ಧೂಳು ತುಂಬಿದ ಕಥೆ ನಂರುಶಿ ಕಡೂರು ಅವರ ಹೊಸ ಕಥೆ

ಕಥಾ ಸಂಗಾತಿ

ಧೂಳು ತುಂಬಿದ ಕಥೆ

ಒಂದೇ ಉಸಿರಲಿ ಓಡಿ, ಓಡಿ ಏದುಸಿರು ಬಿಡುತ್ತ ಹಾಲಜ್ಜ, ಹಾಲಜ್ಜ, ಎನ್ನುತ್ತಲೇ ಬಂದ ಮೂರ್ತಿ. ಅಷ್ಟು ದೂರದಿಂದ, ಇಷ್ಟು ಬೇಗ ಓಡಿ ಬಂದಿನೆಂದು ಅವ್ನಿಗೆ ಗೊತ್ತೇ ಇರ್ಲಿಲ್ಲ.
        ಅಜ್ಜ ಎಲ್ಲಿದಿಯಾ? ಒಳಗಡೆ ಹೋಗುತ್ತ, ಅಡುಗೆ ಕೋಣೆಯಲ್ಲಿ ಒಂಟಿಯಾಗಿ ಕುಂತು ಊಟ ಮಾಡುತ್ತಿದ್ದ ಹಾಲಜ್ಜನ ನೋಡಿ, ಸದ್ಯ ಈವಜ್ಜ ಐತೆ.
    ಅಜ್ಜನ ಪಕ್ಕದಲ್ಲಿ ಹಾಸಿದ್ದ ಚಾಪಿಲಿ ಒಂದೇ ಸಲ ದೊಪ್ಪನೇ ಕೂತ್ಕೊಂಡ. ಊಟ ಮಾಡುತ್ತಿದ್ದ ಅಜ್ಜನನ್ನು ನೋಡಿ ತಕ್ಷಣ ಏನ್ ಹೇಳ್ಬೇಕೆಂದು ತಿಳಿಯದೇ ಅಜ್ಜನ ಮುಖವನ್ನೇ ನೋಡುತ್ತ ಒಂದ್ನಿಮಿಷ ಗರ ಬಡ್ದಾವ್ನಂಗೆ ಸ್ತಬ್ಧನಾದ.
       ಅಜ್ಜಿ ಕಳಕೊಂಡ ಅಜ್ಜ, ಒಬ್ಬಂಟಿಯಾಗಿ ಈ ಹಳ್ಳಿ ಮನೆಯಲ್ಲಿ ತಾನೇ ಅಡುಗೆ ಮಾಡಿಕೊಂಡು ಕಷ್ಟಪಡುತಿದ್ದ ಜೀವವಿದು. ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಉಣುತ್ತೈತೆ. ಬೆಳಿಗ್ಗಿಂದ ಏನಾದ್ರೂ ತಿಂದುತೋ, ಇಲ್ವೋ? ಇಲ್ಲಾ,  ಮಾಡ್ಕೋಬೇಕಾಗುತ್ತೆ ಅಂತ ಉಪಾಸ ಏನಾದ್ರೂ ಇತ್ತೋ. ಕರ್ದು ಉಣ್ಣಾಕಾಕೋರು ಹೋಗ್ಲೀ, ಮಾಡಿ ಇಡೋರಾದ್ರೂ ಯಾರೀದರೆ ಈವಜ್ಜುಗೆ,,,? ಇವಾಗ ನಾನು ತಂದಿರೋ ವಿಚಾರ ಕೇಳಿ ಊಟನ ಅಷ್ಟುಕೆ ಬಿಟ್ಟು ಕೈ ತೊಳ್ಕೊಂಡುಬುಟ್ರೆ,, ಅದರ ಪಾಪ ನಾನ್ಯಾಕೆ ಹೊತ್ಕೊಳ್ಲಿ. ಸಂತೃಪ್ತಿಯಾಗಿ  ಉಂಡುಮೇಲೆ ಹೇಳೋಣ, ಎಂದು ಗೋಡೆಗೆ ಒರಗಿ ನಿಟ್ಟುಸಿರ್ಬಿಟ್ಟು, ಮನ್ಸಿಗೆ ಸಮಧಾನ ಮಾಡಿಕೊಳ್ತ ಮೂರ್ತಿ ಕುಂತೇ ಬಿಟ್ಟ. ಇನ್ನೂ ತಲೆಯೊಳಗೆ ಸತ್ತಿರೋ ಯಾವ್ಯಾವ ವಿಷಯಗಳಿಗೆ ಜೀವ ತುಂಬ್ತಿದ್ನೊ ಗೊತ್ತಿಲ್ಲ.
         ಅಜ್ಜ ಇವ್ನನ್ನ ನೋಡಿದ್ ತಕ್ಷಣವೇ ಗಾಬರಿಯಿಂದ ಏನಾಯ್ತೋ ಮೂರ್ತಿ?,  ಅಷ್ಟು ಜೋರಾಗಿ ಅಜ್ಜ, ಅಜ್ಜ ಅಂತ ಅರ್ಚುಕೊಳ್ತ ಬಂದು, ಒಂದೇ ಸಲ ಸುಮ್ನಾದೆ, ಏನಾತೋ ನಿನಿಗೆ? ಯಾರಿಗಾದ್ರೂ ಏನಾರ  ಆತೇನೋ? ಮಾತಾಡೋ, ಹೇಳೋ ಜಲ್ದಿ? ಏನಾತು? ನನಿಗೆ ತಡಿಯಕ್ ಆಗ್ತಿಲ್ಲ, ಮನಸ್ಸಿನ್ಯಾಗೆ ಏನೋ ಒಂದು ತರ ಆಗ್ತೈತೆ, ಅಂತ ಬಿಕ್ಕುತ್ತ ಅಜ್ಜ ಮೂರ್ತಿಯನ್ನ ಹಿಡುಕೊಂಡು ಗುಂಜಾಡ್ತಾ  ಗೋಗರೆಯುತ್ತಿತ್ತು.
         ಅಂತದೇನ್ ಇಲ್ಲಜ್ಜ ಮೊದ್ಲು ನೀನ್ ಉಣ್ಣು. ಆಮೇಲೆ ಎಲ್ಲ ಹೇಳ್ತೀನಿ. ಇವಾಗ ನಾನ್ ಉಸಿರಾಡೋಕಾದ್ರೂ ಬಿಡು, ಉಂಡ ಮೇಲೆ ಎಲ್ಲ ವಿಚಾರನು ಕೂಲಂಕುಷವಾಗಿ ಹೇಳ್ತೀನಿ. ಎಂದು ಪಕ್ಕದಲ್ಲಿ ಅಜ್ಜ ಕುಡಿಯೋಕಿಟ್ಕೊಂಡಿದ್ದ ನೀರಿನ ಚಂಬು ತಗೊಂಡು ಗಟಗಟನೇ ನೀಲಕಂಟ ವಿಷ ಕುಡಿಯುವಂತೆ ಕುಡಿದು,  ಮುಖದ ಮೇಲೆ ಬಂದಿದ್ದ ಬೆವರನ್ನ ಹೊರಿಸ್ಕೊಳ್ತಾ, ಪಕ್ಕ್ದಾಗಿದ್ದ ತಟ್ಟೆ ತಗೊಂಡು ಗಾಳಿ ಹೊಡ್ಕೊಂತ ತಲೆ ಗ್ವಾಡಿಗೆ ಕೊಟ್ಟ.
