‘ಅಡುಗೆ’ ಎಂ. ಆರ್. ಅನಸೂಯರವರ ವಿಶೇಷ ಲೇಖನ

ವಿಶೇಷಬರಹ

ಎಂ. ಆರ್. ಅನಸೂಯರವರ ವಿಶೇಷ ಲೇಖನ

‘ಅಡುಗೆ’

ಅಡುಗೆ ಎಂದರೆ  ಪಾಕಕ್ರಿಯೆ. ಆಹಾರ ಪದಾರ್ಥಗಳನ್ನು  ಹಿತಮಿತವಾದ  ಉಪ್ಪು ಹುಳಿ ಕಾರಗಳೊಡನೆ  ಹದವಾಗಿ ಬೇಯಿಸಿ ಮಾಡುವಂಥ ಪ್ರಕ್ರಿಯೆ ಅದೊಂದು ರೀತಿಯಲ್ಲಿ ಧ್ಯಾನವೇ ಸರಿ . ದಾಸರು ಹೇಳಿದಂತೆ ” ಎಲ್ಲರು ಮಾಡುವುದು ಹೊಟ್ಟೆಗಾಗಿ ,ಗೇಣು ಬಟ್ಟೆಗಾಗಿ” ಎಂಬಂತೆ  ಹೇಗೆ ಹಸಿವೆಯು ಒಂದು ನಿರಂತರ ದೇಹ ಪ್ರಕ್ರಿಯೆಯಾಗಿರುವುದೋ  ಅಲ್ಲಿಯ ತನಕ ಅದನ್ನು ತಣಿಸುವ ಆಹಾರ ಸಿದ್ಧಪಡಿಸುವ ಅಡುಗೆಯು ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ . ನಿರಂತರವಾದ ಅವಶ್ಯಕತೆಯೇ ವೈವಿಧ್ಯಮಯ ಪಾಕಗಳಿಗೆ ಪೂರಕ .

ಅಡುಗೆ ತಯಾರಿಕೆಯಲ್ಲಿ ಎರಡು ವಿಧಗಳಿವೆ ಬೇಯಿಸದೆ ಮಾಡುವ ಅಡುಗೆ ಮತ್ತು ಬೇಯಿಸಿ ಮಾಡುವ ಅಡುಗೆ.  ಬೇಯಿಸದೆ ಮಾಡುವ ಅಡುಗೆಗಳಲ್ಲಿ ಕೋಸಂಬರಿ, ಸಿಹಿ ಅವಲಕ್ಕಿ ಹಾಗೂ ಹಣ್ಣುಗಳ ರಸಾಯನ  ಹಾಗೂ ವಿವಿಧ ರೀತಿಯ  ಪಾನಕಗಳು ಮುಖ್ಯವಾಗುತ್ತವೆ. ಆದರೂ ಸಹಾ ಬೇಯಿಸಿದ ಅಡುಗೆಗೆ ಪ್ರಥಮ ಪ್ರಾಶಸ್ತ್ಯ. ಸಸ್ಯಾಹಾರಿ ಮತ್ತು ಮಾಂಸಾಹಾರಿಗಳೇ ಇರಲಿ ಮತ್ತೊಬ್ಬರ ಆಹಾರ ಪದ್ಧತಿಯ ಬಗ್ಗೆ ಅವಹೇಳನ ಮಾಡದೆ ಪರಸ್ಪರ ಗೌರವಿಸಬೇಕು.

ನಾವಿಂದು  ಬಾಯಿ ಚಪ್ಪರಿಸಿಕೊಂಡು ತಿನ್ನುವ ರುಚಿಕರವಾದ ಅಡುಗೆಗಳನ್ನು ಮೊಟ್ಟ ಮೊದಲ ಬಾರಿಗೆ ಸಂಶೋಧಿಸಿದಂಥ ಪುಣ್ಯಾತ್ಮರಿಗೆ ಎಷ್ಟು  ಋಣಿಯಾಗಿದ್ದರೂ ಸಾಲದು. ಆದರೂ ರುಚಿಕರ ಖಾದ್ಯಗಳ ಪಿತಾಮಹರೂ ಇಂದಿಗೂ ಅನಾಮಿಕರೇ ಆಗಿದ್ದಾರೆ ಎಂಬುದನ್ನು ಎಲ್ಲರೂ ಒಪ್ಪಲೇಬೇಕು .ಅದೊಂದು ರೀತಿಯಲ್ಲಿ  ವಿವಿಧ ಹಂತಗಳಲ್ಲಿ  ಯಶಸ್ಸು ಕಂಡ  ಪ್ರಯತ್ನ ಆಗಿರ ಬಹುದೇ ?

