿಸಿಕೊಂಡು ಬಂಧುತ್ವಕ್ಕೆ ಕೊಡಲಿಪೆಟ್ಟು ಹಾಕಿರುವುದನ್ನು ನಾವು ನೋಡುತ್ತಿದ್ದೇವೆ.
ತವರು ಮನೆಯಿಂದ ಪ್ರೀತಿಯನ್ನು ನಿರೀಕ್ಷಿಸುತಿದ್ದ ಸಹೋದರಿಯರು ಹಬ್ಬಗಳಿಗೆ, ಜಾತ್ರೆಗಳಿಗೆ, ಉತ್ಸವಗಳಿಗೆ ಯಾವಾಗ ತಮ್ಮನೋ ಇಲ್ಲವೇ ಅಣ್ಣನೋ ಬಂದು ಕರೆದುಕೊಂಡು ಹೋದಾರು..? ಎಂಬ ನಿರೀಕ್ಷೆಯಿತ್ತು. ಹೊಸ ಸೀರೆ, ಕುಪ್ಪಸ ತಂದಾರು..? ಎಂಬ ಆಸೆ ಅಂದಿನ ಸಹೋದರಿಯರಿಗಿತ್ತು.
ಆದರೆ ಇಂದು..
ಯಾವಾಗ
“ತವರು ಮನೆಯ ಆಸ್ತಿಯಲ್ಲಿಯೂ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು” ಎನ್ನುವುದು ಜಾರಿಗೆ ಬಂತೋ ಅಂದಿನಿಂದ ಮನಸ್ಸುಗಳು ಸಂಕುಚಿತಗೊಂಡಿವೆ.
“ತವರು ಮನೆಯ ಆಸ್ತಿಯಲ್ಲಿ ಪಾಲು ತೆಗೆದುಕೊಂಡೇ ತೀರುತ್ತೇನೆ” ಎನ್ನುವ ಹಠ ಕೆಲವು ಸಹೋದರಿಯರಿಗಿದ್ದರೆ, ಇನ್ನೂ ಕೆಲವು ಸಹೋದರರು “ನಾವೇಕೆ ಕೊಡಬೇಕು” ಎನ್ನುವ ಕಟುವಾದ ಧೋರಣೆಯಿದೆ. ಇದು ಪುರುಷ ಪ್ರಧಾನ ಸಮಾಜದ ಮುದ್ರೆಯನ್ನು ಹೊತ್ತಿದಂತೆಯೇ ಸರಿ..! ಆಸ್ತಿ ವಿಷಯದಲ್ಲಿ ಎಷ್ಟೋ ಕುಟುಂಬಗಳು ಛೀದ್ರಗೋಂಡಿವೆ. ಕೋರ್ಟಿನ ಕಟೆ ಕಟೆಯಲ್ಲಿ ನಿಂತು ಎದುರು ಬದರು ಬಂದಾಗ ಮುಖ ನೋಡಲಾರದಷ್ಟು, ಮಾತನಾಡಲಾರದಷ್ಟು ಬಾಂಧವ್ಯದಲ್ಲಿ ಬಿರುಕು ಬಿಟ್ಟಿದೆ..!!
ಇಂತಹ ಜಗಳಗಳಿಗೆ, ಮನಸ್ತಾಪಗಳಿಗೆ, ಪರಿಹಾರವೇ ಇಲ್ಲವೇ..?
ಪರಿಹಾರ ಇದೆ..!!
ನಾವು ಮೊದಲು ಕಾನೂನನ್ನು ಗೌರವಿಸುತ್ತೇವೆಯೋ.. ಅಷ್ಟೇ ಬಾಂಧವ್ಯವನ್ನು ಗೌರವಿಸಬೇಕು. ಬಾಂಧವ್ಯವಿಲ್ಲದೆ ಬದುಕಿಲ್ಲ. ಕಾನೂನು ಅದು ಕೇವಲ ನಮ್ಮ ನಡವಳಿಕೆಯ ಮೇಲೆ ನಿಯಂತ್ರಿಸಬಹುದು. ಕಾನೂನಿಗಿಂತಲೂ ದೊಡ್ಡದು ಬಾಂಧವ್ಯ..! ಬಾಂಧವ್ಯಕ್ಕಿಂತಲೂ ದೊಡ್ಡದು ವಾತ್ಸಲ್ಯ..!!