          ಇಷ್ಟೇ ಸಾಕು ಅಂತ ಅರ್ಧ ಹೊಟ್ಟಿಗೆ ಊಟ ಮುಗಿಸ್ಬಿಡ್ತು ಅಜ್ಜ. ಏನ್ ಹೇಳೋ ಇವಾಗ? ನಂದು ಊಟ ಆತು. ಅಂತದೇನು ಹೇಳ್ಬೇಕು ಅಂತಿದಿಯ ಬೇಗ ಹೇಳು. ನನಿಗೆ ಮೊದ್ಲೆ ತಡ್ಕೊಳ್ಳುವಷ್ಟು ಶಕ್ತಿ ಇಲ್ಲ. ಎಲ್ಲ ಶಕ್ತಿನೂ ಅವಳು ಹೋದಾಗ್ಲೆ ಅವುಳು ಜೊತೆ ಮಣ್ಣಲ್ಲಿ ಮಣ್ಣಾಗಿ ಹೋತು.
      ಹೇಳೋ! ಸತಾಯಿಸ್ಬೇಡ.
      ಅಜ್ಜ,,, ಗಾಬರಿಪಡೋ ವಿಚಾರ ಏನೂ ಇಲ್ಲ ಬಿಡು. ಸ್ವಲ್ಪ ಆರಾಮಾಗಿರು. ಖುಷಿ ವಿಚಾರನೇ ಹೇಳೋದು, ನೀನ್ ಏನೇನೋ ಯೋಚನೆ ಮಾಡಬೇಡ.
      ಅದುನ್ನಾದ್ರೂ ಜಲ್ದಿ ಹೇಳೋ. ಖುಷಿನೂ, ತಡ್ಕೊಳ್ಳೋ ವಯಸ್ಸಲ್ಲ ಕಣೋ ನಂದು. ಊರು ಹೋಗು ಕಾಡು ಬಾ ಅಂತುತೆ ಅಲೆಯ.
          ಅಜ್ಜ, ಗೀತಕ್ಕುನ ಮಗಳು ಶುಭ ಇವತ್ತು ಬೆಳಿಗ್ಗೆ ಮೈನೆರ್ದಿದಾಳೆ ಅಂತ ಗೀತಕ್ಕ ಆಚಾರ್ ಮನೆ ಫೋನಿಗೆ ಫೋನ್ ಮಾಡಿ ನಿನಿಗೆ ತಿಳ್ಸಕೆ ಹೇಳ್ತಂತೆ. ಕರುದ್ರೆ, ನಿಮ್ಮ ಮನೆ ಕಡೆಯಿಂದ ಯಾರೂ ಮಾತಾಡಿಲ್ಲ. ಅದರಲ್ಲೂ ನೀ ಮನೆಗಿದಿಯೋ ಇಲ್ವೋ ಅಂತ ಅವರ್ಗೇನು ಗೊತ್ತು? ಅದುಕೆ ಆಚಾರ್ ಪುಷ್ಪಕ್ಕ ಕರುದು ಹೇಳೋಕೆ ಹೇಳ್ತು.
     ಅದುನ್ನ ಹೇಳನ ಅಂತ ಬರ್ತಿದ್ದೆ. ಅಷ್ಟ್ರಲ್ಲಿ, ಸಂತಿಮಜ್ಜರ ನಾಯಿ ಓಡಿಸ್ಕೊಂಡು ಬಂತು. ನಾನ್ ಓಡೋಡಿ ಬಂದು ಸುಸ್ತಾತಲ ಅದುಕ್ಕೆ ಕೂತ್ಕಂಡೆ.
      ಅಯ್ಯೋ, ಮುಂಡೆ ಮಗ್ನೆ, ಒಂದು ಕ್ಷಣ ಎದುರಿಸೇ ಬಿಟ್ಟಿದ್ದೆಲ್ಲೋ.
         ಒಳ್ಳೆ ಖುಷಿ ವಿಷ್ಯ ಹೇಳಿದಿಯ. ಏನು ಹೇಳ್ಬಿಡ್ತೀಯಾ ಅಂತ “ಬಾಯಾಗೆ ಅಕ್ಕಿಕಾಳು ಅಕ್ಕೆಂಡಿದ್ದೆ”. ಅಬ್ಬಾ! ಈಗ ಒಂಚೂರು ಸಮಧಾನ ಆಯ್ತು ನೋಡಪ.
    ಏನಾರ ಕೊಡಾನ ಅಂದ್ರೆ, ಮನ್ಯಾಗೆ ಇರೊನೊಬ್ನೆ. ಏನೂ ಮಾಡಿಟ್ಟಿಲ್ಲ, ಏನೂ ತಂದಿಲ್ಲ. ಅವಳಿದ್ದಾಗ ಆಗಿದ್ರೆ, ಇದುನ್ನ ಕೇಳಿ ಎಷ್ಟು ಸಂತೋಸ ಪಡ್ತಿದ್ಲೋ? ಇದುನ್ನೆಲ್ಲ ಕೇಳೋ ಯೋಗ ಅವ್ಳಿಗಿಲ್ಲ ಅಷ್ಟೇ. ನಿನ್ನ ಅಂಗೇ ಕಳಿಸೋಕೆ ಬಿಡ್ತಾನು ಇರ್ಲಿಲ್ಲ.  ಬಾಯಿಗೆ ಶೇಂಗಾ ಉಂಡೇನೇ ತುರುಕ್ತಿದ್ಲು.
          ಯಂಗೂ ರಾಗಿ  ರೊಟ್ಟಿ ಹಸಿಮೆಣ್ಸಿನ್ಕಾಯಿ ಚಟ್ನಿ ಕುಟ್ಟಿದಿನಿ ಇದುನ್ನೆ ಒಂದೆಲ್ಡು ತಿನ್ನು ಬಾ, ಬೆಣ್ಣೆ ಹಾಕಿ ಕೊಡ್ತೀನಿ. ತಿಂದ್ರೆ ಮನಸಿಗೆ ಎಷ್ಟೋ ಖುಷಿಯಾಗುತ್ತೆ.
      ಆ, ಹಾ,,, ರಾಗಿರೊಟ್ಟಿ ಹಸಿ ಮೆಣ್ಸಿನ್ಕಾಯಿ ಚಟ್ನಿ ,, ಇದುನ್ನ ಬ್ಯಾಡ ಅಂದ್ರೆ ಆಗುತ್ತ?. ಕೊಡಜ್ಜ, ಕೊಡು, ನಿನ್ನ ಕೈ ರೊಟ್ಟಿನೂ ಒಂದ್ಸಲ ರುಚಿ ನೋಡಿದ್ರಾಯ್ತು. ನಿನ್ಮಗ ಚಂದ್ರ ಬಂದಾಗ ಮನಿಗೆ ಬರ್ತೀದ್ದೆ ಅಷ್ಟೇ. ಅಜ್ಜಿ ಇದ್ದಾಗ ಅಜ್ಜಿ ಹಾಕೋ ರೊಟ್ಟಿ ತಿಂತಿದ್ದೆ ಇವಾಗ ನೀನ್ ಹಾಕಿರೋ ರೊಟ್ಟಿ ತಿನ್ನೊ ಯೋಗನೂ ಕೂಡಿ ಬಂದುತೆ.