ಅಡುಗೆಯನ್ನು ಇಷ್ಟಪಟ್ಟು ಖುಷಿ ಖುಷಿಯಾಗಿ ಮಾಡಿದಾಗ ಅದೊಂದು  ಸಡಗರದ  ಆಚರಣೆ. ಇಷ್ಟವಿಲ್ಲದೆ  ಕಷ್ಟದಿಂದ ಗೊಣಗುತ್ತ ಮಾಡಿದರೆ ಅದೊಂದು ಯಾಂತ್ರಿಕ ಕ್ರಿಯೆ ಅಷ್ಟೇ ನಗುನಗುತ್ತ  ಶುಚಿರುಚಿಯಾದ ಅಡುಗೆ ಮಾಡಿ ಬಿಡಿಸುವುದು ಸಹಾ ಒಂದು ಕಲೆಯೇ ಎಂಬುದರಲ್ಲಿ ಎರಡು ಮಾತೇ  ಇಲ್ಲ ಆದ್ದರಿಂದ ಹಸಿವನ್ನು ತಣಿಸುವ ಮಾತೆಯರಿಗೆ ಅನ್ನಪೂರ್ಣೆ ಎನ್ನುವರು. ಇಂದು ದೂರದರ್ಶನದ ಎಲ್ಲಾ ವಾಹಿನಿಗಳು ಅಡುಗೆಯ ವಿವಿಧ ಕಾರ್ಯಕ್ರಮಗಳಿಗೆ  ಆಕರ್ಷಕವಾದ ಶೀರ್ಷಿಕೆಗಳೊಂದಿಗೆ ವೇಳೆಯನ್ನು ನಿಗದಿ ಪಡಿಸಿರುವುದು ಮತ್ತು ಯು ಟ್ಯೂಬ್ ನ ಅಡುಗೆ ಕಾರ್ಯಕ್ರಮಗಳಿಗೆ ಸಿಕ್ಕ ಜನಪ್ರಿಯತೆಯನ್ನು ಗಮನಿಸಿದರೆ  ಸಾಕು ಮನೆ ಮನಗಳಲ್ಲಿ  ನಮ್ಮ ಅಡುಗೆಗೆ ಸಿಕ್ಕ ಮಹತ್ವ ಮನದಟ್ಟಾಗುತ್ತದೆ.  ದೇವರ ಕೋಣೆಯಲ್ಲದ ಮನೆಯಿರಬಹುದು ಆದರೆ ಅಡುಗೆ ಕೋಣೆ ಇಲ್ಲದ  ಮನೆಯೇ ಇಲ್ಲ.. ಇದೊಂದು ಸಾರ್ವತ್ರಿಕ ಹಾಗೂ ಸಾರ್ವಕಾಲಿಕ ಸತ್ಯ. ಏಕೆಂದರೆ  ಅಡುಗೆಯಿಲ್ಲದೆ ನಮ್ಮೆಲ್ಲರ ತನುಮನಗಳು ಆರೋಗ್ಯದಿಂದಿರಲು  ಸಾಧ್ಯವಿಲ್ಲ. ‘ಹೊಟ್ಟೆಗೆ  ಹಿಟ್ಟಿದ್ದರೆ  ಜುಟ್ಟಿಗೆ ಮಲ್ಲಿಗೆ” ಯನ್ನು ಮುಡಿಯುವ  ಮನಸ್ಥಿತಿ ಇರುತ್ತದೆ . ಮದುವೆ ಕಾರ್ಯಗಳಲ್ಲಿ “ಮದುವೆ ಊಟ ” ಕ್ಕೆ ಸಿಗುವ ಪ್ರಾಮುಖ್ಯತೆ  ಇನ್ಯಾವುದಕ್ಕೂ ಸಿಗುವುದಿಲ್ಲ.