ಕಾನೂನಿಗೆ ತಲೆಬಾಗುವವರು, ಬಾಂಧವ್ಯಕ್ಕೆ ತಲೆಬಾಗುವವರು, ಇಬ್ಬರೂ ಒಂದು ಹೆಜ್ಜೆ ಸರಿದು ನಿಂತಾಗ ಎಂತಹ ಸಮಸ್ಯೆಯೂ ಸುಲಭವಾಗಿ ಪರಿಹಾರವಾಗುತ್ತದೆ. ಪ್ರೀತಿಯಿಂದ ತವರು ಮನೆಯವರು ಕೊಡುವ ಉಡುಗೊರೆಗಳನ್ನು ಸ್ವೀಕರಿಸುವ ದೊಡ್ಡ ಮನಸ್ಸು ಸಹೋದರಿಯರಿಗೆ ಇರಬೇಕು..! ತವರು ಮನೆಯಿಂದ ಹೊರಹೋದ ಸಹೋದರಿಯರಿಗೆ ನಾವು ಏನನ್ನಾದರೂ ಒಂದಿಷ್ಟು ಉಡುಗೊರೆಯನ್ನು ಕೊಡಬೇಕು. ಅದು ಹಣವಾಗಿರಲಿ, ಬಂಗಾರವಾಗಿರಲಿ, ಹೊಲ ಗದ್ದೆಗಳಾಗಿರಲಿ, ಯಾವುದೇ ಇರಲಿ ಅವರು ಈ ಮನೆಯಲ್ಲಿ ಹುಟ್ಟಿದ್ದಾರೆ. ಈ ಮನೆಯಲ್ಲಿಯೇ ಬೆಳೆದಿದ್ದಾರೆ.. ಎನ್ನುವ ವಾತ್ಸಲ್ಯ ಪೂರಿತವಾದ ಮಾತುಗಳು ಸಹೋದರರಿಂದ ಬರಬೇಕಾಗಿದ್ದು ಅವರ ಕರ್ತವ್ಯ.
ಅದರಂತೆ..
“ಇಷ್ಟು ದಿವಸ ಸಾಕಿ, ಸಲುಹಿ ನಮ್ಮನ್ನು ಒಂದು ದಡಕ್ಕೆ ಸೇರಿಸಿದ್ದಾರೆ. ಒಂದು ಉತ್ತಮವಾದ ಕುಟುಂಬಕ್ಕೆ ನಮ್ಮನ್ನು ಕಳುಹಿಸಿದ್ದಾರೆ. ತವರು ಮನೆಯವರು ಪ್ರೀತಿಯಿಂದ ಕೊಡುವ ಉಡುಗರೆಯನ್ನು ಪ್ರೀತಿಯಿಂದಲೇ ಸ್ವೀಕರಿಸೋಣ. ಇಂತಿಷ್ಟೇ ಕೊಡಬೇಕೆಂಬ ಹಠವೂ ಬೇಡ. ತವರು ಚೆನ್ನಾಗಿರಲಿ” ಎನ್ನುವ ವಾತ್ಸಲ್ಯಭರಿತ ಮಾತುಗಳು ಸಹೋದರಿಯರಿಂದಲೂ ಬರಬೇಕು. ಆಗ ಬಾಂಧವ್ಯಕ್ಕೆ ಧಕ್ಕೆ ಬರುವ ಮಾತೆ ಇಲ್ಲ.
ಕಾನೂನುಗಳು ಕೇವಲ ಮಾರ್ಗದರ್ಶಿ ಸೂತ್ರಗಳು. ಕಾನೂನೇ ಅಂತಿಮವಲ್ಲ ; ಬದುಕು ಅಂತಿಮ. ಬದುಕಿನಲ್ಲಿ ಬರುವ ವಾತ್ಸಲ್ಯಗಳು, ಸಂಬಂಧಗಳು, ಪ್ರೀತಿ, ಕಷ್ಟ -ಸಂಕಟಗಳಿಗೆ ಮಿಡಿಯುವ ಹೃದಯ ಮುಖ್ಯವೆಂದು ಭಾವಿಸಿದಾಗ ಇದ್ಯಾವದು ಕೂಡ ನಮಗೆ ದೊಡ್ಡದಾಗಿ ಕಾಣುವುದಿಲ್ಲ.
ಸಹೋದರತ್ವದ ಮಾತು ಇಬ್ಬರೂ ಕಡೆಯಿಂದ ಬಂದರೆ ಇಂತಹ ವಿಘಟಿತ ಸಂಸಾರಕ್ಕೆ, ಒಡೆದು ಹೋದ ಕುಟುಂಬಕ್ಕೆ ಆಸ್ಪದವೇ ಇರುವುದಿಲ್ಲ.