           ಮೂರ್ತಿ ತಿನ್ನೋತನಕ ಅಜ್ಜ, ಹಳೆ ಕತೆಗಳ್ನ ಹೇಳ್ತಾನೆ ಇತ್ತು. ಅನುಭವಿಸಿದ ಎಷ್ಟೋ ಕಷ್ಟ ಖುಷಿಯಾದಾಗ ನೆಪ್ಪಾಗಿ ಕಣ್ಣಾಗೆ ನೀರಾಗಿ ಹರಿತಾವೆ ಅನ್ನೋದಕ್ಕೆ ಅಜ್ಜನ ಜೊತೆಗಿನ ಈ ಕ್ಷಣಗಳೇ ಸಾಕ್ಷಿ.
       ಅಜ್ಜನ ಮುಖದಲ್ಲಿ ಮೊಮ್ಮಗಳು ಮೈನೆರ್ದಿದ್ದು ಮಂದಹಾಸ ಮೂಡ್ಸಿತ್ತು. ಹಾಗೂ ಪಂಚೆ ತುದಿಯಿಂದ ಮುಖದ ಮೇಲೆ ಚಿತ್ತಾರ ಬಿಡಿಸಿದ ನಗುವಿನ ಕಂಬನಿಯ ಮತ್ತೆ ಮತ್ತೆ ಒರೆಸಿಕೊಳ್ಳುವ ದೃಷ್ಯಗಳನ್ನ ನೋಡಿದಾಗ ನನಗರಿವಾಗದಂತೆ ಕಣ್ಣುಗಳು ನೀರಾಡುತ್ತಿದ್ದವು.
       ಈ ಖುಷಿ ವಿಷ್ಯ ಕೇಳಕೆ ಗೌರ ಇದ್ದುದ್ರೆ ಎಷ್ಟು ಖುಷಿ ಪಡ್ತಿದ್ಲೊ ಏನೋ? ಮೌನ ಮುರಿದು ಮತ್ತೆ ಮಾತಾಡೋಕೆ ಶುರು ಮಾಡಿದ. ಆ ಹುಡ್ಗಿಗೆ ಅದುನ್ನ ಮಾಡ್ಕೋಬೇಕು, ಇದುನ್ನ ಮಾಡ್ಕೋಬೇಕು, ಏನೆನೋ ತಗೊಬೇಕು ಅಂತ… ಎಷ್ಟ್ ಹಾರಾಡ್ತಿದ್ಲೊ? ಈಗ ಏನ್ ತಗೊಂಡ್ಲಿ?, ಏನ್ ಮಾಡ್ಲೀ?, ಗೊತ್ತಾಗ್ತಿಲ್ಲ ಮಗಾ. ನೀನ್ ಉಂಡು ಕದ ಮುಂದುಕೆ ಬಿಟ್ಕೊಂಡು ಹೋಗಿರು. ನಾನ್ ಪಕ್ಕುದ್ಮನೆ ಪರೇತಕ್ಕುಗೆ ತಿಳ್ಸಿ ಬರ್ತೀನಿ ಅಂತಂದು ಕಾಲ್ಕಿತ್ತೇ ಬಿಡ್ತು ಅಜ್ಜ.
           ಪರೇತಕ್ಕ,, ಪರೇತಕ್ಕ,, ಏನ್ ಮಾಡ್ತಿದಿಯಾ? ನನ್ಮೊಮ್ಮಗಳು ದೊಡ್ಡಾಳಾಗಿದಾಳಂತ ಗೀತ ಫೋನ್ ಮಾಡಿದ್ಲಂತೆ ಆಚಾರ್ ಮನಿಗೆ. ನಾನ್ ಹೋಗ್ತೀನಿ ಈಗ. ಹೋಗ್ವಾಗ ಏನೇನ್ ತಗೊಂಡು ಹೋಗ್ಲಿ? ಜೊತಿಗೆ ಬಾರಕ್ಕ ನೀನುವೇ. ನೀನಾದ್ರೆ ಅದು ಇದು ಹೇಳಕೆ ಬೇಕಾಗುತ್ತೆ. ಗೀತುನ ಮನೆಗಾದ್ರೂ ದೊಡ್ಡೋರ್ ಯಾರ್ ಇದಾರೆ? ಅವ್ಳಿಗಷ್ಟು ತಿಳಿಯಲ್ಲ, ಒಂದೆಲ್ಡು ದಿನ ಇದ್ದು ಹೇಳೋದೆಲ್ಲ ಹೇಳಿ ಬಂದ್ಬಿಡನ ಬೇಕಾದ್ರೆ. ಇಂದ್ರಣ್ಣುಗೂ ಕಳಿಸಿಕೊಡು ಅಂತ ಹೇಳ್ತೀನಿ.
      ಅಂತದೇನಿಲ್ಲ, ಇವಾಗೇನ್ ನಾನ್ ಬರೋದ್ ಬ್ಯಾಡ. ಅವರತ್ತೆ ರುದ್ರಮ್ಮ ಅದಾಳಲ್ಲ, ಅವಳಿದ್ರೆ ಸಾಕು. ಎಲ್ಲ ಅವ್ಳೇ ನೋಡ್ಕೊಂತಾಳೆ. ನಾವು ಕೊನೆ ಮಾಡ್ತಾರಲ ಅವತ್ತೇ ಹೋದ್ರಾತು. ಆಗ್ಬೇಕಾದ್ರೆ ನಮ್ಮ ಹಟ್ಟೆಗೆ ಹತ್ತಿಪ್ಪತ್ತು ಜನ ಕರ್ಕೊಂಡು ಅಷ್ಟುಕ್ಕು ಹೋದ್ರಾಗುತ್ತೆ ಬಿಡು. ಮನಸು ತಡಿಲಿಲ್ಲ ಅಂದ್ರೆ ಒಬ್ನೆ ಹೋಗು ಸಾಕು. ಹೋಗೋದಾದ್ರೇ ಚಂದ್ರೂಗೂ ತಿಳಿಸು. ಗಂಡ ಹೆಂಡ್ತಿ ಹೋಗಿ ನೋಡ್ಕೊಂಡು ಬರ್ಲಿ. ಅವರೇ ಎಲ್ಲಾ ಮಾಡ್ತಾರ ನೋಡು. ಬರ್ಲಿಲ್ಲ ಅಂದ್ರೆ, ಅಲ್ಲೇ ಶೆಟ್ಟಿ ಅಂಗ್ಡೇಗೆ ಎಲ್ಲ ಸಿಗುತ್ತೆ, ಗೀತುನ್ನೋ ಇಲ್ಲ ರುದ್ರಮ್ಮುನ್ನೋ ಕೇಳಿದ್ರೆ ಏನ್ ತರ್ಬೇಕು ಹೇಳ್ತಾರೆ. ಆಗ ನೀನಾದ್ರು ತಗೊಂಡು ಕೊಡು. ಇಲ್ಲ, ಗೀತುನ್ನ ಕೈಲಿ ದುಡ್ಡಾದ್ರು ಕೊಡು. ಅವ್ಳೆ ತಕ್ಕಂತಾಳೆ. ನಿನ್ಗೆ ಹೆಣ್ಮಕ್ಳುದು ಗೊತ್ತಾಗೊಲ್ಲ. ಕೊನೆ ದಿನ ಏನಾದ್ರೂ ಬಂಗಾರನ ನಿಮ್ಮ ಕೈಲಾದಷ್ಟು ಮೊಮ್ಮಗಳಿಗೆ ಹಾಕ್ಬೇಕು ಅಣ. ಚಂದ್ರುಗೆ ಮೊದಲೇ ಹೇಳಿರು, “ತಾಯಿ ಸತ್ತು, ಸೋದರ ಮಾವ ಇರ್ಬೇಕಂತೆ” ಅದು ಅವ್ನ ಜವಾಬ್ದಾರಿ. ಅವ್ನೇ ತಗೊಂಡು ಬರ್ತಾನೆ ಬಿಡಣ. ಇವಾಗ್ಲೇ ಹೇಳಿದ್ರೆ ದುಡ್ಡ್ ಗಿಡ್ಡ್ ಹೊಂಚ್ಕೊಂತಾನೆ. ಮತ್ತೆ ಕೊನೆ ಟೈಂಗೆ ಹೇಳಿದ್ರೆ ಅವ್ನಾದ್ರೂ ಏನ್ ಮಾಡ್ತಾನೆ. ಇಲ್ಲ ನಿನ್ನ ಸೊಸೆ ಏನಾರ ಅಂದ್ರೆ, ಅದುನ್ನ ನಿಭಾಯ್ಸೋ ಶಕ್ತೀನೂ ಇಲ್ಲ ಮುಂಡೇದುಕ್ಕೆ.