ಆಹಾರವು ಸಕಲ ಜೀವಿಗಳ ಮೂಲಭೂತ  ಅವಶ್ಯಕತೆಗಳಲ್ಲಿ  ಒಂದು. ಪ್ರಾಣಿ ಪಕ್ಷಿಗಳು ಆಹಾರವನ್ನು ಸೇವಿಸುವಾಗ  ರುಚಿ ಕೇಳುವುದಿಲ್ಲ. ಆದರೆ ನಾವು ಮನುಷ್ಯರು ಮಾತ್ರ ಆಹಾರದ ವಿಷಯದಲ್ಲಿ ರುಚಿಗೆ ಮೊದಲ ಆದ್ಯತೆಯನ್ನು ಕೊಡುತ್ತೇವೆ. ಈ ಪ್ರವೃತ್ತಿಯೆ  ವಿವಿಧ ರುಚಿಗಳುಳ್ಳ ವೈವಿಧ್ಯಮಯ ಖಾದ್ಯ ತಯಾರಿಕೆಗೆ  ಕಾರಣವೇ ಆಗಿದೆ  ಎಂಬುದರಲ್ಲಂತೂ ಎರಡು ಮಾತಿಲ್ಲ . ಹಸಿದ  ಹೊಟ್ಟೆಯ ಮುಂದೆ  ಟಿ.ವಿ , ಮೊಬೈಲ್ ಹಾಗೂ ಸಿನಿಮಾ ಯಾವುದು ಬೇಕಾಗುವುದಿಲ್ಲ. ಹಸಿದಿರುವ ಹೊಟ್ಟೆಯನ್ನು ತಣಿಸುವ ಶಕ್ತಿಯಿರುವುದು ಅಡುಗೆಗೆ ಮಾತ್ರ  ಆದ್ದರಿಂದಲೇ ಅನ್ನ ದೇವರು ಅನ್ನುವುದು. ಇಂತಹ ಒಂದು ಶ್ರೇಷ್ಠ ಭಾವನೆಯಿಂದಲೇ  ನಾವು ತಿನ್ನುವಂಥ  ಆಹಾರವನ್ನು ವ್ಯರ್ಥ ಮಾಡುವುದಾಗಲಿ , ಬಡಿಸಿಕೊಂಡು ತಿನ್ನದೆ ಕಸದ ತೊಟ್ಟಿಗೆ ಎಸೆಯುವುದು ಮಾಡಬಾರದು. ಏಕೆಂದರೆ  ನಾವು ತಿನ್ನುವ ಪ್ರತಿಯೊಂದು ಧಾನ್ಯದ ಹಿಂದೆ ರೈತನು ಒದಗಿಸುವ  ನೀರು, ಗೊಬ್ಬರದ  ಜೊತೆ ಜೊತೆಯಲ್ಲೇ ತಿಂಗಳಾನುಗಟ್ಟಲೆ ರೈತರ ಪರಿಶ್ರಮದ  ಬೆವರ ಹನಿಗಳಿರುತ್ತವೆ ಎಂಬುದನ್ನು ಮರೆಯಬಾರದು. ಇದು ಅನ್ನ ದೇವರಿಗೆ ನಾವು ನೀಡುವ ಗೌರವ ಕೂಡಾ.
“ಆಡು ಮುಟ್ಟದ ಸೊಪ್ಪಿಲ್ಲ “ಎನ್ನುವಂತೆ ಅಡುಗೆಮನೆಯಿಲ್ಲದ ಮನೆಯೇ ಇಲ್ಲ ಎನ್ನಬಹುದು. ಹೊಗೆ ಹತ್ತಿ ಮಾಸಲು ಬಣ್ಣದ  ಗೋಡೆಗಳ  ಚಿಕ್ಕ  ಕಿಟಕಿಯ ಸೌದೆ ಒಲೆಯಿದ್ದ ಅಡುಗೆ ಮನೆ ಸ್ಥರೂಪವೇ ಬದಲಾಗಿ ಇಂದಿನ ಅಡುಗೆ ಮನೆಗಳು ಆಯಾ  ಮನೆ ಯಜಮಾನಿಯ ಅಭಿರುಚಿಯನ್ನು ಎತ್ತಿ ಹಿಡಿಯುತ್ತವೆ. ಮೊದಲಿನಂತೆ ಅಡುಗೆಮನೆಯ ಅಸ್ತವ್ಯಸ್ತತೆಯನ್ನು ಮರೆ ಮಾಚಲು ಅಡ್ಡಗೋಡೆ  ಹಾಗೂ ಪರದೆಗಳ ಅವಶ್ಯಕತೆಯಿಲ್ಲ ” ಓಪನ್ ಕಿಚನ್ ‘ ಎನ್ನುವುದು ಅಡುಗೆ ಮನೆಗೆ ಒಂದು ರೀತಿ  ಆಧುನಿಕ  ಸ್ಪರ್ಶವನ್ನೇ ನೀಡಿದೆ