ಯಾರೋ ಮಾತು ಕೇಳಿ ಮನಸ್ತಾಪ ಮಾಡಿಕೊಂಡು ತವರನ್ನು ಬಿಟ್ಟುಕೊಡುವದಾಗಲಿ ಒಳ್ಳೆಯದಲ್ಲ. ಹಾಗೇಯೇ ಈಗಿರುವ ಕಾನೂನಿನ ಸೂಕ್ಷ್ಮಗಳನ್ನು ಅರ್ಥೈಸಿಕೊಂಡಾದರೂ ಸಹೋದರತ್ವ ಉಳಿಸಿಕೊಳ್ಳಲು ಸಹೋದರರು ದೊಡ್ಡ ಮನಸ್ಸು ಮಾಡಬೇಕು. ಈ ಪ್ರಕ್ರಿಯೆ ಎರಡು ಕಡೆಯಿಂದ ಆಗಬೇಕಾದುದು ಅಗತ್ಯ.
ಇಲ್ಲದೇ ಹೋದರೆ..
ಕೋರ್ಟ, ದಾವೆ, ವಕೀಲರು, ವಕೀಲರ ಫೀಜು, ಹಿಯರಿಂಗ್, ಸಾಕ್ಷಿ, ದಾಖಲೆಗಳು, ನ್ಯಾಯ ತೀರ್ಮಾನದ ಮೂಂದುಡಿಕೆ, ಅಂತಿಮವಾಗಿ ತೀರ್ಮಾನ..!!
ಇದಲ್ಲದೆ..
ಹಣಕಾಸಿನ ಮುಗ್ಗಟ್ಟು, ಕಛೇರಿಯ ಅಲೆಯುವಿಕೆ, ಮಾನಸಿಕ ಕಿರಿಕಿರಿ, ದ್ವೇಷ, ಮುರಿದುಹೋದ ಸಂಬಂಧ, ಹತಾಶೆಯ, ಗೆದ್ದರೂ ಸೋತೆನೆಂಬ ನಿರುತ್ಸಾಹ, ಸೋತರಂತೂ ಅವಮಾನ….
ಅಬ್ಬ ಅಬ್ಬಾ…!!
ಇಷ್ಟೆಲ್ಲಾ ಆದ ಮೇಲೆ “ಎಲ್ಲರೂ ಸಮನಾಗಿ ಹಂಚಿಕೊಳ್ಳಿರಿ” ಎನ್ನುವ ತೀರ್ಮಾನ..!!
ಹಾಗಾಗಿ…
ಮುರಿಯುವ ಮುನ್ನ ಬಾಂಧವ್ಯವನ್ನು ಉಳಿಸಿಕೊಳ್ಳಿ, ಮನಸ್ಸು ಕೆಡುವ ಮುನ್ನ ಮನಸ್ಸು ಬದಲಾಯಿಸಿಕೊಳ್ಳಿ, ನೀವೋ ಇಲ್ಲವೇ ಅವರೋ ಯಾರಾದರೊಬ್ಬರು ತ್ಯಾಗಿಗಳಾಗಿ ಬಿಡಿ..!!
ಅಷ್ಟಕ್ಕೂ..
ಅದು ಹಿರಿಯರು ಮಾಡಿದ ಸಂಪತ್ತು..! ಎನ್ನುವ ಅಳಕು ನಿಮ್ಮೊಂದಿಗೆ ಇದ್ದರೆ ವಿಶಾಲವಾದ ಮನಸ್ಸು ನಿಮ್ಮದಾಗಿ ಬಿಡುತ್ತದೆ.
ಒಂದು ಸಲ,
ಬಾಲ್ಯವನ್ನು ನೆನಪು ಮಾಡಿಕೊಳ್ಳಿ..ಸವಿ ಸವಿ ನೆನಪುಗಳು ನಿಮ್ಮನ್ನು ಕಾಡಿದರೇ ಮತ್ತೇ ಮೂಡೀತು ವಾತ್ಸಲ್ಯ…!!
ಎಲ್ಲರ ಸಹೋದರತ್ವದ ಬಾಂಧವ್ಯ ಸಡಿಲವಾಗುವ ಸಮಯದಲ್ಲಿ ಗಟ್ಟಿಯಾಗಿ ಉಳಿದು, ಹೃದಯ ಹಗುರಾಗಲಿ ಎಂಬ ಸದಾಶಯದೊಂದಿಗೆ…
ರಮೇಶ ಸಿ ಬನ್ನಿಕೊಪ್ಪ
ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಕವನ ಪ್ರಕಟವಾಗಿವೆ.
ಸಮಯೋಚಿತ ಉತ್ಕೃಷ್ಟ ಲೇಖನ. ಅಭಿನಂದನೆಗಳು ರಮೇಶ್ ಅವರೇ.