         ಎಲ್ಲೈತಕ್ಕ ದುಡ್ಡು ಅವ್ನತ್ರ. ಈ ವರ್ಷ ಅವ್ರವ್ವುನ ಆಸ್ಪತ್ರಿಗೆ, ಸತ್ತಾಗ, ದಿವ್ಸುಕ್ಕೆ ಎಲ್ಲಾ ಅವ್ನೇ ಖರ್ಚು ಮಾಡಿದಾನೆ. ಈಗ ನಾನೇ ಏನಾರ ಮಾಡ್ಬೇಕು. ಅದುಕ್ಕೆ ಇವತ್ತೋಗಿ ನೋಡ್ಕಂಡು, ಕೊನೆ ಯಾವಾಗ ಮಾಡ್ತಾರೆ ಕೇಳ್ಕೊಂಡು, ಆಮ್ಯಾಕೆ ಎಲ್ಲದ್ರೂ ಸಾಲ ಮಾಡ್ಯಾದ್ರು ಮಾಡಿಸ್ತೂನಿ. ಸಾಲ ಇದ್ರೆ ಮುಂದಿನ ಬೆಳಿಗೆ ತೀರ್ಸಿದ್ರೆ ಆಗುತ್ತೆ, ಮರ್ಯಾದಿನೇ ಹೋತು ಅಂದ್ರೆ…. ಅಲ್ವಾ. ನಮ್ಜೊತೆ ಗೀತುಂದು ಮರ್ಯಾದಿ ಪ್ರಶ್ನೆ. ನಿನ್ನ ತೌರು ಮನೇರು ಏನು ಹಾಕಿಲ್ಲ ಇರೋಳು ಒಬ್ಳು ಮೊಮ್ಮಗಳಿಗೆ ಅಂತ ಹಾಡ್ಕೋನೋದು ಬ್ಯಾಡ. ಒಂದು ತೊಲುದ್ದು ಸರನಾದ್ರು ತಗೊಂಡು ಹೋಗ್ತೀನಿ. ಎಲ್ಲೋಕುತೆ ತುಪ್ಪ ಬಿದ್ರೆ ಕಿಚುಡೆಗೆ. ಎಂದು ಖುಷಿಯಾಗಿ ಗುನುಗ್ತಿದ್ದ ಅಜ್ಜನ ಮುಖದಲ್ಲಿ ಕಳೆಕಂಡಳು ಪರೇತಕ್ಕ.
         ಹು ಅಣ್ಣ, ಇದುನ್ನ ಮೊದ್ಲು ಚಂದ್ರುಗೂ ತಿಳ್ಸು. ಇಂಗಿಂಗೆ ಮಾಡ್ಬೇಕಂತ. ಇಬ್ರುನ್ನು  ಕೇಳೇ ಮುಂದ್ವರಿ.  ಅವರಿಗೂ ತಿಳಿದಿದ್ರೆ ಚಂದ. ಇದು ನಿನ್ನ ಕಾಲ್ಮಾನ ಅಲ್ಲಣ. ಇಲ್ಲಿ ಯಂತ್ರನೂ ಮಾತಾಡ್ತವೆ, ಜೊತೆಗೊಂದಿಷ್ಟ್ ಗ್ವಾಡೆನು ಮಾತಾಡ್ತಾವೆ. ಮುಂದೊಂದಿನ ಎಲ್ಲಾನೂ ಮಗ್ಳಿಗೆ ಮಾಡ್ದ ನಮ್ಮಪ್ಪ ಅನ್ನೋದು ಅವ್ರು ಬಾಯಾಗೆ ಬರಬಾರ್ದು. ದುಡಿಯೋ ಮಕ್ಳು ಮುಂದೆ ಎಲ್ಲ ವ್ಯವಾರನು ಹೇಳ್ಬೇಕು. ಆಗ ನಮ್ಮೇಲೆ ಪ್ರೀತಿ, ಗೌರವ ಹೆಚ್ಚಾಗ್ತುತೆ ಅಲ್ವೇನಣ್ಣ. ಅಂತ ಮುಪ್ಪಾದ ಮುದಿಯಜ್ಜನಿಗೆ ತಿಳಿ ಹೇಳಿದಳು ಪರೇತಕ್ಕ.
      ಆಯ್ತವ್ವ ಅವ್ನಿಗೂ ತಿಳಿಸ್ತುನಿ ಬಿಡು.

            ತಡರಾತ್ರಿ,,
   ಹೊರಗೆ ಜೀನ್ ಗುಡುತಿದ್ದ, ಜಿಟಿ ಜಿಟಿ ಮಳೆ ಸುರೀತಾ ಇದೆ. ಮುಗಿಲು ನೋಡಿದರೆ ಚಂದ್ರ ನಕ್ಷತ್ರಗಳೆಲ್ಲ ಮಳೆಯಲ್ಲಿ ಹೊರಗೆ ಬರದೆ, ಮೋಡದ ಮರೆಯಲ್ಲಿ ಅವಿತಿರುವಂತಿತ್ತು. ಆಗಾಗ ಗುಡುಗಜ್ಜನ ಶಬ್ಧ ಕಿವಿಯಲ್ಲಿ ಝೇಂಕರಿಸುವಾಗ ಮಳೆಯ ಸೌಂದರ್ಯವನ್ನು ಕಣ್ಣಲ್ಲಿ ತುಂಬಿಕೊಳ್ಳಲು ಮಿಂಚು ಕೂಡ ಬಂದು ಕಣ್ಮರೆಯಾಗುತಿತ್ತು. ಸಿಡಿಲು ಮಾತ್ರ ಒಳಗೆ ಮಲಗಿದ್ದವರನ್ನು ಬಡಿದೆಬ್ಬಿಸುತಿತ್ತು. ಇಲ್ಲೆ ಎಲ್ಲೋ ಹತ್ತಿರದಲ್ಲಿಯೇ ಹೊಡೆದಿದೆ ಎಂದು ಸಿಡಿಲು ಶಬ್ಧ ಕೇಳಿದವರ ಉದ್ಘಾರ ಬೇರೆ.
      ಶ್ರಾವಣದ ಜಿಟಿ ಜಿಟಿ ಮಳೆ ಎರಡ್ ಮೂರು ದಿನ ಆದ್ರೂ ನಿಲ್ಲಲ್ಲ. ಒಂದೇ ಸಮ್ನೆ ಬರ್ತಾನೆ ಇರುತ್ತೆ. ಹೊರಗಡೆ ಕೆರೆಕಡಿಕೆ ಹೋಗ್ಬೇಕಂದ್ರೆ ತಲಿಗೆ ಟವಲ್ಲೋ, ಇಲ್ಲ ಗೋಣಿಚೀಲ ಅಥವಾ ಗೊಬ್ರುಚೀಲ್ದ ಕೊಪ್ಪಾಳೆವುಗಳನ್ನ ಹಾಕ್ಕೊಂಡು ಅಲ್ಲೆ ಎಲ್ಲದ್ರ್ ಹತ್ರ ಬಯ್ಲಾಗೆ ಹೋಗಿ ಬರೋದು ಮಾಮೂಲು.