ನಮ್ಮ ಕಾಲದಲ್ಲಿ ಬಾಲ್ಯದಿಂದಲೇ ಹೆಣ್ಣುಮಕ್ಕಳಿಗೆ ಅಡುಗೆ ಆಟದಲ್ಲಿ ಆಸಕ್ತಿ. ಆಟದ ಸಾಮಾನುಗಳೂ ಸಹಾ ಅಡುಗೆ ಮನೆಯ ಪರಿಕರಗಳು. ಮದುವೆ ಮಾಡುವ ವೇಳೆಗೆ ಹೆಣ್ಣು ಅಡುಗೆ ಕಲಿತಿರಬೇಕು ಎಂಬ ಅಲಿಖಿತ ಕಾನೂನಿನ ಜೊತೆಗೆ ರುಚಿರುಚಿಯಾದ ಅಡುಗೆ ಮಾಡಿ ಬಡಿಸಿ ಗಂಡನ ಮನಸ್ಸನ್ನು ಗೆಲ್ಲಬೇಕೆಂಬುದು ಎಲ್ಲತಾಯಂದಿರ ಕಿವಿಮಾತು ಕೂಡ .ಇದು ಅಜ್ಜಿಯಿಂದ ಅಮ್ಮನಿಗೆ , ಅಮ್ಮನಿಂದ ಮಗಳಿಗೆ ಬರುವಂಥ ಪರಿಪಾಠ .ಈ ಮಾತು ಸತ್ಯವೆಂಬುದು ಮದುವೆಯ ಹೊಸ ಕಾವು ಆರಿದ ಬಳಿಕವೇ ಅರಿವಾಗುವುದು. ಅಮ್ಮನಿಂದಲೇ ಅಡುಗೆ ಕಲಿತರೂ  ಅಮ್ಮನ  ಕೈ ರುಚಿಗೆ ಹಂಬಲಿಸುವುದು  ನಾವೂ ಅಮ್ಮ ,ಅಜ್ಜಿಯರಾದರೂ ನಿಂತಿಲ್ಲ.  ನನಗೆ ತಿಳಿದಂತೆ ಅಡುಗೆ ಕಲಿಯ ಬೇಕಾಗಿರುವುದು ಮೊದಲಿಗಿಂತಲೂ  ಈಗ ಮುಖ್ಯವೇ ಆಗಿದೆ  ಏಕೆಂದರೆ  ಈಗ ಕೂಡು ಕುಟುಂಬಗಳಿಂದ  ಕಲಿಯುವ ಸಂದರ್ಭವೇ ಇಲ್ಲದಂಥ ಈಗಿರುವ  ನ್ಯೂಕ್ಲಿಯರ್ ಪ್ಯಾಮಿಲಿಗಳಿಂದಾಗಿ.

ಅಡುಗೆ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತ ಎಂಬ ಮನೋಭಾವ ನಿಧಾನವಾಗಿ ಬದಲಾಗುತ್ತಿರುವ ಕಾಲದಲ್ಲಿ ಅಡುಗೆಯನ್ನು ಗಂಡು ಮಕ್ಕಳು ಕಲಿಯುವ ಅನಿವಾರ್ಯತೆ ಹಿಂದಿಗಿಂತ ಹೆಚ್ಚಾಗಿದೆ.  ನಳಪಾಕ ಎಂಬುದು ಮೊದಲಿಗಿಂತ ಪ್ರಸ್ತುತವಾಗುತ್ತಿದೆ. ಜಿಹ್ವಾಚಾಪಲ್ಯದ  ಇಂದಿನ ಯುವ ಜನತೆ  ವಿವಿಧ  ಆಹಾರ ಪದ್ಧತಿಗಳ  ರುಚಿಕರ  ಖಾದ್ಯಗಳಿಗೆ  ಮನ  ಸೋತಿದ್ದಾರೆ . ಈಗಂತು ವಿವಿಧ ಖಾದ್ಯಗಳ ರುಚಿಯಿಂದಲೇ ಹೆಸರುವಾಸಿಯಾದ ಹೋಟೆಲ್ ಗಳಿವೆ. ಉದಾ : ಮೈಸೂರಿನ ಮೈಲಾರಿ ಹೋಟೆಲ್ ಮತ್ತು ಬೆಂಗಳೂರಿನ ವಿದ್ಯಾರ್ಥಿ ಭವನ ಇವುಗಳು ಮಸಾಲೆ ದೋಸೆಗೆ  ಹೆಸರುವಾಸಿಯಾಗಿವೆ. ಇದೆಲ್ಲ ಅಡುಗೆಗೆ  ಸಿಕ್ಕ ಮಾನ್ಯತೆ ತಾನೇ .
ಅಡುಗೆಯ  ಬಗ್ಗೆ ಸ್ವಲ್ಪ ಪ್ರಾಥಮಿಕ ತಿಳಿವಳಿಕೆಯಿದ್ದಲ್ಲಿ ಇಂದು ನವವಿವಾಹಿತೆಯೂ ಸಹಾ ಪರಿಣತಿ ಸಾಧಿಸಲು  ನೆರವಾಗುವ ಮಾಧ್ಯಮ ಗಳು ಇಂದಿನ ಹೆಣ್ಣುಮಕ್ಕಳಿಗೆ ಸಿಕ್ಕ ವಿಶೇಷವಾದ ಅವಕಾಶವೇ ಸರಿ. ಅಡುಗೆಯಲ್ಲಿ  ಪರಿಣತಿ ಪಡೆದು ಅನೇಕ ಹೆಣ್ಣುಮಕ್ಕಳು ಅಡುಗೆ ಕಲೆಯನ್ನು ಒಂದು ಉದ್ಯಮವನ್ನಾಗಿ ಮಾಡಿಕೊಂಡು  ಪ್ರಗತಿ ಸಾಧಿಸುತ್ತಿದ್ದಾರೆ ಎಂಬುದಕ್ಕೆ ಧೃತಿ ಮಹಿಳಾ ಮಾರುಕಟ್ಟೆಯು  ಜೀವಂತ ಸಾಕ್ಷಿಯಾಗಿದೆ . ಅನೇಕ ಹೆಣ್ಣುಮಕ್ಕಳು  ಚಿಕ್ಕಪ್ರಮಾಣದಲ್ಲಿ  ಊಟ ,ತಿಂಡಿಗಳ ಮೆಸ್   ನಡೆಸುತ್ತಿರುವುದು ,  ಪಿ. ಜಿ. ಗಳನ್ನು ನಡೆಸಲು  ಅವರ ಕೈ ರುಚಿಯ ಅಡುಗೆಯಲ್ಲಿ ಅವರಿಗಿರುವ  ಅದಮ್ಯವಾದಂಥ ಆತ್ಮವಿಶ್ವಾಸವೇ  ಕಾರಣ ಎಂಬುದರಲ್ಲಿ ಸಂದೇಹವೇ ಇಲ್ಲ .  ನಾವೆಲ್ಲರೂ ಅಡಗೂಲಜ್ಯಿ ಕಥೆಗಳನ್ನು ಕೇಳಿ ಬೆಳೆದವರೇ ಅಡುಗೂಲಜ್ಜಿ ಎಂದರೆ  ಹಣವನ್ನು ಪಡೆದು  ಅಡುಗೆ  ಮಾಡಿ ಊಟ ಕೊಡುವವಳು.  ಆ ದಿನಗಳಲ್ಲೇ  ಬಡ ಹೆಣ್ಣುಮಕ್ಕಳು ಅಡುಗೆಯನ್ನು ಜೀವನೋಪಾಯದ ಮಾರ್ಗವಾಗಿ ಕಂಡು ಕೊಂಡಿದ್ದರು.  
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬ ಹರಿ ದಿನಗಳಿಗೆ ತನ್ನದೇ ಆದ ವಿಶಿಷ್ಟ ಆಚರಣೆಯೊಂದಿಗೆ  ಹಬ್ಬದ ಅಡುಗೆಯ  ವೈವಿಧ್ಯ ತೆ  ಹಾಗೂ ವಿಶೇಷತೆಯಿದೆ. ಸಂಕ್ರಾಂತಿ ದಿನದಂದು ಮಾಗಿಕಾಲಕ್ಕೆ ಬೇಕಾದ ಎಳ್ಳು ಬೆಲ್ಲ , ಯುಗಾದಿಗೆ ಬೇವು ಬೆಲ್ಲದೊಂದಿಗೆ. ಹೋಳಿಗೆ  ಬೇಕು . ಹೀಗೆ ಹಬ್ಬಗಳು ಬದುಕಿನ ಯಾಂತ್ರಿಕತೆ ಹಾಗೂ ಅಡುಗೆಯ ಏಕತಾನತೆಯನ್ನು ಮುರಿದು ಜೀವನೋತ್ಸಾಹ ತುಂಬುತ್ತವೆ.
ಮನೆಮಂದಿಯ  ಹಸಿವನ್ನು ತಣಿಸುವ ಅಡುಗೆಯನ್ನು ಮಾಡಿ ಬಡಿಸುವ  ಗೃಹಿಣಿಯ  ಕೈಯಲ್ಲೇ  ಕುಟುಂಬದ ಆರೋಗ್ಯದ ಹೊಣೆಗಾರಿಕೆಯೂ ಇದೆಯೆಂದರೆ ತಪ್ಪಾಗಲಾರದು. ಪಥ್ಯವೇ ಅಡುಗೆಯಾಗದೆ , ಅಡುಗೆಯಲ್ಲಿ ಪಥ್ಯ ವಿರಬೇಕು ಅಂದರೆ ಅಡುಗೆಯಲ್ಲೇ ನಮ್ಮ ಆರೋಗ್ಯಕ್ಕೆ ಅಗತ್ಯವಾದಂಥ  ಆಹಾರ ರೂಪದ  ಔಷಧಿಗಳಿರಬೇಕು . ನಾವು  ತಿನ್ನುವಂಥ ಆಹಾರವು ನಮ್ಮ ಆರೋಗ್ಯಕ್ಕೆ  ಪೂರಕವಾಗಿರಬೇಕು. ಹಣವಿದ್ದವರು ಮಾತ್ರವೇ ಪೌಷ್ಠಿಕ ಆಹಾರ ತಿನ್ನಲು ಸಾಧ್ಯ ಎಂಬುದು ನಮ್ಮ ಅನಿಸಿಕೆಯಾಗಿದ್ದರೆ  ಅದು ತಪ್ಪು.  ಸ್ಥಳೀಯವಾಗಿ ಸಿಗುವ ಸೊಪ್ಪು, ತರಕಾರಿ, ಮೊಳಕೆ ಕಟ್ಟಿದ ಕಾಳುಗಳು, ರಾಗಿ ಹಾಗೂ ಸಿರಿಧಾನ್ಯ ಗಳಿಂದ ಪೌಷ್ಠಿಕ ಆಹಾರ ತಯಾರಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.