    ಜೊತೆಗೆ ಕಪ್ಪೆಗಳ ಗೊಟರ್ ಗೊಟರ್ ಎನ್ನುವ ಶಬ್ಧ. ಮಳೆ ಹನಿಗಳು ಹಂಚಿನ ಮೇಲೆ ಬೀಳುವ ಶಬ್ಧಗಳ ಸಮ್ಮಿಲನ ಪೈಪೋಟಿಗೆ ನಿಂತಿರುವಂತೆ ಮೇಲ್ನೋಟಕ್ಕೆ ಕಾಣ್ತಿತ್ತು.
      ಆದರೆ ಈ ಹಾಲಜ್ಜನ ಮನೆಯಲ್ಲಿ ಮಾತ್ರ ಇದಕ್ಕೂ ಜಗ್ಗದೆ ಜಗಳ ನಡಿತಾನೆ ಇತ್ತು. ಅದು ಗೀತಕ್ಕ ಮತ್ತೆ ಅವಳ ಒಬ್ಬನೇ ತಮ್ಮ ಚಂದ್ರುವಿನ ಜೊತೆ. ಇದು ಆಸ್ತಿ ವಿಚಾರಕ್ಕಲ್ಲ. ಇವರಿಬ್ಬರ ಜಗಳವನ್ನು ಹಾಲಜ್ಜ, ಹೆಂಡತಿ ಮಾದಜ್ಜಿ, ಗೀತಕ್ಕನ ಗಂಡ ಈರಪ್ಪ ಮತ್ತು ಮಕ್ಕಳು ಇವರ್ಯಾರು ಜಗಳದಲ್ಲಿ ಮೂಗು ತೂರಿಸುವಂತಿಲ್ಲ. ಇದು ಅಕ್ಕ ತಮ್ಮನ ನಡುವೆ ನಡೆಯುತ್ತಿರುವ ಶೀತಲ ಸಮರ.
      ಚಂದ್ರು ಮದುವೆಗೆ ಹೆಣ್ಣು ಗೊತ್ತಾಗಿ, ಇನ್ನೆರೆಡು ತಿಂಗಳಲ್ಲಿ ಮದುವೆ ದಿನ ಕೂಡ ಬರ್ತಿದೆ.
     ಹೆಣ್ಣು ನೋಡುವ ಶಾಸ್ತ್ರವನ್ನು ಹಾಗೂ ನಿಶ್ಚಿತಾರ್ಥವನ್ನು ಇವರೆ ಮುಂದೆ ನಿಂತು ಮಾಡಿ, ಆಗಿಲ್ಲದ ತಕರಾರು, ಮದುವೆ ದಿನಾಂಕ ಗೊತ್ತಾದ ಕೂಡ್ಲೇ ಏನುಕ್ಕೆ ಬಂತು? ಇದರಿಂದಿರುವ ಸೂತ್ರದಾರ ಯಾರಿರಬಹುದು? ಇವೆಲ್ಲ ಇವರ ಸ್ವಯರ್ಜಿತ ಮಾತುಗಳಲ್ಲ. ಯಾರೋ ಕಿವಿ ಚುಚ್ಚಿರುವುದಕ್ಕೆ  ಇಂಗೆ ಮಾತಾಡ್ತಿದ್ದಾರೆನ್ನೊ ವಿಷಯ ಚಂದ್ರು ತಲೆಯೊಳಗೆ ನುಸುಳಲು ಹೆಚ್ಚು ಸಮಯದ ಆಧಾರ ಬೇಕಾಗಿರಲಿಲ್ಲ.
    ಇದುಕ್ಕೆಲ್ಲ ನಮ್ಮ ಅಪ್ಪ-ಅಮ್ಮನ ಕೈವಾಡ ಏನಾರೂ ಇದ್ದೀತಾ? ಎನ್ನುವ ಪ್ರಶ್ನೆಗಳನ್ನು ಕೂಡ ತಳ್ಳಿಹಾಕುವಂತಿಲ್ಲ. ಮಗಳು ಮತ್ತು ಮೊಮ್ಮಗಳ ಮೇಲೆ ಪ್ರೀತಿ ಇರದೇ ಇರುತ್ತಾ?
     ನಾನು ಎಷ್ಟೇ ಆಗಲಿ ಇವರ ಸಾಕು ಮಗನಷ್ಟೆ.
      ಮಾದಜ್ಜಿ ಹಾಲಜ್ಜನಿಗೆ ಗಂಡು ಸಂತಾನ ಇಲ್ಲದಿದ್ದುದ್ದರಿಂದ ತಮ್ಮನ ಮಗನನ್ನೇ ದತ್ತು ತಗೊಂಡಿದ್ದ ಹಾಲಜ್ಜ. ದುರದೃಷ್ಟವಶಾತ್ ತಮ್ಮನ ಕುಟುಂಬ ಧರ್ಮಸ್ಥಳಕ್ಕೆಂದು ಹೋದವರು ಮತ್ತೆ ತಿರುಗಿ ಬರಲೇ ಇಲ್ಲ. ಎಲ್ಲೋ ನೇತ್ರಾವತಿಯಲ್ಲಿ ಕೊಚ್ಚಿ ಹೋದರೆಂಬ ಸುದ್ದಿ ಬಂತು ಅಷ್ಟೇ. ಇದಾದ ನಂತರ ಹಾಲಜ್ಜನ ಮನೆಯವರಿಗೆ ಇವನ ಮೇಲೆ ಒಂದ್ಕೈ ಹೆಚ್ಚು ಪ್ರೀತಿ. ತನ್ನದೇ ಮಗ ಹುಟ್ಟಿದ್ದ್ರೂ ಇಷ್ಟು ಚೆನ್ನಾಗಿ ನೋಡಿಕೊಳ್ತಿರ್ಲಿಲ್ಲ. ಯಾವತ್ತೂ ಅವರಲ್ಲಿ ಇವನು ತಮ್ಮನ ಮಗ ಅನ್ನೊ ಭಾವನೆ ಹಾಲಜ್ಜನಲ್ಲಿ ಬಂದಿರಲಿಲ್ಲ, ಮಾದಜ್ಜಿಯಲ್ಲಿಯೂ ಕೂಡ. ನಮ್ಮಗ ಇದ್ದಿದ್ದ್ರೆ ಇದುನ್ನೆಲ್ಲ ಮಾಡ್ತಿದ್ವಿ. ಇವನು ಅಂಗೇ ಎಂದು ತಮ್ಮ ಕರ್ತವ್ಯಗಳನ್ನ ಚಾಚೂ ತಪ್ಪದೆ ಮಾಡ್ತಿದ್ರು. ಚಂದ್ರು ಕೂಡ ಇವರ ಪ್ರೀತಿಗೆ ದಕ್ಕೆ ತರುವ ಕೆಲಸ ಎಂದೂ ಮಾಡಿರ್ಲಿಲ್ಲ. ಸತ್ತಿರುವ ಜನ್ಮಕೊಟ್ಟ ತಂದೆ ತಾಯಿಗಿಂತ ಹೆಚ್ಚು ಪ್ರೀತಿ ಇವರ ಮೇಲಿತ್ತು.
      ಚಂದ್ರು ಒಂದು ವರ್ಷದ ಚಿಕ್ಕ ಮಗುವಾದಾಗಿಂದ್ಲು ಇವರ ಅಂಗಳದಲ್ಲಿಯೇ ಬೆಳೆದಿದ್ದ. ಇವರೇ ಅಪ್ಪ ಅಮ್ಮ ಎಂದು ಭಾವಿಸಿದ್ದ.
      ಚಂದ್ರು ಮನದಲ್ಲಿ ಒಂದು ಪ್ರಶ್ನೆ ಕಾಡುತ್ತಿತ್ತು. ಅಕ್ಕ ಮಗಳನ್ನು ಮದುವೆಯಾಗು ಎಂದು ಈಗ ಹಠ ಹಿಡಿದಿರುವ ಕಾರಣ ಏತಕ್ಕೆ? ಎನ್ನುವುದು. ನನಗೂ ಶುಭಾಳಿಗೂ ಸುಮಾರು ಹದಿನೈದು ವರ್ಷಗಳ ಅಂತರ. ನಾನೆತ್ತಿ ಆಡಿಸಿದ ಹುಡುಗಿ, ಅವಳ ಮೇಲೆ ನನ್ನಲ್ಲಿ ಎಂದಿಗೂ ಆ ಭಾವನೆ ಬಂದಿಲ್ಲ. ಮುಂದೆ ಬರುವುದೂ ಇಲ್ಲ. ಅಕ್ಕನಿಗೆ ಏನಾಗಿದೆ ಈಗ? ಎಂದು ಮನದಲ್ಲೆ ಪ್ರಶ್ನೆ ಮಾಡಿಕೊಳ್ತಿದ್ದ.
     ವಯಸ್ಸಿನ ಅಂತರ ಹೇಳಿದರೆ, ಏನೋ? ಯಾರೂ ಆಗೇ ಇಲ್ವೇನೋ? ನನಗೂ ನಿಮ್ಮ ಭಾವಗೂ ಹದಿನೇಳು ವರ್ಷ ಹೆಚ್ಚು ಕಮ್ಮಿ. ನಮಿಗೇನು ಮಕ್ಳಾಗಿಲ್ವಾ? ಅಥವಾ ನಾವು ಸಂಸಾರ ಮಾಡ್ತಾ ಇಲ್ವಾ? ಅಂತ ಕೇಳ್ತಾಳೆ.
    ಅಕ್ಕನ ಮಗಳು ಗೊತ್ತಿದ್ದು ಗೊತ್ತಿದ್ದು ರಕ್ತಸಂಬಂಧವಾಗುತ್ತೆ. ಮುಂದೆ ಹುಟ್ಟುವ ಮಕ್ಕಳ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎಂದು ಹೇಳಿದರೆ, ನಮ್ಮವ್ವ ನಮ್ಮ ಅಪ್ಪುಗೆ ಅಕ್ಕುನ ಮಗಳೇ. ಮತ್ತೆ, ಅವ್ರು ಚೆನ್ನಾಗಿಲ್ವಾ? ಅವ್ರಿಗೆ ಹುಟ್ಟಿದ ನನಿಗೆ ಏನು ಐಬು ಐತೆ? ಬೇರೆ ಯಾರ್ಯಾರ್ದೋ ಹೇಳೊಲ್ಲ ನಮ್ಮನೆಯವ್ರುದೇ ಹೇಳ್ತೈದಿನಿ ಸಾಕಾ? ಬೇಕಾ? ಅಂತ ಕೇಳಿದ್ರೆ ಏನು ಹೇಳೋದು?. ಅಂತ ತನ್ಮನಸಲ್ಲಿ ಅಂದುಕೊಳ್ತಿದ್ದ.
      ಆಯ್ತು. ಇಂತ ಯೋಚನೆ ಇಟ್ಕೊಂಡ್ ಇಷ್ಟೆಲ್ಲ ಯಾತುಕ್ಕೆ ಮಾಡಿದ್ರಿ ಮತ್ತೆ? ಈ ವಿಚಾರ ಮೊದ್ಲೇ ತಿಳಿಸಿದ್ರೆ ಆಗ ಏನೋ ಆಗ್ತಿತ್ತು. ಈಗ ಎಲ್ಲಾ ಆದ್ಮೇಲೆ ಏನ್ಮಾಡಕಾಗುತ್ತೆ?, ಅದು ಕೂಡ, ಮುಂದೆ ನಿಂತು ಹುಡುಗಿ ನೋಡ್ದೋರು ನೀವೇ. ನಿಶ್ಚಿತಾರ್ಥ ಮಾಡ್ಸಿ ಮೋರ್ತಾ ಗೊತ್ತು ಮಾಡಿರೋದು ನೀವೇ. ವಯಸ್ಸಾದ ಅಪ್ಪ ಅಮ್ಮನ ಜಾಗದಲ್ಲಿ ನಿಂತು ನೀನು ಭಾವನೇ ಎಲ್ಲಾ ಮಾಡಿದ್ರಿ, ಅದು ತುಂಬಾ ಖುಷಿಯಾಯ್ತು. ಇಷ್ಟೆಲ್ಲ ಮಾಡಿರೊ ನೀವೇ, ಈಗಿಂತ ಪ್ರಶ್ನೆ ಕೇಳಿದ್ರೆ ಏನಂತ ಅಂದ್ಕೊಳ್ಲಿ.
    ನೀವು ಈಗ ಈ ಮಾತಾಡ್ತಿರೋ ಉದ್ದೇಶವಾದ್ರೂ ಏನು?
        ನಿನ್ಮಗಳು ಇವಾಗಲೇ ನನಗಿಂತ ಜಾಸ್ತಿ ಉದ್ದ ಇದಾಳೆ. ನನಿಗೆ ಜೋಡಿ ಆಗೊಲ್ಲ. ಇನ್ನೇನಂದ್ರೆ ಅವ್ಳಿನ್ನು ಮೈನೆರ್ದಿಲ್ಲ. ಅಂತದ್ರಲ್ಲಿ  ಇದು ಆಗೋಗ ಕೆಲ್ಸನಾ?
   ಸರಿ, ನಿನ್ಮಗಳಿಗೆ ಒಂದು ಒಳ್ಳೆ ಗಂಡುನೋಡಿ ಮದುವೆ ಮಾಡೋ ಜವಬ್ದಾರಿ ನಂದು. ಇದುಕ್ಕಾದ್ರು ಒಪ್ತೀಯಾ ಅಕ್ಕ. ಅಂತ ಚಂದ್ರು ಗೀತಾಕ್ಕುಗೆ ಪ್ರಶ್ನೆ ಮಾಡಿದ.
    ಇಲ್ಲ ಇವಾಗ ಅಂಗಂದು ಮದುವ್ಯಾಗಿ ನಿನ್ನ ಹೆಂಡ್ತಿ ಪಕ್ಕುಕ್ಕೆ ಬಂದಾಗ ಉಲ್ಟಾ ಹೊಡುದ್ರೆ.
  ಅಕ್ಕ, “ಇದು ನಾಲಿಗೆ ಮೆಟ್ಟಿನ ಹಟ್ಟೆಯಲ್ಲ” ಮಾತು ಕೊಟ್ಟು ತಪ್ಪೊಕಾಗುತ್ತ ಇಂತ ವಿಚಾರ್ದಾಗೆ ನನ್ಮೇಲೆ ಅಷ್ಟೂ ನಂಬಿಕೆ ಇಲ್ವ? ಎಂದು ಹೇಳತೊಡಗಿದ.