ಒಟ್ಟಾರೆ ಕುಟುಂಬದ  ಹಾಗು ಸಮಾಜದ ಸ್ವಾಸ್ಥ್ಯಕ್ಕೆ ಅತ್ಯಗತ್ಯ ಹಾಗು ಅನಿವಾರ್ಯವಾದ  ಅಡುಗೆಯ ಮಹತ್ವವನ್ನು ನಾವು ಅಲ್ಲಗೆಳೆಯಲು ಸಾಧ್ಯವೇ ?  ಅಗತ್ಯವಾದ ಬಟ್ಟೆ, ವಸತಿಗಳು ಇಲ್ಲದೆ  ಬದುಕಬಹುದಾದರೂ ಆಹಾರವಿಲ್ಲದೆ ನಮ್ಮ  ಅಸ್ತಿತ್ವ ಇಲ್ಲವೇ ಇಲ್ಲ. ಅಡುಗೆಯ ಘಮಲಿಗೆ ಬಾಯಿ ನೀರೂರಿಸುತ್ತಾ  ಹಾತೊರೆಯದ  ಮನುಜರುಂಟೇ  ! ಇಷ್ಟೊಂದು ಅಗತ್ಯವಾದ ಅಡುಗೆಯ  ಭಾಗ್ಯವಿಲ್ಲದೆ ನಮ್ಮ ಆರೋಗ್ಯ ಭಾಗ್ಯವೂ ಇಲ್ಲ ! ನಮ್ಮ ಬದುಕಿನ ಅವಿಭಾಜ್ಯ ಅಂಗವಾದ  ಅಡುಗೆಯಿಲ್ಲದೆ ನಾವು ಹೇಗಿರಲು  ಸಾಧ್ಯ ಎಂಬುದು  ಊಹೆಗೆ ನಿಲುಕದ್ದು !


ಎಂ. ಆರ್. ಅನಸೂಯ

Leave a Reply

Back To Top