    ಲೇ,,,, ನನ್ಮಗಳ ಭವಿಷ್ಯ ಕಂಡವರ್ಯಾರು? ಅದು ಹೇಗೋ ಆಗುತ್ತೆ, ಇವಾಗ ಯಾಕೆ ಅದರ ಚಿಂತೆ. ಅವ್ಳುನ್ನ ಹುಟ್ಸಿದ ಅಪ್ಪ ನಾನಿನ್ನು ಜೀವಂತ್ವಾಗಿದಿನಿ. ನೀನ್ ಯೋಚ್ನೆ ಮಾಡ್ಬೇಡ. ಮುಂದಾಗೋ ಕೆಲ್ಸ ನೋಡು. ಎಂದು ಮಂಚದ ಮೇಲೆ ಕುಂತ ಚಂದ್ರು ಮಾವ ಅರ್ಥಾತ್ ಗೀತಕ್ಕುನ ಗಂಡ ಈರಪ್ಪ ಮಧ್ಯ ಬಾಯಾಕಿದ.
    ರೀ ಸುಮ್ನಿರ್ರೀ! ನೀವ್ ಇದ್ರಲ್ಲಿ ತಲೆ ಹಾಕ್ಬೇಡ್ರಿ. ಇದು ನಂದು ಅವುಂದು ಅಷ್ಟೇ ಮಾತು.
    ಸರಿ ಇವಾಗ ನಾನೇನ್ಮಾಡ್ಲಿ? ಅದುನ್ನಾದ್ರು ಹೇಳು? ರಾತ್ರಿ ಒಂದು ಗಂಟೆಯಾಯ್ತು ಅಲೆಯಾ, ಏನು ಮಾಡ್ಬೇಕು ಅಂತಿಯಾ ಅಂಗೆ ಮಾಡ್ತೀನಿ. ನೀನೇನ್ ಹಾಡ್ಸಿಲ್ವಾ, ಹುಣ್ಸಿಲ್ವಾ, ತಿನ್ಸಿಲ್ವಾ, ಬೆಳ್ಸಿಲ್ವಾ? ನಮ್ಮವ್ವುನ ಜಾಗ್ದಾಗೆ ಇದ್ದು ಎಲ್ಲಾ ಮಾಡಿಯಾ. ನೀನ್ ಬೆರ್ಳಾಗೆ ತೋರ್ಸಿದ್ದ್ ಕೆಲ್ಸ ನಾನ್ ಮಾಡಿಲ್ವಾ? ನಾ ಈಗ್ಲೂ ಅಂಗೇ ಐದಿನಿ.
     ಬಾಯಾಗೆ ಹೇಳಿದ್ರೆ ಅಷ್ಟೇ ಸಾಕಾಗೊಲ್ಲ ಚಂದ್ರು. ನಾನ್ ಈ ಮನಿಗೆ ನನ್ನ ಅರ್ಧ ಜೀವನೇ ತೇಯ್ದಿದೀನಿ.
     ನಾನಿಲ್ಲ ಅಂದಿಲ್ಲಕ್ಕ. ನೀನ್ ಕಷ್ಟ ಪಟ್ಟು ದುಡ್ದಿರೋದುಕ್ಕೆ ನಾವಿವತ್ತು ಒಂದೊತ್ತು ಆರಾಮಾಗಿ ಉಣ್ತಿರೋದು. ನಿನ್ನ್ ಮರೆತ್ರೆ ನನ್ಗೆ ಅನ್ನ ಹುಟ್ಟಲ್ಲ. ಹೇಳೀಗ ಏನ್ ಮಾಡ್ಲೀ?
     ನನ್ನ್ ಮಗಳ ಮದುವೆಗೆ ಅಂತ ಊರತ್ರ ಇರೋ ಒಂದೆಕ್ರೆ ಹೊಲನ ಅವ್ಳ ಹೆಸ್ರಿಗೆ ಮಾಡಿಕೊಡು. ಅದುನ್ನ ಮಾರಿ ಅವ್ಳ ಮದ್ವೆ ಮಾಡ್ತೀನಿ.
    ತಮ್ಮುನ ಮೇಲೆ ನಂಬ್ಕೆ ಇಲ್ವಾ ಅಕ್ಕ ನಿನ್ಗೆ.
    ಇದೆ ಆದ್ರೆ, ಮುಂದೆ ಏನಾಗುತ್ತೊ ಏನೋ ಕಂಡವರ್ಯಾರು ಅದುಕ್ಕೆ. ಅದೂ ಮದುವೆ ಕಾರ್ಡ್ ಪ್ರಿಂಟ್ ಮಾಡಿಸೋದಕ್ಕೂ ಮುಂಚೆ ರಿಜಿಸ್ಟ್ರು ಮಾಡಿಸ್ಬೇಕು.
    ನಿನಿಗೆ ತಮ್ಮ ಬೇಕ? ಇಲ್ಲ ಆಸ್ತಿ ಬೇಕಾ? ಅಂತ ಇವಾಗ್ಲೇ ಹೇಳ್ಬಿಡಕ್ಕ.
    ಈಗಿನ ಪರಿಸ್ಥಿತಿಯಲ್ಲಿ ನನ್ಗೆ ಹೊಲನೇ ಬೇಕು.
    ಆಯ್ತಿವಾಗ ಮಲ್ಗು ನಾಳೆನೇ ರಿಜಿಸ್ಟರು ಮಾಡಿಸ್ತೀನಿ. ನಾನ್ ಇನ್ಮೇಲೆ ಏನೂ ಅಲ್ಲ. ಆಸ್ತೀನೆ ಎಲ್ಲ ನಿನ್ಗೆ. ಜೋರು ದನಿ ಮಾಡ್ಕೊಂಡು ಹೊರಗೆ ಬಂದ ಚಂದ್ರು.
    ಪಕ್ಕ್ದಲ್ಲಿ ಇರೋ ಹಾಲಜ್ಜ ಮಾದಜ್ಜಿ ನಾವು ದೊಡ್ಡೋರು ಇನ್ನೂ ಬದ್ಕಿದೀವಿ. ಗೀತ ಯಾಕಿಂಗಾಡ್ತಿಯೇ? ಅವನೆ ಸೋದ್ರಮಾವ ನಿನ್ಮಗಳಿಗೆ. ಕಷ್ಟ ಸುಖುಕ್ಕೆ ಅವ್ನೆ  ಆಗೋದು. ಇಂಗೆ ಹಠ ಮಾಡ್ಬೇಡ್ವೇ, ಚೆಂದವಾಗಿ ಮದುವೆ ಮಾಡಿಕೊಡು.
    ನನ್ಮೊಮ್ಮಗಳಿಗೆ ಏನ್ ಮಾಡ್ಬೇಕು ಅಂತ ಅವ್ನಿಗೊತ್ತು. ತಿಳುವಳಿಕೆ ಐತೆ ಅವ್ನಿಗೆ ಮಾಡ್ತಾನೆ. ಇಂಗೆ ಗೆರೆ ಕೊರ್ದಂಗೆ ಮಾತಾಡಿದ್ರೆ ಸಂಬಂದ್ಗುಳು ಕಿತ್ತ್ಕೊಂಡು ಹೋಗ್ತಾವೆ ಅಷ್ಟೇ. “ತೌರು ಮನೆ ನಿನಿಗೆ ಬೇಕು ಕಣೇ, ಅವನಿಗೆ ನಿನ್ನ ಮನೆ ಬೇಡ” ಯೋಚನೆ ಮಡು.  “ಕೆರೆ ಜೊತೆ ಮುನಿಸ್ಕೊಂಡು ಕುಂತ್ರೆ ಯಾರ್ಮುಕುಳಿ ಒಣಗೋದು” ನೋಡಿ ನಿರ್ಧಾರ ಮಾಡು. ಅವನೇ ಇಲ್ಲ ಅಂದ್ರೆ ನಾವಿಬ್ರು ಎಷ್ಟು ದಿನ್ದೋರು? ಅಲ್ವಾ.
    ಸಂಬಂಧ ಕಳ್ಕೊಳೋದು ಸುಲುಭ ಮತ್ತೆ ಒಂದಾಗೋದು ತುಂಬ ಕಷ್ಟ ಕಣೇ. ದುಡ್ಡಿಗೆ, ಆಸ್ತಿ-ಅಂತಸ್ತಿಗೆ ಬೆಲೆ ಕೊಡ್ಬೇಡ. ಅದು ಇವತ್ತು ಇರುತ್ತೆ, ನಾಳೆ ಹೋಗುತ್ತೆ. ಇವೆಲ್ಲ ಶಾಶ್ವತ ಅಲ್ಲ ಕಣೇ ಗೀತ, ಯಾರ್ದೋ ಮಾತು ಕಟ್ಟಿಕೊಂಡು ತವರು ಮನೆ ಕಳ್ಕೊಬ್ಯಾಡ.
     ಇಷ್ಟೆಲ್ಲ ಹೇಳಿದ್ಮೇಲು ನಿನ್ನ ಹಠನೇ ಸಾಧಿಸ್ತೀನಿ ಅಂದ್ರೆ ನಾವೇನು ಹೇಳೊಕಾಗೊಲ್ಲ. ಎಂದು ಅಕ್ಕ-ತಮ್ಮನ ಮಾತುಗಳನ್ನ ಕೇಳಿದ ಎರಡು ಮುದಿಜೀವಗಳು ಅವಳಿಗೆ ತಿಳಿ ಹೇಳ್ತಿದ್ರು.
    ಅಷ್ಟ್ರಲ್ಲೇ ಹರಚಾಡುತ್ತ ಗೀತ
   ಇಲ್ಲ ಅಪ್ಪ, ನಾನ್ ಏನು ಕೇಳೊಂಗಿಲ್ಲ. ನನ್ಗೆ ಹೊಲ ಬೇಕು ಅಷ್ಟೆ. ನಿನ್ನ ಆಸ್ತ್ಯಾಗೆ ಏನು ಭಾಗ ಕೇಳ್ತಿಲ್ಲ. ಅಷ್ಟು ದುರ್ಬುದ್ಧಿ ನನ್ಗೆ ಇನ್ನೂ ಬಂದಿಲ್ಲ. ನನ್ನ್ಮಗಳ ಮದ್ವೆಗೆ ಸಹಾಯ ಅಂತ ಕೇಳಿದಿನಿ ಅಷ್ಟೆ. ಈಗ ಬಿಗಿ ಮಾಡಿಕೊಂಡಿಲ್ಲ ಅಂದ್ರೆ ಮುಂದೆ ಏನಾಗುತ್ತೊ ಏನೋ ಅಂತ.
    ಆಯ್ತು ನೀನು, ನಿನ್ನ ತಮ್ಮ ಏನಾದ್ರೂ ಮಾಡ್ಕೊಳ್ಳಿ. ನನ್ನದೊಂದು ಮಾತು ನಡೆಸಿಕೊಡು.
   ಆಯ್ತು ಹೇಳಪ,
     ಗಂಡ ಹೆಂಡತಿ ಇಬ್ಬ್ರು ಚೆಂದವಾಗಿ ಬಂದು ಮುಂದೆ ನಿಂತು ಮದ್ವೆ ಮಾಡಿಕೊಡ್ರಿ. ಅಷ್ಟು ಸಾಕು.
   ಆಯ್ತಪ್ಪ ಮಾಡ್ತೀವಿ, ಆದರೆ ಅಷ್ಟ್ರಲ್ಲಿ ನನ್ನ್ಮಗಳ ಹೆಸರಿಗೆ ಹೊಲ ರಿಜಿಸ್ಟ್ರಾರ್ ಆದ್ರೆ ಮಾತ್ರ.
   ನಾಳೆನೆ ಮಾಡಿ ಕೊಡ್ತೀನಿ ಬರ್ರಿ. ಆತಾ ಎಂದು ಆಕ್ರೋಶದಿಂದ ಚಂದ್ರು ನುಡಿದ.
    ಇಷ್ಟೆಲ್ಲ ಆಗಿ ಮದುವೆ ಮುಗಿಸ್ಕೊಂಡು ಹೋದಾಳು ಅವ್ನ ಮನೆಗೆ ಇವ್ಳು ಹೋಗಿಲ್ಲ. ಇವ್ಳ ಮನೆಗೆ ಅವ್ನು ಹೋಗಿಲ್ಲ. ನಮ್ಮನೆಳು ಸತ್ತಾಗ ಇಬ್ಬ್ರು ಬಂದು ಅವರವರ ಕರ್ತವ್ಯ ಮಾಡಿಕೊಂಡು ಹೋದ್ರು. ನನ್ನ ಸೊಸೆ ಎಲ್ಲರ್ನ್ನೂ ಮಾತಾಡ್ಸಿ ಚೆನ್ನಾಗಿದ್ಲು. ಆದರೆ ಇವರಿಬ್ಬ್ರು ನಡುವೆ ಈಗ್ಲೂ ಮಾತಿಲ್ಲ ಕಥೆಯಿಲ್ಲ.
     ಈಗ ಇರೋದು ಗೀತುನ  ಮನೆ ಕೆಲ್ಸ. ತಾನೇ ಕರೆದರೆ ಚಂದ್ರು ಬರ್ತಾನೆ. ಸೊಸೆನೂ ಒಳ್ಳೇಳು ಬೈದಾದ್ರೂ ಕರ್ಕೊಂಡು ಬರ್ತಾಳೆ. ಅವನ ಕರ್ತವ್ಯ ಅವ್ನು ಬಿಡೊಲ್ಲ. ಗೀತ ಕರ್ದು ಇಬ್ಬರೂ ಈ ಶುಭ ಸಮಾರಂಭದಲ್ಲಿ ಒಂದಾದ್ರೆ ಇನ್ನೇನು ಬೇಕು. ಇವಾಗಾದ್ರೂ ಇಬ್ಬರಿಗೂ ಒಳ್ಳೆ ಬುದ್ಧಿ ಕೊಟ್ಟು ಸೇರ್ಸು, ನನ್ನ ದೊರೆ ಕೋಡ್ಗಲ್ಲೇಶ.  ಈ ಸರಿ ದಸ್ರುಕ್ಕೆ ನಿನ್ಗೆ ನೂರೊಂದು ಚೀಲ ಮಂಡಕ್ಕಿ ಪಲ್ಲಾರ ಹಾಕಿಸ್ತೀನಿ.
     ಇವಾಗ್ಲೇ ಹೊತ್ತಾತು ಮೊದ್ಲು ಹೋಗಿ ಆ ಕೂಸು ನೋಡ್ಬೇಕು. ಮುಂದಿಂದು ಆ ದೇವರ ಚಿತ್ತ. ಒಟ್ಟು ಎಲ್ಲಾರು ಸೇರಿಕೊಂಡ್ರೆ ಅಷ್ಟೇ ಸಾಕು.


ನಂರುಶಿ ಕಡೂರು.

Leave a Reply

Back To Top